Feeds:
ಲೇಖನಗಳು
ಟಿಪ್ಪಣಿಗಳು

Archive for the ‘ಲೇಖನ’ Category

ಸರಸ್ವತೀಪುರದ ೧೭ನೇ ಮುಖ್ಯರಸ್ತೆಯಲ್ಲಿ (ನೀರಿನ ಟ್ಯಾಂಕ್ ರಸ್ತೆ) ಕುಕ್ಕರಹಳ್ಳಿ ಕೆರೆ ಕಡೆಗೆ ಹೋಗುವಾಗ ರಸ್ತೆಯ ಎಡ ಭಾಗದಲ್ಲಿ ಪ್ಲಾಸ್ಟಿಕ್ ಹಾಳೆಯ ಹೊದಿಕೆ ಹಾಕಿದ ಕೆಲವು ಗುಡಿಸಲುಗಳು ಕಾಣುತ್ತವೆ. ಒಂದು ಸಂಜೆ ಅತ್ತ ಹೋಗುತ್ತಿರುವಾಗ ಅಕಸ್ಮಾತ್ ಆಗಿ ನನ್ನ ದೃಷ್ಟಿ ಅತ್ತ ಸರಿಯಿತು. ಒಬ್ಬ ವ್ಯಕ್ತಿ ಒಂದು ವಿಗ್ರಹಕ್ಕೆ ರಬ್ಬರಿನಂತಿರುವ ಬಣ್ಣ ಹಾಕುವುದರಲ್ಲಿ ತಲ್ಲೀನನಾಗಿದ್ದರು. ಅವರ ಕೆಲಸಕ್ಕೆ ತುಸು ಭಂಗ ತರುವಂತೆ ನಾನು `ಇದರ ಫೋಟೋ ತೆಗೆಯಬಹುದ?’ ಎಂದು ಕೇಳಿದೆ. ಅನುಮತಿ ಇತ್ತರು. ಎಷ್ಟೋ ಸಮಯದಿಂದ ಅಲ್ಲಿ ವಿಗ್ರಹಗಳನ್ನು ಕಂಡರೂ ನಾನು ಅತ್ತ ಗಮನಹರಿಸಿರಲಿಲ್ಲ. ಅವರನ್ನು ಮಾತಾಡಿಸಿದೆ. ಅವರು ಅವರ ಕೆಲಸದಲ್ಲಿ ಮಗ್ನರಾಗಿದ್ದುಕೊಂಡೇ ನನ್ನ ಪ್ರಶ್ನೆಗಳಿಗೆ ಉತ್ತರ ಕೊಟ್ಟರು. ಕನ್ನಡ ಸಲೀಸಾಗಿ ಮಾತಾಡುತ್ತಾರೆ.
ಸುಮಾರು ೨೫ ವರ್ಷದ ಹಿಂದೆ ದೂರದ ರಾಜಸ್ಥಾನದಿಂದ ಬದುಕು ಅರಸಿ ಮೈಸೂರಿಗೆ ಬಂದ ಮನೋಜ ಈಗ ಮೈಸೂರಿಗರೇ ಆಗಿದ್ದಾರೆ. ಅಲ್ಲೆ ಗುಡಿಸಲಿನಲ್ಲಿ ವಾಸ. ಪ್ಲಾಸ್ಟರ್ ಆಫ್ ಪ್ಯಾರಿಸ್‌ನಿಂದ ವಿವಿಧ ನಮೂನೆಯ ವಿಗ್ರಹಗಳನ್ನು ತಯಾರಿಸಿ ಬಣ್ಣ ಬಳಿದು ಗಾಡಿಯಲ್ಲಿ ಅವುಗಳನ್ನು ತುಂಬಿಕೊಂಡು ಹೋಗಿ ಮಾರಾಟ ಮಾಡುತ್ತಾರೆ. ಒಂದೊಂದು ದಿನ ಹೆಚ್ಚು ಮಗದೊಂದು ದಿನ ಕಮ್ಮಿ ಹೀಗೆ ಬದುಕಿಗೆ ಸಾಕಾಗುವಷ್ಟು ವ್ಯಾಪಾರ ಸಾಗುತ್ತದೆ. ನೆಮ್ಮದಿಯಿಂದ ಜೀವನ ಮಾಡುತ್ತಿದ್ದಾರೆ. ಮಕ್ಕಳು ಛತ್ರಿ ಮರದ ಸಮಿಪವಿರುವ ಶಾಲೆಗೆ ಹೋಗುತ್ತಿದ್ದಾರೆ. ಮೈಸೂರು ನಮಗೆ ಅನ್ನ ನೀಡಿದೆ ಎಂಬ ತೃಪ್ತಿ ಅವರ ಮೊಗದಲ್ಲಿ ಕಾಣುತ್ತಿತ್ತು.

೫

೩

೪unnamed ೧ ೨
ಎತ್ತಣ ರಾಜಸ್ಥಾನ ಎತ್ತಣ ಮೈಸೂರು. ಎತ್ತಣ ಮಾಮರ ಎತ್ತಣ ಕೋಗಿಲೆ ಎಲ್ಲಿಂದ ಎಲ್ಲಿಗೆ ಸಂಬಂಧವಯ್ಯ. ಪ್ರಾಮಾಣಿಕವಾಗಿ  ಜೀವನ ಸಾಗಿಸಲು ನೂರೆಂಟು ದಾರಿಗಳು, ಸ್ಥಳಗಳು ಇವೆ.

Read Full Post »

ಇಸವಿ ೨೦೧೨ಕ್ಕೆ ವಿದಾಯ ಹೇಳಿ ೨೦೧೩ರ ಸ್ವಾಗತಕ್ಕೆ ನಾವು ತಯಾರಾಗಿದ್ದೇವೆ. ೨೦೧೨ ಡಿಸೆಂಬರದಲ್ಲಿ ಪ್ರಳಯ ಆಗುತ್ತೆ ಮನುಕುಲ ನಾಶವಾಗುತ್ತೆ ಎಂದು ಸುದ್ದಿ ಹರಡಿತ್ತು. ಆದರೆ ಮನುಕುಲ ನಾಶವಾಗಲಿಲ್ಲ. ಮನುಜ ಬಹಳ ಸ್ವಾರ್ಥಿಯಾಗುವತ್ತ ಹೆಜ್ಜೆ ಹಾಕಿದ್ದಂತೂ ಹೌದು. ಈಗ ರಾಜಕೀಯದಲ್ಲಿ ಪ್ರತಿದಿನ ಪ್ರಳಯ ಆಗುವುದನ್ನು ನಾವು ನೋಡುತ್ತಲೇ ಇದ್ದೇವೆ. ಕರ್ನಾಟಕದಲ್ಲಿ ಭಾರತೀಯ ಜನತಾ ಪಕ್ಷ ಅಧಿಕಾರ ವಹಿಸಿಕೊಂಡಾಗ ನಮ್ಮ ರಾಜ್ಯ ಇನ್ನಾದರೂ ಸುಭಿಕ್ಷದತ್ತ ಹೋಗುವುದನ್ನು ಕಾಣಬಹುದು, ಆಡಳಿತ ಚುಕ್ಕಾಣಿ ಇನ್ನು ಸುಲಲಿತವಾಗಿ ನಡೆದೀತು ಎಂಬ ಆಶೋತ್ತರಗಳು ಬೆಟ್ಟದಷ್ಟಿತ್ತು.  ಆದರೆ ಕೆಲವು ಒಳ್ಳೆಯ ಕೆಲಸ ಮಾಡುವುದರ ಜೊತೆಗೇನೇ ಇನ್ನಿಲ್ಲದ ವ್ಯಾಜ್ಯದಲ್ಲಿ ಭಾಗಿಯಾಗಿ ನಮ್ಮ ಆಶೋತ್ತರಗಳನ್ನು ಹಗರಣವೆಂಬ ಪ್ರಳಯದಲ್ಲಿ ಕೊಚ್ಚಿ ಹಾಕಿದರು.
 

ಭ್ರಷ್ಟ ವ್ಯವಸ್ಥೆ ಕೊನೆಗಾಣಲಿ
ಚುನಾವಣೆಗೂ ಮೊದಲು ಎಲ್ಲ ಪಕ್ಷಗಳು ನಾವು ಬಹುಮತದಲ್ಲಿ ಗೆದ್ದರೆ ನಿಮಗೆ ಮೊಬೈಲು, ಲ್ಯಾಪ್ ಟಾಪ್, ಬೆಳೆಸಾಲ, ಬಡ್ಡಿಮನ್ನಾ, ಆ ಸಾಲ ಈ ಸಾಲ ಇತ್ಯಾದಿ ಆಮಿಷಗಳನ್ನು ಒಡ್ಡುತ್ತವೆ. ಇದು ನಿಜಕ್ಕೂ ಆಘಾತಕಾರೀ ಬೆಳವಣಿಗೆ. ಈ ರೀತಿ ಆಮಿಷ ಒಡ್ಡುವುದು ಸರಿಯೇ? ಪ್ರಜಾಪ್ರಭುತ್ವದಲ್ಲಿ ಓಟು ನಮ್ಮ ಹಕ್ಕು. ೧೮ ವರ್ಷ ತುಂಬಿದ ಪ್ರತಿಯೊಬ್ಬರೂ ಮತ ಚಲಾಯಿಸಬೇಕು. ಆದರೆ ಆಮಿಷ ಒಡ್ಡಿದ ಪಕ್ಷಕ್ಕೆ ಮತ ಹಾಕುವುದು ಎಷ್ಟು ಸರಿ? ಇನ್ನು ಮುಂದಾದರೂ ಪಕ್ಷಗಳ ನೇತಾರರು ಸ್ವಾರ್ಥ ರಾಜಕಾರಣ ಬಿಟ್ಟು ರಾಜ್ಯದ, ದೇಶದ ಹಿತಕ್ಕೆ ಪ್ರಾಮಾಣಿಕವಾಗಿ ಕೆಲಸ ಮಾಡಲಿ. ಅಂಥ ಬುದ್ಧಿ ಅವರಿಗೆಲ್ಲ ಬರಲಿ ಎಂದು ಆಶಾಭಾವನೆಯಿಂದ ಎದುರು ನೋಡೋಣ.

  ಕಾನೂನು ಇರುವುದು ಏಕೆ?
ಒಂದು ಗಾಡಿ ಓಡಿಸಲು ವ್ಯಕ್ತಿಗೆ ೧೮ ವರ್ಷ ತುಂಬಿದ ಬಳಿಕ ಪರವಾನಿಗೆ ಸಿಗುವುದು. ಆದರೆ ನಮ್ಮ ರಾಜ್ಯದಲ್ಲಿ ನೋಡಿ. ಸಣ್ಣ ಸಣ್ಣ ಮಕ್ಕಳು ಕೂಡ ಬೈಕ್, ಸ್ಕೂಟರ್ ಓಡಿಸುವುದನ್ನು ಕಾಣುತ್ತೇವೆ. ಹೆತ್ತವರು ಕಾನೂನು ಮುರಿದು ಅವರ ಕೈಗೆ ವಾಹನ ಕೊಡುತ್ತಾರೆ. ಶಿರಸ್ತ್ರಾಣ ಕಡ್ಡಾಯ ಎಂದಿದ್ದರೂ ನಾವು ಅದನ್ನು ಧರಿಸದೇ ವಾಹನ ಚಲಾಯಿಸುತ್ತೇವೆ. ಏಕಮುಖ ರಸ್ತೆಯಲ್ಲಿ ವಿರುದ್ಧ ದಿಕ್ಕಿನಿಂದ ವಾಹನ ಚಲಾಯಿಸುತ್ತೇವೆ. ರಾತ್ರಿ ಹತ್ತರನಂತರ ಪಟಾಕಿ ಹೊಡೆಯಬಾರದು ಎಂದು ಕಾನೂನು ಜಾರಿಯಲ್ಲಿದ್ದರೂ ರಾತ್ರಿ ೧೨ ಆದರೂ ಪಟಾಕಿ ಸದ್ದು ಕೇಳುತ್ತಲೇ ಇರುತ್ತದೆ. ರಸ್ತೆಯಲ್ಲಿ ಎಲ್ಲೆಂದರಲ್ಲಿ ಕಸ ಹಾಕುವುದನ್ನು ಬಿಡುವುದಿಲ್ಲ. ಏಕೆ ಹೀಗೆ ನಾವು?
ಶಾಲೆಯಲ್ಲಿ ಮಕ್ಕಳಿಗೆ ನಿಜಕ್ಕೂ ಇಂಥದರ ಬಗ್ಗೆ ಎಳೆವೆಯಲ್ಲೆ ಪಾಟ ಮಾಡಬೇಕು. ಆಗಲಾದರೂ ಈ ಎಲ್ಲ ಕಾನೂನನ್ನು ಪಾಲಿಸುವಂಥ ಮನೋಭಾವ ಮುಂದಾದರೂ ಬರಬಹುದೋ ಏನೋ ಎಂಬ ಆಶಾಭಾವ.

ನಮ್ಮ ನಾಡು ಸಮೃದ್ಧಭರಿತ ನಾಡು
ನಮ್ಮ ದೇಶ ಶ್ರೀಮಂತ ದೇಶ. ಹೇರಳವಾದ ಸಸ್ಯಸಂಪತ್ತು ಇವೆ. ಅದನ್ನು ಉಳಿಸಿ ಬೆಳೆಸೋಣ. ಯಾವುದಕ್ಕೆ ಆದರೂ ಅತಿ ಆಸೆ ಪಟ್ಟರೆ ನಮ್ಮ ಜೀವನ ನಿರ್ನಾಮವಾಗುತ್ತದೆ. ಅದಕ್ಕೆ ಒಂದು ಸ್ವಾರಸ್ಯವಾದ ಕಥೆ ಹೀಗಿದೆ: ಒಂದು ಜಲಾಶಯದಲ್ಲಿ ಮೀನು ವಾಸವಾಗಿತ್ತು. ಅಲ್ಲಿ ಅದಕ್ಕೆ ಯಾವುದಕ್ಕೂ ಕೊರತೆ ಇರಲಿಲ್ಲ. ಹೀಗಿರಲಾಗಿ ಒಂದು ದಿನ ಒಬ್ಬ ಮೀನುಗಾರ ಆ ಜಲಾಶಯಕ್ಕೆ ಬಂದು ಗಾಳಕ್ಕೆ ಹುಳಕಟ್ಟಿ ಜಲಾಶಯಕ್ಕೆ ಇಳಿಬಿಟ್ಟು ಕುಳಿತ. ಸಮೃದ್ಧಿಯಿಂದ ಇದ್ದ ಆ ಮೀನು ಆ ಹುಳ ನೋಡಿ ಆಸೆಯಿಂದ ತಿನ್ನಲು ಮುಂದೆ ಬಂತು. ಗಾಳದಲ್ಲಿ ಸಿಕ್ಕಿಸಿದ್ದ ಹುಳ ತಿನ್ನಲು ಬಾಯಿ ಹಾಕಿದಾಗ ಅದು ಗಾಳಕ್ಕೆ ಸಿಕ್ಕಿ ಬಿಡಿಸಿಕೊಳ್ಳಲಾರದೆ ಒದ್ದಾಡಿತು. ಮೀನುಗಾರ ಗಾಳ ಎಳೆದು ಮೀನನ್ನು ಬುಟ್ಟಿಗೆ ಹಾಕಿದ. ಮೀನು ಪ್ರಾಣ ತೆತ್ತಿತು. ನಿಜಕ್ಕೂ ಮೀನಿಗೆ ಗಾಳದಲ್ಲಿರುವ ಹುಳ ತಿನ್ನಬೇಕೆಂದೇನಿರಲಿಲ್ಲ. ಅತಿ ಆಸೆಯೇ ಅದರ ಜೀವಕ್ಕೆ ಮುಳುವಾಯಿತು. ಹಾಗೆಯೇ ಈ ಸಂಸಾರ ಕೂಡ ಒಂದು ಜಲಾಶಯ ಇದ್ದಂತೆ. ಇಲ್ಲಿ ಸುಖ ಶಾಂತಿಯಿಂದ ಬಾಳಲು ಎಲ್ಲ ಸೌಲಭ್ಯವೂ ಇದೆ. ಆದರೆ ನಾವು ಅವೆಲ್ಲ ಬಿಟ್ಟು ಕೆಟ್ಟ ಚಟಗಳಿಗೆ ಆಕರ್ಷಿತರಾಗಿ ಬದುಕನ್ನು ನಮ್ಮ ಕೈಯಾರೆ ಹಾಳು ಮಾಡಿಕೊಳ್ಳುತ್ತೇವೆ.

  ಮನವೆಂಬುದು ಮರ್ಕಟ
ಎನ್ನ ಮನವೆಂಬ ಮರ್ಕಟನು
ತನುವಿಕಾರವೆಂಬ ಅಲ್ಪಸುಖದಾಸೆಗಾಡಿ
ವೃಥಾ ಭ್ರಮೆಗೊಂಡು, ನಾನಾದೆಸೆಗೆ ಲಂಘಿಸಿ
ಅಳಲಿಸಿ ಬಳಲಿಸುತ್ತಿದೆ ನೋಡಾ!
ಕೂಡಲಸಂಗಮದೇವರೆಂಬ ಕಲ್ಪವೃಕ್ಷಕ್ಕೆ ಲಂಘಿಸಿ
ಅಪರಿಮಿತದ ಸುಖವನ್ನೈದದು ನೋಡಾ!
ಬಸವಣ್ಣನವರ ಈ ವಚನ ನಮ್ಮ ಮನಸ್ಸನ್ನು ಕಪಿಗೆ ಹೋಲಿಸುತ್ತದೆ. ಕಪಿಯು ಒಂದೇ ಹಣ್ಣನ್ನು ತೃಪ್ತಿಪಟ್ಟು ತಿನ್ನುವುದಿಲ್ಲ, ಒಂದು ಹಣ್ಣು ಕಂಡಾಗ ಅದಕ್ಕೆ ಹಾರಿ, ಇನ್ನೊಂದು ಹಣ್ಣು ಕಂಡರೆ ಹಳೆಹಣ್ಣನ್ನು ಅಲ್ಲೆ ಎಸೆದು ಅದನ್ನು ತಿನ್ನಲು ಹವಣಿಸುತ್ತದೆ. ಯಾವ ಹಣ್ಣನ್ನೂ ಅದು ತೃಪ್ತಿಯಾಗಿ ತಿನ್ನುವುದಿಲ್ಲ. ಹಾಗೆಯೇ ಮನುಜರೂ ಕೂಡ. ಎಷ್ಟು ದುಡ್ಡಿದ್ದರೂ ಸಾಲದು, ಇನ್ನೂ ಕೂಡಿಡಬೇಕು, ಪರರ ವಸ್ತುಗಳಿಗೆ ಆಸೆ ಪಡುವುದು ಕಾಣುತ್ತದೆ.

ಬದುಕಿನ ಬೆಲೆ ಅರಿಯೋಣ
ಯಾರಿಗೇ ಆಗಲಿ ನಾವು ಒಳ್ಳೆಯದು ಮಾಡಬೇಕು. ನಮ್ಮಿಂದ ಒಬ್ಬರಿಗೆ ಉಪಕಾರ ಮಾಡಲಾಗದಿದ್ದರೂ ಪರವಾಗಿಲ್ಲ. ಆದರೆ ಅಪಕಾರ ಮಾಡಲು ಮಾತ್ರ ಹೋಗಬಾರದು. ಸ್ವಾರ್ಥ, ಸಣ್ಣತನದಿಂದ ಸಮಾಜಕ್ಕೆ ಆಗಲೀ, ವ್ಯಕ್ತಿಗಳಿಗಾಗಲೀ ಏನೂ ತೊಂದರೆ ಮಾಡದೆ ಇದ್ದರೆ ಅದೇ ದೊಡ್ಡ ಭಾಗ್ಯ. ದ್ವೇಷ ಅಸೂಯೆ ಎಂಬ ವಿಷಗಳ ಬೇರನ್ನು ನಾಶ ಮಾಡೋಣ. ಓಂ ಸಹನಾವವತು ಸಹನೌಭುನಕ್ತು ಸಹವೀರ್ಯಂ ಕರವಾವಹೈ ತೇಜಸ್ವಿನಾವಧೀತಮಸ್ತು ಮಾ ವಿದ್ವಿಷಾವಹೈ ಓಂ ಶಾಂತಿಃ ಶಾಂತಿಃ ಶಾಂತಿಃ ಎಂಬ ಮಂತ್ರವನ್ನು ಯಾವಾಗಲೂ ನೆನಪಿನಲ್ಲಿಡೋಣ.
ಈ ನೂತನ ವರ್ಷದಲ್ಲಿ ಮುಂದೆ ನಾವು ನೆಮ್ಮದಿಯ ಬಾಳು ಬಾಳೋಣ. ಬದುಕೆಂಬುದು ಅಮೂಲ್ಯವಾದುದು. ಯಾರು ಬದುಕಿನ ಮಹತ್ತನ್ನು ಅರಿತಿರುತ್ತಾರೋ ಅವರು ಜೀವನವನ್ನು ಪ್ರೀತಿಸುತ್ತಾರೆ. ಅದಕ್ಕೆ ಒಂದು ಸುಂದರ ಕಥೆ ಇದೆ.
ಒಬ್ಬ ದಾರಿಯಲ್ಲಿ ಹೋಗುತ್ತಿದ್ದ. ಅವನ ಎದುರು ಒಂದು ಬಸವನಹುಳು ನಿಧಾನವಾಗಿ ಸಾಗುತ್ತಿತ್ತು. ಅದು ರಸ್ತೆ ದಾಟಲು ಪ್ರಯತ್ನಿಸುತ್ತಿತ್ತು. ಆದರೆ ಮುಂದೆ ಹೋಗುತ್ತಿಲ್ಲ. ಅದನ್ನು ಕಂಡು ಈ ದಾರಿಹೋಕ ಪ್ರಶ್ನಿಸಿದ. `ಏಕೆ ಮುಂದೆ ಹೋಗುತ್ತಿಲ್ಲ ನೀನು?’
`ವಾಹನ ಬರುತ್ತಿದೆಯಲ್ಲ’ ಬಸವನಹುಳು ಹೇಳಿತು.
`ಯಾವ ಕೆಲಸಕ್ಕೂ ಬಾರದ ನೀನು ಮರಣಕ್ಕೆ ಅದೇಕೆ ಹೆದರುವೆ? ನೀನು ಸತ್ತರೇನೂ ನಷ್ಟವಿಲ್ಲ’ ದಾರಿಹೋಕ ಅಪಹಾಸ್ಯದಿಂದ ನಗುತ್ತ ನುಡಿದ.
`ನಾನು ಸಾಯಲು ಹೆದರುತ್ತಿಲ್ಲ. ಜೀವನವನ್ನು ನಾನು ತುಂಬ ಪ್ರೀತಿಸುತ್ತೇನೆ. ನಾನು ಬದುಕುತ್ತಿರುವುದೇ ಆನಂದ ಅನುಭವಿಸಲು. ನನ್ನ ಬದುಕಿನ ಪ್ರತಿಯೊಂದು ಕ್ಷಣವನ್ನೂ ವ್ಯರ್ಥಗೊಳಿಸದೆ ಆನಂದವೆಂಬ ಸಂಪತ್ತಿನಿಂದ ತುಂಬುವೆ. ಆದರೆ ನೀವು ಮನುಷ್ಯರು ಹಾಗಲ್ಲ. ನಿಮಗೆ ಜೀವನದ ಬೆಲೆ ಏನೆಂದೇ ಗೊತ್ತಿಲ್ಲ. ನೋಡು ಹೇಗೆ ಯುವಕರು ವಾಹನ ಚಲಾಯಿಸುತ್ತಾರೆ. ತಲೆಗೆ ಹೆಲ್ಮೆಟ್ ಧರಿಸದೆಯೇ ಅಪಘಾತದಿಂದ ಪ್ರಾಣ ಕಳೆದುಕೊಳ್ಳುತ್ತಾರೆ. ಅವರಿಗೆ ಜೀವನದ ಬೆಲೆ ಗೊತ್ತಿದೆಯೇ?
ದಾರಿಹೋಕ ಬಸವನಹುಳದ ಮಾತಿಗೆ ತಲೆದೂಗಿದ. ಅಪಹಾಸ್ಯದಿಂದ ನಕ್ಕ ಬಗ್ಗೆ ಪಶ್ಚಾತ್ತಾಪ ಪಟ್ಟು ಕ್ಷಮೆ ಕೇಳಿದ. ಆಗ ಬಸವನಹುಳ, ಏ ಮಾನವ ದೂರ ಸರಿ. ನೋಡು ವೇಗವಾಗಿ ವಾಹನ ಬರುತ್ತಿದೆ. ದಾರಿಹೋಕ ಬದಿಗೆ ಸರಿದು ನಿಂತ. ವಾಹನ ಧೂಳೆಬ್ಬಿಸಿಕೊಂಡು ಮುಂದೆ ಹೋಯಿತು.
ನಾವು ನೀವೆಲ್ಲರೂ ಬದುಕಿನ ಬೆಲೆ ಅರಿಯೋಣ.  ಆಗ ಈ ಜಗತ್ತು ಸುಂದರ. ಜೀವನವೂ ಮಧುರವೆನಿಸುವುದು. ಸಕಲರಿಗೂ ನೂತನ ವರ್ಷದ ಶುಭಾಶಯಗಳು.

Read Full Post »