ಮಾವ ಹೇಗಿದ್ದೀರ? ನಾವೆಲ್ಲ ಚೆನ್ನಾಗಿದ್ದೇವೆ. ನೀವು ಈ ಲೋಕ ತ್ಯಜಿಸಿ ದೀರ್ಘ ೫ ತಿಂಗಳೇ ಕಳೆದುವು. ಈ ಹಿಂದೆಯೇ ನಿಮಗೆ ಪತ್ರ ಬರೆದು ಇಲ್ಲಿಯ ಆಗುಹೋಗುಗಳನ್ನು ತಿಳಿಸಬೇಕೆಂದು ಯೋಚಿಸಿದ್ದೆ. ಆದರೆ ನನ್ನ ಸೋಮಾರಿತನದಿಂದ ಅದು ಇಷ್ಟು ಮುಂದೆ ಹೋಯಿತು. ನೀವು ಹೋಗಿ ೧೧ನೇ ದಿನ ನಾವು ನಿಮಗೆ ಪಿತೃಸ್ಮೃತಿ ಎಂದು ಒಂದು ಕಾರ್ಯಕ್ರಮ ಮನೆಯಲ್ಲಿ ಹಮ್ಮಿಕೊಂಡಿದ್ದೆವು. ನಿಮ್ಮ ಸ್ನೇಹಿತರಾರಿಗೂ ಹೇಳಲಿಲ್ಲ. ಹತ್ತಿರದ ಸಂಬಂಧಿಗಳಿಗೆ ಮಾತ್ರ ಹೇಳಿದ್ದು. ನಿಮ್ಮ ದೃಷ್ಟಿಯ ಸಂಬಂಧಿಗಳಲ್ಲ, ನಮ್ಮ ದೃಷ್ಟಿಯಲ್ಲಿ ಕಂಡವರು. ಆ ಕಾರ್ಯಕ್ರಮ ಮಾಡುವುದು ನಿಮಗೆ ಸರಿ ಬರುವುದಿಲ್ಲ ಎಂದು ಗೊತ್ತು. ಆದರೆ ನೀವೇ ಹೇಳುತ್ತಿದ್ದ ಮಾತು `ಗೃಹಶಾಂತಿಗೋಸ್ಕರ ಕೆಲವನ್ನು ಒಪ್ಪಿಕೊಳ್ಳಬೇಕಾಗುತ್ತೆ’ ಎಂದು. ಅದನ್ನು ನಾವು ನೆನಪಿಟ್ಟುಕೊಂಡಿದ್ದೆವು! ಹಾಗಾಗಿ ಮಾಡಬೇಕಾಯಿತು. ಬೇರೆಯವರ ಭಾವನೆಗೂ ಬೆಲೆಕೊಡಬೇಕೆಂದು ನೀವು ಸದಾ ಹೇಳುತ್ತಿದ್ದ ಮಾತು. ಅದರಲ್ಲಿ ನಿಮ್ಮದೇ ಆದರ್ಶ ನಮಗೆ. ಅದರಂತೆಯೇ ನಡೆದುಕೊಳ್ಳುತ್ತೇವೆ ಮುಂದೆಯೂ ಕೂಡ. ನಿಮ್ಮ ೨ನೇ ಸುಪುತ್ರ ಪರದೇಶದಿಂದ ಬಂದು ನಿಮ್ಮ ಬಗ್ಗೆ ಹಳೆಯದನ್ನೆಲ್ಲ ನೆನಪುಮಾಡಿಕೊಂಡರು. ಒಂದುವಾರವಿದ್ದು, ನೆನಪನ್ನು ಕಟ್ಟಿಕೊಂಡು ಪರದೇಶಕ್ಕೆ ಹೋದರು. ಅಲ್ಲಿ ಮೊಮ್ಮಕ್ಕಳು ಭಾರೀ ಬೇಜಾರುಮಾಡಿಕೊಂಡರಂತೆ ಅಜ್ಜನನ್ನು ನೋಡಲಾಗಲೇ ಇಲ್ಲ ಎಂದು.
ನಿಮಗೆ ಬರುತ್ತಿದ್ದ ಪಿಂಚಣಿ ಹಣ ಈಗ ಯಾವ ತಕರಾರು ಇಲ್ಲದೆ ಒಂದು ತಿಂಗಳಿನೊಳಗೆ ಅತ್ತೆಯ ಹೆಸರಿಗೆ ವರ್ಗಾವಣೆಯಾಗಿದೆ. ಅತ್ತೆಯ ಹಳೆ ಕಾಯಿಲೆ ಮೈ ಕೈ ನೋವು ಬಿಟ್ಟರೆ ಚೆನ್ನಾಗಿದ್ದಾರೆ. ಈಗ ಅತ್ತೆಗೆ ಪಿಂಚಣಿ ಸರಿಯಾಗಿ ಬರುತ್ತಿರುತ್ತದೆ. ಪ್ರತೀ ತಿಂಗಳು ನೀವು ಒಂದನೇ ತಾರೀಕು ಸೆಲ್ಪ್ ಚೆಕ್ ಬರೆದು ಪಾಸ್ ಪುಸ್ತಕ ಕೈಗಿತ್ತು ಹಣ ತರಲು ಹೇಳುತ್ತಿದ್ದುದು ನೆನಪಾಗುತ್ತಿದೆ. ಆ ಕೂಡಲೇ ಪಾಸ್ ಪುಸ್ತಕ ಎಂಟ್ರಿಯಾಗಬೇಕು ನಿಮಗೆ. ಅಷ್ಟು ಕರಾರುವಾಕ್. ಆ ಕೂಡಲೇ ಹಣ ತಂದಿಲ್ಲ ಎಂದರೆ ಏನೋ ಕಸಿವಿಸಿ ನಿಮಗೆ. ಎಷ್ಟೋ ಸಲ ನಾನು ಆ ಗಳಿಗೆಯಲ್ಲಿ ನನ್ನ ಕೈಯಲ್ಲಿದ್ದ ಹಣ ನಿಮಗೆ ಕೊಟ್ಟು ಬಿಡುತ್ತಿದ್ದೆ. ಆಗ ನಿಮಗೆ ಗೊತ್ತಾಗುತ್ತಿತ್ತು. ಬ್ಯಾಂಕಿಗೆ ಹೋಗಲಿಲ್ಲ ಇದು ಸಾಲ ಎಂದು ನಗುತ್ತ ನೀವು ಹೇಳುತ್ತಿದ್ದಿರಿ. ನಾನು ನನಗೆ ಸಮಯ ಆದಾಗ ಹೋಗಿ ದುಡ್ಡು ತರುತ್ತಿದ್ದೆ. ಈಗಲೂ ಅತ್ತೆಯ ಪಾಸ್ಪುಸ್ತಕ ಎಂಟ್ರಿಗೆ, ಹಾಗೂ ಹಣ ತರಲು ಬ್ಯಾಂಕಿಗೆ ಹೋಗುತ್ತಿರುತ್ತೇನೆ. ನಿಮ್ಮ ಸ್ವಭಾವ ಹೇಗೆಂದರೆ ಅದು ಯಾವ ಕೆಲಸವಾದರೂ ಕೂಡಲೇ ಆಗಬೇಕು. ನಿಮ್ಮ ವೇಗಕ್ಕೆ ಸ್ಪಂದಿಸುವಷ್ಟು ಚುರುಕು ನನಗಿರಲಿಲ್ಲ. ನಿಮ್ಮ ವೇಗವನ್ನು ಅರ್ಥ ಮಾಡಿಕೊಳ್ಳಲು ನೀವಿದ್ದಾಗ ನಾನು ವಿಫಲಗೊಂಡಿದ್ದೆ ಎನ್ನಬಹುದು. ಸಮಯವದು ಬಹು ಅಮೂಲ್ಯ. ಅದು ಕಳೆದಮೇಲೆ ಮತ್ತೆ ಬೇಕೆಂದರೂ ಎಂದೆಂದಿಗೂ ಹಿಂದೆ ಬರುವುದಿಲ್ಲ. ಎಂಬುದನ್ನು ನಾವು ಮರೆಯುತ್ತೇವೆ. ಆದರೆ ನೀವು ಮರೆತಿರಲಿಲ್ಲ.
ವಿವಿಧಕಡೆ ನಿಮ್ಮ ಅಭಿಮಾನಿಗಳು ಮಿತ್ರರು ಸೇರಿ ನಿಮ್ಮ ಬಗ್ಗೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು. ಕೆಲವಕ್ಕೆ ಹೋಗಿದ್ದೆವು. ಅಂಥದ್ದರಲ್ಲಿ ಒಂದು ಕಾರ್ಯಕ್ರಮದ ದಿನ ಸಂಜೆ ಧಾರಾಕಾರ ಮಳೆ. ನಿಮ್ಮ ಪ್ರೀತಿಯ ಮನೆ ವೀಣೆಶೇಷಣ್ಣ ಭವನದಲ್ಲೇ ಏರ್ಪಾಡದದ್ದು. ಆ ಪಾಟಿಮಳೆಗೆ ಯಾರೂ ಜನರೇ ಬರಲಿಕ್ಕಿಲ್ಲ ಎಂದು ನಾವು ಭಾವಿಸಿದ್ದೆವು. ನಿಮ್ಮ ನಿಜವಾದ ಅಭಿಮಾನಿಗಳು ಮಿತ್ರರು ಯಾರು ಎಂದು ಆ ದಿನ ವೇದ್ಯವಾಗಿತ್ತು. ಆ ಮಳೆಯಲ್ಲಿ ಎಷ್ಟು ಜನ ಬಂದು ಸೇರಿದ್ದರು ಎಂದರೆ ಭವನ ತುಂಬಿತ್ತು. ಕಾರ್ಯಕ್ರಮ ಸಮಯಕ್ಕೆ ಸರಿಯಾಗಿ ಪ್ರಾರಂಭಿಸಬೇಕೆಂದು ಬಹಳ ಪ್ರಯತ್ನಪಟ್ಟರು. ಮಳೆ, ವಿದ್ಯುತ್ ಹೋಗಿದ್ದರಿಂದ ಕೇವಲ ೧೫ ನಿಮಿಷ ತಡವಾಯಿತು. ೧೦-೧೨ ಮಂದಿ ನಿಮ್ಮ ಬಗ್ಗೆ ೫ ನಿಮಿಷ ಮಾತಾಡಿದರು. ಕಾರ್ಯಕ್ರಮದ ಪ್ರಾರಂಭದ ಮೊದಲು ನಾವೆಲ್ಲ ಮನೆಯವರು ವೇದಿಕೆ ಹತ್ತ್ತಿ ನಿಮ್ಮ ಆಳೆತ್ತರದ ಭಾವಚಿತ್ರಕ್ಕೆ ನಿಮ್ಮ ಪ್ರೀತಿಯ ಮಲ್ಲಿಗೆ ಹೂವನ್ನು ಎರಚುವ ನಾಟಕೀಯ ಕಾರ್ಯಕ್ಕೆ ಮುಂದಾಗಬೇಕಾಯಿತು. ನಮಗೆ ಇಷ್ಟವಿಲ್ಲದಿದ್ದರೂ ನಾವು ಆ ರೀತಿ ನಡೆದುಕೊಳ್ಳಬೇಕಾಯಿತು ಕಾರ್ಯಕ್ರಮ ಸಂಯೋಜಕರ ಪ್ರೀತಿ ಅಭಿಮಾನಕ್ಕೆ ನಾವು ತಲೆಬಾಗಲೇಬೇಕಾಯಿತು. ಆದಿನ ನಿಮ್ಮ ಪ್ರೀತಿಯ ದೇಜಗೌ ಕಾರ್ಯಕ್ರಮದುದ್ದಕ್ಕೂ ಕುಳಿತು ಕೊನೆಗೆ ನಿಮ್ಮ ಬಗ್ಗೆ ಎರಡು ಮಾತಾಡಿ ನಿಮ್ಮ ಮೇಲಿದ್ದ ಪ್ರೀತಿಯನ್ನು ತೋರ್ಪಡಿಸಿದರು.
ದೇಹದಾನ ಮಾಡಬೇಕು ಎಂಬ ನಿಮ್ಮ ಇಚ್ಛೆಯಂತೆ ನಿಮ್ಮ ದೇಹವನ್ನು ಜೆ.ಎಸ್.ಎಸ್ ಆಸ್ಪತ್ರೆಗೆ ಕೊಟ್ಟಿದ್ದೇವೆ. ಇದರಿಂದ ಪ್ರೇರಿತರಾಗಿ ಕೆಲವು ಮಂದಿ ಅವರ ದೇಹದಾನಕ್ಕೆ ಬೇಕಾದ ಕಾಗದಪತ್ರಗಳನ್ನು ತಯಾರು ಮಾಡಿಟ್ಟುಕೊಂಡಿದ್ದಾರಂತೆ.
ನೀವು ಹೋಗಿ ತಿಂಗಳು ಕಳೆದಮೇಲೆ ಗ್ರಹಣ ಬಂತು. ನೀವಿಲ್ಲ ಎಂದು ಜನ ಹೆಚ್ಚೆಚ್ಚು ಮೌಢ್ಯದಿಂದ ಆ ದಿನವನ್ನು ಕಳೆದರು ಎಂಬುದು ನನ್ನ ಭಾವನೆ. ಗಹಣದಿಂದ ಏನೂ ಹಾನಿಯಿಲ್ಲ ಎಂದು ಪತ್ರಿಕೆಯಲ್ಲಿ ಘಂಟಾಘೋಷವಾಗಿ ಬರೆದು ಎಚ್ಚರಿಸಲು ನೀವಿರಲಿಲ್ಲ. ನಿಜವಾಗಿ ಖೇದವಾಯಿತು ಜನರ ಮೌಢ್ಯ ನೋಡಿ. ಕಛೇರಿಗಳಿಗೆ ರಜ ಕೊಟ್ಟಿದ್ದರು. ರಸ್ತೆಯಲ್ಲಿ ಆ ಸಮಯದಲ್ಲಿ ನರಪಿಳ್ಳೆಯ ಸಂಚಾರ ಇರಲಿಲ್ಲ. ಸ್ಮಶಾನ ಮೌನ ಎನ್ನುತ್ತಾರಲ್ಲ ಹಾಗಿತ್ತು. ಆ ದಿನ ದರ್ಬೆಗಳಿಗೆ ಎಲ್ಲಲ್ಲದ ಬೇಡಿಕೆ ಇತ್ತಂತೆ. ದೇವಸ್ಥಾನಗಳಲ್ಲಿ ಶಾಂತಿ ಹೋಮಗಳ ಹೊಗೆ ಕಾವೇರಿತ್ತು! ಅದರನಂತರ ಚಂದ್ರಗ್ರಹಣವೂ ಬಂತು. ಆ ದಿನವೂ ಜನ ಮೌಢ್ಯದಿಂದ ಕೂಪಕ್ಕೆ ಬಿದ್ದರು. ಅವರನ್ನು ಬೀಳದಂತೆ ತಡೆಯುವವರಾರು ಇರಲಿಲ್ಲ.
ನಿಮಗೆ ಸಂತೋಷದ ವಿಷಯ ಹೇಳಲೇಬೇಕು. ನೀವು ಬರೆದ ಧೂಮಕೇತು ಪುಸ್ತಕ ೧೦ನೇ ಮುದ್ರಣಕ್ಕೆ ಅಣಿಗೊಳ್ಳುತ್ತಿದೆ ಎಂದು ನವಕರ್ನಾಟಕದಿಂದ ಕಾಗದ ಬಂದಿತ್ತು. ಕೂಡಲೆ ಅವರಿಗೆ ಸಂತೋಷ ಪ್ರಕಟಿಸಿ ಮಾರೋಲೆ ಬರೆದೆ. ನೀವೇನು ಚಿಂತೆ ಮಾಡಬೇಡಿ. ಕಾಗದ ಬರೆದಿದ್ದಾರೊ ಇಲ್ಲವೋ ಎಂದು. ನಿಮ್ಮಿಂದ ಆ ಒಳ್ಳೆಯ ಕೆಲಸವನ್ನು ನಾನು ತಪ್ಪದೆ ಪಾಲಿಸಲು ಕಲಿತಿದ್ದೇನೆ. ಮತ್ತೊಂದು ಸಂತೋಷದ ವಿಷಯ ಇದೆ. ನೀವು ಗೋವಿಂದರಾವ್ ಅವರಿಂದ ಬಲವಂತವಾಗಿ ಬರೆಸಿರುವ ನಕ್ಷತ್ರದ ಬಗ್ಗೆ ಪುಸ್ತಕ. ಅದನ್ನು ಅವರು ಬರೆದು ಅಚ್ಚಿನಮನೆಗೆ ಕೊಟ್ಟು ಕರಡು ಓದಿ ಅದೀಗ ಮುದ್ರಣಕ್ಕೆ ಹೆಜ್ಜೆ ಇಟ್ಟಿದೆ. ಅದಕ್ಕೆ `ತಾರಾಲೋಕ’ ಎಂದು ಹೆಸರು ಕೊಟ್ಟಿದ್ದಾರೆ. ಮುದ್ರಣ ಕಾರ್ಯ ಎಲ್ಲೀವರೆಗೆ ಬಂತು ಎಂದು ಆಗಾಗ ದೂರವಾಣಿಸಿ ಅಥವಾ ಅಲ್ಲೇ ಹೋಗಿ ಕೇಳಲು ನೋಡಲು ನೀವಿಲ್ಲವಲ್ಲ. ಅದಕ್ಕೆ ಸ್ವಲ್ಪ ನಿಧಾನವಾಗುತ್ತಿದೆಯೇನೋ ಎಂದು ನನಗನಿಸಿದೆ. ಗೋವಿಂದರಾವ್ ಮುತುವರ್ಜಿಯಿಂದ ನೀವಿತ್ತ ಕೆಲಸವನ್ನು ಬಹಳ ಸಂತೋಷದಿಂದಲೇ ಮಾಡಿ ಮುಗಿಸಿದ್ದಾರೆ. ಅವರಿಗಿಂತ ಹೆಚ್ಚು ನೀವೇ ಆ ಪುಸ್ತಕ ನೋಡಿ ಸಂತೋಷ ಅಭಿಮಾನ ವ್ಯಕ್ತಪಡಿಸುತ್ತಿದ್ದಿರಿ ಎಂದು ನನ್ನನಿಸಿಕೆ.
ನಿಮ್ಮ ಅಭಿಮಾನಿ ಶಿಷ್ಯೆ ಮಯೂರರಿಗೆ ನೀವು ಬರೆಯಲು ಹೇಳಿದ ಸ್ಟೀಫನ್ ಹಾಕಿಂಗ್ ಪುಸ್ತಕ ಇದೀಗ ನವಕರ್ನಾಟಕದವರು ಅಚ್ಚು ಹಾಕಿದ್ದಾರೆ. ಅದನ್ನು ನಿಮಗೆ ಅರ್ಪಣೆ ಮಾಡಿದ್ದಾರೆ. ನೀವೇ ಹಸ್ತಪ್ರತಿ ನೋಡಿ ಅವಶ್ಯ ತಿದ್ದುಪಡಿ ಹಾಕಿದ್ದಂತೆ. ಮಯೂರ ಖುದ್ದಾಗಿ ಬಂದು ಆ ಪುಸ್ತಕ ಕೊಟ್ಟು ಹೋಗಿದ್ದಾರೆ. ಅತ್ತೆ ಆ ಕೂಡಲೇ ಅದನ್ನು ಓದಿ ಮೆಚ್ಚಿ ಶಿಫಾರಸು ಕೊಟ್ಟಿದ್ದಾರೆ. ಬಂದವರಿಗೆಲ್ಲ ದೂರವಾಣಿಸಿದವರಿಗೆಲ್ಲ ಆ ಪುಸ್ತಕದ ಬಗ್ಗೆ ತೋರಿಸಿ ಹೇಳಿ ಸಂತೋಷ ಪಡುತ್ತಿದ್ದಾರೆ.
ನಿಮ್ಮ ಅಭಿಲಾಷೆಯಂತೆ ನಿಮ್ಮ ಸಂಗ್ರಹದಲ್ಲಿದ್ದ ಸುಮಾರು ೧೦೦ಕ್ಕು ಹೆಚ್ಚು ಆಂಗ್ಲದಲ್ಲಿದ್ದ ವಿಜ್ಞಾನ ಪುಸ್ತಕಗಳನ್ನು ನಿಮ್ಮ ನೆಚ್ಚಿನ ಶಿಷ್ಯ ರಾಧಾಕೃಷ್ಣನಿಗೆ ಕೊಟ್ಟಿದ್ದೇವೆ. ಅವನು ಅಭಿಮಾನ ಸಂಕೋಚ ಎಂಬ ಮಿಶ್ರಭಾವದಿಂದ ಅವುಗಳನ್ನು ಕೊಂಡೋಗಿದ್ದಾನೆ. ಅದರಲ್ಲಿ ಕೆಲವು ಅವನದೇ ಪುಸ್ತಕಗಳಿದ್ದುವು! ನೀವು ಬೈಂಡ್ ಮಾಡಿ ಜೋಪಾನವಾಗಿರಿಸಿದ ಸೈಂಟಿಪಿಕ್ ಅಮೇರಿಕ ಪುಸ್ತಕವನ್ನು ಕೊಂಡೋಗಿದ್ದಾನೆ. ವಿಜ್ಞಾನ ಲೇಖನ ಬರೆಯುವವರಿಗೆ ಅದು ವರದಾನವಂತೆ. ಇನ್ನು ಮುಂದೆ ಕಸ್ತೂರಿ ಇತ್ಯಾದಿ ಪತ್ರಿಕೆಗಳಿಗೆ ತಪ್ಪದೆ ವಿಜ್ಞಾನ ಲೇಖನ ಬರೆದು ಕಳುಹಿಸುತ್ತೇನೆ ಎಂಬ ಭರವಸೆ ಕೊಟ್ಟಿದ್ದಾನೆ. ಬರೆಯಬೇಕು ಬರೆಯಬೇಕು ಎಂದು ಆ ಪುಸ್ತಕಗಳನ್ನು ತೆರೆದು ನೋಡಿ ಸಂತೋಷದಿಂದ ಹೇಳಿಕೊಂಡ. ಸಪಾತ್ರರಿಗೆ ಅಂಥ ಅಮೂಲ್ಯ ಪುಸ್ತಕ ಸಂದರೆ ಅದಕ್ಕಿಂತ ಸಂತೋಷ ಬೇರಿಲ್ಲ. ಪುಸ್ತಕಗಳನ್ನು ತೆಗೆದುಕೊಂಡು ಅವನು ನಮ್ಮನ್ನು ಸಾರ್ಥಕಗೊಳಿಸಿದ ಎಂದೇ ನನ್ನ ಭಾವನೆ. ನೀವು ಸಂಗ್ರಹಮಾಡಿ ಇಟ್ಟದ್ದು ಸಾರ್ಥಕವಾದಂತಾಯಿತು. ಉಳಿದ ಆಂಗ್ಲ, ಕನ್ನಡ ಪುಸ್ತಕಗಳನ್ನೆಲ್ಲ ಅಚ್ಚುಕಟ್ಟಾಗಿ ಜೋಡಿಸಿ ಇಟ್ಟಿದ್ದೇನೆ. ನಾವೇ ಅದನ್ನು ಜತನದಿಂದ ಇಟ್ಟುಕೊಳ್ಳುತ್ತೇವೆ. ಓದುತ್ತೇವೆ ಕೂಡ!
ಚಂದ್ರಯಾನ-೧ ನೌಕೆ ಚಂದ್ರನಮೇಲೆ ಇತ್ತೀಚೆಗೆ ಇಳಿಯುವ ಮೂಲಕ ಅಲ್ಲಿ ಭಾರತ ಧ್ವಜ ಹಾರಾಡಿಸಿ ಭಾರತೀಯರ ಕನಸು ನನಸಾಯಿತು. ಹಿಂದೆ ನೀವು ಬರೆದ ಮಾನವಚಂದ್ರನಮೇಲೆ ಪುಸ್ತಕನ್ನು ಪುನರ್ಮುದ್ರಣಗೊಳಿಸುವ ಅಂದಾಜಿನಲ್ಲಿದ್ದಾರೆ ನಿಮ್ಮ ಹಿರಿಮಗ. ಅದಕ್ಕೆ ಈಗಿನ ಚಂದ್ರಯಾನ- ೧ ನೌಕೆಯ ಟಿಪ್ಪಣಿಗಳನ್ನು ಸೇರಿಸುವ ಯೋಜನೆ ಇದೆಯಂತೆ. ನನಗಂತೂ ಅದರ ತಲೆಬುಡ ಅರ್ಥ ಆಗುವುದಿಲ್ಲ- ಓದಿದರೆ ಕೂಡ. ನನ್ನ ಬುದ್ಧಿಮಟ್ಟ ಮೀರಿದ ವಿಷಯಗಳವು (ವಿಜ್ಞಾನ) ಎಂದು ನಾನಂದೇ ತೀರ್ಮಾನಕ್ಕೆ ಬಂದಿದ್ದೇನೆ. (ಬೇಜಾರುಮಾಡದಿರಿ ನಿಮ್ಮ ನೆಚ್ಚಿನ ವಿಷಯವನ್ನು ಹಾಗೆ ಹೇಳಿದ್ದಕ್ಕೆ.) ಸುಮ್ಮನೆ ವಿಷಯ ಓದಿ ಸಂತೋಷಗೊಳ್ಳುವುದಷ್ಟೆ ನನ್ನ ಕೆಲಸ.
ನಿಮ್ಮ ಮೊಮ್ಮಗನ ಮದುವೆ ನಿಮ್ಮ ಅನುಪಸ್ಥಿತಿಯಲ್ಲಿ ನೆರವೇರಿತು. ನವದಂಪತಿಗಳು ಖುಷಿಯಿಂದಿದ್ದಾರೆ. ಮೊಮ್ಮಗನಿಗೆ ಬಲು ಕೋಪ ನಿಮ್ಮ ಮೇಲೆ. ಅವನ ಮದುವೆ ನೋಡದೆ ನಿಮಗೇನು ಅವಸರವಿತ್ತು ಹೋಗಲು ಎಂದು ಅವನ ಆರೋಪ. ಅವನಿಗೆ ನೀವೇ ಉತ್ತರ ಕೊಡಿ. ನಿಮ್ಮ ಮೊಮ್ಮಗಳು ಯಾವಾಗಲೂ ನಿಮ್ಮನ್ನು ನೆನಪುಮಾಡಿಕೊಳ್ಳುತ್ತ ಇರುತ್ತಾಳೆ. ಅವಳಿಗೆ ದುಃಖ. ಅವಳನ್ನು ಯಾರೂ ಹೊಗಳುವುದಿಲ್ಲವಂತೆ ಈಗ. ಅಜ್ಜ ಒಬ್ಬರೇ ಹೊಗಳುತ್ತಿದ್ದುದಂತೆ. ಈಗ ಅಜ್ಜ ಕೂಡ ಇಲ್ಲ. ನನ್ನ ಕಾಲೇಜಿನ ವಿಷಯಗಳನ್ನೆಲ್ಲ ಅಜ್ಜ ಆಸಕ್ತಿಯಿಂದ ಕೇಳುತ್ತಿದ್ದರು. ನನಗೆ ಬಂದ ಬಹುಮಾನಗಳನ್ನು ಖುಷಿಯಿಂದ ನೋಡಿ ಬೆನ್ನುತಟ್ಟಿ, `ಎಂದಿಗೂ ಜಂಬ ಬರಬಾರದು ಮಗು’ ಎಂದು ಹೇಳುತ್ತಿದ್ದರು. ಎಂದು ಆಗಾಗ ಹೇಳುತ್ತಿರುತ್ತಾಳೆ. ಮನುಜ ಇರುವಾಗ ಅವನ ಬೆಲೆ ಏನು ಎಂದು ಗೊತ್ತಾಗುವುದಿಲ್ಲ ಅವನಿಲ್ಲದಾಗ ಎಲ್ಲ ಗೊತ್ತಾಗುತ್ತದೆ. ಇದುವೆ ಜಗದ ನಿಯಮ, ಮಾನವನ ಸ್ವಭಾವ ಕೂಡ! ದಕ್ಷಿಣಕನ್ನಡ ಜಿಲ್ಲೆಯವರಿಗೆ ಹೊಗಳಲು ಬರುವುದಿಲ್ಲ, ಮತ್ತೆ ಗರ್ವ ಅಂದರೆ ಅಸ್ಮಿತೆ ಹೆಚ್ಚು ಎಂದು ನನ್ನ ಅಭಿಪ್ರಾಯ.
ನಿಮ್ಮನ್ನು ಕೇಳಿಕೊಂಡು ಆಗಾಗ ಕೆಲವು ಬ್ಯಾಂಕ್ನಿಂದ ಸಾಲ ಬೇಕೆ ಎಂದು ದೂರವಾಣಿ ಬರುತ್ತಿರುತ್ತದೆ. ಆಗ ನಾನು ಅವರು ಈ ಲೋಕದಲ್ಲೇ ಇಲ್ಲ ಎಂದು ಹೇಳುತ್ತೇನೆ. ಆಗವರು ಓ ಸಾರಿ ಎಂದಿಡುತ್ತಾರೆ. ನನಗೆ ನೀವು ಅಂಥವರೋಡನೆ ಮಾತಾಡಿದ ಪ್ರಸಂಗ ನೆನಪಿಗೆ ಬರುತ್ತದೆ. ಅವರು ಆಂಗ್ಲದಲ್ಲಿ ಮಾತಾಡಿದಾಗ ನೀವು ಅಮಾಯಕತೆಯಿಂದ ನನಗೆ ಇಂಗ್ಲಿಷ್ ಅರ್ಥವಾಗುವುದಿಲ್ಲ ತಾಯಿ (ಇಲ್ಲವೆ ಅಣ್ಣ) ಕನ್ನಡದಲ್ಲಿ ಹೇಳಿ ಎಂದೋ, ಇಲ್ಲವೆ ನೋಡಮ್ಮ ನನಗೆ ೮೦ ವರ್ಷ ನನಗೇನು ಸಾಲ ಬೇಕಾಗಿಲ್ಲ ಎಂದು ಹೇಳುತ್ತಿದ್ದಿರಿ. ದೂರವಾಣಿ ಕರೆ ಬಂದಾಗ ನೀವು ಫೋನ್ ಎತ್ತಿದಕೂಡಲೇ `ನಮಸ್ಕಾರ ನಾರಾಯಣ ರಾವ್’ ಅಥವಾ `ನಮಸ್ಕಾರ ಜಿ.ಟಿ. ನಾರಾಯಣ ರಾವ್’ ಎಂಬ ಗಂಭೀರ ಸ್ವರ ಅತ್ತಲಾಗಿ ಕೇಳಿದವರನ್ನು ಮಂತ್ರಮುಗ್ಧಗೊಳಿಸುತ್ತಿತ್ತೆಂದು ಕಾಣುತ್ತದೆ. ಎಲ್ಲರು ಈಗ ಫೋನ್ ಮಾಡಿದಾಗ ನಮಸ್ಕಾರ ನಾರಾಯಣ ರಾವ್ ಎಂಬ ಸ್ವರ ಕೇಳಲಾಗುವುದಿಲ್ಲವಲ್ಲ ಎಂದು ಹೇಳುತ್ತಿರುತ್ತಾರೆ. ನಿಮ್ಮ ಮಗ ಫೋನ್ ಎತ್ತುವ ಮೊದಲು ನಮಸ್ಕಾರ ನಾರಾಯಣ ರಾವ್ ಎಂದು ಹೇಳಿ ಫೋನ್ ಎತ್ತಿಕೊಳ್ಳುತ್ತಾರೆ.
ಪ್ರತೀದಿನ ಅಂಚೆಡಬ್ಬ ತೆರೆದು (`ತೆಗೆದು’ ಎಂದು ಬಳಸದೆ ನೀವು ಹೇಳಿಕೊಟ್ಟ ಭಾಷಾಶುದ್ಧತೆಯನ್ನು ನೆನಪಿಟ್ಟು ಪಾಲಿಸಿದ್ದೇನೆ) ನೋಡುತ್ತೇನೆ. ಕೆಲವು ಪತ್ರಗಳು ನಿಮಗೂ ಬರುತ್ತವೆ. ಸಂಘ ಸಂಸ್ಥೆಗಳದ್ದು, ಸಂಗೀತ ಕಚೇರಿಗಳದ್ದು. ಪತ್ರಬಂದಕೂಡಲೇ ಉತ್ತರಿಸುವ ನಿಮ್ಮ ಕ್ರಮವನ್ನು ನಾನು ಅಳವಡಿಸಿಕೊಂಡಿದ್ದೇನೆ. ಅಂಚೆಡಬ್ಬ ನೋಡುವಾಗಲೆಲ್ಲ ನಿಮ್ಮ ನೆನಪು ಆವರಿಸುತ್ತದೆ. ನೀವು ಪ್ರತೀದಿನ ೩-೪ ಸಲವಾದರೂ ಅದನ್ನು ತೆರೆಯುವುದು, ಪತ್ರ ಇದ್ದರೆ ನಿಮಗಾಗುವ ಸಂತೋಷ, ಪತ್ರ ಇಲ್ಲದಿದ್ದರೆ ಕೈ ತಿರುಗಿಸುತ್ತ ನಿಮಗೆ ನೀವೇ `ಎಪ್ಪೆ’ ಎಂದು ಹೇಳಿಕೊಳ್ಳುವುದು ನನ್ನ ಕಣ್ಣಿಗೆ ಕಟ್ಟುತ್ತದೆ. ಪತ್ರಬಂದಕೂಡಲೇ ಅದನ್ನು ತೆರೆದು ಓದಿ ಮಾರೋಲೆ ಬರೆಯಬೇಕಾಗುವುದಕ್ಕೆ ಕೂಡಲೇ ಅಂಚೆ ಕಾರ್ಡಲ್ಲಿ ಬರೆದು ಅದನ್ನು ಅಂಚೆ ಡಬ್ಬಕ್ಕೆ ಹಾಕಿ ಬರುವುದು ನಿಮ್ಮ ಅಮೂಲ್ಯ ಕಾರ್ಯಗಳಲ್ಲಿ ಅದೂ ಮುಖ್ಯವಾದದ್ದು.
ನಿಮಗೆ ಮೊಮ್ಮಗ ಉಡುಗೊರೆಯಾಗಿತ್ತ ೨೪ ಗಂಟೆ ಕರ್ನಾಟಕ ಸಂಗೀತ ಬರುವ ವರ್ಲ್ಡ ಸ್ಪೇಸ್ ರೇಡಿಯೋ ಇತ್ತೀಚೆಗೆ ಸ್ತಬ್ಧಗೊಂಡಿತು. ಚಂದಾ ಅವಧಿ ಮುಗಿಯಿತು ಅದರದ್ದು. ಅದನ್ನು ನಾವು ಮುಂದುವರಿಸಲಿಲ್ಲ. ವರ್ಷಕ್ಕೆ ಸುಮಾರು ೧೮೦೦ ರೂ. ಅಂತೆ. ಅಷ್ಟು ದುಡ್ಡು ಕೊಟ್ಟು ಸಂಗೀತ ಕೇಳುವ ಆಸಕ್ತಿ ಇಲ್ಲಿ ಯಾರಿಗೂ ಇಲ್ಲ. ನೀವು ಆ ಉಪಕರಣಕ್ಕೆ ದಾಸರಾಗಿಬಿಟ್ಟಿದ್ದಿರಿ. ಅದರಿಂದ ಸ್ವಲ್ಪ ಹೊತ್ತು ಸಂಗೀತ ಬರದಿದ್ದರೆ ನಿಮ್ಮ ಚಡಪಡಿಕೆ ನೋಡಿ ನಮಗೆ ನಗು. ಮೊಮ್ಮಗ ಆ ಉಪಕರಣ ನಿಮಗಿತ್ತು ಸಾರ್ಥಕಗೊಂಡ. ಏಕೆಂದರೆ ಅಷ್ಟು ಸಂತೋಷ ನೀವು ಅದರಿಂದ ಪಡೆದುಕೊಂಡಿದ್ದೀರಿ. ನೀವು ಎಷ್ಟು ಬೇಗ ಬದಲಾವಣೆ ಹೊಂದಿದ್ದೀರಿ ಎಂದು ನಾನು ಭಾವಿಸಿದ್ದೆ. ಹಿಂದೆ ನೀವು ಇಂಥ ಮೃತ ಸಂಗೀತ ಕೇಳಬೇಕೆಂದೆನಿಸುವುದಿಲ್ಲ, ಜೀವಂತ ಕಛೇರಿ ಕೇಳುವುದೇ ಸೊಗಸು ಎಂದು ವಾದಿಸುತ್ತಿದ್ದಿರಿ. (ನಿಮ್ಮ ಈ ವಾದವನ್ನು ನಾನು ಒಪ್ಪುತ್ತಿರಲಿಲ್ಲ.) ಯಾರಾದರೂ ಸಂಗೀತದ ಸಿಡಿ, ಕ್ಯಾಸೆಟ್ ಕೊಟ್ಟರೆ ಮೃತಸಂಗೀತ ಕೇಳಲು ನನಗೆ ಬಿಡುವು ಇಲ್ಲ ಎಂದು ಅದನ್ನು ಆಸಕ್ತರಿಗೆ ದಾನ ಮಾಡುತ್ತಿದ್ದಿರಿ. ಅಂಥ ನೀವು ೨೪ ಗಂಟೆ ರೇಡಿಯೋದಲ್ಲಿ ಬಂದದ್ದೇ ಬರುವ ಸಂಗೀತ ಕೇಳಿ ಆನಂದಗೊಳ್ಳುತ್ತಿದ್ದಿರಿ ಎಂಬುದು ವಿಸ್ಮಯವಲ್ಲವೆ? ಬದಲಾವಣೆ ಎನ್ನುವುದು ಜಗದ ನಿಯಮವಲ್ಲವೆ? ಅದರಿಂದ ಯಾರೂ ತಪ್ಪಿಸಿಕೊಳ್ಳಲಾಗುವುದಿಲ್ಲ.
ನಿಮ್ಮ ಸ್ನೇಹಿತರು ಕೆಲವರು ಬರುತ್ತಿರುತ್ತಾರೆ. ಅತ್ತೆಯನ್ನು ಮಾತಾಡಿಸಿ ಹೋಗುತ್ತಾರೆ. ನೀವು ಹುಶಾರಿಲ್ಲದೆ ಆಸ್ಪತ್ರೆ ಸೇರಿದ ಸಮಯದಲ್ಲೇ ಚಕ್ರವರ್ತಿ ಹೋದರು. ಮಾರನೇದಿನ ನೀವು ಹೋದಿರಿ. ಇತ್ತೀಚೆಗೆ ಎಚ್ಚೆಸ್ಕೆ, ಬಿಎಸ್. ಪಂಡಿತ, ರಾಮರತ್ನಂ ಎಲ್ಲ ನಿಮ್ಮ ಸ್ನೇಹಿತರು ನಿಮ್ಮನ್ನು ಅರಸುತ್ತ ಈ ಲೋಕ ತ್ಯಜಿಸಿದರು. ನೀವೀಗ ಆ ಸ್ನೇಹಿತರೊಡನೆ ಸಾಹಿತ್ಯ ಸಂಗೀತದ ವಿಚಾರ ಮಂಥನ ಮಾಡುತ್ತ ಸಂತೋಷವಾಗಿ ಇರಬಹುದಲ್ಲವೆ ಅಲ್ಲಿ? ಒಬ್ಬರಿಗೊಬ್ಬರು ಭೇಟಿ ಆಗಿದ್ದಿರಿ ತಾನೆ? ಇಲ್ಲಿಗೆ ಈ ಪತ್ರ ಕೊನೆಗಾಣಿಸುತ್ತೇನೆ. ಬಾಕಿ ವಿಷಯಕ್ಕೆ ಇನ್ನೊಮ್ಮೆ ಪತ್ರಿಸುತ್ತೇನೆ
ಇತಿ ನಿಮ್ಮ ಸೊಸೆ
ನೆನಪಿನ ಬುತ್ತಿ ಬಿಚ್ಚಿಟ್ಟ ಶ್ರೀಮತಿ ಮಾಲಾರಿಗೆ ಧನ್ಯವಾದಗಳು.ನಮಸ್ಕಾರ ಜಿ.ಟಿ. ನಾರಾಯಣ ರಾವ್’ ಎಂಬ ಕಂಚಿನ ಕಂಠ ನಿಜಕ್ಕೂ ನಮ್ಮನ್ನು ಮಂತ್ರಮುಗ್ಧಗೊಳಿಸುತ್ತಿತ್ತು.ನಮ್ಮ ಕಛೇರಿಗೆ ಒಮ್ಮೆ ಜಿಟಿಎನ್ ರನ್ನು ಕರೆದುಕೊಂಡು ಹೋಗಿದ್ದೆ.ಅಂದು ಅವರು ಸುಬ್ರಹ್ಮಣಂ ಚಂದ್ರಶೇಖರ್ ರನ್ನು ಭೇಟಿ ಮಾಡಿದ ಸಂಗತಿ ತಿಳಿಸುತ್ತಾ ನಕ್ಷತ್ರಲೋಕದ ಪರಿಚಯವನ್ನೂ ಮಾಡಿಕೊಟ್ಟಿದ್ದರು.ಆಗ ಮೈಕಿನಲ್ಲಿ ಅವರ ಧ್ವನಿ ಕಂಚಿನ ಕಂಠದಂತೆ ಕೇಳಿಬರುವಂತೆ ಅಡ್ಜಸ್ಟ್ ಮಾಡಿದ್ದೆ.ಎರಡು ಗಂಟೆಗಳ ಕಾರ್ಯಕ್ರಮಕ್ಕೆಂದು ಬಂದವರು ನಮ್ಮೊಡನೆ ನಾಲ್ಕೈದು ತಾಸು ಕಳೆದಿದ್ದರು.
-ಅಶೋಕ ಉಚ್ಚಂಗಿ
ಅಶೋಕ ಉಚ್ಚಂಗಿಯವರಿಗೆ ವಂದನೆಗಳು.
ನೆನಪಿನ ಲಹರಿಯಲ್ಲಿ ಹರಿದು ಬಂದ ಭಾವನೆಗಳಿವು. ಅವನ್ನು ಓದಿ ಪತ್ರ ಬರೆದಿದ್ದಕ್ಕೆ ಧನ್ಯವಾದಗಳು.
ಮಾಲಾ
ಮಾಲಾಲಹರಿಯ ಕೊನೆಯಲ್ಲಿ ಉತ್ತರದ ನಿರೀಕ್ಷೆಯೊಂದು ಸೇರಿದ್ದರೆ ಶೇಕಡಾ ನೂರು ಸಮರ್ಪಕವಾಗುತ್ತಿತ್ತು! ಮತ್ತೆ ಮಂಗಳೂರಿನಲ್ಲಿ ಸಾಂಪ್ರದಾಯಿಕ ಸಂಕ್ರಮಣ ಸಮೀಪಿಸುತ್ತಿದ್ದಂತೆ ಗೆಳೆಯ ಶ್ರೀನಿವಾಸ ಕಾರ್ಕಳ `ನೆನಪಾಗುತ್ತಿದ್ದಾರೆ ಜಿ.ಟಿ.ಎನ್’ ಎಂದು ಉದಯವಾಣಿಯಲ್ಲಿ ಬರೆದ ಲೇಖನದ ಕುರಿತು ಅವಶ್ಯ ಮುಂದಿನಸಲವಾದರೂ ಮಾವನಿಗೆ ಮಾಲಾ ತಿಳಿಸಬೇಕು.
ಅಶೋಕವರ್ಧನ
ಹೌದು. ಉತ್ತರ ಬರುವಂತಿದ್ದರೆ ಎಂಬ ಊಹೆಯೇ ರೋಮಾಂಚನ. ಇದು ಸುಮಾರು ೨ ತಿಂಗಳ ಹಿಂದೆ ಬರೆದ ಪತ್ರ. ಆಗ ಶ್ರೀನಿವಾಸ ಕಾರ್ಕಳ ಅವರ ಲೇಖನ ಬಂದಿರಲಿಲ್ಲ.
ಮಾಲಾ
ಮಾತನಾಡುತ್ತಾ ತೊದಲಿದಾಗ, ಕೆಟ್ಟ ಇಂಗ್ಲೀಷಿನಲ್ಲಿ ಬರೆದಾಗ
ಲೆಕ್ಕದಲ್ಲಿ ತಪ್ಪಿದಾಗ, ನಡೆಯುತ್ತಾ ಎಡವಿದಾಗ
ಮನೆಗೆ ಬಂದ ದ ಹಿಂದೂ ಓದದಾಗ, ಫೋನ್ ಎತ್ತಿ ಹಲೋ ಎಂದಾಗ
ಆಕಾಶ ನೋಡಿ ನಿಂತಾಗ, ಯಾರೋ ಬಂದು ಕೇಳಿದಾಗ
ಹೀಗೇ ನೆನಪಾಗುತ್ತಾರೆ ಚಿಕ್ಕಮ್ಮಾ ಈ ಅಜ್ಜ…
ನನಗೇ ಗೊತ್ತಿಲ್ಲದೇ ನನ್ನೊಳಗೇ ಇಷ್ಟೊಂದು ಇದ್ದರಾ ಅಜ್ಜ ಅಂತ ಅಚ್ಚರಿಯಾಗುತ್ತೆ
ಮತ್ತೆ ನೆನಪಾಗುತ್ತೆ ಅಜ್ಜ ನನ್ನೊಳಗಿಲ್ಲ ನಾನೇ ಅಜ್ಜನೊಂದು ಭಾಗ ಅಂತ…
ನಿಮ್ಮ ಕಾಗದ ನಮ್ಮೆಲ್ಲರ ಭಾವನೆಗಳಲ್ಲಿ ತೇಲಿ ಅಜ್ಜನ ಬಳಿಗೆ ಸಾಗಲಿ ಚಿಕ್ಕಮ್ಮ…
ಸಿಂಹ
ಹೌದು. ಹೆಜ್ಜೆ ಹೆಜ್ಜೆಗೆ ಅವರ ನೆನಪು ಚೇತೋಹಾರಿ. ನಿನ್ನನ್ನು ಹಾಗೆಯೇ ಬೆಳೆಸಲಿ. ನೀನು ಅಂತೆಯೇ ಜೀವನದಲ್ಲಿ ಬೆಳಗು. ಎಂದು ನಮ್ಮ ಹಾರೈಕೆ.
ಚಿಕ್ಕಮ್ಮ
ಜಿ.ಟಿ. ಯವರ ಪುಸ್ತಕಗಳನ್ನು ಅತ್ರಿ ಬುಕ್ ಶಾಪಿನಿಂದಲೇ ಕೊಂಡು ಓದಿ ಬೆಳೆದ ಮಕ್ಕಳು ನಾವು.. ಸೊಸೆಯಾಗಿ ನೀವು ಅವರನ್ನು ಬಣ್ಣಿಸಿದ ಪರಿ ಅನನ್ಯ.. ಕೆಲವು ಹಿರಿಯರು ಹೀಗೆ.. ಹೆಜ್ಜೆ ಹೆಜ್ಜೆಗೂ ನೆನಪಾಗುತ್ತಾರೆ ಅಥ್ವಾ ಮರೆತು ಹೋಗುವುದೇ ಇಲ್ಲ ಎನ್ನಲಾ ?
– ಶಮ, ನಂದಿಬೆಟ್ಟ
ಮಾಲಾರಿಗೆ ನಮಸ್ಕಾರ,
ನಿಮ್ಮ ಮಾವನ ಕುರಿತ ಬರೆದ ಪತ್ರ ಓದಿದೆ. ವಿಷಾದವನ್ನು ಲಲಿತ ಶೈಲಿಯಲ್ಲೇ ಹೇಳಿಕೊಂಡಿದಿರಿ. ನಾನು ಜಿಟಿಎನ್ ರ ಬಗ್ಗೆ ಬೆಂಗಳೂರಿನಲ್ಲಿದ್ದಾಗ ಕೇಳಿದ್ದೆ. ಮೈಸೂರಿಗೆ ಇತ್ತೀಚೆಗೆ ಬಂದ ಮೇಲೆ ಒಂದೆರಡು ಬಾರಿ ಕಾರ್ಯಕ್ರಮದಲ್ಲಿ ನೋಡಿದ್ದೆ. ಆ ಇಳಿ ವಯಸ್ಸಿನಲ್ಲೂ ಹುದುಗಿಸಿಕೊಂಡಿದ್ದ ಉತ್ಸಾಹ ನನ್ನನ್ನು ಮೂಕವಾಗಿಸುತ್ತಿತ್ತು. ಒಳ್ಳೆಯ ಲೇಖನ.
ನಾವಡ
ರುಕ್ಮಿಣಿ ಅತ್ತೆ,
ನಾನು ಅಜ್ಜ ನನ್ನು ಕ೦ಡಿಲ್ಲ. ಮಾವ-ಅತ್ತೆ , ಅಭಯ ರ ಬಾಯಲ್ಲಿ ಕೇಳುತ್ತೇನೆ ಮತ್ತು ಪ್ರತಿಕ್ರಿಯಿಸಲು ತೋಚದಾಗುತ್ತೇನೆ. ಅವರ ಬದುಕಿನ ಸುತ್ತ ಇದ್ದ ನಿಮ್ಮೆಲ್ಲರಿಗೆ ಅಭಯ ನನಗೆ ಹೇಳುವುದನ್ನು ಹೇಳಬೇಕೆನಿಸುತ್ತಿದೆ, ನಾನೂ ಅವರನ್ನು ನೋಡಬೇಕಿತ್ತು.
ಮುಂದೆ ಸಂದವರ ಜೊತೆಗೆ ಇಷ್ಟು ನಾಜೂಕಾಗಿ ಅಕ್ಕರೆಯಿಂದ ಪತ್ರ ಬರೆಯುವ ನಿಮ್ಮ ಪ್ರೀತಿಗೆ, ಅಭಿಮಾನಕ್ಕೆ, ಗೌರವಕ್ಕೆ ನಮಸ್ಕಾರಗಳು.
ಸುಪ್ತದೀಪ್ತಿ
January 9, 2009
makes a touching reading, and it’s so unusual.
ananda
ananda
January 9, 2009
ಜಿ. ಟಿ. ನಾರಾಯಣರಾಯರನ್ನು ಕುರಿತ ನೆನಪಿನ ಸುರಳಿಯ ನಳಿಕೆ ತೆರದದ್ದಕ್ಕೆ ಮಾಲಾರವರಿಗೆ ಧನ್ಯವಾದಗಳು.
ಜೈಕುಮಾರ್
January 9, 2009
madam,
bahala aaptha baraha. heege bareyade iddare GTN bejara madkolthidreno antha annisthide. suuuperb
-vikas negiloni
kallakulla
January 9, 2009
ಈಗ ತಾನೆ ನವಕರ್ನಾಟಕದಿಂದ ಬಿ ಎಸ್ ಮಯೂರ ಅವರ ಸ್ಟೀಫನ್ ಹಾಕಿಂಗ್ ಪುಸ್ತಕ ತಂದು ತೆರೆದು ನೋಡುತ್ತಿದ್ದೆ. ಅವರು ಅದನ್ನು ಜಿ ಟಿ ನಾರಾಯಣರಾಯರಿಗೆ ಅಪಿFಸಿದ್ದಾರೆ. ಈಗ ನಿಮ್ಮ ಲೇಖನ ಓದಿದೆ. ಈಗಾಗಲೇ ನಾರಾಯಣರಾಯರೂ ಓದಿರುತ್ತಾರೆ. ಅವರ ನೆನಪು, ನಿಮ್ಮ ಬರವಣಿಗೆ ಸಂತೋಷ ನೀಡಿದವು.
ಪಂಡಿತಾರಾಧ್ಯ
January 9, 2009
ಮೊದಲಿಗೆ ದನ್ಯವಾದಗಳು ಮಾಲ ಮೇಡಂ;
ಜಿ ಟಿ ಎನ್ ತಾತನ ನೆನಪು ಎಂದಿಗೂ ಮಾಸದು,ಇರುವೆ ರೀತಿ ಚಟುವಟಿಕೆಯಿಂದ ಇರಬೇಕು ನೀವು ಯುವಕರು.ಓದಬೇಕು ಲೇಖನಗಳ ಬರೀಬೇಕು ಎಂದು ಅವರು ನಿದುತಿದ್ದ ಪ್ರೋತ್ಸಾಹಕ್ಕೆ ನಾನು ಋಣಿ.ಅವರು ನೀಡಿದ ಪುಸ್ತಕಗಳು ಇಂದಿಗೂ ಆ ಕ್ಷಣಗಳನು ಬಿಂಬಿಸುತ್ತವೆ.ಅಂಥಹ ಚೇತನದ ಬಗ್ಗೆ ಸವಿವರವಾಗಿ ಬರೆದ ನಿಮಗೆ ನನ್ನ ನಮನ
ಈಶಕುಮಾರ್
eshakumar h n
January 9, 2009
ಮಾವ ಹೇಗಿದ್ದೀರಾ…? ಎಂದು ತುಂಬು ಕಕ್ಕುಲಾತಿಯಿಂದ ಕೇಳುತ್ತಿರುವವರು ಮಾಲಾ.
ಒಂದು ಹೆಣ್ಣು ಜೀವ ತಾನು ಬಾಳದೀಪದಂತೆ ಕಂಡ ಹಿರಿಯರ ಕೊರತೆಯನ್ನು ಅನುಭವಿಸುತ್ತಿರುವ ಪರಿ ಇಲ್ಲಿದೆ-
ಜಿ.ಎನ್. ಮೋಹನ್
ನಿಜ ಮಾವ ಮತ್ತೆ ಮತ್ತೆ ನೆನಪಾಗುತ್ತಾರೆ – ಹೊಸ ಪುಸ್ತಕ ನೋಡಿದಾಗ, ಲೇಖನ ಬರೆದಾಗ, ಸಂಜೆ ಮುಸುಕಿ ನಕ್ಷತ್ರ ಮಿನುಗಲು ಹೊರಟ ಆಕಾಶ ಕಂಡಾಗ, ಹೀಗೆ ಸುಮ್ಮನೆ ಕುಳಿತಾಗ, ಎಷ್ಟೋ ಬಾರಿ ಹಟಾತ್ತನೆ ಅಚಾನಕ್ಕಾಗಿ! ಐನ್ ಸ್ಟೈನ್ ಬಗ್ಗೆ ಹೊಸದೊಂದು ಪುಸ್ತಕವನ್ನು ತಂದಿದ್ದೆ. ಬಹು ಚೆನ್ನಾಗಿದೆ. ಓದುತ್ತ ಹೋದಾಗಲೆಲ್ಲ ಮತ್ತೆ ಮತ್ತೆ ನೆನಪಾದರು; ಮನ ಭಾರವಾಗುತ್ತಿತ್ತು. ಉದಯವಾಣಿಯಲ್ಲಿ ಲೇಖನಗಳು ಪ್ರಕಟವಾದಾಗಲೆಲ್ಲ ತೀವ್ರವಾಗಿ ನೆನಪಾಗುತ್ತಿದ್ದರು. ತುಸು ಮರೆತುಬಿಡು ಮಾರಾಯಾ – ಎನ್ನುವ ಕಾರಣಕ್ಕೋ ಎಂಬಂತೆ ಉದಯವಾಣಿಯ ಸರಣಿ ಹಟಾತ್ತನೆ ನಿಂತಿದೆ. ಅವರಿಗೆ ಅದನ್ನು ತಿಳಿಸಬೇಕಿತ್ತಲ್ಲಾ. ಆದರೆ ಒಂದು ಸಮಾಧಾನ. ಅವರಿಗೆ ಪ್ರಿಯವಾದ ಐನ್ ಸ್ಟೈನ್ ಬಗ್ಗೆ ಒಂದಷ್ಟಾದರೂ ಹೇಳುವ ಅವಕಾಶ ದೊರೆತದ್ದಕ್ಕೆ. ಅವರು ಇದ್ದಾಗ ಸೋಮಾರಿಯಾದೆನೆಂಬ ಅಳುಕಾಗುತ್ತಿತ್ತು. ಅದೆಲ್ಲ ನಿನಗೆ ಚೆನ್ನಾಗಿ ಗೊತ್ತಿದೆ!
ಮೊನ್ನೆ ಮೊನ್ನೆ ಉಪನಯದ ಸಂದರ್ಭದಲ್ಲಿ ಅವರಿರುತ್ತಿದ್ದರೆ ಹೇಗಿರುತ್ತಿತ್ತು ಎಂದು ನಾವೆಲ್ಲರೂ ಆಗಾಗ ಮಾತನಾಡಿಕೊಂಡೆವು. ಅದರ ಗಮ್ಮತ್ತು ಬೇರೆಯೇ ಇರುತ್ತಿತ್ತು. ಅಲ್ಲಿ ಚಿಕ್ಕವರ ಸಂಗೀತ ಕಛೇರಿ ಕಳೆಗಟ್ಟುತ್ತಿತ್ತು. ಅವರದ್ದೇ ಭಾಷಣ ಇರುತ್ತಿತ್ತು. ಮಕ್ಕಳೊಂದಿಗೆ ಮಕ್ಕಳಾಗುತ್ತಿದ್ದರು – ಪ್ರಶ್ನೆಯ ಸರಮಾಲೆ ಹಾಕಿ ಒಂದಷ್ಟು ಪೀಡಿಸಿ ನಗುತ್ತಿದ್ದರು. ಗಂಟೆ ಹನ್ನೆರಡಾಗುತ್ತಲೇ “ಎಲ್ಲಿ?” ಎಂಬಂತೆ ನೋಡಿ ನಮ್ಮನ್ನು ಎಚ್ಚರಿಸುತ್ತಿದ್ದರು. ಊಟದ ನಂತರ ಭಟ್ಟರಿಗೆ “ನಳಪಾಕ ನಿಮ್ಮದು, ಭೇಷ್” ಎನ್ನುತ್ತಿದ್ದರು. ಇರಲಿ ನಿನ್ನ ಪತ್ರ ಇಷ್ಟೆಲ್ಲ ಹೇಳುವುದಕ್ಕೆ ಪ್ರೇರಣೆ ನೀಡಿತು.
ರಾಧಾಕೃಷ್ಣ
ನಿಮ್ಮ ಪತ್ರ ಓದುತ್ತಿದ್ದೆ. ಅಲ್ಲಿದ್ದ ಫೊಟೋ ನೋಡಿ ನನ್ನವರು ಇದು
ಜಿ.ಟಿ ನಾರಾಯಣ ಅವರಲ್ಲ? ಅವರು ನನ್ನ ಮೇಷ್ಟ್ರಾಗಿದ್ದರು ಎ೦ದು ಖುಷಿ ಪಟ್ಟರು.
ಬರಹ ಚೆನ್ನಾಗಿದೆ. ಮನಕ್ಕೆ ಮುಟ್ಟುತ್ತದೆ. ಅಭಿನ೦ದನೆಗಳು.
ಕೆ. ಉಷಾ ಪಿ. ರೈ
January 14, 2009
ಇನ್ನು ಉತ್ತಮ ಲೆಖನ ಬರೆಯಿರಿ… ಪ್ರೇಮ್.
ಮಾಲಾ, ಮಾವನವರಿಗೆ ನೀನು ಬರೆದ ಪತ್ರ ಓದಿದೆ. ಮನಸ್ಸಿಗೆ ತಟ್ಟುವ೦ತೆ ಬರೆದಿದ್ದಿ. ಕೆಲವರು ಅಳಿದಮೇಲೆಯೂ ಬಹಳ ನೆನಪಾಗುತ್ತಾರೆ. ಅವರಿ೦ದ ನಾವು ಕಲಿಯುವುದು ಬಹಳಷ್ಟು ಇದ್ದವು.ಬರೆಯುವಾಗಲೆಲ್ಲ ಎಲ್ಲೋ ಒ೦ದೆಡೆ ಅವರು ಬರವಣಿಗೆಯನ್ನು ಗಮನಿಸುತ್ತಾರೆ. ತಪ್ಪಿದರೆ ತಿದ್ದುತ್ತಾರೆ, ನಾನು ಇನ್ನೂ ಚೆನ್ನಾಗಿಬರೆಯಬೇಕೆ೦ಬ ಉತ್ಸಾಹವಿರುತ್ತಿತ್ತು. ಆದರೆ ಈಗ? ಯಾವ ಹೊಸಕಾದ೦ಬರಿ ರೆಡಿ? ಕೇಳುತ್ತಿದ್ದರು ಎದುರಿಗೆ ಕ೦ಡಾಕ್ಷಣ.ಪ್ರಕಟವಾಗಿ ಬ೦ದಿತೇ?ಎಲ್ಲಿ ನೋಡೋಣ? ಕಾದ೦ಬರಿ ನೋಡುವ ಕಾತರ ಅವರಿಗೆ!ಆದರೆ ಹೇಳಲು ಎ೦ತ ಸ೦ಕೋಚ ನಮಗೆ? ಅವರೆದುರು ಬಾಯ್ದೆರೆಯಲು ಹೆದರಿಕೆ. ಆದರೆ ಈಗ?ಕೇಳುವವರು ಯಾರು ನಮ್ಮನ್ನು ಅಷ್ಟು ವಿಶ್ವಾಸದಿ೦ದ? ಹೊಸ ಬರವಣಿಗೆಯ ಉತ್ಸಾಹ ತರುವದೆಲ್ಲಿ೦ದ ? ಕಳೆದುಕೊಳ್ಳುತ್ತಿದ್ದೇವೆ ಬಹಳಷ್ಟು.
ಎ.ಪಿ.ಮಾಲತಿ
Dear Madam,
Firstly, I like to congratulate you on the beautiful letter to Prof. GTNR regarding the happenings back home after his departure.
I remember the day when Prof.GTNR had addressed us with his favourite subject “Black Holes” at Vivekananda College, Puttur when I was studying PUC during 1995. Though the content was a bit high to our imagination that time, he used to explain politely in pure Kannada. Pronouncing the scientific terms in its equivalent Kannada is not a joke and he was at it very effortlessly. He also had given a detailed introduction of Dr.Subrahmanyan Chandrashekhar and his works and also briefed us about the book he had authored about Dr.SC in Kannada. His talk had impressed me about Dr.SC and the very next day I had purchased the book which I preserve it now also.
I remember this incident about his cautiousness on the discipline he expected. We had gathered in the auditorium and allmost all the students studying in Science discipline were the invited gathering. Some students in the back seats were murmering as usual which was frequently disturbing him. He had gave a final warning saying that either the students at the back benches must speak or let him speak. After this, there was a very pin drop silence and the lecture continued.
This is the only one programme that I could listen to Prof.GTNR directly and will ever be in my memory lane.
Regards,
Radheshyam B
ಲೇಖನ ಓದಿ ಪತ್ರ ಬರೆದವರಿಗೆಲ್ಲ ವಂದನೆಗಳು.
ಮಾಲಾ
What an usual lazy fellow I have proved that I am reading Sow Rukmini’s endearing and intimate letter to her Maava !!
I vouchsafe myself that she would never– why? she did never express herself to Sri GTN as in this letter. But Sri GTN was always admiring her as a ” doer ” and never as a ” sayer ” !!
I am also certain that he might not have said all that he admired in her to her face as he was telling me !! That way, both were mutual admirers of their behaviour and attitudes.
Such a family to which Sow Rukmini has so admrably adjusted must make everyone feel proud of this cultural bond that permeates even now.
S R Bhatta /1 40 P M / 12 April 2009
P S Dear Sri Ashoka / Sow Rukmini,
As I am torn between “baraha” and ‘nudi” my kannada patralekhana is in its embryo stage still !!
SRB
ರುಕ್ಮಿಣಿಮಾಲಾ ಅವರಿಗೆ ನಮಸ್ಕಾರ
ಒಂದು ಪತ್ರ ಎಂದು ನೀವು ಹೇಳಿದ್ದರೂ ಜಿ.ಟಿ.ಎನ್ ಬದುಕಿದ ಸಂಸ್ಕೃತಿಯನ್ನು ಸೆರೆಹಿಡಿಯುವ ಆತ್ಮೀಯ ಧಾಟಿ ಅದಕ್ಕೊಂದು ಪ್ರಬಂಧದ ಸುಂದರ ಬಂಧವನ್ನು ಕಟ್ಟಿಕೊಟ್ಟಿದೆ. ಡಾ.ಲೀಲಾಅಪ್ಪಾಜಿ
ಸಹೋದರಿಯವರೆ,ನಮಸ್ಕಾರಗಳು.
ಜಿಟಿ.ನಾರಾಯಣರಾವ್ ರವರ ಪುಸ್ತಕ ವೈಜ್ಞಾನಿಕ ಮನೋಭಾವ ೧೯೯೨ ರಲ್ಲಿ ಓದಿದ ನಂತರ ಅನೇಕಸಲ ಅವರೊಂದಿಗೆ ಪತ್ರ ಮೈತ್ರಿಯಲ್ಲದ್ದೆ.೧೯೯೮ ರಲ್ಲಿ ಅವರನ್ನು ಮೈಸೂರಿನ ನಿವಾಸದಲ್ಲಿ ಕಾಣುವ ಅವಕಾಶ ದೊರೆತಿತ್ತು.ನಿಮ್ಮಜೀವನದ “ಸಂತಸದ ಕ್ಷಣ ಯಾವುದೆಂದು” ಕೇಳಿದೆ.”ಈಗ ನಿಮ್ಮೊಂದಿಗಿರುವದೆ
ಸಂತಸದ ಕ್ಷಣ”ಎಂಬ ಅವರ ಹೃದಯಸ್ಪರ್ಶಿ ನುಡಿ ಮಂತ್ರಮುಗ್ದನನ್ನಾಗಿಸಿತು.ಅವರ ವೈಚಾರಿಕ ಚಿಂತನೆ ನಮಗೆಲ್ಲಾ ದಾರಿದೀಪ
ನಿಮ್ಮ ಈ ಪತ್ರಕ್ಕೆ ಧನ್ಯವಾದ