Feeds:
ಲೇಖನಗಳು
ಟಿಪ್ಪಣಿಗಳು

Archive for the ‘ಪತ್ರಿಕಾ ಪ್ರಕಟಣಾ ಹಾಸ್ಯಲಹರಿ’ Category

ಮೈಸೂರಿನ ಕುವೆಂಪುನಗರದಲ್ಲಿರುವ ಒಂದು ಖಾನಾವಳಿಗೆ ಪಾನೀಪೂರಿ, ದೋಸೆ ತಿನ್ನುವ ಸಲುವಾಗಿ ಒಂದು ಸಂಜೆ ಮಗಳು ಅಳಿಯ ಒಂದು ಸ್ಕೂಟರಿನಲ್ಲಿ ನಾನೊಂದು ಸ್ಕೂಟರಿನಲ್ಲಿ ಹೋದೆವು. ನಾನು ಖಾನಾವಳಿಯ ಪಕ್ಕದಲ್ಲಿ ಕಾಲುದಾರಿಯಲ್ಲಿ ಸ್ಕೂಟರ್ ನಿಲ್ಲಿಸಿದೆ. ಸಾಲಾಗಿ ಆರೇಳು ಬೈಕುಗಳು ಅಲ್ಲಿ ಅದಾಗಲೆ ನಿಂತಿದ್ದುವು. ಮಗಳು ಸ್ಕೂಟರನ್ನು ಸುರಕ್ಷಿತ ಸ್ಥಳದಲ್ಲಿ ನಿಲ್ಲಿಸಿ ಬಂದು, ನೀನೆಲ್ಲಿ ನಿಲ್ಲಿಸಿದೆ ಎಂದು ನನ್ನನ್ನು ಕೇಳಿದಳು. ಸ್ಕೂಟರ್ ನಿಲ್ಲಿಸಿದ ಸ್ಥಳ ತೋರಿಸಿದೆ. ಏ, ಬೇಡ ಅಲ್ಲಿ ನಿಲ್ಲಿಸಬೇಡಾ. ಅಲ್ಲಿ ನಿಲ್ಲಿಸಬಾರದೋ ಏನೋ. ತೆಗೆದು ಬೇರೆಡೆ ನಿಲ್ಲಿಸಿ ಬಾ. ಎಂದಳು. ಏನಾಗಲ್ಲ ಅಲ್ಲಿ ಸುಮಾರು ಗಾಡಿಗಳನ್ನು ನಿಲ್ಲಿಸಿದ್ದಾರೆ. ಅವರೆಲ್ಲ ಮೂರ್ಖರಾ ಎಂದು ವಾದ ಮಾಡಿದೆ. ಅಳಿಯನೂ ಅದಕ್ಕೆ ಅನುಮೋದನೆ ಕೊಟ್ಟ. ನನ್ನ ವಾದಸರಣಿಗೆ ಮಗಳು ಸೋತು ಸುಮ್ಮನಾದಳು. ಪಾನಿಪೂರಿ, ದೋಸೆ ತಿಂದು ಹೊರಗೆ ಬಂದೆವು. ನೋಡಿದಾಗ ಅಲ್ಲಿ ನನ್ನ ಸ್ಕೂಟರ್ ನಾಪತ್ತೆ. ಒಂದು ವಾಹನವೂ ಇಲ್ಲ ಅಲ್ಲಿ! ಮಗಳು ಸ್ಕೂಟರ್ ತಂದು ನಮ್ಮ ಪಕ್ಕ ನಿಲ್ಲಿಸಿದವಳೇ ನಮ್ಮ ಪೆಚ್ಚುಮೋರೆ ನೋಡಿ ಏನಾಯಿತು ಎಂದು ಕೇಳಿದಳು. ಸ್ಕೂಟರ್ ಎತ್ತಾಕಿಕೊಂಡು ಹೋಗಿದ್ದಾರೆ ಎಂದೆ ಸಣ್ಣ ಸ್ವರದಲ್ಲಿ. ನಾನು ಹೇಳಿದ್ದೆ ಅಲ್ಲಿ ನಿಲ್ಲಿಸುವುದು ಬೇಡ ಎಂದು. ಇಬ್ಬರೂ ಸೇರಿ ಇವಳೊಬ್ಬಳು ಎಲ್ಲದಕ್ಕೂ ಹೆದರುತ್ತಾಳೆಂದು ನನ್ನನ್ನೇ ತಮಾಷೆ ಮಾಡಿದಿರಿ. ಹೀಗಾಗುವ ಬದಲು ಮುಂಜಾಗ್ರತೆ ಮಾಡುವುದು ಎಷ್ಟೋ ಒಳ್ಳೆಯದು. ಯಾವುದಕ್ಕೂ ಮುಂಜಾಗ್ರತೆ ಬೇಕು ಎಂದು ಅಜ್ಜಿ ಹೇಳಿದ್ದಾರೆ. ಅಜ್ಜಿ ಹೇಳಿದ್ದು ಸರಿ. ಎಂದು ಸರೀ ಬೈದಳು. ಬೈದದ್ದನ್ನೆಲ್ಲ ತುಟಿಪಿಟಿಕ್ಕೆನ್ನದೆ ಕೇಳಿದೆ. ಅಳಿಯನೂ ಬಾಯಿಬಿಡಲಿಲ್ಲ. ಆಗ ಪ್ರತಿಯಾಗಿ ಮಾತಾಡುವ ಸ್ಥಿತಿಯಲ್ಲಿರಲಿಲ್ಲ ನಾವು!

   ಸ್ಕೂಟರ್ ಅನಂತನ ಹೆಸರಿನಲ್ಲಿತ್ತು. ಹಾಗಾಗಿ ಅನಂತನಿಗೆ ಫೋನಾಯಿಸಿದೆ. ‘ನೀನು ಕೀಲಿ ತಕ್ಕೊಂಡು ಆರಕ್ಷಕ ಠಾಣೆಗೆ ಬಾ. ಅದೇನು ಮೂರು ನಿಮಿಷದ ಕೆಲಸ. ದುಡ್ಡುಕಟ್ಟಿ ತೆಕ್ಕೊಂಡು ಬರುವುದೇ. ಹಿಂದೆ ಎರಡು ಸಲ ನನಗೂ ಈ ಅನುಭವ ಆಗಿತ್ತು’ ಎಂದಾಗ ನನ್ನ ಪುಕು ಪುಕು ತಹಬಂದಿಗೆ ಬಂತು! ಮಗಳು ನನ್ನನ್ನು ಪೋಲೀಸ್ ಠಾಣೆಗೆ ಬಿಟ್ಟಳು. ಅದಾಗಲೇ ಅನಂತ ಕಚೇರಿಯಿಂದ ಅಲ್ಲಿಗೆ ಬಂದಿದ್ದ. ಗಾಡಿ ಸಂಖ್ಯೆ ಹೇಳಿದಾಗ ರೂ. ೩೦೦ ಕಟ್ಟಿದ ಬಳಿಕ ಗಾಡಿ ತಗೊಂಡೋಗಿ ಎಂದರು. ನಾನು ಏನೇನೋ ಕಲ್ಪನೆ ಮಾಡಿದ್ದೆ. ಗಾಡಿ ಯಾರ ಹೆಸರಲ್ಲಿದೆಯೋ ಅವರು ಗುರುತು ಚೀಟಿ ಕೊಂಡೋಗಿ ಪೋಲೀಸರ ಎದುರು ತೋರಿಸಬೇಕು. ಆಗ ಮಾತ್ರ ಗಾಡಿ ಕೊಡುತ್ತಾರೆ ಎಂದೆಲ್ಲ ಕಲ್ಪಿಸಿಕೊಂಡೇ ಅನಂತನಿಗೆ ಹೇಳಿದ್ದು. ಇಲ್ಲಿ ನೋಡಿದಾಗ ಅನಂತ ಬರಬೇಕೆಂದೇ ಇರಲಿಲ್ಲ. ಆದರೆ ಠಾಣೆಯಲ್ಲಿ ಅವರು ಯಾವ ದಾಖಲೆಯನ್ನೂ ಕೇಳಲಿಲ್ಲ. ಗಾಡಿ ಯಾರ ಹೆಸರಲ್ಲಿದೆ ಎಂದೂ ಕೇಳಲಿಲ್ಲ. ಅವರಿಗೆ ರೂ. ೩೦೦ ಮುಖ್ಯವೇ ಹೊರತು ಗಾಡಿಯ ಗೊಡವೆ ಅವರಿಗೆ ಬೇಡ. ಎಂಬುದು ನನಗೆ ವೇದ್ಯವಾಯಿತು. ನಾನು ಯಾವ ಗಾಡಿ ಕೊಂಡೋದೆ ಎಂದು ಅವರು ಅತ್ತ ಕಣ್ಣು ಹಾಯಿಸಲೂ ಇಲ್ಲ. ಹೀಗೂ ಉಂಟೆ? ಎಂದು ನಾನು ಬಾಯಿಬಿಟ್ಟು ಯೋಚಿಸಿದೆ! ದುಡ್ಡು ಅಷ್ಟೇ ಮುಖ್ಯ ಎಂದರಿವಾಯಿತು.

ಪಾನಿಪೂರಿ, ದೋಸೆಯ ಬೆಲೆ ಬಲು ದುಬಾರಿಯೆನಿಸಿ ಹೊಟ್ಟೆಯಲ್ಲಿ ಅವು ಭಗಭಗ ಉರಿಯಲು ತೊಡಗಿತು! ಈ ಘಟನೆಯಿಂದ ತಿಳಿದುಕೊಳ್ಳುವ ನೀತಿಪಾಟವೇನು? ಮಕ್ಕಳು ಹೇಳಿದ್ದು ಕೆಲವೊಮ್ಮೆ ಸುಳ್ಳಾಗುವುದಿಲ್ಲ. ಮಕ್ಕಳ ಮಾತನ್ನು ಒಮ್ಮೊಮ್ಮೆಯಾದರೂ ತಾಳ್ಮೆಯಿಂದ ಕೇಳಬೇಕು. ಅವರು ಹೇಳಿದಂತೆ ನಡೆದುಕೊಳ್ಳಬೇಕು. ಮಕ್ಕಳು ಜಾಣರಿರುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಅಮ್ಮಂದಿರು ಕೆಲವೊಮ್ಮೆ ತಾವು ಅತೀಬುದ್ಧಿವಂತರೆಂದು ತಿಳಿದುಕೊಳ್ಳುವುದನ್ನು ಬಿಡಬೇಕು!

ಪ್ರಕಟ: ಅಪರಂಜಿ ಅಕ್ಟೋಬರ ೨೦೧೬

Read Full Post »

 ನೆಚ್ಚಿನ ನಟ ರಾಜಕುಮಾರ್ ಅಭಿನಯದ ಸಂಪತ್ತಿಗೆ ಸವಾಲ್ ಸಿನೆಮಾ ದೂರದರ್ಶನದಲ್ಲಿ ಬರುತ್ತಿತ್ತು. ಸಿನೆಮ ನೋಡುತ್ತಿರುವಾಗ ಪಾರು ಬಾಯಿ ಸುಮ್ಮನಿರುತ್ತಿರಲಿಲ್ಲ. ಹುರಿಗಾಳು, ಕಡ್ಲೆಬೀಜ ಏನಾದರೂ ಇದ್ದರೆ ಅದರ ಸುಖ ಬೇರೆಯೇ! ಹುರಿಗಾಳು ಮೆಲ್ಲುತ್ತ, ಕಣ್ಣು ಸಿನೆಮ ನೋಡುತ್ತಲಿತ್ತು. ಸಿನೆಮಾ ಮುಗಿದಾಗುವಾಗ ಪಾರು ತಲೆ ಸಣ್ಣಗೆ ನೋಯಲು ತೊಡಗಿತು. ಮನೆಯಲ್ಲಿ ಕೂತರೆ ತಲೆನೋವು ಜಾಸ್ತಿಯಾದೀತೆಂದು ಹೊರಗೆ ಅಡ್ಡಾಡಿ ಬರುವುದು ಒಳ್ಳೆಯದೆಂದು ಅನುವಾದಾಗ, “ಬರುತ್ತ ಚುರುಮುರಿ ತಾ” ಎಂದು ಪಾರು ಮಗಳು ಅಪ್ಪಣೆ ಕೊಟ್ಟಳು. ರಸ್ತೆಯಲ್ಲಿ ಎರಡು ಸುತ್ತು ಹೋಗಿ ಬಂದರೂ ಚುರುಮುರಿ ಗಾಡಿಯವನ ಸಿದ್ಧತೆ ಮುಗಿದಿರಲಿಲ್ಲ. ಮತ್ತೊಂದು ಸುತ್ತು ತಿರುಗಿ ಬಂದಾಗುವಾಗ ಗಾಡಿಯವ ಮುಗಿಲಿಗೋ ಕಾಣದ ದೇವನಿಗೋ (ಮಳೆಯೇ ನಾನು ಮನೆಗೆ ಹೋದನಂತರ ಬಾರಪ್ಪ, ಈಗ ಬಂದು ನನ್ನ ವ್ಯಾಪಾರಕ್ಕೆ ನೀರು ಹಾಕಬೇಡಪ್ಪ ಎಂದು ಇರಬಹುದು) ನಮಸ್ಕರಿಸಿ ಚುರುಮುರಿ ಸಿದ್ಧ ಮಾಡಲು ಅಣಿಯಾಗಿದ್ದ. ಚುರುಮುರಿ ಕಟ್ಟಿಸಿಕೊಂಡು ಮನೆಗೆ ಬಂದಳು ಪಾರು.
ತಲೆನೋವು ಹಾಗೆಯೇ ಇತ್ತು. ೪ ತುತ್ತು ಚುರುಮುರಿ ಬಾಯಿಗೆ ಹಾಕಿಕೊಂಡಳು. ಇಷ್ಟದ ಚುರುಮುರಿ ಹೆಚ್ಚು ತಿನ್ನಲು ತಲೆನೋವು ಬಿಡಲಿಲ್ಲ. ಊಟವೂ ಬೇಡವೆನಿಸಿತು. ಎಲ್ಲ ಕೆಲಸ ಮುಗಿಸಿ ಬೇಗ ಮಲಗಲು ಅಣಿಯಾದಳು ಪಾರು. ತಲೆನೋವೆಂದು ಮಾತ್ರೆ ನುಂಗುವ ಅಭ್ಯಾಸವಿಲ್ಲದ ಪಾರು ಈ ತಲೆನೋವು ಮಾತ್ರ ಬರಬಾರದು. ಅದನ್ನು ಸಹಿಸುವುದು ಬಲು ಕಷ್ಟ ಎಂಬ ತೀರ್ಮಾನಕ್ಕೆ ಬಂದಳು. ಹೌದು ಈ ತಲೆನೋವು ಬಂದದ್ದಾದರೂ ಏಕೆ ಎಂಬ ಜಿಜ್ಞಾಸೆ ಕಾಡಿದಾಗ ನಿನ್ನೆ ರಾತ್ರೆ ಸೆಖೆಯಿಂದ ನಿದ್ರೆ ಬರದ ಕಾರಣದಿಂದ ಇರಬಹುದೆ? ಬೆಳಗಿನಿಂದ ನೀರು ಕುಡಿದದ್ದು ಕಡಿಮೆಯಾದ ಕಾರಣದಿಂದಿರಬಹುದೆ? ಈ ಎರಡು ಕಾರಣದಲ್ಲಿ ಯಾವುದಾದರೂ ಒಂದರಿಂದ ಬಂದಿರಬಹುದು ಎಂದು ತೀರ್ಮಾನಿಸಿದಳು. ತಲೆನೋವು ಬಂದಾಗ ವಾಂತಿಯಾದರೆ ಕೂಡಲೇ ತಲೆನೋವು ಕಡಿಮೆಯಾಗುತ್ತದೆ ಎಂಬ ಅನುಭವ ಪಾರುವಿನದು. ಆದರೆ ಈ ಬಾರಿ ವಾಂತಿ ಬರುವ ಹಾಗಾಗುತ್ತದೆಯೇ ಹೊರತು ವಾಂತಿಯಾಗುವ ಲಕ್ಷಣವಿಲ್ಲ.
ಮನುಜನಿಗೆ ಯಾವುದೇ ಖಾಯಿಲೆ ಬಂದರೂ, ‘ಯಾವ ರೋಗ ಬಂದರೂ ಈ ರೋಗ ಮಾತ್ರ ಬರಬಾರದಪ್ಪ’ ಎಂದು ಎಲ್ಲರೂ ಹೇಳುವುದು ಸಹಜ ತಾನೆ. ಹಾಗೆಯೇ ಪಾರೂ ಕೂಡ ಯಾವ ಖಾಯಿಲೆ ಬಂದರೂ ಈ ತಲೆನೋವು ಮಾತ್ರ ಬರಬಾರದು ಎಂದು ಬೇಡಿಕೊಂಡಳು. ಪಾರು ವಿದ್ಯುತ್ ಪಂಕದ ಅಡಿಯಲ್ಲಿ ಮಲಗಿದಳು. ಮಲಗುತ್ತಲೇ ನಾಳೆಯಿಂದ ಇನ್ನುಮುಂದೆ ಹುರಿಗಾಳು, ಬಜ್ಜಿ, ಬೋಂಡ, ಕಡ್ಲೆಬೀಜ, ಚುರುಮುರಿ ತಿನ್ನುವುದಿಲ್ಲ. ಹಾಳು ಈ ಬಾಯಿಚಪಲ. ತಿನ್ನುವುದನ್ನು ಕಡಿಮೆಮಾಡಿಕೊಳ್ಳಬೇಕು. ತಿನ್ನುವುದರಲ್ಲಿ ಒಂದು ಶಿಸ್ತು ಇರಬೇಕು ಎಂದು ಹೇಳಿಕೊಳ್ಳುತ್ತ ನಿದ್ದೆಗೆ ಜಾರಿದಳು.
ಮಾರನೇದಿನ ಬೆಳಗ್ಗೆ ಎದ್ದಾಗ ತಲೆನೋವು ಮಾಯವಾಗಿತ್ತು! ಅಚ್ಚುಕಟ್ಟಾಗಿ ತಿಂಡಿತಿಂದಳು. ಮದ್ಯಾಹ್ನ ಪೊಗದಸ್ತಾಗಿ ಊಟ ಮಾಡಿದಳು. ನಿನ್ನೆ ಚುರುಮುರಿ ತಿನ್ನಲಾಗಲಿಲ್ಲ ಎಂದು ಸಂಜೆ ಚುರುಮುರಿ ಮನೆಯಲ್ಲೆ ತಯಾರಿಸಿ ಹೊಟ್ಟೆಬಿರಿಯ ತಿಂದಳು. ಹುರಿಗಾಳು, ಕಡ್ಲೆಬೀಜ, ಬಜ್ಜಿ, ಬೋಂಡ ಎಲ್ಲ ಕಣ್ಣೆದುರು ಬಂತು. ಆದರೆ ಅವೆಲ್ಲ ಬೇಡ ಎಂದು ಮನಸ್ಸು ಹೇಳಲೇ ಇಲ್ಲ. ಅವೆಲ್ಲ ತಿಂಡಿಗಳೂ ಪಾರುಗೆ ಪಂಚಪ್ರಾಣ. ಸದ್ಯ ಬಚಾವ್! ನಿನ್ನೆ ಒಂದು ಹೊತ್ತಿನ ವೈರಾಗ್ಯ ಮಾತ್ರ ಬಂದಿರುವುದು ತನಗೆ ಎಂದು ಪಾರು ಸಮಾಧಾನ ಪಟ್ಟುಕೊಂಡಳು.

ಸೆಪ್ಟೆಂಬರ್ ೨೦೧೫ ವಿನೋದ

Read Full Post »

ನಾಗಮ್ಮಳ ಭಾವ ಹುಚ್ಚೇಗೌಡ ಯಮಲೋಕಕ್ಕೆ ಹೋಗಲು ತಯಾರಾಗಿದ್ದ. ಅವನನ್ನು ಕೊನೆಯಬಾರಿಗೆ ನೋಡಲೆಂದು ನಾಗಮ್ಮ ಅವನ ಮನೆಗೆ ಹೋಗಿ ಮಾತಾಡಿಸಿ ಬಂದಳು. ಹಾಗೆ ಅವನನ್ನು ನೋಡಿ ಕೊನೆಯ ಮಾತು ಆಡಲೆಂದು ದಿನಾ ಅವನ ಮನೆಗೆ ನೆಂಟರಿಷ್ಟರು ಬರುತ್ತಿದ್ದರು.
ಇತ್ತ ಯಮಲೋಕದಲ್ಲಿ ಯಮರಾಯ ಚಿತ್ರಗುಪ್ತನಿಂದ ಪಟ್ಟಿ ತರಿಸಿ, ಯಾವಾಗ ಯಾರ್ಯಾರನ್ನು ಇಲ್ಲಿಗೆ ಕರೆಸಿಕೊಳ್ಳಬೇಕು ಎಂದು ಅವಲೋಕಿಸುತ್ತಿದ್ದ. ಅದರಲ್ಲಿ ಹುಚ್ಚೇಗೌಡನ ಹೆಸರೂ ಇತ್ತು. ಯಮ ಒಂದನೆ ಕಿಂಕರನನ್ನು ಕರೆದು, ‘ನೋಡಪ್ಪ, ಇಂತ ಊರಲ್ಲಿ ಹುಚ್ಚೇಗೌಡ ಅಂತ ಇದ್ದಾನೆ. ನಾಳೆ ಬೆಳಗ್ಗೆ ಹೋಗಿ ಅವನಿಗೆ ಪಾಶ ಹಾಕಿ ಕರೆದುಕೊಂಡು ಬಾ. ಅವನ ಆಯುಸ್ಸು ಮುಗಿಯಿತು’ ಎಂದು ಆಜ್ಞಾಪಿಸಿದ.
ಒಂದನೆ ಯಮಕಿಂಕರನಿಗೆ ಪೇಚಾಟವಾಯಿತು. ನಾಳೆಯೇ ಅವನು ಮಾವನ ಮನೆಗೆ ಹೋಗಬೇಕಿತ್ತು. ಅದೂ ಹೆಂಡತಿಯ ತವರುಮನೆಗೆ. ಅವಳೂ ಮಕ್ಕಳು ಅವನ ಆಗಮನಕ್ಕಾಗಿ ಕಾಯುತ್ತಿದ್ದರು. ಈಗ ಇಂಥ ತುರ್ತು ಕೆಲಸ ಬಿದ್ದಿದೆ. ತಪ್ಪಿಸುವಂತಿಲ್ಲ, ಅತ್ತ, ಮಾವನ ಮನೆಗೆ ಹೋಗದೆಯೂ ಇರುವಂತಿಲ್ಲ. ಇಂಥ ಸಂದಿಗ್ಧ ಪರಿಸ್ಥಿಯಲ್ಲಿ ಚಿಂತಾಕ್ರಾಂತನಾಗಿರುವಾಗ ಅವನ ಸ್ನೇಹಿತ ಎರಡನೆ ಕಿಂಕರನ ಪ್ರವೇಶವಾಯಿತು.
‘ಏನೋ ಮಾರಾಯ, ಬಹಳ ಯೋಚನಾಕ್ರಾಂತನಾಗಿ ಕೂತಿದ್ದಿಯ?’ ಎಂದು ವಿಚಾರಿಸಿದ.
ನಡೆದ ವಿಷಯವನ್ನು ಸ್ಥೂಲವಾಗಿi ಅವನಿಗೆ ವಿವರಿಸಿದ. ‘ಅಷ್ಟೇ ತಾನೆ ಚಿಂತೆಬಿಡು. ನಿನ್ನ ಕೆಲಸ ನಾನು ಮಾಡುತ್ತೇನೆ. ನೀನು ನಿಶ್ಚಿಂತೆಯಿಂದ ಮಾವನ ಮನೆಗೆ ಹೋಗು. ಒಟ್ಟಿನಲ್ಲಿ ಹುಚ್ಚೇಗೌಡನ ಮನೆಗೆ ಹೋದರೆ ಆಯಿತಲ್ಲ. ಆ ಕೆಲಸ ನಾನು ಮಾಡುತ್ತೇನೆ. ಎಂದು ಅಭಯವನ್ನಿತ್ತ. ಅವನ ಮಾತು ಕೇಳಿದ್ದೇ ಖುಷಿಯಿಂದ ಮನೆಗೆ ಹೋಗಿ ಮಾವನ ಮನೆಗೆ ಹೊರಡುವ ತಯಾರಿ ನಡೆಸಿದ.
ಎರಡನೆ ಕಿಂಕರ ಮಾರನೇ ದಿನ ಬೆಳಗ್ಗೆ ಎದ್ದು ಒಂದನೆ ಕಿಂಕರ ಮಾಡಬೇಕಾದ ಕೆಲಸ ಪೂರೈಸಲು ಹುಚ್ಚೇಗೌಡನ ಮನೆಗೆ ಹೊರಟ. ಅಂತೂ ಹುಚ್ಚೇಗೌಡನ ಮನೆ ಪತ್ತೆ ಹಚ್ಚುವಲ್ಲಿ ಯಶಸ್ವಿಯಾದ. ಮನೆ ತಲಪಿದಾಗ ಅವನಿಗೆ ಅಲ್ಲಿ ಯಾರಿಗೆ ಯಮಪಾಶ ಹಾಕಬೇಕೆಂದೇ ತೋಚಲಿಲ್ಲ. ಮನೆ ತುಂಬ ಜನರಿದ್ದಾರೆ. ಅವನು ಗಡಿಬಿಡಿಯಲ್ಲಿ ಒಂದನೆ ಕಿಂಕರನಲ್ಲಿ ಯಾರಿಗೆ ಪಾಶ ಹಾಕಿ ಕರೆತರಬೇಕು ಎಂಬ ಮುಖ್ಯ ವಿಷಯವನ್ನು ಕೇಳಿ ತಿಳಿದುಕೊಳ್ಳಲು ಮರೆತಿದ್ದ. ಒಂದನೆ ಕಿಂಕರ ಕೂಡ ಮಾವನ ಮನೆಗೆ ಹೋಗುವ ಆತುರದಲ್ಲಿ ವಿವರ ಹೇಳದೆ ಹುಚ್ಚೇಗೌಡನ ಮನೆಗೆ ಹೋಗಲು ಹೇಳಿದ್ದ! ಮನೆ ಒಳಗೆ ಹೊರಗೆ ಹೋಗಿ ನೋಡಿದ. ಇಲ್ಲಿ ಯಾರ ಪ್ರಾಣ ತೆಗೆಯಬೇಕು ಎಂದೇ ಗೊತ್ತಾಗಲಿಲ್ಲ. ಮನೆಯೊಳಗೆ ತುಂಬ ಜನ ಕೂತಿದ್ದರು. ಅವರಲ್ಲಿ ಯಾರಿಗೆ ಪಾಶ ಹಾಕಬೇಕೆಂಬ ಗೊಂದಲದಿಂದ ತಲೆಕೆಟ್ಟು ಮನೆ ಹೊರಗೆ ಬಂದ. ಎದುರು ಜಗಲಿಯಲ್ಲಿ ಹುಚ್ಚೇಗೌಡನ ತಂಗಿ ಹುಚ್ಚಮ್ಮ, ಆಗಷ್ಟೆ ಹೊಟ್ಟೆತುಂಬ ಮುದ್ದೆ ಊಟ ಮಾಡಿ ತನ್ನ ಅಣ್ಣ ಇನ್ನು ನೆನಪು ಮಾತ್ರ, ಇಂದೋ ನಾಳೆಯೋ ಅವನ ಜೀವ ಹೋಗುತ್ತದೆ. ಅಣ್ಣ ನಿನಗೆ ಹೀಗಾಯಿತಲ್ಲ ಎಂದು ಚಿಂತಾಕ್ರಾಂತಳಾಗಿ ತಲೆಮೇಲೆ ಕೈಹೊತ್ತು ತೂಕಡಿಸುತ್ತ ಕೂತಿದ್ದಳು. ಪ್ರಯಾಣ ಮಾಡಿ ಬಂದ ಆಯಾಸದಿಂದ ತಲೆಕೂದಲು ಕೆದರಿತ್ತು. ಎರಡನೆ ಕಿಂಕರನ ಕಣ್ಣಿಗೆ ಹುಚ್ಚೇಗೌಡನ ತಂಗಿ ಕಂಡಳು. ಇವತ್ತೇ ಜೀವ ಹೋಗುತ್ತದೆ ಎಂದು ಹೊರ ಜಗಲಿಯಲ್ಲಿ ಒಬ್ಬಳನ್ನೇ ಕೂರಿಸಿ ಎಲ್ಲರೂ ಒಳಗೆ ಇದ್ದಾರೆ. ಇವಳೇ ಇರಬೇಕು. ಎಂದು ಬಲವಾಗಿ ನಂಬಿ ಕಲ್ಲುಗುಂಡಿನ ಹಾಗಿದ್ದ ಹುಚ್ಚಮ್ಮಳ ಕೊರಳಿಗೆ ಪಾಶ ಹಾಕಿಯೇ ಬಿಟ್ಟ. ಕೂತಲ್ಲೇ ಹುಚ್ಚಮ್ಮ ಶಿವನಪಾದ ಸೇರಿದಳು.
ಎರಡನೆ ಕಿಂಕರ ಅವಳನ್ನು ಯಮರಾಜ್ಯಕ್ಕೆ ಎಳೆತಂದ. ಚಿತ್ರಗುಪ್ತನಿಗೆ ಅವಳನ್ನು ಕಂಡು ಆಶ್ಚರ್ಯವಾಯಿತು. ಪಟ್ಟಿಯಲ್ಲಿ ಅವಳ ಹೆಸರಿಲ್ಲ. ಎರಡನೆ ಕಿಂಕರ ಮಾಡಿದ ಎಡವಟ್ಟಿನ ಕೆಲಸದ ಅರಿವಾದ ಚಿತ್ರಗುಪ್ತ ಒಂದನೆ ಕಿಂಕರನಿಗೆ ತುರ್ತು ಕರೆ ಮಾಡಿ ಅವನನ್ನು ಕರೆಸಿದ. ಏನಾಯಿತಪ್ಪ ಎಂದು ಧಾವಿಸಿ ಬಂದ ಒಂದನೆ ಕಿಂಕರನಿಗೆ ಸ್ನೇಹಿತ ಮಾಡಿದ ಕೆಲಸದಿಂದ ತಲೆಬಿಸಿಯಾಯಿತು. ಯಮರಾಜನಿಗೆ ಗೊತ್ತಾದರೆ ತನ್ನ ಕೆಲಸಕ್ಕೇ ಸಂಚಕಾರ. ಚಿತ್ರಗುಪ್ತನಿಗೆ ಹೇಗೋ ಮಸ್ಕ ಮಾಡಿ, ಹುಚ್ಚೇಗೌಡನ ಹೆಸರಿರುವಲ್ಲಿ ಹುಚ್ಚಮ್ಮ ಎಂದು ಬರೆಸಿ, ಹುಚ್ಚೇಗೌಡನ ಆಯಸ್ಸನ್ನು ಎರಡುದಿನ ಮುಂದೂಡಿ ಬರೆಸುವಲ್ಲಿ ಯಶಸ್ವಿಯಾದ. ಇನ್ನುಮುಂದೆ ತನಗೆ ಒಪ್ಪಿಸಿದ ಕೆಲಸವನ್ನು ಬೇರೆ ಯಾರಿಗೂ ಒಪ್ಪಿಸದೆ (ಮಾವನ ಮನೆಗೆ ಹೋಗಲಿದ್ದರೂ ಹೋಗದೆ) ಖುದ್ದಾಗಿ ತಾನೇ ಮಾಡುವುದಾಗಿ ಚಿತ್ರಗುಪ್ತನಿಗೆ ಮನವರಿಕೆ ಮಾಡಿಕೊಟ್ಟು, ಎರಡು ದಿನ ಕಳೆದು ಹುಚ್ಚೇಗೌಡನನ್ನು ಕರೆತಂದು ಯಮನಿಗೆ ಒಪ್ಪಿಸಿದ.

(ಆಗಸ್ಟ್ ೨೦೧೫ ವಿನೋದ)

Read Full Post »

ಅಡುಗೆ ಮಾಡುವುದು ಒಂದು ಕಲೆ. ಅದು ಎಲ್ಲರಿಗೂ ಸಿದ್ಧಿಸುವುದಿಲ್ಲ ಎನ್ನುವುದರಲ್ಲಿ ಸಂಶಯವೇ ಇಲ್ಲ. ನಾನೇ ಅದಕ್ಕೆ ಪ್ರತ್ಯಕ್ಷ ಉದಾಹರಣೆ. ಕೆಲವರಿಗೆ ವಿಧವಿಧ ಭಕ್ಷ್ಯ ಭೋಜ್ಯ ಅಡುಗೆ ತಯಾರಿಸುವುದರಲ್ಲಿ ಬಲು ಪ್ರೀತಿ ಇರುತ್ತದೆ. ನನ್ನಂಥ ಕೆಲವರಿಗೆ ಬದುಕಲು ಏನು ಬೇಕೋ ಅಷ್ಟು ಅಡುಗೆ ಮಾಡಲಷ್ಟೇ ಮನಸ್ಸು. ಟಿವಿಯಲ್ಲಿ ಅಡುಗೆ ತಯಾರಿಸುವ ವಿಧಾನ ಪ್ರಸಾರವಾದದ್ದನ್ನು, ಪತ್ರಿಕೆಗಳಲ್ಲಿ ಬರುವ ಹೊಸರುಚಿ ಇತ್ಯಾದಿ ನೋಡಿ ಓದಿ ತಯಾರಿಸುವ ಉಮೇದು ಇಲ್ಲ. ತಯಾರಿಸುವುದೇ ಇಲ್ಲವೆಂದಲ್ಲ. ನೆಂಟರು ಬಂದರೆ ತರಹೇವಾರಿ ಅಡುಗೆ ತಯಾರಿಸಿ ಅವರ ಹೊಟ್ಟೆ ಹಾಳು ಮಾಡುವ ತೊಂದರೆ ಕೊಡುವುದಿಲ್ಲ! ೨ ಅಥವಾ ಮೂರು ಬಗೆ ವ್ಯಂಜನ ಒಂದು ಸಿಹಿ ಅಷ್ಟೆ. ಹತ್ತಾರು ಬಗೆ ನಾವು ಮಾಡಿ, ತಿನ್ನದಿದ್ದರೆ ಮಾಡಿದವರಿಗೆ ಬೇಜಾರು ಎಂದು ಅವರು ಎಲ್ಲವನ್ನೂ ತಿಂದು ತಿಂದು ಹೊಟ್ಟೆ ಕೆಟ್ಟರೆ ಅದರ ಹೊಣೆಯನ್ನೂ ನಾವು ಹೊರಬೇಡವೆ? ನಮಗೆ ಮುಖ್ಯವಾಗಿ ನೆಂಟರ ಆರೋಗ್ಯದ ಬಗ್ಗೆಯೇ ಕಾಳಜಿ. ಹೀಗಾಗಿ ಒಂದೆರಡು ಪಾಕ ತಯಾರಿಸಿ ಅವರ ಹೊಟ್ಟೆ ತುಂಬುವಂಥ ಅಡುಗೆ ಮಾತ್ರ ಮಾಡುತ್ತೇವೆ.
ಅಡುಗೆ ಕೆಲವಂ ಬಲ್ಲಿದರಿಂದ ಕಲಿತು, ಕೆಲವಂ ಮಾಳ್ಪವರಿಂದ ನೋಡಿ ಕಲಿಯುವುದಿದೆ. ಸ್ವಲ್ಪ ಸಮಯದ ಹಿಂದೆ ಜೀರಿಗೆ ೧೦೦ ಗ್ರಾಂ ತಂದರೆ ನನಗೆ ತುಂಬ ದಿನಕ್ಕೆ ಬರುತ್ತಿತ್ತು. ಆದರೆ ಈಗ ಹಾಗಲ್ಲ. ಜೀರಿಗೆ ಬಲುಬೇಗ ಖರ್ಚಾಗುತ್ತದೆ. ಮಗಳು ಹೇಳಿಕೊಟ್ಟು ಈಗ ಚಟ್ನಿಗೆ, ಪಲ್ಯಕ್ಕೆ, ಸಾರಿಗೆ ಒಗ್ಗರಣೆ ಹಾಕಲು ಜೀರಿಗೆ ಉಪಯೋಗ. ಈಗ ಜೀರಿಗೆ ಹಾಕದ ಅಡುಗೆ ಇಲ್ಲವೆಂಬಷ್ಟು ಅಭ್ಯಾಸವಾಗಿದೆ.
ಸಿಹಿಕಹಿ ಚಂದ್ರು ದೂರದರ್ಶನದಲ್ಲಿ ತೋರಿಸುವ ಅಡುಗೆಯಲ್ಲಿ ಕೆಲವು (ಪ್ರತೀದಿನ ನೋಡುತ್ತಿರಲಿಲ್ಲ) ಮಾಡಿರುವೆ. ನನಗೆ ಖುಷಿಯಾದದ್ದು ಅವರು ಮಾಡುವ ಅಡುಗೆ ವಿಧಾನವಲ್ಲ. ಅವರೇ ಮಾಡಿದ ಅಡುಗೆಯನ್ನು ಅಥವಾ ಖಾನಾವಳಿಯಲ್ಲಿ ತಿಂದ ತಿಂಡಿಯನ್ನೆ ಆಗಲಿ ಅವರು ತಿನ್ನುವ ಪರಿಗೆ ಬೆರಗಾಗಿದ್ದೇನೆ. ಅಡಿಗೆ ಹೇಗೇ ಇರಲಿ. (ಚೆನ್ನಾಗಿರುತ್ತ ಇಲ್ಲವೆ ಬೇರೆ ಪ್ರಶ್ನೆ.) ಅವರು ಬಾಯಿಗೆ ಹಾಕಿ ಆಹಾ ಜೀರಿಗೆ ಘಮ, ತುಪ್ಪದ ಪರಿಮಳ, ಕರಿಬೇವಿನ ಸ್ವಾದ, ಹದವಾಗಿ ಬೆಂದ ಈರುಳ್ಳಿ ಕ್ರಿಸ್ಪಿಯಾಗಿ ರುಚಿ, ಎಂದೋ ವಿವರಿಸುತ್ತ ೫ ಬೆರಳು ಚೀಪಿ ತಿನ್ನುವ ದೃಶ್ಯ ನೋಡಿ ಅಡುಗೆ ರುಚಿ ಇರಲಿ ಇಲ್ಲದಿರಲಿ ತಿಂದರೆ ಹೀಗೆ ಚಪ್ಪರಿಸಿ ತಿನ್ನಬೇಕು ಎಂದು ಕಲಿತಿರುವೆ!

Picture 143

Picture 142Picture 135
ಯಾವುದೇ ವಿದ್ಯೆ ಕಲಿಯಲು ವಯಸ್ಸಿನ ಭೇದವಿಲ್ಲ. ನಮ್ಮಿಂದ ಚಿಕ್ಕ ವಯಸ್ಸಿನವರು ಹೇಳಿಕೊಟ್ಟದ್ದನ್ನು ಕಲಿಯಬಾರದೆಂದೇನೂ ಇಲ್ಲ. ಎಲ್ಲಿ ಒಳ್ಳೆಯದಿದೆಯೋ ಅದನ್ನು ಯಾರೇ ಹೇಳಿ ಕೊಟ್ಟರೂ ಕಲಿಯಬೇಕು. ನಮ್ಮ ಮಗಳು ನಾನು ಮಾಡಿದ ಅಡುಗೆಯನ್ನು (ಹೇಗೇ ಮಾಡಿದರೂ) ತಿನ್ನುತ್ತಿದ್ದಳು. ಯಾವಾಗ? ಐದನೇ ತರಗತಿವರೆಗೆ! ಮತ್ತೆ ಹತ್ತನೇ ತರಗತಿವರೆಗೆ ಒಂದೊಂದು ಟೀಕೆ ಮಾತ್ರ ಬರುತ್ತಿತ್ತು. ಕಾಲೇಜು ಮೆಟ್ಟಲು ಹತ್ತಿದ್ದೇ, ಒಂದು ದಿನ ಇದಕ್ಕೆ ಉಪ್ಪು ಸಾಲದು, ಮಗದೊಂದು ದಿನ ಖಾರ ಸಾಲದು , ಮತ್ತೊಂದು ದಿನ ಇದಕ್ಕೆ ಯಾವ ರುಚಿಯೂ ಇಲ್ಲ, ಹೀಗೆ ಮಾಡಬೇಕಿತ್ತು ಎಂಬ ಟೀಕೆ ಟಿಪ್ಪಣಿ ವಿವರಣೆ ಎಲ್ಲ ಬರಲಾರಂಭಿಸಿತ್ತು. ಎಲ್ಲವನ್ನೂ ಒಂದು ಕಿವಿಯಲ್ಲಿ ಕೇಳಿ ಇನ್ನೊಂದು ಕಿವಿಯಲ್ಲಿ ಬಿಡುತ್ತಿದ್ದೆ.
ಮುಂದೆ ಅವಳಿಗೆ ಮದುವೆಯಾಗಿ ಅವಳೇ ಅಡುಗೆ ಮಾಡಲು ತೊಡಗಿದಮೇಲೆ ಅವಳ ಗಂಡ ಅಡುಗೆ ಬಗ್ಗೆ ಟೀಕೆ ಮಾಡಿದಾಗ ಅವಳಿಗೆ ಜ್ಞಾನೋದಯವಾಯಿತಂತೆ. ಅಡುಗೆ ಮಾಡುವುದು ಕಷ್ಟದ ಕೆಲಸ. ಎಲ್ಲರನ್ನು ಮೆಚ್ಚಿಸಲು ಸಾಧ್ಯವಿಲ್ಲ. ಇನ್ನುಮುಂದೆ ಯಾರ ಅಡುಗೆ ಬಗ್ಗೆಯೂ ಟೀಕೆ ಮಾಡಬಾರದು ಎಂದು! ನನಗೀಗ ಟೀಕೆ ಕೇಳಿ ಕೇಳಿ ಎಷ್ಟು ಅಭ್ಯಾಸವಾಗಿತ್ತೆಂದರೆ ನಾನು ಮಾಡುವ ಅಡುಗೆ ಬಗ್ಗೆ ಏನೂ ಹೇಳದಿದ್ದರೆ ಕಿರಿಕಿರಿಯಾಗುವಂತಾಗಿದೆ!
ಪ್ರಕಾಶರೈ ಅವರ ಒಗ್ಗರಣೆ ಸಿನೆಮಾ ಬಂದಾಗ ನಾನೂ ಮಗಳು ಹೋಗಿದ್ದೆವು. ಅದರಲ್ಲಿ ವಿವಿಧ ಬಗೆಯ ತಿಂಡಿ ತೋರಿಸುತ್ತಾರೆಂದು ನಮಗೆ ತಿಳಿದಿತ್ತು. ಅದನ್ನು ನೋಡಿ ಬಾಯಿಯಲ್ಲಿ ನೀರು ಬರುವುದು ಬೇಡವೆಂದು ಮನೆಯಲ್ಲೇ ಹೊಟ್ಟೆಬಿರಿಯ ತಿಂಡಿ ತಿಂದು ಹೋಗಿದ್ದೆವು. ಹೊಟ್ಟೆ ತುಂಬಿದರೆ ಯಾವುದೇ ತಿಂಡಿ ತೋರಿಸಿದರೂ ನೀರು ಬರಲಿಕ್ಕಿಲ್ಲ ಎಂದು ಭಾವಿಸಿದ್ದೇ ತಪ್ಪಾಗಿತ್ತು! ಬಿಸಿಬಿಸಿ ವಡೆ ನೋಡಿದಾಗ ನೀರು ಬಂದೇಬಿಟ್ಟಿತ್ತು! ಮಧ್ಯಂತರದಲ್ಲಿ ಮಗಳು ಎದ್ದು ೧೦ರೂ. ಜೋಳಕ್ಕೆ ರೂ. ೧೨೦(ಮಾಲ್‌ನಲ್ಲಿ) ಕೊಟ್ಟು ತಂದೇಬಿಟ್ಟಳು! ಬೇಡಬೇಡವೆಂದು ನಾನು ಹೇಳಿದರೂ ಅವಳೊಬ್ಬಳೆ ತಿನ್ನುತ್ತಾಳಲ್ಲ ಎಂಬ ಸಂಕಟಕ್ಕೆ ನಾನೂ (ಇದು ವಡೆ ಎಂದು ಮನದಲ್ಲೇ ಭಾವಿಸಿಕೊಳ್ಳುತ್ತ) ಜೋಳ ಮೆದ್ದೆ! ಸಿನಿಮಾದ ಕಥೆಯಲ್ಲಿ ಪ್ರಕಾಶ ರೈ ಹುಡುಗಿ ನೋಡಲು ಹೋದಾಗ ಅಲ್ಲಿ ವಡೆ ತಿಂದು ಅದನ್ನು ಮಾಡಿದ ಅಡುಗೆಯವನನ್ನೇ ತನ್ನ ಮನೆಗೆ ಕರೆದುಕೊಂಡು ಹೋದ ಹಾಗೆ ಅಂಥವರ್ಯಾರಾದರೂ ನನಗೂ ಸಿಗಬಹುದೇನೋ ಎಂಬ ಆಸೆಯಲ್ಲಿರುವೆ!

(ಸಖಿ ಸೆಪ್ಟೆಂಬರ ೨೦೧೫)

Copy of Copy of G56-57-1

Read Full Post »

ಸಿದ್ದಮ್ಮ ನಮ್ಮ ಬಲಗೈ ಬಂಟಿ. ಸುಮಾರು ೩೦ ವರ್ಷಗಳಿಂದಲೂ ನಮ್ಮ ಮನೆಯ ಚೊಕ್ಕ ಕಾರ್ಯಗಳಲ್ಲಿ ಕೈಯಾಡಿಸಿದವಳು. ಗುಣದಲ್ಲಿ ಬಂಗಾರ. ಹಣ ಕಂಡರೆ ಹೆಣ ಬಾಯಿ ಬಿಡುತ್ತದೆ ಎನ್ನುವ ಗಾದೆಯನ್ನು ಅವಳ ಮುಂದೆ ನಿವಾಳಿಸಿ ಒಗೆಯಬೇಕು ಬಿಡಿ. ಒಗೆಯಲು ಹಾಕಿದ ಧಿರಿಸಿನ ಕಿಸೆಯಲ್ಲಿ ಸಾವಿರಾರು ರೂಪಾಯಿ ಸುಲಭವಾಗಿ ಸಿಕ್ಕರೂ ಚಾಚೂ ತಪ್ಪದೆ ನಮ್ಮ ಕೈಗೆ ಕೊಟ್ಟು ಹೀಗೆಲ್ಲ ನೋಡದೆ ಬಟ್ಟೆ ನೀರಿಗೆ ಹಾಕಬಾರದು ಎಂದು ನಮಗೇ ಬುದ್ಧಿವಾದ ಹೇಳುವವಳು. ಕೆಲಸದಲ್ಲಿ ಅಂಥ ಚೊಕ್ಕವಿಲ್ಲ. ನಮಗೆ ಅದೇ ಅಭ್ಯಾಸವಾಗಿದೆ! ಕೆಲಸ ಹೇಳಿದ್ದನ್ನು ಮಾತ್ರ ಮಾಡುವವಳು. ತಾನೇ ಮುಂದಾಗಿ ಏನೂ ಮಾಡಲು ಹೋಗುವುದಿಲ್ಲ.
ಅವಳು ಒಂದು ಧಾರಾವಾಹಿ ನೋಡುತ್ತಾಳೆ. ಆ ಧಾರಾವಾಹಿ ನೋಡದೆ ಇದ್ದರೆ ಅವಳಿಗೆ ತಿಂಡಿ ಊಟ ಸೇರುವುದಿಲ್ಲ, ನಿದ್ದೆ ಬರುವುದಿಲ್ಲ ಇತ್ಯಾದಿ ತೊಂದರೆಗಳು ಆಗುತ್ತವಂತೆ. ಈ ಎಲ್ಲಾ ತೊಂದರೆಗಳು ಅವಳಿಗೆ ಈಗಾಗಲೇ ಆಗಿದ್ದನ್ನು ನನ್ನ ಮುಂದೆ ಹೇಳಿದಳು. ಈ ತೊಂದರೆಗಳು ಆಗಲು ಕಾರಣ ಅವಳ ಮನೆಯ ಟಿವಿ ಕೆಟ್ಟು ಮೂಲೆ ಸೇರಿರುವುದು. ಪ್ರತೀದಿನ ನನ್ನ ಮುಂದೆ ಅವ್ವಾ, ತಲೆಯೇ ಕೆಟ್ಟು ಹೋದಾಂಗೆ ಆಗಿದೆ. ಒಂದು ಟಿವಿ ತೆಗೆದುಕೊಡಿ, ಇನ್ನೇನು ಕೇಳಲ್ಲ (ಪ್ರತೀ ಬಾರಿ ಅವಳ ಬೇಡಿಕೆ ಏನಾದರೂ ಇದ್ದಾಗಲೂ ಹೀಗೆಯೇ ಹೇಳುವುದು ಕೇಳಿ ನನಗಭ್ಯಾಸವಾಗಿದೆ!) ಎಂಬ ತಹತಹ ಜಾಸ್ತಿಯಾಯಿತು. ಇನ್ನು ಧಾರಾವಾಹಿ ನೋಡದೆ ಅದೇ ಬೇಸರದಲ್ಲಿ ಖಾಯಿಲೆ ಬಿದ್ದು ಮಲಗಿದರೆ ನನಗೇ ಕಷ್ಟ. ಪ್ರತೀದಿನ ಅವಳ ಗೋಗರೆತ ಕೇಳಿ ನನ್ನ ತಲೆ ಕೆಟ್ಟು ಹೊಸದೇ ಟಿವಿ ತೆಗೆಸಿಕೊಟ್ಟೆವು.
ಟಿವಿ ತೆಗೆಸಿಕೊಟ್ಟ ತಪ್ಪಿಗೆ ಈಗ ಪ್ರತೀದಿನ ಅವಳು ನೋಡುವ ಧಾರಾವಾಹಿಯ ಕಥೆ ಕೇಳುವ ಶಿಕ್ಷೆ ನನಗೆ! ಹೀಗೆ ಒಂದು ದಿನ ಕಥೆ ಹೇಳುತ್ತ, ಛೆ! ಛೇ! ಏನೇನೂ ಚೆನ್ನಾಗಿಲ್ಲ ಈಗ ಕಥೆ. ಸುಮ್ಮನೆ ಎಳೆಯುತ್ತಿದ್ದಾರೆ. ಮುಂದಕ್ಕೆ ಹೋಗುವುದೇ ಇಲ್ಲ. ಮುಖ್ಯಪಾತ್ರ ಮಾಡುವವರದೇ ಗೋಳಾಗಿದೆ. ನೋಡಿ ನೋಡಿ ಬೇಜಾರು ಬಂದುಬಿಟ್ಟಿದೆ ನನಗೆ ಎಂದಳು. ನೋಡು ಅದರಲ್ಲಿ ಯಾವ ಪಾತ್ರ ನಿನಗೆ ಇಷ್ಟವಾಗುತ್ತಿಲ್ಲವೋ ಅವರಿಗೆ ಫೋನ್ ಹಚ್ಚಿ ಕೊಡುತ್ತೇನೆ. ಚೆನ್ನಾಗಿ ದಬಾಯಿಸು. ಏನು ನಾವು ಅಷ್ಟು ಬಕರಾಗಳೆಂದು ತಿಳಿದಿದ್ದೀರ? ನೀವು ಆಡಿದ್ದೇ ಆಟವನ್ನು ನೋಡಲು ಎಂದು ಹೇಳು ಅಂದೆ. ಏ! ಹಾಂಗೆಲ್ಲ ಹೇಳಕ್ಕಾಗುತ್ತ? ಉದಾಹರಣೆಗೆ ಈಗ ನೀವು ನನಗೆ ಒಂದು ಕೆಲಸ ಹೇಳುತ್ತೀರ. ಅದನ್ನು ನಾನು (ಇಷ್ಟವಿಲ್ಲದಿದ್ದರೂ ಎಂದು ಮನಸ್ಸಿನಲ್ಲೇ ಗ್ರಹಿಸಿರಬಹುದು ಎಂದು ನನ್ನ ಊಹೆ!) ಮಾಡಬೇಕು ತಾನೆ? ಹಾಂಗೆಲ್ಲ ಮಾಡಲಾಗುವುದಿಲ್ಲ ಎಂದು ನಾನು ಹೇಳಲು ಆಗುತ್ತ? ಅದು ನ್ಯಾಯಾನ? ಹಾಗೆಯೇ ಪಾಪ ಅವರು ಕೂಡ. (ಅಂದರೆ ಕೆಲಸ ಹೇಳುವವರು ಸರಿ ಇಲ್ಲ ಎಂದಾಗಾಯಿತು!) ಹೀಂಗೆ ನಟನೆ ಮಾಡು ಅಂಥ ಹೇಳಿರುತ್ತಾರೆ. ಹಂಗೆ ಅವರು ಮಾಡಿ ತೋರಿಸುತ್ತಾರೆ. ಅದಕ್ಕೆ ಅವರಿಗೆ ದಬಾಯಿಸಿದರೆ ಅದು ಅನ್ಯಾಯ. ನನಗೆ ನೋಡಲಾಗುತ್ತಿಲ್ಲ ಅಂದರೆ ಟಿವಿ ಆಫ್ ಮಾಡಬೇಕು ಅಷ್ಟೆ. ಎಂದಾಗ ಅವಳ ತರ್ಕಶಾಸ್ತ್ರಕ್ಕೆ ತಲೆದೂಗಿ ಶಹಭಾಸ್ ಸಿದ್ದಮ್ಮ ಎಂಥ ಮುತ್ತಿನಂಥ ಮಾತು ಹೇಳಿದೆ ನೋಡು ಎಂದು ಶ್ಲಾಘಿಸಿದೆ.

ಪ್ರಜಾನುಡಿ ೩೧-೫-೧೫

Read Full Post »

Older Posts »