Feeds:
ಲೇಖನಗಳು
ಟಿಪ್ಪಣಿಗಳು

Archive for the ‘ಪ್ರವಾಸ ಕಥನ’ Category

ಹರಿದ್ವಾರ ನಗರ ಪ್ರದಕ್ಷಿಣೆ
ಬೆಳಗ್ಗೆ (೨೩-೯-೨೦೧೬) ಬೇಗ ಏಳುವ ಸಂದರ್ಭ ಇಲ್ಲದೆ ಇದ್ದರೂ ಆರೂವರೆಗೆ ಎಚ್ಚರ ಆಯಿತು. ಎದ್ದು ನಿತ್ಯವಿಧಿ ಪೂರೈಸಿ ನಾನೂ ಹೇಮಮಾಲಾ ಹೊರಗೆ ಹೋದೆವು. ಹೇಮಮಾಲಾ ಅವರು ಚಹಾ ಕುಡಿದರು. ಅಲ್ಲಿ ರಸ್ಕ್ ತೆಗೆದುಕೊಂಡು ಬಂದು ಎಲ್ಲರಿಗೂ ಹಂಚಿದರು. ನಮ್ಮ ಇಬ್ಬರು ಅನ್ನಪೂರ್ಣೆಯರು ಚಿತ್ರಾನ್ನ ಮಾಡಿದ್ದನ್ನು ತಿಂದು ಕೋಣೆಗೆ ಬಂದು ಕುಳಿತು ಹರಟಿ ಕಾಲ ಕಳೆದೆವು.
ಬೆಳಗ್ಗೆ ೧೧ ಗಂಟೆಗೆ ಎರಡು ಆಟೋ ರಿಕ್ಷಾದಲ್ಲಿ ನಗರದಲ್ಲಿರುವ ಪ್ರೇಕ್ಷಣೀಯ ಸ್ಥಳಗಳ ವೀಕ್ಷಣೆಗೆ ಹೊರಟೆವು. ಒಂದು ಆಟೋಗೆ ರೂ. ೧೦೦೦. ಆರೇಳು ಜನ ಕೂರುವಂಥ ಆಟೋರಿಕ್ಷಾವದು. ಬೆಳಗ್ಗೆ ೧೧ಗಂಟೆಯಿಂದ ಸಂಜೆವರೆಗೂ ಎಷ್ಟಾಗುತ್ತೋ ಅಷ್ಟು ಪ್ರೇಕ್ಷಣೀಯ ಸ್ಥಳಗಳನ್ನು ತೋರಿಸಬೇಕೆಂಬ ಒಪ್ಪಂದ ಆಗಿತ್ತು.
ಪಾವನಧಾಮ
ಮೊದಲಿಗೆ ನಾವು ಪಾವನಧಾಮಕ್ಕೆ ಹೋದೆವು. ಈ ದೇವಾಲಯವು ನಗರದಿಂದ ೨ ಕಿ. ಮೀ ದೂರದಲ್ಲಿ ನೆಲೆಗೊಂಡಿದ್ದು, ಸಂಪೂರ್ಣವಾಗಿ ಗಾಜಿನಿಂದಲೇ ನಿರ್ಮಿಸಲಾಗಿದೆ. ಪಾವನಧಾಮ ಒಂದು ಆಧುನಿಕ ದೇವಾಲಯವಾಗಿದ್ದು ಎಲ್ಲಾ ದೇವರ ಅಲಂಕಾರಿಕ ಆಕರ್ಷಕವಾಗಿರುವ ದೊಡ್ಡ ದೊಡ್ಡ ಪ್ರತಿಮೆಗಳು ಗಮನ ಸೆಳೆಯುತ್ತವೆ. ವಿಗ್ರಹಗಳು ಗಾಜಿನಲ್ಲಿ ಎರಡೆರಡಾಗಿ ಕಂಡು ಬಲು ಸುಂದರವಾಗಿ ಕಂಗೊಳಿಸುತ್ತವೆ. ನಾವು ಆ ವಿಗ್ರಹಗಳ ಎದುರು ನಿಂತು ಫೋಟೋ ಕ್ಲಿಕ್ಕಿಸಿಕೊಂಡಾಗ ಗಾಜಿನ ಕಣ್ಣಲ್ಲಿ ನಮ್ಮದೇ ಪ್ರತಿಬಿಂಬವೂ ಬಂದದ್ದು ನೋಡಿ ಖುಷಿಪಟ್ಟೆವು.

20160923_11243020160923_113836

ಭಾರತಮಂದಿರ, ರಾಮಮಂದಿರ
ಅದೇ ರಸ್ತೆಯಲ್ಲಿ ಮುಂದೆ ಸಾಗಿ ಭಾರತಮಂದಿರಕ್ಕೆ ಬಂದೆವು. ಅಲ್ಲಿ ಕೂಡಾ ನಾನಾ ನಮೂನೆಯ ಪ್ರತಿಮೆಗಳು ಮನಸೂರೆಗೊಳ್ಳುತ್ತವೆ. ಮುಂದೆ ರಾಮಮಂದಿರ ನೋಡಿದೆವು.
ವೈಷ್ಣೋದೇವಿಮಂದಿರ
ಹರಿದ್ವಾರದಲ್ಲಿ ಹೊಸದಾಗಿ ನಿರ್ಮಿಸಿದ ದೇವಾಲಯ ವೈಷ್ಣೋದೇವಿ ದೇವಾಲಯ. ಜಮ್ಮುವಿನ ಪ್ರಖ್ಯಾತ ವೈಷ್ಣೋದೇವಿ ದೇವಸ್ಥಾನದ ತದ್ರೂಪವಾಗಿ ಇದನ್ನು ನಿರ್ಮಿಸಿದ್ದಾರೆ. ಜಮ್ಮುವಿನಲ್ಲಿರುವ ವೈಷ್ಣೋದೇವಿ ದೇವಾಲಯಕ್ಕೆ ಹೋಗಲು ಇರುವಂಥ ಸುರಂಗಗಳು ಮತ್ತು ಗುಹೆಗಳು ಇರುವಂತೆ ಇಲ್ಲೂ ಕೂಡ ಸಿಮೆಂಟಿನಿಂದ ಅದನ್ನು ಹೋಲುವಂತೆಯೇ ನಿರ್ಮಿಸಿದ್ದಾರೆ. ನಾವು ದೇವಾಲಯ ನೋಡಿ ನಿರ್ಮಿಸಿದವರ ಕೌಶಲವನ್ನು ಮೆಚ್ಚಿಕೊಂಡೆವು. ಅಲ್ಲಿ ಪ್ರಸಾದರೂಪವಾಗಿ ಸಿಹಿಸಜ್ಜಿಗೆ ಕೊಟ್ಟದ್ದು ಹಸಿದ ಹೊಟ್ಟೆಗೆ ಮೃಷ್ಟಾನ್ನದಂತಾಯಿತು.

20160923_120551
ಭಾರತಮಾತಾ ಮಂದಿರ
ಭಾರತ ಮಾತಾ ಮಂದಿರ ಎಂಟು ಮಹಡಿಗಳನ್ನು ಹೊಂದಿವೆ. ಈ ದೇವಾಲಯವನ್ನು ಮಹಾನ್ ಧಾರ್ಮಿಕ ಗುರು, ಸ್ವಾಮಿ ಸತ್ಯಮಿತ್ರಾನಂದ್ ಗಿರಿಯವರು ನಿರ್ಮಿಸಿದ್ದಂತೆ. ಬಹುಮಹಡಿಗಳುಳ್ಳ ಈ ಸಂಕೀರ್ಣವನ್ನು ಭಾರತಮಾತೆಯ ಗೌರವಾರ್ಥವಾಗಿ ನಿರ್ಮಿಸಿದ್ದಾರೆ. ಇಲ್ಲಿಯ ಪ್ರತಿ ಮಹಡಿಯು ಭಾರತದ ಇತಿಹಾಸದ ಒಂದೊಂದು ಕಾಲದ ಘಟನಾವಳಿಗಳನ್ನು ಚಿತ್ರಿಸುತ್ತದೆ. ರಾಮಾಯಣದ ಕಾಲದಿಂದ ಹಿಡಿದು ಭಾರತದ ಸ್ವಾತಂತ್ರ್ಯ ಸಂಗ್ರಾಮ ಕಾಲದವರೆಗಿನ ಮುಖ್ಯ ಘಟ್ಟಗಳನ್ನು ಇಲ್ಲಿ ಚಿತ್ರಿಸಲಾಗಿದೆ. ಹರಿದ್ವಾರದ ಮುಖ್ಯ ಆಕರ್ಷಣೆಗಳಲ್ಲಿ ಭಾರತ್ ಮಾತಾ ಮಂದಿರವು ಸಹ ಒಂದೆಂದು ಪರಿಗಣಿಸಲಾಗಿದೆ.
ಒಂದೊಂದು ಮಹಡಿಗಳೂ ವಿವಿಧ ಹಿಂದೂ ದೇವತೆಗಳು ಮತ್ತು ಸ್ವಾತಂತ್ರ್ಯ ಹೋರಾಟಗಾರರ ಪ್ರತಿಕೃತಿಗಳಿಗೆ ಮೀಸಲಾಗಿದೆ. ಮೊದಲಿಗೆ ಎತ್ತುಯಂತ್ರದ ಮೂಲಕ ಆರನೇ ಮಹಡಿಗೆ ಹೋಗಬೇಕು. ಏಳನೇ ಮಹಡಿಗೆ ಅಲ್ಲಿಂದ ಮೆಟ್ಟಲು ಹತ್ತಿದಾಗ ಶಿವಮಂದಿರ, ಆರನೇ ಮಹಡಿಯಲ್ಲಿ ವಿಷ್ಣುಮಂದಿರ, ಐದನೆಯದರಲ್ಲಿ ಶಕ್ತಿಮಂದಿರ, ನಾಲ್ಕನೆಯದರಲ್ಲಿ ಪ್ರಾದೇಶಿಕ ಚಿತ್ರಾವಳಿ, ಮೂರನೆಯದರಲ್ಲಿ ಸಂತಮಂದಿರ, ಎರಡನೆಯದರಲ್ಲಿ ಮಾತೃಮಂದಿರ, ಒಂದನೆಯದರಲ್ಲಿ ಶೂರಮಂದಿರ ಇಲ್ಲಿ ಮಹಾತ್ಮ ಗಾಂಧಿ ಸೇರಿದಂತೆ ಭಾರತದ ಸ್ವಾತಂತ್ರ್ಯ ಹೋರಾಟಗಾರರಾದ ವೀರ ಸಾವರ್ಕರ್ ಮತ್ತು ಸುಭಾಷ್ ಚಂದ್ರ ಬೋಸ್ ಮೊದಲಾದವರ ವಿಗ್ರಹಗಳನ್ನು ನೋಡಬಹದು. ನೆಲ ಅಂತಸ್ತಿನಲ್ಲಿ ವಂದೇಭಾರತ ಮಾತರಂ ಭಾರತಮಾತೆಯ ಬೃಹತ್ ವಿಗ್ರಹ ಕಾಣುತ್ತೇವೆ. ಒಂದೊಂದೇ ಮಹಡಿ ನೋಡಿ ಹೊರಬಂದಾಗ ಗಂಟೆ ಒಂದು ಆಗಿತ್ತು. ಭಾರತಮಾತಾ ಮಂದಿರಕ್ಕೆ ರೂ. ೨ ಪ್ರವೇಶ ಶುಲ್ಕವಿದೆ.

?????????????

ಚಂಡೀದೇವಿ ಮಂದಿರ
ಅಲ್ಲಿಂದ ಹೊರಟು ಚಂಡೀದೇವಿಮಂದಿರಕ್ಕೆ ಹೋಗಲು ಕೇಬಲ್ ಕಾರ್ ವ್ಯವಸ್ಥೆ ಇದ್ದ ಕಡೆಗೆ ಬಂದೆವು. ದೇವಸ್ಥಾನಕ್ಕೆ ಮೇಲೆ ಹೋಗಿ ಬರಲು ಕೇಬಲ್ ಕಾರಿಗೆ ತಲಾ ಒಬ್ಬರಿಗೆ ಶುಲ್ಕ ರೂ ೧೬೩. ಕೇಬಲ್ ಕಾರಿನಲ್ಲಿ ಮೇಲೆ ಹೋದೆವು. ಕೇಬಲ್ ಕಾರಿನಲ್ಲಿ ಕೂತಿದ್ದಾಗ ನಮ್ಮ ಮೈಸೂರಿನ ಚಾಮುಂಡಿಬೆಟ್ಟ ನೆನಪಾಯಿತು. ಚಾಮುಂಡಿಬೆಟ್ಟಕ್ಕೆ ಕೇಬಲ್ ಕಾರ್ ವ್ಯವಸ್ಥೆ ಮಾಡಬೇಕೆಂಬ ಸರ್ಕಾರದ ಹಂಬಲವನ್ನು ನಾಗರಿಕರು ತಡೆಯುವಲ್ಲಿ ಯಶಸ್ವಿಯಾದದ್ದು ನೆನಪಿಗೆ ಬಂತು. ಕೇಬಲ್ ಕಾರಿನಲ್ಲಿ ಸುಮಾರು ೬೮೨ ಅಡಿಗಳಷ್ಟು ಮೇಲೆ ಹಾಗೂ ೨೪೩೦ ಅಡಿಗಳಷ್ಟು ಉದ್ದ ಸಾಗುವಾಗ ಹರಿದ್ವಾರದ ಗಂಗೆಯ ಹರಿವನ್ನು ನೋಡುವುದು ಬಹಳ ಸೊಗಸಾಗಿರುತ್ತದೆ.
ಉತ್ತರಾಖಂಡದ ಪ್ರಖ್ಯಾತ ತೀರ್ಥ ಕ್ಷೇತ್ರವಾದ ಹರಿದ್ವಾರದಲ್ಲಿರುವ ಹರ್ ಕಿ ಪೌರಿಯಿಂದ ನಾಲ್ಕು ಕಿ.ಮೀ ಗಳಷ್ಟು ದೂರದಲ್ಲಿ ನೀಲ್ ಪರ್ವತದ ಮೇಲೆ ಚಂಡಿದೇವಿ ದೇವಾಲಯವಿದೆ. ಈ ದೇವಾಲಯವನ್ನು ತಲುಪಲು ಚಂಡಿಘಾಟ್‌ನಿಂದ ಮೂರು ಕಿ.ಮೀ ನಡೆದು, ಮೆಟ್ಟಿಲುಗಳನ್ನು ಹತ್ತಿ ತಲುಪಬಹುದು ಇಲ್ಲವೆ ಇತ್ತೀಚಿಗಷ್ಟೆ ಭಕ್ತರ ಅನುಕೂಲಕ್ಕೆಂದು ಪ್ರಾರಂಭಿಸಲಾದ ಕೇಬಲ್ ಕಾರುಗಳ ಮೂಲಕವೂ ತಲುಪಬಹುದು. ಈ ದೇವಾಲಯವನ್ನು ಕಾಶ್ಮೀರದ ಮಹಾರಾಜರು ಕಟ್ಟಿಸಿದ್ದಂತೆ. ಚಂಡಿದೇವಿಯು ಶುಂಭ ನಿಶುಂಭರೆಂಬ ರಕ್ಕಸರನ್ನು ಇಲ್ಲಿ ಸಂಹರಿಸಿದಳು ಎಂಬುದಾಗಿ ಸ್ಕಂದ ಪುರಾಣದಲ್ಲಿ ಈ ಸ್ಥಳದ ಬಗ್ಗೆ ಉಲ್ಲೇಖವಿದೆ. ಈ ದೇವಾಲಯದ ಮೂಲ ವಿಗ್ರಹವನ್ನು ೮ನೆಯ ಶತಮಾನದಲ್ಲಿ ಆದಿ ಶಂಕರಾಚಾರ್ಯರು ಪ್ರತಿಷ್ಠಾಪಿಸಿದರೆಂದು ನಂಬಲಾಗಿದೆ.

chandi-devi

ಮಧ್ಯಾಹ್ನದ ಭೋಜನ
ಚಂಡಿ ದೇವಾಲಯ ನೋಡಿ ಕೇಬಲ್ ಕಾರಿನಲ್ಲಿ ಕೆಳಗೆ ಬಂದಾಗ ಗಂಟೆ ೨ ಆಗಿತ್ತು. ರಿಕ್ಷಾದಲ್ಲಿ ರಾಮಭವನಕ್ಕೆ ಬಂದೆವು. ಬೆಳಗ್ಗೆಯೇ ಅನ್ನ ಸಾಂಬಾರು ಮಾಡಿಟ್ಟಿದ್ದರು ಅನ್ನಪೂರ್ಣೆಯರು. ಹಸಿದ ಹೊಟ್ಟೆಗೆ ಅದರ ರುಚಿ ಇಮ್ಮಡಿಯಾಗಿ ಊಟದ ಆಟ ಮುಗಿಸಿದೆವು.
ರಾಮಮಂದಿರ, ಹರಿಹರಮಂದಿರ
ಸ್ವಲ್ಪ ವಿಶ್ರಾಂತಿ ಪಡೆದು ಪುನಃ ಅವೇ ಎರಡು ರಿಕ್ಷಾಗಳಲ್ಲಿ ಸಂಜೆ ೩.೪೫ಕ್ಕೆ ಹೊರಟು ರಾಮಮಂದಿರಕ್ಕೆ ಬಂದೆವು. ಅಲ್ಲಿ ರಾಮನ ದೇವಾಲಯ ನೋಡಿದೆವು. ದೇವಾಲಯದ ಆವರಣದಲ್ಲಿ ಸಣ್ಣ ರುದ್ರಾಕ್ಷಿ ಮರವಿದೆ. ಸದ್ಯ ಅದನ್ನು ರಾಮನ ಕಾಲದ್ದೆಂದು ಹೇಳಲಿಲ್ಲ. ಏಕೆಂದರೆ ಮರ ಸಣ್ಣದಾಗಿತ್ತು! ಪಕ್ಕದಲ್ಲೇ ಇದ್ದ ಸರ್ಕಾರಿ ಪೋಷಿತ ರುದ್ರಾಕ್ಷಿ ಅಂಗಡಿಗೆ ಹೋದೆವು. ಅಂಗಡಿಯಾತ ಅದ್ಭುತ ಭಾಷಣಗಾರ. ರುದ್ರಾಕ್ಷಿ ಧರಿಸುವುದರಿಂದ ಆಗುವ ಆರೋಗ್ಯ ಲಾಭಗಳ ಬಗ್ಗೆ ಹೇಳಿದ್ದರಲ್ಲಿ ಒಂದಿಬ್ಬರು ಪ್ರಭಾವಿತಗೊಂಡು ನಾಲ್ಕೈದು ಸಾವಿರ ರೂ. ವ್ಯಾಪಾರ ಮಾಡಿಯೇಬಿಟ್ಟರು. ಸುಮಾರು ಒಂದು ಗಂಟೆ ಕಾಲ ಅವರ ಭಾಷಣ ಕೇಳಿದೆವು. ಅದರಿಂದ ತೊಂದರೆಯೇನೂ ಆಗಲಿಲ್ಲ. ಆ ಸೆಖೆಗೆ ತಂಪಾಗಿ ಅಂಗಡಿಯೊಳಗೆ (ಹವಾನಿಯಂತ್ರಿತ ವಾತಾನುಕೂಲವಿತ್ತು) ನಿಂತು ಭಾಷಣ ಕೇಳಿದೆವು. ಕೂರಲು ಕುರ್ಚಿಗಳಿದ್ದಿದ್ದರೆ ಇನ್ನೂ ಸುಖವಾಗಿ ಅವರ ಮಾತು ಕೇಳಬಹುದಿತ್ತು ಎನಿಸಿದ್ದು ಸುಳ್ಳಲ್ಲ! ಅಲ್ಲಿಂದ ಅನತಿ ದೂರದಲ್ಲೆ ಇದ್ದ ಹರಿಹರಮಂದಿರಕ್ಕೆ ಹೋದೆವು. ಅಲ್ಲಿ ದೊಡ್ಡದಾದ ರುದ್ರಾಕ್ಷಿ ಮರ ಇದೆ. ಅದರಲ್ಲಿ ರುದ್ರಾಕ್ಷಿ ಕಾಯಿಗಳನ್ನು ನೋಡಿದೆವು.

OLYMPUS DIGITAL CAMERA

ದಕ್ಷೇಶ್ವರ ಮಹಾದೇವ ದೇವಾಲಯ
ಹರಿದ್ವಾರದಿಂದ ನಾಲ್ಕು ಕಿ.ಮೀ ದೂರದಲ್ಲಿರುವ ಕಂಖಾಲ್ ಎಂಬಲ್ಲಿರುವ ದಕ್ಷೇಶ್ವರ ದೇವಾಯವು ಶಿವನಿಗೆ ಮುಡಿಪಾದ ದೇವಾಲಯವಾಗಿದೆ. ಹಿಂದೂ ಧರ್ಮವನ್ನು ಸಾರುವ ಹಾಗೂ ಲೋಕ ಪರಿಪಾಲಕರಾಗಿದ್ದ ೧೪ ಜನ ಪ್ರಜಾಪತಿಗಳಲ್ಲಿ ದಕ್ಷ ಮಹಾರಾಜನು ಒಬ್ಬನು. ಇವನ ಪುತ್ರಿಯಾದ ಸತಿಯು ಮಹಾಶಿವನ ಮಡದಿ. ಕಥೆಯ ಪ್ರಕಾರ, ದಕ್ಷ ಪ್ರಜಾಪತಿ ನಡೆಸಿದ ಯಜ್ಞದ ಸಂದರ್ಭದಲ್ಲಿ ಶಿವನಿಗೆ ಆಮಂತ್ರಣವಿರುವುದಿಲ್ಲ. ಆದರೂ ಶಿವನ ಮಡದಿಯಾದ ಸತಿ ಶಿವನ ವಿರೋಧವಿದ್ದರೂ, ತಂದೆ ಕೈಗೊಂಡ ಯಜ್ಞಕ್ಕೆ ಬರುತ್ತಾಳೆ. ಅಲ್ಲಿ ತನ್ನ ಪತಿಗೆ ಮಾಡಿದ ಅವಮಾನವನ್ನು ಸಹಿಸಲಾರದೆ ಸತಿಯು ಕುಂಡಕ್ಕೆ ಹಾರಿ ತನ್ನ ಪ್ರಾಣ ತ್ಯಜಿಸುತ್ತಾಳೆ. ಇದರ ವಿಷಯ ತಿಳಿದ ಶಿವನು ವೀರಭದ್ರನನ್ನು ಸೃಷ್ಟಿಸಿ ಆ ಯಜ್ಞ ಧ್ವಂಸಗೊಳಿಸುತ್ತಾನೆ. ಈ ಸಂದರ್ಭದಲ್ಲಿ ವೀರಭದ್ರನು ದಕ್ಷನ ರುಂಡ ತೆಗೆಯುತ್ತಾನೆ. ಪ್ರಸ್ತುತ ದಕ್ಷನ ರುಂಡ ಬಿದ್ದ ಸ್ಥಳದಲ್ಲಿಯೆ ಇಂದು ಶಿವಲಿಂಗವಿರುವುದನ್ನು ಇಲ್ಲಿ ಕಾಣಬಹುದು. ಅಲ್ಲಿ ಸತಿಕುಂಡ, ದಕ್ಷ ಯಜ್ಞ ಮಾಡಿದ ಕುಂಡಗಳೆಂದು ಎರಡು ಕುಂಡಗಳನ್ನು ಕಾಣುತ್ತೇವೆ. ಅದನ್ನು ನೋಡಿದಾಗ ಪುರಾಣ ಕಥಾನಕ ಎಲ್ಲ ಮನಪಟಲದಲ್ಲಿ ಹಾದು ಹೋಯಿತು. ಆ ಸ್ಥಳಗಳನ್ನೆಲ್ಲ ನೋಡಿದಾಗ ಒಂದೊಂದು ಘಟನೆಗಳೂ ನಿಜವಿದ್ದಿರಬಹುದೇನೋ ಅನಿಸುತ್ತದೆ.
ಹರಿದ್ವಾರದಲ್ಲಿ ಮಾಂಸಾಹಾರ ಮತ್ತು ಮದ್ಯಪಾನಗಳ ಮೇಲೆ ಸಂಪೂರ್ಣ ನಿಷೇಧವಿದೆಯಂತೆ.

OLYMPUS DIGITAL CAMERA

ದಶ ಮಹಾವಿದ್ಯಾ ದೇವಾಲಯ
ದಕ್ಷೇಶ್ವರ ದೇವಾಲಯದ ಆವರಣದಲ್ಲಿಯೆ ಈ ದೇವಾಲಯವೂ ಇದೆ. ಶಕ್ತಿ ಸ್ವರೂಪಿಣಿ ಪಾರ್ವತಿಯ ಹತ್ತು ವಿದ್ಯಾಗುಣಗಳಿಗೆ ಮುಡಿಪಾದ ದೇವಾಲಯ ಇದಾಗಿದೆ. ಹಿಂದೂ ಸ್ತ್ರೀಯರಿಂದ ಹೆಚ್ಚಾಗಿ ಭೇಟಿ ನೀಡಲ್ಪಡುವ ಈ ದೇವಸ್ಥಾನದಲ್ಲಿ ನವರಾತ್ರಿ ಉತ್ಸವವನ್ನು ಅದ್ದೂರಿಯಿಂದ ಆಚರಿಸಲಾಗುತ್ತದೆಯಂತೆ. ಆ ಹತ್ತು ಗುಣಗಳ ಅವತಾರಗಳಾಗಿ ಪಾರ್ವತಿ ದೇವಿಯನ್ನು ಕಾಳಿ, ತಾರಾ, ಷೋಡಶಿ, ಭುವನೇಶ್ವರಿ, ಭೈರವಿ, ಚಿನ್ನಮಸ್ತಾ, ಧೂಮವತಿ, ಬಾಗಲಮುಖಿ, ಮಾತಂಗಿ ಹಾಗೂ ಕಮಲಗಳೆಂದು ಪೂಜಿಸಲಾಗುತ್ತದೆ.
ಅಲ್ಲಿಗೆ ನಮ್ಮ ಹರಿದ್ವಾರ ಪ್ರದಕ್ಷಿಣೆ ಹಾಕಿಸುವ ರಿಕ್ಷಾದವನ ಜವಾಬ್ದಾರಿ ಮುಗಿಯಿತು. ಅಲ್ಲಿಂದ ಸಂಜೆ ಆರಕ್ಕೆ ಹೊರಟು ಗಂಗಾರತಿ ನೋಡಲು ಹರ್ ಕಿ ಪೌರಿ ಕಡೆ ನಮ್ಮನ್ನು ಇಳಿಸಿದರು.
ಗಂಗಾರತಿ
ಹರಿದ್ವಾರದಲ್ಲಿರುವ ಹರ್ ಕಿ ಪೌರಿ ಘಾಟ್ (ಸ್ನಾನ ಮಾಡುವ ಸ್ಥಳ) ಪ್ರದೇಶವಾಗಿದ್ದು ಒಂದನೆಯ ಶತಮಾನದಲ್ಲಿ ವಿಕ್ರಮಾದಿತ್ಯ ರಾಜನಿಂದ ನಿರ್ಮಿಸಲ್ಪಟ್ಟಿದೆಯಂತೆ. ಈ ಸ್ಥಳದಲ್ಲಿರುವ ಬ್ರಹ್ಮಕುಂಡವು ಹೆಚ್ಚಿನ ಪಾವಿತ್ರ್ಯತೆ ಪಡೆದಿದ್ದು ಶಿವನ ಹೆಜ್ಜೆ ಗುರುತಿನ ಸ್ಥಳವೆಂದು ಪ್ರತೀತಿಯಲ್ಲಿದೆ. ಇಲ್ಲಿ ಸಂಜೆಯ ಸಮಯದಲ್ಲಿ ಗಂಗೆಗೆ ಆರತಿ ಮಾಡಲಾಗುತ್ತದೆ. ಅದನ್ನು ನೋಡಲು ಸಾವಿರಾರು ಭಕ್ತರು ಸೇರುತ್ತಾರೆ. ಹಾಗೂ ತಮ್ಮ ಪೂರ್ವಜರ ನೆನಪಿನಲ್ಲಿ ಅವರ ಆತ್ಮಕ್ಕೆ ಶಾಂತಿ ಕೋರುತ್ತ ದೀಪಗಳನ್ನು ತೇಲಿ ಬಿಡುತ್ತಾರೆ. ಅದನ್ನು ನೋಡುವ ಸಲುವಾಗಿ ನಾವು ಅಲ್ಲಿಗೆ ಹೋದೆವು. ಅದಾಗಲೇ ಅಲ್ಲಿ ಸಾವಿರಾರು ಮಂದಿ ನದಿ ದಡದಲ್ಲಿ ಕೂತಿದ್ದರು. ಗಂಗಾರತಿ ಹತ್ತಿರದಿಂದ ನೋಡುವುದು ಬಲು ಸುಂದರ ದೃಶ್ಯವಂತೆ. ನಮಗೆ ಗಂಗಾರತಿ ನೋಡಲು ಹತ್ತಿರದಲ್ಲಿ ಸ್ಥಳ ಸಿಗಲಿಲ್ಲ. ದೂರದಲ್ಲಿ ಕುಳಿತು ನೋಡಿದೆವು. ಆದರೆ ನಮಗೆ ಅಂಥ ಸುಂದರ ದೃಶ್ಯ ನೋಡಲು ಸಿಗಲಿಲ್ಲ. ಗಂಗಾರತಿ ಸಮಯದಲ್ಲಿ ಹಾಡುವ ಹಾಡು ಕೇಳಲು ಬಹಳ ಚೆನ್ನಾಗಿರುತ್ತದೆ. ಸಂಜೆ ಹೊತ್ತಲ್ಲಿ ನದಿ ದಂಡೆಯಲ್ಲಿ ಕೂತು ಕೆಲವು ಆರತಿ ತೇಲುತ್ತ ಬರುವುದನ್ನು ನೋಡುವುದೇ ಸುಂದರ ಅನುಭವ. ಗಂಗಾರತಿ ನೋಡಿ ಸಂಜೆ ಏಳೂವರೆಗೆ ನಾವು ನಮ್ಮ ವಸತಿಗೃಹಕ್ಕೆ ಹಿಂದಿರುಗಿದೆವು.
ರಾತ್ರಿಯ ಭರ್ಜರಿ ಭೋಜನ
ಒಂದು ದಿನವೂ ಪಾಯಸ ಮಾಡಲಿಲ್ಲವೆಂದು ಸಿಹಿಪ್ರಿಯಳಾದ ಗೋಪಕ್ಕ ಆಕ್ಷೇಪಣೆ ಸಲ್ಲಿಸಿದ್ದರು. ಅವರಿಗೇಕೆ ಬೇಜಾರು ಮಾಡುವುದೆಂದು ಶಶಿಕಲಕ್ಕ ಹಾಗೂ ಸರಸ್ವತಕ್ಕನವರು ಆ ರಾತ್ರಿ ಹೆಸರುಬೇಳೆ ಪಾಯಸ ಮಾಡಿದ್ದರು. ಕರಿದತಿಂಡಿ ಪ್ರಿಯರಿಗಾಗಿ ಗಂಗಾರತಿ ನೋಡಿ ಬಂದವರೇ ಶಶಿಕಲಾಕ್ಕ ಈರುಳ್ಳಿ ಪಕೋಡ ಕರಿದೇಬಿಟ್ಟರು. ರಾತ್ರಿ ೮.೩೦ಗೆ ಸುರುಮಾಡಿ ಅರ್ಧ ಗಂಟೆಯೊಳಗೆ ಪಕೋಡ ಕರಿದು ತೆಗೆದು ಪೇರಿಸಿದರು. ಅಬ್ಬ ಅವರ ಪರಿಶ್ರಮವೇ ಎನಿಸಿತು. ಈರುಳ್ಳಿ ಪಕೋಡದ ಪರಿಮಳ ನಮ್ಮ ಕೋಣೆಯ ಸುತ್ತ ಆವರಿಸಿದಾಗ ಅದರಿಂದ ಪ್ರಭಾವಿತಗೊಂಡವರೆಲ್ಲ ಅಡುಗೆ ಕೋಣೆಗೆ ಧಾವಿಸಿ ಬಂದು ಹೇಗಿದೆ ಎಂದು ರುಚಿ ನೋಡಿ ಹೇಳಬೇಕಾ ಎಂದು ಕೇಳಿ ಅಲ್ಲೆ ಎಡತಾಕಿದೆವು! ‘ಎಲ್ಲ ಸರಿಯಾಗಿದೆ. ಯಾರೂ ರುಚಿ ನೋಡಿ ಹೇಳುವುದು ಬೇಡ. ಊಟ ತಯಾರಾದಾಗ ನಿಮ್ಮನ್ನು ಕರೆಯುತ್ತೇವೆ ಹೋಗಿ’ ಎಂದು ನಮ್ಮನ್ನು ಅಲ್ಲಿಂದ ಓಡಿಸಿದರು! ಎರಡೆರಡು ಪಕೋಡ, ಅರ್ಧ ಗ್ಲಾಸು ಪಾಯಸ, ಅನ್ನ ಸಾರು ಭರ್ಜರಿ ಭೋಜನವನ್ನೇ ಮಾಡಿ ಹಾಕಿದ್ದರು ಅನ್ನಪೂರ್ಣೆಯರು. ನನ್ನ ಪಾಲಿನ ಪಾಯಸ ಗೋಪಕ್ಕನಿಗೆ ಮೀಸಲಾಗಿಟ್ಟು, ಅದರ ಬದಲಾಗಿ ಅವರ ಪಾಲಿನ ಪಕೋಡ ಕೊಟ್ಟದ್ದನ್ನು ಪಡೆದು ತಿಂದು ತೃಪ್ತಿ ಹೊಂದಿದೆ!

ಗಂಗಾಸ್ನಾನಂ ತುಂಗಾಪಾನಂ
ಬೆಳಗ್ಗೆ (೨೪-೯-೨೦೧೬)ಆರು ಗಂಟೆಗೆ ಗಂಗಾಸ್ನಾನಕ್ಕೆ ಹೆಚ್ಚಿನವರೂ ಹೋದರು. ಅಲ್ಲಿ ಗಂಡಸರು ಅವರ ಹಿರಿಯರಿಗೆ ತರ್ಪಣ ಕೊಟ್ಟರಂತೆ. ನಾವು ಕೆಲವೇ ಮಂದಿ ಹೋಗಲಿಲ್ಲ. ನಾನು, ಹೇಮಮಾಲಾ, ಸವಿತಾ ೭ ಗಂಟೆಗೆ ಹೊರಗೆ ಹೋಗಿ ಕಾಫಿ ಕುಡಿದು, ಮುಂದಿನ ರಸ್ತೆಯಲ್ಲಿ ಅಡ್ಡಾಡಿ ಒಂದು ಹೊಟೇಲಿಗೆ ಹೋಗಿ ಪರೋಟ ತಿಂದು ಬಂದೆವು. ಗಂಗಾಸ್ನಾನಕ್ಕೆ ಹೋದವರು ೯ ಗಂಟೆಗೆ ಹಿಂತಿರುಗಿ ಬಂದು ಸರಸರನೆ ಉಪ್ಪಿಟ್ಟು ತಯಾರಿಸಿ ನಮ್ಮನ್ನು ತಿಂಡಿಗೆ ಕರೆದಾಗ ನಾವು ಬಡಿಸುತ್ತೇವೆ ಎಂದರೂ ಬಿಡದೆ ತಟ್ಟೆಗೆ ಉಪ್ಪಿಟ್ಟು ಹಾಕಿ ಕೊಟ್ಟಾಗ ನಮಗೆ ನಿಜಕ್ಕೂ ನಾಚಿಕೆ, ಸಂಕೋಚ ಆಗಿತ್ತು. ಅವರ ಈ ಪ್ರೀತಿಗೆ ಮನಸೋತು ಉಪ್ಪಿಟ್ಟು ತಿಂದೆವು. ಬಲು ರುಚಿಯಾಗಿತ್ತು.
ಮಾನಸದೇವಿಮಂದಿರ
ಮಾನಸದೇವಿ ಮಂದಿರಕ್ಕೆ ಹೋಗಲು ನಾವು ಎಂಟು ಮಂದಿ ರಿಕ್ಷಾದಲ್ಲಿ ಹೋದೆವು. ಕೆಲವರೆಲ್ಲ ಹಿಂದೆಯೇ ಅದನ್ನು ನೋಡಿದ್ದರೆಂದು ಬರದೆ ಕೋಣೆಯಲ್ಲೇ ಕೂತಿದ್ದರು. ಹೋಗುವ ದಾರಿಯಲ್ಲಿ ಹಣ್ಣುಕಾಯಿ ತೆಗೆದುಕೊಳ್ಳಿ ಎಂದು ಅದನ್ನು ಮಾರುವ ಮಂದಿ ಪೀಡಿಸುತ್ತಾರೆ. ಪುಟಾಣಿ ಬಾಲಕಿ ನನ್ನ ಹಿಂದೆಯೇ ಬಂದು ಕೇಳಿಕೋಂಡಾಗ ತೆಗೆದುಕೊಳ್ಳದೆ ಇರಲು ಸಾಧ್ಯವಾಗಲಿಲ್ಲ. ಕೇವಲ ರೂ. ಹತ್ತು ಕೊಡಿ ಸಾಕು ಎಂದು ಒಂದು ತೆಂಗಿನಕಾಯಿ, ೨ ಬಳೆ ಇರುವ ತೊಟ್ಟೆಯನ್ನು ಕೊಟ್ಟಳು. ಕೈಬೀಸಣಿಗೆ ನನ್ನನ್ನು ಆಕರ್ಷಿಸಿತು. ಅದನ್ನು ಮಡಚಿದರೆ ಸಣ್ಣದಾಗುತ್ತದೆ. ಅದಕ್ಕೆ ಒಂದಕ್ಕೆ ರೂ. ಹತ್ತು ಮಾತ್ರ. ಅದನ್ನು ತೆಗೆದುಕೊಂಡೆ. (ಈಗ ನಾನು ಉಷ್ಣ‌ಅಲೆಗಳ ಏರಿಳಿತದಿಂದ ಆಗಾಗ ಸೆಖೆ ಅನುಭವಿಸುತ್ತ ಇದ್ದೇನೆ. ಅದಕ್ಕೆ ಈ ಬೀಸಣಿಗೆ ಅನುಕೂಲಕರವಾಗಿದೆ!)
ಮಾನಸದೇವಿ ಮಂದಿರಕ್ಕೆ ನಾವು ಕೇಬಲ್ ಕಾರಿನಲ್ಲಿ ಹೋದೆವು. ಹೋಗಿ ಬರಲು ಟಿಕೆಟ್ ದರ ರೂ.೯೫. ತುಂಬ ಮಂದಿ ಕೇಬಲ್ ಕಾರಿಗೆ ಕಾದಿದ್ದರು. ನಾವು ನಮ್ಮ ಸರದಿ ಬರಲು ಒಂದು ಗಂಟೆ ಕಾಯಬೇಕಾಯಿತು.

ಕೃಪೆ : ಅಂತರ್ಜಾಲ

ಕೃಪೆ : ಅಂತರ್ಜಾಲ

ಹರಿದ್ವಾರದ ಮೂರು ಸಿದ್ಧಪೀಠಗಳ ಪೈಕಿ ಮಾನಸಾ ದೇವಿ ದೇವಾಲಯವೂ ಒಂದು. ಶಕ್ತಿಯ ಅವತಾರವೆನ್ನಲಾಗುವ ಮಾನಸಾ ದೇವಿಯನ್ನು ಇಲ್ಲಿ ಆರಾಧಿಸಲಾಗುತ್ತದೆ. ಶಿವನ ಮನಸ್ಸಿನಿಂದ ರೂಪಗೊಂಡ ಶಕ್ತಿದೇವಿ ಇವಳಾಗಿರುವುದರಿಂದ ಇವಳಿಗೆ ಮಾನಸಾ ದೇವಿ ಎಂಬ ಹೆಸರು ಬಂದಿದೆಯಂತೆ. ಮಾನಸಾದೇವಿ ಮಂದಿರವು ಬಿಲ್ವ ಪರ್ವತದ ಮೇಲಿದೆ. ಪರ್ವತದ ಮೇಲಿನಿಂದ ಹರಿದ್ವಾರ ನಗರ ಸುಂದರವಾಗಿ ಕಾಣುತ್ತದೆ.
ಈ ದೇವಾಲಯಕ್ಕೆ ಹೋಗಲು ಕೇಬಲ್ ಕಾರ್ ಹಾಗೂ ನಡೆದುಕೊಂಡೂ ಹೋಗಲು ರಸ್ತೆ, ಮೆಟ್ಟಲುಗಳಿವೆ. ಮಾನಸಾದೇವಿ ಮಂದಿರದಲ್ಲಿ ದೇವಿಯ ಎರಡು ಮೂರ್ತಿಗಳಿದ್ದು ಒಂದರಲ್ಲಿ ಮೂರು ಮುಖಗಳು ಮತ್ತು ಐದು ಬಾಹುಗಳಿವೆ. ಇನ್ನೊಂದರಲ್ಲಿ ೮ ಬಾಹುಗಳಿವೆ. ಮಾನಸಾ ದೇವಿಯ ಆಲಯವಿರುವ ಬಿಲ್ವ ಪರ್ವತವು ಹರಿದ್ವಾರ ನಗರದ ಮಧ್ಯಭಾಗದಲ್ಲಿಯೇ ಇದ್ದು ಹರ್‌ಕಿಪೌಡಿಯಿಂದ ಎತ್ತರದ ಪರ್ವತದಲ್ಲಿ ಕಾಣುತ್ತದೆ.
ಮಧ್ಯಾಹ್ನದ ಭೂರೀಬೋಜನ
ದೇವಾಲಯ ಸುತ್ತಿ ಬಂದು ರಿಕ್ಷಾದಲ್ಲಿ ರಾಮಭವನಕ್ಕೆ ಬಂದೆವು. ಹೀರೆಕಾಯಿ ಬಜ್ಜಿ, ಆಲೂಗಡ್ಡೆ ಬಜ್ಜಿ, ರವೆ ಪಾಯಸ, ಅನ್ನ, ಸಾಂಬಾರು, ಮಜ್ಜಿಗೆ ಊಟಕ್ಕೆ ಇಷ್ಟು ಬಗೆ ತಯಾರಾಗಿತ್ತು. ಮಧ್ಯಾಹ್ನದ ಭೂರಿ ಭೋಜನ ಎಂದೇ ಹೇಳಬಹುದು. ತರ್ಪಣ ಕೊಟ್ಟ ಕಾರಣ ಪಾಯಸ ಇಲ್ಲದಿದ್ದರೆ ಹೇಗೆ ಎಂದು ಪಾಯಸ ಮಾಡಿದರಂತೆ. ಹೀರೆಕಾಯಿ ಬಜ್ಜಿ ಬಹಳ ಚೆನ್ನಾಗಿರುತ್ತದೆ ಎಂದು ವಿಠಲರಾಜು ಹೇಳಿದ್ದಕ್ಕೆ ಅದನ್ನೂ ಮಾಡಿ ಬಡಿಸಿದರು. ಸರಸ್ವತಕ್ಕ, ಶಶಿಕಲಾಕ್ಕ ಮತ್ತು ಅವರಿಗೆ ಸಹಾಯ ಮಾಡಿದ ಎಲ್ಲರನ್ನೂ ನಾವು ಕೃತಜ್ಞತೆಯಿಂದ ಸ್ಮರಿಸಬೇಕು. ಅಡುಗೆ ಮಾಡಿ ಎಂದು ಅವರನ್ನು ಯಾರೂ ಒತ್ತಾಯಿಸಿರಲಿಲ್ಲ. ಅವರೇ ಬಲು ಪ್ರೀತಿಯಿಂದ ಮಾಡಿ ಬಡಿಸಿದ್ದರು. ಭರ್ಜರಿ ಊಟ ಮಾಡಿ ಕೋಣೆಯಲ್ಲಿ ಕಾಲುಚಾಚಿ ಮಲಗಿದೆವು.

2016-10-02_15-32-01 2016-10-02_16-01-01

20160923_204821

ಈ ಸಮಯ ವ್ಯಾಪಾರಮಯ!
ನಮ್ಮ ವಾಸ್ತವ್ಯ ಹರಿದ್ವಾರದಲ್ಲಿ ಕೊನೆಯದಿನವಾದ ಆ ಸಂಜೆ ಆರು ಗಂಟೆಗೆ ಪೇಟೆ ಬೀದಿಯಲ್ಲಿ ಸುತ್ತು ಹೊಡೆದೆವು. ಬಟ್ಟೆಬರೆ, ಸ್ವೆಟರ್, ಬಳೆ, ಚೀಲ, ತಿಂಡಿತಿನಿಸುಗಳು, ದೊಡ್ಡ ಬಾಣಲೆಯಲ್ಲಿ ಕಾಯಿಸುತ್ತಿರುವ ಎಮ್ಮೆಯ ಹಾಲು ಎಲ್ಲವನ್ನೂ ನೋಡುತ್ತ ಸಾಗಿದೆವು. ಕೆಲವರು ಹಾಲು ಕುಡಿದರು. ನನ್ನ ತಂಗಿ ಸವಿತಾ ಹಾಲು ಕುಡಿದು ‘ತವರು ಮನೆಯಲ್ಲಿ ಕುಡಿದ ಹಾಲಿನಂತೆಯೇ ತುಂಬ ರುಚಿ ಇದೆ’ ಎಂದಳು. ಕಚೋರಿ, ಸಮೋಸಗಳಿಗೆ ಒಂದಕ್ಕೆ ರೂ. ಹತ್ತು ಮಾತ್ರ. ಅದನ್ನು ರುಚಿ ನೋಡಿದೆವು. ಒಂದೊಂದು ಅಂಗಡಿಯೊಳಗೂ ಕಾಲು ಗಂಟೆ ನಿಂತು ನೋಡಿ ಮುಂದೆ ಹೋಗುತ್ತಿದ್ದೆವು. ನಾನು ದೊಡ್ಡಮಟ್ಟದ ಯಾವ ವಸ್ತುಗಳನ್ನೂ ತೆಗೆದುಕೊಳ್ಳದೆ ಇರಲು ತೀರ್ಮಾನಿಸಿದೆ. ಸಣ್ಣಪುಟ್ಟದ್ದು ಬಳೆ, ಚಪ್ಪಲಿ, ಇತ್ಯಾದಿ ತೆಗೆದುಕೊಂಡೆ ಅಷ್ಟೆ. ನಮ್ಮಲ್ಲಿ ಅನೇಕರು ರಗ್ಗು, ಸ್ವೆಟರು, ಬ್ಯಾಗ್ ಇತ್ಯಾದಿ ವಸ್ತುಗಳನ್ನು ಕೊಂಡುಕೊಂಡರು.

20160924_175734
ಕಲಿತ ಪಾಟ!
ರಸ್ತೆ ಬದಿ ಚೂಡಿದಾರ ಮಾರಾಟ ಮಾಡುತ್ತಿದ್ದನೊಬ್ಬ. ಕೇವಲ ರೂ.೧೦೦ ಎಂದು ಹೇಳಿದ್ದು ಕೇಳಿ ಕಿವಿ ನೆಟ್ಟಗಾಯಿತು. ಏನು ತೆಗೆದುಕೊಳ್ಳದೆ ಇರಲು ತೀರ್ಮಾನಿಸಿ ಹಾಕಿದ ಗಂಟು ಸ್ವಲ್ಪ ಸಡಿಲವಾಗಿ ಚೂಡಿದಾರದ ಮುಂದೆ ನಿಂತೆ. ಹತ್ತಿಬಟ್ಟೆಯ ಚೂಡಿದಾರವೊಂದು ಬಹಳ ಆಕರ್ಷಕವಾಗಿ ನನ್ನ ಕಣ್ಣಿಗೆ ಕಂಡಿತು. ಮುಟ್ಟಿ ನೋಡಿದೆ. ಆಹಾ ಶುದ್ಧ ಹತ್ತಿಯದೇ ಎಂದು ಕಾತರಿ ಆಯಿತು. ಕೇವಲ ರೂ. ೧೦೦ ತಾನೆ ಎಂದು ತೆಗೆದುಕೊಂಡೇ ಬಿಟ್ಟೆ. ಟಾಪ್‌ನ ಮಡಿಕೆಬಿಚ್ಚಿ ತೋರಿಸಿದ. ಸರಿ ಇದೆ ಎಂದು ಖಾತ್ರಿ ಆಯಿತು. ಹಾಗೆಯೇ ನಮ್ಮವರು ಮೂರು ನಾಲ್ಕು ಜನ ವ್ಯಾಪಾರ ಮಾಡಿದರು. ವ್ಯಾಪಾರ ಮಾಡಿ ಬೀಗಿದೆವು.
ಅಂಗಡಿ ಅಂಗಡಿ ಸುತ್ತಿ ಕಂಡದ್ದನ್ನೆಲ್ಲ ಕಣ್ಣುತುಂಬ ನೋಡಿ ತೃಪ್ತಿಪಟ್ಟು ರಾತ್ರಿ ಏಳೂವರೆಗೆ ಕೋಣೆಗೆ ಬಂದೆವು. ಕೋಣೆಗೆ ಬಂದು ಚೂಡಿದಾರ ತೆಗೆದುಕೊಂಡವರು ಬಿಚ್ಚಿ ನೋಡಿದರು. ನೋಡಿದರೆ ಪ್ಯಾಂಟ್‌ನ ಉದ್ದ ಅರ್ಧವೇ ಇದ್ದು, ಅಗಲ ಆನೆಯನ್ನೂ ತೂರಿಸುವಷ್ಟು ಇತ್ತು! ಮೋಸ ಹೋದ ಅರಿವಾಗಿ ಅದನ್ನು ಆ ಅಂಗಡಿಯವನಿಗೆ ವಾಪಾಸು ಮಾಡಲು ಅವರೆಲ್ಲ ಓಡಿದರು. ಪರಿಪರಿಯ ಮಾತಿನ ಕೌಶಲದಲ್ಲಿ ಅವನಿಗೆ ವಾಪಾಸು ಕೊಟ್ಟು ರೂ ೧೦೦ ಹಿಂದಕ್ಕೆ ಪಡೆಯುವಲ್ಲಿ ಯಶಸ್ವಿಯಾದರು. ನಾನು ವಾಪಾಸು ಮಾಡಲಿಲ್ಲ. ಕಸದಿಂದ ರಸ ಮಾಡೊಣವೆಂದು ಇಟ್ಟುಕೊಂಡೆ. ಮನೆಗೆ ಬಂದು ಅದರಿಂದ ನಾಲ್ಕು ದಿಂಬಿನ ಕವರು ಹೊಲಿದೆ! ಹಾಗಾಗಿ ರೂ. ನೂರು ದಂಡವಾಗಲಿಲ್ಲ ಎಂದು ಸಮಾಧಾನಪಟ್ಟುಕೊಂಡೆ! ಮಾರಾಟ ಮಾಡುವವನೂ ಬುದ್ಧಿವಂತನೇ ಅವನಿಗೆ ವ್ಯಾಪಾರ ಮಾಡುವ ಕಲೆ ಇದೆ! ಅವನು ಟಾಪ್‌ನ ಮಡಿಕೆ ಬಿಚ್ಚಿ ತೋರಿಸುತ್ತಾನೆ ಹೊರತು ಪ್ಯಾಂಟ್ ಮಡಿಕೆ ಬಿಚ್ಚುವುದೇ ಇಲ್ಲ!

2016-10-23_13-56-50

ಒಂದು ವಸ್ತು ಕಡಿಮೆಬೆಲೆಗೆ ಸಿಗುತ್ತದೆ ಎಂದಾಗ ಮನುಜ ತನಗೆ ಅವಶ್ಯವಿಲ್ಲದಿದ್ದರೂ ಅದರತ್ತ ಆಕರ್ಷಣೆ ಹೊಂದಿ ಅದನ್ನು ಖರೀದಿಸುತ್ತಾನೆ. ನಿಜಕ್ಕೂ ನನಗೆ ಚೂಡಿದಾರದ ಅವಶ್ಯಕತೆ ಖಂಡಿತಾ ಇರಲಿಲ್ಲ. ಬೀರು ತುಂಬ ಅಂಗಿಗಳಿದ್ದುದು ತಿಳಿದಿತ್ತು. ಕಡಿಮೆ ಕ್ರಯದ ಬಟ್ಟೆ ಬಾಳಿಕೆ ಬರುವುದಿಲ್ಲ ಎಂಬುದೂ ತಿಳಿಯದವಳೇನೂ ಅಲ್ಲ. ಆಗ ಬುದ್ಧಿಗೆ ಮಂಕು ಕವಿದು ಅವಶ್ಯವಿಲ್ಲದಿದ್ದರೂ ಕೊಂಡುಕೊಂಡೆ. ಅದಕ್ಕೆ ನಾವು ಖರೀದಿಸುವ ಮೊದಲು ಆದಷ್ಟು ಬುದ್ಧಿ ಉಪಯೋಗಿಸಬೇಕು. ವ್ಯಾಪಾರ ಮಾಡುವ ಮುನ್ನ ಅದು ನಮಗೆ ಅವಶ್ಯವೇ ಎಂಬುದನ್ನು ನಾಲ್ಕಾರು ಬಾರಿ ಯೋಚಿಸಿಯೇ ಕೊಂಡುಕೊಳ್ಳಬೇಕು ಎಂದು ಆಗ ಪಾಟ ಕಲಿತೆ. ಬೇರೆಯವರಿಗೆ ಈ ಪಾಟ ಮಾಡುವುದರಲ್ಲಿ ನಾನು ನುರಿತವಳೇ!
ರಾತ್ರಿ ಅನ್ನ, ಸಾಂಬಾರು, ಹಪ್ಪಳ, ಪೊಂಗಲ್, ಗೊಜ್ಜು ಊಟ ಮಾಡಿದೆವು.

ಪತಂಜಲಿ ಯೋಗ ಶಿಕ್ಷಣ ಸಂಸ್ಥೆಯ ರಾಮಸ್ವಾಮಿ ಅವರು ಬ್ರಹ್ಮಚಾರಿಗಳು. ಯೋಗಸಾಧಕರು.  ಯಾವ ಪ್ರತಿಫಲಾಪೇಕ್ಷೆ ಇಲ್ಲದೆ ನಾಡಿನಾದ್ಯಂತ ಯೋಗಪ್ರಚಾರಕರಾಗಿ ಸಂಚರಿಸುತ್ತಾರೆ. ಹರಿದ್ವಾರದಲ್ಲಿ ರಾತ್ರೆ ವಿಠಲರಾಜು ಅವರನ್ನು ನೋಡಲು ಬಂದರು. ನಾವೆಲ್ಲ ಅವರನ್ನು ಭೇಟಿಯಾಗಿ ಪರಸ್ಪರ ಪರಿಚಯ ಮಾಡಿಕೊಂಡೆವು. ಕೆಲವರು ಕಾಲುಮುಟ್ಟಿ ನಮಸ್ಕರಿಸಲು ಮುಂದಾದಾಗ ಬೇಡ, ಕಾಲುಮುಟ್ಟಬೇಡಿ. ಕಾಲುಮುಟ್ಟಿ ನಮಸ್ಕರಿಸಬೇಕಾದದ್ದು ತಂದೆತಾಯಿಗೆ ಮಾತ್ರ. ಬೇರೆ ಯಾರಿಗೂ ಕಾಲು ಮುಟ್ಟಿ ನಮಸ್ಕರಿಸಲು ಹೋಗಬೇಡಿ ಹಾಗೆಯೇ ನಮಸ್ಕಾರ ಮಾಡಿ ಎಂದರು.

20160924_222310

ನಮ್ಮ ನಮ್ಮ ಲಗೇಜನ್ನು ಸರಿಯಾಗಿ ಬ್ಯಾಗಿಗೆ  ತುಂಬಿಸಿ ನಾಳೆ ಬೆಳಗ್ಗೆಗೆ ಹೊರಡಲು ತಯಾರಾಗಿ ಮಲಗಿದೆವು.
ಹರಿದ್ವಾರಕ್ಕೆ ವಿದಾಯ
ಬೆಳಗ್ಗೆ (೨೫-೯-೨೦೧೬) ಬೇಗ ಎದ್ದು ತಯಾರಾದೆವು. ಹರಿದ್ವಾರದಿಂದ ದೆಹಲಿಗೆ ಜನ ಶತಾಬ್ಧಿ ರೈಲು ೬.೨೦ಕ್ಕೆ . ನಾವು ಆಟೊರಿಕ್ಷಾದಲ್ಲಿ ರೈಲು ನಿಲ್ದಾಣಕ್ಕೆ ೫.೩೦ಗೆ ಹೋದೆವು. ರೈಲು ನಿಲ್ದಾಣ ನಡೆದು ಹೋಗುವಷ್ಟೇ ದೂರ ಆದರೂ ನಮ್ಮ ದೊಡ್ಡ ಬ್ಯಾಗ್ ಹೊತ್ತು ನಡೆಯಲು ಮನಸ್ಸಾಗಲಿಲ್ಲ. ಸಣ್ಣ ಬ್ಯಾಗ್ ಹೊಂದಿದವರು ನಡೆದೇ ಬಂದರು. ರೈಲು ನಿಲ್ದಾಣದಲ್ಲಿ ಅರ್ಧ ಗಂಟೆ ಕಾದೆವು.
೬.೨೫ಕ್ಕೆ ರೈಲು ಬಂತು. ಹತ್ತಲು ಕಿಕ್ಕಿರಿದು ಜನ ಸೇರಿದ್ದರು. ಎಲ್ಲರ ಕೈಯಲ್ಲೂ ದೊಡ್ಡ ದೊಡ್ಡ ಬ್ಯಾಗ್. ರೈಲು ಹೊರಡಲು ಶೀಟಿ ಕೇಳಿದಾಗ ಅಂತೂ ಹರಸಾಹಸಪಟ್ಟು ಮುಂದಿದ್ದವರನ್ನೂ ನೂಕಿ ಒಳಹಾಕಿ ರೈಲು ಏರಿದ್ದಾಯಿತು. ರೈಲು ಕೇವಲ ಐದೇ ನಿಮಿಷ ಅಲ್ಲಿ ನಿಲ್ಲುವುದು. ಐದು ನಿಮಿಷ ಖಂಡಿತಾ ಸಾಲದು. ಪ್ರಯಾಣಿಕರೆಲ್ಲರೂ ಪ್ರವಾಸ ಬಂದವರೇ ಅಲ್ಲಿಂದ ಹತ್ತುವುದು. ಎಲ್ಲರ ಬಳಿಯೂ ಲಗೇಜು ಜಾಸ್ತಿಯೇ ಇರುತ್ತದೆ. ಆರು ತಿಂಗಳು ಪ್ರವಾಸೀ ಸಮಯದಲ್ಲಾದರೂ ಆ ನಿಲ್ದಾಣದಲ್ಲಿ ಹತ್ತು ನಿಮಿಷ ನಿಲ್ಲಿಸುವುದು ಒಳ್ಳೆಯದು. ಆಗ ಜನ ಆತಂಕಪಡದೆ ರೈಲು ಏರಬಹುದು.
ಬೀಳ್ಕೊಡುಗೆ
ಸರಿಯಾದ ಸಮಯಕ್ಕೆ ೧೧.೩೦ಗೆ ದೆಹಲಿ ತಲಪಿದೆವು. ನಾವು (ಶೋಭಾ, ಸವಿತಾ, ರುಕ್ಮಿಣಿಮಾಲಾ, ಹೇಮಮಾಲಾ) ನಾಲ್ವರು ದೆಹಲಿಯಿಂದ ವಿಮಾನದಲ್ಲಿ ಬೆಂಗಳೂರಿಗೆ ಹೋಗುವವರಿದ್ದೆವು. ಬಾಕಿದ್ದವರೆಲ್ಲ ರೈಲಿನಲ್ಲಿ ಬೆಂಗಳೂರಿಗೆ. ಅವರ ರೈಲು ರಾತ್ರಿ ೯ ಗಂಟೆಗೆ. ನಮ್ಮ ವಿಮಾನ ರಾತ್ರೆ ೭.೧೫ಕ್ಕೆ. ನಾವು ಅಲ್ಲಿಂದ ಸೀದಾ ವಿಮಾನ ನಿಲ್ದಾಣಕ್ಕೆ ಹೋಗಿ ಸಮಯ ಕಳೆಯುವುದು ಎಂದು ತೀರ್ಮಾನಿಸಿಕೊಂಡೆವು. ನಾವು ಪರಸ್ಪರ ವಿದಾಯ ಹೇಳಿದೆವು. ವಿಮಾನ ನಿಲ್ದಾಣಕ್ಕೆ ಹೋಗಲು ನಾವು ಬಾಡಿಗೆ ಕಾರು ಏರಿದೆವು. (ರೂ.೬೦೦) ಊಟ ಮಾಡಿಯೇ ಹೋಗುವುದಾ? ಅಲ್ಲ ಅಲ್ಲಿ ಹೋಗಿ ಮಾಡುವುದಾ ಎಂಬ ಜಿಜ್ಞಾಸೆ ಕಾಡಿ ಆಗ ಊಟ ಮಾಡಲು ಸರಿಯಾದ ವೇಳೆಯಲ್ಲ ಎಂದೆನಿಸಿ ಸೀದಾ ವಿಮಾನನಿಲ್ದಾಣಕ್ಕೆ ಹೋದೆವು. ದೆಹಲಿ ಸೈಟ್ ಸೀಯಿಂಗ್ ಬೇಕಾ? ಎಲ್ಲ ನೋಡಿ ಸಂಜೆ ಹೋಗಬಹುದು ಎಂದು ಕಾರು ಚಾಲಕ ಹೇಳಿದ. ಅವರು ಮೂರು ಮಂದಿಯೂ ದೆಹಲಿ ಸುತ್ತಿದವರೇ ಆದ್ದರಿಂದ ಮನಸ್ಸು ಮಾಡಲಿಲ್ಲ. ನೋಡದವಳು ನಾನೊಬ್ಬಳೇ ಇದ್ದುದು.
ದೆಹಲಿ ವಿಮಾನ ನಿಲ್ದಾಣ
ಅಂತಾರಾಷ್ಟ್ರೀಯ ನಂ.೧. ವಿಮಾನ ನಿಲ್ದಾಣ ಎಂದು ಖ್ಯಾತಿಪಡೆದ ದೆಹಲಿಯ ಡೊಮೆಸ್ಟಿಕ್ ವಿಮಾನ ನಿಲ್ದಾಣದಲ್ಲಿ ಇಳಿದೆವು. ಕಾರು ಚಾಲಕ ನಮ್ಮ ಬ್ಯಾಗ್ ಪೇರಿಸಲು ಗಾಡಿಯನ್ನು ತಂದುಕೊಟ್ಟು ಅದರಲ್ಲಿ ಬ್ಯಾಗ್ ಹಾಕಿ ದುಡ್ಡುಪಡೆದು ಹೋದ. ನಾವು ಗಾಡಿ ತಳ್ಳುತ್ತ ಕೂರಲು ಸ್ಥಳವೆಲ್ಲಿದೆಯೆಂದು ನೋಡುತ್ತ ನಡೆದೆವು. ಎಲ್ಲೂ ಸರಿಯಾಗಿ ಬೆಂಚ್ ಹಾಕಿಲ್ಲ. ಕೆಲವೆಡೆ ಮಾತ್ರ ಒಂದೆರಡು ಬೆಂಚ್ ಕಾಣಿಸಿತು. ಅದರಲ್ಲೆಲ್ಲ ಜನ ಕೂತಿದ್ದರು. ಒಬ್ಬ ಹುಡುಗ ಕೂತಿದ್ದವ ಎದ್ದು ನಮಗೆ ಜಾಗ ಕೊಟ್ಟ. ಊಟಕ್ಕೆ ಏನಾದರೂ ಸಿಗುತ್ತದೋ ಎಂದು ನೋಡಲು ಹೋದೆವು. ಹೊರಗೆ ಹತ್ತಿರದಲ್ಲಿ ಒಂದೇ ಹೊಟೇಲು ಕಾಣಿಸಿತು. ಮಾಂಸಾಹಾರ ಸಸ್ಯಾಹಾರ ಒಟ್ಟಿಗೇ ಸಿದ್ಧಪಡಿಸುವ ಹೊಟೇಲು. ಅಲ್ಲಿ ತಿನ್ನಲು ಮನಸ್ಸಾಗಲಿಲ್ಲ. ಮತ್ತೆ ಸಣ್ಣ ಅಂಗಡಿಯಲ್ಲಿ ಎಂಟಿ‌ಆರ್ ಉಪಮಾ ಡಬ್ಬ ಕಾಣಿಸಿತು. ರೂ.೬೦ಕ್ಕೆ ಅದನ್ನು ತೆಗೆದುಕೊಂಡೆವು. ಬಿಸಿನೀರು ಹಾಕಿ ತಿನ್ನಲು ಅನುವುಮಾಡಿಕೊಟ್ಟರು. ಕೂರಲು ಸಾಕಷ್ಟು ಬೆಂಚ್ ಇರದ, ಸರಿಯಾದ ಹೊಟೇಲೂ ಇರದ ಇದು ಅಂತಾರಾಷ್ಟ್ರೀಯ ನಂ.೧ ವಿಮಾನ ನಿಲ್ದಾಣವಾ ಎಂದು ಮನದಲ್ಲೇ ಹೇಳಿಕೊಂಡೆ. ಬೆಂಗಳೂರು ವಿಮಾನ ನಿಲ್ದಾಣ ಇದಕ್ಕಿಂತ ಸಾವಿರಪಟ್ಟು ಚೆನ್ನಾಗಿದೆ ಎಂದೆನಿಸಿತು.
ತಿಂಡಿ ತಿಂದು ಅಲ್ಲಿ ಕೂರುವ ಬದಲು ಒಳಗೆ ಹೋಗಿ ಚೆಕ್ ಇನ್ ಮಾಡಿಸಿಕೊಂಡು ನಾವು ವಿಮಾನ ಹತ್ತುವ ಗೇಟ್ ಬಳಿಯೇ ಹೋದೆವು. ಅಲ್ಲಿ ಕೂರಲು ಸಾಕಷ್ಟು ವ್ಯವಸ್ಥೆ ಇತ್ತು. ಸಂಜೆ ಆರರವರೆಗೂ ಅಲ್ಲಿ ಕಾಲ ನೂಕಿದೆವು.

20160925_222450
ವಿಮಾನ ಪ್ರಯಾಣ
ಆರು ಗಂಟೆಗೆ ಇಂಡಿಗೋ ವಿಮಾನ ಹತ್ತಿ ಕೂತೆವು. ೭.೧೫ಕ್ಕೆ ಹೊರಟಿತು. ವಿಮಾನದಲ್ಲಿ ಚಾಕಲೇಟ್, ಕಾಪಿ, ಊಟ ಕೊಟ್ಟರು. ರಾತ್ರೆ ೧೦ ಗಂಟೆಗೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿದೆವು.

20160925_185852
ಮರಳಿ ಮೈಸೂರಿಗೆ ಪ್ರಯಾಣ
ನಮ್ಮ ಲಗೇಜು ಪಡೆದು ಹೊರಬಂದೆವು. ಹೇಮಮಾಲಾ ಅವರು ಅವರಿಗೆ ಪರಿಚಯ ಇರುವ ಬಾಡಿಗೆ ಕಾರನ್ನು ವಿಮಾನನಿಲ್ದಾಣಕ್ಕೆ ಬರಲು ಹೇಳಿದ್ದರು. ಮಹಾದೇವ ಸರಿಯಾದ ಸಮಯಕ್ಕೇ ಬಂದು ಕಾದಿದ್ದರು. ೧೦.೩೦ಗೆ ಕಾರು ಹತ್ತಿದೆವು. ಸವಿತಾ ದಾರಿಮಧ್ಯೆ ಹೆಬ್ಬಾಳದಲ್ಲಿ ಇಳಿದು ಅವಳ ಗಂಡನ ಜೊತೆ ಮನೆಗೆ ಹೋದಳು. ನಾವು ಮೈಸೂರಿಗೆ ಮಧ್ಯರಾತ್ರಿ ೧.೩೦ಗೆ ತಲಪಿದೆವು. ಅಲ್ಲಿಗೆ ನಮ್ಮ ೧೭ ದಿನದ ಪ್ರವಾಸ ಕೊನೆಗೊಂಡಿತು.

ಕರ್ನಾಟಕ ಸರ್ಕಾರ ಚಾರ್ಧಾಮ ಯಾತ್ರೆ ಮಾಡಿದವರಿಗೆ ರೂ. ೨೦೦೦೦ ಸಹಾಯಧನ ನೀಡುತ್ತದೆ. ಆದರೆ ಅದು ಸರ್ಕಾರದಿಂದ ಅನುಮೋದಿಸಲ್ಪಟ್ಟ ಪ್ರವಾಸೀಸಂಸ್ಥೆಯ ವತಿಯಿಂದ ಹೋದರೆ ಮಾತ್ರ ಕೊಡುವುದಂತೆ. ಹಾಗಾಗಿ ಹೆಚ್ಚಿನ ಮಂದಿಗೂ ಈ ಸಹಾಯಧನ ಲಭಿಸುವುದಿಲ್ಲ. ಅದರಿಂದ ವಂಚಿತರಾಗಬೇಕಾಗುತ್ತದೆ. ಇದು ನ್ಯಾಯವಾದ ದಾರಿಯಲ್ಲ. ನಾವು ಯಾತ್ರೆ ಮಾಡಿರುವುದಕ್ಕೆ ಸಾಕ್ಷಿಯಾಗಿ ಬಯೋಮೆಟ್ರಿಕ್ ಕಾರ್ಡ್ ಇರುತ್ತದೆ. ಅದನ್ನು ನೋಡಿ ಯಾತ್ರೆ ಮಾಡಿದವರಿಗೆ  ಸಹಾಯಧನ ನೀಡುವುದು ಸರಿಯಾದ ನಡೆ.

ಕೃತಜ್ಞಾತಾ ಸಮರ್ಪಣೆ
ಈ ಯಶಸ್ವಿ ಪ್ರವಾಸದ ಹಿಂದೆ ಅನೇಕ ಮಂದಿಯ ತ್ಯಾಗವಿದೆ. ನಮ್ಮ ಅತ್ತೆ ೮೭ರ ವಯೋಮಾನದವರು. ಅವರು ಈ ಇಳಿವಯಸ್ಸಿನಲ್ಲಿ ಮನಸ್ಸಿಲ್ಲದಿದ್ದರೂ ನನಗಾಗಿ ಮಂಗಳೂರಿನ ಮಗನ ಮನೆಗೆ ಪ್ರಯಾಣ ಮಾಡಿ ಅಲ್ಲಿಗೆ ಹೋಗಿದ್ದರು. ಅಲ್ಲಿ ಮಗ ಸೊಸೆ ಅವರನ್ನು ಪ್ರೀತಿಯಿಂದ ನೋಡಿಕೊಂಡಿದ್ದರು. ಇತ್ತ ಅನಂತನಿಗೆ ಕಛೇರಿಯಲ್ಲಿ ಸಾಕಷ್ಟು ಕೆಲಸದ ಒತ್ತಡ ಇದ್ದರೂ ನೀನು ಪ್ರವಾಸ ಹೋಗು ಎಂದು ನನ್ನನ್ನು ಖುಷಿಯಿಂದಲೇ ಕಳುಹಿಸಿಕೊಟ್ಟು, ಮನೆ, ಕಚೇರಿ ಎರಡನ್ನೂ ಯಶಸ್ವಿಯಾಗಿ ನಿಭಾಯಿಸಿದ್ದ. ಇವರೆಲ್ಲರ ಸಹಾಯದಿಂದ ಈ ಯಾತ್ರೆಯನ್ನು ಸುಗಮವಾಗಿ ಕೈಗೊಳ್ಳಲು ನನಗೆ ಸಾಧ್ಯವಾಯಿತು. ನಮ್ಮ ಜೊತೆಯಿದ್ದವರೆಲ್ಲರೂ ಪ್ರವಾಸದುದ್ದಕ್ಕೂ ಬಹಳ ಅನ್ಯೋನ್ಯದಿಂದ ಒಂದೇ ಮನೆಯವರಂತೆ ಇದ್ದು ಪ್ರವಾಸದ ಯಶಸ್ಸಿಗೆ ಕಾರಣಕರ್ತರಾಗಿದ್ದರು. ಪ್ರವಾಸದಲ್ಲಿ ಮುಖ್ಯವಾಗಿ ನಮ್ಮ ಹೊಟ್ಟೆ ಸರಿಯಾಗಿರಬೇಕು. ನಮ್ಮ ಹೊಟ್ಟೆ ಕೆಟ್ಟರೆ ಎಲ್ಲವೂ ಕೆಟ್ಟಂತೆಯೇ. ಶಶಿಕಲಾಕ್ಕ, ಸರಸ್ವತಕ್ಕ ನಮ್ಮ ಪಾಲಿಗೆ ಸಾಕ್ಷಾತ್ ಅನ್ನಪೂರ್ಣೆಯರೇ ಆಗಿ ನಮ್ಮೆಲ್ಲರ ಉದರದ ಯೋಗಕ್ಷೇಮದ ಹೊಣೆ ಹೊತ್ತು ಯಾರಿಗೂ ಹೊಟ್ಟೆ ಕೆಡದಂತೆ ನೋಡಿಕೊಳ್ಳುವಲ್ಲಿ ಅತ್ಯಂತ ಯಶಸ್ವಿಯಾಗಿದ್ದರು. ಇವರೆಲ್ಲರಿಗೂ ಅನಂತಾನಂತ ಧನ್ಯವಾದಗಳು. ವಿಠಲರಾಜು ಅವರು ಈ ಪ್ರವಾಸವನ್ನು ಪ್ರಯಾಸವಾಗದಂತೆ ಎಲ್ಲ ವ್ಯವಸ್ಥೆ ಮಾಡಿ ಬಹಳ ಚೆನ್ನಾಗಿ ಕೈಗೊಂಡಿದ್ದರು. ಅವರಿಗೆ ನಮ್ಮೆಲ್ಲಯಾತ್ರಿಕರ ಪರವಾಗಿ ಹೃತ್ಪೂರ್ವಕ ಧನ್ಯವಾದಗಳು.

 ಧಾರಾವಾಹಿ ಮುಗಿಯಿತು!

Read Full Post »

ವಿಶಾಲ ಬದರಿ
ಜೋಷಿಮಠದಿಂದ ೨೦-೯-೨೦೧೬ರಂದು ಹೊರಟು ೧೨ಗಂಟೆಗೆ ವಿಶಾಲಬದರಿ ತಲಪಿದೆವು. ಕೇದಾರನಾಥದಿಂದ (ಗೌರಿಕುಂಡ) ಬದರಿನಾಥ ಸುಮಾರು ೨೩೩ ಕಿ.ಮೀ. ದೂರದಲ್ಲಿದೆ. ರಿಷಿಕೇಶದಿಂದ ೩೦೧ ಕಿ.ಮೀ. ದೂರ. ಬದರಿ ಸಮುದ್ರಮಟ್ಟದಿಂದ ೧೦೩೫೦ ಅಡಿ ಎತ್ತರದಲ್ಲಿದೆ.

img_5019ಅಲ್ಲಿಯ ದೀಪಕ್ ವಸತಿಗೃಹದಲ್ಲಿ ಲಗೇಜು ಇಟ್ಟು ೧೨.೪೫ಕ್ಕೆ ವಾಪಾಸು ಬಸ್ ಹತ್ತಿ ಮಾನಾದೆಡೆಗೆ ಸಾಗಿದೆವು.
ಭಾರತದ ಕಟ್ಟಕಡೆಯ ಹಳ್ಳಿ ಮಾನಾ
ಈ ಯಾತ್ರೆ ಹೊರಡುವ ಮುನ್ನ, ಮಾನಾ ಹಳ್ಳಿಗೆ ಹೋಗಲಿದೆಯಾ ಎಂದು ಕೇಳಿಕೊಂಡಿದ್ದೆ. ಅದೇನೋ ಈ ಹಳ್ಳಿಯನ್ನು ನೋಡಲೇಬೇಕೆಂದು ಬಹಳ ಕುತೂಹಲವಿತ್ತು. ಆ ಆಸೆ ನೆರವೇರಿತು. ಬದರಿಯಿಂದ ಮಾನಾಗೆ ೪ ಕಿಮೀ ಇದೆ. ಭಾರತದ ಕೊನೆಯ ಹಳ್ಳಿ. ಅಲ್ಲಿಂದ ಮುಂದೆ ಚೀನಾ ಟಿಬೆಟ್ ಸರಹದ್ದು ಪ್ರಾರಂಭವಾಗುತ್ತದೆ. ಆ ಗಡಿಭಾಗದಲ್ಲಿ ಸೇನಾವಾಹನಕ್ಕೆ ಮಾತ್ರ ಪ್ರವೇಶಾವಕಾಶ. ನಾವು ಮಾನಾ ತಲಪುವಾಗ ಗಂಟೆ ಒಂದು ಆಗಿತ್ತು. ಹಳ್ಳಿಯಲ್ಲಿ ಸುತ್ತಿದಾಗ ಮನೆಮುಂದೆ ಕೆಲವರು ಉಣ್ಣೆ ಬೇರ್ಪಡಿಸುತ್ತಿರುವುದು, ಹೆಂಗಸರು ಸ್ವೆಟರ್ ತಯಾರಿಸುತ್ತ ಕೂತಿರುವುದು, ಸ್ವೆಟರ್ ಮಾರಾಟ ಮಾಡುತ್ತ ಇರುವುದು ಕಂಡಿತು. ಮಾನಾ ಹಳ್ಳಿಯಲ್ಲಿ ವರ್ಷದ ಆರು ತಿಂಗಳು ಮಾತ್ರ ಜನವಸತಿ ಇರುತ್ತದೆ. ಚಳಿಗಾಲದಲ್ಲಿ ವಿಪರೀತ ಹಿಮದಿಂದಾಗಿ ಅವರು ತಮ್ಮ ಸಾಕುಪ್ರಾಣಿ, ಜಾನುವಾರುಗಳೊಂದಿಗೆ (ಸಾಕಷ್ಟು ದನಕರುಗಳು ಅಲ್ಲಿ ಇದ್ದುದನ್ನು ಕಂಡೆವು) ಸುರಕ್ಷಿತ ಸ್ಥಳಕ್ಕೆ ವಸತಿ ಬದಲಾಯಿಸುತ್ತಾರೆ. ಅದೆಂತ ಜೀವನ ಅವರದು. ಒಂದು ವರ್ಷವಲ್ಲ, ಜೀವನಪರ್ಯಂತ ಇದೇ ವ್ಯವಸ್ಥೆಯಲ್ಲೇ ಬದುಕಬೇಕು. ಜೀವನೋಪಾಯಕ್ಕಾಗಿ ಕೃಷಿ, ಸ್ವೆಟರು ತಯಾರಿಸುವ, ಹೊಟೇಲು ನಡೆಸುವ ವೃತ್ತಿ ಅವರದು.

dsc00786

dsc00775 dsc00778 img_4962 img_4958

ವ್ಯಾಸ ಗುಹೆ, ಗಣೇಶ ಗುಹೆ,
ಮಾನಾದಲ್ಲಿ ವ್ಯಾಸಗುಹೆ, ಗಣೇಶ ಗುಹೆ ನೋಡಿದೆವು. ವ್ಯಾಸರು ಮಹಾಭಾರತ ಕಥೆ ಹೇಳುವಾಗ ಅದನ್ನು ಗಣಪತಿ ಬರೆದುಕೊಳ್ಳುತ್ತಿದ್ದ ಸ್ಥಳವಂತೆ.
ಪ್ರತೀತಿಯಲ್ಲಿರುವ ಕಥೆ: ವೇದವ್ಯಾಸರು ಮಹಾಭಾರತ ಗ್ರಂಥದ ರಚನೆ ಇಲ್ಲಿಯೇ ಕುಳಿತು ಮಾಡಿದರೆಂಬುದು ಪುರಾಣದ ಕಥೆ. ವ್ಯಾಸರು ಕಥೆ ಹೇಳುವುದನ್ನು ಬರೆದುಕೊಳ್ಳಲು ಗಣೇಶನಲ್ಲಿ ಕೇಳಿದಾಗ, ಅದಕ್ಕೆ ಗಣೇಶ ಸಮ್ಮತಿಸಿ ಒಂದು ಷರತ್ತು ವಿಧಿಸುತ್ತಾನೆ. ಮಧ್ಯೆ ಎಲ್ಲೂ ನಿಲ್ಲಿಸದೆ ಎಡೆಬಿಡದೆ ಹೇಳಿದರೆ ಮಾತ್ರ ಬರೆದುಕೊಳ್ಳುತ್ತೇನೆ. ಮಧ್ಯೆ ಹೇಳುವುದನ್ನು ನಿಲ್ಲಿಸಿದರೆ ನಾನೂ ಬರೆದುಕೊಳ್ಳುವುದನ್ನು ನಿಲ್ಲಿಸಿಬಿಡುತ್ತೇನೆ. ಗಣಪತಿಯ ಈ ಷರತ್ತಿಗೆ ವ್ಯಾಸರು ಒಪ್ಪಿ, ಎಲ್ಲೂ ನಿಲ್ಲಿಸದೆ ಕಥೆ ಹೇಳಲು ಪ್ರಾರಂಭಿಸಿ ಅದನ್ನು ಗಣೇಶ ಬರೆದುಕೊಂಡನು. (ವ್ಯಾಸ ಗುಹೆ ಹಾಗೂ ಗಣೇಶ ಗುಹೆ ಇರುವ ಸ್ಥಳ ಎರಡೂ ತುಂಬ ಹತ್ತಿರ ಇಲ್ಲ. ಆದರೂ ಹೇಗೆ ವ್ಯಾಸರು ಹೇಳಿದ ಕಥೆ ಗಣೇಶನಿಗೆ ಕೇಳಿಸಿತೊ ಗೊತ್ತಿಲ್ಲ! ಗಣೇಶನ ಕಿವಿ ತುಂಬ ದೊಡ್ಡದಿರುವುದರಿಂದ ಕಿವಿಯ ಕ್ಷಮತೆ ಹೆಚ್ಚಿದ್ದಿರಬಹುದು ಹಾಗಾಗಿ ಅಷ್ಟು ದೂರದಿಂದ ಹೇಳಿದ್ದೂ ಕೇಳಿಸಿರಬಹುದು ಎಂದು ಭಾವಿಸೋಣ!) ವ್ಯಾಸರು ಮಹಾಭಾರತದ ಕಥೆ ಹೇಳಲು ಗಣೇಶ ಅದನ್ನು ಬರೆದುಕೊಳ್ಳುತ್ತಿರಬೇಕಾದರೆ ಸರಸ್ವತೀನದಿಯ ಭೋರ್ಗರೆತದಿಂದ ಗಣೇಶನಿಗೆ ಸರಿಯಾಗಿ ಕೇಳದೆ ಇದ್ದದ್ದರಿಂದ ವ್ಯಾಸರು ಸಿಟ್ಟುಗೊಂಡು ಸರಸ್ವತಿಗೆ ಗುಪ್ತಗಾಮಿನಿಯಾಗಿ ಹರಿ ಎಂದು ಶಾಪಕೊಟ್ಟರಂತೆ. ಮುಂದೆ ಸರಸ್ವತೀ ಗುಪ್ತಗಾಮಿನಿಯಾಗಿ ಹರಿದಳಂತೆ. ಅಲ್ಲಿ ಅಲಕನಂದನದಿಗೆ ಸರಸ್ವತೀನದಿ ಸೇರಿಕೊಂಡು ಹರಿದು ಸಂಗಮವಾಗುವುದನ್ನು ನೋಡಿದೆವು.
ಇಲ್ಲಿ ವ್ಯಾಸ ಗುಹೆಯಲ್ಲಿ ವ್ಯಾಸರ ಮೂರ್ತಿ ಇದೆ. ಹಾಗೆಯೇ ಗಣೇಶ ಗುಹೆಯಲ್ಲಿ ಗಣೇಶನ ಮೂರ್ತಿ ಇದ್ದು, ಪೂಜೆ ನಡೆಯುತ್ತದೆ.

dsc00755

ಭೀಮಶಿಲೆ, ಭೀಮಪೂಲ್
ಮುಂದೆ ಹೋದಂತೆ ಬೃಹತ್ತಾದ ಭೀಮಶಿಲೆ ಕಾಣುತ್ತದೆ. ಅಲ್ಲಿ ಸರಸ್ವತೀನದಿ ಜೋರಾಗಿ ಹರಿಯುತ್ತ ಜಲಪಾತದಂತೆ ಕಾಣುತ್ತದೆ. ಆ ಮಧ್ಯಾಹ್ನ ಭೀಮಪೂಲಿನಲ್ಲಿ ಕಾಮನಬಿಲ್ಲು ಮೂಡಿ ಸುಂದರವಾಗಿ ಕಾಣುತ್ತಿತ್ತು. ಭೀಮಶಿಲೆ ಬಗ್ಗೆ ಕಥೆ ಹೀಗಿದೆ: ಕುರುಕ್ಷೇತ್ರ ಯುದ್ಧದಲ್ಲಿ ಅಪಾರ ಸಾವುನೋವುಗಳು ಆಗಿತ್ತಷ್ಟೆ. ಪಾಂಡವರು ಪ್ರಾಣಹತ್ಯಾ ದೋಷ ನಿವಾರಣೆಗಾಗಿ ಶಿವನನ್ನು ಅರಸುತ್ತ ಬರುತ್ತಿದ್ದಾಗ, ಸರಸ್ವತೀನದಿಯನ್ನು ದಾಟಬೇಕಾಗಿ ಬರುತ್ತದೆ. ಸರಸ್ವತಿಯ ಮಡಿಲಲ್ಲಿ ಕಾಲು ಊರಲು ಮನಸ್ಸಾಗದೆ, ನದಿ ದಾಟಲು ಭೀಮ ದೊಡ್ಡದಾದ ಬಂಡೆಯನ್ನೊಂದನ್ನು ಸರಸ್ವತೀನದಿಗೆ ಅಡ್ಡಲಾಗಿ ನಿಲ್ಲಿಸಿದನಂತೆ. ಭೀಮನ ಕೈ ಬೆರಳುಗಳ ಗುರುತುಗಳಿವೆ ಎಂದು ಅಲ್ಲಿರುವ ಚಿಕ್ಕ ಸೇತುವೆಯಂತೆ ನಿಂತಿರುವ ಒಂದು ದೊಡ್ಡದಾದ ಬಂಡೆಯನ್ನು ತೋರಿಸುತ್ತಾರೆ. ಅಲ್ಲೇ ಪಕ್ಕದಲ್ಲಿ ಭಾರತದ ಕೊನೆಯ ಚಹಾ ದುಖಾನೆ ಎಂಬ ಫಲಕವಿರುವ ಅಂಗಡಿ ಇದೆ. ಅಲ್ಲಿಗೆ ಹಳ್ಳಿ ಕೊನೆಯಾಗುತ್ತದೆ. ಇಲ್ಲಿ ಸರಸ್ವತಿಯ ಚಿಕ್ಕ ಮಂದಿರವಿದೆ. ಇಲ್ಲಿಂದ ಬಗ್ಗಿ ನೋಡಿದರೆ ನಮಗೆ ರಭಸದಿಂದ ಹರಿಯುತ್ತಿರುವ ಸರಸ್ವತೀನದಿ ಕಾಣುತ್ತದೆ. ಸುತ್ತ ಹಸಿರು ಹೊತ್ತ ಬೆಟ್ಟ ಸಾಲುಗಳು ಬಲು ಸುಂದರವಾಗಿ ಕಾಣುತ್ತದೆ.
ಅದನ್ನು ನೋಡಿ ಅಲ್ಲಿಂದ ನಾವು ಹಾಗೇ ಮುಂದುವರೆದು ವಸುಧಾರಾ ಫಾಲ್ಸ್ ಕಡೆಗೆ ಹೆಜ್ಜೆ ಹಾಕಿದೆವು.

dsc00766

OLYMPUS DIGITAL CAMERA

img_4992

img_4986

ವಸುಧಾರಾ ಫಾಲ್ಸ್
ಮಾನಾದಿಂದ ಸುಮಾರು ೫ ಕಿಮೀ ನಡೆದರೆ ವಸುಧಾರಾ ಫಾಲ್ಸ್ ಸಿಗುತ್ತದೆ. ಬಿರುಸಾಗಿ ನಡೆಯಲು ಸಾಧ್ಯವಾದವರು ಮಾತ್ರ ಇಲ್ಲಿಗೆ ಬರತಕ್ಕದ್ದು ಎಂದು ವಿಠಲರಾಜು ಕಟ್ಟುನಿಟ್ಟಾಗಿ ಹಿಂದಿನ ದಿನವೇ ಹೇಳಿದ್ದರು. ಸವಿತಾ, ಶಶಿಕಲಾ, ರಂಗಪ್ರಸಾದ, ಲತಾ, ರುಕ್ಮಿಣಿಮಾಲಾ, ಪೂರ್ಣಿಮಾ, ಸರೋಜ, ಶೋಭಾ, ವಿಠಲರಾಜು ಒಂಬತ್ತು ಮಂದಿ ಮಾತ್ರ ಭೀಮಪೂಲಿನಿಂದ ಮುಂದೆ ಹೆಜ್ಜೆ ಹಾಕಿದೆವು. ಬಾಕಿದ್ದವರೆಲ್ಲ ಮಾನಾ ಹಳ್ಳಿಯಲ್ಲೆ ಉಳಿದರು. ಅವರು ಹಳ್ಳಿ ಸುತ್ತಿ ವಿಸ್ತಾರವಾಗಿ ನೋಡಿ ಖುಷಿಪಟ್ಟರಂತೆ.
ನಾವು ನಡೆದೆವು ನಡೆದೆವು. ನಡೆದಷ್ಟೂ ಮುಗಿಯುವುದೇ ಇಲ್ಲ. ದೂರದಲ್ಲಿ ಒಮ್ಮೆ ಫಾಲ್ಸ್ ಕಂಡು ಓಹೋ ಇನ್ನು ದೂರವಿಲ್ಲ, ಕಾಣುತ್ತಲ್ಲ ಜಲಪಾತ ಅಂತ ಖುಷಿಯಿಂದ ಹೆಜ್ಜೆ ಹಾಕುತ್ತಿದ್ದೆವು. ಆದರೆ ಮುಂದೆ ಸಾಗಿದಂತೆಲ್ಲ ಜಲಪಾತ ಮಾಯ. ಎಷ್ಟೋ ದೂರವಿದೆ ಅದು. ನಡೆಯುವ ದಾರಿಯನ್ನು ಅಲ್ಲೇ ಲಭ್ಯವಿದ್ದ ಕಲ್ಲು ಹಾಕಿ ದಾರಿ ಚೆನ್ನಾಗಿ ಮಾಡಿದ್ದಾರೆ. ಕಲ್ಲುಗಳಿಗೆ ಅಲ್ಲಿ ಬರವಿಲ್ಲ. ದಾರಿ ಬದಿ ವಿಧವಿಧ ಹೂಗಳು ಕಾಣಿಸಿತು. ಬಂಡೆಗಲ್ಲುಗಳಲ್ಲಿ ಬಣ್ಣಬಣ್ಣದ ಪಾಚಿಯಂತೆ ಕಾಣುವ ಸಸ್ಯ. ಬೇರೆ ಬೇರೆ ಬಣ್ಣದ ಬಂಡೆಗಲ್ಲುಗಳು ಇದ್ದುವು. ದಾರಿಯುದ್ದಕ್ಕೂ ಕೆಳಗೆ ಅಲಕನಂದ ನದಿ ಹರಿಯುವುದು ಕಾಣುತ್ತದೆ. ಸುತ್ತಲೂ ಪರ್ವತಗಳಿದ್ದು, ಕುರುಚಲು ಸಸ್ಯಗಳಿವೆ. ದೊಡ್ಡ ಮರಗಳಿಲ್ಲ. ಬೆಟ್ಟಗಳು ಹಿಮದಿಂದ ಕೂಡಿ ಸುಂದರವಾಗಿ ಕಾಣುತ್ತಿತ್ತು.

img_5007

20160920_164159

20160920_170437

ಜಲಪಾತ ನೋಡಿ ಹಿಂದಿರುಗುತ್ತಿದ್ದವರನ್ನೆಲ್ಲ ಕೇಳುತ್ತಿದ್ದೆವು. ಇನ್ನು ಎಷ್ಟು ದೂರ ಇದೆಯೆಂದು. ಕೆಲವರು, ಇನ್ನು ಸ್ವಲ್ಪ ಅಷ್ಟೆ ಎಂದರೆ, ಇನ್ನು ಕೆಲವರು ನೀವೀಗ ಅರ್ಧ ದಾರಿ ಬಂದಿರಷ್ಟೆ. ಇನ್ನೂ ಸುಮಾರು ದೂರ ಹೋಗಬೇಕು ಅಂತ ಹೇಳುತ್ತಿದ್ದರು. ವಯಸ್ಸಾದ ಹೆಂಗಸರು ಫಾಲ್ಸ್ ನೋಡಿ ವಾಪಾಸು ಬರುತ್ತಿದ್ದದ್ದು ಮುಂದೆ ನೋಡಿ ನಡೆಯಲು ಸ್ಫೂರ್ತಿ ಬಂತು. ಈ ಕಲ್ಲು ದಾರಿಯಲ್ಲಿ ಬರಿಕಾಲಿನಲ್ಲಿ ನಡೆಯುತ್ತಿದ್ದ ಅವರನ್ನು ನೋಡಿ ಅಬ್ಬ ಇವರ ಸಾಹಸವೇ ಎನಿಸಿತು! ಅವರು ರಾಜಸ್ಥಾನದಿಂದ ಬಂದದ್ದಂತೆ. ಅಲ್ಲಿ ದಿನಾ ಸಾಕಷ್ಟು ದೂರದಿಂದ ನೀರು ಹೊತ್ತು ನಡೆದು ಅವರಿಗೆ ಅಭ್ಯಾಸವಿರಬಹುದು ಎಂದು ಭಾವಿಸಿಕೊಂಡೆ. ಮುಂದೆ ನಡೆದಂತೆ ಆಯಾಸವಾಗಿ, ಉಸಿರಾಟ ಕಷ್ಟವೆನಿಸುತ್ತಿತ್ತು. ಆದರೂ ಮುಂದೆ ಗುರಿ ಇರುವುದರಿಂದ ಅಲ್ಲಿ ಹೋಗಿ ತಲಪಲೇಬೇಕೆಂಬ ಅದಮ್ಯ ಉತ್ಸಾಹ ಬರಿಸಿಕೊಳ್ಳುತ್ತ ಮುಂದಕ್ಕೆ ಕಾಲು ಎತ್ತಿ ಹಾಕುತ್ತಿದ್ದೆವು. ಇದನ್ನು ಆಗಾಗ ಆಘ್ರಾಣಿಸಿ ಉಸಿರಾಟ ಸುಲಭವಾಗುತ್ತದೆ ಎಂದು ವಾಪಾಸು ಬರುತ್ತಿದ್ದ ಹೆಂಗಸೊಬ್ಬಳು ನನಗೆ ಕರ್ಪೂರ ಕೊಟ್ಟಳು. ಉಸ್ ಎಂದು ಕಷ್ಟವಾಗುವಾಗ ಆಗಾಗ ಅದನ್ನು ಮೂಸುತ್ತ ನಡೆದೆ. ಅಲ್ಲಿರುವ ಒಂದು ಸಸ್ಯವನ್ನು ಮೂಸಿದರೂ ಉಸಿರಾಟ ಸರಾಗವಾಗಿ ಆಗುತ್ತದೆ ಎಂದು ವಿಠಲರಾಜು ಆ ಸಸ್ಯ ತೋರಿಸಿದರು. ವಿಶಿಷ್ಟ ಪರಿಮಳವಿತ್ತದು. ಸಮುದ್ರಮಟ್ಟದಿಂದ ವಸುಧಾರಾ ಫಾಲ್ಸ್ ೧೩೦೦೦ ಅಡಿ ಮೇಲಿದೆ.
ಮೊದಮೊದಲು ಉತ್ಸಾಹ ಜಾಸ್ತಿಯಾಗಿದ್ದು, ಪ್ರಕೃತಿ ಸೌಂದರ್ಯವನ್ನು ನೋಡುತ್ತಲೇ, ಒಂದು ಹೂ ಕಂಡರೂ ಅದನ್ನು ಕ್ಯಾಮರಾದಲ್ಲಿ ಕ್ಲಿಕ್ಕಿಸುತ್ತ, ಬಂಡೆಕಲ್ಲು ಕಂಡರೂ ಆಹಾ ಎಷ್ಟು ಚಂದ ಇದೆ ಇದು ಎಂದು ಪೂರ್ಣಿಮಳಿಗೆ ತೋರಿಸುತ್ತ ಸಾಗುತ್ತಿದ್ದೆ. ಮುಂದೆ ಸಾಗುತ್ತಿದ್ದಂತೆ ಕ್ಯಾಮರಾ ಚೀಲದೊಳಗೆ ಸೇರಿತು. ಫೋಟೋ ತೆಗೆಯುವುದೂ ಬೇಡ, ಒಮ್ಮೆ ಅಲ್ಲಿ ತಲಪಿದರೆ ಸಾಕು ಅನಿಸಲು ತೊಡಗಿತು. ಒಮ್ಮೆ ಬೆಟ್ಟ ಹತ್ತಿದರೆ ಮತ್ತೆ ಇಳಿಯಬೇಕು. ಹತ್ತಿ ಉಸ್ ಎಂದು ನಿಂತು ಸುಧಾರಿಸಿ ಮುಂದೆ ನಡೆಯುತ್ತಿದ್ದೆವು. ಹೀಗೆ ಕಠಿಣವಾದ ದಾರಿ. ಪೂರ್ಣಿಮಾ ನಿಮ್ಮ ಹೆಸರನ್ನು ಪೂರ್ತಿ ಹೇಳಲೂ ಆಗದಷ್ಟು ಸುಸ್ತು. ಹಾಗೆ ಪೂರ್ಣಿ ಎನ್ನುತ್ತೇನೆ ಎಂದು ಆ ಸುಸ್ತಿನಲ್ಲೂ ತಮಾಷೆ ಮಾಡುತ್ತಿದ್ದೆ. ಹಾಗೆಯೇ ಹೇಳಿ. ಮನೆಯಲ್ಲಿ ಎಲ್ಲರೂ ನನ್ನನ್ನು ಹಾಗೆಯೇ ಕರೆಯುವುದು ಎಂದು ಅವರೂ ಉಸ್ ಎಂದು ಉಸಿರು ಬಿಡುತ್ತ ಸಮ್ಮತಿಸಿದರು!

20160920_181246

ಪರಿಮಳದ ಸಸ್ಯ

img_5017

img_5010

img_4999

img_5009

OLYMPUS DIGITAL CAMERA

ಊಟ ಮಾಡದೆ ನಾವು ಚಾರಣ ಹೊರಟದ್ದು. ಹೊಟ್ಟೆಯೂ ಹಸಿಯಲು ತೊಡಗಿ ಸುಸ್ತು ಹೆಚ್ಚಾಯಿತು. ಚೀಲದಲ್ಲಿ ನಾಲ್ಕು ಸೇಬು, ಬಾದಾಮಿ ಇತ್ತು. ಒಂದು ಸೇಬು, ನಾಲ್ಕಾರು ಬಾದಾಮಿ ತಿಂದದ್ದೇ ದೇಹ ಚೈತನ್ಯ ಪಡೆಯಿತು. ಮುಂದೆ ನಡೆಯಲು ಶಕ್ತಿ ನೀಡಿತು. ನನ್ನೊಡನೆ ಇದ್ದವರಿಗೆಲ್ಲ ಸೇಬು, ಬಾದಾಮಿ ಕೊಟ್ಟೆ. ಹಸಿವು ಆದರೆ ದೇಹದಲ್ಲಿ ತ್ರಾಣವೇ ಇರುವುದಿಲ್ಲ, ಹಸಿವೆಂದರೆ ಹೇಗಿರುತ್ತದೆ ಎಂಬುದು ಅಲ್ಲಿ ಮನವರಿಕೆಯಾಯಿತು. ಅಂತೂ ನಾಲ್ಕು ಗಂಟೆಗೆ ವಸುಧಾರಾ ಫಾಲ್ಸ್ ಬಳಿ ತಲಪಿಯೇ ಬಿಟ್ಟೆವು. ನಾಲ್ಕು ಮಂದಿ ೩.೩೦ಕ್ಕೇ ತಲಪಿದರು. ಶೋಭಾ ಮುಕ್ಕಾಲು ದಾರಿ ಕ್ರಮಿಸಿದವರು ಕಡೇ ಘಳಿಗೆಯಲ್ಲಿ ಹಿಂದಕ್ಕೇ ವಾಪಾಸಾದರು. ವಾಪಾಸು ಹೋಗಲು ತುಂಬ ತಡವಾದೀತು, ತನ್ನಿಂದ ಇತರರಿಗೆ ತೊಂದರೆಯಾಗುವುದು ಬೇಡ ಎಂದು ಅವರು ಹಿಂದೆ ಹೋಗುವ ತೀರ್ಮಾನ ಮಾಡಿದ್ದಂತೆ.
ವಸುಧಾರಾ ಫಾಲ್ಸ್ ಬಲು ಎತ್ತರದ ಬೆಟ್ಟದಿಂದ ಕೆಳಗೆ ಅಲೆ‌ಅಲೆಯಾಗಿ ಧುಮುಕುತ್ತದೆ. ಓಹ್ ಎಂಥ ಸೌಂದರ್ಯವದು. ಮೇಲೆ ನಿಂತಿದ್ದ ನಮ್ಮ ಮುಖದತ್ತ ನೀರಿನ ಅಲೆಗಳು ಗಾಳಿಯಲ್ಲಿ ಸೋಕಿದಾಗ ಆಹಾ ಇಲ್ಲಿ ಬಂದದ್ದೂ ಸಾರ್ಥಕವೆನಿಸುವಂಥ ಭಾವ ಆ ಕ್ಷಣ ಮೂಡುತ್ತದೆ. ಅಲ್ಲಿ ನಮ್ಮ ಮುಖಕ್ಕೆ ನೀರು ಸೋಕದೆ ಇದ್ದರೆ ನಾವು ಏನೋ ಪಾಪ ಮಾಡಿದ್ದೇವೆಂದು ಪ್ರತೀತಿಯಲ್ಲಿದೆಯಂತೆ! ನಮ್ಮೆಲ್ಲರ ಮುಖಕ್ಕೂ ನೀರಹನಿ ಪನ್ನೀರಿನಂತೆ ಸೋಕಿತ್ತು. ಇದರಿಂದ ಸದ್ಯ ನಾವ್ಯಾರೂ ಯಾವ ಪಾಪವೂ ಮಾಡಿಲ್ಲವೆಂಬುದು ಖಾತ್ರಿಯಾಯಿತು!

20160920_162237

20160920_161333

20160920_160748

OLYMPUS DIGITAL CAMERA

ಅಷ್ಟವಸುಗಳು ಮೂವತ್ತು ಸಾವಿರ ವರ್ಷ ಇಲ್ಲಿ ತಪಸ್ಸು ಮಾಡಿದ್ದರಂತೆ. ಅಬ್ಬ ಅವರು ತಪಸ್ಸಿಗೆ ಕೂರಲು ಕಂಡುಹಿಡಿದ ಸ್ಥಳ ಎಂತದ್ದು ಮಾರಾಯ್ತಿ, ಮಾರಾಯ್ರೆ!
ಅಲ್ಲಿ ಭಾವಚಿತ್ರ ತೆಗೆಸಿಕೊಂಡೆವು. ನಾವು ಕೆಳಗೆ ನೀರಿನ ಬಳಿ ಇಳಿಯಲಿಲ್ಲ. ಇಳಿದರೆ ವಾಪಾಸು ಹೋಗಲು ತಡವಾಗುತ್ತದೆ. ೫ಕಿಮೀ ಹಿಂದಕ್ಕೆ ನಡೆಯಬೇಕಲ್ಲ. ಕತ್ತಲೆ ಆದರೆ ಇಲ್ಲಿ ನಡೆಯುವುದು ಕಷ್ಟ ಎಂದು ನಾವು ಕೇವಲ ಇಪ್ಪತೈದು ನಿಮಿಷ ಅಲ್ಲಿದ್ದು ೪.೨೫ಕ್ಕೆ ಹಿಂದಕ್ಕೆ ವಾಪಾಸು ನಡೆಯಲು ತೀರ್ಮಾನಿಸಿದೆವು.
ನಡೆದು ಬರುತ್ತಿರುವಾಗ ಹಿಮತುಂಬಿದ ಬೆಟ್ಟ ಬಲು ಸೊಗಸಾಗಿ ಕಾಣುತ್ತಿತ್ತು. ಪೂರ್ಣಿಮಾ ಹಾಗೂ ನಾನು ಅದನ್ನು ನೋಡುತ್ತಲೇ ಓಹೋ ಹಿಮಾಲಯ ಆಹಾ ಹಿಮಾಲಯ ಎಂದು ಹಾಡುಕಟ್ಟಿ ಹಾಡುತ್ತ ನಡೆದೆವು. ಹೋದಾಗ ಇದ್ದ ಸುಸ್ತು ಮಾಯವಾಗಿತ್ತು! ಬರುತ್ತ, ಕೆಳ ಭಾಗದಲ್ಲಿ ಸೇನೆಯ ಇಬ್ಬರು ತರುಣರು ಕಾವಲು ಕಾಯುತ್ತಿರುವುದನ್ನು ಕಂಡೆವು. ಚಳಿಮಳೆಗೂ ನಿರಂತರ ಕೆಲಸ ಮಾಡಬೇಕು ಅವರು. ಆ ನಿರ್ಜನ ಪ್ರದೇಶದಲ್ಲಿ ಅಷ್ಟು ದೂರದಲ್ಲಿ ಇಬ್ಬರೇ ನಿಂತು ಸದಾ ಕಟ್ಟೆಚ್ಚರದಲ್ಲಿದ್ದು ಕರ್ತವ್ಯ ನಿರ್ವಹಿಸುತ್ತಾರಲ್ಲ, ಅವರನ್ನು ನೋಡುವಾಗ ಗೌರವ ಭಾವ ಮೂಡಿ ಮನಸ್ಸು ಆದ್ರವಾಗುತ್ತದೆ. ಅವರ ಈ ಕಾರ್ಯದಿಂದ ತಾನೆ ಇಲ್ಲಿ ನಾವೆಲ್ಲಾ ನೆಮ್ಮದಿಯಿಂದ ಜೀವಿಸುತ್ತಿದ್ದೇವೆ ಎಂಬುದು ನಮ್ಮ ನೆನಪಿನಲ್ಲಿ ಸದಾ ಇರಬೇಕು. (ಕೆಳಗಿನ ಚಿತ್ರದ ಮೇಲೆ ಕ್ಲಿಕ್ ಮಾಡಿ ದೊಡ್ಡದಾಗಿ ಮಾಡಿದಾಗ ಇಬ್ಬರು ನಿಂತದ್ದು ಕಾಣುತ್ತದೆ)

20160920_164213

ಸೇನಾ ಸಿಬ್ಬಂದಿ ಕಾವಲು

ನಾವು ವಾಪಾಸು ಬರುತ್ತಿರಬೇಕಾದರೆ ಕೆಲವು ಮಂದಿ ಜಲಪಾತದೆಡೆಗೆ ಹೋಗುತ್ತಿದ್ದರು. ನಾವು ಅವರಿಗೆ ಸ್ಪಷ್ಟವಾಗಿ ಹೇಳಿದೆವು. ಈಗ ಹೋಗಬೇಡಿ. ಕತ್ತಲಾಗುತ್ತದೆ. ನೀವು ಅಲ್ಲಿಗೆ ತಲಪುವಾಗಲೇ ಕತ್ತಲಾದೀತು. ತುಂಬ ನಡೆಯಬೇಕು. ಮತ್ತೆ ಹಿಂದೆ ಬರುವುದು ಕಷ್ಟ. ಆದರೆ ಅವರು ನಮ್ಮ ಮಾತಿಗೆ ಕಿವಿಗೊಡದೆ ಮುಂದೆ ಹೋದರು. ಹೇಗೆ ಹಿಂದೆ ಬಂದರೋ? ಕೆಲವರಂತೂ ಚಳಿ ತಡೆಯಲು ಸ್ವೆಟರ್ ಇಲ್ಲದೆ ಹೋಗುತ್ತಿದ್ದರು. ಒಬ್ಬಳಂತೂ ತೋಳಿಲ್ಲದ ಅಂಗಿ ಧರಿಸಿದ್ದಳು. ಚಳಿ ಮೆಲ್ಲಮೆಲ್ಲನೆ ಆವರಿಸಿಕೊಳ್ಳಲು ಹವಣಿಸುತ್ತಿತ್ತು. ಸುತ್ತಲೂ ಬೆಟ್ಟದಿಂದಾವರಿಸಿದ ಕಾರಣ ಸಂಜೆ ಐದು ಗಂಟೆಯಾಗುವಾಗಲೇ ಸೂರ್ಯ ಕಾಣಿಸುವುದಿಲ್ಲ. ಕತ್ತಲು ಬೇಗ ಆಗುತ್ತದೆ. ಎಷ್ಟು ದೂರ ನಡೆಯಬೇಕೆಂಬ ತಿಳಿವಳಿಕೆ ಇಲ್ಲದೆ ಹೋಗುತ್ತಿದ್ದರು. ವಸುಧಾರಾ ಫಾಲ್ಸ್ ಕಡೆಗೆ ಹೋಗಲು ಪ್ರಶಸ್ತ ಕಾಲ ಬೆಳಗ್ಗೆ ಬೇಗ ಹೊರಟು ಹೋಗಬೇಕು. ಆಗ ಆರಾಮವಾಗಿ ನಡೆಯುತ್ತ, ಅಲ್ಲಿ ಜಲಪಾತವನ್ನು ಮನದಣಿಯೆ ನೋಡಿ ಆನಂದಿಸಿ ವಾಪಾಸು ಬರಬಹುದು.
ಸಂಜೆ ೬.೪೫ಕ್ಕೆ ನಾವು ಮಾನ ತಲಪಿದೆವು. ತಲಪಿ ವ್ಯಾಸಗುಹೆ, ಗಣಪತಿ ಮಂದಿರ ಎಲ್ಲ ನೋಡಿದೆವು. ಓಹ್ ೧.೩೦ರಿಂದ ೬.೪೫ರವರೆಗೆ ಉಳಿದವರು ನಮ್ಮನ್ನು ಕಾಯುತ್ತ ಅಲ್ಲೇ ಇದ್ದರು. ಬಸ್ಸಿನಲ್ಲಿ ಕುಳಿತು ಹರಟುತ್ತಿದ್ದರು. ಅವರ ಈ ತಾಳ್ಮೆಗೆ ನಮೋನಮಃ. ಅವರು ಹಳ್ಳಿ‌ಇಡೀ ತಿರುಗಿ, ಅಲ್ಲಿ ಸಿಕ್ಕುವ ಮೊಮೋ ಎಂಬ ತಿಂಡಿ, ಕುರುಕಲು ತಿಂಡಿ, ಜ್ಯೂಸ್ ಎಲ್ಲ ರುಚಿ ನೋಡಿದರಂತೆ.
ಬದರಿನಾರಾಯಣನ ದರ್ಶನ
ಬಸ್ ಹತ್ತಿ ನಾವು ಬದರಿಗೆ ಬಂದೆವು. ಕೋಣೆಗೆ ಹೋಗಿ ಮುಖ ತೊಳೆದು ಬದರಿನಾರಾಯಣ ದೇವಾಲಯಕ್ಕೆ ಬಂದೆವು. ನಮ್ಮ ವಸತಿಗೃಹದಿಂದ ನಾಲ್ಕುಮಾರು ದೂರದಲ್ಲಿ ದೇವಾಲಯವಿದ್ದುದು. ತುಂಬ ಜನ ಇದ್ದರು. ಒಳಗೆ ಆಗ ಪ್ರವೇಶವಿರಲಿಲ್ಲ. ಹೊರಗಿನಿಂದಲೇ ದೇವರ ದರ್ಶನ ಮಾಡಿದೆವು.

OLYMPUS DIGITAL CAMERA

OLYMPUS DIGITAL CAMERA

ಅನಂತಮಠ
ಬದರಿಯಲ್ಲಿ ಉಡುಪಿ ಪೇಜಾವರದ ಅನಂತಮಠ ಇದೆ. ಅಲ್ಲಿ ಊಟ ಮಾಡುವ ಬಹಳ ಚೆನ್ನಾಗಿರುತ್ತದಂತೆ ಎಂದು ಸರೋಜ ಹೇಳಿದ್ದರು. ಸರೋಜ ಅವರಿಗೆ ಗೊತ್ತಿದ್ದವರಿಗೆ ದೂರವಾಣಿ ಮಾಡಿ ಮಧ್ಯಾಹ್ನವೇ ಕೇಳಿದ್ದರು. ಬನ್ನಿ ಎಂದು ಅಲ್ಲಿಂದ ಆಹ್ವಾನ ಬಂದಿತ್ತಂತೆ. ಆದರೆ ಊಟವಿಲ್ಲ. ಇವತ್ತು ತಿಂಡಿ ಎಂದಿದ್ದರಂತೆ. ನಾವೂ ಖುಷಿಯಿಂದಲೇ ಅವರ ಈ ಮಾತಿಗೆ ಸಮ್ಮತಿ ಇತ್ತಿದ್ದೆವು. ಸರೋಜರಿಗೂ ಅನಂತಮಠ ಇರುವುದು ಎಲ್ಲಿ ಎಂದು ಗೊತ್ತಿಲ್ಲ. ಕೇಳಿಕೊಂಡು ನಡೆದೆವು. ಅನಂತಮಠ ತಲಪಲು ಸ್ವಲ್ಪ ಹೆಚ್ಚೇ ದೂರ ನಡೆಯಬೇಕಾಯಿತು. ದೇವಾಲಯದಿಂದ ಸುಮಾರು ಒಂದು ಕಿಮೀ ದೂರ ಇರಬಹುದು. ಆಗ ಕೆಲವರ ತಾಳ್ಮೆ ತಪ್ಪಲು ಸುರುವಾಯಿತು. ಆ ಪರಿಣಾಮ ನಿಷ್ಟುರವಾಗಿ ಮಾತಾಡಿದರು. ಬೇಕಿತ್ತ ಈ ಉಸಾಬಾರಿ ನನಗೆ ಎಂದು ಸರೋಜ ನಮ್ಮಲ್ಲಿ ಹೇಳಿಕೊಂಡರು. ಆಗ ನಾವು, ‘ಇದೂ ಒಂದು ಅನುಭವ ತಾನೆ. ನಮಗೆ ಅನಂತಮಠ ನೋಡಿದ ಹಾಗೂ ಆಯಿತು. ಇಂಥ ಮಾತಿಗೆಲ್ಲ ನೀವೇನು ತಲೆಕೆಡಿಸಿಕೊಳ್ಳಬೇಡಿ’ ಎಂದು ನಾವು ಕೆಲವರು ಸಂತೈಸಿದೆವು. ಮನುಜನ ತಾಳ್ಮೆ ಪರೀಕ್ಷಿಸುವ ಕಾಲವದು. ಇಂಥ ಒಳ್ಳೆಯ ಯಾತ್ರೆ ಮಾಡಿದರೂ, ಊಟಕ್ಕೆ ಸ್ವಲ್ಪ ತಡವಾದರೂ ಅದನ್ನು ಸಹಿಸುವ ತಾಳ್ಮೆ ಸ್ವಲ್ಪವೂ ಬರುವುದಿಲ್ಲವಲ್ಲ? ಎಂಥ ವಿಪರ್ಯಾಸವಿದು. ಎಂದು ಮನದಲ್ಲೇ ಮಂಥನ ನಡೆಸಿದೆ. ಕೆಲವರಿಗೆ ಹೊಟ್ಟೆ ಹಸಿದರೆ ಬಲುಬೇಗ ಸಿಟ್ಟು ಬರುತ್ತದಂತೆ. ಹಾಗಿದೆ ನಮ್ಮ ಹೊಟ್ಟೆಪಾಡು!
ಅನಂತಮಠಕ್ಕೆ ಹೋದೆವು. ಅಲ್ಲಿ ಕೂಡಲೇ ನಮ್ಮನ್ನು ಊಟದ ಕೋಣೆಗೆ ಕರೆದುಕೊಂಡು ಹೋಗಿ ಒಗ್ಗರಣೆ ಹಾಕಿದ ದಪ್ಪ‌ಅವಲಕ್ಕಿ ಕೊಟ್ಟರು. ಹೊಟ್ಟೆ ತುಂಬ ತಿಂದೆವು. ಹಸಿದ ಹೊಟ್ಟೆಗೆ ಬಿಸಿಬಿಸಿಯಾಗಿ ಬಲು ರುಚಿಯಾಗಿತ್ತು. ಮಠಕ್ಕೆ ಯತಾನುಶಕ್ತಿ ಕಾಣಿಕೆ ಸಲ್ಲಿಸಿ, ಸರೋಜರಿಗೆ ಕೃತಜ್ಞತೆ ಸಲ್ಲಿಸಿದೆವು. ಈ ಮೊದಲು ಕೋಪಗೊಂಡು ಮಾತಾಡಿದವರೂ ಕ್ಷಮೆ ಕೇಳಿ ದೊಡ್ಡವರೆನಿಸಿಕೊಂಡದ್ದು ನೋಡಿ ನನಗಂತೂ ತುಂಬ ಖುಷಿ ಆಯಿತು. ಸರೋಜರೂ ನಿರಾಳರಾದರು. ನಾವು ನಡೆಯುತ್ತ ವಸತಿಗೃಹಕ್ಕೆ ಬಂದೆವು.
ಕೋಣೆಯಲ್ಲಿ ನಾನು, ಸವಿತಾ, ಲತಾ ಇದ್ದುದು. ಹೊರಗೆ ಅಷ್ಟು ಚಳಿ ಎನಿಸಿರಲಿಲ್ಲ. ತಲೆಗೆ ಟೋಪಿ ಹಾಕಲು ಮರೆತು ಸುತ್ತಿದ್ದೆ. ಆದರೂ ಚಳಿ ಆಗಿರಲಿಲ್ಲ. ಆದರೆ ಕೋಣೆಯೊಳಗೆ ಕಿಟಕಿಗಳೆಲ್ಲ ಹಾಕಿಯೇ ಇದ್ದರೂ ತಣ್ಣಗೆ ಕೊರೆಯುತ್ತಿತ್ತು. ಹಾಸಿಗೆ ತಣ್ಣಗಾಗಿತ್ತು. ಅದರಲ್ಲೇ ಮಲಗಿ ನಿದ್ರಿಸಿದೆವು.
ಉದರಪೋಷಣೆ
ಬೆಳಗ್ಗೆ (೨೧-೯-೧೬) ಆರು ಗಂಟೆಗೆ ಎದ್ದು ಬಿಸಿನೀರು ಪಡೆದು ಸ್ನಾನ ಮಾಡಿದೆವು. ಒಂದು ಬಾಲ್ದಿಗೆ ರೂ.೩೦. ಲತಾ ಅವರೇ ಕೊಟ್ಟರು. ಎದ್ದು ಸ್ನಾನವಾಗಿ ಸುಮ್ಮನೆ ಕೂತೆವು. ಇನ್ನು ಕೂತು ಕಾಲ ಕಳೆಯುವ ಬದಲು ದೇವಾಲಯಕ್ಕೆ ಹೋಗಬಹುದು. ಎಲ್ಲರೂ ಹೊರಟಿದ್ದಾರ ನೋಡಿ ಬರುತ್ತೇನೆಂದು ಎದ್ದು ಹೊರಗೆ ಬಂದು ನೋಡಿದರೆ ಕೆಲವರ ಕೋಣೆಗಳೆಲ್ಲ ಬೀಗ ಹಾಕಿವೆ. ನಮಗೆ ಹೇಳದೆಯೇ ದೇವಾಲಯಕ್ಕೆ ಹೋಗಿದ್ದರು. ಹೇಳಬೇಕಿತ್ತು ಅವರು ಎನಿಸಿ ಒಂದುಕ್ಷಣ ಬೇಸರವೆನಿಸಿತು. ನಮ್ಮದೇ ತಪ್ಪು. ಹೊರಟು ಕೂಡ ಕೋಣೆಯಲ್ಲೇ ಕೂತದ್ದು ನಮ್ಮದೇ ತಪ್ಪು ತಾನೆ ಎಂದು ಮರುಕ್ಷಣವೇ ಬೇಸರ ನೀಗಿಸಿಕೊಂಡೆ. ನಾವು ಮೂವರು ೮ ಗಂಟೆಗೆ ಹೊರಟು ದೇವಾಲಯದ ಹತ್ತಿರವಿರುವ ಖಾನಾವಳಿಯಲ್ಲಿ ದೋಸೆ, ಪೂರಿ ತಿಂದೆವು. ದೋಸೆ ಅಷ್ಟು ಚೆನ್ನಾಗಿರಲಿಲ್ಲ. ಈರುಳ್ಳಿ ದೋಸೆ ಎಂದರೆ ದೋಸೆ ಮೇಲೆ ಸ್ವಲ್ಪ ನೀರುಳ್ಳಿ ಚೂರು ಹಾಕಿ ಕೊಡುತ್ತಾರೆ. ಚಟ್ನಿ ಬಾಯಿಗೆ ಹಾಕಲೇ ಸಾಧ್ಯವಿರಲಿಲ್ಲ. ನಮ್ಮ ಊರಿನ ತಿಂಡಿ ತಿಂದದ್ದು ನಮ್ಮ ತಪ್ಪು. ಅಲ್ಲೆಲ್ಲ ದೋಸೆ ತಿನ್ನಬಾರದು. ಚಪಾತಿ, ಪೂರಿಯನ್ನೇ ತಿನ್ನಬೇಕು. ಅದೇ ತುಂಬ ಚೆನ್ನಾಗಿರುತ್ತದೆ.
ಬಾಗಿಲನು ತೆರೆದು ದರುಶನ ತೋರೋ ಬದರಿನಾರಾಯಣನೆ
ದೇವಾಲಯಕ್ಕೆ ಹೋದೆವು. ಒಳಗೆ ಹೋಗಲು ನೋಡಿದರೆ ಒಂದು ಮೈಲಿ ಉದ್ದದ ಸರತಿ ಸಾಲು. ನಾವೂ ಸರತಿ ಸಾಲಿನಲ್ಲಿ ಸೇರಿಕೊಂಡೆವು. ೯ಗಂಟೆಗೆ ಸರತಿಯಲ್ಲಿ ನಿಂತು ಹತ್ತು ಘಂಟೆಗೆ ದೇವರ ದರ್ಶನ ಮಾಡಿದೆವು. ಗರ್ಭಗೃಹದಲ್ಲಿ ಕಪ್ಪುಸಾಲಿಗ್ರಾಮ ಶಿಲೆಯ ಧ್ಯಾನಮುದ್ರೆಯಲ್ಲಿರುವ ಚತುರ್ಭುಜಗಳಿರುವ ನಾರಾಯಣನ ವಿಗ್ರಹವಿದೆ. ಎರಡು ಕೈಗಳು ಧ್ಯಾನಮುದ್ರೆಯಲ್ಲೂ, ಮತ್ತೆರಡು ಕೈಗಳಲ್ಲಿ ಶಂಖಚಕ್ರಗಳಿವೆ. ನಾರಾಯಣದ ಬಲಭಾಗದಲ್ಲಿ ಕುಬೇರ, ಗಣೇಶ ಮತ್ತು ಗರುಡ ಮೂರ್ತಿಗಳಿವೆ. ಎಡಭಾಗದಲ್ಲಿ ಲಕ್ಷ್ಮೀ ಚಾಮರ ಬೀಸುತ್ತ ನಿಂತ ಮೂರ್ತಿ ಇದೆ. ಒಂದು ನಿಮಿಷ ದೇವರನ್ನು ನೋಡಲೂ ಬಿಡದಂತೆ ಮುಂದೆ ಹೋಗಿ ಎಂದು ನೂಕುತ್ತಾರೆ. ಆದರೂ ಕಣ್ಣುತುಂಬ ಮೂರ್ತಿ ನೋಡಿಯೇ ನಾವು ಅಲ್ಲಿಂದ ತೆರಳಿದ್ದು.
ಲತಾ ಅವರು ದೇವಾಲಯದ ಎದುರು ನಿಂತು ನಮ್ಮ ಮೂವರ ಪೋಟೋ ಪೋಟೋಗ್ರಾಫರರ ಕ್ಯಾಮರಾದಿಂದ ರೂ. ೧೦೦ ಕೊಟ್ಟು ಕ್ಲಿಕ್ಕಿಸಿಕೊಂಡರು. ಇಂಥ ವೃತ್ತಿ ಅಲ್ಲಿ ಅವರ ಹೊಟ್ಟೆಪಾಡು. ತುಂಬ ಜನ ಹೆಗಲಲ್ಲಿ ಕ್ಯಾಮರಾ ಹಾಕಿಕೊಂಡು ಭಕ್ತರ ಗಮನ ಸೆಳೆದು ಕ್ಲಿಕ್ಕಿಸಲೆ ಎಂದು ಕೇಳಿಕೊಳ್ಳುತ್ತಿದ್ದರು. ಹೆಚ್ಚಿನ ಮಂದಿಯೂ ಭೇಟಿ ಸ್ಮರಣೀಯವಾಗಿರಲಿ ಎಂದೋ ಏನೋ ಚಿತ್ರ ತೆಗೆಸಿಕೊಳ್ಳುತ್ತಿದ್ದರು. ದೇವರ ದರ್ಶನಮಾಡಿ ಬಂದ ಬಳಿಕ ಭಾವಚಿತ್ರ ಕೊಡುತ್ತಿದ್ದರು.
ತಪ್ತಕುಂಡದಲ್ಲಿ ಬಿಸಿನೀರು ಹೊಂಡವಿದೆ. ನಾವು ಕೆಲವರು ಅಲ್ಲಿ ಸ್ನಾನ ಮಾಡಲಿಲ್ಲ. ಕೆಲವರು ಬೆಳಗ್ಗೆಯೇ ಹೋಗಿ ಸ್ನಾನ ಮಾಡಿ ದೇವಾಲಯಕ್ಕೆ ಹೋಗಿ ಬಂದರು.

img_5020
ಬದರಿ ಬಗ್ಗೆ ವಿವರಣೆ :
ಬದರಿನಾಥ ಭಾರತದ ಉತ್ತರಾಖಂಡ ರಾಜ್ಯದ ಚಮೋಲಿ ಜಿಲ್ಲೆಯಲ್ಲಿನ ಒಂದು ಪುಟ್ಟ ಪಟ್ಟಣ. ಹಿಂದೂ ಧರ್ಮೀಯರಿಗೆ ಅತಿ ಪಾವನವೆಂದು ಪರಿಗಣಿಸಲ್ಪಡುವ ಕ್ಷೇತ್ರಗಳಲ್ಲಿ ಬದರಿನಾಥ ಅತಿ ಪ್ರಮುಖವಾದುದು. ಚಾರ್‌ಧಾಮ್ (ಚತುರ್ಧಾಮ)ಗಳಲ್ಲಿ ಬದರಿನಾಥವು ಸಹ ಒಂದು. ಸಮುದ್ರ ಮಟ್ಟದಿಂದ ಸರಾಸರಿ ೩೧೨೪ ಮೀ. ಎತ್ತರವಿರುವ ಬದರಿನಾಥವು ಗಡ್ವಾಲ್ ಹಿಮಾಲಯದಲ್ಲಿ ಅಲಕನಂದಾ ನದಿಯ ದಂಡೆಯ ಮೇಲೆ ನರ ಮತ್ತು ನಾರಾಯಣ ಪರ್ವತಗಳ ನಡುವೆ ಸ್ಥಾಪಿತವಾಗಿದೆ.
ಅಲಕನಂದಾ ನದಿಯಲ್ಲಿ ಮುಳುಗಿದ್ದ ಮೂರ್ತಿಯನ್ನು ಆದಿ ಶಂಕರರು ತಪ್ತ ಕುಂಡದ ಬಳಿಯ ಗುಹೆಯಲ್ಲಿ ಪ್ರತಿಷ್ಠಾಪಿಸಿ ಮೂರ್ತಿಗೆ ನಿಯಮಿತ ಪೂಜಾವ್ಯವಸ್ಥೆಗಳನ್ನು ಮಾಡಿದರು. ಮುಂದೆ ೧೬ನೆಯ ಶತಮಾನದಲ್ಲಿ ಗಡ್ವಾಲ್‌ನ ಅರಸನು ಈಗ ನಾವು ಕಾಣುವ ದೇವಾಲಯವನ್ನು ನಿರ್ಮಿಸಿ ಬದರಿನಾರಾಯಣ ಮೂರ್ತಿಯನ್ನು ಅಲ್ಲಿ ಪುನಃ ಪ್ರತಿಷ್ಠಾಪಿಸಿದನು. ಈ ಮಂದಿರವು ಹಲವು ಸಲ ಪುನರುಜ್ಜೀವಗೊಳಿಸಲ್ಪಟ್ಟಿದೆ. ತೀವ್ರಹಿಮಪಾತ ಮತ್ತು ಭೂಕಂಪಗಳಂಥ ನೈಸರ್ಗಿಕ ಪ್ರಕೋಪಗಳಿಂದ ದೇವಾಲಯದ ಕಟ್ಟಡ ಸಾಕಷ್ಟು ಬಾರಿ ಹಾನಿಯುಂಟಾಗಿದೆ. ಮಂದಿರದ ಮುಖ್ಯ ಆರಾಧ್ಯ ಮೂರ್ತಿಯು ಶ್ರೀಮನ್ನಾರಾಯಣನದಾಗಿದ್ದು ಈ ಮೂರ್ತಿಯು ಕಪ್ಪು ಸಾಲಿಗ್ರಾಮ ಶಿಲೆಯಿಂದ ಮಾಡಲ್ಪಟ್ಟಿದ್ದು ಸುಮಾರು ಒಂದು ಮೀ. ಎತ್ತರವಾಗಿದೆ. ಇಲ್ಲಿಯ ನಾರಾಯಣ ಮೂರ್ತಿಯು ಧ್ಯಾನನಿರತ ಭಂಗಿಯಲ್ಲಿದೆ. ಸುಮಾರು ೫೦ ಅಡಿ ಎತ್ತರವಾಗಿರುವ ದೇವಾಲಯವು ಚಿನ್ನದ ವಿಮಾನ ಮತ್ತು ಚಾವಣಿಗಳನ್ನು ಹೊಂದಿದೆ. ದೇವಾಲಯದಲ್ಲಿ ಬದರಿನಾರಾಯಣನ ಮೂರ್ತಿಯ ಜೊತೆಗೆ ನರ ಮತ್ತು ನಾರಾಯಣ, ನರಸಿಂಹ, ಲಕ್ಷ್ಮಿ, ಉದ್ಧವ, ಗರುಡ, ಕುಬೇರ, ನಾರದ ಮತ್ತು ನವದುರ್ಗೆಯರ ಮೂರ್ತಿಗಳು ಸಹ ಸ್ಥಾಪಿಸಲ್ಪಟ್ಟಿದ್ದು ಪೂಜಿಸಲ್ಪಡುತ್ತಿವೆ.
ಸಂಸ್ಕೃತದಲ್ಲಿ ಬದರಿ ಅಥವಾ ಬದ್ರಿ ಎಂದರೆ ಎಲಚಿ ಕಾಯಿ (ಬೋರೆ ಕಾಯಿ) ಎಂದರ್ಥವಿದೆ. ಕೆಲವು ಪೌರಾಣಿಕ ಉಲ್ಲೇಖಗಳಲ್ಲಿ ಹೇಳಿರುವಂತೆ ಒಂದು ಕಾಲದಲ್ಲಿ ಇಲ್ಲಿ ಬೋರೆಕಾಯಿಗಳು ಅತ್ಯಂತ ಹೆಚ್ಚಾಗಿ ಬೆಳೆಯುತ್ತಿತ್ತಂತೆ. ಹಾಗಾಗಿ ಇಲ್ಲಿಗೆ ಬದರಿ ಅಥವಾ ಬದ್ರಿ ಎಂಬ ಹೆಸರು ಬಂದಿತೆನ್ನಲಾಗಿದೆ.
ಬದರಿನಾಥ ಕ್ಷೇತ್ರವು ವರ್ಷದಲ್ಲಿ ಆರು ತಿಂಗಳ ಕಾಲ ಮಾತ್ರವೇ ತೆರೆದಿರುತ್ತದೆ. ಉಳಿದ ಸಮಯ ಇದು ಪೂರ್ಣವಾಗಿ ಹಿಮದಲ್ಲಿ ಮುಚ್ಚಿಹೋಗಿರುತ್ತದೆ. ಸಾಮಾನ್ಯವಾಗಿ ಜೂನ್‌ನಿಂದ ಸೆಪ್ಟೆಂಬರ್ ವರೆಗೆ ಬದರಿನಾಥ ಕ್ಷೇತ್ರವನ್ನು ದರ್ಶಿಸಲು ಉತ್ತಮ ಕಾಲ. ಬದರಿನಾಥ ಕ್ಷೇತ್ರವು ಮುಚ್ಚಿರುವ ಕಾಲದಲ್ಲಿ ಬದರಿನಾಥನ ಉತ್ಸವ ಮೂರ್ತಿಯನ್ನು ಜ್ಯೋತಿರ್ಮಠ(ಜೋಷಿಮಠ)ಕ್ಕೆ ಕರೆತಂದು ಪೂಜಿಸಲಾಗುತ್ತದೆ. ಬದರಿನಾಥ ದೇವಾಲಯವು ಮುಚ್ಚಿರುವ ಸಮಯದಲ್ಲಿ ನಾರದ ಮಹರ್ಷಿಯು ಪ್ರತಿದಿನ ಬದರಿನಾರಾಯಣನಿಗೆ ಪೂಜೆ ಸಲ್ಲಿಸುವನೆಂದು ನಂಬಿಕೆ. ಕೃಪೆ: ವೀಕಿಪೀಡಿಯಾ
ಉತ್ತರಾಖಂಡದಲ್ಲಿ ಎಲ್ಲಿ ನೋಡಿದರೂ ಶಿವ ದೇವಾಲಯವನ್ನೇ ಕಾಣುತ್ತೇವೆ. ಆದರೆ ಬದರಿಯಲ್ಲಿ ಮಾತ್ರ ನಾರಾಯಣ ಹೇಗೆ ಬಂದ ಎಂಬುದಕ್ಕೆ ಒಂದು ಕಥೆ ಇದೆ. ಬದರಿಯನ್ನು ನೋಡಿದ ನಾರಾಯಣನಿಗೆ ಅಲ್ಲೇ ವಾಸ್ತವ್ಯ ಹೂಡಬೇಕೆಂಬ ಅಪೇಕ್ಷೆ ಆಗುತ್ತದೆ. ಆದರೆ ಅಲ್ಲಿ ಶಿವಪಾರ್ವತಿಯರು ಅದಾಗಲೇ ನೆಲೆನಿಂತಿದ್ದರು. ಅದಕ್ಕೆ ನಾರಾಯಣ ಒಂದು ಉಪಾಯ ಮಾಡಿದ. ವೇಷ ಮರೆಸಿ ಸಣ್ಣ ಬಾಲಕನಂತೆ ಮಾರ್ಪಾಡಾಗಿ ಶಿವ ಪಾರ್ವತಿಯರೆದುರು ಅಳುತ್ತ ನಿಂತ. ಅಳುತ್ತಲಿದ್ದ ಬಾಲಕನನ್ನು ನೋಡಿ ಪಾರ್ವತಿ ಕನಿಕರಗೊಂಡು ಎತ್ತಿಕೊಳ್ಳಲು ಹೋದಾಗ ಶಿವ ತಡೆದ. ಎತ್ತಿಕೊಳ್ಳಬೇಡ ಅವನು ಸಾಮಾನ್ಯ ಬಾಲಕನಲ್ಲ. ಆದರೂ ಪಾರ್ವತಿ ಅವನನ್ನು ಎತ್ತಿಕೊಂಡೇಬಿಟ್ಟಳು. ಆ ಬಾಲಕನಾಗಿದ್ದ ನಾರಾಯಣ ವಿಶಾಲವಾಗಿ ಎತ್ತರೆತ್ತರ ಬೆಳೆದು ಅಲ್ಲೇ ನೆಲೆನಿಂತನಂತೆ. ಅದಕ್ಕೆ ಅಲ್ಲಿಗೆ ವಿಶಾಲಬದರಿ ಎಂಬ ಹೆಸರು ಬಂತಂತೆ.

ಬದರಿಯಿಂದ ನಿರ್ಗಮನ
ನಮ್ಮೆಲ್ಲರ ಒಂದು ದಿನದ ವಸತಿ ಶುಲ್ಕ ರೂ ೨೦೦೦ ಪಾವತಿಸಿದರು. ಕೋಣೆಗೆ ಬಂದು ಗಂಟುಮೂಟೆ ಕಟ್ಟಿ ೧೧ ಗಂಟೆಗೆ ಬಸ್ ಹತ್ತಿದೆವು. ಅಲ್ಲಿಗೆ ನಮ್ಮ ಚಾರ್ಧಾಮ ಯಾತ್ರೆಗೆ ತೆರೆಬಿತ್ತು. ಮೈಕೈ ಎಲ್ಲ ನೋವು. ಏನಾದರೂ ಮಾತ್ರೆ ಇದ್ದರೆ ಕೊಡಿ ಎಂದು ಮಂಗಾರಾಮ ನನ್ನಲ್ಲಿ ಕೇಳಿದರು. ಸಾಮಾನ್ಯ ಎಲ್ಲ ತರಹದ ರೋಗಕ್ಕೆ ತಕ್ಕ ಮಾತ್ರೆಗಳನ್ನು ಸವಿತಾ ತಂದಿದ್ದಳು. ಅವಳು ನೋವು ನಿವಾರಕ ಮಾತ್ರೆ ಕೊಟ್ಟಳು ಮಂಗಾರಾಮನಿಗೆ. ಪಾಪ ಹತ್ತು ದಿನಗಳಿಂದ ಒಂದೇ ಸಮ ಅಂಥ ದಾರಿಯಲ್ಲಿ ಬಸ್ ಚಾಲನೆ ಮಾಡಿ ಸಾಕಾಗಿರಬಹುದು ಎಂದು ನನಗನಿಸಿ, ಬೀಡಿ ಸೇದುತ್ತಾರೆಂದು ಅವರಮೇಲಿದ್ದ ಕೋಪವೂ ಕರಗಿತು!
ಬದರಿಯಿಂದ ಹರಿದ್ವಾರದೆಡೆಗೆ ಸಾಗುವ ರಸ್ತೆ ಕಿರಿದಾಗಿದ್ದು, ಅಲ್ಲಲ್ಲಿ ಬೆಟ್ಟ ಕುಸಿದು, ಬಂಡೆಗಳು ರಸ್ತೆಪಕ್ಕ ಬಿದ್ದದ್ದು ಕಾಣಿಸಿತು. ಅಲ್ಲಲ್ಲಿ ಲ್ಯಾಂಡ್ ಸ್ಲೈಡ್ ಅಂಡ್ ರಾಕ್ ಫಾಲ್ ಝೋನ್ ಎಂಬ ಫಲಕ ಹಾಕಿದ್ದು ನೋಡಿದೆವು. ವಾಟರ್ ಫಾಲ್ಸ್ ನೋಡಿದ್ದೆವು. ಆದರೆ ರಾಕ್ ಫಾಲ್ಸ್ ನಮಗೆ ಹೊಸದು! ಅದನ್ನು ನೋಡುವ ಸಂದರ್ಭ ಬರದೇ ಇದ್ದದ್ದು ನಮ್ಮ ಪುಣ್ಯವೇ ಸರಿ. ಬಸ್ ಚಲಿಸುವಾಗ ಕಿಟಕಿ ಹೊರಗೆ ನೋಡಲೇಬಾರದು. ಕೆಲವೆಡೆ ರಸ್ತೆ ಎಷ್ಟು ಕಿರಿದಾಗಿರುತ್ತದೆ ಅಂದರೆ ಬಸ್ ಕೂದಲೆಳೆಯ ಅಂತರದಲ್ಲಿ ರಸ್ತೆ ದಾಟುತ್ತದೋ ಅನಿಸುತ್ತದೆ. ಕೆಳಗೆ ನದಿ ಪ್ರಪಾತ. ರಸ್ತೆ ಜರಿದು ಅಷ್ಟು ಕಿರಿದಾಗಿರುತ್ತದೆ. ನೋಡಿದರೆ ಎದೆ ಝಲ್ಲೆನಿಸುತ್ತದೆ. ಒಂದೆಡೆ ರಸ್ತೆಬದಿಯಲ್ಲಿ ಒಂದು ಕಾರು ನಜ್ಜುಗುಜ್ಜಾಗಿ ನಿಂತಿರುವುದು ಕಾಣಿಸಿತು. ಕಾರು ಚಲಿಸುತ್ತಿರುವಾಗ ರಾಕ್ ಫಾಲ್ಸ್ ಆಗಿ ಕಾರಿನಮೇಲೆ ಬಿದ್ದು ಕಾರು ಹುಡಿ ಆದದ್ದಂತೆ. ಗಂಡಹೆಂಡತಿ ಎರಡು ಮಕ್ಕಳು ಇದ್ದರಂತೆ ಕಾರಿನಲ್ಲಿ. ನಾಲ್ಕು ಮಂದಿಯ ಜೀವವೂ ಅಲ್ಲೆ ಹೋಗಿತ್ತಂತೆ. ಈ ಸುದ್ದಿ ಮಂಗಾರಾಮ ಹೇಳಿದ್ದು. ಆ ಕಾರು ನೋಡಿದಾಗ ಅಬ್ಬ, ಒಮ್ಮೆ ಇಂಥ ರಸ್ತೆಯಿಂದ ಪಾರಾಗಿ ಹೋಗಿ ಸರಿಯಾಗಿರುವ ರಸ್ತೆ, ಊರು ತಲಪಿದರೆ ಸಾಕಪ್ಪ ಎಂದು ಮನಸ್ಸು ಭಯಗೊಂಡು ಜಪಗೈಯಲು ತೊಡಗುತ್ತದೆ.
ಸೇನಾ ವಾಹನ ಸಿಕ್ಕಿದಾಗಲೆಲ್ಲ ನಾವು ಜೈ ಜವಾನ್ ಎಂದು ದೊಡ್ಡದಾಗಿ ನುಡಿದು ಸೆಲ್ಯೂಟ್ ಹೊಡೆಯುತ್ತಿದ್ದೆವು. ಅವರೂ ನಮಗೆ ಕೈ ಮಾಡಿ ಆ ಗೌರವವನ್ನು ಸ್ವೀಕರಿಸುತ್ತಿದ್ದರು. ಇಂಥ ಸ್ಥಳದಲ್ಲಿ ಅವರ ಸೇವೆ ಅನುಪಮವಾದುದೇ ಸರಿ.

  ರಸ್ತೆ ಕೆಲಸ ಮಾಡುವ ಕೂಲಿ ಕಾರ್ಮಿಕರು ತಮ್ಮ ಮಕ್ಕಳನ್ನು ಜೊತೆಯಲ್ಲೆ ಕರೆದುಕೊಂಡು ಅಲ್ಲೇ ಕೂರಿಸಿಕೊಂಡು, ಬೆನ್ನಮೇಲೆ ಹೊತ್ತು ಕೆಲಸ ಮಾಡುವ ದೃಶ್ಯ ನೋಡಿದೆವು.

OLYMPUS DIGITAL CAMERA

OLYMPUS DIGITAL CAMERA

OLYMPUS DIGITAL CAMERA

ವಿಷ್ಣುಪ್ರಯಾಗ
ದಾರಿಯಲ್ಲಿ ಮಧ್ಯಾಹ್ನ ಒಂದು ಗಂಟೆಗೆ ವಿಷ್ಣುಪ್ರಯಾಗಕ್ಕೆ ಹೋದೆವು. ಅಲಕನಂದಾ ನದಿಯೊಂದಿಗೆ ಧವಳಗಂಗಾನದಿ ಸೇರುವ ಸ್ಥಳವದು. ನದಿ ಸಂಗಮವಾಗುವ ಸ್ಥಳ ನೋಡುವುದೇ ಸೊಗಸು. ಒಂದು ನದಿಯ ನೀರಿಗಿಂತ ಇನ್ನೊಂದು ನದಿಯ ನೀರಿನ ಬಣ್ಣದಲ್ಲಿ ವ್ಯತ್ಯಾಸ ಸ್ಪಷ್ಟವಾಗಿ ಕಾಣುತ್ತದೆ. ಎಲ್ಲರೂ ನದಿಯಲ್ಲಿ ಇಳಿದು ತಲೆಗೆ ನೀರು ಚಿಮುಕಿಸಿಕೊಂಡು ಪಾವನರಾದರು. ನಾನು ನದಿಗಿಳಿಯದೆ ತೂಗುಸೇತುವೆಯಲ್ಲಿ ಅಡ್ಡಾಡಿದೆ.

OLYMPUS DIGITAL CAMERA

OLYMPUS DIGITAL CAMERA

ವೃದ್ಧಬದರಿ
ವಿಷ್ಣುಪ್ರಯಾಗದಿಂದ ಮುಂದೆ ಸಾಗಿ ದಾರಿಯಲ್ಲಿ ವೃದ್ಧಬದರಿ ನೋಡಿದೆವು. ಇದು ಪಂಚಬದರಿಯಲ್ಲಿ ಎರಡನೆಯದು. (ಮಹಾವಿಷ್ಣುವನ್ನು ಕುರಿತಾದ ಹಿಮಾಲಯದ ಐದು ಕ್ಷೇತ್ರಗಳು ಪಂಚ ಬದರಿ ಎನಿಸಿಕೊಳ್ಳುತ್ತವೆ. ಇವುಗಳಲ್ಲಿ ಬದರಿನಾಥ ಕ್ಷೇತ್ರವು ಸಹ ಸೇರಿದೆ. ವಿಶಾಲ ಬದರಿ : ಬದರಿನಾಥ ಕ್ಷೇತ್ರ, ಯೋಗ ಬದರಿ : ಪಾಂಡುಕೇಶ್ವರದಲ್ಲಿರುವ ಈ ದೇವಾಲಯದಲ್ಲಿ ಸಹ ಬದರಿನಾಥನು ಧ್ಯಾನಮುದ್ರೆಯಲ್ಲಿರುವನು. ಐತಿಹ್ಯಗಳ ಪ್ರಕಾರ ಪಾಂಡು ಮಹಾರಾಜನು ಈ ಮೂರ್ತಿಯನ್ನು ಪ್ರತಿಷ್ಠಾಪಿಸಿದನು. ಭವಿಷ್ಯ ಬದರಿ : ಜ್ಯೋತಿರ್ಮಠ ( ಜೋಷಿಮಠ)ದಿಂದ ೧೭ ಕಿ.ಮೀ. ದೂರದಲ್ಲಿದೆ. ಪುರಾಣ ಕಥೆಗಳ ಪ್ರಕಾರ ಮುಂದೊಂದು ದಿನ ಬದರಿನಾಥ ಕ್ಷೇತ್ರವು ಭೂಮಿಯಿಂದ ಮರೆಯಾದಾಗ ಬದರಿನಾಥನು ಇಲ್ಲಿ ನೆಲೆನಿಂತು ದರ್ಶನ ಕೊಡುವನು ಎಂಬುದು ಪ್ರತೀತಿ. ಆದ್ದರಿಂದಲೇ ಇದಕ್ಕೆ ಭವಿಷ್ಯ ಬದರಿ ಎಂಬ ಹೆಸರು. ವೃದ್ಧ ಬದರಿ : ಜ್ಯೋತಿರ್ಮಠದಿಂದ ೭ ಕಿ.ಮೀ. ದೂರದಲ್ಲಿ ಆನಿಮಠದಲ್ಲಿದೆ. ಕಥನಗಳ ಪ್ರಕಾರ ಬದರಿನಾಥನ ಮೂಲ ಪೂಜಾಸ್ಥಾನವು ಇದೇ ಆಗಿದ್ದಿತು. ಆದಿ ಬದರಿ : ಕರ್ಣಪ್ರಯಾಗದಿಂದ ೧೭ ಕಿ.ಮೀ. ದೂರದಲ್ಲಿದೆ. ೧೬ ಸಣ್ಣ ಮಂದಿರಗಳುಳ್ಳ ಇಲ್ಲಿನ ದೇವಾಲಯ ಸಂಕೀರ್ಣದಲ್ಲಿ ಮಹಾವಿಷ್ಣುವಿನ ೩ ಅಡಿ ಎತ್ತರದ ಕಪ್ಪು ಶಿಲೆಯ ಮೂರ್ತಿ ಪೂಜೆಗೊಳ್ಳುತ್ತಿದೆ.) ಪಂಚಬದರಿಗಳಲ್ಲಿ ನಾವು ಎರರು ಸ್ಥಳಕ್ಕೆ ಮಾತ್ರ ಭೇಟಿ ಇತ್ತುದು.
ಕೆಳಗೆ ಮೆಟ್ಟಲಿಳಿದು ಹೋಗಬೇಕು. ಊರೊಳಗೆ ಈ ದೇವಾಲಯವಿದೆ. ಪುಟ್ಟದಾದ ಮಂದಿರ. ಹಳ್ಳಿಯೊಳಗೆ ಕೆಲವಾರು ಮನೆಗಳಿವೆ. ಮನೆಯ ಸುತ್ತ ಸಾಕಷ್ಟು ತರಕಾರಿ ಕೃಷಿ ನಡೆಸಿದ್ದನ್ನು ನೋಡಿದೆವು. ನಮ್ಮಲ್ಲಿರುವಂತದ್ದೇ ಕೆಸುವಿನ ಗಿಡ ನೋಡಿ ಚಕಿತಳಾದೆ. ಕೆಸುವಿನೆಲೆಯಿಂದ ಏನು ಮಾಡುತ್ತಾರೆ ಎಂದು ಕೇಳಲು ಮರೆಯಿತು ಆ ಸಂದರ್ಭದಲ್ಲಿ. ಮುಂದೆ ಪುನಃ ಮೇಲೆ ಮೆಟ್ಟಲು ಹತ್ತುವ ಬದಲು ಕೆಳಗೇ ಇಳಿದೆವು. ಅಲ್ಲಿಗೆ ಬಸ್ ಬಂತು. ನಾವು ಇಳಿದು ಸ್ವಲ್ಪ ಹೊತ್ತಾದಮೇಲೆ ಬಸ್ ಬಂದದ್ದು. ಪೋನ್ ಹೋಗುತ್ತಿರಲಿಲ್ಲ. ಏನು ಮಾಡುವುದಪ್ಪ, ಕೆಳಗೆ ಬರಲು ಹೇಳಿದ್ದೆ ಎಂದು ವಿಠಲರಾಜು ಹೇಳಿಕೊಂಡಾಗ ಬಸ್ ಬರುವುದು ಕಾಣಿಸಿತು. ಬಸ್ಸಿನ ಒಂದು ಚಕ್ರ ಪಂಕ್ಚರ್ ಆಗಿತ್ತಂತೆ. ಇಷ್ಟು ದಿನದಲ್ಲಿ ಇದು ಮೂರನೇ ಸಲ ಚಕ್ರ ಪಂಕ್ಚರ್ ಆದದ್ದು. ಎರಡು ಸಲವೂ ನಾವು ಹೀಗೆ ಯಾವುದಾದರೊಂದು ಸ್ಥಳ ನೋಡಲು ಇಳಿದಾಗಲೇ ಆಗಿದ್ದು. ಹಾಗಾಗಿ ಕಾಯಬೇಕಾದ ಪ್ರಸಂಗ ಬಂದಿರಲಿಲ್ಲ.

OLYMPUS DIGITAL CAMERA

OLYMPUS DIGITAL CAMERA

ಇಂದ್ರಲೋಕ
ವೃದ್ಧಬದರಿ ನೋಡಿ ಮುಂದೆ ಹೋದಾಗ ಪೀಪಲ್ ಕೋಟಿಯಲ್ಲಿ ಇಂದ್ರಲೋಕ ಹೊಟೇಲಿಗೆ ಊಟಕ್ಕೆ ಹೋದೆವು. ಒಂದು ಊಟಕ್ಕೆ ರೂ.೯೦. ಸೊಗಸಾದ ಊಟ. ಹೆಸರೇನೋ ಇಂದ್ರಲೋಕ. ಆದರೆ ಹೆಸರಿಗೆ ತಕ್ಕಂತೆ ಪಾಯಿಖಾನೆ ಇರಲಿಲ್ಲ. ಒಳಗೆ ಹೋಗಲು ಸಾಧ್ಯವಿಲ್ಲ ಹಾಗಿತ್ತು ಎಂದು ಶೋಭಾ ಹೇಳಿದರು. ನಾವು ಊಟ ಮಾಡಿ ಬಸ್ಸಿನ ಬಳಿ ಬಂದಾಗ ಗಾಳಿ ಹೋದ ಚಕ್ರವನ್ನು ರಿಪೇರಿ ಮಾಡಿಸಿ ತಯಾರಾಗಿದ್ದರು ಸೋನು ಹಾಗೂ ಮಂಗಾರಾಮ.
ನಂದಪ್ರಯಾಗ
ಊಟವಾಗಿ ಮುಂದುವರಿದು ನಂದಪ್ರಯಾಗಕ್ಕೆ ಹೋದೆವು. ಅಲಕನಂದಾ ನದಿಯೊಂದಿಗೆ ನಂದಾಕಿನಿ ನದಿ ಸಂಗಮವಾಗುವ ಸ್ಥಳವದು.
ಕರ್ಣಪ್ರಯಾಗ
ಕರ್ಣಪ್ರಯಾಗ ದೂರದಿಂದಲೇ ನೋಡಿ ಮುಂದುವರಿದೆವು. ಸಣ್ಣಗೆ ಮಳೆ ಬರುತ್ತಲಿದ್ದದ್ದರಿಂದ ಕೆಳಗೆ ಇಳಿಯಲಿಲ್ಲ. ಕರ್ಣನ ದೇವಾಲಯವಿದೆಯಂತೆ ಅಲ್ಲಿ. ಅಲಕನಂದಾ ನದಿಯೊಂದಿಗೆ ಕರ್ಣಪಿಂದಾರ ನದಿ ಸಂಗಮವಾಗುತ್ತದೆ.
ಮುಸ್ಸಂಜೆವೇಳೆಯಲಿ ನಗರಾಸು ಸೇರಿದಾಗ
ಸಂಜೆ ಆರೂವರೆ ಗಂಟೆ ಆದಾಗ ಮಂಗಾರಾಮ ಬಸ್ ಚಾಲನೆ ನಿಲ್ಲಿಸಿಬಿಟ್ಟರು. ನಗರಾಸು ಎಂಬ ಊರಿನಲ್ಲಿ ನಾಗಸಾನಿ ವಸತಿಗೃಹದ ಎದುರು ಬಸ್‌ನಿಂದ ಇಳಿದೆವು. ಅಲ್ಲಿಯ ಕೋಣೆಯಲ್ಲಿ ನಮ್ಮ ಲಗೇಜು ಇಳಿಸಿ ಕಾಲು ಚಾಚಿದೆವು. ಒಂದು ಕೋಣೆಯಲ್ಲಿ ನಾವು ನಾಲ್ಕು ಮಂದಿ. ಸರೋಜ, ಪೂರ್ಣಿಮಾ, ಸವಿತಾ, ನಾನು. ತಣ್ಣಗೆ ನೀರಿನಲ್ಲಿ ಸ್ನಾನ ಮಾಡಿ ಸುಧಾರಿಸಿಕೊಂಡೆವು. ಮಧ್ಯಾಹ್ನದ ಊಟ ತಡವಾಗಿ ಮಾಡಿದ್ದರಿಂದ ರಾತ್ರಿಯ ಊಟ ಸ್ವಲ್ಪವೇ ಸಾಕು ಎಂದು ನಾವು ಕೆಲವು ಮಂದಿ ತೀರ್ಮಾನಿಸಿ ಕೆಳಗೆ ಯಾವ ಹೊಟೇಲು ಇವೆ ಎಂದು ನೋಡಲು ಹೊರಟೆವು. ಮುಂದೆ ಗುರುದ್ವಾರ ಇದೆ. ಅಲ್ಲಿ ಊಟ ಇದೆ ಎಂಬ ಮಾಹಿತಿ ನಮ್ಮ ಹೊಟೇಲಿನವರು ಕೊಟ್ಟರು. ನಮ್ಮ ವಸತಿಗೃಹದ ಎದುರು ಭಾಗದಲ್ಲೇ ಇರುವ ಗುರುದ್ವಾರಕ್ಕೆ ಹೋದೆವು.

OLYMPUS DIGITAL CAMERA

ಗುರುದ್ವಾರದಲ್ಲಿ ನಮಗೆ ಬರೆ ಕಾಸಿದರು!
ನಾವು ಕುತೂಹಲದಿಂದ ಗುರುದ್ವಾರದೊಳಗೆ ಕಾಲಿಟ್ಟೆವು. ಅಲ್ಲಿ ಸುಮಾರು ಮಂದಿ ಸಾಲಾಗಿ ಕೂತು ಊಟ ಮಾಡುತ್ತಿರುವುದು ಕಂಡಿತು. ಮುಂದೆ ಜಗಲಿಯಲ್ಲಿ ಒಬ್ಬರು ಸಿಖ್‌ಗುರು ಕೂತದ್ದು ಕಂಡು ಅವರನ್ನು ಮಾತಾಡಿಸಿ ಮತ್ತೆ ಊಟಕ್ಕೆ ಹೋಗುವ ಎಂದು ತೀರ್ಮಾನಿಸಿದೆವು. ಅಲ್ಲಿ‌ಒಳಗೆ ಹೋಗಬೇಕೆಂದರೆ ಗಂಡಸು ಹೆಂಗಸು ಎಂಬ ಭೇದವಿಲ್ಲದೆ ಎಲ್ಲರೂ ತಲೆಮೇಲೆ ಬಟ್ಟೆ ಹಾಕಿಕೊಳ್ಳಲೇಬೇಕು. ಚೂಡಿದಾರದ ಶಾಲಿದ್ದವರು ತಲೆಗೆ ಸುತ್ತಿಕೊಂಡರು. ಇಲ್ಲದವರು ಅಲ್ಲಿಟ್ಟಿದ್ದ ಮಕಮಲ್ ಬಟ್ಟೆ ತೆಗೆದುಕೊಂಡು ತಲೆಗೆ ಸುತ್ತಿದೆವು. ಸಿಖ್‌ಗುರು ಬಳಿ ಬಂದು ತಲೆಬಾಗಿ ಕೂತೆವು. ನಮ್ಮನ್ನು ನೋಡಿದ್ದೇ, ‘ಮೊದಲಿಗೆ ಒಬ್ಬರನ್ನು ಕಂಡಾಗುವಾಗ ನಮಸ್ಕಾರ ಎಂದು ಹೇಳುವ ಅಭ್ಯಾಸ ನಿಮಗಿಲ್ಲವೇ? ನಿಮ್ಮ ಊರಿನಲ್ಲಿ ಇಂಥ ಪದ್ಧತಿ ಇಲ್ಲವೆ? ಎಂದು ಬರೆ ಕಾಸಿದರು. ಮೊದಲಿಗೆ ನಮಗೆ ಅವರು ಏನು ಹೇಳುತ್ತಿದ್ದಾರೆಂದೇ ಅರ್ಥವಾಗಿರಲಿಲ್ಲ. ಅರ್ಥವಾದಾಗ ನಮ್ಮ ಮಾವನ (ಜಿ.ಟಿ. ನಾರಾಯಣ ರಾವ್) ನೆನಪು ಬಂತು. ಮೊದಲು ಯಾರನ್ನು ನೋಡಿದರೂ ನಮಸ್ಕಾರ ಎಂದು ಹೇಳಿ ಮಾತಾಡಿಸಬೇಕು ಅಂಥ ಅಭ್ಯಾಸ ಬೆಳೆಸಿಕೊಳ್ಳಲೇಬೇಕು ಎಂದು ನಮ್ಮ ಮಾವ ಪಾಟ ಮಾಡುತ್ತಿದ್ದದ್ದು ಆ ಸಂದರ್ಭದಲ್ಲಿ ಕಣ್ಣಿಗೆ ಕಟ್ಟಿತು! ಆದರೆ ನಾವು ನಮಸ್ಕಾರ ಎಂದು ಬಾಯಿಯಲ್ಲಿ ಹೇಳದೆಯೇ ಇದ್ದರೂ ತಲೆಬಾಗಿ ಅವರೆದುರು ಕೂತಿದ್ದೆವು. ಮತ್ತೆ ನಮ್ಮನ್ನು ಎಲ್ಲಿಂದ ಬಂದದ್ದು ಎಂದೆಲ್ಲ ಕೇಳುತ್ತ ಚೆನ್ನಾಗಿ ಮಾತಾಡಿಸಿದರು.
ಪ್ರಸಾದ ಭೋಜನ
ಅವರೊಡನೆ ಮಾತಾಡಿ ಊಟಕ್ಕೆ ಕೂತೆವು. ಅನ್ನ ಸಾರು, ಚಪಾತಿ, ಗಸಿ. ಚಪಾತಿ ತಟ್ಟೆಗೆ ಬಡಿಸುವುದಿಲ್ಲ. ಚಪಾತಿ ಬಡಿಸುವಾಗ ಎರಡು ಕೈ ಹಿಡಿಯಬೇಕು. ಆಗ ನಮ್ಮ ಕೈಗೆ ಹಾಕುತ್ತಾರೆ. ಅದು ಪ್ರಸಾದವಂತೆ. ಎಲ್ಲವನ್ನೂ ಪದೇಪದೇ ಕೇಳುತ್ತ ಹೊಟ್ಟೆತುಂಬ ಬಡಿಸುತ್ತಾರೆ.
ತಟ್ಟೆ ಲೋಟಗಳನ್ನು ಸಾಬೂನು ನೀರಿನಲ್ಲಿ ತೊಳೆದು ಇಡುತ್ತಿದ್ದುದನ್ನು ಕಂಡೆವು. ವಿಶಾಲವಾದ ಸ್ಥಳದಲ್ಲಿ ದೊಡ್ಡ ದೊಡ್ಡ ಡಬರಿಯಲ್ಲಿ ಅಡುಗೆ ಮಾಡಿಟ್ಟಿರುವುದು ಕಂಡಿತು. ಚಹಾ ಕೂಡ ಇತ್ತು. ಎಲ್ಲವನ್ನೂ ಅವಗಾಹನೆ ಮಾಡಿ ನೋಡಿ ನಮ್ಮ ಕಾಣಿಕೆಯನ್ನು ಹುಂಡಿಗೆ ಹಾಕಿ ಕೋಣೆಗೆ ಬಂದೆವು. ಗುರುದ್ವಾರದಲ್ಲಿ ಕೂಡ ವಸತಿಗೆ ಕೋಣೆಗಳು ಸಿಗುತ್ತವೆ.
ನಗರಾಸು ನಿರ್ಗಮಿಸು
ಬೆಳಗ್ಗೆ (೨೨-೯-೨೦೧೬) ೫.೧೫ಕ್ಕೆ ಎದ್ದು ತಯಾರಾದೆವು. ೬ ಗಂಟೆಯೊಳಗೆ ಹೊರಡಬೇಕೆಂದು ಹೇಳಿದ್ದರು. ಆದರೆ ಹೊರಡುವಾಗ ೬.೫೦ ಆಗಿತ್ತು. ರಾತ್ರಿ ಬಸ್ಸಿನೊಳಗೆ ಲೈಟ್ ಉರಿದು ಬಸ್ ಬ್ಯಾಟರಿ ಚಾರ್ಜು ಕಡಿಮೆಯಾಗಿತ್ತು. ಅದನ್ನು ಮಂಗಾರಾಮ ಮತ್ತು ಸೋನು ಏನೋ ರಿಪೇರಿ ಮಾಡುತ್ತಿದ್ದರು. ಸೋನು ಬಸ್ಸಿನಡಿ ತೂರಿ ರಿಪೇರಿಯಲ್ಲಿ ಮಗ್ನನಾಗಿದ್ದ. ಬಸ್ಸಡಿಯಿಂದ ಹೊರಬಂದಾಗ ಮೈಪೂರ್ತಿ ಮಣ್ಣುಮೆತ್ತಿಕೊಂಡಿದ್ದ. ಕ್ಷಣದಲ್ಲಿ ಸ್ನಾನ ಮಾಡಿ ತಯಾರಾಗಿ ಬಸ್ಸೇರಿದ. ಈ ಮಧ್ಯೆ ನಾವು ಅಲ್ಲಿರುವ ಹೊಟೇಲಿನಲ್ಲಿ ಕಾಫಿ, ಚಹಾ ಕುಡಿದೆವು. ಮಂಗಾರಾಮ ಬೀಡಿ ಪ್ಯಾಕೆಟ್ ಕೊಂಡು ಜೇಬಿಗೆ ಹಾಕಿಕೊಳ್ಳುವುದನ್ನು ಮರೆಯಲಿಲ್ಲ! ಬೀಡಿ ಕಥಮ್ ಹೋಗಯಾ ಎಂದು ನಾನು ತಮಾಷೆಗೆ ಹೇಳಿದೆ. ಆಗ ಜೇಬಿನಿಂದ ಇನ್ನೊಂದು ಕಟ್ಟು ತೆಗೆದು ತೋರಿಸಿದರು! ನಿನ್ನೆ ಗುರುದ್ವಾರ ನೋಡದವರು ಅಲ್ಲಿಗೆ ಹೋಗಿ ನೋಡಿ ಬಂದರು.

ರುದ್ರಪ್ರಯಾಗ
ಅಂತೂ ನಮ್ಮ ಬಸ್ ನಗರಾಸು ಬಿಟ್ಟು ಹೊರಟು ೮ ಗಂಟೆಗೆ ರುದ್ರಪ್ರಯಾಗ ತಲಪಿತು. ರುದ್ರಪ್ರಯಾಗದಲ್ಲಿ ಶಿವನ ದೇವಾಲಯವಿದೆ. ಇಲ್ಲಿ ಅಲಕನಂದಾ ಮತ್ತು ಮಂದಾಕಿನಿ ನದಿಗಳ ಸಂಗಮವಾಗುತ್ತದೆ. ಎರಡು ನದಿಗಳು ಕೂಡಿ ಮುಂದೆ ಹರಿಯುವುದನ್ನು ನೋಡುತ್ತ ನಿಂತರೆ ಸಮಯ ಸರಿಯುವುದು ಗೊತ್ತಾಗುವುದಿಲ್ಲ.
ಪುರಾಣದ ಪ್ರಕಾರ, ಶಿವ ರುದ್ರನ ಅವತಾರ ಹೊಂದಿ, ಸಂಗೀತದಲ್ಲಿ ಪರಿಣತಿ ಪಡೆಯಬೇಕೆನ್ನುವ ಅಭಿಲಾಷೆಯಿಂದ ಇಲ್ಲಿ ತಪಸ್ಸು ಮಾಡಿದ್ದನಂತೆ. ಇಲ್ಲಿ ನಾರದ ಮುನಿಗೆ ಆಶೀರ್ವಾದ ಮಾಡಿದ್ದನಂತೆ. ಅದರ ಕುರುಹಾಗಿ ನಾರದ ವಿಗ್ರಹ ಕೂಡ ಇದೆ. ಈ ಸ್ಥಳದ ಹತ್ತಿರದಲ್ಲಿ ಜಗದಂಬಾ ದೇವಾಲಯವನ್ನೂ ಕಾಣಬಹುದು.
ದೇವಾಲಯ ನೋಡಿ ಹೊರಟು ಹತ್ತಿರವಿರುವ ಹೊಟೇಲಿನಲ್ಲಿ ಪರೋಟ, ಚಪಾತಿ ತಿಂದು ೯.೧೫ಕ್ಕೆ ಮುಂದೆ ಹೊರಟೆವು.

devaprayaga-sangama

ದಾರಿಮಾತಾ ಮಂದಿರ

ಇದು ಬದ್ರಿನಾಥ- ಶ್ರೀನಗರ ಹೆದ್ದಾರಿಯಲ್ಲಿ ಸಾಗುವಾಗ ಅಲಕನಂದಾ ನದಿ ಮಧ್ಯೆ ಕಾಣುತ್ತದೆ. ನದಿ ಮಧ್ಯೆ ಬೃಹತ್ತಾಗಿ ಕಟ್ಟಿದ್ದಾರೆ.  ದೇವಾಲಯ ತಲಪಲು ಒಂದುಕೀಮೀ ಮೆಟ್ಟಲಿಳಿದು ಸೇತುವೆಯಲ್ಲಿ ದಾಟಿ ಹೋಗಬೇಕು. ನಾವು ಹತ್ತು ಗಂಟೆಗೆ ದೇವಾಲಯ ತಲಪಿದೆವು. ಸೇತುವೆಯುದ್ದಕ್ಕೂ ಗಂಟೆ ಕಟ್ಟಿದ್ದಾರೆ. ದೇವಾಲಯದ ಸಂದುಗೊಂದುಗಳಲ್ಲೂ ಗಂಟೆಗಳು ನೇತಾಡುತ್ತಿದ್ದುವು. ಬಹುಶಃ ಭಕ್ತರು ಹರಕೆ ಸಲ್ಲಿಸಲು ಗಂಟೆ ಕೊಟ್ಟದ್ದನ್ನೆಲ್ಲ ಕಟ್ಟಿದ್ದಾರೆ ಎನಿಸುತ್ತದೆ. ಇನ್ನು ಗಂಟೆ ಕೊಟ್ಟರೆ ಅಲ್ಲಿ ಕಟ್ಟಲೂ ಸ್ಥಳವಿಲ್ಲ. ಅದಕ್ಕಾಗಿಯೇ ಒಂದು ಕಟ್ಟಡ ನಿರ್ಮಾಣಗೊಂಡರೂ ಅಶ್ಚರ್ಯವಿಲ್ಲ! ನದಿ ಮಧ್ಯೆ ಕಾಳಿಯಮಂದಿರ. ನೋಡಲು ಚೆನ್ನಾಗಿದೆ. ತೂಗು ಸೇತುವೆ ಕೂಡ ಇದೆ. ಉತ್ತರಾಖಂಡದ ಚಾರ್ಧಾಮಗಳ ರಕ್ಷಕಿ ಈ ಕಾಳೀದೇವಿ ಎಂಬುದು ಅಲ್ಲಿಯ ಜನರ ನಂಬಿಕೆ.
ನಾವು ದೇವಾಲಯ ನೋಡಿ ಹತ್ತೂ ಮೂವತೈದಕ್ಕೆ ವಾಪಾಸು ಮೆಟ್ಟಲು ಹತ್ತಿ ಬಸ್ ಹತ್ತಿದೆವು. ಅಲ್ಲಿಂದ ಹೋಗುವ ರಸ್ತೆಯುದ್ದಕೂ ಮಾವು, ಬೇವು, ಕರಿಬೇವಿನ ಮರಗಳು ಕಂಗೊಳಿಸುತ್ತಿದ್ದುವು.

img_5046 img_5050

img_5058

ದೇವಪ್ರಯಾಗ
೧೨.೪೫ಕ್ಕೆ ದೇವಪ್ರಯಾಗ ತಲಪಿದೆವು. ಮಾರ್ಗದಿಂದ ದೇವಾಲಯಕ್ಕೆ ಹೋಗಲು ಸುಮಾರು ನಡೆಯಬೇಕು. ನದಿ ದಾಟಲು ತೂಗು ಸೇತುವೆ ಇದೆ. ಅಲ್ಲಿ ಪೂಜೆ ಮಾಡಿಸಲು, ಕರ್ಮ ಮಾಡಿಸಲು ಪಂಡಿತರು ನಮ್ಮನ್ನು ಮುತ್ತಿಗೆ ಹಾಕಿದರು. ನಾವ್ಯಾರೂ ಅವರ ಮಾತಿಗೆ ಮರುಳಾಗಲಿಲ್ಲ. ನಮ್ಮಲ್ಲಿ ಕೆಲವರು ನದಿಯಲ್ಲಿ ಸ್ನಾನ ಮಾಡಿದರು.
ಉತ್ತರಾಖಂಡದ ಟೆಹ್ರಿ ಗಡ್ವಾಲ್ ಜಿಲ್ಲೆಯಲ್ಲಿರುವ ದೇವಪ್ರಯಾಗ ಹಿಂದೂಗಳ ಪವಿತ್ರ ಕ್ಷೇತ್ರಗಳಲ್ಲೊಂದು. ಸಂಸ್ಕೃತದಲ್ಲಿ ದೇವಪ್ರಯಾಗ ಅಂದರೆ ಪವಿತ್ರ ಸಂಗಮ. ಇಲ್ಲಿ ಅಲಕನಂದಾ ಬದರಿಯಿಂದ ಹರಿದು ಬಂದು ಭಾಗೀರಥಿ ಗೋಮುಖದಿಂದ ಹರಿದು ಬಂದು ಇಲ್ಲಿ ಇವೆರಡೂ ನದಿಗಳು ಸಂಗಮವಾಗುತ್ತವೆ. ಏಳನೇ ಶತಮಾನದಿಂದೀಚೆಗೆ ಈ ಪ್ರದೇಶ ಹಲವು ಹೆಸರುಗಳಿಂದ ಕರೆಸಿಕೊಂಡಿದೆ. ಮುಖ್ಯವಾಗಿ ಬ್ರಹ್ಮಪುರಿ, ಬ್ರಹ್ಮ ತೀರ್ಥ, ಶ್ರೀಖಂಡ ನಗರ ಮತ್ತು ಉತ್ತರಾಖಂಡದ ಜೆಮ್ ಅಂತಲೂ ಕರೆಯಲ್ಪಡುತ್ತಿತ್ತು. ಹಿಂದೂ ಧರ್ಮದ ಋಷಿ ದೇವ ಶರ್ಮಾ ಇಲ್ಲಿ ವಾಸಿಸುತ್ತಿದ್ದುದರಿಂದ ದೇವಪ್ರಯಾಗವೆಂಬ ಹೊಸ ಹೆಸರು ಬಂದು, ಅದೇ ಶಾಶ್ವತವಾಯಿತು.

    ಇಲ್ಲಿ ನದಿಯ ದಡದ ಮೇಲೆ ಎತ್ತರದಲ್ಲಿ ರಾಮನ ದೇವಾಲಯವಿದೆ. ಹಿಂದೂಗಳಲ್ಲಿ ಚಾಲ್ತಿಯಲ್ಲಿರುವ ದಂತಕಥೆಗಳ ಪ್ರಕಾರ, ರಾಮ ಮತ್ತು ಆತನ ತಂದೆ ದಶರಥ ಮಹಾರಾಜ ಈ ಪ್ರದೇಶದಲ್ಲಿ ತಪಸ್ಸು ಕೈಗೊಂಡಿದ್ದರು. ಅದನ್ನು ಪುಷ್ಟೀಕರಿಸುವಂತೆ ಒಂದು ಕಟ್ಟೆ ಇದೆ ಅಲ್ಲಿ. ಅದೇ ಕಟ್ಟೆಯಲ್ಲಿ ಕೂತು ತಪಸ್ಸು ಮಾಡಿದ್ದು ಎಂದು ತೋರಿಸುತ್ತಾರೆ. ದೇವಾಲಯ ಬಾಗಿಲು ಹಾಕಿತ್ತು. ಅರ್ಚಕರು ಬಂದು ಬಾಗಿಲು ತೆರೆದರು. ನಾವು ತಟ್ಟೆಗೆ ದಕ್ಷಿಣೆ ದೊಡ್ಡ ನೋಟು ಹಾಕಲಿಲ್ಲವೆಂದು ಅರ್ಚಕರಿಗೆ ಸಿಟ್ಟುಬಂದು ಎಲ್ಲರೂ ಬರುವ ಮೊದಲೇ ಪುನಃ ದೇವಾಲಯದ ಬಾಗಿಲು ಹಾಕಿಬಿಟ್ಟರು.

20160922_125403

ರಾಮ ತಪಸ್ಸು ಮಾಡಿದ ಸ್ಥಳ

ರಾಮ ತಪಸ್ಸು ಮಾಡಿದ ಸ್ಥಳ

devaprayaga

ಹರಿದ್ವಾರದೆಡೆಗೆ ಗಮನ
ಅಲ್ಲಿಂದ ಬರುತ್ತ ದಾರಿಯಲ್ಲಿ ಸಮೋಸ ತಿಂದೆವು. ಮೇಲೆ ಹತ್ತಿ ರಸ್ತೆಗೆ ಬಂದು ನಿಂಬೆ ಪಾನಕ ಕುಡಿದು ಹತ್ತಿ ಬಂದ ಸುಸ್ತನ್ನು ಪರಿಹರಿಸಿಕೊಂಡೆವು. ೧.೪೫ಕ್ಕೆ ಅಲ್ಲಿಂದ ಹೊರಟೆವು. ದಾರಿಯುದ್ದಕ್ಕೂ ಅಲ್ಲಲ್ಲಿ ಆಕರ್ಷಕ ಸ್ಲೋಗನ್‌ಗಳ ಫಲಕ ಹಾಕಿದ್ದು ಕಂಡಿತು. ಉದಾಹರಣೆಗೆ:

This is highway not runway
Speed thrills but kills
Life is journey complete it
No race no rally enjoy the nature
Life is precious don‘t waste it
Land slide and rockfall zone

ದಾರಿಯಲ್ಲಿ ಒಂದು ಖಾನಾವಳಿಯಲ್ಲಿ ಊಟಕ್ಕೆ ನಿಲ್ಲಿಸಿದರು. ಅಲ್ಲಿ ಒಂದು ಥಾಲಿಗೆ ರೂ.೧೭೫. ನಾನು ತಂಗಿ ಸವಿತಳೂ ಒಂದು ಥಾಲಿ ತೆಗೆದುಕೊಂಡು ಹಂಚಿ ತಿಂದೆವು. ಅದೇ ಇಬ್ಬರಿಗೂ ಸಾಕಷ್ಟಾಗಿತ್ತು. ಮುಂದೆ ಋಷಿಕೇಶ ಮಾರ್ಗವಾಗಿ ಹರಿದ್ವಾರ ತಲಪುವಾಗ ಸಂಜೆ ಗಂಟೆ ಆರು ಆಗಿತ್ತು.
ರಾಮಭವನದಲ್ಲಿ ವಾಸ್ತವ್ಯ- ಸಾರಥಿ- ಸಹಾಯಕರಿಗೆ ವಿದಾಯ
ಬಸ್ಸಿಳಿದು ನಮ್ಮ ಬ್ಯಾಗ್ ಹೊತ್ತು ರಾಮಭವನಕ್ಕೆ ಬಂದೆವು. ಅಲ್ಲಿ ಮಂಗಾರಾಮ ಹಾಗೂ ಸೋನುಗೆ ಬೀಳ್ಕೊಡುಗೆ ಸಮಾರಂಭ. ಹತ್ತು ದಿನ ಬಹಳ ಚೆನ್ನಾಗಿ ಬಸ್ ಚಾಲನೆ ಮಾಡಿ ಸುರಕ್ಷತೆಯಿಂದ ನಮ್ಮನ್ನು ಇಲ್ಲಿಗೆ ತಲಪಿಸಿದ್ದಕ್ಕೆ ತುಂಬ ಧನ್ಯವಾದಗಳು ಎಂದು ನುಡಿದು ಮಂಗಾರಾಮನಿಗೆ ಉಡುಗೊರೆ ಕೊಟ್ಟರು. ನನ್ನಿಂದ ಏನಾದರೂ ತಪ್ಪಾಗಿದ್ದರೆ, ಬೀಡಿ ಸೇದಿ ತೊಂದರೆ ಕೊಟ್ಟದ್ದಕ್ಕೆ ಕ್ಷಮಿಸಿ ಎಂದು ಮಂಗಾರಾಮ ಪ್ರತಿಯಾಗಿ ನುಡಿದು ಕ್ಷಮೆ ಯಾಚಿಸಿದರು. ಸೋನುಗೆ ಉಡುಗೊರೆ ಕೊಟ್ಟು ಬೀಡಿ ಸೇದುವ ಚಟ ಕಲಿಯಬೇಡ. ಒಳ್ಳೆಯದಾಗಲಿ ಎಂದು ಶುಭಕೋರಿ ಅವರಿಬ್ಬರಿಗೆ ವಿದಾಯ ಹೇಳಿದೆವು. ಅವರೂ ನಮ್ಮನ್ನು ಆತ್ಮೀಯವಾಗಿ ಬೀಳ್ಕೊಂಡು ಹೊರಟರು.

20160922_181325

ಉತ್ತರಾಖಂಡ ರಾಜ್ಯವನ್ನು “ದೇವಭೂಮಿ’’ಎಂಬ ಹೆಸರಿನಿಂದ ಕರೆಯುತ್ತಾರೆ. ನಿಜಕ್ಕೂ ಇದರ ಅನುಭವ ಆಯಿತು ನಮಗೆ. ದಾರಿಯಲ್ಲಿ ಎಲ್ಲಿಯೂ ನಮಗೆ ಹೆಂಡದ ಅಂಗಡಿ ಕಾಣಲಿಲ್ಲ. ಮಾಂಸಾಹಾರದ ಹೊಟೇಲೂ ಕಾಣಸಿಗಲಿಲ್ಲ. ಮತ್ತು ಎಲ್ಲೂ ಹೆಂಡ ಕುಡಿದು ಅಸಭ್ಯವಾಗಿ ವರ್ತಿಸುವ, ತೂರಾಡಿಕೊಂಡು ರಸ್ತೆ ಬದಿ ಬಿದ್ದಿರುವವರಾರೂ ಕಾಣಲಿಲ್ಲ. ನಾವು ಹೋದೆಡೆಯಲ್ಲೆಲ್ಲ ನಮಗೆ ನಗುನಗುತ್ತಲೇ ಉಪಚಾರ ಸೇವೆ ಒದಗಿಸಿದ್ದರು. ಎಲ್ಲೂ ಯಾರಿಂದಲೂ ಏನೂ ಅಪಚಾರ ಅಸಮಾಧಾನ ಆಗಿರಲಿಲ್ಲ.
ನಮ್ಮ ನಮ್ಮ ಕೋಣೆ ಸೇರಿ ಸ್ನಾನಾದಿ ಮುಗಿಸಿದೆವು. ಬಟ್ಟೆ ತೊಳೆಯುವವರು ತೊಳೆದು ಹರಗಿದರು. ಸರಸ್ವತಿ ಹಾಗೂ ಶಶಿಕಲಾ ರಾತ್ರೆ ಊಟಕ್ಕೆ ಅನ್ನ ಸಾರು ಮಾಡಿ ಬಡಿಸಿದರು. ತಿಂದು ಹೊಟ್ಟೆದೇವರನ್ನು ತೃಪ್ತಿಪಡಿಸಿ ಮಲಗಿದೆವು.

 –ಮುಂದುವರಿಯುವುದು.

Read Full Post »

ಕೇದಾರನಾಥನಿಗೆ ವಿದಾಯ
೧೮-೯-೨೦೧೬ರಂದು ಬೆಳಗ್ಗೆ ೫.೧೫ಕ್ಕೆ ನಾವು ಕೋಣೆ ಖಾಲಿ ಮಾಡಿ ದೇವಾಲಯಕ್ಕೆ ಬಂದೆವು. ದೇವಾಲಯದ ಪಕ್ಕದಲ್ಲೇ ವಿಶಿಷ್ಟವಾಗಿ ಟೆಂಟ್ ಮಾದರಿಯ ವಸತಿಗೃಹ ನಿರ್ಮಿಸಿದ್ದಾರೆ.

8

ನಾವಿದ್ದ ವಸತಿ ಗೃಹ

  ಹಿಮದ ನಡುವೆ ಕೇದಾರನಾಥ ಬೆಟ್ಟ ಪ್ರದೇಶ ನಯನಮನೋಹರವಾಗಿ ಕಾಣುತ್ತದೆ. ಅದನ್ನು ಬೆಳಗಿನಝಾವ ನೋಡುವುದೇ ಸೊಬಗು. ಬೆಳಗ್ಗೆ ಹಿಮಪರ್ವತ ಶುಭ್ರ ಬಿಳಿಯಾಗಿ ಸೂರ್ಯನ ಬೆಳಕು ಬಿದ್ದು ಹೊಳೆಯುವುದನ್ನು ನೋಡುತ್ತ ನಿಂತರೆ ಸಮಯ ಸರಿಯುವುದೇ ಗೊತ್ತಾಗುವುದಿಲ್ಲ. ಅದನ್ನು ನೋಡುತ್ತಲೇ, ಕ್ಯಾಮರಾದಲ್ಲಿ ಭದ್ರವಾಗಿ ಹಿಡಿದಿಡುತ್ತಲೇ ೬.೧೫ಕ್ಕೆ ಅಲ್ಲಿಂದ ನಿರ್ಗಮಿಸಿದೆವು.

1

2

9

4

3

7

20160918_063044

ಕೇದಾರದಿಂದ ಗೌರಿಕುಂಡಕ್ಕೆ ನಡಿಗೆ
ಕೇದಾರದಿಂದ ಗೌರಿಕುಂಡಕ್ಕೆ ೧೬ಕಿಮೀ ನಡೆಯಬೇಕು. ನಡೆಯುವ ದಾರಿಯನ್ನು ೨೦೧೪ರಲ್ಲಿ ಹೊಸದಾಗಿ ನಿರ್ಮಿಸಿದ್ದಾರೆ. ೨೦೧೩ರಲ್ಲಿ ಸಂಭವಿಸಿದ ಪ್ರಳಯದಲ್ಲಿ ಹಳೆಯ ದಾರಿ ಕೊಚ್ಚಿ ಹೋಗಿದೆ. ದೇವಾಲಯದ ಎದುರು ಬಲಭಾಗದಲ್ಲಿ ಹಳೆಯ ದಾರಿ ಅಲ್ಲಲ್ಲಿ ಕೊಚ್ಚಿ ಹೋದದ್ದು ಕಾಣುತ್ತಿತ್ತು. ಈಗ ಎಡಭಾಗದಲ್ಲಿ ದಾರಿ ನಿರ್ಮಿಸಿದ್ದಾರೆ. ಕೇವಲ ಒಂದೇ ವರ್ಷದಲ್ಲಿ ೧೬ಕಿಮೀ ದೂರದ ದಾರಿಯನ್ನು ಬಹಳ ಸೊಗಸಾಗಿ ಅನುಕೂಲಕರವಾಗಿ ನಿರ್ಮಿಸಿದ್ದು ಶ್ಲಾಘನೀಯ. ಉತ್ತರಾಖಂಡದ ಸರ್ಕಾರದ, ಹಾಗೂ ಕಾರ್ಮಿಕರ ಈ ಕೆಲಸವನ್ನು ಮುಕ್ತಕಂಠದಿಂದ ಮೆಚ್ಚಲೇಬೇಕು. ಇದರ ಹಿಂದಿರುವ ಕತೃಶಕ್ತಿಗೆ ನಮ್ಮೆಲ್ಲರ ಸೆಲ್ಯೂಟ್ ಸಲ್ಲಲೇಬೇಕು. ಸಾಕಷ್ಟು ಅಗಲವಾಗಿ ಸಿಮೆಂಟ್, ಅಲ್ಲೇ ಲಭ್ಯವಿರುವ ಕಲ್ಲು ಹಾಕಿ ಚೆನ್ನಾಗಿ ನಿರ್ಮಾಣ ಮಾಡಿದ್ದಾರೆ. ಕುದುರೆಗೂ ನಡೆಯಲು ತೊಡಕಾಗದಂತೆ ದಾರಿ ರೂಪಿಸಿದ್ದಾರೆ. ಕಾಲುದಾರಿಯನ್ನು ಪೌರಕಾರ್ಮಿಕರು ಆಗಾಗ ಗುಡಿಸುತ್ತ ಚೊಕ್ಕಟದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡುತ್ತಾರೆ. ದಾರಿಯಲ್ಲಿ ಕಸ ಅಂದರೆ ಕುದುರೆಲದ್ದಿ ಇರುತ್ತದೆ ಅಷ್ಟೆ. ಅದನ್ನು ಆಗಾಗ ತೆಗೆದು ದಾರಿ ಚೊಕ್ಕ ಮಾಡುತ್ತಾರೆ. ಅಲ್ಲಲ್ಲಿ ಜರಿದ ಕಡೆ ಪುನರ್ನಿಮಾಣ ಮಾಡುವ ಕಾಮಗಾರಿ ನಡೆಯುತ್ತಲಿತ್ತು.

11

613

ಹಳೆಯ ದಾರಿ ಕೊಚ್ಚಿ ಹೋಗಿರುವುದು.

ಹಳೆಯ ದಾರಿ ಕೊಚ್ಚಿ ಹೋಗಿರುವುದು.

ದಾರಿಯ ಸೊಬಗು
ಸುನಂದ ಅವರಿಗೆ ನಡೆಯಲು ಸಾಧ್ಯವಾಗದೆ ಇರುವುದರಿಂದ ಕುದುರೆಯಲ್ಲಿ ಕಳುಹಿಸುವುದು ಎಂದು ತೀರ್ಮಾನವಾಯಿತು. ಆದರೆ ಒಂದುಕಿಮೀ. ದೂರ ಬಂದರೂ ಕುದುರೆಯ ಸುಳಿವಿಲ್ಲ. ನಾನು, ಪೂರ್ಣಿಮಾ, ವಿಠಲರಾಜು, ರಂಗನಾಥ ಇಷ್ಟು ಮಂದಿ ಸುನಂದ ಅವರನ್ನು ಕುದುರೆಯಲ್ಲಿ ಕೂರಿಸುವವರೆಗೆ ಒಟ್ಟಿಗೇ ಹೆಜ್ಜೆ ಹಾಕುತ್ತಲಿದ್ದೆವು. ಬಾಕಿದ್ದವರೆಲ್ಲ ಮುಂದೆ ಹೋಗಿದ್ದರು. ಕುದುರೆ ಕಾದರೆ ಆಗದು. ಅವರು ಒಂದು ಹೆಜ್ಜೆ ಮುಂದೆ ನಡೆಯುವುದೂ ಕಷ್ಟ. ಡೋಲಿಯಲ್ಲಿ ಕೂರಿಸಿ ಕಳುಹಿಸಿಬಿಡಿ. ದರ ಎಷ್ಟು ಮಾತಾಡಿ ಎಂದು ವಿಠಲರಾಜು ಅವರಿಗೆ ಹೇಳಿದೆವು. ಸುನಂದ ನಡೆಯುವುದು ಕಂಡು ಅವರ ಪರಿಸ್ಥಿತಿ ವಿಠಲರಾಜು ಅವರಿಗೂ ಅದಾಗಲೇ ಮನವರಿಕೆಯಾಗಿತ್ತು. ಕೂಡಲೇ ಅವರು ಒಪ್ಪಿ ಡೋಲಿಯವನಲ್ಲಿ ಚರ್ಚೆ ಮಾಡಿ ಸಾವಿರದ ಐನೂರು ರೂಪಾಯಿಗೆ ಒಪ್ಪಿಸಿ ಅವರನ್ನು ಡೋಲಿಯಲ್ಲಿ ಕೂರಿಸಿ ನಿರಾಳವಾಗಿ ನಡಿಗೆ ಮುಂದುವರಿಸಿದೆವು.
ದಾರಿಯುದ್ದಕ್ಕೂ ಸುತ್ತಲೂ ಪರ್ವತಶ್ರೇಣಿಗಳು. ಆದರೆ ಮರಗಳಿಲ್ಲ. ಕುರುಚಲು ಸಸ್ಯಗಳು. ತೊರೆಗಳು, ಝರಿಗಳು ಹಿಮಚ್ಛಾದಿತ ಬೆಟ್ಟಗಳು, ಮಧ್ಯೆ ಮಂದಾಕಿನಿ ನದಿ ಬಳುಕುತ್ತ ಸಾಗುವುದನ್ನು ನೋಡುತ್ತ ನಡೆಯುವುದೇ ಅದ್ಭುತ ಅನುಭವ. ನಾನೂ, ಪೂರ್ಣಿಮಾ ಸೊಗಸಾಗಿ ಕಂಡದ್ದನ್ನೆಲ್ಲ ಕ್ಯಾಮರಾದಲ್ಲಿ ತುಂಬುತ್ತ, ಆಹಾ ಎಂಥ ಚಂದ ಈ ಹೂ, ಇದನ್ನೇ ಪೂಜೆಗೂ ಬಳಸಬಹುದಲ್ಲ, ಒಹೋ ಇಲ್ಲಿ ಕುದುರೆಗೆ ನೀರು ಕುಡಿಯಲು ಎಂಥ ವ್ಯವಸ್ಥೆ ಮಾಡಿದ್ದಾರೆ ನೋಡಿ ಎಂದು ಪ್ಲಾಸ್ಟಿಕ್ ಡಬ್ಬವನ್ನು ಕತ್ತರಿಸಿ ನೀರಿಟ್ಟದ್ದನ್ನು ತೋರಿಸುತ್ತ, ಪೂರ್ಣಿಮಾ ಅವರು ಕಷ್ಟಸುಖಗಳನ್ನು ಹೇಳುವುದನ್ನು ಆಲಿಸುತ್ತಲೇ ದಾರಿ ಸವೆಸಿದೆವು. ಅತ್ತ ಕಡೆಯಿಂದ ನಡೆಯುತ್ತ ಬರುವ ಜನ ಕಮ್ಮಿ ಇದ್ದರು.ಜನರು ಏದುಸಿರು ಬಿಡುತ್ತ ಬರುವುದು ಕಂಡಾಗ ಜೈ ಭೋಲೆನಾಥ ಎನ್ನುತ್ತಿದ್ದರು. ನಾವೂ ಜೈ ಎನ್ನುತ್ತಿದ್ದೆವು.ಅಲ್ಲಲ್ಲಿ ತಾತ್ಕಾಲಿಕ ಶೌಚಾಲಯ ನಿರ್ಮಿಸಿದ್ದಾರೆ. ಕೆಲವೆಡೆ ತುರ್ತು ಹೆಲಿಪ್ಯಾಡ್ ಗಳಿವೆ.dscn1338dscn1301

12

dscn1317

14

hu

sobagu-1

sobagu-2dscn1330

ಕೆಲವು ಕಿಲೋಮೀಟರು ದೂರದಲ್ಲಿ ಒಂದೆರಡು ಅಂಗಡಿ ಹೊಟೇಲುಗಳಿವೆ. ದಾರಿ ಮಧ್ಯೆ ಸಿಗುವ ಹೊಟೇಲಿನಲ್ಲಿ ಪರೋಟ ತಿಂದೆವು. ರೂ. ೧೫ಕ್ಕೆ ಒಂದು ದೊಡ್ಡ ಆಲೂಪರೋಟ ಕೊಡುತ್ತಾರೆ. ರೂ. ೧೦ಕ್ಕೆ ಚಹಾ. ಅಲ್ಲಿ ತುಸು ವಿಶ್ರಮಿಸಿ ನಡಿಗೆ ಮುಂದುವರಿಸಿದೆವು. ಆಗ ಮಲೆನಾಡಿನ ಕಡೆಯವರೊಬ್ಬರು ಬರಿಗಾಲಲ್ಲಿ ನಡೆಯುತ್ತ ಆ ಹೊಟೇಲಿಗೆ ಬಂದರು. ಅವರು ಗೋಮುಖಕ್ಕೆ ೨೧ ಕಿಮೀ ನಡೆದು ಹೋಗಿ ನೋಡಿ ಬಂದದ್ದಂತೆ. ಅಲ್ಲಿಗೆ ಹೋಗುವುದು ತುಂಬ ಕಷ್ಟ ಈಗ ದಾರಿ ದುರ್ಗಮವಾಗಿದೆ ಎಂದರು. ಇನ್ನು ಕೇದಾರಕ್ಕೆ ನಡೆದು ಹೋಗಿ ಅಲ್ಲಿಂದ ಹೊರಟು ವೈಷ್ಣೋದೇವಿಗೆ ಹೋಗಲಿದೆಯಂತೆ. ‘ನೀವು ಬರಿಗಾಲಲ್ಲಿ ನಡೆಯುವುದಾ? ಕಷ್ಟವಾಗುವುದಿಲ್ಲವೆ?’ ಎಂದು ಕೇಳಿದೆ. ಅದಕ್ಕವರು, ‘ಹೌದು. ಕಷ್ಟ ಏನೂ ಆಗುವುದಿಲ್ಲ. ಅದೇ ಒಳ್ಳೆಯದು. ಬರಿಗಾಲಾದಾರೆ ಚಪ್ಪಲಿ, ಶೂ ಕಿತ್ತೋಗುವುದು, ಕಾಲಿಗೆ ಅದು ಸರಿ ಆಗದೆ ಇರುವುದು ಇಂಥ ಯಾವ ತಾಪತ್ರಯವೂ ಇಲ್ಲ’ ಎಂದು ನುಡಿದರು. ಸುಮಾರು ಎರಡು ತಿಂಗಳು ಅವರ ಯಾತ್ರೆಯಂತೆ. ಅವರ ಊರಲ್ಲಿ ಒಂದು ದೇವಾಲಯದಲ್ಲಿ ಅರ್ಚಕರಾಗಿದ್ದಾರಂತೆ. ಮಗಳು ಮೈಸೂರಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿರುವಳಂತೆ. ಅವರು ಪ್ರತೀ ವರ್ಷ ಹೀಗೆ ಯಾತ್ರೆ ಬರುತ್ತಿರುತ್ತಾರಂತೆ. ಅವರ ಸಾಹಸ ಕೇಳಿ ಅವರಿಗೆ ಶುಭ ಹಾರೈಸಿ ವಿದಾಯ ಹೇಳಿ ಬಿರುಸಾಗಿ ಹೆಜ್ಜೆ ಹಾಕಿದೆವು. ಅಲ್ಲಲ್ಲಿ ಗೌರಿಕುಂಡಕ್ಕೆ ಇಂತಿಷ್ಟು ಕಿಮೀ ಎಂದು ಫಲಕ ಹಾಕಿದ್ದಾರೆ. ಅದನ್ನು ನೋಡಿಡಾಗಲೆಲ್ಲ ಇನ್ನು ಇಷ್ಟೇ ನಡೆದರಾಯಿತು ಎಂಬ ಭಾವನೆ ಉದಿಸಿ ನಡೆಯಲು ಹುರುಪು ಬರುತ್ತಿತ್ತು.

ಸರಕು ಸಾಗಣೆಯ ನೋಟ
ಅಲ್ಲಿ ಸರಕು ಸಾಗಣೆಗೆ ಕುದುರೆ ಹಾಗೂ ಹೇಸರಗತ್ತೆಯನ್ನೇ ಅವಲಂಬಿಸಿದ್ದಾರೆ. ಕುದುರೆಮೇಲೆ ಜಲ್ಲಿ, ಕಬ್ಬಿಣ, ಸಿಮೆಂಟು, ಪೈಪ್, ಮರಳು, ಮರದ ದಿನ್ನೆ, ಪ್ಲೈವುಡ್ ಹಲಗೆಗಗಳು ಇತ್ಯಾದಿ ಹೊರಿಸುತ್ತ ಸಾಗುವುದನ್ನು ನೋಡಿದೆವು. ಕುದುರೆಗೆ ಒಮ್ಮೆಲೇ ಸುಮಾರು ೨೦೦ಕಿಲೊ ಭಾರ ಹೊರುವ ತಾಕತ್ತು ಇದೆಯಂತೆ. ಕುದುರೆ ಪ್ಲೈವುಡ್ ಹೊತ್ತು ಸಾಗುವಾಗ ಮಾತ್ರ ಅದರ ಮೈ ಕಾಣುವುದೇ ಇಲ್ಲ. ವಿಚಿತ್ರವಾಗಿ ಕಾಣುತ್ತದೆ.

10

hore-2

hore1

ಮಾನವ ಪರಿಶ್ರಮ
ಕುದುರೆ, ಹೇಸರಗತ್ತೆ ಮೇಲೆ ಸಾಮಾನು ಸಾಗಿಸುವ ದೃಶ್ಯ ನೋಡಿದ್ದೆವಲ್ಲ. ಇಪ್ಪತ್ತಕ್ಕೂ ಹೆಚ್ಚು ಮಂದಿ ಯುವಕರು ಬೃಹತ್ ಗಾತ್ರದ ಉದ್ದವಾದ ಕಬ್ಬಿಣದ ತುಂಡೊಂದನ್ನು ಹೆಗಲಲ್ಲಿ ಹೊತ್ತು ಬೆಟ್ಟ ಹತ್ತುತ್ತ ಸಾಗುತ್ತಿರುವುದು ಕಂಡು ಒಮ್ಮೆಲೆ ನಾವು ಸ್ತಬ್ಧರಾಗಿ ನಿಂತೆವು. ಅಬ್ಬ ಸಾಕಷ್ಟು ಭಾರವಿರುವ ಇದನ್ನು ಹೊತ್ತು ಬೆಟ್ಟ ಹತ್ತುತ್ತಾರಲ್ಲ. ನಮಗೆ ನಮ್ಮ ಬೆನ್ನಿನಲ್ಲಿ ಹೊತ್ತಿರುವ ಸಣ್ಣ ಚೀಲವೇ ಮಣಭಾರವೆನಿಸುತ್ತದೆ. ಚೀಲವೇನು? ನಮ್ಮ ದೇಹವೇ ಹೊರೆಯೆನಿಸುತ್ತದೆ. ಅಂತದ್ದರಲ್ಲಿ ಅವರ ಈ ಕಾರ್ಯ ನೋಡಿ ನಾವು ಮೂಕವಿಸ್ಮಿತರಾದೆವು. ಅವರನ್ನು ಕೃತಜ್ಞತಾಭಾವದಿಂದ ನೋಡಿದೆವು. ಅಲ್ಲಲ್ಲಿ ಇಳಿಸಿ ವಿಶ್ರಾಂತಿ ಪಡೆದು, ಪುನಃ ಹೊತ್ತು ಮುಂದೆ ಸಾಗುತ್ತಿದ್ದರು. ಅವರ ಈ ಶ್ರಮದಿಂದಲೇ ತಾನೆ ಯಾತ್ರಿಕರು ಸುಖವಾಗಿ ಈ ದಾರಿಯಲ್ಲಿ ನಡೆಯುತ್ತಿರುವುದು. ಅಲ್ಲಲ್ಲಿ ಕಬ್ಬಿಣದ ಸೇತುವೆಗಳಿವೆ. ಸೇತುವೆ ಕಟ್ಟಲು ಈ ಕಬ್ಬಿಣದ ತುಂಡುಗಳನ್ನು ಸಾಗಿಸುತ್ತಿರಬೇಕು ಎಂದು ಭಾವಿಸಿದೆವು.

manava-shrama

dscn1345
ನಾವು ಅಲ್ಲಲ್ಲಿ ಕೂತು ವಿಶ್ರಮಿಸಿ, ದ್ರಾಕ್ಷೆ, ಕಡ್ಲೆಕಾಯಿಚಿಕ್ಕಿ ತಿಂದು, ಹರಿಯುವ ನೀರನ್ನು ಕುಡಿದು ಶಕ್ತಿ ಸಂಚಯನ ಮಾಡಿಕೊಳ್ಳುತ್ತ ನಡೆದೆವು. ಅಂತೂ ಮಧ್ಯಾಹ್ನ ೧೧.೨೫ಕ್ಕೆ ಗೌರಿಕುಂಡ ತಲಪಿದೆವು. ಬೆಳಗ್ಗೆ ೬.೧೫ಕ್ಕೆ ಹೊರಟು ೧೬ಕಿಮೀ ದೂರವನ್ನು ಕ್ರಮಿಸಲು ನಾವು ಆರೇಳು ಮಂದಿ ತೆಗೆದುಕೊಂಡ ಅವಧಿ ಐದು ಗಂಟೆ ಹತ್ತು ನಿಮಿಷ.

tore

ಗೌರಿಕುಂಡ
ಗೌರಿಕುಂಡ ಸಣ್ಣ ಪೇಟೆ. ಅಲ್ಲಿ ಹೊಟೇಲು ಅಂಗಡಿಗಳು ವಾಸದ ಮನೆಗಳು, ಕಾಣುತ್ತವೆ. ಈಗ ಮೊದಲಿನ ಗೌರಿಕುಂಡ (ಬಿಸಿನೀರಕುಂಡ)ಇಲ್ಲ. ಕೊಚ್ಚಿ ಹೋಗಿದೆಯಂತೆ. ನದಿ ಪಕ್ಕ ಬಿಸಿನೀರು ಒಂದು ಪೈಪಿನಲ್ಲಿ ಬರುತ್ತದೆ. ಅಲ್ಲಿ ಸ್ನಾನ ಮಾಡಬಹುದು. ಅದಕ್ಕೆ ತಕ್ಕ ವ್ಯವಸ್ಥೆ ಇಲ್ಲ. ಹಾಗಾಗಿ ನಾವು ಅಲ್ಲಿ ಸ್ನಾನ ಮಾಡಲಿಲ್ಲ. ನಡೆದು ಸುಸ್ತಾಗಿ ಯಾರಿಗೂ ಸ್ನಾನ ಮಾಡುವ ಹುರುಪು ಕೂಡ ಇರಲಿಲ್ಲ.
ಅಲ್ಲಿ ಗೌರಿ ದೇವಾಲಯ ಇದೆ. ಹೊರಭಾಗದಲ್ಲಿ ಗೌರಿ ಒಂಟಿಕಾಲಲ್ಲಿ ನಿಂತು ತಪಸ್ಸು ಮಾಡಿದ ಒಂದು ಸುಂದರ ಮೂರ್ತಿ ಇದೆ. ಶಿವನಿಗೆ ತನ್ನ ತಂದೆ ದಕ್ಷ ಅವಮಾನ ಮಾಡಿದನೆಂದು ಶಿವನ ಮಡದಿ ಸತಿ ಅಗ್ನಿಗೆ ಹಾರಿ ಪ್ರಾಣ ತ್ಯಾಗ ಮಾಡುತ್ತಾಳೆ. ಅನಂತರ ಹಿಮವದ್‌ರಾಜನ ಮಗಳಾಗಿ ಮರುಜನ್ಮ ಪಡೆದು ಶಿವನನ್ನು ವರಿಸಲು ಗೌರಿಕುಂಡದಲ್ಲಿ ಕಠಿಣವಾದ ತಪಸ್ಸು ಮಾಡಿ ಶಿವನ ಮನಗೆಲ್ಲುತ್ತಾಳೆ ಎಂಬುದು ಪುರಾಣ ಕಥೆ.

dscn1356 dscn1355

ದೇವಾಲಯ ನೋಡಿ ನಾವು ಏಳೆಂಟು ಮಂದಿ ಅಲ್ಲೇ ನೆರಳಲ್ಲಿ ಕೂತು ವಿಶ್ರಮಿಸಿದೆವು. ಎಲ್ಲರೂ ಅಲ್ಲಿ ಬಂದು ಸೇರುವಾಗ ಮಧ್ಯಾಹ್ನ ಗಂಟೆ ಒಂದು ಆಗಿತ್ತು. ಅಲ್ಲಿಂದ ಜೀಪ್ ಇರುವಲ್ಲಿಗೆ ನಡೆದು ಎರಡು ಜೀಪಿನಲ್ಲಿ ಸೋನುಪ್ರಯಾಗಕ್ಕೆ ಬಂದೆವು. ಅಲ್ಲಿ ನಮ್ಮ ಬಸ್ ನಮಗಾಗಿ ಕಾದಿತ್ತು.

ತ್ರಿಯುಗಿ ನಾರಾಯಣ
ನಾವು ಬಸ್ ಏರಿ ನಮ್ಮ ಸ್ಥಳದಲ್ಲಿ ಕೂತೆವು. ನಾವು ಬಸ್ ಹತ್ತಿದ್ದೇ ಮಂಗಾರಾಮ ಒಂದು ಬೀಡಿ ಹಚ್ಚಿ ಬಸ್ ಚಲಾಯಿಸಿದರು! ಅಲ್ಲಿಂದ ಹೊರಟು ದಾರಿಯಲ್ಲಿ ತ್ರಿಯುಗಿ ನಾರಾಯಣ ಎಂಬ ಪ್ರಾಚೀನ ದೇವಾಲಯಕ್ಕೆ ೨.೩೦ಗೆ ಬಂದೆವು. ಇದು ಉತ್ತರಾಖಂಡ ರಾಜ್ಯದ ರುದ್ರಪ್ರಯಾಗ ಜಿಲ್ಲೆಯಲ್ಲಿದೆ. ತ್ರಿಯುಗಿನಾರಾಯಣ ದೇವಾಲಯವು ಹಿಂದೆ ಶಿವ ಹಾಗೂ ಪಾರ್ವತಿಯರ ಮದುವೆ ನೆರವೇರಿದ ಸ್ಥಳ ಎಂಬುದು ಪ್ರತೀತಿ. ಈ ದೇವಾಲಯದ ವಿಶೇಷತೆ ಎಂದರೆ ಇಲ್ಲಿಯ ಹೋಮಕುಂಡದಲ್ಲಿ ಶಾಶ್ವತವಾಗಿ ಉರಿಯುತ್ತಿರುವ ಅಗ್ನಿ. ಈ ಅಗ್ನಿ ಸಾಕ್ಷಿಯಾಗಿ ನಾರಾಯಣನ ಸಮ್ಮುಖದಲ್ಲಿ ಶಿವ ಹಾಗೂ ಪಾರ್ವತಿಯರು ಮದುವೆಯಾಗಿದ್ದು ಎಂಬುದು ಪುರಾಣ ಕಥೆ. ಮೂರು ಯುಗಗಳಿಂದಲೂ ಅಗ್ನಿ ಆರದೆ ಇಂದಿಗೂ ಉರಿಯುತ್ತಿರುವುದರಿಂದ ಇದಕ್ಕೆ ತ್ರಿಯುಗಿ ಎಂದು ಹೆಸರು ಬಂದಿದೆ. ದೇವಾಲಯದಲ್ಲಿ ನಾರಾಯಣ ಪ್ರತಿಷ್ಠಾಪಿತವಾಗಿರುವುದರಿಂದ ನಾರಾಯಣ ಎಂಬ ಹೆಸರೂ ಕೂಡಿಕೊಂಡು ತ್ರಿಯುಗಿ ನಾರಾಯಣ ಎಂದಾಗಿದೆ. ಕೇದಾರನಾಥ ದೇವಾಲಯವನ್ನು ಹೋಲುವಂಥ ವಾಸ್ತುಶಿಲ್ಪ ಶೈಲಿಯನ್ನು ಹೊಂದಿದೆ.
ನಾವು ನೋಡಿದಾಗ ಹೋಮಕುಂಡದಲ್ಲಿ ದೊಡ್ಡ ಸೌದೆ ಉರಿಯುತ್ತಿತ್ತು. ಮದುವೆಮಂಟಪವನ್ನೂ ನೋಡಿದೆವು. ಶಿವ ಪಾರ್ವತಿಯರ ಮದುವೆ ಕಥೆ ಕೇಳಿ ದೇವಾಲಯ ನೋಡಿ ಅಲ್ಲಿಂದ ನಿರ್ಗಮನ.

dscn1368

dscn1366

ಗುಪ್ತಕಾಶಿ
ಸಂಜೆ ೪.೩೦ ಗಂಟೆಗೆ ಗುಪ್ತಕಾಶಿ ತಲಪಿದೆವು. ದೇವಾಲಯ ನೋಡಿ ಚಪಾತಿ ತಿಂದು ನಮ್ಮ ಹೊಟ್ಟೆಪೂಜೆ ನಡೆಸಿದೆವು.
ಪುರಾಣದ ಕಥೆಯ ಪ್ರಕಾರ, ಮಹಾಭಾರತದಲ್ಲಿ ಯುದ್ಧ ಮುಗಿದ ನಂತರ, ಪಾಂಡವರು ದಾಯಾದಿಗಳನ್ನು ಹತ್ಯೆ ಮಾಡಿದ ಪಾಪ ಪರಿಹಾರಕ್ಕಾಗಿ, ವ್ಯಾಸ ಮಹರ್ಷಿಗಳನ್ನು ಭೇಟಿ ಮಾಡುತ್ತಾರೆ. ವ್ಯಾಸರು ಈಶ್ವರನ ಮೊರೆ ಹೋಗಲು ಆದೇಶಿಸುತ್ತಾರೆ. ಈಶ್ವರನ ಕೃಪೆ ಇಲ್ಲದೆ, ಅವನು ಕ್ಷಮಿಸದೆ ಇದ್ದರೆ ಸ್ವರ್ಗ ಪ್ರಾಪ್ತಿ, ಮೋಕ್ಷ ಸಿಗುವುದಿಲ್ಲ ಎಂದು ಹೇಳುತ್ತಾರೆ. ಶಿವನನ್ನು ಅರಸುತ್ತಾ ಪಾಂಡವರು ಗುಪ್ತಕಾಶಿಗೆ ಬರುತ್ತಾರೆ, ಆದರೆ ಶಿವ ಇವರನ್ನು ಕ್ಷಮಿಸುವ ಮನಸ್ಸು ಮಾಡುವುದಿಲ್ಲ. ಪಾಂಡವರಿಗೆ ದರ್ಶನ ಕೊಡಲು ಮನಸ್ಸಿಲ್ಲದೆ ಅಂತರ್ಧಾನನಾಗಿ ಬಿಡುತ್ತಾನೆ. ಪಾಂಡವರು ಶಿವನನ್ನು ಹುಡುಕುತ್ತಾ, ಅವನನ್ನು ಹಿಂಬಾಲಿಸುತ್ತಾ ಬರುತ್ತಾರೆ. ಗುಪ್ತಕಾಶಿಯಲ್ಲಿ ವೇಷ ಮರೆಸಿಕೊಂಡು ಸ್ವಲ್ಪ ಕಾಲ ನೆಮ್ಮದಿಯಾಗಿರುತ್ತಾನೆ. ಆದರೆ ಛಲ ಬಿಡದ ಪಾಂಡವರು, ಹುಡುಕುತ್ತಾ ಬರುತ್ತಾರೆ. ಇಲ್ಲಿ ಶಿವ ಗುಪ್ತವಾಗಿ ಅಡಗಿಕೊಂಡಿದ್ದನೆಂಬ ಕಾರಣಕ್ಕೆ, ಈ ಜಾಗಕ್ಕೆ ಗುಪ್ತಕಾಶಿ ಎಂಬ ಹೆಸರು ಬಂತೆಂದು ಪ್ರತೀತಿ.
ಪಾರ್ವತಿಯ ಪ್ರೀತಿಗೆ ಮನಸೋತ ಶಿವನು ಪಾರ್ವತಿಯಲ್ಲಿ ಮೊದಲ ಬಾರಿಗೆ ತನ್ನ ಪ್ರೇಮ ನಿವೇದನೆಯನ್ನು ಮಾಡಿದ ಸ್ಥಳವಂತೆ ಗುಪ್ತಕಾಶಿ. ಈ ದೇವಾಲಯ ಕಾಶಿ ವಿಶ್ವನಾಥ ದೇವಾಲಯಕ್ಕೆ ಸರಿಸಮನಾದದ್ದು ಎಂದೂ ಪ್ರತೀತಿಯಲ್ಲಿದೆ. ಇಲ್ಲಿ ಪುರಾತನ ವಿಶ್ವನಾಥ ದೇವಾಲಯ ಹಾಗೂ ಮಣಿಕರ್ಣಿಕ ಕುಂಡ ಇವೆ. ಇಲ್ಲಿಯ ಅರ್ಧನಾರೀಶ್ವರ ದೇವಸ್ಥಾನ, ಕೇದಾರನಾಥನ ದೇವಸ್ಥಾನದಂತೆಯೇ ೫೦೦೦ ವರ್ಷಗಳಷ್ಟು ಹಳೆಯದಾದದ್ದು. ಇಲ್ಲಿ ಗಂಗಾ ಮತ್ತು ಯಮುನಾ ನದಿಗಳೆರಡೂ ಶಿವಲಿಂಗದ ಕೆಳಗಡೆಯಿಂದ ಹರಿಯುತ್ತದೆ ಮತ್ತು ಮಣಿಕರ್ಣಿಕ ಕುಂಡದಲ್ಲಿ ಸೇರುತ್ತವೆ. ದೇವಸ್ಥಾನದ ಹೊರಗೆ, ಎರಡು ಜಲಧಾರೆಗಳು, ಭೂಮಿಯ ಒಳಗಡೆಯಿಂದ ಬಂದು, ಕುಂಡದಲ್ಲಿ ಬೀಳುವುದನ್ನು ಕಾಣಬಹುದು. ಇದು ಕೇದಾರನಾಥಕ್ಕೆ ಹೋಗುವ ಮಾರ್ಗದಲ್ಲಿ ಮಂದಾಕಿನಿ ನದಿಯ ತಟದ ಮೇಲೆ ಸ್ಥಾಪಿತವಾಗಿದೆ.

ಊಖೀಮಠ (ಉಷಾ ಮಠ)
ಗುಪ್ತಕಾಶಿಯಿಂದ ಸಂಜೆ ೫.೩೦ಗೆ ಹೊರಟು ಆರು ಗಂಟೆಗೆ ಊಖೀಮಠ ತಲಪಿದೆವು. ಅಲ್ಲೇ ತಂಗುದಾಣ. ಊಖೀಮಠದಲ್ಲಿ ಲಗೇಜು ಹಾಕಿ, ಪಕ್ಕದಲ್ಲೇ ಇರುವ ಓಂಕಾರೇಶ್ವರ ದೇವಾಲಯಕ್ಕೆ ಬಂದೆವು. ಅಲ್ಲಿ ಮಹಾಮಂಗಳಾರತಿ ನೋಡಿದೆವು. ಅಲ್ಲಿಯ ಅರ್ಚಕರ ಹೆಸರು ವಾಗೀಶಲಿಂಗ ಪುರೋಹಿತ. ಕರ್ನಾಟಕದ ವೀರಶೈವ ಸಮುದಾಯಕ್ಕೆ ಸೇರಿದ ದಾವಣಗೆರೆಯವರು. ಅಲ್ಲಿ ಪೂಜೆ ಸಲ್ಲಿಸುವ ಅವಕಾಶ ಅವರ ಕುಟುಂಬಕ್ಕೆ ತಲೆತಲಾಂತರದಿಂದ ಬಂದಿದೆಯಂತೆ. ೨೦೧೩ರಲ್ಲಿ ಪ್ರವಾಹ ಬಂದಾಗ ಕೇದಾರನಾಥ ದೇವಾಲಯದೊಳಗೆ ಇದ್ದವರವರು. ಒಂದು ವರ್ಷ ವಾಗೀಶಲಿಂಗ ಅವರಾದರೆ ಮರು ವರ್ಷ ಶಂಕರಲಿಂಗಲಿಂಗ ಅವರು ಕೇದಾರನಾಥನ ಪೂಜಾ ಕೈಂಕರ್ಯ ಮಾಡುವುದಂತೆ. ಹೀಗೆ ಸರದಿ ಪ್ರಕಾರ ಬದಲಾವಣೆ. ಪೂಜೆ ಮುಗಿಸಿದ ವಾಗೀಶರು ಪ್ರವಾಹಬಂದಾಗ ದೇವಾಲಯದೊಳಗೆ ಇದ್ದ ತಮ್ಮ ಅಂದಿನ ಅನುಭವವನ್ನು ನಮ್ಮ ಕಣ್ಣಿಗೆ ಕಟ್ಟುವಂತೆ ವಿವರಿಸಿದರು.

dscn1378

ಅನುಭವವವು ಸವಿಯಲ್ಲ, ಅದರ  ನೆನಪೇ ಸವಿಯು!
“ಅಂದು ತಾರೀಕು ೧೭-೬-೨೦೧೩ರಂದು ಬೆಳಗ್ಗೆ ಉತ್ತರಾಖಂಡದ ಕೇದಾರದಲ್ಲಿಯ ಸುತ್ತಮುತ್ತ ಹಿಮಾಲಯ ಪರ್ವತ ಭಾಗದಲ್ಲಿ ಮೇಘಸ್ಫೋಟವೇ ಆಯಿತು. ನನಗೆ ತಿಳಿದಂತೆ ಹಿಮಾಲಯದಲ್ಲಿ ಜೋರಾದ ಮಳೆ ಬರುವುದಿಲ್ಲ. ೨೦೧೩ರಲ್ಲಿ ಜೂನ್ ೧೩ರಿಂದಲೇ ಜೋರು ಮಳೆ ಬರುತ್ತಿತ್ತು. ಚಳಿ ಸಾಕಷ್ಟಿತ್ತು. ಪ್ರವಾಹ ಬಂದದ್ದು ಹದಿನೈದು ನಿಮಿಷವಾದರೂ ಅದರಿಂದ ಎಷ್ಟೋ ಮಂದಿ ಅಸುನೀಗಿದರು. ಜೂನ್ ೧೬ ರಂದು ರಾತ್ರಿ ಮಳೆ ಜೋರಾಗಿತ್ತು. ಪರ್ವತದ ಕಡೆಯಿಂದ ಕಲ್ಲುಗಳುರುಳುವ ಸದ್ದು ಕೇಳುತ್ತಲಿತ್ತು. ಏನೋ ಅನಾಹುತ ಆಗುತ್ತದೆ ಎಂದು ನಾವೆಲ್ಲ ಭೀತಿಗೊಳಗಾದೆವು. ಆ ಸಮಯದಲ್ಲಿ ಕೇದಾರದಲ್ಲಿ ತುಂಬಾ ಜನ ಪ್ರವಾಸಿಗರು ಇದ್ದರು. ಸದ್ಯ ರಾತ್ರಿ ಪ್ರವಾಹ ಬರಲಿಲ್ಲ. ಹಾಗಾಗಿ ಸಾವುನೋವುಗಳು ಹೆಚ್ಚಾಗಲಿಲ್ಲ. ರಾತ್ರಿ ಪ್ರವಾಹ ಬಂದಿದ್ದರೆ ಪ್ರಾಣಹಾನಿ ಜಾಸ್ತಿಯಾಗಿರುತ್ತಿತ್ತು.

೧೭ ಜೂನ್೨೦೧೩ ಬೆಳಗ್ಗೆ ೬.೩೦ ಗಂಟೆಗೆ ನಾನು ದೇವಾಲಯದೊಳಗೆ ಇದ್ದೆ. ದೇವಾಲಯದ ಕೈಂಕರ್ಯಕ್ಕೆ ನಾವು ೫ ಮಂದಿ ಇದ್ದೇವೆ. ಪರ್ವತದಿಂದ ದೊಡ್ಡ ದೊಡ್ಡ ಕಲ್ಲು ಬಂಡೆಗಳು ಉರುಳಿಕೊಂಡು ಕಾಲು ಗಂಟೆ ಭೀಕರ ಪ್ರವಾಹ ಬಂದಿತ್ತು. ಪೂರ್ವ ಬಾಗಿಲಿನಿಂದ ಪ್ರವಾಹದ ನೀರು ದೇವಾಲಯದೊಳಗೆ ಹರಿದು ಬರುತ್ತಿತ್ತು. ನೀರಿನ ಮಟ್ಟ ಕ್ಷಣ ಕ್ಷಣಕ್ಕೂ ಹೆಚ್ಚುತ್ತಲಿತ್ತು. ನನ್ನ ಕಥೆ ಇಲ್ಲಿಗೆ ಮುಗಿಯಿತು ಎಂದು ಭಯಭೀತನಾಗಿ ಮೃತ್ಯುಂಜಯ ಜಪ ಮಾಡಲಾರಂಭಿಸಿದೆ. ನನ್ನ ಕಂಠಮಟ್ಟದವರೆಗೂ ನೀರು ಬಂದಿತ್ತು. ಉಟ್ಟ ಬಟ್ಟೆ ತೊಪ್ಪೆಯಾಗಿತ್ತು. ನೀರು ತಂಪಾಗಿದ್ದು ಅಸಾಧ್ಯ ಚಳಿಯಿಂದ ನಡುಗುತ್ತಿದ್ದೆ. ವಿದ್ಯುತ್ ಹೋಗಿ ಒಳಗೆಲ್ಲ ಕತ್ತಲೆ ಕವಿದಿತ್ತು. ಏನೂ ಕಾಣಿಸುತ್ತಿರಲಿಲ್ಲ. ಇನ್ನೇನು ಅರ್ಧ ಅಡಿಗೂ ಮೇಲೆ ನೀರು ಬಂದಿದ್ದರೆ ನಾನು ಅಲ್ಲೇ ಜಲಸಮಾಧಿಯಾಗಿರುತ್ತಿದ್ದೆ. ಕಾಣಿಕೆ ಡಬ್ಬಿಯ ಮೇಲೆ ಹತ್ತಿ ಮೇಲಿದ್ದ ಘಂಟೆಯನ್ನು ಆಧಾರಕ್ಕೆ ಹಿಡಿದುಕೊಂಡು ಪ್ರಾಣ ಉಳಿಸಿಕೊಳ್ಳುವ ಪ್ರಯತ್ನ ಮಾಡಿದೆ. ಸ್ವಲ್ಪ ಹೊತ್ತಿನಲ್ಲಿ ನೀರು ಕಡಿಮೆಯಾಗಲಾರಂಭಿಸಿತು. ಕತ್ತಲೆಯಲ್ಲಿ ಏನೂ ಕಾಣಿಸುತ್ತಿರಲಿಲ್ಲ. ಬಂದ ನೀರು ಎಲ್ಲಿಂದ ಹೊರಗೆ ಹೋಗುತ್ತಿದೆ ಗೊತ್ತಾಗಲಿಲ್ಲ. ನೀರು ಸಂಪೂರ್ಣ ಇಳಿದ ಮೇಲೆ ಕೆಳಗೆ ಬಂದು ಹೊರಗೆ ನೋಡಿದಾಗ ಗೊತ್ತಾದದ್ದು, ಮುಚ್ಚಿದ್ದ ಪಶ್ಚಿಮ ಬಾಗಿಲು ತಾನಾಗಿಯೇ ತೆರೆದುಕೊಂಡು ನೀರು ಅಲ್ಲಿಂದ ಹೊರ ಹರಿಯುತ್ತಲಿತ್ತು. ಇದಲ್ಲವೆ ಕೇದಾರನಾಥನ ಲೀಲೆ! ದೇವಾಲಯದ ಒಳಗೆ ಮಣ್ಣು, ಮರಳು ತುಂಬಿತ್ತು. ಆಹಾರವಿರಲಿ, ಕುಡಿಯಲು ಸ್ವಚ್ಛ ನೀರೂ ಸಿಗದ ಪರಿಸ್ಥಿತಿಯಲ್ಲಿ ಎರಡು-ಮೂರು ದಿನ ಕಳೆದಿದ್ದೆವು.
ಮಳೆ ಜೋರಾಗಿ ಎಡೆಬಿಡದೆ ಸುರಿಯಿತು. ಮಳೆನೀರಿನ ಜೊತೆ ಹಿಮ ಕರಗಿ ಮಂದಾಕಿನಿ ನದಿ ಸೇರಿತು. ಅದರಿಂದ ಬಲುದೊಡ್ಡ ಪ್ರವಾಹವೇ ಉಂಟಾಯಿತು. ನೀರು ರೌದ್ರಾವತಾರದಿಂದ ಉಕ್ಕಿ ಹರಿದು ದೇವಾಲಯದ ಸುತ್ತಮುತ್ತ ಇದ್ದ ಕಟ್ಟಡಗಳು ಜಲಾವೃತಗೊಂಡು ಕುಸಿದುಬಿದ್ದುವು. ಯಾತ್ರಾರ್ಥಿಗಳು ನೀರಿನಲ್ಲಿ ಕೊಚ್ಚಿ ಹೋದ ಘಟನೆಯೂ ನಡೆಯಿತು. ಸೇನಾ ಕಾರ್ಯಾಚರಣೆಯಿಂದ ಸಾವಿರಾರು ಮಂದಿಯ ಜೀವ ಉಳಿಯಿತು.
ದೇವಾಲಯದ ಹಿಂದೆ ತುಸು ದೂರದಲ್ಲಿ ದೊಡ್ಡ ಗಾತ್ರದ ಬಂಡೆಗಲ್ಲನ್ನು ಯಾರೋ ತಂದು ಹಾಕಿದಂತೆ ಇದ್ದುದನ್ನು ನೀವೆಲ್ಲ ನಿನ್ನೆ ನೋಡಿದ್ದೀರಲ್ಲ. ಅದೇನಾದಾರೂ ಮತ್ತೂ ಮುಂದೆ ಉರುಳಿ ದೇವಾಲಯದ ಹಿಂಬದಿ ಗೋಡೆಗೆ ಡಿಕ್ಕಿ ಹೊಡೆದಿದ್ದರೆ ದೇವಾಲಯ ನಿರ್ನಾಮಗೊಳ್ಳುತ್ತಿತ್ತು. ಆದರೆ ದೇವರು ದೊಡ್ಡವನು. ಇದೇ ಬಂಡೆಯಿಂದಾಗಿ ಪ್ರವಾಹದ ನೀರು ಎರಡು ಕವಲಾಗಿ ಹರಿದು ದೇವಾಲಯಕ್ಕೆ ಏನೂ ಹಾನಿಯಾಗಲಿಲ್ಲ ಎಲ್ಲ ಶಿವನಿಚ್ಛೆಯಂತೆಯೇ ನಡೆಯುತ್ತದೆ’’ ಎಂದು ತಮ್ಮ ಅನುಭವವನ್ನು ಹಂಚಿಕೊಂಡರು. ನಾವೆಲ್ಲ ಮಂತ್ರಮುಗ್ಧರಾಗಿ ಅವರ ಮಾತು ಆಲಿಸಿದೆವು. ಕೆಲವರೆಲ್ಲ ಅವರ ಕಾಲಿಗೆ ನಮಸ್ಕರಿಸಿದರು.
ಉಷಾ ಅನಿರುದ್ಧರ ವಿವಾಹವಾದ ಸ್ಥಳವೇ ಉಷಾಮಠವೆಂದು ಪ್ರಸಿದ್ಧಿ ಪಡೆಯಿತು. ಊರವರ ಬಾಯಲ್ಲಿ ಅಪಭ್ರಂಶವಾಗಿ ಕ್ರಮೇಣ ಊಖೀ ಮಠವೆಂದು ರೂಢಿಗೆ ಬಂತು. ಉಷಾ ಅನಿರುದ್ಧರ ವಿವಾಹಮಂಟಪವೂ ಅಲ್ಲಿದೆ. ಆರು ತಿಂಗಳು ಕೇದಾರನಾಥ ದೇಗುಲ ಬಾಗಿಲು ಮುಚ್ಚಿದಾಗ ಕೇದಾರನಾಥನ ಉತ್ಸವಮೂರ್ತಿಗೆ ಇಲ್ಲಿ ಓಂಕಾರೇಶ್ವರ ದೇವಾಲಯದಲ್ಲಿ ಆರು ತಿಂಗಳು ಪೂಜೆ ನಡೆಯುತ್ತದೆ. ಮೇ ತಿಂಗಳಲ್ಲಿ‌ಆ ಉತ್ಸವಮೂರ್ತಿಯನ್ನು ಹೊತ್ತು ಮೆರವಣಿಗೆಯಲ್ಲಿ ಸಾಗಿ ಕೇದಾರನಾಥ ತಲಪುವುದಂತೆ. ಅದರಲ್ಲಿ ನೂರಾರು ಭಕ್ತರು ಮೂರ್ತಿ ಹೊತ್ತು ಸಾಗಲು ಭಾಗಿಯಾಗುತ್ತಾರಂತೆ. ಉಷಾಮಠವೆಂದು ಕನ್ನಡದಲ್ಲಿ ಬರೆದ ಫಲಕವಿದೆ ಅಲ್ಲಿ. ಕನ್ನಡ ಅಕ್ಷರ ನೋಡಿ ಬಲು ಖುಷಿಯಾಯಿತು.
ಊಟದ ತಯಾರಿ
ಮಠದ ಅಡುಗೆಮನೆಯಲ್ಲಿ ಶಶಿಕಲಾ ಸರಸ್ವತಿಯವರು ಅನ್ನ, ಸಾಂಬಾರು ತಯಾರಿಸಿದರು. ಸ್ನಾನಾದಿ ಮುಗಿಸಿ, ಮಾಡಿದ ಅಡುಗೆಗೆ ನ್ಯಾಯ ಸಲ್ಲಿಸಿದೆವು.

ಓಂಕಾರೇಶ್ವರನ ಪೂಜೆ
ಬೆಳಗ್ಗೆ (೧೯-೯-೨೦೧೬) ೫.೩೦ಗೆ ಎದ್ದು ತಯಾರಾಗಿ ಆರು ಗಂಟೆಗೆ ದೇವಾಲಯಕ್ಕೆ ಹೋದೆವು. ಅಲ್ಲಿ ಒಂದು ಗಂಟೆ ಕುಳಿತು ಅರ್ಚನೆ, ಅಭಿಷೇಕ, ಮಹಾಮಂಗಳಾರತಿ ನೋಡಿದೆವು. ಮಂತ್ರ ಹೇಳಲು ಮೈಕ್ ಮುಂದೆ ಒಬ್ಬರು ಇರುತ್ತಾರೆ. ಅರ್ಚಕರೂ ಒಳಗೆ ಮಂತ್ರ ಹೇಳುತ್ತಾರೆ.

ಊಖೀಮಠಕ್ಕೆ ವಿದಾಯ
ಬೆಳಗ್ಗೆ ಬೇಗ ಎದ್ದು ಉಪ್ಪಿಟ್ಟು, ಹುಳಿ‌ಅನ್ನ ಮಾಡಿಟ್ಟಿದ್ದರು ಅನ್ನಪೂರ್ಣೆಯರು. ಸರೋಜ ಎಲ್ಲರಿಗೂ ಕಾಫಿ ಚಹಾ ಮಾಡಿ ಕೊಟ್ಟರು. ೯ ಗಂಟೆಗೆ ಉಪ್ಪಿಟ್ಟು ತಿಂದು ೯.೩೦ಕ್ಕೆ ಊಖೀಮಠಕ್ಕೆ ವಿದಾಯ ಹೇಳಿ ಬಸ್ ಹತ್ತಿದೆವು.

ತುಂಗಾನಾಥದೆಡೆಗೆ
ಪಂಚಕೇದಾರದಲ್ಲಿ ಮೂರನೆಯದಾದ ತುಂಗಾನಾಥ ಬೆಟ್ಟಕ್ಕೆ ಹೋಗುವ. ಅದು ಬದರಿಗೆ ಹೋಗುವ ದಾರಿಯಲ್ಲೇ ಸಿಗುತ್ತದೆ. ಆದರೆ ಎಲ್ಲರೂ ಕುದುರೆಯಲ್ಲೇ ಹೋಗಿ ಕುದುರೆಯಲ್ಲೇ ಬರತಕ್ಕದ್ದು. ನಡೆಯುವಷ್ಟು ಸಮಯ ಇಲ್ಲ. ಮೊದಲೇ ನಿಗದಿಪಡಿಸಿದ ನಮ್ಮ ಪ್ರವಾಸದ ಪಟ್ಟಿಯಲ್ಲಿಲ್ಲ ಇದು. ಈ ಜಾಗ ನೋಡುವುದು ಬೋನಸ್ ಎಂದು ವಿಠಲರಾಜು ಹೇಳಿದ್ದರು. ಊಖೀಮಠದಿಂದ ಚೊಪತಾಕ್ಕೆ ಹೋದೆವು. ಚೊಪತಾದಿಂದ ತುಂಗಾನಾಥಕ್ಕೆ ಸುಮಾರು ೫ಕಿಮೀ ಬೆಟ್ಟ ಹತ್ತಬೇಕು. ಕುದುರೆಯಲ್ಲಿ ಕೂರಲು ಭಯವಿರುವ ಮೂರು ಮಂದಿ ಬರದೆ ಬಸ್ಸಲ್ಲೇ ಕೂತರು.

ಕುದುರೇಯ ತಂದಿವ್ನಿ ಜೀನಾವ ಬಿಗಿದಿವ್ನಿ
ಕುದುರೇಯಾ ತಂದಿವ್ನಿ ಜೀನಾವ ಬಿಗಿದಿವ್ನಿ ಬರಬೇಕು ತಂಗೀ ತುಂಗಾನಾಥಕ್ಕೆ ಎಂದು ಮಾಬೀರ್ ಸಿಂಗ್ ಅಣ್ಣ ಕುದುರೆಯೊಂದಿಗೆ ತಯಾರಾಗಿ ನಿಂತಿದ್ದ! ಬೆಳಗ್ಗೆ ೧೧.೩೦ಗೆ ಕುದುರೆ ಏರಿದೆವು. ನಾನೇರಿದ ಕುದುರೆಯ ಹೆಸರು ಗೋಲು. ಐದು ವರ್ಷದವ. ಅದರ ಮಾಲೀಕ ಮಾಬೀರ್ ಸಿಂಗ್. ತಂಗಿ ಸವಿತಳ ಕುದುರೆಯೂ ಗೋಲು. ಅದಕ್ಕೆ ನಾಲ್ಕು ವರ್ಷ. ಅಣ್ಣತಮ್ಮನಂತೆ ಅವು. ಅಣ್ಣತಮ್ಮ ಎರಡಕ್ಕೂ ಅದೇಗೆ ಒಂದೇ ತರಹದ ಹೆಸರಿಟ್ಟರು ಎಂದು ನಾನಂದಾಗ, ದೊಡ್ಡಪ್ಪ ಚಿಕ್ಕಪ್ಪನ ಮಕ್ಕಳಾಗಿರಬಹುದು ಎಂದಳು ಸವಿತ! ನಾವಿಬ್ಬರೂ ಅಕ್ಕತಂಗಿಯರು ಅವರ ಅಣ್ಣತಮ್ಮ ಕುದುರೆ ಏರಿದ್ದು ಕುದುರೆವಾಲಾಗಳಿಗೆ ಖುಷಿಯೋ ಖುಷಿ. ತುಂಬ ಚೆನ್ನಾಗಿ ನಮ್ಮನ್ನು ಕರೆದೊಯ್ದರು.
ತುಂಗಾನಾಥ ಬೆಟ್ಟ ಹತ್ತುವಾಗಿನ ನೋಟ ಅದೆಷ್ಟು ಚಂದ. ಒಮ್ಮೆ ಹಿಮದಿಂದಾವೃತ ಬೆಟ್ಟ, ದಾರಿಯ ಮುಂದೆ ಏನೊಂದೂ ಕಾಣದು. ಎಲ್ಲ ಒಮ್ಮೆಗೇ ಮಾಯವಾದಂತೆ ಅನಿಸುತ್ತದೆ. ಎಲ್ಲ ಮಾಯ, ನಾವು ಮಾಯ, ಬೆಟ್ಟ ಮಾಯ, ಹಿಂದೆ ಬರುವವರೂ ಮಾಯ. ಸ್ವಲ್ಪ ಹೊತ್ತಲ್ಲಿ ಎಲ್ಲ ಕಣ್ಣೆದುರು ಗೋಚರ. ಇದುವೆ ಪ್ರಕೃತಿಯ ವೈಚಿತ್ರ್ಯ. ಹಸಿರುಹೊದ್ದ ಹಿಮಮಣಿಯ ಸಾಲು. ನಿಸರ್ಗದ ಈ ಬೆಟ್ಟಗಳ ಸೌಂದರ್ಯವನ್ನು ವಿವರಿಸಲು ಶಬ್ದಗಳ ಕೊರತೆ ಕಾಡುತ್ತದೆ! ಕುದುರೆಮೇಲೆ ಸವಾರಿ ಮಾಡುತ್ತಲೇ ಬೆಟ್ಟಗಳ ಸೌಂದರ್ಯ ನೋಡುತ್ತ ಸಾಗಿದೆವು. ಕುದುರೆಯಿಂದ ಬೀಳದಂತೆ ಒಂದು ಕೈಯಲ್ಲಿ ಭದ್ರವಾಗಿ ಹಿಡಿದುಕೊಂಡು ಒಂದೇ ಕೈಯಲ್ಲಿ ಮೊಬೈಲು ಹಿಡಿದು ಫೋಟೋ ತೆಗೆಯುವ ಸಾಹಸ ಮಾಡಿದೆ. ದಾರಿಯಲ್ಲಿ ಒಮ್ಮೆ ಮಾತ್ರ ಕುದುರೆಯಿಂದ ಇಳಿದು ಕುದುರೆಗೆ ವಿಶ್ರಾಂತಿ. ಅಲ್ಲಿ ಚಹಾ ಕುಡಿಯುವವರು ಕುಡಿದರು.
ನಮ್ಮ ಕುದುರೆಗೆ ಬೆಲ್ಲ ತಿನ್ನಿಸಲು ಭಕ್ಷೀಸು ಕೊಡಿ ಎಂದು ಮಾಬೀರ್ ಸಿಂಗ್ ಕೇಳಿದ. ಹಾಗೆ ರೂ.೧೦೦ ಕೊಟ್ಟೆವು. ಅವನು ಸಂಪ್ರೀತನಾದ. ಅವನು ತೃಪ್ತಿ ಹೊಂದಿದರೆ ಕುದುರೆಯನ್ನೂ ಚೆನ್ನಾಗಿ ನೋಡಿಕೊಂಡಂತೆಯೇ ಲೆಕ್ಕ! ಬೆಟ್ಟ ಹತ್ತುತ್ತ ಮೆಟ್ಟಲು ಹತ್ತುವಾಗ ನಾವು ಕುದುರೆಯಲ್ಲಿ ಕುಳಿತಿರುವಾಗ ಮುಂದೆ ಬಾಗಬೇಕು. ಇಳಿಯುವಾಗ ಹಿಂದೆ ಬಾಗಬೇಕು. ಆಗ ಕುದುರೆಗೆ ನಮ್ಮ ಭಾರ ಸಮತೋಲವಾಗಿ ಕಷ್ಟವೆನಿಸುವುದಿಲ್ಲ. ನಾವು ಅಕ್ಕ ತಂಗಿ ಅದನ್ನು ಸರಿಯಾಗಿ ಪಾಲಿಸಿದೆವು.

20160919_121650

20160919_112013

20160919_112056

20160919_112811

tunganatha

20160919_120435

ತುಂಗಾನಾಥ ದೇವಾಲಯ
ಸುಮಾರು ೧೨.೩೦ ಅಂದಾಜು ನಾವು ದೇವಾಲಯ ತಲಪಿದೆವು. ದೇವರ ದರ್ಶನ ಮಾಡಿದೆವು. ಒಳಗೆ ಹೋದೊಡನೆ ಅಲ್ಲಿರುವ ಪಂಡಿತರು, ‘ಪಂಡಿತರಿಗೆ ತಟ್ಟೆಗೆ ದಕ್ಷಿಣೆ ಹಾಕಿ’ ಎಂದು ಬಾಯಿಬಿಟ್ಟೇ ತಟ್ಟೆಗೆ ಎಂಬುದನ್ನು ಒತ್ತಿ ಕೇಳುತ್ತಾರೆ. ತಟ್ಟೆಗೆ ದೊಡ್ಡನೋಟು ಹಾಕಿದರೆ ಮುಖ ಇಷ್ಟಗಲವಾಗಿ ನಗು ಮೂಡುತ್ತದೆ. ಹುಂಡಿಗೆ ಹಾಕಿದರೆ ಮುಖ ಸಿಂಡರಿಸುತ್ತಾರೆ.
ತುಂಗಾನಾಥ ಬೆಟ್ಟ ೧೨೭೭೨ ಅಡಿ ಎತ್ತರದಲ್ಲಿದೆ. ನಾವು ಹೋದ ಸಮಯದಲ್ಲಿ ಸ್ವಲ್ಪ ಚಳಿಯಿದ್ದು ಆಗಾಗ ಹಿಮದಿಂದ ಕೂಡಿತ್ತು. ಈ ರಾಜ್ಯದ ರುದ್ರಪ್ರಯಾಗ್ ಜಿಲ್ಲೆಯಲ್ಲಿರುವ ತುಂಗನಾಥ ದೇವಸ್ಥಾನ ವಿಶ್ವದ ಅತಿ ಎತ್ತರದಲ್ಲಿ ನೆಲೆಸಿರುವ ಶಿವನ ದೇವಾಲಯ ಎಂದು ಪ್ರಸಿದ್ಧಿ ಪಡೆದಿದೆ. ಸುತ್ತಲೂ ಹಸಿರಿನಿಂದ ಆವೃತವಾಗಿದ್ದು ಬೆಟ್ಟಗಳಿಂದ ಕೂಡಿದ ಭೂಮಟ್ಟದಿಂದ ಇಷ್ಟೊಂದು ಎತ್ತರದಲ್ಲಿರುವ ಶಿವನ ದೇವಸ್ಥಾನ ಪ್ರಪಂಚದ ಬೇರೆಲ್ಲೂ ಇಲ್ಲ.
ದೇವಾಲಯದ ಹೊರಗೆ ಕೂತು ಸುತ್ತಲೂ ಪ್ರಕೃತಿ ಸೌಂದರ್ಯವನ್ನು ಕಣ್ಣು ತುಂಬಿಸಿಕೊಂಡೆವು. ಇಲಿಯೊಂದು ಪಕ್ಕದಲ್ಲೇ ಒಂದೆಲಗ ನಮೂನೆಯ ಎಲೆಯನ್ನು ತಿನ್ನುತ್ತಿದ್ದುದನ್ನು ನೋಡಿದೆವು.

OLYMPUS DIGITAL CAMERA

20160919_122540

20160919_124842

ಚಂದ್ರಕಾಂತ ಶಿಲಾಮಂದಿರ
ದೇವಾಲಯದಿಂದ ಮುಂದೆ ಪುಟ್ಟಬೆಟ್ಟ ಏರಿದರೆ ಚಂದ್ರಕಾಂತ ಶಿಲಾಮಂದಿರ ಎಂಬ ಪುಟ್ಟ ದೇವಾಲಯವಿದೆ. ಅಲ್ಲಿಗೆ ತೆರಳಲು ೩ಕಿಮೀ ನಡೆಯಬೇಕು. ಒಂದು ಗಂಟೆಗೆ ನಾವು ಉತ್ಸಾಹವಿರುವ ಏಳೆಂಟು ಮಂದಿ ಹೊರಟೆವು. ಅಲ್ಲಿಯೂ ಒಮ್ಮೆ ಹಿಮ, ಮಂಜು ಕಣ್ಣಾಮುಚ್ಚಾಲೆಯಾಟ ಆಡುತ್ತಲೇ ಇತ್ತು. ಈ ಕಣ್ಣಾಮುಚ್ಚಾಲೆಯಾಟ ನೋಡಲು ಬಲು ಸೊಗಸು. ದಾರಿಯಲ್ಲಿ ಕಾಡು ಹೂಗಳು ಬಂಡೆ ಎಡೆಯಲ್ಲಿ ಸಂದುಗೊಂದುಗಳಲ್ಲಿ ಅರಳಿ ಸೊಗಸಾಗಿ ಕಾಣುತ್ತಿತ್ತು. ಬೆಟ್ಟ ಏರಲು ಸಾಕಷ್ಟು ಸುಸ್ತು ಆಗುತ್ತದೆ. ಅಲ್ಲಲ್ಲಿ ನಿಂತು ಉಸಿರು ಬಿಟ್ಟು ಉಸಿರೆಳೆದು ಅಂತೂ ಬೆಟ್ಟ ಏರಿದೆವು. ಅಲ್ಲಿ ಕೂತು ತುಸು ವಿರಮಿಸಿ ಹಿಮ ಕಡಿಮೆಯಾಗುವ ಸಮಯ ಕಾದು ಭಾವಚಿತ್ರ ತೆಗೆಸಿಕೊಂಡು ಕೆಳಗೆ ಇಳಿಯಲು ತೊಡಗಿದೆವು. ಕಾಡು ಹೂಗಳು ಕಾಣಿಸಿದುವು. ಪ್ರವಾಸಿಗರು ತಿಂದು ಬೀಸಾಡಿದ ಚಾಕಲೇಟು ಕವರು ಇತ್ಯಾದಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಸರೋಜ ಹೆಕ್ಕಿ ಪರಿಸರ ಕಾಪಾಡುವಲ್ಲಿ ಅಳಿಲು ಸೇವೆ ಸಲ್ಲಿಸಿದರು. ಕೆಳಗೆ ಕುದುರೆ ಬಳಿ ತಲಪುವಾಗ ೨.೪೫ ಆಗಿತ್ತು. ಹೊಟ್ಟೆ ತಾಳ ಹಾಕಲು ಸುರುವಾಗಿತ್ತು. ಎಲ್ಲರಿಗೂ ದ್ರಾಕ್ಷೆ ಹಂಚಿದೆ. ಒಮ್ಮೆ ಕುದುರೆ ಏರಿದ ಮೇಲೆ ಇಳಿದದ್ದು ಗಮ್ಯ ಸ್ಥಳ ಬಂದಾಗಲೇ. ಇಳಿಯುವಾಗ ಗಂಟೆ ೩.೩೦. ಮಾಬೀರ್ ಸಿಂಗ್‌ಗೆ ರೂ. ೫೦೦ ಕೊಟ್ಟೆ. ಕುದುರೆ ಏರುವ ಮೊದಲೇ ಹೋಗಿ ಬರಲು ರೂ.೫೦೦ ಎಂದು ನಿಗದಿಪಡಿಸಿದ್ದರು.

20160919_130145

20160919_130130

OLYMPUS DIGITAL CAMERA

OLYMPUS DIGITAL CAMERA

OLYMPUS DIGITAL CAMERA

OLYMPUS DIGITAL CAMERA

OLYMPUS DIGITAL CAMERA

ತುಂಗಾನಾಥದಿಂದ ನಿರ್ಗಮನ
ಬಸ್ಸು ಹತ್ತಿ, ಬೆಳಗ್ಗೆ ಬರುವಾಗ ಮಾಡಿ ತಂದಿದ್ದ ಪುಳಿಯೋಗರೆ ತಿಂದು ನಾಲ್ಕು ಗಂಟೆಗೆ ಅಲ್ಲಿಂದ ಹೊರಟೆವು. ಬಸ್ಸಲ್ಲಿದ್ದವರಿಗೆ ಬೆಂಗಳೂರಿನಿಂದ ಬಂದ ಪ್ರವಾಸಿಗರು ಮಾತಾಡಲು ಸಿಕ್ಕಿದಾಗ, ಅವರ ಗುಂಪಿನಲ್ಲೊಬ್ಬ ಹೆಂಗಸು ೫೧ ವರ್ಷದಾಕೆ ಕೇದಾರದಲ್ಲಿ ಹೃದಯಾಘಾತದಿಂದ ತೀರಿಹೋದ ವಿಚಾರ ಹೇಳಿದರಂತೆ. ಸುದ್ದಿ ಕೇಳಿ ಮರುಗಿದೆವು.

ಗೋಪೇಶ್ವರ
ಗೋಪೇಶ್ವರ ದೇವಾಲಯಕ್ಕೆ ಸಂಜೆ ಆರು ಗಂಟೆಗೆ ತಲಪಿದೆವು. ಚಮೋಲಿ ಜಿಲ್ಲೆಯಲ್ಲಿರುವ ದೊಡ್ಡ ಪಟ್ಟಣ. ಪ್ರಾಚೀನ ಶಿವಮಂದಿರ. ಈಶ್ವರ ತಪಸ್ಸಿಗೆ ಕೂತಾಗ ಭಂಗಮಾಡಲು ಬಂದ ಕಾಮನನ್ನು ದಹನ ಮಾಡಿದ ಸ್ಥಳವಿದು. ದೊಡ್ಡದಾದ ತ್ರಿಶೂಲವಿದೆ ಇಲ್ಲಿ. ಪಂಚಕೇದಾರಗಳಲ್ಲಿ ಎರಡನೆಯದಾದ ರುದ್ರನಾಥನ ಉತ್ಸವಮೂರ್ತಿಗೆ ಇಲ್ಲಿ ಆರು ತಿಂಗಳು ಪೂಜೆ ಸಲ್ಲುತ್ತದೆ. ಗೋಪೇಶ್ವರ ದೇವಾಲಯದ ಹಿಂಬದಿ ಸುಂದರವಾದ ಮನೆ ಇದೆ.
ಸರೋಜ ನಮಗೆ ಗೋಲ್ಗೊಪ್ಪ ಕೊಡಿಸಿದರು. ರೂ. ೧೦ಕ್ಕೆ ಆರು ಗೋಲ್‌ಗೊಪ್ಪ ಕೊಡುತ್ತಾರೆ. ಖಾರವಾಗಿ ಚೆನ್ನಾಗಿತ್ತು.

dscn1388

dscn1389

dscn1400
ಮಾಯಾಪುರ
ಅಲ್ಲಿಂದ ಹೊರಟು ಮಾಯಾಪುರ ಎಂಬ ಊರು ಸಂಜೆ ಏಳು ಗಂಟೆಗೆ ತಲಪಿದೆವು. ಅಲ್ಲಿ ಹಿಮ‌ಆನಂದ ಎಂಬ ವಸತಿಗೃಹದಲ್ಲಿ ತಂಗಿದೆವು. ಅಲ್ಲಿ ಚಪಾತಿ, ಅನ್ನ ಸಾರು ಊಟ ಮಾಡಿದೆವು. ಊಟವಾಗಿ ಹೊಟೇಲಿನಿಂದ ಹೊರ ಬರುವಾಗ ಹೇಮ ಎಡವಿ ಬಿದ್ದರು. ಅದೇಗೆ ಬಿದ್ದಿರಿ ಎಂದು ಯಾರೋ ಕೇಳಿದಾಗ ಅವರು ಇದು ಮಾಯಾಪುರ ಅದಕ್ಕೆ ಎಂದು ಉತ್ತರ ಕೊಟ್ಟರು! ಅಲ್ಲಿ ರೂ. ೩೦ಕ್ಕೆ ಒಂದು ಬಾಲ್ದಿ ಬಿಸಿನೀರು ಪಡೆದು ಸ್ನಾನ ಮಾಡಿದೆ.

ಜೋಷಿಮಠ
ಬೆಳಗ್ಗೆ (೨೦-೯-೧೬) ೬.೨೦ಕ್ಕೆ ಹೊರಟು ಜೋಶಿಮಠಕ್ಕೆ ಹೋದೆವು. ಜ್ಯೋತಿರ್ಮಠ ಎಂದಿದ್ದದ್ದು ಈಗ ಜೋಷಿಮಠವಾಗಿದೆ. ಶಂಕರಾಚಾರ್ಯರ ನಾಲ್ಕು ಮಠಗಳಲ್ಲಿ ಇದೂ ಒಂದು. ಜೋಷಿಮಠ ಅಥವಾ ಜ್ಯೋತಿರ್ಮಠವು ಭಾರತದ ಉತ್ತರಾಖಂಡ ರಾಜ್ಯದಲ್ಲಿರುವ ಚಮೋಲಿ ಜಿಲ್ಲೆಯಲ್ಲಿನ ಒಂದು ಪುಟ್ಟ ಪಟ್ಟಣ. ಜೋಷಿಮಠ ಕ್ಷೇತ್ರವು ಪ್ರಮುಖವಾಗಿ ಆದಿ ಶಂಕರಾಚಾರ್ಯರು ಸ್ಥಾಪಿಸಿದ ನಾಲ್ಕು ಮೂಲ ಪೀಠಗಳಲ್ಲಿ ಒಂದೆನಿಸಿದೆ. ಶೃಂಗೇರಿ, ಪುರಿ ಮತ್ತು ದ್ವಾರಕಾ ಉಳಿದ ಮೂರು ಪೀಠಗಳು. ಆದಿ ಗುರು ಶಂಕರಾಚಾರ್ಯರು ಜ್ಯೋತಿರ್ಮಠದ ಪೀಠಕ್ಕೆ ಅಥರ್ವವೇದದ ರಕ್ಷಣೆಯ ಜವಾಬ್ದಾರಿಯನ್ನು ವಹಿಸಿದರೆನ್ನಲಾಗಿದೆ. ಇಲ್ಲಿ ಶಂಕರಾಚಾರ್ಯರ ಗದ್ದುಗೆ ಇದೆ. ಇಲ್ಲಿಯೇ ಅವರು ಸೌಂದರ್ಯಲಹರಿ ಬಾಷ್ಯ ಬರೆದದ್ದಂತೆ. ಅಲ್ಲಿ ಹೊಸ ದೇವಾಲಯ ಕಟ್ಟಲು ಭರದಿಂದ ಕೆಲಸ ನಡೆಯುತ್ತಲಿತ್ತು.
ಅಲ್ಲೇ ಹತ್ತಿರವಿದ್ದ ಹೊಟೇಲಿನಲ್ಲಿ ಪರೋಟ ತಿಂದು ೯.೩೦ಗೆ ಬಸ್ ಹತ್ತಿದೆವು. ಅಲ್ಲಿ ರೂ. ೧೦೦ಕ್ಕೆ ಶಾಲು ವ್ಯಾಪಾರ ಮಾಡಿದೆವು.

img_4944

img_4945ಮುಂದುವರಿಯುವುದು

Read Full Post »

ಗಂಗೋತ್ರಿಯೆಡೆಗೆ ಪಯಣ
ಬೆಳಗ್ಗೆ (೧೫-೯-೨೦೧೬) ೫.೩೦ಕ್ಕೆ ಎದ್ದು, ತಯಾರಾಗಿ ೬.೩೦ಕ್ಕೆ ಕೌಸಲ್ಯಳಿಗೆ ವಿದಾಯ ಹೇಳಿ ಬಾರ್ಕೋಟ್ ಬಿಟ್ಟೆವು. . ಕೌಸಲ್ಯಳ ಕಣ್ಣು ನಮ್ಮ ಹಿಂದೆಯೇ ಸುತ್ತುತ್ತಿತ್ತು. ಅಡುಗೆಮನೆಯಲ್ಲಿ ಅಡುಗೆಮಾಡುವಾಗ ಯಾವ ಪಾತ್ರೆ ಉಪಯೋಗಿಸಿದ್ದೇವೆ, ಏನು ಮಾಡುತ್ತಿದ್ದೇವೆ ಎಂದು ಹದ್ದಿನ ಕಣ್ಣಿಂದ ನೋಡುತ್ತಿದ್ದರು. ನಾವು ಮಾಡಿದ ಅಡುಗೆಯಲ್ಲಿ ಪಾಲು ಕೇಳುತ್ತಿದ್ದರು. ಶಶಿಕಲಾ ಅವರು ಉಟ್ಟ ಸೀರೆ ಕೌಸಲ್ಯಳಿಗೆ ಬಹಳ ಮೆಚ್ಚುಗೆಯಾಗಿ ಈಗಲೆ ಬಿಚ್ಚಿ ಕೊಡು ಎಂದು ಕೇಳಿದ್ದರಂತೆ!
ಮೆಹರ್ಗಾಂವ್ ಗುಹೆ- ಪ್ರಕಟೇಶ್ವರ ಮಹದೇವ
ಗಂಗೋತ್ರಿಗೆ ಹೋಗುವ ದಾರಿಯಲ್ಲಿ ಮೆಹರ್ಗಾಂವ್ ಗುಹೆ ಸಿಗುತ್ತದೆ. ಅಲ್ಲಿಗೆ ತೆರಳಲು ರಸ್ತೆಯಿಂದ ೬೦-೭೦ ಎತ್ತರದ ಮೆಟ್ಟಲು ಹತ್ತಬೇಕು. ಕೈಹಿಡಿದು ಹತ್ತಿಸುವೆವು ಎಂದು ಹತ್ಟಾರು ಮಂದಿ ಸುತ್ತುವರಿಯುತ್ತಾರೆ. ಅವರಲ್ಲಿ ೪-೫ ವರ್ಷದ ಮಕ್ಕಳೂ ನಮ್ಮ ಕೈಹಿಡಿದು ಹತ್ತಿಸಲು ಮುಂದೆ ಬರುತ್ತಾರೆ! ಮೇಲೆ ಹತ್ತಿ ಗುಹೆಯ ಬಳಿ ಬಂದೆವು. ಪ್ರಕಟೇಶ್ವರ ಮಹಾದೇವ ಗುಹೆ ಒಳಗೆ ಒಮ್ಮೆಲೆ ಐದು ಜನರಿಗಿಂತ ಹೆಚ್ಚು ಮಂದಿ ಹೋಗಲು ಸಾಧ್ಯವಿಲ್ಲ. ಒಳಗೆ ಪಂಚಲಿಂಗ ಅಡ್ಭುತವಾಗಿದೆ. ಗಣೇಶ, ಇಲಿ, ದುರ್ಗೆ, ಗಂಗೆ, ಕೈಲಾಸನಾಥ, ನಾಗನಂತೆ ಕಾಣುವ ಕಲ್ಲಿನಲ್ಲೇ ಉದ್ಭವವಾದ ಮೂರ್ತಿಗಳು. ಬಹಳ ಚೆನ್ನಾಗಿವೆ. ನೋಡಿ ಕೆಳಗೆ ಬಂದೆವು. ಬೆಳಗ್ಗೆ ಉಪ್ಪಿಟ್ಟು, ಮೊಸರನ್ನ ಬೆಂಡೆಗೊಜ್ಜು ಮಾಡಿ ತಂದಿದ್ದೆವು. ಬಸ್ಸಿನಲ್ಲಿ ಕೂತು ತಿಂದು, ೯.೩೦ಗೆ ಅಲ್ಲಿಂದ ಹೊರಟೆವು.

dscn1174

dscn1176

dscn1157

ಪೈಲೆಟ್ ಬಾಬಾ ಆಶ್ರಮ
ಗಂಗೋತ್ರಿಯೆಡೆಗಿನ ದಾರಿಯಲ್ಲಿ ಮುಂದೆ ಹೋಗುತ್ತ, ಪೈಲೆಟ್ ಬಾಬಾ ಆಶ್ರಮ ನೋಡಿದೆವು. ಸಿಮೆಂಟಿನಲ್ಲಿ ತಯಾರಿಸಿದ ಹತ್ತಾರು ಪ್ರತಿಮೆಗಳನ್ನು ಅಲ್ಲಲ್ಲಿ ಪ್ರತಿಷ್ಠಾಪಿಸಿದ್ದಾರೆ. ಶಿವನ ಬೃಹತ್ ಪ್ರತಿಮೆಯಿದೆ. ನದಿ ತೀರದಲ್ಲಿ ಆಶ್ರಮ ಬಲು ವಿಸ್ತಾರವಾಗಿದೆ. ಸಾಕಷ್ಟು ಖರ್ಚು ಮಾಡಿದ್ದಾರೆ. ನೋಡುವಾಗ ಯಾಕಾಗಿ ಇಂಥ ದುಂದುವೆಚ್ಚ ಮಾಡುತ್ತಾರಪ್ಪ ಎನಿಸುತ್ತದೆ. ನಾವು ಅಡ್ಡಾಡುವಾಗ ಅಲ್ಲಿ ನರಮನುಷ್ಯರಿರಲಿಲ್ಲ.

img_4728 img_4727

ಜಲಪಾತ

ದಾರಿಯಲ್ಲಿ ಮುಂದೆ ಸಾಗುತ್ತಿರುವಾಗ ರಸ್ತೆಬದಿ ಬಲು ಸುಂದರ ಜಲಪಾತ ಎದುರಾಯಿತು. ಎಲ್ಲರೂ ಇಲ್ಲಿ ನಿಲ್ಲಿಸಿ ಎಂದು ಬೊಬ್ಬೆ ಹೊಡೆದರು. ಮಂಗಾರಾಮರೂ ಬಸ್ ನಿಲ್ಲಿಸಿದರು. ಬಸ್ ನಿಂತದ್ದೇ ಎಲ್ಲ ನೀರಿನೆಡೆ ಧಾವಿಸಿದರು. ಕೆಲವರು ನೀರಿನಾಡಿಗೆ ತಲೆಕೊಟ್ಟು ಆನಂದ ಅನುಭವಿಸಿದರು. ಮತ್ತೆ ದಿರಿಸು ಒದ್ದೆಯಾಗಿ ಕಷ್ಟ ಅನುಭವಿಸಿದರು. ಗಂಡಸರು ಹೋಗಿ ನೀರಿನಲ್ಲಿ ಸ್ನಾನ ಮಾಡಿದರು. ಮಂಗಾರಾಮ, ಸೋನು ಕೂಡ ಚೆನ್ನಾಗಿ ಸ್ನಾನ ಮಾಡಿದರು. ನಾವು ಕೆಲವರು ರಸ್ತೆಯಲ್ಲಿ ಹರಿಯುವ ನೀರಿಗೆ ಕಾಲಾಡಿಸಿ ಫೋಟೋ ತೆಗೆಯುತ್ತ ಖುಷಿ ಅನುಭವಿಸಿದೆವು.  ಸರಸ್ವತಿ, ಸೋಮಶೇಖರ್ ದಂಪತಿಗಳು ನಿನಗೆ ನಾನು ನನಗೆ ನೀನು, ಬಿಡಲಾರೆ ಂದೂ ನಿನ್ನ ಕೈ ಎಂದು ಹಾಡುತ್ತ ನೀರಲ್ಲಿ ಕೈ ಕೈ ಹಿಡಿದು ನಡೆದರು!

dscn1187

dscn1188

ಪರಾಶರ ದೇವಾಲಯ
ನೈನ್‌ಗಂಗಾ ಎಂಬಲ್ಲಿ ಪರಾಶರ ದೇವಾಲಯ ನೋಡಿದೆವು. ಸುಮಾರು ಮೆಟ್ಟಲು ಹತ್ತಬೇಕು. ಅಲ್ಲಿ ಬಿಸಿನೀರಿನಕುಂಡ ಇದೆ. ನೀರು ಅತ್ಯಂತ ಬಿಸಿಯಾಗಿತ್ತು. ಸ್ನಾನ ಮಾಡಲು ಸಾಧ್ಯವಿಲ್ಲ.

ಪರಾಶರ ಬಿಸಿನೀರು ಹೊಂಡ

ಪರಾಶರ ಬಿಸಿನೀರು ಹೊಂಡ

ಅದಾಗಲೇ ಗಂಟೆ ೩.೪೫ ಆಗಿತ್ತು. ಮಧ್ಯಾಹ್ನದ ಊಟಕ್ಕೆ ನಿಲ್ಲಿಸಲಿಲ್ಲವೆಂದು ಕೆಲವರಿಗೆ ಅಸಮಾಧಾನವಗಿತ್ತು. ಆದರೆ ವಿಠಲರಾಜು ಅವರ ಗುರಿ ಇದ್ದುದು ರಾತ್ರೆಯೊಳಗೆ ಗಂಗೋತ್ರಿ ತಲಪಬೇಕೆಂಬುದಾಗಿ. ಊಟಕ್ಕೆ ನಿಲ್ಲಿಸಿದರೆ ಹೊತ್ತು ಸರಿಯುವುದು ಗೊತ್ತಾಗುವುದಿಲ್ಲ. ಕಡಿಮೆ ಎಂದರೂ ಅರ್ಧ ಗಂಟೆ ವ್ಯರ್ಥವಾಗುತ್ತದೆ. ಅಸಮಧಾನಗೊಂಡವರೆಲ್ಲ ಅವರ ಉದ್ದೇಶವನ್ನು ತಡವಾಗಿ ಅರ್ಥಮಾಡಿಕೊಂಡರು. ಉದರದ ಉರಿಗೆ ಗೊಜ್ಜವಲಕ್ಕಿ, ರಾಗಿಹುರಿಹಿಟ್ಟು, ಬೆಳಗ್ಗೆಯ ಉಪ್ಪಿಟ್ಟು ಹಂಚಿ ಶಮನಗೊಳಿಸಿದರು!
ಭೈರವ ಮಂದಿರ
ಗಂಗೋತ್ರಿ ಪ್ರವೇಶಕ್ಕೆ ಮೊದಲು ಭೈರವ ಮಂದಿರ ಸಿಗುತ್ತದೆ. ಗಂಗೋತ್ರಿಗೆ ಕಾಲಿಡುವ ಮೊದಲು ಭೈರವನ ದರ್ಶನ ಮಾಡಿಯೇ ಮುಂದುವರಿಯಬೇಕೆಂಬುದು ಪ್ರತೀತಿಯಂತೆ. ಸಂಜೆ ಆರು ಗಂಟೆಗೆ ದೇವಾಲಯ ನೋಡಿ ಪ್ರದಕ್ಷಿಣೆ ಹಾಕಿದೆವು.

img_4796 img_4794

ಗಂಗೋತ್ರಿ ದೇವಾಲಯಕ್ಕೆ ಭೇಟಿ
ಗಂಗೋತ್ರಿ ತಲಪಿ ವಸತಿಗೃಹದಲ್ಲಿ ಲಗೇಜು ಇಟ್ಟು ಸ್ವೆಟರ್ ತೊಟ್ಟೆವು. ಶೀತಲಗಾಳಿ ಕೊರೆಯುತ್ತಿತ್ತು. ಸಮುದ್ರಮಟ್ಟದಿಂದ ಗಂಗೋತ್ರಿ ೧೦೩೫೫ ಅಡಿ ಎತ್ತರದಲ್ಲಿದೆ. ಯಮುನೋತ್ರಿಯಿಂದ ಗಂಗೋತ್ರಿಗೆ ೨೨೮ಕಿಮೀ ಇದೆ. ಅತ್ಯಂತ ಪ್ರಸಿದ್ಧ ಧಾರ್ಮಿಕ ತಾಣಗಳಲ್ಲಿ ಗಂಗೋತ್ರಿಯು ಸೇರಿದೆ. ಉತ್ತರಖಂಡ ರಾಜ್ಯದ ಉತ್ತರಕಾಶಿ ಜಿಲ್ಲೆಯಲ್ಲಿ ಇರುವ ಈ ದೇವಾಲಯ  ಹಿಮಾಲಯ ಪರ್ವತ ಶ್ರೇಣಿಗಳ ನಡುವೆ ಇದೆ. ಗಂಗೋತ್ರಿ ಕ್ಷೇತ್ರವು ಹಿಂದೂ ಧರ್ಮದವರ ಪಾಲಿಗೆ ಅತಿ ಮಹತ್ವ ಪಡೆದಿರುವ ಸ್ಥಳವಾಗಿದೆ. ಗಂಗಾನದಿಯ ಉಗಮ ಸ್ಥಳವೂ ಹೌದು.  ೧೮ನೆಯ ಶತಮಾನದಲ್ಲಿ ಗಂಗೆಯ ಈ ದೇವಾಲಯವನ್ನು ಗೋರ್ಖಾ ಜನರಲ್ ಆಗಿದ್ದ ಅಮರ ಸಿಂಗ್ ಥಾಪಾ ಎಂಬವರು ಕಟ್ಟಿಸಿದ್ದಾರೆ.

  ರಾತ್ರಿಯಲ್ಲಿ ದೇವಾಲಯದ ಸೊಬಗನ್ನು ನೋಡುವುದೇ ಆನಂದ. ದೇವಾಲಯದೊಳಗೆ ಹೋದೆವು. ಗಂಗಾ. ಜಮುನಾ, ಸರಸ್ವತಿ, ಲಕ್ಷ್ಮೀ, ಪಾರ್ವತಿ ದೇವಿಯರ ಪ್ರತಿಮೆಗಳಿವೆ. ಗಂಗಾರತಿ ನೋಡಬೇಕೆಂಬ ನಮ್ಮ ಆಸೆ ಈಡೇರಲಿಲ್ಲ. ಅದಾಗಲೇ ಆಗಿತ್ತು.

ಭಗೀರಥ ತಪವನ್ನಾಚರಿಸಿದ ಸ್ಥಳ
ನದಿಯ ಪಕ್ಕ ಭಗೀರಥ ತಪಸ್ಸು ಮಾಡಿದ ಸ್ಥಳ ಎಂದು ಅಲ್ಲಿ ಭಗೀರಥನ ಪ್ರತಿಮೆ ಇದೆ. ಅದನ್ನು ನೋಡಿ ನದಿ ದಡಕ್ಕೆ ಹೋಗಿ ಮೇಲೆ ಬಂದೆವು. ರಾತ್ರಿ ನೀರು ಹರಿಯುವುದನ್ನು ನೋಡುವುದೇ ಸೊಗಸು.

ಪುರಾಣದ ಪ್ರಕಾರ, ರಾಜ ಭಗಿರಥನ ಪೂರ್ವಜರ ಪಾಪಕರ್ಮಗಳನ್ನು ತೊಳೆಯಲು ಗಂಗಾ ಮಾತೆಯು ಇಲ್ಲಿ ಭಾಗಿರಥಿಯಾಗಿ ಹರಿದಿದೆ. ಶಿವನು ಗಂಗೆಯನ್ನು ತನ್ನ ಮುಡಿಯಲ್ಲಿ ಧರಿಸುವ ಮೂಲಕ ಭೂಮಿಯು ಜಲಪ್ರಳಯವಾಗುವುದರಿಂದ ಕಾಪಾಡಿದ ಎಂದು ನಂಬಲಾಗುತ್ತದೆ.

ಬಿಸಿಬಿಸಿ ಸೂಪು
ವಾಪಾಸು ವಸತಿಗೃಹಕ್ಕೆ ಬರುತ್ತ ದಾರಿಯಲ್ಲಿ ಖಾನಾವಳಿಯಲ್ಲಿ ನಾವು ಕೆಲವರು ಚಳಿ ಹೊಡೆದೋಡಿಸಲು ಬಿಸಿಸೂಪು (ರೂ.೭೦) ಕುಡಿದೆವು, ಹಾಗೂ ಚೌಮಿನ್ (ನೂಡಲ್ಸ್) ಒಂದು ಪ್ಲೇಟ್ ತೆಗೆದುಕೊಂಡು ಹಂಚಿಕೊಂಡು ತಿಂದೆವು. ಅಲ್ಲಿ ರಾತ್ರೆ ಅಡುಗೆ ಮಾಡುವುದಾ ಅಲ್ಲ ಹೊಟೇಲಿಗೆ ಹೋಗುವುದಾ ಊಟ ಹೇಗೆ ಎಂದು ಚರ್ಚೆಯಾಗಿತ್ತು. ಮಾಡುವುದು ಶಶಿಕಲಾ, ಸರಸ್ವತಿ. ಆದರೆ ಅವ್ರು ಪ್ರಯಾಣದ ಆಯಾಸದಿಂದ ಬಳಲಿರುತ್ತಾರೆ. ಇವತ್ತು ಹೊತೇಲಿನಲ್ಲೆ ಮಾಡೋಣ ಎಂದು ನಮ್ಮಂಥ ಆಲಸಿ ಬಿಸಿರಕ್ತದವರ ಅಭಿಪ್ರಾಯ! ಅವರು ಮಾಡುವುದು ನಾವು ತಿನ್ನುವುದು ಎಂಬ ಸಂಕೋಚ ಬಾಧಿಸುತ್ತಲೇ ಇತ್ತು. ಆದರೆ ಅವರು ನಮ್ಮ ಮಾತಿಗೆ ಸೊಪ್ಪು ಹಾಕದೆ ಅಡುಗೆ ತಯಾರಿಸುವುದೆಂದೇ ತೀರ್ಮಾನಿಸಿ ಚಿತ್ರಾನ್ನ ಮಾಡಿದರು. ನಾವು ನಾಲ್ಕೈದು ಮಂದಿ ಬಿಸಿರಕ್ತದವರು ಸಣ್ಣಪುಟ್ಟ ಸಹಾಯ ಮಾಡಿದೆವು. ಚಿತ್ರಾನ್ನ ತಿಂದು ಕೋಣೆಗೆ ಬಂದರೆ ಚಳಿರಾಯ ಮೊದಲೇ ಬಂದು ನಮ್ಮ ಹಾಸಿಗೆ, ರಜಾಯಿ ಎಲ್ಲವನ್ನೂ ತಣ್ಣಗೆ ಮಾಡಿಟ್ಟಿದ್ದ.

ಮಗದೊಮ್ಮೆ ಗಂಗೋತ್ರಿದೇವಿ ದರ್ಶನ

ಬೆಳಗ್ಗೆ (೧೬-೯-೨೦೧೬) ಅದೂವರೆಗೆ ಎದ್ದೆವು. ಥೇಪನ್ ಖಾಂಡ್ಯಾಲ್ ಬಿಸಿನೀರು ಕಾಯಿಸಿ ಕೋಣೆಗೇ ಬಾಲ್ದಿಯಲ್ಲಿ ತಂದು ಕೊಟ್ಟರು. ರೂ. ೫೦ ಕೊಟ್ಟರೂ ಒಳ್ಳೆಯ ಸ್ನಾನವಾಯಿತು. ಸವಿತ, ನಾನು, ಹೇಮಮಾಲ ಒಂದು ಕೋಣೆಯಲ್ಲಿದ್ದುದು. ಸ್ನಾನ ಮುಗಿಸಿ ದೇವಾಲಯಕ್ಕೆ ಹೋದೆವು. ದೇವಸ್ಥಾನಕ್ಕೆ ಸುತ್ತು ಬರುವಾಗ ಒಳಗೆ ಗೋಡೆಯಲ್ಲಿ ಭಕ್ತರ ಕೈತುರಿಕೆ ಜಾಸ್ತಿಯಾಗಿ ಗೋಡೆ ತುಂಬ ಗೀಚಿದ್ದು ಕಂಡು ಮನ ರೋಸಿ ಹೋಯಿತು. ಮನುಷ್ಯರು ಕೆಟ್ಟಚಾಳಿ ಎಲ್ಲಿ ಹೋದರೂ ಬಿಡುವುದಿಲ್ಲವಲ್ಲ ಎನಿಸಿತು.
ಗಂಗಾ ನದಿಯ ಮೂಲ ಅಥವಾ ಗೋಮುಖವು ಗಂಗೋತ್ರಿಯಿಂದ ೨೧ ಕಿ.ಮೀ. ದೂರದಲ್ಲಿದೆ. ಈ ಸಂಧಿ ತಾಣದಿಂದ ಮುಂದೆ ಗಂಗಾ ನದಿಯ ಉಗಮಸ್ಥಾನವೇ ಗೋಮುಖ. ಗಂಗೋತ್ರಿಯಿಂದ ಗೋಮುಖಕ್ಕೆ ಹೋಗಲು ದಾರಿ ಅತ್ಯಂತ ಕ್ಲಿಷ್ಟಕರವಾಗಿದೆ. ೨೧ಕಿಮೀ. ದೂರ ನಡೆಯಬೇಕು. ಬೆಟ್ಟ ಹತ್ತಬೇಕು. ನಾವು ಹೋಗಲಿಲ್ಲ.
ಭಾಗಿರಥಿ ನದಿಯ ಮೇಲ್ಭಾಗದಲ್ಲಿ ದಟ್ಟಾರಣ್ಯ ಆವರಿಸಿದೆ. ಈ ಪ್ರದೇಶದ ಭೂಮಿಯನ್ನು ಗಮನಿಸಿದಾಗ ಹಿಮಾಚ್ಛಾದಿತ ಬೆಟ್ಟಗಳು, ಉದ್ದನೆ ಶಿಖರಗಳು, ಆಳವಾದ ಕಣಿವೆ, ನೇರವಾಗಿ ಕಣ್ಣು ಹಾಯಿಸಿದಷ್ಟೂ ಕಾಣುವ ಕಣಿವೆ ಪ್ರದೇಶ ಗಮನ ಸೆಳೆಯುತ್ತವೆ.
ಗಂಗೋತ್ರಿಗೆ ವಿದಾಯ
ದೇವಾಲಯದಿಂದ ಹೊರಟು ಅಲ್ಲೇ ಹತ್ತಿರವಿದ್ದ ಕಾರ್ಯಾಲಯದಲ್ಲಿ ಬಯೋಮೆಟ್ರಿಕ್ ಕಾರ್ಡನ್ನು ತೋರಿಸಿ ಎಂಟ್ರಿ ಹಾಕಿಸಿ, ಹತ್ತಿರವಿದ್ದ ಖಾನಾವಳಿಯಲ್ಲಿ ಪರೋಟ ತಿಂದು ವಸತಿಗೃಹಕ್ಕೆ ಬಂದು ಗಂಟುಮೂಟೆ ಕಟ್ಟಿ ಬೆಳಗ್ಗೆ ೯.೫೦ಕ್ಕೆ ಬಸ್ ಹತ್ತಿದೆವು.  ದಾರಿಯಲ್ಲಿ ಅಲ್ಲಲ್ಲಿ ಸ್ಪೀಡ್ ಬ್ರೇಕರುಗಳು ಸಿಕ್ಕಿದುವು. ಆ ದೃಶ್ಯ ಮಾತ್ರ ನಯನ ಮನೋಹರವಾಗಿತ್ತು. ಅದೆಷ್ಟೊಂದು ಕುರಿಗಳು,  ಆಡುಗಳು ಶಿಸ್ತಿನಿಂದ ಸಾಲಾಗಿ ಹೋಗುತ್ತಿರುವುದನ್ನು ನೋಡಿದೆವು.

20160916_103313

20160916_103114

20160916_103136

ಪ್ರಾಚೀನ ಕಲ್ಪ ಕೇದಾರ

ಗಂಗೋತ್ರಿಯಿಂದ ಕೇದಾರದೆಡೆಗೆ ಸಾಗುವಾಗ ದಾರಿಯಲ್ಲಿ ಪ್ರಾಚೀನ ಕಲ್ಪಕೇದಾರ ದೇವಾಲಯ ನೋಡಿದೆವು. ಸ್ಥಳೀಯರು ಅಲ್ಲಿ ದೇವರಿಗೆ ನೈವೇದ್ಯವೆಂದು ಸೇಬು ಇಟ್ಟಿದ್ದರು. ಪ್ರಸಾದವೆಂದು ನಾವು ಸೇಬು ತೆಗೆದು ತಿಂದೆವು!

img_4854img_4857

ದೇವಾಲಯ ನೋಡಿ ಹೊರಬರುವಾಗ ತಮಾಷೆ ಮಾತು. ನಾನು, ಗೋಪಕ್ಕ, ಶಶಿಕಲಕ್ಕ

ದೇವಾಲಯ ನೋಡಿ ಹೊರಬರುವಾಗ ತಮಾಷೆ ಮಾತು. ನಾನು, ಗೋಪಕ್ಕ, ಶಶಿಕಲಕ್ಕ

ಸೇಬಿನ ತೋಟ
ದೇವಾಲಯದ ಪಕ್ಕದಲ್ಲೂ ಸೇಬಿನ ತೋಟ ಇತ್ತು. ಹತ್ತಿರದಿಂದ ಸೇಬು ನೋಡಿ ತೃಪ್ತಿಪಟ್ಟೆವು. ದಾರಿಯುದ್ದಕ್ಕೂ ಸೇಬಿನ ತೋಟಗಳು ನಮ್ಮ ಗಮನ ಸೆಳೆದುವು. ಅಬ್ಬ ಒಂದೊಂದು ಮರದಲ್ಲೂ ಸೇಬಿನ ರಾಶಿಗಳು. ಕೆಲವು ಮರಗಳಲ್ಲಿ ಎಲೆಯೇ ಇಲ್ಲ. ಕೆಂಪು ಸೇಬುಗಳೇ ತುಂಬಿ ಮರವೇ ಕಾಣುತ್ತಿರಲಿಲ್ಲ. ಆಹಾ ಇಂಥ ಒಂದು ಮರ ನಮ್ಮ ಹಿತ್ತಲಲ್ಲಿದ್ದರೆ ಸಾಕು ಎಂಬ ಭಾವ ಆ ಕ್ಷಣ ಅನಿಸಿತ್ತು! ರೂ. ೫೦ಕ್ಕೆ ಸೇಬು ಕೊಂಡು ಮನದಣಿಯೆ ತಿಂದೆವು.

img_4782 dscn8636 img_4756

ಉತ್ತರಕಾಶಿ
ಉತ್ತರಕಾಶಿಯಲ್ಲಿ ವಿಶ್ವನಾಥ ದೇವಾಲಯ ನೋಡಿದೆವು. ದೊಡ್ಡ ತ್ರಿಶೂಲವೂ ಇತ್ತು. ಉತ್ತರಾಖಂಡದಲ್ಲಿರುವ ಹೆಚ್ಚಿನ ದೇವಾಲಯವೂ ಗಡ್ವಾಲ್ ಶೈಲಿಯವು. ಭಾಗೀರಥೀ ನದಿಯ ಎಡದಂಡೆಯಮೇಲೆ ದೊಡ್ಡದಾದ ವಿದ್ಯುತ್ ಉತ್ಪಾದನಾ ಕೇಂದ್ರವಿದೆ. ಅಲ್ಲಿ ನೀರು ಜಲಪಾತದಂತೆ ಹರಿಯುವುದನ್ನು ನೋಡಿದೆವು.
ಅಲ್ಲಿ ಹೊಟೇಲಲ್ಲಿ ಚಪಾತಿ ತಿಂದು ೨.೪೫ಕ್ಕೆ ಹೊರಟೆವು.

img_4916

ಚೌರಂಗಿನಾಥ ಮಂದಿರ
ಮುಂದೆ ಸಾಗುತ್ತ ಚೈರಂಗಿಕಾಲ್ ಊರಿಗೆ ಸಂಜೆ ನಾಲ್ಕು ಗಂಟೆಗೆ ತಲಪಿದೆವು. ಅಲ್ಲಿ ಚೌರಂಗಿನಾಥ ಮಂದಿರವಿದೆ. ಒಂದೇ ಬಾಣದಲ್ಲಿ ಮೂರು ರಕ್ಕಸರನ್ನು ಕೊಂದದ್ದಂತೆ ಚೌರಂಗಿನಾಥ. ಅಲ್ಲಿ ದೇವಾಲಯ ನೋಡಿ ಮುಂದೆ ಹೋಗುವಾಗ ದಾರಿಯಲ್ಲಿ ರಸ್ತೆಯಲ್ಲಿ ಜೆ.ಸಿಬಿ ಲಾರಿ ಕೆಲಸ ಮಾಡುತ್ತಿತ್ತು. ರಸ್ತೆಗೆ ಬಿದ್ದಿದ್ದ ಕಲ್ಲುಬಂಡೆಗಳನ್ನು ತೆರವುಗೊಳಿಸುತ್ತಿತ್ತು. ಹಾಗೆ ಅರ್ಧ ಗಂಟೆ ದಾರಿಬದಿ ಕಾಯಬೇಕಾಯಿತು.

 

img_4890

ಚಮಿಯಾಲ
ರಾತ್ರೆ ೭.೩೦ಗೆ ಚಮಿಯಾಲದಲ್ಲಿ ಹಿಮ ಆನಂದ ಎಂಬ ವಸತಿಗೃಹದಲ್ಲಿ ನಮ್ಮ ವಾಸ್ತವ್ಯ. ಅಲ್ಲೆ ಹೋಟೇಲಲ್ಲಿ ಚಪಾತಿ, ಅನ್ನ ಸಾರು ಊಟ. ರೂ. ೩೦ ಕೊಟ್ಟು ಬಿಸಿನೀರು ಸ್ನಾನ ಮಾಡಿದೆ. ತಣ್ಣೀರು ಸ್ನಾನ ಮಾಡಿ ಸಾಕಾಗಿತ್ತು!
ವ್ಯಾಸ ಮಂದಿರ
ಚಮಿಯಾಲದಿಂದ ೧೭-೯-೨೦೧೬ರಂದು ಬೆಳಗ್ಗೆ ೫.೩೦ಗೆ ಹೊರಟೆವು. ಹಿಂದಿನ ದಿನವೇ ಇಂತಿಷ್ಟು ಗಂಟೆಗೆ ಹೊರಡಬೇಕೆಂದು ವಿಠಲರಾಜು ಹೇಳುತ್ತಿದ್ದರು. ಅವರು ಹೇಳಿದ ಸಮಯಕ್ಕೆ ಸರಿಯಾಗಿ ಎಲ್ಲರೂ ಹೊರಟು ಬಸ್ ಹತ್ತುತ್ತಿದ್ದೆವು. ನಮ್ಮ ತಂಡದ ಎಲ್ಲರೂ ಅಷ್ಟು ಶಿಸ್ತು ಪಾಲಿಸುತ್ತಿದ್ದೆವು. ವ್ಯಾಸಮಂದಿರ ನೋಡಿದೆವು. ವ್ಯಾಸಮಂದಿರದಲ್ಲಿ ಶಿವನ ದೇವಾಲಯ ಪುಟ್ಟದಾಗಿ ಚೆನ್ನಾಗಿದೆ. ಎದುರುಭಾಗದಲ್ಲಿ ಎತ್ತರಕ್ಕೆ ಕಲ್ಲಿನಚಪ್ಪಡಿ ಒಂದರಮೇಲೊಂದು ಪೇರಿಸಿ ನಿಲ್ಲಿಸಿದ್ದಾರೆ. ಅದು ಏಕೆಂದು ತಿಳಿಯಲಿಲ್ಲ.

img_4920img_4918

ಅಗಸ್ತ್ಯಮುನಿಮಂದಿರ

೯.೩೦ಗೆ ಅಗಸ್ತ್ಯಮುನಿ ಮಂದಿರಕ್ಕೆ ಹೋದೆವು.  ಅಗಸ್ತ್ಯರು ತಪಸ್ಸು ಮಾಡಿದ ಈ ಸ್ಥಳದಲ್ಲಿ ಪ್ರಾಚೀನವಾದ ಅಗಸ್ತ್ಯೇಶ್ವರ ಮಹಾದೇವ ದೇವಸ್ಥಾನವಿದೆ.

ಬೀಡಿನಾಥ ಯಾನೆ ಮಂಗಾರಾಮ
ನಮ್ಮ ಸಾರಥಿ ಬಲುಚೆನ್ನಾಗಿ ಬಸ್ ಚಾಲನೆ ಮಾಡುತ್ತಿದ್ದರು. ಎಲ್ಲೂ ವೇಗವಾಗಿ ಚಲಿಸದೆ ಅಷ್ಟೂ ಎಚ್ಚರದಿಂದಲೇ ಬಸ್ ಚಲಾಯಿಸಿದ್ದರು. ಆದರೆ ಒಂದೇ ಒಂದು ಕೆಟ್ಟಚಟದ ತೊಂದರೆ ಅಂದರೆ ಬೀಡಿ ಸೇದುವುದು. ಬಸ್ ಚಲಾಯಿಸಿಕೊಂಡೇ ಬೀಡಿ ಸೇದುತ್ತಿದ್ದರು. ಒಂದಾದಮೇಲೊಂದು ಬೀಡಿ. ಚೈನ್ ಸ್ಮೋಕರ್ ಅನ್ನುತ್ತಾರಲ್ಲ ಹಾಗೆ. ಧೂಮವೆಲ್ಲ ಹೊರಗೆ ಬಿಡುತ್ತಿದ್ದರು. ಆ ಧೂಮವನ್ನೆಲ್ಲ ನಾವು ಪಾನ ಮಾಡಬೇಕಾಗಿ ಬರುತ್ತಿದ್ದುದು ವಿಪರ್ಯಾಸವೇ ಸರಿ. ಅಬ್ಬ ಅಸಾಧ್ಯ ವಾಸನೆ. ಮೂಗು ಮುಚ್ಚಿಕೊಳ್ಳುತ್ತ ಅಯ್ಯೋ ಬೀಡಿನಾಥ ಎಂದು ಬೊಬ್ಬೆ ಹೊಡೆಯುತ್ತಿದ್ದೆವು. ಅದನ್ನು ಕಂಡು ಸೋನು (ಬಸ್ ಸಹಾಯಕ)ಗೆ ನಗುವೋ ನಗು. ಕೆಲವೆಡೆ ಸೋನು ಬೀಡಿಗೆ ಬೆಂಕಿ ಹಚ್ಚಿ ಕೊಡುತ್ತಿದ್ದುದು ಕಾಣುತ್ತಿತ್ತು. ಮಂಗಾರಾಮ ಎಂಬ ಹೆಸರನ್ನು ಕಿತ್ತಾಕಿ ಬೀಡಿನಾಥ ಎಂದು ಹೆಸರಿಟ್ಟಿದ್ದೆವು. ಬೀಡಿ ಸೇದಬೇಡಿ ಎನ್ನಲೂ ಭಯ. ಬೀಡಿ ಸೇದದೆ ಮನಸ್ಸು ಚಂಚಲಗೊಂಡು ಬೇರೆಡೆ ಹೋಗಿ ಬಸ್ ಪ್ರಪಾತಕ್ಕೆ ಇಳಿಸಿದರೆ ಎಂದು ವಾಸನೆ ತಡೆದು ಬಾಯಿಮುಚ್ಚಿ, ಮೂಗು ಮುಚ್ಚಿ ಕೂತಿದ್ದೆ! ನಾವು ಒಂದು ಬೀಡಿ ಕಾರ್ಖಾನೆ ತೆರೆದು ಮಂಗಾರಾಮನಿಗೆ ವಿತರಿಸಿದರೆ ಹೇಗೆ? ಅಷ್ಟು ಬೀಡಿ ಅವರೊಬ್ಬರಿಗೇ ಬೇಕು ಎಂದು ನಾನೂ ಪೂರ್ಣಿಮಳೂ ವಿಚಾರವಿನಿಮಯ ನಡೆಸಿದೆವು! ವಿರಾಮದಲ್ಲಿ ತಡೆಯಲಾರದೆ ಮಂಗಾರಾಮನಿಗೆ ಕೇಳಿದೆ. ‘ಹೀಗೊಂದು ಬೀಡಿ ಸೇದುತ್ತೀರಲ್ಲ. ಆರೋಗ್ಯ ಹಾಳಾಗುವುದಿಲ್ಲವೆ?’ ಅದಕ್ಕೆ ಮಂಗಾರಾಮ. ‘‘ಬೇರೆ ಯಾವ ಕೆಟ್ಟ ಚಾಳಿಯೂ ಇಲ್ಲ. ಸಣ್ಣ ವಯಸ್ಸಿನಿಂದಲೇ ಸೇದಲು ಪ್ರಾರಂಭಿಸಿದೆ. ಈಗ ನನಗೆ ೫೦ ವರ್ಷ. ಏನಾಗಿಲ್ಲ. ಸೇದದೆ ಇದ್ದರೆ ಬಸ್ ಚಾಲನೆ ಸಾಧ್ಯವಾಗುವುದಿಲ್ಲ. ಮೊದಲು ಸಣ್ಣ ಬೀಡಿ ಜಾಸ್ತಿ ಸೇದುತ್ತಿದ್ದೆ. ಈಗ ಸ್ವಲ್ಪ ದೊಡ್ಡ ಬೀಡಿ. ದಿನಕ್ಕೆ ಬರೀ ೨೫ ಮಾತ್ರ ಸೇದುವುದು” ಎಂದರು! ಪುಣ್ಯಕ್ಕೆ ಹದಿನಾರು ವರ್ಷದ ಸೋನು ಬೀಡಿ ಸೇದಲು ಕಲಿತಿಲ್ಲ. ಬಹುಶಃ ಅದರ ಹೊಗೆ ಪಾನವೇ ಅವನಿಗೆ ಸಾಕಾಗುತ್ತಿರಬಹುದೇನೋ.

ಬಸ್ ಚಾಲಕ ಮಂಗಾರಾಮನಿಗೆ ಇನಾಮಾಗಿ ತಂಡದ ವತಿಯಿಂದ ರೂ.೨೦೦೦, ಹಾಗೂ ಸಹಾಯಕ ಸೋನುಗೆ ರೂ. ೫೦೦ ಕೊಡುವುದು ಎಂದು ತೀರ್ಮಾನವಾಗಿತ್ತು. ರೂ. ಬದಲು ಬೀಡಿ ಸಿಗರೇಟನ್ನೇ ಕೊಟ್ಟರೆ ಹೇಗೆ ಎಂದೂ ನಾವು ತಮಾಷೆಯಾಗಿ ಮಾತಾಡಿಕೊಂಡೆವು. ಈ ಚಟಗಳೆಲ್ಲ ಒಮ್ಮೆ ಅಭ್ಯಾಸವಾದರೆ ಬಿಡುವುದು ಕಷ್ಟ. ಉದಾಹರಣೆಗೆ ನಮಗೆಲ್ಲ ಚಾರಣ ಚಟವಾಗಿ ಅಂಟಿದೆ. ಅದನ್ನು ಬಿಡಲಾಗುತ್ತಿಲ್ಲವಲ್ಲ ಹಾಗೆ ಎಂದು ಭಾವಿಸಿದೆ! ನಮ್ಮ ಚಟ ಒಳ್ಳೆಯ ಚಟ ಎಂಬುದು ಸಮಾಧಾನ ತರುವ ವಿಷಯ!
ದಾರಿಯುದ್ದಕ್ಕೂ ಒಮ್ಮೆ ಗುಡ್ಡ ಏರಿದರೆ ಮತ್ತೊಮ್ಮೆ ಇಳಿಯುತ್ತೇವೆ. ಒಂದು ಪರ್ವತ ಏರಿ ಇನ್ನೊಂದು ಪರ್ವತ ಇಳಿದು, ಸೇತುವೆ ದಾಟಿ ಇನ್ನೊಂದು ಭಾಗಕ್ಕೆ ಹೋಗುತ್ತಿರುತ್ತೇವೆ.  ರಸ್ತೆ ಬಲು ಕಿರಿದಾಗಿಯೇ ಸಾಗುತ್ತದೆ. ಅಲ್ಲಲ್ಲಿ ರಸ್ತೆ ಕಾಮಗಾರಿಗಳು ನಡೆಯುತ್ತಲೇ ಇರುವುದನ್ನು ಕಾಣುತ್ತೇವೆ. ಕೆಲವೆಡೆ ಗುಡ್ಡ ಜರಿದು ಕಲ್ಲುಬಂಡೆಗಳು ರಸ್ತೆಗೆ ಬೀಳುತ್ತಿರುತ್ತವೆ. ರಸ್ತೆ ಅಂಚಿನಲ್ಲಿ ಕೆಳಗೆ ನದಿ ಹರಿಯುತ್ತದೆ. ಅಂತ ಸ್ಥಳಗಳಲ್ಲಿ ಅಲ್ಲಲ್ಲಿ ರಸ್ತೆ ಜರಿದು ಕಿರಿದಾಗಿರುವುದು ಕಾಣುತ್ತದೆ. ಅಲ್ಲೆಲ್ಲ ರಿಪೇರಿ ಕೆಲಸ ನಡೆಯುತ್ತಿರುತ್ತದೆ. ಅಂಥ ಸ್ಥಳಗಳಲ್ಲಿ ಬಸ್ ಚಲಿಸುತ್ತಿರುವಾಗ ಹೊರಗೆ ಇಣುಕಿದರೆ ಜೀವ ಬಾಯಿಗೆ ಬರುವಂಥ ಅನುಭವವಾಗಿ ಒಂದುಕ್ಷಣ ಕಣ್ಣುಮುಚ್ಚುವಂತೆ ಪ್ರೇರೇಪಿಸುತ್ತದೆ. ಅಂಥ ಕಡೆ ಚಾಲಕರು ಎಷ್ಟು ಎಚ್ಚರದಿಂದ ಇದ್ದರೂ ಸಾಲದು. ಒಂದು ಸಲವಂತೂ ಪ್ರಪಾತದ ಅಂಚಿನಲ್ಲಿ ಬಸ್ ಕೂದಲೆಳೆಯ ಅಂತರದಲ್ಲಿ ಸಾಗಿದಾಗ ಅಬ್ಬಾ ಎಂಬ ಉದ್ಘಾರ ತೆಗೆದಿದ್ದೆ. ಇಂಥ ರಸ್ತೆಗಳಲ್ಲಿ ವಾಹನ ಚಲಾಯಿಸುವ ಚಾಲಕರನ್ನು ಎಷ್ಟು ಹೊಗಳಿದರೂ ಸಾಲದು.

img_4928

img_4930

ಹೆಲಿಕಾಫ್ಟರ್ ಏರಿದ ಮೊದಲ ಅನುಭವ
ಕೇದಾರಕ್ಕೆ ಹೋಗುವ ಮಾರ್ಗದಲ್ಲಿ ನಾಲ್ಕಾರು ಕಡೆ ಬೇರೆ ಬೇರೆ ಕಂಪನಿಯ ಹೆಲಿಪ್ಯಾಡ್‌ಗಳಿವೆ. ನಾರಾಯಣಕಟ್ಟ ಎಂಬ ಊರಿನಲ್ಲಿ ಆರ್ಯನ್ ಎಂಬ ಕಂಪನಿಯ ಹೆಲಿಪ್ಯಾಡ್ ಇರುವ ಸ್ಥಳದಲ್ಲಿ ನಮ್ಮ ಬಸ್ ನಿಲ್ಲಿಸಿದರು ಮಂಗಾರಾಮ. ಅಲ್ಲಿ ಎರಡು ಹೆಲಿಪ್ಯಾಡ್ ಇದೆ. ಅವರಿಗೆ ಅಲ್ಲಿ ಕಮಿಶನ್ ಇರಬೇಕು. ೧೧.೩೫ಕ್ಕೆ ಅಲ್ಲಿ ತಲಪಿದೆವು. ಅಲ್ಲಿ ನಮ್ಮ ತೂಕ ನೋಡಿ ಬರೆದುಕೊಂಡು, ರೂ. ೩೫೦೦ ಕೊಟ್ಟು ಟಿಕೆಟ್ ಪಡೆದೆವು. ನಮ್ಮ ಲಗೇಜಿನ ತೂಕ ೨ ಕಿಲೋಗಿಂತ ಜಾಸ್ತಿ ಇರಬಾರದಂತೆ. ಕೇದಾರಕ್ಕೆ ಕೊಂಡೋಗಲು ಹಾಕಿಟ್ಟಿದ್ದ ಒಂದೊಂದೇ ವಸ್ತುಗಳು ಚೀಲದಿಂದ ವಾಪಾಸು ಬಸ್ ಸೇರಿತು. ನಮ್ಮ ಚೀಲ ೨ ಕಿಲೋಗಿಂತ ಜಾಸ್ತಿ ತೂಕವಿತ್ತು. ತೀರ ಅವಶ್ಯವಾದ ಸ್ವೆಟರ್, ಟೋಪಿ, ಒಣಹಣ್ಣು ಬಿಟ್ಟು ಬೇರೇನೂ ಒಯ್ಯಲಿಲ್ಲ. ಒಂದೊಂದು ಕಂಪನಿಯಲ್ಲೂ ಒಂದು ಟಿಕೆಟಿಗೆ ಬೇರೆ ಬೇರೆ ದರಗಳಿವೆಯಂತೆ. ಅಲ್ಲಿ ಅದಾಗಲೆ ಸುಮಾರು ಮಂದಿ ಕಾಯುತ್ತಿದ್ದರು. ಹವಾಮಾನ ಚೆನ್ನಾಗಿದ್ದರೆ ಮಾತ್ರ ಹೆಲಿಕಾಫ್ಟರ್ ಹಾರುತ್ತಿತ್ತು. ೧೨ ಗಂಟೆಯಿಂದ ಸಂಜೆ ನಾಲ್ಕರ ತನಕ ಕಾದೆವು. ಸಮಯ ಹೋಗದೆ ಕೆಲವರು ಕೂತಲ್ಲೇ ತೂಕಡಿಸಿದರು. ನಾವು ಕೆಲವರು ಹೊಟ್ಟೆಗೆ ಏನಾದರೂ ಹಾಕೋಣ ಎಂದು ಕೆಳಗೆ ಇರುವ ಏಕೈಕ ಹೊಟೇಲ್ ಜೋಪಡಿಯಲ್ಲಿ ಮ್ಯಾಗಿ ತಿಂದೆವು. ಅದಾದರೆ ಬೇಗ ಮಾಡಿ ಆಗುತ್ತದೆ. ಎಲ್ಲಾದರೂ ಹೆಲಿಕಾಫ್ಟರ್ ಹತ್ತಲು ಕರೆ ಬಂದರೆ ಎಂದು ಮ್ಯಾಗಿನೂಡಲ್ಸ್ ತೆಗೆದುಕೊಂಡದ್ದು. ಮಕ್ಕಳಿಗೆ ಅದನ್ನು ತಿನ್ನಬೇಡಿ ಎಂದು ಹೇಳಿ ನಾವೀಗ ಇದನ್ನು ತಿನ್ನುತ್ತಿದ್ದೇವೆ ಎಂದು ಹೇಮಮಾಲಾ ಹೇಳಿಕೊಂಡರು.
ಅಂತೂ ನಾಲ್ಕಕ್ಕೆ ನಮಗೆ ಕರೆ ಬಂತು. ನಾವು ಆರು ಮಂದಿ ಮೊದಲು ಹೋದೆವು. ನಮಗೆ ಬಾಕಿದ್ದವರು ಎಲ್ಲ ಶುಭ ಹಾರೈಸಿದರು. ಹೆಲಿಪ್ಯಾಡ್ ಸ್ಥಳಕ್ಕೆ ಹೋಗಿ ಕೂತಾಗ, ಇಲ್ಲ, ಹವಾಮಾನ ಸರಿಯಾಗಿಲ್ಲ. ಕೆಳಗೆ ಹೋಗಿ ಕಾಯಿರಿ ಎಂದರು! ಅಂತೂ ಹವಾಮಾನ ತಿಳಿಯಾಗಿ ನಾವೆಲ್ಲರೂ ಹೆಲಿಕಾಫ್ಟರ್ ಏರಿದೆವು. ನಾನು ಹೆಕಾಫ್ಟರ್ ಏರಿದ್ದು ಇದೇ ಪ್ರಥಮ ಬಾರಿ. ಕೆಳಗೆ ಬೆಟ್ಟ ಗುಡ್ಡ, ಕಾಲು ದಾರಿ ಎಲ್ಲ ಚೆನ್ನಾಗಿ ಕಂಡಿತು. ವೀಡಿಯೋ ಮಾಡಿದೆ. ಸವಿತ ಪೈಲೆಟ್ ಪಕ್ಕ ಮಿಸುಕಾಡದೆ ಕೂತಳು. ಫೋಟೋ ತೆಗೆಯಬಾರದೆಂದು ಹತ್ತುವ ಮೊದಲು ಅವಳಿಗೆ ಹೇಳಿದ್ದರಂತೆ. ಕೇವಲ ಏಳುನಿಮಿಷದಲ್ಲಿ ಕೇದಾರ ತಲಪಿದೆವು. ಒಂದು ಸೆಕೆಂಡಿನಲ್ಲಿ ಹತ್ತಬೇಕು, ಅಷ್ಟೇ ಸಮಯದಲ್ಲಿ ಇಳಿಯಬೇಕು. ಇಳಿದು ಕೂಡಲೇ ಆಚೆ ಬರಬೇಕು. ಅದರ ಪಂಕದ ಗಾಳಿಗೆ ಸಣಕಲಾಗಿದ್ದರೆ ಹಾರಿಹೋದೇವು. ಅಷ್ಟು ಗಾಳಿ. ಪುಣ್ಯಕ್ಕೆ ಹವಾಮಾನ ಸರಿಯಾಗಿದ್ದು ನಮ್ಮ ತಂಡದವರೆಲ್ಲರೂ  ಕೇದಾರ ತಲಪಿದೆವು.ಹೆಲಿಕಾಫ್ಟರ್ ಸುಖ ಅುಭವಿಸುವ ಮೊದಲೆ ಕೆಳಗೆ ಇಳಿದಿದ್ದೆವು! ಇಳಿದು ಬಂದಾಗ ಚಳಿ ಆವರಿಸಿತು. ಬೆಚ್ಚಗೆ ತಲೆಗೆ ಟೊಪ್ಪಿ ಏರಿಸಿದೆವು. ಸ್ವೆಟರ್ ಹಾಕಿಕೊಂಡೆವು.

20160917_162150

ಕೇದಾರನಾಥನ ದರ್ಶನ
ಹೆಲಿಪ್ಯಾಡಿನಿಂದ ದೇವಾಲಯಕ್ಕೆ ಹೋಗಲು ೫೦೦ಮೀಟರು ನಡೆಯಬೇಕು. ೨೦೦೧೩ರಲ್ಲಿ ಮೇಘಸ್ಫೋಟ ಪ್ರವಾಹದಿಂದಾಗಿ ಕೇದಾರ ಕೊಚ್ಚಿ ಹೋಗಿತ್ತು. ಅದರ ಅವಶೇಷಗಳಾಗಿ ಅರ್ಧ ಮುರಿದ ಮನೆಗಳು, ಅಲ್ಲಲ್ಲಿ ಬಂಡೆಗಲ್ಲುಗಳು ಕಾಣುತ್ತವೆ. ದೇವಾಲಯದ ಎದುರು ಭಾಗದಲ್ಲಿ ಸುಮಾರು ಕಟ್ಟಡಗಳು ಇದ್ದುವಂತೆ. ಈಗ ಅಲ್ಲಿ ಕಟ್ಟಡ ಕಟ್ಟಲು ಅನುಮತಿ ಕೊಡುವುದಿಲ್ಲವಂತೆ. ದೇವಾಲಯದ ಸುತ್ತ ಪರ್ವತ ಸಾಲುಗಳ ಬಳಿ ಪ್ರವಾಹ ಹರಿದು ಬರದಂತೆ? ತಡೆಗೋಡೆ ಕಟ್ಟುವ ಕೆಲಸ ನಡೆಯುತ್ತಲಿತ್ತು. ನಾವು ದೇವಾಲಯದ ಬಳಿ ನಿಂತು ಭಾವಚಿತ್ರ ತೆಗೆಸಿಕೊಂಡೆವು. ಸಂಜೆ ಐದು ಗಂಟೆಗೆ ಒಳಗೆ ಹೋಗಿ ದೇವರ ದರ್ಶನ ಮಾಡಿದೆವು. ಹತ್ತಿರವೇ ಇರುವ ವಸತಿಗೃಹದಲ್ಲಿ ತಂಗಿದೆವು. ಕೋಣೆಯಲ್ಲಿ ಸಂಜೆ ಏಳರವರೆಗೆ ಭಜನೆ, ಸ್ತೋತ್ರಪಠಣ, ಭಕ್ತಿಗೀತೆ ಎಲ್ಲ ಹಾಡಿದರು. ತಂಗಿ ಸವಿತ ಉತ್ಸಾಹದಿಂದಲೇ ಹಾಡಿದಳು. ರಾತ್ರಿ ಆರತಿ ನೋಡಿದೆವು. ಒಂದು ಗಂಟೆ ದೇವರಿಗೆ ಆರತಿ ನಡೆಯುತ್ತದೆ. ಅರ್ಚಕರು ವಿಶಿಷ್ಟವಾಗಿ ಮಣಿ ಆಡಿಸುತ್ತ, ಆರತಿ ಎತ್ತುತ್ತಾರೆ. ದೇವಾಲಯದ ಹೊರಗೆ ನಂದಿಗೆ, ದೂರದಲ್ಲಿ ಕಾಣುವ ಭೈರವಬೆಟ್ಟದಲ್ಲಿರುವ ಭೈರವನಿಗೆ ಇಲ್ಲಿಂದಲೇ ಆ ದಿಕ್ಕಿನತ್ತ ಕೈ ಎತ್ತಿ ಆರತಿ ಮಾಡುತ್ತಾರೆ. ಅಲ್ಲಿಯ ಪ್ರಧಾನ ಅರ್ಚಕರ ಹೆಸರು ಶಂಕರಲಿಂಗ ಪುರೋಹಿತ. ಕರ್ನಾಟಕದವರು. ಜಗಮಗ ಬಟ್ಟೆ ಧರಿಸಿ ನೋಡಲು ಸ್ವಲ್ಪ ರುದ್ರಾವತಾರವಾಗಿಯೇ ಕಾಣುತ್ತಾರೆ. ವಿಠಲರಾಜು ಅವರಿಗೆ ಅರ್ಚಕರ ಪರಿಚಯ ಇದೆ. ಪೂಜೆ ಬಳಿಕ ಅವರ ಮನೆಗೆ ರಾತ್ರಿ ಹೋದೆವು. ಅಲ್ಲಿ ಅವರಿಗೆ ನಮಸ್ಕರಿಸಿದಾಗ ನಮಗೆಲ್ಲ ಒಂದು ರುದ್ರಾಕ್ಷಿ ಇರುವ ಮಾಲೆ ಕೊಟ್ಟರು. ಅವರಿಗೆ ಎಲ್ಲರೂ ಯತಾನುಶಕ್ತಿ ಕಾಣಿಕೆ ಹಾಕಿದರು.

dscn1252 dscn1246

20160917_193622

dscn1233

dscn1232

dscn1231

dscn1211

dscn1212

dscn1217

dscn1227

20160917_182503dscn1262

ಕಂಡೆನಾ ಬೃಹತ್ ಬಂಡೆಯಾ
ದೇವಾಲಯದ ಹಿಂಭಾಗಕ್ಕೆ ಬರುವಾಗ ಅನತಿ ದೂರದಲ್ಲೇ ಬೃಹತ್ ಗಾತ್ರದ ಬಂಡೆಗಲ್ಲೊಂದು ಅಡ್ಡವಾಗಿ ಬಿದ್ದಿರುವುದು ಕಾಣುತ್ತದೆ. ಪರ್ವತದಿಂದ ಉರುಳುರುಳಿ ಬಿದ್ದ ಬಂಡೆಯದು. ಅಂಥ ಬೃಹತ್ ಗಾತ್ರದ ಬಂಡೆ ಉರುಳಿ ಬರಬೇಕಾದರೆ ಎಂಥ ಪ್ರವಾಹ ಬಂದಿರಬಹುದು ಎಂದು ಆ ಬಂಡೆ ಕಣ್ಣಾರೆ ನೋಡಿದರೂ ಊಹಿಸಲೂ ಸಾಧ್ಯವಾಗುವುದಿಲ್ಲ. ಆ ಕಲ್ಲು ದೇವಾಲಯವನ್ನು ಉಳಿಸಿದ್ದು ನಿಜಕ್ಕೂ ಅದ್ಭುತ ಪವಾಡವೇ ಸರಿ. ಈ ಪರಮಸತ್ಯವನ್ನು ಇಸವಿ ೨೦೧೩ರಲ್ಲಿ ಪತ್ರಿಕೆಗಳಲ್ಲಿ ಓದಿದ್ದನ್ನು ಇಲ್ಲಿ ಕಣ್ಣಾರೆ ಕಂಡೆವು. ಕಂಡು ಮೂಕವಿಸ್ಮಿತರಾದೆವು.

dscn1238

dscn1274

ಕೇದಾರನಾಥದ ಬಗ್ಗೆ ಪುರಾಣಕಥೆ
ಮಹಾಭಾರತದ ಕುರುಕ್ಷೇತ್ರದಲ್ಲಿ ಕೌರವರನ್ನು (ಬ್ರಾಹ್ಮಣರನ್ನು) ಹತ್ಯೆ ಮಾಡಿದ ಪಾಪಕ್ಕೆ ಪಾಂಡವರು ಗುರಿಯಾದರು. ಆ ಪಾಪಕ್ಕೆ ಪ್ರಾಯಶ್ಚಿತ್ತ ಮಾಡಿಕೊಳ್ಳಲು ಮುಂದಾದರು. ಅದಕ್ಕೆ ಶಿವನನ್ನು ಸಂಪ್ರೀತಗೊಳಿಸಿ, ಆತನ ಆಶಿರ್ವಾದ ಪಡೆಯಲು ನಿಶ್ಚಯಿಸಿದರು. ಆದರೆ ಪಾಂಡವರ ಘನಘೋರ ಪಾತಕ ಕೃತ್ಯದ ವಿರುದ್ಧ ಶಿವ ಕೋಪಗೊಂಡಿದ್ದ. ಕೋಪೋದ್ರಿಕ್ತ ಶಿವ ಪಾಂಡವರತ್ತ ಕೃಪಾಕಟಾಕ್ಷ ಬೀರಲಿಲ್ಲ.
ಶಿವನನ್ನು ಒಲಿಸಿಕೊಳ್ಳಳು ಪಾಂಡವರು ಶಿವನ ಸಾಮ್ರಾಜ್ಯವಾದ ಹಿಮಾಲಯಕ್ಕೇ ತೆರಳುತ್ತಾರೆ. ಆದರೆ ಪಾಂಡವರಿಂದ ವಿಮುಖಗೊಂಡಿದ್ದ ಶಿವ ಕೇದಾರದಲ್ಲಿ ಕಣ್ಮರೆಯಾಗುತ್ತಾನೆ. ಆದರೆ ಶಿವನ ಆಶೀರ್ವಾದ ಪಡೆಯಲೇಬೇಕು ಎಂದು ದೃಢನಿಶ್ಚಯ ಮಾಡಿದ್ದ ಪಾಂಡವರು ಶಿವನ ಸುಳಿವರಿತು ಕೇದಾರಕ್ಕೆ ಬರುತ್ತಾರೆ.
ಕೇದಾರ ಜಾನುವಾರುಗಳ ನೆಲೆವೀಡಾಗಿರುತ್ತದೆ. ಶಿವ ಇಲ್ಲೊಂದು ಉಪಾಯ ಮಾಡುತ್ತಾನೆ. ಪಾಂಡವರ ಕಣ್ಣಿಗೆ ಬೀಳಬಾರದೆಂದು ನಂದಿ ರೂಪಧಾರಿಯಾಗಿ ಜಾನುವಾರುಗಳ ಮಂದೆಯಲ್ಲಿ ಸೇರಿಕೊಳ್ಳುತ್ತಾನೆ. ಪಾಂಡವರಿಗೆ ಈ ಸುಳಿವು ಸಿಗುತ್ತದೆ. ದೈತ್ಯದೇಹಿ ಭೀಮ ಮತ್ತಷ್ಟು ಬೃಹದಾಕಾರ ತಾಳಿ ಎರಡು ಬೃಹತ್ ಬೆಟ್ಟಗಳಾಗಿ ಮಾರ್ಪಡುತ್ತಾನೆ. ಆಗ ಸಾಮಾನ್ಯ ಜಾನುವಾರುಗಳು ಬೆಟ್ಟಗಳ ನಡುವೆ ಅಂದರೆ ಭೀಮನ ಕಾಲುಗಳ ನಡುವೆ ತಮ್ಮ ಅರಿವಿಗೆ ಬಾರದೆ ನುಸುಳುತ್ತವೆ. ಆದರೆ ಪರಮಾತ್ಮನಾದ ಶಿವನಿಗೆ ಹಾಗೆ ಹೋಗಲು ಸಾಧ್ಯವಾಗುವುದಿಲ್ಲ. ಶಿವನ ರೂಪದಲ್ಲಿದ್ದ ನಂದಿ ಭೀಮನಿಂದ ತಪ್ಪಿಸಿಕೊಳ್ಳಲು ಓಡಿಹೋಗುತ್ತದೆ. ಆಗ ಭೀಮ ನಂದಿಯ ಮೇಲೆ ಬಿದ್ದು ಹಿಡಿಯಲು ಹೋಗುತ್ತಾನೆ. ಆ ಸಂದರ್ಭದಲ್ಲಿ ಭೀಮ ನಂದಿಯ ಹಿಂಭಾಗದ ತ್ರಿಭುಜಾಕೃತಿಯನ್ನು ಕೈಯಲ್ಲಿ ಹಿಡಿದುಬಿಡುತ್ತಾನೆ. ತ್ರಿಭುಜಾಕೃತಿಯ ಬೆನ್ನುಹೊತ್ತ ನಂದಿ ರೂಪದಲ್ಲಿದ್ದ ಶಿವ, ತಮ್ಮ ಗುರಿಯನ್ನು ಸಾಧಿಸಿದ ಪಾಂಡವರ ವಿರುದ್ಧ ಕೋಪ ಬಿಟ್ಟು, ಅವರ ಪಾಪಗಳಿಗೆ ಮುಕ್ತಿ ಕರುಣಿಸಲು ನಿಜ ರೂಪದಲ್ಲಿ ಪ್ರತ್ಯಕ್ಷನಾಗುತ್ತಾನೆ. ಅದುವೇ ಕೇದಾರನಾಥ. ಮುಂದೆ ಲೋಕಕಲ್ಯಾಣಾರ್ಥ ಭೀಮನ ಕೈಗೆ ನಂದಿ ಸಿಕ್ಕಿದ ಜಾಗದಲ್ಲಿ ತ್ರಿಭುಜಾಕೃತಿಯ ಬೆನ್ನುಹೊತ್ತ ನಂದಿ ರೂಪದ ಶಿವನನ್ನು ಪ್ರತಿಷ್ಠಾಪಿಸುತ್ತಾರೆ. ಅಲ್ಲಿಂದ ಮುಂದಕ್ಕೆ ಪಾಂಡವರು ಹಿಮಾಲಯದ ಮೂಲಕ ಸ್ವರ್ಗದ ಹಾದಿ ಹಿಡಿಯುತ್ತಾರೆ ಎಂಬುದು ಕಥೆ. ಪಂಚಕೇದಾರಗಳು ಪಶುಪತಿನಾಥ, ಕೇದಾರನಾಥ, ತುಂಗನಾಥ, ರುದ್ರನಾಥ, ಕಲ್ಪನಾಥ. ಈ ಪಂಚಕೇದಾರಗಳಲ್ಲಿ ಒಂದೊಂದುಕಡೆ ಶಿವನ ಒಂದೊಂದು ಭಾಗ ಪೂಜಿಸಲ್ಪಡುತ್ತದೆ. ಪಶುಪತಿನಾಥನಲ್ಲಿ ಶಿರಭಾಗ, ಕೇದಾರದಲ್ಲಿ ಬೆನ್ನು, ತುಂಗಾನಾಥದಲ್ಲಿ ಕೈ, ಭುಜ, ರುದ್ರನಾಥದಲ್ಲಿ ಮುಖದಭಾಗ, ಕಲ್ಪನಾಥದಲ್ಲಿ ಜಟೆಭಾಗ.
ದೇವಾಲಯದ ಒಳಗೆ ಪಾಂಡವರ ಮೂರ್ತಿಗಳನ್ನೂ ಕಾಣಬಹುದು.
ಕೇದಾರನಾಥ ಕಣಿವೆಯಲ್ಲಿ ಹರಿಯುವ ಗಂಗಾ ಉಪನದಿಯಾದ ಮಂದಾಕಿನಿ ಇಲ್ಲಿನ ಜೀವನದಿ. ಕೆಳಗೆ ಹರಿಯುತ್ತಾ ಅದು ರುದ್ರಪಯಾಗದಲ್ಲಿ ಅಲಕನಂದ ನದಿಯನ್ನು ಸೇರಿಕೊಳ್ಳುತ್ತದೆ.

  ನಾವು ತಂಗಿದ ವಸತಿಗೃಹದಲ್ಲಿ ರಾತ್ರಿ ೮.೩೦ ಗಂಟೆಗೆ ಅನ್ನ ಸಾರು, ಚಪಾತಿ ಊಟ ಮಾಡಿ, ರಜಾಯಿ ಹೊದ್ದು ಬೆಚ್ಚಗೆ ಮಲಗಿದೆವು.

20160917_212006

ಬೆಳಗಿನ ಅಭಿಷೇಕ
ಬೆಳಗ್ಗೆ ೧೮-೯-೨೦೧೬ರಂದು ಸುಖನಿದ್ದೆಯಲ್ಲಿದ್ದಾಗ ೨.೧೫ಕ್ಕೆ ಅಲರಾಂ ಬಡಿದೆಚ್ಚರಿಸಿತು. ಸರೋಜ ಸುಖವಾದ ಕನಸಿನ ಲೋಕದಲ್ಲಿ ಅವರ ಯಜಮಾನರೊಡನೆ ವಿಹರಿಸುತ್ತ, (ಯಜಮಾನರು ಇಲ್ಲಿಗೆ ಏಕೆ ಬಂದರು ಎಂದು ಆಶ್ಚರ್ಯಚಕಿತರಾಗಿ ಚಿಂತಿಸುತ್ತಲೇ) ನಮ್ಮನ್ನೆಲ್ಲ ಅವರಿಗೆ ಪರಿಚಯಿಸುತ್ತ ಇದ್ದರಂತೆ! ಆಗ ಈ ಅಲರಾಂ ಬಡಿದೆಚ್ಚರಿಸಿ ಸ್ವಪ್ನಲೋಕದಿಂದ ಹೊರಬಂದರಂತೆ! ೨.೩೦ಗೆ ದೇವಾಲಯದ ಬಳಿ ಬಂದೆವು. ಅರ್ಚಕರೂ ಅವರ ಸಹಾಯಕರೂ ದೇವಾಲಯದ ಬಾಗಿಲು ತೆರೆದರು. ಬೆಳಗಿನ ಝಾವದ ಅಭಿಷೇಕವನ್ನು ವಿಶೇಷವಾಗಿ ನಮ್ಮ ೧೭ ಜನರ ಕೈಯಲ್ಲಿ ಮಾಡಿಸಿದರು. ಗಂಧ, ತುಪ್ಪ, ಹಾಲು, ನೀರು ಹಾಕಿ ಅಭಿಷೇಕ ಮಾಡಿದೆವು. ಒಂದಷ್ಟು ಹಿರಿಮೊತ್ತ ಅರ್ಚಕರಿಗೆ ಕೊಟ್ಟರೆ ಇಂಥ ಭಾಗ್ಯ ದೊರೆಯುತ್ತದಂತೆ. ೩ರಿಂದ ೩.೩೦ರ ತನಕ ಮಾತ್ರ ಅಭಿಷೇಕ ಮಾಡಿಸಿದರು.  ಆಹಾ ಇದು ಭಾಗ್ಯ ಇದು ಭಾಗ್ಯವಯ್ಯ ಯಾರಿಗುಂಟು ಇಂಥ ಭಾಗ್ಯ ಎಂದು ಎಲ್ಲರೂ ಅಭಿಷೇಕದ ಗುಂಗಿನಲ್ಲೇ ಅಲ್ಲಿಂದ ವಸತಿಗೃಹಕ್ಕೆ ಬಂದು ಮಲಗಿದೆವು.

ಮುಂದುವರಿಯುವುದು

Read Full Post »

ಲಕ್ಷ್ಮಣ ಝೂಲಾ, ರಾಮಝೂಲಾ
ಮಳೆ‌ಅಂಗಿ ಹಾಕಿಕೊಳ್ಳುತ್ತ ಮಳೆಯಲ್ಲೆ ನಡೆದೆವು. ಲಕ್ಷ್ಮಣಝೂಲಾ ಸೇತುವೆಯಲ್ಲಿ ದಾಟಿ ಮುಂದೆ ಹೋದೆವು. ಗೀತಭವನದಲ್ಲಿ ಕಾಲಾಕಂಬಳಿವಾಲಾ ಮಂದಿರ ನೋಡಿದೆವು. ಕಾಲಾಕಂಬಳಿವಾಲಾ ಅವರು ಕಪ್ಪುಕಂಬಳಿಯನ್ನು ದಾನ ಮಾಡುತ್ತಿದ್ದರಂತೆ. ಲಕ್ಷ್ಮೀನಾರಾಯಣ ದೇವಾಲಯವಿದೆ ಅಲ್ಲಿ. ಮುಂದೆ ರಾಮಝೂಲಾ ಸೇತುವೆ ದಾಟಿ ಮುಂದೆ ಸಾಗಿದಾಗ ಧಾರಾಕಾರ ಮಳೆ. ಸುಮಾರು ಎರಡುಕಿಮೀ. ದೂರ ಮಳೆಯಲ್ಲಿ ನಡೆದೆವು. ಮಳೆಯಲ್ಲಿ ನಡೆಯುವುದೇ ಸೊಗಸು. ಬಾಲ್ಯಕಾಲದ ಮಜಾ ಅನುಭವಿಸಿದೆವು. ಮುಂದೆ ಶತ್ರುಘ್ನನ ದೇವಾಲಯ ನೋಡಿದೆವು. ಆಗಲೇ ರಾತ್ರಿಯಾಗಿತ್ತು. ಎರಡು ಆಟೊದಲ್ಲಿ ವಾಪಾಸು ಹರಿದ್ವಾರವನ್ನು ರಾತ್ರಿ ೮.೪೫ಕ್ಕೆ ತಲಪಿದೆವು. ಋಷಿಕೇಶದಲ್ಲಿ ನೋಡುವಂಥ ಸ್ಥಳ ಇನ್ನೂ ಇದೆ. ಸಮಯಾವಕಾಶವಾಗಲಿಲ್ಲ.  ಛೋಟಾವಾಲಾ ಹೊಟೇಲಿನಲ್ಲಿ ಒಬ್ಬ ಮನುಷ್ಯ ಗೊಂಬೆಯಂತೆ ಎದುರು ಕುಳಿತದ್ದು ಕಂಡಿತು. ಪಾಪ ಎಷ್ಟು ಕಷ್ಟದ ಕೆಲಸವದು.

img_4333img_4350 img_4348

img_4366

img_4359

ಮಧ್ಯಾಹ್ನ ಮಾಡಿದ ಅನ್ನ ಸಾರು ಇತ್ತು. ಅದನ್ನು ಊಟ ಮಾಡಿ ಮಲಗಿದೆವು.
ಯೋಗ ಸಾಧನೆ
ಯೋಗಾಭ್ಯಾಸ ಮಾಡುವವರು ಎಷ್ಟು ಮಂದಿ ಇದ್ದೀರಿ ಎಂದು ವಿಠಲರಾಜು ಅವರು ಹಿಂದಿನ ದಿನವೇ ಕೇಳಿ, ನಾಳೆ ಬೆಳಗ್ಗೆ ೫ ಗಂಟೆಗೆ ಯೋಗಾಭ್ಯಾಸ ಮಾಡೋಣ ಎಂದು ಹೇಳಿದ್ದರು. ಅವರ ಮಾರ್ಗದರ್ಶನದಲ್ಲಿ ಬೆಳಗ್ಗೆ (೧೩-೯-೨೦೧೬) ೫ರಿಂದ ಆರು ಗಂಟೆವರೆಗೆ ನಾವು ಕೆಲವಾರು ಮಂದಿ ಇಕ್ಕಟ್ಟಿನ ಸ್ಥಳದಲ್ಲಿ ಕೈಕಾಲು ಆಡಿಸಿದೆವು.
ಚಾರ್ ಧಾಮ ಯಾತ್ರೆ ಶುರು ಕರೋ
ಬಿಸಿಬಿಸಿ ರುಚಿಯಾದ ಉಪ್ಪಿಟ್ಟು ತಿಂದು (ಶಶಿಕಲಾ, ಸರಸ್ವತೀ ಉಪ್ಪಿಟ್ಟು ತಯಾರಿಸಿದ್ದರು. (ಸುನಂದ, ಶೋಭಾ ಈರುಳ್ಳಿ, ತರಕಾರಿ ಸಣ್ಣಗೆ ಹೆಚ್ಚಿಕೊಟ್ಟಿದ್ದರು) ತಯಾರಾದೆವು. ೩೦ ಆಸನಗಳಿರುವ ಬಸ್ಸನ್ನು ಹತ್ತು ದಿನದ ಪ್ರಯಾಣಕ್ಕೆ ನಿಗದಿಗೊಳಿಸಿದ್ದರು. ರೂ.೫೨೫೦೦/- . ನಾವು ಹದಿನೇಳು ಮಂದಿಗೆ ಇಷ್ಟು ದೊಡ್ಡ ಬಸ್ಸು ಏಕೆ? ಎಂಬ ಪ್ರಶ್ನೆ ನಿಮ್ಮ ಮನದಲ್ಲೇಳಬಹುದು! ನಮ್ಮ ಲಗೇಜು ಇಡಲು ಅನುಕೂಲವಾಗಲೆಂದು ದೊಡ್ಡ ಬಸ್ ಮಾಡಿದ್ದರು. ನಾವೆಲ್ಲ ನಮ್ಮ ಲಗೇಜುಗಳೊಂದಿಗೆ ಬಸ್ ಹತ್ತಿದೆವು. ಬಸ್ ಋಷಿಕೇಶ ದಾರಿಯಲ್ಲಿ ಮುಂದೆ ಸಾಗಿತು.

20160915_070126

ಮಸ್ಸೂರಿ ಯೂಥ್ ಹಾಸ್ಟೆಲ್
ದಾರಿಯಲ್ಲಿ ಹೋಗುತ್ತ ಮಸ್ಸೂರಿಯಲ್ಲಿ ಯೂಥ್ ಹಾಸ್ಟೆಲಿಗೆ ಭೇಟಿ ಕೊಡೋಣ ಎಂದು ಗೋಪಕ್ಕ ಮೊದಲೇ ಹೇಳಿದ್ದರು. ಅಲ್ಲಿ ಚಹಾ ಕುಡಿಯೋಣ ಎಂದೂ ಹೇಳಿದ್ದರು. ಅದಕ್ಕೂ ಮೊದಲು ಒಂದು ಚಹಾ ದುಖಾನೆಯಲ್ಲಿ ನಿಲ್ಲಿಸಿ ನಾವು ಕೆಲವರು ಕಾಫಿ ಚಹಾ ಬ್ರೆಡ್ ಪಕೋಡ ಸವಿದು ಪ್ರಯಾಣದ ಮಜ ಅನುಭವಿಸಿದೆವು. ಯೂಥ್ ಹಾಸ್ಟೆಲ್ ಕಟ್ಟಡ ಭವ್ಯವಾಗಿ ಇದೆ. ಹಿನ್ನೆಲೆಯಲ್ಲಿ ಮಸ್ಸೂರಿಬೆಟ್ಟ ಅದ್ಭುತವಾಗಿ ಕಾಣುತ್ತದೆ. ಅಲ್ಲಿ ಚಹಾ ಕೊಡುವುದು ಬಿಟ್ಟು, ಪಾಯಿಖಾನೆಗೆ ಹೋಗಲೂ ದುಡ್ಡು ವಸೂಲಿ ಮಾಡಿದರು. ಹಾಗಾಗಿ ಗೋಪಕ್ಕನಿಗೆ ತುಸು ಬೇಸರವೆನಿಸಿತು. ಮುಂದಿನ ಬಾರಿ ಬಂದಾಗ ಇವರಿಗೆಲ್ಲ ಕ್ಲಾಸ್ ತೆಗೆದುಕೊಳ್ಳಬೇಕು ಎಂದು ಹೇಳಿಕೊಂಡರು!
ಮಸ್ಸೂರಿ ಲೈಬ್ರೆರಿ
೧೮೪೩ರಲ್ಲಿ ಸ್ಥಾಪಿಸಲಾದ ಲೈಬ್ರೆರಿಯನ್ನು ಹೊರಗಿನಿಂದಲೇ ನೋಡಿದೆವು. ಅಲ್ಲಿ ಪಕ್ಕದಲ್ಲೇ ಮಸ್ಸೂರಿ ವ್ಯೂ ಪಾಯಿಂಟ್ ಮುಖಮಂಟಪದಲ್ಲಿ ಗಾಂಧೀಜಿ ಪ್ರತಿಮೆ ಇದೆ. ಅಲ್ಲಿ ಭಾವಚಿತ್ರ ತೆಗೆಸಿಕೊಂಡು ಮುಂದುವರಿದೆವು.

dscn0962

ಕೆಮ್ಟೀಫಾಲ್ಸ್
ಮಸ್ಸೂರಿಯಿಂದ ಹೊರಟು ಮುಂದೆ ಬರುವಾಗ ಪರ್ವತಗಳೆಡೆಯಿಂದ ಒಂದು ಜಲಪಾತ ಹರಿಯುವುದು ಕಾಣುತ್ತಿತ್ತು. ಅದೇ ಪ್ರಸಿದ್ಧ ಕೆಮ್ಟೀಫಾಲ್ಸ್. ಅದರ ಹೆಸರು ನೆನಪಿಟ್ಟುಕೊಳ್ಳಲು ಕೆಂಪು ಟೀ ಎಂದು ಬಾಯಿಪಾಟ ಮಾಡಿದೆ!
ಹೊಟ್ಟೆ ಹಸಿದಿತ್ತ, ಪೊಂಗಲ್ ಕಾಯುತ್ತಿತ್ತ!
ಅದಾಗಲೇ ಗಂಟೆ ಮಧ್ಯಾಹ್ನ ೨.೩೦ ಆಗಿತ್ತು. ಎಲ್ಲರ ಉದರ ಚುರ್ ಎನ್ನಲು ಸುರುವಾಗಿತ್ತು. ಮುಂದೆ ನೈನ್‌ಭಾಗ್ ಎಂಬಲ್ಲಿ ಬಸ್ ನಿಲ್ಲಿಸಿದೆವು. ಪೊಂಗಲ್, ಮೊಸರನ್ನ ಮಾಡಿ ಪಾತ್ರೆಯಲ್ಲಿ ತಂದಿದ್ದೆವು. ಅದನ್ನು ಹಂಚಿ ಊಟ ಮಾಡಿದೆವು.

img_4487

ಲಾಖಾಮಂಟಪ
ಊಟವಾಗಿ ೩.೧೦ಕ್ಕೆ ಹೊರಟು ಲಾಖಾಮಂಟಪ ಎಂಬ ಊರಿಗೆ ಬಂದೆವು. ಇಲ್ಲಿ ೨೦೦೭ರಲ್ಲಿ ಉತ್ಖನನ ಮಾಡಿದಾಗ ಹತ್ತಾರು ಶಿವಲಿಂಗಗಳು ದೊರೆತಿವೆಯಂತೆ. ಅದನ್ನು ಜೋಡಿಸಿ ಇಟ್ಟಿದ್ದಾರೆ. ಪುರಾತನ ದೇವಾಲಯವೂ ಇದೆ. ಅಲ್ಲಿ ವಿವಿಧ ದೇವರ ಹತ್ತಾರು ವಿಗ್ರಹಗಳು ಇವೆ. ಹೊರಗೆ ಒಂದು ದೊಡ್ಡ ಶಿವಲಿಂಗವಿದೆ. ಬನ್ನಿ ಅದಕ್ಕೆ ಅಭಿಷೇಕ ಮಾಡಿ ನಿಮ್ಮ ಪ್ರತಿಬಿಂಬ ಅದರಲ್ಲಿ ಕಾಣುತ್ತದೆ ನೋಡಿ ಎಂದು ಸ್ಥಳೀಯನೊಬ್ಬ ನಮಗೆ ಬಲವಂತ ಮಾಡಿದ. ನೋಡಿಯೇ ಬೀಡೋಣವೆಂದು ಎಲ್ಲರೂ ಅಭಿಷೇಕ ಮಾಡಿದೆವು. ಲಿಂಗದಲ್ಲಿ ನಮ್ಮ ನಮ್ಮ ಪ್ರತಿಬಿಂಬ ನೋಡಿ ಕೃತಾರ್ಥರಾದೆವು!
ಅಲ್ಲಿದ್ದ ಒಬ್ಬ ಬಾಲಕಿಗೆ ನಾಲಿಗೆ ತೋರಿಸು ಎಂದ ಒಬ್ಬ ಅಜ್ಜ. ಕಾಳಿ ಅವತಾರ ಅವಳದು ನೋಡಿ ಎಂದ. ಅವಳು ನಾಲಿಗೆ ಹೊರಚಾಚಿ ತೋರಿಸಿದಳು. ನಾಲಿಗೆಯಲ್ಲಿ ಇಷ್ಟಗಲದ ಮಚ್ಚೆ ಇತ್ತು.

20160913_174813

dscn0993

dscn0980

dscn1013

dscn1018

ಪ್ರಾಚೀನ ಪಾಂಡವ ಗುಹೆ

ಅಲ್ಲಿಂದ ಹೊರಟು ಮುಂದೆ ಬರುವಾಗ ಪ್ರಾಚೀನ ಪಾಂಡವ ಗುಹೆ ನೋಡಿದೆವು. ಒಳಗೆ ಶಿವಲಿಂಗವಿದೆ. ಪಾಂಡವರು ಹೋಗದ ಸ್ಥಳವಿಲ್ಲ ಎನ್ನುವುದು ಖಾತ್ರಿಯಾಯಿತು!

 

dscn1040

dscn1026

ಬಾರ್ಕೋಟ್
ಬಸ್ಸು ತೆರಳುವ ಮಾರ್ಗ ಬಲು ಕಿರಿದಾಗಿದೆ. ಕೆಲವೆಡೆ ಎರಡು ವಾಹನಗಳು ಒಟ್ಟಿಗೆ ಚಲಿಸಲು ಸಾಧ್ಯವಿಲ್ಲ. ವಾಹನ ಸಂಚಾರ ಬಲು ವಿರಳ. ಹೀಗೆ ಪ್ರವಾಸಿಗಳಿಂದ ತುಂಬಿದ ಬಸ್, ಕಾರು ಒಂದೊಂದು ಹೋಗುವುದು ಬರುವುದು ಕಾಣುತ್ತದಷ್ಟೆ. ಸರ್ವಿಸ್ ಬಸ್ ಬಹಳ ಕಡಿಮೆ. ಎಲ್ಲೋ ಒಂದೊಂದು ಕಂಡಿತಷ್ಟೆ. ದಾರಿಯುದ್ದಕ್ಕೂ ಅಲಕನಂದಾ ನದಿ ಹರಿಯುವುದು ಕಾಣುತ್ತೇವೆ. ಕೆಳಗೆ ನದಿ, ಪಕ್ಕದಲ್ಲಿ ಪರ್ವತ ಸಾಲು ಕಣ್ಣಿಗೆ ರುದ್ರರಮಣೀಯವಾಗಿ ಕಾಣುತ್ತದೆ.  ಜನವಸತಿ ಇರುವಲ್ಲಿ ಭತ್ತ ಬೆಳೆದದ್ದು ಕಾಣುತ್ತದೆ. ಇಳಿಜಾರಿನಲ್ಲಿ ಎಷ್ಟು ಚೆನ್ನಾಗಿ ಭತ್ತದ ಕೃಷಿ ಮಾಡಿದ್ದಾರೆ. ನೋಡುವಾಗ ಖುಷಿ ಆಗುತ್ತದೆ.  ಚಾಲನಾವೇಗ ಹೆಚ್ಚುಕಡಿಮೆ ೩೦ರಿಂದ ೪೦ಕಿಮೀ ಮಾತ್ರ. ಇಂಥ ರಸ್ತೆಯಲ್ಲಿ ರಾತ್ರಿ ಚಾಲನೆ ಅಪಾಯಕಾರಿ. ಹಾಗಾಗಿ ಮಂಗಾರಾಮ ಸಂಜೆ ೭ ಗಂಟೆಗೇ ಬಾರ್ಕೋಟ್ ಎಂಬ ಊರಿನಲ್ಲಿ ವಸತಿಗೃಹವಿರುವ ಕಡೆ ಬಸ್ ನಿಲ್ಲಿಸಿದರು. ನಿಗದಿಯಾದಂತೆ ನಾವು ಆ ದಿನ ಅಲ್ಲಿಂದ ೪೪ ಕಿಮೀ ದೂರವಿರುವ ಜಾನಕಿಛಟ್ಟಿ ಸೇರಬೇಕಿತ್ತು. ಹರಿದ್ವಾರದಿಂದ ಜಾನಕಿಛಟ್ಟಿ ಸುಮಾರು ೨೪೦ಕಿಮೀ.

img_4539 img_4526

 

dscn8705

dscn8493 dscn8463

ವಸತಿಗೃಹದಲ್ಲಿ ಒಂದು ಕೋಣೆಯಲ್ಲಿ ೪-೫ ಮಂದಿ ಮಲಗುವಂಥ ವ್ಯವಸ್ಥೆ ಇತ್ತು. ನಮ್ಮ ಲಗೇಜು ಇಳಿಸಿಕೊಂಡು ಸ್ನಾನಾದಿ ಮುಗಿಸಿದೆವು.
ಹಾವಿನಮರಿ ಪ್ರಹಸನ
ಕೋಣೆ ಎದುರುಗಡೆ ಒಂದು ಮೂಲೆಯಲ್ಲಿ ಹಾವಿನ ಮರಿ ಇರುವುದು ಕಾಣಿಸಿತು. ಮಂದ ಬೆಳಕು. ಸರಿಯಾಗಿ ಕಾಣುತ್ತಿರಲಿಲ್ಲ. ಅದಕ್ಕೆ ಟಾರ್ಚ್ ಬಿಟ್ಟೆವು. ಅಲ್ಲಾಡಲಿಲ್ಲ. ಮುಟ್ಟಲು ಹೆದರಿಕೆ ಆಯಿತು. ನೈನಾ ವಸತಿಗೃಹದ ಯಜಮಾನಿ ಕೌಸಲ್ಯಳಿಗೆ ಹೇಳಿದೆವು. ಧೀರೆ ಕೌಸಲ್ಯ ಬರೀ ಕೈಯಲ್ಲಿ ಹಾವಿನಮರಿಯನ್ನು ಹಿಡಿದು ತನ್ನ ಮೊಮ್ಮಗಳ ಕೈಗೆ ಕೊಟ್ಟಳು! ಅದನ್ನು ನಾವು ಪೆಚ್ಚುಮುಖದಿಂದ ನೋಡಿದೆವು! ನಿಜವಾದ ಹಾವಿನಮರಿ ಅದು ಎಂದು ನಾವು ಬೇಸ್ತುಬಿದ್ದಿದ್ದೆವು.

20160913_192142

ಭೋಜನಕಾಲೇ
ಶಶಿಕಲಾ, ಸರಸ್ವತಿ ಕೈಕಾಲು ಮುಖ ತೊಳೆದು, ಅಡುಗೆ ಮನೆಗೆ ಹೋಗಿ ಇರುವ ಪಾತ್ರೆಯಲ್ಲೇ ಚಕಚಕನೆ ಅಕ್ಕಿ ತೊಳೆದು ಪಾತ್ರೆಗೆ ಸುರುವಿ ಒಲೆಮೇಲೆ ಇಟ್ಟೇಬಿಟ್ಟರು. ಒಳ್ಳೆಮೆಣಸು ಸಾರು ತಯಾರಿಸಿದರು. ಒಂದು ಗಂಟೆಯೊಳಗೆ ಊಟಕ್ಕೆ ಬರುವಂತೆ ಬುಲಾವ್. ಸಾಲಾಗಿ ತಟ್ಟೆ ಹಿಡಿದೆವು. ಶಶಿಕಲಾ ಸರಸ್ವತಿ ಅವರ ಕೈ ಬಲು ದೊಡ್ಡದು. ಅನ್ನ ಹಾಕುತ್ತ, ಮತ್ತೆ ಮತ್ತೆ ಹಾಕಿಸಿಕೊಂಡು ಹೊಟ್ಟೆತುಂಬ ಊಟ ಮಾಡ್ರಪ್ಪ ಎಂದರು. ಅನ್ನ ಸಾರು ಚಪ್ಪರಿಸಿದೆವು.
ಜಾನಕಿಛಟ್ಟಿ
ಬೆಳಗ್ಗೆ (೧೪-೯-೧೬) ೪.೧೫ಕ್ಕೆ ಎದ್ದು ತಯಾರಾದೆವು. ೫.೧೫ಕ್ಕೆ ವಸತಿಗೃಹದ ಲೆಕ್ಕ ಚುಕ್ತಾಮಾಡಿ ಬಸ್ ಹತ್ತಿದೆವು. ಬಹುಶಃ ಎರಡು ಸಾವಿರ ರೂ. ಆದದ್ದೆಂದು ಕಾಣುತ್ತದೆ. ಜಾನಕಿಛಟ್ಟಿಗೆ ಹೋಗುವ ದಾರಿಯಲ್ಲಿ ನಸುಕಿನಲ್ಲೇ ಕುದುರೆಗಳು ಸಾಗುವುದು ಕಂಡಿತು. ಯಮುನೋತ್ರಿಗೆ ಭಕ್ತಾದಿಗಳನ್ನು ಕರೆದೊಯ್ಯಲು ಎಷ್ಟು ದೂರದಿಂದ ಪ್ರತಿದಿನ ಬೆಳಗ್ಗೆ ಸಂಜೆ ಹೀಗೆ ನಡೆಸಿಕೊಂಡು ಬರುತ್ತಾರಲ್ಲ, ಅವರೊಂದಿಗೆ ಕುದುರೆವಾಲಾಗಳು ನಡೆಯುತ್ತಾರಲ್ಲ. ಎಂಥ ಶ್ರಮಜೀವಿಗಳು ಎನಿಸಿತು. ಬೆಳಗ್ಗೆ ಏಳುಗಂಟೆಗೆ ನಾವು ಜಾನಕಿಛಟ್ಟಿ ತಲಪಿದೆವು. ಹಿಂದಿನದಿನ ಮಾಡಿಟ್ಟಿದ್ದ ಅನ್ನವನ್ನು ಬೆಳಗ್ಗೆ ನಾಲ್ಕಕ್ಕೇ ಎದ್ದು ಚಿತ್ರಾನ್ನ ಮಾಡಿ ತಂದಿದ್ದರು. ಅವರ ಈ ಬದ್ಧತೆಗೆ ನಮೋನಮಃ. ಅದನ್ನು ಹಂಚಿಕೊಂಡು ಬಸ್ಸಲ್ಲಿ ತಿಂದೆವು.

20160915_063518

ಯಮುನೋತ್ರಿಯೆಡೆಗೆ ನಡಿಗೆ
ಯಮುನೋತ್ರಿ ದೇವಾಲಯಕ್ಕೆ ಜಾನಕಿಛಟ್ಟಿಯಿಂದ ೫ಕಿಮೀ. ನಡೆದೇ ಹೋಗಬೇಕು. ನಡೆಯಲಾರದವರಿಗೆ ಕುದುರೆ, ಡೋಲಿ ವ್ಯವಸ್ಥೆ ಇದೆ. ಒಬ್ಬರೇ ಹೊರುವಂಥ ಬುಟ್ಟಿ, ಹಾಗೂ ಮಧ್ಯೆ ಯಾತ್ರಿಕ ಕೂತು ಹಿಂದೆ ಎರಡು, ಮುಂದೆ ಎರಡು ಜನ ಹೀಗೆ ನಾಲ್ಕು ಜನ ಹೊರುವಂಥ ಡೋಲಿಯೂ ಇದೆ. ನಾಲ್ಕು ಜನ ಹೊರುವಂಥದಕ್ಕೆ ರೂ. ೩೫೦೦ ದರ ನಿಗದಿಗೊಳಿಸಿದ್ದಾರೆ. ಕುದುರೆಗೆ ಸಾವಿರ ರೂ. ಡೋಲಿಗೆ ೧೨೦೦ ರೂ. ಹೀಗೆ ತರಾವರಿ ದರ ಇದೆ. ದರ ನಿಗದಿಗೊಳಿಸಲು ಬಲು ಚರ್ಚೆ ನಡೆಸಬೇಕಾಗುತ್ತದೆ. ಸುನಂದ, ಅನ್ನಪೂರ್ಣ ಕುದುರೆ ಏರಿದರು.
ನಾವೆಲ್ಲ ನಡಿಗೆ ಪ್ರಾರಂಭಿಸಿದೆವು. ಬಯೋಮೆಟ್ರಿಕ್ ಕಾರ್ಡ್ ತೋರಿಸಿ ಎಂಟ್ರಿ ಮಾಡಿಸಿದೆವು. ಕುದುರೆವಾಲಾಗಳು ನಮ್ಮ ಹಿಂದೆಮುಂದೆ ಅಷ್ಟು ದೂರ ಕುದುರೆ ಹತ್ತಿ ಎಂದು ಗೋಗರೆಯುತ್ತ ಬಂದರು. ಬೇಡ ಅಂದರೂ ಕೇಳಲೊಲ್ಲರು. ರೂ. ೨೦೦ ಕೊಡಿ ಸಾಕು. ಬನ್ನಿ ಹತ್ತಿ ಎಂಬ ಗೋಗರೆತ ನೋಡಿ ತುಂಬ ಸಂಕಟವಾಯಿತು. ಎಷ್ಟು ದೂರ ಬಂದ ಪಾಪ. ರೂ. ೫೦ ಅವನಿಗೆ ಕೊಡುವುದು. ಹಿಂದೆ ಹೋಗಲಿ ಎಂದು ನಾನೂ ಸವಿತಳೂ ತೀರ್ಮಾನಿಸಿ ದುಡ್ಡು ಕೊಡಲು ಹೋದರೆ ನಿರಾಕರಿಸಿದ. ಕುದುರೆ ಹತ್ತಿದರೆ ಮಾತ್ರ ದುಡ್ಡು ಎಂದ. ಬಲವಂತವಾಗಿ ರೂ. ೫೦ ಅವನ ಜೇಬಿಗೆ ತುರುಕಿದೆವು. ಹಿಂದೆ ಹೋಗಪ್ಪ. ನಮಗೆ ಕುದುರೆ ಬೇಡ ಎಂದು ವಿನಂತಿಸಿಕೊಂಡೆವು. ಮತ್ತೆ ನಮಗೆ ತೊಂದರೆ ಕೊಡದೆ ಎರಡು ಕುದುರೆಯೊಂದಿಗೆ ಹಿಂದಕ್ಕೇ ಹೋದನವ. ಹೊಟ್ಟೆಪಾಡಿಗಾಗಿ ಎಷ್ಟು ಕಷ್ಟಪಡಬೇಕು ಇವರೆಲ್ಲ. ಯಾತ್ರಾರ್ಥಿಗಳು ಬಂದು ಕುದುರೆ ಏರಿದರೆ ಮಾತ್ರ ಇವರ ಹೊಟ್ಟೆ ತುಂಬುತ್ತದೆ.

dscn1060

dscn1102

dscn1066

ನಾವು ೭.೪೫ಕ್ಕೆ ನಡೆಯಲು ಪ್ರಾರಂಭಿಸಿದೆವು. ರೂ. ೨೦ ಕೊಟ್ಟು ದೊಣ್ಣೆ ಪಡೆದೆವು. ಕಾಲುದಾರಿ ಚೆನ್ನಾಗಿ ಮಾಡಿದ್ದಾರೆ. ಕಲ್ಲು, ಸಿಮೆಂಟು ಹಾಕಿ ತಕ್ಕಮಟ್ಟಿಗೆ ಅಗಲವಾಗಿದೆ. ಕುದುರೆ, ಡೋಲಿಯವರು ಎದುರಾದರೆ ಸರಿದು ಜಾಗ ಕೊಡಬೇಕಾಗುತ್ತದೆ. ಸುತ್ತ ನಾಲ್ಕು ಕಡೆ ಪರ್ವತ ಸಾಲು. ಮಧ್ಯೆ ನದಿ ಹರಿಯುತ್ತದೆ. ಮರಗಳಿಂದ ಕೂಡಿದ ಹಸಿರು ಪರ್ವತಗಳನ್ನು ನೋಡುತ್ತ ನಡೆಯುವುದೇ ರೋಮಾಂಚನ ಅನುಭವ. ಎತ್ತ ನೋಡಿದರೂ ಹಸುರು ಕಣ್ಣಿಗೆ ತಂಪು ನೀಡುತ್ತದೆ. ಪರ್ವತಗಳಡೆಯಿಂದ ನೀರಿನ ಝರಿ ಹರಿದು ನದಿ ಸೇರುವ ವಯ್ಯಾರ ಇವೆಲ್ಲಾ ಅದ್ಭುತ ದೃಶ್ಯಗಳು. ನೋಡಿಯೇ ಅನುಭವಿಸಬೇಕು. ದಾರಿಯಲ್ಲಿ ಗುಡ್ಡದಿಂದ ಹರಿದು ಬರುವ ನೀರನ್ನು ಕುಡಿದು ಬಾಯಾರಿಕೆ ನೀಗಿಸಿಕೊಂಡೆವು. ನೀರು ಚೀಲದಲ್ಲಿ ಒಯ್ಯುವ ಅಗತ್ಯವೇ ಇಲ್ಲ. ಅಲ್ಲಲ್ಲಿ ಇಂಥ ನೈಸರ್ಗಿಕ ಸಿಹಿನೀರು ಲಭ್ಯ. ಇಂಥ ನೀರು ಕುಡಿದರೆ ತಿನ್ನಲು ಬೇರೇನು ಬೇಕೆನಿಸುವುದಿಲ್ಲ.
ಡೋಲಿ ಹೊರುವವರನ್ನು ನೋಡಿದಾಗ ಮನಸ್ಸಿಗೆ ಕಷ್ಟವಾಗುತ್ತದೆ. ಅಂಥ ತೂಕದ ವ್ಯಕ್ತಿಗಳನ್ನು ಹೊತ್ತು ಬೆಟ್ಟ ಏರಬೇಕಲ್ಲ. ಡೋಲಿಯಲ್ಲಿ ಕೂತವರು ಆರಾಮವಾಗಿ ಮೊಬೈಲಲ್ಲಿ ಮಾತಾಡುತ್ತಲೋ, ಇಲ್ಲವೆ ನಿದ್ರೆ ಮಾಡುತ್ತಲೊ ಇರುವುದನ್ನು ಕಾಣುವಾಗಲಂತೂ ಬೇಸರವಾಗುತ್ತದೆ. ಹೊಟ್ಟೆಪಾಡಿಗಾಗಿ ಇವರು ಎಷ್ಟು ಶ್ರಮದ ಕೆಲಸ ನಿರ್ವಹಿಸುತ್ತಾರಲ್ಲ. ಇದೂ ಒಂದು ಸೇವೆಯೇ ಸರಿ ಎಂದು ತೀರ್ಮಾನಿಸಬೇಕಾಗುತ್ತದೆ.

dscn1088

dscn1068

img_4500

dscn1058

img_4621

dscn1148

dscn1142

img_4698

ಸಮುದ್ರಮಟ್ಟದಿಂದ ೨೬೦೦ಮೀ ಎತ್ತರದಲ್ಲಿದೆ  ಯಮುನೋತ್ರಿ

ಬಿಸಿನೀರಿನ ಹೊಂಡ
ನಾವು ಕೆಲವಾರು ಮಂದಿ ೧೧.೧೫ಕ್ಕೆ ದೇವಾಲಯ ತಲಪಿದೆವು. ಅಲ್ಲಿ ಬಿಸಿನೀರಿನ ಹೊಂಡದಲ್ಲಿ ಸ್ನಾನ ಮಾಡಿದೆವು. ಐದೆ ನಿಮಿಷ ಇರಬೇಕು ನೀರಲ್ಲಿ. ಹೆಚ್ಚು ಹೊತ್ತು ಇದ್ದರೆ ತಲೆಸುತ್ತು ಬರುತ್ತದೆ. ಸಲ್ಫರ್ ಇರುವ ನೀರಲ್ಲಿ ಹೆಚ್ಚು ಹೊತ್ತು ಇರಬಾರದು. ಕೆಲವರೆಲ್ಲ ಆಹಾ ಎಂದು ನೀರಲ್ಲೇ ಇದ್ದವರು ಮೇಲೆ ಬಂದು ತಲೆ ಸುತ್ತುತ್ತೆ ಎನ್ನುತ್ತಿದ್ದರು. ಗಂಡಸರಿಗೆ ಹೆಂಗಸರಿಗೆ ಸ್ನಾನಕ್ಕೆ ಪ್ರತ್ಯೇಕ ಬಿಸಿನೀರಿನ ಹೊಂಡಗಳಿವೆ.
ದೇವಾಲಯಕ್ಕೆ ಹೋಗಿ ದೇವರ ದರ್ಶನ ಮಾಡಿದೆವು. ದೇವಾಲಾಯದ ಇನ್ನೊಂದು ಪಾರ್ಶ್ವದಲ್ಲಿರುವ ಸೂರ್ಯ ಕುಂಡ ಕೂಡ ಬಿಸಿ ನೀರಿನ ಬುಗ್ಗೆ. ಇಲ್ಲಿ ಅಕ್ಕಿಯನ್ನು ಒಂದು ಮಕಮಲ್ಲಿನ ಬಟ್ಟೆಯಲ್ಲಿ ಹಾಕಿ ಆ ಬಟ್ಟೆಯನ್ನು ಕುದಿಯುತ್ತಿರುವ ಬಿಸಿನೀರಿನ ಬುಗ್ಗೆಯಲ್ಲಿ ಐದು ನಿಮಿಷ ಅದ್ದಿ ಇಟ್ಟರೆ ಅದು ಬೇಯುತ್ತದೆ. ಅದನ್ನು ದೇವಿಗೆ ನೈವೇದ್ಯ ಮಾಡಿ ಪ್ರಾಸಾದವೆಂದು ಪರಿಗಣಿಸಲಾಗುತ್ತದೆ. ನಾವೂ ಕೂಡ ಅಕ್ಕಿಯನ್ನು ಆ ನೀರಲ್ಲಿ ಅದ್ದಿದೆವು. ಅಲ್ಲಿಂದ ಹೊಳೆಗೆ ಹೋಗಿ ನೀರು ಕುಡಿದೆವು. ನೀರು ತಣ್ಣಗೆ ಕೊರೆಯುತ್ತಿತ್ತು. ನೀರು ಅತ್ಯಂತ ಶುಭ್ರವಾಗಿದ್ದು ಶುಚಿಯಾಗಿತ್ತು. ದೇವಾಲಯದಲ್ಲಿ ಸ್ವಲ್ಪ ವಿಶ್ರಾಂತಿ ಪಡೆದೆವು. ದೇವಾಲಯದ ಬಳಿ ಮೇಲಕ್ಕೆ ಕಾಲಂದಿಪರ್ವತ ಕಾಣುತ್ತದೆ.

img_4678

ಮರಳಿ ಜಾನಕಿಛಟ್ಟಿಯೆಡೆಗೆ
ದೇವಾಲಯದಿಂದ ಹೊರಟು ಹೊರಗೆ ಬಂದು ಅಲ್ಲೇ ಹತ್ತಿರವಿದ್ದ ಹೋಟೇಲಲ್ಲಿ ಪರೋಟ ತಿಂದೆವು. ಒಂದು ಪರೋಟ ತಿಂದರೆ ಸಾಕು. ಹೊಟ್ಟೆ ತುಂಬುತ್ತದೆ. ಅಷ್ಟು ದೊಡ್ದದಿರುತ್ತದೆ. ರೂ. ೨೦ ಕ್ಕೆ ಒಂದು ಪರೋಟ. ಶ್ರದ್ಧೆಯಿಂದ ಚೆನ್ಣಾಗಿ ಮಾಡಿಕೊಡುತ್ತಾರೆ. ಚಪಾತಿ, ಪರೋಟ ಎಲ್ಲ ದುಬಾರಿಯಲ್ಲ. ಮರಳಿ ಜಾನಕಿಛಟ್ಟಿಯೆಡೆಗೆ ಹೆಜ್ಜೆ ಹಾಕಿದೆವು. ನಾವು ನಾಲ್ಕೈದು ಮಂದಿ ಮಾತಾಡುತ್ತಲೇ ನಿಧಾನಕ್ಕೆ ನಡೆಯುತ್ತ, ಪ್ರಕೃತಿಯ ಸೌಂದರ್ಯವನ್ನು ಕಣ್ಣಲ್ಲಿ ತುಂಬಿಕೊಳ್ಳುತ್ತ, ಕ್ಯಾಮರಾದಲ್ಲೂ ಕ್ಲಿಕ್ಕಿಸುತ್ತ ಮುಂದುವರಿದೆವು. ೧.೧೦ಕ್ಕೆ ನಡಿಗೆ ಪ್ರಾರಂಭಿಸಿ ೩.೧೦ಕ್ಕೆ ಜಾನಕಿಛಟ್ಟಿ ತಲಪಿದೆವು. ದೊಣ್ಣೆ ತೆಗೆದುಕೊಂಡ ಅಂಗಡಿಗೇ ವಾಪಾಸು ದೊಣ್ಣೆ ಕೊಟ್ಟರೆ ರೂ. ಹತ್ತು ಮರಳಿ ಕೊಡುತ್ತಾರೆ. ಬಾಕಿದ್ದವರೆಲ್ಲರೂ ಬಂದು ಸೇರುವಾಗ ೪.೩೦ ಆಗಿತ್ತು. ಒಂದಿಬ್ಬರು ದಾರಿ ತಪ್ಪಿ ಸ್ವಲ್ಪಕಾಲ ಗೊಂದಲ ಉಂಟಾಯಿತು.

dscn1153

ಬಸ್ಸಲ್ಲಿ ಬರುವಾಗ ಒಂದು ಗಂಟೆ ಅಡುಗೆ ಬಗ್ಗೆಯೇ ಚರ್ಚೆ. ಇವತ್ತು ರಾತ್ರೆ ಅಡುಗೆ ಮಾಡುವುದು ಗಂಡಸರು. ಹೆಂಗಸರು ಅಡುಗೆ ಕೋಣೆಗೇ ಕಾಲಿಡಬಾರದು. ಅಡುಗೆ ಮಾಡುವುದೇನೂ ಕಷ್ಟವಲ್ಲ, ಬೆಂಡೆಕಾಯಿ ದಮ್ರೋಟು, ಆಲೂಗಡ್ಡೆ ಪಾಯಸ ಎಲ್ಲ ಮಾಡೋಣ. ನೋಡುತ್ತ ಇರಿ ಎಂಥ ಅಡುಗೆ ಮಾಡುತ್ತೇವೆ ನಾವು. ಎಂದೆಲ್ಲ ಭಾರೀ ಮಾತುಕತೆಯಾಗುತ್ತಲೇ ಇತ್ತು. ಕೇಳುತ್ತಿದ್ದರೆ ನಿಜಕ್ಕೂ ಇವರು ಅಡುಗೆ ಮಾಡುತ್ತಾರ? ಎಂದು ಅನಿಸುವಂತಿತ್ತು!
ಮರಳಿ ಬಾರ್ಕೋಟ್ (ಬಾಡ್ಕೋಟ್)
ಸಂಜೆ ೬.೩೦ ಗಂಟೆಗೆ ಕೌಸಲ್ಯ ಅವರ ನೈನಾ ವಸತಿಗೃಹಕ್ಕೇ ತಲಪಿದೆವು. ನಮ್ಮ ನಮ್ಮ ಕೋಣೆಗೆ ಸೇರಿಕೊಂಡು ಸ್ನಾನಾದಿ ಮುಗಿಸಿದೆವು. ಹಿಂದಿಯಲ್ಲಿ ಡಿ ಅಕ್ಷರ ಬಂದದ್ದು ಆಂಗ್ಲದಲ್ಲಾಗುವಾಗ ರ ಅಕ್ಷರವಾಗುತ್ತದೆ. ಹಿಂದಿಯಲ್ಲಿ ಬಾಡ್ಕೋಟ್ ಎಂದು ಬರೆದಿದ್ದರೆ ಆಂಗ್ಲದಲ್ಲಿ ಬಾರ್ಕೋಟ್ ಎಂದಿರುತ್ತದೆ.

ವಿಠಲಸೋಮಪ್ರಸಾದ ಪಾಕ
ವಿಠಲರಾಜು, ಸೋಮಶೇಖರ್, ರಂಗಪ್ರಸಾದ್ ಮೂರೂ ಜನ ಅಡುಗೆಮನೆಯ ಪಾರುಪತ್ಯ ವಹಿಸಿಕೊಂಡರು. ‘ನಾನಂತೂ ಅಡುಗೆ ಕೋಣೆಗೆ ಬರಲ್ಲ. ನನಗೆ ಏನೂ ಮಾಡಲು ಬರುವುದಿಲ್ಲ’ ಎಂದು ರಂಗನಾಥ್ ಮೊದಲೆ ಹೇಳಿದ್ದರು. ಹಾಗಾಗಿ ಅವರನ್ನು ಅಡುಗೆ ಕೋಣೆಯ ಹೊರಗೆಯೇ ಹೆಂಗಸರು ಯಾರೂ ಒಳಗೆ ಬರದಂತೆ ಕಾವಲು ಕೂರಿಸಿದರು! ಇವರಲ್ಲಿ ಮೌನವಾಗಿ ಕೆಲಸ ಮಾಡುವವರು ರಂಗಪ್ರಸಾದ್. ಮೌನದಿಂದಲೆ ಆಲೂಗಡ್ಡೆ ದೊಡ್ಡಮೆಣಸು, ಟೊಮೆಟೊ ಚಕಚಕ ಹೆಚ್ಚಿದರು. ನೀರುಳ್ಳಿ ಸಿಪ್ಪೆ ತೆಗೆಯಲು ವಿಠಲರಾಜು, ಪೂರ್ಣಿಮ ಸೇರಿದರು. ನೀರುಳ್ಳಿ ಹೆಚ್ಚಲು ಸೋಮಶೇಖರ್ ಚೂರಿ ಹಿಡಿದರು. ಅದನ್ನು ನೋಡಿದ ಅವರ ಪತ್ನಿ ಸರಸ್ವತಿ, ‘ಆಯಿತು ಕತೆ, ಇವತ್ತಿಗೆ ಊಟ ಸಿಗುತ್ತೆ ಎಂಬ ಗ್ಯಾರಂಟಿ ಇಲ್ಲ. ಇವರು ನೀರುಳ್ಳಿ ಹೆಚ್ಚಿ, ಅಡುಗೆ ಮಾಡಿದಾಂಗೆ’ ಎಂದು ಹೇಳಿಕೊಂಡರು. ಆಗ ಅವರ ಸೋದರ ಸೊಸೆ ಸುನಂದ ನೋಡಲಾರದೆ ಕೊಡಿ ಮಾವ ಇಲ್ಲಿ ಚೂರಿ ಎಂದು ನೀರುಳ್ಳಿ ಹೆಚ್ಚಿ ಕೊಟ್ಟರು. ಸೋಮಶೇಖರ್ ಹಾಗೆ ಹೆಚ್ಚು, ಹೀಗೆ ಹೆಚ್ಚು ಎಂದು ಸಲಹೆ ಸೂಚನೆ ಕೊಟ್ಟರು! ಸೋಮಶೇಖರ್ ಅಕ್ಕಿ ತೊಳೆದರು. ಗಂಡಸರ ಅವಸ್ಥೆ ನೋಡಲಾರದೆ ಸರಸ್ವತಿ ಸದ್ದಿಲ್ಲದೆ ಬೇಳೆ ತೊಳೆದು ಬೇಯಲು ಕುಕ್ಕರಿನಲ್ಲಿ ಒಲೆಮೇಲಿಟ್ಟರು. ಅಂತೂ ಇಂತೂ ೮.೩೦ಗೆ ಊಟಕ್ಕೆ ಕರೆ ಬಂತು. ವಿಠಲಸೋಮಪ್ರಸಾದ ಪಾಕ ತಯಾರಾಗಿತ್ತು!
ಬೆಂಡೆಪಲ್ಯ, ಹಿಮಾಲಯದಲ್ಲಿ ಸಿಕ್ಕುವ ವಿಶೇಷ ಸೊಪ್ಪಿನ ಪಲ್ಯ, ಅನ್ನ, ಸಾಂಬಾರು ತಯಾರಿಸಿದ್ದರು. ಇದು ಸಾಂಬಾರು ಪುಡಿಯಾ? ಅರಸಿನ ಪುಡಿ ಎಲ್ಲಿದೆ? ಇದು ಅಚ್ಚಕಾರದ ಪುಡಿಯಾ? ಎಂದು ಕೇಳಲು ಮೂರು ನಾಲ್ಕು ಸಲ ಸೋಮಶೇಖರ್ ಅವರ ಪತ್ನಿ ಬಳಿ ಬಂದಿದ್ದರು! (ಸೋಮಶೇಖರ್ ಅವರಿಗೆ ಮನೆಯಲ್ಲಿ ಒಂದು ಚಹಾ ಮಾಡಲೂ ಬರುವುದಿಲ್ಲವಂತೆ! ಇದು ಅವರ ಪತ್ನಿ ಹೇಳಿದ ಗುಟ್ಟು!) ಸಾಂಬಾರು, ಪಲ್ಯ ಚೆನ್ನಾಗಿತ್ತು. ಸರೋಜ ಅವರು ಅಡುಗೆ ಕೋಣೆಗೆ ಹೋಗಿ ಸಾಂಬಾರು ರುಚಿ ನೋಡಿ, ಹುಳಿ, ಉಪ್ಪು, ಪುಡಿ ಸೇರಿಸಿ ಪಾಕ ಹದ ಮಾಡಿದ್ದರಂತೆ. ಮಾತುಕೊಟ್ಟಂತೆ ಗಂಡಸರು (ಹೆಂಗಸರ ಹಸ್ತಕ್ಷೇಪವೂ ಬೆರೆತು) ಅಡುಗೆ ಮಾಡಿ ಬಡಿಸಿದ್ದರು.

photo-collage-maker_li2uuw

ಸರಸರ ಸರೋಜ
ಸರೋಜ ಅವರು ಬಹಳ ಚುರುಕಿನ ಮಹಿಳೆ. ಎಲ್ಲೆ ಹೋದರೂ ಏನಾದರೂ ಸಾಧಿಸುವ ಧೀರೆ. ಆ ದಿನದ ಪ್ರಯಾಣ ಮುಗಿಸಿ ನಾವು ವಸತಿಗೃಹಕ್ಕೆ ಬಂದ ಕೂಡಲೇ ಸರಸರ ಅಡುಗೆ ಕೋಣೆಗೆ ಹೋಗಿ ನಿಂಬೆಚಹಾ, ಕಾಫಿ, ಹಾಲು ಹಾಕಿದ ಚಹಾ ತಯಾರಿಸಿ ಎಲ್ಲರಿಗೂ ಹಂಚುತ್ತಿದ್ದರು. ಆ ದಿನದ ಅಡುಗೆಗೆ ಏನು ತರಕಾರಿ ಸಾಮಾನು ಬೇಕೋ ಅಂಗಡಿ ಮುಂದೆ ಬಸ್ ನಿಲ್ಲಿಸಿ ಚಕಚಕ ಇಳಿದು ಚೌಕಾಸಿ ವ್ಯಾಪಾರ ಮುಗಿಸಿ ಬಸ್ ಹತ್ತುತ್ತಿದ್ದರು. ಎಲ್ಲಿ ಬಸ್ ಇಳಿದರೂ ಒಂದುಕ್ಷಣ ಮಾಯವಾಗಿ, ಮತ್ತೆ ಪ್ರತ್ಯಕ್ಷವಾದಾಗ ಆ ಊರಿನ ಸ್ಪೆಷಲ್ ತಿಂಡಿಯನ್ನು ಕೊಂಡು ಎಲ್ಲರಿಗೂ ಹಂಚುತ್ತಿದ್ದರು. ಅದಕ್ಕೆ ಅವರಿಗೆ ಸರಸರ ಸರೋಜ ಎಂಬ ಹೆಸರಿಟ್ಟಿದ್ದೆ.

IMG_4779.jpg
ಪಾತ್ರೆಪಗಡ ಗೋಪಕ್ಕ, ಒತ್ತರೆ ಶೋಭಕ್ಕ
ಅಡುಗೆ ಮಾಡಿದ ಮೇಲೆ ಪಾತ್ರೆಗಳನ್ನು ತೊಳೆಯಲೇಬೇಕಲ್ಲ. ಆ ಕೆಲಸವನ್ನು ಗೋಪಕ್ಕ ಬಹಳ ಖುಷಿಯಿಂದ ಮಾಡುತ್ತಿದ್ದರು. ಅವರಿಗೆ ಪಾತ್ರೆ ತೊಳೆಯುವುದೆಂದರೆ ಬಲು ಇಷ್ಟದ ಕೆಲಸವಂತೆ. ಅಡುಗೆ ಕೋಣೆ, ಒಲೆಯನ್ನು ಚೊಕ್ಕವಾಗಿ ಒರೆಸುವ ಕೆಲಸ ಶೋಭಕ್ಕ ಬಹಳ ಅಚ್ಚುಕಟ್ಟಾಗಿ ಶ್ರದ್ಧೆಯಿಂದ ಮಾಡುತ್ತಿದ್ದರು.

ಮುಂದುವರಿಯುವುದು

Read Full Post »

Older Posts »