Feeds:
ಲೇಖನಗಳು
ಟಿಪ್ಪಣಿಗಳು

Archive for the ‘ಸ್ವಗತಗಳು’ Category

ಈ ಜಾಲಲೇಖದ ಜನುಮ ದಿನ ಮೊನ್ನೆ.  (೭-೧-೨೦೦೯) ಈಗ ೪ ತುಂಬಿ ೫ನೇ ವರುಷ. ಅಂಬೆಗಾಲಿಟ್ಟದ್ದು ಈಗ ಎದ್ದು ನಡೆದಾಡಬೇಕು.  ಈವರೆಗೆ ೧೫೦ಕ್ಕೂ ಹೆಚ್ಚು ಬರಹಗಳು ಇಲ್ಲಿ ಬಂದಿವೆ. ೩೪ ಸಾವಿರಕ್ಕೂ ಮಿಕ್ಕಿ ಜನ ಈ ಜಾಲಲೇಖಕ್ಕೆ  ಭೇಟಿ ಕೊಟ್ಟಿದ್ದಾರೆ.  ಲೇಖನ ಓದಿದ, ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು.

Read Full Post »

ಮದುವೆಯ ಈ ಬಂಧ

ಅನರ್ಘ್ಯವರ್ಧನ ಮತ್ತು ಜೋಸೆಫ್ ಜೇಕ್ಸನ್ (ಜೆಜೆ) ಇವರ ಮದುವೆ ೨೯.೭.೨೦೧೨ ರಂದು ಮೈಸೂರಿನ ಸಾಮ್ರಾಟ್ ಕಲ್ಯಾಣಮಂಟಪದಲ್ಲಿ ನೆರವೇರಿತು. ಇದೊಂದು ವಿಶಿಷ್ಟ ಮದುವೆ. ಹುಡುಗ ಅಮೇರಿಕಾದವ. ಹುಡುಗಿ ಭಾರತೀಯಸಂಜಾತೆ.
ಜಯಶ್ರೀ ಮತ್ತು ಆನಂದವರ್ಧನ ಅವರ ಮಗಳು ಅನರ್ಘ್ಯವರ್ಧನ. ಕ್ಯಾಲಿಫೋರ್ನಿಯಾದಲ್ಲಿ ಗೂಗಲ್ ಸಂಸ್ಥೆಯಲ್ಲಿ ಉದ್ಯೋಗಿ. ಆನಂದ ದಂಪತಿಗಳು ಕಳೆದ ಸುಮಾರು ೨೪ ವರ್ಷಗಳಿಂದ ಅಮೇರಿಕೆಯ ಪೋರ್ಟ್‌ಲ್ಯಾಂಡಿನಲ್ಲಿ ವಾಸವಾಗಿದ್ದಾರೆ. ಅವರಿಗೆ ಇಬ್ಬರು ಮಕ್ಕಳು ಅನರ್ಘ್ಯ, ಐಶ್ವರ್ಯ. ಆನಂದವರ್ಧನರಿಗೆ ಇಂಟೆಲ್ ಸಂಸ್ಥೆಯಲ್ಲಿ ಕೆಲಸ. ಅವರೆಲ್ಲ ಅಲ್ಲಿಯ ಪ್ರಜೆಗಳೇ ಆಗಿದ್ದಾರೆ. ಅನರ್ಘ್ಯ ಕ್ಯಾಲಿಫೋರ್ನಿಯಾದ ಸ್ಟಾನ್‌ಫರ್ಡ್ ವಿಶ್ವವಿದ್ಯಾನಿಲಯದಲ್ಲಿ ವಿಜ್ಞಾನ ಪದವೀಧರೆ. ಜೆಜೆ ಕೂಡ ಅಲ್ಲಿಯೇ ಇಂಜಿನಿಯರಿಂಗ್ ಪದವಿ ಓದಿರುವುದು. ಇಬ್ಬರೂ ಸಹಪಾಟಿಗಳು. (ಅಲ್ಲಿ ಓದುವ ವಿಷಯ ಬೇರೆ ಬೇರೆ ಇದ್ದರೂ ಕೆಲವು ವಿಷಯಗಳಲ್ಲಿ ಸಹಪಾಟ ಇರುತ್ತದೆಯಂತೆ.) ಒಬ್ಬರಿಗೊಬ್ಬರು ಅರ್ಥಮಾಡಿಕೊಂಡು ಮದುವೆಯಾಗುವುದಾಗಿ ಮಾಡಿದ ನಿಶ್ಚಯಕ್ಕೆ ಹೆತ್ತವರು ತಮ್ಮ ಒಪ್ಪಿಗೆಯನ್ನಿತ್ತರು.
ಮದುವೆ ಭಾರತದಲ್ಲೇ ಸಂಪ್ರದಾಯ ಪ್ರಕಾರವೇ ಆಗಬೇಕೆಂಬ ಆಸೆ ಅನರ್ಘ್ಯಳಿಗೆ. ಜೋಸೆಫ್ ಹಾಗೂ ಅವನ ಹೆತ್ತವರು ಅದಕ್ಕೆ ಸಂಪೂರ್ಣ ಬೆಂಬಲವನ್ನಿತ್ತರು.
ಆನಂದವರ್ಧನರ ತವರು ನೆಲೆ ಮೈಸೂರು. ಹಾಗಾಗಿ ಮದುವೆ ಮೈಸೂರಿನಲ್ಲಿ ಮಾಡುವುದು ಎಂದು ತೀರ್ಮಾನಿಸಲಾಯಿತು. ಜೆಜೆ, ಫ್ರಾಂಕ್ ಜೇಕ್ಸನ್ ಮತ್ತು ಜಾಸ್ಮಿನ್ (ಜೆಜೆ ತಂದೆ ಮತ್ತು ತಂಗಿ) ೨೫ಕ್ಕೆ ಮೈಸೂರಿಗೆ ಬಂದರು. ತಾಯಿ ಕ್ರಿಸ್ಟಿಯಾನ ಜೇಕ್ಸನ್ ಅವರಿಗೆ ಅನಾರೋಗ್ಯದ ಸಮಸ್ಯೆ ಕಾಡಿದ್ದರಿಂದ ಬರಲಾಗಲಿಲ್ಲ.  ೨೬.೭.೨೦೧೨ರಂದು ನಾಂದಿ ಎಂಬ ಪ್ರಹಸನ (ವಿವಾಹಾಪ್ರಯುಕ್ತ ಕೆಲವು ಸಂಪ್ರದಾಯಗಳು) ಹವೀಕಭವನದಲ್ಲಿ ನಡೆಯಿತು. ಸುಮಾರು ೭೫ ಮಂದಿ ಸೇರಿದ್ದೆವು.

೨೭ರಂದು ಅನರ್ಘ್ಯ ಹಾಗೂ ಅವಳ ಸ್ನೇಹಿತೆಯರು, ಹೆಂಗೆಳೆಯರು ಎಲ್ಲ ಮಧುರಂಗಿ ಹಾಕಿಸಿಕೊಂಡರು. ಅನರ್ಘ್ಯಳ ಸ್ನೇಹಿತೆಯರು ಅಮೇರಿಕಾದಿಂದ ೫ ಮಂದಿ ಬಂದಿದ್ದರು. ಅವರೆಲ್ಲ ಬಹಳ ಸಂಭ್ರಮ ಪಟ್ಟರು.    ಸ್ನೇಹಿತರೂ ನಾಲ್ಕೈದು ಮಂದಿ ಬಂದಿದ್ದರು.
ಅವರೆಲ್ಲ ಮೈಸೂರು ನೋಡಿದರು. ಅರಮನೆ ಸುತ್ತು ಹಾಕಿದರು. ಸೀರೆ ಕೊಂಡರು. ಹುಡುಗರು ಪಂಚೆ ಶಲ್ಯ ಕೊಂಡರು.  ಕೇವಲ ಎರಡು ದಿನದಲ್ಲಿ ಶ್ರೀಮತಿ ವೇದ ಅವರು ಹಗಲು ಇರುಳೆನ್ನದೆ ೧೩ ರವಿಕೆಯನ್ನು ಹೊಲಿದು ಕೊಟ್ಟರು. ಈ ಹುಡುಗಿಯರು ಸೀರೆ ಉಟ್ಟು ಸಂಭ್ರಮಪಟ್ಟು ವೇದ ಅವರ ಶ್ರಮ ಸಾರ್ಥಕಗೊಳಿಸಿದ್ದಾರೆ.
ಈ ಮಧ್ಯೆ ಮೈಸೂರುಮಿತ್ರ ಸಂಪಾದಕ ಕೆ.ಬಿ. ಗಣಪತಿಯವರು ಕಿರಣಕುಮಾರ ಅವರನ್ನು ಮದುವೆ ಬಗ್ಗೆ ವರದಿ ಮಾಡಿ ಬಾ ಎಂದು ಕಳುಹಿಸಿದ್ದಾರೆ. ಅವರು ಬಂದು ಮಾತನಾಡಿಸಿದ್ದಾರೆ. ಆ ದಿನ ಸಂಜೆ ೭ ಗಂಟೆಗೆ ಎಲ್ಲರೂ ಗುರು ರೆಸಿಡೆನ್ಸಿ ಹೊಟೇಲಿನಲ್ಲಿ ಸೇರಿ ಅಲ್ಲಿ ಮಧುಮಕ್ಕಳನ್ನು ಸಂದರ್ಶನ ಮಾಡಿದರು. ಹಾಗೂ ಮದುವೆಗೂ ಬಂದು, ಭಾನುವಾರದ ಮೈಸೂರುಮಿತ್ರ ಹಾಗೂ ಸ್ಟಾರ್ ಆಫ್ ಮೈಸೂರಿನಲ್ಲಿ ಮದುವೆ ಬಗ್ಗೆ ವಿವರವಾದ ವರದಿಯನ್ನು ಕಿರಣಕುಮಾರ್  ಪ್ರಕಟಿಸಿದ್ದರು. ವಿವರಕ್ಕೆ ನೋಡಿ: http://www.starofmysore.com/searchinfo.asp?search1=6870&search2=specialnewsnew
೨೮.೭. ೨೦೧೨ರಂದು ಸಂಗೀತ ಕಾರ್ಯಕ್ರಮ ಸಂಜೆ ಸಾಮ್ರಾಟ್ ಕಲ್ಯಾಣಭವನದಲ್ಲಿ. ಮಕ್ಕಳೆಲ್ಲ ಹಾಡಿ ಕುಣಿದರು. ಜಾನಪದ ಸಂಗೀತವಿತ್ತು. ಹಿರಿಯರ ಹಾಡು ಕೂಡ ಇತ್ತು. ಆದರೆ ಅಲ್ಲಿ ಭವನದಲ್ಲಿ ಪ್ರತಿಧ್ವನಿ ಆಗುತ್ತಿತ್ತು. ಸಮಾರಂಭ ಯೋಚಿಸಿದಂತೆ ನಡೆಯಲಿಲ್ಲ. ಅದು ಸ್ವಲ್ಪ ಬೇಸರದ ಸಂಗತಿ. ಕೆಲವೊಮ್ಮೆ ನಾವು ಅಂದುಕೊಂದಂತೆ ಆಗುವುದಿಲ್ಲ. ಅದು ಸಹಜ.  ೮ ಗಂಟೆಗೆ ಭರ್ಜರಿ ಭೋಜನ. ಸುಮಾರು ೨೫೦ ಮಂದಿ ಸೇರಿದ್ದೆವು.

ಸಂಗೀತದ ದಿನ

೨೯.೭.೨೦೧೨ರಂದು ಮದುವೆ ಕಾರ್ಯಕ್ರಮ. ಬೆಳಗ್ಗೆ ೭ ಗಂಟೆಗೇ ಅನರ್ಘ್ಯಳಿಗೆ ಜಡೆಗೆಲ್ಲ ಮಲ್ಲಿಗೆ ಮುಡಿಸಿ ಸಾಲಂಕೃತವಾಗಿ ಚೆನ್ನಾಗಿ ಅಲಂಕಾರ ಮಾಡಿ ಹೊರಡಿಸಿದವಳು ಶುಭಾ.  ಸಭಾಭವನದ ಹೊರಭಾಗದಲ್ಲಿ ಅಭಿನವ ಶ್ರೀ ವೀರಭದ್ರೇಶ್ವರ ನೃತ್ಯತಂಡದ ಮದ್ದೂರು ಮಲ್ಲೇಶ ರಾಜು ಅವರ ತಂಡದ ವೀರಗಾಸೆ ನೃತ್ಯದೊಂದಿಗೆ ವರನ ಕಡೆಯವರನ್ನು ಸ್ವಾಗತಿಸಲಾಯಿತು. ಜೆಜೆ ಸ್ನೇಹಿತರು ಪಂಚೆ ಉಟ್ಟು ಶಲ್ಯ ಹೊದ್ದು ತಯಾರಾಗಿದ್ದರು.

ಅಲಂಕಾರ

ವೀರಗಾಸೆ

ಮದುವೆ ಕಲಾಪಗಳು ಧಾರೆ, ಮಾಂಗಲ್ಯಧಾರಣೆ,  ಇತ್ಯಾದಿ ನಡೆದ ಬಳಿಕ ವೀರಗಾಸೆ ನೃತ್ಯಪಟುಗಳು ವೇದಿಕೆಯಲ್ಲಿ ಕಾರ್ಯಕ್ರಮ ಕೊಟ್ಟರು. ಅದು ಹೆಚ್ಚಿನವರಿಗೆ ಬಹಳ ಖುಷಿ ಕೊಟ್ಟಿತು. ಕೆಲವರೆಲ್ಲ ಇಂಥ ನೃತ್ಯ ನೋಡಿದ್ದೇ ಇದು ಮೊದಲಂತೆ. ಆಗ ಮಕ್ಕಳು ಕೆಲವು ಹಿರಿಯರು ಕೂಡ ವೇದಿಕೆ ಏರಿ ಅವರೊಡನೆ ಅತಿ ಉತ್ಸಾಹದಿಂದ ಕುಣಿಯಲು ತೊಡಗಿದರು. ಅದು ಕೆಲವರಿಗೆ ಆಭಾಸವೆನಿಸಿತು. ಕೆಲವರಿಗೆ  ಖುಷಿ ಕೊಟ್ಟಿತು. ಅಮೇರಿಕೆಯಿಂದ ಬಂದವರಿಗೆ (ಭಾರತೀಯರು ಇದ್ದರು) ಬಹಳ ಇಷ್ಟವಾಯಿತು. ಇಲ್ಲಿ ನಮ್ಮ ನೆಂಟರಿಷ್ಟರಿಗೆ  ಸಹನೀಯವಾಗಲಿಲ್ಲ. ಅಸಮಧಾನವಾಯಿತು. ಯಾವುದೇ ಕಾರ್ಯಕ್ರಮವಾದರೂ ಎಲ್ಲರನ್ನೂ ಮೆಚ್ಚಿಸಲು ಕಷ್ಟಸಾಧ್ಯ. ಮದುವೆನಂತರ ಬಹಳದಿನ ಈ ವಿಷಯವಾಗಿ ವಾದವಿವಾದಗಳು ನಡೆದುವು. ಆವರವರ ಭಾವಕ್ಕೆ ಎಂದು ಬಿಡುವುದೇ ನಿಜವಾಗಿ ಒಳ್ಳೆಯದು. ಮದುವೆಗೆ ಹೆಚ್ಚು ಕಮ್ಮಿ ಸುಮಾರು ೫೦೦ ಜನ ಸೇರಿದ್ದೆವು.

   ಹೀಗೆ ನಾನು ಯೋಚನೆ ಮಾಡುತ್ತಿರಬೇಕಾದರೆ, ಮದುವೆ ಕಲಾಪದಲ್ಲಿ ಬಿಡುವು ಇಲ್ಲದೆ ಇದ್ದದ್ದರಿಂದ ಸುಮಾರು ದಿನಪತ್ರಿಕೆಗಳನ್ನು ಓದಿರಲಿಲ್ಲ. ಬಿಡುವು ದೊರೆತಾಗ ಅವುಗಳನ್ನೆಲ್ಲ ಒಂದೊಂದೆ ಓದುತ್ತಿದ್ದೆ. ಆಗಸ್ಟ್ ೬ನೇ ತಾರೀಕಿನ ವಿಜಯವಾಣಿ ಪತ್ರಿಕೆಯಲ್ಲಿ ಸದ್ಗುರು ಅವರ ಚಿಂತನ ಬರಹ ಓದಿದಾಗ ನನಗೆ ಬಲು ಖುಷಿ ಆಯಿತು. ಆ ಲೇಖನ ಇಲ್ಲಿಗೆ ಅಂದರೆ ಈ ಸಂದರ್ಭಕ್ಕೆ  ಎಷ್ಟು ಅರ್ಥಪೂರ್ಣವಾಗಿ ಇದೆಯಲ್ಲ ಅನಿಸಿತು. ಹಾಗಾಗಿ ಅದರ ಕೆಲವು ಸಾಲುಗಳನ್ನು ಇಲ್ಲಿ ಯಥಾವತ್ತು ದಾಖಲಿಸುತ್ತಿದ್ದೇನೆ:

“ನಾವು ಸಾಮಾನ್ಯವಾಗಿ ಸಂಬಂಧಗಳನ್ನು ಹೇಗೆ ಪರಿಗಣಿಸುತ್ತಿದ್ದೇವೆ? ಎಷ್ಟೇ ಹತ್ತಿರದವರಾಗಿರಲಿ ಒಂದು ಗಡಿಯನ್ನು ಗುರುತಿಸಿ ಇಟ್ಟುಕೊಂಡಿರುತ್ತೇವೆ. ಇಬ್ಬರಲ್ಲಿ ಯಾರು ಅದನ್ನು ದಾಟಿದರೂ ಮತ್ತೊಬ್ಬರು ಯುದ್ಧ ಸಾರುವ ಬಾವುಟ ಹಿಡಿಯುತ್ತೇವೆ. ಯಾರಾದರೂ ಒಬ್ಬರು ಬಿಟ್ಟುಕೊಡುವ ಮನೋಧರ್ಮ ಅನುಸರಿಸುವುದಾದರೆ ಬೇರೊಬ್ಬನು ಉಳಿಯಲು ಸಾಧ್ಯವಾಗುತ್ತದೆ.
    ಬಂಧುವಾಗಿರಬಹುದು, ಸಹೋದ್ಯೋಗಿಯಾಗಿರಬಹುದು, ಸ್ನೇಹಿತನಾಗಿರಬಹುದು, ಬೇರೊಂದು ದೇಶದವನಾಗಿರಬಹುದು, ಪ್ರಪಂಚದಲ್ಲಿ ಜನಿಸಿದ ಯಾರೇ ಇರಲಿ ಅವನಲ್ಲಿ ನಿಮಗೆ ಹಿಡಿಸುವ ಕೆಲವು ಗುಣಗಳು, ಹಿಡಿಸದ ಕೆಲವು ಗುಣಗಳು ಬೆರೆತಿರುತ್ತವೆ. ಎರಡೂ ಬಗೆಯ ಗುಣಗಳನ್ನು ಸಮಾನವಾಗಿ ಪರಿಗಣಿಸುವಂಥ ಪರಿಪಕ್ವತೆ ಬೆಳೆದುಬಿಟ್ಟರೆ ಅಲ್ಲಿಗೆ ಎಲ್ಲ ಸಮಸ್ಯೆಗಳೂ ಮುಗಿಯುತ್ತವೆ.
   ಗಮನಿಸಿ, ಒಬ್ಬ ವ್ಯಕ್ತಿ ಸಂತೋಷವಾಗಿರುವಾಗ ಅವರೊಂದಿಗೆ ಕೆಲಸ ನಿರ್ವಹಿಸುವುದು ಸುಲಭ. ಅವರು ಸಂತೋಷವಾಗಿಲ್ಲದೆ ಇದ್ದರೆ ಅಂತಹ ಸಂದರ್ಭದಲ್ಲಿ ಅವರೊಡನೆ ಕೆಲಸ ನಿರ್ವಹಿಸುವುದು ಕಷ್ಟವಾಗುತ್ತದೆ. ಆಟವಾಗಿರಬಹುದು, ವ್ಯಾಪಾರವಾಗಿರಬಹುದು, ಇಲ್ಲವೆ ಕಛೇರಿಯಾಗಿರಬಹುದು. ಎಲ್ಲಿಯೇ ಆಗಲಿ ಹಲವರು ಒಂದುಕಡೆ ಸೇರಿ ಕೆಲಸ ಮಾಡಬೇಕಾಗುತ್ತದೆ.
   ಬೇರೆ ಬೇರೆ ವರ್ಗಗಳಿಂದ ಬಂದಿರುವವರು ಒಂದಾಗಿ ಸೇರಿ ಕೆಲಸದಲ್ಲಿ ತೊಡಗಿರುವಾಗ ಯಾರೋ ಒಬ್ಬರ ಇಬ್ಬರ ಇಷ್ಟಾನುಸಾರ ನಿರ್ವಹಿಸುವುದು ಅಪರೂಪವೆನಿಸುತ್ತದೆ. ಅಂಥ ಸಂದರ್ಭದಲ್ಲಿ ಉಳಿದವರನ್ನು ತುಚ್ಛವಾಗಿ ಪರಿಗಣಿಸುವ ಅಭ್ಯಾಸವನ್ನು ಮೊದಲು ಕೊನೆಗಾಣಿಸಬೇಕು.
  ಯಾರನ್ನೇ ಆಗಲಿ, ನಿಮ್ಮಂತೆ ಇಲ್ಲವೆಂದು ಅವರಲ್ಲಿ ಕೊರತೆಯನ್ನು ನಿರೀಕ್ಷಿಸಬೇಡಿ. ನಿಮ್ಮ ಸುತ್ತಲೂ ಇರುವಂಥವರು ಸಹಾ ಮಹಾನ್ ವ್ಯಕ್ತಿಗಳೇ ಆಗಿರುತ್ತಾರೆ. ಒಂದೆರಡು ವಿಷಯಗಳಲ್ಲಿ ಅವರು ಹುಚ್ಚುತನದಿಂದ ವರ್ತಿಸಿರಬಹುದು. ಅತ್ಯಂತ ನಿಕಟವಾದ ಬಂಧುವರ್ಗದಲ್ಲಿಯೂ ಅನೇಕ ಸಂದರ್ಭಗಳಲ್ಲಿ ಮೋಸ, ವಂಚನೆ, ಕಪಟ ಮುಂತಾದುವುಗಳನ್ನು ಅನುಭವಿಸುತ್ತೀರಿ. ಅದನ್ನು ದೊಡ್ಡದಾಗಿ ಪರಿಗಣಿಸಬೇಡಿ.
ಜೀವನದಲ್ಲಿ ಸ್ವಾರಸ್ಯ ಇರುವುದೇ ಏರುಪೇರುಗಳಲ್ಲಿ ತಾನೆ? ಪ್ರತಿಯೊಬ್ಬರನ್ನೂ ನಿಮ್ಮ ನಿರೀಕ್ಷೆಗನುಗುಣವಾಗಿ ತೂಗಿ ನೋಡಲು ಪ್ರಯತ್ನಿಸಬೇಡಿ. ಅದಕ್ಕೆ ಬದಲಾಗಿ ಅವರನ್ನು ಇರುವ ಹಾಗೆಯೇ ಒಪ್ಪಿಕೊಳ್ಳಲು ಅಭ್ಯಾಸ ಮಾಡಿಕೊಳ್ಳಿ. ಬೇರೆಯವರು ನಿಮ್ಮ ಇಷ್ಟದಂತೆ ನಡೆದುಕೊಳ್ಳದೇ ಹೋಗಬಹುದು. ಆದರೆ ನಿಮ್ಮ ಜೀವನ ನಿಮ್ಮ ಇಷ್ಟದಂತೆಯೇ ಮುಂದುವರಿಯುತ್ತದೆ. ನೆನಪಿರಲಿ. ಕೊಡುವುದರಲ್ಲಿಯ ಆನಂದ ತೆಗೆದುಕೊಳ್ಳುವುದರಲ್ಲಿ ಲಭಿಸುವುದಿಲ್ಲ. ಪ್ರೀತಿಯೂ ಹಾಗೆಯೇ. ಪ್ರೀತಿಯನ್ನು ಅಪರಿಮಿತವಾಗಿ ನೀಡುವುದರಿಂದ ಲಭಿಸುವ ಆನಂದಕ್ಕೆ ಇತಿಮಿತಿಯಿಲ್ಲ. ಇದನ್ನು ಕೇವಲ ಮಾತುಗಳಲ್ಲಿ ಹೇಳುವುದಕ್ಕಿಂತ ಮತ್ತು ಕೇಳುವುದಕ್ಕಿಂತ ಕ್ರಿಯಾಶೀಲರಾಗಿ ನೋಡಿ. ಆಗ ಸಂಪೂರ್ಣ ಸತ್ಯದ ಅನುಭವ ಆಗುತ್ತದೆ’’.

ಗಮನಿಸಿ. ಇವು ನನ್ನ ಮಾತುಗಳಲ್ಲ. ಸದ್ಗುರುವಿನ ಹಿತನುಡಿಗಳು. ಎಷ್ಟು ಅರ್ಥಪೂರ್ಣವಾಗಿದೆಯಲ್ಲ. ಹೇಳುವುದು ಸುಲಭ. ಆಚರಣೆಗೆ ಪ್ರಯತ್ನವಂತೂ ಪಡಬೇಕು. ಇರಲಿ. ಮುಂದಿನ ವಿಷಯಕ್ಕೆ ಬರೋಣ.

ಜೆಜೆ ಮದುವೆಗೂ ಮೊದಲು ಹೋಟೆಲ್ ಕೋಣೆಯಲ್ಲಿದ್ದ. ಮದುವೆಯನಂತರ ೨ ದಿನ ಇಲ್ಲಿ ನಮ್ಮ ಮನೆಯಲ್ಲಿದ್ದ. ನಿಜಕ್ಕೂ ಮೆಚ್ಚಬೇಕು ಅವನನ್ನು. ಹೊಸ ಪರಿಸರ, ಭಾಷೆ ಹೊಸದು, ಜನ ಹೊಸಬರು. ಎಷ್ಟು ಚೆನ್ನಾಗಿ ಹೊಂದಿಕೊಂಡ ಎಂದರೆ ಜಯಶ್ರೀ ಮಾತುಗಳಲ್ಲೇ ಕೇಳಿ “ನನ್ನ ಮಕ್ಕಳೇ ಹೆಚ್ಚು ಕೋಲ ಕಟ್ಟುತ್ತಾರೆ. ಜೆಜೆ ಸುಖವಾಗಿ ಇದ್ದ’’. ಜೆಜೆ ತಂದೆ ಫ್ರಾಂಕ್ ಕೂಡ ತುಂಬ ಸಂತೋಷಪಟ್ಟರು. “ಭಾರತಕ್ಕೆ ಬಂದದ್ದು ಖುಷಿಯಾಯಿತು. ನಿಮ್ಮ ಎಲ್ಲರ ಭೇಟಿಯಿಂದ ಸಂತೋಷವಾಯಿತು. ಇಷ್ಟು ಬೇಗ ಹೋಗಬೇಕಲ್ಲ ಎಂದು ಬೇಸರವಾಗುತ್ತದೆ’’ ಎಂದರು. ಅಮೇರಿಕನ್ನರು ಎಲ್ಲರೂ ಬರೀಗೈಯಲ್ಲೇ ಅನ್ನ ಸಾರು ತಿಂದರು. ಚಮಚ ಬೇಡ ಎಂದರು.  ನಾವು ಏನು ಅಡುಗೆ ಮಾಡಿದ್ದೆವೋ ಅದನ್ನೇ ಹಾಕಿಸಿಕೊಂಡು ಇಷ್ಟಪಟ್ಟು ತಿಂದರು. ಚಪಾತಿ ಪಲ್ಯ ಅಂತೂ ಖುಷಿಯಿಂದ ತಿಂದರು. ಎಲ್ಲವನ್ನೂ ಕುತೂಹಲದಿಂದ ನೋಡಿ ಅನುಭವಿಸಿ ಸಂತಸಪಟ್ಟರು. ಈ ಮದುವೆಯಿಂದ ಇಂಡೋ ಅಮೇರಿಕನ್ ಭಾಂದವ್ಯ ಬೆಸೆದಂತಾಯಿತು.
ಇನ್ನು ಈ ಮದುವೆ ಚಂದಗಾಣಿಸಲು ಸಹಕರಿಸಿದವರು ಯಾರ್ಯಾರೆಂದರೆ ಮದುವೆಯ ಆದರಾತಿಥ್ಯದ ಹೊಣೆ ಹೊತ್ತವರು ವೆಂಕಟ್ರಮಣ ರಾವ್. ೧೪೯೩/೧, ಬಾಪುಸುಬ್ಬರಾವ್ ರಸ್ತೆ, ಶಿವರಾಮಪೇಟೆ, ಮೈಸೂರು-೧. ಬೆಳಗ್ಗೆ ಚಹ ಕಾಫಿಯಿಂದ ಹಿಡಿದು ಮಧ್ಯಾಹ್ನ ಊಟೋಪಚಾರದವರೆಗೂ ಅಷ್ಟೇ ಪ್ರೀತಿಯಿಂದ ಅವರ ಮನೆ ಮದುವೆಯೇನೋ ಎಂಬಂತೆ ಕಾಳಜಿಯಿಂದ ಬೇಸರವಿಲ್ಲದೆ ಉಪಚರಿಸಿದ್ದಾರೆ. ವೆಂಕಟ್ರಮಣ ರಾವ್ ಮತ್ತು ಅವರ ಬಳಗದ ಎಲ್ಲರಿಗೂ ನಮ್ಮ ಕೃತಜ್ಞತೆಗಳು. ೨೬ನೇ ತಾರೀಕಿನಿಂದ ೩ ದಿನ ನಮ್ಮ ಮನೆಯಲ್ಲಿ ೨೦ -೩೦ ಜನರಿಗೆ ತಿಂಡಿ ಊಟ ಎಂದು ಕಾಲ ಕಾಲಕ್ಕೆ ಮಾಡಿ ಬಡಿಸಿದವರು ಕೃಷ್ಣ ಯಾನೆ ಕಿಟ್ಟಣ್ಣ. ಅದು ಮಾಡೋಣ, ಇದು ಮಾಡೋಣ, ಎಂದು ಚುರುಕಾಗಿ ಓಡಾಡುತ್ತ ರುಚಿರುಚಿಯಾಗಿ ಬಗೆ ಬಗೆಯ ಕೂಟಕಗಳನ್ನು ತಯಾರಿಸಿಕೊಟ್ಟಿದ್ದಾರೆ. ಅವರ  ಈ ಅತಿಶಯ ಪ್ರೀತಿಗೆ ನಮೋನಮಃ. ವಧುವನ್ನು ಅಲಂಕರಿಸಿದ ಶುಭಾ, ಕಲ್ಯಾಣಮಂಟಪದಲ್ಲಿ ಕೋಣೆಗಳ ಉಸ್ತುವಾರಿ ವಹಿಸಿದ ಪ್ರಕಾಶ, ಎಲ್ಲದರಲ್ಲೂ ಸಹಕರಿಸಿದ ಅಶೋಕವರ್ಧನ, ದೇವಕಿ, ರಶ್ಮಿ, ಅಭಯಸಿಂಹ, ಅಕ್ಷರಿ, ಮಹೇಶ, ಮತ್ತು ಪ್ರತ್ಯಕ್ಷ ಪರೋಕ್ಷವಾಗಿ ಸಹಕರಿಸಿದ ಎಲ್ಲ ಸಮಸ್ತ ಬಂಧುಗಳೂ ಎಲ್ಲ ಕೆಲಸಕಾರ್ಯಗಳಲ್ಲೂ ಹೆಗಲು ಕೊಟ್ಟು ನಮ್ಮ ಹೊಣೆಯನ್ನು ಹಗುರಗೊಳಿಸಿದ್ದಕ್ಕೆ ಧನ್ಯವಾದಗಳು. ದೂರದ ದೇಶದಿಂದ ಬಂದು ಇಲ್ಲಿ ಮದುವೆ ಮಾಡುವುದು ಸುಲಭದ ಕೆಲಸವಲ್ಲ. ಆನಂದವರ್ಧನ ಜಯಶ್ರೀ ಹಾಗೂ ಮಕ್ಕಳಾದ ಅನರ್ಘ್ಯ, ಐಶ್ವರ್ಯ ಇಲ್ಲಿ ಬಂದು ಮದುವೆ ಕಲಾಪವನ್ನು ಸಂತಸದಿಂದ ಮಾಡಿ ಮುಗಿಸಿ ಜೈ ಅನಿಸಿಕೊಂಡು ಮರಳಿ ಅವರ ಸ್ವಸ್ಥಾನ ಕ್ಷೇಮದಿಂದ ಸೇರಿದರು.
ಈ ಮದುವೆಯಲ್ಲಿ ಏನೇ ಲೋಪದೋಷಗಳು ಕಂಡುಬಂದಿದ್ದರೂ ಅದರ ಪೂರ್ಣ ಹೊಣೆಯನ್ನು ನಾವು (ಅನಂತ ಮತ್ತು ನಾನು) ಹೊತ್ತುಕೊಳ್ಳುತ್ತೇವೆ. ನೂತನ ಮಧುಮಕ್ಕಳು ಸಂತೋಷದಿಂದ ಜೀವನ ನಡೆಸುವುದನ್ನು ಹಳೆ ದಂಪತಿಗಳು ನೋಡಿ ಹರ್ಷಿಸಲಿ. ಪ್ರೀತಿ ಎಂಬುದು ರೋಹಣವಾಗಲಿ ಎಂಬ ಹಾರೈಕೆಯೊಡನೆ ಈ ಬಂಧವನ್ನು ಮುಕ್ತಾಯಗೊಳಿಸುವೆ.

ಅತ್ರಿ ಸಂಸಾರ

ಚಿತ್ರದ ಮೇಲಿನ ಸಾಲು: ಎಡದಿಂದ ಬಲಕ್ಕೆರುಕ್ಮಿಣಿಮಾಲಾ, ಜಯಶ್ರೀ, A three ಜನ್ಮದಾತೆ  ಲಕ್ಷ್ಮೀದೇವಿ, ದೇವಕಿ.

ಕೆಳಗಿನ ಸಾಲು:  ಅನಂತವರ್ಧನ,  ಆನಂದವರ್ಧನ,  ಅಶೋಕವರ್ಧನ.

 

 

 

 

 

 

 

Read Full Post »


ಸೀತಾಲಕ್ಷ್ಮಿ (೧೯೪೦-೨೦೧೧) ನನಗೆ ಸಂಬಂಧದಲ್ಲಿ ದೊಡ್ಡಮ್ಮ ಆಗಬೇಕು. ಆದರೆ ನಾವು ಭೇಟಿ ಆದಾಗಲೆಲ್ಲ ಒಬ್ಬರಿಗೊಬ್ಬರು ಚುಡಾಯಿಸಿಕೊಳ್ಳುತ್ತ ಒಳ್ಳೆಯ ಸ್ನೇಹಿತರಂತೆ ಇದ್ದೆವು. ಅವರೂ ನನ್ನನ್ನು ಯಾರಿಗಾದರೂ ಪರಿಚಯಿಸುವಾಗ `ನನಗೆ ಧರ್ಮಕ್ಕೆ ಇಂಥ ದೊಡ್ಡ ಮಗಳು ಸಿಕ್ಕಿದ್ದಾಳೆ’ ಎನ್ನುತ್ತಿದ್ದರು.  ಆದರೆ ನಾನು ಅವರನ್ನು ದೊಡ್ಡಮ್ಮ ಎಂದು ಕರೆದದ್ದೇ ಇಲ್ಲ. ಎಲ್ಲರೂ ಅವರನ್ನು ಸೀತೆ ಎಂದೇ ಕರೆಯುತ್ತಿದ್ದುದು. ನಾನು ಹಾಗೆಯೇ ಹೇಳುತ್ತಿದ್ದುದು. ಅವರಿಗೆ ಮೂಗು ಕಟ್ಟಿಕೊಂಡಾಗ ತಮಾಷೆಗೆ ನಾನು `ಏನು ದೊಡ್ಡಮ್ಮನವರಿಗೆ ಸೀತ ಆಗಿದೆ’ ಎನ್ನುತ್ತಿದ್ದೆ. ಅದಕ್ಕವರು ಸೀತಳಿಗೆ ಯಾವಾಗಲೂ ಸೀತ ಎನ್ನುತ್ತಿದ್ದರು.
ಸುಮಾರು ಇಸವಿ ೨೦೦೦ದಿಂದ ಅವರು ಮೈಸೂರಲ್ಲಿ ವಾಸವಾಗಿದ್ದರು. ಅದಕ್ಕೂ ಮೊದಲು ಜೆಮ್ಷೆಡ್ಪುರ, ಪೂನಾ, ಬೆಂಗಳೂರು, ಪರದೇಶ ಎಂದು ಸುತ್ತಾಟದಲ್ಲಿದ್ದರು. ಮಗಳು ಗೌರಿ ಪರದೇಶದಲ್ಲಿ ನೆಲೆಸಿ, ಮಗ ಅಶೋಕ ಮೈಸೂರಲ್ಲಿ ವಾಸವಾಗಿದ್ದಾರೆ.
ಸೀತೆ ಸಂಗೀತ ಕಲಿಯಲು ಸೇರಿದ್ದರು. ಸಂಗೀತ ತರಗತಿ ನಮ್ಮ ಮನೆ ಹತ್ತಿರವೇ ಇತ್ತು. ಅಲ್ಲಿಗೆ ಬಂದವರು ಹೆಚ್ಚಾಗಿ ತರಗತಿ ಮುಗಿದಮೆಲೆ ನಮ್ಮಲ್ಲಿಗೆ ಬರುತ್ತಿದ್ದರು. ಒಂದು ಡೋಸ್ ಸಕ್ಕರೆ ಹಾಕದ ಕಾಫಿ ಕುಡಿಯುತ್ತ ನಮ್ಮ ಮಾತು ಸಾಗುತ್ತಿತ್ತು. ಕಾಫಿ ಕುಡಿಯಲು ಅರ್ಧ ಗಂಟೆ ಬೇಕಾಗುತ್ತಿತ್ತು ಅವರಿಗೆ. ಮಧ್ಯೆ ನಾನು ಕಾಫಿ ತಣ್ಣಗಾಯಿತು. ನಾನು ಬಿಸಿ ಮಾಡಿ ಕೊಟ್ಟದ್ದು ದಂಡ ಎಂದರೆ ಬಿಸಿ ಕುಡಿಯಲಾಗಲ್ಲ ತಣ್ಣಗೇ ಇಷ್ಟ ಎಂದು ನುಡಿದು, ನೋಡು ಸಕ್ಕರೆ ಹಾಕದ ಕಾಫಿ ಕುಡಿಯಲು ಸೊಸೆ ಹೇಳಿಕೊಟ್ಟದ್ದು ಎನ್ನುತ್ತಿದ್ದರು. ಮಾತಿನ ನಡುವೆ ಸಂದರ್ಭಕ್ಕೆ ತಕ್ಕಂತೆ ವಿನೋದದಿಂದ ಮಾತಾಡುವ (ಸೆನ್ಸ್ ಆಫ್ ಹ್ಯೂಮರ್) ಶೈಲಿ ಅವರಿಗೆ ಹುಟ್ಟಿನಿಂದಲೆ ಬಂದ ಬಳುವಳಿ. ಅಂತ ಮಾತನ್ನು ಕೇಳಿ ಆನಂದಿಸುವ, ಮಾತಿನ ನಡುವೆ ಹಾಗೆಯೇ ಹಾಸ್ಯ ಸೇರಿಸುವ ಚಟ ನನಗೂ ಇದೆ. ಹಾಗಾಗಿ ನಾವಿಬ್ಬರೂ ಸೇರಿದರೆ ಆ ದಿನವೇ ನಮಗೆ ದೊಡ್ಡ ಹಬ್ಬ. ಭಾರತ ಸಂಸ್ಕೃತಿ ಪ್ರತಿಷ್ಠಾನ ನಡೆಸುವ ರಾಮಾಯಣ ಮಹಾಭಾರತ ಪರೀಕ್ಷೆಯ ಉತ್ತರ ಪತ್ರಿಕೆಯ ಮೌಲ್ಯಮಾಪನ ಮಾಡಲು ಜೊತೆಯಾಗಿ ಹೋಗುತ್ತಿದ್ದೆವು. ಕೆಲವು ಮಕ್ಕಳು ಅವರ ಕಲ್ಪನಾ ಲಹರಿಯಿಂದ ಯದ್ವಾತದ್ವ ಉತ್ತರ ಬರೆಯುತ್ತಿದ್ದರು. ನಾವಿಬ್ಬರೂ ಅಂತದ್ದೇನಾದರೂ ಕಂಡು ಬಂದರೆ ಪರಸ್ಪರ ಅದನ್ನು ಹಂಚಿಕೊಂಡು ನಗುತ್ತ ಖುಷಿಯಿಂದ ಕೆಲಸ ಮುಂದುವರಿಸುತ್ತಿದ್ದೆವು.
ಸೀತೆ ಇದ್ದಲ್ಲಿ ನಗು, ಮಾತು ಇರುತ್ತಿತ್ತು. ಅವರ ಸಂಗೀತ ತರಗತಿಯಲ್ಲಿ ಕೂಡ ನಗೆ ಬಾಂಬ್ ಸಾಕಷ್ಟು ಸಿಡಿಯುತ್ತಿತ್ತಂತೆ. ಒಂದು ಉದಾಹರಣೆ: ಗುರುಗಳು ಒಮ್ಮೆ ಚಾರುಕೇಶಿ ರಾಗ ಪಾಟ ಮಾಡುತ್ತ ಇದನ್ನು ನಾಳೆ ಎಲ್ಲರೂ ಬಾಯಿಪಾಟ ಮಾಡಿ ಒಪ್ಪಿಸಬೇಕು. ಇಲ್ಲಾಂದರೆ ಪಾಟ ಮುಂದುವರಿಸಲ್ಲ ಎಂದರಂತೆ. ಆಗ ಮೌನವೇ ರಾಜ್ಯಭಾರ ಮಾಡುತ್ತಿತ್ತಂತೆ. ಕೂಡಲೇ ಸೀತೆ `ನಾಳೆ ಬರುವಾಗ ಇರುವ ಚಾರ್ ಕೇಶ ಕೂಡ ಇರೋಲ್ಲ’ ಎಂದರಂತೆ. ಒಂದುಕ್ಷಣ ಯಾರಿಗೂ ಅರ್ಥವಾಗಲಿಲ್ಲವಂತೆ. ನಿಧಾನಕ್ಕೆ ನಗೆ ಬಾಂಬ್ ಹೊಟ್ಟಿತಂತೆ. ಹಾಗೆ ಸಂದರ್ಭಕ್ಕೆ ತಕ್ಕಂತೆ ಯಾರ ಮನ ನೋಯಿಸದೆ ಹಾಸ್ಯದಿಂದ ಮಾತಾಡುವ ಕಲೆ ಅವರಿಗೆ ಜನ್ಮದತ್ತವಾಗಿ ಬಂದಿತ್ತು.
ಸೀತೆಯನ್ನು ಅವರ ನಾಲ್ಕು ಮೊಮ್ಮಕ್ಕಳು ಅಜ್ಜಿ ಎನ್ನುತ್ತಿರಲಿಲ್ಲ. ಅಣ್ಣಮ್ಮ ಎಂದು ಕರೆಯುತ್ತಿದ್ದುದು. ಅಜ್ಜಿ ಎನ್ನಬಾರದು ಎಂದಿತ್ತವರಿಗೆ. ನಮ್ಮ ಮಗಳು ಅಕ್ಷರಿ ಮಾತ್ರ ಬಾಯಿ ತುಂಬ ಮಾತಿಗೆ ಮೊದಲು ಎರಡು ಸಲ ಆಮೇಲೆ ನಾಲ್ಕು ಸಲ ಸೀತಜ್ಜಿ ಎಂದು ಸಂಬೋಧಿಸಿಯೇ ಮಾತಾಡುತ್ತಿದ್ದಳು. ಆಗ ನಾನವರಿಗೆ `ಸಾಕಾ ಅಜ್ಜಿ ಎಂದದ್ದು’ ಎನ್ನುತ್ತಿದ್ದೆ. ಅವರ ಮೊಮ್ಮಗಳು ಶರಣ್ಯಳಿಗೆ ಅಣ್ಣಮ್ಮ ಎನ್ನಬೇಡ ಅಜ್ಜಿ ಎಂದು ಕರಿ ಎಂದು ಹೇಳಿಕೊಡುತ್ತಿದ್ದೆ. ಅವಳೂ ಆಗ ದೊಡ್ಡದಾಗಿ ಅಜ್ಜಿ ಎನ್ನುತ್ತಿದ್ದಳು. ನಾನಾಗ ಅವರನ್ನು ತುಂಟನಗೆಯಿಂದ ಹೇಗೆ ಎನ್ನುತ್ತಿದ್ದೆ. ಆಗವರು ಮೊಮ್ಮಗಳಿಗೆ ಮನೆಗೆ ಬಾ ನೋಡ್ತೀನಿ ಎಂದು ತಮಾಷೆಯಿಂದಲೇ ಹೇಳುತ್ತಿದ್ದರು.
ಇಸವಿ ೨೦೧೧ರಲ್ಲಿ ಸೀತೆ ಆರೇಳು ತಿಂಗಳುಗಳ ಕಾಲ ಮಗಳ ಮನೆಯಲ್ಲಿದ್ದರು. ನವೆಂಬರದಲ್ಲಿ ಮೈಸೂರಿಗೆ ಹೊರಡಲು ನಾಲ್ಕು ದಿನ ಮೊದಲು ಏನೋ ಅನಾರೋಗ್ಯವಾಗಿ ಪರಿಕ್ಷೆಗೊಳಪಟ್ಟಾಗ ಅರ್ಬುದ ರೋಗ ವ್ಯಾಪಿಸಿದ್ದು ತಿಳಿದು ಬಂತು. ಪರದೇಶದಲ್ಲೇ ಅದಕ್ಕೆ ತುರ್ತು ಶಸ್ತ್ರಚಿಕಿತ್ಸೆಯಾಗಿ ಚೇತರಿಸಿ ಒಂದು ತಿಂಗಳ ನಂತರ ಮೈಸೂರಿಗೆ ವಾಪಾಸಾದರು. ಬೆಂಗಳೂರಲ್ಲಿ ೨ ಸಲ ಕೀಮೋಥೆರಪಿ ಚಿಕಿತ್ಸೆ ಯಶಸ್ವಿಯಾಗಿತ್ತು. ನಾನು ಅವರನ್ನು ಮಾತಾಡಿಸಲು ೩ ಸಲ ಹೋಗಿದ್ದೆ. ಏನಾದರೂ ಸಹಾಯ ಬೇಕಾದರೆ ದಾಕ್ಷಿಣ್ಯ ಮಾಡದೆ ಹೇಳಿ. ಧರ್ಮಕ್ಕೆ ಸಿಕ್ಕಿದ ಈ ಮಗಳಿದ್ದಾಳೆ ನಿಮಗೆ ಎಂದು ಹೇಳಬೇಕೆಂದು ಹೋದದ್ದು. ಆದರೆ ಪ್ರತೀಸಲ ಹೋದಾಗಲೆಲ್ಲ ಬೇರೆ ಜನ ಅವರನ್ನು ಮಾತಾಡಿಸಲು ಬಂದಿದ್ದರಿಂದ ಆ ಮಾತು ನನ್ನ ಗಂಟಲಲ್ಲೇ ಉಳಿದಿತ್ತು. ಆಗಲೂ ತಮಾಷೆಯಿಂದಲೇ ನಮ್ಮ ಮಾತುಕತೆ ನಡೆದಿತ್ತು. ನನ್ನ ಕೇಶ ಈಗಾಗಲೆ ಉದುರಲು ಪ್ರಾರಂಭಿಸಿದೆ. ಇನ್ನು ಪೂರ್ತಿ ಉದುರಿದನಂತರ ವಿಗ್ ಹಾಕಿಕೊಳ್ಳಬೇಕಷ್ಟೆ. ಅದೇ ಬಿಳಿಬಣ್ಣದ ವಿಗ್ ಆದೀತ ಎಂದಿದ್ದರು. ಈಗ ನಾನು ಹುಷಾರಾಗೆ ಇದ್ದೇನೆ. ಕೆಲವು ಸಮಯ ಹೋದಮೇಲೆ ಹೇಗೆ ಎಂದು ಹೇಳಲು ಸಾಧ್ಯವಿಲ್ಲ. ಆಮೇಲೆ ನನ್ನ ನೆರವಿಗೆ ಯಾರಾದರೂ ಬೇಕಾಗಬಹುದು. ಅದಕ್ಕಾಗಿ ಈಗಲೆ ಒಬ್ಬಳನ್ನು ನೇಮಿಸಿಕೊಳ್ಳುವುದು ಒಳ್ಳೆಯದೆಂದು ತಿರ್ಮಾನಿಸಿದ್ದೇನೆ. ಮತ್ತೆ ಬೇಕಾಗುವಾಗ ಯಾರು ಸಿಗುತ್ತಾರೆ ಎಂದಿದ್ದರು. ಆದರೆ ಅವರು ಯಾರಿಗೂ ಚಾಕರಿ ಮಾಡಲು ಆಸ್ಪದ ಕೊಡಬಾರದೆಂದಿದ್ದರೇನೋ? ೧೮-೧೨-೨೦೧೧ರಂದು ಕಬಿನಿ ಜಲಾಶಯಕ್ಕೆ ವಿಹಾರಕ್ಕೆಂದು ಕುಟುಂಬದವರೊಡನೆ ಹೋಗಿ ಬಂದು ರಾತ್ರಿ ಪರದೇಶದಲ್ಲಿರುವ ಮಗಳು ಮೊಮ್ಮಕ್ಕಳೊಡನೆ ದೂರವಾಣಿಯಲ್ಲಿ ಮಾತಾಡಿ, ಮೊಮ್ಮಗ  ಸಂದೀಪನಿಗೆ ಗಣಿತ ಪಾಟ ಮಾಡಿ ರಾತ್ರಿ ಮಲಗಿದವರು ೧೯-೧೨-೨೦೧೧ ಬೆಳಗ್ಗೆ ಏಳಲೇ ಇಲ್ಲ. ನಿದ್ದೆಯಲ್ಲಿರುವಾಗಲೇ ಬೆಳಗಿನ ಝಾವ ಹೃದಯ ಸ್ಥಗಿತಗೊಂಡಿತ್ತು. ನಾವು ಕಾಣದ ಪರಲೋಕಕ್ಕೆ ಆತುರದಿಂದ ಧಾವಿಸಿದ್ದರು. ಅವರಿಗಂತೂ ಸುಖಮರಣವೇ ಲಭಿಸಿತ್ತು. ಸೀತೆ ತಮ್ಮ ದೇಹವನ್ನು ಜೆ.ಎಸ್.ಎಸ್ ಆಸ್ಪತ್ರೆಗೆ ಅರ್ಪಿಸಬೇಕೆಂದು ಮೊದಲೆ ದಾಖಲಿಸಿದಂತೆಯೇ ಅವರ ಮಕ್ಕಳು ತೀರ್ಮಾನಿಸಿ ಶರೀರವನ್ನು ಒಪ್ಪಿಸಿದ್ದರು.
೧೩-೧-೨೦೧೨ರಂದು ಸೀತೆ ಸ್ಮರಣಾರ್ಥ ಮೈಸೂರಿನ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಸಂಜೆ ೬.೩೦ಕ್ಕೆ ಒಂದು ಕಾರ್ಯಕ್ರಮ ಏರ್ಪಾಡಾಗಿತ್ತು. ಮೊದಲಿಗೆ ಅಶೋಕ ಅವರಮ್ಮನ ಬಗ್ಗೆ ಆಂಗ್ಲದಲ್ಲಿ ಕೆಲವು ನುಡಿಗಳನ್ನು ಹೇಳಿದರು. ದೇಹದಾನ ಮಾಡುವ ಬಗ್ಗೆ ಮತ್ತು ತದನಂತರ ಅಪರಕರ್ಮಗಳನ್ನು ಮಾಡದೆ ಇರುವುದು ಸರಿಯಾದ ನಿಲುವು ಹಾಗೂ ಎಷ್ಟೋ ಮಂದಿ ಶ್ರದ್ಧೆ ಇಲ್ಲದೆ ಕಾಟಾಚಾರಕ್ಕೆ ಅಪರಕ್ರಿಯೆಗಳನ್ನು ಮಾಡುತ್ತಾರೆ ಅದರಿಂದ ಯಾವ ಪ್ರಯೋಜನ ಕೂಡ ಇಲ್ಲ ಎಂಬ ವಿಷಯವಾಗಿ ಗಂಗಾಧರ ಭಟ್ಟರು, (ಸಂಸ್ಕೃತ ಉಪನ್ಯಾಸಕರು) ಮನೋಜ್ಞವಾಗಿ ಜನರಿಗೆ ಅರ್ಥವಾಗುವಂತೆ ವಿವರಿಸಿದರು. ತದನಂತರ ಒಂದು ಗಂಟೆ ಸೀತೆಯ ಗುರು ವಿದುಷಿ ಸುಕನ್ಯ ಪ್ರಾಭಾಕರ್ ಅವರಿಂದ ಗಾಯನ ನಡೆಯಿತು. ಸೀತೆಗೆ ಪ್ರಿಯವಾದ ರಾಗ ಹಾಡುಗಳನ್ನೇ ತನ್ಮಯತೆಯಿಂದ ಹಾಡಿ ತಮ್ಮ ಶಿಷ್ಯೆಗೆ ಅರ್ಪಿಸಿದರು. ಗೌರಿ ವಂದನಾರ್ಪಣೆ ಮಾಡಿದರು.  (ನಾನು ಸಂಗೀತ ಆಲಿಸುತ್ತ ತಲೆ ಅಲ್ಲಾಡಿಸುತ್ತ ಕೂತಾಗ ಸೀತೆ ನನ್ನನ್ನೇ ನೋಡುವುದನ್ನು ಕಂಡು ತಲೆ ಅಲ್ಲಾಡಿಸುವುದನ್ನು ಬಿಟ್ಟೆ! ನನಗೂ ಸಂಗೀತಕ್ಕೂ ಸ್ವಲ್ಪ ದೂರ. ಯಾವುದಾದರೂ ಸಂದರ್ಭದಲ್ಲಿ ಅನಿವಾರ್ಯುವಾಗಿ ನಾನು ಸಂಗೀತ ಕಚೇರಿಗೆ ಹೋದಾಗ ಅವರು ಇವತ್ತು ಮಳೆ ಬರುತ್ತೆ ಎನ್ನುತ್ತಿದ್ದರು. ಹೌದು ಎನ್ನುತ್ತಿದ್ದೆ. ಹಾಡು ಕೇಳಲು ಖುಷಿಯೇ. ಆದರೆ ಈ ಆಲಾಪನೆ ಯಾಕಾದರೂ ಮಾಡುತ್ತಾರೋ ಎಂದು ನಾನಂದರೆ ಹೌದಪ್ಪ ನಿದ್ದೆ ಬರುತ್ತೆ ಕೇಳುತ್ತ ಕೂತರೆ ಎನ್ನುತ್ತಿದ್ದರು.)
ಪರಲೋಕದಲ್ಲಿ ತಮ್ಮ ಪ್ರೀತಿಯ ಅಣ್ಣ ನಾರ್ಣಯ್ಯ (ಜಿ.ಟಿ. ನಾರಾಯಣ ರಾವ್) ನೊಂದಿಗೆ ಹರಟೆ ಹೊಡೆಯುತ್ತ, ಸಂಗೀತ ಆಲಿಸುತ್ತ ಸೀತೆ ಸಂತಸದಿಂದ ಇರಬಹುದು. ಅಲ್ಲಿ ಕಚೇರಿ ಕೊಡಲು ಪುರಂದರದಾಸರು, ಕನಕದಾಸರು, ತ್ಯಾಗರಾಜರು, ಇತ್ಯಾದಿ ಇತ್ಯಾದಿ ಸಂಗೀತ ದಿಗ್ಗಜರು ಹಾಗೂ ಕೇಳಲು ಉತ್ತಮ ಶೋತೃವೃಂದವೇ ಇರಬಹುದು. ಡಿವಿಜಿ ಯವರು ಮಂಕುತಿಮ್ಮನ ಕಗ್ಗವನ್ನು ವಾಚಿಸಬಹುದು.  ಸೀತೆ ಸದಾ ನನ್ನ ಮನದಲ್ಲಿ ಅವರ ನಗೆಯ ಮಾತುಗಳಿಂದಲೇ ಚಿರಸ್ಥಾಯಿಯಾಗಿರುತ್ತಾರೆ. ಅವರಿಗಿದೋ ನಮ್ಮೆಲ್ಲರ ನುಡಿನಮನ.

Read Full Post »

 ಮಾವ (ಜಿ.ಟಿ. ನಾರಾಯಣ ರಾವ್) ನಮ್ಮಿಂದ ದೂರವಾಗಿ ಇಂದಿಗೆ (೨೭-೬-೨೦೧೧) ೩ ವರ್ಷ ಕಳೆದೇ ಹೋಯಿತು. ಬೆಳಗ್ಗೆ ಅವರ ತಮ್ಮ ರಾಘವೇಂದ್ರ ದೂರವಾಣಿಸಿ ಅಣ್ಣನ ನೆನಪುಗಳನ್ನು ನಮ್ಮೊಡನೆ ಹಂಚಿಕೊಂಡರು. ಅವರೊಂದಿಗೆ ಮಾತಾಡುವಾಗ ಅತ್ತೆಗೆ ಹಳೆ ನೆನಪುಗಳು ಮರುಕಳಿಸಿ ಸ್ವರ ಭಾರವಾಯಿತು.

       ಮಾವ ತಮ್ಮ ದೇಹದಾನ ಮಾಡಲು ಬಯಸಿ, ಅದರಂತೆ ದೇಹದಾನ ಮಾಡಲಾಗಿತ್ತು. ತದನಂತರ ಸುಮಾರು ಮಂದಿ ನಮ್ಮ ನೆಂಟರಿಷ್ಟರು ತಮ್ಮ ಮರಣಾನಂತರ ದೇಹದಾನ ಮಾಡಬೇಕೆಂದು ನೋಂದಣಿ ಮಾಡಿಸಿಕೊಂಡಿದ್ದಾರೆ. ಮಾವನ ತಿಥಿ ಇತ್ಯಾದಿ ಯಾವ ಅಪರ ಕಾರ್ಯವನ್ನೂ ಮಾಡುತ್ತಿಲ್ಲ. ಸತ್ತಮೇಲೆ ತಿಥಿ ಮಾಡುವ ಅಗತ್ಯವಿಲ್ಲ ಎಂದವರ ಅಪ್ಪಣೆಯಾಗಿತ್ತು. ಅದರಂತೆ ನಾವು ಅವರ ಮಾತಿಗೆ ಬೆಲೆ ಕೊಟ್ಟು ಆ ಕಾರ್ಯಗಳಿಂದ ದೂರ ಸರಿದೆವು. ಮಾವನ ಸ್ಮರಣೆಯಲ್ಲಿ ಪ್ರತೀವರ್ಷ ಯಕ್ಷಗಾನ ಏರ್ಪಡಿಸಲಾಗುತ್ತದೆ. ೨೧ ಆಗಸ್ಟ್ ೨೦೦೧೧ರಂದು ಮೈಸೂರಿನ ವೀಣೆಶೇಷಣ್ಣ ಭವನದಲ್ಲಿ ಸಂಜೆ ಯಕ್ಷಗಾನ ಕಾರ್ಯಕ್ರಮ ಏರ್ಪಡಿಸಲಾಗಿದೆ. ೧೪-೬-೨೦೧೧ರಂದು ಖಗ್ರಾಹ ಚಂದ್ರಗ್ರಹಣ ವೀಕ್ಷಿಸಿದಾಗ ಮಾವನ ನೆನಪು ಬಹಳವಾಗಿ ಬಂತು. ಇಸವಿ ೨೦೦೦ ದಲ್ಲಿ ಚಂದ್ರಗ್ರಹಣವನ್ನು ಮಧ್ಯರಾತ್ರಿ ಏಳಲು ಉದಾಸೀನವಾಗಿ ನೋಡಿರಲಿಲ್ಲ. ಮಾವ ಮರುದಿನ ಬೆಳಗ್ಗೆ ಚಂದ್ರಗ್ರಹಣದ ಬಗ್ಗೆ ವಿವರಿಸುವಾಗ ಛೆ! ನಾನು ನೋಡಬೇಕಿತ್ತು ಎಂದು ಅನಿಸಿತ್ತು. ಅದಕ್ಕಾಗಿ ಈ ಸಲ ನಿದ್ರೆ ಮಾಡದೆ ಎಚ್ಚರದಲ್ಲಿದ್ದು ಗ್ರಹಣ ವೀಕ್ಷಿಸಿ ಆಕಾಶದ ವಿಸ್ಮಯವನ್ನು ನೋಡಿ ಆನಂದಿಸಿದೆ. ಇನ್ನು ಮುಂದೆ ಖಗ್ರಾಹ ಚಂದ್ರಗ್ರಹಣ ನೋಡುವ ಅವಕಾಶ ನಮಗೆ ಇಲ್ಲ. ಇನ್ನು ೧೧೩ ವರ್ಷಗಳ ತರುವಾಯ ಗೋಚರಿಸುವುದಂತೆ! ಮಾವ ಇದ್ದಾಗ ಒಮ್ಮೆಯೂ ಗ್ರಹಣದ ಬಗ್ಗೆಯಾಗಲೀ, ಆಕಾಶದ ಕಡೆ ಮುಖವೇ ಹಾಕದೆ ಇದ್ದುದು ಈಗ ತಪ್ಪು ಎನಿಸುತ್ತದೆ. ಒಬ್ಬ ವ್ಯಕ್ತಿ ಇರುವಾಗ ಅವರ ಮಹತ್ತ್ವ ಗೊತ್ತಾಗುವುದಿಲ್ಲ. ಇಲ್ಲದಾಗಲೇ ಅರಿವು ಬಂದು ಹಾಗೆ ಮಾಡಬೇಕಿತ್ತು ಹೀಗೆ ಮಾಡಬೇಕಿತ್ತು ಎಂದಾಗುವುದು ಅಷ್ಟೇ ಖರೆ! ಮಾವನ ನೆನಪು ನಮ್ಮೆ ಲ್ಲರಲ್ಲೂ ಸ್ಥಾವರವಾಗಿದೆ.

Read Full Post »

ಮಾಲಾ ಲಹರಿ ಬ್ಲಾಗಿನ ಹುಟ್ಟಿದ ದಿನ ಕಳೆದೇ ಹೋಯಿತು. ಅದು ನನ್ನ ಗಮನಕ್ಕೆ ಬರುವಾಗ ವಾರ ಕಳೆಯಿತು! ಬ್ಲಾಗ್  ೨೦೦೯ ಜನವರಿ ೭ರಂದು  ಈ ಲೋಕಕ್ಕೆ  ಪರಿಚಯವಾಗಿ ೨ ವರ್ಷ ಸಂದಿತು.  ೯ ಸಾವಿರಕ್ಕೂ ಅಧಿಕ ಮಂದಿ ಈ ಬ್ಲಾಗಿನೊಳಗೆ ನುಸುಳಿದ್ದಾರೆ. ಹಲವರು ಪ್ರೋತ್ಸಾಹದ ನುಡಿಗಳನ್ನು ಬರೆದಿದ್ದಾರೆ.  ಎಲ್ಲರಿಗೂ ನನ್ನ ಕೃತಜ್ಞತೆಗಳು.  ಮುಂದೂ ಹೀಗೆ ಒಂದೊಂದು ಲೇಖನ ಹಾಕುತ್ತ  ಬ್ಲಾಗನ್ನು ಜೀವಂತದಲ್ಲಿಡುವ ಪ್ರಯತ್ನ ಮಾಡುತ್ತೇನೆ.   ನಿಮ್ಮೆಲ್ಲರ ಸಹಕಾರವಿರಲಿ. ವಂದನೆಗಳು.

ಇಷ್ಟು ಸಮಯ ಬ್ಲಾಗಿಗೆ ಲೇಖನ ಹಾಕಬೇಕಾದಾಗಲೆಲ್ಲ ಅದನ್ನು ಅಭಯಸಿಂಹನಿಗೆ ರವಾನಿಸುತ್ತಿದ್ದೆ. ಅವನು ಅವನ್ನು ಅಚ್ಚುಕಟ್ಟಾಗಿ ಕೂಡಲೆ ಬ್ಲಾಗಿಗೇರಿಸಸುತ್ತಿದ್ದ. ಅವನಿಗೆ ಧನ್ಯವಾದಗಳು.  ಈಗ ಕೆಲವು ತಿಂಗಳಿಂದ ಅವನಿಗೆ ತೊಂದರೆ ಕೊಡದೆ ನಾನೇ ಹಾಕಲು ಕಲಿತೆ.   ಚಿತ್ರ  ಹಾಕುವಾಗ ಮಾತ್ರ  ಸ್ವಲ್ಪ ಏರುಪೇರು ಆಗುತ್ತದೆ.

Read Full Post »

Older Posts »