ಶ್ರೀಮತಿ ಸಿ. ಎನ್.ಮುಕ್ತಾ ಲೇಖಕಿ ಹಾಗೂ ಸುಪ್ರಸಿದ್ಧ ಕಾದಂಬರಿಕಾರರು. ಅವರ ೮೦ ಕಾದಂಬರಿಗಳು ಹಾಗೂ ೧೧ ಕಥಾಸಂಕಲನಗಳು ಈಗಾಗಲೇ ಪ್ರಕಟವಾಗಿವೆ. ಅವರು ತಮ್ಮ ತಾಯಿ ಕಮಲಮ್ಮ ನರಸಿಂಹಮೂರ್ತಿ ಅವರ ನೆನಪಿನಲ್ಲಿ ಪ್ರತೀ ವರ್ಷ ಎರಡು ಪ್ರೌಢಶಾಲೆಗಳಲ್ಲಿ ರಸಪ್ರಶ್ನೆ ಸ್ಪರ್ಧೆ ಏರ್ಪಡಿಸುತ್ತಾರೆ. ಕಳೆದ ಎಂಟು ವರ್ಷಗಳಿಂದ ತಪ್ಪದೆ ಈ ಮಹತ್ಕಾರ್ಯವನ್ನು ನಡೆಸಿಕೊಂಡು ಬರುತ್ತಿದ್ದಾರೆ. ಸರ್ಕಾರೀ, ಖಾಸಗೀ ಪ್ರೌಢಶಾಲೆಯ ಅದರಲ್ಲೂ ಗ್ರಾಮೀಣಭಾಗದ ಮಕ್ಕಳಿಗಾಗಿ ರಸಪ್ರಶ್ನೆ ಸ್ಪರ್ಧೆ ಏರ್ಪಡಿಸುತ್ತಾರೆ. ನಮ್ಮ ನಾಡುನುಡಿ, ಕನ್ನಡದ ಪ್ರಸಿದ್ಧ ಲೇಖಕ ಲೇಖಕಿಯರ ಪರಿಚಯ, ಸಿನೆಮಾ, ರಾಜಕೀಯ, ಸಾಮಾನ್ಯ ಜ್ಞಾನ ಇತ್ಯಾದಿ ಮಿಶ್ರ ವಿಷಯಗಳನ್ನೊಳಗೊಂಡ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಒಂದು ಪ್ರೌಢಶಾಲೆಯ ೮ರಿಂದ ೧೦ನೇ ತರಗತಿಗಳ ಮಕ್ಕಳಲ್ಲಿ ೪ ತಂಡ ರಚಿಸಿ, ಪ್ರತಿಯೊಂದು ತಂಡದಲ್ಲೂ ನಾಲ್ಕು ಮಕ್ಕಳಂತೆ ಒಟ್ಟು ೧೬ ಮಕ್ಕಳಿಗೆ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶ. ನಾಲ್ಕೂ ತಂಡಕ್ಕೂ ಬಹುಮಾನ ಕೊಡುತ್ತಾರೆ. ಶಾಲೆಯ ಬಾಕಿ ಉಳಿದ ಮಕ್ಕಳಿಗೆ ೨೦ ಪ್ರಶ್ನೆಗಳನ್ನು ಕೇಳಿ ಸರಿ ಉತ್ತರಿಸಿದವರಿಗೆ ಅಲ್ಲೇ ಬಹುಮಾನವಾಗಿ ಪೆನ್ನು, ಪುಸ್ತಕ ಕೊಡಲಾಗುತ್ತದೆ.
ಇಲ್ಲಿ ಬಹುಮಾನ ಮುಖ್ಯವಲ್ಲ. ಸ್ಪರ್ಧೆಯಲ್ಲಿ ಭಾಗವಹಿಸುವುದು ಮುಖ್ಯ ಎಂದು ಮಕ್ಕಳಿಗೆ ಮನವರಿಕೆ ಮಾಡಲಾಗುತ್ತದೆ. ಮಕ್ಕಳ ಸಾಮಾನ್ಯಜ್ಞಾನವನ್ನು ವೃದ್ಧಿಸುವುದು, ನಮ್ಮ ನಾಡುನುಡಿ ಸಂಸ್ಕೃತಿಯ ಬಗ್ಗೆ ಅರಿವು, ಕನ್ನಡದ ಕಂಪನ್ನು ಪ್ರಸರಿಸುವುದು ಈ ರಸಪ್ರಶ್ನೆ ಸ್ಪರ್ಧೆಯ ಮುಖ್ಯ ಉದ್ದೇಶ ಎಂದು ಮುಕ್ತಾ ಹೇಳುತ್ತಾರೆ.
ವಿಜಯನಗರ ಎರಡನೇ ಹಂತದಲ್ಲಿರುವ ಸಿದ್ಧೇಶ್ವರ ಪ್ರೌಢಶಾಲೆಯಲ್ಲಿ ೩೦-೧೧-೨೦೧೬ರಂದು ಮಧ್ಯಾಹ್ನ ೨.೩೦ಕ್ಕೆ ನಡೆದ ರಸಪ್ರಶ್ನೆ ಸ್ಫರ್ಧೆಯಲ್ಲಿ ೧೬ ಮಂದಿ ಮಕ್ಕಳು ಭಾಗವಹಿಸಿ ಬಹುಮಾನ ಪಡೆದರು. ದಸರಾ ಉದ್ಘಾಟನೆ ಮಾಡಿದವರು ಯಾರೆಂಬ ಸಾಮಾನ್ಯ ಜ್ಞಾನದ ಪ್ರಶ್ನೆಗೆ ಉತ್ತರ ಗೊತ್ತಿರದಿದ್ದರೂ ಸಿನೆಮಾಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಮಕ್ಕಳು ಥಟ್ಟನೆ ಉತ್ತರಿಸಿದ್ದರು. ಸಿನೆಮಾ ಮಾಧ್ಯಮ ಎಷ್ಟು ಪ್ರಭಾವಶಾಲಿ ಮಾಧ್ಯಮವೆಂದು ಇದರಿಂದಲೇ ತಿಳಿಯಬಹುದು. ಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳಿಗೆ ಬಹುಮಾನ ವಿತರಿಸಿ, ಮಕ್ಕಳೆಲ್ಲರಿಗೂ ಚಾಕಲೆಟ್ ಹಂಚಿದರು.
ಈ ಕಾರ್ಯಕ್ರಮದಲ್ಲಿ ಮೊದಲಿಗೆ ಶಾಲಾ ಶಿಕ್ಷಕರಾದ ಮುರಳೀಧರರು ಪ್ರಾರ್ಥನೆ ಹಾಡಿದರು. ಸಂಗಪ್ಪನವರು ಮುಖ್ಯ ಅತಿಥಿಗಳ ಪರಿಚಯ ಭಾಷಣ ಮಾಡಿದರು. ಸಿ.ಎನ್. ಮುಕ್ತಾ ಸ್ಪರ್ಧೆಯನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶಾಲಾ ಮುಖ್ಯೋಪಾಧ್ಯಾಯರಾದ ಚಂದ್ರಶೇಖರ್ ಹಾಗೂ ಶಾಲಾ ಶಿಕ್ಷಕರೂ ಸಾಹಿತಿಗಳೂ ಆದ ಜಯಪ್ಪ ಹೊನ್ನಾಳಿಯವರನ್ನು ಮುಕ್ತಾ ಸನ್ಮಾನಿಸಿದರು. ರಾಜೇಶ್ವರಿ ಭಾರತಿ ರಸಪ್ರಶ್ನೆ ಸ್ಪರ್ಧೆ ನಡೆಸಿಕೊಟ್ಟರು. ಮತ್ತು ನಿರೂಪಕರಾಗಿ ನಾಗರತ್ನ ಕಾರ್ಯಕ್ರಮವನ್ನು ಚಂದಗಾಣಿಸಿದರು.
೭-೧೨-೨೦೧೬ರಂದು ಮಧ್ಯಾಹ್ನ ೨.೩೦ ಗಂಟೆಗೆ ಕಮಲಮ್ಮ ನರಸಿಂಹಮೂರ್ತಿ ನೆನಪಿನ ರಸಪ್ರಶ್ನೆ ಸ್ಪರ್ಧೆ ನಡೆಯಿತು. ಮಕ್ಕಳು ಉತ್ಸಾಹದಿಂದ ಭಾಗವಹಿಸಿದರು.
ಎರಡೂ ರಸಪ್ರಶ್ನೆ ಕಾರ್ಯಕ್ರಮದಲ್ಲಿ ನಾನೂ ಭಾಗವಹಿಸಿದ್ದೆ. ರೈಲ್ವೇ ವರ್ಕ್ ಶಾಪ್ ಶಾಲೆಯಲ್ಲಿ ಮಕ್ಕಳೊಡನೆ ಎರಡು ಮಾತಾಡುವ ಅವಕಾಶ ನನಗೆ ಲಭಿಸಿತ್ತು. ಮನೆಯಲ್ಲಿ ನಾವು ತಾಯಿಗೆ ನಮ್ಮಿಂದಾದ ಸಹಾಯ ಮಾಡೋಣ. ಯಾರೆಲ್ಲ ಮನೆಯಲ್ಲಿ ನೀವು ತಿಂದ ತಟ್ಟೆ ಲೋಟಗಳನ್ನು ನೀವೇ ತೊಳೆದುಕೊಳ್ಳುತ್ತೀರಿ? ಎಂಬ ಪ್ರಶ್ನೆ ಕೇಳಿದೆ. ಆಗ ಹತ್ತು- ಇಪ್ಪತ್ತು ಮಕ್ಕಳು ಕೈ ಎತ್ತಿದರು. ನೋಡಿ ಖುಷಿ ಆಯಿತು. ಕೈ ಎತ್ತದ ಮಕ್ಕಳಿಗೆ ಇವತ್ತಿನಿಂದ ನಿಮ್ಮ ತಟ್ಟೆ ಲೋಟ ತೊಳೆದುಕೊಳ್ಳುತ್ತೀರಲ್ಲ ಎಂದು ಕೇಳಿದೆ. ತೊಳೆದುಕೊಳ್ಳುತ್ತೇವೆ ಎಂದು ಒಕ್ಕೊರಲಿನಿಂದ ಹೇಳಿದರು. ಶಾಲಾ ಮುಖೋಪಾಧ್ಯಾಯಿನಿ ಪದ್ಮಾಂಬ ಮಾತಾಡುತ್ತ, ‘ ಈ ಕಾರ್ಯಕ್ರಮದಿಂದ ನಾವು ಸ್ಫೂರ್ತಿಗೊಂಡು ತಿಂಗಳಿಗೊಮ್ಮೆಯಾದರೂ ಮಕ್ಕಳಿಗೆ ರಸಪ್ರಶ್ನೆ ಏರ್ಪಡಿಸುತ್ತೇವೆ. ಆಗ ಮಕ್ಕಳ ಸಾಮಾನ್ಯಜ್ಞಾನ ಬೆಳೆಯುತ್ತದೆ’ ಎಂದರು. ಒಟ್ಟು ಎರಡು ಗಂಟೆ ಮಕ್ಕಳೊಂದಿಗೆ ಕಾಲ ಕಳೆಯುವ ಅವಕಾಶ ಲಭಿಸಿತ್ತು.