Feeds:
ಲೇಖನಗಳು
ಟಿಪ್ಪಣಿಗಳು

Archive for the ‘ಸೈಕಲ್ ಸವಾರಿ’ Category

 ಸೈಕಲ್ ಸವಾರಿ ಹೊರಡದೆ ಬಹಳ ಸಮಯವಾಗಿತ್ತು. ೧೪.೭.೨೦೧೫ರಂದು ಸುಸಂದರ್ಭ ಒದಗಿ ಬಂದಿತ್ತು. ಬೆಳಗ್ಗೆ ೮.೧೫ಕ್ಕೆ ಮೈಸೂರಿನ ಸರಸ್ವತೀಪುರದಿಂದ ಹೊರಟು ಕೃಷ್ಣರಾಜಸಾಗರ ರಸ್ತೆ ಮಾರ್ಗವಾಗಿ ಸುಮಾರು ೧೫ಕಿಮೀ ದೂರದ ಬೆಳಗೊಳದ ಸರ್ವಧರ್ಮ ಆಶ್ರಮ (ಭಂ ಭಂ ಆಶ್ರಮ)ಕ್ಕೆ ಹೊರಟೆವು. ೧೭ ಮಂದಿ ಸೈಕಲ್, ನಡೆದವರು ೬ ಮಂದಿ, ಉಳಿದವರು ಕಾರುಗಳಲ್ಲಿ ಹೀಗೆ ಒಟ್ಟು ೩೨ ಮಂದಿ. ೧೬ ಸೈಕಲಲ್ಲೂ ಗಂಡಸರು. ಸೈಕಲ್ ಏರಿದ ಏಕೈಕ ಮಹಿಳಾಮಣಿ ನಾನು! (ಗಂಡಸರಿಗೆ ದೃಷ್ಟಿಯಾಗದಂತೆ!) ಸೈಕಲ್ ತುಳಿಯದೆ ಎಷ್ಟೊ ಕಾಲವಾದನಂತರ ಇಷ್ಟಪಟ್ಟು ಬಾಡಿಗೆ ಸೈಕಲ್ ಪಡೆದು ನಾಲ್ಕೈದು ಮಂದಿ ಬಂದವರಿದ್ದರು. ಬೆಂಗಳೂರಿಂದ ಬಂದಿದ್ದರು.  ತರುಣರು ನಾಚುವಂತೆ ಸುಮಾರು ಮಂದಿ ೬೦ಪ್ಲಸ್ ನವರು ಸೈಕಲ್ ಮೆಟ್ಟಿದರು!

20150712_080201

   ೯ ಗಂಟೆಗೆ ಕಾಫಿ ಸಂರಕ್ಷಣಾ ಆವರಣದೊಳಗೆ ಬಿಸಿ ಉಪ್ಪಿಟ್ಟು, ಕೇಸರಿಭಾತ್ ತಿಂದು ಮುಂದುವರಿದೆವು. (ತಿಂಡಿಯನ್ನು ಜಿ.ಡಿ. ಸುರೇಶ್ ಸ್ವತಃ ಅವರೇ ತಯಾರಿಸಿ ಅದಕ್ಕೆ ಅವರ ಪ್ರೀತಿತುಂಬಿ ನಮಗೆ ಬಡಿಸಿದ್ದರು.) ಹೋಗುವಾಗ ಏರು ರಸ್ತೆ ಕಡಿಮೆ. ನನ್ನದು ಗೇರ್‌ಸಹಿತ ಸೈಕಲ್. ಹೋಗುವಾಗ ೨*೬ ಗೇರಿನಲ್ಲೇ ಎಲ್ಲೂ ಬದಲಾಯಿಸದೆಯೇ ತುಳಿದೆ. ೧೦ಗಂಟೆಗೆ ಬೆಳಗೊಳದ ಯಂತ್ರಾಗಾರ ತಲಪಿದೆವು. ನಡೆದು ಬಂದವರು ಅದಾಗಲೇ ಅಲ್ಲಿ ವಿಶ್ರಮಿಸಿದ್ದರು. ಅಲ್ಲಿ ಕಾಫಿ, ಟೀ ಒದಗಿತು. ಅಲ್ಲಿಂದ ಮುಂದೆ ಎಡಕ್ಕೆ ತಿರುಗಿ ಸುಮಾರು ೩ಕಿಮೀ ಕಚ್ಚಾದಾರಿಯಲ್ಲಿ ಸಾಗಿದೆವು. ಇಕ್ಕೆಲಗಳಲ್ಲಿ ಭತ್ತದ ಗದ್ದೆಗಳು. ಭತ್ತ ಕಟಾವಾಗಿ ಹೊಲದಲ್ಲಿ ಹುಲ್ಲು ರಾಶಿ ಕೆಲವೆಡೆ ಇದ್ದುದು ಬಿಟ್ಟರೆ ಹೊಲ ಬಟ್ಟ ಬಯಲು. ಹಕ್ಕಿಗಳು ಹುಳಹುಪ್ಪಟೆ ತಿನ್ನಲು ಅಲ್ಲಿ ಹಾರಾಟ ನಡೆಸುತ್ತಿರುವುದನ್ನು ಕಂಡೆವು. ಕಪ್ಪುತಲೆ ಕೊಕ್ಕರೆಗಳಂತೂ ಸಾಲಾಗಿ ಹೊಲವನ್ನು ಕಾವಲು ಕಾಯುತ್ತಿರುವಂತೆ ಕುಳಿತಿದ್ದುದನ್ನು, ಅವುಗಳ ಆಟ, ಊಟ, ಹಾರಾಟ ನೋಡಿ ಸಂತೋಷಿಸಿದೆವು. ಮುಂದೆ ಸಾಗಿದಂತೆ ಒಂದು ಪುರಾತನ ಭೋಗಾನರಸಿಂಹ ದೇವಾಲಯ ಎದುರಾಗುತ್ತದೆ. ಅಲ್ಲಿವರೆಗೆ ಸೈಕಲ್ ಸವಾರಿ. ದೇವಾಲಯದೊಳಗೆ ಹೋದೆವು. ದೇವಾಲಯದ ಎದುರಿನಿಂದ ದೂರದ ಹೊಲದಲ್ಲಿ ರೈತರು ಕೆಲಸದಲ್ಲಿ ಮಗ್ನರಾಗಿದ್ದರು. ರೈತರ ಬೆವರಹನಿ ಭೂಮಿಗೆ ಬಿದ್ದರೆ ಮಾತ್ರ ನಮಗೆ ಊಟ ಸಿಗುವುದು. ಅಂಥ ರೈತರಿಗೆ ನಮನ.  ದೇವಾಲಯದ ಸುತ್ತಮುತ್ತ ಹೊಲದಲ್ಲಿ  ಮುನಿಯ, ಮೈನಾ, ಸನ್ಬರ್ಡ್, ಇತ್ಯಾದಿ ಹಕ್ಕಿಗಳು ಸ್ವಚ್ಛಂದವಾಗಿ ಹಾರುತ್ತ ಇದ್ದುವು. 20150712_090056

20150712_100222

Picture 224 Picture 229

Picture 228

Picture 204

Picture 210

Picture 212

Picture 155

Picture 163

೧೧ನೇ ಶತಮಾನದ ದೇಗುಲ ಪಾಳುಬಿದ್ದುದನ್ನು ಇಸವಿ ೨೦೦೩ರಲ್ಲಿ ಮಿಶ್ರಾ, ನರಸಿಂಹಯ್ಯ ಮತ್ತು ಕೆಲವು ಸಮಾನ ಮನಸ್ಕರು ಸೇರಿ ಒಂದು ಟ್ರಸ್ಟ್ ಸ್ಥಾಪಿಸಿ, ದಾನಿಗಳ ಸಹಾಯದಿಂದ ಇದೀಗ ೨೦೧೫ರಲ್ಲಿ ಪೂರ್ಣಗೊಳಿಸಿ ಈಗ ಪೂಜೆ ಪುನಸ್ಕಾರ ೩ ತಿಂಗಳಿನಿಂದ ನಡೆಯುತ್ತಿದೆ. ದೇವಾಲಯಕ್ಕೆ ಭದ್ರವಾದ ಆವರಣ ಗೋಡೆಯಿದೆ. ಎರಡು ಕಡೆಯಿಂದ ಪ್ರವೇಶವಿದೆ. ಭೋಗಾನರಸಿಂಹ ಹಾಗೂ ಶ್ರೀನಿವಾಸ ಒಟ್ಟಿಗೆ ಇರುವ ದೇವಾಲಯ ಬಹಳ ಅಪರೂಪವಂತೆ. ಮಂಡ್ಯಜಿಲ್ಲೆಯಲ್ಲಿ ಇದೊಂದೇ ಇರುವುದಂತೆ. ಭೋಗಾನರಸಿಂಹನ ಎಡಬಲದಲ್ಲಿ ಭೂದೇವಿ ಶ್ರೀದೇವಿ ಮೂರ್ತಿಗಳಿವೆ. ದೇವರ ಪೂಜೆ ಮಾಡುವ ಕೈಂಕರ್ಯ ಹಾಸನದಿಂದ ಬಂದ ಅರ್ಚಕ ರಮೇಶರದು. ಅವರಿಗೆ ಬೆಳಗೊಳದಲ್ಲಿ ಮನೆ ವ್ಯವಸ್ಥೆ ಮಾಡಿರುವರಂತೆ. ಬೆಳಗ್ಗೆ ಸಂಜೆ ಎರಡು ಹೊತ್ತು ಪೂಜೆ ನಡೆಯುತ್ತದೆ. ಅರ್ಚಕರಿಗೆ ಮುಂಚಿತವಾಗಿ ದೂರವಾಣಿ ಮಾಡಿ ತಿಳಿಸಿ ಹೋದರೆ ಯಾವ ಸಮಯಕ್ಕಾದರೂ ಸರಿ ಪೂಜೆ ಮಾಡುತ್ತಾರಂತೆ. ಈ ದೇವಾಲಯ ಜೀರ್ಣೋದ್ಧಾರ ಹೊಂದಲು ಮಿಶ್ರಾ ಅವರಿಗೆ ಆದ ಅನುಭವವೇ ಪ್ರೇರಣೆಯಂತೆ. ಒರಿಸ್ಸಾದಿಂದ ಬಂದು ಮೈಸೂರಲ್ಲಿ ನೆಲೆಸಿದ ಮಿಶ್ರಾ ಅವರು ೨೦೦೩ರಲ್ಲಿ ಈ ಪಾಳುಬಿದ್ದ ದೇವಾಲಯಕ್ಕೆ ಬಂದಿದ್ದಾರೆ. ನಡು ಮಧ್ಯಾಹ್ನದ ಹೊತ್ತು. ಕಾರಿನಿಂದ ಇಳಿದು ದೇವಾಲಯಕ್ಕೆ ಹೋಗಿದ್ದಾರೆ. ಮತ್ತೆ ಕಾರಿನ ಬಳಿ ಬಂದಾಗ ಕಾರ್ ಲಾಕ್ ಆಗಿದೆ. ಕೀಲಿ ಕಾರಿನೊಳಗೇ ಇದೆ. ಅಸಾಧ್ಯ ಹೊಟ್ಟೆ ಹಸಿವು. ಊಟ ಕಾರೊಳಗೇ ಇದೆ. ತಿರುಗಿ ದೇವಾಲಯದೊಳಗೆ ಬಂದು ಶ್ರೀನಿವಾಸನ ಎದುರು ನಿಂತು ‘ಅಪ್ಪಾ, ವೆಂಕಟರಮಣ, ನನಗೆ ಅಸಾಧ್ಯ ಹೊಟ್ಟೆ ಹಸಿವು. ಕರುಣಾಮಯಿಯಾದ ನೀನೇ ಈಗ ನನ್ನ ಹಸಿವನ್ನು ತಣಿಸಬೇಕು. ನಾನು ತಿರುಗಿ ಕಾರಿನ ಬಳಿ ಹೋಗುವಾಗ ಕಾರು ಬಾಗಿಲು ತೆರೆದಿರಬೇಕು. ಹಾಗೆ ಮಾಡಪ್ಪ ತಂದೆ’ ಎಂದು ಪ್ರಾರ್ಥಿಸಿದರಂತೆ. ಏನಾಶ್ಚರ್ಯ! ಕಾರು ಲಾಕ್ ತೆರೆದಿತ್ತಂತೆ. ಹಾಗೆ ಅವರು ಈ ದೇವಾಲಯದ ಜೀರ್ಣೋದ್ಧಾರಕ್ಕೆ ಕಾಯಾ ವಾಚಾ ಮನಸು ಹಾಕಿ ಪ್ರತೀದಿನ ಮೈಸೂರಿನಿಂದ ಅಲ್ಲಿ ಬಂದು ಹಗಲಿರುಳು ಶ್ರಮಿಸಿದರಂತೆ. ಈ ನೈಜ ಘಟನೆಯನ್ನು ಇನ್ನೊಬ್ಬ ಟ್ರಸ್ಟಿ ನರಸಿಂಹಯ್ಯ ನಮಗೆ ವಿವರಿಸಿದರು. ದೇವಾಲಯ ನೋಡಿ ಮಂಗಳಾರತಿಯಾಗಿ ತೀರ್ಥ ಸ್ವೀಕರಿಸಿ, ದೇವಾಲಯದ ಇತಿಹಾಸ ಕೇಳಿ ನಾವು ಸರ್ವಧರ್ಮ ಆಶ್ರಮದತ್ತ ಮುಂದುವರಿದೆವು.

ದೇವಾಲಯದಿಂದ ಮಾರು ದೂರ ಹೋಗುವಾಗ ಕಾವೇರಿ ನದಿ ಎದುರಾಗುತ್ತದೆ. ನದಿಯ ಇನ್ನೊಂದು ಬದಿಯಲ್ಲಿ ಸರ್ವಧರ್ಮ ಆಶ್ರಮ ಇರುವುದು. ಭಂ ಭಂ (ತೆಲುಗು ಭಾಷಿಕ) ಸ್ವಾಮಿ ಅದನ್ನು ಸ್ಥಾಪಿಸಿದ್ದಂತೆ. ಸೇತುವೆಯಾಗಬೇಕು ಎಂದು ಆಶ್ರಮದವರ ಬೇಡಿಕೆ. ಸೇತುವೆ ಕೆಲಸ ವ್ಯಾಜ್ಯದಿಂದ ಅರ್ಧದಲ್ಲೇ ನಿಂತಿದೆ. ಹಾಗಾಗಿ ಸಾರ್ವಜನಿಕರಿಗೆ ಆಶ್ರಮಕ್ಕೆ ಪ್ರವೇಶವಿಲ್ಲ ಎಂದು ಫಲಕ ಹಾಕಿದ್ದಾರೆ. ವಿದ್ಯುತ್ ಕಂಬ ಹಾಕಿ ನಡೆದುಹೋಗುವಂತೆ ದಾರಿ ಇದೆ. ನಾವು ಹೋದಾಗ ನಮ್ಮ ಕೋರಿಕೆ ಮೇರೆಗೆ ಬೀಗ ತೆರೆದು ಒಳಗೆ ಬಿಟ್ಟರು. ಹತ್ತಾರು ಎಕರೆ ಪ್ರದೇಶದಲ್ಲಿ ಆಶ್ರಮ ಇದೆ. ಅಲ್ಲಿ ನೋಡುವಂತದ್ದು ಏನೂ ಇಲ್ಲ. ದೊಡ್ಡ ಪ್ರಾರ್ಥನಾ ಮಂದಿರ ಇದೆ. ತೆಂಗಿನ ತೋಟ ನಿರ್ವಹಣೆ ಇಲ್ಲದೆ ಸೊರಗಿದೆ. ಹಿಂದೆ ಭರ್ಜರಿಯಾಗಿ ಭಕ್ತರ ಆಗಮನವಾಗುತ್ತಿದ್ದ ಕುರುಹಾಗಿ ಸರ್ವಧರ್ಮವೆಂದು ಸಾರಲು ಮೇರಿ ಕುಟೀರ, ಬುದ್ಧ ಕುಟೀರ, ಸರಸ್ವತೀಮಂದಿರ ಎಂದು  ಸಾಲಾಗಿ ಹಲವು ಕುಟೀರಗಳು ಇವೆ. ಇಲ್ಲಿ ಭಕ್ತರಿಗೆ ಉಳಿದುಕೊಳ್ಳಲು ವ್ಯವಸ್ಥೆ ಇದೆ. ಈಗ ಭಂ ಭಂ ಸ್ವಾಮಿಗಳು ಇಲ್ಲವಂತೆ.

Picture 234

Picture 254 Picture 252

    ನಾವು ಅಲ್ಲಿಂದ ಹೊರಬಂದು ನದಿಗೆ ಇಳಿದೆವು. ಕಾಲು ನೀರಿಗೆ ಇಳಿಬಿಟ್ಟು ಕೂತೆವು. ನದಿ ನೀರಿನಲ್ಲಿ ಆಡಲು ಇಲ್ಲಿ ಅವಕಾಶವಿದೆ. ಹೆಚ್ಚು ನೀರಿನ ಹರಿವು ಇಲ್ಲದೆ ಆಳವೂ ಇಲ್ಲದೆ ನೀರಿಗಿಳಿಯಬಹುದು. ಆದರೆ ನೆರಳು ಇಲ್ಲ. ತಿರುಗಿ ದೇವಾಲಯದೆಡೆಗೆ ಬಂದೆವು. ನಮ್ಮ ಜೊತೆ ಬಂದ ಎಂ ವಿ. ವಿ. ಸ್ವಾಮಿ ದಂಪತಿಗಳು ಪುನಃ ಸಪ್ತಪದಿ ತುಳಿದರು ಇಲ್ಲಿ. ಸೇತುವೆಮೇಲೆ ಎಚ್ಚರದಿಂದ ಹೆಜ್ಜೆ ಇಡಬೇಕು. ಸ್ವಾಮಿಯವರು ಅವರ ಪತ್ನಿಯನ್ನು ಕೈಹಿಡಿದು ‘ಎಂದೆಂದೂ ಬಿಡಲಾರೆ ನಿನ್ನ ಕೈ’ ಎಂದು ಹಾಡುತ್ತ ನಡೆಸಿಕೊಂಡು ಕರೆತಂದರು.

Picture 257

Picture 262

Picture 259

ಆಗ ಗಂಟೆ ಒಂದು. ಹೊಟ್ಟೆ ಚುರುಗುಟ್ಟಿ ನೆನಪು ಮಾಡಿತು. ಅರ್ಚಕರು ನಮಗಾಗಿ ಬಿಸಿಬೇಳೆಭಾತ್, ಮೊಸರನ್ನ ತಂದಿದ್ದರು. ಸುರೇಶ್ ತೆಂಗಿನಕಾಯಿ ಬರ್ಫಿ ತಂದಿದ್ದರು. ಅವಕ್ಕೆಲ್ಲ ನ್ಯಾಯ ಸಲ್ಲಿಸಿದೆವು. ಮೈಸೂರಿನ ಸೇಟು ಅಂಗಡಿಯವರು ಸೈಕಲ್ ತುಳಿಯುವವರಿಗೆಂದು ಸುರೇಶರಿಗೆ ಖರ್ಜೂರ ಇನಾಮು ಕೊಟ್ಟಿದ್ದರಂತೆ. ಅದನ್ನು ತಿಂದು ಶಕ್ತಿ ಸಂಚಯನಮಾಡಿಕೊಂಡು ವಾಪಾಸು ಸೈಕಲ್ ಮೆಟ್ಟಲು ತಯಾರಾದೆವು. ನಡೆದು ಬಂದವರು ಕಾರ್ ಏರಿದರು.

   ನಡು ಮಧ್ಯಾಹ್ನ ಎರಡು ಗಂಟೆಗೆ ಸರಿಯಾಗಿ ಸೈಕಲ್ ಏರಿದೆವು. ಹೊಟ್ಟೆ ತುಂಬಿತ್ತು, ಬಿಸಿಲಿನ ಝಳ ಸಾಕಷ್ಟು ಇತ್ತು. ಪುಣ್ಯಕ್ಕೆ ಬಿಸಿಲು ನಮ್ಮ ಬೆನ್ನ ಹಿಂದಿತ್ತು. ಕೃಷ್ಣರಾಜ ಸಾಗರ ಮಾರ್ಗವಾಗಿಯೇ ಸಾಗಿದೆವು. ಮೂರು ಕಡೆ ಏರು ಸಾಕಷ್ಟಾಗಿಯೇ ಇತ್ತು. ಸೈಕಲಿನ ಗೇರು ಬದಲಾಯಿಸಬೇಕಾಗಿ ಬಂತು. ೨*೨ಕ್ಕೆ ಗೇರು ಬದಲಾಯಿಸಿ ತುಳಿದೆ. ಒಂದು ಸಮಾಧಾನ ಎಂದರೆ ಯಾವ ಏರಿನಲ್ಲೂ ಸೈಕಲ್ ಬಿಟ್ಟು ಕೆಳಗೆ ಇಳಿಯಲಿಲ್ಲ! ನನ್ನೊಡನೆ ಅಣ್ಣನ ಮಗ ಅಕ್ಷಯಕೃಷ್ಣ ಬಂದಿದ್ದ. ಅವನು ಪ್ರಥಮಬಾರಿ ಇಷ್ಟು ದೂರ ಸೈಕಲ್ ತುಳಿದದ್ದು. ನಾವು ಜೊತೆ ಜೊತೆಗೆ ಸಾಗುತ್ತಿದ್ದೆವು. ಅಬ್ಬ, ನೋಡು ಮುಂದೆ ರಸ್ತೆ ಎಷ್ಟು ಏರು ಇದೆ. ಎಂದು ನಾನು ಹೇಳಿದರೆ ಅವನು ‘ಅತ್ತೆ, ಅದು ಹಾಗೆ ನಮಗೆ ಕಾಣುವುದು. ಅಂಥ ಅಪ್ ಇಲ್ಲ’ ಎನ್ನುತ್ತಿದ್ದ! ಹಾಗೂ ಆ ಏರಿನಲ್ಲಿ ಅವನ ಸೈಕಲ್ ಯಾವ ಕೊರತೆಯೂ ಇಲ್ಲದೆ ಮುಂದೆ ಹೋಗಿ ನನ್ನ ಕಣ್ಣಿಂದ ಮರೆಯಾಗುತ್ತಿತ್ತು! ಅರೆ ಅವನ ಸೈಕಲ್ ಬಹಳ ಚೆನ್ನಾಗಿರಬೇಕು. ಈ ಏರಿನಲ್ಲೂ ಹೇಗೆ ಹೋಗುತ್ತೆ ಎಂದು ನನ್ನ ಸೈಕಲ್ ಬಗ್ಗೆ ಎಲ್ಲಾ ಎರುಗಳಲ್ಲೂ ಸಂಶಯ ಬರುವಂತೆ ಆಗಿತ್ತು! ಹೀಗೆ ಮುಂದೆ ಸಾಗಿದಾಗ ರೈಲು ಹಳಿ ದಾಟಿದಮೆಲೆ ನಮಗೆ ಕೆಲವರಿಗೆ ಸುರೇಶ್ ಮಾವಿನಹಣ್ಣು ತೆಗೆಸಿಕೊಟ್ಟರು. ಅವನ್ನು ತಿಂದು ಶಕ್ತಿಯೂಡಿಕೊಂಡು ಮುಂದೆ ಎಲ್ಲೂ ನಿಲ್ಲದೆ ೩.೩೦ ಗಂಟೆಗೆ ಮೈಸೂರು ತಲಪಿದೆವು. ಯೂಥ್ ಹಾಸ್ಟೆಲ್ ಗಂಗೋತ್ರಿ ಘಟಕದ ವತಿಯಿಂದ ಸದಸ್ಯರಾದ ಎಮ್.ವಿ.ವಿ.ಸ್ವಾಮಿ, ಹಾಗೂ ಸೋಮಶೇಖರ್ ಈ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಕಾರಿನಲ್ಲಿ ತಿಂಡಿ ನೀರು ಇತ್ಯಾದಿ ಸಾಗಿಸಲು ಅವರಿಗೆ ನೆರವು ನೀಡಿದ ನಾರಾಯಣ ರಾವ್, ಡಾ. ನಾಗೇಂದ್ರಪ್ರಸಾದ್ ಮುಂತಾದವರಿಗೆ ಸೈಕಲಿಗರ ಪರವಾಗಿ ವಂದನೆಗಳು.

Read Full Post »

ಮೈಸೂರಿನ ಸರಸ್ವತೀಪುರದಿಂದ ಸುಮಾರು ಹತ್ತು ಕಿಮೀ ದೂರದಲ್ಲಿರುವ ಕೆ.ಹೆಮ್ಮನಹಳ್ಳಿಯ ಮಹಾಲಿಂಗೇಶ್ವರ, ಮಹಾಗಣಪತಿ, ಮಹಾದೇವಿ ದೇವಾಲಯಕ್ಕೆ ೧೫-೩-೨೦೧೫ರಂದು ಸುಮಾರು ೪೦ ಮಂದಿ ತೆರಳಿದ್ದೆವು. ೧೮ ಮಂದಿ ನಡೆದುಕೊಂಡು ಹಾಗೂ ೧೮ ಮಂದಿ ಸೈಕಲಿನಲ್ಲೂ, ನಾಲ್ಕು ಮಂದಿ ಕಾರಿನಲ್ಲೂ ಪ್ರಯಾಣ ಮಾಡಿ ಬೆಳಗ್ಗೆ ೯ ಗಂಟೆಯೊಳಗೆ ದೇವಾಲಯ ತಲಪಿದ್ದೆವು. ನಡೆದುಕೊಂಡು ಹೋದವರು ಬೆಳಗ್ಗೆ ೬ ಗಂಟೆಗೆ ಹೊರಟಿದ್ದರು. ಸೈಕಲ್ ಸವಾರರು ೭.೩೦ಕ್ಕೆ ಹೊರಟಿದ್ದರು.

7

ಫೋಟೋ ಕೃಪೆ: ಸತೀಶಬಾಬು

 

nadige

ಮಧ್ಯೆ ಮಧ್ಯೆ ನಿಲ್ಲುತ್ತ, ನೆಲಗಡಲೆ ಚಿಕ್ಕಿ ಮೆಲ್ಲುತ್ತ ಸಾಗಿದ್ದೆವು. ದಾರಾಳ ಗೋಡಂಬಿ ಹಾಕಿ ಮಾಡಿದ ಚಿಕ್ಕಿಯನ್ನು ಸ್ವತಃ ಸುರೇಶ್ ತಯಾರಿಸಿದ್ದರು. ಸೈಕಲ್ ತುಳಿಯದೆ ಎಷ್ಟೋ ವರ್ಷಗಳಾಗಿದ್ದವರೂ ಹುರುಪಿನಿಂದ ಸೈಕಲ್ ಸವಾರಿ ನಡೆಸಿ ಯಶಸ್ವಿಯಾಗಿದ್ದರು ಹಾಗೂ ಸೈಕಲ್ ತುಳಿಯುವುದು ಮರೆತಿಲ್ಲ ಎಂದು ಸಮಾಧಾನ ಹೊಂದಿದರು!

ಫೋಟೋ ಕೃಪೆ: ಶೈಲಜೇಶ

ಮೊದಲು ಮಹಾಲಿಂಗೇಶ್ವರ ಗರಡಿಮನೆಗೆ ಭೇಟಿ ಇತ್ತೆವು. ಅಲ್ಲಿ ಕೆಲವರು ಕುಸ್ತಿ ಅಭ್ಯಾಸ ಮಾಡುತ್ತಿದ್ದರು. ಕುಸ್ತಿಪಟುಗಳು ಅಲ್ಲೇ ಇದ್ದ ಮಲ್ಲಕಂಭ ಏರಿ ತೋರಿಸಿದರು. ಅದನ್ನು ನೋಡಿದ ನಮ್ಮಲ್ಲಿ ಕೆಲವರು ಉಮೇದುಗೊಂಡು ಅರ್ಧ ಕಂಬ ಹತ್ತಿದ್ದರು. ಇನ್ನು ಕೆಲವರು ಪೂರ್ಣ ಏರಲು ಯಶಸ್ವಿಯಾದರು. ಇಬ್ಬರು ತರುಣಿಯರೂ ಅರ್ಧ ಕಂಬ ಏರಿ ಸಂತಸಪಟ್ಟರು. ಬಟ್ಟೆ ಎಲ್ಲ ಕೆಸರುಮಯವಾದರೂ ಸಾಹಸ ಮಾಡಿದ ತೃಪ್ತಿಯ ಮುಂದೆ ಅವೆಲ್ಲ ಗೌಣವೆನಿಸಿತು.

DSCN3857 DSCN3879 DSCN3873

(ಇದೇ ೨೦೧೫ ಎಪ್ರಿಲ್ ೧೫ರಂದು ಅಲ್ಲಿ ಸುಮಾರು ೩೦ ಜೊತೆ ಕುಸ್ತಿ ಪಂದ್ಯ ನಡೆಯಲಿದೆ. ಪ್ರತೀವರ್ಷ ದೇವಾಲಯದ ವತಿಯಿಂದ ಕುಸ್ತಿಪಂದ್ಯ, ಶಿವರಾತ್ರಿಯಂದು ನಾಟಕ ನಡೆಯುತ್ತದೆ.)

unnamed

ಫೋಟೋ ಕೃಪೆ ವಿಶ್ವನಾಥ

ದೇವಾಲಯಕ್ಕೆ ಭೇಟಿ ಇತ್ತೆವು. ಅರ್ಚಕ ದಿವಾಕರ ಅಗ್ನಿಹೋತ್ರಿಗಳು ನಮ್ಮೆಲ್ಲರಲ್ಲೂ ಸಂಕಲ್ಪ ಮಾಡಿಸಿ, ಸಮಸ್ತರಿಗೂ ಒಳ್ಳೆಯದಾಗಲಿ ಎಂದು ದೇವರಿಗೆ ಪೂಜೆ ಮಂಗಳಾರತಿ ಮಾಡಿದರು. ದೇವಾಲಯದ ಇತಿಹಾಸವನ್ನು ಚಿಕ್ಕದಾಗಿ ಹೇಳಿದರು. ಹೊಯ್ಸಳರ ಕಾಲದಲ್ಲಿ ಇಟ್ಟಿಗೆಯಿಂದ ನಿರ್ಮಾಣಗೊಂಡ ಏಕೈಕ ವಿಶಿಷ್ಟ ದೇವಾಲಯ. ಶ್ರೀ ಮಹಾಲಿಂಗೇಶ್ವರ, ಮಹಾದೇವಿ, ಮಹಾಗಣಪತಿಯರ ಸನ್ನಿಧಿ. ಕ್ರಿ.ಶ. ೧೧೮೮ನೆಯ ಇಸವಿಯಲ್ಲಿ ಮೂಲ ಶ್ರೀ ಗಂಗೇಶ್ವರನೆಂದಿದ್ದ ದೇವಾಲಯವನ್ನು ಹೊಯ್ಸಳ ರಾಜ ಬಲ್ಲಾಳ-೨ ಜೀರ್ಣೋದ್ಧಾರಗೊಳಿಸಿ ಶ್ರೀ ಮಹಾಲಿಂಗೇಶ್ವರ ದೇವಾಲಯವೆಂದು ನಾಮಕರಿಸಿ ಪ್ರತಿಷ್ಠಾಪಿಸಿದ್ದರು. ಕಾಲಕ್ರಮೆಣ ಈ ದೇವಾಲಯ ಸಂಪೂರ್ಣ ಶಿಥಿಲಗೊಂಡಿತ್ತು. ೧೯೯೪ನೇ ಇಸವಿಯಲ್ಲಿ ಶ್ರೀ ಧರ್ಮಸ್ಥಳದ ಧರ್ಮಾಧಿಕಾರಿ ರಾಜರ್ಷಿ ಡಾ. ವೀರೇಂದ್ರ ಹೆಗ್ಗಡೆ ಅವರು ಕೈಗೊಂಡ ಪುರಾತನ ದೇವಾಲಯಗಳ ಜೀರ್ಣೋದ್ಧಾರ ಯೋಜನೆಯಲ್ಲಿ ಜೀರ್ಣೋದ್ಧಾರಗೊಂಡು ಲೋಕಾರ್ಪಣೆಗೊಂಡಿತು.

devalaya

ಫೋಟೋ ಕೃಪೆ ಶೈಲಜೇಶ

6

ಫೋಟೋ ಕೃಪೆ ಶೈಲಜೇಶ

4

ಫೋಟೋಕೃಪೆ ವಿಶ್ವನಾಥ

1

ಫೋಟೋಕೃಪೆ ವಿಶ್ವನಾಥ

9

ಫೋಟೋ ಕೃಪೆ ವಿಶ್ವನಾಥ

2

ಫೋಟೋಕೃಪೆ ವಿಶ್ವನಾಥ

3

ಫೋಟೋಕೃಪೆ ವಿಶ್ವನಾಥ ದೇವಾಲಯದ ಕಾಡು

ಹೆಸರುಬೇಳೆ ಪೊಂಗಲ್, ಲಾಡು ಹೊಟ್ಟೆಗೆ ಇಳಿಸಿದೆವು. ಜಿ.ಡಿ. ಸುರೇಶ್ ಶೀಲಾ ದಂಪತಿಗಳ ಮದುವೆ ವಾರ್ಷಿಕೋತ್ಸವ ಬಾಬ್ತು ಸುರೇಶ್ ಅವರು ಸ್ವತಃ ತಯಾರಿಸಿದ ಪೊಂಗಲ್, ಲಾಡು ಬಹಳ ರುಚಿಯಾಗಿತ್ತು. ತಿಂಡಿ ತಿಂದ ಬಳಿಕ ಒಂದಿಬ್ಬರು ಸುಶ್ರಾವ್ಯವಾಗಿ ದೇವರನಾಮ ಹಾಡಿದರು. ನಾವು ಕೆಲವರು ದೇವಾಲಯದ ಹೊರಗೆ ಮರಗಿಡಗಳ ಬಳಿ ಹೂ, ಹಕ್ಕಿ ನೋಡುತ್ತ, ಅವುಗಳ ಚಿತ್ರ ಕ್ಲಿಕ್ಕಿಸುತ್ತ ಸಂಭ್ರಮಿಸಿದೆವು.

DSCN3882

DSCN3912 DSCN3886

hu

ಸುರೇಶ್ ಕಲ್ಲಂಗಡಿ ಹಣ್ಣು ಹೆಚ್ಚಿ ಎಲ್ಲರಿಗೂ ಕೊಟ್ಟರು. ದೇವಾಲಯದ ಶಾಂತ ಪರಿಸರ ಹಾಗೂ ಈ ಚಿಕ್ಕ ಚೊಕ್ಕ ಯಾನ ಎಲ್ಲರಿಗೂ ಖುಷಿ ಕೊಟ್ಟಿತು.  ಸೈಕಲ್  ತುಳಿಯದೆ ಬಹಳ ಕಾಲವಾದವರಿಗೆ ಈ ಸವಾರಿ ಹೆಚ್ಚಿನ ಉಮೇದು ಕೊಟ್ಟಿತು. ೨೧ನೇ ಶತಮಾನದಲ್ಲಿರುವ ನಾವು ಈ ದೇವಾಲಯದ ಎದುರು ನಿಂತು ನಮ್ಮ ಗುಂಪಿನ ಚಿತ್ರ ತೆಗೆಸಿಕೊಂಡೆವು.

samuha

ಸುರೇಶ್ , ಶೀಲಾ

ಸುರೇಶ್ , ಶೀಲಾ

೧೧ ಗಂಟೆಗೆ ವಾಪಾಸು ಮೈಸೂರಾಭಿಮುಖರಾದೆವು.

DSCN3919

ನಡೆದು ಬಂದವರು ನಗರ ಸಾರಿಗೆ ಬಸ್ ಏರಿದರು. ಯೂಥ್ ಹಾಸ್ಟೆಲ್ ಗಂಗೋತ್ರಿ ಘಟಕದ ವತಿಯಿಂದ ರಾಮಪ್ರಸಾದ್ ಹಾಗೂ ನಾನು (ನಾಮಕಾವಸ್ಥೆ ಮಾತ್ರ) ಈ ಕಾರ್ಯಕ್ರಮವನ್ನು ಆಯೋಜಿಸಿದ್ದೆವು. ಅದಕ್ಕೆ ಜಿ.ಡಿ ಸುರೇಶ್ ಹಾಗೂ ಶೀಲಾ ದಂಪತಿಗಳು ತಿಂಡಿ ಏರ್ಪಾಡು ಮಾಡಿ ನಮ್ಮ ಕೆಲಸ ಹಗುರಗೊಳಿಸಿದ್ದರು. ದೇವಾಲಯದ ಕಾರ್ಯದರ್ಶಿ ಅನಂತವರ್ಧನ ಅಲ್ಲಿದ್ದು ನಮ್ಮನ್ನೆಲ್ಲ ಬರಮಾಡಿಕೊಂಡರು. ಈ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು.

Read Full Post »

ತಾರೀಕು ೧೭.೮.೨೦೧೪ರಂದು ಬೆಳಗ್ಗೆ ೫.೪೫ಕ್ಕೆ ಸರಸ್ವತೀಪುರದಿಂದ ಸೈಕಲಿನಲ್ಲಿ ಹೊರಟು ಶ್ರೀರಾಮಪುರ ವರ್ತುಲ ರಸ್ತೆ ಬಳಿ ೬.೧೦ಕ್ಕೆ ತಲಪಿದೆ. ಸುಮಾರು ೧೫ ನಿಮಿಷ ನಾಯಿಯೊಂದು ನನ್ನ ಜೊತೆ ಕುಳಿತಿತ್ತು. ಚಿತ್ರ ಕ್ಲಿಕ್ಕಿಸಲು ಫೋಸು ಕೊಟ್ಟಿತ್ತು! ಎಲ್ಲರೂ ಬಂದಮೇಲೆ ಅದು ಹೊರಟು ಹೋಯಿತು!

nayihorata jaga

 ೬.೧೫ಕ್ಕೆ ಅಲ್ಲಿರಬೇಕೆಂದು ನಮಗೆ ಸೂಚಿಸಿದ್ದರು. ಅಂತೂ ಎಲ್ಲರೂ ಬಂದು ಸ್ವಪರಿಚಯವಾಗಿ ಹೊರಟದ್ದು ೭ ಗಂಟೆಗೆ! ಸುಮಾರು ೩೦ಕಿಮೀ ದೂರ ಸೈಕಲ್ ಯಾನ.  ೧೬ ಮಂದಿ ಸೈಕಲ್ ಸಮೇತ, ಮತ್ತೆ ೮ ಮಂದಿ ೪ ದ್ವಿಚಕ್ರವಾಹನದಲ್ಲಿ ಜಯಪುರ ಬಳಿಯ ಬರಡನಪುರದ ಕಾನನ ತೋಟವನ್ನು ೮ ಗಂಟೆಗೆ ತಲಪಿದೆವು. ಮೈಸೂರಿನಿಂದ ಸುಮಾರು ೧೫ಕಿಮೀ.
ಕಾನನ ತೋಟ ಸುಮಾರು ಮೂರೂವರೆ ಎಕರೆ. ಆರು ಕುಟುಂಬಗಳು ಸೇರಿ ತೋಟದಲ್ಲಿ ಸಾವಯವ ಕೃಷಿ ಮಾಡುತ್ತಿರುವರು. ಆರರಲ್ಲಿ ಒಂದು ಕುಟುಂಬ ಶಾಮಸುಂದರ ಸುಮ ದಂಪತಿಗಳದು. ಅವರು ಈ ಸೈಕಲ್ ಯಾನವನ್ನು ಏರ್ಪಾಡು ಮಾಡಿರುವುದು. ಅವರ ತೋಟವನ್ನು ನೋಡಿದೆವು. ತೋಟದಲ್ಲಿ ಅಟ್ಟಳಿಗೆ ಮನೆ ಕಟ್ಟಿದ್ದಾರೆ. ಹೆಬ್ಬೇವಿನ ಕಂಬದಮೇಲೆ ಅಡಿಕೆ ಸಲಾಕೆ ಹಾಕಿ ಒಂದು ಕೋಣೆಯ ಮನೆ ಕಟ್ಟಿಸಿರುವರು. ಛಾವಣಿಗೆ ಶೀಟ್ ಹಾಕಿದ್ದಾರೆ.

DSCN9385

ಮೊದಲು ಮುಳಿಹುಲ್ಲು ತೆಂಗಿನ ಗರಿ ಹಾಕಿದ್ದರಂತೆ. ಮಳೆ ಸೋರುವಿಕೆ, ಹಾವಿನ ಭಯದಿಂದ ಅದನ್ನು ತೆಗೆದು ಶೀಟ್ ಹೊದೆಸಿರುವುದಂತೆ. ಮೇಲೆಯೇ ಪಾಯಿಖಾನೆ, ಸಿಂಕ್ ಎಲ್ಲವೂ ಇದೆ! ಸೋಲಾರ್ ದೀಪದ ವ್ಯವಸ್ಥೆ ಮಾಡಿರುವರು. ಸುಮಾರು ಒಂದೂವರೆ ಲಕ್ಷದಲ್ಲಿ ಈ ಮನೆ ಕಟ್ಟಿಸಿರುವುದಂತೆ. ಹೆಚ್ಚಾಗಿ ಶನಿವಾರ ಅಲ್ಲಿ ವಾಸವಾಗಿದ್ದು ಭಾನುವಾರ ಹಿಂದಿರುಗುತ್ತಾರಂತೆ.
ಶಾಮಸುಂದರ ಅವರು ಎನ್ ಐ ಇ ಕಾಲೇಜಿನಲ್ಲಿ ಅಸೋಸಿಯೇಟ್ ಪ್ರೊಫೆಸರ್, ಮೆಕ್ಯಾನಿಕಲ್ ವಿಭಾಗ, ಎನ್ ಐ ಇ ಕ್ರೆಸ್ಟ್ ವಿಭಾಗದ ಡೈರೆಕ್ಟರ್ ಆಗಿರುವರು. ಜೈವಿಕ ಇಂಧನದ ಬಗ್ಗೆ ಅಲ್ಲಿ ಪ್ರಾತ್ಯಕ್ಷಿಕೆ ನಡೆಸಿದರು. ಬಯೋಗ್ಯಾಸ್, ಅಸ್ತ್ರ ಒಲೆ ಇತ್ಯಾದಿ ಬಗ್ಗೆ ವಿವರಣೆ ಕೊಟ್ಟರು.

DSCN9401astra

ಅದೆಲ್ಲ ನೋಡಿ ಮಾಹಿತಿ ತಿಳಿದುಕೊಂಡು ಹೊಟ್ಟೆಕಡೆ ಗಮನಕೊಟ್ಟು ಇಡ್ಲಿ ವಡೆ ತಿಂದೆವು. ಅಲ್ಲೇ ಪಕ್ಕದ ತೋಟದಲ್ಲಿ ಅವರೆ ಸೊಂಪಾಗಿ ಬೆಳೆದಿತ್ತು. ಅದರ ಹೂ ನೋಡುವುದೇ ಸೊಗಸು. ಪಕ್ಷಿಗಳನ್ನು ನೋಡುತ್ತ ಅವುಗಳ ಕಲರವ ಕೇಳುತ್ತ ಕುಳಿತಿರಬೇಕಾದರೆ ದೂರದಲ್ಲಿ ಇಬ್ಬರು ಅವರೆ ಬೆಳೆಗೆ ಔಷಧಿ (ವಿಷ?) ಸಿಂಪರಣೆ ಮಾಡುವುದು ಕಂಡಿತು. ಅವರೆಬೆಳೆಗೂ ಹುಳಕ್ಕೂ ಬಾಂಧವ್ಯ ಬಹಳ. ನಂಟಸ್ತಿಕೆ ಮುರಿಯಲು ವಿಷ ಸಿಂಚನ ಅವರಿಗೆ ಅನಿವಾರ್ಯವಾದರೆ ವಿಷಬೆರೆತ ಅವರೆಯನ್ನು ನಾವು ತಿನ್ನುವುದು ಬಾಯಿ ಚಪಲಕ್ಕೆ! ಅಲ್ಲಿಂದ ಮುಂದಕ್ಕೆ ಹೊರಡಲು ಸಜ್ಜಾದೆವು.

tindi

visha
ಮುಂದೆ ನಮ್ಮ ಗುರಿ ಮಲ್ಲೇಶಿಬೆಟ್ಟದತ್ತ. ತಂಡದ ಚಿತ್ರ ತೆಗೆಸಿಕೊಂಡು ಅಲ್ಲಿಂದ ೧೦.೧೦ಕ್ಕೆ ಹೊರಟೆವು. ಸೈಕಲ್ ಸವಾರಿ ಇದು ಸ್ಪರ್ಧೆ ಅಲ್ಲ, ನಿಧಾನಕ್ಕೆ ಹೋಗುವ, ಎಂದು ಸಂಘಟಕರು ಮೊದಲೇ ಹೇಳಿದ್ದರು. ಹರಿಶಂಕರ ಎಂಬ ೮ನೇ ತರಗತಿ ಓದುತ್ತಿರುವ ಬಾಲಕ ನಮ್ಮೊಡನಿದ್ದ. ಅವನನ್ನು ಮುಂದೆ ಕಳಿಸಿ ಹಿಂದೆಯೇ ಹೋಗುತ್ತಲಿದ್ದೆ. ತೀರಾ ಹಿಂದೆ ಬಿದ್ದರೆ ಅವನ ಉತ್ಸಾಹ ಕಮರುತ್ತದೆ. ನಮ್ಮ ಹಿಂದೆ ಯಾರಾದರೂ ಇದ್ದರೆ ಆಗ ಮುನ್ನಡೆಯಲು ಸ್ಫೂರ್ತಿ ಇರುತ್ತದೆ. ಇದು ಸ್ವಂತ ಅನುಭವ! ಮರದಮೇಲೆ, ವಿದ್ಯುತ್ ತಂತಿಮೇಲೆ ಕೂತಿರುವ ಹಕ್ಕಿಗಳನ್ನು ನೋಡುತ್ತ ನಿಧಾನಕ್ಕೆ ಸೈಕಲ್ ತುಳಿಯುತ್ತ ಸಾಗುತ್ತಿದ್ದೆ. ಈ ಬಾರಿ ದೇಹಶ್ರಮ ಅಷ್ಟೇನೂ ಆಗಲಿಲ್ಲ. ಗೇರ್ ಸೈಕಲ್ ಆದಕಾರಣದಿಂದ ಏರು ಅಷ್ಟು ತೊಂದರೆ ಅನಿಸಲಿಲ್ಲ. ರಸ್ತೆ ಏರು ಯಾವುದು? ಇಳಿಜಾರು ಯಾವುದು ಎಂದು ನಮಗೆ ಸ್ಪಷ್ಟವಾಗಿ ತಿಳಿಯುವುದು ಸೈಕಲ್ ತುಳಿಯುವಾಗ ಮಾತ್ರ. ಕಣ್ಣಂದಾಜಿನಲ್ಲಿ ರಸ್ತೆ ಏರು ಕಾಣದೆ ಇದ್ದರೂ ಸೈಕಲ್ ತುಳಿಯುವುದು ತನ್ನಿಂದ ತಾನೆ ನಿಧಾನಗತಿಗೆ ಬಂದಾಗ ಓ ಇದು ಏರು ಎಂದು ಅರಿವಾಗುತ್ತದೆ! ಇಳಿಜಾರಿನಲ್ಲಿ ನಮ್ಮ ಪ್ರಯತ್ನ ಇಲ್ಲದೆಯೇ ಸೈಕಲ್ ನಾಗಾಲೋಟದಿಂದ ಮುಂದೆ ಧಾವಿಸುವಾಗ ನಾವು ಹೋಗುವ ದಾರಿ ಹೀಗೇ ಇರಲಪ್ಪ ಎಂಬ ಖುಷಿಯ ಭಾವ. ಹೋದ ದಾರಿಯಲ್ಲಿ ಹಿಂದೆ ಬರಲೇಬೇಕಲ್ಲ. ಹೋಗುವಾಗ ಏರು ಇದ್ದರೆ ವಾಪಾಸು ಬಾರುವಾಗ ಇಳಿಜಾರು ಇರಲೇಬೇಕಲ್ಲ. ನಮ್ಮ ಜೀವನವೂ ಹೀಗೆಯೇ ಅಲ್ಲವೆ?
ಅಲ್ಲಲ್ಲಿ ನಿಂತು ತುಸು ವಿರಾಮಹೊಂದಿ ಮುಂದೆ ಪಯಣ. ಎಚ್.ಡಿ ಕೋಟೆ ರಸ್ತೆಯಲ್ಲಿ ಸಾಗಿ ಬೆಟ್ಟದಹಳ್ಳಿ, ಗುಮಚನಹಳ್ಳಿ ಎಂಬ ಫಲಕದ ಬಳಿ ಮುಂದೆ ಬಲಕ್ಕೆ ತಿರುಗಿ, ಎಸ್. ಕಲ್ಲಳ್ಳಿ ಹಾದು ಮಲ್ಲೇಶಿಬೆಟ್ಟದ ಕಡೆ ಸಾಗಿದೆವು.

vishranticycle

ಮಲ್ಲೇಶಿಬೆಟ್ಟಕ್ಕೆ ಹೋಗಲು ಕಚ್ಚಾರಸ್ತೆ ಇದೆ. ಏರು ದಾರಿ ಅಲ್ಲಿಗೆ ಸೈಕಲಿನಲ್ಲಿ ಹೋಗಲು ಕಷ್ಟ ಸಾಧ್ಯ. ನಾವು ಸೈಕಲ್ ನೂಕುತ್ತ ನಡೆಯುತ್ತ ಸಾಗಿದೆವು.

3

ಸೈಕಲ್ ನೂಕುತ್ತ ನಡೆಯುವ ಶ್ರಮ ಏಕೆ? ಇಲ್ಲೇ ಇಟ್ಟು ನಡೆಯುತ್ತ ಹೋಗೋಣವೆ ಎಂದು ಸಂಘಟಕರನ್ನು ಕೇಳಿದೆ. ನೂಕುತ್ತ ಹೋಗೋಣ. ಬರುತ್ತ ಕೂತು ಬರಬಹುದು ಎಂದರು. ಸ್ವಲ್ಪ ದೂರ ಸಾಗಿದಾಗ ದೊರೆಸ್ವಾಮಿ ಸೈಕಲ್ ನಿಲ್ಲಿಸಿ ಬೀಗ ಹಾಕಿದರು. ನಾನೂ ಅವರನ್ನೇ ಅನುಸರಿಸಿದೆ. ಹಾಗೆಯೇ ಕೆಲವಾರು ಮಂದಿ ಅಲ್ಲಿಯೇ ನಿಲ್ಲಿಸಿದೆವು. ನಡೆಯುತ್ತ ಸಾಗಿದೆವು. ಕೆಲವರು ಸೈಕಲ್ ತಳ್ಳುತ್ತ ಸಾಗಿದರು. ೧೨.೩೦ಕ್ಕೆ ಬೆಟ್ಟದ ತುದಿ ತಲಪಿದೆವು.ಅಲ್ಲಿ ಸುಂದರ ಕಾಡು ಹೂವುಗಳಿದ್ದುವು. ಹೂಗಳ ಮಕರಂದ ಹೀರಲು ನಾನಾ ಕೀಟಗಳು, ಬಣ್ಣಬಣ್ಣದ ಚಿಟ್ಟೆಗಳು ಹತ್ತಾರು ಹಾರಾಡುತ್ತಿದ್ದುವು. ಕ್ಯಾಮರಾ ಕಣ್ಣಿಗೆ ಮಾತ್ರ ಜಪ್ಪಯ್ಯ ಅಂದರೂ ಫೋಸು ಕೊಡಲಿಲ್ಲ. ಒಂದು ಬಿಳಿಪಟ್ಟೆಚಿಟ್ಟೆ ಮಾತ್ರ ಪಾಪ ಇವರಿಗೆ ನಿರಾಸೆ ಏಕೆ ಮಾಡುವುದು ಕ್ಲಿಕ್ಕಿಸಿ ಬೇಗ ಎಂದು ಒಂದು ಕ್ಷಣ ಕೂತಿತ್ತು!

chitte

 

 

hu

ಬೆಟ್ಟದಮೇಲೆ ದೇವಾಲಯವಿದೆ. ಬೀಗ ಹಾಕಿತ್ತು.

devalaya

(ದಾರಿಯಲ್ಲಿ ಭೇಟಿಯಾದ ಬೇಸಾಯ ನಿರತ ರೈತರು,

besaya

ಕುರಿ ಮೇಯಿಸುವವರು ಎಲ್ಲರೂ ಇವತ್ತು ಯಾಕೆ ಹೋಗುತ್ತೀರಿ? ಬೀಗ ಹಾಕಿರುತ್ತೆ. ನಾಳೆ ಹೋಗಿ ಪೂಜೆ ನಡೆಯುತ್ತೆ ಅಲ್ಲಿ ಎಂದು ನಮಗೆ ಹೇಳಿದ್ದರು. ನಮಗೆ ದೇವಾಲಯ ತೆರೆದಿರಬೇಕೆಂದೇನೂ ಇಲ್ಲ ಎಂದು ಅವರಿಗೆ ಹೇಳಿದರೂ ಇಂಥಾ ಹುಚ್ಚರೂ ಇದ್ದಾರೆಯೇ? ದೇವಾಲಯ ಮುಚ್ಚಿದ್ದರೂ ಹೋಗುತ್ತಾರಲ್ಲ ಏನು ಪ್ರಯೋಜನ ಎಂದುಮೂಗಿನಮೇಲೆ ಬೆರಳಿಟ್ಟಾರು!) ಬೆಟ್ಟದಮೇಲಿಂದ ಒಂದು ಪಾರ್ಶ್ವ ಚಾಮಲಾಪುರದ ಸರಹದ್ದು ಕಾಣುತ್ತದೆ.

chamalapura

ಹಿಂದೆ ಚಾಮಲಾಪುರದಲ್ಲಿ ಉಷ್ಣಸ್ಥಾವರ ಕಾರ್ಖಾನೆ ಹಾಕುವುದನ್ನು ವಿರೋಧಿಸಿ ಅದರಲ್ಲಿ ಜಯ ಸಾಧಿಸಿದ ಬಳಿಕ ದೇವಾಲಯದ ಬಳಿ ವಿಜಯಗಲ್ಲು ಹಾಕಿದ್ದಾರೆ. ಶಾಮಸುಂದರರೂ ಆ ಚಳವಳಿಯಲ್ಲಿ ಭಾಗಿಯಾಗಿದ್ದರಂತೆ.

vijaya

ನಿಜಕ್ಕೂ ಇಲ್ಲಿ ಸ್ಥಾವರ ಬಂದಿದ್ದರೆ ಪರಿಸರ ಹಾಳಾಗಿ ಹೋಗಿರುತ್ತಿತ್ತು. ಅಷ್ಟಕ್ಕೂ ಅದಕ್ಕೆ ಕಲ್ಲಿದ್ದಲು ಬೇರೆ ಕಡೆಯಿಂದ ತರಬೇಕಿತ್ತು. ಎಷ್ಟೊಂದು ಖರ್ಚು, ಜೊತೆಗೇ ಪರಿಸರ ಹಾಳು. ಸೋಲಾರ್ ಪ್ಲಾಂಟ್ ಹಾಕಿದರೆ ಎಷ್ಟೋ ವಿದ್ಯುತ್ ಉತ್ಪಾದಿಸಬಹುದು.
ಅಲ್ಲಿ ಸೌತೆಕಾಯಿ ತಿಂದು ವಿರಮಿಸಿದೆವು. ದೊರೆಸ್ವಾಮಿಯವರು ಸ್ವರಚಿತ ಕವನ ವಾಚನ ಮಾಡಿದರು. ಗುಂಪುಚಿತ್ರ ತೆಗೆಸಿಕೊಂಡೆವು.

betta

೧.೧೫ಕ್ಕೆ ಕೆಳಗೆ ಹೊರಟೆವು. ದೇವಾಲಯದ ಬಳಿ ಒಂದಿಬ್ಬರು ಮರಕಡಿಯುವುದು ಕಂಡಿತು. ವಿಚಾರಿಸಿದಾಗ ಸಣ್ಣಪುಟ್ಟ ಗೆಲ್ಲು ಕಡಿಯುವುದಷ್ಟೆ ಎಂಬ ಉತ್ತರ ಬಂತು.
ನಾವು ಸೈಕಲ್ ನಿಲ್ಲಿಸಿದ ಸ್ಥಳಕ್ಕೆ ಬಂದು ನನ್ನ ಸೈಕಲ್ ಬೀಗ ತೆರೆಯಲು ನೋಡುತ್ತೇನೆ ಜಪ್ಪಯ್ಯ ಅಂದರೂ ತೆರೆದುಕೊಳ್ಳುತ್ತಿಲ್ಲ. ಸರದಿಪ್ರಕಾರ ಕೆಲವರು ನೋಡಿದರು. ಅವರಿಂದಲೂ ಆಗಲಿಲ್ಲ. ಚೀನದಲ್ಲಿ ತಯಾರಾದ ಬೀಗವದಂತೆ! ಬೀಗ ತೆರೆಯಲು ನೋಡುತ್ತ ಕೂರಲು ಸಮಯವಿಲ್ಲ. ಗುರು ಕಲ್ಲಿನಿಂದ ಬೀಗಕ್ಕೆ ಒಂದೇ ಒಂದು ಏಟು ಹಾಕಿದರು. ಅದರ ತಂತಿ ಬಿಟ್ಟುಕೊಂಡಿತು! ಆಗ ಗುರು ಅವರನ್ನು ‘ಇವನಿಗೆ ಬೀಗ ಒಡೆದು ಬಹಳ ಅಭ್ಯಾಸವಿರಬೇಕು’ ಎಂದು ತಮಾಷೆ ಮಾಡಿದರು. ಅಂತೂ ಅಲ್ಲಿಂದ ೧.೪೫ಕ್ಕೆ ಹೊರಟು ಮುಂದೆ ಬರುತ್ತಿರಬೇಕಾದರೆ ಅರಣ್ಯ ಇಲಾಖೆಯಲ್ಲಿ ಕೆಲಸಮಾಡುವವರೊಬ್ಬರು ಎದುರಾದರು. ದೇವಾಲಯದ ಬಳಿ ಮರ ಕಡಿಯುತ್ತಿದ್ದಾರೆ ಎಂಬ ಸುದ್ದಿಯನ್ನು ಅವರಿಗೆ ಶಾಮಸುಂದರ ತಿಳಿಸಿದರು. ಅವರಿಗೆ ಸುದ್ದಿ ಬಂದಿತ್ತಂತೆ. ಎಲ್ಲಿ ಎಂದು ಗೊತ್ತಾಗಿರಲಿಲ್ಲವಂತೆ. ಕೂಡಲೇ ಅಲ್ಲಿಗೆ ಒಂದಿಬ್ಬರನ್ನು ಕಳಿಸುವ ಏರ್ಪಾಡು ಮಾಡುತ್ತೇನೆ ಎಂದರು.
ಎಸ್.ಕಲ್ಲಳ್ಳಿಯ ರಾಮಕೃಷ್ಣ ಮಂಗಳಾ ದಂಪತಿಗಳ ಮನೆಯನ್ನು ೨.೧೫ಕ್ಕೆ ತಲಪಿದೆವು. ಅಲ್ಲಿ ಜಗಲಿಯಲ್ಲಿ ಸಾಲಾಗಿ ಕೂತೆವು. ಬಾಳೆಲೆಯಲ್ಲಿ ಕೆಂಪಕ್ಕಿಯ ಬಿಸಿಬಿಸಿ ಅನ್ನ, ಸಾಂಬಾರು, ಸಾರು ಹಲಸಿನ ಹಪ್ಪಳ, ಮಿಡಿ ಉಪ್ಪಿನಕಾಯಿ. ಎಲ್ಲರಿಗೂ ಹಸಿವೆ ಜೋರಾಗಿಯೇ ಆಗಿತ್ತು. ಹೊಟ್ಟೆಬಿರಿಯ ಉಂಡೆವು. ರಾಮಕೃಷ್ಣಭಟ್ ಕೆಲಸದಮೇಲೆ ಬೇರೆ ಊರಲ್ಲಿರುವರು. ಮಂಗಳಾ ಹಾಗೂ ಅವರ ಇಬ್ಬರು ಮಕ್ಕಳು ಊಟವನ್ನೂ ಮಾಡದೆ ನಮಗೆ ಕಾದಿದ್ದರು. ನಮ್ಮ ಊಟವಾದಮೇಲೆಯೇ ಅವರು ಊಟಕ್ಕೆ ಕೂತದ್ದು.

8
ಊಟವಾದ ಬಳಿಕ ಅವರ ೮ ಎಕರೆ ತೋಟದಲ್ಲಿ ಸುತ್ತಿದೆವು. ಮಂಗಳಾ ಅವರು ನಮ್ಮೊಡನೆ ಬಂದು ಅವರು ಮಾಡುವ ಕೃಷಿ ಬಗ್ಗೆ ವಿವರ ನೀಡಿದರು. ಅರಸಿನ,(ಅರಸಿನ ಬೆಳೆಯ ಮಧ್ಯೆ ಪಾರ್ಥೇನಿಯಂ ಮೇಲುಗೈ ಸಾಧಿಸಿದೆ)

arishina

ಶುಂಠಿ, ಬಾಳೆ, ತೆಂಗು, ತರಹೇವಾರಿ ತರಕಾರಿ ಬೆಳೆಯುತ್ತಾರೆ. ಅದನ್ನು ಕೊಯಿದು ಚೀಲದಲ್ಲಿ ತುಂಬಿ ಪ್ರತೀ ಬುಧವಾರ ಮಂಗಳಾ ಬಸ್ಸಿನಲ್ಲಿ ಮೈಸೂರಿಗೆ ಬಂದು ಕುವೆಂಪುನಗರದ ನವಿಲು ರಸ್ತೆಯಲ್ಲಿ ವೈದೇಹಿ ಎಂಬವರ ಮನೆಯಲ್ಲಿ ಮಾರಾಟ ಮಾಡುತ್ತಾರೆ. ಎಷ್ಟು ಬೇಡಿಕೆ ಎಂದರೆ ಟೋಕನ್ ಪದ್ಧತಿಯಲ್ಲಿ ವಿಲೇವಾರಿ ಮಾಡುತ್ತಾರಂತೆ. ಬಾಕಿ ದಿವಸ ಬಲ್ಲಾಳ ವೃತ್ತದ ಸಮೀಪವಿರುವ ನೇಸರ ಸಂಸ್ಥೆಗೆ ಕೊಡುತ್ತಾರಂತೆ. ಅವರ ಮನೆಯಿಂದ ಬಸ್ಸಿಗೆ ಬರಲು ಸಾಕಷ್ಟು ನಡೆಯಬೇಕು. ಅವರ ಈ ಸಾಹಸ ನಿಜಕ್ಕೂ ಮೆಚ್ಚುವಂಥದ್ದು. ಕೆಲಸದವರ ಜೊತೆಗೇ ಹೊಲಕ್ಕೆ ಹೋಗಿ ಅವರೂ ಕೈಜೋಡಿಸಿ ದುಡಿಯುತ್ತಾರೆ. ನಾವೇ ಬೆಳೆದದ್ದನ್ನು ಉಣ್ಣುವಾಗ ಮನಸ್ಸಿಗೆ ನೆಮ್ಮದಿ ಸಂತೋಷ ಸಿಗುತ್ತದೆ ಎಂದು ಸಾವಯವ ಕೃಷಿ ಮಾಡುವ ಒಲವನ್ನು ಬಣ್ಣಿಸಿದರು. ಅದನ್ನು ಕೇಳಿದ ಒಂದಿಬ್ಬರಿಗೆ ಕೃಷಿ ಮಾಡುವ ಉಮೇದು ಬಂತಂತೆ. ಅವರ ಮಗ ಕೃಷ್ಣ ಸೀಬೆಕಾಯಿ ಕಿತ್ತು ಕೊಟ್ಟ. ಅದನ್ನು ಮೆಲ್ಲುತ್ತ ಮನೆಗೆ ಬಂದು ಅವರಿಗೆ ಕೃತಜ್ಞತೆ ಅರ್ಪಿಸಿ ಸಂಜೆ ೪.೧೫ಕ್ಕೆ ಹೊರಟೆವು. ಚಹಾ ಮಾಡುತ್ತೇನೆ ಎಂದ ಅವರ ಉಪಚಾರಕ್ಕೆ ಪ್ರತಿಯಾಗಿ ಬೇಡ ಎಂದು ನಯವಾಗಿ ಹೇಳಿ ವಿದಾಯದೊಂದಿಗೆ ಹೊರಟೆವು.

mangala vivara
ದಾರಿಯಲ್ಲಿ ಬರುತ್ತಿರಬೇಕಾದರೆ ಸಣ್ಣಗೆ ಮಳೆ ಹನಿಯಲು ತೊಡಗಿತು. ನನಗೆ ನೆನೆಯುವುದೆಂದರೆ ಖುಷಿಯೇ. ಆದರೆ ಚೀಲದಲ್ಲಿರುವ ಬೆಲೆಬಾಳುವ ಕ್ಯಾಮರಾ ಮೊಬೈಲು ಒದ್ದೆಯಾದರೆ ಕಷ್ಟವೆಂದು ಮಳೆ ಅಂಗಿ ಧರಿಸಿದೆ. ಸ್ವಲ್ಪ ಮುಂದೆ ಬಂದಮೇಲೆ ಮಳೆಯ ಸುದ್ದಿಯೇ ಇಲ್ಲ. ಜಯಪುರದಲ್ಲಿ ಚಹಾ ಸೇವನೆಗೆ ನಿಲ್ಲಿಸಿದೆವು. ಬಿಸಿಲಿನಿಂದ ಒದ್ದೆಯಾದ ಪ್ಯಾಂಟ್ ಒಣಗಿತ್ತು. ಅಲ್ಲಿಂದ ಹೊರಟು ಸೀದಾ ಮನೆಗೇ ಬಂದೆ. ಇನ್ನೇನು ಮನೆ ತಲಪಲು ಐದು ನಿಮಿಷವಿದೆ ಎನ್ನುವಾಗ ಸುರಿಯಿತು ಧಾರಾಕಾರ ಮಳೆ. ಸೈಕಲ್ ನಿಲ್ಲಿಸಿ ಚೀಲದಿಂದ ಮಳೆ‌ಅಂಗಿ ತೆಗೆಯದೆ ಉಪಾಯವೇ ಇರಲಿಲ್ಲ. ಅಂತೂ ಒಟ್ಟು ೬೦ಕಿಮೀ ದೂರ ಸೈಕಲ್ ತುಳಿದ ಪುಣ್ಯದೊಂದಿಗೆ ೬.೫೦ಕ್ಕೆ ಮನೆ ತಲಪಿದೆ. ಮಳೆಯ ನೀರಲ್ಲೆ ಸೈಕಲ್ ಚೊಕ್ಕ ತೊಳೆದು ಒಳಗಿಟ್ಟೆ. ಯೂಥ್ ಹಾಸ್ಟೆಲ್ ಗಂಗೋತ್ರಿ ಘಟಕದ ವತಿಯಿಂದ ನಡೆಸಿದ ಈ ಕಾರ್ಯಕ್ರಮದ ಯಶಸ್ಸಿಗೆ ಕಾರಣಕರ್ತರಾದವರು ಶಾಮಸುಂದರ, ಸುಮ ಹಾಗೂ ರಾಣಿ ತ್ರಿಯಂಬಿಕೆಯವರು. ಅವರಿಗೆ ಇದರಲ್ಲಿ ಭಾಗವಹಿಸಿದ ಎಲ್ಲರ ನಮನಗಳು.

Read Full Post »

ಸೈಕಲ್ ತುಳಿಯುವ ಹವ್ಯಾಸವಿದ್ದವರಿಗೆ ಸಾಕಷ್ಟು ದೂರ ಸೈಕಲ್ ಸವಾರಿ ಮಾಡಬೇಕೆಂಬ ಹಂಬಲವಿರುತ್ತದೆ. ಆ ಸುದಿನಕ್ಕಾಗಿ ಕಾಯುತ್ತಿರುತ್ತಾರೆ. ೨೭.೪.೨೦೧೩ರಂದು ಬೆಳಗ್ಗೆ ೬.೩೦ಕ್ಕೆ ಮೈಸೂರಿನ ಕಾಮಾಕ್ಷಿ ಆಸ್ಪತ್ರೆ ರಸ್ತೆಯ ನಾಲ್ಕನೇ ಮುಖ್ಯರಸ್ತೆಯಲ್ಲಿ ಸುಮಾರು ೧೪ ಮಂದಿ ಶ್ರೀರಂಗಪಟ್ಟಣದ ಬಂಗಾರುದೊಡ್ಡಿ ಅಣೆಕಟ್ಟೆಗೆ ಹೋಗುವ ಸಲುವಾಗಿ ಸೈಕಲ್ ಸಹಿತ ಹಾಜರಾದರು. ಕುಕ್ಕರಹಳ್ಳಿ ಕೆರೆ ರಸ್ತೆಯಾಗಿ ಪಡುವಾರಹಳ್ಳಿ ದಾಟಿ ಒಂಟಿಕೊಪ್ಪಲ್ ನಳಪಾಕದೆದುರು ಇಳಿದು ಒಳಹೊಕ್ಕೆವು. ಇಡ್ಲಿ ವಡೆ ತಿಂದು ಪುನಃ ನಮ್ಮ ಸವಾರಿ ಹೊರಟಿತು. ಬೈಕ್ ಕಾರು ಸವಾರರು ಕೆಲವಾರು ಮಂದಿ ಇದ್ದರು. ಕೃಷ್ಣರಾಜಸಾಗರ ರಸ್ತೆಯಲ್ಲಿ ಸಾಗಿ, ಮುಂದೆ ವರ್ತುಲ ರಸ್ತೆಯಲ್ಲಿ ಇನ್ನಿಬ್ಬರು ಸೈಕಲ್ ಸವಾರರು ಜೊತೆಗೂಡಿದರು. ಪಂಪ್ ಹೌಸ್ ದಾಟಿ ಅಲ್ಲಿ ಸ್ವಲ್ಪ ವಿಶ್ರಮಿಸಿ ಮುಂದುವರಿದೆವು., ಶ್ಯಾಮಸುಂದರ ಅವರು ಸಾಗುತ್ತ, `ಏನೇ ಬರಲಿ ಸೈಕಲ್ ಇರಲಿ, ಸೈಕಲ್ ಬಳಸಿ ಪರಿಸರ ಉಳಿಸಿ ಇತ್ಯಾದಿ ಸ್ಲೋಗನ್ ಹೇಳಿಕೊಡುತ್ತ ಹುಡುಗರೆಲ್ಲ ಹಾಡುತ್ತ ಬಲು ಖುಷಿಯಿಂದ ಸೈಕಲ್ ತುಳಿದೆವು.

cycle 5
ಹೋಗುವಾಗ ಇಳಿಜಾರು. ಹಾಗಾಗಿ ರಸ್ತೆಯಲ್ಲಿ ಸಾಗಿದ್ದೆ ಗೊತ್ತಾಗಲಿಲ್ಲ. ಅಷ್ಟು ಸಲೀಸು. ಶ್ರೀರಂಗಪಟ್ಟಣದ ವೆಲ್ಲೆಸ್ಲಿ ಸೇತುವೆಯಲ್ಲಿ ಸಾಗಿ ಮದ್ದಿನಮನೆ ನೋಡಿ ವಾಪಾಸು ಬಂದು ಬಲಕ್ಕೆ ತಿರುಗುವ ರಸ್ತೆಯಲ್ಲಿ ಚಲಿಸಿ ಬಂಗಾರು ದೊಡ್ಡಿಯೆಡೆಗೆ ಸಾಗಿದೆವು. ಈ ಮದ್ದಿನಮನೆ ಯಾವಾಗ ಅಲ್ಲಿಂದ ಎತ್ತಂಗಡಿ ಆಗುತ್ತೋ ಗೊತ್ತಿಲ್ಲ. ಮೈಸೂರು ಬೆಂಗಳೂರು ಜೋಡಿ ರೈಲು ಮಾರ್ಗದ ಕಾಮಗಾರಿ ನಡೆಯುತ್ತಿದೆ. ಆ ಮದ್ದಿನ ಮನೆ ಇರುವ ಸ್ಥಳದಲ್ಲಿ ಕೂಡ ಉದ್ದೇಶಿತ ಮಾರ್ಗ ಹಾದುಹೋಗುತ್ತದೆ. ವೆಲ್ಲೆಸ್ಲಿ ಸೇತುವೆ ಮಾರ್ಗದಲ್ಲಿ ಈಗಲೂ ಎರಡುಚಕ್ರದ ವಾಹನ ಸಂಚಾರವಿದೆ. ಸುತ್ತಮುತ್ತಲಿನ ಮಂದಿ ಅದೇ ರಸ್ತೆ ಉಪಯೋಗಿಸುತ್ತಾರೆ. ಆದರೆ ರಸ್ತೆ ಮಾತ್ರ ಹಾಳುಬಿದ್ದಿದೆ. ರಸ್ತೆಯಲ್ಲಿ ಮರಳು ತುಂಬಿದೆ. ಅಲ್ಲಿ ಸೈಕಲಿನಲ್ಲಿ ಸಾಗಲು ಮಕ್ಕಳು ಹೆದರಿದರು. ರಸ್ತೆಯನ್ನು ಚೆನ್ನಾಗಿ ಇಟ್ಟುಕೊಳ್ಳಬೇಕೆಂಬ ಪ್ರಜ್ಞೆ ನಮ್ಮ ಸಂಸದರಿಗಿಲ್ಲ.

setuve

Picture 212
ಮೈಸೂರಿನಿಂದ ನಾವು ಸುಮಾರು ೨೧ಕಿಮೀ ದೂರ ಸಾಗಿ ಬಂಗಾರುದೊಡ್ಡಿ ನಾಲೆಗೆ ಬೆಳಗ್ಗೆ ಹತ್ತು ಗಂಟೆಗೆ ತಲಪಿದೆವು. ನಾವು ೪ ಮಂದಿ ಹೆಂಗೆಳೆಯರು. (ಅವರಲ್ಲಿ ಮಾಗಿದ ವಯಸ್ಸು ನನ್ನದೇ!) ಉಳಿದವರು ಹುಡುಗರು, ಗಂಡಸರು. ಹೃತಿಕ್ಷ ಎಂಬ ಹತ್ತುವರುಷದ ಹುಡುಗಿ ಉತ್ಸಾಹದಿಂದ ಸೈಕಲ್ ತುಳಿದು ಬಂಗಾರುದೊಡ್ಡಿ ತಲಪಿದಳು. ಅವಳ ಖುಷಿಯನ್ನು ನೋಡಿಯೇ ನಾವು ಸಂತಸಗೊಂಡೆವು.

DSCN8348
ಸುಮಾರು ೯೦೦ ಎಕೆರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಬಂಗಾರುದೊಡ್ಡಿ ಅಣೆಕಟ್ಟಿನಿಂದ ಸಿಗುತ್ತದೆ. ಈ ನೀರಿನ ಲಾಭ ಪಡೆದು ರೈತರು ಕಬ್ಬು ಭತ್ತ ಇತ್ಯಾದಿ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳುತ್ತಾರೆ. ಇಲ್ಲಿ ಹಿಂದೆ ರಾಜರ ಉಪಪತ್ನಿಯರು ವಾಸವಾಗಿದ್ದರಂತೆ. ಈ ನಾಲೆಗೆ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು, ಸ್ಥಳೀಯರು ಈಜಲು ಆಟವಾಡಲು ಬರುತ್ತಾರೆ. ಕೆಲವರು ಬಂದು ಮೋಜು ಮಸ್ತಿ ನಡೆಸಿ ಹೋಗುತ್ತಾರೆ. ಅದರ ಕುರುಹಾಗಿ ನಾಲೆ ಸುತ್ತಮುತ್ತ ಸಾಕಷ್ಟು ಸಂಖ್ಯೆಯಲ್ಲಿ ಹೆಂಡದ ಕುಪ್ಪಿ ಒಡೆದು ಚೂರಾಗಿದ್ದದ್ದು ಕಂಡುಬಂತು. ಗೂಡ್ಸ್ ಆಟೋದಲ್ಲಿ ಹಿಡಿಯುವಷ್ಟು ಮಂದಿ ಬಂದು ನೀರಲ್ಲಿ ಆಟವಾಡಿ ಅಲ್ಲೇ ಅಡುಗೆ ತಯಾರಿಸಿ ಊಟ ಮಾಡಿ, ಆ ಸ್ಥಳವನ್ನು ಗಲೀಜು ಮಾಡಿ ತೆರಳುತ್ತಾರೆ. ಇಲ್ಲಿಗೆ ಬರುವವರು ಗುಂಪಿನಲ್ಲಿ ಬಂದರೇ ಒಳ್ಳೆಯದು. ಬೆಳಗ್ಗೆ ಆದಷ್ಟು ಬೇಗ ಬಂದರೆ ನೀರಲ್ಲಿ ಇಳಿಯಲು ಸಾಧ್ಯ. ಹೊತ್ತು ಸರಿದಂತೆ ಅಲ್ಲಿ ಜನರ ದಂಡು ಜಾಸ್ತಿಯಾಗುತ್ತದೆ.

DSCN8338
ನಾಲೆಯಲ್ಲಿ ಸಾಕಷ್ಟು ನೀರು ಹರಿಯುತ್ತಿತ್ತು. ಮಕ್ಕಳು ಹಿರಿಯರು ಎಲ್ಲ ನೀರಿಗೆ ಇಳಿದು ಮನಸೋ ಇಚ್ಛೆ ಈಜಿದರು, ಆಟವಾಡಿದರು. ಈಜು ಬರದವರು ರಕ್ಷಣಾ ಕವಚ ಧರಿಸಿಯೇ ನೀರಿಗಿಳಿದರು. ಸೆಖೆಗೆ ನೀರಿನಾಟ ಬಲು ಸೊಗಸಾಗಿರಬೇಕು. ನಾನು ಅವರ ಮೋಜನ್ನು ತುಸು ವೀಕ್ಷಿಸಿ ಸುತ್ತಮುತ್ತ ಎಲ್ಲಾದರೂ ಹಕ್ಕಿಗಳು ಕಾಣುತ್ತವೆಯೇ ಎಂದು ಅರಸಲು ಹೊರಟೆ. ಸ್ವಲ್ಪ ಮುಂದೆ ಹೋದಂತೆ ಎರಡು ಟಿಟ್ಟಿಭಗಳು ಜೋರಾಗಿ ಅರಚುತ್ತ ನನ್ನ ಸುತ್ತಮುತ್ತ ಸುತ್ತಿ ಒಂದೆಡೆ ಕೂರುತ್ತಿತ್ತು. ಅರೆ ಇದ್ಯಾಕೆ ಹೀಗೆ ಕೂಗುತ್ತದೆ? ಎಲ್ಲಾದರೂ ಅದರ ಮರಿಗಳು ಇರಬಹುದೆ ಇಲ್ಲಿ? ಎಂದು ಹುಡುಕಾಡಿದೆ. ಆಗ ಅದರ ಅರಚಾಟ ಜಾಸ್ತಿ ಆಯಿತು. ಅದಕ್ಕೇಕೆ ತೊಂದರೆ ಕೊಡುವುದು ಎಂದು ಅದರ ಫೋಟೋ ಕ್ಲಿಕ್ಕಿಸಿ ಅಲ್ಲಿಂದ ಸರಿದೆ. ಆಗ ಅದರ ಅರಚಾಟವೂ ನಿಂತಿತು! ಛೆ ಎಂಥ ಸಾವು ಇದು. ಈ ಮನುಜರು ಸುಮ್ಮನೆ ಬಂದು ನೀರಲ್ಲಿ ಇಳಿದು ಹೋಗುವುದು ಬಿಟ್ಟು ನಮಗೆ ತೊಂದರೆ ಕೊಡುತ್ತಾರಲ್ಲ ಎಂದು ಹೇಳಿದ್ದಿರಬಹುದು ಅವು! ಟಿಟ್ಟಿಭದ ಅನತಿ ದೂರದಲ್ಲಿ ಮನುಜರು ಯಾರೇ ಸುಳಿಯಲಿ ಅದರ ಕೂಗು ಜೋರಾಗಿ ಕೇಳಿಸುತ್ತಿತ್ತು. ಮೆಲ್ಲಗೆ ಅದಕ್ಕೆ ತಿಳಿಯದಂತೆ ದೂರದಲ್ಲಿ ನಿಂತು ನೋಡಿದೆ. ಐದಾರು ಮರಿಗಳು ಖುಷಿಯಿಂದ ಅತ್ತಿತ್ತ ಚಲಿಸುತ್ತಿದ್ದುವು. ಪಕ್ಷಿಗಳು ತನ್ನ ಮರಿಗಳನ್ನು ಶತ್ರುಗಳಿಂದ ಕಾಪಾಡುವ ಪರಿ ಅನನ್ಯ. ಜನ ಅಲ್ಲಿ ಸುಳಿದಾಗಲೆಲ್ಲ ಮರಿಗಳು ಎತ್ತಲೋ ಮಾಯ. ಈ ಮನುಜರಿಂದ ಅವಕ್ಕೆ ಎಷ್ಟು ಕಷ್ಟ. ಏರೋಪ್ಲೇನ್ ಚಿಟ್ಟೆಗಳು ಸಾಕಷ್ಟು ಇದ್ದುವು.

DSCN8217

DSCN8228 DSCN8218 DSCN8225
ನೀರಲ್ಲಿದ್ದವರಿಗೆ ಸಮಯದ ಪರಿ, ಬಿಸಿಲಿನ ತೀವ್ರತೆಯ ಅರಿವಿಲ್ಲ. ಆದರೆ ನನ್ನ ಪರಿಸ್ಥಿತಿ ನೀರಿನಿಂದ ಹೊರಗಿದ್ದ ಮೀನಿನಂತೆ. ಬಿಸಿಲು ಬಲು ಜೋರು. ಸುತ್ತ ಒಂದೇ ಒಂದು ಮರವಿಲ್ಲ. ನಾನೂ ನೀರಿಗೆ ಕಾಲು ಇಳಿಬಿಟ್ಟು ಕೂತೆ. ಆಗ ಸ್ವಲ್ಪ ತಂಪಾಯಿತು. ಸತೀಶಬಾಬು ಮಗ ಬುದ್ಧನೆಂಬ ೭ ವರ್ಷದ ಬಾಲಕ ನೀರು ಕಂಡರೆ ಹೆದರುತ್ತಿದ್ದ. ಅವನನ್ನು ನೀರಲ್ಲಿ ಇಳಿಸಲು ಸತೀಶ ಸುಮಾರು ಹೆಣಗಾಡಿದರು. ಆದರೆ ಅವನು ನೀರಿಗೆ ಇಳಿಯಲೇ ಇಲ್ಲ. ಒಂದು ಲೋಟದಲ್ಲಿ ಈ ಕಡೆ ನೀರು ತೋಡಿ ಮೈಮೇಲೆ ಸುರಿದು ಖುಷಿಪಡುತ್ತಿದ್ದ. ಅವನಪ್ಪ ಹೇಳಿ ಹೇಳಿ ನಾಲೆ ಏರಿಮೇಲೆ ಕೂರಲು ಸಮ್ಮತಿಸಿದ. ಆಮೇಲೆ ಹೇಳುತ್ತ ಹೇಳುತ್ತ ಜೀವರಕ್ಷಕ ಉಡುಪು ಧರಿಸಿ ನೀರಿಗೆ ಇಳಿಯಲು ಒಪ್ಪಿದ. ನೀರಲ್ಲಿ ಇಳಿದು ಈಜುತ್ತ ಸಂತಸಪಟ್ಟ. ಪ್ರಾರಂಭದಲ್ಲಿ ನೀರಿಗೆ ಇಳಿಯಲು ಹೆದರಿದವ ಕೊನೆಗೆ ನೀರಿಂದ ಏಳಲು ತಯಾರಿರಲಿಲ್ಲ! ಅಂತೂ ೧೨.೩೦ಕ್ಕೆ ನೀರಿನಿಂದ ಎಲ್ಲರೂ ಮನಸ್ಸಿಲ್ಲದ ಮನಸ್ಸಿನಿಂದ ಮೇಲೆಬಂದರು.

DSCN8266

DSCN8191
ನಾಲೆದಂಡೆಮೇಲೆ ದಾಟಿ ಮುಂದೆ ಹೋದರೆ ಪಕ್ಷಿಧಾಮಕ್ಕೆ ಸಾಗಲು ಕಚ್ಛಾ ರಸ್ತೆ ಸಿಗುತ್ತದೆ. ಸೈಕಲಿನವರೆಲ್ಲ ಆ ರಸ್ತೆಯಲ್ಲಿ ಹೋಗುವ. ಎಡ್ವೆಂಚರ್ ಸೈಕಲ್ ಯಾನ ಆಗುತ್ತದೆ ಎಂಬ ಆಸೆ ಶ್ಯಾಮಸುಂದರರದು. ಹಾಗೆ ಸೈಕಲನ್ನು ಸರ್ಕಸ್ ಮಾಡುತ್ತ ನಾಲೆದಂಡೆಗೆ ಇಳಿಸಿ ಕೆಲವು ಕಡೆ ವೈಟ್ ಲಿಫ್ಟಿಂಗ್ ನಂತೆ ಸೈಕಲ್ ಕೈಯಲ್ಲಿ ಎತ್ತಿ ಹಿಡಿದು ದಾಟಿ ಆ ರಸ್ತೆ ಸೇರಿದೆವು. ಮುಂದೆ ಹೋಗುತ್ತ ದಾರಿಬದಿಯಲ್ಲಿ ಒಂದು ದೊಡ್ಡ ಕೆರೆ. ಗಣಿಗಾರಿಕೆನಂತರ ನಿರ್ಮಾಣಗೊಂಡ ಕೆರೆಯಂತಿದೆ. ನೀರು ಸಾಕಷ್ಟು ಇದೆ. ಕೆರೆ ಸುತ್ತ ಸಸ್ಯಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಗೀಜಗನ ಗೂಡುಗಳಿದ್ದುವು. ಗೀಜಗ ಗೂಡಿನ ಒಳಗೆ ಹೊರಗೆ ಹಾರಾಡುತ್ತಿದ್ದುವು.

cycle 1

DSCN8273

DSCN8332

ಗೀಜಗ
ದಾರಿಯಲ್ಲಿ ತೆಂಗಿನ ತೋಪು ಇರುವಲ್ಲಿ ನಾವು ಊಟ ಮಾಡಿದೆವು. ಬಿಸಿಬೇಳೆಬಾತ್, ಮೊಸರನ್ನ. ಕಾರಿನಲ್ಲಿ ಊಟ, ಜೀವರಕ್ಷಕ ಉಡುಪು ತಂದ ಅಮಾನ್‌ಖಾನ್‌ರವರು ಅಲ್ಲಿಂದಲೇ ವಾಪಾಸಾದರು. ಇಬ್ಬರು ಸೈಕಲ್ ಸವಾರರೂ ತೆರಳಿದರು. ನಾವೆಲ್ಲ ಊಟವಾಗಿ ಮುಂದೆ ರಂಗನತಿಟ್ಟು ಪಕ್ಷಿಧಾಮದ ಗೇಟ್‌ವರೆಗೆ ಬಂದೆವು. ಒಳಗೆ ಹೋಗುವುದೋ ಬೇಡವೋ ಎಂಬ ಜಿಜ್ಞಾಸೆ ಕಾಡಿತು. ಒಳಗೆ ಈಗ ಪಕ್ಷಿಗಳೂ ಕಡಿಮೆ. ಮತ್ತು ಒಳಗೆ ಹೋಗಲೇಬೇಕೆಂಬ ಉತ್ಸಾಹ ಯಾರ ಮೊಗದಲ್ಲೂ ಕಂಡುಬರಲಿಲ್ಲ. ಹಾಗಾಗಿ ವಾಪಾಸು ಮೈಸೂರಾಭಿಮುಖರಾದೆವು. ಊಟ ಮಾಡಿದ ಮಾವಿನ ತೋಪಿನಪಕ್ಕವೇ ಸ್ವಲ್ಪ ಹೊತ್ತು ವಿಶ್ರಮಿಸಿದೆವು. ೨.೩೦ಕ್ಕೆ ಅಲ್ಲಿಂದ ಹೊರಟೆವು. ಬಿಸಿಲ ಝಳ ಸಾಕಷ್ಟು ಇದ್ದುದರಿಂದ ಸುಸ್ತು ಆವರಿಸಿತ್ತು. ಪಂಪಹೌಸ್‌ನಲ್ಲಿ ಎಲ್ಲರಿಗೂ ಎಳನೀರು ಕೊಡಿಸಿದರು. ಎಳನೀರು ಕುಡಿದು ಹುರುಪುಗೊಂಡು ಸೈಕಲ್ ಏರಿದೆವು. ಸಿಕ್ಕಿತು ದೊಡ್ದದೊಂದು ಏರು. ಈ ಬಾರಿ ನಾನು ಹೊಸ ಗೇರ್ ಸೈಕಲ್ ಕೊಂಡು ಅದರಲ್ಲಿ ಹೋದದ್ದು. ಹೊರಡುವ ಹಿಂದಿನ ದಿನ ರಾತ್ರೆ ಸೈಕಲ್ ಮನೆಗೆ ತಂದದ್ದು. ಗೇರ್ ಬದಲಿಸುವ ವಿಧಾನ ನನಗೆ ಹೊಸತಾದ್ದರಿಂದ ಏರಿನಲ್ಲಿ ಗೇರ್ ಬದಲಾವಣೆ ಹೆಚ್ಚುಕಮ್ಮಿಯಾಗಿ ಒಮ್ಮೆ ಇಳಿದು ತಳ್ಳಬೇಕಾಯಿತು. ಬರುತ್ತ ನಾಲ್ಕು ಕಡೆ ನಮ್ಮ ಸಾಮರ್ಥ್ಯ ಪರೀಕ್ಷೆಗೆ ಏರುದಾರಿ ಸಿಕ್ಕಿತು. ಹೃತಿಕ್ಷ ಸುಸ್ತಾಗಿ ಅವಳಪ್ಪನಿಗೆ ಸೈಕಲ್ ಒಪ್ಪಿಸಿ ಬೈಕ್ ಏರಿದಳು. ಅಪ್ಪನೇ ಬಲವಂತದಿಂದ ನಿನಗೆ ಸುಸ್ತಾಗಿದೆ ಸಾಕು ಎಂದದ್ದು ಎಂದು ಅವಳ ಆರೋಪ!

DSCN8355
ಮೇಟಗಳ್ಳಿಯಲ್ಲಿ ಯೂಥ್ ಸದಸ್ಯರಾದ ರವೀಂದ್ರಪಾರ್ಥಸಾರಥಿಯವರು ನಮ್ಮನ್ನೆಲ್ಲ ಎದುರುಗೊಂಡು ಅವರಕಡೆಯಿಂದ ನಮಗೆಲ್ಲ ಕುಡಿಯುವಷ್ಟು ಸೋಡ ಕೊಡಿಸಿದರು. ಮತ್ತೆ ಅಲ್ಲಿಂದ ಹೊರಟು ಅವರವರ ಮನೆಗೆ ಸಾಗಿದೆವು. ಮನೆ ತಲಪುವಾಗ ಸಂಜೆ ಗಂಟೆ ೫ ಆಗಿತ್ತು. ಒಟ್ಟು ಸುಮಾರು ೪೬ಕಿಮೀ ದೂರ ಸೈಕಲ್ ಸವಾರಿ ಮಾಡಿದ ಅನುಭವ ನಮ್ಮದಾಯಿತು. ಮೈಸೂರು ಯೂಥ್ ಹಾಸ್ಟೆಲ್ ಗಂಗೋತ್ರಿ ಘಟಕದ ವತಿಯಿಂದ ಶ್ಯಾಮಸುಂದರ, ಸತೀಶಬಾಬು ಈ ಕಾರ್ಯಕ್ರಮದ ಉಸ್ತುವಾರಿ ವಹಿಸಿ ಸವಾರರನ್ನು ಕ್ಷೇಮವಾಗಿ ಬಂಗಾರುದೊಡ್ಡಿವರೆಗೆ ಕರೆದುಕೊಂಡು ಹೋಗಿ ವಾಪಾಸ್ ಕರೆತಂದರು.

Read Full Post »

     ಮೈಸೂರಿನಿಂದ ಕಬಿನಿಗೆ (ಬೀಚನಹಳ್ಳಿ) ದೂರ  ಗೂಗಲ್ ಮ್ಯಾಪ್ ಪ್ರಕಾರ ೫೯ಕಿಮೀ. ಅಲ್ಲಿಗೆ ಸೈಕಲಿನಲ್ಲಿ ಹೋಗುವ ಸಲುವಾಗಿ ನಾವು ೨೨ ಮಂದಿ ೨೬-೧೦-೨೦೧೩ರಂದು ಸಂಜೆ ಸರಸ್ವತೀಪುರದ ತೆಂಗಿನತೋಪಿನ ಬಳಿ ಸಜ್ಜಾಗಿದ್ದೆವು. ಇದರ ರೂವಾರಿ ಸತೀಶಬಾಬು. ಎಲ್ಲರೂ ಸೇರಿ ನಿಂತು ಫೋಟೋ ತೆಗೆಸಿಕೋಂಡು ೫ ಗಂಟೆಗೆ ೧೫ ಸೈಕಲ್, ಉಳಿದವರು ಟಾಟಾ ಮೊಬೈಲ್ ಜೀಪ್ ಹಾಗೂ ಒಂದು ಬೈಕಿನಲ್ಲಿ ಹೊರಟೆವು. ಮುಂದೆ ಜೀಪ್ ಅದರ ಹಿಂದೆ ಸೈಕಲ್ ಸವಾರರು, ಅವರ ಹಿಂದೆ ಬೈಕ್ ಹೀಗೆ ಸಾಗಿತು ನಮ್ಮ ಪಯಣ.  ಜೀಪ್ ಆಮೆಗತಿಯಲ್ಲಿ ಹೋಗುತ್ತಿತ್ತು. ಎಷ್ಟು ನಿಧಾನವೆಂದರೆ ಸೈಕಲ್ ಬ್ರೇಕ್ ಒತ್ತಿ ಒತ್ತಿ ಸಾಕಾಯಿತು. ಜೀಪ್ ಚಾಲಿಸುವ ಸತೀಶಬಾಬುಗೆ ಸ್ವಲ್ಪ ವೇಗವಾಗಿ ಹೋಗಿ ಎಂದು ಸುರೇಶ ಮನವಿ ಮಾಡಿದರು. ಅವರ ಮನವಿಗೆ ಸತೀಶ ಓಗೊಡಲಿಲ್ಲ! ಜೀಪನ್ನು ಹಾದು ಸೈಕಲ್ ಸವಾರರು ಮುಂದೆ ಹೋಗುವಂತಿಲ್ಲ, ಇದು ರೇಸ್ ಅಲ್ಲ, ನಿಧಾನಗತಿಯಲ್ಲಿ ಸಾಗಿ ಹೋಗುವುದೇ ನಮ್ಮ ಆದ್ಯತೆ ಎಂದು ಹೊರಡುವ ಮೊದಲೇ ಎಚ್ಚರ ಹೇಳಿದ್ದರು. ಚಾಚೂತಪ್ಪದೆ ನಾವು ಅದನ್ನು ಪಾಲಿಸಿ ಸಾಗಿದೆವು.

DSCN4170

DSCN4165

  ಎಚ್.ಡಿ. ಕೋಟೆ ದಾರಿಯಲ್ಲಿ ಮುಂದೆ ಸಾಗಿದೆವು. ರಸ್ತೆ ಸೊಗಸಾಗಿದೆ. ಎಲ್ಲೂ ಹಂಪುಗಳಿಲ್ಲ. ವಾಹನಗಳು ಭರದಿಂದ ವೇಗವಾಗಿ ಸಾಗುತ್ತಿದ್ದುವು. ನಾವು ರಸ್ತೆ ಬದಿಯಲ್ಲೇ ಹೋಗುತ್ತಿದ್ದೆವು. ಮಧ್ಯೆ ಮಧ್ಯೆ ವಿರಾಮ ತೆಗೆದುಕೊಳ್ಳುತ್ತ ಮುಂದೆ ಹೋದೆವು. ಸುಮಾರು ಹದಿನೈದು ಕಿಮೀ ದೂರ ಚಲಿಸಿದಾಗಲೇ ಕತ್ತಲೆ ಆವರಿಸಿತು. ಅಲ್ಲಿಂದ ಬೈಕ್ ಸವಾರರು ಮುಂದೆ ಅವರ ಹಿಂದೆ ಸೈಕಲ್, ಮತ್ತು ಹಿಂದೆ ಜೀಪ್ ಹೀಗೆ ಸಾಗಿದೆವು. ದಾರಿಯಲ್ಲಿ ಒಮ್ಮೆ ಪಚ್ಚೆಬಾಳೆಹಣ್ಣು, ಪರ್ಕ್ ಚಾಕಲೇಟ್, ಮಗದೊಮ್ಮೆ ಬಾದಾಮಿ ಹಾಲು ಸೇವನೆ. ಏರುದಾರಿಯಲ್ಲಿ ಬಲ ಹಾಕಿ ಸೈಕಲ್ ತುಳಿಯುತ್ತ, ಇಳಿಜಾರಿನಲ್ಲಿ ಅದರಷ್ಟಕ್ಕೆ ಸೈಕಲ್ ರಮ್ಮನೆ ಹೋಗುವಾಗ ಅದರ ಖುಷಿಯೇ ಬೇರೆ. ಏರಿನಲ್ಲಿ ಬಿಚ್ಚಿದ ಬೆವರು ಇಳಿಜಾರಿನಲ್ಲಿ ತಂಪಾದ ಗಾಳಿಗೆ ಮುಖ ಒಡ್ಡುವಾಗ ಆಹಾ ಎಂಥ ಸುಖ.

DSCN4177

DSCN4178
ರಾತ್ರಿ ೯ ಗಂಟೆಗೆ ದಾರಿ ಮಧ್ಯೆ ಒಂದು ಶಾಲೆಯ ಬಳಿ ವಿದ್ಯುತ್ ಇರುವಲ್ಲಿ ನಾವು ಊಟಕ್ಕೆ ನಿಲ್ಲಿಸಿದೆವು. ಚಪಾತಿ, ಪಲ್ಯ, ಅನ್ನ ಸಾಂಬಾರು, ಮೊಸರು. ಹೊಟ್ಟೆ ತುಂಬ ಉಂಡು ಸೈಕಲ್ ಏರಿದೆವು. ಈ ಮಧ್ಯೆ ಸ್ಥಳೀಯರು ನೀವು ಮುಂದೆ ಹ್ಯಾಂಡ್ ಪೋಸ್ಟ್ ತನಕ ಹೋಗಬಹುದಷ್ಟೆ. ಅಲ್ಲಿಂದ ಮುಂದಕ್ಕೆ ಹೋಗಲು ಸಾಧ್ಯವಿಲ್ಲ. ದಾರಿಯಲ್ಲಿ ಆನೆಗಳು ಇರುತ್ತವೆ. ಹೋಗುವುದು ಅಪಾಯ ಎಂದು ಹೆದರಿಸಿದರು. ಏನೂ ಹೆದರಬೇಡಿ, ಎಲ್ಲ ಗುಂಪಿನಲ್ಲೇ ಹೋಗೋಣ, ಎಲ್ಲಾದರೂ ಆನೆ ಕಂಡರೆ ಯಾರೂ ಗಲಾಟೆ ಮಾಡಬೇಡಿ, ಕಿರುಚಬೇಡಿ, ಇತ್ಯಾದಿ ಎಚ್ಚರ ಹೇಳಿದ  ಸತೀಶಬಾಬು ನಮಗೆಲ್ಲ ಧೈರ್ಯ ತುಂಬಿದರು.

DSCN4185

DSCN4186
ಸೈಕಲ್ ತುಳಿದೆವು ತುಳಿದೆವು. ಆ ನೀರವ ರಾತ್ರಿಯಲ್ಲಿ ಅಲ್ಲೊಂದು ಇಲ್ಲೊಂದು ವಾಹನ ಸಂಚಾರ ಬಿಟ್ಟರೆ ನಾವೇ ನಾವು. ತಂಪಾದ ರಾತ್ರಿಯಲ್ಲಿ ಸೈಕಲ್ ಸಂಚಾರ ಹೊಸ ಅನುಭವ ನನಗೆ. ರಸ್ತೆ ಮಧ್ಯೆ ಹಾವುಗಳು ಅಪ್ಪಚ್ಚಿಯಾದದ್ದು ಕಾಣುವಾಗ ವಾಹನಗಳು ಎಷ್ಟು ಶರವೇಗದಿಂದ ಸಂಚರಿಸುತ್ತವೆ ಎಂಬುದು ಮನವರಿಕೆಯಾಗಿ ವ್ಯಥೆಯಾಯಿತು.  ನಾಲ್ಕಾರು ಹಾವುಗಳು ಜೀವ ಬಿಟ್ಟದ್ದು ನಮಗೆ ಗೋಚರಿಸಿತು. ಇನ್ನೆಷ್ಟು ನಮ್ಮ ಗಮನಕ್ಕೆ ಬರದೆ ಇದ್ದುವೋ ಏನೋ. ಜೀರುಂಡೆಯ ಸದ್ದು ಬಿಟ್ಟರೆ ಬೇರೆ ಸದ್ದಿಲ್ಲ. ಹ್ಯಾಂಡ್ಪೋಸ್ಟ್ ಕೇವಲ ೮ಕಿಮೀ ಎಂಬ ಫಲಕ ಕಂಡು ಓ ಇನ್ನು ಕೇವಲ ೧೮ಕಿಮೀ ದೂರ ತುಳಿದರೆ ನಾವು ಗಮ್ಯಸ್ಥಾನ ತಲಪುತ್ತೇವೆ ಎಂಬ ಉತ್ಸಾಹದಿಂದ ಮುಂದುವರಿದೆವು.
ನಾವು ನಾಲ್ಕು ಮಂದಿಯಷ್ಟೇ ಸುಮಾರು ೩೦ ವರ್ಷ ಮೇಲಿನವರು. ಮತ್ತೆಲ್ಲ ಹದಿವಯಸ್ಸಿನವರು. ಅವರಿಗೆ ವೇಗಕ್ಕೆ ಕಡಿವಾಣ ಹಾಕಿದ್ದಕ್ಕೆ ಬಚಾವ್. ಇಲ್ಲವಾದರೆ ರೇಸ್ ಕುದುರೆಯಂತೆ ಸೈಕಲ್ ತುಳಿಯಲು ತಯಾರಿದ್ದರು.  ಅಂತೂ ೫೦ಕಿಮೀ ಸಾಗಿ ಹ್ಯಾಂಡ್ಪೋಸ್ಟ್ ದಾಟಿದೆವು. ಆಗ ಏರು ರಸ್ತೆ ಎದುರಾಯಿತು. ಸೈಕಲ್ ನಿಲ್ಲಿಸಿ ಇಳಿದೆ. ಬಾಕಿ ಸವಾರರು ಮುಂದೆ ಹೋಗಿ ಆಗಿತ್ತು. ನನ್ನ ಹಿಂದೆ ಜೀಪ್ ಇತ್ತು.  `ನೀವು ಜೀಪ್ ಹತ್ತಿ ಇನ್ನು. ಬೇರೆ ಯಾರಾದರೂ ನಿಮ್ಮ ಸೈಕಲ್ ತರುತ್ತಾರೆ’ ಎಂದರು ಸುರೇಶ್. ಆಗಲೇ ಗಂಟೆ ರಾತ್ರಿ ಹನ್ನೊಂದು. ನಿಂತರೆ ಎಲ್ಲರಿಗೂ ತೊಂದರೆ ಎಂದೊಪ್ಪಿ ನಾನು ಜೀಪ್ ಏರಿದೆ. ಜೀಪಿನಲ್ಲಿ ಬಂದ ಶ್ವೇತ ಖುಷಿಯಿಂದ ನನ್ನ ಸೈಕಲ್ ಹತ್ತಿದಳು. ಮುಂದೆ ಗಮ್ಯ ಸೇರುವಲ್ಲಿವರೆಗೆ ಸುಮಾರು ೭ಕಿಮೀ ದೂರ ಅವಳು ಸೈಕಲ್ ತುಳಿದಳು. ಮುಂದೆ ಏರು ದಾರಿ ಇದ್ದುದು ಸ್ವಲ್ಪವೇ. ಮತ್ತೆಲ್ಲ ಇಳಿಜಾರೇ ಇದ್ದುದು ಎಂದು ಅವಳು ಹೇಳಿದಳು.  ಅಂತೂ ನಾವು ಹನ್ನೊಂದೂವರೆಗೆ ಕಬಿನಿ ಪರಿವೀಕ್ಷಣಾ ಮಂದಿರ ತಲಪಿದೆವು. ಗೂಗಲಿನಲ್ಲಿ ದಾಖಲಾದ ಪ್ರಕಾರ ದೂರ ೫೯ಕಿಮೀ. ಅಣೆಕಟ್ಟು ಇರುವ ದೂರ ಸುಮಾರು ೨ಕಿಮೀ. ಅದನ್ನು ಕಳೆದು ೫೭ಕಿಮೀ ದೂರ ನಾವು ಸೈಕಲ್ ತುಳಿದೆವು. ಒಟ್ಟು ಆರೂವರೆ ಗಂಟೆ ಪ್ರಯಾಣ.  ಗೇಟ್‌ಗೆ ಬೀಗ ಹಾಕಿತ್ತು. ಗೇಟ್ ಹಾರಿ ಒಳಹೋಗಿ ಕಾವಲುಗಾರರನನ್ನು ಎಬ್ಬಿಸಿ ಬೀಗ ತೆಗೆಸಿ ನಾವು ಒಳಗೆ ಹೋಗುವಾಗ ಮತ್ತೂ ಕಾಲು ಗಂಟೆ ಕಳೆಯಿತು. ನಮಗಾಗಿ ಒಂದು ಕೋಣೆ ಕೊಟ್ಟಿದ್ದರು. ಅದರಲ್ಲಿ ನಾವು ೬ ಮಂದಿ ಹೆಂಗಸರು ಮಲಗಿದೆವು. ಗಂಡಸರಿಗೆ ಕೋಣೆ ಇಲ್ಲ. ಒಂದು ಹಾಲಿನಲ್ಲಿ ಅವರೆಲ್ಲ ಹೇಗೋ ಸುಧಾರಿಸಿಕೊಂಡರು. ಜಗಲಿಯಲ್ಲಿ ಕೆಲವರು ಮಲಗಿದರು. ಅಲ್ಲಿದ್ದುದು ೩ ಕೋಣೆ. ೨ ಕೋಣೆಗಳಲ್ಲಿ ಬೇರೆ ಅತಿಥಿಗಳು ಇದ್ದರು. ೧೨ಕ್ಕೆ ನಿದ್ರಿಸಿದೆವು.

DSCN4213
೨೭-೧೦-೨೦೧೩ ಬೆಳಗ್ಗೆ ೬ ಗಂಟೆಗೆ ಎದ್ದು ನಿತ್ಯಕರ್ಮಾದಿ ಮುಗಿಸಿದೆವು. ಪುಟ್ಟ ಸಿಲಿಂಡರ್, ಒಲೆ, ಚಹಾ ತಯಾರಿಸಲು ಬೇಕಾದ ವಸ್ತುಗಳನ್ನು ಜೀಪಿನಲ್ಲಿ ತಂದಿದ್ದರು. ಹೊರ ಜಗಲಿಯಲ್ಲಿಸುರೇಶ್ ವಜ್ರಾಸನದಲ್ಲಿ ಕುಳಿತು ಚಹಾ ತಯಾರಿಸಿದರು.  `ಏನ್ರೀ, ನಾನು ಅಡುಗೆ ಭಟ್ಟನಂತೆ ಕಾಣುತ್ತೇನಾ?’ ಎಂದು ಇದ್ದಕ್ಕಿದ್ದಂತೆ ಸುರೇಶ ನನ್ನಲ್ಲಿ ಕೇಳಿದರು. ಇಲ್ಲವಲ್ಲ ಯಾಕೆ ಹಾಗೆ ಕೇಳುತ್ತಿದ್ದೀರಿ ಎಂದೆ. ೨ ಕೋಣೆಯಲ್ಲಿದ್ರಲ್ಲ ಅವರಲ್ಲೊಬ್ಬರು ಬಂದು ನನ್ನಲ್ಲಿ ಸ್ವಲ್ಪ ಉಪ್ಪಿಟ್ಟು ಮಾಡಿಕೊಡಿ. ರವೆ ತಂದಿದ್ದೇನೆ. ನಾನು ಡಯಾಬೆಟಿಕ್ ಪೇಷೆಂಟು. ಎಣ್ಣೆ ಜಾಸ್ತಿ ಇದ್ದರೆ ಆಗಲ್ಲ, ಹಾಗೇ ಟೀ ಮಾಡಿಕೊಡಿ ಎಂದು ಕೇಳಿದರು. ನಿನ್ನೆ ರಾತ್ರಿ ಕುಡಿದು ಟೈಟಾಗಿ ಮಲಗಿದ್ದಾರೆ. ಬೆಳಗ್ಗೆ ಎದ್ದು ಉಪ್ಪಿಟ್ಟು ತಿನ್ನಲು ಡಯಬೆಟಿಕ್ ಇದೆ ಎಂದು ನೆನಪಾಗುತ್ತೆ ಇವರಿಗೆ.  ಕುಡಿದು ಮೋಜು ಮಸ್ತಿಯಲ್ಲಿ ಇದ್ದವರು ಪೇಷೆಂಟಂತೆ ಪೇಷೆಂಟು ಎಂದು ಸುರೇಶ ಹೇಳಿದರು. ಅದೆಲ್ಲ ಮಾಡಿಕೊಡಲ್ಲ. ನಮಗೆ ಮಾತ್ರ ನಾವು ಟೀ ಮಾಡಿಕೊಂಡಿರುವುದಷ್ಟೆ ಎಂದು ಸಾಗಹಾಕಿದರಂತೆ ಅವರನ್ನು.
ಬೆಳಗ್ಗೆ ಕಬಿನಿ ಹಿನ್ನೀರಿಗೆ ನಾವು ಕೆಲವರು  ಹೋದೆವು. ಅಲ್ಲಿ ಪಕ್ಷಿಗಳನ್ನು ನೋಡಿದೆವು. ಹದ್ದುಗಳು ಹಾರಾಡುತ್ತ ಇರುವುದನ್ನು ಕಂಡೆವು.

DSCN4232

DSCN4402

೮.೪೫ಕ್ಕೆ ಎಲ್ಲರೂ ಹೊರಟು ಕಾಲು ನಡಿಗೆಯಲ್ಲಿ ಕಬಿನಿ ಅಣೆಕಟ್ಟು ನೋಡಲು ಹೋದೆವು. ಕಬಿನಿಯಲ್ಲಿ ಕೆಲಸ ಮಾಡುವ ನಾಗರಾಜ್ ನಮ್ಮೊಡನಿದ್ದು ಎಲ್ಲ ವಿವರಿಸಿದರು. ಸುಮಾರು ೨ಕಿಮೀ ದೂರ ಅಣೆಕಟ್ಟು ರಸ್ತೆಯಲ್ಲಿ ಸಾಗಿ ಒಂದೇ ಗೇಟಿನಿಂದ ನೀರು ಬಿಟ್ಟದ್ದನ್ನು ನೋಡಿ ಹಿಂದಿರುಗಿದೆವು. ಗೇಟ್ ಮೇಲೆ ಅಲ್ಲಲ್ಲಿ ಜೇನುನೊಣಗಳು ಗೂಡು ಕಟ್ಟಿ ಈ ಮನುಷ್ಯರ ಕಾಟ ಇಲ್ಲದೆ ಸುಖವಾಗಿ ಇದ್ದುವು! ಅಲ್ಲಿ ಜಲವಿದ್ಯುತ್ ಉತ್ಪಾದನೆಯ ಘಟಕವೂ ಇದೆ. ಅದರ ಕಟ್ಟಡ ದೂರದಿಂದ ನೋಡಿದೆವು ಅಷ್ಟೆ. ಭಾನುವಾರವಾದ ಕಾರಣ ನಮಗೆ ನೋಡಲಾಗಲಿಲ್ಲ. ಡಿಸೆಂಬರ ತಿಂಗಳಿನವರೆಗೆ ನಾಲೆಯಲ್ಲಿ ನೀರು ಬಿಡುತ್ತಾರೆ. ಆ ನೀರಾವರಿ ಉಪಯೋಗಿಸಿ ಸುಮಾರು ಹನ್ನೊಂದು ಹಳ್ಳಿಯ ಜನರು ಭತ್ತ, ಕಬ್ಬು ಬೆಳೆಯುತ್ತಾರೆ. ಅಣೆಕಟ್ಟು ಮೇಲೆ ಮೊಸಳೆ, ಹುಲಿ, ಆನೆ ಬಂದ ವಿಷಯವನ್ನು ನಾಗರಾಜ್ ಸ್ವಾರಸ್ಯವಾಗಿ ಹೇಳುತ್ತಿದ್ದರು. ಮಕ್ಕಳು ಕುತೂಹಲಿಯಾಗಿ ಕೇಳುತ್ತ, ಅವರೂ ಅಂಕಲ್ ಒಮ್ಮೆ ಹೀಗೆ ನಡೆಯಿತು ಎಂದು ಅವರು ಕಂಡ ಕಥೆ ಹೇಳುತ್ತಿದ್ದರು. ನಾಗರಾಜ್ ಅಷ್ಟೇ ಕುತೂಹಲಿಯಾಗಿ ಕಥೆ ಕೇಳುತ್ತಿದ್ದರು.  ಅಣೆಕಟ್ಟು ರಸ್ತೆಯ ಮೇಲೆ ಚಲಿಸಲು ಸಾರ್ವಜನಿಕರಿಗೆ ಪ್ರವೇಶವಿಲ್ಲ. ನಮಗೆ ವಿಶೇಷ ಅನುಮತಿ ಇತ್ತು ಕರೆದುಕೊಂಡು ಹೋಗಿದ್ದರು.

DSCN4257

DSCN4256

DSCN4277

DSCN4282

DSCN4345

DSCN4354

DSCN4383

DSCN4326

DSCN4314

DSCN4336

DSCN4360

DSCN4342

ಅಲ್ಲಿಂದ ಹಿಂದಕ್ಕೆ ಪರಿವೀಕ್ಷಣಾ ಮಂದಿರಕ್ಕೆ ಬಂದು ಇಡ್ಲಿ ವಡೆ ಚಟ್ನಿ ಸವಿದೆವು.  ಈ  ಅವಧಿಯಲ್ಲಿ ಸತೀಶಬಾಬು  ಹ್ಯಾಂಡ್ ಪೋಸ್ಟ್ ಗೆ ಹೋಗಿ ಅಲ್ಲಿಂದ ಇಡ್ಲಿ ವಗೈರೆ ತಂದಿಟ್ಟಿದ್ದರು.

    ನಾವೆಲ್ಲ ಸಾಲಾಗಿ ಸೈಕಲ್ ಎದುರು ನಿಂತು ಫೋಟೋ ತೆಗೆಸಿಕೊಂಡು ಹನ್ನೊಂದೂವರೆ ಗಂಟೆಗೆ ಹೊರಟೆವು.

DSCN4424

ನಮ್ಮ ೫ ಮಂದಿಯ ಸೈಕಲ್ ಗೇರು ರಹಿತವಾಗಿದ್ದುದು. ಮತ್ತೆಲ್ಲರದು ಈಗಿನ ಆಧುನಿಕ ಬೆಲೆಬಾಳುವ ಆರೇಳು ಗೇರ್ ಇರುವ ಸೈಕಲುಗಳು. ಮೆತ್ತನೆ ಸೀಟ್ ಹೊಂದಿ ಕೂರಲು ಆರಾಮದಾಯಕವಾಗಿವೆ. ಶರವೇಗದಲ್ಲಿ ಚಲಿಸುತ್ತದೆ. ಏರಿನಲ್ಲಿ ಕೂಡ ಹೆಚ್ಚು ಕಷ್ಟಪಡುವಂತೆ ಕಾಣುವುದಿಲ್ಲ. ನನ್ನ ಸೈಕಲ್ ಮಾತ್ರ ಅತ್ಯಂತ ಹಳೆಯದು ಮತ್ತು ಸೀಟ್ ಅತ್ಯಂತ ಗಡುಸಾಗಿದ್ದುದು. ಸೈಕಲಿಗೆ ಸುಮಾರು ೨೩ ವರ್ಷ ಕಳೆಯಿತು. ಬಿ‌ಎಸ್‌ಎಲ್ ಎಸ್‌ಎಲ್‌ಆರ್ ಕಂಪನಿಯದು. ಆದರೂ ಒಳ್ಳೆಯ ಸೈಕಲ್. ಇಳಿಜಾರಿನಲ್ಲಿ ಎಲ್ಲರ ಸೈಕಲಿಗಿಂತ ಮುಂದೆ ಇರುತ್ತಿತ್ತು! ಏರಿನಲ್ಲಿ ಎಲ್ಲರಿಗಿಂತ ಹಿಂದೆ ಇರುತ್ತಿತ್ತು! ಬರುತ್ತ ಏರು ಜಾಸ್ತಿ. ಸ್ವಾಭಾವಿಕವಾಗಿ ನಾನು ಹಿಂದೆ ಉಳಿಯುತ್ತಿದ್ದೆ. ಅಲ್ಲಲ್ಲಿ ನಿಂತು ವಿಶ್ರಾಂತಿ ತೆಗೆದುಕೊಂಡು ದಾರಿ ಕ್ರಮಿಸಿದೆವು. ಬರುವಾಗ ಬಿಸಿಲು.  ದಾರಿಯಲ್ಲಿ ಸಾಗುತ್ತಿರುವಾಗ ಹಳ್ಳಿಗಳ ಜನರು ನಮ್ಮನ್ನು ಆಶ್ಚರ್ಯ ತುಂಬಿದ ನೋಟದಿಂದ ನೋಡುತ್ತ, ಮಕ್ಕಳು ಟಾಟಾ ಮಾಡುತ್ತ, ಮತ್ತೆ ಕೆಲಮಂದಿ ನಿಲ್ಲಿಸಿ ಎಲ್ಲಿಗೆ ಹೋಗಿರುವುದು ಎಂದು ವಿಚಾರಿಸುತ್ತ, ಮತ್ತೆ ಕೆಲಮಕ್ಕಳು `ಏ ಗೇರ್ ಸೈಕಲ್ ಕಣಾ ಅದು’ ಎಂದು ಉದ್ಗಾರ ತೆಗೆದು ಪಕ್ಕದವನನ್ನು ತಿವಿದು ತೋರಿಸುತ್ತ ಖುಷಿ ಪಡುತ್ತಿದ್ದರು.  ನಾವೂ ಅಷ್ಟೇ ಖುಷಿಯಿಂದ ಅವರಿಗೆ ಟಾಟಾ ಮಾಡಿ ಮುಂದೆ ಸಾಗುತ್ತಿದ್ದೆವು. ಅಕ್ಕಪಕ್ಕ ನೋಡುತ್ತ, ಹೊಲಗದ್ದೆಗಳು ಪೈರಿನಿಂದ ಹಸುರಿನಿಂದ ಕಂಗೊಳಿಸುವುದನ್ನು ಕಣ್ಣು ನೋಟದಲ್ಲಿ ತುಂಬಿಕೊಳ್ಳುತ್ತ ಸೈಕಲ್ ತುಳಿಯುವಾಗ ಉತ್ಸಾಹ ಸಹಜವಾಗಿ ಬರುತ್ತದೆ. ನಿನ್ನೆ ರಾತ್ರಿ ಈ ದೃಶ್ಯ ನೋಡಲು ಇರಲಿಲ್ಲ. ಎಲ್ಲ ಕತ್ತಲೆ. ಆದರೆ ಅದೊಂದು ತರಹದ ವಿಶಿಷ್ಟ ಅನುಭವ.  ಇದು ಬೇರೆಯೇ ತರನಾದ ಖುಷಿ. ಫೋಟೋ ತೆಗೆಯಲು ಮಾತ್ರ ಸಾಧ್ಯವಾಗಲಿಲ್ಲ. ಪೋಟೋ ಕ್ಲಿಕ್ಕಿಸಲು ನಿಲ್ಲಿಸಿದರೆ ನಾನು ಮತ್ತೂ ಹಿಂದೆ ಉಳಿಯುತ್ತೇನೆ. ಮೊದಲೇ ಏರು ಜಾಸ್ತಿ. ನಾನೇ ಹಿಂದೆ ಉಳಿದವಳು. ಅದಕ್ಕೆ ಕ್ಯಾಮರಾ ಚೀಲದಿಂದ ತೆಗೆಯಲು ಹೋಗಲಿಲ್ಲ. ದಾರಿಮಧ್ಯೆ ಮಂಚ್ ಚಾಕಲೇಟ್ ತಿಂದು ನೀರು ಕುಡಿದು ಮುಂದುವರಿದೆವು.
ದೂರದಲ್ಲಿ ಏರು ರಸ್ತೆ ಕಾಣುವಾಗ ಓ ಇದನ್ನು ದಾಟಬೇಕು ಎಂಬ ನಿರುತ್ಸಾಹ ಮನದಲ್ಲಿ ಒಮ್ಮೆ ಮೂಡಿದರೂ ಈ ಏರು ದಾಟಿದ ಬಳಿಕ ಇಳಿಜಾರು ಇರಲೇಬೇಕು ಎಂಬ ಆಶಾಭಾವ ಮೂಡಿ ಉತ್ಸಾಹ ತುಂಬಿಕೊಂಡು ಮುಂದುವರಿಯುತ್ತಿದ್ದೆ. ಸತೀಶಬಾಬು ಸೈಕಲಿನಲ್ಲಿ ನನ್ನೊಡನೆಯೇ ಬರುತ್ತ ಮಾತಾಡುತ್ತ ಇದ್ದರು. ಸುರೇಶ ಜೀಪ್ ಚಾಲನೆಯಲ್ಲಿದ್ದರು.
ಊಟಕ್ಕೆ ನಾಲೆ ಬಳಿ ಮಧ್ಯಾಹ್ನ ಒಂದೂಮುಕ್ಕಾಲಕ್ಕೆ ನಿಲ್ಲಿಸಿದೆವು. ಬಿಸಿಬೇಳೆಬಾತ್, ಮೊಸರನ್ನ. ನಾಲೆ ನೀರಿನಲ್ಲಿ ಮುಖಕ್ಕೆ ನೀರು ಹಾಕಿ ವಿಶ್ರಾಂತಿ ತೆಗೆದುಕೊಂಡೆವು. ಜೀಪನ್ನು ನಿಧಾನವಾಗಿ ಚಾಲಿಸುವುದು ಬಹಳ ಕಷ್ಟ. ಅದಕ್ಕಿಂತ ಸೈಕಲ್ ತುಳಿಯುವುದೇ ಸುಲಭ. ನಿಧಾನವಾಗಿ ೧೦ಕಿಮೀಗೂ ಕಮ್ಮಿ ವೇಗದಲ್ಲಿ ಜೀಪ ಚಲಾಯಿಸುವುದು ಅದೂ ೫೫ಕಿಮೀ ದೂರ ನಿಜಕ್ಕೂ ಚಾಲಕನ ಸಹನೆಗೆ ಮೆಚ್ಚಲೇಬೇಕು. ಈ ಕಾರ್ಯವನ್ನು ಸತೀಶಬಾಬು ಮತ್ತು ಸುರೇಶ ಯಶಸ್ವಿಯಾಗಿ ಮಾಡಿದ್ದಾರೆ. ಅವರನ್ನು ಅಭಿನಂದಿಸಲೇಬೇಕು. ಊಟವಾಗಿ ಸುರೇಶ ಜೀಪನ್ನು ಸತೀಶಬಾಬುಗೆ ಒಪ್ಪಿಸಿ ಸೈಕಲ್ ಏರಿದರು. ನಿಧಾನವಾಗಿ ಸಾಗಿದರೆ ನಿದ್ರೆ ಬರುತ್ತೆ ಎಂದರು.
ಎರಡು ಕಡೆ ಏರು ರಸ್ತೆಯಲ್ಲಿ ಸ್ವಲ್ಪದೂರ ನಾನು ಹಾಗೂ ಮತ್ತೊಬ್ಬರು ಸೈಕಲಿನಿಂದ ಇಳಿದು ನೂಕುತ್ತ ಸಾಗಿದ್ದೆವು. ಮತ್ತೆ ಎಲ್ಲೂ ಇಳಿದು ನೂಕಲಿಲ್ಲ. ಮೈಸೂರಿಗೆ ೧೨ಕಿಮೀ ದೂರವಿರುವಾಗ ಕಾಫಿಗೆ ನಿಲ್ಲಿಸಿ ಬೇಕರಿಯಲ್ಲಿ ಕಾಫಿ ಕುಡಿದು ಮುಂದೆ ಸಾಗಿದೆವು. ಅಂತೂ ಮೈಸೂರು  ೫.೩೦ ಗಂಟೆಗೆ ತಲಪಿದೆವು. ಯಾರ ಸೈಕಲ್ ದಾರಿಮಧ್ಯೆ ಕೈಕೊಡಲಿಲ್ಲ. ಗಾಳಿ ಹಾಕಬೇಕಾಗಿ ಬಂದಿರಲಿಲ್ಲ. ನನ್ನ ಸೈಕಲಿಗೆ ಸೆಲ್ಯೂಟ್ ಹಾಕಲೇಬೇಕು. ಸುಮಾರು ೧೧೦ಕಿಮೀ ದೂರ ನಮ್ಮನ್ನು ಕೂರಿಸಿಕೊಂಡು ಪ್ರಯಾಣಿಸಿ ಯಶಸ್ವಿಯಾಗಿತ್ತು. ಈ ಅನುಭವ ತುಂಬ ಖುಷಿ ಕೊಟ್ಟಿತು. ಸೈಕಲಿನಲ್ಲಿ ರಾತ್ರಿ ಪ್ರಯಾಣ ಹೆಚ್ಚು ಚೇತೋಹಾರಿಯಾಗಿರುತ್ತದೆ. ಸ್ಥಳೀಯರು ಹೆದರಿಸಿದಂತೆ ಆನೆಯಂತೂ ಪ್ರತ್ಯಕ್ಷವಾಗಲಿಲ್ಲ. ಆನೆ ಆ ರಸ್ತೆಯಲ್ಲಿ ಇರುವುದಿಲ್ಲ ಎಂದು ನಾಗರಾಜ್ ಹೇಳಿದರು. ಸುಖವಾಗಿ ಹೋಗಿ ಹಿಂದಿರುಗಿದ್ದೆವು. ಸತೀಶಬಾಬು ಅವರ ಮಗ ೬ ವರ್ಷದ ಬುದ್ಧ ಕೂಡ ಅವನ ಪುಟಾಣಿ ಸೈಕಲ್ ಜೀಪಿನಲ್ಲಿ ಹಾಕಿ ತಂದು ಪರಿವೀಕ್ಷಣಾ ಮಂದಿರದ ಅಂಗಳದಲ್ಲಿ ಸವಾರಿ ಮಾಡಿದ್ದ. ಅವನ ಉತ್ಸಾಹ ನೋಡಿ ನಮಗೆಲ್ಲ ಖುಷಿ.

DSCN4197
ಹಿಂದಿರುಗಿದ ಮಾರನೇದಿನ ಒಂದು ದಿನ ಮಾತ್ರ ತೊಡೆಗಳು ನೋವು ಇತ್ತು. ಅದೂ ಸಹಿಸದೆ ಇರುವಷ್ಟು ಏನೂ ಇರಲಿಲ್ಲ. ಈ ಯಾನದಿಂದ ಇನ್ನು ಮುಂದೆ ಕೂಡ ದೂರ ಸೈಕಲ್ ಪ್ರಯಾಣ ಮಾಡಬಹುದು ಎಂಬ ಭರವಸೆ ಮೂಡಿತು.
ಎಲ್ಲ ಏರ್ಪಾಡು ಅಚ್ಚುಕಟ್ಟಾಗಿ ಮಾಡಿ ನಮ್ಮನ್ನು ಮುತುವರ್ಜಿಯಿಂದ ಕಬಿನಿಗೆ ಕರೆದುಕೊಂಡು ಹೋಗಿ ಯಶಸ್ವಿಯಾಗಿ ವಾಪಾಸು ಕರೆತಂದ ಸತೀಶಬಾಬು ಅವರಿಗೆ ಧನ್ಯವಾದಗಳು. ಅವರಿಗೆ ಜೀಪ್ ಕೊಟ್ಟು ಎಲ್ಲ ಸಹಕಾರವಿತ್ತ ಸುರೇಶ ಅವರಿಗೂ ಧನ್ಯವಾದಗಳು. ಈ ಪಯಣವನ್ನು ಯೂಥ್ ಹಾಸ್ಟೆಲ್ ಗಂಗೋತ್ರಿ ಘಟಕದ ವತಿಯಿಂದ ಏರ್ಪಡಿಸಲಾಗಿತ್ತು.

Read Full Post »

Older Posts »