`ಹೆಣ್ಣು ನಮ್ಮಷ್ಟು ಶಕ್ತಿವಂತಳಲ್ಲ ಎಂದು ಗಂಡಸರ ಭಾವನೆ. ತಂದೆಯಾದವ (ತಾಯಿ ಕೂಡ) ತನ್ನ ಮಗನಿಗೆ ಅವನ ಸಣ್ಣ ವಯಸ್ಸಿನಲ್ಲೇ ಈ ಭಾವನೆಯನ್ನು ತಲೆಗೆ ತುಂಬುತ್ತಾನೆ(ರೆ). ಹುಡುಗ ಬೆಳೆದಾಗ ಅದೇ ಅಭಿಪ್ರಾಯ ಆಳವಾಗಿ ಬೇರು ಸಮೇತ ಒಳಗೆ ಇಳಿದಿರುತ್ತದೆ. ಹೆಂಗಸಿಗಾಗಲೀ ಗಂಡಸಿಗಾಗಲೀ ಪ್ರತಿಯೊಬ್ಬರ ಶಕ್ತಿ ಸಾಮಾರ್ಥ್ಯ ಬೇರೆ ಬೇರೆ ಇರುತ್ತದೆ. ತಾನು ಹೆಚ್ಚು ಎಂಬ ಅಹಂಭಾವ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಈಗಲೂ ಹೆಣ್ಣುಮಗು ಜನಿಸಿದೊಡನೆ ಜವಾಬ್ದಾರಿ ಜಾಸ್ತಿ ಎಂದು ತಿಳಿದುಕೊಳ್ಳುವ ತಂದೆ ತಾಯಿ ಇದ್ದಾರೆ ಎಂದರೆ ಅದು ನಾಚಿಕೆಗೇಡಿನ ವಿಷಯ.
ಮನುಜನ ಜೀವನದಲ್ಲಿ ವಿವಾಹ ಅತೀ ಮುಖ್ಯವೆನಿಸಿದೆ. ನಮ್ಮ ವಿವಾಹ ಪದ್ಧತಿಗೆ ಒಂದು ಪವಿತ್ರತೆ ಇದೆ. ಮದುವೆಯಾಗುವುದು ಬರೀ ಸಂತಾನ ಅಪೇಕ್ಷೆಗೆ ಮಾತ್ರ ಎಂಬ ಉದ್ದೇಶವಿಟ್ಟುಕೊಳ್ಳಬಾರದು. ವೈವಾಹಿಕ ಜೀವನ ಸುಲಲಿತವಾಗಿ ಸಾಗಲು ಗಂಡಹೆಂಡಿರಿಬ್ಬರಲ್ಲೂ ಸಾಮರಸ್ಯವಿರಬೇಕು. ಒಬ್ಬರ ಭಾವನೆಯನ್ನು ಇನ್ನೊಬ್ಬರು ಗೌರವಿಸಬೇಕು. ಗಂಡನಾದವ ಒಣಪ್ರತಿಷ್ಠೆ ಬಿಟ್ಟು ಸಂಸಾರದಲ್ಲಿ ಬೆರೆಯಬೇಕು.
ಶಂಕರ ಪವಿತ್ರರ ಸಾಂಸಾರಿಕ ಜೀವನದಲ್ಲಿ ಗಂಡ ಹೇಳಿದಂತೆ ಹೆಂಡತಿ ಕೇಳಬೇಕು. ಅವಳ ಭಾವನೆಗೆ ಎಳ್ಳಷ್ಟೂ ಬೆಲೆ ಕೊಡುವುದಿಲ್ಲ ಶಂಕರ. ಇಂಥ ಪರಿಸ್ಥಿಯಲ್ಲಿ ಜೀವನ ಯಾಂತ್ರೀಕೃತವಾಗತ್ತದೆ. ಮದುವೆ ವಿಧಿಯಲ್ಲಿ ಹೆಂಡತಿಯ ಕೈಹಿಡಿದು `ಕಾಯಾವಾಚಾ ಮನಸಾ ನಾತಿಚರಾಮಿ ಎಂದು ಪ್ರತಿಜ್ಞೆ ಇತ್ತಿರುವುದಕ್ಕೆ ಯಾವ ಬೆಲೆಯೂ ಇಲ್ಲ. ಇಲ್ಲಿ ಗಂಡು ಎಂಬ ಅಹಂಕಾರ ಪ್ರತಿಷ್ಠೆಗೇ ಪ್ರಮುಖ ಬೆಲೆ. ತಾನು ಹೇಳಿದ್ದೇ ಸರಿ, ಹೆಂಡತಿಗೂ ಒಂದು ಮನಸ್ಸು ಇದೆ, ಅವಳಿಗೂ ಭಾವನೆಗಳಿವೆ ಎಂಬುದರ ಬಗ್ಗೆ ಗಂಡನಿಗೆ ಯೋಚನೆಯೇ ಇಲ್ಲ. ತಾನೇ ಶ್ರೇಷ್ಟನೆಂಬ ಗರ್ವ.
ಸೂರ್ಯ ವಿನುತರ ದಾಂಪತ್ಯದ ಕತೆಯೇ ಬೇರೆ. ಇಬ್ಬರೂ ಸಾಕಷ್ಟು ವಿದ್ಯಾವಂತರು. ಇಲ್ಲಿ ಬಲಿಪಶು ಸೂರ್ಯ. ಸೂರ್ಯ ಬಹಳ ವಿನಯವಂತ, ಸಮಾಧಾನಿ. ವಿನುತಳಿಗೆ ಸ್ವಂತಬುದ್ಧಿ ಇಲ್ಲ. ಪುಸ್ತಕದ ಜ್ಞಾನ ಮಾತ್ರವಿದ್ದು, ವ್ಯವಹಾರಜ್ಞಾನ ಸೊನ್ನೆ. ಅವಳ ತವರಿನವರು ಬಹಳ ಶ್ರೀಮಂತರು. ತಾಯಿ ಮಗಳಿಗೆ ಬುದ್ಧಿ ಹೇಳದೆ ತನ್ನ ತಾಳಕ್ಕೆ ತಕ್ಕಂತೆ ಮಗಳನ್ನು ಕುಣಿಸುತ್ತಿದ್ದಾಳೆ. ಮಗಳನ್ನು ಗಂಡನ ಮನೆಗೆ ಕಳಿಸುವುದು ಬಿಟ್ಟು ಅಳಿಯನೇ ಇಲ್ಲಿ ಬಂದು ಇರಲಿ ಎಂಬ ಒತ್ತಡ ಹೇರುತ್ತಾಳೆ. ಸೂರ್ಯನ ತಂದೆತಾಯಿಗೆ ಅವನೊಬ್ಬನೇ ಮಗ. ತನ್ನ ಹೆತ್ತವರನ್ನು ಬಿಟ್ಟು ಮಾವನ ಮನೆ ಅಳಿಯನಾಗಲು ಅವನು ತಯಾರಿಲ್ಲ. ಹೋಗಬೇಕಾದ ಅವಶ್ಯವೂ ಇಲ್ಲ. ಅದಕ್ಕಾಗಿ ಗಂಡನೊಂದಿಗೆ ವಿನುತಳ ಅಸಹಕಾರ. ಸೂರ್ಯ ಏನು ಮಾತಾಡಿದರೂ ತಪ್ಪು. ಅವಳನ್ನು ಏನಾದರೂ ಕೇಳಿದರೆ `ನಾನೇನು ನಿಮ್ಮ ಸೇವಕಿಯೆ? ಇಂಥ ಉತ್ತರ ವಿನುತಳಿಂದ. ಸೂರ್ಯ ಅಸಹಾಯಕನಾಗಿದ್ದಾನೆ. ಇಲ್ಲಿ ಮಾನವೀಯತೆ, ಪ್ರೀತಿ ನಶಿಸಿದೆ. ಶ್ರೀಮಂತಿಕೆಯ ದರ್ಪವೇ ಹೆಚ್ಚುಗಾರಿಕೆಯೆನಿಸಿದೆ. ಹೆಣ್ಣಿನಿಂದ ಗಂಡು ಶೋಷಣೆಗೆ ಒಳಗಾಗಿದ್ದಾನೆ. ಸಂಸಾರದಲ್ಲಿ ಹೊಂದಾಣಿಕೆ ಇಲ್ಲ. ತಾನು ಹೇಳಿದಂತೇ ಆಗಬೇಕು ಎಂದು ಹೆಂಡತಿಯ ಹಠ.
ಮೇಲೆ ಹೇಳಿದ ಎರಡೂ ಸಂಸಾರಗಳಲ್ಲೂ ಸಾಮರಸ್ಯವಿಲ್ಲ. ಮೊದಲಿನದ್ದರಲ್ಲಿ, ಹೆಂಡತಿಯಾದವಳು ಹೇಗೊ ಸಂಸಾರಕ್ಕೆ ಹೊಂದಿಕೊಳ್ಳುತ್ತಾಳೆ. ಅವಳಿಗೆ ತಾಳ್ಮೆ ಹೆಚ್ಚಿರಬಹುದು. ಕ್ಷಮಾಶೀಲೆಯಾಗಿರಬಹುದು ಹಾಗೂ ಜಗಳವಾಡುವ ಸ್ವಭಾವದವಳಲ್ಲದಿರಬಹುದು. ಆದರೆ ಮನೋನೆಮ್ಮದಿ ಕಡಿಮೆ ಇರಬಹುದು. ಎರಡನೆಯದರಲ್ಲಿ, ಒಟ್ಟಿಗೆ ಸಂಸಾರ ನಡೆಸುವುದು ಕಷ್ಟಸಾಧ್ಯ. ವಿನುತ ಹಾಗೂ ಅವಳಮ್ಮನ ಮನೋಧರ್ಮ ಬದಲಾಗಬೇಕು. ಪರಸ್ಪರ ವಿಶ್ವಾಸ ಸ್ನೇಹಕ್ಕೆ ಹೆಚ್ಚು ಬೆಲೆಕೊಡಬೇಕು. ಒಬ್ಬರ ಭಾವನೆಯನ್ನು ಇನ್ನೊಬ್ಬರು ಗೌರವಿಸಬೇಕು. ಆಗ ಮಗಳು ಅಳಿಯನ ಬಾಳು ಹೂವಿನ ಸುಪ್ಪತ್ತಿಗೆಯಾದೀತು, ಸಂಸಾರದಲ್ಲಿ ನೆಮ್ಮದಿ ಸಿಕ್ಕೀತು.
ಒಟ್ಟಿನಲ್ಲಿ ಸಂಸಾರ ರಥ ಸುಗಮವಾಗಿ ಸಾಗಲು ಗಂಡ ಹೆಂಡತಿ ಎಂಬ ಎರಡು ಚಕ್ರಗಳೂ ಸಮವಾಗಿರಬೇಕು. ರಥವನ್ನೆಳೆಯುವವರಿಗೆ ಉಭಯರ ಹೆತ್ತವರೂ ಪ್ರೀತಿ ಅಭಿಮಾನದ ತನಿಯನ್ನೆರೆಯಬೇಕು ಹಾಗೂ ಅವರು ರಥದ ಕೀಲು ಆಗಿರಬೇಕು. ಆಗ ಮಾತ್ರ ರಥ ಸಲೀಸಾಗಿ ಮುಂದೆ ಉರುಳುತ್ತದೆ. ರಥದ ಯಾವುದೇ ಒಂದು ಚಕ್ರ ಸಮವಾಗಿಲ್ಲದಿದ್ದರೂ ಅದು ಮುಂದೋಡದೆ ಅಲ್ಲೇ ಮುಗ್ಗರಿಸಿಬಿಡುತ್ತದೆ! ಗಂಡು, ತಾನೇ ಶ್ರೇಷ್ಠ ಎಂಬ ಅಹಂಭಾವ ತೊರೆಯಬೇಕು. ಹೆಣ್ಣು, ತಾನೇ ಗಂಡಿಗಿಂತಲೂ ಮೇಲು ಎಂಬ ಭಾವನೆಯನ್ನು ಮನದಿಂದ ದೂರಮಾಡಬೇಕು. ಯಾರೊಬ್ಬರೂ ಮೇಲಲ್ಲ, ಕೀಳೂ ಅಲ್ಲ. ಒಬ್ಬರ ಭಾವನೆಯನ್ನು ಇನ್ನೊಬ್ಬರು ಗೌರವಿಸಬೇಕು. ದಾಂಪತ್ಯಜೀವನದಲ್ಲಿ ಒಬ್ಬರಿಗೊಬ್ಬರು ಸಹಕಾರ ಮನೋಭಾವ ತೋರಿದರೆ ಮಾತ್ರ ಅದು ಆದರ್ಶ ಸಂಸಾರವೆನಿಸೀತು.
* * *
ಅನುರಾಗ ನಂಬಿಕೆಯಿಂದ ಆದ ಮದುವೆ ಹೆಣ್ಣಿಗಾಗಲೀ ಗಂಡಿಗಾಗಲೀ ಸಮಾನ ಭದ್ರತೆ ಕೊಡುತ್ತದೆ. ಇಲ್ಲಿ, ಹೆಣ್ಣಿಗೆ ಮಾತ್ರ ಮದುವೆಯಿಂದ ಭದ್ರತೆ ಸಿಗುವುದಲ್ಲ. ಗಂಡನಿಗೆ ಹೆಂಡತಿ ಆಸರೆ, ಹೆಂಡತಿಗೆ ಗಂಡ ಆಸರೆ. ಇದು ಪರಸ್ಪರ ಪೂರಕವಾಗಿರಬೇಕು. ದಾಂಪತ್ಯದ ಇಳಿ ವಯಸ್ಸಿನಲ್ಲಿ ಒಬ್ಬೊರಿಗೊಬ್ಬರು ಹೆಚ್ಚು ಹತ್ತಿರವಾಗುತ್ತಾರೆ ಹಾಗೂ ಪರಸ್ಪರ ಅವಲಂಬನೆಯೂ ಆಗಲೇ ಜಾಸ್ತಿ ಕಂಡುಬರುತ್ತದೆ. ಗಂಡನಾದವ ಹೆಚ್ಚು ಹೆಂಡತಿಯನ್ನು ಅವಲಂಬಿಸುತ್ತಾನೆ. (ಆದರೆ ತೋರಿಸಿಕೊಳ್ಳುವುದಿಲ್ಲ. ಹೇಳಿಕೊಂಡರೆ ಪ್ರತಿಷ್ಠೆಗೆ ಭಂಗ ತಂದಂತೆ ತಾನೆ!) ಹೆಂಡತಿ ಹೆಚ್ಚು ಗಂಡನನ್ನು ಆಶ್ರಯಿಸುವುದಿಲ್ಲ ಎಂದು ನನ್ನ ಅನಿಸಿಕೆ. ಅವಳಿಗೆ ತಾಳ್ಮೆ, ಕ್ಷಮಾಗುಣ ಹುಟ್ಟಿನಿಂದಲೇ ಬಂದಿರುತ್ತದೆ. (ನೂರಕ್ಕೆ ನೂರಲ್ಲ, ಪ್ರತಿಶತಃ ೭೫ ಇರಬಹುದು.) ಸಂಸಾರದಲ್ಲಿ ಎಂಥ ಕಷ್ಟದ ಪರಿಸ್ಥಿತಿ ಬಂದರೂ ಅದನ್ನು ಮಹಿಳೆ ಬಹಳ ಬೇಗ ಅರ್ಥವಿಸಿಕೊಂಡು ಪರಿಹರಿಸಬಲ್ಲಳು. ಅಂಥ ತಾಕತ್ತು ಅವಳಿಗಿರುತ್ತದೆ. ಗಂಡಸು ಮನೆ ಹೊರಗೆ ದುಡಿಯಬಲ್ಲನೇ ಹೊರತು ಅಷ್ಟೇ ಸುಲಭವಾಗಿ ಮನೆ ಒಳಗೆ ಸಮರ್ಥವಾಗಿ ದುಡಿಯಲು ಅವನಿಂದ ಸಾಧ್ಯವಾಗುವುದಿಲ್ಲ. ಅದೇ ಮಹಿಳೆಯಾದರೆ ಮನೆ ಹೊರಗಿನ ಕಾರ್ಯವನ್ನೂ ಒಳಗಿನ ಸಂಸಾರವನ್ನೂ ಅಚ್ಚುಕಟ್ಟಾಗಿ ನಿರ್ವಹಿಸಬಲ್ಲಳು. ಗಂಡಸಿಗೆ ಒಂಟಿತನ ಬಹಳ ಬೇಗ ಕಾಡುತ್ತದೆ. ಆದ್ದರಿಂದ ಮದುವೆ ಹೆಂಗಸಿಗಿಂತ ಹೆಚ್ಚಾಗಿ ಗಂಡಸಿಗೆ ಜಾಸ್ತಿ ಭದ್ರತೆ ಕೊಡುತ್ತದೆ ಎಂದು ನನ್ನ ಅಭಿಪ್ರಾಯ.
ಇಲ್ಲಿ ಮುಖ್ಯವಾಗಿ ಗಮನಿಸಬೆಕಾದ ವಿಷಯಗಳಿವು: ಗಂಡ ಹೆಂಡತಿಯರಲ್ಲಿ ಹೊಂದಾಣಿಕೆ ಇದ್ದರೆ ಮಾತ್ರ ಉಭಯರಿಗೂ ಮದುವೆಯಿಂದ ಭದ್ರತೆ ಒದಗೀತು. ಅದೇ ಇಬ್ಬರಲ್ಲಿ ಒಬ್ಬರು ಸರಿ ಇಲ್ಲದಿದ್ದರೂ ಮದುವೆ ಉಭಯರಿಗೂ ಅಭದ್ರತೆ ಕೊಡುತ್ತದೆ. ಉದಾಹರಣೆಗೆ, ಕುಡುಕ ಕಾಮುಕ ವರದಕ್ಷಿಣೆ ಪೀಡಕ ಗಂಡನಾಗಿದ್ದರೆ ಹೆಂಡತಿಗೆ ಈ ಮದುವೆಯಿಂದ ಭದ್ರತೆ ಹೋಗಲಿ ಮೊದಲಿದ್ದ ನೆಮ್ಮದಿಯೂ ಇಲ್ಲದೆ ಪ್ರಾಣಭಯ ಪ್ರಾರಂಭವಾಗಬಹುದು. ಎಷ್ಟು ದುಡಿದು ತಂದರೂ ತೃಪ್ತಿ ಇಲ್ಲದಿರುವಿಕೆ, ಕೆಟ್ಟ ಸ್ವಭಾವ, ಜಗಳಗಂಟಿ, ಸಂಶಯಪಡುವ ಹೆಂಡತಿಯಾದರೆ ಗಂಡನಿಗೆ ಈ ಮದುವೆ ನರಕವೆನಿಸೀತು. ಹಾಗಾಗಿ ಪರಸ್ಪರ ಹೊಂದಾಣಿಕೆಯೇ ಮದುವೆಯ ಭದ್ರತೆಯನ್ನು ಸೂಚಿಸುತ್ತದೆ ಎಂದು ನಾವು ಸ್ಪಷ್ಟವಾಗಿ ಅರಿಯಬೇಕು.
ಇದು ಹಿಂದೆ ಪತ್ರಿಕೆಯಲ್ಲಿ ಬಂದ ಲೇಖನ.
ಚೆನ್ನಾಗಿ ವಿಶ್ಲೇಷಿಸಿದ್ದೀರಿ..ಎರಡೂ ಗಾಲಿಗಳು ಸಹಜವಾಗಿ, ಸರಿಸಮವಾಗಿ ಇರಬೇಕು ಎಂಬುದಕ್ಕೆ ಎರಡು ಮಾತಿಲ್ಲಾ.. ಆದರೆ ನೀವು ಬರೆದ ” ಅನುರಾಗ ನಂಬಿಕೆಯಿಂದ ಆದ ಮದುವೆ ಹೆಣ್ಣಿಗಾಗಲೀ ಗಂಡಿಗಾಗಲೀ ಸಮಾನ ಭದ್ರತೆ ಕೊಡುತ್ತದೆ.” ಎಂಬುದರ ಬಗ್ಗೆ ನಮ್ಮ ಸುತ್ತು ಮುತ್ತಲು ನಡೆಯುವ ಘಟನೆಗಳು, ದಿನಾಲೂ ಪತ್ರಿಕೆಯಲ್ಲಿ ಬರುವ ಸುದ್ದಿಗಳನ್ನು ಓದಿದರೆ ನಂಬಿಕೆ ಬರುತ್ತಿಲ್ಲಾ ..!!
Kanditha Mala, nimma abhiprayavannu nau anumodisuttini. Olleya baraha