Posted in ವಿದ್ಯಮಾನ on ಮಾರ್ಚ್ 22, 2014|
1 Comment »
ಮೈಸೂರಿನ ಕುವೆಂಪುನಗರದ ಅನಿಕೇತನ ರಸ್ತೆಯ ೩ನೇ ರಸ್ತೆ ಯಲ್ಲಿ ಸಾಗುವಾಗ ತಂಪಾದ ಸುಖ ಸಿಗುತ್ತಿತ್ತು. ರಸ್ತೆಗೆ ಬಿಸಿಲು ಬೀಳದಂತೆ ಮರಗಳ ರೆಂಬೆಗಳು ವಿಶಾಲವಾಗಿ ಹರಡಿದ್ದುವು. ವಿದ್ಯುತ್ ಶುಲ್ಕ ಕಟ್ಟಲು ಪ್ರತೀ ತಿಂಗಳೂ ನಾನು ಸೈಕಲಿನಲ್ಲಿ ಅದೇ ರಸ್ತೆಯಲ್ಲೇ ಹೋಗುವುದು. ಇತ್ತೀಚೆಗೆ ಆ ರಸ್ತೆಯಲ್ಲಿ ಹೋದಾಗ ಆಘಾತ ಕಾದಿತ್ತು. ಮರಗಳೆಲ್ಲ ಕೊಂಬೆ ಕತ್ತರಿಸಿಕೊಂಡು ಶೋಕಸಾಗರದಲ್ಲಿ ಮಿಂದು ಅಳುವಂಥ ವಾತಾವರಣ ಕಂಡಿತು. ಇದಕ್ಕೆ ಕಾರಣರಾರು ಎಂದು ವಿಚಾರಿಸಲು ೩ ಸಲ ಆ ರಸ್ತೆಯಲ್ಲಿ ಅಡ್ಡಾಡಿದೆ. ಯಾರಾದರೂ ಮನೆ ಬಾಗಿಲು ತೆರೆದು ಬರುತ್ತಾರೇನೋ ಎಂದು ಕಾದೆ. ಒಂದು ಮನೆಯಿಂದ ಒಬ್ಬರು ಹೊರಬಂದು ತಳ್ಳುಗಾಡಿಯಲ್ಲಿನ ತರಕಾರಿ ಕೊಳ್ಳಲು ಅನುವಾದರು. ಇದಕ್ಕಾಗೇ ಕಾಯುತ್ತಿದ್ದ ನಾನು ಧಾವಿಸಿ ಹೋಗಿ `ಯಾರು ಈ ಮರಗಳ ರೆಂಬೆ ಮಾತ್ರವಲ್ಲ ಕೊಂಬೆಗಳನ್ನು ಹೀಗೆ ಕತ್ತರಿಸಿ ಹಾಕಿದವರು?` ಎಂದು ಕೇಳಿದೆ.
`ಈ ಮರಗಳಿಂದ ತುಂಬ ತೊಂದರೆಯಾಗುತ್ತಿತ್ತು. ಎಲೆಗಳೆಲ್ಲ ಬಿದ್ದು ತಾರಸಿಯಲ್ಲಿ ಮಳೆ ನೀರು ಕಟ್ಟಿಕೊಳ್ಳುತ್ತಿತ್ತು. ಹಾಗಾಗಿ ನಾವು ಸ್ಥಳೀಯ ಶಾಸಕರಲ್ಲಿ ಈ ಮರಗಳ ರೆಂಬೆ ಕತ್ತರಿಸಬೇಕು ಎಂದು ಮನವಿ ಮಾಡಿದೆವು. ಅದಕ್ಕೆ ಅವರು ಸ್ಪಂದಿಸಿದರು. ಆದರೆ ಮರಕಡಿಯಲು ಬಂದವರು ರೆಂಬೆ ಕತ್ತರಿಸುವ ಬದಲು ಕೊಂಬೆಗಳನ್ನೆಲ್ಲ ಕತ್ತರಿಸಿ ಅರ್ಧಕ್ಕೆ ಮರ ಕಡಿದರು’ ಎಂದರು.
ಎಷ್ಟು ಚೆನ್ನಾಗಿ ತಂಪಾಗಿ ಇತ್ತು ರಸ್ತೆ. ಇನ್ನು ಮುಂದೆ ನಿಮಗೆ ಬಿಸಿ ಮನೆಯೊಳಗೂ ಬರಬಹುದು ಎಂದೆ. (ಅವರ ಮನವಿಗೆ ಶಾಸಕರು ಸ್ಪಂದಿಸಿದ ರೀತಿ ಮಾತ್ರ ಬಹಳ ಜೋರಾಗಿಯೇ ಇತ್ತು ಎಂದು ಮನದಲ್ಲೇ ಭಾವಿಸಿದೆ.)
`ಹೌದು. ಈಗಾಗಲೇ ಬಿಸಿಯ ಅರಿವು ಆಗಿದೆ’ ಎಂದರು! ನೆಗಡಿಯಾಯಿತೆಂದು ನಾಸಿಕವನ್ನೇ ಕತ್ತರಿಸಿಕೊಂಡ ಪರಿಸ್ಥಿತಿಯಂಥಾಯಿತು! ಈಗ ಅತ್ತರೆ ಏನು ಪ್ರಯೋಜನ?


ಮನುಷ್ಯರಿಗೆ ಬುದ್ಧಿ ಇಲ್ಲ. ಏಕೆ ಹೀಗೆ ಮರ ಕಡಿತಾರೋ ? ಎಂದು ಈ ಹಕ್ಕಿಗಳು ಹೇಳುತ್ತಿರಬಹುದೆ?
Read Full Post »