Feeds:
ಲೇಖನಗಳು
ಟಿಪ್ಪಣಿಗಳು

Archive for the ‘ಲಹರಿ’ Category

ಜನವರಿ ೭ ೨೦೧೩ ಇಂದಿಗೆ ಮಾಲಾಲಹರಿ ಬ್ಲಾಗ್ ತೆರೆದು ೪ ವರ್ಷಗಳು. ಅಲ್ಲೊಂದು ಇಲ್ಲೊಂದು ಎಂದು ಲೇಖನ ಬರೆಯುವ ಚಟ ಸುಮಾರು ೨೫ ವರ್ಷಗಳಿಂದ ಪ್ರಾರಂಭವಾಗಿರುವುದು. ಬರೆದರೆ ಆಯಿತೆ? ಅದರ ಪ್ರದರ್ಶನವಾಗಬೇಡವೇ? ಪತ್ರಿಕೆಗೆ ಕಳಿಸಿದರೆ ಮುಗಿಯಿತೆ? ಅದು ಪ್ರಕಟವಾಗುತ್ತದೋ ಇಲ್ಲವೋ ಎಂಬ ಕಾಯುವಿಕೆ. ಪ್ರಕಟಣೆಗೆ ಅರ್ಹವೇ ಇಲ್ಲವೆ ಅದರ ಕಥೆ ಏನಾಯಿತು ಎಂದು ಹೆಚ್ಚಿನ ಸಂದರ್ಭಗಳಲ್ಲೂ ನಮಗೆ ತಿಳಿಯುವುದೇ ಇಲ್ಲ. ಪ್ರಾರಂಭದಲ್ಲಿ ಕೆಲವು ಪತ್ರಿಕೆಗಳವರು ಲೇಖನ ಕಳಿಸಿದರೆ ಪ್ರಕಟಣೆಗೆ ಸ್ವೀಕಾರವೋ ಇಲ್ಲವೋ ಎಂದು ತಿಳಿಸುವ ಕೃಪೆ ಮಾಡುತ್ತಿದ್ದರು. ಇನ್ನು ಕೆಲವು ಪತ್ರಿಕೆಗಳವರು ಆ ಸೌಜನ್ಯವನ್ನು ನಮಗೆ ದಯಪಾಲಿಸುತ್ತಿರಲಿಲ್ಲ. ಅಕಸ್ಮಾತ್ ಲೇಖನ ಪತ್ರಿಕೆಯಲ್ಲಿ ಪ್ರಕಟಗೊಂಡರೆ ಅದರ ಒಂದು ಪ್ರತಿ ತಪ್ಪದೆ ನಮಗೆ ಬರುತ್ತಿತ್ತು ಆಗ. ನಿಜಕ್ಕೂ ಆಯಾಯ ಪತ್ರಿಕೆಯವರು ಅದರಲ್ಲಿ ಬರೆದ ಲೇಖಕರಿಗೆ ಒಂದು ಪ್ರತಿ ಪತ್ರಿಕೆ ಕಳುಹಿಸಿ ಕೊಡಬೇಕಾದದ್ದು ಆ ಪತ್ರಿಕಾ ಧರ್ಮ. ಇಂಥ ಪತ್ರಿಕಾ ಧರ್ಮ ಇತ್ತೀಚೆಗೆ ಮಾಯವಾಗಿವೆ. ಪ್ರಸಿದ್ಧಿಪಟ್ಟ ಲೇಖಕರಿಗೆ ಕಳಿಸುತ್ತಾರೋ ನಾನರಿಯೆ. ಆದರೆ ನಮ್ಮಂಥವರು ಕಳುಹಿಸಿದ ಅಲ್ಲೊಂದು ಇಲ್ಲೊಂದು ಬರಹ ಪ್ರಕಟವಾಗುವವರಿಗೆ ಈ ಸೌಲಭ್ಯ ಮರೀಚಿಕೆಯೇ ಸರಿ.

     ಹಿಂದೆಲ್ಲ ಒಂದು ಪತ್ರಿಕೆಗೆ ಲೇಖನ ಕಳಿಸಿದರೆ ಅದು ಅಚ್ಚಾಗುತ್ತದೋ ಇಲ್ಲವೋ ಎಂದು ತಿಳಿಯಲು ವರ್ಷಾನುಗಟ್ಟಲೆ ಚಾತಕಪಕ್ಷಿಯಂತೆ ಕಾಯಬೇಕಾಗುತ್ತಿತ್ತು. ಈಗಲೂ ಕೆಲವೊಮ್ಮೆ ಇಂಥ ಪರಿಸ್ಥಿತಿ ಬರುವುದೂ ಉಂಟು. ನಿಜಕ್ಕೂ ಈಗ ಗಣಕ ಮತ್ತು ಅದಕ್ಕೆ ಅಂತರ್ಜಾಲ ವ್ಯವಸ್ಥೆ ಬಂದ ಬಳಿಕ ಲೇಖನ ಕಳಿಸುವುದು ಬಹಳ ಸುಲಭ. ಪತ್ರಿಕೆಯವರಿಗೂ ಕೆಲಸ ಕಡಿಮೆ. ಈಗ ಮಿಂಚಂಚೆ ಕಾಲದಲ್ಲೂ ನಮ್ಮ ಲೇಖನ ತಲಪಿದ್ದಕ್ಕೂ ಕೆಲವು ಪತ್ರಿಕೆಗಳವರಿಂದ ಪ್ರತ್ಯುತ್ತರ ಬರುವುದಿಲ್ಲ.  ನಾವು ಪದೇ ಪದೇ ಮಿಂಚಂಚೆ ಕಳಿಸಿ ಕೇಳಿದರೂ ಕೂಡ ಉತ್ತರ ನಾಸ್ತಿ. ಆಗ ನಿಜಕ್ಕೂ ರೋಸಿ ಹೋಗಿ ಪತ್ರಿಕೆಗೆ ಲೇಖನ ಕಳುಹಿಸುವುದೇ ಬೇಡ ಎಂಬ ವೈರಾಗ್ಯಭಾವ ಮಿಂಚಿ ಮರೆಯಾಗುತ್ತದೆ. ಅಂಥ ಒಂದು ಸಂದರ್ಭದಲ್ಲಿ ಯಾವುದೋ ಪತ್ರಿಕೆಯಲ್ಲಿ ಬ್ಲಾಗ್ ಲೋಕದ ಬಗ್ಗೆ ವಿವರ ಬಂದದ್ದು ನೋಡಿ ನಾನೂ ಏಕೆ ಬ್ಲಾಗ್ ತೆರೆಯಬಾರದು ಎಂದು ತೋಚಿತು. ಅನಿಸಿಕೆ ಬಂದದ್ದೇ ಗಣಕದೆದುರು ಕೂತು ಪತ್ರಿಕೆಯಲ್ಲಿ ಬ್ಲಾಗ್ ತೆರೆಯುವ ವಿಧಾನದ ವಿವರ ತಿಳಿಸಿದಂತೆಯೇ ಕಾರ್ಯಪ್ರವೃತ್ತಳಾದೆ.  ವರ್ಡ್‌ಪ್ರೆಸ್.ಕಾಮ್ ನಲ್ಲಿ ಮಾಲಾಲಹರಿ ಎಂಬ ಹೆಸರು ನಮೂದಿಸಿ ಬ್ಲಾಗ್ ತೆರೆದೇಬಿಟ್ಟೆ. ಒಂದು ಪತ್ರಿಕೆ ಸುರುಮಾಡಿದಷ್ಟೇ ಸಂತಸಪಟ್ಟೆ! ಆಹಾ ಇಲ್ಲಿ ಈ ಬ್ಲಾಗಿಗೆ ನಾನೇ ಒಡತಿ, ನಾನೇ ಬರಹಗಾರ, ನಾನೇ ಓದುಗ! ಮುಂದಕ್ಕೆ ಅದಕ್ಕೆ ಲೇಖನ ಹೇಗೆ ತುಂಬಿಸಬೇಕು, ಚಿತ್ರ ಹಾಕುವ ವಿಧಾನ, ಯೂನಿಕೋಡ್‌ಗೆ ಲಿಪಿಯನ್ನು ಬದಲಾಯಿಸುವ ವಿಧಾನ ಇತ್ಯಾದಿ ಯಾವ ವ್ಯವಹಾರವೂ ನನಗೆ ಗೊತ್ತಾಗದೆ ಸುಮ್ಮನಾದೆ. ನರಿಯೊಂದು ದ್ರಾಕ್ಷಿ ತೋಟಕ್ಕೆ ನುಗ್ಗಿ ದ್ರಾಕ್ಷಿ ಎಟುಕಲಾರದಿದ್ದಾಗ ದ್ರಾಕ್ಷಿ ಹುಳಿ ಎಂದು ಸಮಾಧಾನ ಹೊಂದಿದಂತೆ ನಾನೂ ಕೂಡ ನನಗೆ ಗಣಕ ಜ್ಞಾನ ಅಷ್ಟಕ್ಕಷ್ಟೆ ನನಗೆ ಎಟುಕುವ ವಿಚಾರವಲ್ಲ ಇದು ಎಂದು ಕೈಬಿಟ್ಟೆ! ಮತ್ತು ಆ ವಿಚಾರ ಮರೆತು ಸುಮ್ಮನಾದೆ.

      ಹೀಗಿರಲು ಒಮ್ಮೆ ಅಕ್ಷರಿಯ ಅಣ್ಣ ಅಭಯಸಿಂಹ ಇಲ್ಲಿಗೆ ಬಂದಾಗ `ಅಭಯಣ್ಣ ಅಭಯಣ್ಣ   ಅಮ್ಮ ಕೂಡ ಒಂದು ಬ್ಲಾಗ್ ತೆರೆದಿದ್ದಾಳೆ’ ಎಂಬ ವರದಿ ಒಪ್ಪಿಸಿದಳು. ಚಿಕ್ಕಮ್ಮ, ನೀವು ಲೇಖನ ನನಗೆ ಕಳಿಸಿ ನಾನು ಅದನ್ನು ಬ್ಲಾಗಿಗೆ ಹಾಕುತ್ತೇನೆ ಬ್ಲಾಗಿನ ಗುಪ್ತನಾಮ ಕೊಡಿ ಎಂದಾಗ ಅದರ ವಿವರಗಳನ್ನು ಕೊಟ್ಟೆ. ಮುಂದಕ್ಕೆ ಅವನು ಒಂದು ವರ್ಷ ಮಾಲಾಲಹರಿ ಬ್ಲಾಗಿನ ನಿರ್ಮಾಪಕನಾಗಿದ್ದ. ಬಲು ಅಪರೂಪಕ್ಕೆ ನಾನು ಲೇಖನ ಬರೆದಾಗಲೆಲ್ಲ ಅದನ್ನು ಅವನಿಗೆ ಮಿಂಚಂಚೆಯಲ್ಲಿ ಕಳುಹಿಸುತ್ತಿದ್ದೆ. ಅವನೇ ಅದನ್ನು ಅಚ್ಚುಕಟ್ಟಾಗಿ ಬ್ಲಾಗಿಗೇರಿಸುತ್ತಿದ್ದ. ಅವನಿಗೆಧನ್ಯವಾದಗಳು.

     ಹೀಗಿರಲಾಗಿ ಮಗನಿಗೆ ಪದೇಪದೇ ತೊಂದರೆ ಕೊಡಲು ಈ ಚಿಕ್ಕಮ್ಮನ ಮನ ಹಿಂದೇಟು ಹಾಕಿತು. ಇದಕ್ಕೆ ಪರಿಹಾರ ಕಂಡುಹಿಡಿಯಲೇಬೇಕೆಂದು ಪಟ್ಟುಬಿಡದೆ ನಾನೇ ಅಂತರ್ಜಾಲ ತೆರೆದು ಅದರೆದುರು ಗಂಟೆಗಟ್ಟಲೆ ಕುಳಿತು ಗುರುಟಿ ಮತ್ತೂ ಗೊತ್ತಾಗದೇ ಇದ್ದದ್ದನ್ನು ಅಭಯಸಿಂಹನಿಂದ ಪಾಟಮಾಡಿಸಿಕೊಂಡಾಗ ಲೇಖನ ಬ್ಲಾಗಿಗೆ ಏರಿಸುವ ಸಿಸೇಮೆ ಬಾಗಿಲು ತೆರೆ ಮಂತ್ರ ಕರಗತವಾಯಿತು. ಮುಂದೆ ಮಂತ್ರ ಹೇಳುವುದು ಬಾಗಿಲು ತೆರೆದಾಗ ಲೇಖನ ಒಳಗೆ ಕಳುಹಿಸುವುದು ಸರಾಗವಾಯಿತು.    ಮುಖ್ಯವಾಗಿ ಈ ಬ್ಲಾಗ್ ತೆರೆದ ಉದ್ದೇಶ ಇಷ್ಟೆ: ಏನೇ ಬರೆದರೂ ಪತ್ರಿಕೆಯವರ ಮರ್ಜಿ ಕಾಯಬೇಕಿಲ್ಲ, ಲೇಖನ ಕಳಿಸಿದರೆ ಅದರ ತಲೆಬಾಲ ಕತ್ತರಿಸಿ ಅವರಿಗೆ ಬೇಕಾದಂತೆ ತಿರುಚಿ ವಿರೂಪವಾಗುವ ಭಯವಿಲ್ಲ. ನಮ್ಮ ಬರಹ ಹಾಗೆ ವಿರೂಪವಾಗುವುದನ್ನು ನೋಡುವಾಗ ಸಹಿಸಲಾರದ ಸಂಕಟ. ಏನೂ ಮಾತಾಡುವಂತಿಲ್ಲ. ಈಗ ಆ ಯಾವ ಭಯವಿಲ್ಲದೆ ಏನೇ ಬರೆದರೂ ಬ್ಲಾಗಿಗೆ ಏರಿಸಿ ತೃಪ್ತಿ ಹೊಂದಲು ಸಾಧ್ಯವಾಗಿದೆ. ಹೆತ್ತವರಿಗೆ ಹೆಗ್ಗಣ ಮುದ್ದು ತಾನೆ.  ನಾವು ಏನೇ ಬರೆದರೂ ಬ್ಲಾಗಿಗೆ ಏರಿಸಿದರಾಯಿತು. ಯಾರು ಓದುತ್ತಾರೋ ಬಿಡುತ್ತಾರೋ ಒಟ್ಟಿನಲ್ಲಿ ಬರೆದದ್ದು ಎಲ್ಲಾದರೂ ಒಂದುಕಡೆ ಪ್ರಕಟವಾಗಬೇಕು ಎಂಬ ಮಾನವ ಸಹಜ ಆಸೆ ಈಡೇರಿದೆ! ಪತ್ರಿಕೆಗಳಲ್ಲಿ ಪ್ರಕಟವಾದ ಬರಹಗಳನ್ನು ಕೂಡ ಇಲ್ಲಿ ಹಾಕುವ ಸ್ವಾತಂತ್ರ್ಯವಿದೆ. ಹಾಗೆಯೇ ಮನೆ ಸದಸ್ಯರ ಸಂಬಂಧಿಕರ ಲೇಖನಗಳನ್ನು ಕೂಡ ಇಲ್ಲಿ ಹಾಕಬಹುದು.

   ಓದುಗರ ಕೃಪಾಕಟಾಕ್ಷ ಮಾಲಾಲಹರಿ ಬ್ಲಾಗಿಗೆ ಧಾರಾಳವಾಗಿ ದೊರೆತಿದೆ. ಅಷ್ಟು ತೃಪ್ತಿ ಸಾಕು. ಈ ನಾಲ್ಕು ವರ್ಷಗಳಲ್ಲಿ ಸಾಧಾರಣ ೧೨೯ ಬರಹಗಳನ್ನು ಹಾಕಲು ಸಾಧ್ಯವಾಗಿದೆ. ಇಲ್ಲೀವರೆಗೆ ಸುಮಾರು ೨೫ ಸಾವಿರಕ್ಕೂ ಹೆಚ್ಚುಮಂದಿ ಇದರ ಕೊಂಡಿ ಕ್ಲಿಕ್ಕಿಸಿದ್ದಾರೆ. ಅವರೆಲ್ಲರಿಗೂ ಅನಂತಾನಂತ ಕೃತಜ್ಞತೆಗಳು. ಮುಂದಕ್ಕೂ ನಿಮ್ಮ ಬೆಂಬಲ ಸಹಕಾರವಿರಲಿ.

Advertisements

Read Full Post »

ಭಾವ-ಅನುಭಾವಿ

೧೦-೬-೨೦೧೧ರಂದು ಮೈಸೂರಿನಿಂದ ಅಣ್ಣನ ಕುಟುಂಬದವರೊಡನೆ  ರಾತ್ರೆ ರೈಲಿನಲ್ಲಿ ಹೊರಟು ೧೧ನೇ ತಾರೀಕು ಬೆಳಗ್ಗೆ ೭ ಗಂಟೆಗೆ ಪುತ್ತೂರಲ್ಲಿ ಇಳಿದು ಅಲ್ಲಿಂದ ೩೨ಕಿಮೀ ದೂರದಲ್ಲಿರುವ ತವರುಮನೆಗೆ ತಲಪಿದಾಗ ಗಂಟೆ ೮.೩೦. ಆ ದಿನ ಅಲ್ಲಿ ದೇವಕಾರ್ಯ ಪೂಜೆ. ನೆಂಟರಿಷ್ಟರು ಸೇರಿದ್ದರು. ಮಾತು, ಪೂಜೆ, ಊಟ ಬಡಿಸುವಿಕೆ, ಊಟ ಇತ್ಯಾದಿ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಹೊತ್ತು ಸರಿದದ್ದೇ ತಿಳಿಯಲಿಲ್ಲ.
ಆಗಾಗ ಜೋರು ಮಳೆ ಸುರಿಯುತ್ತಲಿತ್ತು. ನೋಡು ಮಳೆ ಎಂದು ಎಲ್ಲರೂ ನನಗೆ ಹೇಳುತ್ತಿದ್ದರು. ಮಳೆ ನೋಡುವುದೆಂದರೆ ನನಗೆ ಬಲು ಇಷ್ಟ ಎಂದು ಅವರಿಗೆಲ್ಲ ಗೊತ್ತು. ನಾನೂ ಮಳೆ ನೋಡುತ್ತಲೇ ಇದ್ದೆ. ಆದರೆ ನನ್ನ ಬಾಲ್ಯದ ಕಾಲದಲ್ಲಿ ಬರುತ್ತಿದ್ದ ಮಳೆಗೂ ಈಗ ಬರುವ ಮಳೆಗೂ ಅಗಾಧ ವ್ಯತ್ಯಾಸವಿತ್ತು. ಆಗ ದೋದೋ ಎಂದು ಗಂಟೆಗಟ್ಟಲೆ ಮಳೆ ಸುರಿಯುತ್ತಲೇ ಇರುತ್ತಲಿತ್ತು. ಈಗಿನ ಮಳೆ ೫ ನಿಮಿಷ ಜೋರಾಗಿ ಸುರಿದು ಆ ಕೂಡಲೇ ಸ್ತಬ್ಧವಾಗಿ ಮೌನ ತಾಂಡವವಾಡುತ್ತದೆ.

    ೧೨-೬-೨೦೧೧ರಂದು ಬೆಳಗ್ಗೆ ತಿಂಡಿ ತಿಂದು ನಾವು ಪುತ್ತೂರಿನ ಮಹಾಲಿಂಗೇಶ್ವರ ಸಭಾಭವನಕ್ಕೆ ಒಂದು ವಧೂಗೃಹಪ್ರವೆಶ ಸಮಾರಂಭಕ್ಕೆ ಬಂದೆವು. ಆಗಾಗ ಮಳೆ ಬರುತ್ತಿತ್ತು. ಮಳೆ ನಿಂತಾಗಲೊಮ್ಮೆ ಮಹಾಲಿಂಗೇಶ್ವರ ದೇವಾಲಯಕ್ಕೆ ಹೋದೆವು. ಸಾಕಷ್ಟು ಜನ ಅಲ್ಲಿದ್ದರು. ದೇವಸ್ಥಾನದ ಗರ್ಭಗುಡಿ ಬಾಗಿಲು ಹಾಕಿತ್ತು. ದೇವರಿಗೆ ಅಲಂಕಾರ ಮಾಡುತ್ತಿದ್ದರಂತೆ. ಹಾಗಾಗಿ ನೋಡಲಾಗಲಿಲ್ಲ.
ಸಭಾಭವನ ಜನರಿಂದ ಕಿಕ್ಕಿರಿದಿತ್ತು. ನೆಂಟರೊಡನೆ ಮಾತಾಗಿ ವಧೂವರರಿಗೆ ಹರಸಿದ ಬಳಿಕ ಉದರ ಪೋಷಣೆ ಕಡೆ ಗಮನಹರಿಸಿದೆವು. ಬಫೆಯಲ್ಲಿ ಊಟ ಸರಿಹೋಗುವುದಿಲ್ಲವೆಂದು ಪಂಕ್ತಿಯಲ್ಲಿ ಕೂತು ಊಟ ಮಾಡಿದೆವು. ಪುತ್ತೂರಲ್ಲೇ ಇದ್ದ ಒಬ್ಬ ಸೋದರಮಾವ ಜಯರಾಮ ಭಟ್ಟರ ಮನೆಗೆ ಹೋಗುವುದೆಂದು ತೀರ್ಮಾನಿಸಿದ್ದೆವು. ರಾತ್ರಿ ರೈಲಿಗೆ ಮೈಸೂರಿಗೆ ಹೋಗಲು ಟಿಕೆಟ್ ಆಗಿತ್ತು.

     ಆಗ ನನ್ನ ಇನ್ನೊಬ್ಬ ಸೋದರಮಾವ ವಿರೂಪಾಕ್ಷರ ಮಗ ಪ್ರಸಾದ ಭಾವ ನನ್ನನ್ನು ಕಂಡು, `ಇಂದಾದರೂ ಬಾ ಮನೆಗೆ. ನನ್ನ ತಲೆಮಾರಿನಲ್ಲಿ ನೀನೊಬ್ಬಳೆ ನಮ್ಮಲ್ಲಿಗೆ ಬರದೆ ಇರುವುದು’ ಎಂದ. ಅವನು ಹೀಗೆ ಕೆಲವು ವರ್ಷಗಳಿಂದ ಸಮಾರಂಭಗಳಲ್ಲಿ ಸಿಕ್ಕಿದಾಗಲೆಲ್ಲ ಮನೆಗೆ ಕರೆಯುತ್ತಿದ್ದ. ನನಗೆ ಹೋಗುವ ಸಂದರ್ಭ ಒದಗಿ ಬರಲೇ ಇಲ್ಲ. ಈ ಬಾರಿ ಹೋಗದೇ ಇರಲು ಯಾವ ತೊಂದರೆಯೂ ಇರಲಿಲ್ಲ. ಅವನ ಪ್ರೀತಿಯ ಕರೆಗೆ ಒಪ್ಪಿ ಅವನಲ್ಲಿಗೆ ಹೋದೆ. ಅವನು ೧೨-೧೪ ವರ್ಷಗಳ ಹಿಂದೆ ಇರಬೇಕು. ಪುತ್ತೂರಿನಿಂದ ಉಪ್ಪಿನಂಗಡಿಗೆ ಹೋಗುವ ದಾರಿಯಲ್ಲಿ ೧೩ ಎಕರೆ ಜಾಗ ಕೊಂಡು ಬಹುತೇಕ ಎಲ್ಲ ಕೃಷಿ ಕೆಲಸಗಳನ್ನು ಅವನೇ ಸ್ವತಃ ಮಾಡಿದ್ದ. ಕೆಲಸದವರನ್ನು ನಂಬಿ ಯಾವ ಕೆಲಸವನ್ನೂ ಬಾಕಿ ಇಟ್ಟಿರುತ್ತಿರಲಿಲ್ಲ ಅವನು. ತೋಟದ  ಕೆಲಸ ಸ್ವತಃ ಮಾಡುವ ಶ್ರಮಜೀವಿ.
ಅಲ್ಲಿ ಅತ್ತೆ ಮಾವರೊಡನೆ ಹರಟತ್ತ, ಭಾವ, ಅಕ್ಕ, ಮಕ್ಕಳೊಡನೆ ಮಾತಾಡುತ್ತ ಕುಳಿತೆ. ಪ್ರಸಾದ ಭಾವ  ತೋಟವನ್ನೆಲ್ಲ ತೋರಿಸುತ್ತೇನೆಂದಾಗ ಅವನೊಡನೆ ಹೊರಟೆ. ಅವನು ತೋಟದೊಳಗೆ ಸುತ್ತುತ್ತ, ಬಿದ್ದ ಅಡಿಕೆ ಹೆಕ್ಕುತ್ತ, ಸೋಗೆಗಳನ್ನು ಮರದ ಬುಡದಿಂದ ಅಡಿ ಅಂತರದಲ್ಲಿ ಹಾಕುತ್ತ ಮುಂದೆ ಹೋಗುತ್ತಿದ್ದ. `ಅಡಿಕೆ ಮರದ ಬುಡಕ್ಕೆ ಕಸ ಹಾಕುವ ಬದಲು ಅಂತರ ಬಿಟ್ಟು ಹಾಕಿದರೆ ಹೆಚ್ಚು ಪ್ರಯೋಜನಕಾರಿ ಎಂದು ಅರಿತಿದ್ದೇನೆ. ಅದನ್ನು ಹೇಳಿದರೆ ಯಾರೂ ಕೇಳುವುದಿಲ್ಲ’ ಎಂದ. ಅವನ ಪ್ರಯೋಗ ನನಗೂ ಸರಿ ಎನಿಸಿತು.  ಆ ಕಸದಲ್ಲಿ ಅವನು ಸುವರ್ಣಗಡ್ಡೆ ಬೆಳೆಯುತ್ತಾನಂತೆ. ಹಂದಿ ತೊಂದರೆ ಬಹಳ ಇತ್ತು. ಹಂದಿಗಳನ್ನು ಹೊಂಡ ತೋಡಿ ಕೊಲ್ಲುವುದು ಎಂದು ಒಮ್ಮೆ ತೀರ್ಮಾನಿಸಿದ್ದೆ. ಆದರೆ ಹೀಗೆ ಕೊಲ್ಲುವುದು ಅಪರಾಧ ಎಂದು ಮನಸ್ಸಿಗೆ ಬಂದಾಗ ಆ ಕೆಲಸ ಕೈಬಿಟ್ಟನಂತೆ. ಪವಾಡದಂತೆ ಅಲ್ಲಿಂದ ಮುಂದೆ ಅವನ ತೋಟಕ್ಕೆ ಹಂದಿಗಳ ಕಾಟವೇ ಇಲ್ಲದಾಯಿತಂತೆ. ಹಂದಿಗಳ ಕೊಲೆ ಮಾಡದೆ ಇದ್ದ ಅವನ ಮನೋಭಾವ ನನಗೆ ಬಲು ಮೆಚ್ಚುಗೆಯಾಯಿತು.

ಮೋಸದಿಂದ ಹಣ ಗಳಿಸಿದರೆ ನೆಮ್ಮದಿ ಇಲ್ಲ. ಆ ದುಡ್ಡು ಉಳಿಯುವುದೂ ಇಲ್ಲ. ಕಾರಿಗೆ ಗ್ಯಾಸ್ ಹಾಕಿದರೆ ಅಂತಹ ಉಳಿತಾಯ ಆಗುವುದಿಲ್ಲ. ಅಡುಗೆಗೆ ಇರುವ ಗ್ಯಾಸ್ ಹಾಕಿದರೆ ಮಾತ್ರ ಲಾಭ ಅಷ್ಟೆ. ಹಾಗೆ ಮಾಡಲು ನನ್ನ ಮನಸ್ಸು ಒಪ್ಪುವುದಿಲ್ಲ. ಮತ್ತೆ ಮಾಡುವ ಅಗತ್ಯವೂ ಇಲ್ಲ ಎಂದ. ಅವನ ಅಭಿಪ್ರಾಯ ನನಗೆ ಸಂಪೂರ್ಣ ಒಪ್ಪಿಗೆಯಾಯಿತು. ನನ್ನದೂ ಅದೇ ಮತ. ಅವನಿಗೆ ಬರುವ ಆದಾಯದಲ್ಲಿ ಅವನು ವರ್ಷಕ್ಕೆ ಒಂದಿಷ್ಟು ಅಂತ ಶಾಲೆ, ದೇವಸ್ಥಾನಗಳಿಗೆ ದಾನ ಮಾಡುತ್ತಾನಂತೆ. ಅಗತ್ಯಕ್ಕಿಂತ ಹೆಚ್ಚು ದುಡ್ಡು ಸಂಪಾದಿಸುವುದಿಲ್ಲವಂತೆ.  ಮಾತಾಡುತ್ತ ಅವನ ಜೀವನ ತತ್ತ್ವಗಳನ್ನೆಲ್ಲ ಹೇಳುತ್ತ ಸಾಗಿದ. ಕೇಳುತ್ತ ತಲೆದೂಗಿದೆ.

     ಅವನಿಗೆ ನಾಲ್ಕು ಮಕ್ಕಳು. ದೊಡ್ಡ ಮಗ ಅವನ ೧೮ನೇ ವರ್ಷದಲ್ಲಿ ಕೆರೆಯಲ್ಲಿ ಈಜಲು ಹೋಗಿ ಪ್ರಾಣ ಕಳೆದುಕೊಂಡ. ಮಗನ ಸಾವನ್ನು ಸ್ಥಿತಪ್ರಜ್ಞೆಯಿಂದ ಸ್ವೀಕರಿಸಿದ್ದಾನೆ. ಅವನ ಮನೋನಿಗ್ರಹ ಅಷ್ಟು ದೃಢವಾಗಿದೆ. ಹಿರಿ ಮಗಳು ಆಯುರ್ವೇದ ಕಲಿಯುತ್ತಿದ್ದಾಳೆ. ಇನ್ನೊಬ್ಬ ಪುತ್ರಿ ಯೋಗ, ಪ್ರಕೃತಿ ಚಿಕಿತ್ಸೆ ಕಲಿಯುತ್ತಿದ್ದಾಳೆ. ಮಗ ಪ್ರೈಮರಿ ಶಾಲೆಯಲ್ಲಿ ಓದುತ್ತಿರುವನು.

ಸಂಜೆ ೫.೩೦ ಗಂಟೆಗೆ ಅವನ ಮನೆಯಿಂದ ೧೦ಕಿಮೀ ದೂರವಿರುವ ಜಯರಾಮಭಟ್ಟರ ಮನೆಗೆ ನನ್ನನ್ನು ಬಿಟ್ಟ. ಮಾತಾಡುತ್ತ ಕೂತವನು ರಾತ್ರೆ ೭.೩೦ಕ್ಕೆ ಹೊರಡಲನುವಾದಾಗ ನಮ್ಮನ್ನು ರೈಲಿಗೆ ಬಿಟ್ಟೇ ಹೋಗುತ್ತೇನೆಂದ. ಹಾಗಾದರೆ ಅತ್ತೆಗೆ ಫೋನ್ ಮಾಡು. ಇಲ್ಲಾಂದರೆ ಅವರಿಗೆ ಗಾಬರಿ ಆದೀತು ಎಂದೆ. ಎಲ್ಲಿ ಹೋದರೂ ನಾನು ಫೋನ್ ಮಾಡುವ ಕ್ರಮವೇ ಇಲ್ಲ ಎಂದ. ಹಾಗಾದರೆ ಈಗಲೇ ಮನೆಗೆ ಹೋಗು. ಅಷ್ಟು ಹೊತ್ತು ನಿಲ್ಲುವುದು ಬೇಡ ಎಂದೆ. `ಮೊನ್ನೆ ಹಾಗೇ ಆಯಿತು. ನಿದ್ರೆ ಬಂದು ಕಾರು ಮಾರ್ಗದ ಬದಿಗೇ ಹೋಗಿದೆ. ಮನೆ ತಲಪುವಾಗ ಹೊತ್ತಾಗಿತ್ತು’ ಎಂದು ಹೇಳಿ ಮನೆಗೆ ಫೊನ್ ಮಾಡಿ ತಿಳಿಸಿದ. ನಮ್ಮನ್ನು ೮.೧೫ಕ್ಕೆ ಜೋರು ಮಳೆಯಲ್ಲೇ ಪುತ್ತೂರು ರೈಲು ನಿಲ್ದಾಣದಲ್ಲಿಳಿಸಿ ಅವನು ಮುಂದೆ ತೆರಳಿದ. ಅವನ ಈ ಪ್ರೀತಿಗೆ ನಮೋನಮಃ

Read Full Post »

ಬಾಲ್ಯದಲ್ಲಿ ಯಾವ ಆಟ ಆಡಿದರೂ ಯಾವ ಕೆಲಸ ಮಾಡಿದರೂ ಆಗ ಅದರ ಬಗ್ಗೆ ಆಗ ಏನೂ ಅನಿಸುವುದಿಲ್ಲ. ನಾವು ಬೆಳೆದು ಅನಂತರ ನಮ್ಮ ಬಾಲ್ಯದ ನೆನಪನ್ನು ಮಾಡಿಕೊಳ್ಳುತ್ತ ಅದರ ಸವಿಯನ್ನು ಮೆಲುಕು ಹಾಕುತ್ತ ಕೂರುವುದೆಂದರೆ ಬಲು ಇಷ್ಟ. ಮತ್ತೊಮ್ಮೆ ಆ ಬಾಲ್ಯ ಬರಬಾರದೇ ಎಂಬ ತುಡಿತ ನಮ್ಮನ್ನು ಆವರಿಸುತ್ತದೆ.  ಪ್ರತಿಯೊಬ್ಬರಿಗೂ ಅವರ ಬಾಲ್ಯವನ್ನು ನೆನೆಯುವುದು ಸಂತಸದ ವಿಚಾರವೇ ಇರಬಹುದು.
೫ ವರ್ಷ ಆದಾಗ ನನ್ನನ್ನು ಶಾಲೆಗೆ ಒಂದನೆ ತರಗತಿಗೆ ಸೇರಿಸಿದರು. ಈಗಿನಂತೆ ಆಗ (೧೯೭೪)ಪ್ರಿ ಕೆಜಿ ಎಲ್ ಕೆಜಿ ಆ ಕೆಜಿ ಈ ಕೆಜಿ ಎಂಬ ರಗಳೆ ಇರಲಿಲ್ಲ. ನನಗೋ ಶಾಲೆಗೆ ಹೋಗಲು ಮನಸ್ಸೆಂಬುದೇ ಇರಲಿಲ್ಲ. ಸುರುವಿನ ದಿನ ಅತ್ತದ್ದೇ ಅತ್ತದ್ದು. ಶಾಲೆಗೆ ಹೋಗಲ್ಲ ಎಂದು ಮುಷ್ಕರ ಹೂಡಿದರೂ ಏನೂ ಪ್ರಯೋಜನ ಆಗಲಿಲ್ಲ. ದಬ್ಬಿಯೇಬಿಟ್ಟರು. ಮಹಮ್ಮದ್ (ಬ್ಯಾರಿ ಮಾಸ್ತರರೆಂದೇ ಪ್ರಸಿದ್ಧಿ) ಮಾಸ್ತರರು ಬೆತ್ತ ಹಿಡಿದು ಹೆದರಿಸಿ ಒಳಗೆ ಕೂರಿಸಿದರು. ನಮಗೆ ಆಗ ಒಂದು ಬಳಪದ ಕಡ್ಡಿ ಹಾಗೂ ಒಂದು ಸ್ಲೇಟ್ ಮಾತ್ರ. ಅದರಲ್ಲಿ ಮಾಸ್ತರರು ಒಂದು ಬದಿ `ಅ’ ಬರೆದು ಇನ್ನೊಂದು ಬದಿಯಲ್ಲಿ `ಆ’ ಎಂದು ಬರೆದು ತಿದ್ದಲು ಕೊಡುತ್ತಿದ್ದರು. ಅದರಮೇಲೆ ನಾವು ಬರೆದು ಬರೆದು ಅದು ಅಷ್ಟು ದಪ್ಪವಾದಮೇಲೆಯೇ ಅವರು ನೋಡುತ್ತಿದ್ದುದು. ಮಧ್ಯಾಹ್ನ ಊಟವಾದಮೇಲೆ ನಮ್ಮ ಮಾಸ್ತರರು ಅಂಗಿ ಬಿಚ್ಚಿ ಕುರ್ಚಿಬೆನ್ನಿಗೆ ಹಾಕಿ ಕುರ್ಚಿಯಲ್ಲಿ ಕುಳಿತು ಕಾಲನ್ನು ಮೇಜಿನಮೇಲೆ ಇಟ್ಟು ನಿದ್ರೆ ಮಾಡುತ್ತಿದ್ದರು. ಆಗೊಮ್ಮೆ ಈಗೊಮ್ಮೆ ಮಕ್ಕಳ ಗದ್ದಲಕ್ಕೆ ಎಚ್ಚರಗೊಂಡು `ಮಕ್ಕಳಾ ಯಾರದು ಗಲಾಟೆ ಮಾಡುವುದು?’ ಎಂದು ಕೇಳಿ ಪುನಃ ನಿದ್ದೆಗೆ ಜಾರುತ್ತಿದ್ದರು. ಅವರ ಮೇಜಿನಮೇಲೆ ನಾಗರಬೆತ್ತ ಸದಾ ಇರುತ್ತಿತ್ತು. ಒಮ್ಮೆ ಅವರು ನಿದ್ದೆ ಮಾಡುತ್ತಿದ್ದ ಸಂದರ್ಭ ನೋಡಿ ಅವರ ನಾಗರಬೆತ್ತ ಮುರಿದು ಹೊರಗೆ ಬಿಸಾಡಿದ ನೆನಪು ಹಸಿಯಾಗೇ ಇದೆ. ಅವರು ಎಚ್ಚರಗೊಂಡು ನೋಡಿದಾಗ ಬೆತ್ತ ಕಾಣಲಿಲ್ಲ. `ಬೆತ್ತ ತೆಗೆದದ್ದು ಯಾರು?’ ಎಂಬ ಅವರ ಗದರಿಕೆಗೆ ನಾವು ಯಾರೂ ಉತ್ತರ ಕೊಡಲಿಲ್ಲ. `ನಾಗರ ಬೆತ್ತ ತಾ’ ಎಂದು ನನ್ನನ್ನು ಕಳುಹಿಸಿದರು. ಹೊರಹೋಗಿ ಪೊದೆಯಿಂದ ಒಂದು ಬೆತ್ತ ಮುರಿದು ತಂದು ಮೇಜಿನಮೇಲಿಟ್ಟದ್ದು ಎಲ್ಲ ಈಗ ನೆನಪಿಗೆ ಬರುವಾಗ ನಗು ಬರುತ್ತದೆ.

ನಮ್ಮದು ದಕ್ಷಿಣಕನ್ನಡ ಜಿಲ್ಲೆಯ ಕರೋಪಾಡಿ ಗ್ರಾಮದ ಒಡಿಯೂರು ಎಂಬ ಒಂದು ಪುಟ್ಟ ಹಳ್ಳಿಯಲ್ಲಿ ಮನೆ. ಮನೆ ಸುತ್ತ ಅಡಿಕೆ ತೆಂಗು ಬಾಳೆ ತೋಟ. ಹಿಂದೆ ಗುಡ್ಡ ಬೆಟ್ಟ. ಕೂಗು ಹಾಕಿದರೆ ಕೇಳುವಷ್ಟು ದೂರದಲ್ಲಿ ಯಾರ ಮನೆಯೂ ಇಲ್ಲ. ಒಂಟಿ ಮನೆ. ವಿಶಾಲವಾದ ಅಂಗಳ. ಅಪ್ಪ ಅಮ್ಮನಿಗೆ ನಾವು ೫ ಮಕ್ಕಳು. ಅಪ್ಪ ದೊಡ್ಡಪ್ಪ ಒಟ್ಟುಕುಟುಂಬದಲ್ಲಿ ವಾಸ. ದೊಡ್ಡಪ್ಪನಿಗೆ ೩ ಮಕ್ಕಳು. ನಾವು ೮ ಮಕ್ಕಳೂ ಒಟ್ಟಿಗೇ ಬೆಳೆದೆವು. ನಮ್ಮಲ್ಲಿ ಭೇದವೆಂಬುದು ಇರಲಿಲ್ಲ. ಅಷ್ಟು ಅನ್ಯೋನ್ಯವಾಗಿಯೇ ಬೆಳೆದವರು ನಾವು. ಈಗಲೂ ಅಷ್ಟೇ ಅನ್ಯೋನ್ಯದಿಂದ ಇದ್ದೇವೆ.

ಐದನೇ ತರಗತಿಯಲ್ಲಿದ್ದಾಗ ನಮ್ಮಜ್ಜಿ– ತಂದೆಯ ತಾಯಿ ಇಹಲೋಕ ತ್ಯಜಿಸಿದರು.  ಆ ದಿನ ಶುಕ್ರವಾರ. ಶಾಲೆಯಲ್ಲಿ ಸಾಹಿತ್ಯಸಭೆ ನಡೆಯುತ್ತ ಇತ್ತು. (ಶಾಲೆಯಲ್ಲಿ ಪ್ರತೀ ಶುಕ್ರವಾರ ಸಾಹಿತ್ಯ ಸಭೆ ಇರುತ್ತಿತ್ತು. ಅದರಲ್ಲಿ ಯಾವುದಾದರೊಂದು ವಿಷಯದ ಬಗ್ಗೆ ಪರ ವಿರೋಧ ಮಾತಾಡಬೇಕಿತ್ತು. `ಧನ ಮೇಲೋ ವಿದ್ಯೆ ಮೇಲೋ?’ `ಶಕ್ತಿ ಮೇಲೋ ಯುಕ್ತಿ ಮೇಲೋ?’ ಇತ್ಯಾದಿ ವಿಷಯ ಕೊಡುತ್ತಿದ್ದರು. ಇಲ್ಲವೆ ನೀತಿಕಥೆಗಳನ್ನು ಹೇಳಬೇಕಿತ್ತು. ಅಕ್ಕಂದಿರಿಗೆ ಕಾಡಿಬೇಡಿ ಅವರಿಂದ ಬರೆಸಿಕೊಂಡು ಸಭೆಯಲ್ಲಿ ಹೇಳುತ್ತಿದ್ದೆ.) ಒಬ್ಬ ಆಳು ಮನೆಯಿಂದ ನಮಗೆ ವಿಷಯ ತಿಳಿಸಿ ಕರೆದುಕೊಂಡು ಹೋಗಲು ಬಂದ. ಇರುವ ಏಕೈಕ ಹೋಟೆಲಿಗೆ ನಮ್ಮನ್ನು ಕರೆದುಕೊಂಡು ಹೋದ. ಅಜ್ಜಿಯ ದಹನ ಕಾರ್ಯ ಆಗುವಲ್ಲಿವರೆಗೆ ಮನೆಯಲ್ಲಿ ಏನೂ ತಿನ್ನುವಂತಿಲ್ಲವಲ್ಲ. ತಮ್ಮ ತಂಗಿ ನಾನು ಹೊಟೇಲಿಗೆ ಹೋಗಲು ಸಿಕ್ಕಿದ್ದೇ ಖುಷಿಯಿಂದ ಗೋಳಿಬಜೆ ತಿಂದೆವು. ನಮ್ಮ ಅಕ್ಕ ಏನೂ ಮುಟ್ಟಲಿಲ್ಲ. `ಇವಳು ಎಂಥದ್ದು? ಸಿಕ್ಕಿದ್ದು ಚಾನ್ಸ್ ಎಂದು ಏನಾದರೂ ತಿನ್ನುವುದು ಬಿಟ್ಟು ಸುಮ್ಮನೆ ಕುಳಿತಿದ್ದಾಳಲ್ಲ ಎಂದು ನಾವು ಮಾತಾಡಿಕೊಂಡೆವು. ಅವಳಿಗೆ ಅಜ್ಜಿ ತೀರಿದ ದುಃಖವಿತ್ತು. ಆ ದುಃಖ ನಮಗೆ ತಟ್ಟಿರಲಿಲ್ಲ.  ಮನೆಗೆ ಬಂದಾಗ ಅಜ್ಜಿಯನ್ನು ಮಲಗಿಸಿ ಬಟ್ಟೆ ಮುಚ್ಚಿದ್ದರು. ವಯಸ್ಸಾಯಿತು ಅಜ್ಜಿಗೆ ಎಂದು ದೊಡ್ಡಪ್ಪ ಬಂದವರೆದುರಿಗೆ ಹೇಳುತ್ತಿದ್ದರು. ಆಗ ಅಜ್ಜಿಗೆ ೬೨ ವರ್ಷ ಇರಬೇಕು. ಈಗ ಆದರೆ ಸಾಯುವ ಪ್ರಾಯವಲ್ಲ ಅದು. ಆಗ ೬೦ ವರ್ಷದಮೇಲೆ ಸತ್ತರೆ ವಯಸ್ಸಾಯಿತೆಂದೇ ಲೆಕ್ಕ. ನಮ್ಮಜ್ಜಿ ಕೆಂಪು ಮಡಿಬಟ್ಟೆ ಧರಿಸುತ್ತಿದ್ದದ್ದು. ಮಡಿ ಎಂದರೆ ಮಡಿ. ಕಾಫಿಯನ್ನು ಎತ್ತರದಿಂದ ತುಟಿಗೆ ಮುಟ್ಟಿಸದೆ ಕುಡಿಯುತ್ತಿದ್ದರು.
ನಾನು ನೋಡಿದ ಪ್ರಥಮ ಸಾವು ನಮ್ಮಜ್ಜಿಯದು. (ನನಗೆ ಮಾತ್ರ ಕೊನೆಗೂ ಅಳು ಬರಲೇ ಇಲ್ಲ. ಅದೇನೋ ಆ ಸನ್ನಿವೇಶದಲ್ಲಿ ಅಳು ಬರಲಿಲ್ಲ.  ಕರುಣಾಪ್ರೇರಿತ ಕಥೆ ಇತ್ಯಾದಿ ಓದುವಾಗ ಕಣ್ಣಲ್ಲಿ ನೀರು ಬರುತ್ತದೆ. ನನ್ನ ಮದುವೆಯಾದಮೇಲೆ ನನ್ನ ದೊಡ್ಡಪ್ಪ ತೀರಿದಾಗ ಕೂಡ ಹನಿ ಕಣ್ಣೀರು ಬರಲಿಲ್ಲ. ದುಃಖ ಒಳಗೇ ಇರುತ್ತದೆ. ಹೊರ ಬರುವುದೇ ಇಲ್ಲ. ಅದು ನನ್ನ ದೌರ್ಬಲ್ಯ ಅಂತಲೇ ತಿಳಿದಿದ್ದೇನೆ) ಅಜ್ಜಿಯ ಅಂತ್ಯಸಂಸ್ಕಾರವಾಗುವಾಗ ರಾತ್ರಿ ಬಹಳ ಆಗಿತ್ತು. ಒಂದೆಡೆ ನಿದ್ರೆಯ ಸೆಳೆತ, ಮತ್ತೊಂದೆಡೆ ನಿದ್ರೆ ಮಾಡುವಂತಿಲ್ಲ. ಮಳೆ ಅಂದರೆ ಅಸಾಧ್ಯ ಮಳೆ ಆಗ.
ಅಜ್ಜಿಯನ್ನು ಮಲಗಿಸಿದ ಕೋಣೆಯಲ್ಲಿ ಅನಂತರ ಕರ್ಮಾಂತರ ಆಗುವವರೆಗೆ ಒಂದು ದೀಪ ಹೊತ್ತಿಸಿ ಗಾಳಿಗೆ ದೀಪ ಆರದೇ ಇರಲಿ ಎಂದು ಚಾಪೆ ಸುತ್ತ ಕಟ್ಟಿದ್ದರು. ರಾತ್ರಿ ಆದೊಡನೆ ನನಗೆ ಆ ಕೋಣೆಗೆ ಹೋಗಲು ಹೆದರಿಕೆ. ಆ ಕೋಣೆ ದಾಟಿಯೇ ಉಪ್ಪರಿಗೆಗೆ ಹೋಗಬೇಕು. ಭಯ ಎಂದು ಹೇಳಿಕೊಳ್ಳಲು ಇಗೋ ಬಿಡಲಿಲ್ಲ. ಆಗ ನಾನು ಒಂದು ಉಪಾಯ ಹೂಡಿದೆ.  ನನ್ನ ತಂಗಿಯನ್ನು ಕರೆದು ನಿನಗೆ ಈಗ ಉಪ್ಪರಿಗೆಗೆ ಹೋಗಬೇಕಾ? ಈಗ ಆದರೆ ನಾನು ಬರುತ್ತೇನೆ ಎಂದು ಹೇಳುತ್ತಿದ್ದೆ. ಹೆದರಿಕೆ ಆಗುತ್ತಿದ್ದದ್ದು ನನಗೆ. ಆದರೆ ಧೈರ್ಯ ನನಗೆ ಎಂದು ತೋರಿಸಿಕೊಂಡು ಅವಳನ್ನು ಉಪ್ಪರಿಗೆಗೆ ಕರೆದುಕೊಂಡು ಹೋಗುತ್ತಿದ್ದೆ. ಈ ವಿಚಾರ ಅವಳಿಗೆ ಗೊತ್ತಿಲ್ಲ. (ನೀವೂ ಅವಳಿಗೆ ಹೇಳಬೇಡಿ!). ನನಗೆ ಸ್ವಭಾವತಃ ಹೆದರಿಕೆ ಕೊಂಚ ಕಡಿಮೆ ಎಂದೇ ಹೇಳಬಹುದು.  ಬಾಲ್ಯದಲ್ಲಿ ೩ ಸಂದರ್ಭದಲ್ಲಿ ಹೆದರಿಕೆ ಆದದ್ದು ನೆನಪಿದೆ. ಒಂದು ಈ ಮೇಲಿನ ಸಂದರ್ಭ. ಮತ್ತೊಮ್ಮೆ ನಾವು ಶಾಲೆಯಿಂದ ಮನೆಗೆ ಬರುತ್ತಿರುವಾಗ ಒಬ್ಬ ಕೆಂಪು ಅಂಗಿ ಧರಿಸಿದವ ಒಂದು ಕೈ ತುಂಡಾಗಿದ್ದವ ಹಿಂಬಾಲಿಸಿ ಬರುತ್ತಿದ್ದ. ಶಾಲೆಯಿಂದ ನಮ್ಮ ಮನೆಗೆ ಒಂದು ಮೈಲಿ ಇತ್ತು. ನಡೆದುಕೊಂಡೇ ಬರಬೇಕಿತ್ತು. ಅರ್ಧ ದಾರಿಯಲ್ಲಿ ಅವನನ್ನು ಕಂಡು ನಾವು ಸುಮಾರು ೫ ಮಂದಿ ಓಡಲು ತೊಡಗಿ ನಿಂತದ್ದು ನಮ್ಮ ಮನೆಯ ತಿರುವಿನಲ್ಲೆ. ಆಗ ಅಷ್ಟು ಹೆದರಿಕೆ ಆಗಿತ್ತು. ಅನಂತರ ಕೂಡ ಕನಸಿನಲ್ಲಿ ಕೆಂಪು ಅಂಗಿಯವ ಬರುತ್ತ ಹೆದರಿಸುತ್ತಿದ್ದ. ಮಗದೊಮ್ಮೆ ದ.ಕ.ಜಿಲ್ಲೆಯಲ್ಲಿ ಚಂದ್ರನ್ ಎಂಬ ಕುಖ್ಯಾತ ಕಳ್ಳ ಅಡಗಿದ್ದಾನೆ ಎಂದು ಭಯಂಕರ ಸುದ್ದಿ ಹರಡಿತ್ತು. ದಟ್ಟಮರಗಳು ಇರುವಲ್ಲಿ ಅವನು ಅಡಗಿರುತ್ತಾನೆ. ಅವನು ತುಂಬ ಕ್ರೂರಿ, ಹಾಗೆ ಹೀಗೆ ಎಂಬ ವದಂತಿ ಹಬ್ಬಿತ್ತು. ಆಗ ಬೆಳಗ್ಗೆ ಎಲ್ಲ ಅವನ ಸುದ್ದಿ ಮಾತಾಡಿ ಅವನು ನಮ್ಮ ಗುಡ್ಡದಲ್ಲಿ ಅಡಗಿ ಕುಳಿತಿರಬಹುದೆ? ಎಂದು ಸಂಶಯ ಬಂದು ಇನ್ನು ಗುಡ್ಡೆಗೆ ಹೋಗುವುದೇ ಬೇಡ ಎಂಬ ತೀರ್ಮಾನಕ್ಕೆ ಬರುತ್ತಿದ್ದೆವು. ನಮ್ಮ ಮನೆಯಲ್ಲಿ ಪಾಯಿಖಾನೆ ಮತ್ತು ಬಚ್ಚಲು ಮನೆ ಮನೆಯಿಂದ ಹೊರಗೆ ಸ್ವಲ್ಪ ದೂರದಲ್ಲಿ ಇತ್ತು. ರಾತ್ರಿ ಮೂತ್ರ ಬಂದರೆ ನಾವು ಧೈರ್ಯದಿಂದ ಬಾಗಿಲು ತೆರೆದು ಒಬ್ಬರೇ ಹೋಗುತ್ತಿದ್ದೆವು. ಚಂದ್ರನ್ ಸಮಯದಲ್ಲಿ ನಾವು ಯೊಚಿಸುತ್ತಿದ್ದೆವು. ರಾತ್ರಿ muತ್ರ ಬಂದರೆ ಏನು ಮಾಡುವುದು? ಬಾಗಿಲು ತೆರೆದರೆ ಅವನು ಒಳಗೆ ನುಗ್ಗಿದರೆ? ಹಿರಿಯರನ್ನು ಏಳಿಸಿ ಬಾಗಿಲು ತೆರೆದು ಹೋಗುವುದು ಎಂದು ಹಗಲು ಮಾತಾಡಿಕೊಳ್ಳುತ್ತಿದ್ದೆವು. ಆದರೆ ರಾತ್ರಿ  ಎದ್ದಾಗ ನಿದ್ರೆ ಕಣ್ಣಲ್ಲಿ ಆ ಚಂದ್ರನ್ ನೆನಪೂ ಇಲ್ಲದೆ ನಾವೇ ಬಾಗಿಲು ತೆರೆದು ಹೊರಹೋಗಿ ಬರುತ್ತಿದ್ದೆವು. ಮತ್ತೆ ಗಾಢ ನಿದ್ದೆಯಲ್ಲಿ ಮುಳುಗುತ್ತಿದ್ದೆವು. ಬೆಳಗ್ಗೆ ಎದ್ದು ಓ ನಾವು ಬಾಗಿಲು ತೆರೆದು ಹೋಗಿದ್ದೇವೆ ಸದ್ಯ ಇವತ್ತು ಚಂದ್ರನ್ ಬರಲಿಲ್ಲವಲ್ಲ ಬಚಾವ್ ಎಂದು ನಿಟ್ಟುಸಿರು ಬಿಡುತ್ತಿದ್ದೆವು.

               ನಮ್ಮ ಮನೆಯ ಬಳಿ ಅಶ್ವತ್ಥಕಟ್ಟೆ ಇದೆ. ಅದಕ್ಕೆ ಪ್ರತೀ ಶನಿವಾರ ಪೂಜೆ ಮಾಡುವ ಪದ್ಧತಿ ಇತ್ತು. ಈಗಲೂ ಇದೆ. ಅಶ್ವತ್ಥಕಟ್ಟೆ ಎದುರು ಒಂದು ಕಲ್ಲು. ಅದರ ಅಡಿಯಲ್ಲಿ ಚಿಲ್ಲರೆ ನಾಣ್ಯಗಳು. ಹಾಕಿದ್ದೆಲ್ಲ ನಾವು ಮನೆಯ ಮಕ್ಕಳೆ. ಕಟ್ಟೆಗೆ ಯಾವಾಗಲೂ ಸುತ್ತು ಹಾಕಿಯೆ ಶಾಲೆಗೆ ಹೋಗುತ್ತಿದ್ದುದು. ಶಾಲಾ ಪರೀಕ್ಷೆ ಸಂದರ್ಭದಲ್ಲಿ ಮಾತ್ರ ೨ ಸುತ್ತು ಜಾಸ್ತಿ ಹೊಡೆದು ಪರೀಕ್ಷೆ ಕಷ್ಟ ಆಗದಿದ್ದ ಹಾಗೆ ನೋಡಿಕೊ ಎಂದು ಒಂದು ಪೈಸೆ ಎರಡು ಪೈಸೆಯನ್ನು ಕಲ್ಲಡಿಗೆ ಭಕ್ತಿಯಿಂದ ಹಾಕಿ ತೆರಳುತ್ತಿದ್ದುದು. ಪಾಸು ನಪಾಸು ಹೇಳುವ ದಿನ ಅಶ್ವತ್ಥಕಟ್ಟೆಗೆ ೪ ಸುತ್ತುಹೊಡೆದು ಪಾಸು ಮಾಡಪ್ಪ ಎಂದು ಕೈಮುಗಿದು ೫ ಪೈಸೆ ಹಾಕಿ ಹೋಗುತ್ತಿದ್ದುದು. ಅಶ್ವತ್ಥ ನಮಗೆ ಮೋಸ ಮಾಡದೆ ನಮ್ಮನ್ನು ಪಾಸು ಮಾಡುತ್ತಿತ್ತು. ಕಟ್ಟೆಗೆ ದುಡ್ಡು ಹಾಕುವುದರಲ್ಲಿ ಅಣ್ಣಂದಿರು ಅಕ್ಕಂದಿರು ಯಾರೂ ಹಿಂದೆ ಸರಿದವರೇ ಅಲ್ಲ. ಎಲ್ಲರೂ ದುಡ್ಡು ಹಾಕಿ ಕೈ ಮುಗಿಯುವವರೇ! ಒಂದೊಂದು ದಿನ ಕಲ್ಲೆತ್ತಿ ಎಷ್ಟು ದುಡ್ಡು ಆಯಿತು ಎಂದು ಎಣಿಸಿ, ಹಣದಲ್ಲಿ ಮೆತ್ತಿದ್ದ ಮಣ್ಣನ್ನೆಲ್ಲ ಒರೆಸಿ ದುಡ್ಡನ್ನು ಅಲ್ಲೇ ಹಾಕಿ ಕಲ್ಲುಮುಟ್ಟಿ ನಮಸ್ಕಾರ ಹಾಕುತ್ತಿದ್ದೆವು.  ಈಗ ಅವನ್ನೆಲ್ಲ ನೆನೆದರೆ ಬಾಲ್ಯದಲ್ಲಿ ಎಷ್ಟು ಮುಗ್ಧತೆ, ಎಷ್ಟು ನಂಬಿಕೆ, ಶ್ರದ್ಧೆ. ದೊಡ್ಡವರಾಗುತ್ತ ಎಲ್ಲ ಕಳೆದುಕೊಳ್ಳುತ್ತೇವೆ. ಅಲ್ಲ, ವ್ಯಕ್ತಿತ್ವ ಬೆಳೆಸಿಕೊಳ್ಳುತ್ತೇವೆ ಎನ್ನಬಹುದೆ?
ಗೇರುಹಣ್ಣಿನ ಸಮಯದಲ್ಲಿ ಅದನ್ನು ಕೊಯ್ಯುವ ಸಂಭ್ರಮ. ಒಳ್ಳೆಯ ಹಣ್ಣನ್ನು ತಿಂದು, ಅದರ ರಸ ಬಟ್ಟೆಗೆ ಬಿದ್ದು ಅದು ಕಲೆಯಾಗಿ ತಾಯಿಯಿಂದ ಬೈಗಳು ತಿನ್ನುವ ಪರಿಪಾಟ, ಅಂಗಿ ಇಷ್ಟ ಇಲ್ಲದೆ ಇದ್ದರೆ ಬೇಕೆಂದೇ ಗೇರುಹಣ್ಣಿನ ರಸ ಉಜ್ಜಿ ಅದನ್ನು ಹಾಕದಂತೆ ಉಪಾಯ ಮಾಡುತ್ತಿದ್ದದ್ದು, ಚಪ್ಪಲಿ ಇಷ್ಟ ಆಗದೆ ಇದ್ದರೆ  ಡಾಮರು ರಸ್ತೆಯಲ್ಲಿ ಬೇಕೆಂದೇ ಅದನ್ನು ಉಜ್ಜುತ್ತ ನಡೆದು ಬಲು ಬೇಗ ಸವೆಯುವಂತೆ ಮಾಡುತ್ತಿದ್ದುದು ಎಲ್ಲ ಈಗ ಸವಿನೆನಪು.
ಶಾಲೆಯಲ್ಲಿ ತರಗತಿ ದಾಟುತ್ತ ಎಸ್ ಎಸ್.ಎಲ್.ಸಿ.ಗೆ ಬಂದೆ. ಅಲ್ಲಿ ಆಂಗ್ಲ ವಿಷಯದಲ್ಲಿ ಡುಮ್ಕಿ ಹೊಡೆದೆ. ನಾನು ನಂಬಿದ ಅಶ್ವತ್ಥ ವೃಕ್ಷ ನನ್ನ ಕೈಬಿಟ್ಟಿತ್ತು. ಒಂದು ಸುತ್ತು ನಮಸ್ಕಾರ ಕಮ್ಮಿ ಆಗಿತ್ತೇನೋ ಆಗ ನಾನು ಹಾಕಿದ್ದು. ಅದರಿಂದ ನಷ್ಟವೇನೂ ಆಗಲಿಲ್ಲ ನನಗೆ. ಲಾಭವೇ ಆಯಿತು. ನನಗೆ ಬೇಕಾದಂತೆ ಇರಲು ಸಮಯ ಸಿಕ್ಕಿತು. ಆಗ ಈಗಿನಂತೆ ಕೂಡಲೇ ಪರೀಕ್ಷೆಗೆ ಕೂರುವಂತ ಸೌಲಭ್ಯ ಇರಲಿಲ್ಲ. ಅಕ್ಟೋಬರದಲ್ಲಿ ಪರೀಕ್ಷೆಗೆ ಕೂತು ಪಾಸಾದೆ. ಅನಂತರ ಪಿ.ಯು.ಸಿ.ಗೆ ಸೇರಲು ೭ ತಿಂಗಳು ಕಾಲಾವಕಾಶ ಇತ್ತು. ಆ ಸಮಯದಲ್ಲಿ ನಾನು ಸೈಕಲ್ ಕಲಿತೆ. ಆ ಕಾಲದಲ್ಲಿ ಸೈಕಲ್ ಹಳ್ಳಿಯಲ್ಲಿ ಇರುತ್ತಿದ್ದುದೇ ಕಡಿಮೆ. ಅಣ್ಣನಿಗೆ ಸೈಕಲ್ ಲಕ್ಕಿಡಿಪ್‌ನಲ್ಲಿ ಬಂದಿತ್ತು. ಅದು ಮನೆಯ ಮೂಲೆಯಲ್ಲಿ ನಿಂತಿತ್ತು. ಅದನ್ನು ನೋಡಿದಾಗಲೆಲ್ಲ ಕಲಿಯಬೇಕೆಂಬ ಆಸೆ ನನ್ನಲ್ಲಿ ಪುಟಿದೇಳುತ್ತಿತ್ತು. ಆದರೆ ನನ್ನ ಆಸೆಗೆ ಯಾರೂ ನೀರೆರೆಯಲು ಮುಂದೆ ಬರಲಿಲ್ಲ. ಹಾಗೆಂದು ಆಸೆ ಕಮರಲು ನನ್ನ ಛಲ ಬಿಡಲಿಲ್ಲ. ಅಣ್ಣ ದೂರದ ಹಾಸ್ಟೆಲಿನಲ್ಲಿದ್ದ. ರಜದಲ್ಲಿ ಬಂದಾಗ ಅವನೇನು ನನಗೆ ಸೈಕಲ್ ಹೇಳಿಕೊಡಲಿಲ್ಲ. ಛಲ ಒಂದಿದ್ದರೆ ಸಾಕು ಯಾರೂ ಹೇಳಿಕೊಡದೆಯೇ ಹೇಗಾದರೂ ಕಲಿಯಬಹುದು. ಹುಡುಗಿಯರು ಸೈಕಲ್ ಕಲಿಯುವುದು ಬಿಡಿ ಮುಟ್ಟುವುದೂ ಅಪರಾಧ ಎಂದಿತ್ತು ಆಗ. ಆದರೂ ಹಿಂಜರಿಯಲಿಲ್ಲ. ಎದ್ದು ಬಿದ್ದು ಗಾಯ ಮಾಡಿಕೊಂಡೇ ಸೈಕಲ್ ಬಿಡಲು ಕಲಿತೆ. ಜಗಲಿಯಲ್ಲಿ ಕಿಟಕಿ ಸರಳು ಹಿಡಿದು ಸೈಕಲ್ ಕಲಿತದ್ದು. ಸಾಹಿತ್ಯ ಓದಲು ಕಲಿತೆ. ಆಗಷ್ಟೆ ಅಕ್ಕನ ಮದುವೆ ಆಗಿತ್ತು. ಅವರ ಮನೆಯಲ್ಲಿ ಒಂದು ವಾರ ಕುಳಿತಿದ್ದೆ. ಅಲ್ಲಿ ಕಾದಂಬರಿಗಳ ಸಂಗ್ರಹವೇ ಇತ್ತು. ಅವನ್ನೆಲ್ಲ ಓದಿ ಮುಗಿಸಿದೆ. ಸಾಹಿತ್ಯದ ಬಗ್ಗೆ ಒಲವು ಬೆಳೆಯಲು ಸಹಕಾರಿಯಾಯಿತು. ಇವೆಲ್ಲ ಸಾಧ್ಯ ಆದದ್ದು ನಾನು ಪರೀಕ್ಷೆಯಲ್ಲಿ ನಪಾಸಾದ್ದರಿಂದ. ಹಾಗಾಗಿ ನಪಾಸಾದಾಗ ಆ ಸಂದರ್ಭದಲ್ಲಿ ಘೋರ ಅವಮಾನ ಆದದ್ದು ಬಿಟ್ಟರೆ ಮತ್ತೆ ನನಗೆ ಅದರ ಬಗ್ಗೆ ಒಂದು ಚೂರು ಬೇಜಾರು ಕೂಡ ಆಗಲಿಲ್ಲ.
ಆಟದಲ್ಲಿ ಇದ್ದಷ್ಟು ಆಸಕ್ತಿ ಪಾಟದಲ್ಲಿ ಇರಲಿಲ್ಲ. ಯಾವ ಆಟವೇ ಆಗಲಿ ಅದರಲ್ಲಿ ನಾನು ಮುಂದೆ. ಓಟ, ಶಾಟ್ಪುಟ್, ಜವಲಿನ್ ಥ್ರೋ, ಥ್ರೋಬಾಲ್, ವಾಲಿಬಾಲ್, ರಿಂಗ್(ಟೆನ್ನಿಕಾಯಿಟ್) ಶಟ್ಲ್ ಬ್ಯಾಟ್ಮಿಂಟನ್, ಕ್ರಿಕೆಟ್ ಆಟವಾದರೂ ಸೈ. ಅಲ್ಲಿ ನಾನು ಸೇರಲೇಬೇಕು. ಸಮಸ್ಯೆ ಎಂದರೆ ಯಾವುದಾದರೂ ೫ ಆಟಕ್ಕಿಂತ ಹೆಚ್ಚು ಸೇರುವಂತಿಲ್ಲ ಎಂಬುದು. ಯಾವುದನ್ನು ಬಿಡಲಿ ಎಂದು ನನಗೆ ಚಿಂತೆ. ಸಾಂಸ್ಕೃತಿಕ ಸ್ಪರ್ಧೆಯ ಹತ್ತಿರ ಕೂಡ ನಾನು ಹೋಗುತ್ತಿರಲಿಲ್ಲ.

      ರಜದಲ್ಲಿ ಅಜ್ಜನಮನೆಗೆ ಹೋಗುತ್ತಿದ್ದದ್ದು. ಅಲ್ಲಿ ಕಳೆದ ಸಮಯ ಬಲು ಸವಿಯಾದುದು.  ಮಾವ ನಮ್ಮನ್ನೆಲ್ಲ ಸಿನೆಮಕ್ಕೆ ಕರೆದುಕೊಂಡುಹೋಗುತ್ತಿದ್ದುದು. ಸಿನೆಮಕ್ಕೆ ಕರೆದುಕೊಂಡು ಹೋಗಲು ನಮ್ಮನ್ನು ಅವರು ಸತಾಯಿಸುವ ಪರಿ ಬಲು ಸ್ವಾರಸ್ಯ. ನಮ್ಮ ಮಾವ ತುಂಬ ದಪ್ಪ ಇದ್ದರು.  ಅವರು ಒಂದು ಕುರ್ಚಿಯಲ್ಲಿ ಕುಳಿತು, `ನೋಡುವ, ನನ್ನನ್ನು ಕುರ್ಚಿಯಿಂದ ಎಬ್ಬಿಸಿ. ಎಬ್ಬಿಸಿದರೆ ನಾನು ಸ್ನಾನಕ್ಕೆ ಹೋಗುವುದು, ಆಮೇಲೆ ಪೂಜೆ ಮಾಡಿ ಊಟ ಮಾಡಿ ಸಿನೆಮಕ್ಕೆ ಕರೆದೊಯ್ಯುವುದು’ ಎನ್ನುತ್ತಿದ್ದರು. ನಾವು ೫-೬ ಮಂದಿ ಮಕ್ಕಳು ಆಚೆ ಈಚೆ ನಿಂತು ಅವರ ಕೈಗಳನ್ನು ಹಿಡಿದು ಎಳೆಯುತ್ತಿದ್ದೆವು. ಅವರು ಅಲ್ಲಾಡುತ್ತಿರಲಿಲ್ಲ. ಎಷ್ಟೆ ಬಲಪ್ರಯೋಗ ಮಾಡಿದರೂ ಅವರು ಒಂದಿಂಚು ಮೇಲೇಳುತ್ತಿರಲಿಲ್ಲ. ಕುರ್ಚಿ ಕೂಡ ಅಲುಗಾಡುತ್ತಿರಲಿಲ್ಲ. ನಾವೆಲ್ಲ ಸುಸ್ತು. ಆಗ ನಮ್ಮ ಸಹಾಯಕ್ಕೆ ಅಜ್ಜಿ ನಿಲ್ಲುತ್ತಿದ್ದರು, `ಏಳು ಸ್ನಾನಕ್ಕೆ ಹೋಗು, ಎಂಥ ಮಕ್ಕಳಾಂಗೆ ಮಾಡುತ್ತೆ’ ಎಂದು ಹುಸಿ ಗದರಿದಾಗ ಮಾವ ನಗುತ್ತ ಎದ್ದು ಸ್ನಾನಕ್ಕೆ ಹೋಗುತ್ತಿದ್ದದ್ದು. ಆಗ ನಮ್ಮಜ್ಜ, `ಯಾರು ಸಿನೆಮಕ್ಕೆ ಹೋಗುವುದಿಲ್ಲವೋ ಅವರಿಗೆ ೧ ರೂಪಾಯಿ ಕೊಡುತ್ತೇನೆ’ಎನ್ನುವ ಆಮಿಷ ಒಡ್ಡುತ್ತಿದ್ದರು.  ತಮ್ಮ, ತಂಗಿ ದುಡ್ಡು ಸಿಗುತ್ತೆ ಎಂದು ಸಿನೆಮಕ್ಕೆ ಬರುತ್ತಿರಲಿಲ್ಲ. ನಾನಂತು ಅಪ್ಪಿತಪ್ಪಿಯೂ ಅಜ್ಜ ಕೊಡುವ ರೂಪಾಯಿ ಆಸೆಗೊಳಪಡದೆ ಸಿನೆಮಕ್ಕೆ ಹೋಗುತ್ತಿದ್ದೆ. ಹೋದವರು ತಪ್ಪದೆ ನನಗೆ ಕಥೆ ಹೇಳಬೇಕು ಎನ್ನುತ್ತಿದ್ದರು ಅಜ್ಜ. ಪಾಪ ತಂಗಿ ತಮ್ಮ ಆಮೇಲೆ ಅಜ್ಜನಿಂದ ೧ ರೂಪಾಯಿ ವಸೂಲು ಮಾಡಲು ಹರಸಾಹಸ ಪಡುತ್ತಿದ್ದರು. ಅಜ್ಜ ಕೊಡಲು ಸತಾಯಿಸುತ್ತಿದ್ದರು. ಅಂತೂ ಅಜ್ಜನಿಂದ ರೂಪಾಯಿ ವಸೂಲು ಮಾಡಿ ಹೆಮ್ಮೆಯಿಂದ ಬೀಗಿ ನಮಗೆ ತೋರಿಸುತ್ತಿದ್ದರು. ಅಜ್ಜ ನಸ್ಯ ಸೇದುತ್ತಿದ್ದರು. ಆಗ ಒಂದು ಪುಟ್ಟ ಡಬ್ಬಿಯಲ್ಲಿ ನಸ್ಯ ಬರುತ್ತಿತ್ತು. ನಸ್ಯ ಮುಗಿದ ಡಬ್ಬಿ ತೆಗೆದುಕೊಳ್ಳಲು ನಮ್ಮಲ್ಲಿ ಪೈಪೋಟಿ ನಡೆಯುತ್ತಿತ್ತು. ನಮ್ಮ ಜಗಳ ನೋಡಿ ಅಜ್ಜ ಅವರ ಸ್ಟಾಕಿನಿಂದ ಎಲ್ಲರಿಗೂ ಒಂದೊಂದು ಡಬ್ಬಿ ಕೊಡುತ್ತಿದ್ದರು. ಅಜ್ಜನಿಗೆ ಮನಸ್ಸಿದ್ದರೆ ಅದರೊಂದಿಗೆ ೧ ರೂಪಾಯಿ ನಾಣ್ಯವೂ ಸಿಗುತ್ತಿತ್ತು.

      ನಮ್ಮ ಒಬ್ಬ ಸೋದರಮಾವನಿಗೆ ಅವಳಿ ಮಕ್ಕಳಿದ್ದರು. ಇಬ್ಬರು ಹುಡುಗಿಯರು ಒಂದೇ ಪಡಿಯಚ್ಚು. ಅವರ ಮುಖ ಒಬ್ಬಳದು ಸ್ವಲ್ಪ ಚಪ್ಪಟೆ, ಮತ್ತೊಬ್ಬಳದು ಸ್ವಲ್ಪ ಉದ್ದ ಎಂದು ಸೂಕ್ಷ್ಮವಾಗಿ ನೋಡಿದರೆ ತಿಳಿಯುತ್ತಿತ್ತು. ಅವರು ಧರಿಸುತ್ತಿದ್ದುದು ಒಂದೇ ತರನಾದ ಧಿರಿಸು. ನಮ್ಮ ಇನ್ನೊಬ್ಬ ಮಾವನ ಸಣ್ಣ ಮಕ್ಕಳನ್ನು ಕರೆದು ಅವಳಿಗಳನ್ನು ತೋರಿಸಿ ಯಾರ್ಯಾರೆಂದು ಹೇಳಿ ಎಂದು ಕೇಳುತ್ತಿದ್ದೆ. ಅವರು ಪಾಪ ಸರಿಯಾಗಿ ಗುರುತಿಸಿ ಹೇಳಿದರೂ ಕೂಡ ಅಲ್ಲ ನೀನು ತಪ್ಪು ಹೇಳಿದೆ. ಅವಳಲ್ಲ ಇವಳು ಎಂದು ಅವರನ್ನು ತಪ್ಪು ದಾರಿಗೆ ಎಳೆದು ಅವರ ಮುಖದಲ್ಲಿ ಗೊಂದಲ ಮೂಡುವುದನ್ನು ಕಂಡು ಖುಷಿ ಪಡುತ್ತಿದ್ದೆ. ನನ್ನೊಂದಿಗೆ ಅವಳಿ ಸಹೋದರಿಯರೂ ಆ ಮಕ್ಕಳನ್ನು ಗೋಳುಹೊಯ್ದುಕೊಳ್ಳಲು ಜೊತೆಗೂಡುತ್ತಿದ್ದರು. ಆ ಗುಣ ಈಗಲೂ ಬಿಟ್ಟಿಲ್ಲ ನಾನು!

     ಮಳೆಗಾಲದಲ್ಲಿ ಸಂಜೆ ಶಾಲೆಯಿಂದ ಬರುವಾಗ ಇಡೀ ಒದ್ದೆಮುದ್ದೆ ಮಾಡಿಕೊಂಡು ಕಾಲಲ್ಲಿ ನೀರು ಹಾರಿಸುತ್ತ ಬರುವ ಮಜವೇ ಮಜ. ಮನೆಯಲ್ಲಿ ತಾಯಿ ಒದ್ದೆಯಾದ ನಮ್ಮ ತಲೆ ಒರೆಸುತ್ತ ಉಪಚರಿಸುವಾಗ ಆನಂದವಾಗುತ್ತಿತ್ತು. ಹಲಸಿನ ಹಪ್ಪಳ ಕೆಂಡದಲ್ಲಿ ಸುಟ್ಟು ಅದಕ್ಕೆ ತೆಂಗಿನೆಣ್ಣೆ ಸವರಿ ಮಳೆ ನೋಡುತ್ತ ತಿನ್ನುವಾಗ ಆಗುವ ರುಚಿ ವರ್ಣಿಸಲು ಅಸಾಧ್ಯ. ರಾತ್ರಿ ಹೊತ್ತು ಜೋರಾಗಿ ಮಳೆ ಬೀಳುವಾಗ ಧೋ ಎಂಬ ಶಬ್ಧ ಕೇಳುತ್ತ ಕತ್ತಲೆಯಲ್ಲಿ ಕುಳಿತು ಸಾಂತಾಣಿ (ಹಲಸಿನ ಬೀಜ ಬೇಯಿಸಿ ಒಣಗಿಸಿದ್ದು) ಪುಳಿಂಕಟೆ (ಹುಣಸೆಬೀಜ ಹುರಿದದ್ದು) ಕಟುಕುಟು ಅಗಿಯುತ್ತ ಮಳೆ ನೋಡುವ ಸೊಬಗನ್ನು ಇಲ್ಲಿ ವಿವರಿಸಲು ಸಾಧ್ಯವಿಲ್ಲ.
ಹಳ್ಳಿಯಲ್ಲಿ ಬೆಳೆದು ಬಾಲ್ಯದ ಸವಿನೆನಪನ್ನು ಇಲ್ಲಿ ನಿಮ್ಮೊಂದಿಗೆ ಹಂಚಿಕೊಳ್ಳಲು ನನಗೆ ಬಹಳ ಖುಷಿ ಆಗಿದೆ. ಇದು ಇಷ್ಟಕ್ಕೆ ಮುಗಿಯಲಿಲ್ಲ. ಸದ್ಯಕ್ಕೆ ಮುಕ್ತಾಯಗೊಳಿಸುವೆ. ಒಮ್ಮೆ ಬಾಲ್ಯಕಾಲದತ್ತ ಹೋಗಿ ಬಂದೆ ನಾನು. ನಿಮಗೂ ನಿಮ್ಮ ಬಾಲ್ಯ ನೆನಪಿಗೆ ಬಂದಿರಬೇಕಲ್ಲ?

Read Full Post »

ಕೊನೇ ಆಷಾಡ ಶುಕ್ರವಾರ ೧೩.೭.೨೦೧೨ನೇ ತಾರೀಕು ನಾವು ಐದು ಮಂದಿ ಚಾಮುಂಡಿಬೆಟ್ಟದ ಬುಡದಿಂದ ರಸ್ತೆಯ ಮೂಲಕ ನಡೆದು ನಂದಿ ಇರುವ ಜಾಗಕ್ಕೆ ಹೋದೆವು. ಮೆಟ್ಟಲು ಇಳಿಯುವವರು ಸಾಕಷ್ಟು ಸಂಖ್ಯೆಯಲ್ಲಿ ಇದ್ದರು. ಅಲ್ಲಿಂದ ಮೆಟ್ಟಲಿನ ಮೂಲಕ ಹತ್ತಿ ಬೆಟ್ಟದ ತುದಿ ತಲಪಿದೆವು. ಮೆಟ್ಟಲುಗಳು ಅದರ ಮೂಲಬಣ್ಣ ಮರೆಯಾಗುವಷ್ಟು ಇಡೀ ಕುಂಕುಮದ ಪ್ರಸಾದದಿಂದ ಬಣ್ಣಗೆಟ್ಟಿತ್ತು ಎಂದೇ ಹೇಳಬಹುದು. ಜನರ ಹರಕೆ ಬಲು ವಿಚಿತ್ರ ಎಂದು ಅನಿಸುತ್ತದೆ ನನಗೆ. ಒಂದೊಂದು ಮೆಟ್ಟಲಿಗೂ ಕುಂಕುಮ ಅರಸಿನ ಹಚ್ಚುತ್ತ ಮೇಲೆ ಹತ್ತುತ್ತ ಸಾಗುತ್ತಾರೆ. ಸುಸ್ತು ಆಗುವಾಗ ಅಲ್ಲಲ್ಲಿ ನಿಂತು ಸುಧಾರಿಸಿಕೊಳ್ಳುತ್ತಾರೆ. ದೇವಾಲಯದ ಬಳಿ ತಲಪುವಾಗ ಕುಂಕುಮ ಅರಸಿನದ ದೊಡ್ಡ ರಾಶಿಯೇ ನಮಗೆದುರಾಯಿತು. ಅವರವರ ಭಾವಕ್ಕೆ ಅವರವರ ಭಕುತಿಗೆ ದೇವ ನೀನೊಬ್ಬನೇ ಸಿಗುವುದು.

         ಈ ದಿನ ತುಂಬ ಮಂದಿ ಅಲ್ಲಿ ಪ್ರಸಾದ ಹಂಚುತ್ತಾರೆ. ಪುಳಿಯೋಗರೆ, ಪಲಾವ್, ಬೆಸಿಬೇಳೆಬಾತ್, ಕೇಸರೀಬಾತ್ ಇತ್ಯಾದಿ. ಇಷ್ಟು ವರ್ಷ ಆಷಾಡದ ಶುಕ್ರವಾರಗಳಂದು ಚಾಮುಂಡಿಬೆಟ್ಟದಲ್ಲಿ ಅನ್ನ ಸಂತರ್ಪಣೆ ಮಾಡುತ್ತೇವೆ ಎಂದು  ಹರಕೆ ಹೇಳಿಕೊಳ್ಳುತ್ತಾರಂತೆ. ಇದು ಗೆಳತಿ ಶ್ಯಾಮಲಾ ಕೊಟ್ಟ ಮಾಹಿತಿ.  ನಿಜಕ್ಕೂ ಪ್ರಸಾದ ಹಂಚಿದರೆ ಸಂತೋಷವೇ. ಆದರೆ ಅಲ್ಲಿ ಕಂಡ ದೃಶ್ಯಗಳಿಂದ ನಿಜಕ್ಕೂ ಖೇದವೆನಿಸಿತು. ಅಲ್ಲಲ್ಲಿ ಕಟ್ಟೆಯಲ್ಲಿಟ್ಟ ದೊನ್ನೆಗಳಲ್ಲಿ ತುಂಬಿದ ಮೊಸರನ್ನ, ಪಲಾವ್, ಪುಳಿಯೋಗರೆಗಳು ಅನಾಥವಾಗಿ ಒಣಗುತ್ತ ಬಿದ್ದಿತ್ತು. ಯಾರೋ ತೆಕ್ಕೊಂಡವರು ಅಲ್ಲೇ ಬಿಟ್ಟು ಹೋಗಿರಬೇಕು ಇಲ್ಲವೆ ಪ್ರಸಾದ ಹಂಚಲು ಬಂದವರು ಕಾಟಾಚಾರಕ್ಕೆ ಹಂಚಿದಂತೆ ಮಾಡಿ ದೊನ್ನೆಗಳಿಗೆ ತುಂಬಿ ಅಲ್ಲಿ ಇಟ್ಟು ಹೋದದ್ದು ಇರಬಹುದೆ? ಎಂಬ ಸಂಶಯವೂ ಬಂದಿತು. ಅಷ್ಟು ಆಹಾರ ಸುಮ್ಮನೆ ಹಾಳಾದದ್ದು ಕಂಡು ಮನಸ್ಸು ನೊಂದಿತು.

    ಬೆಟ್ಟದ ಮೇಲೆ ದೇವಸ್ಥಾನದೊಳಗೆ ಹೋಗಲು ಸರತಿ ಸಾಲಿನಲ್ಲಿ ನೂರಾರು ಜನ ನಿಂತಿದ್ದರು. ಆಗ ಗಂಟೆ ರಾತ್ರಿ ೭.೧೫ ಆಗಿತ್ತು. ದೇವಾಲಯದ ಬಾಗಿಲು ತೆರೆದು ಚಾಮುಂಡಿಯ ದರ್ಶನ ಭಾಗ್ಯ ಸಿಗಲು ಇನ್ನೂ ಮುಕ್ಕಾಲು ಗಂಟೆ ಸಮಯವಿತ್ತು. ನೂಕು ನುಗ್ಗಲಿನಲ್ಲಿ ಭಕ್ತಿ, ತಾಳ್ಮೆಯಿಂದ ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ಯಾವ ಬೇಸರವಿಲ್ಲದೆಯೇ ಜನ ನಿಂತು ಕಾಯುತ್ತಾರಲ್ಲ. ಅದನ್ನು ಕಂಡು ನಿಜಕ್ಕೂ ನಾನು ಮೂಕಳಾದೆ.  ಅದಾಗಲೇ ಎಷ್ಟೋ ಜನ ಚಾಮುಂಡಿ ದರ್ಶನ ಮಾಡಿ ತೆರಳಿದ್ದರು. ಇನ್ನೂ ಕೆಲವು ಮಂದಿ ಮೆಟ್ಟಲು ಹತ್ತುತ್ತಲಿದ್ದರು.

       ನಾವು ದೇವಾಲಯದ ಒಳಗೆ ಹೋಗುವ ಸಾಹಸ ಮಾಡಲಿಲ್ಲ. ದೇವಾಲಯಕ್ಕೆ ಒಂದು ಪ್ರದಕ್ಷಿಣೆ ಹೊರಗಿನಿಂದ ಹಾಕಿ ಮೆಟ್ಟಲು ಇಳಿಯಲು ತೊಡಗಿದೆವು. ಅದಾಗಲೇ ಗಂಟೆ ೭.೫೦ ದಾಟಿತ್ತು. ಕೆಲವುಕಡೆ ದೀಪದ ಬೆಳಕಿಲ್ಲದೆ ಕತ್ತಲೆ ಇತ್ತು. ನಮ್ಮಲ್ಲಿ ಟಾರ್ಚ್ ಇದ್ದದ್ದರಿಂದ ತೊಂದರೆಯಾಗಲಿಲ್ಲ.  ನಂದಿಯ ಬಳಿ ಸಾಲಾಗಿ ಕೆಲವು ಅಂಗಡಿಗಳಿವೆ. ಅಲ್ಲಿ ಕಬ್ಬಿನ ಹಾಲು ಕುಡಿದು, ವೆಂಕಟೇಶರು ಮಾಡಿಕೊಟ್ಟ ಸ್ಪೆಷಲ್  ಚುರುಮುರಿ ತಿಂದೆವು. ತಿನ್ನುತ್ತ, ವೆಂಕಟೇಶರನ್ನು ಕೇಳಿದೆ. ಇವತ್ತು ಒಂದು ಹತ್ತುಸಾವಿರ ರೂಪಾಯಿಯ ವ್ಯಾಪಾರ ಆಗಿರಬಹುದಾ ಎಂದು. ಹೌದು. ನಾಲ್ಕು ಸಾವಿರ ರೂಪಾಯಿ ಬಂಡವಾಳ ಹಾಕಿದ್ದೇನೆ. ಹತ್ತುಸಾವಿರ ರೂಪಾಯಿ ದಾಟಿದೆ ಎಂದಾಗ ನನಗೆ ಬಲು ಖುಷಿ ಆಯಿತು. ನಾನು ಸುಮ್ಮನೆ ಅಂಥ ಅಂದಾಜು ಇಲ್ಲದೆ ಕೇಳಿದ್ದಷ್ಟೆ. ವೆಂಕಟೇಶ ನಿತ್ಯ ಚಾಮುಂಡಿಬೆಟ್ಟದಲ್ಲಿ ವ್ಯಾಪಾರ ಮಾಡುತ್ತಿಲ್ಲ, ಪ್ರತೀವರ್ಷ ಆಷಾಡ ಶುಕ್ರವಾರಗಳಂದು ಮಾತ್ರ ಅಲ್ಲಿ ವ್ಯಾಪರ ನಡೆಸುವುದು. ಉಳಿದ ದಿನಗಳೆಲ್ಲ ಸಯ್ಯಾಜಿರಾವ್ ರಸ್ತೆಯ ಉದ್ಯಾನವನದ ಬಳಿ ವ್ಯಾಪಾರವಂತೆ. ಚುರುಮುರಿ ಮತ್ತು ನೀರಲ್ಲಿ ಬೇಯಿಸಿದ ಜೋಳ ಮಾರುವ ಕಾಯಕ ಅವರದು. ಇದೇ ವ್ಯಾಪಾರದಿಂದ ಇಬ್ಬರು ಹೆಣ್ಣುಮಕ್ಕಳ ಮದುವೆಯನ್ನು ಯಾವ ಸಾಲ ಇಲ್ಲದೆ ಚೆನ್ನಾಗಿ ನಡೆಸಿದ್ದಾರಂತೆ. ಅವರ ಸಾಧನೆ ಯಶಸ್ಸು ಕೇಳಿ ನಾವು ಬಹಳ ಸಂತೋಷಪಟ್ಟೆವು.  ಸ್ವಾಭಿಮಾನದಿಂದ ಸ್ವಂತ ದುಡಿಮೆ ಕೈಗೊಂಡು ಸಂಸಾರವನ್ನು ಚೆನ್ನಾಗಿ ಸಾಕುವಂಥ ಇಂಥ ಜನರನ್ನು ನೋಡಿ ನಾವು ಹೆಮ್ಮೆಪಡಬೇಕು. ಚಾಮುಂಡಿಬೆಟ್ಟ ಹತ್ತಿದ್ದು ಸಾರ್ಥಕವೆನಿಸಿತು ನನಗೆ. ಜೈ ಚಾಮುಂಡೇಶ್ವರೀ.

Read Full Post »

ಇದು ಹವ್ಯಕ ಭಾಷೆಯಲ್ಲಿ ಬರೆದ ಒಂದು ಲಹರಿ .   ಓದುಗರು  ಅರ್ಥ ಮಾಡಿಕೊಳ್ಳುವಿರಿ ಎಂದು ಭಾವಿಸಿದ್ದೇನೆ.  ಗೊತ್ತಾಗದಿದ್ದರೆ ಕನ್ನಡದಲ್ಲಿ ನಿಧಾನದಲ್ಲಿ ಹಾಕುತ್ತೇನೆ.

ಕನ್ನಡಕ ಹಾಕಿದೋರ ನೋಡುವಾಗ ಎಂಥದೋ ಗೌರವ, ಆದರ. ಎನಗೂ ಕನ್ನಡಕ ಹಾಕುಲೆ ಇರ್ತಿತ್ತರೆ ಎಷ್ಟು ಒಳ್ಳೆದಿತ್ತು ಹೇಳುವ ಭಾವನೆ ಎನಗೆ ಸಣ್ಣಾದಿಪ್ಪಾಗ ಇತ್ತು. ಅಜ್ಜಂದೋ, ದೊಡ್ಡಪ್ಪಂದೋ ಒಟ್ಟೆ ಕನ್ನಡಕ (ಬರೀ ಫ್ರೇಮು ಮಾತ್ರ) ಸಿಕ್ಕಿದರೆ ಅದರ ಹಾಕಿಗೊಂಡು ಕನ್ನಟಿ ಮುಂದೆ ನಿಂದು ಚೆಂದ ನೋಡಿದ್ದು ಖುಷಿ ಇತ್ತ ಕ್ಷಣ. ಕನ್ನಡಕ ಹಾಕಿದ ಮೋರೆಗೇ ಒಂದು ಶೋಭೆ, ಗಂಭೀರವದನೆ ಇತ್ಯಾದಿ ಅನಿಸಿಕೆ ಇತ್ತು.

ಅದೇ ಈಗ ಎನಗೆ ಕನ್ನಡಕ ಹಾಕುವ ಭಾಗ್ಯ ಎದುರಾದ ಪ್ರಸಂಗ ಬಂತು. ಅಂಗಡಿಗೆ ಹೋದಿಪ್ಪಾಗ ಅಲ್ಲಿ ಪಾತ್ರೆ ತೊಳವ ಸಾಬೂನಿನ ಕ್ರಯ ನೋಡ್ತೆ ಸ್ಪಷ್ಟವಾಗಿ ಕಾಣ್ತೇ ಇಲ್ಲೆ. ಅಷ್ಟು ಸಣ್ಣ ಅಕ್ಷರಲ್ಲಿ ಬರದಿರ್ತವು. ಅರೆ ಕಳುದ ವಾರ ನೋಡಿಪ್ಪಗ ಕಂಡುಗೊಂಡಿದ್ದದು ಈಗ ಕಾಣ್ತಿಲ್ಲೆ. ಅಂತೂ ಇನ್ನು ಎನ್ನ ಮೋರೆಗೆ ಒಂದು ಕಳೆ ಬತ್ತು ಹೇಳಿ ಖುಷಿ ಆತು. ಎನಗೆ ಬಡ್ತಿ ಸಿಕ್ಕಿತ್ತು ಹೇಳಿ ಸಂತೋಷಪಟ್ಟೆ.

ಕಣ್ಣು ತಪಾಸಣೆಗೆ  ಡಾಕ್ಟ್ರನತ್ತರೆ ಹೋದೆ. ಮೊದಲೇ ಹೇಳಿತ್ತವು ವಾಹನ ಚಾಲನೆ ಮಾಡಿಗೊಂಡು ಬಪ್ಪಲಾಗ. ಕಣ್ಣು ಮಂಜು ಇರ್ತು ಹೇಳಿ. ಹಾಂಗೆ ಅರ್ಧಾಂಗ ಎನ್ನ ವೈದ್ಯರ ಬಳಿ ಬಿಟ್ಟದು. ಕಣ್ಣಿಂಗೆ ೩ ಸರ್ತಿ ಮದ್ದು ಹಾಕಿ ಒಂದು ಗಂಟೆ ಕೂರ್ಸಿದವು. ನಿಜಕ್ಕೂ ದೀರ್ಘ ಸಮಯ ಹೇಳಿರೆ ಅದು. ಎಷ್ಟೊತ್ತಾದರೂ ಗಂಟೆ ಮುಂದೆ ಹೋಪದೇ ಕಾಣ್ತಿಲ್ಲೆ ಎಂಬ ಭಾವ. ಮದ್ದು ಹಾಕಿ ಅಪ್ಪಗ ಉರಿ ಹೇಳಿರೆ ಉರಿ. ಅಂತೂ ರೂ.೧೦೦ಕ್ಕೆ ಕೂಲಂಕಷವಾಗಿ ಪರೀಕ್ಷೆ ಆತು. ಬಂದ ಫಲಿತಾಂಶ ಚಾಳೀಸು + ೧.೨೫. ಬೇರೆ ಎಂತ ದೋಷ ಇಲ್ಲೆ. ಓದುವಾಗ ಮಾತ್ರ ಕನ್ನಡಕ ಹಾಕಿಗೊಳ್ಳೆಕ್ಕು. ಆಸ್ಪತ್ರೆಂದ ವಾಪಾಸ್ ಬಪ್ಪದು ಸಿಟಿ ಬಸ್ಸಿಲಿ ಹೇಳಿ ಅಂದಾಜು ಮಾಡಿತ್ತಿದ್ದೆ. ಹೆರ ಬಪ್ಪಗ ಕಣ್ಣು ಬಿಡ್ಲೆ ಎಡಿಯ. ಇನ್ನು ಬಸ್ ಕಾದರೆ ಆಗ ಹೇಳಿ ರಿಕ್ಷ ಏರಿ ರೂ. ೭೫ ಕೊಟ್ಟು ಮನೆಗೆ ಬಂದೆ. ನಿಜ ಕಣ್ಣು ಮಂಜಪ್ಪದರಲ್ಲಿ ವಾಹನ ಬಿಡ್ಲೆ ಎಡಿಯಲೆ ಎಡಿಯ ಹೇಳಿ ಎನಗೆ ಸರಿಯಾಗಿ ಮನವರಿಕೆ ಆತು.

ಮಾರನೇ ದಿನ ಎನ್ನ ಸವಾರಿ ಕನ್ನಡಕ ಅಂಗಡಿಗೆ. `ಹೇಂಗೆ ಹೇಂಗೋ ಇಪ್ಪ ಕನ್ನಡಕ (ಹೇಳಿರೆ ದೊಡ್ಡ ಫ್ರೇಮಿಂದು) ಕೊಳಕ್ಕಿಂದು ತೆಕ್ಕೊಳೆಡ. ಈಗ ಸಣ್ಣ ಫ್ರೇಂಮಿಂದು ಲಾಯಕದ್ದು ಬತ್ತು. ಭಾರೀ ಚೆಂದ ಇರ್ತು. ಕ್ರಯ ಹೆಚ್ಚು ಹೇಳಿ ಅದರ ಬಿಡೆಡ’ ಹೇಳಿ ಮಗಳು ದೂರು ವಾಣಿಸಿ ಹೇಳಿತ್ತಿದ್ದು. ಅಂಗಡಿಲಿ ತರ ತರದ ಕನ್ನಡಕ ಇತ್ತು. ಯಾವುದಕ್ಕು ಹೇಳಿಯೇ ಗೊಂತಾಗದ್ದಷ್ಟು ಬಗೆಗೊ.  ಕೆಲವದರ ಕಣ್ಣಿಂಗೇರಿಸಿ ನೋಡಿದೆ. ಆಹಾ ಎಂತ ಲಾಯಕ ಇದ್ದು. ಕನ್ನಡಕ ಹಾಕಿದ ಮೋರೆಯ ಗತ್ತೇ ಬೇರೆ. ಕನ್ನಟಿಲಿ ನೋಡಿ ಖುಷಿ ಪಟ್ಟೆ. ಆದರೆ ಫ್ರೇಮಿನ ಕ್ರಯ ನೋಡಿ ಹಾಂಗೇ ಇಳಿಸಿದೆ. ಸಣ್ಣ ಫ್ರೇಮಿಂದೆಲ್ಲ ಸಾವಿರದಮೇಲೆಯೇ. ಇಷ್ಟು ಕ್ರಯ ಕೊಟ್ಟು ಕನ್ನಡಕ ಬೇಕಾ ಹೇಳುವ ಮನಸ್ಸು. ಎನ್ನ ಮನಸ್ಸಿನ ಸರಿಯಾಗಿ ಅರ್ಥ ಮಾಡಿಕೊಂಡ ಅಂಗಡಿಯವ, `ಮೇಡಂ, ನೋಡಿ +೧.೨೫ ಗೆ ರೆಡಿಮೇಡ್ ಕನ್ನಡಕ ಬರುತ್ತೆ. ರೂ.೧೫೦ ಮಾತ್ರ. ಹಾಕಿ ನೋಡಿ. ಇದು ಅಭ್ಯಾಸ ಆದ ಮೇಲೆ ಬೇರೆ ಮಾಡಿಸಬಹುದು’ ಹೇಳಿದ. ಅವನ ಸಲಹೆ ಕೇಳಿ ಖುಷಿಯಾಗಿ ಆ ಕನ್ನಡಕ ತೆಕ್ಕೊಂಡು ಮನೆಗೆ ಬಂದೆ.

 ಎರಡು ದಿನ ಕನ್ನಡಕ ಹಾಕಿ ಕಷ್ಟಪಟ್ಟು ಓದಿದೆ. ಸುಖವೇ ಆವ್ತಿಲ್ಲೆ. ಇದು ಕನ್ನಡಕ ದೋಷ ಆದಿಕ್ಕು. ಗ್ಲಾಸ್ ಎಲ್ಲ ಕಡಮ್ಮೆ ಕ್ರಯದ್ದು ಹಾಕುಲಾಗ ಕಣ್ಣು ಉರಿ ಬತ್ತು ಹೇಳಿ ತೀರ್ಮಾನಕ್ಕೆ ಬಂದೆ. ಹೊಸ ಕನ್ನಡಕ ಸರಿಯಾದ್ದು ಮಾಡ್ಸುವಾಳಿ ಪುನಃ ಬೇರೆ ಅಂಗಡಿಗೆ ಹೋದೆ. ಅಲ್ಲಿ ವಿಧವಿಧವಾದ ಫ್ರೇಮಿನ ನೋಡಿ ನೋಡಿ ಬಿಟ್ಟೆ. ಕ್ರಯ ನೋಡುವಾಗಲೇ ಕಣ್ಣು ಜೋರು ಉರಿವಲೆ ಸುರುವಾತು. ಅಂತೂ ರೂ. ೨೦೦ಕ್ಕೆ (ಮಗಳು ಎನ್ನ ಮೋರೆ ನೋಡಿ ಬೈಯದ್ದಾಂಗೆ ಇಪ್ಪ ರಜ ಸಣ್ಣ ಫ್ರೇಮಿಂದೇ!) ಒಂದು ಫ್ರೇಮು ಆರ್ಸಿ ಗ್ಲಾಸ್ ಹಾಕುಲೆ ಕೊಟ್ಟೆ. ಆ ಗ್ಲಾಸಿಂಗೆ ರೂ.೫೯೦! ಅಂತೂ ಹೊಸ ಕನ್ನಡಕ ಬಂತು. ಮನೆಗೆ ಬಂದು ಕನ್ನಡಕ ಹಾಕಿ ಪುಸ್ತಕ ಓದುತ್ತೆ ಹೇಂಗೆ ಮಡುಗಿರು ಓದುಲೆ ಸುಖ ಆವ್ತಿಲ್ಲೆ. ಆನು ಓದುಲೆ ಮಾತ್ರ ಹೇಳಿ ಹೇಳಿತ್ತರೂ ಅವು ಬೈಫೋಕಸ್ ಗ್ಲಾಸ್ ಹಾಕಿದ್ದವು. ಅದರ ಯಾವ ಭಂಗಿಲಿ ಮಡುಗಿರೂ ಓದುಲೆ ಎಡಿಯ ಎನಗೆ. ಅಂಗಡಿಗೆ ಹೋಗಿ ಈ ಕನ್ನಡಕಲ್ಲಿ ಓದುಲೆ ಆವ್ತಿಲ್ಲೆ. ಬೇರೆ ಗ್ಲಾಸ್ ಹಾಕಿ ಕೊಡಿ ಹೇಳಿದೆ. ಈಗ ಎನಗೆ ಎರಡು ಕನ್ನಡ್ಕ ಇದ್ದು. ಯಾವುದರ ಹಾಕಿ ಓದುದು ಹೇಳಿ ದ್ವಂದ್ವ ಸುರು ಆಯಿದು!

  ನಿಜಕ್ಕೂ ಕನ್ನಡಕ ಹಾಕಿ ಓದುಲೆ ಸುಖ ಇಲ್ಲೆ. ಕನ್ನಡಕ ಇಲ್ಲದ್ದೇ ಹಾಂಗೇ ಓದುದೇ ಪರಮ ಸುಖ ಹೇಳಿ ಈಗ ಆವ್ತಾ ಇದ್ದು. ಎನಗೆ ಇಂಥ ಬಡ್ತಿ ಬೇಡಪ್ಪ ಹೇಳಿ ಕಂಡತ್ತು! ಬೇರೆಯೋರು ಕನ್ನಡಕ ಹಾಕಿದ್ದರ ಮಾತ್ರ ನೋಡುಲೆ ಚೆಂದ ಹೇಳುವ ತೀರ್ಮಾನಕ್ಕೆ ಬಂದೆ. ಸ್ವತಃ ಹಾಕಿರೆ ಅಲ್ಲ ಹೇಳಿ ಎನಗೆ ಮನವರಿಕೆ ಆತು. ದೂರದ ಬೆಟ್ಟ ನಿಜಕ್ಕೂ ನುಣ್ಣಗೆ!

Read Full Post »

ದಕ್ಷಿಣಕನ್ನಡ ಜಿಲ್ಲೆ ಒಡಿಯ್ಯೂರು (odiyuru) ಎಂಬ ಪುಟ್ಟ ಹಳ್ಳಿಯಿಂದ ೧೯೮೭ರ ಫೆಬ್ರವರಿ ತಿಂಗಳಲ್ಲಿ ಮದುವೆಯಾಗಿ ಮೈಸೂರಿಗೆ ಬಂದು ನೆಲೆ ಊರಿದೆ. ಅಂದಿನಿಂದ ಇಂದಿನವರೆಗೂ (ಫೆಬ್ರವರಿ ೨೦೧೨) ಪ್ರಜಾವಾಣಿ ಓದುವುದನ್ನು ಒಂದು ದಿನವೂ ತಪ್ಪಿಸಿಲ್ಲ.
ನಮ್ಮ ಮಾವ (ಜಿ.ಟಿ. ನಾರಾಯಣ ರಾವ್ ೧೯೨೬-೨೦೦೮) ಪ್ರಜಾವಾಣಿಯ ಖಾಯಂ ಓದುಗರಾಗಿದ್ದರು. ಅವರು ಬೆಳಗ್ಗೆ ಎದ್ದೊಡನೆ ಮನೆ ಎದುರು ಗೇಟು ಬಳಿ ಪತ್ರಿಕೆ ಬರುವುದನ್ನೇ ಕಾಯುತ್ತಿದ್ದರು. ಬಂದೊಡನೆ ಪ್ರಜಾವಾಣಿಯನ್ನು ಕೈಗೆತ್ತಿಕೊಂಡು ಆಮೂಲಾಗ್ರ ಓದುತ್ತಿದ್ದರು. ಒಂದೊಂದು ದಿನ ಪತ್ರಿಕೆ ಹಾಕುವ ಹುಡುಗ ಪತ್ರಿಕೆ ಹಾಕದೆ ತಪ್ಪಿಸುತ್ತಿದ್ದ. ಆ ದಿನ ಮಾವನ ಪಡಿಪಾಟಲು ನೋಡುವುದೇ ನಮಗಾನಂದ. ಪತ್ರಿಕೆ ಹಾಕಿಲ್ಲ ಎಂದು ನಮಗೆಲ್ಲ ನಾಲ್ಕೈದು ಸಲ ಹೇಳುತ್ತ ಶತಪಥ ಓಡಾಡುತ್ತಿದ್ದರು. ಇಲ್ಲಿಯ ಪ್ರಜಾವಾಣಿಯ ಕಚೇರಿಗೆ ದೂರವಾಣಿಸಿ `ನಮಗೆ ಪತ್ರಿಕೆ ಹಾಕಿಲ್ಲ, ಇವತ್ತು ಪತ್ರಿಕೆ ಬಂದಿದೆ ತಾನೆ’ ಎಂದು ಖಚಿತಗೊಳಿಸಿಕೊಳ್ಳುತ್ತಿದ್ದರು. ಮತ್ತೆ ತಿಂಡಿ ತಿಂದದ್ದೇ ಚಿಲ್ಲರೆ ತೆಗೆದುಕೊಂಡು ಅಂಗಡಿಗೆ ಹೋಗಿ ಪತ್ರಿಕೆ ತಂದು ಓದಿದ ಮೇಲೇ ಅವರು ಸಮಾಧಾನಿಯಾಗುತ್ತಿದ್ದುದು! ಅಲ್ಲ ಒಂದು ದಿನ ಪತ್ರಿಕೆ ಓದದೆ ಇದ್ದರೆ ಏನಾಗುತ್ತದೆ? ಪತ್ರಿಕೆಗೆ ಇಷ್ಟು ದಾಸನಾಗಬಾರದು. ಇದು ಅತಿಯಾಯಿತು ಎಂದು ಆಗ ನಾನು ಮನಸ್ಸಿನಲ್ಲಿಯೇ ಹೇಳಿಕೊಳ್ಳುತ್ತಿದ್ದೆ. ಬಹಿರಂಗವಾಗಿ ಹೇಳುತ್ತಿರಲಿಲ್ಲ. ಆದರೆ ಈಗ ಅವರದೇ ಪರಿಸ್ಥಿತಿ ನನಗೆ ಅಂಟಿದೆ!  ಪತ್ರಿಕಾ ಕಚೇರಿಗೆ ಮಾತ್ರ ದೂರವಾಣಿಸುತ್ತಿಲ್ಲ ಅಷ್ಟೆ!
ಮೊದ ಮೊದಲು ನಾನು ಪತ್ರಿಕೆಯನ್ನು ಓದಿದ ಶಾಸ್ತ್ರ ಮಾತ್ರ ಮಾಡುತ್ತಿದ್ದೆ. ಆ ಶಾಸ್ತ್ರವನ್ನು ಮಾವ ಕಿತ್ತೆಸೆದರು. ಮಾವ ಪ್ರತೀದಿನ ನನಗೆ, `ನೋಡು ಪ್ರಜಾವಾಣಿಯಲ್ಲಿ ಇಂಥ ಲೇಖನ ಬಂದಿದೆ. ಓದಿದೆಯ?’ ಎಂದು ಕೇಳುತ್ತಿದ್ದರು. ಇಲ್ಲ ಎಂದುತ್ತರಿಸಿದರೆ ಓದು ಎನ್ನುತ್ತಿದ್ದರು. ಆಗ ಓದಲೆ ಬೇಕಾಗುತ್ತಿತ್ತು. ಏಕೆಂದರೆ ಸ್ವಲ್ಪ ಹೊತ್ತು ಬಿಟ್ಟು ಲೇಖನ ಓದಿದೆಯ? ಏನನಿಸಿತು? ಎಂದು ಮರೆಯದೆ ಕೇಳುತ್ತಿದ್ದರು.  ಅನಿವಾರ್ಯವಾಗಿ ಸರಿಯಾಗಿ ಪತ್ರಿಕೆ ಓದಲೇಬೇಕಿತ್ತು. ಹಾಗೂ ಆ ಲೇಖನದ ಬಗ್ಗೆ ಚೆನ್ನಾಗಿತ್ತ ಇಲ್ಲವೆ ಎಂದು ವಿವರಿಸಬೇಕು. ಅಲ್ಲಿಂದ ಮುಂದೆ ಪ್ರಜಾವಾಣಿಯ ಓದಿನ ಗೀಳು ನನಗೆ ಹತ್ತಿತು. ಪ್ರಜಾವಾಣಿಯಲ್ಲಿ ಯಾವುದಾದರೂ ಲೇಖನದ  ಕೆಲವು ವಾಕ್ಯಗಳನ್ನು ತೆಗೆದುಕೊಂಡು `ನೋಡು ಈ ವಾಕ್ಯವನ್ನು ಹೇಗೆಲ್ಲ ಬರೆಯಬಹುದು? ಹೇಗೆ ಬರೆದರೆ ಶೈಲಿ ಚೆನ್ನಾಗಿರುತ್ತದೆ’ ಎಂದೆಲ್ಲ ಮಾವ ನನಗೆ ಪಾಟ ಮಾಡುತ್ತಿದ್ದರು. ನಾನು ಆಸಕ್ತಿಯಿಂದ ಕೇಳಿಸಿಕೊಂಡು ಹೌದಲ್ಲ ಹೀಗೆ ಬರೆದರೆ ಚೆನ್ನಾಗಿರುತ್ತದೆ ಎಂದು ಹೇಳುತ್ತಿದ್ದೆ. `ನೋಡು ಇವತ್ತಿನ ಪತ್ರಿಕೆಯಲ್ಲಿ ಇಂಥ ಲೇಖನದಲ್ಲಿ ಒಂದು ತಪ್ಪು ನುಸುಳಿದೆ. ಪತ್ತೆ ಹಚ್ಚು ನೋಡುವ’ ಎಂದು ನನಗೆ ಸವಾಲೆಸೆಯುತ್ತಿದ್ದರು. ಪ್ರಾರಂಭದಲ್ಲಿ ನನಗೆ ಗೊತ್ತಾಗುತ್ತಿರಲಿಲ್ಲ, ಅವರೇ ತೋರಿಸಿ ಇದು ಹೀಗಾಗಬೇಕು ಎನ್ನುತ್ತಿದ್ದರು. ಒಂದು ವಾಕ್ಯವನ್ನು ಹೇಗೆ ಬರೆಯಬಹುದು? ಹೇಗೆ ಬರೆದರೆ ಚೆನ್ನ ಎಂದು ಆಗ ನನ್ನರಿವಿಗೆ ಬಂತು. ಉದಾಹರಣೆಗೆ: `ನಾನು ಇವತ್ತು ಬೆಳಗ್ಗೆ ಬೇಗ ಎದ್ದೆನು.’ ಎಂಬುದನ್ನು `ಇವತ್ತು ಬೆಳಗ್ಗೆ ನಾನು ಬೇಗ ಎದ್ದೆನು.’ ಎಂದು ಬರೆದರೆ ಆ ಶೈಲಿಯೇ ಉತ್ತಮ ಎಂದು ನನಗೆ ಮಾವ ತಿಳಿ ಹೇಳಿದ್ದರು. `ನಾನು’ ಎಂಬುದು ವಾಕ್ಯದ ಮೊದಲು ಬಂದರೆ ಶೋಭಿಸುವುದಿಲ್ಲ ಎನ್ನುತ್ತಿದ್ದರು. ಆದಷ್ಟು `ನಾನು’ ಎಂಬ ಶಬ್ಧ ಬರದಂತೆಯೇ ವಾಕ್ಯ ರಚಿಸಬೇಕು. ಅನಿವಾರ್ಯವಾದರೆ ಮಾತ್ರ `ನಾನು’ ಸೇರಿಸಬೇಕು ಎಂದಿದ್ದರು. ಕ್ರಮೇಣ ನನ್ನ ಜ್ಞಾನದ ಅರಿವು ಪ್ರಜಾವಾಣಿ ಓದಿನಿಂದ ಮಾವನ ಪಾಟದಿಂದ ಬೆಳವಣಿಗೆ ಹೊಂದಿತು.  ಹೀಗೆ ದಿನಾ ನಮ್ಮ ಪ್ರಜಾವಾಣಿಯ ಓದಿನ ಸಂವಾದ ಚರ್ಚೆ ನಡೆಯುತ್ತಿತ್ತು.
ಪ್ರಜಾವಾಣಿ ಬಂದೊಡನೆ ಮೊದಲು ಓದಲು ನನಗೂ ಮಾವನಿಗೂ ಸ್ಪರ್ಧೆ ಏರ್ಪಡುತ್ತಿತ್ತು. ಮಾವ ಓದಿ ಕೆಳಗಿಡುವುದನ್ನೇ ಕಾಯುತ್ತಿದ್ದೆ. ಮಧ್ಯೆ ಅವರಿಗೆ ದೂರವಾಣಿ ಕರೆಬಂದರೆ ಕೂಡಲೇ ನಾನು ನಿಧಿ ಸಿಕ್ಕಂತೆ ಪತ್ರಿಕೆ ಕೈಗೆತ್ತಿಕೊಳ್ಳುತ್ತಿದ್ದೆ. ಅಕ್ಷರಿ (ಮಗಳು) ಪತ್ರಿಕೆ ಓದುವ ಹಂತಕ್ಕೆ ಬಂದಮೇಲೆ ನಮ್ಮ ಮೂವರಲ್ಲಿ ಪ್ರಜಾವಾಣಿ ಓದಲು ಪೈಪೋಟಿ ಸುರುವಾಯಿತು. ಅವಳಾದರೋ ಬಲು ಘಾಟಿ. ಅಜ್ಜನಿಂದ ಪತ್ರಿಕೆ ಕಿತ್ತುಕೊಂಡು `ಅಜ್ಜ ಬೇಗ ಓದಿ ಕೊಡುತ್ತೇನೆ. ನನಗೆ ಶಾಲೆಗೆ ಹೋಗಬೇಕಲ್ಲ.  ಮತ್ತೆ ನೀನೇ ಓದು’ ಎನ್ನುತ್ತಿದ್ದಳು. ಅಜ್ಜನೂ ಮೊಮ್ಮಗಳ ವಾದಕ್ಕೆ ತಲೆಬಾಗಿ ಬೇರೆ ಪತ್ರಿಕೆ ಕೈಗೆತ್ತಿಕೊಳ್ಳುತ್ತಿದ್ದರು.

     ಮಾವ ಮೈಸೂರಿನಿಂದ ಹೊರಗೆಲ್ಲಾದರೂ ಕೆಲವು ದಿನಗಳ ಮಟ್ಟಿಗೆ ತೆರಳುವಾಗ ತಪ್ಪದೆ ಆಡುತ್ತಿದ್ದ ಮಾತು  `ಪತ್ರಿಕೆಗಳನ್ನೆಲ್ಲ ತೆಗೆದಿಡು, ಬಂದು ಓದುತ್ತೇನೆ’ ಎಂಬುದಾಗಿತ್ತು. ಹಳೆ ಪತ್ರಿಕೆಯನ್ನು ಎಂತದು ಓದುವುದು ಎಂದು ಗೊಣಗುತ್ತಿದ್ದೆ. ಈಗ ನಾನು ಕೂಡ ಎಲ್ಲೇ ಎಷ್ಟು ದಿನಕ್ಕಾದರೂ ಹೊರಗೆ ಹೋದರೂ ಬಂದಮೇಲೆ ಎಲ್ಲ ದಿನದ ಪ್ರಜಾವಾಣಿಯನ್ನು ಬುಡದಿಂದ ಕೊನೆ ತನಕ ಓದಿದ ಮೇಲೆಯೇ ರದ್ದಿಗೆ ಹಾಕುವುದು. ಎಷ್ಟೇ ದಿನಗಳಾದರೂ ಸರಿ. ಪ್ರಜಾವಾಣಿ ಓದದೇ ಇದ್ದರೆ ಏನೋ ಕಳೆದುಕೊಂಡ ಭಾವ. ಪತ್ರಿಕೆ ಹರವಿ ಕುಳಿತಾಗ  ನಮ್ಮತ್ತೆ `ಪರೀಕ್ಷೆಗೆ ತಯಾರಿ ಜೋರು’ ಎಂದು ನನ್ನನ್ನು ತಮಾಷೆ ಮಾಡುತ್ತಾರೆ. ಹಿಂದೆ ನಾನು ಮಾವನನ್ನು ತಮಾಷೆ ಮಾಡಿದ್ದನ್ನೆಲ್ಲವನ್ನೂ ಪ್ರಾಂಜಲ ಮನಸ್ಸಿನಿಂದ ಹಿಂದಕ್ಕೆ ಪಡೆಯುವೆ.

     ಪ್ರಜಾವಾಣಿಯಲ್ಲಿ ಬರುವ ಲೇಖನಗಳು ಮೌಲಿಕವಾಗಿರುತ್ತವೆ. ಬೇರೆ ಯಾವ ಪತ್ರಿಕೆ ಓದಿದರೂ ಲಭಿಸದ ಸುಖ ಪ್ರಜಾವಾಣಿ ಓದಿನಿಂದ ನನಗೆ ಲಭಿಸುತ್ತದೆ. ಕ್ರಿಕೆಟ್ ಅಂದರೆ ನನಗೆ ತುಸು ಒಲವು ಜಾಸ್ತಿ. ಪ್ರಜಾವಾಣಿಯಲ್ಲಿ ಬರುವ ಯಾವುದೇ ಆಟದ ವಿವರಣೆ ಅದರಲ್ಲೂ ಕ್ರಿಕೆಟ್ ಆಟದ ವಿವರ ಓದುವುದು ಬಲು ಪ್ರಿಯ. ಪತ್ರಿಕೆ ಹಿಡಿದು ಮೊದಲು ಪತ್ರಿಕೆಯ ಕೊನೇ ಪುಟವನ್ನೇ ಓದುವುದು. ಆಮೇಲೆಯೇ ಮುಖಪುಟದತ್ತ ಗಮನಹರಿಸುವುದು.  ಪ್ರಜಾವಾಣಿಯ ನನ್ನ ನಂಟು ಬೆಳ್ಳಿಹಬ್ಬದತ್ತ ದಾಪುಗಾಲಿಡುತ್ತ ಸಾಗುತ್ತಿದೆ ಎಂದು ತಿಳಿಸಲು ನನಗೆ ಬಲು ಹೆಮ್ಮೆಯಾಗುತ್ತಿದೆ.

Read Full Post »

ಮಳೆ ಎಂಬ ಸೋಜಿಗ


ಮಳೆ. ಈ ಎರಡಕ್ಷರ ಕೇಳಲು ಎಷ್ಟು ಚಂದ, ನೋಡಲೂ ಅಷ್ಟೇ ಅಂದ. ಜಡಿಮಳೆ ಸುರಿಯುತ್ತಿರುವುದನ್ನು ನೋಡುತ್ತ ಕೂರುವುದೇ ಸೊಗಸು. ಆಕಾಶವೇ ಸುರಿದು ಬೀಳುತ್ತಿದೆಯೇನೋ ಎಂಬ ಭಾವ. ಮಳೆ ಬೀಳುವ ಪ್ರದೇಶದಲ್ಲೇ ನನ್ನ ಬಾಲ್ಯ, ಯೌವನದ ಒಟ್ಟು ೧೮ ವರ್ಷ ಕಳೆದದ್ದು. ರಾತ್ರಿ ವಿದ್ಯುತ್ ಇಲ್ಲದೆ ಜೋರಾದ ಮಳೆ ಬೀಳುವ ಸದ್ದು ಕೇಳುತ್ತ ಕೂರುವುದು ಮುದ ನೀಡುತ್ತಿತ್ತು. ಮನೆಯಲ್ಲಿ ನಾವು ಅಣ್ಣ ತಮ್ಮ ಅಕ್ಕ ತಂಗಿ ಎಂದು ೮ ಮಕ್ಕಳಿದ್ದೆವು. ಅಕ್ಕಂದಿರೊಡನೆ ಅಂಟಿಕೊಂಡು ಕೂರುತ್ತ, ಗುಡುಗು ಸಿಡಿಲಿನ ಆರ್ಭಟದಿಂದ ಕೂಡಿದ ರಾತ್ರಿ, ಮಳೆ ನೋಡುವುದೇ ಒಂದು ರೋಮಾಂಚನ ಅನುಭವ.
ಶಾಲೆಯಿಂದ ಮನೆಗೆ ಬರುವಾಗ ಮಳೆಸಿಕ್ಕರೆ ನನಗೆ ಬಲು ಆನಂದ. ಕಾಲಿನಿಂದ ನೀರನ್ನು ಝಾಡಿಸುತ್ತ, ಕೊಡೆಯನ್ನು ಆಗಾಗ ತಲೆಯಿಂದ ಹೊರಗೆ ಹಿಡಿದು ನೆನೆಯುತ್ತ ಒದ್ದೆಯಾಗಿ ಮನೆಗೆ ಬಂದಾಗ, ಅಮ್ಮ `ಓ ಚಂಡಿ ಆದಿರಾ’ ಎಂದು ತಲೆ ಒರೆಸಿ ಕಾಳಜಿ ತೋರುವ ಘಳಿಗೆ ಅಮೂಲ್ಯವಾದದ್ದು. ತಿನ್ನಲು ಹಲಸಿನ ಹಪ್ಪಳ ಸುಟ್ಟು ಅದಕ್ಕೆ ತೆಂಗಿನ ಎಣ್ಣೆ ಸವರಿ ಕೊಡುತ್ತಿದ್ದರು. ಅದನ್ನು ತಿನ್ನುತ್ತ ಮತ್ತೂ ಮಳೆ ಬೀಳುತ್ತಿರುವುದನ್ನೇ ನೋಡುತ್ತ ಕೂರುತ್ತಿದ್ದೆವು. ಇತ್ತ ಅಮ್ಮ ನಮ್ಮ ಚೀಲದೊಳಗಿಂದ ಯಾವ ಪುಸ್ತಕ ಒದ್ದೆಯಾಗಿದೆ  ಎಂದು ನೋಡಿ ಅದನ್ನು ಒಲೆಕಟ್ಟೆಯಲ್ಲಿ ಒಣಗಲು ಹರಗಿ ಇಡುತ್ತಿದ್ದಳು. ಪುಸ್ತಕ ಒಣಗಿದಮೇಲೆ ಹೊಗೆ ವಾಸನೆಯೂ ಒಂಥರ ಪರಿಮಳವಾಗಿ ನನಗೆ ಮುದ ಕೊಡುತ್ತಿತ್ತು. ಆದರೆ ಶಾಲೆಗೆ ಹೋಗುವಾಗ ಮಳೆ ಬಂದರೆ ಮಾತ್ರ ಆ ಕಷ್ಟ ಯಾರಿಗೂ ಬೇಡ. ಅದೊಂದು ಹಿಂಸೆಯೇ. ಎಲಿಮೆಂಟರಿ ಶಾಲೆಗೆ ಒಂದು ಮೈಲಿ ದೂರ ನಡೆಯಬೇಕಿತ್ತು. ಪ್ರೌಢಶಾಲೆ, ಕಾಲೇಜಿಗೆ ೨ ಮೈಲಿ ನಡೆದು ಹೋಗಬೇಕಿತ್ತು. ಉದ್ದ ಲಂಗ ಬೇರೆ. ಅದನ್ನು ಎತ್ತಿ ಹಿಡಿದು, ಛತ್ರಿ ಹಿಡಿದುಕೊಂಡು ಒದ್ದೆಯಾಗದಂತೆ ಚೀಲ ಕಾಪಾಡುತ್ತ ನಡೆಯುವುದು ಒಂದು ನಮೂನೆ ಸರ್ಕಸ್ಸೇ.  ಅವೆಲ್ಲ ಈಗ ನೆನಪು ಮಾತ್ರ. ಈಗ ಮಕ್ಕಳು ಯಾರೂ ನಡೆದು ಶಾಲೆಗೆ ಹೋಗುವುದೇ ಇಲ್ಲ. ಬಸ್ ಇಲ್ಲವೇ ರಿಕ್ಷಾದಲ್ಲಿ ಹೋಗುತ್ತಾರೆ.
ಈಗ ಅಂಥ ಮಳೆ ಬೀಳದ ಮೈಸೂರಲ್ಲಿ ವಾಸವಾಗಿದ್ದೇನೆ. ಮಳೆ ಎಷ್ಟು ಬಂದರೂ ನನಗೆ ಸಾಲಲೊಲ್ಲದು. ಇಲ್ಲಿ ಒಮ್ಮೆ ಮಳೆ ಬರುವಾಗ ಹೆಚ್ಚೆಂದರೆ ಕೇವಲ ಕಾಲುಗಂಟೆ ಮಾತ್ರ ಬರುತ್ತದಷ್ಟೆ. ನಮ್ಮತ್ತೆ ಮಳೆ ಹನಿ ಹಾಕಿದ ಕೂಡಲೇ ಒಳ್ಳೆ ಮಳೆ ಎನ್ನುವುದು, ನಾನಾಗ ಇದು ಮಳೆಯೇ ಅಲ್ಲ ಎಂದು ವಾದ ಮಾಡುವುದು ನಡೆದೇ ಇದೆ.
ಇತ್ತೀಚೆಗೆ ತವರಿಗೆ ಹೋಗಿದ್ದೆ. ಆ ದಿನ ರಾತ್ರಿ ಜಡಿಮಳೆ ನನ್ನಿಷ್ಟದಂಥ ಮಳೆ ಸುರಿಯಿತು. ನಾನೊಬ್ಬಳೇ ಜಗಲಿಯಲ್ಲಿ ಕುಳಿತು ಮಳೆಯ ಸದ್ದನ್ನು ಆಲಿಸಿದೆ. ನೋಡಿದ್ದು ಸಾಲದೆಂಬಂತೆ ಮೊಬೈಲಿನಲ್ಲಿ ಆ ಸದ್ದನ್ನು ಹಿಡಿದಿಟ್ಟುಕೊಂಡು ತೃಪ್ತಿಪಡಲು ನೋಡಿದೆ! ನಾನಲ್ಲಿದ್ದಾಗ ಹಗಲು ಕೂಡ ಮಳೆ ಸುರಿಯಿತು. ಆಗ ಡಿಜಿಟಲ್ ಕ್ಯಾಮೆರಾದಲ್ಲಿ ಮಳೆಯನ್ನು ಸೆರೆಹಿಡಿದೆ. ಅಣ್ಣ, ತಮ್ಮನ ಮಕ್ಕಳು ಕಾಗದದ ದೋಣಿ ಮಾಡಿ ಮಳೆ ಬರುವಾಗ ಕೊಡೆ ಹಿಡಿದು ಹೋಗಿ ಅದನ್ನು ನೀರಲ್ಲಿ ಬಿಡುತ್ತ, ಅದರ ಹಿಂದೆಯೇ ನೀರಿನಲ್ಲಿ ಹೋಗಿ ಆಟ ಆಡುತ್ತಿದ್ದರು. ಅವರನ್ನು ತನ್ಮಯತೆಯಿಂದ ನೋಡಿ ಆನಂದಿಸಿದೆ. ನನಗೆ ಇನ್ನು ಇಂಥ ಬಾಲ್ಯ ಇಲ್ಲವಲ್ಲ ಎಂದೆನಿಸಿತು.  ಪುನರ್ಜನ್ಮ ಎಂಬುದಿದ್ದರೆ ನನಗೆ ಬಾಲ್ಯ ಮಾತ್ರ ಇರಲಿ ಎಂದುಕೊಂಡೆ. `ಮಳೆಯಲ್ಲಿ ಹೋಗಬೇಡ ಎಂದರೆ ಕೇಳುವುದಿಲ್ಲವಲ್ಲ, ಮೊನ್ನೆ ತಾನೆ ಜ್ವರ ಬಂದು ಬಿಟ್ಟದ್ದಷ್ಟೆ’ ಎಂದು ಹೆತ್ತವರು ಆ ಮಕ್ಕಳಿಗೆ ಬೈದರು. ಅದೆಲ್ಲ ಅವರಿಗೆ ನಾಟಲಿಲ್ಲ. ಅವರ ಪಾಡಿಗೆ ಅವರು ಮಳೆಯಲ್ಲಿ ಆಡುತ್ತಲೇ ಇದ್ದರು. ಭಲೇ ಮಕ್ಕಳಾ. ಆಡಿ. ಎಷ್ಟು ಆಗುತ್ತೋ ಅಷ್ಟೂ ಮಳೆಯಲ್ಲಿ ಆಟ ಆಡಿ. ಮುಂದೆ ಬೇಕೆಂದರೂ ಇಂಥ ಬಾಲ್ಯ ಸಿಗುವುದಿಲ್ಲ. ಈಗಲೇ ಅದನ್ನು ಅನುಭವಿಸಬೇಕು ಎಂದು ಮನದಲ್ಲೇ ಮಕ್ಕಳಿಗೆ ಹೇಳಿದೆ. ಬಹಿರಂಗವಾಗಿಯೇ ಹೇಳಿದರೆ ಇವಳಿಗೇನಾಗಿದೆ ಎಂದು ನನ್ನ ಒಂದು ನಮೂನೆ ನೋಡಿಯಾರು! ಮಳೆ, ಸಮುದ್ರ, ಆಕಾಶ, ಪ್ರಕೃತಿ, ಬೆಟ್ಟ, ಗುಡ್ಡ ಎಲ್ಲವೂ ಎಷ್ಟು ಸಲ ನೋಡಿದರೂ ಬೇಸರ ಬರುವುದಿಲ್ಲ. ಅವೆಲ್ಲ ದೃಶ್ಯ ಕಾವ್ಯ.  ನೋಡಿದಷ್ಟು ತನ್ಮಯತೆ ತರುತ್ತದೆ.

ಇದು ೧-೧-೨೦೧೧ರ ವಿಜಯಕರ್ನಾಟಕ ಲವಲವಿಕೆಯಲ್ಲಿ ಪ್ರಕಟಗೊಂಡಿದೆ.

 

ದೋಣಿ ಬಿಡಲು ನಾವು ತಯಾರು

ಗೊರಬೆಧಾರಿಗಳು

Read Full Post »