ಸಂಕ್ಷಿಪ್ತ ಕಥೆ: ಬಾಲಾಂಗದ ಹಾಗೂ ನೀಲಾಂಗದ ಮಾಳವ ರಾಜ್ಯದ ಮಣಿವರ್ಮ ರಾಜನ ಮಕ್ಕಳು. ಒಂದು ದಿನ ಅವರು ತಂದೆಯ ಅಪ್ಪಣೆಯನ್ನು ಪಡೆದು ಬೇಟೆಗೆ ತೆರಳುವರು. ನೀಲಾಂಗದನು ಹರಿಣವನ್ನು ಬೆನ್ನಟ್ಟುತ್ತಾ ಅಣ್ಣನಿಂದ ದೂರವಾಗುವನು. ಅದೇ ಸಮಯದಲ್ಲಿ ಆ ಕಾಡಿನಲ್ಲಿ ವಜ್ರಕೇತನೆಂಬ ಕಿರಾತನು ತನ್ನವರನ್ನೆಲ್ಲಾ ಒಡಗೂಡಿಕೊಂಡು ಬೇಟೆಗೆ ತೆರಳುವನು. ಮುಂದೆ ನೀಲಾಂಗದನಿಗೂ ಕಿರಾತನಿಗೂ ಜಗಳವುಂಟಾಗಿ ಅವರಿಬ್ಬರ ನಡುವೆ ಯುದ್ಧ ನಡೆಯುತ್ತದೆ. ಯುದ್ಧದಲ್ಲಿ ನೀಲಾಂಗದನಿಗೆ ಸೋಲು ಉಂಟಾಗಿ ಅವನು ಕಿರಾತ ಪಡೆಯ ಬಂಧನದಲ್ಲಿ ಇಡಲ್ಪಡುವನು. ಇತ್ತ ಬಾಲಾಂಗದನು ನೀಲಾಂಗದನನ್ನು ಹುಡುಕುತ್ತಾ ಮುಂದೆ ನಡೆಯುವನು. ಮುಂದೆ ಅವನು ದಾರಿಯಲ್ಲಿ ಸುಖರ್ಧಮ ಎಂಬ ಮುನಿಯನ್ನು ಭೇಟಿಯಾಗುವನು. ಅವರು ಅವನ ತಮ್ಮನ ವಿಚಾರವನ್ನೆಲ್ಲಾ ತಿಳಿಸಿ ತನ್ನ ಬಳಿ ೧೨ ದಿನಗಳ ಕಾಲ ಇದ್ದರೆ ತಾನು ಕಿರಾತನನ್ನು ಸೋಲಿಸಲು ಬೇಕಾದ ಎಲ್ಲಾ ವಿದ್ಯೆಗಳನ್ನು ಕಲಿಸುತ್ತೇನೆಂದು ಹೇಳುತ್ತಾರೆ. ಸುಖರ್ದಮರ ಮಗಳು ನಳಿನಿಗೆ ಬಾಲಾಂಗದನ ಮೇಲೆ ಪ್ರೀತಿ ಹುಟ್ಟುತ್ತದೆ. ಪಾಂಡ್ಯದೇಶದ ರಾಜ ಚಂದ್ರಕೇತನು ವಜ್ರಕೇತನ ಭಾವ ಹಾಗೂ ಸುಖರ್ಧಮರ ಶಿಷ್ಯ. ಅವನಿಗೆ ನಡೆದ ವಿಷಯವನ್ನೆಲ್ಲಾ ತಿಳಿದಾಗ ಬಾಲಾಂಗದನ ಮೇಲೆ ಕೋಪ ಹುಟ್ಟುತ್ತದೆ. ಹಾಗಾಗಿ ಅವನು ಸುಖರ್ಧಮರ ಆಶ್ರಮಕ್ಕೆ ಹೋಗಿ ಬಾಲಾಂಗದನೊಡನೆ ಯುದ್ಧ ಮಾಡುತ್ತಾನೆ. ಇದನ್ನು ತಿಳಿದ ನಳಿನಿಯು ತಂದೆಯ ಬಳಿ ಇದ್ದ ಭಸ್ಮವನ್ನು ಚಂದ್ರಕೇತನ ಮೇಲೆ ಚೆಲ್ಲಿ ಅವನು ಸೋಲುವ ಹಾಗೆ ಮಾಡುತ್ತಾಳೆ. ನಳಿನಿಗೆ ಬಾಲಾಂಗದನ ಮೇಲೆ ಉಂಟಾದ ಬಯಕೆಯನ್ನು ಅವಳು ಬಾಲಾಂಗದನು ಆಶ್ರಮದಿಂದ ಹೊರಡುವ ಸಮಯಕ್ಕೆ ತಿಳಿಸುತ್ತಾಳೆ. ಅವಳು ಎಷ್ಟು ಒತ್ತಾಯಿಸಿದರೂ ಅವನು ಒಪ್ಪದಿದ್ದ ಕಾರಣ ಅವಳು ಅವನಿಗೆ ರಣಕ್ಷೇತ್ರದಲ್ಲಿ ಯಾರನ್ನು ನಿನಗೆ ಗೆಲ್ಲಲು ಆಗುವುದಿಲ್ಲವೋ ಅವಳನ್ನೇ ಮದುವೆಯಾಗೆಂದು ಶಾಪ ಕೊಡುತ್ತಾಳೆ. ಇತ್ತ ಕಿರಾತನಿಲ್ಲದ ಸಮಯದಲ್ಲಿ ಕಿರಾತನ ಹೆಂಡತಿ(ಕುಮುದಿನಿ)ಯು ನೀಲಾಂಗದನನ್ನು ತನ್ನನ್ನು ಸುಖ ಕೊಡಬೇಕೆಂದು ಒತ್ತಾಯಿಸುತ್ತಾಳೆ.ಆದರೆ ನೀಲಾಂಗದನು ಒಪ್ಪುವುದಿಲ್ಲ. ಆ ಸಮಯಕ್ಕೆ ಕಿರಾತನು ಬಂದಾಗ ಕುಮುದಿನಿಯು ನೀಲಾಂಗದನ ಮೇಲೆ ಅಪವಾದ ಹೊರಿಸುತ್ತಾಳೆ.ಕಿರಾತನು ಕೋಪದಿಂದ ನೀಲಾಂಗದನನ್ನು ಕೊಲ್ಲಲು ಹೊರಟಾಗ ಬಾಲಾಂಗದನು ಅಲ್ಲಿಗೆ ಬಂದು ಅವನಿಗೂ ಕಿರಾತನಿಗೂ ಯುದ್ಧ ನಡೆದು ಕಿರಾತನು ಸಾಯುವನು. ಮಣಿಮಧುರ ರಾಜ್ಯದ ರಕ್ತಾಕ್ಷ ಎಂಬ ರಾಕ್ಷಸನು ಅಲ್ಲಿನ ಜನರಿಗೆ ಪ್ರತಿ ದಿನ ಒಂದು ಬಂಡಿ ಅನ್ನ ಹಾಗು ಒಬ್ಬಆಳನ್ನು ಕಳುಹಿಸಿಕೊಡಬೇಕೆಂದು ಆದೇಶಿಸುತ್ತಾನೆ. ಇದನ್ನು ತಿಳಿದ ಬಾಲಾಂಗದ,ನೀಲಾಂಗದರು ಅವನನ್ನು ಶಿಕ್ಷಿಸಲು ಮುಂದಾಗಿ ಅವನನ್ನು ಕೊಲ್ಲುತ್ತಾರೆ. ಮುಂದೆ ಅವರು ಒಂದು ಸ್ತ್ರೀ ರಾಜ್ಯ ಪ್ರವೇಶಿಸುತ್ತಾರೆ.ಅಲ್ಲಿನ ರಾಣಿ ಪುರುಷದ್ವೇಷಿ ಎಂದು ತಿಳಿದು ಅವಳ ಸೊಕ್ಕಡಗಿಸಬೇಕೆಂದು ನಿರ್ಧರಿಸುವರು. ನೀಲಾಂಗದನು ಅಲ್ಲಿನ ಮಂತ್ರಿ ಕುಮುದಿನಿಯೊಡನೆಯೂ, ಬಾಲಾಂಗದನು ಅಲ್ಲಿನ ರಾಣಿ ಕನಕಮಾಲಿನಿಯೊಡನೆ ಯುದ್ಧ ಮಾಡುವನು. ಎಷ್ಟು ಸಮಯವಾದರೂ ಬಾಲಾಂಗದ – ಕನಕಮಾಲಿನಿಯರ ಯುದ್ಧ ನಿರ್ಣಯವಾಗದಿದ್ದಾಗ ಕನಕಮಾಲಿನಿಯ ತಾಯಿಯಾದ ಯೋಗಿಣಿಯು ಬಂದು ಯುದ್ಧವನ್ನು ನಿಲ್ಲಿಸಿ, ಬಾಲಾಂಗದನು ಕನಕಮಾಲಿನಿಗೆ ಸೂಕ್ತ ವರನೆಂದೂ, ಅವನು ಗುಣವಂತನೆಂದೂ ಹೇಳುವಳು. ಮುಂದೆ ನೀಲಾಂಗದನು ಕುಮುದಿನಿಯನ್ನು, ಬಾಲಾಂಗದನು ಕನಕಮಾಲಿನಿಯನ್ನು ಮದುವೆಯಾಗುವರು.
ಬಾಲಾಂಗದ – ಅಮ್ಮುಂಜೆ ಮೋಹನ, ನೀಲಾಂಗದ – ನವೀನ್ ಶೆಟ್ಟಿ, ವಜ್ರಕೇತ – ಪದ್ಮನಾಭ ಶೆಟ್ಟಿ, ಕಿರಾತ ಪಡೆ – ಗೌತಮ, ಕಾರ್ತೀಕ , ಸುಖರ್ಧಮ – ಶಂಭಯ್ಯ ಭಟ್ , ಚಂದ್ರಕೇತ – ಕುಂಬ್ಳೆ ಶ್ರೀಧರ್ ರಾವ್ , ನಳಿನಿ – ಶರತ್ ಶೆಟ್ಟಿ, ಕುಮುದಿನಿ – ಕುಸುಮೋದರ, ರಕ್ತಾಕ್ಷ – ಶಿವಪ್ರಸಾದ ಭಟ್ , ಮಂತ್ರಿ – ಅರಳ ಗಣೇಶ ಶೆಟ್ಟಿ, ಯೋಗಿಣಿ – ವಸಂತ ಗೌಡ, ಕನಕಮಾಲಿನಿ – ರಮೇಶ್ ಗೌಡ, ಕುಮುದಿನಿ(ಮಂತ್ರಿ)- ಪುತ್ತೂರು ಗಂಗಾಧರ, ಹಾಸ್ಯ – ಬಾಲಕೃಷ್ಣ ಮಣಿಯಾಣಿ, ಭಾಗವತ – ಹೊಸಮೂಲೆ ಗಣೇಶ ಭಟ್, ಮದ್ದಳೆ – ಪದ್ಯಾಣ ಜಯರಾಮ ಭಟ್, ಚೆಂಡೆ – ದೇಲಂತಮಜಲು ಸುಬ್ರಹ್ಮಣ್ಯ ಭಟ್. ಇವರೆಲ್ಲರ ಸಹಕಾರದಿಂದ ಗಾನಭಾರತಿ ರಮಾಭಾಯಿ ಗೋವಿಂದರಾವ್ ಬಯಲು ರಂಗಮಂದಿರದಲ್ಲಿ ತಾರೀಕು ೧೬-೯-೨೦೧೪ರಂದು ಯಕ್ಷಗಾನ ಕಾರ್ಯಕ್ರಮ ಸೊಗಸಾಗಿ ನಡೆಯಿತು. ರಂಗಮಂದಿರ ಉದ್ಘಾಟನೆಗೊಂಡಬಳಿಕ ಅಲ್ಲಿ ನಡೆದ ಪ್ರಥಮ ಕಾರ್ಯಕ್ರಮವಿದು. ಮೊದಲಿಗೆ ಪೂರ್ವರಂಗ ಕಾರ್ಯಕ್ರಮವೂ ಅಲ್ಪ ಸಮಯದಲ್ಲೇ ಅಚ್ಚುಕಟ್ಟಾಗಿ ಮೂಡಿ ಬಂತು.
ಈ ವರದಿ ಬರೆದದ್ದು ಅಕ್ಷಯಕೃಷ್ಣ