ಶ್ರೀಗಂಧದ ಮರದಲ್ಲಿ ಹೂವಾಗಿ ಕಾಯಿ ಆಗುವ ಹಂತದಲ್ಲಿ ಪಕ್ಷಿಗಳ ಕಲರವ ಕೇಳಿಸುತ್ತದೆ. ಎಷ್ಟೊಂದು ಪಕ್ಷಿಗಳಿಗೆ ಆ ಮರ ಆಹಾರ ಒದಗಿಸುತ್ತದೆ. ಅದರ ಹಣ್ಣುಗಳನ್ನು ತಿನ್ನಲು ಪಕ್ಷಿಗಳು ಬರುತ್ತಲೇ ಇರುತ್ತವೆ. ಆಗ ಅವುಗಳ ಸಂಭ್ರಮ ನೋಡಬೇಕು. ಮಂಗಟ್ಟೆ ಹಕ್ಕಿ, ಬುಲ್ ಬುಲ್ ಹಕ್ಕಿ, ಕಾಗೆ, ಕೆಂಬೂತ, ಕೋಗಿಲೆ, ಇನ್ನಿತರ ಸಣ್ಣ ಸಣ್ಣ ಹಕ್ಕಿಗಳು ಆ ಮರದ ಹಣ್ಣು ತಿನ್ನುತ್ತವೆ. ಅವುಗಳಲ್ಲೆ ಜಗಳ ಏರ್ಪಡುತ್ತವೆ. ಒಂದು ಹಕ್ಕಿ ಇನ್ನೊಂದು ಹಕ್ಕಿಯನ್ನು ಓಡಿಸಲು ಮುಂದಾಗುತ್ತವೆ.
ಅಡುಗೆ ಮನೆಯಲ್ಲಿ ನಾನು ಕೆಲಸದಲ್ಲಿ ನಿರತಳಾಗಿದ್ದಾಗ ಹಕ್ಕಿಗಳ ಕೂಗು ಕೇಳಿದ ಕೂಡಲೇ ಓ ಹಕ್ಕಿಗಳು ನನ್ನನ್ನು ಕರೆಯುತ್ತಿವೆ ಎಂದು ಮಾಡುವ ಕೆಲಸವನ್ನು ಅರ್ಧಕ್ಕೇ ಬಿಟ್ಟು ಹೊರಗೆ ಓಡಿ ಹಕ್ಕಿಗಳನ್ನು ನೋಡುತ್ತ ನಿಲ್ಲುವುದು ನನಗೆ ಬಲು ಖುಷಿಯ ವಿಚಾರ. ರೆಂಬೆಕೊಂಬೆಗಳಲ್ಲಿ ಹಾರುತ್ತ ಅವು ಹಣ್ಣುಗಳನ್ನು ತಿನ್ನುವ ಪರಿ ನೋಡುವುದೇ ಆನಂದ. ಹೀಗೆ ಹಕ್ಕಿಗಳ ಸಂತಸದಲ್ಲಿ ನಾನೂ ಭಾಗಿಯಾಗುತ್ತಿರಲು ದೋಸೆ ಕರಟಿ, ಹಾಲು ಉಕ್ಕಿ ಸೀದ ಪರಿಮಳ ಮೂಗಿಗೆ ಬಡಿಯುವಾಗಲೇ ಎಚ್ಚರ ಒಲೆಮೇಲೆ ಕಾವಲಿ, ಹಾಲು ಕಾಸಲು ಇಟ್ಟಿರುವೆನೆಂದು! ಹಕ್ಕಿ ಕೂಗಿದಾಗಲೆಲ್ಲ ನೋಡು ಬಾ ಹೊರಗೆ ಎಂದು ಅವು ನನ್ನನ್ನೇ ಕರೆಯುವುದು ಎಂದು ತಿಳಿದು ಹೋಗಿ ನೋಡದೆ ಇದ್ದರೆ ನನ್ನ ಮನಸ್ಸು ಕೇಳುವುದೇ ಇಲ್ಲ. ಹಕ್ಕಿಗೂ ನನಗೂ ಏನೋ ಹಿಂದಿನ ಜನುಮದ ನಂಟು ಇರಬಹುದೆ ಎಂಬ ಗುಮಾನಿ ನನಗಿದೆ!
ಹೀಗಿರಲಾಗಿ ಒಂದು ಬೆಳಗ್ಗೆ ಎಂದಿನಂತೆ ಹಕ್ಕಿ ಸ್ವರ ಕೇಳಿಸಿತು. ಆದರೆ ಎಂದಿನ ಮಧುರ ಸ್ವರ ಇರದೆ ಬೇರೆ ತರಹ ಇತ್ತು. ಹೊರಗೆ ಹೋಗಿ ನೋಡಿದರೆ ಆಘಾತ ಕಾದಿತ್ತು. ಗಂಧದ ಮರ ಮನೆ ಗೋಡೆಗೆ ವಾಲಿ ನಿಂತಿದೆ. ಗಂಧದ ಬುಡ ಕಡಿದು, ಒಳಗೆ ಆಳವಾಗಿ ತೋಡಿ ಬೇರು ಕಿತ್ತು ಹೋಗಿದ್ದಾರೆ ಕಳ್ಳರು.
ನೀಚ ಮಾನವ, ಇನ್ನೊಂದು ತಿಂಗಳು ಕಳೆದಿದ್ದರೆ ನಮಗೆ ಹೊಟ್ಟೆತುಂಬ ಊಟ ಸಿಗುತಿತ್ತಲ್ಲ. ನಾವು ಆಹಾರಕ್ಕಾಗಿ ಈ ಮರವನ್ನೇ ಅವಲಂಬಿಸಿದ್ದೆವಲ್ಲ. ಈಗ ಇದನ್ನು ಕಡಿದು ಹಾಕಿದ್ದೀರಲ್ಲ. ನಿಮಗೆ ಕಡಿಯಲು ಮನಸ್ಸಾದರೂ ಹೇಗೆ ಬಂತು? ನಾವು ಹಣ್ಣು ತಿಂದು ನಮ್ಮ ಮಕ್ಕಳಿಗೂ ತಿನ್ನಿಸುತ್ತಿದ್ದೆವಲ್ಲ. ಇನ್ನು ಬೇರೆ ಮರ ಹುಡುಕಬೇಕು ನಾವು. ಈ ಮನುಜರ ಮಧ್ಯೆ ಹಣ್ಣಿರುವ ಮರ ಹುಡುಕುವುದೇ ಕಷ್ಟ. ಮರಗಳನ್ನೆಲ್ಲ ಕಡಿದು ಹಾಕುತ್ತಾರೆ. ಹಣ್ಣು ಬಿಡುವ ಗಿಡವನ್ನಂತೂ ನೆಡುವುದೇ ಇಲ್ಲ. ಎಂದು ಹಕ್ಕಿಗಳು ಆರ್ತನಾದದಿಂದ ಮನುಷ್ಯರಿಗೆ ಹೇಳುತ್ತಿರುವಂತೆ ಭಾಸವಾಯಿತು. ಕೋಗಿಲೆ ಪಕ್ಕದ ಮರದಲ್ಲಿ ಕುಳಿತು ನಮಗೆ ಆಹಾರ ಕೊಡುವ ಮರದ ಸ್ಥಿತಿ ಹೀಗಾಗಿದೆಯಲ್ಲ ಎಂದು ವಿಕಾರವಾಗಿ ಅಳುತ್ತಿತ್ತು.
ಛೇ! ಈ ಹಕ್ಕಿಗಳಿಗಾದ ನಷ್ಟವನ್ನು ತುಂಬುವವರಾರು? ಹೇ ನಿರ್ದಯೀ ಮಾನವ ನಿನ್ನಷ್ಟು ಸ್ವಾರ್ಥ ತುಂಬಿದ ಪ್ರಾಣಿ ಪ್ರಪಂಚದಲ್ಲಿ ಬೇರೊಂದಿಲ್ಲ ಎಂದು ಹೇಳದೆ ವಿಧಿ ಇಲ್ಲ.
ಮೆಟ್ರೋ ಪ್ರಜಾವಾಣಿಯಲ್ಲಿ ಪ್ರಕಟಿತ ೫-೯-೧೫