Feeds:
ಲೇಖನಗಳು
ಟಿಪ್ಪಣಿಗಳು

Archive for the ‘ಪುಸ್ತಕ ಪರಿಚಯ’ Category

ಅಮ್ಮನ ನೆನಪು,

ಸಂಪುಟ ೧,
ಸಂಪಾದನೆ: ಚಂದ್ರಕಾಂತ ವಡ್ಡು,
ಅಂಕುರ ಪ್ರಕಾಶನ,
ನಂ. ೧೧೪೮, ೧ನೇ ಮಹಡಿ,
೨ನೇ ಅಡ್ಡರಸ್ತೆ, ಪಡುವಣ ರಸ್ತೆ,
ಮೈಸೂರು ೫೭೦೦೨೩,
ಪುಟಗಳು ೨೦೦,
ಬೆಲೆ ರೂ. ೧೫೦

ಮಕ್ಕಳ ಪ್ರಪಂಚದಲ್ಲಿ ಮೊದಲಿಗೆ ಅಮ್ಮನಿಗೇ ಸ್ಥಾನ. ಅಮ್ಮ ಎಂಬ ಪದವೇ ಸಾಕು ನಮಗೆ ಹರುಷ ತರಲು.  ಎಲ್ಲ ಮಕ್ಕಳಿಗೂ ಅಮ್ಮನ ನೆನಪು ಅವಳಿಲ್ಲದಿರುವಾಗಲೇ ಹೆಚ್ಚು ಕಾಡುತ್ತದೆ ಎಂದು ನನಗನಿಸುತ್ತದೆ. ಈ ಹೊತ್ತಗೆಯಲ್ಲಿ ೩೬ ಜನ ಮಕ್ಕಳು ಅವರ ತಾಯಿ ಬಗ್ಗೆ ತಮ್ಮ ನೆನಪನ್ನು ಬಿಚ್ಚಿಟ್ಟಿದ್ದಾರೆ. ಇಲ್ಲಿ ಖ್ಯಾತನಾಮರು, ಅಷ್ಟು ಪ್ರಸಿದ್ಧಿ ಹೊಂದದವರು ಹೀಗೆ ಎಲ್ಲರ ಲೇಖನ ಒಟ್ಟುಗೂಡಿವೆ.  ಹೆಚ್ಚಿನ ಅಮ್ಮಂದಿರಿಗೂ ಏಳೆಂಟು ಹತ್ತು ಮಕ್ಕಳು. ಅವರನ್ನು ಸಾಕಲು ಅವರು ಪಟ್ಟ ಕಷ್ಟ ಅಷ್ಟಿಷ್ಟಲ್ಲ. (ಈಗಿನ ಕಾಲದ ಮಕ್ಕಳಿಗೆ ಅಂಥ ಕಲ್ಪನೆಯೂ ಬರಲು ಸಾಧ್ಯವಿಲ್ಲ. ಈಗ ಅಷ್ಟು ಕಷ್ಟ ಯಾರಿಗೂ ಇರುವುದಿಲ್ಲ ಹಾಗೂ ಒಬ್ಬ ತಾಯಿಗೆ ಅಷ್ಟು ಮಕ್ಕಳು ಕೂಡ ಇರುವ ಸಾಧ್ಯತೆ ಇಲ್ಲ.) ಹೆಚ್ಚಿನ ತಾಯಂದಿರು ಬಡತನವನ್ನೇ ಹಾಸಿ ಹೊದ್ದವರು. ಏಳೆಂಟು ಮಕ್ಕಳನ್ನು ಹೆತ್ತು ಕೊನೆಗೆ ಮೂರೋ ನಾಲ್ಕೊ ಮಕ್ಕಳು ಬದುಕಿ ಉಳಿವಂಥ ಪರಿಸ್ಥಿತಿ. ತನ್ನ ಮಕ್ಕಳಿಗಾಗಿ ತಾಯಿ ಎಷ್ಟು ಕಷ್ಟ ಪಡುತ್ತಿದ್ದಳು ಎಂಬುದು ಇಲ್ಲಿ ಬರುವ ತಾಯಂದಿರ ಚಿತ್ರಣದಿಂದ ಮನವರಿಕೆಯಾಗುತ್ತದೆ.  ಪ್ರತ್ಯಕ್ಷ ದೇವರನ್ನು ಕಾಣಲು ಸಾಧ್ಯವಾಗದೆ ಇರುವುದಕ್ಕೆ ಅಮ್ಮನ ಮೂಲಕ ತನ್ನನ್ನು ಕಾಣಿರಿ ಎಂದು ದೇವರು (ಸ್ತ್ರೀ) ತಾಯಿಯನ್ನು ಈ ಭೂಮಿಗೆ ಕರುಣಿಸಿದ ಎಂಬ ಮಾತಿದೆ. ಇದು ಸತ್ಯ ಕೂಡ.

20150729_164207

20150729_164228-1

ಈ ಪುಸ್ತಕದಲ್ಲಿ ಬರುವ ತಾಯಿಯನ್ನು ತನ್ನ ಕೊನೆಗಾಲದಲ್ಲಿ ಹೆಚ್ಚಿನ ಮಕ್ಕಳು ಚೆನ್ನಾಗಿ ನೋಡಿಕೊಂಡಿದ್ದಾರೆ ಎಂಬ ಸಂತೃಪ್ತಿ ನಮಗೆ ಓದುವಾಗ ಲಭಿಸುತ್ತದೆ. ಕೆಲವರು ಇದಕ್ಕೆ ಅಪವಾದ. ಹಾಗೂ ಕೊಟ್ಟ ಕಷ್ಟವನ್ನು ಪಶ್ಚಾತ್ತಾಪದ ಮೂಲಕ ಈಗ ಅದನ್ನು ತೊಡೆಯಲು ಪ್ರಯತ್ನಿಸಿದ್ದಾರೆ.

ಈ ಪುಸ್ತಕದಲ್ಲಿ ಒಂದು ದೊಡ್ಡ ಕೊರತೆ ಎಂದರೆ ಕೆಲವರು ತಮ್ಮ ತಾಯಿಯ ಹೆಸರನ್ನೇ ನಮೂದಿಸದಿರುವುದು. ಹಾಗೂ ಯಾವ ಊರು ಎಂಬ ಉಲ್ಲೇಖವನ್ನೂ ಹಾಕದಿರುವುದು. ಮತ್ತು ತಾಯಿ ಹುಟ್ಟಿದ ಇಸವಿ ಹಾಗೂ ತೀರಿದ ಇಸವಿ ದಾಖಲಿಸದಿರುವುದು. ಅವರಿಗೆ ಮಾತ್ರ ಅವರ ತಾಯಿ ಹೆಸರು ಗೊತ್ತಿದ್ದರೆ ಸಾಕೆ? ಓದುಗರಿಗೆ ತಿಳಿಯುವುದು ಬೇಡವೇ? ಉದಾಹರಣೆಗೆ ಗುರುಪ್ರಸಾದ ಕುರ್ತಕೋಟಿ ತಮ್ಮ ತಾಯಿ ಬಗ್ಗೆ ಬರೆಯುತ್ತ, ತಾಯಿ ತನ್ನ ದುಃಖ ಮರೆಯಲು ಕಥೆ, ಲೇಖನಗಳನ್ನು ಬರೆಯುತ್ತಿದ್ದರು ಎಂದು ಬರೆದು ಲೇಖನದುದ್ದಕ್ಕೂ ಎಲ್ಲೂ  ತಾಯಿಯ ಹೆಸರನ್ನೇ ಬರೆಯದಿರುವುದು ಆ ಲೇಖನದ ದೊಡ್ಡ ಕೊರತೆ ಎನಿಸಿತು.

ಇಂಥ ಒಂದು ಸಾಹಸಕ್ಕೆ  ಚಂದ್ರಕಾಂತ ವಡ್ಡು ಮುಂದಾಗಿರುವುದು  ಪ್ರಶಂಸನೀಯ. ಇದರ ಎರಡನೇ ಸಂಪುಟವನ್ನು ಹೊರತರುವ ಕಾರ್ಯದಲ್ಲಿ ಕ್ರಿಯಾಶೀಲರಾಗಿದ್ದಾರಂತೆ. ಭಾಗ ೨ರಲ್ಲಿ ಇಂಥ ತಪ್ಪುಗಳು ಆಗದಂತೆ ಎಚ್ಚರವಹಿಸಲಿ. ಅವರಿಗೆ ಹಾಗೂ ಎಲ್ಲ ಲೇಖಕರಿಗೆ ಅಭಿನಂದನೆಗಳು.

ವಯಸ್ಸಾದ ತಾಯಿ ಇರುವ ಎಲ್ಲ ಮಕ್ಕಳಲ್ಲೂ ಒಂದು ವಿನಂತಿ. ನಮ್ಮ ನಮ್ಮ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳೋಣ. ತಾಯಿ ಬಳಿ ನಾವಿಲ್ಲದಿದ್ದರೆ ಕೊನೆಪಕ್ಷ ವರ್ಷಕ್ಕೆ ಒಂದೆರಡು ಸಲ ಸಮಯವಿಲ್ಲ ಎಂಬ ಕುಂಟುನೆಪ ಮಾಡದೆ ಅವರಿರುವಲ್ಲಿಗೆ ಬಂದು ಮಾತಾಡಿಸೋಣ. ದೂರವಾಣಿಯಲ್ಲಾದರೂ ವಾರಕೊಮ್ಮೆ ಮಾತಾಡುತ್ತಿರೋಣ. (ಈಗ ಬಿ.ಎಸ್.ಎನ್.ಎಲ್ ರಾತ್ರಿ ೯ರಿಂದ ಬೆಳಗ್ಗೆ ೭ ರತನಕ ಉಚಿತ ಕರೆ ಒದಗಿಸಿದೆ. ಬಹುಶಃ ಹೀಗಾದರೂ ಮಕ್ಕಳು ಅಮ್ಮನ ಬಳಿ ಮಾತಾಡಲಿ. ಕಾಸು ಖರ್ಚಾಗುತ್ತೆ ಎಂಬ ನೆವ ಹೇಳದೆ ಇರಲಿ ಎಂದಿರಬಹುದು!) ಇಳಿ ವಯಸ್ಸಿನಲ್ಲಿ ಎಲ್ಲಾ ತಾಯಂದಿರು ತಮ್ಮ ಮಕ್ಕಳಿಂದ ಬಯಸುವುದು ಒಂದು ಹಿಡಿ ಪ್ರೀತಿ ಮಾತ್ರ ಎಂಬುದನ್ನು ಮರೆಯದಿರೋಣ. ಅವರು ಇದ್ದಾಗ  ಚೆನ್ನಾಗಿ ನೋಡಿಕೊಳ್ಳದೆ ಸತ್ತನಂತರ ಅದ್ದೂರಿಯಾಗಿ ಕರ್ಮಾಂತರ ಮಾಡುವುದರಿಂದ ಏನೂ ಪ್ರಯೋಜನವಿಲ್ಲ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳೋಣ.

 

http://www.panjumagazine.com/?p=11445

Read Full Post »

`muರನೇ ಕಿವಿ’ ಇದೊಂದು ವಿಶಿಷ್ಟ ಕೃತಿ. (ಲೇಖಕರು: ರವೀಂದ್ರ ಭಟ್. ಪ್ರಕಾಶನ:  ಸುಮುಖ ಪ್ರಕಾಶನ, ೧೭೪ಸಿ/೨೮, ಒಂದನೇ ಮಹಡಿ, ಒಂದನೇ ಮುಖ್ಯರಸ್ತೆ, ಮಾಗಡಿ ರಸ್ತೆ ಟೋಲ್ಗೇಟ್, ವಿದ್ಯಾರಣ್ಯಪುರ, ಬೆಂಗಳೂರು ೫೬೦೦೨೩, ರೂ.೯೦) ಹುಟ್ಟುತ್ತಲೆ ಕಿವಿ ಕೇಳದ ಮಗುವಿಗೆ ತಾಯಿ ಕಷ್ಟಪಟ್ಟು ಮಾತು ಕಲಿಸಿದ ಧೀರ ಕಥಾನಕ. ಕಥಾನಾಯಕ ನಿರಂಜನ. ನಿರ್ದೇಶಕಿ ದೀಪಾ. ನಿರೂಪಣೆ ರವೀಂದ್ರ ಭಟ್.

    ನಿರಂಜನನಿಗೆ ಕಿವಿ ಕೇಳದ ವಿಚಾರ ಹೆತ್ತವರಿಗೆ ದೀಪಾವಳಿ ದಿನದಂದು ಗೊತ್ತಾಗುತ್ತದೆ. ಪಟಾಕಿ ಸದ್ದಿಗೆ ಹತ್ತಿರದಲ್ಲಿ ಶಬ್ದ ಕೇಳಿದರೂ ಮಗು ಬೆಚ್ಚದೆ ಕೇಕೆ ಹಾಕಿ ನಕ್ಕಾಗ ಏನೋ ಸರಿ ಇಲ್ಲ ಎಂದು ಮನವರಿಕೆಯಾಗಿ ವೈದ್ಯರ ಬಳಿ ತಪಾಸಣೆಗೊಳಪಡಿಸಿದಾಗ ಅವರಿಗೆ ಕೇಳಿದ್ದು ಸುವಾರ್ತೆಯಲ್ಲ. ಮಗುವಿಗೆ ಕಿವಿ ಕೇಳಿಸುವುದಿಲ್ಲ ಎಂಬ ದುರ್ವಾರ್ತೆ.
ಅಲ್ಲಿಂದ ತಾಯಿ ದೀಪಾರಿಗೆ ದಿನದ ೨೪ ಗಂಟೆ ಸಮಯವೂ ಸಾಲದಾಯಿತು. ತನ್ನ ಮಗ ನಿರಂಜನ ಎಲ್ಲರಂತೆ ಮಾತು ಕಲಿಯಲೇಬೇಕು ಎಂದು ಪಣತೊಟ್ಟು ಅದರಲ್ಲಿ ಯಶಸ್ವಿಯಾದರು. `muರನೇ ಕಿವಿ’ ಪುಸ್ತಕ ಓದುತ್ತ ಹೋದಂತೆ ಮಾತು ಕಲಿಸಲು ಅವರು ಅನುಭವಿಸಿದ ವೇದನೆ, ಅದಕ್ಕಾಗಿ ಪಟ್ಟ ಶ್ರಮ ಎಲ್ಲ ನಮ್ಮ ಕಣ್ಣೆದುರು ನಡೆದಂತೆ ಅನಾವರಣಗೊಳ್ಳುತ್ತದೆ. ದೀಪಾ ಮಗ ನಿರಂಜನನಿಗೆ ಮಾತು ಕಲಿಸಿದ  ಪ್ರತಿಯೊಂದು ಹಂತವನ್ನೂ ರವೀಂದ್ರ ಭಟ್ಟರು ಎಳೆ ಎಳೆಯಾಗಿ ವಿವರಿಸಿದ್ದಾರೆ.

     ಸಹಜವಾದ ಮಗು ಸಾಮಾನ್ಯವಾಗಿ ಒಂದು ವರ್ಷ ತುಂಬುತ್ತಿದ್ದಂತೆ ತೊದಲು ಮಾತು ಆಡುತ್ತ ಕ್ರಮೇಣ ಸರಾಗವಾಗಿ ಮಾತಾಡಲು ಕಲಿಯುತ್ತದೆ. ಅದಕ್ಕಾಗಿ ಹೆತ್ತವರು ಹೆಚ್ಚೇನು ಕಷ್ಟಪಡಬೇಕಾಗಿಲ್ಲ. ಮಗುವಿನೊಂದಿಗೆ ಮಾತಾಡುತ್ತ, ಅದು ನಮ್ಮ ಮಾತನ್ನು ಕೇಳುತ್ತಲೇ ಮಾತು ಕಲಿಯುತ್ತದೆ. ಆದರೆ ಕಿವಿಕೇಳದ ಮಕ್ಕಳು ಮಾತು ಕಲಿಯಬೇಕಾದರೆ ಇಷ್ಟು ಸುಲಭವಿಲ್ಲ. ಪ್ರತೀ ಶಬ್ಧವನ್ನೂ ಅದಕ್ಕೆ ಪದೇಪದೇ ಎಲ್ಲೆಂದರಲ್ಲಿ ಜನರನ್ನಾಗಲೀ, ವಸ್ತುವನ್ನಾಗಲೀ ತೋರಿಸುತ್ತಲೇ ಕಲಿಸಬೇಕು. ನಿರಂತರ ತಾಳ್ಮೆ, ಸಂಯಮ ಇಲ್ಲಿ ಬಲು ಮುಖ್ಯ. ಮಗು ಕಲಿತಿಲ್ಲ ಎಂದು ಸುಮ್ಮನೆ ಕೈಚೆಲ್ಲಿ ಕೂರುವಂತಿಲ್ಲ. ಆ ಶಬ್ಧ ಮಗುವಿನ ಬಾಯಲ್ಲಿ ಬರುವವರೆಗೆ ಪ್ರಯತ್ನಪಡಲೇಬೇಕು. ಒಂದು ಮಾತು ನುಡಿಯಲು ಮಗುವಿಗೆ ತಿಂಗಳುಗಟ್ಟಲೇ ಬೇಕಾಗಬಹುದು. ಇಲ್ಲಿ ಆ ಮಗುವಿಗೆ ಮಾತು ಕಲಿಸಲು ಮನೆಯವರೆಲ್ಲರ ಸಹಕಾರ, ಅದರಲ್ಲೂ ತಾಯಿಯ ಅಪರಿಮಿತ ತಾಳ್ಮೆಯೇ ಬಲುಮುಖ್ಯವೆನಿಸುತ್ತದೆ. `ಅಮ್ಮ ಎಂದರೆ ಅವಳು ಕಿವುಡು ಮಗುವಿನ ತಾಯಿ ಮಾತ್ರ. ಅವಳು ಗಂಡನಿಗೆ ಹೆಂಡತಿಯಲ್ಲ, ಅತ್ತೆಗೆ ಸೊಸೆಯಲ್ಲ, ಇನ್ನೊಂದು ಮಗುವಿದ್ದರೆ ಅದಕ್ಕೆ ತಾಯಿಯೂ ಅಲ್ಲ. ಮಗು ಮಾತು ಕಲಿಯುವ ವರೆಗೆ ಅವಳು ಅವಳೇ ಅಲ್ಲ. ಅವಳಿಗೆ ಅವಳದ್ದೇ ಆದ ಕನಸುಗಳಿಲ್ಲ, ಮನಸೂ ಇಲ್ಲ, ಏನಿದ್ದರೂ ಮಗನಿಗೆ ಮಾತು ಕಲಿಸುವ ಯಂತ್ರ ಮಾತ್ರ’ ಎಂದು ತಮ್ಮ ಪತ್ನಿ ದೀಪಾ ಬಗ್ಗೆ ರವೀಂದ್ರರು ಒಂದು ಅಧ್ಯಾಯದಲ್ಲಿ ಮಾರ್ಮಿಕವಾಗಿ ಬರೆದಿದ್ದಾರೆ. ನಿಜ ನಿಜ ಅವರಂದಿದ್ದು ಎಂದು ಈ ಪುಸ್ತಕ ಓದುವಾಗ ನಮಗರಿವಾಗುತ್ತದೆ.

     ದೀಪಾ ಚೆನ್ನಾಗಿ ಹಾಡುತ್ತಾರೆ. ಆದರೆ ಈ ಹವ್ಯಾಸವನ್ನು ಅವರು ಮುಂದುವರಿಸಲಿಲ್ಲ. ಇಂಥ ಎಲ್ಲ ಹವ್ಯಾಸಗಳನ್ನೂ ಬದಿಗೊತ್ತಿದರು. ಅವರ ಮುಂದಿದ್ದದ್ದು  ಮಗುವಿಗೆ ಮಾತು ಕಲಿಸುವುದೊಂದೇ ಗುರಿ. ಆ ನಿಶ್ಚಲ ದಾರಿಯಮುಂದೆ ಉಳಿದದ್ದೆಲ್ಲ ಗೌಣ. ಮಗನನ್ನು ಅಂಗಡಿಗೆ ಕಳುಹಿಸಿ ವ್ಯಾಪಾರ ಮಾಡಲು ಕಲಿಸಿದ ಕಥೆ, ದೋಸೆ ತಿನ್ನುವಾಗ ಲೆಕ್ಕ ಕಲಿಸಿದ್ದು, ಹಟ ಮಾಡಲು ಹೇಳಿಕೊಟ್ಟದ್ದು, ಜೀವ ನಿರ್ಜೀವಗಳ ವ್ಯತ್ಯಾಸದ ಅರಿವು ಮೂಡಿಸಿದ್ದು, ಇತ್ಯಾದಿ ನಿರಂಜನ ಹಂತಹಂತವಾಗಿ ಎಲ್ಲವನ್ನೂ ಕಲಿತ ಯಶೋಗಾಥೆ ಇಲ್ಲಿದೆ. ಓದುತ್ತ ಹೋದಂತೇ ಅವನ್ನೆಲ್ಲ ಮಗನಿಗೆ ತಾಳ್ಮೆಯಿಂದ ಕಲಿಸಿದ ಆ ಮಾಹಾತಾಯಿಗೆ ನಮೋನಮಃ ಎಂದು ಕೈಮುಗಿಯಬೇಕೆನಿಸುತ್ತದೆ. ಈಗ ನಿರಂಜನ ಎಲ್ಲರಂತೆ ಮಾತಾಡಬಲ್ಲ. ಇದರ ಹಿಂದೆ ನಿರಂಜನನ ಪ್ರಯತ್ನವೂ ಅಷ್ಟೇ ಮುಖ್ಯ. ಹಗಲಿರುಳೂ ಎಡೆಬಿಡದೆ ತಾಯಿ ಹೇಳಿಕೊಟ್ಟರೂ ಮಗ ಕಲಿಯಲು ಮನಸ್ಸು ಮಾಡದೆ ಇದ್ದರೆ ಆಗ ಆ ತಾಯಿಯ ಶ್ರಮವೆಲ್ಲ ವ್ಯರ್ಥ. ಆದರೆ ಇಲ್ಲಿದೀಪಾರ ಶ್ರಮಕ್ಕೆ ಮಗ ನಿರಂಜನ ಫಲ ನೀಡಿದ್ದಾನೆ. ವಯೋಸಹಜ ಆಟ, ನಿದ್ದೆಗಳನ್ನೆಲ್ಲ ಬಿಟ್ಟು ಅಮ್ಮ ಹೇಳಿಕೊಟ್ಟ ಪಾಟಗಳನ್ನು ಬೇಸರವಿಲ್ಲದೆ ನಿರಂತರವಾಗಿ ಕಲಿತು ಮಾತು ಕಲಿತನಲ್ಲ ಅವನ ಸಾಧನೆಯೂ ದೊಡ್ಡದೇ. ಕೊನೆಗೆ `ಸಮಾಲೋಚನೆ..’ ಅಧ್ಯಾಯದಲ್ಲಿ ಕಿವುಡ ಮಕ್ಕಳನ್ನು ಯಾವ ಹಂತದಲ್ಲಿ ಯಾವ ಶಾಲೆಗೆ ಸೇರಿಸಬೇಕು, ಇತ್ಯಾದಿ ಪರಿಪೂರ್ಣ ಮಾಹಿತಿಯನ್ನು ನೀಡಿದ್ದಾರೆ. ಒಟ್ಟಿನಲ್ಲಿ ಈ ಪುಸ್ತಕ ಅಂಗವಿಕಲ ಮಗುವಿನ ತಾಯಂದಿರಿಗೆ ಉಪಯುಕ್ತ ಕೈದೀವಿಗೆಯೆನ್ನುವುದರಲ್ಲಿ ಸಂಶಯವಿಲ್ಲ.

     ಕೆಲವು ಕೋರಿಕೆಗಳು: ಪುಸ್ತಕದ ಕೊನೆಗೆ ಕೆ.ಕೆ.ಶ್ರೀನಿವಾಸನ್ ಅವರ ಬಗ್ಗೆ ವಿವರಗಳಿವೆ. ಅವರ ಮಗ ರಾಜಾ ಕೂಡ ಹುಟ್ಟುತ್ತಲೇ ಕಿವಿ ಕೇಳಿಸದವನಾಗಿದ್ದ. ಶ್ರೀನಿವಾಸನ್ ರತ್ನ ದಂಪತಿ ಮೈಸೂರಿನ ಸುಬ್ಬರಾಯನಕೆರೆ ಬಳಿ ಇರುವ ಅವರ ಮನೆಯಲ್ಲೇ ಕಿವುಡು ಮಕ್ಕಳಿಗೆ ಪಾಟ ಕಲಿಸುವ ಶಾಲೆ ತೆರೆದರು ಎಂದಿದೆ. ಅದು ಯಾವ ವರ್ಷ ಎಂಬುದರ ಮಾಹಿತಿ ಇಲ್ಲ. ಬೋಗಾಧಿಯ ವಸಂತನಗರದಲ್ಲಿ ಅಧಿಕೃತ ಶಾಲೆ ತೆರೆಯಲಾಯಿತೆಂದಿದೆ. ಶಾಲೆ ಬಗ್ಗೆ ಸರಿಯಾದ ಮಾಹಿತಿಯನ್ನು ಕೊಡಬೇಕಿತ್ತು. `ಮಾತು ಕೊಟ್ಟ ಮಾಮಾ ಮೌನ’ ಎಂಬ ಅಧ್ಯಾಯದಲ್ಲಿ ಶ್ರೀನಿವಾಸನ್ ಬಗ್ಗೆ ವಿವರಣೆ ಇದ್ದರೂ, ಅವರು ಮರಣ ಹೊಂದಿದ ವರ್ಷ ನಮೂದಿಸಿಲ್ಲ. ಹಾಗೂ `ರಾಜ ನನ್ನ ರಾಜಾ’ ಎಂಬ ಅಧ್ಯಾಯದಲ್ಲೆ ಶ್ರೀನಿವಾಸನ್ ಬಗ್ಗೆ ಹೆಚ್ಚಿನ ವಿವರಣೆ ಇರುವುದರಿಂದ ಇಲ್ಲಿ ಪುನರಾವರ್ತನೆಯಾಗಿದೆ ಎನಿಸುತ್ತದೆ. ಒಂದು ಪುಸ್ತಕ ಅಚ್ಚು ಹಾಕುವಾಗ ಆ ಪುಸ್ತಕ ಬರೆದ ಲೇಖಕನ ಹೆಸರು ವಿಳಾಸ ತಪ್ಪದೇ ಅದರಲ್ಲಿ ನಮೂದಿಸಬೇಕು. ಇಲ್ಲವೇ ಮಿಂಚಂಚೆ ಇದ್ದರೆ ಅದನ್ನಾದರೂ ಹಾಕುವುದು ಒಳ್ಳೆಯದು. ಈ ಪುಸ್ತಕದಲ್ಲಿ ಲೇಖಕರ ವಿಳಾಸ ಹಾಕಿಲ್ಲ. ಇವನ್ನೆಲ್ಲ ಮರುಮುದ್ರಣ ಮಾಡುವಾಗ ಸರಿಪಡಿಸಬೇಕಾಗಿ ಕೋರಿಕೆ.

Read Full Post »

   ಒಂದು ನೆನಪು

ವಿಜ್ಞಾನ ತಂತ್ರಜ್ಞಾನ ಪದಸಂಪದ ಕೃತಿ ಕೈ ಸೇರಿ ಎಲ್ಲ ಪುಟಗಳನ್ನು ತಿರುವಿ ಹಾಕಿದಾಗ ಈ ಅಗಾದ ಕೆಲಸ ಕಂಡು ಸಂತೋಷವಾಯಿತು. ನವಕರ್ನಾಟಕ ಈ ಕೃತಿಯನ್ನು ಸಮರ್ಥವಾಗಿ ಚೊಕ್ಕವಾಗಿ

ಹೊರತಂದಿದೆ.

 

ಈ ಗ್ರಂಥವನ್ನು ಮಾವ (ಜಿ.ಟಿ. ನಾರಾಯಣ ರಾವ್)ನಿಗೆ ಅರ್ಪಣೆ ಮಾಡಿ,

ಆತ್ಮೀಯವಾಗಿ ನೆನಪಿಸಿಕೊಂಡು ಅವರು ಈ ಗ್ರಂಥದ ವಿಷಯದಲ್ಲಿ ಬರೆದ ಕೊನೇ ಪತ್ರವನ್ನು ಪ್ರಕಟಿಸಿದ್ದಾರೆ. ಅದಕ್ಕಾಗಿ ನಮ್ಮ ಕುಟುಂಬದವರೆಲ್ಲರ ಅಭಿವಂದನೆಗಳು. ಈ ಗ್ರಂಥದ ಅನಾವರಣದ ದಿನ ಮೊದಲ ಪ್ರತಿಯನ್ನು  ನಮ್ಮ ಅತ್ತೆ (ಜಿ.ಟಿ ನಾರಾಯಣ ರಾಯರ ಪತ್ನಿ ಲಕ್ಷ್ಮೀದೇವಿ) ಸ್ವೀಕರಿಸಬೇಕೆಂದು ಆತ್ಮೀಯ ಕರೆ ಬಂದಿತ್ತು. ಆ ದಿನ ನಾವು ಊರಿನಲ್ಲಿ ಒಂದು ಮದುವೆ ಸಮಾರಂಭದಲ್ಲಿ ಭಾಗಿಯಾಗಲೇ ಬೇಕಿದ್ದುದರಿಂದ ಈ ಕರೆಯನ್ನು ಪುರಸ್ಕರಿಸಲು ಸಾಧ್ಯವಾಗಲಿಲ್ಲ ಹಾಗೂ ಪುಸ್ತಕ ಪಡೆಯುವ  ಆ ಸಂತಸದ ಸನ್ನಿವೇಶದಲ್ಲಿ ಭಾಗಿಯಾಗದೇ ಇದ್ದದ್ದು ದೊಡ್ಡ ನಷ್ಟ ಎಂದು ಭಾವಿಸುತ್ತೇನೆ.
ಈ ಕೃತಿಯ ಗೌರವ ಸಂಪಾದಕರಾಗಿ ಮಾವ ನೇಮನಗೊಂಡಾಗ, (ಮಾವನಿಗೆ ಆರೋಗ್ಯ ಅಷ್ಟು ಸುಸ್ಥಿತಿಯಲ್ಲಿರಲಿಲ್ಲ.) `ಆಗಾಗ ಬೆಂಗಳೂರಿಗೆ ಹೋಗಲು ಸಾಧ್ಯವೇ?” ಎಂದು ಅತ್ತೆ ಆತಂಕದಲ್ಲಿ ಕೇಳಿದಾಗ ಮಾವ, “ಇದು ಸಮಾಜದ ಕೆಲಸ. ದೇಹಕ್ಕೆ ಮನಸ್ಸಿಗೆ ಖುಷಿ ಕೊಡುವ ಕೆಲಸ. ದೇಹಕ್ಕೆ ಟಾನಿಕ್ ಇದ್ದಂತೆ. ಇಂಥ ಕೆಲಸ ಮಾಡುವಾಗ ಆರೋಗ್ಯ ಚೆನ್ನಾಗಿರುತ್ತದೆ. ಮನಸ್ಸು ಉತ್ಸಾಹದಿಂದ ಇರುತ್ತದೆ’’ ಎಂದು ಸುಮಾರು  ಮೂರೂವರೆ ವರ್ಷಗಳ ಹಿಂದೆ ಈ ಗ್ರಂಥದ ಕೆಲಸ ಪ್ರಾರಂಭವಾದಾಗ ನಮ್ಮ ಮಾವ ಹೇಳಿದ ಮಾತು ಈ ಪುಸ್ತಕವನ್ನು ನೋಡಿದಾಗ ನೆನಪಿಗೆ ಬಂತು. ಉಲ್ಲಾಸದಿಂದಲೇ ಹೊತ್ತಗೆಯ ಕೆಲಸ ಮಾಡಲು ಎದುರು ನೋಡುತ್ತಿದ್ದರು. ಆದರೆ ಅದಕ್ಕೂ ಮೊದಲೇ (೨೭-೬-೨೦೦೮) ಕಾಣದೆಡೆಗೆ ತೆರಳಿದ್ದರು. ಅವರಿದ್ದಿದ್ದರೆ ಪುಸ್ತಕ ನೋಡಿ ಪ್ರತೀ ಪುಟವನ್ನೂ ಆಮೂಲಾಗ್ರ ಒಂದಕ್ಷರ ಬಿಡದೆ ಓದಿ ಆನಂದಿಸಿ ತಪ್ಪು‌ಒಪ್ಪುಗಳನ್ನು ಅಲ್ಲೇ ಗೆರೆ ಹಾಕಿ, ಚೆನ್ನಾಗಿದ್ದದ್ದನ್ನು ಪ್ರಶಂಸಿಸುತ್ತ ಶಹಭಾಸ್‌ಗಿರಿ ಕೊಟ್ಟು ಸಂಬಂಧಪಟ್ಟವರಿಗೆ ಆ ಕೂಡಲೇ ಪತ್ರ ಬರೆದಿರುತ್ತಿದ್ದರು.
ಈ ಕೃತಿಯ ೮೮೪ ಪುಟಗಳಲ್ಲಿ ಕನ್ನಡ- ಇಂಗ್ಲಿಷ್ ಪದಕೋಶ, ಕನ್ನಡ-ಕನ್ನಡ ಪದವಿವರಣೆ, ಇಂಗ್ಲಿಷ್-ಕನ್ನಡ ಪದಸೂಚಿ ಒಳಗೊಂಡಿವೆ. ವಿದ್ಯಾರ್ಥಿಗಳಿಗೆ, ವಿಜ್ಞಾನಿಗಳಿಗೆ, ಲೇಖಕರಿಗೆ, ಪತ್ರಕರ್ತರಿಗೆ ಇತ್ಯಾದಿ ಎಲ್ಲರಿಗೂ ಅವಶ್ಯ ಬೇಕಾಗುವ ಅತ್ಯಮೂಲ್ಯ ಆಕರ ಗ್ರಂಥವಿದು. ಕೊನೆಯಲ್ಲಿ ಪದಸೂಚಿ ಕೊಟ್ಟಿರುವುದು ಪದಗಳ ಹುಡುಕುವಿಕೆಗೆ ಬಹಳ ಅನುಕೂಲವಾಗಿದೆ. ಬೆಲೆ ರೂ.೬೫೦ ಮಾತ್ರ. ಈ ಬೃಹತ್ ಗ್ರಂಥದ ಹಿಂದೆ ತಪಸ್ಸಿನೋಪಾದಿಯಲ್ಲಿ ಕೆಲಸ ಮಾಡಿದ ಎಲ್ಲರಿಗೂ ಹಾರ್ದಿಕ ಅಭಿನಂದನೆಗಳು.

Read Full Post »

‘ಕನಸಿನಲ್ಲಿ ಕಂಡ ಕಲ್ಪವೃಕ್ಷ’ (ವಿಸ್ತೃತ ಜನಪದ ರಮ್ಯಕಥೆ) ಲೇಖಕರು: ಕ್ಯಾತನಹಳ್ಳಿ ರಾಮಣ್ಣ, ಪ್ರಕಾಶಕರು: ಸಂವಹನ ಪ್ರಕಾಶನ, ಸಂಖ್ಯೆ ೧೨/೧ಎ, ಈವ್ನಿಂಗ್ ಬಜಾರದ ಹಿಂಭಾಗ, ಶಿವರಾಮಪೇಟೆ ೫೭೦೦೦೧, ಪುಟ: ೮+೧೫೨, ಬೆಲೆ: ರೂ. ೮೦

ಕ್ಯಾತನಹಳ್ಳಿ ರಾಮಣ್ಣ ಬಲು ಸುಂದರವಾಗಿ  ಈ ಕಥಾನಕವನ್ನು ಹೆಣೆದಿದ್ದಾರೆ. ಕಥೆಯ ತಿರುಳು  ಹೀಗಿದೆ: ಸಾವಂಚಿ ಪಟ್ಟಣದಲ್ಲಿ ಒಬ್ಬ ರಾಜ. ಅವನಿಗೆ ಇಬ್ಬರು ಪತ್ನಿಯರು. ಮೊದಲಪತ್ನಿಯಿಂದ ೨ ಮಕ್ಕಳು. ಎರಡನೆ ಪತ್ನಿಯ ಅವಿಧೇಯತೆಯಿಂದ ರಾಜ ಕುಪಿತನಾಗಿ ಅವಳನ್ನು ಕೊಲ್ಲಿಸಬೇಕೆಂದು ತೀರ್ಮಾನಿಸಿ ಆ ಕೆಲಸವನ್ನು ಅಮಾತ್ಯನಾದ ಅವಳ ಅಣ್ಣನಿಗೇ ವಹಿಸುತ್ತಾನೆ. ಅಮಾತ್ಯ ಬುದ್ಧಿವಂತಿಕೆ ಉಪಯೋಗಿಸಿ ತಂಗಿಯನ್ನು ಕೊಲ್ಲದೆ ಒಂದು ಕಾಡಿನಲ್ಲಿ ಅವಳ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿ ಅವಳು ತಪಸ್ವಿನಿಯಂತೆ ವೇಷ ಧರಿಸಲು ಸೂಚಿಸಿ ಅಲ್ಲಿಯ ನಿವಾಸಿಗಳಾದ ಹಾಡಿಜನರಿಗೆ ತಪಸ್ವಿನಿ ಬಂದಿದ್ದಾರೆ. ಅವರನ್ನು ಜತನದಿಂದ ನೋಡಿಕೊಳ್ಳುವಂತೆ ಸೂಚಿಸಿ ಅಲ್ಲಿಂದ ತೆರಳುತ್ತಾನೆ.

(ಹೆಚ್ಚು…)

Read Full Post »

ಶತಮಾನದ ಕುಸುಮ. ಡಾ. ಕುಸುಮಾ ಸೊರಬ ಅವರ ಜೀವನ, ದರ್ಶನ. ಸಂಪಾದನೆ: ನಾಗೇಶ ಹೆಗಡೆ, ಶಾರದಾ ಗೋಪಾಲ, ಅಕ್ಷರ ಪ್ರಕಾಶನ, ಹೆಗ್ಗೋಡು, ಸಾಗರ, ಕರ್ನಾಟಕ ೫೭೭೪೧೭, ಪ್ರಕಟಣಾ ವರ್ಷ ೧೯೯೯, ಬೆಲೆ: ರೂ. ೭೫

ನಾನು ಈಗ ಓದಿ ಮುಗಿಸಿದ ಪುಸ್ತಕ ಶತಮಾನದ ಕುಸುಮ.  ಈ ಪುಸ್ತಕ ಓದಿದಾಗ ಅಬ್ಬಾ! ಇವರು ನಿಜವಾಗಿಯೂ ಮಾನವರೇ ಎಂಬ ಆಶ್ಚರ್ಯ ಸಂದೇಹ ಮೂಡುತ್ತದೆ. ಹಾಗೂ ಅವರ ಸಾಧನೆ ಹೋರಾಟದ ಏಳುಬೀಳುಗಳನ್ನು ನೋಡಿದಾಗ ಹ್ಯಾಟ್ಸ್ ಆಫ್ ಕುಸುಮಾ ಅವರೇ ಎಂದು ಕೈಮುಗಿಯಬೇಕೆನಿಸುತ್ತದೆ. ಛೆ! ಕುಸುಮ ನಮ್ಮೊಂದಿಗೆ ಇನ್ನೂ ನೂರ್ಕಾಲ ಇರಬೇಕಿತ್ತು ಎಂದು ಕಣ್ಣೀರು ತನ್ನಿಂದ ತಾನೇ ಹರಿಯುತ್ತದೆ. ನಾನವರನ್ನು ನೋಡಲಿಲ್ಲವಲ್ಲ ಎಂದು ದುಃಖವಾಗುತ್ತದೆ.

ಸಹ್ಯಾದ್ರಿಯನ್ನು ಉಳಿಸಲು ಹೋರಾಡಿದ್ದು, ಅರಣ್ಯವನ್ನುಳಿಸಲು ಹೋರಾಟ, ಶಿರಸಿಯ ಬೇಡ್ತಿ ಅಣೆಕಟ್ಟು ವಿರುದ್ಧ ಚಳುವಳಿ, ಶರಾವತಿ ಟೇಲರೇಸ್ ಯೋಜನೆ ವಿರುದ್ಧ ಹೋರಾಟ, ಹೊನ್ನಾವರದ ಅಬಕಾರಿ ಗುತ್ತಿಗೆದಾರರ ಸಾರಾಯಿ ವಿರುದ್ಧದ ಆಂದೋಲನ ಇತ್ಯಾದಿ ಒಂದೇ ಎರಡೇ ಅವರ ಸಾಧನೆಗಳು. (ಈಗ ಅವರಿರುತ್ತಿದ್ದರೆ ಈ ನದಿ ತಿರುಗಿಸುವ ಯೋಜನೆಯನ್ನು ಯಶಸ್ವಿಯಾಗಿ ನಿಲ್ಲಿಸುತ್ತಿದ್ದರೇನೊ.) ಸಾರಾಯಿ ವಿರುದ್ಧ ಆಂದೋಲನದಲ್ಲಿ ಜೈಲಿಗೂ ಹೋಗಬೇಕಾಗಿ ಬಂತು. ಅಲ್ಲಿಯೂ ಅವರು ಸುಮ್ಮನೆ ಕೂರಲಿಲ್ಲ. ಅಲ್ಲಿಯ ಕೈದಿಗಳಿಗೆ ಹಾಡು, ಅಕ್ಷರಾಭ್ಯಾಸ ಕಲಿಸಿ, ಇತರ ಕೆಲಸದಲ್ಲಿ ತೊಡಗಿ ೧೯ ದಿನ ಕಳೆದರು. ಕುಸುಮ ಅವರೊಂದಿಗೆ ಕಳೆದ ಸಮಯ ಅಲ್ಲಿದ್ದ ಕೈದಿಗಳಿಗೆ ಅವಿಸ್ಮರಣೀಯ ದಿನಗಳು.

(ಹೆಚ್ಚು…)

Read Full Post »