Feeds:
ಲೇಖನಗಳು
ಟಿಪ್ಪಣಿಗಳು

ಲಕ್ಷ್ಮಣ ಝೂಲಾ, ರಾಮಝೂಲಾ
ಮಳೆ‌ಅಂಗಿ ಹಾಕಿಕೊಳ್ಳುತ್ತ ಮಳೆಯಲ್ಲೆ ನಡೆದೆವು. ಲಕ್ಷ್ಮಣಝೂಲಾ ಸೇತುವೆಯಲ್ಲಿ ದಾಟಿ ಮುಂದೆ ಹೋದೆವು. ಗೀತಭವನದಲ್ಲಿ ಕಾಲಾಕಂಬಳಿವಾಲಾ ಮಂದಿರ ನೋಡಿದೆವು. ಕಾಲಾಕಂಬಳಿವಾಲಾ ಅವರು ಕಪ್ಪುಕಂಬಳಿಯನ್ನು ದಾನ ಮಾಡುತ್ತಿದ್ದರಂತೆ. ಲಕ್ಷ್ಮೀನಾರಾಯಣ ದೇವಾಲಯವಿದೆ ಅಲ್ಲಿ. ಮುಂದೆ ರಾಮಝೂಲಾ ಸೇತುವೆ ದಾಟಿ ಮುಂದೆ ಸಾಗಿದಾಗ ಧಾರಾಕಾರ ಮಳೆ. ಸುಮಾರು ಎರಡುಕಿಮೀ. ದೂರ ಮಳೆಯಲ್ಲಿ ನಡೆದೆವು. ಮಳೆಯಲ್ಲಿ ನಡೆಯುವುದೇ ಸೊಗಸು. ಬಾಲ್ಯಕಾಲದ ಮಜಾ ಅನುಭವಿಸಿದೆವು. ಮುಂದೆ ಶತ್ರುಘ್ನನ ದೇವಾಲಯ ನೋಡಿದೆವು. ಆಗಲೇ ರಾತ್ರಿಯಾಗಿತ್ತು. ಎರಡು ಆಟೊದಲ್ಲಿ ವಾಪಾಸು ಹರಿದ್ವಾರವನ್ನು ರಾತ್ರಿ ೮.೪೫ಕ್ಕೆ ತಲಪಿದೆವು. ಋಷಿಕೇಶದಲ್ಲಿ ನೋಡುವಂಥ ಸ್ಥಳ ಇನ್ನೂ ಇದೆ. ಸಮಯಾವಕಾಶವಾಗಲಿಲ್ಲ.  ಛೋಟಾವಾಲಾ ಹೊಟೇಲಿನಲ್ಲಿ ಒಬ್ಬ ಮನುಷ್ಯ ಗೊಂಬೆಯಂತೆ ಎದುರು ಕುಳಿತದ್ದು ಕಂಡಿತು. ಪಾಪ ಎಷ್ಟು ಕಷ್ಟದ ಕೆಲಸವದು.

img_4333img_4350 img_4348

img_4366

img_4359

ಮಧ್ಯಾಹ್ನ ಮಾಡಿದ ಅನ್ನ ಸಾರು ಇತ್ತು. ಅದನ್ನು ಊಟ ಮಾಡಿ ಮಲಗಿದೆವು.
ಯೋಗ ಸಾಧನೆ
ಯೋಗಾಭ್ಯಾಸ ಮಾಡುವವರು ಎಷ್ಟು ಮಂದಿ ಇದ್ದೀರಿ ಎಂದು ವಿಠಲರಾಜು ಅವರು ಹಿಂದಿನ ದಿನವೇ ಕೇಳಿ, ನಾಳೆ ಬೆಳಗ್ಗೆ ೫ ಗಂಟೆಗೆ ಯೋಗಾಭ್ಯಾಸ ಮಾಡೋಣ ಎಂದು ಹೇಳಿದ್ದರು. ಅವರ ಮಾರ್ಗದರ್ಶನದಲ್ಲಿ ಬೆಳಗ್ಗೆ (೧೩-೯-೨೦೧೬) ೫ರಿಂದ ಆರು ಗಂಟೆವರೆಗೆ ನಾವು ಕೆಲವಾರು ಮಂದಿ ಇಕ್ಕಟ್ಟಿನ ಸ್ಥಳದಲ್ಲಿ ಕೈಕಾಲು ಆಡಿಸಿದೆವು.
ಚಾರ್ ಧಾಮ ಯಾತ್ರೆ ಶುರು ಕರೋ
ಬಿಸಿಬಿಸಿ ರುಚಿಯಾದ ಉಪ್ಪಿಟ್ಟು ತಿಂದು (ಶಶಿಕಲಾ, ಸರಸ್ವತೀ ಉಪ್ಪಿಟ್ಟು ತಯಾರಿಸಿದ್ದರು. (ಸುನಂದ, ಶೋಭಾ ಈರುಳ್ಳಿ, ತರಕಾರಿ ಸಣ್ಣಗೆ ಹೆಚ್ಚಿಕೊಟ್ಟಿದ್ದರು) ತಯಾರಾದೆವು. ೩೦ ಆಸನಗಳಿರುವ ಬಸ್ಸನ್ನು ಹತ್ತು ದಿನದ ಪ್ರಯಾಣಕ್ಕೆ ನಿಗದಿಗೊಳಿಸಿದ್ದರು. ರೂ.೫೨೫೦೦/- . ನಾವು ಹದಿನೇಳು ಮಂದಿಗೆ ಇಷ್ಟು ದೊಡ್ಡ ಬಸ್ಸು ಏಕೆ? ಎಂಬ ಪ್ರಶ್ನೆ ನಿಮ್ಮ ಮನದಲ್ಲೇಳಬಹುದು! ನಮ್ಮ ಲಗೇಜು ಇಡಲು ಅನುಕೂಲವಾಗಲೆಂದು ದೊಡ್ಡ ಬಸ್ ಮಾಡಿದ್ದರು. ನಾವೆಲ್ಲ ನಮ್ಮ ಲಗೇಜುಗಳೊಂದಿಗೆ ಬಸ್ ಹತ್ತಿದೆವು. ಬಸ್ ಋಷಿಕೇಶ ದಾರಿಯಲ್ಲಿ ಮುಂದೆ ಸಾಗಿತು.

20160915_070126

ಮಸ್ಸೂರಿ ಯೂಥ್ ಹಾಸ್ಟೆಲ್
ದಾರಿಯಲ್ಲಿ ಹೋಗುತ್ತ ಮಸ್ಸೂರಿಯಲ್ಲಿ ಯೂಥ್ ಹಾಸ್ಟೆಲಿಗೆ ಭೇಟಿ ಕೊಡೋಣ ಎಂದು ಗೋಪಕ್ಕ ಮೊದಲೇ ಹೇಳಿದ್ದರು. ಅಲ್ಲಿ ಚಹಾ ಕುಡಿಯೋಣ ಎಂದೂ ಹೇಳಿದ್ದರು. ಅದಕ್ಕೂ ಮೊದಲು ಒಂದು ಚಹಾ ದುಖಾನೆಯಲ್ಲಿ ನಿಲ್ಲಿಸಿ ನಾವು ಕೆಲವರು ಕಾಫಿ ಚಹಾ ಬ್ರೆಡ್ ಪಕೋಡ ಸವಿದು ಪ್ರಯಾಣದ ಮಜ ಅನುಭವಿಸಿದೆವು. ಯೂಥ್ ಹಾಸ್ಟೆಲ್ ಕಟ್ಟಡ ಭವ್ಯವಾಗಿ ಇದೆ. ಹಿನ್ನೆಲೆಯಲ್ಲಿ ಮಸ್ಸೂರಿಬೆಟ್ಟ ಅದ್ಭುತವಾಗಿ ಕಾಣುತ್ತದೆ. ಅಲ್ಲಿ ಚಹಾ ಕೊಡುವುದು ಬಿಟ್ಟು, ಪಾಯಿಖಾನೆಗೆ ಹೋಗಲೂ ದುಡ್ಡು ವಸೂಲಿ ಮಾಡಿದರು. ಹಾಗಾಗಿ ಗೋಪಕ್ಕನಿಗೆ ತುಸು ಬೇಸರವೆನಿಸಿತು. ಮುಂದಿನ ಬಾರಿ ಬಂದಾಗ ಇವರಿಗೆಲ್ಲ ಕ್ಲಾಸ್ ತೆಗೆದುಕೊಳ್ಳಬೇಕು ಎಂದು ಹೇಳಿಕೊಂಡರು!
ಮಸ್ಸೂರಿ ಲೈಬ್ರೆರಿ
೧೮೪೩ರಲ್ಲಿ ಸ್ಥಾಪಿಸಲಾದ ಲೈಬ್ರೆರಿಯನ್ನು ಹೊರಗಿನಿಂದಲೇ ನೋಡಿದೆವು. ಅಲ್ಲಿ ಪಕ್ಕದಲ್ಲೇ ಮಸ್ಸೂರಿ ವ್ಯೂ ಪಾಯಿಂಟ್ ಮುಖಮಂಟಪದಲ್ಲಿ ಗಾಂಧೀಜಿ ಪ್ರತಿಮೆ ಇದೆ. ಅಲ್ಲಿ ಭಾವಚಿತ್ರ ತೆಗೆಸಿಕೊಂಡು ಮುಂದುವರಿದೆವು.

dscn0962

ಕೆಮ್ಟೀಫಾಲ್ಸ್
ಮಸ್ಸೂರಿಯಿಂದ ಹೊರಟು ಮುಂದೆ ಬರುವಾಗ ಪರ್ವತಗಳೆಡೆಯಿಂದ ಒಂದು ಜಲಪಾತ ಹರಿಯುವುದು ಕಾಣುತ್ತಿತ್ತು. ಅದೇ ಪ್ರಸಿದ್ಧ ಕೆಮ್ಟೀಫಾಲ್ಸ್. ಅದರ ಹೆಸರು ನೆನಪಿಟ್ಟುಕೊಳ್ಳಲು ಕೆಂಪು ಟೀ ಎಂದು ಬಾಯಿಪಾಟ ಮಾಡಿದೆ!
ಹೊಟ್ಟೆ ಹಸಿದಿತ್ತ, ಪೊಂಗಲ್ ಕಾಯುತ್ತಿತ್ತ!
ಅದಾಗಲೇ ಗಂಟೆ ಮಧ್ಯಾಹ್ನ ೨.೩೦ ಆಗಿತ್ತು. ಎಲ್ಲರ ಉದರ ಚುರ್ ಎನ್ನಲು ಸುರುವಾಗಿತ್ತು. ಮುಂದೆ ನೈನ್‌ಭಾಗ್ ಎಂಬಲ್ಲಿ ಬಸ್ ನಿಲ್ಲಿಸಿದೆವು. ಪೊಂಗಲ್, ಮೊಸರನ್ನ ಮಾಡಿ ಪಾತ್ರೆಯಲ್ಲಿ ತಂದಿದ್ದೆವು. ಅದನ್ನು ಹಂಚಿ ಊಟ ಮಾಡಿದೆವು.

img_4487

ಲಾಖಾಮಂಟಪ
ಊಟವಾಗಿ ೩.೧೦ಕ್ಕೆ ಹೊರಟು ಲಾಖಾಮಂಟಪ ಎಂಬ ಊರಿಗೆ ಬಂದೆವು. ಇಲ್ಲಿ ೨೦೦೭ರಲ್ಲಿ ಉತ್ಖನನ ಮಾಡಿದಾಗ ಹತ್ತಾರು ಶಿವಲಿಂಗಗಳು ದೊರೆತಿವೆಯಂತೆ. ಅದನ್ನು ಜೋಡಿಸಿ ಇಟ್ಟಿದ್ದಾರೆ. ಪುರಾತನ ದೇವಾಲಯವೂ ಇದೆ. ಅಲ್ಲಿ ವಿವಿಧ ದೇವರ ಹತ್ತಾರು ವಿಗ್ರಹಗಳು ಇವೆ. ಹೊರಗೆ ಒಂದು ದೊಡ್ಡ ಶಿವಲಿಂಗವಿದೆ. ಬನ್ನಿ ಅದಕ್ಕೆ ಅಭಿಷೇಕ ಮಾಡಿ ನಿಮ್ಮ ಪ್ರತಿಬಿಂಬ ಅದರಲ್ಲಿ ಕಾಣುತ್ತದೆ ನೋಡಿ ಎಂದು ಸ್ಥಳೀಯನೊಬ್ಬ ನಮಗೆ ಬಲವಂತ ಮಾಡಿದ. ನೋಡಿಯೇ ಬೀಡೋಣವೆಂದು ಎಲ್ಲರೂ ಅಭಿಷೇಕ ಮಾಡಿದೆವು. ಲಿಂಗದಲ್ಲಿ ನಮ್ಮ ನಮ್ಮ ಪ್ರತಿಬಿಂಬ ನೋಡಿ ಕೃತಾರ್ಥರಾದೆವು!
ಅಲ್ಲಿದ್ದ ಒಬ್ಬ ಬಾಲಕಿಗೆ ನಾಲಿಗೆ ತೋರಿಸು ಎಂದ ಒಬ್ಬ ಅಜ್ಜ. ಕಾಳಿ ಅವತಾರ ಅವಳದು ನೋಡಿ ಎಂದ. ಅವಳು ನಾಲಿಗೆ ಹೊರಚಾಚಿ ತೋರಿಸಿದಳು. ನಾಲಿಗೆಯಲ್ಲಿ ಇಷ್ಟಗಲದ ಮಚ್ಚೆ ಇತ್ತು.

20160913_174813

dscn0993

dscn0980

dscn1013

dscn1018

ಪ್ರಾಚೀನ ಪಾಂಡವ ಗುಹೆ

ಅಲ್ಲಿಂದ ಹೊರಟು ಮುಂದೆ ಬರುವಾಗ ಪ್ರಾಚೀನ ಪಾಂಡವ ಗುಹೆ ನೋಡಿದೆವು. ಒಳಗೆ ಶಿವಲಿಂಗವಿದೆ. ಪಾಂಡವರು ಹೋಗದ ಸ್ಥಳವಿಲ್ಲ ಎನ್ನುವುದು ಖಾತ್ರಿಯಾಯಿತು!

 

dscn1040

dscn1026

ಬಾರ್ಕೋಟ್
ಬಸ್ಸು ತೆರಳುವ ಮಾರ್ಗ ಬಲು ಕಿರಿದಾಗಿದೆ. ಕೆಲವೆಡೆ ಎರಡು ವಾಹನಗಳು ಒಟ್ಟಿಗೆ ಚಲಿಸಲು ಸಾಧ್ಯವಿಲ್ಲ. ವಾಹನ ಸಂಚಾರ ಬಲು ವಿರಳ. ಹೀಗೆ ಪ್ರವಾಸಿಗಳಿಂದ ತುಂಬಿದ ಬಸ್, ಕಾರು ಒಂದೊಂದು ಹೋಗುವುದು ಬರುವುದು ಕಾಣುತ್ತದಷ್ಟೆ. ಸರ್ವಿಸ್ ಬಸ್ ಬಹಳ ಕಡಿಮೆ. ಎಲ್ಲೋ ಒಂದೊಂದು ಕಂಡಿತಷ್ಟೆ. ದಾರಿಯುದ್ದಕ್ಕೂ ಅಲಕನಂದಾ ನದಿ ಹರಿಯುವುದು ಕಾಣುತ್ತೇವೆ. ಕೆಳಗೆ ನದಿ, ಪಕ್ಕದಲ್ಲಿ ಪರ್ವತ ಸಾಲು ಕಣ್ಣಿಗೆ ರುದ್ರರಮಣೀಯವಾಗಿ ಕಾಣುತ್ತದೆ.  ಜನವಸತಿ ಇರುವಲ್ಲಿ ಭತ್ತ ಬೆಳೆದದ್ದು ಕಾಣುತ್ತದೆ. ಇಳಿಜಾರಿನಲ್ಲಿ ಎಷ್ಟು ಚೆನ್ನಾಗಿ ಭತ್ತದ ಕೃಷಿ ಮಾಡಿದ್ದಾರೆ. ನೋಡುವಾಗ ಖುಷಿ ಆಗುತ್ತದೆ.  ಚಾಲನಾವೇಗ ಹೆಚ್ಚುಕಡಿಮೆ ೩೦ರಿಂದ ೪೦ಕಿಮೀ ಮಾತ್ರ. ಇಂಥ ರಸ್ತೆಯಲ್ಲಿ ರಾತ್ರಿ ಚಾಲನೆ ಅಪಾಯಕಾರಿ. ಹಾಗಾಗಿ ಮಂಗಾರಾಮ ಸಂಜೆ ೭ ಗಂಟೆಗೇ ಬಾರ್ಕೋಟ್ ಎಂಬ ಊರಿನಲ್ಲಿ ವಸತಿಗೃಹವಿರುವ ಕಡೆ ಬಸ್ ನಿಲ್ಲಿಸಿದರು. ನಿಗದಿಯಾದಂತೆ ನಾವು ಆ ದಿನ ಅಲ್ಲಿಂದ ೪೪ ಕಿಮೀ ದೂರವಿರುವ ಜಾನಕಿಛಟ್ಟಿ ಸೇರಬೇಕಿತ್ತು. ಹರಿದ್ವಾರದಿಂದ ಜಾನಕಿಛಟ್ಟಿ ಸುಮಾರು ೨೪೦ಕಿಮೀ.

img_4539 img_4526

 

dscn8705

dscn8493 dscn8463

ವಸತಿಗೃಹದಲ್ಲಿ ಒಂದು ಕೋಣೆಯಲ್ಲಿ ೪-೫ ಮಂದಿ ಮಲಗುವಂಥ ವ್ಯವಸ್ಥೆ ಇತ್ತು. ನಮ್ಮ ಲಗೇಜು ಇಳಿಸಿಕೊಂಡು ಸ್ನಾನಾದಿ ಮುಗಿಸಿದೆವು.
ಹಾವಿನಮರಿ ಪ್ರಹಸನ
ಕೋಣೆ ಎದುರುಗಡೆ ಒಂದು ಮೂಲೆಯಲ್ಲಿ ಹಾವಿನ ಮರಿ ಇರುವುದು ಕಾಣಿಸಿತು. ಮಂದ ಬೆಳಕು. ಸರಿಯಾಗಿ ಕಾಣುತ್ತಿರಲಿಲ್ಲ. ಅದಕ್ಕೆ ಟಾರ್ಚ್ ಬಿಟ್ಟೆವು. ಅಲ್ಲಾಡಲಿಲ್ಲ. ಮುಟ್ಟಲು ಹೆದರಿಕೆ ಆಯಿತು. ನೈನಾ ವಸತಿಗೃಹದ ಯಜಮಾನಿ ಕೌಸಲ್ಯಳಿಗೆ ಹೇಳಿದೆವು. ಧೀರೆ ಕೌಸಲ್ಯ ಬರೀ ಕೈಯಲ್ಲಿ ಹಾವಿನಮರಿಯನ್ನು ಹಿಡಿದು ತನ್ನ ಮೊಮ್ಮಗಳ ಕೈಗೆ ಕೊಟ್ಟಳು! ಅದನ್ನು ನಾವು ಪೆಚ್ಚುಮುಖದಿಂದ ನೋಡಿದೆವು! ನಿಜವಾದ ಹಾವಿನಮರಿ ಅದು ಎಂದು ನಾವು ಬೇಸ್ತುಬಿದ್ದಿದ್ದೆವು.

20160913_192142

ಭೋಜನಕಾಲೇ
ಶಶಿಕಲಾ, ಸರಸ್ವತಿ ಕೈಕಾಲು ಮುಖ ತೊಳೆದು, ಅಡುಗೆ ಮನೆಗೆ ಹೋಗಿ ಇರುವ ಪಾತ್ರೆಯಲ್ಲೇ ಚಕಚಕನೆ ಅಕ್ಕಿ ತೊಳೆದು ಪಾತ್ರೆಗೆ ಸುರುವಿ ಒಲೆಮೇಲೆ ಇಟ್ಟೇಬಿಟ್ಟರು. ಒಳ್ಳೆಮೆಣಸು ಸಾರು ತಯಾರಿಸಿದರು. ಒಂದು ಗಂಟೆಯೊಳಗೆ ಊಟಕ್ಕೆ ಬರುವಂತೆ ಬುಲಾವ್. ಸಾಲಾಗಿ ತಟ್ಟೆ ಹಿಡಿದೆವು. ಶಶಿಕಲಾ ಸರಸ್ವತಿ ಅವರ ಕೈ ಬಲು ದೊಡ್ಡದು. ಅನ್ನ ಹಾಕುತ್ತ, ಮತ್ತೆ ಮತ್ತೆ ಹಾಕಿಸಿಕೊಂಡು ಹೊಟ್ಟೆತುಂಬ ಊಟ ಮಾಡ್ರಪ್ಪ ಎಂದರು. ಅನ್ನ ಸಾರು ಚಪ್ಪರಿಸಿದೆವು.
ಜಾನಕಿಛಟ್ಟಿ
ಬೆಳಗ್ಗೆ (೧೪-೯-೧೬) ೪.೧೫ಕ್ಕೆ ಎದ್ದು ತಯಾರಾದೆವು. ೫.೧೫ಕ್ಕೆ ವಸತಿಗೃಹದ ಲೆಕ್ಕ ಚುಕ್ತಾಮಾಡಿ ಬಸ್ ಹತ್ತಿದೆವು. ಬಹುಶಃ ಎರಡು ಸಾವಿರ ರೂ. ಆದದ್ದೆಂದು ಕಾಣುತ್ತದೆ. ಜಾನಕಿಛಟ್ಟಿಗೆ ಹೋಗುವ ದಾರಿಯಲ್ಲಿ ನಸುಕಿನಲ್ಲೇ ಕುದುರೆಗಳು ಸಾಗುವುದು ಕಂಡಿತು. ಯಮುನೋತ್ರಿಗೆ ಭಕ್ತಾದಿಗಳನ್ನು ಕರೆದೊಯ್ಯಲು ಎಷ್ಟು ದೂರದಿಂದ ಪ್ರತಿದಿನ ಬೆಳಗ್ಗೆ ಸಂಜೆ ಹೀಗೆ ನಡೆಸಿಕೊಂಡು ಬರುತ್ತಾರಲ್ಲ, ಅವರೊಂದಿಗೆ ಕುದುರೆವಾಲಾಗಳು ನಡೆಯುತ್ತಾರಲ್ಲ. ಎಂಥ ಶ್ರಮಜೀವಿಗಳು ಎನಿಸಿತು. ಬೆಳಗ್ಗೆ ಏಳುಗಂಟೆಗೆ ನಾವು ಜಾನಕಿಛಟ್ಟಿ ತಲಪಿದೆವು. ಹಿಂದಿನದಿನ ಮಾಡಿಟ್ಟಿದ್ದ ಅನ್ನವನ್ನು ಬೆಳಗ್ಗೆ ನಾಲ್ಕಕ್ಕೇ ಎದ್ದು ಚಿತ್ರಾನ್ನ ಮಾಡಿ ತಂದಿದ್ದರು. ಅವರ ಈ ಬದ್ಧತೆಗೆ ನಮೋನಮಃ. ಅದನ್ನು ಹಂಚಿಕೊಂಡು ಬಸ್ಸಲ್ಲಿ ತಿಂದೆವು.

20160915_063518

ಯಮುನೋತ್ರಿಯೆಡೆಗೆ ನಡಿಗೆ
ಯಮುನೋತ್ರಿ ದೇವಾಲಯಕ್ಕೆ ಜಾನಕಿಛಟ್ಟಿಯಿಂದ ೫ಕಿಮೀ. ನಡೆದೇ ಹೋಗಬೇಕು. ನಡೆಯಲಾರದವರಿಗೆ ಕುದುರೆ, ಡೋಲಿ ವ್ಯವಸ್ಥೆ ಇದೆ. ಒಬ್ಬರೇ ಹೊರುವಂಥ ಬುಟ್ಟಿ, ಹಾಗೂ ಮಧ್ಯೆ ಯಾತ್ರಿಕ ಕೂತು ಹಿಂದೆ ಎರಡು, ಮುಂದೆ ಎರಡು ಜನ ಹೀಗೆ ನಾಲ್ಕು ಜನ ಹೊರುವಂಥ ಡೋಲಿಯೂ ಇದೆ. ನಾಲ್ಕು ಜನ ಹೊರುವಂಥದಕ್ಕೆ ರೂ. ೩೫೦೦ ದರ ನಿಗದಿಗೊಳಿಸಿದ್ದಾರೆ. ಕುದುರೆಗೆ ಸಾವಿರ ರೂ. ಡೋಲಿಗೆ ೧೨೦೦ ರೂ. ಹೀಗೆ ತರಾವರಿ ದರ ಇದೆ. ದರ ನಿಗದಿಗೊಳಿಸಲು ಬಲು ಚರ್ಚೆ ನಡೆಸಬೇಕಾಗುತ್ತದೆ. ಸುನಂದ, ಅನ್ನಪೂರ್ಣ ಕುದುರೆ ಏರಿದರು.
ನಾವೆಲ್ಲ ನಡಿಗೆ ಪ್ರಾರಂಭಿಸಿದೆವು. ಬಯೋಮೆಟ್ರಿಕ್ ಕಾರ್ಡ್ ತೋರಿಸಿ ಎಂಟ್ರಿ ಮಾಡಿಸಿದೆವು. ಕುದುರೆವಾಲಾಗಳು ನಮ್ಮ ಹಿಂದೆಮುಂದೆ ಅಷ್ಟು ದೂರ ಕುದುರೆ ಹತ್ತಿ ಎಂದು ಗೋಗರೆಯುತ್ತ ಬಂದರು. ಬೇಡ ಅಂದರೂ ಕೇಳಲೊಲ್ಲರು. ರೂ. ೨೦೦ ಕೊಡಿ ಸಾಕು. ಬನ್ನಿ ಹತ್ತಿ ಎಂಬ ಗೋಗರೆತ ನೋಡಿ ತುಂಬ ಸಂಕಟವಾಯಿತು. ಎಷ್ಟು ದೂರ ಬಂದ ಪಾಪ. ರೂ. ೫೦ ಅವನಿಗೆ ಕೊಡುವುದು. ಹಿಂದೆ ಹೋಗಲಿ ಎಂದು ನಾನೂ ಸವಿತಳೂ ತೀರ್ಮಾನಿಸಿ ದುಡ್ಡು ಕೊಡಲು ಹೋದರೆ ನಿರಾಕರಿಸಿದ. ಕುದುರೆ ಹತ್ತಿದರೆ ಮಾತ್ರ ದುಡ್ಡು ಎಂದ. ಬಲವಂತವಾಗಿ ರೂ. ೫೦ ಅವನ ಜೇಬಿಗೆ ತುರುಕಿದೆವು. ಹಿಂದೆ ಹೋಗಪ್ಪ. ನಮಗೆ ಕುದುರೆ ಬೇಡ ಎಂದು ವಿನಂತಿಸಿಕೊಂಡೆವು. ಮತ್ತೆ ನಮಗೆ ತೊಂದರೆ ಕೊಡದೆ ಎರಡು ಕುದುರೆಯೊಂದಿಗೆ ಹಿಂದಕ್ಕೇ ಹೋದನವ. ಹೊಟ್ಟೆಪಾಡಿಗಾಗಿ ಎಷ್ಟು ಕಷ್ಟಪಡಬೇಕು ಇವರೆಲ್ಲ. ಯಾತ್ರಾರ್ಥಿಗಳು ಬಂದು ಕುದುರೆ ಏರಿದರೆ ಮಾತ್ರ ಇವರ ಹೊಟ್ಟೆ ತುಂಬುತ್ತದೆ.

dscn1060

dscn1102

dscn1066

ನಾವು ೭.೪೫ಕ್ಕೆ ನಡೆಯಲು ಪ್ರಾರಂಭಿಸಿದೆವು. ರೂ. ೨೦ ಕೊಟ್ಟು ದೊಣ್ಣೆ ಪಡೆದೆವು. ಕಾಲುದಾರಿ ಚೆನ್ನಾಗಿ ಮಾಡಿದ್ದಾರೆ. ಕಲ್ಲು, ಸಿಮೆಂಟು ಹಾಕಿ ತಕ್ಕಮಟ್ಟಿಗೆ ಅಗಲವಾಗಿದೆ. ಕುದುರೆ, ಡೋಲಿಯವರು ಎದುರಾದರೆ ಸರಿದು ಜಾಗ ಕೊಡಬೇಕಾಗುತ್ತದೆ. ಸುತ್ತ ನಾಲ್ಕು ಕಡೆ ಪರ್ವತ ಸಾಲು. ಮಧ್ಯೆ ನದಿ ಹರಿಯುತ್ತದೆ. ಮರಗಳಿಂದ ಕೂಡಿದ ಹಸಿರು ಪರ್ವತಗಳನ್ನು ನೋಡುತ್ತ ನಡೆಯುವುದೇ ರೋಮಾಂಚನ ಅನುಭವ. ಎತ್ತ ನೋಡಿದರೂ ಹಸುರು ಕಣ್ಣಿಗೆ ತಂಪು ನೀಡುತ್ತದೆ. ಪರ್ವತಗಳಡೆಯಿಂದ ನೀರಿನ ಝರಿ ಹರಿದು ನದಿ ಸೇರುವ ವಯ್ಯಾರ ಇವೆಲ್ಲಾ ಅದ್ಭುತ ದೃಶ್ಯಗಳು. ನೋಡಿಯೇ ಅನುಭವಿಸಬೇಕು. ದಾರಿಯಲ್ಲಿ ಗುಡ್ಡದಿಂದ ಹರಿದು ಬರುವ ನೀರನ್ನು ಕುಡಿದು ಬಾಯಾರಿಕೆ ನೀಗಿಸಿಕೊಂಡೆವು. ನೀರು ಚೀಲದಲ್ಲಿ ಒಯ್ಯುವ ಅಗತ್ಯವೇ ಇಲ್ಲ. ಅಲ್ಲಲ್ಲಿ ಇಂಥ ನೈಸರ್ಗಿಕ ಸಿಹಿನೀರು ಲಭ್ಯ. ಇಂಥ ನೀರು ಕುಡಿದರೆ ತಿನ್ನಲು ಬೇರೇನು ಬೇಕೆನಿಸುವುದಿಲ್ಲ.
ಡೋಲಿ ಹೊರುವವರನ್ನು ನೋಡಿದಾಗ ಮನಸ್ಸಿಗೆ ಕಷ್ಟವಾಗುತ್ತದೆ. ಅಂಥ ತೂಕದ ವ್ಯಕ್ತಿಗಳನ್ನು ಹೊತ್ತು ಬೆಟ್ಟ ಏರಬೇಕಲ್ಲ. ಡೋಲಿಯಲ್ಲಿ ಕೂತವರು ಆರಾಮವಾಗಿ ಮೊಬೈಲಲ್ಲಿ ಮಾತಾಡುತ್ತಲೋ, ಇಲ್ಲವೆ ನಿದ್ರೆ ಮಾಡುತ್ತಲೊ ಇರುವುದನ್ನು ಕಾಣುವಾಗಲಂತೂ ಬೇಸರವಾಗುತ್ತದೆ. ಹೊಟ್ಟೆಪಾಡಿಗಾಗಿ ಇವರು ಎಷ್ಟು ಶ್ರಮದ ಕೆಲಸ ನಿರ್ವಹಿಸುತ್ತಾರಲ್ಲ. ಇದೂ ಒಂದು ಸೇವೆಯೇ ಸರಿ ಎಂದು ತೀರ್ಮಾನಿಸಬೇಕಾಗುತ್ತದೆ.

dscn1088

dscn1068

img_4500

dscn1058

img_4621

dscn1148

dscn1142

img_4698

ಸಮುದ್ರಮಟ್ಟದಿಂದ ೨೬೦೦ಮೀ ಎತ್ತರದಲ್ಲಿದೆ  ಯಮುನೋತ್ರಿ

ಬಿಸಿನೀರಿನ ಹೊಂಡ
ನಾವು ಕೆಲವಾರು ಮಂದಿ ೧೧.೧೫ಕ್ಕೆ ದೇವಾಲಯ ತಲಪಿದೆವು. ಅಲ್ಲಿ ಬಿಸಿನೀರಿನ ಹೊಂಡದಲ್ಲಿ ಸ್ನಾನ ಮಾಡಿದೆವು. ಐದೆ ನಿಮಿಷ ಇರಬೇಕು ನೀರಲ್ಲಿ. ಹೆಚ್ಚು ಹೊತ್ತು ಇದ್ದರೆ ತಲೆಸುತ್ತು ಬರುತ್ತದೆ. ಸಲ್ಫರ್ ಇರುವ ನೀರಲ್ಲಿ ಹೆಚ್ಚು ಹೊತ್ತು ಇರಬಾರದು. ಕೆಲವರೆಲ್ಲ ಆಹಾ ಎಂದು ನೀರಲ್ಲೇ ಇದ್ದವರು ಮೇಲೆ ಬಂದು ತಲೆ ಸುತ್ತುತ್ತೆ ಎನ್ನುತ್ತಿದ್ದರು. ಗಂಡಸರಿಗೆ ಹೆಂಗಸರಿಗೆ ಸ್ನಾನಕ್ಕೆ ಪ್ರತ್ಯೇಕ ಬಿಸಿನೀರಿನ ಹೊಂಡಗಳಿವೆ.
ದೇವಾಲಯಕ್ಕೆ ಹೋಗಿ ದೇವರ ದರ್ಶನ ಮಾಡಿದೆವು. ದೇವಾಲಾಯದ ಇನ್ನೊಂದು ಪಾರ್ಶ್ವದಲ್ಲಿರುವ ಸೂರ್ಯ ಕುಂಡ ಕೂಡ ಬಿಸಿ ನೀರಿನ ಬುಗ್ಗೆ. ಇಲ್ಲಿ ಅಕ್ಕಿಯನ್ನು ಒಂದು ಮಕಮಲ್ಲಿನ ಬಟ್ಟೆಯಲ್ಲಿ ಹಾಕಿ ಆ ಬಟ್ಟೆಯನ್ನು ಕುದಿಯುತ್ತಿರುವ ಬಿಸಿನೀರಿನ ಬುಗ್ಗೆಯಲ್ಲಿ ಐದು ನಿಮಿಷ ಅದ್ದಿ ಇಟ್ಟರೆ ಅದು ಬೇಯುತ್ತದೆ. ಅದನ್ನು ದೇವಿಗೆ ನೈವೇದ್ಯ ಮಾಡಿ ಪ್ರಾಸಾದವೆಂದು ಪರಿಗಣಿಸಲಾಗುತ್ತದೆ. ನಾವೂ ಕೂಡ ಅಕ್ಕಿಯನ್ನು ಆ ನೀರಲ್ಲಿ ಅದ್ದಿದೆವು. ಅಲ್ಲಿಂದ ಹೊಳೆಗೆ ಹೋಗಿ ನೀರು ಕುಡಿದೆವು. ನೀರು ತಣ್ಣಗೆ ಕೊರೆಯುತ್ತಿತ್ತು. ನೀರು ಅತ್ಯಂತ ಶುಭ್ರವಾಗಿದ್ದು ಶುಚಿಯಾಗಿತ್ತು. ದೇವಾಲಯದಲ್ಲಿ ಸ್ವಲ್ಪ ವಿಶ್ರಾಂತಿ ಪಡೆದೆವು. ದೇವಾಲಯದ ಬಳಿ ಮೇಲಕ್ಕೆ ಕಾಲಂದಿಪರ್ವತ ಕಾಣುತ್ತದೆ.

img_4678

ಮರಳಿ ಜಾನಕಿಛಟ್ಟಿಯೆಡೆಗೆ
ದೇವಾಲಯದಿಂದ ಹೊರಟು ಹೊರಗೆ ಬಂದು ಅಲ್ಲೇ ಹತ್ತಿರವಿದ್ದ ಹೋಟೇಲಲ್ಲಿ ಪರೋಟ ತಿಂದೆವು. ಒಂದು ಪರೋಟ ತಿಂದರೆ ಸಾಕು. ಹೊಟ್ಟೆ ತುಂಬುತ್ತದೆ. ಅಷ್ಟು ದೊಡ್ದದಿರುತ್ತದೆ. ರೂ. ೨೦ ಕ್ಕೆ ಒಂದು ಪರೋಟ. ಶ್ರದ್ಧೆಯಿಂದ ಚೆನ್ಣಾಗಿ ಮಾಡಿಕೊಡುತ್ತಾರೆ. ಚಪಾತಿ, ಪರೋಟ ಎಲ್ಲ ದುಬಾರಿಯಲ್ಲ. ಮರಳಿ ಜಾನಕಿಛಟ್ಟಿಯೆಡೆಗೆ ಹೆಜ್ಜೆ ಹಾಕಿದೆವು. ನಾವು ನಾಲ್ಕೈದು ಮಂದಿ ಮಾತಾಡುತ್ತಲೇ ನಿಧಾನಕ್ಕೆ ನಡೆಯುತ್ತ, ಪ್ರಕೃತಿಯ ಸೌಂದರ್ಯವನ್ನು ಕಣ್ಣಲ್ಲಿ ತುಂಬಿಕೊಳ್ಳುತ್ತ, ಕ್ಯಾಮರಾದಲ್ಲೂ ಕ್ಲಿಕ್ಕಿಸುತ್ತ ಮುಂದುವರಿದೆವು. ೧.೧೦ಕ್ಕೆ ನಡಿಗೆ ಪ್ರಾರಂಭಿಸಿ ೩.೧೦ಕ್ಕೆ ಜಾನಕಿಛಟ್ಟಿ ತಲಪಿದೆವು. ದೊಣ್ಣೆ ತೆಗೆದುಕೊಂಡ ಅಂಗಡಿಗೇ ವಾಪಾಸು ದೊಣ್ಣೆ ಕೊಟ್ಟರೆ ರೂ. ಹತ್ತು ಮರಳಿ ಕೊಡುತ್ತಾರೆ. ಬಾಕಿದ್ದವರೆಲ್ಲರೂ ಬಂದು ಸೇರುವಾಗ ೪.೩೦ ಆಗಿತ್ತು. ಒಂದಿಬ್ಬರು ದಾರಿ ತಪ್ಪಿ ಸ್ವಲ್ಪಕಾಲ ಗೊಂದಲ ಉಂಟಾಯಿತು.

dscn1153

ಬಸ್ಸಲ್ಲಿ ಬರುವಾಗ ಒಂದು ಗಂಟೆ ಅಡುಗೆ ಬಗ್ಗೆಯೇ ಚರ್ಚೆ. ಇವತ್ತು ರಾತ್ರೆ ಅಡುಗೆ ಮಾಡುವುದು ಗಂಡಸರು. ಹೆಂಗಸರು ಅಡುಗೆ ಕೋಣೆಗೇ ಕಾಲಿಡಬಾರದು. ಅಡುಗೆ ಮಾಡುವುದೇನೂ ಕಷ್ಟವಲ್ಲ, ಬೆಂಡೆಕಾಯಿ ದಮ್ರೋಟು, ಆಲೂಗಡ್ಡೆ ಪಾಯಸ ಎಲ್ಲ ಮಾಡೋಣ. ನೋಡುತ್ತ ಇರಿ ಎಂಥ ಅಡುಗೆ ಮಾಡುತ್ತೇವೆ ನಾವು. ಎಂದೆಲ್ಲ ಭಾರೀ ಮಾತುಕತೆಯಾಗುತ್ತಲೇ ಇತ್ತು. ಕೇಳುತ್ತಿದ್ದರೆ ನಿಜಕ್ಕೂ ಇವರು ಅಡುಗೆ ಮಾಡುತ್ತಾರ? ಎಂದು ಅನಿಸುವಂತಿತ್ತು!
ಮರಳಿ ಬಾರ್ಕೋಟ್ (ಬಾಡ್ಕೋಟ್)
ಸಂಜೆ ೬.೩೦ ಗಂಟೆಗೆ ಕೌಸಲ್ಯ ಅವರ ನೈನಾ ವಸತಿಗೃಹಕ್ಕೇ ತಲಪಿದೆವು. ನಮ್ಮ ನಮ್ಮ ಕೋಣೆಗೆ ಸೇರಿಕೊಂಡು ಸ್ನಾನಾದಿ ಮುಗಿಸಿದೆವು. ಹಿಂದಿಯಲ್ಲಿ ಡಿ ಅಕ್ಷರ ಬಂದದ್ದು ಆಂಗ್ಲದಲ್ಲಾಗುವಾಗ ರ ಅಕ್ಷರವಾಗುತ್ತದೆ. ಹಿಂದಿಯಲ್ಲಿ ಬಾಡ್ಕೋಟ್ ಎಂದು ಬರೆದಿದ್ದರೆ ಆಂಗ್ಲದಲ್ಲಿ ಬಾರ್ಕೋಟ್ ಎಂದಿರುತ್ತದೆ.

ವಿಠಲಸೋಮಪ್ರಸಾದ ಪಾಕ
ವಿಠಲರಾಜು, ಸೋಮಶೇಖರ್, ರಂಗಪ್ರಸಾದ್ ಮೂರೂ ಜನ ಅಡುಗೆಮನೆಯ ಪಾರುಪತ್ಯ ವಹಿಸಿಕೊಂಡರು. ‘ನಾನಂತೂ ಅಡುಗೆ ಕೋಣೆಗೆ ಬರಲ್ಲ. ನನಗೆ ಏನೂ ಮಾಡಲು ಬರುವುದಿಲ್ಲ’ ಎಂದು ರಂಗನಾಥ್ ಮೊದಲೆ ಹೇಳಿದ್ದರು. ಹಾಗಾಗಿ ಅವರನ್ನು ಅಡುಗೆ ಕೋಣೆಯ ಹೊರಗೆಯೇ ಹೆಂಗಸರು ಯಾರೂ ಒಳಗೆ ಬರದಂತೆ ಕಾವಲು ಕೂರಿಸಿದರು! ಇವರಲ್ಲಿ ಮೌನವಾಗಿ ಕೆಲಸ ಮಾಡುವವರು ರಂಗಪ್ರಸಾದ್. ಮೌನದಿಂದಲೆ ಆಲೂಗಡ್ಡೆ ದೊಡ್ಡಮೆಣಸು, ಟೊಮೆಟೊ ಚಕಚಕ ಹೆಚ್ಚಿದರು. ನೀರುಳ್ಳಿ ಸಿಪ್ಪೆ ತೆಗೆಯಲು ವಿಠಲರಾಜು, ಪೂರ್ಣಿಮ ಸೇರಿದರು. ನೀರುಳ್ಳಿ ಹೆಚ್ಚಲು ಸೋಮಶೇಖರ್ ಚೂರಿ ಹಿಡಿದರು. ಅದನ್ನು ನೋಡಿದ ಅವರ ಪತ್ನಿ ಸರಸ್ವತಿ, ‘ಆಯಿತು ಕತೆ, ಇವತ್ತಿಗೆ ಊಟ ಸಿಗುತ್ತೆ ಎಂಬ ಗ್ಯಾರಂಟಿ ಇಲ್ಲ. ಇವರು ನೀರುಳ್ಳಿ ಹೆಚ್ಚಿ, ಅಡುಗೆ ಮಾಡಿದಾಂಗೆ’ ಎಂದು ಹೇಳಿಕೊಂಡರು. ಆಗ ಅವರ ಸೋದರ ಸೊಸೆ ಸುನಂದ ನೋಡಲಾರದೆ ಕೊಡಿ ಮಾವ ಇಲ್ಲಿ ಚೂರಿ ಎಂದು ನೀರುಳ್ಳಿ ಹೆಚ್ಚಿ ಕೊಟ್ಟರು. ಸೋಮಶೇಖರ್ ಹಾಗೆ ಹೆಚ್ಚು, ಹೀಗೆ ಹೆಚ್ಚು ಎಂದು ಸಲಹೆ ಸೂಚನೆ ಕೊಟ್ಟರು! ಸೋಮಶೇಖರ್ ಅಕ್ಕಿ ತೊಳೆದರು. ಗಂಡಸರ ಅವಸ್ಥೆ ನೋಡಲಾರದೆ ಸರಸ್ವತಿ ಸದ್ದಿಲ್ಲದೆ ಬೇಳೆ ತೊಳೆದು ಬೇಯಲು ಕುಕ್ಕರಿನಲ್ಲಿ ಒಲೆಮೇಲಿಟ್ಟರು. ಅಂತೂ ಇಂತೂ ೮.೩೦ಗೆ ಊಟಕ್ಕೆ ಕರೆ ಬಂತು. ವಿಠಲಸೋಮಪ್ರಸಾದ ಪಾಕ ತಯಾರಾಗಿತ್ತು!
ಬೆಂಡೆಪಲ್ಯ, ಹಿಮಾಲಯದಲ್ಲಿ ಸಿಕ್ಕುವ ವಿಶೇಷ ಸೊಪ್ಪಿನ ಪಲ್ಯ, ಅನ್ನ, ಸಾಂಬಾರು ತಯಾರಿಸಿದ್ದರು. ಇದು ಸಾಂಬಾರು ಪುಡಿಯಾ? ಅರಸಿನ ಪುಡಿ ಎಲ್ಲಿದೆ? ಇದು ಅಚ್ಚಕಾರದ ಪುಡಿಯಾ? ಎಂದು ಕೇಳಲು ಮೂರು ನಾಲ್ಕು ಸಲ ಸೋಮಶೇಖರ್ ಅವರ ಪತ್ನಿ ಬಳಿ ಬಂದಿದ್ದರು! (ಸೋಮಶೇಖರ್ ಅವರಿಗೆ ಮನೆಯಲ್ಲಿ ಒಂದು ಚಹಾ ಮಾಡಲೂ ಬರುವುದಿಲ್ಲವಂತೆ! ಇದು ಅವರ ಪತ್ನಿ ಹೇಳಿದ ಗುಟ್ಟು!) ಸಾಂಬಾರು, ಪಲ್ಯ ಚೆನ್ನಾಗಿತ್ತು. ಸರೋಜ ಅವರು ಅಡುಗೆ ಕೋಣೆಗೆ ಹೋಗಿ ಸಾಂಬಾರು ರುಚಿ ನೋಡಿ, ಹುಳಿ, ಉಪ್ಪು, ಪುಡಿ ಸೇರಿಸಿ ಪಾಕ ಹದ ಮಾಡಿದ್ದರಂತೆ. ಮಾತುಕೊಟ್ಟಂತೆ ಗಂಡಸರು (ಹೆಂಗಸರ ಹಸ್ತಕ್ಷೇಪವೂ ಬೆರೆತು) ಅಡುಗೆ ಮಾಡಿ ಬಡಿಸಿದ್ದರು.

photo-collage-maker_li2uuw

ಸರಸರ ಸರೋಜ
ಸರೋಜ ಅವರು ಬಹಳ ಚುರುಕಿನ ಮಹಿಳೆ. ಎಲ್ಲೆ ಹೋದರೂ ಏನಾದರೂ ಸಾಧಿಸುವ ಧೀರೆ. ಆ ದಿನದ ಪ್ರಯಾಣ ಮುಗಿಸಿ ನಾವು ವಸತಿಗೃಹಕ್ಕೆ ಬಂದ ಕೂಡಲೇ ಸರಸರ ಅಡುಗೆ ಕೋಣೆಗೆ ಹೋಗಿ ನಿಂಬೆಚಹಾ, ಕಾಫಿ, ಹಾಲು ಹಾಕಿದ ಚಹಾ ತಯಾರಿಸಿ ಎಲ್ಲರಿಗೂ ಹಂಚುತ್ತಿದ್ದರು. ಆ ದಿನದ ಅಡುಗೆಗೆ ಏನು ತರಕಾರಿ ಸಾಮಾನು ಬೇಕೋ ಅಂಗಡಿ ಮುಂದೆ ಬಸ್ ನಿಲ್ಲಿಸಿ ಚಕಚಕ ಇಳಿದು ಚೌಕಾಸಿ ವ್ಯಾಪಾರ ಮುಗಿಸಿ ಬಸ್ ಹತ್ತುತ್ತಿದ್ದರು. ಎಲ್ಲಿ ಬಸ್ ಇಳಿದರೂ ಒಂದುಕ್ಷಣ ಮಾಯವಾಗಿ, ಮತ್ತೆ ಪ್ರತ್ಯಕ್ಷವಾದಾಗ ಆ ಊರಿನ ಸ್ಪೆಷಲ್ ತಿಂಡಿಯನ್ನು ಕೊಂಡು ಎಲ್ಲರಿಗೂ ಹಂಚುತ್ತಿದ್ದರು. ಅದಕ್ಕೆ ಅವರಿಗೆ ಸರಸರ ಸರೋಜ ಎಂಬ ಹೆಸರಿಟ್ಟಿದ್ದೆ.

IMG_4779.jpg
ಪಾತ್ರೆಪಗಡ ಗೋಪಕ್ಕ, ಒತ್ತರೆ ಶೋಭಕ್ಕ
ಅಡುಗೆ ಮಾಡಿದ ಮೇಲೆ ಪಾತ್ರೆಗಳನ್ನು ತೊಳೆಯಲೇಬೇಕಲ್ಲ. ಆ ಕೆಲಸವನ್ನು ಗೋಪಕ್ಕ ಬಹಳ ಖುಷಿಯಿಂದ ಮಾಡುತ್ತಿದ್ದರು. ಅವರಿಗೆ ಪಾತ್ರೆ ತೊಳೆಯುವುದೆಂದರೆ ಬಲು ಇಷ್ಟದ ಕೆಲಸವಂತೆ. ಅಡುಗೆ ಕೋಣೆ, ಒಲೆಯನ್ನು ಚೊಕ್ಕವಾಗಿ ಒರೆಸುವ ಕೆಲಸ ಶೋಭಕ್ಕ ಬಹಳ ಅಚ್ಚುಕಟ್ಟಾಗಿ ಶ್ರದ್ಧೆಯಿಂದ ಮಾಡುತ್ತಿದ್ದರು.

ಮುಂದುವರಿಯುವುದು

Advertisements

ಕೈಬೀಸಿ ಕರೆಯುವ ಹಿಮಾಲಯ
ಅಗಾದವಾದ ಹಿಮಾಲಯದ ತಪ್ಪಲಲ್ಲಿ ನೋಡಿ ಮುಗಿಯದಷ್ಟು ಸ್ಥಳಗಳಿವೆ. ಜೀವನದಲ್ಲಿ ಒಮ್ಮೆಯಾದರೂ ಚಾರ್‌ಧಾಮ (ಗಂಗೋತ್ರಿ, ಯಮುನೋತ್ರಿ, ಕೇದಾರ, ಬದರಿ) ಯಾತ್ರೆ ಮಾಡಬೇಕೆಂಬುದು ಪ್ರತಿಯೊಬ್ಬನ ಕನಸಾಗಿರುತ್ತದೆ. ಅಂತೆಯೇ ನನಗೂ ಆ ಕನಸಿತ್ತು. ಕನಸಿಗೆ ಪುಷ್ಟಿ ನೀಡುವಂತೆ ೨೦೧೬ ಮೇ ತಿಂಗಳಲ್ಲಿ ಮೈಸೂರಿನ ಯೂಥ್ ಹಾಸ್ಟೆಲ್ ಗಂಗೋತ್ರಿ ಘಟಕದ ಸದಸ್ಯರಾದ ಗೋಪಕ್ಕ ‘ಚಾರಧಾಮ ಯಾತ್ರೆಗೆ ಬರುತ್ತೀರ? ಸೆಪ್ಟೆಂಬರದಲ್ಲಿ ಹೋಗುವುದು’ ಎಂದು ಕೇಳಿದರು. ರೋಗಿ ಬಯಸಿದ್ದು ಹಾಲು ಅನ್ನ, ವೈದ್ಯ ಹೇಳಿದ್ದೂ ಹಾಲು ಅನ್ನ ಎಂಬಂತೆ ಈ ಪ್ರಶ್ನೆ ಇತ್ತು! ಕೈಕಾಲು ಗಟ್ಟಿಯಾಗಿದ್ದಾಗಲೇ ಈ ಯಾತ್ರೆ ಮಾಡಿದರೆ ಒಳ್ಳೆಯದು ಎಂದು ಬರುತ್ತೇನೆ ಎಂಬ ಉತ್ತರ ಕೊಟ್ಟೆ. ಚಾರ್‌ಧಾಮಕ್ಕೆ ಹೋಗೋಣವೇ? ಎಂದು ಮನೆಯಲ್ಲಿ ಅನಂತನನ್ನು ಕೇಳಿದೆ. ಸೆಪ್ಟೆಂಬರ್ ತಿಂಗಳು ಕಛೇರಿಯಲ್ಲಿ ತುಂಬ ಕೆಲಸ. ಆಗುವುದೇ ಇಲ್ಲ. ನೀನು ಹೋಗಿ ಬಾ ಎಂದಾಗ ಜೊತೆಯಲ್ಲಿ ಬಂದಿದ್ದರೆ ಚೆನ್ನಾಗಿತ್ತು ಎಂದು ಅನಿಸಿತು. ತಂಡ ಚೆನ್ನಾಗಿರುವುದರಿಂದ ಒಬ್ಬಳೇ ಆದರೂ ಹೋಗುವುದೆಂದು ತೀರ್ಮಾನಿಸಿದೆ.
ಯಾತ್ರೆಗೆ ಪೂರ್ವ ತಯಾರಿ
ಈ ಯಾತ್ರೆಗೆ ರೈಲಲ್ಲಿ ಹೋಗುವುದಾದರೆ ಸುಮಾರು ನಾಲ್ಕೈದು ತಿಂಗಳು ಮೊದಲೆ ಟಿಕೆಟ್ ಕಾದಿರಿಸಬೇಕಾಗುತ್ತದೆ. ಹಾಗಾಗಿ ಮೇ ತಿಂಗಳಲ್ಲೇ ೨೦೧೬ ಸೆಪ್ಟೆಂಬರ ೯ಕ್ಕೆ ಬೆಂಗಳೂರಿನಿಂದ ದೆಹಲಿಗೆ ಕರ್ನಾಟಕ ಎಕ್ಸ್‌ಪ್ರೆಸ್ ರೈಲು, ದೆಹಲಿಯಿಂದ ಹರಿದ್ವಾರಕ್ಕೆ ೧೧ರಂದು ಜನ ಶತಾಬ್ದಿ ರೈಲಲ್ಲಿ ಮುಂಗಡ ಟಿಕೆಟ್ ಕಾದಿರಿಸಿದರು. ಅಷ್ಟು ಬೇಗ ಕಾದಿರಿಸಿದ್ದರೂ ನಮಗೆಲ್ಲರಿಗೂ ಒಂದೇ ಬೋಗಿಯಲ್ಲಿ ಸೀಟು ದೊರೆತಿರಲಿಲ್ಲ. ಇಂಥ ಯಾತ್ರೆಗೆ ತೆರಳಲು ಪೂರ್ವ ತಯಾರಿ ಎಂದರೆ ಮುಖ್ಯವಾಗಿ ದೇಹ ಸುಸ್ಥಿತಿಯಲ್ಲಿಟ್ಟುಕೊಳ್ಳಬೇಕು. ನಡಿಗೆ, ಯೋಗ, ಸೈಕಲಿಂಗ್, ಇಂಥ ಯಾವುದಾದರೊಂದು ವ್ಯಾಯಾಮ ಇಟ್ಟುಕೊಂಡರೆ ಬಹಳ ಒಳ್ಳೆಯದು. ಆಗ ಅಲ್ಲಿ ನಡೆಯಲು ಕಷ್ಟ ಎನಿಸುವುದಿಲ್ಲ. ಆದರೆ ನಡೆಯಲಾರದವರೂ ಏನೂ ನಿರಾಶರಾಗಬೇಕಿಲ್ಲ. ಡೋಲಿ, ಕುದುರೆ ವ್ಯವಸ್ಥೆ ಬಹಳ ಚೆನ್ನಾಗಿದೆ.
ಎರಡುಪ್ರತಿ ಫೋಟೋ, ಗುರುತಿನ ಚೀಟಿ (ಲೈಸೆನ್ಸ್, ಮತದಾನ ಗುರುತುಪತ್ರ, ಪಾಸ್ಪೋರ್ಟ್ ಇವುಗಳಲ್ಲಿ ಯಾವುದಾದರೂ ಒಂದು), ಹಾಗೂ ಅದರ ನೆರಳಚ್ಚು ಪ್ರತಿ ಎರಡು ಇಟ್ಟುಕೊಂಡಿರಬೇಕು. ಅವಶ್ಯ ಔಷಧಿಗಳು, ಟಾರ್ಚ್, ಚಳಿಗೆ ಟೊಪ್ಪಿ, ಸ್ವೆಟರ್, ಮಳೆ ಅಂಗಿ, ಅವಶ್ಯ ಬಟ್ಟೆಗಳು. ನಮ್ಮ ಲಗೇಜ್ ಹಿತಮಿತದಲ್ಲಿದ್ದರೆ ಪ್ರವಾಸ ಬಲು ಸುಲಭ.

20160908_142142

ಚಾರ್ಧಾಮ ಯಾತ್ರೆಯ ರೂವಾರಿ

ಸುಮಾರು ಮೂವತ್ತಕ್ಕೂ ಹೆಚ್ಚು ಸಲ ಹಿಮಾಲಯದ ಬೇರೆ ಬೇರೆ ಕಡೆ ಸುತ್ತಾಡಿ ಅನುಭವ ಇರುವ ವಿಠಲರಾಜು ಅವರು ನಮ್ಮ ಈ ಯಾತ್ರೆಯ ರೂವಾರಿಗಳು. ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿಯಲ್ಲಿ ಕೆಲಸದಲ್ಲಿದ್ದು, ಈಗ ನಿವೃತ್ತರಾಗಿ ಇಂಥ ಯಾತ್ರೆಗೆ ಸದಭಿರುಚಿಯುಳ್ಳ ಜನರನ್ನು ಕರೆದುಕೊಂಡು ಹೋಗುವಲ್ಲಿ ಪ್ರವೃತ್ತರಾಗಿದ್ದಾರೆ. ಸರಳ ಸಜ್ಜನರೂ, ಪತಂಜಲಿ ಯೋಗ ಶಿಕ್ಷಕರೂ, ಉತ್ತಮ ವಾಗ್ಮಿಗಳೂ ಆಗಿರುವ ವಿಠಲರಾಜು ಅವರು ಅನವಶ್ಯಕ ಖರ್ಚು ಹೇರದೆ ಮಿತವ್ಯಯದಲ್ಲಿ ಈ ಯಾತ್ರೆಯನ್ನು ಸಂಘಟಿಸಿದ್ದಾರೆ. ಅವರಿಗೆ ಅನಂತಾನಂತ ಕೃತಜ್ಞತೆಗಳು.

dscn1166

ಯಾತ್ರೆ ಪ್ರಾರಂಭಕ್ಕೆ ವಿಘ್ನ
೨೦೧೬ ಸೆಪ್ಟೆಂಬರ ೯ರಂದು ಮಧ್ಯಾಹ್ನ ರಾಜ್ಯರಾಣಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಬೆಂಗಳೂರಿಗೆ ಹೊರಡುವುದೆಂದು ನಿಗದಿ ಮಾಡಿದ್ದೆವು. ಆದರೆ, ಅದು ನೆರವೇರಲಿಲ್ಲ. ತಮಿಳುನಾಡಿಗೆ ಕಾವೇರಿ ನೀರು ಹರಿಸಬೇಕೆಂಬ ತೀರ್ಪು ಬಂತು. ಕಾವೇರಿಕೊಳ್ಳದಲ್ಲಿ ನೀರಿನ ಕೊರತೆ ಇರುವುದರಿಂದ ಅದಕ್ಕೆ ಕರ್ನಾಟಕದ ಜನತೆ ವಿರೋಧ ವ್ಯಕ್ತಪಡಿಸಲೇಬೇಕಾದ ಅನಿವಾರ್ಯತೆ. ಆದರೂ ಸರ್ಕಾರ ಸುಪ್ರೀಂಕೋರ್ಟ್ ತೀರ್ಪಿಗೆ ತಲೆಬಾಗಿ ನೀರು ಬಿಟ್ಟಿತು. ಇದರಿಂದ ಸಹಜವಾಗಿ ರೈತರ ಆಕ್ರೋಶ ಹೆಚ್ಚಿತು. ಅದರ ಅನುಗುಣವಾಗಿ ಸೆಪ್ಟೆಂಬರ ೯ರಂದು ಕರ್ನಾಟಕ ಬಂದ್ ಆಚರಿಸಲು ಕರೆಕೊಟ್ಟ ಕಾರಣ ೯ರಂದು ಬಸ್, ರೈಲು ಯಾವುದೂ ಇರಲಿಕ್ಕಿಲ್ಲವೆಂದು ನಮ್ಮ ಬೆಂಗಳೂರು ಪಯಣ ೮ನೇ ತಾರೀಕಿನಂದೇ ಕೈಗೊಳ್ಳಬೇಕಾಯಿತು. ಹಾಗಾಗಿ ನಾನು ೮ನೇ ತಾರೀಕು ರಾತ್ರೆ ತಂಗಿ ಸವಿತಳ ಮನೆ ಸೇರಿದೆ. ಕಾವೇರಿನೀರಿನ ಸಮಸ್ಯೆ ಇಂದು ನಿನ್ನೆಯದಲ್ಲ. ಅದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಾಗಿರುವುದು ಅತ್ಯಗತ್ಯ. ಇಲ್ಲದಿದ್ದರೆ ಹೀಗೆ ನಷ್ಟದಮೇಲೆ ನಷ್ಟವಾಗುತ್ತಲೇ ಇರುತ್ತದೆ. ನಾವು ನೀರನ್ನು ಮಿತವ್ಯಯದಲ್ಲಿ ಖರ್ಚು ಮಾಡಲು ಕಲಿತರೆ ನೀರಿನ ಸಮಸ್ಯೆ ಖಂಡಿತಾ ತಲೆದೋರದು.

ಹೊರಡುವ ಕಾತುರ
ಸೆಪ್ಟೆಂಬರ ೯ರಂದು ಬೆಳಗ್ಗೆಯೇ ಎಲ್ಲ ಕಡೆ ಬಂದ್. ಯಾವ ಅಂಗಡಿಮುಂಗಟ್ಟೂ ತೆರೆದಿರಲಿಲ್ಲ. ಸಂಜೆ ನಾವು ರೈಲು ನಿಲ್ದಾಣ ಸೇರಬೇಕು. ಯಾವ ಅಡೆತಡೆಯೂ ಬಾರದಿರಲಿ ಎಂದು ಹಾರೈಸಿಕೊಂಡೆವು. ರೈಲಲ್ಲಿ ರಾತ್ರೆ ಊಟಕ್ಕೆ ತಂಗಿ ಪುಳಿಯೋಗರೆ ಮೊಸರನ್ನ ತಯಾರಿಸಿದಳು. ತಂಗಿ ಗಂಡ ಭಾವ ರವಿಶಂಕರ ನಮ್ಮನ್ನು ಆರು ಗಂಟೆಯೊಳಗೆ ರೈಲುನಿಲ್ದಾಣಕ್ಕೆ ಕಾರಿನಲ್ಲಿ ಬಿಟ್ಟ. ದಾರಿಯಲ್ಲಿ ಯಾವ ಅಡೆತಡೆಯೂ ಇರಲಿಲ್ಲ. ಅಲ್ಲಲ್ಲಿ ಟಯರು ಸುಟ್ಟ ಅವಶೇಷ ಇತ್ತು. ಕೆಲವರು ಅವರವರ ನೆಂಟರ ಮನೆಯಲ್ಲಿದ್ದು, ಮತ್ತೆ ಕೆಲವರು ರಾತ್ರಿ ರೈಲಲ್ಲಿ ಬಂದು ರೈಲು ನಿಲ್ದಾಣದಲ್ಲೇ ಉಳಿದುಕೊಂಡಿದ್ದರು. ಅಂತಿಮವಾಗಿ ಎಲ್ಲರೂ ಕರ್ನಾಟಕ ಎಕ್ಸ್‌ಪ್ರೆಸ್ ರೈಲು ಹತ್ತಿದೆವು. ೭.೨೦ಕ್ಕೆ ಬೆಂಗಳೂರಿನಿಂದ ರೈಲು ಹೊರಟಿತು.
ನಮ್ಮ ಸೈನ್ಯ
ಈ ಯಾತ್ರೆಗೆ ನಾವು ಒಟ್ಟು ೧೭ ಮಂದಿ ಹೊರಟಿದ್ದೆವು. ಚನ್ನಪಟ್ಟಣದಿಂದ ರಂಗಣ್ಣ, ಶಶಿಕಲಾ ದಂಪತಿಗಳು, ಬೆಂಗಳೂರಿನಿಂದ ಸವಿತ (ನನ್ನ ತಂಗಿ), ಸುನಂದ, ಮೈಸೂರಿನಿಂದ ವಿಠಲರಾಜು, ಗೋಪಿ, ಅನ್ನಪೂರ್ಣ, ಸೋಮಶೇಖರ್- ಸರಸ್ವತಿ ದಂಪತಿಗಳು, ರಂಗಪ್ರಸಾದ್-ಲತಾ ದಂಪತಿಗಳು, ಪೂರ್ಣಿಮಾ, ರುಕ್ಮಿಣಿಮಾಲಾ, ಶೋಭಾ, ಹೇಮಮಾಲಾ, ಸರೋಜ, ಗಾಯತ್ರಿ. ಎಲ್ಲರೂ ಮೈಸೂರಿನ
ಯೂಥ್ ಹಾಸ್ಟೆಲ್ ಗಂಗೋತ್ರಿ ಘಟಕದ ಸದಸ್ಯರು.
ರೈಲಿನಲ್ಲಿ ಅವ್ಯವಸ್ಥೆ
ಹದಿನೇಳು ಮಂದಿಗೂ ಒಂದೇ ಬೋಗಿಯಲ್ಲಿ ಸೀಟು ಸಿಕ್ಕಿರಲಿಲ್ಲ. ಮೂರು ಬೇರೆ ಬೇರೆ ಬೋಗಿಯಲ್ಲಿದ್ದೆವು. ಒಂದು ಬೋಗಿಯಿಂದ ಇನ್ನೊಂದು ಬೋಗಿಗೆ ಹೋಗುವುದೇ ಹರಸಾಹಸ. ಅಷ್ಟು ಮಂದಿ ರೈಲಲ್ಲಿ. ನಿಂತು ಕೂಡ ಪ್ರಯಾಣಿಸುವವರಿದ್ದರು. ಹೆಸರಿಗೆ ಕಾದಿರಿಸಿದ ಬೋಗಿ. ಆದರೆ ಆ ಬೋಗಿಗೂ ಜನರು ಹತ್ತುತ್ತಿದ್ದರು. ಬೆಂಗಳೂರಿಂದ ದೆಹಲಿವರೆಗೂ ನಿಂತು, ನೆಲದಲ್ಲಿ ಕೂತು ಪ್ರಯಾಣಿಸುವವರಿದ್ದರು. ಅವರನ್ನು ನೋಡಿದರೆ ಪಾಪ ಅನಿಸುತ್ತದೆ. ರಾತ್ರಿ ಆದೊಡನೇ ಎಲ್ಲಿ ಸ್ಥಳವಿದೆಯೋ ಅಲ್ಲಿ ನೆಲದಲ್ಲಿ ಮಲಗುತ್ತಿದ್ದರು. ರಾತ್ರೆ ಪಾಯಿಖಾನೆಗೆ ಹೋಗಲು ಕಾಲಿಡಲೂ ಸ್ಥಳವಿರುತ್ತಿರಲ್ಲಿ. ಜನ ಹಾಗೆ ಎಲ್ಲೆಂದರಲ್ಲಿ ಮಲಗಿರುತ್ತಿದ್ದರು. ನಮ್ಮ ಸೀಟು ಕೆಳಗಡೆಯೂ ರಾತ್ರೆ ಯಾವ ಸಮಯದಲ್ಲೋ ಮಲಗಿರುತ್ತಿದ್ದರು. ರೈಲು ನಿಂತರೆ ಸಾಕು ಮೂಗುಮುಚ್ಚಿಯೇ ಕೂರಬೇಕು. ಪಾಯಿಖಾನೆಯಿಂದ ಅಸಾಧ್ಯ ವಾಸನೆ. ನಿದ್ರೆಯಲ್ಲೂ ಎಚ್ಚರವಾಗುತ್ತದೆ ಆ ವಾಸನೆಗೆ. ನಮ್ಮ ಸೀಟು ಇದ್ದುದು ಪಾಯಿಖಾನೆಗೆ ಹತ್ತಿರವೇ! ವಾಸನೆ ತಡೆಯಲಾರದೆ ಇದ್ದಾಗ ಅಬ್ಬ ಸಾಕಪ್ಪ ಸಾಕು ಈ ಪಯಣ ಎನ್ನುವಂತಾಗುತ್ತದೆ. ಸೆಖೆಯೂ ಸಾಕಷ್ಟು ಇತ್ತು.
ನಮ್ಮ ಬೋಗಿಯಲ್ಲಿ ಕಸದಬುಟ್ಟಿ ಇರಲಿಲ್ಲ. ಬೇರೆ ಕೆಲವು ಬೋಗಿಗಳಲ್ಲಿ ಇತ್ತಂತೆ. ತಿಂಡಿ ತಿಂದು, ಕಾಫಿ ಕುಡಿದು ತಟ್ಟೆ, ಲೋಟಗಳನ್ನು ರೈಲಿನ ಕಿಟಕಿಯಿಂದ ಹೊರಗೆ ಬೀಸಾಕುತ್ತಿದ್ದರು. ನಾವು ಒಂದು ತೊಟ್ಟೆಯಲ್ಲಿ ಹಾಕಿ ಸೀಟು ಕೆಳಗೆ ಇಡುತ್ತಿದ್ದೆವು. ಅದನ್ನು ಕಸಗುಡಿಸುವವರು ಬಂದಾಗ ತೆಗೆದುಕೊಂಡು ಹೋಗುತ್ತಿದ್ದರು. ಅವರು ಎಲ್ಲಿ ಬೀಸಾಡುತ್ತಾರೋ ಗೊತ್ತಿಲ್ಲ. ಜನರಿಗೆ ಸ್ವಚ್ಛತೆಯ ಪಾಟ ಕಲಿಸುವುದು ಬಹಳ ಕಷ್ಟದ ಕೆಲಸ. ಎಲ್ಲೆಂದರಲ್ಲಿ ಕಸ ಹಾಕುವುದೇ ಜನ್ಮಸಿದ್ಧ ಹಕ್ಕು ಎಂದು ತಿಳಿದವರೇ ಬಹಳ ಜನ.

ಕಾಲವನ್ನು ತಡೆಯೋರು ಯಾರೂ ಇಲ್ಲ!
ಎರಡು ದಿನವಿಡೀ ರೈಲುಪ್ರಯಾಣ. ರೈಲಿನಲ್ಲಿ ಕಾಲ ಕಳೆಯುವುದು ಅಂತ ದೊಡ್ಡ ಸಮಸ್ಯೆಯಲ್ಲ. ಕೈಬಾಯಿಗೆ ಕೆಲಸ ಕೊಟ್ಟರಾಯಿತು! ಪುಸ್ತಕ ಓದುತ್ತ, ಹರಟೆ ಹೊಡೆಯುತ್ತ, ತಂದ ತಿಂಡಿ ಮೆಲ್ಲುತ್ತ, ತೂಕಡಿಸುತ್ತ, ಕೂತು ಬೇಸರವಾದಾಗ ಇನ್ನೊಂದು ಬೋಗಿಗೆ ಹೋಗಿ ನಮ್ಮ ಸಹಯಾತ್ರಿಗಳಲ್ಲಿ ಮಾತಾಡುತ್ತ ಕಾಲ ನೂಕಿದೆವು. ಅಲ್ಲಿಗೆ ಹೋಗುವುದೂ ಹರಸಾಹಸ. ಅಷ್ಟು ಜನಸಂದಣಿ. ಇನ್ನೊಂದು ಬೋಗಿಯಲ್ಲಿದ್ದ ಅನ್ನಪೂರ್ಣ ಅವರು ಸೌತೆಕಾಯಿ, ಟೊಮೆಟೊ, ನೀರುಳ್ಳಿ ಹೆಚ್ಚಿ ಚುರುಮುರಿ ಮಾಡಿಕೊಟ್ಟರು. ಅದಕ್ಕೆ ಬೇಕಾಗುವ ಎಲ್ಲ ಪರಿಕರಗಳನ್ನು ತಂದಿದ್ದರು. ಬೆಳಗಿನ ತಿಂಡಿಗೆ ಸರೋಜ ಚಪಾತಿ ಕೊಟ್ಟರು. ಹೀಗೆ ತಿಂಡಿ ಹಂಚಿಕೊಳ್ಳುತ್ತ ಮಜವಾಗಿ ಕಾಲ ಕಳೆದೆವು.

ದೆಹಲಿ ತಲಪಿದ ರೈಲು
ಬೆಳಗ್ಗೆ (೧೧-೯-೨೦೧೬) ೧೦.೩೦ಕ್ಕೆ ದೆಹಲಿ ತಲಪಿದೆವು. ಅಲ್ಲಿ ನನ್ನ ಬ್ಯಾಗಿಗೆ ರೂ. ೨೦೦ ಕೊಟ್ಟು ಚಕ್ರ ಹಾಕಿಸಿದೆ. ಆ ಬ್ಯಾಗ್ ಕೊಳ್ಳಲೂ ಅಷ್ಟು ದುಡ್ಡು ಕೊಟ್ಟಿರಲಿಲ್ಲ! ರೈಲು ನಿಲ್ದಾಣದಲ್ಲಿ ಬ್ಯಾಗಿಗೆ ಜಿಪ್, ಚಕ್ರ ಹಾಕಲು, ಶೂಗೆ ಸೋಲ್ ಹಾಕಲು ತಯಾರಾಗಿ ಪರಿಕರ ಪ್ರದರ್ಶಿಸುತ್ತ ಸಾಕಷ್ಟು ಜನ ನಿಂತಿರುತ್ತಾರೆ. ಉದರನಿಮಿತ್ತಂ ಬಹುಕೃತ ವೃತ್ತಿಂ! ಅವರು ಹೇಳಿದ್ದೇ ರೇಟು. ನಾವು ನಮ್ಮ ಲಗೇಜು ಹೊತ್ತು ಒಂದನೇ ಪ್ಲಾಟ್‌ಫಾರ್ಮಿಗೆ ಬಂದೆವು. ಅಲ್ಲಿ ವಿಶ್ರಾಂತಿ ಕೋಣೆಯಲ್ಲಿ ಕೂತೆವು. ಹತ್ತೂವರೆಯಿಂದ ೩ ಗಂಟೆವರೆಗೂ ಅಲ್ಲಿ ಕಾಲಹರಣ ಮಾಡಿದೆವು. ಹೊರಗೆ ಹೋಟೇಲಿನಿಂದ ಊಟ ಕಟ್ಟಿಸಿಕೊಂಡು ಬಂದು ಊಟ ಮಾಡಿದೆವು.

img_4288 img_4285

20160911_141234

ಹರಿದ್ವಾರದತ್ತ ಪಯಣ
ದೆಹಲಿ- ಡೆಹರಾಡೂನ್ ಜನಶತಾಬ್ಧಿ ರೈಲು ಹತ್ತಿದೆವು. ೩.೧೫ಕ್ಕೆ ಹೊರಡಬೇಕಾದದ್ದು ೩.೩೦ಕ್ಕೆ ಹೊರಟಿತು. ರೈಲು ತುಂಬ ಜನ. ಲಗೇಜು ಇಡಲೂ ಸ್ಥಳವಿಲ್ಲ. ದೆಹಲಿಯಿಂದ ಹರಿದ್ವಾರ ೨೫೮ಕಿಮೀ ದೂರ. ಆ ರೈಲಲ್ಲಿ ಹೆಚ್ಚಿನವರೂ ಚಾರ್‌ಧಾಮ ಯಾತ್ರೆಗೆ ಹೋಗುವವರೇ ಇದ್ದದ್ದು. ಶಿರಡಿ, ರಾಯಚೂರಿನಿಂದ ಬಂದ ಪ್ರಯಾಣಿಕರು ತಮಟೆ ಬಾರಿಸುತ್ತ ಭಜನೆ, ಹಾಡು, ನೃತ್ಯ ಮಾಡುತ್ತ ಮನರಂಜನೆ ಒದಗಿಸಿದರು. ನಮ್ಮವರೂ ಕೆಲವರು ಅವರ ಹಾಡಿಗೆ ಹೆಜ್ಜೆ ಹಾಕಿದರು. ಒಟ್ಟು ಐದು ಗಂಟೆ ಪ್ರಯಾಣ. ಆದರೆ ನಮ್ಮ ರೈಲು ಎರಡು ಗಂಟೆ ತಡ. ಹಾಗಾಗಿ ಏಳು ಗಂಟೆಗಳ ಕಾಲ ಸೆಖೆ ಅನುಭವಿಸುತ್ತ ರೈಲಲ್ಲಿ ಕೂರಬೇಕಾಯಿತು. ಶೌಚಾಲಯದಲ್ಲಿ ನೀರಿಲ್ಲ. ರೈಲು ನಿಂತಾಗ ವಾಸನೆಯಲ್ಲಿ ಮೂಗು ಬಿಡಲು ಸಾಧ್ಯವಿಲ್ಲ. ಕ್ಲೋರೋಫಾರಂ ಇಲ್ಲದೆಯೇ ಪ್ರಜ್ಞೆ ತಪ್ಪಿಸಲು ಸಾಧ್ಯವಾದೀತು!
ಅಂತೂ ರಾತ್ರೆ ೧೦.೩೦ಕ್ಕೆ ರೈಲು ಹರಿದ್ವಾರ ತಲಪಿತು. ಅಲ್ಲಿ ರೈಲು ನಿಲ್ಲುವುದು ಐದೇ ನಿಮಿಷ. ಅಷ್ಟರಲ್ಲಿ ಸಾಮಾನು ಸರಂಜಾಮು ಇಳಿಸಿ ರೈಲಿಳಿಯಬೇಕಾದರೆ ಹರಸಾಹಸ ಪಡಬೇಕಾಯಿತು.

img_4290

ಹರಿದ್ವಾರದ ರಾಮಭವನ
ರೈಲಿಳಿದು ಲಗೇಜು ಹೊತ್ತು ಅನತಿ ದೂರದಲ್ಲೇ ಇದ್ದ ರಾಮಭವನ ವಸತಿಗೃಹಕ್ಕೆ ಬಂದೆವು. ನಾವು ಸವಿತ, ನಾನು, ಹೇಮಮಾಲಾ ಮೂರು ಮಂದಿ ಒಂದು ಕೋಣೆಯಲ್ಲಿ. ಮೂರು ಮಂಚಗಳಿತ್ತು. ಎರಡು ದಿನದಿಂದ ಸ್ನಾನವಿಲ್ಲದೆ ಮೈ ತುರಿಕೆ . ತಣ್ಣೀರು ಸ್ನಾನವಾಗಿ ಮಲಗಿದಾಗ ೧೨.೪೫.

ರಾಮಭವನದ ಹಿನ್ನೆಲೆ: ಪಂಡಿತ್ ಹರ್ ಗೋಲಾಲ್ ಶರ್ಮಾ ಇದರ ಕತೃ. (೧೮೮೨-೧೯೭೬) ಇದೊಂದು ನೋಂದಾಯಿತ ಸಂಸ್ಥೆ. ಇಲ್ಲಿ ಕಡಿಮೆದರದಲ್ಲಿ ಕೋಣೆ ದೊರೆಯುತ್ತದೆ. ವ್ಯವಸ್ಥೆ ಚೆನ್ನಾಗಿದೆ. ಮೂರು ಮಹಡಿಯಲ್ಲಿ ಸುಮಾರು ೩೫ ಕೋಣೆಗಳಿವೆ.

20160912_073833ಗಂಗಾಸ್ನಾನ

ಬೆಳಗ್ಗೆ ೧೨-೯-೨೦೧೬) ಎದ್ದು ರಾಮಭವನದ ಎದುರು ಪೆಟ್ಟಿಗೆ ಅಂಗಡಿಯಲ್ಲಿ ಕಾಫಿ ಕುಡಿದು, ಪಕ್ಕದಲ್ಲೇ ಇರುವ ಹೋಟೇಲಿನಲ್ಲಿ ಹೇಮಾಮಾಲಾ ಎರಡು ಪರೋಟ ಕೊಂಡು ನಾವೊಂದಷ್ಟು ಮಂದಿ ರುಚಿ ನೋಡಿದೆವು. ೮.೩೦ಕ್ಕೆ ಎಲ್ಲರೂ ಗಂಗಾನದಿಯತ್ತ ಹೊರಟೆವು. ನಡೆದು ಹೋಗುವಷ್ಟೇ ದೂರದಲ್ಲಿ ಗಂಗಾನದಿ ಹಾಗೂ ಹರಿಕಾ ಪೌಡಿ ದೇವಾಲಯವಿದೆ. ಮೊದಲಿಗೆ ಮೊಸಳೆಮೇಲೆ ಕೂತಿರುವ ಗಂಗಾದೇವಿಯ ದೇವಾಲಯ ನೋಡಿದೆವು.
ಅಲ್ಲಿಂದ ಹೊರಟು ನದಿಗೆ ಇಳಿದೆವು. ಮೂರುಸಲ ಮುಳುಗು ಹಾಕಿದೆ. ನದಿಯಲ್ಲಿ ನಾನು ಮುಳುಗು ಹಾಕಿದ್ದು ಇದೇ ಪ್ರಥಮಸಲ! ಹಾಗಾಗಿ ಮೊದಲಬಾರಿಗೆ ಮುಳುಗು ಹಾಕಿದಾಗ ಉಸಿರುಕಟ್ಟಿತು. ತಲೆ ಮುಳುಗಲಿಲ್ಲ ಎಂದರು. ಮತ್ತೆ ಮೂಗು ಮುಚ್ಚಿ ಮುಳುಗು ಹಾಕಿದಾಗ ಸರಿ ಹೋಯಿತು. ನೀರಿನ ರಭಸ ಸಾಕಷ್ಟಿತ್ತು. ಕಬ್ಬಿಣದ ಸಲಾಕೆ ಹಾಕಿದಲ್ಲಿಂದ ದಾಟಿ ಮುಂದೆ ಹೋಗಬಾರದು. ಸಲಾಕೆ ಹಿಡಿದುಕೊಂಡು ಸ್ನಾನ ಮಾಡಬಹುದು. ಅಪಾಯವಿಲ್ಲ. ಎಲ್ಲರೂ ಗಂಗಾಸ್ನಾನ ಮಾಡಿ ನೀರಿನಿಂದ ಮೇಲೆ ಬಂದು ಬಟ್ಟೆ ಬದಲಾಯಿಸಿದೆವು. ಅಲ್ಲಿ ಯಾವ ವ್ಯವಸ್ಥೆಯೂ ಇಲ್ಲ. ನಾವೇ ಅಂಗಡಿಮರೆಯಲ್ಲಿ ಒಬ್ಬರಿಗೊಬ್ಬರು ಅಡ್ಡ ನಿಂತು ಸುಧಾರಿಸಿದೆವು. ನದಿಗೆ ಗಂಗಾರತಿ ಮಾಡಿದೆವು.

dsc00106

ಹರ್ ಕೀ ಪೌರಿ (ಡಿ)
ದೇವಾಲಯಕ್ಕೆ ಹೋದೆವು. ಎಲ್ಲ ಕಡೆ ಪಂಡಿತರು ದುಡ್ಡು ಹಾಕಿ ದುಡ್ಡು ಹಾಕಿ ಎಂದು ಹೂಂಕರಿಸುತ್ತಿದ್ದದ್ದು ನೋಡುವಾಗ ಇರುವ ಭಕ್ತಿಯೂ ಹೋಗಿ ಇಲ್ಲಿಂದ ಹೊರಗೆ ಹೋದರೆ ಸಾಕಪ್ಪ ಎನಿಸುತ್ತದೆ. ನಮ್ಮ ಕಡೆಯ ದೇವಾಲಯದಲ್ಲಿದ್ದಂತೆ ದೇವರ ಮೂರ್ತಿ ಅಷ್ಟು ಭವ್ಯವೆನಿಸುವುದಿಲ್ಲ. ಬೊಂಬೆಗಳಂತೆ ಕಾಣುತ್ತದೆ.

   ಭಾರತ ಪೌರಾಣಿಕ ಹಾಗೂ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿರುವ ದೇಶ. ಧಾರ್ಮಿಕ ಕ್ಷೇತ್ರಗಳಿಂದ ಧಾರ್ಮಿಕ ನಂಬಿಕೆಗಳಿಂದ ಹರಿದ್ವಾರ ಪ್ರಸಿದ್ಧಿ ಪಡೆದಿದೆ. ಹೆಸರೇ ಸೂಚಿಸುವಂತೆ ಹರಿದ್ವಾರ ವಿಷ್ಣು ಹಾಗೂ ಶಿವನ ಆವಾಸ ಸ್ಥಾನ.  ಪವಿತ್ರ ಪಾಪನಾಶಿನಿ ಗಂಗಾನದಿ ಅತ್ಯಂತ ಪ್ರಸಿದ್ಧ. ಹರಿದ್ವಾರ ಅಥವಾ ಹರದ್ವಾರ ಇದರ ಅರ್ಥ ದೇವರ ಮಹಾದ್ವಾರ ಎಂದಾಗಿದೆ. ಇದೊಂದು ಬಹುಮುಖ್ಯ ಯಾತ್ರಾ ಕೇಂದ್ರವಾಗಿದ್ದು, ಸುಂದರ ಪರ್ವತ ರಾಜ್ಯವಾದ ಉತ್ತರಖಂಡದಲ್ಲಿದೆ. ಈ ಸ್ಥಳವು ಉತ್ತರಖಂಡದ ಚಾರ್ ಧಾಮ ಯಾತ್ರಾ ಸ್ಥಳಗಳಿಗೆ ಹೋಗಲು ಹೆಬ್ಬಾಗಿಲು. ಈ ಸ್ಥಳವು ಸುಪ್ರಸಿದ್ಧ ರಾಜ ವಿಕ್ರಮಾದಿತ್ಯನ ಕಾಲದ್ದು ಎಂದು ಇತಿಹಾಸದಲ್ಲಿ ಉಲ್ಲೇಖಿಸಲಾಗಿದೆ.
ಬ್ರಹ್ಮ ಕುಂಡ್ ಎಂದು ಕರೆಯಲಾಗುವ ಹರ್ ಕೀ ಪೌರಿ ಇಲ್ಲಿಯ ಪ್ರಮುಖ ಮತ್ತು ಶೃದ್ಧಾಭಕ್ತಿಯ ಸ್ಥಳ. ಈ ಘಟ್ಟಗಳಲ್ಲಿರುವ ಹೆಜ್ಜೆಗುರುತುಗಳನ್ನು ಹಿಂದೂ ಭಗವಾನ್ ವಿಷ್ಣುವಿನ ಹೆಜ್ಜೆಗಳು ಎಂದು ನಂಬಲಾಗಿದೆ. ಅನೇಕ ಭಕ್ತರು ಮುಂಡನ, ಅಸ್ಥಿ ವಿಸರ್ಜನೆ ಮಾಡಲು ಇಲ್ಲಿಗೆ ಭೇಟಿ ನೀಡುತ್ತಾರೆ. ಪ್ರತಿ ೧೨ ವರ್ಷಗಳಿಗೊಮ್ಮೆ ನಡೆಯುವ ಕುಂಭ ಮೇಳವನ್ನು ಇಲ್ಲಿ ಆಯೋಜಿಸಲಾಗುತ್ತದೆ. ಆಗ ಪ್ರಪಂಚದ ಎಲ್ಲಾ ಭಾಗಗಳಿಂದ ಭಕ್ತರು ಈ ಧಾರ್ಮಿಕ ಉತ್ಸವದಲ್ಲಿ ಭಾಗವಹಿಸಲು ದೊಡ್ಡ ಸಂಖ್ಯೆಯಲ್ಲಿ ಸೇರುತ್ತಾರೆ.

ದೇವಾಲಯ ಎಲ್ಲ ಸುತ್ತಿ ಹೊರಗೆ ಬಂದು ದಾರಿಯಲ್ಲಿ ಪರೋಟ ತಿಂದು ಕೋಣೆ ಸೇರುವಾಗ ೧೧.೪೫. ಬಟ್ಟೆ ಒಗೆದು ಹಾಕಿ ವಿಶ್ರಾಂತಿ.

ಅನ್ನಪೂರ್ಣೆ ಸದಾಪೂರ್ಣೆಯರು
ಶಶಿಕಲಾ (೫೨) ಸರಸ್ವತಿ (೬೭) ಇಬ್ಬರೂ ಸಾಕ್ಷಾತ್ ಅನ್ನಪೂರ್ಣೇ ಸದಾಪೂರ್ಣೆಯರೇ. ಕ್ಷಿಪ್ರವಾಗಿ ಅನ್ನ ಸಾಂಬಾರ್ ತಯಾರಿಸಿ ನಮಗೆಲ್ಲ ಉಣಬಡಿಸಿದರು. ನಮ್ಮ ಈ ಯಾತ್ರೆಯಲ್ಲಿ ಎಲ್ಲಿಲ್ಲಿ ಅಡುಗೆ ಮಾಡಲು ಅವಕಾಶವಾಗಿದೆಯೋ ಅಲ್ಲೆಲ್ಲ ಇವರಿಬ್ಬರೂ ಸದಾ ಉತ್ಸಾಹದಿಂದ ಸ್ವಯಂಪ್ರೇರಣೆ ಯಿಂದಲೇ ಅಡುಗೆ ಮಾಡಿದ್ದರು. ನಗುನಗುತ್ತಲೇ ತಟ್ಟೆಗೆ ಊಟ ಹಾಕಿದ್ದರು. ನಮ್ಮ ಉದರದ ಯೋಗಕ್ಷೇಮ ನೋಡಿಕೊಂಡ ಕಾರಣ ಎಲ್ಲಿಯೂ ಯಾರಿಗೂ ಹೊಟ್ಟೆ ಕೆಡಲಿಲ್ಲ.

ಬಯೋಮೆಟ್ರಿಕ್ (ಫೋಟೋಮೆಟ್ರಿಕ್?)
ಊಟವಾಗಿ ಸಂಜೆ ಮೂರು ಗಂಟೆಗೆ ಹೊರಟು ರೈಲು ನಿಲ್ದಾಣದ ಎದುರು ಭಾಗದಲ್ಲಿರುವ ಟೂರಿಸ್ಟ್ ಆಫೀಸ್ ಗವರ್ನ್‌ಮೆಂಟ್ ಉತ್ತರಾಖಾಂಡ ಇಲ್ಲಿ ನಮ್ಮ ಬಯೋಮೆಟ್ರಿಕ್ ಕಾರ್ಡ್ ಮಾಡಿಸಿದೆವು. ಚಾರ್ ಧಾಮ ಯಾತ್ರೆಗೆ ಹೋಗುವವರು ಇದನ್ನು ಮಾಡಿಸಬೇಕಂತೆ. ನಮ್ಮ ಫೋಟೊ ತೆಗೆದು, ಧೃಡೀಕೃತ ವಿಳಾಸವಿರುವ ಗುರುತಿನ ಚೀಟಿ ತೋರಿಸಬೇಕು. ಆಗ ನಮಗೊಂದು ಕಾರ್ಡ್ ಕೊಡುತ್ತಾರೆ. ಅದನ್ನು ನಾಲ್ಕು ಕಡೆಯೂ ಹೋದಾಗ ತೋರಿಸಬೇಕು. ಎಲ್ಲರಿಗೂ ಆ ಕಾರ್ಡ್ ಉಚಿತವಾಗಿಯೇ ದೊರೆಯಿತು.

img_431920161002_152708-1

ಋಷಿಕೇಶದತ್ತ ಪಯಣ
ಎರಡು ಆಟೋರಿಕ್ಷಾಗಳಲ್ಲಿ (ಒಂಬತ್ತು ಮಂದಿ ಕೂರುವಂಥದು ರೂ. ೨೦೦೦/-) ನಾವು ಋಷಿಕೇಶದತ್ತ ಪಯಣ ಬೇಳೆಸಿದೆವು. ಹರಿದ್ವಾರದಿಂದ ಸುಮಾರು ೨೪ಕಿಮೀ. ದಾರಿಯಲ್ಲಿ ಬೃಹತ್ತಾದ ಆಂಜನೇಯ ದೇವಾಲಯ ನೋಡಿದೆವು. ಋಷಿಕೇಶ ತಲಪುವಾಗ ಮಳೆ ಸುರಿಯಿತು. ಮಳೆ ಅಂಗಿ ಕೋಣೆಯಲ್ಲಿ ಬ್ಯಾಗಿನಲ್ಲಿ ಬೆಚ್ಚಗೆ ಇತ್ತು! ನಾವು ರಿಕ್ಷಾ ಇಳಿಯುವಾಗಲೇ ಒಬ್ಬ ಮಳೆ‌ಅಂಗಿ ಹಿಡಿದು ನಮ್ಮನ್ನು ಸ್ವಾಗತಿಸಿದ್ದ. ಎಲ್ಲರೂ ತಲಾ ರೂ. ೨೦ ಕೊಟ್ಟು ತೆಳ್ಳಗಿನ ಮಳೆ‌ಅಂಗಿಯನ್ನು ಕೊಂಡೆವು. ಕೆಲವರದು ಅದನ್ನು ಹಾಕಿಕೊಳ್ಳುವಾಗಲೇ ಪರ್ ಎಂದಿತು. ಆದರೂ ಮಳೆಯಿಂದ ನಮ್ಮ ಕ್ಯಾಮರಾ, ಮೊಬೈಲ್ ಇತ್ಯಾದಿ ಬೆಲೆಬಾಳುವ ವಸ್ತುಗಳನ್ನು ರಕ್ಷಿಸುವಲ್ಲಿ ನೆರವಾಯಿತು.

14484863_538282976380957_7019975579084050624_n

ಮೈಸೂರಿನಿಂದ ತಾರೀಕು ೨೮-೮-೨೦೧೬ ರಂದು  ಎರಡು ಮಿನಿ ಬಸ್ಸಿನಲ್ಲಿ ನಾವು ೩೮ ಮಂದಿ ಬೆಳಗ್ಗೆ ೬.೩೦ ಗಂಟೆಗೆ ಹೊರಟು ಮಳವಳ್ಳಿಯಲ್ಲಿ ಹರಿಕೃಷ್ಣ ಖಾನಾವಳಿಯಲ್ಲಿ ಇಡ್ಲಿ ವಡೆ ಕಾಫಿಯಾಗಿ ಮುಂದುವರಿದು ಬನ್ನೂರು, ಹಲಗೂರು ದಾರಿಯಲ್ಲಿ ಸಾಗಿ ಮುಂದೆ ಬಲಕ್ಕೆ ಹೊರಳಿ ಕೆಲವು ಕಿಮೀ ಕ್ರಮಿಸುವಾಗ ಗುಂಡಾಪುರ ಹಳ್ಳಿ ಸಿಗುತ್ತದೆ. ಅಲ್ಲಿ ನಾವು ಬಸ್ಸು ಇಳಿದೆವು. ಪರಸ್ಪರ ಪರಿಚಯ ಕಾರ್ಯಕ್ರಮ ಮುಗಿಸಿದೆವು. ಸ್ಥಳೀಯ ಪಡಿತರ ಅಂಗಡಿ ಮಾಲೀಕರಾದ ಬಸವೇಗೌಡರು ಬಂದು ನಮಗೆ ಬಸವಬೆಟ್ಟ (ಹಲಗೂರು, ಮಳವಳ್ಳಿ ತಾಲೂಕು) ಹತ್ತಲು ಮಾರ್ಗದರ್ಶಕರಾಗಿ ಅವರ ತಮ್ಮನ ಮಗ ದರ್ಶನನನ್ನು ನೇಮಿಸಿದರು. ದರ್ಶನ ಐಟಿ‌ಐ ವಿದ್ಯಾಭ್ಯಾಸ ಮುಗಿಸಿ ಕೆಲಸದ ಹುಡುಕಾಟದಲ್ಲಿ ತೊಡಗಿದ್ದ.

ಹೆಬ್ಬೆಟ್ಟದ ಬಸವೇಶ್ವರ ದೇವಾಲಯಕ್ಕೆ ತೆರಳಲು ಟಾರು ರಸ್ತೆಯಿದೆ. ಆದರೆ ನಾವು ಬೆಟ್ಟಗುಡ್ಡ ಹತ್ತಿ ಆ ದೇವಾಲಯಕ್ಕೆ ಹೋಗಲು ತೀರ್ಮಾನಿಸಿದ್ದೆವು. ದರ್ಶನನ ನೇತೃತ್ವದಲ್ಲಿ ನಾವು ಬೆಳಗ್ಗೆ ೯.೩೦ ಗಂಟೆಗೆ ಬೆಟ್ಟ ಹತ್ತಲು ಪ್ರಾರಂಭಿಸಿದೆವು. ಬಿಸಿಲು ಇಲ್ಲದೆ ನಮಗೆ ಹವೆ ಹಿತಕರವಾಗಿತ್ತು. ಕಡಿದಾದ ಬೆಟ್ಟವಲ್ಲ. ಹಾಗೆಂದು ಸಲೀಸಾಗಿಯೂ ಇರಲಿಲ್ಲ. ಬೆಟ್ಟ ಏರುವ ದೂರ ಸುಮಾರು ನಾಲ್ಕು ಕಿಮೀ. ನಾವು ನಿಧಾನವಾಗಿ ಸಾಗಿದೆವು. ಆನೆ, ಚಿರತೆ, ಹುಲಿ, ಜಿಂಕೆ, ನವಿಲು, ಮುಳ್ಳುಹಂದಿ ಇತ್ಯಾದಿ ಪ್ರಾಣಿಗಳ ಓಡಾಟ ಇರುವಂಥ ಅರಣ್ಯವಂತೆ. ಸಾಕ್ಷಿಯಾಗಿ ಆನೆ ಲದ್ದಿ, ಮುಳ್ಳುಹಂದಿಯ ಮುಳ್ಳುಕಡ್ಡಿ ಕಾಣಿಸಿತು. ಪ್ರಾಣಿಗಳು ನಾಡಿಗೆ ಬರದಿರಲು ಅರಣ್ಯ ಇಲಾಖೆಯವರು ಸುತ್ತ ಅಗಳು ಕೊರೆದು ವಿದ್ಯುತ್ ಬೇಲಿ ಹಾಕಿಸಿದ್ದಾರೆ.

ಬೆಟ್ಟ ಏರಿದಂತೆ ದೊಡ್ಡ ದೊಡ್ಡ ಪಾದೆಗಳು, ಬಂಡೆಗಲ್ಲುಗಳು, ಸಣ್ಣಪುಟ್ಟ ಹಾಸುಗಲ್ಲುಗಳು ಕಾಣಿಸಿದವು. ಪುಟ್ಟ ಪುಟ್ಟ ಕಲ್ಲುಗಳು ವಿವಿಧ ಆಕಾರದಲ್ಲಿದ್ದು ಸುಂದರವಾಗಿದ್ದುವು. ಪುಟಾಣಿ ಪ್ರಣತಿ ಕಲ್ಲುಗಳನ್ನು ನೋಡಿ, “ಎಷ್ಟೊಂದು ಕಲ್ಲುಗಳು ಇವೆ. ಬಟ್ಟೆ ಒಗೆಯಲು ಚೆನ್ನಾಗಿವೆ’’ ಎಂದು ಉದ್ಘರಿಸಿ ಕಲ್ಲು ಲೆಕ್ಕ ಹಾಕಲು ತೊಡಗಿದಳು. ಅಲ್ಲಲ್ಲಿ ಕೂರುತ್ತ, ನಿಲ್ಲುತ್ತ, ಸೌತೆಕಾಯಿ, ಕಿತ್ತಳೆ, ಸೇಬು, ಪೇರಳೆ ಮೆಲ್ಲುತ್ತ ಸಾಗಿದೆವು. ಸುಮಾರು ನಾಲ್ಕು ಕಿಮೀ ಬೆಟ್ಟ ಏರಿದಾಗ ದೇವಾಲಯಕ್ಕೆ ಹೋಗುವ ರಸ್ತೆ ಎದುರಾಯಿತು. ರಸ್ತೆಯಲ್ಲಿ ಮುಂದೆ ಸಾಗಿದೆವು. ಆಗ ದೇಸೀ ತಳಿಯ ದನಗಳ ಹಿಂಡು ಮತ್ತು ಕುರಿಗಳ ಮಂದೆ ಎದುರಾಯಿತು. ಅವು ಶಿಸ್ತಿನ ಸಿಪಾಯಿಯಂತೆ ಸಾಲಾಗಿ ಹೋಗುವ ಸೊಬಗನ್ನು ನೋಡುತ್ತ ನಿಂತೆವು. ಅವುಗಳನ್ನು ನಿತ್ಯ ಮಧ್ಯಾಹ್ನ ೧೧ ಗಂಟೆಗೆ ಅರಣ್ಯದತ್ತ ಮೇಯಲು ಕರೆದುಕೊಂಡು ಹೋಗಿ ಸಂಜೆ ನಾಲ್ಕು ಗಂಟೆಯಾಗುವಾಗ ವಾಪಾಸು ಕರೆತರುತ್ತಾರಂತೆ. ರಸ್ತೆಯಲ್ಲಿ ಸಾಗಿದಂತೆ ಮುಂದೆ ಹಳ್ಳಿ ಎದುರಾಗುತ್ತದೆ. ಅವರೆಲ್ಲ ನಮ್ಮನ್ನು ಮಾತಾಡಿಸಿ, ಯಾವೂರಿಂದ ಬಂದಿರಿ? ನಡೆದೇ ಬಂದಿರ? ಅದ್ಯಾಕೆ ನಡೆದು ಬಂದಿರಿ? ಬಸ್ಸು ಹೋಗಲು ರಸ್ತೆ ಇದೆಯಲ್ಲ ಎಂದು ಪ್ರಶ್ನಿಸಿದರು. ಈ ಪೇಟೆಮಂದಿಗೆ ಮಾಡಲು ಬೇರೆ ಕೆಲಸವಿಲ್ಲ ಎಂದು ಮನದಲ್ಲೇ ಅಂದುಕೊಂಡಿರಬಹುದು!
ಸುಮಾರು ಮೂರು ಕಿ.ಮೀ. ದೂರ ರಸ್ತೆಯಲ್ಲೇ ನಡೆದು ಸಾಗಿದಾಗ ಹೆಬ್ಬೆಟ್ಟ ಬಸವೇಶ್ವರ ದೇವಾಲಯದ ಹೆಬ್ಬಾಗಿಲು ಎದುರಾಯಿತು. ನಾವು ಸುಮಾರು ಏಳುಕಿಮೀ ದೂರ ನಡೆದು ಹನ್ನೆರಡೂಕಾಲಕ್ಕೆ ತಲಪಿದ್ದೆವು. ದೊಡ್ಡದಾದ ಬಸವನ ಮೂರ್ತಿಯನ್ನು ಬಣ್ಣಹಚ್ಚಿ ಹೆಬ್ಬಾಗಿಲಲ್ಲಿ ಪ್ರತಿಷ್ಠಾಪಿಸಿದ್ದಾರೆ. ದೇವಾಲಯ ಚೋಳರಕಾಲದ್ದಂತೆ. ನಾಗಲಿಂಗ ಸ್ವಾಮಿಗಳು ಅಲ್ಲಿಯ ಗುಹೆಯಲ್ಲಿ ವಾಸವಾಗಿದ್ದು ಈ ದೇವಾಲಯದ ಅಭಿವೃದ್ಧಿಯಲ್ಲಿ ಪ್ರಮುಖಪಾತ್ರ ವಹಿಸಿದ್ದರಂತೆ. ಅದಕ್ಕಾಗಿ ದೇವಾಲಯದ ಒಂದು ಪಾರ್ಶ್ವದಲ್ಲಿ ತಾರಸಿಮೇಲೆ ಅವರ ಮೂರ್ತಿಯನ್ನು ಸ್ಥಾಪಿಸಿದ್ದಾರೆ. ಭಕ್ತಾದಿಗಳು ಆ ಮೂರ್ತಿಗೂ ಪೂಜೆ ಸಲ್ಲಿಸುವುದನ್ನು ಕಂಡೆವು.
ಈಗಿನ ಅರ್ಚಕರ ಹೆಸರೂ ನಾಗಲಿಂಗಸ್ವಾಮಿ. ತಲೆತಲಾಂತರದಿಂದ ಅವರ ಕುಟುಂಬದವರೇ ಪೂಜೆ ಸಲ್ಲಿಸುತ್ತ ಬರುತ್ತಿದ್ದಾರಂತೆ. ಅರ್ಚಕರೂ ಬಸವೇಗೌಡರೂ ಸೇರಿ ನಮಗೆಲ್ಲ ಮಜ್ಜಿಗೆನೀರು, ಚಹಾ ಸರಬರಾಜು ಮಾಡಿದರು.

ಅಲ್ಲಿಂದ ಅರ್ಧ ಕಿಮೀ ದೂರ ಅರಣ್ಯ ಇಲಾಖೆಗೆ ಸೇರಿದ ಸ್ಥಳವಿದೆ. ಅಲ್ಲಿ ದೊಡ್ಡದಾದ ಪಾದೆಕಲ್ಲುಗಳು ಇದ್ದು, ಅಲ್ಲಿಂದ ಮುತ್ತತ್ತಿ ಅರಣ್ಯ ಬಲು ಸುಂದರವಾಗಿ ಕಾಣುತ್ತದೆ. ಕಾವೇರಿ ವೈಲ್ಡ್ ಲೈಫ್ ಎಂಬ ಬರಹವಿದ್ದ ಸಮವಸ್ತ್ರ ಧರಿಸಿದ ಅರಣ್ಯ ಇಲಾಖೆಯ ಸಿಬ್ಬಂದಿ ನಮ್ಮನ್ನು ಆ ಸ್ಥಳಕ್ಕೆ ಕರೆದೊಯ್ದರು. ಅಲ್ಲಿ ಮುತ್ತತ್ತಿ ಅರಣ್ಯವನ್ನು ಕಣ್ಣುತುಂಬಿಸಿಕೊಂಡು, ಸಮೂಹಭಾವಚಿತ್ರ ತೆಗೆಸಿಕೊಂಡು ವಾಪಾಸಾದೆವು. ಒಂದೂವರೆ ಗಂಟೆಗೆ ಹೊರಟು ಪುನಃ ಏಳುಕಿಮೀ ದೂರ ನಡೆದು ಬಸ್ಸು ಇದ್ದ ಜಾಗ ತಲಪುವಾಗ ಗಂಟೆ ಸಂಜೆ ನಾಲ್ಕು ಆಗಿತ್ತು. ಬಿಸಿಬೇಳೆಭಾತ್, ಮೊಸರನ್ನ, ವಡೆ, ಮಸಾಲೆವಡೆ ಹೊಟ್ಟೆಗೆ ಇಳಿಸಿ ವಿಶ್ರಾಂತಿಗೈದೆವು. ತಂಡದ ಸದಸ್ಯರು ಕೆಲವರು ಹಾಸ್ಯ, ಏಕಪಾತ್ರಾಭಿನಯ, ಹಾಡು ಇತ್ಯಾದಿ ಮನರಂಜನಾ ಕಾರ್ಯಕ್ರಮ ನಡೆಸಿಕೊಟ್ಟರು. ಮಾರ್ಗದರ್ಶಕ ದರ್ಶನನಿಗೆ ಒಳ್ಳೆಯ ಕೆಲಸ ಸಿಗಲಿ ಎಂದು ಹಾರೈಸಿ ಅವನನ್ನು ಬೀಳ್ಕೊಟ್ಟೆವು.
ಸಂಜೆ ಐದೂವರೆಗೆ ಅಲ್ಲಿಂದ ಹೊರಟು ಮಳವಳ್ಳಿಯ ಹರಿಕೃಷ್ಣದಲ್ಲಿ ಕಾಫಿ ಕುಡಿದು ಮೈಸೂರು ತಲಪುವಾಗ ರಾತ್ರಿ ೯ ಗಂಟೆಯಾಗಿತ್ತು. ಯೂಥ್ ಹಾಸ್ಟೆಲ್ ಗಂಗೋತ್ರಿ ಘಟಕದ ವತಿಯಿಂದ ನಾಗೇಂದ್ರಪ್ರಸಾದ್, ವೈದ್ಯನಾಥನ್ ಈ ಕಾರ್ಯಕ್ರಮವನ್ನು ರೂ. ೫೦೦ಕ್ಕೆ ಯಶಸ್ವಿಯಾಗಿ ನಡೆಸಿದ್ದರು.

ಚಾರಣದ ಕೆಲವು ಚಿತ್ರಗಳು

img_4103

ನಡಿಗೆ ಪ್ರಾರಂಭ

ನಡಿಗೆ ಪ್ರಾರಂಭ

ಸಮೂಹಚಿತ್ರ

ಸಮೂಹಚಿತ್ರ

OLYMPUS DIGITAL CAMERA

ಸುಂದರ ನೋಟ

ಮುತ್ತತ್ತಿ ಅರಣ್ಯಪ್ರದೇಶ

ಮುತ್ತತ್ತಿ ಅರಣ್ಯಪ್ರದೇಶ

ಸ್ವಂತೀ

ಕಲ್ಲುಗಳು

ಕಲ್ಲುಗಳು

ಸೀತಾ ಹೂ

ಸೀತಾ ಹೂ

ಹಳ್ಳಿಮಂದಿ ಕಾಯಕದ ಸುಂದರ ನೋಟ

ಹಳ್ಳಿಮಂದಿ ಕಾಯಕದ ಸುಂದರ ನೋಟ

img_4218 img_4222

ಬಸವಬೆಟ್ಟ

ಬಸವಬೆಟ್ಟ

ಸೀತಜ್ಜಿಯ ಬೇಸರ

ಚಕ್ಕುಲಿ, ಕೋಡುಬಳೆ, ಹಿಟ್ಟಿನುಂಡೆ ಎಲ್ಲಾ ತಯಾರಿಸಿ ಕಟ್ಟಿ ಚೀಲದಲ್ಲಿ ತುಂಬಿಟ್ಟಳು ಸೀತಜ್ಜಿ. ತೋಟದಿಂದ ಮನೆಗೆ ಬಂದ ಮಗ, ‘ಏನಮ್ಮ, ಭಾರೀ ಸಡಗರದಲ್ಲಿ ಓಡಾಡುತ್ತಿದ್ದಿಯಲ್ಲ ಏನು ವಿಶೇಷ?’ ಎಂದು ಕೇಳಿದ.
“ರಾಮು, ನಾಳೆ ರಾಧೆ ಮನೆಗೆ ಹೋಗುತ್ತಿದ್ದೇನೆ. ಅಲ್ಲಿ ಅವಳ ಮಕ್ಕಳಿಗೆ ಶಾಲೆಗೆ ರಜ ಇದೆಯಂತೆ. ನಾಲ್ಕು ದಿನ ಬಂದುಹೋಗು ಎಂದು ರಾಧೆ ನಿನ್ನೆ ದೂರವಾಣಿಸಿ ಹೇಳಿದ್ದಳು. ನಿನಗೆ ಹೇಳುವುದೇ ಮರೆತೆ ನೋಡು. ನನ್ನನ್ನು ಬೆಳಗ್ಗೆಯೇ ಬಸ್ ಹತ್ತಿಸಿಬಿಡು’’
“ಸರಿಯಮ್ಮ, ಯಾವಾಗ ವಾಪಾಸು ಬರುತ್ತೀಯ?’’
“ಈಸಲ ಒಂದು ವಾರವಾದರೂ ಇರಬೇಕು ಅಂದುಕೊಂಡಿದ್ದೇನೆ. ಮಕ್ಕಳಿಗೆ ಹೇಗೂ ರಜವಿದೆಯಲ್ಲ. ಅವರಿಗೆ ಕಥೆ ಹೇಳಬೇಕು. ತಲೆಗೆ ಎಣ್ಣೆ ಕಾಣದೆ ಯಾವ ಕಾಲವಾಯಿತೋ ಏನೋ? ತಲೆಗೆ ಚೆನ್ನಾಗಿ ಎಣ್ಣೆತಟ್ಟಿ ಸ್ನಾನ ಮಾಡಿಸಬೇಕು. ಅವರಿಗೆ ಬೇಕಾದ ತಿಂಡಿ ಮಾಡಿಕೊಡಬೇಕು’’
“ಎಣ್ಣೆ ನೀರು ಹಾಕಲು ಅವರು ಒಪ್ಪಬೇಕಲ್ಲ. ಈಗಿನ ಕಾಲದ ಮಕ್ಕಳು ಹಾಗೆಲ್ಲ ಒಪ್ಪುವುದಿಲ್ಲ. ಎಷ್ಟು ದಿನ ಇರಬೇಕೆಂದು ಅನಿಸುತ್ತದೋ ಅಷ್ಟು ದಿನ ನೆಮ್ಮದಿಯಾಗಿ ಇದ್ದು ಬಾ. ಇಲ್ಲಿಯ ಚಿಂತೆ ಬೇಡ’’ ಎಂದ ಮಗ ರಾಮು.
“ನನ್ನ ಮೊಮ್ಮಕ್ಕಳು ಜಾಣರು. ನಾನು ಹೇಳಿದ್ದನ್ನು ಕೇಳುತ್ತಾರೆ. ಅಜ್ಜಿ ಅಜ್ಜಿ ಎನ್ನುತ್ತ ನನ್ನ ಹಿಂದೆಯೇ ಸುತ್ತುತ್ತಾರೆ’’
“ಸರಿಯಮ್ಮ. ನಿನ್ನ ಮೊಮ್ಮಕ್ಕಳು ನೀನು ಹೇಳಿದಂತೆಯೇ ಕೇಳಲಿ ಸಂತೋಷ’’ ನಗುತ್ತ ನುಡಿದ ರಾಮು.
ಮಾರನೇದಿನ ಸೀತಜ್ಜಿ ಖುಷಿಯಿಂದಲೇ ಮಗಳಮನೆಗೆ ಹೋಗುವ ಸಲುವಾಗಿ ಬಸ್ ಹತ್ತಿದಳು. ಬಸ್ಸಿನಲ್ಲಿ ಸೀತಜ್ಜಿ ಪಕ್ಕ ಕುಳಿತ ಹೆಂಗಸು ಕಮಲಜ್ಜಿ ಕೂಡ ತನ್ನ ಮಗಳ ಮನೆಗೆ ಹೊರಟಿದ್ದಳು. ಕಮಲಜ್ಜಿ ಸೀತಜ್ಜಿ ಇಬ್ಬರೂ ತಮ್ಮ ಮಕ್ಕಳ, ಮೊಮ್ಮಕ್ಕಳ ಬಗ್ಗೆ ಹರಟಿದರು. ಪರಸ್ಪರ ಮಾತುಕತೆಯಾಡಿದ್ದರಿಂದ ಅವರಿಗೆ ಪ್ರಯಾಣದ ಆಯಾಸವೇ ಆಗಲಿಲ್ಲ. ಸೀತಜ್ಜಿಯನ್ನು ಮನೆಗೆ ಕರೆದೊಯ್ಯಲು ಅಳಿಯ ಗೋಪಾಲ ಬಸ್ ನಿಲ್ದಾಣಕ್ಕೆ ಬಂದಿದ್ದ. ಮನೆಗೆ ಬಂದ ಸೀತಜ್ಜಿಯನ್ನು ಮಗಳು ರಾಧೆ ಆದರದಿಂದ ಸ್ವಾಗತಿಸಿ ಕಾಫಿ ತಿಂಡಿ ಕೊಟ್ಟು ಸತ್ಕರಿಸಿದಳು. ತಿಂಡಿ ತಿಂದು ಕಾಫಿ ಕುಡಿದು ಸುಧಾರಿಸಿದ ಸೀತಜ್ಜಿ ಮನೆ ನಿಶ್ಶಬ್ಧವಾಗಿರುವುದು ಕಂಡು, “ರಾಧಾ, ಮಕ್ಕಳು ಮನೆಯಲ್ಲಿ ಇಲ್ಲವೆ? ಕಾಣುತ್ತ ಇಲ್ಲವಲ್ಲ? ನಾನು ಬಂದು ಇಷ್ಟು ಹೊತ್ತಾಯಿತು’’ ಎಂದು ಕೇಳಿದಳು. ಅವರು ಮಹಡಿಮೇಲೆ ಕೋಣೆಯಲ್ಲೇ ಇದ್ದಾರೆ. ಮೂರು ಹೊತ್ತು ಮೊಬೈಲು ಹಿಡಿದು ಅದೇನೋ ಆಟವಾಡುತ್ತ ಕೂರುತ್ತಾರೆ. ಹೇಳಿದ ಮಾತು ಕೇಳುವುದೇ ಇಲ್ಲ’’ ಎಂದಳು ಮಗಳು.
ಅಜ್ಜಿ ಬಂದದ್ದು ತಿಳಿದರೂ ತನ್ನನ್ನು ನೋಡಲು ಕೆಳಗೆ ಇಳಿಯದ ಮೊಮ್ಮಕ್ಕಳ ನಡವಳಿಕೆ ಕಂಡು ಸೀತಜ್ಜಿಗೆ ಬೇಸರವಾಯಿತು. ಅವಕ್ಕೇನು ಗೊತ್ತಾಗುತ್ತೆ ಎಳೆನಿಂಬೇಕಾಯಿಗಳು ಎಂದು ಸಮಾಧಾನಿಸಿಕೊಂಡು ಮೊಮ್ಮಕ್ಕಳಿಗೆ ಚಕ್ಕುಲಿ ಕೋಡುಬಳೆ ತೆಗೆದುಕೊಂಡು ಮಹಡಿ ಹತ್ತಿ ಮೊಮ್ಮಕ್ಕಳ ಕೋಣೆಗೆ ಹೋದಾಗ, ಅಜ್ಜಿಯನ್ನು ಕಂಡ ಮೊಮ್ಮಕ್ಕಳು ಕೂತಲ್ಲಿಂದಲೇ, “ಓ ಅಜ್ಜಿ, ಯಾವಾಗ ಬಂದೆ’’ ಎಂದು ಮೊಬೈಲಲ್ಲೇ ದೃಷ್ಟಿನೆಟ್ಟು ಕೇಳಿದರು.
“ಈಗಷ್ಟೇ ಬಂದೆ ಮಕ್ಕಳಾ. ನೋಡಿ ನಿಮಗಾಗಿ ಚಕ್ಕುಲಿ ಕೋಡುಬಳೆ ತಂದಿದ್ದೇನೆ. ತಿಂದು ಹೇಗಿದೆ ಹೇಳಿ’’ ಎಂದು ಸಂಭ್ರಮದಿಂದ ಸೀತಜ್ಜಿ ಹೇಳಿದಳು.
“ಅವೆಲ್ಲ ಬೇಡ, ನಾವು ಈಗಷ್ಟೇ ಪಿಜ್ಜಾ ತಿಂದಿದ್ದೇವೆ. ಹಸಿವಿಲ್ಲ’’ ಎಂದು ರಾಹುಲ್, ರಮ್ಯಾ ಇಬ್ಬರೂ ಹೇಳಿದರು. ಸೀತಜ್ಜಿಯೂ ಒತ್ತಾಯಿಸದೆ ಕೆಳಗೆ ಇಳಿದು ಬಂದವರೇ ರಾಧೆಯನ್ನು ತರಾಟೆಗೆ ತೆಗೆದುಕೊಂಡರು. ಏನಮ್ಮ ರಾಧಾ, ನೀನು ಮಕ್ಕಳಿಗೆ ಹೊರಗಿನ ತಿಂಡಿ ಅದೇನೋ ಪಿಜ್ಜಾ ಅಂತೆ ಹಾಳುಮೂಳು ಕೊಡುತ್ತೀಯಲ್ಲ? ನಾನು ಬರುತ್ತೇನೆ ಎಂದು ಹೇಳಿರಲಿಲ್ಲವೇ ನೀನು?’’
“ಅಮ್ಮಾ, ಅವಕ್ಕೆ ಅದೇ ಪ್ರೀತಿ. ತರದೆ ಇದ್ರೆ ಗಲಾಟೆ ಮಾಡುತ್ತಾರೆ. ಅವರು ಹೇಳಿದ್ದೇ ಅವರಪ್ಪ ತಂದುಕೊಡುತ್ತಾರೆ. ನಾನೇನು ಮಾಡಲಮ್ಮ’’ ಎಂದಳು ರಾಧೆ ಅಸಹಾಯಕತೆಯಿಂದ.
ಸೀತಜ್ಜಿ ಆದಿನ ಪ್ರಯಾಣದ ಆಯಾಸದಿಂದಲೋ ಮೊಮ್ಮಕ್ಕಳ ನಿರ್ಲಕ್ಷ್ಯ ನೋಡಿ ಬೇಸರಗೊಂಡೋ ಬೇಗ ಮಲಗಿದಳು. ಮರುದಿನ ಬೆಳಗ್ಗೆ ಎದ್ದು ಮೊಮ್ಮಕ್ಕಳನ್ನು ಎಬ್ಬಿಸಿದರು.
“ಹೋಗಜ್ಜಿ ನೀನು. ಇಷ್ಟು ಬೇಗ ಎಬ್ಬಿಸುತ್ತೀಯಲ್ಲ. ನಾವಿನ್ನೂ ಮಲಗಬೇಕು. ಶಾಲೆಗೆ ರಜಾ ಇದೆ’’ ಎಂದು ಮುಸುಕು ಬೀರಿ ಮಲಗಿದರು.
“ಪುಟಾಣಿಗಳಿರಾ, ನನ್ನ ಚಿನ್ನಗಳಿರಾ ಎದ್ದೇಳಿ, ತಲೆಗೆ ಎಣ್ಣೆ ಹಾಕಿ ತಟ್ಟುತ್ತೇನೆ. ಎಣ್ಣೆ ಕಾಣದೆ ಕೂದಲೆಲ್ಲೆ ಒಣಗಿ ಬೈಹುಲ್ಲಿನಂತಾಗಿದೆ. ಎಣ್ಣೆ ಹಾಕಿ ಒಂದು ಗಂಟೆ ಬಿಟ್ಟು ಸ್ನಾನ ಮಾಡಿಸುತ್ತೇನೆ. ಏಳ್ರಪ್ಪ ಜಾಣರಲ್ವಾ ನೀವು’’ ಎಂದು ಅನುನಯದಿಂದ ಎಬ್ಬಿಸಲು ಪ್ರಯತ್ನಿಸಿದಳು.
ಅಜ್ಜಿಯ ನಯವಾದ ಮಾತಿಗೆ ಕ್ಯಾರೇ ಅನ್ನದ ಮೊಮ್ಮಕ್ಕಳೋ ಮಿಸುಕಾಡಲಿಲ್ಲ. ಮುಸುಕುಹಾಕಿದವರು ತೆಗೆಯಲೂ ಇಲ್ಲ. ಅದೇನು ಕಲೀತಾವೋ ಮಕ್ಕಳು. ದೊಡ್ಡವರಾದಂತೆ ಹೇಳಿದ್ದು ಒಂದೂ ಕೇಳಲ್ಲ ಎಂದು ಸೀತಜ್ಜಿ ಮಕ್ಕಳಿಗೆ ಎಣ್ಣೆನೀರು ಹಾಕುವ ಪ್ರಯತ್ನವನ್ನು ಕೈಬಿಡಬೇಕಾಯಿತು.
ಸೀತಜ್ಜಿ ರಾತ್ರಿ ಮೊಮ್ಮಕ್ಕಳೊಡನೆ ಮಲಗಲು ತಯಾರಿ ನಡೆಸಿದಳು. “ರಾಹುಲ್, ರಮ್ಯಾ, ನಿಮಗೆ ಇವತ್ತು ಒಳ್ಳೆಯ ಕಥೆ ಹೇಳುತ್ತೇನೆ. ನಾನೂ ಕೂಡ ಇಲ್ಲೇ ನಿಮ್ಮ ಪಕ್ಕದಲ್ಲೇ ಮಲಗುತ್ತೇನೆ’’
“ಅಯ್ಯೋ, ಅಜ್ಜಿ, ನೀನು ಕೆಳಗೇ ಮಲಗು. ನಿನ್ನ ಓಬೀರಾಯನ ಅಡುಗೂಲಜ್ಜಿ ಕಥೆ ಯಾರಿಗೆ ಬೇಕು? ನಮಗೆ ಅದೆಲ್ಲ ಬೇಡ’’ ಎಂದ ಮೊಮ್ಮಕ್ಕಳು ಅಪ್ಪ ಅಮ್ಮನ ಮೊಬೈಲು ಹಿಡಿದು ಆಡುವತ್ತ ಗಮನಕೊಟ್ಟಾಗ ಸೀತಜ್ಜಿಗೆ ಆದ ಬೇಸರ ಅಷ್ಟಿಷ್ಟಲ್ಲ.
ಮಾತಾಡದೆ ಕೆಳಗೆ ಬಂದು ಮಲಗಿದ ಸೀತಜ್ಜಿ, ಮಾರನೇ ಬೆಳಗ್ಗೆ ಎದ್ದವರೇ, “ರಾಧಾ, ನನ್ನನು ಬೆಳಗ್ಗೆಯೇ ಬಸ್ ಹತ್ತಿಸಲು ಗೋಪಾಲನಿಗೆ ಹೇಳಮ್ಮ’’ ಎಂದರು.
“ಅದೇನು ಅವಸರ ನಿನಗೆ. ಇನ್ನೂ ನಾಲ್ಕು ದಿನ ಇರು’’ ಎಂದ ಮಗಳಿಗೆ, “ಅಲ್ಲಿ ರಾಮು ಒಬ್ಬನೇ ಇದ್ದಾನೆ. ಪಾಪ ಅವನಿಗೆ ನಾನಿಲ್ಲದಿದ್ದರೆ ಕಷ್ಟ’’ ಎಂದು ನುಡಿದಳು.

೧೪-೮-೨೦೧೬ರ ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟಿತ

ಹೊಳೆನರಸೀಪುರ ತಾಲೂಕಿನ ಮಾವಿನಕೆರೆ ರಂಗನಾಥಸ್ವಾಮಿ ಬೆಟ್ಟ ಏರುವುದರ ಕಡೆಗೆ ನಮ್ಮ ಲಕ್ಷ್ಯವಿದ್ದುದು. ಮೈಸೂರಿನಿಂದ ನಾವು ೩೧ ಮಂದಿ ೨೯-೫-೨೦೧೬ರಂದು ಬೆಳಗ್ಗೆ ೭ ಗಂಟೆಗೆ ಮಿನಿ ಬಸ್ಸಿನಲ್ಲಿ ಹೊರಟೆವು. ೮ ಗಂಟೆಗೆ ಯಡತೊರೆ ಅರ್ಕೇಶ್ವರ ದೇವಾಲಯದ ಬಳಿ ಇಡ್ಲಿ ವಡೆ ಹೊಟ್ಟೆಗೆ ಇಳಿಸಿದೆವು. ಪರಸ್ಪರ ಪರಿಚಯ ಮಾಡಿಕೊಂಡೆವು. ಸುಮಾರು ಮಂದಿ ಹೊಸಬರು ಪ್ರಥಮವಾಗಿ ಚಾರಣಕ್ಕೆ ಬಂದವರಿದ್ದರು. ಅವರಿಗೆ ವಿಶೇಷ ಸ್ವಾಗತ ಕೋರಲಾಯಿತು. ಅಲ್ಲಿಂದ ಹೊರಟು ದಾರಿಯಲ್ಲಿ ಕಾಫಿ ಚಹಾ ಸೇವನೆಗೆ ಅರ್ಧ ಗಂಟೆ ವಿನಿಯೋಗವಾಯಿತು.
ಮೈಸೂರು- ಕೃಷ್ಣರಾಜನಗರ- ಭೇರ್ಯ ದಾಟಿ ಹೊಳೆನರಸೀಪುರದತ್ತ ಸಾಗಿದೆವು. ಅಲ್ಲಿಂದ ಸುಮಾರು ೧೨ಕಿಮೀ ದೂರ ಹಾಸನ ರಸ್ತೆಯಲ್ಲಿ ಸಾಗುವಾಗ ಬಲಬದಿಗೆ ಬೆಟ್ಟದಪುರ ರಂಗನಾಥಸ್ವಾಮಿ ದೇವಾಲಯದ ಮಹಾದ್ವಾರ ಕಾಣುತ್ತದೆ. ಅಲ್ಲಿಂದ ಮುಂದೆ ಸ್ವಲ್ಪದೂರದಲ್ಲೇ ದೇವಾಲಯಕ್ಕೆ ಹೋಗಲು ಮೆಟ್ಟಲುಗಳಿವೆ. ಮೆಟ್ಟಲು ಏರುವ ಮೊದಲು ಗಣಪ ನಮ್ಮನ್ನು ಸ್ವಾಗತಿಸುತ್ತಾನೆ. ನಿರಾಯಾಸವಾಗಿ ನಿರ್ವಿಘ್ನವಾಗಿ ಹತ್ತಿಬನ್ನಿ ಎಂಬ ಆಭಯನೀಡುತ್ತಾನೆ. ಮೆಟ್ಟಲುಗಳಿಗೆ ಉದ್ದಕ್ಕೂ ಕೈತಾಂಗು ಹಾಕಿದ್ದಾರೆ. ಸುಮಾರು ೬೦೦ ಪುಟ್ಟದಾದ ಮೆಟ್ಟಲುಗಳು ಹತ್ತಲು ಸುಲಭವಾಗಿವೆ. ಮೆಟ್ಟಲು ನಿರ್ಮಿಸಲು ಬಹುಶಃ ಹೆಚ್ಚು ಕಷ್ಟವಾಗಿರಲಿಕ್ಕಿಲ್ಲ. ಆದರೆ ಆ ಮೆಟ್ಟಲುಗಳ ಬದಿಯಲ್ಲಿ ದಾನಿಗಳ ಹೆಸರು ಕೆತ್ತಲು ಅಪಾರ ಶ್ರಮವಾಗಿರಬಹುದು ಎಂದು ನನ್ನ ಊಹೆ! ಪ್ರತೀಮೆಟ್ಟಲಿನಲ್ಲೂ ದಾನಿಗಳ ಹೆಸರು ಕೆತ್ತಲ್ಪಟ್ಟು ರಾರಾಜಿಸುತ್ತಿದೆ. ಇದನ್ನು ನೋಡಿದಾಗ ದಾನ ಕೊಡುವುದಿದ್ದರೆ ಎಡಗೈಗೂ ಗೊತ್ತಾಗದಂತೆ ಮಾಡು ಎಂಬ ನಾಣ್ನುಡಿ ನೆನಪಾಯಿತು!

DSCN8122

DSCN8123ಅರ್ಧಭಾಗ ಮೇಲೆಹತ್ತಿದಾಗ ಬಂಡೆಮೇಲೆ ಕಲ್ಲುಮಂಟಪ ಎದುರಾಗುತ್ತದೆ. ಅಲ್ಲಿ ಅದೊರಳಗೆ ನಿಂತರೆ ತಂಪು ತಂಪು ಕೂಲ್ ಕೂಲ್ ಎಂದು ಹಾಡು ಗುನುಗುವ ಮನಸ್ಸಾಗುತ್ತದೆ. ಅಷ್ಟು ತಂಪುಗಾಳಿ ಬೀಸುತ್ತದೆ. ಅಲ್ಲಿ ಒಂದಷ್ಟು ಹೊತ್ತು ಕುಳಿತು ಹರ್ಷಹೊಂದಿದೆವು. ಸುತ್ತಲೂ ಎಲ್ಲಿ ನೋಡಿದರೂ ದೊಡ್ಡ ಪುಟ್ಟ ಬಂಡೆಗಲ್ಲುಗಳು, ಪಾದೆಗಳು. (ಸದ್ಯ ಗಣಿಗಾರಿಕೆಯವರ ಕಣ್ಣಿಗೆ ಇದು ಕಾಣದಿದ್ದರೆ ಸಾಕು.) ಅಲ್ಲೊಂದು ಇಲ್ಲೊಂದು ಗಿಡಮರಗಳು, ಪಕ್ಷಿಗಳ ಕೂಗುಗಳು ನಮ್ಮನ್ನು ಸೆಳೆಯುತ್ತವೆ. ಬಲು ಸುಂದರ ತಾಣವಿದು. ಮೆಟ್ಟಲುಹತ್ತಿ ಮೇಲೆ ಬಂದಾಗ ಎದುರುಭಾಗ ವಿಶಾಲಮಂಟಪವಿದೆ. ಮಂಟಪದಾಟಿ ಮುಂದೆ ಸಾಗಿದಾಗ ರಂಗನಾಥ ದೇವಾಲಯ ಕಾಣುತ್ತದೆ. ದೊಡ್ಡ ಬಂಡೆಯೊಳಗೆ ನಿಂತಿರುವ ಭಂಗಿಯ ರಂಗನಾಥನ ವಿಗ್ರಹವಿದೆ. ಇನ್ನೊಂದು ಪಾರ್ಶ್ವಕ್ಕೆ ಆಂಜನೇಯನಿದ್ದಾನೆ. ಬಂಡೆಸುತ್ತಲೂ ಕಟ್ಟಡಕಟ್ಟಿ ಮುಚ್ಚಿಗೆ ಮಾಡಿದ್ದಾರೆ. ಸಾಕಷ್ಟು ಭಕ್ತಾದಿಗಳು ಅಲ್ಲಿನೆರೆದಿದ್ದರು. ದೇವಾಲಯದ ಬಳಿಗೆ ಬರಲು ಅಚ್ಚುಕಟ್ಟಾದ ರಸ್ತೆಯೂ ಇದೆ.

DSCN8235

DSCN8183

ನಾವು ಅಲ್ಲಿ ತಲಪಿದಾಗ ಒಂದು ಮದುವೆ ನಡೆಯುತ್ತಿತ್ತು. ವಧೂವರರರು ಸ್ವಲ್ಪ ವಯಸ್ಸು ಮೀರಿದಂತಿದ್ದರು. ತಾಪತ್ರಯದಿಂದ ಇಷ್ಟು ದಿನ ಮದುವೆಯಾಗಲು ಆಗದೆ ಈಗ ಸರಳ ವಿವಾಹ ಆಗುತ್ತಿದ್ದಾರೆ ಎಂದು ಭಾವಿಸಿದೆವು. ಆದರೆ ನಾವೊಂದು ವಿಷಿಷ್ಟವಾದ ಮದುವೆಗೆ ಸಾಕ್ಷಿಯಾಗುತ್ತಿದ್ದೇವೆಂದು ಆಮೇಲೆ ತಿಳಿಯಿತು. ನಿಮ್ಮ ಜೋಡಿ ಚೆನ್ನಾಗಿದೆ. ಎಂದು ವಧೂವರರಿಗೆ ರವಿ ಬಾಹುಸಾರ್ ಶುಭ ಹಾರೈಸಿದರು. ಆಗ ಅವರ ಜೊತೆಯಿದ್ದವರೊಬ್ಬರು ಈ ಮದುವೆಯ ಹಿಂದಿನ ಕಥೆಯನ್ನು ಹೇಳಿದರು. ಅವರ ಮಾತಿನಲ್ಲೇ ವಿವರಿಸುವೆ: ವರನಿಗೆ ಇದು ಮೂರನೇ ಮದುವೆ. ವಧುವಿಗೆ ಎರಡನೇ ಮದುವೆ. ವರನ ಎರಡನೇ ಹೆಂಡತಿ (ಮೊದಲಿನದರ ಬಗ್ಗೆ ಹೇಳಿಲ್ಲ ಅವರು) ಬೈಕ್ ಅಪಘಾತದಲ್ಲಿ ಮರಣಹೊಂದಿರುವರು. ಈಗಿನ ಯುವಕರು ದುಬಾರಿ ಬೆಲೆಯ ಬೈಕಿನಲ್ಲೇ ಓಡಾಡುವುದು. ಆ ಬೈಕಿನ ಹಿಂದಿನ ಸೀಟಲ್ಲಿ ಕೂತವರು ಮಸಣದ ಹಾದಿ ಹಿಡಿಯುವುದು ಶತಸಿದ್ಧ. ಹಾಗಿರುತ್ತದೆ ಅದು. ಅವರ ಮಗ ಹಟಹಿಡಿದು ಅಂಥ ಬೈಕನ್ನು ತೆಗೆಸಿಕೊಂಡು ಅಮ್ಮನನ್ನು ಕೂರಿಸಿಕೊಂಡು ಹೋಗುತ್ತಿದ್ದಾಗ ಸ್ಕಿಡ್ ಆಗಿ ತಾಯಿ ಬಿದ್ದು ತಲೆ ಒಡೆದು ಅಲ್ಲೇ ಮರಣಹೊಂದಿದಳು. ವರನ ಕಡೆಯವರು ತುಂಬ ಸ್ಥಿತಿವಂತರು. ಅವರ ಎರಡನೇ ಹೆಂಡತಿಯೂ ಶಿಕ್ಷಕಿಯಾಗಿದ್ದಳು. ಬಡ್ಡಿ ವ್ಯವಹಾರದಲ್ಲಿ ತುಂಬ ದುಡ್ಡು ಚಿನ್ನ ಮಾಡಿದ್ದರು. ಆ ಹೆಂಡತಿಯ ಕಡೆಯವರೆಲ್ಲ ಮಗನ ಸಮೇತ ಇದ್ದ ಆಸ್ತಿ ಚಿನ್ನವನ್ನು ತೆಗೆದುಕೊಂಡು ಇವರನ್ನು ಬಿಟ್ಟು ಹೋದರು.
ಈಗಿನ ಮದುವೆಯ ವಧು ಮೂಲತ ಬಳ್ಳಾರಿಯವರು. ಅವರಿಗೂ ಗಂಡ ತೀರಿಹೋಗಿದ್ದಾರೆ. ಒಂದು ಮಗುವಿದೆ. ವಧೂ ವರರಿಬ್ಬರೂ ಹಾಸನದ ಶಾಲೆಯಲ್ಲಿ ಶಿಕ್ಷಕ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ. ನಾವು ಸ್ನೇಹಿತರೆಲ್ಲ ಸೇರಿ ಅವರ ಮದುವೆ ಮಾಡಿಸುತ್ತಿದ್ದೇವೆ ಎಂದು ಹೇಳಿದರು.
ವರನ ಹೆಸರು ಪಾಷಾ, ವಧೂವಿನ ಹೆಸರು ಉಷಾ (ಇದು ಕಾಲ್ಪನಿಕ ಹೆಸರು). ದೇವಾಲಯದ ಅರ್ಚಕರು ಹಾಲುತುಪ್ಪ ಧಾರೆಯೆರೆಸುತ್ತಿದ್ದರು. ಧಾರೆಯಾಗಿ ಹಗಲಲ್ಲೇ ಆರುಂಧತಿ ನಕ್ಷತ್ರವನ್ನೂ ತೋರಿಸಿದರು. ಹಿಂದೂ ಮುಸ್ಲಿಮ್ ಬಾಂಧವ್ಯದ ಈ ಮದುವೆ ನೋಡಿ ಖುಷಿಪಟ್ಟೆವು. ವರ ಶುಭ್ರ ಬಿಳಿ ಕಚ್ಚೆಪಂಚೆ ಹಾಕಿ ವಧೂ ಜರತಾರಿ ಸೀರೆ‌ಉಟ್ಟು ಲಕ್ಷಣವಾಗಿ ಕಾಣುತ್ತಿದ್ದರು.

DSCN8207
ಅಲ್ಲಿಯ ಅರ್ಚಕರಾದ ಕೇಶವಮೂರ್ತಿಯವರು ನಮ್ಮ ಅಪೇಕ್ಷೆಮೇರೆಗೆ ಅರ್ಧಗಂಟೆ ಹಿಂದೂಧರ್ಮದ ಬಗ್ಗೆ ಹಾಗೂ ದೇವಾಲಯದ ಸ್ಥಳಪುರಾಣವನ್ನು ಸೊಗಸಾಗಿ ವಿವರಿಸಿದರು. ೮೦ ಕೋಟಿ ಜೀವರಾಶಿಯಲ್ಲಿ ಭಗವಂತ ಯಾರ್ಯಾರನ್ನು ಯಾವ ಜೀವಿಯಾಗಿ ಸೃಷ್ಟಿಸಿದನೆಂಬುದಕ್ಕೆ ಸೋದಾಹರಣವಾಗಿ ಒಂದೆರಡನ್ನು ವಿವರಿಸಿದರು. ಈಗ ನಾನು ಇಲ್ಲಿ ಪ್ರವಚನ ಕೊಡುತ್ತಿದ್ದೇನೆ. ಅದನ್ನು ಕೇಳಲು ಕೆಲವರು ಅಯ್ಯೋ ಮಂಡಿನೋವು ಕೂರಕ್ಕಾಗಲ್ಲ ಎಂದು ತಿರುಗಾಡಿಕೊಂಡು ಕೇಳುವವರನ್ನು ಶ್ವಾನವಾಗಿಯೂ, ಆಯಾಸ ಪರಿಹಾರಕ್ಕೋಸ್ಕರ ಮಲಗಿಕೊಂಡು ಕೇಳುತ್ತೇನೆ ಎನ್ನುವವರನ್ನು ಸರ್ಪವಾಗಿಯೂ, ಕೂರಲಾಗುವುದಿಲ್ಲ ನಿಂತೇ ಕೇಳುತ್ತೇನೆ ಎಂಬವರನ್ನು ಕುದುರೆಯಾಗಿಯೂ, ಭಟ್ರು ಏನೋ ವಟಗುಡುತ್ತಿದ್ದಾರೆ ಎಂದು ಕೇಳದೆಯೇ ಪರಸ್ಪರ ಮಾತಾಡುವವರನ್ನು ಮಂಡೂಕವಾಗಿಯೂ, ಗಲಾಟೆ ಮಾಡುವವರನ್ನು ಗಾರ್ದಭವಾಗಿಯೂ ಸೃಷ್ಟಿಸುತ್ತಾನೆ. ಹೀಗೆ ಹೇಳಿದಾಗ ಅದನ್ನು ಕೇಳುತ್ತಿದ್ದ ಅಜ್ಜಿಯೊಬ್ಬರು ನಿಂತಿದ್ದವರು ಕೂಡಲೇ ಕೂತರು!
೧೬೦೦ ವರ್ಷಗಳ ಹಿಂದೆ ಅಂದರೆ ನಾಲ್ಕನೆಯ ಶತಮಾನದ ಅಂತ್ಯದಲ್ಲಿ ಶ್ರಿರಂಗನಾಥ ದೇವಾಲಯ ಸ್ಥಾಪನೆಯಾಗಿದೆ. ಮೂಲ ಹೆಸರು ತಿರುವೆಂಕಟನಾಥ. ಒರಳುಕಲ್ಲಿನ ರೂಪದಲ್ಲಿ ಉದ್ಭವವಾದದ್ದೆಂದು ಪ್ರತೀತಿಯಲ್ಲಿದೆ. ಒಂದು ಮೂಲದ ಪ್ರಕಾರ ಜೀಯರು ಗುರುಗಳು ಬಂದು ಈ ಗುಹೆಯಲ್ಲಿ ತಿರುವೆಂಕಟನಾಥ ವಿಗ್ರಹ ಸ್ಥಾಪನೆ ಮಾಡಿ ಲೋಕಕಲ್ಯಾಣಾರ್ಥವಾಗಿ ಪೂಜೆ ಮಾಡುತ್ತಿದ್ದರು ಎಂಬುದು ಉಲ್ಲೇಖದಲ್ಲಿದೆ.
ಮೈಸೂರು ಅರಸರು ಸಂಸ್ಥಾನ ಸ್ಥಾಪನೆ ಮಾಡಿದಾಗ ಹೊಳೆನರಸೀಪುರದ ಸಾಮಂತರಾಜ ನರಸಿಂಹನಾಯಕ ಹೊಳೆನರಸೀಪುರದಲ್ಲಿ ಒಂದು ದೇವಾಲಯ ಕಟ್ಟಿಸಿದ. ಆಗ ಅವನಿಗೆ ಇಲ್ಲಿ ದೇವಾಲಯ ಉದ್ಭವವಾದದ್ದು ಗೊತ್ತಿರಲಿಲ್ಲ. ಅವನ ಗೋಶಾಲೆಯಿಂದ ಪ್ರತೀದಿನ ಒಂದು ಹಸು ಗೋಶಾಲೆ ಬಾಗಿಲು ತೆರೆದ ಕೂಡಲೇ ಬೆಟ್ಟದಮೇಲಿರುವ ಈ ಉದ್ಭವ ಮೂರ್ತಿಗೆ ಹಾಲು ಸುರಿಸಿ ವಾಪಾಸು ಗೋಶಾಲೆ ಸೇರಿಕೊಳ್ಳುತ್ತಿತ್ತು. ಇತ್ತ ಗೋಶಾಲೆಯಲ್ಲಿ ಅದನ್ನು ಕರೆಯುವಾಗ ಹಾಲಿನ ಬದಲು ರಕ್ತ ಬರುತ್ತಿತ್ತು. ಇದೇನು ಹೀಗೆ? ಈ ವಿಷಯವನ್ನು ನರಸಿಂಹನಾಯಕನಿಗೆ ತಿಳಿಸುತ್ತಾರೆ. ನರಸಿಂಹನಾಯಕ ಬೆಳಗ್ಗೆ ಖುದ್ದಾಗಿ ಪರೀಕ್ಷಿಸುತ್ತಾನೆ. ಬಾಗಿಲು ತೆರೆದ ಕೂಡಲೇ ಹಸು ನೇರವಾಗಿ ಉದ್ಭವ ಮೂರ್ತಿ ಬಳಿ ಹೋಗಿ ಹಾಲು ಸುರಿಸುವುದನ್ನು ಹಸುವಿನ ಹಿಂದೆಯೇ ಹೋದ ನರಸಿಂಹನಾಯಕ ಕಾಣುತ್ತಾನೆ. ಅರ್ಚಕರನ್ನು ನೇಮಿಸಿ ಶೈವಾಗಮನ ರೀತಿಯಲ್ಲಿ ಪೂಜೆಗೆ ವ್ಯವಸ್ಥೆ ಮಾಡುತ್ತಾನೆ. ಒಂದುದಿನ ನರಸಿಂಹನಾಯಕನ ಸ್ವಪ್ನದಲ್ಲಿ ಮಹಾನ್ ವಿಷ್ಣು ಬಂದು ನಾನು ವಿಷ್ಣುರೂಪದಲ್ಲಿರುವುದು. ಶೈವಾಗಮನ ಪ್ರಕಾರ ಪೂಜೆ ಮಾಡಿಸಬೇಡ ಎಂದು ಹೇಳಿದಂತಾಯಿತು. ಈ ಸ್ವಪ್ನವನ್ನು ನರಸಿಂಹನಾಯಕ ಕಡೆಗಣಿಸುತ್ತಾನೆ.
ಯಾತ್ರಿಕರಾಗಿ ವೈಷ್ಣವರು ಅಲ್ಲಿಗೆ ಯಾತ್ರಾರ್ಥ ಬಂದಾಗ ಅಲ್ಲೇ ನೆಲೆನಿಂತು ಪೂಜೆ ಮಾಡಬೇಕೆಂಬುದಾಗಿ ಅವರಿಗೆ ಸ್ವಪ್ನವಾಗಿ ಅವರು ಕಾಲಕ್ರಮೇಣ ಅಲ್ಲೇ ಇದ್ದು ಪೂಜೆ ಮಾಡುತ್ತಾರೆ. ಇತ್ತ ನರಸಿಂಹನಾಯಕ ನೇಮಿಸಿದ ಅರ್ಚಕರು ನರಸಿಂಹನಾಯಕನಿಗೆ ದೂರು ಸಲ್ಲಿಸುತ್ತಾರೆ. ನರಸಿಂಹನಾಯಕ ವೈಷ್ಣವರನ್ನು ಅರಮನೆಗೆ ಕರೆಸಿ ವಿಚಾರಿಸಿದಾಗ ಅವರು ನಾವು ದೈವಪ್ರೇರಣೆಯಿಂದಲೇ ಹೀಗೆ ಪೂಜೆ ಮಾಡುತ್ತಿರುವುದು. ದುರುದ್ದೇಶದಿಂದಲ್ಲ ಎಂದು ಹೇಳುತ್ತಾರೆ. ಆಗ ನರಸಿಂಹನಾಯಕ ಸಭೆ ಕರೆದು ನಿಮಗೆ ಯಾವ ರೀತಿಯಲ್ಲಿ ಪೂಜೆ ಆಗಬೇಕು ತಿಳಿಸಿ ಎಂದು ಊರವರ ಅಭಿಪ್ರಾಯ ಕೇಳುತ್ತಾನೆ. ನಿಮ್ಮ ಆಜ್ಞೆ ಹೇಗಿದೆಯೊ ಹಾಗೆ ನಾವು ನಡೆದುಕೊಳ್ಳುತ್ತೇವೆ ಎನ್ನುತ್ತಾರೆ. ಅದಕ್ಕೆ ನರಸಿಂಹನಾಯಕ ಸ್ವಲ್ಪದಿನ ಯಾರೂ ಪೂಜೆ ಮಾಡುವುದು ಬೇಡ. ಗುಹೆಯ ಬಾಗಿಲಿಗೆ ಸುಣ್ಣ ಗಾರೆ ಹಾಕಿ ಮುಚ್ಚಿಬಿಡಿ ಎಂದು ಆಜ್ಞಾಪಿಸುತ್ತಾನೆ. ನಾನು ದುರುದ್ದೇಶದಿಂದ ದೇವಾಲಯ ಮುಚ್ಚಿಸುತ್ತಿಲ್ಲ. ಅವನ ಮೇಲೆ ಪಂಥ ಹಾಕಿದ್ದೇನೆ. ಯಾತ್ರಾರ್ಥಿಗಳ ಪ್ರಕಾರ ವಿಷ್ಣು ರೂಪದಲ್ಲಿಯೇ ಪೂಜೆ ಮುಂದುವರಿಯಬೇಕೆಂದಾದರೆ ಇನ್ನು ೪೮ ದಿನದಲ್ಲಿ ದಶಾವತಾರದಲ್ಲಿ ರಾಮಾವತಾರದ ಪ್ರಕಾರ ಉತ್ತರದಲ್ಲಿ ಆಂಜನೇಯ ಉದ್ಭವವಾಗಲಿ, ನಾನು ಪೂಜಿಸುವ ಈಶ್ವರನೇ ಆದಲ್ಲಿ ಅವನ ಮುಂದೆ ನಂದಿ ಉದ್ಭವವಾಗಬೇಕು. ಇದಕ್ಕೆ ಎಲ್ಲ ಪ್ರಜೆಗಳು ಒಪ್ಪಿದರು. ೪೮ ದಿನ ಕಳೆಯಿತು. ಆ ೪೮ನೆಯ ದಿನ ಅರಮನೆಯಲ್ಲಿರುವವರಿಗೆ ದೊಡ್ಡ ಸಿಡಿಲು ಹೊಡೆದಂತಾಯಿತು. ಯಾರಿಗೂ ನಿದ್ರೆಯಿಲ್ಲ. ಬೆಳಗ್ಗೆ ಎದ್ದು ಬೆಟ್ಟದತ್ತ ಓಡಿದರು. ಅಲ್ಲಿ ಗುಹೆಯ ಬಾಗಿಲು ಛಿದ್ರಗೊಂಡಿದೆ. ಆ ಶಬ್ದವೇ ಸಿಡಿಲು ಹೊಡೆದಂತೆ ಕೇಳಿಸಿದ್ದು. ಉತ್ತರದಲ್ಲಿ ಆಂಜನೇಯ ಉದ್ಭವವಾಗಿದ್ದಾನೆ. ಅದನ್ನು ಕಂಡದ್ದೇ ನರಸಿಂಹನಾಯಕ, ನನ್ನಿಂದ ಸರ್ವಾಪರಾಧವಾಯಿತು. ಇನ್ನುಮುಂದೆ ಇಲ್ಲಿ ವಿಷ್ಣುರೂಪದಲ್ಲೇ ಪೂಜೆ ನಡೆಯುತ್ತದೆ ಎಂದು ಸಾರಿದ. ಹಾಗೂ ದೇವಾಲಯವನ್ನು ಸರಿಯಾಗಿ ಕಟ್ಟಿಸಿದ. ದೇವಾಲಯದ ಪೂಜಾವೇಳೆ ಬೆಳಗ್ಗೆ ಬೆಳಗ್ಗೆ ೯ರಿಂದ ೧, ಮಧ್ಯಾಹ್ನ ೨ರಿಂದ ೫ಗಂಟೆವರೆಗೆ.

DSCN8228 DSCN8227

ಮಹಾಮಂಗಳಾರತಿಯಾಗಿ ನಾವು ಅಲ್ಲಿಂದ ಹೊರಟೆವು. ಮೆಟ್ಟಲು ಇಳಿದು ಕಲ್ಲುಮಂಟಪದ ಬಳಿ ತಂಡದ ಚಿತ್ರ ತೆಗೆಸಿಕೊಂಡು ಕೆಳಗೆ ಬಂದೆವು. ಅಲ್ಲಿ ಮರದಡಿ ಕುಳಿತು (ಬಿಸಿಬೇಳೆಭಾತ್, ಮೊಸರನ್ನ, ಮದ್ದೂರುವಡೆ) ಭೋಜನ ಕಾರ್ಯ ನೆರವೇರಿಸಿದೆವು.

DSCN8259

ವೈದ್ಯನಾಥನ್, ರವಿಬಾಹುಸಾರ್, ನಾಗೇಂದ್ರಪ್ರಸಾದ್, ಉಮಾಶಂಕರ್ (ಹಾಡು, ಹಾಸ್ಯ, ಏಕಪಾತ್ರಾಭಿನಯ) ಇತ್ಯಾದಿ ಮನರಂಜನಾ ಕಾರ್ಯಕ್ರಮ ಕೊಟ್ಟರು. ನಾವು ಆಲಿಸಿ, ನಕ್ಕು ಹಗುರಾದೆವು.

ಎಣ್ಣೆಹೊಳೆ ರಂಗನಾಥಸ್ವಾಮಿಬೆಟ್ಟ

ಅಲ್ಲಿಂದ ಮೂರುಗಂಟೆಗೆ ಹೊರಟೆವು. ಹೊಳೆನರಸೀಪುರದಿಂದ ಚನ್ನರಾಯಪಟ್ಟಣ ರಸ್ತೆಯಲ್ಲಿ ಸುಮಾರು ೧೨ ಕಿಮೀ ಸಾಗಿ ಮುಂದೆ ನಾಲೆಬದಿ ಬಲಕ್ಕೆ ಹೊರಳಿ ನಾಲೆ ಏರಿ ರಸ್ತೆಯಲ್ಲೇ ಸಾಗಿ ಮುಂದೆ ಅಶ್ವತ್ಥಮರದ ಬಳಿ ಎಡಕ್ಕೆ ಸಾಗಿ ಹೋದರೆ ಎಣ್ಣೆಹೊಳೆ ರಂಗನಾಥ ದೇವಾಲಯ ತಿರುಮಲಪುರಕ್ಕೆ ಹೋಗುವ ದಾರಿ ಸಿಗುತ್ತದೆ. ದೇವಾಲಯದ ಮೇಲಕ್ಕೆ ಹೋಗಲು ಅರ್ಧ ದಾರಿಯವರೆಗೆ ಕಲ್ಲುಮಣ್ಣು ರಸ್ತೆ ಇದೆ. ವಾಹನ ಸಾಗುವುದು ಕಷ್ಟ. ನಡೆದು ಹೋಗಲು ಅರ್ಧದಾರಿ ಮೆಟ್ಟಲುಗಳಿವೆ. ಮತ್ತೆ ಕಲ್ಲುಗಳಿಂದ ಕೂಡಿದ ಬೆಟ್ಟದಲ್ಲಿ ಹತ್ತಬೇಕು. ಕಡಿದಾಗಿದೆ ಮೆಟ್ಟಲುಗಳು. ಆಗಷ್ಟೆ ಹೊಟ್ಟೆಬಿರಿಯ ಊಟ ಮಾಡಿದ ಪ್ರಭಾವ ಬೆಟ್ಟ ಏರುವಾಗ ತುಸು ಕಷ್ಟಕೊಟ್ಟಿತು. ಉಸ್ಸು ಬುಸ್ಸು ಎಂದು ಏದುಸಿರು ಬಿಡುತ್ತ ಬೆಟ್ಟ ಏರಿದೆವು. ಇದನ್ನು ಚಾರಣ ಎಂದು ಕರೆಯಲಡ್ಡಿಯಿಲ್ಲ ಅಂದರೊಬ್ಬರು. ಎಲ್ಲರೂ ಬೆಟ್ಟ ಏರಿದೆವು.
ಬೆಟ್ಟದಿಂದ ಕೆಳಗೆ ಊರು ನೋಡುವುದೇ ಚಂದ. ಹೊಲಗದ್ದೆಗಳು ಮೈಸೂರುಪಾಕಿನ ತುಂಡಿನಂತೆ ತೋರುತ್ತಿದ್ದುವು. ಆಗಸದಲ್ಲಿ ಮೋಡಗಳು ಕ್ಷಣಕೊಮ್ಮೆ ಬದಲಾವಣೆಗೊಂಡು ಚಿತ್ತಾರ ಬಿಡಿಸಿದ ದೃಶ್ಯ ಅದ್ಭುತವಾಗಿ ಕಾಣುತ್ತಿತ್ತು.
ಇಲ್ಲಿ ಪೂಜೆ ನಡೆಯುವಂತೆ ಕಾಣುವುದಿಲ್ಲ. ದೇವಾಲಯದ ಬಾಗಿಲು ತೆರೆದೇ ಇರುತ್ತದೆ. ನಾವು ಅಲ್ಲಿ ಸುಮಾರು ಹೊತ್ತು ವಿಶ್ರಮಿಸಿದೆವು. ಪ್ರತಿಭೆ ಇರುವವರ ಭಾವಗೀತೆ, ಭಕ್ತಿಗೀತೆ, ಹಾಸ್ಯ, ಮಂಕುತಿಮ್ಮನ ಕಗ್ಗ ಇತ್ಯಾದಿ ಭಾವಲಹರಿಗಳನ್ನು ಕೇಳುತ್ತ ಮೈಮರೆತೆವು. ತಂಡದ ಚಿತ್ರ ತೆಗೆಸಿಕೊಂಡೆವು. ೪.೩೦ಗೆ ಅಲ್ಲಿಂದ ಕೆಳಗೆ ಬಂದು ವಾಹನವೇರಿದೆವು. ದಾರಿಮಧ್ಯೆ ಚಹಾ ಕಾಪಿ ಸೇವನೆಯಾಗಿ ರಾತ್ರಿ ೭.೩೦ಗೆ ಮೈಸೂರು ತಲಪಿದೆವು.

DSCN8324 DSCN8270

DSCN8291 DSCN8290

DSCN8309

ವೈದ್ಯನಾಥನ್, ನಾಗೇಂದ್ರಪ್ರಸಾದ್ ಜೋಡಿ ಭಲೇಜೋಡಿ ಎಂದು ಪ್ರಸಿದ್ಧಿಯಾಗಿದೆ. ರೂ. ೫೫೦ಕ್ಕೆ ಯೂಥ್ ಹಾಸ್ಟೆಲ್ ಗಂಗೋತ್ರಿಘಟಕದ ವತಿಯಿಂದ ಈ ಚಾರಣ ಕಾರ್ಯವನ್ನು ಅಚ್ಚುಕಟ್ಟಾಗಿ ನಡೆಸಿದ್ದರು. ಅವರಿಗೆ ಧನ್ಯವಾದಗಳು.

೪) ಕಾದಿದ್ದವನ ಹೆಂಡತಿಯನ್ನು
ಕಳ್ಳ ಹೊತ್ತುಕೊಂಡೋದಂಗಾಯಿತು
ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕಾನಕಲ್ಲಟೆ ಎಂಬ ತರಕಾರಿ ಬಳ್ಳಿಯನ್ನು ಹಲಸಿನಮರಕ್ಕೆ ಅಥವಾ ಬೇರೆ ಯಾವುದೇ ಮರಕ್ಕೆ ಹಬ್ಬಿಸಿ ಬೆಳೆಸುವುದನ್ನು ಕಾಣಬಹುದು. ಅದರಿಂದ ನೆಲ್ಲಿಗಾತ್ರದ ಕಾಯಿ ಸಿಗುತ್ತದೆ. ಅದನ್ನು ಅರ್ಧ ಮಾಡಿ ಬೇಯಿಸಿ ಒಳಗಿನ ಬೀಜ ತೆಗೆದು ಅಡುಗೆಗೆ ಉಪಯೋಗಿಸುತ್ತಾರೆ. ಅಂಥ ತರಕಾರಿಯ ಗಿಡವನ್ನು ಮುಳಿಯ ವೆಂಕಟಶರ್ಮರು ನನಗೆ ಕೊಟ್ಟಿದ್ದರು. ಅದನ್ನು ನಾನು ಬೇವಿನ ಮರಕ್ಕೆ ಹಬ್ಬುವಂತೆ ಅದರ ಬುಡದಲ್ಲಿ ನೆಟ್ಟಿದ್ದೆ. ಹಾಗೂ ನಮ್ಮ ಬಲಗೈ ಬಂಟಿ ಸಿದ್ದಮ್ಮಳಿಗೆ ಅದರ ಬಗ್ಗೆ ಹೇಳಿದ್ದೆ. ಬಲು ಅಪರೂಪದ ಗಿಡ ಇದು. ರುಚಿಯಾದ ತರಕಾರಿ ಸಿಗುತ್ತೆ ಇದರಿಂದ ಎಂದೆಲ್ಲ ವರ್ಣಿಸಿ, ದಿನಾ ಇದಕ್ಕೆ ನೀರು ಹಾಕಬೇಕು. ತರಕಾರಿ ಆದರೆ ನಿನಗೇ ಕೊಡುತ್ತೇನೆ ಎಂದಿದ್ದೆ.
ಹೀಗೊಂದು ತರಕಾರಿ ಇದೆಯೆಂದು ಕೇಳಿಯೇ ಗೊತ್ತಿಲ್ಲ. ನೋಡ್ಬೇಕು ಹೇಂಗಿರುತ್ತೆ ಎಂದು ಅವಳು ಕುತೂಹಲಿಯಾಗಿದ್ದಳು. ಹಾಗೂ ಜೋಪಾನವಾಗಿ ಅದರ ಆರೈಕೆ ಮಾಡುತ್ತಿದ್ದಳು. ಗಿಡ ಬಳ್ಳಿಯಾಗಿ ಬೆಳೆದು ಹೂಬಿಟ್ಟಿತು. ಅದನ್ನು ಕಂಡದ್ದೇ ಸಿದ್ದಮ್ಮಳಿಗೆ ಬಲು ಖುಷಿ. ಹೀಗಿರಲು ಒಂದು ಬೆಳಗ್ಗೆ ಗಿಡ ನೋಡುತ್ತಾಳೆ. ಬಳ್ಳಿ ಬಾಡಿದೆ. ಅದೇಕೆ ಹೀಗಾಯಿತು? ನೀವೇನಾದರೂ ಗಿಡಕ್ಕೆ ನೋವು ಮಾಡಿದ್ದೀರ? ಎಂದು ನನ್ನನ್ನೇ ಜೋರು ಮಾಡಿದಳು. ನಾನು ನಿನ್ನ ಗಿಡ ಮುಟ್ಟಿಲ್ಲ ಎಂದೆ. ಅದರ ಬುಡ ನೋಡಿದಳು. ನೋಡಿದರೆ ಗಿಡದ ಬಳಿ ಬೇರು ಸಮೇತ ಹೆಗ್ಗಣ ಕೊರೆದಿದೆ. ಅದಕ್ಕೆ ಬಳ್ಳಿ ತುಂಡಾಗಿ ಬಿದ್ದಿದೆ. ಆಗ ಸಿದ್ದಮ್ಮಳಿಗೆ ಬಂತು ಬಲು ಕೋಪ. ಇದರ ಬಾಯಿಗೆ ಮಣ್ಣು ಹಾಕ. ಹೂ ಬಿಟ್ಟಾಗಲೇ ಕೆರೆಯಬೇಕಿತ್ತ? ಜೋಪಾನವಾಗಿ ಕಷ್ಟಬಿದ್ದು ಗಿಡಬೆಳೆಸಿ ಕಾದುಗೊಂಡಿದ್ದದ್ದು ನಾವು. ಇದು ‘ಕಾದಿದ್ದವನ ಹೆಂಡತಿಯನ್ನು ಕಳ್ಳ ಹೊತ್ತುಕೊಂಡು ಹೋದಂಗಾಯಿತು’ ನಮ್ಮ ಕಥೆ ಎಂದು ಗಾದೆ ಹೇಳಿ ನಿಟ್ಟುಸಿರು ಬಿಟ್ಟಳು. ಕಡೆಗೂ ಆ ಕಾಯಿ ಹೆಂಗಿರುತ್ತೆ ಎಂದು ನೋಡಲೂ ಆಗಲಿಲ್ಲ ಎಂದು ಬೇಜಾರುಪಟ್ಟುಕೊಂಡಳು.

೫) ಇದ್ದುದನ್ನು ಕೆಡಿಸಿಕೊಂಡ ಈರಭದ್ರ
ಪತ್ರಿಕೆ ಓದುತ್ತಿರಬೇಕಾದರೆ ಅಲ್ಲಿ ಸಿದ್ದಮ್ಮ ಇದ್ದರೆ ಕೆಲವು ವಿಷಯಗಳನ್ನು ಅವಳಿಗೆ ಓದಿ ಹೇಳುವುದಿದೆ. ಹಾಗೆ ಆ ದಿನ ಪತ್ರಿಕೆಯಲ್ಲಿ ಬಂದ ಸುದ್ದಿಯನ್ನು ಅವಳಿಗೆ ಹೇಳಿದೆ. ಈಗ ಗ್ಯಾಸ್ ಸಿಲೆಂಡರನ್ನು ಬೇರೆ ಕಂಪೆನಿಗೆ ಬದಲಾಯಿಸಿಕೊಳ್ಳಬಹುದಂತೆ ಎಂದೆ.
ಅಂದರೆ ಹೇಗವ್ವ? ಎಂದಳು
ಗ್ಯಾಸ್ ಸರಬರಾಜು ಮಾಡುವ ಬೇರೆ ಬೇರೆ ಕಂಪೆನಿಗಳಿವೆ. ಉದಾಹರಣೆಗೆ ಈಗ ನಿನ್ನದು ಹಿಂದೂಸ್ಥಾನ್ ಕಂಪೆನಿಯದಾದರೆ ನನ್ನದು ಇಂಡೇನ್ ಕಂಪೆನಿಯದ್ದು ಎಂದಿಟ್ಟುಕೊಳ್ಳೋಣ. ನಿನಗೆ ಹಿಂದೂಸ್ಥಾನ್ ಕಂಪೆನಿಯವರ ಗ್ಯಾಸ್ ಸರಬರಾಜು ಸರಿಯಾಗಿ ಮಾಡುತ್ತಿಲ್ಲ ಎಂದೆನಿಸಿದರೆ ಬೇರೆ ಇಂಡೇನ್ ಕಂಪೆನಿಯದ್ದೋ ಇಲ್ಲ ಭಾರತ್ ಕಂಪೆನಿಯದ್ದಕ್ಕೋ ಬದಲಾಯಿಸಿಕೊಳ್ಳಬಹುದು ಎಂದು ವಿವರಿಸಿದೆ. ಬದಲಾಯಿಸುತ್ತೀಯ? ಈಗ ಇರುವ ಕಂಪೆನಿಯವರದು ಸರಿಯಾಗಿ ಗ್ಯಾಸ್ ಸಿಲೆಂಡರ್ ಕೊಡಲ್ಲ, ತುಂಬದಿನ ಮಾಡುತ್ತಾರೆ ಎಂದಿದ್ದೀಯಲ್ಲ. ಬೇಕಾದರೆ ಬದಲಾಯಿಸಿಕೊ. ಒಳ್ಳೆ ಅವಕಾಶವಿದೆ ಎಂದು ಕೇಳಿದೆ.
ಅಯ್ಯೋ, ಬೇಡಪ್ಪ ಅಂತ ಉಸಾಬರಿ. ಈಗ ಇರುವುದನ್ನು ಕಳೆದುಕೊಂಡು ಮತ್ತೆ ‘ಇದ್ದುದನ್ನೂ ಕೆಡಿಸಿಕೊಂಡ ಈರಭದ್ರ’ನಂತಾಗುವುದು ಬೇಡ ಎಂಬ ಗಾದೆಯೊಂದಿಗೆ ಮಾತು ಮುಗಿಸಿ ಸರಸರನೆ ನೆಲ ಸಾರಿಸಿದಳು.

೬) ಅತ್ತೆ ಮಾವನಿಗೆ ಲೆಕ್ಕ ಕೊಡಬೇಕಾ?

ಸಿದ್ದಮ್ಮ ಎರಡು ದಿನ ಸೊಂಟನೋವು ಎಂದು ಕೆಲಸಕ್ಕೆ ಬರಲಿಲ್ಲ. ಮಾರನೇ ದಿನ ನೋವು ಕಡಿಮೆಯಾಗದಿದ್ದರೂ ಕೆಲಸಕ್ಕೆ ಬಂದಳು. ಅವಳು ಬಗ್ಗಿ ಕೂತು ಮೊಣಕಾಲೂರಿ ನೆಲ ಒರೆಸುವುದು. ಸೊಂಟನೋವು ಹೆಚ್ಚಾದೀತು ಬಗ್ಗಿ ನೆಲ ಒರೆಸಬೇಡ ಎಂದು ಹೇಳಿದೆವು. ಇವತ್ತು ಕೋಲಿನಿಂದ ನೆಲ ಒರೆಸು ಎಂದು ಅವಳ ಕೈಗೆ ಕೋಲು ಹಿಡಿಸಿದೆವು. ಇದರಿಂದ ಎಷ್ಟು ಸುಲಭ ಗೊತ್ತ ಒರೆಸುವುದು. ಇನ್ನುಮುಂದೆ ಕೋಲಿನಿಂದಲೇ ನೆಲ ಒರೆಸು ಎಂದು ಸಲಹೆ ಕೊಟ್ಟೆವು. ನಮ್ಮ ಒತ್ತಾಯಕ್ಕೆ ಮಣಿದು ಕೈಗೆ ಕೋಲು ಹಿಡಿದಳು. ಸ್ವಲ್ಪ ಹೊತ್ತು ಬಿಟ್ಟು ನೋಡುತ್ತೇನೆ. ಕೋಲು ಮೂಲೆಯಲ್ಲಿ ಒರಗಿ ನಿಂತಿದೆ. ಸಿದ್ದಮ್ಮ ಎಂದಿನ ಹಾಗೆ ಮೊಣಕಾಲೂರಿ ನೆಲ ಒರೆಸುತ್ತ ಇದ್ದಾಳೆ. ಎರಡು ಕೋಣೆಯನ್ನು ಕಷ್ಟಪಟ್ಟು ಕೋಲಿನಿಂದ ಒರೆಸಿದಳಂತೆ. ಕೋಲಿನಿಂದ ಒರೆಸಲು ಸರಿ ಆಗುವುದೇ ಇಲ್ಲ. ಅದೇನು ಚಂದ ಹಾಗೆ ಒರೆಸುವುದು ಚೊಕ್ಕಟವಾಗುವುದಿಲ್ಲ ಎಂದಳು. ನಿಧಾನಕ್ಕೆ ಒರೆಸುತ್ತೇನೆ. ಇದೇ ಸರಿ ಎಂದು ಸಮಜಾಯಿಸಿ ನೀಡಿದಳು. ಈ ಮಾತುಕತೆ ನಮ್ಮಲ್ಲಿ ನಡೆಯುತ್ತಿರಬೇಕಾದರೆ ನಮ್ಮತ್ತೆ ಅಲ್ಲಿಗೆ ಬಂದರು. ಮಾತು ಸಾಕು. ಹೊತ್ತಾಗುತ್ತಲ್ಲ ನಿನಗೆ ಮನೆಗೆ ಹೋಗಲು ಎಂದರು. ಆಗಲಿ. ಅದಕ್ಕೇನಂತೆ. ನಾನೇನು ಅತ್ತೆಮಾವನಿಗೆ ಲೆಕ್ಕ ಕೊಡಬೇಕಾ? ಎಷ್ಟೆ ಹೊತ್ತಾಗಲಿ. ಕೆಲಸ ಮುಗಿದಾಗುವಾಗ ನನ್ನ ಪಾಡಿಗೆ ಮನೆಗೆ ಹೋಗುತ್ತೇನೆ ಎಂದಳು.
ಅವಳು ಹೇಳಿದ ‘ನಾನೇನು ಅತ್ತೆ ಮಾವನಿಗೆ ಲೆಕ್ಕ ಕೊಡಬೇಕಾ’ ಎಂಬ ಗಾದೆ ಮಾತು ನನ್ನ ಕುತೂಹಲ ಕೆರಳಿಸಿತು. ಗಾದೆಯ ವಿವರ ಹೇಳು ಎಂದು ಭಿನ್ನವಿಸಿಕೊಂಡೆ. ಮನೆಯಲ್ಲಿ ಅತ್ತೆಮಾವ ಇದ್ದು, ನಾನೇನಾದರೂ ತಡವಾಗಿ ಮನೆಗೆ ಹೋದರೆ, ‘ಎಲ್ಲೋಗಿದ್ದೆ? ಇಷ್ಟು ಹೊತ್ತಾಯಿತಲ್ಲ? ಏನು ಮಾಡಿದೆ? ನಿನಗೆ ಹೇಳುವವರು ಕೇಳುವವರು ಯಾರೂ ಇಲ್ಲಾಂತ ಮಾಡಿದ್ದೀಯ? ಅಂತೆಲ್ಲ ಪಂಚಾಯತಿಕೆ ಕೇಳುತ್ತಾರಲ್ಲ. ನನಗೇನು ಅತ್ತೆ ಮಾವ ಇಲ್ಲವಲ್ಲ. ಅದಕ್ಕೆ ಹಾಗಂದೆ’ ಎಂದು ವಿವರಿಸಿದಳು. ನಮ್ಮತ್ತೆ ಇದ್ದಾಗ ಎಷ್ಟು ಕಾಟ ಕೊಟ್ಟರೂ ಅಂದರೆ ಅದನ್ನು ನಿಮಗೆ ಹೇಳಿದರೆ ಒಂದು ಕಾದಂಬರಿಯೇ ಬರೆದೀರಿ ನೀವು ಎಂದು ಹೇಳುತ್ತ ನೆಲ ಒರೆಸುವ ಕೆಲಸ ಮುಗಿಸಿದಳು.

ವಿಶ್ವವಾಣಿಯಲ್ಲಿ ಪ್ರಕಟಿತ

ಮೈಸೂರಿನ ವಾರ್ತಾಭವನದ ಬಳಿಯಿಂದ ನಾವು ೨೨ ಮಂದಿ ಸಣ್ಣ ಬಸ್ಸಿನಲ್ಲಿ ೨೮-೨-೨೦೧೬ರಂದು ಬೆಳಗ್ಗೆ ೬.೩೦ ಗಂಟೆಗೆ ವಾಡೆ ಮಲ್ಲೇಶ್ವರದ ಕಡೆಗೆ ಹೊರಟೆವು. ಮೈಸೂರು ಬೆಂಗಳೂರು ದಾರಿಯಲ್ಲಿ ಸಾಗಿ ಚನ್ನಪಟ್ಟಣದ ಬಳಿ ಬಲಕ್ಕೆ ಹೊರಳಿ ಹಲಗೂರು ಮಾರ್ಗವಾಗಿ ಮುಂದುವರಿದು ಕೋಡಂಬಳ್ಳಿ ಕೆರೆ ಏರಿ ಮೇಲೆ ಸಾಗಿದೆವು. ಕೋಡಂಬಳ್ಳಿ ಕೆರೆ ನೀರು ತುಂಬಿ ಭರ್ತಿಯಾಗಿದೆ. ಈ ವರ್ಷ ಶಿಂಷಾ ನದಿಯಿಂದ ಈ ಕೆರೆಗೆ ನೀರು ಹರಿಸಿದ್ದಾರೆ. ಕೆರೆ ಏರಿಯ ರಸ್ತೆಗೆ ತಡೆಗೋಡೆ ಇಲ್ಲ. ರಸ್ತೆಯೂ ಕಿರಿದಾಗಿ ಅಪಾಕಾರಿಯಾಗಿದೆ. ತುಸು ಎಚ್ಚರ ತಪ್ಪಿದರೂ ವಾಹನ ಕೆರೆಗೆ ಆಹುತಿಯಾಗುವ ಪರಿಸ್ಥಿತಿ. ಕೋಡಂಬಳ್ಳಿ ದಾಟಿ ಮುಂದೆ ಬ್ಯಾಡರಹಳ್ಳಿ ತಲಪಿ ವಾಡೆ ಮಲ್ಲೇಶ್ವರ ಬೆಟ್ಟದ ಬುಡಕ್ಕೆ ತಲಪಿದೆವು. ಅಲ್ಲಿರುವ ಕೆರೆಯಲ್ಲಿರುವ ತಾವರೆ ಹೂ ನಮ್ಮನ್ನು ಸ್ವಾಗತಿಸಿತು.

DSCN7578

DSCN7580

DSCN7711
ಅಲ್ಲಿ ಇಡ್ಲಿ, ಬರ್ಫಿ ಸೇವನೆಯಾಗಿ ನಮ್ಮ ನಮ್ಮ ಪರಿಚಯ ಮಾಡಿಕೊಂಡೆವು. ಸ್ಥಳೀಯರಾದ ರಾಜ ನಮಗೆ ದಾರಿ ತೋರಲು ಸಜ್ಜಾಗಿ ಬಂದಿದ್ದರು. ಬೆಳಗ್ಗೆ ೯.೩೦ಗೆ ನಾವು ಅವರ ಹಿಂದೆ ವಾಡೆ ಮಲ್ಲೇಶ್ವರ ಬೆಟ್ಟ ಏರಲು ನಡೆದೆವು. ಅಂಥ ದೊಡ್ಡ ಬೆಟ್ಟವಲ್ಲ. ಬೇಗ ಹೋಗಿ ಬಂದು ಪಕ್ಕದ ಸಿದ್ದೇಶ್ವರ ಬೆಟ್ಟ ಏರಬಹುದು ಎಂದು ಸಂಘಟಕರು ಹೇಳಿದ್ದರು. ಕುರುಚಲು ಸಸ್ಯಗಳಿರುವ ಕಾಡು ದಾರಿ. ರಾಜ ಮುಂದೆ ಹೋಗಿ ಹುಲ್ಲು ಸವರಿ ನಮಗೆ ದಾರಿ ಸುಗಮಗೊಳಿಸಿದರು. ಪ್ರಾಣಿಗಳು ಓಡಾಡುವ ದಾರಿ ಆನೆ ಅಲ್ಲೆಲ್ಲ ಸಾಕಷ್ಟು ಇವೆಯಂತೆ. ಅದರ ಕುರುಹಾಗಿ ನಮಗೆ ಅಲ್ಲಲ್ಲಿ ಅದರ ಲದ್ದಿ ದರ್ಶನವಾಯಿತು! ಹಾಗೂ ಆನೆ ನಾಡಿಗೆ ಬರದಂತೆ ಬೆಟ್ಟದ ಸುತ್ತ ಅಗಳು  ತೋಡಿದ್ದರು. ಅದೇನೂ ಅಂತ ಆಳವಿರಲಿಲ್ಲ. ಆ ಕಣಿವೆ ದಾಟುವುದು ಆನೆಗೇನೂ ಕಷ್ಟವಲ್ಲ.
ದಾರಿಯಲ್ಲಿ ದೊಡ್ಡಬಂಡೆಗಳು, ಕಲ್ಲುಬಂಡೆಗಳು ಎದುರಾಗುತ್ತದೆ. ಅಲ್ಲೊಂದು ಇಲ್ಲೊಂದು ಮರ ಬಿಟ್ಟರೆ, ಒಣಗಿದ ಹುಲ್ಲು ಇರುವ ಬೋಳು ಸ್ಥಳವೆಂದೇ ಹೇಳಬಹುದು. ಬಿಸಿಲಿಗೆ ಬೆವರು ಧಾರಾಕಾರವಾಗಿ ಇಳಿಯಿತು. ಕೊಂಡೋದ ನೀರು ಬಲುಬೇಗ ಖಾಲಿಯಾಯಿತು. ಕಿತ್ತಳೆ, ಸೌತೆಕಾಯಿ ಕ್ಷಣದಲ್ಲಿ ಉದರ ಸೇರಿತು. ಆಗ ಹುಟ್ಟಿತು ನವ್ಯ ಕಾವ್ಯ! ಅಲ್ಲಲ್ಲ ನವ್ಯ ಗದ್ಯ!

ಬಿರು ಬಿಸಿಲಲ್ಲಿ ಚಾರಣ ಹೋಗ್ಬಾರ್ದು ರಿ ಹೋಗ್ಬಾರ್ದು
ಮೈಮುಖವೆಲ್ಲ ಸುಟ್ಟೋಗ್ತದೆ ರಿ ಸುಟ್ಟೋಗ್ತದೆ
ಕೊಂಡೋದ ನೀರೆಲ್ಲ ಬಲುಬೇಗ ಖಾಲಿಯಾಗ್ತದೆ ರಿ ಖಾಲಿಯಾಗ್ತದೆ
ಬೆವರು ದಾರಾಕಾರ ಇಳಿದೋಗ್ತದೆ ರಿ ಇಳಿದೋಗ್ತದೆ
ನಡೆವಾಗ ಬಲುಬೇಗ ಸುಸ್ತಾಗ್ತದೆ ರಿ ಸುಸ್ತಾಗ್ತದೆ
ಚಾರಣದ ಹುಚ್ಚಿರುವವರಿಗೆಲ್ಲ ಈ ಬಿಸಿಲು ಮಳೆ ಚಳಿ ಲೆಕ್ಕವಲ್ಲ
ಬಿಸಿಲಿಗೆ ತುಂಬುತೋಳಿನ ಅಂಗಿ ಧರಿಸಬೇಕು
ತಲೆಗೆ ಟೋಪಿ ಹಾಕಬೇಕು
ಸಾಕಷ್ಟು ನೀರು ಒಯ್ಯಬೇಕು
ಇಷ್ಟು ಮುಂಜಾಗ್ರತೆ ವಹಿಸಬೇಕು
ಆಗ ಬಿರುಬಿಸಿಲಲ್ಲೂ ಚಾರಣ ಹೋಗುವುದೇನೂ ಕಷ್ಟವಲ್ಲ

20160229_112416

ಅಲ್ಲಲ್ಲಿ ಕೂತು ವಿಶ್ರಮಿಸಿ ನೀರು ಕುಡಿದು ಮುಂದೆ ಸಾಗಿದೆವು. ‘ನಿಧಾನಕ್ಕೆ ಬನ್ನಿ. ಒಟ್ಟಿನಲ್ಲಿ ನಿಮಗೆ ಟೈಮ್ ಪಾಸ್ ಆದರೆ ಆಯಿತಲ್ಲ. ಎಲ್ಲ ಕಡೆ ಕರೆದುಕೊಂಡು ಹೋಗುತ್ತೇನೆ’ ಎಂದು ಆಗಾಗ ರಾಜ ಹೇಳುತ್ತಿದ್ದರು! ನಡೆಯಲು ಕಷ್ಟಪಡುವ ಕೆಲವರಿಗೆ ರಾಜ ಬಿದಿರು ದೊಣ್ಣೆ ಕಡಿದು ಕೊಟ್ಟರು. ಅಲ್ಲಲ್ಲಿ ಕುರುಚಲು ಹುಲ್ಲಿಗೆ ಬೆಂಕಿ ಹಾಕಿದ್ದರು. ಅದೇ ದಾರಿಯಲ್ಲಿ ನಡೆದೆವು. ಚಪ್ಪಲಿ ಧರಿಸಿ ಬಂದವರ ಕಾಲಂತೂ ಕರ್ರಗೆ ಮಿಂಚುತ್ತಿತ್ತು! ಬಿಳಿಬಣ್ಣದ ಪ್ಯಾಂಟ್ ಧರಿಸಿ ಬಂದವರು ಆ ಪ್ಯಾಂಟ್ ತೊಳೆಯುವ ಬಗೆ ಹೇಗೆ ಎಂದು ಚಿಂತಿಸಿದರು. ಸಾಬೂನಿನ ಕಂಪೆನಿಯವರಿಗೆ ಈ ಪ್ಯಾಂಟ್ ಕೊಟ್ಟು ಕರೆ ಹೋಗಿಸಿ ಕೊಡಿ ಎಂದು ಚಾಲೆಂಜ್ ಮಾಡಬಹುದು ಎಂಬ ಸಲಹೆ ಬಂತು!

DSCN7591

DSCN7596

ಅಂತೂ ೧೧.೩೦ಗೆ ವಾಡೆ ಮಲ್ಲೇಶ್ವರ ಬೆಟ್ಟ ಹತ್ತಿದೆವು. ಅಲ್ಲಿಂದ ನೋಡಿದರೆ ಸುತ್ತಲೂ ಬೆಟ್ಟಗಳ ಸಾಲು ಸಾಲು ಕಣ್ಮನ ಸೆಳೆಯುತ್ತವೆ. ಎತ್ತರದ ಕಬ್ಬಾಲೆ ದುರ್ಗಾ, ಭೀಮನಕಿಂಡಿ, ಇತ್ಯಾದಿ ಬೆಟ್ಟಗಳು ಮುಂದಿನ ಸಲ ಇಲ್ಲಿಗೂ ಬನ್ನಿ ಎಂದು ನಮ್ಮನ್ನು ಕೈಬೀಸಿ ಕರೆದಂತೆ ಭಾವಿಸಿದೆವು! ಆಗಲೇ ಆ ಬೆಟ್ಟಗಳನ್ನೆಲ್ಲ ಹತ್ತಬೇಕು ಎಂದು ಮನಸ್ಸು ಲೆಕ್ಕ ಹಾಕಲು ಸಿದ್ಧತೆ ಮಾಡಲು ತೊಡಗುತ್ತದೆ! ಯಾವಗಲಾದರೂ ಆ ಬೆಟ್ಟಗಳಿಗೆ ಕರೆದುಕೊಂಡು ಹೋಗಿ ಎಂದು ನಾಗೇಂದ್ರಪ್ರಸಾದರಿಗೆ ಅರಿಕೆ ಮಾಡಿಕೊಂಡೆವು.

DSCN7598

DSCN7660
ವಾಡೆಮಲ್ಲೇಶ್ವರ ಬೆಟ್ಟದಲ್ಲಿ ದೊಡ್ಡನೆತ್ತಿ ಚಿಕ್ಕನೆತ್ತಿ ಎಂಬ ಎರಡು ಬೆಟ್ಟಗಳಿವೆ. ದೊಡ್ಡನೆತ್ತಿ ಏರಿದ ಮೇಲೆ ಚಿಕ್ಕನೆತ್ತಿಗೆ ಇಳಿದೆವು. ಅಲ್ಲಿ ಸ್ವಲ್ಪ ಹೊತ್ತು ವಿರಮಿಸಿದೆವು. ಅಲ್ಲಿ ಆರ್ಕಿಡ್ ಹೂವೊಂದು ಅರಳಿತ್ತು. ಅದು ಗೋಪಕ್ಕನ ಕಣ್ಣಿಗೆ ಕಂಡಿತು. ನಾವು ಅದನ್ನು ಕ್ಯಾಮರಾಕಣ್ಣಲ್ಲಿ ಸೆರೆಹಿಡಿದು ಭದ್ರಪಡಿಸಿಕೊಂಡೆವು. ಎಂಥ ಚಂದದ ಹೂ ಅದು. ಕಿವಿಯೋಲೆಯಂಥ ನಮೂನೆಯಲ್ಲಿತ್ತು. ಒಂದು ಗಿಡದಲ್ಲಿ ಅರಸಿನ ಬಣ್ಣದ ಒಂದೇ ಒಂದು ಹೂ ಅರಳಿ ನಮ್ಮನ್ನು ಸ್ವಾಗತಿಸಿತ್ತು. ಆ ಹೂ ನೋಡಿದಾಗ ಎಂಥ ಚಂದದ ಹೂ ಅರಳಿದೆ. ನೋಡುವವರೇ ಇಲ್ಲ ಈ ಕಾಡಿನಲ್ಲಿ ಅನಿಸಿತು. ಬಿಳಿಗೆರೆ ಕೃಷ್ಣಶಾಸ್ತ್ರಿಗಳು ಬರೆದ ಯೇಗ್ದಾಗೆಲ್ಲ ಐತೆ ಪುಸ್ತಕದಲ್ಲಿ ಮೂಕೂಂದೂರು ಸ್ವಾಮಿಗಳು ಕಾಡು ಹೂಗಳನ್ನು ಕಂಡು ಹೇಳಿದ ಮಾತುಗಳು ಆ ಸಂದರ್ಭದಲ್ಲಿ ನೆನಪಾದವು. (ಆಧ್ಯಾತ್ಮದ ಅನುಭವ ದಕ್ಕಿಸಿಕೊಳ್ಳಲು ಯೇಗ್ದಾಗೆಲ್ಲ ಐತೆ ಪುಸ್ತಕ ಅವಶ್ಯ ಓದಬೇಕು) “ಈಗ್ಗಳಪ್ಪ! ಈಕೆ ನೋಡಪ್ಪ! ಏನ್ ಪಸಂದ್ ಐದಾಳೆ ಈಯಮ್ಮ ಓಡಿ ಹೋಗಲ್ಲ. ಒಳ್ಳೆ ನಿಧಾನವಂತೆ. ನೋಡು ಹತ್ರಾನೆ ಬಾ ಅಂತ ತಲೆ ತೂಗಿ ಕರೀತಾ ಅವ್ಳೆ. ಎಂದು ನುಡಿದು ಹೂ ಹತ್ತಿರ ಹೋದರಂತೆ ಸ್ವಾಮಿಗಳು. ಮತ್ತೆ ಮಾತಾಡುತ್ತ, ಎಂಥ ಸೋಜಿಗ! ಅಲ್ಲಾ ಏನ್ ಚೆಂದೊಳ್ಳಿ ಚೆಲುವೆ ನೀನು! ಇಲ್ಲಿ ಬಂದು ಒಬ್ಳೇ ಕೂತಿದ್ದೀಯಲ್ಲ! ಈ ಕಾಡ್ನಾಗಿದ್ರೆ ಯಾರ್ ನೋಡ್ತಾರೆ! ನಿನ್ನ ಅಂದಚಂದ ಎಲ್ಲನಿರಾವರ್ತ, ಯಾವುದಾದರೂ ಊರ ಮುಂದೆ ಇದ್ರೆ ನಾಲ್ಕು ಜನ ನೋಡ್ಯಾರು,ಮುದ್ದಾಡ್ಯಾರು, ಕೊಂಡಾಡ್ಯಾರು, ಇನ್ನು ನಾಲ್ಕು ಜನಕ್ಕೆ ಹೇಳ್ಯಾರು. ‘ನಮ್ಮೂರಾಗೆ ಚೆಲುವಕ್ಕ ಐದಾಳೆ, ಬಂದು ನೋಡಿ’ ಅಂತ. ಏನ್ ಚಂದ ಇದ್ರೇನು? ಬುದ್ಧಿ ಇಲ್ಲ ನಿನಗೆ. ಅಡವಿ ಸೇರಿದ್ದೀಯ! ಹಾಗೆಂದು ಹೂಗಿಡದ ಬಳಿ ಹೋಗಿ ಏನೋ ಕೇಳಿಸಿಕೊಂಡವರಂತೆ, ಆ! ಏನಂದೆಮ್ಮ? ಓಹೋಹೋ! ಹೌದು, ನಿನ್ನ ಮಾತು ಸರಿ ಕಣಕ್ಕ, ಒಪ್ಪಲೇಬೇಕು. ಕೇಳಿದೇನಪ್ಪಾ ನಮ್ಮವ್ವ ಹೇಳಿದ್ದು! ‘ನಾನು ಊರಾಗಿದ್ರೆ ಜನ ನನ್ನನ್ನ ಹಿಂಗೇ ಉಳೀಗೊಡುತಿದ್ರಾ? ಕಿತ್ತು ಹೊಸಗಿ ಸಾಯಿಸಿ ಬುಡ್ತಾರೆ’ ಅಂತಾಳೆ. ನಿಜ ಅವಳಮಾತೇ ಸರಿ. ಕಣ್ಣಿಗೆ ಕಂಡದ್ದನ್ನೆಲ್ಲ ಮನುಷ್ಯ ತನ್ನ ಸುಖಕ್ಕೆಂತ ಹಾಳು ಮಾಡ್ತಾನೆ. ಹಾಳು ಮಾಡೋದನ್ನ ಕಲಿತು ತಾನೂ ಹಾಳಾಗ್ತಾನೆ!. ಎಷ್ಟು ಸತ್ಯ ಈ ಮಾತು ಎಂದೆನಿಸಿತು.

DSCN7645

DSCN7663

DSCN7669
ನಿಮ್ಮನ್ನು ಇನ್ನೊಂದು ದಾರಿಯಲ್ಲಿ ಬೆಟ್ಟ ಇಳಿಸುತ್ತೇನೆ. ಬಂದದಾರಿಯಲ್ಲೇ ಬೇಡ. ಒಟ್ಟಿನಲ್ಲಿ ನಿಮಗೆ ತಿರುಗಾಟ ಆದರೆ ಆಯಿತಲ್ಲ. ಒಂದೂವರೆ ಘಂಟೆಯೊಳಗೆ ನಿಮ್ಮನ್ನು ಬಸ್ಸಿನ ಬಳಿ ತಲಪಿಸಿದರೆ ಸಾಕಲ್ಲ. ನಿಮಗೆ ಟೈಮ್ ಪಾಸ್ ಆಗುತ್ತದೆ. ಎಂದು ಹೇಳಿದ ರಾಜ ಅಲ್ಲಿಂದ ಮುಂದೆ ಮುಂದೆ ಕರೆದೊಯ್ದರು. ಮುಂದೆ ದಾರಿಯೇ ಸರಿ ಇಲ್ಲ. ಒಣಹುಲ್ಲು ಸಾಕಷ್ಟು ಬೆಳೆದಿತ್ತು. ಸರಸರ ಮುಂದೆ ನಡೆದ ರಾಜ ನಮಗೆ ಕಾಣದಾದಾಗ, ರಾಜ, ಓ ರಾಜ ಎಂದು ಕೂಗು ಹಾಕುತ್ತಿದ್ದೆವು. ಇಲ್ಲೇ ಇದ್ದೀನೇಳಿ, ನಿಧಾನವಾಗಿ ಬನ್ನಿ. ಎಲ್ಲೂ ಹೋಗಿಲ್ಲ ಎಂದು ಪ್ರತಿಕ್ರಿಯಿಸಿ ನಗುತ್ತ ನಿಲ್ಲುತ್ತಿದ್ದರು ರಾಜ.
ಸಣ್ಣಬೆಟ್ಟವೆಂದು ಕರೆ ತಂದ ರಾಜ ನಮ್ಮನ್ನು ಸಾಕಷ್ಟು ನಡೆಸಿದ್ದರು. ಎಷ್ಟು ನಡೆದರೂ ಬಸ್ಸಿನ ಸ್ಥಳ ಸಿಗುವುದು ಕಾಣುವುದಿಲ್ಲ. ಅಂತೂ ನಡೆಸಿ ನಡೆಸಿ ದೊಡ್ಡ ಬಂಡೆ ಇರುವ ಕಡೆ ಕರೆತಂದರು. ಆ ಬಂಡೆ ನೋಡಿದ್ದೇ ಎಲ್ಲರ ಕೈ ಕಾಲು ನಡುಗಲು ತೊಡಗಿತು. ಈ ಬಂಡೆ ಇಳಿಯಲು ಎಲ್ಲರಿಗೂ ಸಾಧ್ಯವಿಲ್ಲ ರಾಜ ಎಂದದ್ದಕ್ಕೆ, “ಏಕೆ ಸಾಧ್ಯವಿಲ್ಲ? ಕುರಿಮೇಕೆಗಳೇ ಸಲೀಸಾಗಿ ಸರಸರ ಇಳಿಯುತ್ತವೆ. ನಮಗೆ ಸಾಧ್ಯವಿಲ್ಲವೆ?’’ ಎಂದ ರಾಜ ಕ್ಷಣಾರ್ಧದಲ್ಲಿ ಸರಸರ ಬಂಡೆ ಇಳಿದು ಕೆಳಗೆ ತಣ್ಣಗೆ ಕುಳಿತೇ ಬಿಟ್ಟರು! ರಾಜ ಇಳಿದದ್ದು ನೋಡಿ ನಾವು ಕೆಲವರು ಸ್ಫೂರ್ತಿಗೊಂಡು ಕುರಿಮೇಕೆಗಳಿಂದ ನಾವೇನು ಕಮ್ಮಿ ಇಲ್ಲ ಎಂದು ಧೈರ್ಯಮಾಡಿ ಬಂಡೆ ಇಳಿದೆವು! ಮತ್ತೆ ಕೆಲವರು ನಿಧಾನವಾಗಿ ಬಂಡೆ ಇಳಿದರು. ರಾಜ ಓ ರಾಜ ಇಳಿಯಲಾಗುತ್ತಿಲ್ಲ ಕೈ ಹಿಡಿದು ನಡೆಸೆನ್ನನು ಎಂಬ ಆರ್ತ ಮೊರೆ ಮೇಲಿಂದ ಕೇಳಿ ಬಂದಾಗ ರಾಜ ನಗುತ್ತ ಸರಸರ ಬಂಡೆ ಏರಿ ಅವರ ಬ್ಯಾಗ್ ಹೆಗಲಿಗೇರಿಸಿ ಕೈ ಹಿಡಿದು ಇಳಿಸಿದರು. ಮತ್ತೆ ಕೆಲವರು ಬಾಲ್ಯದಲ್ಲಿ ನಾವು ಜಾರುಬಂಡೆಯಾಡಿಲ್ಲ ಎಂಬ ದುಃಖ ಮರೆಯಲು ಈ ಬಂಡೆಯಲ್ಲಿ ಆ ಆಸೆ ನೆರವೇರಿಸಿಕೊಂಡರು ಹಾಗೂ ಹಾಕಿದ್ದ ಪ್ಯಾಂಟಿನ ಆಸೆಯನ್ನು ಕೈಬಿಟ್ಟರು!

20160228_134408

20160228_134320
ಅದಾಗಲೇ ಎಲ್ಲರೂ ಬಂಡೆ ಇಳಿಯಲು ಅರ್ಧ ಗಂಟೆಗೂ ಹೆಚ್ಚುಕಾಲ ಬೇಕಾಯಿತು. ಎಲ್ಲರೂ ಬಂಡೆ ಇಳಿಯಲು ಯಶ ಸಾಧಿಸಿದ ಮೇಲೆ ಅಲ್ಲಿಂದ ಹೊರಟು ಮಾವಿನ ತೋಪಿನ ಹಾದಿಯಾಗಿ ಸಾಗಿ, ಎಳೆ ಮಾವಿನಮಿಡಿ ಬಿದ್ದಿದ್ದನ್ನು ಬಾಯಿಗೆ ಹಾಕಿಕೊಂಡು ಹೊಲಗಳನ್ನು ದಾಟಿ ಅರ್ಧಕಿಮೀ ಸಾಗಿದಾಗ ಬಸ್ಸಿನ ಬಳಿ ೨.೩೦ಗೆ ಬಂದೆವು. ಆ ಸುಸ್ತಿನಲ್ಲೂ ಅಬ್ಬ ಗುರಿ ಮುಟ್ಟಿದೆವು ಎಂಬ ಸಂತೋಷ ಆವರಿಸಿತು. ಕೈ ಕಾಲು ಮುಖ ತೊಳೆದು ಊಟ (ಬಿಸಿಬೇಳೆ ಭಾತ್, ಮೊಸರನ್ನ, ಸಿಹಿ ಬರ್ಫಿ) ಮಾಡಿ ವಿರಮಿಸಿದೆವು. ಆಗ ಅಲ್ಲಿ ಕುರಿಗಳ ಸಾಲು ಹಾದು ಹೋಯಿತು. ಅವುಗಳು ಸಾಲಾಗಿ ಸಾಗಿದ್ದು  ಕಾಣುವಾಗ  ಶಿಸ್ತಿನ ಸೈನಿಕರು ನಾವೆಲ್ಲ ಎನ್ನುವಂತೆ ಭಾಸವಾಯಿತು.

20160228_151732
ಆರು ಕಿಮೀ ದೂರ ನಡೆಸಿ ಈ ಪೇಟೆ ಮಂದಿಗೆ ಸರಿಯಾಗಿ ಬುದ್ಧಿ ಕಲಿಸಿದ್ದರು ರಾಜ. ಒಂದು ಕಡೆಯಿಂದ ಬೆಟ್ಟ ಹತ್ತಿಸಿ, ಯಾರೂ ಓಡಾಡದ ಇನ್ನೊಂದು ಬದಿಯಿಂದ ಇಳಿಸಿದ್ದರು. ನಾವೋ ಕಾಲಿಗೆ ಬೆಲೆಬಾಳುವ ಚಪ್ಪಲಿ, ಶೂ ಧರಿಸಿ ತಲೆಗೆ ಟೊಪ್ಪಿಗೆ ಹಾಕಿ, ಚೀಲದಲ್ಲಿ ಹಣ್ಣು, ಸೌತೆಕಾಯಿ, ನೀರು ಒಯ್ದು ನಡೆದಿದ್ದೆವು. ರಾಜನ ಕಾಲಿನಲ್ಲಿ ಸವೆದ ಹವಾಯಿ ಚಪ್ಪಲಿ, ತಲೆಗೆ ಟೋಪಿ ಹೆಗಲಿಗೆ ಶಾಲು, ಕೈಯಲ್ಲಿ ಮಚ್ಚು ಇಟ್ಟುಕೊಂಡು, ಈ ನಡಿಗೆ ಯಾವ ಲೆಕ್ಕ ಎಂದು ನಡೆದಿದ್ದರು. ನಾವೋ ಕೂತು ನಿಂತು ಬಸವಳಿದು ಗಮ್ಯ ತಲಪಿದ್ದೆವು. ರಾಜನಿಗೆ ಧನ್ಯವಾದ ಅರ್ಪಿಸಿ ಬೀಳ್ಕೊಂಡೆವು. ವಾಡೆ ಮಲ್ಲೇಶ್ವರ ಬೆಟ್ಟಕ್ಕೆ ಹೋಗಲಿಚ್ಛಿಸುವವರು ರಾಜನನ್ನು ೯೯೪೫೬೫೩೭೫೩ ಈ ಸಂಖ್ಯೆಯಲ್ಲಿ ಸಂಪರ್ಕಿಸಿ.

ನಾಗೇಂದ್ರಪ್ರಸಾದರ ಟೊಪ್ಪಿಗೆ ಎಲ್ಲರ ಕಣ್ಣಿಗೆ ತಾಕಿದ್ದರಲ್ಲಿ ಅಂಥ ಟೊಪ್ಪಿ ತಮಗೂ ಬೇಕಿತ್ತು ಎಂದು ಅನಿಸಿದ್ದು ಸುಳ್ಳಲ್ಲ! ಅದರಲ್ಲಿ ಸೋಲಾರಿನಿಂದ ತಿರುಗುವ ಪುಟ್ಟ ಗಿರಗಟ್ಲೆ (ಪಂಕಕ್ಕೆ ಸಿದ್ದಮ್ಮ ಹೇಳುವ ಶಬ್ಧ ಗಿರಗಟ್ಲೆ) ಇದೆ. ಅದರಿಂದ ಗಾಳಿ ಬರುತ್ತದಂತೆ. ಗಾಳಿ ಬರುತ್ತದಾ ಎಂದು ಕೆಲವರು ತಲೆಗೆ ಹಾಕಿ ಖಾತ್ರಿ ಮಾಡಿಕೊಂಡರು! ಅವರು ಇ ಮಾರುಕಟ್ಟೆಯಿಂದ ಖರೀದಿಸಿದ್ದಂತೆ.

DSCN7675

ಇಲ್ಲಿಯವರೆಗೆ ಬಂದು ಮುಖ್ಯಪಟ್ಟ ವಾಡೆ ಮಲ್ಲೇಶ್ವರ ದೇವಾಲಯ ನೋಡದೆ ಹಿಂದಿರುಗುವುದು ಶೋಭೆಯಲ್ಲ ಎಂದು ಉತ್ಸಾಹವಂದಿಗರು ಸುಮಾರು ೧೩ ಮಂದಿ ೩.೩೦ಗೆ ಮಟಮಟ ಬಿಸಿಲಿಗೆ ಹೊರಟೆವು. ಉಳಿದವರು ನಿದ್ರೆ ಹರಟೆಯಲ್ಲಿ ನಿರತರಾದರು. ಸುಮಾರು ೯೮೦ ಮೆಟ್ಟಲುಗಳನ್ನೇರಿದರೆ ದೇಗುಲ ಕಾಣುತ್ತದೆ. ಮೆಟ್ಟಲುಗಳ ಅಂತರ ಬಲುಕಮ್ಮಿ. ಕಾಲು ನೆಟ್ಟಗೆ ನಿಲ್ಲದಷ್ಟು ಸಪೂರ. ಇತ್ತೀಚೆಗೆ ಕೆಲವಾರು ದಾನಿಗಳ ನೆರವಿನಿಂದ ಈ ಸೋಪಾನಗಳ ದುರಸ್ತಿ ಕಾರ್ಯ ನಡೆದಿದೆ. ದಾನಿಗಳ ಹೆಸರಿನ ಫಲಕ ಹಾಕಿದ್ದಾರೆ. ದಾರಿಯಲ್ಲಿ ಕೆಲವು ಪಕ್ಷಿಗಳು ದರ್ಶನ ಭಾಗ್ಯ ಕರುಣಿಸಿದುವು. ೨ ಕಳ್ಳಿಪೀರ ಕ್ಯಾಮರಾಕ್ಕೆ ಫೋಸ್ ಕೊಟ್ಟುವು.

DSCN7722

DSCN7730

ಮೆಟ್ಟಲೇರಿದಂತೆ ಮಧ್ಯ ಭಾಗದಲ್ಲಿ ನಂದಿ ಹೋಲುವ ಬಂಡೆಗಲ್ಲಿದೆ. ಸುಮಾರು ಇಪ್ಪತ್ತು ನಿಮಿಷದಲ್ಲಿ ದೇವಾಲಯದ ಬಳಿ ತಲಪಿದೆವು. ಅಲ್ಲಿ ನಮ್ಮನ್ನು ಸ್ವಾಗತಿಸಲು ಪೂರ್ವಜರು ಸಾಲಾಗಿ ನಿಂತಿದ್ದರು! ನಮಗೇನು ತಂದಿರಿ? ಎಂದು ಚಾತಕವಾಗಿ ನಿರೀಕ್ಷೆ ಮಾಡಿದರು. ರಶೀದ್ ಅವರಿಗೆ ಸೌತೆಕಾಯಿ ಕೊಟ್ಟು ಉಪಚರಿಸಿದರು.

DSCN7745DSCN7739

DSCN7788DSCN7772

ನಮ್ಮ ಬಸ್ ಹಾಗೂ ವಿಶ್ರಮಿಸುತ್ತಿರುವ ನಮ್ಮ ತಂಡದವರು ದೇವಾಲಯದ ಬಳಿಯಿಂದ ಕ್ಯಾಮಾರಾಕಣ್ಣಿಗೆ ಕಂಡ ನೋಟ

DSCN7749
ದೇವಾಲಯದ ಬಾಗಿಲು ತೆರೆದೇ ಇರುತ್ತದೆ. ಬಂಡೆಯಡಿಯಲ್ಲಿ ಶಿವಲಿಂಗವಿದೆ. ಪ್ರತೀ ಸೋಮಾವಾರ ಮತ್ತು ಶುಕ್ರವಾರ ಪೂಜೆ ನಡೆಯುತ್ತದೆ. ಅಲ್ಲಿ ಸ್ವಲ್ಪ ಹೊತ್ತು ವಿರಮಿಸಿದೆವು. ಸಹನ ಭಕ್ತಿಗೀತೆ ಹಾಡಿದಳು. ನಮ್ಮ ತಂಡದ ಚಿತ್ರ ಕ್ಲಿಕ್ಕಿಸಿಕೊಂಡು ಮೆಟ್ಟಲಿಳಿದು ಕೆಳಗೆ ಬಂದು ೫.೩೦ಗೆ ಬಸ್ಸೇರಿದೆವು.
ಬರುತ್ತ ದಾರಿಯಲ್ಲಿ ಚಹಾ, ಕಾಫಿಗೆ ನಿಲ್ಲಿಸಿದ್ದು ಬಿಟ್ಟರೆ ಮತ್ತೆ ಎಲ್ಲೂ ನಿಲ್ಲದೆ ೯ ಗಂಟೆಗೆ ಮೈಸೂರು ತಲಪಿದೆವು. ನಾಗೇಂದ್ರಪ್ರಸಾದ್ ಹಾಗೂ ಗೋಪಿ ಅವರು ಈ ಕಾರ್ಯಕ್ರಮವನ್ನು ಯೂಥ್ ಹಾಸ್ಟೆಲ್ ಗಂಗೋತ್ರಿ ಘಟಕದ ವತಿಯಿಂದ ಆಯೋಜಿಸಿದ್ದರು. ಅವರಿಗೆ ಧನ್ಯವಾದಗಳು.