ರಾಮರಾಯರು, ಕೃಷ್ಣರಾಯರು, ವಾಮನರಾಯರು ಎಂಬ ಹಿರಿಯರು ಬ್ಯಾಂಕಿನಲ್ಲಿ ೨೦೦೧-೨೦೦೨ ಕರ್ನಾಟಕ ಬಜೆಟ್ನ ಕುರಿತು ಮಾತಾಡುತ್ತಿದ್ದರು. ಅವರು ಹಣ ಡ್ರಾ ಮಾಡಲು ಟೋಕನ್ ಹಿಡಿದು ಸರದಿಗಾಗಿ ಕಾಯುತ್ತಿದ್ದರು. ನಾನು ಕುತೂಹಲದಿಂದ ಅವರ ಮಾತು ಕೇಳುತ್ತ ನಿಂತೆ.
“ನೀವು ಇಂದಿನ ದಿನಪತ್ರಿಕೆಯಲ್ಲಿ ಬಜೆಟ್ ಓದಿದಿರಾ?” ರಾಮರಾಯರು ಪ್ರಶ್ನಿಸಿದರು.
“ಇವತ್ತಿನ ದೈನಿಕ ಓದಲಾಗಲಿಲ್ಲ. ಮೊಮ್ಮಕ್ಕಳನ್ನು ಶಾಲೆಗೆ ಬಿಟ್ಟು ನೇರ ಬ್ಯಾಂಕಿಗೆ ಬಂದೆ. ಬಜೆಟ್ನಲ್ಲಿ ಈ ಸಲ ಏನು ವಿಶೇಷ? ಜನ ಏನಂತಾರೆ?” ಕೇಳಿದರು ಕೃಷ್ಣರಾಯರು.
“ರಾಜ್ಯದ ರೈತರಿಗೆ ಮೇ ೧ರಿಂದ ರಾತ್ರಿಯಿಡೀ ನಿರಂತರ ವಿದ್ಯುತ್ ಪೂರೈಕೆ ಮಾಡುತ್ತಾರಂತೆ. ಬಹುಶಃ ಮಳೆ ಬಂದ ಅನಂತರ ಎಂದು ಹೇಳಲು ಮರೆತಿರಬೇಕು. ಎಂದಿನಂತೆ ಈ ಸಲವೂ ಕೊರತೆ ಇದೆ. ರೂ. ೪೩ ಕೋಟಿಯಂತೆ. ರೂ. ೨೮೪ ಕೋಟಿಯ ತೆರಿಗೆ ಹೊರೆಯಂತೆ. ಈ ಬಾರಿಯ ಬಜೆಟ್ ಅದೇನೊ ರೈತರ ಪಾಲಿಗೆ ಸಂತೆಯ ಮಿಠಾಯಿಯಂತೆ, ಬಡವರಿಗೆ ಕಡಲೆಪುರಿಯಂತೆ, ಶಾಸಕರಿಗೆ ಕ್ಯಾಡಬರೀಸ್ ಚಾಕಲೇಟಿನಂತಿದೆ ಎಂದಿದ್ದಾರೆ ಜನತಾದಳ(ಯು)ದವರು” ವಿವರವಾಗಿ ದಿನಪತ್ರಿಕೆ ಓದಿದ ವಾಮನರಾಯರು ಬಜೆಟ್ನ ಬಗ್ಗೆ ವಿವರ ನೀಡಿದರು.
“ಅದೆಲ್ಲ ಬಿಡಿ ಸ್ವಾಮಿ. ಈ ಬಜೆಟ್ನಲ್ಲಿ ಒಂದು ವಿಶೇಷ ಸುದ್ದಿ ಇದೆ” ಎಂದು ನಿಲ್ಲಿಸಿ ಸ್ನೇಹಿತರ ಮುಖ ನೋಡಿದರು ರಾಮರಾಯರು.
“ಏನು? ವರಮಾನ ತೆರಿಗೆ ಇಳಿಸಿದ್ದಾರ? ಅಲ್ಲ, ವೈನ್ಗೆ ತೆರಿಗೆ ಇಳಿಸಿದ್ದಾರ?” ಕೃಷ್ಣರಾಯರು ಕೇಳಿದರು.
“ವರಮಾನ ತೆರಿಗೆ ಇಳಿಸಿದರೆಷ್ಟು ಏರಿಸಿದರೆಷ್ಟು? ಅದರಿಂದ ನಮಗೇನು ಉಪಯೋಗವಿಲ್ಲ. ನಮಗೆ ಬರುವ ಪಿಂಚಣಿ ಹಣದಲ್ಲಿ ಸಂಸಾರ ಸಾಗಿಸಲು ಆಗುವುದಿಲ್ಲ. ಇನ್ನು ವರಮಾನ ತೆರಿಗೆ ಕಟ್ಟುವುದೆಲ್ಲಿಂದ ಬಂತು. ಅದೆಲ್ಲ ಅಲ್ಲ. ಗುಂಡುಪ್ರಿಯರಿಗೆ ಕೃಷ್ಣ ವರದಾನವಿತ್ತಿದ್ದಾರೆ. ಇನ್ನು ಮುಂದೆ ವೈನ್, ಬಿಯರು ಎಲ್ಲ ದಿನಸಿ ಅಂಗಡಿಗಳಲ್ಲಿ, ಡಿಪಾರ್ಟ್ಮೆಂಟ್ ಸ್ಟೋರ್ಗಳಲ್ಲಿ ಕೂಡ ಸಿಗುತ್ತದಂತೆ– ಪೆಪ್ಸಿ, ಕೋಲಾಗಳು ಸಿಗುವಂತೆ. ಆದರೆ ಅಲ್ಲಿ ಕುಡಿಯಲು ಅನುಮತಿ ಇಲ್ಲವಂತೆ. ನಮ್ಮ ಶೆಟ್ರ ಅಂಗಡಿಯಲ್ಲೂ ಸಿಗಬಹುದು ಇನ್ನು. ಅದಕ್ಕೆಂದು ಅಂಗಡಿಯವರು ದುಡ್ಡು ಕಟ್ಟಿದರಾಯಿತು ಲೈಸನ್ಸ್ ಸುಲಭವಾಗಿ ಕೊಡುತ್ತಾರಂತೆ. ಎಲ್ಲರೂ ದುಡ್ಡು ಕಟ್ಟಿಯಾರು. ದಿನಸಿ ವಸ್ತುಗಳಿಂದ ಹೆಚ್ಚು ವೈನ್, ಬಿಯರು ಮಾರಾಟವಾದೀತು ಎಂದು ಎಲ್ಲರಿಗೂ ಗೊತ್ತು. ಇನ್ನು ನಾವು ದಿನಸಿ ಅಂಗಡಿಗೆ ಹೋಗಿ ವ್ಯಾಪಾರ ಮಾಡುವುದು ಕಷ್ಟ. ಅಲ್ಲಿ ಜನ ವೈನ್ ಕೊಳ್ಳಲು ತುಂಬಿ ತುಳುಕಬಹುದು” ವಿಷಾದದಿಂದ ನುಡಿದರು ರಾಮರಾಯರು.
“ಹೌದು, ಕೃಷ್ಣನಿಗೆ ಏಕೆ ಇಂಥ ದುರ್ಬುದ್ಧಿ ಬಂತು? ಪ್ರಾಯಶಃ ಗುಂಡುಪ್ರಿಯರು ಲಂಚ ಕೊಟ್ಟಿರಬಹುದೆ? ಕೃಷ್ಣನಿಗೆ ಮುಂದಾಲೋಚನೆ ಬೇಡವೇ? ಇನ್ನು ಮಕ್ಕಳೂ ರಾಜಾರೋಷವಾಗಿ ಅಂಗಡಿಗೆ ಹೋಗಿ ವೈನ್ ತಂದು ಮನೆಯಲ್ಲಿ ಕುಡಿಯಬಹುದು. ಈಗ ಹುಡುಗರು ಅದೆಂಥದೋ ಪೆಪ್ಸಿ ಎಂದು ಮೂರು ಹೊತ್ತು ಕುಡಿಯಲು ಕುಣಿಯುತ್ತವಲ್ಲ. ಅದರಂತೆ ಇನ್ನು ಬಿಯರನ್ನೂ ಕುಡಿದಾರು. ಅವಕ್ಕೆ ಲಂಗು ಲಗಾಮು ಎಲ್ಲಿಯದು?” ಎಂದರು ವಾಮನರಾಯರು ಚಿಂತಾಕ್ರಾಂತರಾಗಿ.
“ಇದು ಎಲ್ಲ ರಾಜಕೀಯದಾಟ ಸ್ವಾಮಿ. ಚುನಾವಣೆ ಬರುತ್ತದಲ್ಲ. ಈ ಆಮಿಷ ಎಲ್ಲ ಓಟಿಗಾಗಿ. ಇದರಿಂದ `ಗುಂಡು’ಪ್ರಿಯರ ಓಟು ಅವರಿಗೆ ಗ್ಯಾರಂಟಿ. ನಮ್ಮಲ್ಲಿ ಅರ್ಧಕ್ಕಿಂತ ಹೆಚ್ಚು ಮಂದಿ ಏರಿಸುವವರೇ ತಾನೆ ಇರುವುದು? ಇನ್ನು ಮುಂದೆ ದಿನಸಿ ಅಂಗಡಿಗಳಲ್ಲಿ ದಿನನಿತ್ಯ ಬೇಕಾದ ಅವಶ್ಯ ಪದಾರ್ಥ ಸಿಗುತ್ತೊ ಇಲ್ಲವೊ ಆದರೆ ವೈನ್, ಬಿಯರು ಇರುವುದಂತೂ ನಿಶ್ಚಯ ಎನ್ನುವುದರಲ್ಲಿ ಸಂಶಯವಿಲ್ಲ. ಎಂದು ಖೇದದಿಂದ ನುಡಿದ ರಾಮರಾಯರು ತಮ್ಮ ಸರದಿ ಬಂತೆಂದು ಹಣ ಪಡೆಯಲು ಎದ್ದರು.
ದಿನಸಿ ಅಂಗಡಿಯಲ್ಲಿ ಬಿಯರು ಮಾರಾಟವನ್ನು ಹಿಂತೆಗೆದುಕೊಂಡ ಮುಖ್ಯಮಂತ್ರಿ ಕೃಷ್ಣನ ನಿರ್ಧಾರವನ್ನು ಅದೇ ಹಿರಿಯರು ಒಂದು ದಿನ ಚರ್ಚಿಸುತ್ತಿದ್ದರು. “ನಮ್ಮ ಬೈಗಳು ಅವನಿಗೆ ಕೇಳಿಸಿರಬೇಕು. ಇಂಥ ಗಿಮಿಕ್ನಿಂದ ಓಟಿಗೇನೂ ಪ್ರಯೋಜನವಾಗಲಿಕ್ಕಿಲ್ಲವೆಂದು ಮನವರಿಕೆಯಾಗಿರಬಹುದು. ಸದ್ಯ, ತಡವಾಗಿಯಾದರೂ ಕೃಷ್ಣನಿಗೆ ಒಳ್ಳೆಯ ಬುದ್ಧಿ ಬಂತಲ್ಲ” ಎಂದು ಮಾತಾಡಿಕೊಂಡರು.