ಮಧ್ಯಾಹ್ನ ೧೨.೧೫ಕ್ಕೆ ಶಾಲಾ ಗಂಟೆ ಬಾರಿಸಿತು. ಅರ್ಧ ಗಂಟೆ ಊಟಕ್ಕೆ ಬಿಡುವು. ರಜನಿ, ರೇವತಿ, ರೇಖ, ವಿನುತ, ವನಿತ ಅವರವರ ಬುತ್ತಿ ತೆಗೆದುಕೊಂಡು ಕೆಳಗೆ ಶಾಲಾ ಬಯಲಿನ ಮರದ ಬಳಿಗೆ ಬಂದು ಊಟಕ್ಕೆ ಕುಳಿತರು. ಊಟ ಮಾಡುತ್ತ ಅವರ ಮಾತು ಪ್ರಾರಂಭವಾಗುತ್ತಿತ್ತು.
“ಏನೇ ರಜನಿ, ಇವತ್ತೂ ಸಾರು ಪಲ್ಯವನ್ನೇ ತಂದಿದ್ದೀಯಲ್ಲ’’ ದಿನಕ್ಕೊಂದು ತರಹದ ತಿಂಡಿ ತರುವ ರೇವತಿ ಕೇಳಿದಳು.
“ಥೂ. ಈ ಸಾರನ್ನ ತಿಂದು ತಿಂದು ಸಾಕಾಗಿದೆ. ನಮ್ಮಮ್ಮ ಬೇರೆ ಬಗೆಬಗೆಯ ತಿಂಡಿ ಮಾಡಿಕೊಡುವುದೇ ಇಲ್ಲ. ಮಧ್ಯಾಹ್ನ ಅನ್ನವೇ ತಿನ್ನಬೇಕು, ಆರೋಗ್ಯಕ್ಕೆ ಒಳ್ಳೆಯದು. ತಿಂಡಿ ಏನಿದ್ದರೂ ಸಂಜೆಗೇ ಸರಿ ಎನ್ನುತ್ತಾಳೆ’’ ರಜನಿಯ ತಾತ್ಸಾರದ ನುಡಿ.
“ಸೇರದಿದ್ದರೆ ಬಿಟ್ಟುಬಿಡು. ಇಲ್ಲವೇ ಈ ಮರದ ಬುಡಕ್ಕೆ ಸುರಿ. ನಾಯಿ ತಿಂದೀತು’’ ರೇವತಿಯ ಅಮೂಲ್ಯ ಸಲಹೆ.
“ಎಷ್ಟೇ ಸೇರದಿದ್ದರೂ ನಾನು ಅನ್ನ ಚೆಲ್ಲಲ್ಲ. ತಿಂದು ಮುಗಿಸುತ್ತೇನೆ. ಒಮ್ಮೆ ನಾನು ಚಿಕ್ಕವಳಿರುವಾಗ ಬುತ್ತಿಯಲ್ಲಿ ಅನ್ನ ಹಾಗೇ ವಾಪಾಸು ತಂದದ್ದಕ್ಕೆ ನಮ್ಮಮ್ಮ, `ಅನ್ನ ಚೆಲ್ಲಬಾರದು, ಬಡವರು ಹಸಿದವರು ಅನ್ನಕ್ಕಾಗಿ ಎಷ್ಟು ಕಷ್ಟಪಡುತ್ತಾರೆ ಎಂದು ಗೊತ್ತ ನಿನಗೆ? ನೀನು ಉಢಾಪೆಯಿಂದ ಅದನ್ನು ಚೆಲ್ಲುತ್ತಿದ್ದೀಯಲ್ಲ. ಅನ್ನದಲ್ಲೇ ದೇವರನ್ನು ಕಾಣು’ ಎಂದು ಉಪದೇಶಿಸಿದ್ದಾರೆ. ಆ ಮಾತು ನನ್ನ ತಲೆ ಒಳಗಡೆ ಹಾಗೆಯೇ ಇಳಿದಿದೆ. ಹಾಗಾಗಿ ಅನ್ನ ಮಾತ್ರ ಬುತ್ತಿಯಲ್ಲಿ ಬಿಡುವುದಿಲ್ಲ’’ ರಜನಿಯ ವಿಶ್ಲೇಷಣೆ.
“ಏನಪ್ಪ, ಅದೆಲ್ಲ ನನಗೆ ಗೊತ್ತಿಲ್ಲ. ನನ್ನ ಅಮ್ಮ ಬುತ್ತಿಗೆ ಚಿತ್ರಾನ್ನ, ಪಲಾವ್, ಪೂರಿ ಇಂಥ ತಿಂಡಿಗಳನ್ನೇ ಹಾಕಿ ಕೊಟ್ಟು ಕಳುಹಿಸುತ್ತಾರೆ. ನನಗೆ ಸಾರು ಪಲ್ಯವೇ ಇಷ್ಟ. ದಿನಾ ಇಂಥ ತಿಂಡಿ ತಿಂದು ತಿಂದು ಬೇಜಾರಾಗಿದೆ. ನನಗೆ ಸೇರದಿದ್ದರೆ ನಾನು ತಿನ್ನುವುದೇ ಇಲ್ಲ’’ ಯಾವಾಗಲೂ ಬುತ್ತಿ ಬರಿದು ಮಾಡದ ವಿನುತನ ಹೇಳಿಕೆ.
“ನಾನೂ ಬುತ್ತಿಯಲ್ಲಿ ತಂದದ್ದನ್ನು ಚೆಲ್ಲುವುದಿಲ್ಲ. ಅಮ್ಮ ಬೇಗನೆದ್ದು ಕಷ್ಟಪಟ್ಟು ತಿಂಡಿ ಮಾಡಿ ನಾವು ಹಸಿದಿರಬಾರದೆಂದು ಕೊಟ್ಟರೆ ಅದನ್ನು ಚೆಲ್ಲುವುದು ತಪ್ಪು. ನಮಗೆ ಅದು ಶ್ರೇಯಸ್ಕರವಲ್ಲ’’ ರೇಖಾಳ ಶಾಂತವಾದ ಪ್ರತಿಕ್ರಿಯೆ.
ಮಾತು ಸಾಗುತ್ತ ಊಟ ಮುಗಿಸಿದರು. ಆಗ ಊಟದ ಅವಧಿ ಮುಗಿಯಿತೆಂದು ಶಾಲೆ ಗಂಟೆ ಹೊಡೆಯಿತು. ಎಂದಿನ ಸಂಪ್ರದಾಯದಂತೆ ವಿನುತ, ರೇವತಿ ಬುತ್ತಿಯಲ್ಲಿ ಅರ್ಧಾಂಶ ಹಾಗೆಯೇ ಬಿಟ್ಟು ಎದ್ದರು.
* * *
ಒಂದು ಸಂಜೆ ಶಾಲೆ ಬಿಟ್ಟೊಡನೆ ಐದೂ ಜನ ಸ್ನೇಹಿತರೂ ಒಟ್ಟು ಸೇರಿದರು. ತರಗತಿಯಲ್ಲಿ ಇವರು ಬೇರೆ ಬೇರೆ ಸ್ಥಳದಲ್ಲಿ ಕೂರುವುದು. ಅಲ್ಲಿ ಹರಟೆ ಹೊಡೆಯಲು ಆಸ್ಪದವಿಲ್ಲ. ಶಾಲೆಯಿಂದ ಮನೆಗೆ ಹೊರಡುವ ಮೊದಲು ೧೫ ನಿಮಿಷ ಮಾತಾಡುತ್ತ, ಅನಂತರ ಒಬ್ಬೊಬ್ಬರೆ ಮನೆಗೆ ತೆರಳುತ್ತಿದ್ದರು. ಅವರ ಮಾತು ಸಾಗಿತು.
“ಛೆ! ಇನ್ನು ಮನೆಗೆ ಹೋಗಬೇಕಲ್ಲ. ಮನೆಗೆ ಹೋಗಲೇ ಬೇಜಾರು. ನಾನು ಮನೆ ಒಳಗೆ ನುಗ್ಗಿದ ಕೂಡಲೇ, “ಕೈ ಕಾಲು ತೊಳೆದು ಬಟ್ಟೆ ಬದಲಿಸಿ ಬಾ. ಬೇಗನೆ ತಿಂಡಿ ತಿನ್ನು. ಬುತ್ತಿಪಾತ್ರೆ ತೊಳೆದೇ ಬಾ. ಟಿ.ವಿ ನೋಡುತ್ತ ಕಾಲ ಕಳೆಯಬೇಡ. ಕಳೆದ ಕಾಲವು ಬಾರದು ಮತ್ತೆ, ಚೆನ್ನಾಗಿ ಓದು’’ ಇತ್ಯಾದಿ ಇತ್ಯಾದಿಯಾಗಿ ಅಮ್ಮನ ಪ್ರವಚನ ಪ್ರಾರಂಭವಾಗುತ್ತದೆ. ಅದನ್ನು ಕೇಳಿ ಕೇಳಿ ನನ್ನ ತಲೆ ಚಿಟ್ಟು ಹಿಡಿಯುತ್ತದೆ. ಒಂದಿಗೇ ಸಿಟ್ಟೂ ಬರುತ್ತದೆ. ರಜದ ದಿನವೂ ಬೆಳಗ್ಗೆ ಬೇಗನೆ (ಏಳುಗಂಟೆಗೇ) ಎಬ್ಬಿಸುತ್ತಾಳೆ. ಮಜವಾಗಿ ಬೆಚ್ಚಗೆ ಮಲಗುವಂತಿಲ್ಲ’’ ರಜನಿ ತನ್ನ ಸಮಸ್ಯೆಯನ್ನು ಹೇಳಿಕೊಂಡಳು.
“ನಮ್ಮಮ್ಮನೂ ಹಾಗೇನೇ. ನಂಗೂ ಬೇಜಾರಾಗಿದೆ’’ ಎಂದಳು ವನಿತಳೂ ನಿರಾಶೆಯಿಂದ.
“ಹೌದೇನೆ, ನಿಮ್ಮಮ್ಮ ಹಾಗೆಲ್ಲ ಹೇಳುತ್ತಾರ? ನಮ್ಮಮ್ಮ ಅಂತೂ ಏನೂ ಹೇಳಲ್ಲ. ನಾನು ಶಾಲೆಯಿಂದ ಮನೆಗೆ ಹೋದೊಡನೆ ಟಿವಿ ಮುಂದೆ ಕೂರುತ್ತೇನೆ. ಅಲ್ಲಿಗೇ ಅಮ್ಮ ತಿಂಡಿ ತಂದು ಕೊಡುತ್ತಾಳೆ. ನಿಧಾನದಲ್ಲಿ ತಿಂಡಿ ತಿನ್ನುತ್ತೇನೆ. ನನ್ನ ಬುತ್ತಿಪಾತ್ರೆ ಅಮ್ಮನೇ ತೊಳೆದಿಡುತ್ತಾಳೆ. ನಾನು ಟಿವಿ ನೋಡುತ್ತಲೇ ಶಾಲೆಕೆಲಸ (ಹೋಂವರ್ಕ್) ಮಾಡುತ್ತೇನೆ. ನನಗೆ ಬೇಕಾದ ಕೆಲಸವನ್ನೆಲ್ಲ ಅಮ್ಮನಲ್ಲಿ ಹೇಳಿ ಮಾಡಿಸಿಕೊಳ್ಳುತ್ತೇನೆ. ನಾವು ದಿನಾ ಹೊರಗೆ ಹೋಗಿ ಐಸ್ಕ್ರೀಮ್, ಮಸಾಲೆಪೂರಿ ಅದು ಇದು ಎಂದು ಬೇಕಾದ್ದು ತಿಂದು ಬರುತ್ತೇವೆ. ರಜದ ದಿವಸ ಬೆಳಗ್ಗೆ ಅಮ್ಮ ನನ್ನನ್ನು ಎಬ್ಬಿಸುವುದೇ ಇಲ್ಲ. `ಪಾಪ ಮಲಗಿರಲಿ ರಜ ತಾನೆ’ ಎನ್ನುತ್ತಾಳೆ. ನಾನೇ ೯ ಗಂಟೆಗೆ ಎದ್ದೇಳುತ್ತೇನೆ. ಎಂಥ ಮಜ ಗೊತ್ತ’’ ವರ್ಣಿಸಿದಳು ವಿನುತ.
“ನಾನೂ ಮನೆಯಲ್ಲಿ ನನಗೆ ಬೇಕಾದಂತೆ ಇರುತ್ತೇನೆ. ನಮ್ಮಮ್ಮನೂ ಏನೂ ಹೇಳುವುದಿಲ್ಲ’’ ವಿನುತಳ ಹೇಳಿಕೆಗೆ ದನಿಗೂಡಿಸಿದಳು ರೇವತಿ. ರೇಖಾ ಮಾತ್ರ ಏನೂ ಮಾತಾಡಲಿಲ್ಲ. ಇವರ ಮಾತುಗಳನ್ನು ಕೇಳುತ್ತ ಸುಮ್ಮನೆ ನಿಂತಿದ್ದಳು.
ನನ್ನ ಸ್ನೇಹಿತೆಯರ ಅಮ್ಮಂದಿರು ಎಷ್ಟು ಒಳ್ಳೆಯವರು. ನನ್ನಮ್ಮನೋ ದಿನಾ ಉಪದೇಶ ಕೊಟ್ಟೂ ಕೊಟ್ಟೂ ಬೇಸರ ತರಿಸುತ್ತಾಳೆ. ಮಜವಾಗಿ ಇರಲೇ ಸಾಧ್ಯವಿಲ್ಲ. ನನ್ನ ಕೆಲಸವನ್ನು ಅಮ್ಮನೇ ಮಾಡಿ, ನನಗೆ ಅಷ್ಟು ಉಪಕಾರ ಮಾಡುವುದಿಲ್ಲ. ಎಲ್ಲವನ್ನೂ ನನ್ನ ಕೈಯಲ್ಲೇ ಮಾಡಿಸುತ್ತಾಳೆ. ನಾನು ಉಂಡ ತಟ್ಟೆ ನಾನೇ ತೊಳೆಯಬೇಕು. `ನಿನ್ನ ಕೆಲಸ ನೀನೇ ಮಾಡಬೇಕು. ಈಗಲೇ ನೀನು ನಿನ್ನ ಕೆಲಸ ಮಾಡಲು ಕಲಿತರೆ ಮುಂದೆ ನಿನಗೇ ಒಳ್ಳೆಯದು. ಅವರವರ ಕಾರ್ಯ ಅವರವರೇ ಮಾಡಬೇಕು’ ಎಂಬ ಉಪದೇಶಾಮೃತವನ್ನು ಎಷ್ಟು ಬೇಕಾದರೂ ಕೊಡುತ್ತಾಳೆ. ಎಂದು ಯೋಚಿಸುತ್ತ ಬಂದ ರಜನಿ ಮನೆಯೊಳಗೆ ಕಾಲಿಡುತ್ತಿದ್ದಂತೆಯೇ, “ಅಮ್ಮ ಇವತ್ತೇನು ತಿಂಡಿ?’’ ಎಂಬ ಪ್ರಶ್ನೆ ಎಸೆದಳು.
“ದೋಸೆ ಹಾಗೂ ಪಲ್ಯ’’ ಎಂದಳು ಸುಹಾಸಿನಿ.
“ಥೂ. ದಿನಾ ಅದೇ ತಿಂಡಿ. ನೂಡಲ್ಸ್, ಶ್ಯಾವಿಗೆ, ಪೂರಿ ಎಂದು ದಿನಕ್ಕೊಂದು ತಿಂಡಿ ಮಾಡಿದರೇನು ನಿನಗೆ. ದೋಸೆ, ಇಡ್ಲಿ, ಉಪ್ಪಿಟ್ಟು, ಅವಲಕ್ಕಿ ಇಷ್ಟೇ ನಿನಗೆ ಮಾಡಲು ಬರುವುದು. ನನ್ನ ಸ್ನೇಹಿತರೆಲ್ಲ ಎಂತೆಂಥ ತಿಂಡಿ ತರುತ್ತಾರೆ ಗೊತ್ತ?’’ ದುಮುಗುಟ್ಟುತ್ತ ಕೈಕಾಲು ತೊಳೆಯಲು ನಡೆದಳು ರಜನಿ. ಕೈಕಾಲು ತೊಳೆದು ಬಂದು ಥೂ ಎಂದದ್ದನ್ನೇ ಅಚ್ಚುಕಟ್ಟಾಗಿ ಆರು ದೋಸೆಯನ್ನು ಪಲ್ಯದೊಂದಿಗೆ ಪಟ್ಟಾಗಿ ಹೊಡೆದಳು.
“ಬೇಗ ತಿಂಡಿ ತಿಂದು ನಿನ್ನ ಬುತ್ತಿ ತೊಳೆದು, ಆಮೇಲೆ ಸ್ವಲ್ಪ ಆಟವಾಡಿ ಓದಲು ಬರೆಯಲು ಕುಳಿತುಕೊ. ಸುಮ್ಮನೆ ಕಾಲಹರಣ ಮಾಡಬೇಡ . . . . .’’ ಎಂದು ಸುಹಾಸಿನಿ ಹೇಳುತ್ತಿದ್ದಂತೆ ರಜನಿ ಕೋಪದಿಂದ ಬುಸುಗುಟ್ಟುತ್ತ, “ಸಾಕು ನಿಲ್ಸು ನಿನ್ನ ಉಪದೇಶವನ್ನು. ನಿನಗೆ ಗೊತ್ತಿರುವುದು ಇದೇ ಮಾತು ಮಾತ್ರ. ಕೇಳಿ ಕೇಳಿ ಸಾಕಾಗಿದೆ. ಈ ಮಾತುಗಳನ್ನು ಒಂದು ಟೇಪ್ ಮಾಡಿ ಇಟ್ಟುಕೊ. ಅದನ್ನು ನಾನು ಬಂದ ಕೂಡಲೆ ಹಾಕು.’’
ರಜನಿಯ ಅಹಂಕಾರದ ಮಾತು ಕೇಳಿದ ಸುಹಾಸಿನಿಗೂ ಸಿಟ್ಟು ಬಂತು. ಉಪದೇಶ ಇನ್ನೂ ಜಾಸ್ತಿ ಮಾಡಿದಳು. ಇದರಿಂದ ಕುಪಿತಗೊಂಡು ರಜನಿ ಎರಡೂ ಕಿವಿ ಮುಚ್ಚಿಕೊಳ್ಳುತ್ತ ಅಲ್ಲಿಂದ ಎದ್ದು ತನ್ನ ಕೋಣೆಗೆ ಹೋಗಿ ದಡಾರನೆ ಬಾಗಿಲು ಹಾಕಿಕೊಂಡಳು. ಬಾಗಿಲು ಮುರಿಯದೆ ಇದ್ದದ್ದು ಪುಣ್ಯ.
ಈಗ ಅವಳನ್ನು ಮಾತಾಡಿಸುವಂತಿಲ್ಲ. ಕೋಪದಲ್ಲಿ ಇರುವಾಗ ಎಷ್ಟೇ ನಯವಾಗಿ ಬುದ್ಧಿ ಮಾತು ಹೇಳಿದರೂ ಅದು ಉರಿಯುವ ಬೆಂಕಿಗೆ ತುಪ್ಪ ಸುರಿದಂತಾದೀತೇ ವಿನಾ ತಲೆಯೊಳಗೆ ಅಚ್ಚೊತ್ತಲು ಸಾಧ್ಯವಿಲ್ಲ. `ಹಸಿದಾಗ ಉಪದೇಶ ಸಲ್ಲದು’ ಎಂಬಂತೆ ಸಿಟ್ಟುಗೊಂಡಾಗ ಬುದ್ಧಿವಾದ ಹಿಡಿಸದು! ಆಗ ಮಾತಾಡದೆ ಇರುವುದೆ ಕ್ಷೇಮ. ಈಗಿನ ಮಕ್ಕಳ ಮನಸ್ಸೇ ಅರ್ಥವಾಗುವುದಿಲ್ಲ. ಇವರಿಗೆ ಏನೂ ಹೇಳಲೂ ಸಾಧ್ಯವಿಲ್ಲ. ಬುದ್ಧಿಮಾತು ಹೇಳಿದರೆ ಸಿಟ್ಟುಗೊಳ್ಳುತ್ತಾರೆ. ಹೇಳುವುದು ಅವರ ಒಳ್ಳೆಯದಕ್ಕೆ ಎಂದು ಗೊತ್ತಾಗುವುದಿಲ್ಲ. ಮಾತಾಡದೆ ಇರೋಣ ಎಂದರೆ ಅದೂ ಸಾಧ್ಯವಿಲ್ಲ. ನಾನು ಸಿಟ್ಟುಗೊಳ್ಳಬಾರದು, ಏನೂ ಬುದ್ಧಿ ಹೇಳಬಾರದು ಎಂದು ಆಲೋಚಿಸುತ್ತೇನೆ. ಆದರೆ ಅವರು ಸಿಟ್ಟುಗೊಳ್ಳುತ್ತಾರೆಂದು ಏನೂ ಹೇಳದೆ ಸುಮ್ಮನಿರಲು ಸಾಧ್ಯವಿಲ್ಲ. ಮಕ್ಕಳು ತಪ್ಪು ಮಾಡಿದಾಗ ಅವರನ್ನು ತಿದ್ದುವುದು ತಾಯಿಯಾದವಳ ಕರ್ತವ್ಯ. ಮಕ್ಕಳ ೧೧-೧೬ರ ನಡುವಿನ ವಯಸ್ಸು ಅಂತಾದ್ದೆ. ಏನು ಹೇಳಿದರೂ ಸಿಟ್ಟು, ಉದ್ವೇಗಗೊಳ್ಳುವ ಸ್ವಭಾವ, ಸೂಕ್ಷ್ಮ ಮನಸ್ಸು. ಅವರು ಸಿಟ್ಟುಗೊಂಡರೂ ತೊಂದರೆ ಇಲ್ಲ, ಅವರನ್ನು ಸರಿಯಾದ ದಾರಿಯಲ್ಲಿ ನಡೆಸಲು ನಿರಂತರ ಮಾರ್ಗದರ್ಶನ ಮಾಡುತ್ತಲೇ ಇರಬೇಕು. ಅವರು ನಡೆದದ್ದೇ ದಾರಿ ಎಂದು ಏನೂ ಹೇಳದೆ ಸುಮ್ಮನಿರಬಾರದು. ಈಗ ಉಪದೇಶ ಕೊಟ್ಟದ್ದಕ್ಕೆ ಮಕ್ಕಳು ಸಿಟ್ಟುಗೊಂಡರೂ ಮುಂದೆ ಒಳ್ಳೆಯ ಫಲ ಸಿಗುವುದು ಖಂಡಿತ. ಮಕ್ಕಳು ಅಸಡ್ಡೆಯಿಂದ ಎದುರುತ್ತರ ಕೊಡುವಾಗ ಎಷ್ಟು ಸಿಟ್ಟುಗೊಳ್ಳಬಾರದೆಂದುಕೊಂಡರೂ ಕೋಪ ತನ್ನಿಂದ ತಾನೇ ಏರಿರುತ್ತದೆ ಎಂದು ಸುಹಾಸಿನಿ ಸುಮ್ಮನಾದಳು.
****
ಐದೂ ಜನ ಸ್ನೇಹಿತೆಯರೂ ಏಳನೇ ಇಯತ್ತೆ ದಾಟಿ ಎಂಟನೆಗೆ ಕಾಲಿಟ್ಟರು. ಪ್ರೌಢಶಾಲೆ. ವಾತಾವರಣ ಅದೇ ಇದ್ದರೂ ಶಿಕ್ಷಕ ಶಿಕ್ಷಕಿಯರು ಬೇರೆ ಬೇರೆ. ಹಾಗೆ ಹೊಸ ಮಕ್ಕಳೂ ಸೇರಿದ್ದರು. ಹೊಸ ಸ್ನೇಹಿತೆಯರ ಸಂಗ, ಗುರುಗಳ ಪಾಠ ಪ್ರವಚನಕ್ಕೆ ಒಗ್ಗಿಕೊಳ್ಳಲು ತಿಂಗಳೇ ಹಿಡಿಯಿತು. ಹೊಸದಾಗಿ ಸೇರಿದ್ದ ಕರುಣ ಇವರ ಬಳಗಕ್ಕೆ ಸೇರ್ಪಡೆಗೊಂಡಳು.
ಎಂದಿನಂತೆ ಮಧ್ಯಾಹ್ನ ಊಟಕ್ಕೆ ಬುತ್ತಿ ಬಿಚ್ಚಿದಾಗ ನಮ್ಮಮ್ಮ ಹಾಗೆ, ಹೀಗೆ ಎಂದು ಅವರವರ ಅಮ್ಮಂದಿರ ಬಗ್ಗೆ ಟೀಕೆ ಟಿಪ್ಪಣಿ ಸಾಗಿತು.
“ಕರುಣ ನಿಮ್ಮಮ್ಮನ ಬಗ್ಗೆ ಹೇಳು. ಬಹಳ ಸ್ಟ್ರಿಕ್ಟಾ ಹೇಗೆ?’’ ಕುತೂಹಲಗೊಂಡು ಕೇಳಿದರು ಗೆಳತಿಯರು.
“ಹಾಗೇನು ಇಲ್ಲ’’ ಚುಟುಕಾಗಿ ಉತ್ತರ ಕೊಟ್ಟಳು ಕರುಣ.
ರೇಖಾ ತನ್ನ ಸ್ನೇಹಿತೆಯರನ್ನು ವ್ಯಥೆಯಿಂದ ನೋಡಿದಳು. ಸ್ನೇಹಿತೆಯರು ಅವರವರ ಅಮ್ಮನ ಬಗ್ಗೆ ದೂರು ಹೇಳುವುದು ಅವಳಿಗೆ ಸ್ವಲ್ಪವೂ ಹಿಡಿಸುವುದಿಲ್ಲ. ಅವಳು ಅಮ್ಮನನ್ನು ಗೆಳತಿಯಂತೆ, ಗುರುವಂತೆ, ತಾಯಿಯಂತೆ ನೋಡುತ್ತಿದ್ದಳು. ಅಮ್ಮ ಹೇಳುವುದೆಲ್ಲ ತನ್ನ ಒಳಿತಿಗೇ ಎಂದು ತಿಳಿದುಕೊಂಡಿದ್ದಳು. ಆದರೂ ಗೆಳತಿಯರಿಗೆ ಏನೂ ಹೇಳದೆ ಸುಮ್ಮನಿದ್ದಳು. ಅವಳದು ಮಾತು ಬಹಳ ಕಡಿಮೆ.
* * *
ರಜನಿ ಯಾವುದೋ ಸ್ಪರ್ಧೆಗೆ ಭಾಗವಹಿಸುವ ಸಲುವಾಗಿ ಆ ದಿನ ಶಾಲೆಗೆ ರಜೆ ಹಾಕಿದ್ದಳು. ಆ ದಿವಸ ಏನೇನು ಪಾಠ ಮಾಡಿದ್ದರು, ಏನು ನೋಟ್ಸ್ ಕೊಟ್ಟಿದ್ದರು ಎಂದು ತಿಳಿಯಲು ವಿನುತಳ ಮನೆಗೆ ಹೋಗಿ ಕರೆಗಂಟೆ ಒತ್ತಿದಳು.
“ಅಮ್ಮ ಯಾರು ಬಂದಿದ್ದಾರೆ ನೋಡು’’ ದೂರದರ್ಶನದ ಮುಂದೆ ಪ್ರತಿಷ್ಠಿತಳಾಗಿ ಕುಳಿತ ವಿನುತ ಅಮ್ಮನಿಗೆ ಆಜ್ಞೆ ಇತ್ತಳು. “ಓ! ರಜನಿ, ಬಾ ಒಳಗೆ’’ ಆದರದಿಂದ ಆಹ್ವಾನಿಸಿದಳು ವಿನುತಳ ಅಮ್ಮ ಹೇಮ.
“ಏನೇ ರಜನಿ ಇಂದು ಶಾಲೆಗೆ ಚಕ್ಕರ್ ಹೊಡೆದೆ?’’ ಕುಳಿತಲ್ಲಿಂದಲೇ ವಿಚಾರಿಸಿದಳು ವಿನುತ.
ರಜನಿ ಒಳ ಬಂದು ಕೂರುತ್ತ, “ಚಿತ್ರಕಲಾಸ್ಪರ್ಧೆ ಇತ್ತು. ಅದಕ್ಕೆ ರಜ ಮಾಡಬೇಕಾಯಿತು. ಅದಿರಲಿ, ಇಂದು ಏನು ಪಾಠ ಮಾಡಿದ್ದಾರೆ? ಹೋಮ್ವರ್ಕ್ ಕೊಟ್ಟಿದ್ದಾರ?’’
“ಹು, ಕಣೆ. ತುಂಬ ಬರೆಯಲು ಕೊಟ್ಟಿದ್ದಾರೆ. ಏನೇನೊ ಪಾಠ ಮಾಡಿದರು. ನನಗೆ ತಲೆನೋವಿತ್ತು. ನಾನು ಮಲಗಿದ್ದೆ’’ ನಿರುತ್ಸಾಹದಿಂದ ಉತ್ತರಿಸಿದಳು ವಿನುತ.
ಹೇಮ ಕೊಟ್ಟ ಚಹಾ ಕುಡಿದು ರಜನಿ ಮನೆಗೆ ಬಂದವಳೆ, “ಅಮ್ಮ, ಆ ವಿನುತಳನ್ನು ನೋಡಿ ಸಾಕಾಯಿತು ನನಗೆ. ಅವಳಿಗೆ ಯಾವ ಪಾಠ ಮಾಡಿದ್ದಾರೆ ಎಂದು ಗೊತ್ತಿಲ್ಲ. ನಾನು ಅವಳ ಮನೆಗೆ ಹೋದಾಗ ಟಿ.ವಿ. ಎದುರು ಕಾಲು ಮೇಲೆ ಕಾಲು ಹಾಕಿ ಕುಳಿತಿದ್ದಳು. ಅಲ್ಲೇ ನೋಟ್ಸ್ ಬರೆಯುತ್ತಿದ್ದಳು. ಕರೆಗಂಟೆ ಸದ್ದಿಗೂ ಎದ್ದು ಬರಲಿಲ್ಲ. ಹೇಮ ಆಂಟಿ ಎಲ್ಲ ಕೆಲಸಬಿಟ್ಟು ಬಂದು ಬಾಗಿಲು ತೆರೆದರು. ನನಗೆ ನೋಟ್ಸ್ ಕೊಡಲೂ ಆಂಟಿಗೇ ಹೇಳಿದಳು. ಆಂಟಿ ಏನೂ ಹೇಳದೆ ಅವಳು ಹೇಳಿದ್ದನ್ನೆಲ್ಲ ತಂದು ಕೊಟ್ಟರು. ಅವಳು ಕುಳಿತಲ್ಲಿಂದ ಅಲ್ಲಾಡಲಿಲ್ಲ. ಛೆ! ಹಾಗೊಂದು ಅಮ್ಮನಲ್ಲಿ ಕೆಲಸ ಮಾಡಿಸುತ್ತಾಳಲ್ಲ. ಅವಳನ್ನು ನೋಡಿ ಹೀನಾಯವೆನಿಸಿತು. ಕೆಲವು ಮಕ್ಕಳನ್ನು, ಟೀಚರ್ಸನ್ನು ಆಡಿಕೊಂಡು ನಗುತ್ತಿದ್ದಳು. ಅವಳಮ್ಮ ಏನೂ ಹೇಳದೆ ಹೂಗುಟ್ಟುತ್ತಿದ್ದರು. ಇನ್ನು ಏನಿದ್ದರೂ ನಾನು ಅವಳ ಮನೆಗೆ ಹೋಗುವುದಿಲ್ಲ. ಏನೇನು ಬರೆಯಲು ಕೊಟ್ಟಿದ್ದಾರೆ ಎಂದು ನನ್ನ ಸ್ನೇಹಿತೆ ಕರುಣಳಿಗೆ ದೂರವಾಣಿಸಿ ತಿಳಿದುಕೊಳ್ಳುತ್ತೇನೆ’’ ಎಂದು ಅಲ್ಲಿ ನಡೆದ ಘಟನೆಗಳನ್ನು ಚಾಚೂ ತಪ್ಪದೆ ವಿವರಿಸಿದಳು.
“ನೋಡಿದೆಯಾ, ನಾನು ನಿನಗೆ ಏಕೆ ಬುದ್ಧಿ ಹೇಳುತ್ತೇನೆಂದು ಈಗಲಾದರೂ ಅರ್ಥವಾಯಿತೆ? ವಿನುತ ಮಾಡಿದ್ದು ನಿನಗೆ ಸರಿ ಎಂದೆನಿಸಲಿಲ್ಲ. ಅಸಹ್ಯವಾಯಿತು ತಾನೆ. ಅದಕ್ಕೆ ನಿನ್ನ ಕೆಲಸ ನೀನು ಮಾಡಿದರೆ ಚಂದ ಎಂದು ನಾನು ಹೇಳುವುದು’’ ಎಂದು ಸುಹಾಸಿನಿ ಹೇಳಿದ್ದಕ್ಕೆ “ತೂ ಹೋಗಮ್ಮ ನೀನು’’ ಸೋಲೊಪ್ಪಿಕೊಳ್ಳಲು ಮನವಿಲ್ಲದೆ ಅರ್ಧಮನದಿಂದ ನುಡಿದು ಓಡಿದಳು ರಜನಿ.
ಮಾರನೆ ದಿನ ಶಾಲೆಯಲ್ಲಿ ಕರುಣ ರೇಖಾರಿಗೆ ವಿನುತಳ ಮನೆಯಲ್ಲಿ ನಡೆದ ಸಂಗತಿ ಅರುಹಿದಳು ರಜನಿ.
“ನೋಡು ರಜನಿ, ನಾನು ಹೀಗೆ ಹೇಳುತ್ತೇನೆಂದು ತಪ್ಪು ತಿಳಿದುಕೊಳ್ಳಬೇಡ. ನೀವೆಲ್ಲ ಮೊನ್ನೆ ನಿಮ್ಮ ನಿಮ್ಮ ಅಮ್ಮನ ಬಗ್ಗೆ ಆಡಿದ ಮಾತು ಕೇಳಿ ನನಗೆ ತುಂಬ ನೋವಾಯಿತು. ನಾವು ತಪ್ಪು ಮಾಡಿದಾಗ ಮಾತ್ರ ಅಮ್ಮ ಬುದ್ಧಿ ಹೇಳುತ್ತಾಳೆ ಇಲ್ಲವೆ ಹೊಡೆಯುತ್ತಾಳೆ. ಹೌದು ತಾನೆ? ನೀನು ಏನಾದರೂ ಒಳ್ಳೆಯ ಕೆಲಸ ಮಾಡಿದಾಗ ಅಮ್ಮ ನಿನ್ನನ್ನು ದಂಡಿಸುವುದಾಗಲಿ, ಇಲ್ಲವೆ ಬೈಯುವುದಾಗಲಿ ಮಾಡಿದ್ದಾಳೆಯೆ? ನೀನು ಸರಿದಾರಿಯಲ್ಲಿ ನಡೆಯಬೇಕು ಎಂದು ಉಪದೇಶಿಸುತ್ತಾಳೆ. ಅದು ತಪ್ಪೆ? ತಾಯಿ ಏನೂ ಹೇಳಲಿಲ್ಲ ಎಂದು ನೀನು ವಿನುತಳ ಅಮ್ಮನ ಬಗ್ಗೆ ಹೇಳಿದೆ. ಅವಳು ಏನು ಮಾಡಿದರೂ ಚಂದ ಎಂದು ಅವಳಮ್ಮ ಸುಮ್ಮನಿದ್ದದ್ದು ನಿನಗೆ ಸರಿ ಕಾಣಲಿಲ್ಲ. ಹಾಗೆ ನಾವು ತಪ್ಪು ಮಾಡಿದಾಗ ಅಮ್ಮ ಬೈಯಬೇಕು. ಆಗ ನಾವು ಒಳ್ಳೆಯ ಮಾರ್ಗದಲ್ಲಿ ನಡೆಯುತ್ತೇವೆ. ಮೊದಲು ನಾನೂ ಕೂಡ ನಿಮ್ಮಂತೆಯೇ ಅಮ್ಮನ ಬಗ್ಗೆ ಹೇಳುತ್ತಿದ್ದೆ. ದಿನಾ ಅಮ್ಮನೊಡನೆ ಜಗಳಾಡುತ್ತಿದ್ದೆ. ಅವಳು ಹೇಳುವುದೆಲ್ಲ ನನಗೆ ಕಿರಿಪಿರಿ ಎನಿಸುತ್ತಿತ್ತು. ಉಡಾಫೆಯಿಂದಿರುತ್ತಿದ್ದೆ. ಅಮ್ಮ ಹೇಳಿದ್ದನ್ನೊಂದೂ ಕೇಳುತ್ತಲೇ ಇರಲಿಲ್ಲ. ಅಮ್ಮ ಹತ್ತಿರ ಇರುವಾಗ ನಮಗೆ ಅವಳ ಕಿಮ್ಮತ್ತು ಗೊತ್ತಾಗುವುದಿಲ್ಲ. ಅಮ್ಮ ಎಂಬ ಎರಡಕ್ಷರದ ಮೋಡಿಯಲಿ ನಾವು ಸುಖವಾಗಿರುತ್ತೇವೆ. ಅಮ್ಮ ಎಂದೊಡೆ ಸ್ವರ್ಗ ಎಂಬುದು ಖಂಡಿತ ಸುಳ್ಳಲ್ಲ” ಎಂದು ಕರುಣ ಹಿರಿಯಳಂತೆ ಗಂಭೀರಭಾವದಿಂದ ನಿಡುಸುಯ್ದಳು.
“ಅಮ್ಮ ಹತ್ತಿರ ಇದ್ದಾಗ ಅವಳ ಮಹತ್ವ ಏನೆಂದು ಗೊತ್ತಾಗುವುದಿಲ್ಲ ಎಂದೆಯಲ್ಲ. ಹಾಗಾದರೆ ನಿಮ್ಮಮ್ಮ ಈಗ ಇಲ್ಲಿ ಇಲ್ಲವೆ?’’ ಕುತೂಹಲಗೊಂಡು ಕೇಳಿದಳು ರಜನಿ.
“ಇಲ್ಲ ಕಣೆ. ಅದೊಂದು ದೊಡ್ಡ ಕತೆಯೇ ನಡೆದಿದೆ ನಮ್ಮಲ್ಲಿ. ಅಮ್ಮ ಎರಡು ಒಳ್ಳೆಯ ಮಾತು ಹೇಳಿದರೂ ನನಗೆ ಸಹನೆಯಾಗುತ್ತಿರಲಿಲ್ಲ. ನಾನು ಕೇಳುತ್ತಲೇ ಇರಲಿಲ್ಲ. ಆಗ ಅಮ್ಮನೂ ಸಿಟ್ಟುಗೊಂಡು ಧ್ವನಿ ಏರಿಸುತ್ತಿದ್ದಳು. ನಾನು ಬೇಸರಗೊಂಡು ಅಮ್ಮನೊಡನೆ ಸಿಟ್ಟುಗೊಂಡು ಅಳುತ್ತಿದ್ದೆ. ಅಮ್ಮ ನನ್ನನ್ನು ಸುಮ್ಮನೆ ಬೈಯುವುದು ಎಂದನಿಸತೊಡಗಿತು. ನನ್ನ ಕೆಲಸ ನಾನು ಮಾಡುತ್ತಲೇ ಇರಲಿಲ್ಲ. ಬಟ್ಟೆ ಪುಸ್ತಕ ಎಲ್ಲೆಂದರಲ್ಲಿ ಹಾಕಿ ಹರಗಿ ಹಾಗೇ ಇಟ್ಟು ಶಾಲೆಗೆ ಹೋಗುತ್ತಿದ್ದೆ. `ನಿನ್ನ ಸಾಮಾನು ಸರಿ ಇಟ್ಟುಕೊ, ಕೆಲಸದಲ್ಲಿ ಒತ್ತರೆ, ಶಿಸ್ತು ಕಲಿ’ ಎಂದು ಅಮ್ಮ ನನಗೆ ಹೇಳುತ್ತಲೇ ಇರುತ್ತಿದ್ದಳು. ಅದನ್ನು ನಾನು ಕಿವಿಮೇಲೆ ಹಾಕಿಕೊಳ್ಳುತ್ತಿರಲಿಲ್ಲ. ಆಮೇಲೆ ಅಮ್ಮ ಬೈದುಕೊಂಡು ಒಂದಿಗೇ ಉಪದೇಶಾಮೃತ ಉದುರಿಸಿ ನನ್ನ ಕೋಣೆ ಅಚ್ಚುಕಟ್ಟುಗೊಳಿಸುತ್ತಿದ್ದಳು! ಅಮ್ಮ ಹೊರಹೋದಕೂಡಲೇ ದಡ್ಡೆಂದು ಬಾಗಿಲು ಹಾಕಿಕೊಳ್ಳುತ್ತಿದ್ದೆ. ಈ ಅಮ್ಮಂದಿರು ಇರುವುದೇ ಬುದ್ಧಿ ಹೇಳಲು ಎಂದು ಗೆಳತಿಯರಲ್ಲಿ ಹೇಳುತ್ತಿದ್ದೆ.
ಅಮ್ಮ ಅಪ್ಪ ಇಬ್ಬರಿಗೂ ಬ್ಯಾಂಕಿನಲ್ಲಿ ಕೆಲಸ. ಈ ವರ್ಷ ಅಮ್ಮ ಅಪ್ಪನಿಗೆ ಉತ್ತರಭಾರತಕ್ಕೆ ವರ್ಗವಾಯಿತು. ನಾನು ಅಲ್ಲಿಗೆ ಬರುವುದಿಲ್ಲವೆಂದು ಹಠ ಹಿಡಿದೆ. ಅಮ್ಮ ಅತ್ತಳು, ಕೊರಗಿದಳು, ಅನುನಯಿಸಿ ಹೇಳಿದಳು. ಆದರೂ ನಾನು ಹಠ ಬಿಡಲಿಲ್ಲ. ಅಮ್ಮ ಅಪ್ಪ ಬೇರೆ ದಾರಿ ತೋರದೆ ನನ್ನನ್ನು ಇಲ್ಲಿ ಅಜ್ಜಿ ಮನೆಯಲ್ಲಿ ಬಿಟ್ಟು ಈ ಶಾಲೆಗೆ ಸೇರಿಸಿ ಉತ್ತರಭಾರತಕ್ಕೆ ಪ್ರಯಾಣ ಬೆಳೆಸಿದರು. ಒಂದು ತಿಂಗಳು ನಾನು ಅಮ್ಮನ ಅಂಕೆಯಿಲ್ಲದೆ ನನಗೆ ಬೇಕಾದಂತೆ ಬಹಳ ಸುಖವಾಗಿಯೇ ಇದ್ದೆ. ಬರಬರುತ್ತ ಅಮ್ಮ ಅಪ್ಪ ಇಲ್ಲದೆ ಪಿಚ್ಚೆನಿಸತೊಡಗಿತು. ಅಮ್ಮ ಪದೇ ಪದೇ ಹೇಳುತ್ತಿದ್ದ ಉಪದೇಶಗಳೆಲ್ಲ ನೆನಪಾಗಿ ಅವು ನುಡಿಮುತ್ತುಗಳಂತೆ ಭಾಸವಾಯಿತು. ಅಮ್ಮ ಜೊತೆಯಲ್ಲಿಲ್ಲದಿದ್ದರೆ ಬಾಳು ಕಷ್ಟ ಎನಿಸಿತು. ಅಜ್ಜಿ ಅಜ್ಜಿಯೇ ತಾಯಿ ಆಗಲು ಸಾಧ್ಯವಿಲ್ಲವಲ್ಲ. ಈಗಾಗಲೆ ಅಮ್ಮನನ್ನು ಬಿಟ್ಟು ಇರುವುದು ೨ ತಿಂಗಳ ಮೇಲಾಯಿತು. ಇನ್ನು ಎಷ್ಟು ದಿನ ಎಂದು ಲೆಕ್ಕ ಹಾಕುತ್ತಿದ್ದೇನೆ. ಆದಷ್ಟು ಬೇಗ ಅಮ್ಮನ ಬಳಿ ಹೋಗಬೇಕು ಎಂದು ಕಾತುರಳಾಗಿದ್ದೇನೆ. ಕ್ಷಮೆ ಕೇಳಿ ಅಮ್ಮನಿಗೆ ಕಾಗದ ಬರೆದೆ. ಅದಕ್ಕೆ ಅಮ್ಮ ನೊಂದುಕೊಂಡು ಈ ರೀತಿ ಉತ್ತರಿಸಿದ್ದಳು: “ಮಕ್ಕಳು ತಿಳಿಯದೆ ತಪ್ಪು ಮಾಡುತ್ತಾರೆ. ನೀನು ಪಶ್ಚಾತ್ತಾಪ ಪಟ್ಟಿದ್ದೀಯಲ್ಲ. ಅದೇ ಕ್ಷಮೆ ನಿನಗೆ. ಬರುವ ವರ್ಷ ನಾವೇ ಅಲ್ಲಿಗೆ ವರ್ಗ ಮಾಡಿಸಿಕೊಂಡು ಬರುತ್ತೇವೆ. ಒಂದು ವರ್ಷ ಸುಧಾರಿಸಿಕೊ. ಶಾಲೆಗೆ ರಜ ಬಂದಾಗ ಇಲ್ಲಿಗೆ ಬರುವಿಯಂತೆ’’ ಇತ್ಯಾದಿ ಸಾಂತ್ವಾನಿಸಿ ಬರೆದಿದ್ದಳು. ಅಮ್ಮ ಹೇಳುವುದು ನಮ್ಮ ಒಳ್ಳೆಯದಕ್ಕೆ ಎಂದು ಬಹಳ ತಡವಾಗಿ ನನಗೆ ಅರಿವಾಗಿದೆ. ತಿಳಿವು ಬಂದಾಗ ಅಮ್ಮನ ಬಳಿ ನಾನಿಲ್ಲ. ಹಾಗಾಗಿ ಅಮ್ಮನ ಬಗ್ಗೆ ಕೆಟ್ಟ ಮಾತು ಆಡಬೇಡ. ಅಮ್ಮ ನಮ್ಮನ್ನು ೯ ತಿಂಗಳು ಹೊತ್ತು ಸಾಕಿ ಸಲಹಿದವಳು. ನಾವು ಅಮ್ಮನಿಗೆ ಗೌರವ ಕೊಡಬೇಕು’’ ಕಣ್ಣೀರು ತುಂಬಿಕೊಳ್ಳುತ್ತ ಹೇಳಿದಳು ಕರುಣ.
“ಹೌದು ರಜನಿ. ಕರುಣ ಹೇಳಿದ್ದು ನಿಜ. ನನಗೂ ನೀವು ಮಾತಾಡುತ್ತಿದ್ದದ್ದು ಸರಿ ತೋರುತ್ತಿರಲಿಲ್ಲ. ಆದರೂ ನಾನು ಸುಮ್ಮನಿದ್ದೆ. ಅಮ್ಮ ಎಂದರೆ ಗೆಳತಿ ತಾಯಿ ಎಲ್ಲವೂ ಅವಳೇ. ಅಮ್ಮ ಏನು ಮಾಡಿದರೂ ಅದು ನಮ್ಮ ಒಳ್ಳೆಯದಕ್ಕೆ ಎಂದು ತಿಳಿಯಬೇಕು. ಅಮ್ಮನ ಬಗ್ಗೆ ಅಂಥ ಮಾತು ಆಡುವುದು ಮಹಾಪಾಪ’’ ಮೌನಪ್ರಿಯಳಾದ ರೇಖಾ ಪ್ರತಿಕ್ರಿಯಿಸಿದಳು.
“ನಾನು ಎಷ್ಟು ಹೀನಭಾವದಿಂದ ಅಮ್ಮನನ್ನು ಬೈದೆ ಅಲ್ಲವೆ? ಹೌದು. ನಾನು ಒಳ್ಳೆಯ ಕಾರ್ಯ ಮಾಡಿದಾಗಲೆಲ್ಲ ಅಮ್ಮ ಬೆನ್ನು ತಟ್ಟಿ ಪ್ರೋತ್ಸಾಹಿಸುತ್ತಿದ್ದಳು. ಅವಳು ಸಮಾಧಾನದಿಂದ ಹೇಳುವ ಮಾತನ್ನು ನಾನು ಕೇಳುತ್ತಲೇ ಇರಲಿಲ್ಲ. ಅದಕ್ಕೆ ಅಮ್ಮ ತಾಳ್ಮೆ ತಪ್ಪಿ ಸಿಟ್ಟುಗೊಳ್ಳುತ್ತಿದ್ದದ್ದು. ಈಗ ೨ ದಿನದಿಂದ ಅಮ್ಮ ನನ್ನಲ್ಲಿ ಮಾತೇ ಆಡುತ್ತಿಲ್ಲ. ಬುದ್ಧಿ ಹೇಳುತ್ತಲೂ ಇಲ್ಲ, ಬೈಯುತ್ತಲೂ ಇಲ್ಲ. `ನಿನಗೆ ನಾನು ಏನೂ ಹೇಳುವುದಿಲ್ಲ. ಹೇಳಿದರೆ ಕೇಳುವುದೂ ಇಲ್ಲ. ಬೇಕಾದಂತೆ ಇರು’ ಎಂದಿದ್ದಳು. ನೀನು ಹೇಳಿದ್ದು ಒಳ್ಳೆಯದಾಯಿತು ಕರುಣ. ನನ್ನ ತಪ್ಪನ್ನು ತಿದ್ದಿಕೊಂಡು ಅಮ್ಮನಲ್ಲಿ ಕ್ಷಮೆ ಕೇಳುತ್ತೇನೆ. ಇಂದಿನಿಂದ ನನ್ನ ಕೆಲಸ ನಾನೇ ಮಾಡಿಕೊಳ್ಳುತ್ತೇನೆ. ನಾನು ಮಾಡಿದ್ದ ತಪ್ಪನ್ನು ಎತ್ತಿ ತೋರಿಸಿದ್ದಕ್ಕೆ ಕೃತಜ್ಞತೆಗಳು’’ ರಜನಿ ಪಶ್ಚಾತ್ತಾಪದಿಂದ ನುಡಿದಳು.
ಮಂಜುವಾಣಿ ೨೦೦೯ ಮಾರ್ಚ್ (ಎಪ್ರಿಲ್)
ನಿಮ್ಮದೊಂದು ಉತ್ತರ