ಸುರಹೊನ್ನೆ ಇ ಪತ್ರಿಕೆಯಲ್ಲಿ ಪ್ರಕಟಿತ
Archive for the ‘ಪುಟ್ಟ ಕಥೆ’ Category
ಹೇಳುವುದು ಒಂದು ಮಾಡುವುದು …..
Posted in ಪುಟ್ಟ ಕಥೆ on ಜುಲೈ 16, 2014| 2 Comments »
ಭಾಷಾಭಿಮಾನ
Posted in ಪುಟ್ಟ ಕಥೆ on ಜುಲೈ 5, 2014| Leave a Comment »
ಕೀರ್ತಿವಂತ ಬಹುಭಾಷಾ ಬಲ್ಲಿದ. ಅವನಿಗೆ ಇತ್ತೀಚೆಗೆ ರಾಮಕೃಷ್ಣ ಸ್ನೇಹಿತನಾದ. ನನ್ನ ಮಾತೃಭಾಷೆ ಯಾವುದೆಂದು ಹೇಳು ಎಂದು ಸ್ನೇಹಿತನಿಗೆ ಸವಾಲೆಸೆದ. ಹೇಳಿದರೆ ನಿನಗೊಂದು ಮೊಬೈಲು ಉಡುಗೊರೆ ಕೊಡುವೆ ಎಂದ. ಅವನ ಷರತ್ತಿಗೆ ರಾಮಕೃಷ್ಣ ಒಪ್ಪಿದ.
ರಾಮಕೃಷ್ಣ ಒಂದು ದಿನ ಕೀರ್ತಿವಂತನನ್ನು ಮನೆಗೆ ಕರೆಸಿ ಅವನಿಗೆ ರಾಜೋಪಚಾರ ಮಾಡಿ ಮಲಗಲು ಕೋಣೆಯಲ್ಲಿ ಸುಪ್ಪತ್ತಿಗೆ ನೀಡಿದ. ಕೀರ್ತಿವಂತ ಊಟವಾಗಿ ಮಲಗಲು ಬಂದ. ಮಂಚದಲ್ಲಿ ಹಾಸಿಗೆ ಕಂಡದ್ದೇ ಬಿದ್ದುಕೊಂಡ. ಒಮ್ಮೆಲೆ ಚಂಗನೆ ಕೆಳಗೆ ನೆಗೆದು `ಓ ಗಾಡ್’ ಎಂದು ಉದ್ಗರಿಸಿದ. ಇದನ್ನೆಲ್ಲ ರಾಮಕೃಷ್ಣ ಮರೆಯಲ್ಲಿ ನಿಂತು ನೋಡುತ್ತಿದ್ದ. ಅವನ ಉದ್ಗಾರ ಕೇಳಿದ್ದೇ ಏನಾಯಿತು ಎಂದು ಅವನ ಬಳಿ ಧಾವಿಸಿದ.
`ಹಾಸಿಗೆಯಲ್ಲಿ ಏನೋ ಚುಚ್ಚಿತು’ ಎಂದ ಕೀರ್ತಿವಂತ. ರಾಮಕೃಷ್ಣ ಹಾಸಿಗೆಯ ಬಟ್ಟೆ ಸರಿಸಿ ನೋಡಿದಾಗ ಅಲ್ಲಿ ಕೆಲವು ಗುಂಡುಸೂಜಿ ಕಂಡುಬಂತು. `ಓ ಅದೇಗೆ ಇಲ್ಲಿ ಬಂತು? ಕ್ಷಮಿಸಬೇಕು’ ಎಂದು ನುಡಿದು ಅವನ್ನೆಲ್ಲ ತೆಗೆದು ಮಲಗಲು ಅನುವು ಮಾಡಿಕೊಟ್ಟ.
ಮಾರನೇ ದಿನ ರಾಮಕೃಷ್ಣ ಕೀರ್ತಿವಂತನಿಗೆ `ನಿನ್ನ ಮಾತೃಭಾಷೆ ಯಾವುದೆಂದು ಗೊತ್ತಾಯಿತು.’ ಎಂದ.
`ಯಾವುದು ಹೇಳು’ ಎಂದ ಕೀರ್ತಿವಂತ ಕಾತರದಿಂದ.
`ಕನ್ನಡ ಅಲ್ಲವೆ?’ ಎಂದ ರಾಮಕೃಷ್ಣ. ಕೀರ್ತಿವಂತ ಸತ್ಯ ಒಪ್ಪಲೇಬೇಕಾಯಿತು.
`ಹೇಗೆ ಇದನ್ನು ಕಂಡುಹಿಡಿದೆ’ ಎಂದು ಕುತೂಹಲದಿಂದ ಕೇಳಿದ ಕೀರ್ತಿವಂತ.
ರಾಮಕೃಷ್ಣ ತೆನಾಲಿ ರಾಮನ ಕತೆ ಹೇಳಿದ. ಒಮ್ಮೆ ಕೃಷ್ಣದೇವರಾಯನ ಆಸ್ಥಾನದಲ್ಲಿ ಒಬ್ಬ ವಿದ್ವಾಂಸ ಬಂದು ಹೀಗೆ ಸವಾಲೆಸೆದಿದ್ದ. ಆಗ ತೆನಾಲಿ ರಾಮ ಈ ಉಪಾಯವನ್ನು ಮಾಡಿದ್ದು. ಆಗವನು ಅವನ ಮಾತೃಭಾಷೆಯಲ್ಲಿ ಕಿರುಚಿದ್ದು ಕತೆ ಹೇಳಿದ. ಆದರೆ ಕೀರ್ತಿವಂತನ ಕತೆಯಲ್ಲಿ ಸ್ವಲ್ಪ ಮಾರ್ಪಾಡು. ಅವನು ಕಿರಿಚಿದ್ದು ಆಂಗ್ಲದಲ್ಲಿ. ನಮ್ಮ ಕನ್ನಡದವರು ಮಾತ್ರ ನೋವಾದಾಗಲೂ ಪರಭಾಷೆಯಲ್ಲಿ ಕಿರುಚಲು ಸಾಧ್ಯ. ಎಂದು ಬುದ್ಧಿವಂತ ರಾಮಕೃಷ್ಣನಿಗೆ ಗೊತ್ತಿತ್ತು!
www.surahonne.com ನಲ್ಲಿ ಪ್ರಕಟಗೊಂಡ ಪುಟ್ಟಕಥೆ
ಏಕೆ ಕಾಡುವೆ ಹೀಗೆ?
Posted in ಪುಟ್ಟ ಕಥೆ on ಫೆಬ್ರವರಿ 10, 2014| 3 Comments »
ಅವತ್ತೊಂದು ದಿನ ರಾತ್ರಿ ಕತ್ತಲೆಯಲ್ಲೇಮನೆಯಿಂದ ಹೊರಬಂದೆ. ಗಾಡಾಂಧಕಾರ, ಆಕಾಶದಲ್ಲಿ ಅಲ್ಲೊಂದು ಇಲ್ಲೊಂದು ನಕ್ಷತ್ರಗಳು ಮಿನುಗುತ್ತಿದ್ದುವು. ತಣ್ಣನೆಯ ಗಾಳಿ ಬೀಸುತ್ತಿತ್ತು. ಹಿತವಾದ ಹವೆ ಇತ್ತು. ಆಗ ಅಕಸ್ಮಾತ್ ನಾನು ನಿನ್ನನ್ನು ಮುಟ್ಟಿದೆ. ವಿದ್ಯುತ್ ಶಾಕ್ ಹೊಡೆದಂತಾಗಿ ಮುಟ್ಟಿದಷ್ಟೇ ವೇಗದಲ್ಲಿ ಕೈ ಹೊರತಂದೆ. ಆದರೂ ಆ ಒಂದು ಕ್ಷಣದಲ್ಲಿ ನನ್ನ ಜೀವನದಲ್ಲೇ ಮೊದಲಬಾರಿ ದುರ್ಘಟನೆ ನಡೆದು ಬಿಟ್ಟಿತ್ತು. ನಿನ್ನ ಮುಟ್ಟಿದಾಗ ತಣ್ಣನೆಯ ಹವೆಯಲ್ಲೂ ನನ್ನ ಮೈ ಬಿಸಿಯಾದ ಅನುಭವವಾಯಿತು. ನಾನು ಬೇಕೂಂತ ಖಂಡಿತಾ ನಿನ್ನನ್ನು ಮುಟ್ಟಿಲ್ಲ. ನೀನು ಅಲ್ಲಿದ್ದದ್ದು ಗೊತ್ತಾಗಿದ್ದರೆ ನಾನು ದೂರವೇ ಇರುತ್ತಿದ್ದೆ. ನಿನ್ನ ಹತ್ತಿರ ಬರುವ ಪ್ರಮೇಯವೇ ನನಗಿರಲಿಲ್ಲ. ನೀನೇಕೆ ಅಡಗಿ ಕುಳಿತು ನನ್ನನ್ನು ಕಾಯುತ್ತಿದ್ದೆ? ನಿನ್ನನ್ನು ಸ್ಪರ್ಶಿಸಿದನಂತರ ನನಗೆ ತುಂಬ ವೇದನೆಯಾಯಿತು. ಅಕಸ್ಮಾತ್ ಆದ್ರೂ ನಿನ್ನನ್ನೇ ಮುಟ್ಟಬೇಕಿತ್ತ?
ಎಷ್ಟು ಉಜ್ಜಿ ತೊಳೆದರೂ ನಿನ್ನ ನೆನಪು ಮಾಸುವುದೇ ಇಲ್ಲ. ಮತ್ತೇನು ಮಾಡಲಿ? ಕೈಯನ್ನು ಕಲ್ಲಿಗೆ ಹಾಕಿ ಚೆನ್ನಾಗಿ ರಕ್ತ ಬರುವಷ್ಟು ಉಜ್ಜಿದೆ. ನೀನು ಮರೆಯಲ್ಲಿ ನಿಂತು ನನ್ನನ್ನು ನೋಡಿ ನಗುತ್ತಿರುವಂತೆ ಭಾಸವಾಯಿತು. ನನಗೆ ಸಮಾಧಾನವಾಗಲಿಲ್ಲ. ಸಾಬೂನು ಹಾಕಿ ಕೈ ತೊಳೆದೆ. ಆಗ ಸ್ವಲ್ಪ ಸ್ವಲ್ಪವೇ ನಿನ್ನ ಅಸ್ತಿತ್ತ್ವ ಮಾಸಲು ಪ್ರಾರಂಭಿಸಿದಾಗ ನಾನು ಹರ್ಷಿಸಿದೆ. ಆದರೂ ನೀನಿನ್ನೂ ಇದ್ದೀಯೇನೋ ಎನ್ನುವ ಭಾವ ಮಾತ್ರ ಇವತ್ತಿಗೂ ಹೋಗಲೇ ಇಲ್ಲ. ನಿನ್ನ ಇರುವಿನಿಂದ ಭಯಗೊಂಡು ಈಗ ಕತ್ತಲೆಯಲ್ಲಿ ಹೊರಗೆ ಹೋಗುವುದನ್ನೇ ಬಿಟ್ಟಿರುವೆ.
ಕಣ್ಣುಮುಚ್ಚಿ ಮಲಗಿದರೂ ನಿನ್ನದೇ ರೂಪ ಮನದಲ್ಲಿ. ಕನಸಲ್ಲೂ ಕೂಡ ನಿನ್ನದೇ ನೆನಪು. ಏಕೆ ಕಾಡುವೆ ಹೀಗೆ? ನಾನೇನು ಮಾಡಿದ್ದೆ ನಿನಗೆ? ದಯವಿಟ್ಟು ನನ್ನನ್ನು ಬಿಟ್ಟುಬಿಡು. ನನ್ನ ಮನದಿಂದ ಹೊರಹೋಗಿ ನಿನ್ನಪಾಡಿಗೆ ನೀನಿರು.
ನಮ್ಮ ಊರಲ್ಲಿ ನಿನ್ನನ್ನು ಹಿಸ್ಕು ಅಂತಲೂ, ಇಲ್ಲಿ ಗೊಣ್ಣೆಹುಳ ಅಂತಲೂ ಕರೆಯುತ್ತಾರೆ. ನಿನ್ನಮೇಲೆ ನಮ್ಮೂರಲ್ಲಿ ಹೀಗೊಂದು ಮಾತಿದೆ. ಕೆಲಸವಿಲ್ಲದೆ ಇದ್ದರೆ ಹಿಸ್ಕು ಮುಟ್ಟು ಅಂತ. ಒಂದರ್ಧ ಗಂಟೆಯಾದರೂ ಬೇಕು ಕೈತೊಳೆದು ನಿನ್ನ ನೆನಪಿನಿಂದ ಹೊರಬರಲು!
ಫ಼ೆಬ್ರವರಿ ೧ ಸಖಿ ಪಾಕ್ಷಿಕದಲ್ಲಿ ಪ್ರಕಟಿತಗೊಂಡ ಪುಟ್ಟ ಕಥೆ
ಹೀಗೊಂದು ಹತ್ಯೆ
Posted in ಪುಟ್ಟ ಕಥೆ on ಸೆಪ್ಟೆಂಬರ್ 14, 2013| 2 Comments »
ಕಾನೂನಿನಲ್ಲಿ ನಮ್ಮ ರಕ್ಷಣೆಗಾಗಿ ಹತ್ಯೆ ಮಾಡಲು ಅವಕಾಶವಿದೆ. ಅದರ ಸದುಪಯೋಗಪಡಿಸಿಕೊಂಡ ನಾನು ಹತ್ಯೆ ಮಾಡಲೇಬೇಕಾದ ಪ್ರಸಂಗವನ್ನಿಲ್ಲಿ ಹೇಳುತ್ತೇನೆ. ಎಷ್ಟು ಕಾಟ ಕೊಟ್ಟ ಅಂದರೆ ಹತ್ಯೆ ಮಾಡದೆ ಬೇರೆ ದಾರಿಯೇ ಇರಲಿಲ್ಲ.
ಏನು ಹೇಳುತ್ತೀರಿ ನನ್ನ ಪಡಿಪಾಟಲಿಗೆ. ಮನೆಯಿಂದ ಹೊರಗೆ ಹೋದಾಗಲಷ್ಟೆ ನಾನು ನೆಮ್ಮದಿಯಿಂದ ಇರುತ್ತಿದ್ದುದು. ಮನೆಗೆ ಬರಲೇ ಬಹಳ ಬೇಜಾರು ಅನಿಸುತ್ತಿತ್ತು. ಹಗಲೆಂದಿಲ್ಲ ರಾತ್ರಿಯೆಂದಿಲ್ಲ. ಹೊತ್ತುಗೊತ್ತಿನ ಪರಿವೆಯೇ ಇಲ್ಲ. ಎಷ್ಟು ತೊಂದರೆ ಅನುಭವಿಸಿದೆ ಅಂದರೆ ಅದಕ್ಕೆ ಲೆಕ್ಕವೇ ಇಲ್ಲ. ಒಂದು ದಿನ ಕೂಡ ನಾನು ಮನೆಯಲ್ಲಿ ನೆಮ್ಮದಿಯಿಂದ ಕೂತದ್ದಿಲ್ಲ, ನಿದ್ರೆ ಮಾಡಿದ್ದಿಲ್ಲ. ಕುಳಿತು ಪತ್ರಿಕೆ ಓದಲು ಬಿಡಲಿಲ್ಲವೆಂದರೆ ನಂಬಬೇಕು. ಎಷ್ಟು ಕಾಡಿ ಬೇಡಿದರೂ ಕೇಳಲಿಲ್ಲ. ನನ್ನ ಬಳಿ ಬರಬೇಡ, ತೊಂದರೆ ಕೊಡಬೇಡ. ಬಳಿ ಬಂದರೆ ಒಂದಲ್ಲ ಒಂದು ದಿನ ನಿನಗೇ ಅದರಿಂದ ತೊಂದರೆ ತಪ್ಪಿದ್ದಲ್ಲ ಎಂದು ಪ್ರತೀದಿನ ಹೇಳುತ್ತ ಎಚ್ಚರಿಕೆ ಕೊಡುತ್ತಲೇ ಇದ್ದೆ. ನನ್ನ ಮಾತಿಗೆ ಕ್ಯಾರೇ ಅನ್ನಲಿಲ್ಲ. ಆದರೂ ನಾನು ಸುಮ್ಮನಿದ್ದೆ. ಬದುಕಿಕೊಳ್ಳಲಿ ಎಂದು.
ಹೀಗೆ ಒಂದು ದಿನ ಬೆಳಗ್ಗೆ ನಾನು ಪತ್ರಿಕೆ ಹಿಡಿದು ಕೂತಿದ್ದೆ ಅಷ್ಟೆ. ಇನ್ನೂ ಓದಲು ತೊಡಗಿರಲಿಲ್ಲ. ನನ್ನ ಬಳಿ ಬಂದು ರಾಗವಾಗಿ ಹಾಡಲು ತೊಡಗಿ, ಹಣೆ ಎಲ್ಲೆಂದರಲ್ಲಿ ಸವರಲು ತೊಡಗಿದ್ದೇ ತಡ ಎಲ್ಲಿಲ್ಲದ ಸಿಟ್ಟು ಆವರಿಸಿತು. ಪತ್ರಿಕೆ ಓದುವಾಗ ತೊಂದರೆ ಮಾಡಿದರೆ ನನಗೆ ಬಲು ಕೋಪ ಬರುತ್ತದೆ. ಆದರೂ ಸಿಟ್ಟು ಹತೋಟಿಯಲ್ಲಿಟ್ಟುಕೊಂಡೇ ಬೇಡ, ದೂರ ಹೋಗು ಎಂದು ಒಳ್ಳೆಯ ಮಾತಿನಲ್ಲಿ ಹೇಳಿ ನೋಡಿದೆ. ಕೇಳಲಿಲ್ಲ. ತೊಂದರೆ ಮುಂದುವರಿದೇ ಇತ್ತು. ಅದೂ ಬೆಳಗಿನ ಹೊತ್ತು. ಹೊತ್ತು ಗೊತ್ತು ಇಲ್ಲದೆ ಕಾಟ ಕೊಡುವಾಗ ತಡೆದುಕೊಂಡಿರಲು ಹೇಗೆ ಸಾಧ್ಯ? ಇಷ್ಟು ದಿನ ನನ್ನ ಸತಾಯಿಸಿದ್ದು ಮರೆಯುವಂತಿಲ್ಲವಲ್ಲ. ಎಷ್ಟೂ ಅಂತ ಸಹಿಸಲು ಸಾಧ್ಯ? ದೂರ್ವಾಸಮುನಿಯ ಅಪರಾವತಾರ ಎತ್ತಿದೆ. ಒಂದೇ ಏಟು ಅಷ್ಟೆ ನಾನು ಕೊಟ್ಟದ್ದು. ಅಲ್ಲಿಗೇ ಕಥೆ ಮುಗಿದೇ ಹೋಯಿತು. ಹತ್ಯೆ ನಡೆದೇ ಹೋಗಿತ್ತು. ಸಿಟ್ಟಿನ ಕೈಗೆ ಬುದ್ಧಿಕೊಟ್ಟರೆ ಇನ್ನೇನು ಆಗುತ್ತೆ ಮತ್ತೆ.
ಈಗಲೂ ಅಷ್ಟೆ. ನನ್ನ ಬಳಿ ಬಂದಾಗ ಮೊದಲು ಎಚ್ಚರ ಹೇಳುತ್ತೇನೆ. `ಸೊಳ್ಳೆ ಸಂತಾನಗಳೇ ನನ್ನ ಬಳಿ ಬಂದಿರೋ, ನನ್ನ ಮೈ ಮುಟ್ಟಿದಿರೋ ಅಲ್ಲಿಗೆ ನಿಮ್ಮ ಆಯುಷ್ಯ ಮುಗಿದಂತೆಯೇ’ ಎಂದು. ಆದರೂ ನನ್ನ ಮಾತು ಕೇಳದೆ ಹೋದರೆ ಮತ್ತೆ ಅಲ್ಲಿ ನಡೆಯುವುದು ಕಗ್ಗೊಲೆಯೇ.
ಆಗಸ್ಟ್ ೧೫ರ ಸಖಿ ಪಾಕ್ಷಿಕದಲ್ಲಿ ಪ್ರಕಟಿತ ಪುಟ್ಟಕಥೆ