Archive for the ‘ಪತ್ರಿಕಾ ಪ್ರಕಟಣಾ ಲೇಖನಗಳು’ Category
ಸೈಕಲ್ ಎಂಬ ಕುದುರೆ
Posted in ಪತ್ರಿಕಾ ಪ್ರಕಟಣಾ ಲೇಖನಗಳು on ಮೇ 1, 2011| 3 Comments »
ಗ್ರಹಣಗಳ ಸುತ್ತ ಪರಿಭ್ರಮಣ
Posted in ಪತ್ರಿಕಾ ಪ್ರಕಟಣಾ ಲೇಖನಗಳು on ಮಾರ್ಚ್ 14, 2009| 2 Comments »
ಮಾರ್ಚ್ ತಿಂಗಳ ಹೊಸತು ಪತ್ರಿಕೆಯಲ್ಲಿ ಬಂದ ಲೇಖನ
ಇತ್ತೀಚೆಗೆ ಅಂದರೆ ಆಗಸ್ಟ ೧ ೨೦೦೮ ರಂದು ಸೂರ್ಯಗ್ರಹಣ ಸಂಭವಿಸಿತು. ಗ್ರಹಣದ ಹಿಂದಿನ ದಿನ ಒಬ್ಬ ಸ್ನೇಹಿತರ ಮನೆಗೆ ಹೋಗಿದ್ದೆ. (ಅವರು ವಿದ್ಯಾವಂತರು, ಪರದೇಶದಲ್ಲಿದ್ದು ಈಗ ನಿವೃತ್ತ ಜೀವನಕ್ಕೆ ಇಲ್ಲಿ ಬಂದು ನೆಲೆಸಿದವರು.) ಆಗ ಅಲ್ಲಿಗೆ ಒಬ್ಬ ಹುಡುಗ ೨ ಹುಲ್ಲುಕಡ್ಡಿ ಹಿಡಿದು ಬಂದು `ಇಷ್ಟೇ ಇರುವುದಂತೆ’ ಎಂದು ಕೊಟ್ಟು ಹೋದ. ಅದು ಏನು? ಅವರಿಗೆ ಆ ಸಪೂರದ ಹುಲ್ಲುಕಡ್ಡಿ ಯಾವುದಕ್ಕೆ ಬೇಕಾಗಬಹುದು ಎಂದೆಲ್ಲ ನಾನು ತಲೆಕೆಡಿಸಿಕೊಂಡೆ. ಎಷ್ಟು ಚಿಂತಿಸಿದರೂ ಆ ಕಡ್ಡಿ ಏಕಿರಬಹುದು ಎಂದು ಹೊಳೆಯಲೇ ಇಲ್ಲ. ನಿಜವಾಗಿಯೂ ಇಷ್ಟು ಕಷ್ಟಪಡುವ ಅಗತ್ಯವೇ ನನಗೆ ಇರಲಿಲ್ಲ. ಆ ಕಡ್ಡಿ ಏಕೆ? ಅದರಿದ ಏನು ಉಪಯೋಗ ಎಂದು ಅವರನ್ನೇ ನೇರ ಕೇಳಬಹುದಿತ್ತು. ಆದರೆ ಅನವಶ್ಯಕವಾಗಿ ಹೆಚ್ಚು ಮಾತಾಡುವ ಜಾಯಮಾನವೇ ನನ್ನದಲ್ಲಎಂದು ಅವರನ್ನು ನಾನು ಏನೂ ಕೇಳಲಿಲ್ಲ.
ಮಾರನೇ ದಿನ ನಮ್ಮ ಬಲಗೈ ಬಂಟಿ ಸಿದ್ದಮ್ಮ, `ಅವ್ವ, ೨ ದರ್ಬೆಹುಲ್ಲು ಕೊಡಿ’ ಎಂದು ಕೇಳಿದಳು. ಆಗ ನನ್ನೊಳಗಿದ್ದ ಟ್ಯೂಬ್ ಲೈಟ್ ಜಗ್ಗನೆ ಜಗಜಗಮಿಸಿತು. ಯುರೇಕ ಎಂದು ಸಂಭ್ರಮಿಸಬೇಕೆನಿಸಿತು! ನಿನ್ನೆ ನಾನು ಸ್ನೇಹಿತರ ಮನೆಯಲ್ಲಿ ನೋಡಿದ ೨ ಕಡ್ಡಿ ದರ್ಬೆಹುಲ್ಲು ಎಂದು.
“ನಿನಗೇಕೆ ದರ್ಬೆ ಹುಲ್ಲು? ಹೋಮ ಏನಾದರೂ ಮಾಡಿಸುತ್ತೀಯ? ಎಂದು ಕೇಳಿದೆ.
“ನಾನೆಕೆ ಹೋಮಸುಡಲಿ? ಇಂದು ಗ್ರಾಣ ಅಂತೆ. ಅದಕ್ಕೆ ಹುಲ್ಲುಕಡ್ಡಿ ಬೇಕು’’ ಎಂದಳು.
“ಗ್ರಹಣಕ್ಕು ಹುಲ್ಲುಕಡ್ಡಿಗೂ ಏನು ಸಂಬಂಧ’’ ಎಂದೆ.
“ಗ್ರಾಣದ ದಿನ ಹಾಲು, ಸಾರು ಏನೇ ಇದ್ದರೂ ಎಲ್ಲದಕ್ಕು ದರ್ಬೆಕಡ್ಡಿ ಹಾಕಿಟ್ಟರೆ ಅದನ್ನು ನಾವು ಮತ್ತೆ ಉಪಯೋಗಿಸಬಹುದಂತೆ. ಇಲ್ಲವಾದರೆ ಆ ಪದಾರ್ಥ ಉಪಯೋಗಿಸುವಂತಿಲ್ಲ. ಅದನ್ನು ಚೆಲ್ಲಿ ಬೇರೆಯೇ ಮಾಡಬೇಕು’’ ಎಂದಳು.