Feeds:
ಲೇಖನಗಳು
ಟಿಪ್ಪಣಿಗಳು

Archive for the ‘ಪತ್ರಿಕಾ ಪ್ರಕಟಣಾ ಲೇಖನಗಳು’ Category

ಪ್ರಸಿದ್ಧಿ ಬಯಸದ ಜಿ.ಟಿ. ಈಶ್ವರ ಎಂಬ ಅನಾಮಿಕ

ಜಿ.ಟಿ. ಈಶ್ವರ ಅವರು ತೀರಿಹೋಗಿ  (ನಾಳೆಗೆ ೨೭-೧೨-೨೦೧೫) ೬ ವರ್ಷ ಕಳೆಯುತ್ತದೆ. 

ಜಿ.ಟಿ. ಈಶ್ವರ ಅವರು ಮಿಲಿಟರಿಯಲ್ಲಿ ಸಿಗ್ನಲ್ ಡಿಪಾರ್ಟ್‌ಮೆಂಟಿನಲ್ಲಿ ೭ ವರ್ಷ ಸೇವೆ ಸಲ್ಲಿಸಿ, ಅಲ್ಲಿಂದ ಬೆಂಗಳೂರಿನ ಎನ್.ಸಿ.ಸಿ ಕಚೇರಿಯಲ್ಲಿ ಟೈಪಿಸ್ಟ್ ಆಗಿ ಕೆಲಸಕ್ಕೆ ಸೇರಿ, ತದನಂತರ ಮೈಸೂರಿಗೆ ವರ್ಗಾವಣೆಗೊಂಡು ಮೈಸೂರಲ್ಲೇ ನಿವೃತ್ತಿ ಹೊಂದಿದ್ದರು.
ಮೈಸೂರಿನ ಕುವೆಂಪುನಗರದಲ್ಲಿ ಇಡಬ್ಲ್ಯು ಎಸ್ ಮನೆಯೊಂದನ್ನು ಕೊಂಡು ಅಲ್ಲಿ ವಾಸವಾಗಿದ್ದರು. ಅವರು ನಳಮಹಾರಾಜನ ವಂಶಕ್ಕೆ ಸೇರಿದವರಿರಬೇಕು. ತರತರದ ಅಡುಗೆ ಮಾಡುವುದು, ಉತೃಷ್ಟ ರುಚಿಯಾದ ಊಟ ತಯಾರಿಸುವುದರಲ್ಲಿ ಈ ಬ್ರಹ್ಮಾಚಾರಿ ಹೆಸರು ಗಳಿಸಿದ್ದಾರೆ. ಮೈಸೂರುಪಾಕು ಬೆಲ್ಲಹಾಕಿ ಮಾಡುವಾಗ ಅದರ ಪರಿಮಳಕ್ಕೆ ಜನ ಅವರ ಮನೆ ಬಳಿ ಬರುತ್ತಿದ್ದರಂತೆ. ಅವರು ವೃತ್ತಿಯಲ್ಲಿದ್ದಾಗ ಪ್ರತೀದಿನ ಬಾಸುಮತಿ ಅಕ್ಕಿಯ ಅನ್ನ ಮಾಡುತ್ತಿದ್ದರಂತೆ.
ಅವರು ಎಷ್ಟು ಸ್ವಾಭಿಮಾನಿ ಎಂದರೆ ಅದಕ್ಕೊಂದು ಉದಾಹರಣೆ ಕೊಡುತ್ತೇನೆ. ಒಮ್ಮೆ ಅವರಿಗೆ ಅನಾರೋಗ್ಯದಿಂದ ಸಣ್ಣ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾದ ಪ್ರಸಂಗ ಬಂತು. ಶಸ್ತ್ರ ಚಿಕಿತ್ಸೆಗೆ ಒಪ್ಪಿಗೆ ಕೊಡುವ ಮುಂಚೆ ವೈದ್ಯರಿಗೆ ಒಂದು ಷರತ್ತು ವಿಧಿಸಿದರು. ನನಗೆ ಶಸ್ತ್ರಚಿಕಿತ್ಸೆ ಮಾಡುತ್ತೇನೆಂದು ನೀವು ನನ್ನ ಅಣ್ಣನ ಮನೆಯವರಿಗೆ ಹೇಳಕೂಡದು. ಹಾಗಾದರೆ ಮಾತ್ರ ನಾನು ಚಿಕಿತ್ಸೆಗೆ ಒಪ್ಪಿ ಆಸ್ಪತ್ರೆಗೆ ಬರುವುದು ಎಂದು. ಅವರ ಷರತ್ತಿಗೆ ವೈದ್ಯರು ಮಣಿದು ಶಸ್ತ್ರಚಿಕಿತ್ಸೆ ನೆರವೇರಿಸಿದರು. ತನ್ನಿಂದ ಬೇರೆ ಯಾರಿಗೂ ತೊಂದರೆಯಾಗಬಾರದು ಅಷ್ಟೆ ಅವರ ಮನದಲ್ಲಿದ್ದುದು. ಅವರ ಅಣ್ಣ ಜಿ.ಟಿ. ನಾರಾಯಣ ರಾವ್. ಅವರು ವೈದ್ಯರಿಗೆ ಚಿರಪರಿಚಿತರು. ಈ ಷರತ್ತು ಹಾಕಿಯೂ ಮತ್ತೊಮ್ಮೆ ಶಸ್ತ್ರಚಿಕಿತ್ಸೆಗೆ ಒಳಗಾದಾಗ ಅದು ಹೇಗೋ ಅಣ್ಣನ ಮನೆಯವರಿಗೆ ಸುದ್ದಿ ತಿಳಿದು ಮನೆಯಿಂದ ಊಟ ಕಳುಹಿಸುವ ಏರ್ಪಾಡು ಮಾಡಿದ್ದರು. ಅಸಾಮಿ ನಾಲ್ಕು ದಿನ ಆಸ್ಪತ್ರೆಯಲ್ಲಿರಬೇಕಾದವರು ಎರಡೇ ದಿನಕ್ಕೆ ಹಟ ಹಿಡಿದು ಮನೆಗೆ ಹೋಗಿದ್ದರು. ಈ ವಿಷಯ ಗೊತ್ತಿಲ್ಲದೆ ಅಣ್ಣನ ಮನೆಯವರು ಆಸ್ಪತ್ರೆಗೆ ಊಟ ತೆಗೆದುಕೊಂಡು ಹೋದಾಗ ಅವರು ಬೆಳಗ್ಗೆಯೇ ಮನೆಗೆ ಹೋದರು ಎಂಬ ವಿಷಯ ತಿಳಿದು ಮನೆಗೆ ಓಡಬೇಕಾಯಿತು. ಅಲ್ಲಿ ನಿತ್ರಾಣದಿಂದ ಮಲಗಿದವರನ್ನು ಏಕೆ ಹೀಗೆ ಮಾಡಿದಿರಿ? ಎಂದು ಕೇಳಿದರೆ ಸುಮ್ಮನೆ ನಿಮಗೆಲ್ಲ ತೊಂದರೆ ಕೊಡಬೇಕಲ್ಲ ಎಂಬ ಉತ್ತರ ಕ್ಷೀಣವಾಗಿ ಬಂತು. ದಿನಾ ಬೆಳಗ್ಗೆ ಬ್ಯಾಂಡೇಜು ಬಿಚ್ಚಲು ಆಸ್ಪತ್ರೆಗೆ ಹೋದರಾಯಿತು ಎಂದು ತಣ್ಣಗೆ ಹೇಳಿದ್ದರು. ಅಂಥ ನಿಷ್ಠುರ ಸ್ವಾಭಿಮಾನದ ಮನಸ್ಸು.

ishwara
ಯಾರ ಹಂಗಿಗೂ ಬೀಳಲು ಅವರ ಮನ ಒಪ್ಪುತ್ತಿರಲಿಲ್ಲ. ಆದರೆ ಅವರು ಮಾತ್ರ ತಮ್ಮಿಂದ ಸಮಾಜಕ್ಕೆ ಯಾವುದೇ ರೀತಿಯಲ್ಲಿ ಸಹಾಯ ಮಾಡಲು ಸದಾ ತುದಿಗಾಲಿನಲ್ಲಿ ನಿಂತಿರುತ್ತಿದ್ದರು. ಇಂತಿಪ್ಪ ಜಿ.ಟಿ. ಈಶ್ವರ ಅವರು ಕೈಕಾಲು ಗಟ್ಟಿಯಾಗಿದ್ದಾಗಲೇ ಕುಸಿದು ಬಿದ್ದು ೨೦೦೯ ದಶಂಬರ ೨೭ರಂದು ಯಾರಿಗೂ ತಮ್ಮ ಸೇವೆ ಮಾಡಲು ಅವಕಾಶವೀಯದೆ ಕಾಲನ ಕರೆಗೆ ಓಗೊಟ್ಟು ದೌಡಾಯಿಸಿಯೇಬಿಟ್ಟರು. ದಹನಕ್ರಿಯೆ ಮಾಡುವ ಹಂಗೂ ಯಾರಿಗೂ ಬೇಡವೆಂದೋ ಏನೋ ದೇಹವನ್ನು ಜೆ.ಎಸ್.ಎಸ್ ಆಸ್ಪತ್ರೆಗೆ ದಾನವಿತ್ತಿದ್ದರು.
ಅವರು ವಾಸವಾಗಿದ್ದ ಮನೆಯನ್ನು ಅವರ ಅಣ್ಣನ ಮಗ ಅನಂತವರ್ಧನ ಅವರಿಗೆ ಸೇರಬೇಕೆಂದು ಉಯಿಲು ಮಾಡಿಟ್ಟಿದ್ದರು. ಅನಂತವರ್ಧನ ಅವರ ಗರಡಿಯಲ್ಲೇ ಬೆಳೆದು ಅವರ ಮನಸ್ಸು ಹೇಗೆ ಎಂದು ಗೊತ್ತಿದ್ದು, ಆ ಮನೆಯನ್ನು ವನವಾಸಿ ಕಲ್ಯಾಣ ಸಂಸ್ಥೆಗೆ ಉಚಿತವಾಗಿ ಕೊಟ್ಟಿದ್ದರು. ವನವಾಸಿ ಕಲ್ಯಾಣ ಎಂದರೆ ಗುಡ್ಡಗಾಡುಗಳಲ್ಲಿ ವಾಸಿಸುತ್ತಿರುವ ಜನಾಂಗದ ವಿಕಾಸಕ್ಕಾಗಿ ಶ್ರಮಿಸುತ್ತಿರುವ ಸಂಸ್ಥೆ. ವನವಾಸಿ ವಿದ್ಯಾರ್ಥಿನಿಯರಿಗೆ ಉನ್ನತ ವ್ಯಾಸಂಗ ಕಲ್ಪಿಸುವ ಉದ್ದೇಶದಿಂದ ಆ ಮನೆಯನ್ನು ವಿದ್ಯಾರ್ಥಿನಿ ನಿಲಯವಾಗಿ ಮಾಡಿದ್ದರು.
ಅದೊಂದು ಪುಟ್ಟ ಮನೆ. ಹೆಚ್ಚೆಂದರೆ ನಾಲ್ಕೈದು ಮಂದಿ ಮಾತ್ರ ಇರಬಹುದಷ್ಟೆ. ವಿದ್ಯಾರ್ಥಿನಿಯರಿಗೆ ಅಲ್ಲಿ ಸ್ಥಳಾವಕಾಶ ಸಾಕಾಗುವುದಿಲ್ಲ. ಈ ಹಳೆ ಮನೆ ಕೆಡವಿ ಹೊಸ ಮನೆ ಕಟ್ಟಿಸಬೇಕು ಎಂಬುದು ಸಂಸ್ಥೆಯ ಉದ್ದೇಶ. ಹೊಸ ಕಟ್ಟಡ ಕಟ್ಟಲು ಸರ್ಕಾರದ ಅನುದಾನ ಸಿಗಬೇಕಾದರೆ ನಿವೇಶನ ಸಂಸ್ಥೆಯ ಹೆಸರಿನಲ್ಲಿರಬೇಕು. ಅನಂತವರ್ಧನ ಅವರ ಹೆಸರಿನಲ್ಲಿದ್ದರೆ ಕಟ್ಟಡ ಕಟ್ಟಲಾಗುವುದಿಲ್ಲ. ಹಾಗಾಗಿ ದಾನವಾಗಿ ಬಂದದ್ದು ದಾನವಾಗಿ ಸಹೃದಯ ಉದ್ದೇಶಕ್ಕಾಗಿಯೇ ಬಳಕೆಯಾಗಲಿ ಎಂಬ ಸದುದ್ದೇಶದಿಂದ ಹಿಂದುಮುಂದು ಆಲೋಚಿಸದೆ ಆ ಮನೆಯನ್ನು ವನವಾಸಿ ಕಲ್ಯಾಣ ಸಂಸ್ಥೆಗೆ ರಿಜಿಸ್ಟ್ರೇಶನ್ ಮಾಡಿಸಿ ಕೊಟ್ಟರು.
ಆ ಹಳೆ ಮನೆ ಕೆಡವಿ ಸುಮಾರು ಮಂದಿ ದಾನಿಗಳ ನೆರವಿನಿಂದ ಈಗ ಎರಡಂತಸ್ತಿನ ಭವ್ಯ ಮಹಲು ಎದ್ದು ನಿಂತಿದೆ. ಅದರ ಪ್ರವೇಶ ಸಮಾರಂಭ ೧೩.೧೨.೨೦೧೫ರಂದು ನೆರವೇರಿತು. ಆ ಆಹ್ವಾನ ಪತ್ರಿಕೆಯ ಮುಖಪುಟದಲ್ಲಿ ರಾಣಿ ಗೈಡಲಿನ್ಯೂ ಭವನದ ಲೋಕಾರ್ಪಣ ಸಮಾರಂಭ ಎಂದಿತ್ತು. ಎಲ್ಲಿಯೂ ಜಿ.ಟಿ. ಈಶ್ವರ ಅವರ ಹೆಸರಿರಲಿಲ್ಲ. ವನವಾಸಿ ಕಲ್ಯಾಣ ಸಂಸ್ಥೆಗೆ ಮನೆ ಕೊಡಬಹುದು ಎಂದು ಅನಂತವರ್ಧನರಿಗೆ ಆ ಸಂಸ್ಥೆಯನ್ನು ಪರಿಚಯಿಸಿದ ಸಹೃದಯರೊಬ್ಬರಿಗೆ ವನವಾಸಿ ಸಂಸ್ಥೆಯವರ ಈ ನಿರ್ಲ್ಯಕ್ಷ್ಯ ಸರಿ ಬರಲಿಲ್ಲ. ಆಹ್ವಾನಪತ್ರಿಕೆಯಲ್ಲಿ ಜಿ.ಟಿ. ಈಶ್ವರವರ ದತ್ತಿ ಎಂದು ನಮೂದಿಸಬೇಕಿತ್ತು ಎಂದು ಅವರ ಮನೆಗೆ ಆಹ್ವಾನ ಪತ್ರಿಕೆ ಕೊಡಲು ಬಂದವರ ಮುಂದೆ ತಮ್ಮ ಸಾತ್ವಿಕ ಆಕ್ರೋಶವನ್ನು ತಡೆಯಲಾರದೆ ಹೊರಹಾಕಿದರು.

?????????????

ಆ ಕಾರಣಕ್ಕೋ ಏನೋ ಕಟ್ಟಡದ ಮುಂದೆ ವನವಾಸಿ ಕಲ್ಯಾಣ (ರಿ) ಕರ್ನಾಟಕ G.T. ಈಶ್ವರ ಧತ್ತಿ ರಾಣಿ ಗೈಡಲಿನ್ಯೂ ಭವನ, ವನವಾಸಿ ವಿದ್ಯಾರ್ಥಿನಿಯರ ವಾಸಗೃಹ ಎಂಬ ಫಲಕ ಹಾಕಿರುವರು. (ಗಮನಿಸಿ: ಜಿ.ಟಿ. ಅಂತ ಆಂಗ್ಲ ಅಕ್ಷರದಲ್ಲೂ, ಧ ಅಕ್ಷರವನ್ನು ತಪ್ಪಾಗಿ ಮಹಾಪ್ರಾಣದಲ್ಲೂ ಬರೆದಿರುವರು.)

20151213_110625
ಈಗ ಹೆಸರಿನಲ್ಲೇನಿದೆ? ಎಂಬ ವಿಷಯಕ್ಕೆ ಬರೋಣ: ಜಿ.ಟಿ. ಈಶ್ವರ ಅವರು ಬಲಗೈಲಿ ದಾನ ನೀಡಿದ್ದು ಎಡಗೈಗೂ ಗೊತ್ತಾಗಬಾರದೆಂಬಂತೆ ಬಾಳಿದವರು. ತಮಗೆ ಬರುವ ಸಣ್ಣ ಮೊತ್ತದ ಪಿಂಚಣಿಯಿಂದ ಸಂಘ ಸಂಸ್ಥೆಗಳಿಗೆ ತಮ್ಮ ಕೈಲಾದ ಸಹಾಯವನ್ನು ಮಾಡುತ್ತಿದ್ದರು. ಹಾಗೂ ದಾನ ನೀಡಿದ ಬಳಿಕ ರಶೀತಿ ಹಾಕುವಾಗ ಮಾತ್ರ ಅನಾಮಿಕ ಎಂದು ಹಾಕಿ ಎಂದು ತಾಕೀತು ಮಾಡುತ್ತಿದ್ದರು. ಹೀಗಿರುವಾಗ ಈಶ್ವರ ಅವರ ಹೆಸರು ಮನೆ ಎದುರು ಹಾಕಿದರೆ ಅದು ನ್ಯಾಯವೆ?!
ಡಿ.ವಿ.ಗುಂಡಪ್ಪನವರ ಈ ಕೆಳಗಿನ ಕಗ್ಗಕ್ಕೆ ಜಿ.ಟಿ. ಈಶ್ವರ ಅವರ ಹೆಸರು ಅನ್ವಯವಾಗುವುದಿಲ್ಲ. ಅವರು ಅವರ ಜೀವಿತಾವಧಿಯಲ್ಲಿ ಹೆಸರು ಹೆಸರು ಗಳಿಸಬೇಕೆಂದು ಯಾವತ್ತೂ ಪ್ರಯತ್ನಿಸಲಿಲ್ಲ. ನಾವು ನೀವು ಈ ಕಗ್ಗದ ತಾತ್ಪರ್ಯ ತಿಳಿದುಕೊಳ್ಳಬೇಕು.
ಹೆಸರು ಹೆಸರೆಂಬುದೇಂ? ಕಸುರು ಬೀಸುವ ಗಾಳಿ
ಹಸೆಯೊಂದು ನಿನಗೇಕೆ ಬ್ರಹ್ಮಪುರಿಯೊಳಗೆ?
ಶಿಶುವಾಗು ನೀಂ ಮನದಿ, ಹಸುವಾಗು, ಸಸಿಯಾಗು
ಕಸಬೊರಕೆಯಾಗಿಳೆಗೆ–ಮಂಕುತಿಮ್ಮ

ಒಟ್ಟಿನಲ್ಲಿ ವನವಾಸಿ ಕಲ್ಯಾಣ ಸಂಸ್ಥೆ ಗುಡ್ಡಗಾಡು ಜನರ ಶ್ರೇಯೋಭಿವೃದ್ಧಿಗೆ ಶ್ರಮಿಸುವ ಸದುದ್ದೇಶ ಹೊಂದಿದೆ. ಹಾಗಾಗಿ ಜಿ.ಟಿ. ಈಶ್ವರ ಅವರ ಈ ಮನೆ ಅಂಥ ಸಂಸ್ಥೆಗೆ ಕೊಟ್ಟಿರುವುದು ಸಮಂಜಸವೂ ಸಾರ್ಥಕವೂ ಆಗಿದೆ ಎಂದೇ ಹೇಳಬಹುದು.

ಪ್ರಕಟಣೆ :ವಿಕ್ರಮ ಪತ್ರಿಕೆ  ೨೭-೧೨-೨೦೧೫

ಪ್ರಕಟಣೆ :ವಿಕ್ರಮ ಪತ್ರಿಕೆ ೨೭-೧೨-೨೦೧೫

Read Full Post »

    ನಾವು ಮಾಡುವ ಯೋಗಾಸನಗಳಿಂದ ಶರೀರದ ಬಾಹ್ಯ ಅವಯವಗಳ ಗೊತ್ತಾದ ಚಲನವಲನಗಳಿಂದ ಶರೀರದ ವಿವಿಧ ಆಂತರಿಕ ಅವಯವಗಳ ಮೇಲೆ ನಿರ್ದಿಷ್ಟ ಒತ್ತಡ ಬೀಳುವುದರಿಂದ ಒಳಗಿನ ಅವಯವ ಚುರುಕುಗೊಂಡು ಪರಿಶುದ್ಧವಾಗಿ ತಮ್ಮ ಶಕ್ತಿಯನ್ನು ಹೆಚ್ಚಿಸಿಕೊಳ್ಳುತ್ತವೆ. ಇದರಿಂದ ದೈಹಿಕ ಹಾಗೂ ಮಾನಸಿಕ ಸ್ವಾಸ್ಥ್ಯ ಲಭಿಸುತ್ತದೆ.
ನಿರಂತರ ಯೋಗಾಭ್ಯಾಸದಿಂದ ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯವೂ ಉತ್ತಮಗೊಳ್ಳುತ್ತದೆ. ಪರರಲ್ಲಿ ದಯೆ, ಕರುಣೆ, ಕ್ಷಮೆ, ಪ್ರೀತಿ ಇತ್ಯಾದಿ ಗುಣಗಳು ಮೊದಲೇ ಇದ್ದದ್ದು ಇನ್ನಷ್ಟು ಜಾಗೃತಾವಸ್ಥೆಯಲ್ಲಿರಲು ಯೋಗಾಭ್ಯಾಸ ಸಹಾಯ ಮಾಡುತ್ತದೆ. ಶರೀರದಲ್ಲಿ ಹೊಕ್ಕ ದ್ವೇಷ, ಅಸೂಯೆ, ಸಣ್ಣತನ, ಇತ್ಯಾದಿ ದುರ್ಗುಣಗಳು ಇದ್ದರೆ ಅವನ್ನು ಮೇಲೆ ಬರಲು ಬಿಡುವುದಿಲ್ಲ. ಅಲ್ಲೇ ಹೊಸಕಿ ಹಾಕುತ್ತದೆ. ಇದರಿಂದ ಮನೆಯವರೆಲ್ಲರ ಆರೋಗ್ಯವೂ ಉತ್ತಮಗೊಳ್ಳುತ್ತದೆ.
20151029_064732

20150621_062406

20140728_172412

?????????????

     ಪ್ರತಿಯೊಂದು ಶಾಲೆಯಲ್ಲಿ ಪ್ರತೀನಿತ್ಯ ಅರ್ಧ ಗಂಟೆ ಮಕ್ಕಳಿಗೆ ಯೋಗಾಭ್ಯಾಸ ತರಗತಿ ಕಡ್ಡಾಯವಾಗಿ ಇರಲೇಬೇಕು. ಈ ಕಾಲದ ಸ್ಪರ್ಧಾಯುಗದಲ್ಲಿ ಮಕ್ಕಳಿಗೆ ಕಲಿಕೆಯ ಒತ್ತಡ ತುಂಬ ಇರುತ್ತದೆ. ಅದನ್ನು ಮಾನಸಿಕವಾಗಿ ಎದುರಿಸಲು ಯೋಗ, ಪ್ರಾಣಾಯಾಮ ಅತ್ಯಗತ್ಯ. ಅವರ ಮನಸ್ಸೂ ಇದರಿಂದ ಸದೃಢಗೊಳ್ಳುತ್ತದೆ. ಶಾಲೆಯ ಪರೀಕ್ಷೆಯಲ್ಲಿ ಅಂಕ ಕಡಿಮೆಯಾಯಿತೆಂದೋ ಅಥವಾ ನಪಾಸಾದೆವೆಂದೋ ಮಕ್ಕಳ ಆತ್ಮಹತ್ಯೆ, ಮನೆಬಿಟ್ಟು ತೆರಳುವಿಕೆ ಮುಂತಾದ ಅನಿಷ್ಟ ಯೋಚನೆಗಳು ಸುಳಿಯಲು ಆಗ ಅವಕಾಶವಿರುವುದಿಲ್ಲ. ಯೋಗಾಭ್ಯಾಸದಿಂದ ಪ್ರತೀದಿನ ಅವರ ಮನಸ್ಸು ಪ್ರಫುಲ್ಲಗೊಂಡಿರುತ್ತದೆ. ಪಾಟದ ಕಡೆ ಗಮನವೀಯಲು ಸಹಕಾರಿಯಾಗುತ್ತದೆ. ಚಿಕ್ಕಂದಿನಲ್ಲೇ ಯೋಗಾಭ್ಯಾಸ ಮಾಡಿದರೆ ದೇಹದ ಆರೋಗ್ಯದ ಜೊತೆಗೆ ಮನಸ್ಸಿನ ಆರೋಗ್ಯವೂ ಉತ್ತಮಗೊಳ್ಳುವುದರಲ್ಲಿ ಸಂಶಯವಿಲ್ಲ. ಇದರಿಂದ ಬಾಲಕರು ಸಂಸ್ಕಾರ ಕಲಿತು ಮುಂದೆ ಈಗ ನಮ್ಮ ಸಮಾಜದಲ್ಲಿ ನಡೆಯುತ್ತಿರುವ ಇಂಥ ವಿಕೃತ ಅತ್ಯಾಚಾರ ಮನೋಭಾವ ಬೆಳೆಯದಂತೆ ಮನಸ್ಸು ನಿಗ್ರಹಗೊಂಡೀತು.

ಹೇಗೆ ತಾಯಿ ತನ್ನ ಮಗುವಿನ ಬೇಕುಬೇಡಗಳನ್ನು ತಾನೇ ಅರಿತು ಪೂರೈಸುತ್ತಾಳೆಯೋ ಹಾಗೆಯೇ ಸಕಲ ಜೀವರಾಶಿಗಳಿಗೂ ತಾಯಿಯಾಗಿರುವ ಪ್ರಕೃತಿಮಾತೆ ಎಲ್ಲವನ್ನೂ ನಮಗೆ ನೀಡುತ್ತಾಳೆ. ಎಲ್ಲ ಜೀವಿಗಳಿಗೂ ಮಿಗಿಲಾಗಿ ಮನುಜನಿಗೆ ಮಾತಾಡುವ, ಯೋಚನೆ ಮಾಡುವ ಶಕ್ತಿಯನ್ನು ನೀಡಿದ್ದಾಳೆ. ಜೀವನ ಒಂದು ಸುಂದರ ಸರಳ ಬದುಕು. ಸುಲಭ ಸರಳವಾದ ನಮ್ಮ ಜೀವನಗಾಥೆಗೆ ಆಲಸ್ಯ, ಗುರಿ ಇಲ್ಲದ ದುಡಿಮೆ, ಅಸೂಯೆ, ದ್ವೇಷ, ಅತಿ ಆಸೆ ಎಲ್ಲ ಸೇರಿಸಿ ಅದನ್ನು ನಾವು ಜಟಿಲಗೊಳಿಸಿದ್ದೇವೆ. ಹೀಗೆ ನಾವೇ ಹಾಕಿದ ಈ ಸಂಕೋಲೆಗಳಿಂದ ಬಿಡುಗಡೆ ಪಡೆಯಲು ಸಂತೃಪ್ತಿಯಿಂದ ಬಾಳಲು ಆಧ್ಯಾತ್ಮಿಕತೆ ದಾರಿ ತೋರಿಸುತ್ತದೆ.

ಇರುವ ಕೆಲಸವ ಮಾಡು ಕಿರಿದೆನದೆ ಮನವಿಟ್ಟು
ದೊರೆತುದ ಹಸಾದವೆಂದುಣ್ಣು ಗೊಣಗಿಡದೆ
ಧರಿಸು ಲೋಕದ ಭರವ ಪರಮಾರ್ಥವನು ಬಿಡದೆ
ಹೊರಡು ಕರೆ ಬರಲ್ ಅಳದೆ ಮಂಕುತಿಮ್ಮ

೮-೧೧-೧೫ ಪ್ರಜಾನುಡಿ ಪತ್ರಿಕೆಯಲ್ಲಿ ಪ್ರಕಟಿತಗೊಂಡಿದೆ.

Read Full Post »

೧೯೭೪ನೇ ಇಸವಿಯಲ್ಲಿ ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಿತ್ತನಡ್ಕದಲ್ಲಿರುವ ಸರ್ಕಾರೀ ಪ್ರಾಥಮಿಕ ಶಾಲೆಗೆ ಒಂದನೇ ತರಗತಿಗೆ ಸೇರಿದಾಗ ನನ್ನ ವಯಸ್ಸು ಐದು. ಮನೆಯಿಂದ ಶಾಲೆಗೆ ಒಂದು ಮೈಲಿ ನಡೆದೇ ಹೋಗುತ್ತಿದ್ದುದು. ನಮಗೆ ಮಹಮ್ಮದ್ ಎಂಬ ಶಿಕ್ಷಕರು ಅ ಆ ಇ.. ..  ಕನ್ನಡ ಅಕ್ಷರ ಮಾಲೆ ಕಲಿಸಿದವರು. ಅವರ ಮೇಜಿನಮೇಲೆ ನಾಗರಬೆತ್ತ ಸದಾ ಇರುತ್ತಿತ್ತು. ಒಮ್ಮೆಯೂ ನಾನು ಅದರ ಪೆಟ್ಟಿನ ರುಚಿ ಪಡೆದವಳಲ್ಲ! ಆದರೆ ಏಕೋ ಗೊತ್ತಿಲ್ಲ ಆ ಬೆತ್ತದಮೇಲೆ ನನಗೆ ಬಲು ಕೋಪವಿತ್ತು. ನಮ್ಮ ಮೇಸ್ಟರು ಮದ್ಯಾಹ್ನ ಊಟವಾಗಿ ಖುರ್ಚಿಯಲ್ಲಿ ಕುಳಿತು ಕಾಲು ಮೇಜಿನ ಮೇಲೆ ಇಟ್ಟು ನಿದ್ದೆ ಮಾಡುತ್ತಿದ್ದರು. ಆಗ ಒಮ್ಮೆ ಆ ಬೆತ್ತವನ್ನು ಮುರಿದು ಹೊರ ಬೀಸಾಕಿದ್ದೆ. ಅವರು ಎಚ್ಚರಗೊಂಡಮೇಲೆ ಯಾರು ಬೆತ್ತ ಮುರಿದದ್ದು ಎಂದಾಗ ಯಾರೂ ನನ್ನ ಹೆಸರು ಹೇಳಲಿಲ್ಲ. ಎಲ್ಲರಿಗೂ ಬೆತ್ತದಮೇಲೆ ವೈರವಿತ್ತು. ಪೊದೆಯಿಂದ ಬೆತ್ತ ಮುರಿದು ತಾ ಎಂದು ನನ್ನನ್ನೇ ಕಳುಹಿಸಿದರು! ನಮಗೆ ಸ್ಲೇಟಿನಲ್ಲಿ ಒಂದು ಬದಿ ಅ ಇನ್ನೊಂದು ಬದಿ ಆ ಎಂದು ದೊಡ್ದದಾಗಿ ಬರೆದುಕೊಟ್ಟು ಅದರ ಮೇಲೆ ಬರೆಯಿರಿ ಎಂದು ಕೊಟ್ಟು ಅವರು ನಿದ್ದೆ ಮಾಡುತ್ತಿದ್ದರು.  ಅವರು ನಿದ್ದೆ ಮುಗಿಸಿ ಏಳುವಾಗ ಸ್ಲೇಟಿನಲ್ಲಿ ಜಾಗವೇ ಇಲ್ಲದಂತೆ ಅ ಆ ಎಂಬುದು ಅಷ್ಟು ದಪ್ಪವಾಗಿ ತಿದ್ದುತ್ತಿದ್ದೆವು!  

೨ನೇ ಈಯತ್ತೆಗೆ ನಮಗೆ ಆಚಾರಿ ಮಾಶ್ಟ್ರು ಎಂದೇ ಹೆಸರುವಾಸಿಯಾದ ಜನಾರ್ಧನ. ಅವರನ್ನು ಕಂಡರೆ ಎಲ್ಲ ಮಕ್ಕಳಿಗೆ ಬಲು ಪ್ರೀತಿ. ಅವರು ಅಷ್ಟೇ ಮಕ್ಕಳಿಗೆ ಹೊಡೆಯುತ್ತಿರಲಿಲ್ಲ. ಕಥೆ ಹೇಳುತ್ತಲೇ ಪಾಟದ ಕಡೆಗೂ ನಮ್ಮ ಗಮನ ಸೆಳೆಯುತ್ತಿದ್ದರು. ಅವರೊಂದಿಗೆ ನಮಗೆ ಎಷ್ಟು ಸಲಿಗೆ ಇತ್ತೆಂದರೆ ಅವರ ಮೇಜಿನ ಮೇಲೆ ಹತ್ತಿ ಕೂರುತ್ತಿದ್ದೆವು. ಅಡಿಗೆ ನುಗ್ಗಿ ಅವರ ಕಾಲಿಗೆ ಕಚಗುಳಿ ಇಡುತ್ತಿದ್ದೆವು. ಅವರ ಡ್ರಾಯರಿಗೇ ಕೈಹಾಕುತ್ತಿದ್ದೆವು. ಆದರೂ ಅವರು ನಮ್ಮನ್ನು ಬೈಯುತ್ತಿರಲಿಲ್ಲ.  ೨ ಪಾಸಾಗಿ ೩ನೇ ತರಗತಿಗೆ ಬಂದಾಗ ಏನಾಶ್ಚರ್ಯ? ಅವರೂ ಪಾಸಾಗಿ ನಮ್ಮ ತರಗತಿಗೇ ಬರಬೇಕೆ! ಆಗ ನಮಗಾದ ಆನಂದ ಅಷ್ಟಿಷ್ಟಲ್ಲ. ಇದರಿಂದ ನನ್ನ ತಂಗಿಗೆ ಬಲು ದೊಡ್ಡ ನಷ್ಟವಾಯಿತು.  ಅವಳು ಮೂರನೇ ತರಗತಿಗೆ ಬಂದಾಗ ಅವರು ಪುನಃ ೨ನೇ ತರಗತಿಗೇ ಹಿಂಬಡ್ತಿ ಪಡೆದಿದ್ದರು.

ನಾಲ್ಕನೇ ತರಗತಿಯಲ್ಲಿ ನಾರಾಯಣ ಭಟ್ಟರು ನಮಗೆ ಕಲಿಸುತ್ತಿದ್ದುದು. ಅವರು ಪ್ರಶ್ನೆ ಕೇಳಿದಾಗ ಉತ್ತರಿಸದಿದ್ದರೆ ಪೂಟ್‌ಕೋಲಿನಿಂದ ಕೈಬೆರಳ ಗಂಟಿಗೆ ಹೊಡೆಯುತ್ತಿದ್ದರು. ಕೆಲವು ಹುಡುಗರಿಗೆ ಸರೀ ಪೆಟ್ಟು ಬೀಳುತ್ತಿತ್ತು. ಅವರಿಗೆ ಫೂಟ್ಕೋಲು ಕೊಡಲು ತಾ ಮುಂದು ನಾಮುಂದು ಎಂಬ ಪೈಪೋಟಿ ನಮಗೆ. ಏಕೆಂದರೆ ಅವರು ಕೊಡುವ ಪೆಟ್ಟಿಗೆ ಫೂಟ್‌ಕೋಲು ಎರಡು ತುಂಡಾಗುತ್ತಿತ್ತು. ಆಗ ಹೊಸದು ತೆಗೆದುಕೊಡುತ್ತಿದ್ದರು! ಈಗ ಯೋಚಿಸಿದಾಗ ಪಾಪ ಆ ಹುಡುಗರ ಮನಸ್ಥಿತಿ ಆಗ ಹೇಗಿದ್ದಿರಬಹುದು ಎಂದು ಪಶ್ಚಾತ್ತಾಪವಾಗುತ್ತದೆ. ನಮಗೋ ಹೊಸ ಫೂಟ್ಕೋಲು ಪಡೆಯುವ ಸಂಭ್ರಮವಷ್ಟೇ ಆಗ ಇರುತ್ತಿದ್ದುದು.

ಐದನೇ ತರಗತಿಗೆ ಬಂದಾಗ ಹೊಸದಾಗಿ ಇಂಗ್ಲೀಷ್ ಅಕ್ಷರ ಕಲಿಯುವ ಸಂಭ್ರಮ. ಬಳಪದಿಂದ ಪೆನ್ನಿಗೆ ಭಡ್ತಿ. ಆಹಾ ಶಾಯಿಪೆನ್ನು ಹಿಡಿದು ಬರೆಯುವ ಉತ್ಸಾಹ. ಶಾಯಿಪೆನ್ನಿನ ಮೇಲೆ ಅದೇನೋ ಒಂದು ತರಹದ ಪ್ರೀತಿ. ಅದನ್ನು ಹಿಡಿದಾಗ ಏನೋ ಸಾಧಿಸಿದಂಥ ಭಾವ. ಬರೆಯುವಾಗ ಬೆರಳಿಗೆ ಶಾಯಿ ಆದರೆ ಇನ್ನೂ ಖುಷಿ.  ಲೆಕ್ಕ ಪಾಟಕ್ಕೆ ಮುಖ್ಯೋಪಾಧ್ಯಾಯರಾದ ಸದಾಶಿವ ಭಟ್ಟರು. ಅವರ ಕೈಯಲ್ಲಿ ಸದಾ ಇಲೆಕ್ಟ್ರಿಕ್ ವಯರ್ ಗರಗರನೆ ತಿರುಗುತ್ತಲೇ ಇರುತ್ತಿತ್ತು. ಮಗ್ಗಿಯನ್ನು ಎಷ್ಟು ಉರು ಹೊಡೆದರೂ ಅವರು ಕೇಳುವಾಗ ಹೊರಗೇ ಬರುತ್ತಿರಲಿಲ್ಲ. ವಯರ್ ಮೇಲೆಯೇ ಕಣ್ಣು. ಅವರೋ ಬೆಂಚಿನಿಂದ ಸಾಲಾಗಿ ಕೇಳದೆ ಒಬ್ಬೊಬ್ಬರಿಗೆ ಒಂದೊಂದು ಅಲ್ಲಲ್ಲಿಂದ ಕೇಳುತ್ತಿದ್ದರು. ಎಷ್ಟೋಸಲ ವಯರಿನ ಪೆಟ್ಟಿನ ಉರಿ ಅನುಭವಿಸಿದ್ದೆ.

ಆರನೇ ತರಗತಿಗೆ ಬಂದಾಗ ಹಿಂದಿ ಕಲಿಯುವ ಸಂಭ್ರಮ. ತಿರುಮಲೇಶ್ವರಭಟ್, ಸುಬ್ರಮಣ್ಯ ಭಟ್ ಮಾಸ್ತರರೆಂದರೆ ಅಚ್ಚುಮೆಚ್ಚು. ಅವರಲ್ಲಿದ್ದ ಕೆಂಪುಶಾಯಿ ಪೆನ್ನು ಪಡೆದು ಕೈಗೆ ಶಾಯಿ ಮೆತ್ತಿಕೊಳ್ಳುವುದೆಂದರೆ ನನಗೆ ಬಲು ಇಷ್ಟವಿತ್ತು. ಕೆಂಪುಶಾಯಿ ಪೆನ್ನು ಕೈಯಲ್ಲಿ ಹಿಡಿದರೆ ಅದೇನೋ ಸಂಭ್ರಮ. ದೊಡ್ದ ಸಂಪತ್ತು ಲಭಿಸಿದಂತ ಭಾವ. ಅದರಿಂದ ರೈಟ್ ಮಾರ್ಕ್ ಹಾಕಿದರೆ ಆಗುವ ಸಂತೋಷಕ್ಕೆ ಎಣೆಯಿಲ್ಲ!

ಆಗಸ್ಟ್ ೧೫ರಂದು ಸ್ವಾತಂತ್ರ್ಯ ದಿನದಂದು ಧ್ವಜ ಹಿಡಿದು ಒಂದು ಮೈಲಿ ಮೆರವಣಿಗೆ ಹೋಗುವ, ಶಕ್ತಿಮೀರಿ ಜಯಕಾರ ಹಾಕುತ್ತ ಭಾಗಿಯಾಗುವ ಘಳಿಗೆ ಬಲು ಹಿತಕರ. ಮತ್ತೆ ತಿರುಗಿ ಬಂದು ಶಾಲೆಯಲ್ಲಿ ಸೇರಿ ಒಂದು ಚಾಕಲೆಟ್ ಪಡೆಯುವ ಸಂದರ್ಭವನ್ನು ಎಂದೂ ತಪ್ಪಿಸಿಕೊಳ್ಳುತ್ತಿರಲಿಲ್ಲ! ಅದನ್ನು ತಿನ್ನುವ ಸಂತೋಷಕ್ಕೆ ಎಣೆಯುಂಟೆ?

ಏಳನೇ ತರಗತಿಗೆ ಬಂದಾಗ ಇಡೀ ಶಾಲೆಗೇ ನಾವೇ ಹಿರಿಯರು ಎಂಬ ಗತ್ತು ತಂತಾನೇ ಆವರಿಸುವ ಘಳಿಗೆ. ಕಿರಿಯರನ್ನು ನೋಡುವಾಗ ಇವರು ನಾವು ಹೇಳಿದಂತೆ ಕೇಳಬೇಕು ಎನ್ನುವ ಭ್ರಮೆ. ಆಗ ನಮ್ಮ ಶಾಲೆಯಲ್ಲಿ ಮಧ್ಯಾಹ್ನಕ್ಕೆ ಬಿಸಿಬಿಸಿ ಉಪ್ಪಿಟ್ಟು ಕೊಡುವ ಪದ್ಧತಿ ಇತ್ತು. ಉಪ್ಪಿಟ್ಟು ತಯಾರಿಸಲು ಈಗಿನಂತೆ ಅಡುಗೆಯವರ ನೇಮಕ ಇಲ್ಲದ ಕಾಲ. ಆರು ಮತ್ತು ಏಳನೇ ತರಗತಿಯ ಮಕ್ಕಳು ಸೇರಿ ಉಪ್ಪಿಟ್ಟು ತಯಾರಿಸಬೇಕಿತ್ತು. ೪-೫ ಮಕ್ಕಳ ಒಂದು ಗುಂಪು ಮಾಡಿ ಸರದಿ ಪ್ರಕಾರ ಉಪ್ಪಿಟ್ಟು ತಯಾರಿಸುವ ಪಾಳಿ ಬೀಳುತ್ತಿತ್ತು. ಅಂಗಡಿಯಿಂದ ೧೦ಪೈಸೆಗೆ ಪ್ರತೀದಿನ ಉಪ್ಪು ನಾವೇ ತರಬೇಕಿತ್ತು. ಅಬ್ಬ ಉಪ್ಪಿಟ್ಟು ತಯಾರಿಸುವ ಕೆಲಸ ಅಂದರೆ ಅದೇನೋ ದೊಡ್ಡ ಯಜ್ಞ ಮಾಡಲೂ ಇಷ್ಟು ಕಷ್ಟಪಡಬೇಕಿಲ್ಲವೇನೋ ಎಂಬಂತಾಗುತ್ತಿತ್ತು. ಸೌದೆ ಒಲೆಗೆ ಉರಿ ಹಾಕಲೇ ಕನಿಷ್ಟ ಒಂದು ಗಂಟೆ ಹಿಡಿಯುತ್ತಿತ್ತು! ಒಂದಿಗೇ ಕಣ್ಣಲ್ಲಿ ಧಾರಾಕಾರ ನೀರು! ದೊಡ್ಡ ಬಾಣಲೆಯಲ್ಲಿ ನೀರಿಟ್ಟು ಅಂತೂ ಉಪ್ಪಿಟ್ಟು ತಯಾರಿ ಆಗುವಾಗ ಊಟಕ್ಕೆ ಬಿಡುವ ಗಂಟೆ ಕೇಳಿಬರುತ್ತಿತ್ತು. ೧೨.೩೦ಕ್ಕೆ ಅದನ್ನು ಎಲ್ಲ ಮಕ್ಕಳಿಗೂ ಬಡಿಸುವ ಕೆಲಸವೂ ನಮ್ಮದೇ. ನಾವು ಉಪ್ಪಿಟ್ಟು ಮಾಡಿದ ದಿನ ಮಾತ್ರ ಉಪ್ಪಿಟ್ಟು ತಿನ್ನುತ್ತಿದ್ದುದು. ಈಗ ಯೋಚಿಸಿದರೆ ಅಯ್ಯೋ ಆಗಿನ ಪರಿಸ್ಥಿತಿಯೇ ಎನಿಸುತ್ತದೆ. ಒಂದನೇ ತರಗತಿಯಿಂದ ಸುರುವಾಗಿ ಸಾಲಾಗಿ ದಿನಪತ್ರಿಕೆ ತುಂಡು ಹಿಡಿದು ಸರತಿ ಸಾಲಿನಲ್ಲಿ ನಿಲ್ಲಬೇಕು. ಪತ್ರಿಕೆ ಮನೆಯಿಂದ ತರಲು ಮರೆತರೆ ನೋಟ್ ಪುಸ್ತಕದ ಹಾಳೆ ಹರಿದು ಇಟ್ಟುಕೊಳ್ಳುವ ಅಭ್ಯಾಸವೂ ಕೆಲವರಿಗೆ ಇತ್ತು! ಆ ಕಾಗದದಲ್ಲಿ ಬಿಸಿ ಉಪ್ಪಿಟ್ಟು ಹಾಕುವಾಗ ಹರಿಯದೇ ಅದರಿಂದ ಉಪ್ಪಿಟ್ಟು ತಿನ್ನುವುದು ಎಂದರೆ ಸಾಹಸದ ಕೆಲಸವೇ ಸರಿ. ಎಷ್ಟು ಸಂತೋಷದಿಂದ ಉಪ್ಪಿಟ್ಟು ತಿನ್ನುತ್ತಿದ್ದೆವು. (ಈಗ ಇದನ್ನು ನೆನೆಸಿಕೊಂಡರೆ ಈಗಿನ ಮಕ್ಕಳು ಹೆಚ್ಚು ಭಾಗ್ಯವಂತರು ಎನಿಸುತ್ತದೆ. ಸರ್ಕಾರದ ವತಿಯಿಂದ ತಟ್ಟೆಯಲ್ಲಿ ಬಿಸಿ ಬಿಸಿ ಊಟ.) ಮತ್ತೆ ಉಪ್ಪಿಟ್ಟು ಮಾಡಿದ ಮಸಿಮೆತ್ತಿದ ಬಾಣಲೆಯನ್ನು ತಿಕ್ಕಿ ತೊಳೆಯುವವರ ಸ್ಥಿತಿ ಈಗ ನೆನೆಸಿಕೊಂಡರೆ ವ್ಯಥೆ ಎನಿಸುತ್ತದೆ. ಬಾವಿಯಿಂದ ನೀರು ಸೇದಿ ಬೂದಿ ಉಪಯೋಗಿಸಿ ಪಾತ್ರೆ ತೊಳೆಯಬೇಕಿತ್ತು. ಆ ಕೆಲಸ ಏಳನೇ ತರಗತಿಯ ಗಾತ್ರದಲ್ಲಿ ಎದ್ದು ಕಾಣುವ ಬಾಲಕರ ಮೇಲೆ ಬೀಳುತ್ತಿತ್ತು.

ನಮ್ಮ ನಮ್ಮ ತರಗತಿಗಳನ್ನು ನಾವೇ ಗುಡಿಸಿಕೊಳ್ಳುತ್ತಿದ್ದೆವು. ಈಗ ಆ ಕೆಲಸ ಮಾಡಲು ವಿದ್ಯಾರ್ಥಿಗಳಿಗೆ ಅವಮಾನವೆನಿಸುತ್ತದೆ. ನಾವಂತೂ ಬಲು ಖುಷಿಯಿಂದ ಆ ಕೆಲಸ ಮಾಡುತ್ತಿದ್ದೆವು. ಅಂತೂ ಏಳು ಪಾಸಾಗಿ ಆ ಶಾಲೆ ಬಿಡುವಾಗ ಬಲುದುಃಖ.

ಸರ್ಕಾರಿ ಜ್ಯೂನಿಯರ್ ಕಾಲೇಜು ಕನ್ಯಾನ. ಇಲ್ಲಿ ೮ರಿಂದ ಪಿಯು.ಸಿ ವರೆಗೆ ವಿದ್ಯಾಭಾಸ ಮಾಡಿದೆ.   ಎಂಟನೇ ತರಗತಿಗೆ ಸೇರ್ಪಡೆ. ಮನೆಯಿಂದ ಎರಡುಮೈಲಿ ದೂರ. ನಡೆದೇ ಹೋಗುತ್ತಿದ್ದುದು. (ಈಗ ಯಾವ ಮಕ್ಕಳೂ ನಡೆದು ಹೋಗಲಿಕ್ಕಿಲ್ಲ. ಸಾರಿಗೆ ಸೌಕರ್ಯವೂ, ಪೋಷಕರ ಆದಾಯ ಸೌಲಭ್ಯವೂ, ಮನೆಯಲ್ಲಿ ಸೀಮಿತ ಮಕ್ಕಳ ಸಂಖ್ಯೆಯೂ ಇರುವ ಕಾರಣದಿಂದ ನಡೆದು ಶಾಲೆಗೆ ಹೋಗುವ ಪರಿಸ್ಥಿತಿ ಯಾರಿಗೂ ಬರುವುದಿಲ್ಲ) ಹೊಸ ಶಾಲೆ, ಅಪರಿಚಿತ ಅಧ್ಯಾಪಕರು  ಏನೋ ಆತಂಕ. ಅಭ್ಯಾಸವಾಗುತ್ತ ಅದೇ ಖುಷಿ.

ಲೆಕ್ಕ ಪಾಟಕ್ಕೆ ಅಹಮ್ಮದ್ ಮಾಸ್ತರರು. ನಮ್ಮ ಕ್ಲಾಸಿನಲ್ಲಿ ಸುರೇಶ ಎಂಬ ಹುಡುಗ ಕ್ಲಿಷ್ಟಕರ ಗಣಿತ ಸಮಸ್ಯೆಯನ್ನು ಪರಿಹರಿಸುವುದರಲ್ಲಿ ನಿಷ್ಣಾತ. ತರಗತಿಗೇ ಮೊದಲಿಗನಾಗಿ ಜಾಣನೆಂಬ ಬಿರುದು ಪಡೆದಿದ್ದ. ನಮ್ಮ ಅಹಮ್ಮದ್ ಮಾಸ್ತರರಿಗೆ ಬಿಡಿಸಲಾಗದ ಲೆಕ್ಕವನ್ನು ಸುರೇಶ ಬಿಡಿಸುತ್ತಿದ್ದ. ಅಹಮ್ಮದ್ ಮಾಸ್ತರರು ಲೆಕ್ಕ ಸಮಸ್ಯೆಗಳನ್ನು ಫಲಕದ ಎದುರು ಬರೆದು ಅದನ್ನು ವಿವರಿಸುವ ಸಂದರ್ಭದಲ್ಲಿ ಕೆಲವೊಮ್ಮೆ ಅವರೇ ತಬ್ಬಿಬ್ಬಾಗುವುದು ಇತ್ತು. ಆಗ ಅವರನ್ನು ನೋಡುವುದೇ ನನಗೆ ಸೋಜಿಗ. ಅವರ ಕೈ ಬೆವರಿ ಆಗಾಗ ಒರೆಸಿಕೊಳ್ಳುತ್ತಿದ್ದರು! ಮತ್ತೆ ಸುರೇಶ ನೀನೇ ಇದನ್ನು ಮಾಡು ಎಂದು ನುಡಿದು ಸೀಮೆಸುಣ್ಣ ಅವನ ಕೈಗಿಡುತ್ತಿದ್ದರು. ಅವರು ಕುರ್ಚಿಯಲ್ಲಿ ಕೂತು ಮುಖದ ಬೆವರು  ಒರೆಸಿಕೊಳ್ಳುತ್ತಿದ್ದರು!

ಕನ್ನಡಕ್ಕೆ ಕನ್ನಡ ಪಂಡಿತರೆಂದೇ ಪ್ರಸಿದ್ಧಿಹೊಂದಿದ ಶಂಕರನಾರಾಯಣ ಭಟ್ಟರು. ಕನ್ನಡ ಪಾಟ ಸೊಗಸಾಗಿ ಮಾಡುತ್ತಿದ್ದರು. ಕೋಪಿ ಬರೆದುಕೊಂಡು ಹೋಗದೆ ಇದ್ದರೂ “ದೇವರು ಒಳ್ಳೆಯದು ಮಾಡಲಿ ಎನ್ನುತ್ತಿದ್ದರು! ಪ್ರಶ್ನೆಗೆ ಉತ್ತರಿಸದಿದ್ದರೆ “ಬರಬರುತ್ತ ರಾಯನ ಕುದುರೆ..” ಎಂದು ನುಡಿದು ಅಲ್ಲಿಗೆ ನಿಲ್ಲಿಸುತ್ತಿದ್ದರು. ಮಾರನೇ ದಿನದಿಂದ ಹಾಗೆ ಅವರಿಂದ ಹೇಳಿಸಿಕೊಳ್ಳಲು ಯಾರೂ ತಯಾರಿರುತ್ತಿರಲಿಲ್ಲ!

ಡ್ರಾಯಿಂಗ್ ಪಾಟಕ್ಕೆ ಪದ್ಮನಾಭ ಮಾಸ್ತರರು. ನನಗೋ ಡ್ರಾಯಿಂಗ್ ಅಂದರೇ ತಲೆನೋವು. ಅಂತೂ ಹೇಗೋ ೩ ವರ್ಷ ಅವರು ಹೇಳಿದ ಚಿತ್ರ ಸೊಟ್ಟದಾಗಿ ಬಿಡಿಸಿ ಬಣ್ಣ ತುಂಬಿದ್ದೆ.

ನಾನು ಹೈಸ್ಕೂಲಿನಲ್ಲಿದ್ದಾಗ ನನ್ನ ಅಕ್ಕ ಕಾಲೇಜಿನಲ್ಲಿದ್ದಳು. ಕಾಲೇಜಿಗೆ ಸಮವಸ್ತ್ರ ಇರಲಿಲ್ಲ. ನಮಗೆ ಇತ್ತು. ಒಂದು ದಿನ ಪಿಟಿ ಮಾಸ್ತರರು ನನ್ನಕ್ಕನನ್ನು ನಿಲ್ಲಿಸಿ ಸಮವಸ್ತ್ರ ಧರಿಸಿಲ್ಲ ಎಂದು ಬೈದರಂತೆ. ಅವಳು ವಿವರಿಸಿ ಹೇಳಿದಾಗ ಅವರು ಬೇಸ್ತು ಬಿದ್ದರಂತೆ. ನಾನು ನಮ್ಮಕ್ಕ ನೋಡಲು ಒಂದೇ ತರಹ ಎಂದು ಅವರೆಲ್ಲರ ಅಂಭೋಣ. ಆದರೆ ನಮಗೆ ಯಾವತ್ತೂ ಹಾಗೆ ಕಾಣಿಸಿರಲಿಲ್ಲ! ಅವಳನ್ನು ನಾನೆಂದು ತಿಳಿದ ಪಿಟಿ ಮಾಸ್ತರರಿಂದ ಬೈಗಳು ತಿಂದಿದ್ದಳು! ನಾನು ಆಟದಲ್ಲಿ ಯಾವಾಗಲೂ ಮುಂದೆ. ಅದು ಯಾವ ಆಟ ಆದರೂ ಸರಿಯೇ. ನೀಲಿ ಹಳದಿ ಕೆಂಪು ಬಿಳಿ ಅಂತ ನಾಲ್ಕು ಗುಂಪು ಮಾಡುತ್ತಿದ್ದರು. ಎಲ್ಲ ಗುಂಪು ಮುಖ್ಯಸ್ಥರಿಗೆ ನನ್ನನ್ನು ಸೇರಿಸಿಕೊಳ್ಳಲು ಪೈಪೋಟಿ. ನನ್ನ ತಂಗಿ ಹಾಗೂ ನಾನು ಬೇರೆ ಬೇರೆ ಗುಂಪಲ್ಲಿರುತ್ತಿದ್ದೆವು. ಆಟವಾಡುವಾಗ ನಮ್ಮೊಳಗೇ ಸ್ಪರ್ಧೆ. ಯಾವತ್ತೂ ನಾನು ಅವಳಿಗೆ  ಆಟ ಬಿಟ್ಟುಕೊಟ್ಟಿಲ್ಲ. ಆಗ ಎಲ್ಲರೂ ನನ್ನ ತಂಗಿಗೆ ಅನುಕಂಪ ತೋರಿಸುತ್ತಿದ್ದರು.

ಅಂತೂ ಹತ್ತು ಪಾಸಾಯಿತು. (ಒಮ್ಮೆ ಆಂಗ್ಲ ವೀಷಯದಲ್ಲಿ ಡುಮ್ಕಿ ಹೊಡೆದು, ಮತ್ತೆ ಬರೆದು ಪಾಸಾಗಿದ್ದು) ಅದೇ ಪ್ರೌಢಶಾಲೆಗೆ ಹೊಂದಿಕೊಂಡೇ ಇರುವ ಜೂನಿಯರ್ ಕಾಲೇಜು ಮೆಟ್ಟಲು ಹತ್ತಿದೆ. ಪಿಯುಸಿಗೆ ಬಂದಾಗ ಕನ್ನಡ ಮಾಧ್ಯಮದಿಂದ ಇಂಗ್ಲೀಷ್ ಮಾಧ್ಯಮಕ್ಕೆ ಭಡ್ತಿ. ಉಪನ್ಯಾಸಕರು ನಮ್ಮ ಕಷ್ಟ ನೋಡಲಾರದೆ ಕನ್ನಡದಲ್ಲೂ ಪಾಟ ವಿವರಿಸಿ ನಮ್ಮ ತಲೆಗೆ ತುಂಬುವಲ್ಲಿ ಸಫಲರಾದರು.  ಕಲಾವಿಭಾಗದಲ್ಲಿ ಕೇವಲ ಹತ್ತು ಜನ ಹುಡುಗರು, ನಾವು ಸುಮಾರು ೨೫ ಮಂದಿ ಹುಡುಗಿಯರು. ನಮ್ಮದೇ ರಾಜ್ಯಭಾರ. ಅವರಿಗೆಲ್ಲ ನಾನೇ ನಾಯಕಿ. ದಿನದಲ್ಲಿ ಯಾರಾದರೂ ಉಪನ್ಯಾಸಕರು ಬಾರದೆ ಇದ್ದ ದಿನ ಹುಡುಗರೆಲ್ಲ ತರಗತಿಯಿಂದ ಹೊರ ನಡೆಯುತ್ತಿದ್ದರು. ನಾವು ಮಾಡದ ಗಲಾಟೆ ಇಲ್ಲ. ಆಗ ಪಾಟ ಮಾಡುವ ಸರದಿ ನನ್ನದು. ನಾನು ಬೋರ್ಡ್ ಎದುರು ನಿಂತು ನಮ್ಮ ಪ್ರೌಢ ಶಾಲೆಯ ಡ್ರಾಯಿಂಗ್ ಮಾಸ್ತರರು ಮಾಡುವಂತೆಯೇ ಅವರನ್ನು ಅಣಕಿಸುತ್ತ ಪಾಟ ಸುರು ಮಾಡುತ್ತಿದ್ದೆ. ವಕ್ರವಕ್ರವಾಗಿ ಗೆರೆ ಎಳೆದು (ಚಿತ್ರ ಬಿಡಿಸುವ ವಿಷಯದಲ್ಲಿ ಅವರ ಹಾಗೆಯೇ ಅಣಕಿಸಲು ನನ್ನಿಂದ ಸಾಧ್ಯವಿರುತ್ತಿರಲಿಲ್ಲ!) ನೋಡಿ ಹೀಗೆ ಚಿತ್ರ ಬಿಡಿಸಿರಿ ಎಂದು ಕನ್ನಡಕದ ಸೆರೆಯಿಂದ ನೋಡುವಂತೆ ಅಭಿನಯಿಸುತ್ತಿದ್ದೆ. ಮತ್ತು ಅವರು ಚಿತ್ರ ಬಿಡಿಸುತ್ತಿರುವಾಗ ನಮ್ಮ ಮಾತಿನ ಸದ್ದಾದರೆ ಏನದು ರಾಮಾಯಣದಲ್ಲಿ ಪಿಟ್ಕಾಯಣ ಎಂದು ಹಿಂತಿರುಗಿ ಕನ್ನಡಕ ಜಾರಿಸಿ ನಮ್ಮನ್ನು ನೋಡುತ್ತಿದ್ದರು. ನಾನೂ ಹಾಗೆಯೇ ಹೇಳುತ್ತಿದ್ದೆ. ಆಗ ನನ್ನನ್ನು ನೋಡಿ ಗೆಳತಿಯರೆಲ್ಲ ಬಿದ್ದುಬಿದ್ದು ನಗುತ್ತಿದ್ದರು. ಹೀಗೆ ಒಮ್ಮೆ ನಗು ಸ್ಫೋಟಗೊಂಡಾಗ ಆದ ಗಲಾಟೆಯಿಂದ ಪಕ್ಕದ ತರಗತಿಯಲ್ಲಿ ಪಾಟ ಮಾಡುತ್ತಿದ್ದ ರಾಜ್ಯಶಾಸ್ತ್ರದ  ಉಪನ್ಯಾಸಕರು ನಮ್ಮ ತರಗತಿಗೆ ಬಂದರು. ಅವರು ಬರುತ್ತಾ ಇದ್ದಾರೆ ಎಂದು ನನ್ನ ಸಹಪಾಟಿಗಳು ಮೊದಲೇ ಹೇಳಿದ್ದರಿಂದ ನಾನು ಕೂಡಲೇ ಬೋರ್ಡ್ ಮೇಲಿದ್ದ ಚಿತ್ರ ಅಳಿಸಿ ಏನೂ ಆಗದಂತೆ ನನ್ನ ಸ್ಥಳದಲ್ಲಿ ಬಂದು ಕುಳಿತೆ. ಅವರು ಬಂದು ಚೆನ್ನಾಗಿ ಬೈದರು. ಬೋರ್ಡ್‌ನಲ್ಲಿ ಡಿಆರ್ ಎಂಬ ಆಂಗ್ಲ ಅಕ್ಷರ ಇತ್ತು. ಅವರು ಬಂದದ್ದರಿಂದ ಅದನ್ನು ಅಳಿಸಲಾಗಿರಲಿಲ್ಲ. ಅದನ್ನು ನೋಡಿ ಇದೇನು ಎಂದರು. ಯಾರೂ ಬಾಯಿ ಬಿಡಲಿಲ್ಲ. ನನ್ನನ್ನು ಕೇಳಿದರು. ನಾನು ಮೊಂಡು ಧೈರ್ಯದಿಂದ ಅದು ಡ್ರಾಯಿಂಗ್ ಎಂದೆ. ಅವರು ಅದನ್ನು ಒಪ್ಪಲು ತಯಾರಿರಲಿಲ್ಲ. ಅರ್ಥಶಾಸ್ತ್ರ ಉಪನ್ಯಾಸಕರ ಹೆಸರು ಡಿ ಆರ್ ಉಮೇಶ್. ಅವರನ್ನು ಏನೋ ತಮಾಷೆ ಮಾಡುತ್ತಿರುವುದು ಎಂದು ಅವರ ವಾದ. ಅವರು ನಮ್ಮನ್ನು ಕುಳಿತುಕೊಳ್ಳಲು ಹೇಳದೆ ಬೈದು ನಿರ್ಗಮಿಸಿದರು. ನಾವು ಹಠದಿಂದ ನಿಂತೇ ಇದ್ದೆವು. ಆಮೇಲೆ ನಾವು ಒಂದು ತಿಂಗಳು ಅವರ ಬಳಿ ಮಾತಾಡದೆ ಅವರನ್ನು ಸತಾಯಿಸಿದ್ದೆವು.

 ತರಗತಿಯಲ್ಲಿ ಮೊದಲ ಬೆಂಚಲ್ಲಿ ಕೂರುವುದೆಂದರೆ ಏನೋ ಗೌರವ ಎಂದೇ ನನಗಿದ್ದ ಭಾವನೆಯಾಗಿತ್ತು. ಆದರೆ ನನಗೆ ಹತ್ತನೇ ಈಯತ್ತೆವರೆಗೆ ಪ್ರಥಮ ಬೆಂಚಲ್ಲಿ ಕೂರುವ ಸೌಭಾಗ್ಯ ಸಿಗಲೇ ಇಲ್ಲ. ಎತ್ತರದ ಪ್ರಕಾರ ಬೆಂಚಲ್ಲಿ ಕೂರಿಸುತ್ತಿದ್ದರು. ಹಿಂದಿನ ಬೆಂಚಲ್ಲಿ ಕೂರುವುದೆಂದರೆ ನನ್ನ ಮನಸ್ಸು ಒಪ್ಪುತ್ತಿರಲಿಲ್ಲ. ಅದಕ್ಕೆ ನಾನು ಎತ್ತರ ಅಳೆಯುವಾಗ ಕಾಲು ಸ್ವಲ್ಪ ಕುಂಟಿಸಿ ನಿಲ್ಲುತ್ತಿದ್ದೆ. ಹಾಗಾಗಿ ಪ್ರತೀ ತರಗತಿಯಲ್ಲೂ ಹಿಂದಿನಿಂದ ಒಂದು ಬೆಂಚು ಮುಂದೆ ನನ್ನ ಸ್ಥಾನ ಖಾಯಮ್ಮು! ಕುಳ್ಳಗೆ ಇರುವ ಸಹಪಾಟಿಗಳನ್ನು ನೋಡಿ ನಾನು ಕರುಬುತ್ತಿದ್ದೆ! ಅಂತೂ ಮೊದಲ ಬೆಂಚಲ್ಲಿ ಕೂರುವ ನನ್ನ ಆಸೆ ಪಿಯುಸಿಗೆ ಬಂದಾಗ ಈಡೇರಿತು. ತಮಾಷೆ ಅಂದರೆ ಮೊದಲ ಬೆಂಚಲ್ಲಿ ಮೊದಲ ಜಾಗದಲ್ಲಿ ಕೂರಲು ಯಾರೂ ತಯಾರಿರುತ್ತಿರಲಿಲ್ಲ. ಉಪನ್ಯಾಸಕರು ಬಂದು ಮೊದಲು ಕೂತವರ ನೋಟ್ಸನ್ನೇ ನೋಡುವುದು ಎಂದು ಎಲ್ಲ ಹಿಂಜರಿದಿದ್ದರು. ಅನಾಯಾಸವಾಗಿ ನನಗೆ ಆ ಸ್ಥಳ ಸಿಕ್ಕಿತ್ತು. ನಾನು ಖುಷಿಯಿಂದಲೇ ಕುಳಿತೆ.

ಹೀಗೆಯೇ ಎರಡನೇ ಪಿಯುಸಿಯೂ ಮುಗಿದೇ ಹೋಯಿತು. ಆಗ ನನಗೆ ಮದುವೆಯೂ ನಿಶ್ಚಯ ಆಗಿ ಪಿಯುಸಿ ತರಗತಿ ಮುಗಿಯುವ ಮೊದಲೇ ನಾನು ಕಾಲೇಜು ಬಿಡಬೇಕಾಗಿ ಬಂದದ್ದು ನೆನಸಿಕೊಂಡರೆ ಈಗಲೂ ನನಗೆ ಬಲು ಬೇಸರವಾಗುತ್ತದೆ.  ಅಲ್ಲಿಗೆ ನನ್ನ ವಿದ್ಯಾರ್ಥಿಜೀವನ ವಿಷಾದದೊಂದಿಗೆ ಮುಕ್ತಾಯ ಹಂತ ತಲಪಿತ್ತು.

ಹಿಂತಿರುಗಿ ನೋಡಿದಾಗ ಈಗ ಮಕ್ಕಳ ವಿದ್ಯಾಭ್ಯಾಸಕ್ಕೆ ಎಷ್ಟೊಂದು ಅವಕಾಶಗಳು ಎಂದು ಖುಷಿಯಾಗುತ್ತದೆ. ನಿಜಕ್ಕೂ ವಿದ್ಯಾರ್ಥಿಜೀವನ ಈ ಹಿಂದೆಯೂ ಮುಂದೆಂದೂ ಅಮೂಲ್ಯವಾದ ಕ್ಷಣಗಳು ಎಂಬುದರಲ್ಲಿ ಸಂಶಯವೇ ಇಲ್ಲ.

[ ಪಂಜು-ವಿಶೇಷ ]

http://www.panjumagazine.com/?p=6592

Read Full Post »

`ಹೆಣ್ಣು ನಮ್ಮಷ್ಟು ಶಕ್ತಿವಂತಳಲ್ಲ ಎಂದು ಗಂಡಸರ ಭಾವನೆ. ತಂದೆಯಾದವ (ತಾಯಿ ಕೂಡ) ತನ್ನ ಮಗನಿಗೆ ಅವನ ಸಣ್ಣ ವಯಸ್ಸಿನಲ್ಲೇ ಈ ಭಾವನೆಯನ್ನು ತಲೆಗೆ ತುಂಬುತ್ತಾನೆ(ರೆ). ಹುಡುಗ ಬೆಳೆದಾಗ ಅದೇ ಅಭಿಪ್ರಾಯ ಆಳವಾಗಿ ಬೇರು ಸಮೇತ ಒಳಗೆ ಇಳಿದಿರುತ್ತದೆ.  ಹೆಂಗಸಿಗಾಗಲೀ ಗಂಡಸಿಗಾಗಲೀ ಪ್ರತಿಯೊಬ್ಬರ ಶಕ್ತಿ ಸಾಮಾರ್ಥ್ಯ ಬೇರೆ ಬೇರೆ ಇರುತ್ತದೆ. ತಾನು ಹೆಚ್ಚು ಎಂಬ ಅಹಂಭಾವ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಈಗಲೂ ಹೆಣ್ಣುಮಗು ಜನಿಸಿದೊಡನೆ ಜವಾಬ್ದಾರಿ ಜಾಸ್ತಿ ಎಂದು ತಿಳಿದುಕೊಳ್ಳುವ ತಂದೆ ತಾಯಿ ಇದ್ದಾರೆ ಎಂದರೆ ಅದು ನಾಚಿಕೆಗೇಡಿನ ವಿಷಯ.
ಮನುಜನ ಜೀವನದಲ್ಲಿ ವಿವಾಹ ಅತೀ ಮುಖ್ಯವೆನಿಸಿದೆ. ನಮ್ಮ ವಿವಾಹ ಪದ್ಧತಿಗೆ ಒಂದು ಪವಿತ್ರತೆ ಇದೆ. ಮದುವೆಯಾಗುವುದು ಬರೀ ಸಂತಾನ ಅಪೇಕ್ಷೆಗೆ ಮಾತ್ರ ಎಂಬ ಉದ್ದೇಶವಿಟ್ಟುಕೊಳ್ಳಬಾರದು. ವೈವಾಹಿಕ ಜೀವನ ಸುಲಲಿತವಾಗಿ ಸಾಗಲು ಗಂಡಹೆಂಡಿರಿಬ್ಬರಲ್ಲೂ ಸಾಮರಸ್ಯವಿರಬೇಕು. ಒಬ್ಬರ ಭಾವನೆಯನ್ನು ಇನ್ನೊಬ್ಬರು ಗೌರವಿಸಬೇಕು. ಗಂಡನಾದವ ಒಣಪ್ರತಿಷ್ಠೆ ಬಿಟ್ಟು ಸಂಸಾರದಲ್ಲಿ ಬೆರೆಯಬೇಕು.
ಶಂಕರ ಪವಿತ್ರರ ಸಾಂಸಾರಿಕ ಜೀವನದಲ್ಲಿ ಗಂಡ ಹೇಳಿದಂತೆ ಹೆಂಡತಿ ಕೇಳಬೇಕು. ಅವಳ ಭಾವನೆಗೆ ಎಳ್ಳಷ್ಟೂ ಬೆಲೆ ಕೊಡುವುದಿಲ್ಲ ಶಂಕರ. ಇಂಥ ಪರಿಸ್ಥಿಯಲ್ಲಿ ಜೀವನ ಯಾಂತ್ರೀಕೃತವಾಗತ್ತದೆ. ಮದುವೆ ವಿಧಿಯಲ್ಲಿ ಹೆಂಡತಿಯ ಕೈಹಿಡಿದು `ಕಾಯಾವಾಚಾ ಮನಸಾ ನಾತಿಚರಾಮಿ ಎಂದು ಪ್ರತಿಜ್ಞೆ ಇತ್ತಿರುವುದಕ್ಕೆ ಯಾವ ಬೆಲೆಯೂ ಇಲ್ಲ. ಇಲ್ಲಿ ಗಂಡು ಎಂಬ ಅಹಂಕಾರ ಪ್ರತಿಷ್ಠೆಗೇ ಪ್ರಮುಖ ಬೆಲೆ.  ತಾನು ಹೇಳಿದ್ದೇ ಸರಿ, ಹೆಂಡತಿಗೂ ಒಂದು ಮನಸ್ಸು ಇದೆ, ಅವಳಿಗೂ ಭಾವನೆಗಳಿವೆ ಎಂಬುದರ ಬಗ್ಗೆ ಗಂಡನಿಗೆ ಯೋಚನೆಯೇ ಇಲ್ಲ. ತಾನೇ ಶ್ರೇಷ್ಟನೆಂಬ ಗರ್ವ.
ಸೂರ್ಯ ವಿನುತರ ದಾಂಪತ್ಯದ ಕತೆಯೇ ಬೇರೆ. ಇಬ್ಬರೂ ಸಾಕಷ್ಟು ವಿದ್ಯಾವಂತರು. ಇಲ್ಲಿ ಬಲಿಪಶು ಸೂರ್ಯ. ಸೂರ್ಯ ಬಹಳ ವಿನಯವಂತ, ಸಮಾಧಾನಿ. ವಿನುತಳಿಗೆ ಸ್ವಂತಬುದ್ಧಿ ಇಲ್ಲ.  ಪುಸ್ತಕದ ಜ್ಞಾನ ಮಾತ್ರವಿದ್ದು, ವ್ಯವಹಾರಜ್ಞಾನ ಸೊನ್ನೆ.  ಅವಳ ತವರಿನವರು ಬಹಳ ಶ್ರೀಮಂತರು. ತಾಯಿ ಮಗಳಿಗೆ ಬುದ್ಧಿ ಹೇಳದೆ ತನ್ನ ತಾಳಕ್ಕೆ ತಕ್ಕಂತೆ ಮಗಳನ್ನು ಕುಣಿಸುತ್ತಿದ್ದಾಳೆ. ಮಗಳನ್ನು ಗಂಡನ ಮನೆಗೆ ಕಳಿಸುವುದು ಬಿಟ್ಟು ಅಳಿಯನೇ ಇಲ್ಲಿ ಬಂದು ಇರಲಿ ಎಂಬ ಒತ್ತಡ ಹೇರುತ್ತಾಳೆ. ಸೂರ್ಯನ ತಂದೆತಾಯಿಗೆ ಅವನೊಬ್ಬನೇ ಮಗ. ತನ್ನ ಹೆತ್ತವರನ್ನು ಬಿಟ್ಟು ಮಾವನ ಮನೆ ಅಳಿಯನಾಗಲು ಅವನು ತಯಾರಿಲ್ಲ. ಹೋಗಬೇಕಾದ ಅವಶ್ಯವೂ ಇಲ್ಲ. ಅದಕ್ಕಾಗಿ ಗಂಡನೊಂದಿಗೆ ವಿನುತಳ ಅಸಹಕಾರ. ಸೂರ್ಯ ಏನು ಮಾತಾಡಿದರೂ ತಪ್ಪು. ಅವಳನ್ನು ಏನಾದರೂ ಕೇಳಿದರೆ `ನಾನೇನು ನಿಮ್ಮ ಸೇವಕಿಯೆ? ಇಂಥ ಉತ್ತರ ವಿನುತಳಿಂದ. ಸೂರ್ಯ ಅಸಹಾಯಕನಾಗಿದ್ದಾನೆ. ಇಲ್ಲಿ ಮಾನವೀಯತೆ, ಪ್ರೀತಿ ನಶಿಸಿದೆ. ಶ್ರೀಮಂತಿಕೆಯ ದರ್ಪವೇ ಹೆಚ್ಚುಗಾರಿಕೆಯೆನಿಸಿದೆ. ಹೆಣ್ಣಿನಿಂದ ಗಂಡು ಶೋಷಣೆಗೆ ಒಳಗಾಗಿದ್ದಾನೆ. ಸಂಸಾರದಲ್ಲಿ ಹೊಂದಾಣಿಕೆ ಇಲ್ಲ. ತಾನು ಹೇಳಿದಂತೇ ಆಗಬೇಕು ಎಂದು ಹೆಂಡತಿಯ ಹಠ.
ಮೇಲೆ ಹೇಳಿದ ಎರಡೂ ಸಂಸಾರಗಳಲ್ಲೂ ಸಾಮರಸ್ಯವಿಲ್ಲ. ಮೊದಲಿನದ್ದರಲ್ಲಿ, ಹೆಂಡತಿಯಾದವಳು ಹೇಗೊ ಸಂಸಾರಕ್ಕೆ ಹೊಂದಿಕೊಳ್ಳುತ್ತಾಳೆ. ಅವಳಿಗೆ ತಾಳ್ಮೆ ಹೆಚ್ಚಿರಬಹುದು. ಕ್ಷಮಾಶೀಲೆಯಾಗಿರಬಹುದು ಹಾಗೂ ಜಗಳವಾಡುವ ಸ್ವಭಾವದವಳಲ್ಲದಿರಬಹುದು. ಆದರೆ ಮನೋನೆಮ್ಮದಿ ಕಡಿಮೆ ಇರಬಹುದು. ಎರಡನೆಯದರಲ್ಲಿ, ಒಟ್ಟಿಗೆ ಸಂಸಾರ ನಡೆಸುವುದು ಕಷ್ಟಸಾಧ್ಯ. ವಿನುತ ಹಾಗೂ ಅವಳಮ್ಮನ ಮನೋಧರ್ಮ ಬದಲಾಗಬೇಕು. ಪರಸ್ಪರ ವಿಶ್ವಾಸ ಸ್ನೇಹಕ್ಕೆ ಹೆಚ್ಚು ಬೆಲೆಕೊಡಬೇಕು. ಒಬ್ಬರ ಭಾವನೆಯನ್ನು ಇನ್ನೊಬ್ಬರು ಗೌರವಿಸಬೇಕು. ಆಗ ಮಗಳು ಅಳಿಯನ ಬಾಳು ಹೂವಿನ ಸುಪ್ಪತ್ತಿಗೆಯಾದೀತು, ಸಂಸಾರದಲ್ಲಿ ನೆಮ್ಮದಿ ಸಿಕ್ಕೀತು.
ಒಟ್ಟಿನಲ್ಲಿ ಸಂಸಾರ ರಥ ಸುಗಮವಾಗಿ ಸಾಗಲು ಗಂಡ ಹೆಂಡತಿ ಎಂಬ ಎರಡು ಚಕ್ರಗಳೂ ಸಮವಾಗಿರಬೇಕು. ರಥವನ್ನೆಳೆಯುವವರಿಗೆ ಉಭಯರ ಹೆತ್ತವರೂ ಪ್ರೀತಿ ಅಭಿಮಾನದ ತನಿಯನ್ನೆರೆಯಬೇಕು ಹಾಗೂ ಅವರು ರಥದ ಕೀಲು ಆಗಿರಬೇಕು. ಆಗ ಮಾತ್ರ ರಥ ಸಲೀಸಾಗಿ ಮುಂದೆ ಉರುಳುತ್ತದೆ. ರಥದ ಯಾವುದೇ ಒಂದು ಚಕ್ರ ಸಮವಾಗಿಲ್ಲದಿದ್ದರೂ ಅದು ಮುಂದೋಡದೆ ಅಲ್ಲೇ ಮುಗ್ಗರಿಸಿಬಿಡುತ್ತದೆ! ಗಂಡು, ತಾನೇ ಶ್ರೇಷ್ಠ ಎಂಬ ಅಹಂಭಾವ ತೊರೆಯಬೇಕು. ಹೆಣ್ಣು, ತಾನೇ ಗಂಡಿಗಿಂತಲೂ ಮೇಲು ಎಂಬ ಭಾವನೆಯನ್ನು ಮನದಿಂದ ದೂರಮಾಡಬೇಕು. ಯಾರೊಬ್ಬರೂ ಮೇಲಲ್ಲ, ಕೀಳೂ ಅಲ್ಲ. ಒಬ್ಬರ  ಭಾವನೆಯನ್ನು ಇನ್ನೊಬ್ಬರು ಗೌರವಿಸಬೇಕು. ದಾಂಪತ್ಯಜೀವನದಲ್ಲಿ ಒಬ್ಬರಿಗೊಬ್ಬರು ಸಹಕಾರ ಮನೋಭಾವ ತೋರಿದರೆ ಮಾತ್ರ ಅದು ಆದರ್ಶ ಸಂಸಾರವೆನಿಸೀತು.
* * *
ಅನುರಾಗ ನಂಬಿಕೆಯಿಂದ ಆದ ಮದುವೆ  ಹೆಣ್ಣಿಗಾಗಲೀ ಗಂಡಿಗಾಗಲೀ ಸಮಾನ ಭದ್ರತೆ ಕೊಡುತ್ತದೆ. ಇಲ್ಲಿ,  ಹೆಣ್ಣಿಗೆ  ಮಾತ್ರ ಮದುವೆಯಿಂದ ಭದ್ರತೆ ಸಿಗುವುದಲ್ಲ. ಗಂಡನಿಗೆ ಹೆಂಡತಿ ಆಸರೆ, ಹೆಂಡತಿಗೆ ಗಂಡ ಆಸರೆ. ಇದು ಪರಸ್ಪರ ಪೂರಕವಾಗಿರಬೇಕು. ದಾಂಪತ್ಯದ ಇಳಿ ವಯಸ್ಸಿನಲ್ಲಿ ಒಬ್ಬೊರಿಗೊಬ್ಬರು ಹೆಚ್ಚು ಹತ್ತಿರವಾಗುತ್ತಾರೆ ಹಾಗೂ ಪರಸ್ಪರ ಅವಲಂಬನೆಯೂ ಆಗಲೇ ಜಾಸ್ತಿ ಕಂಡುಬರುತ್ತದೆ. ಗಂಡನಾದವ ಹೆಚ್ಚು ಹೆಂಡತಿಯನ್ನು ಅವಲಂಬಿಸುತ್ತಾನೆ. (ಆದರೆ ತೋರಿಸಿಕೊಳ್ಳುವುದಿಲ್ಲ. ಹೇಳಿಕೊಂಡರೆ ಪ್ರತಿಷ್ಠೆಗೆ ಭಂಗ ತಂದಂತೆ ತಾನೆ!) ಹೆಂಡತಿ ಹೆಚ್ಚು ಗಂಡನನ್ನು ಆಶ್ರಯಿಸುವುದಿಲ್ಲ ಎಂದು ನನ್ನ ಅನಿಸಿಕೆ. ಅವಳಿಗೆ ತಾಳ್ಮೆ, ಕ್ಷಮಾಗುಣ ಹುಟ್ಟಿನಿಂದಲೇ ಬಂದಿರುತ್ತದೆ.  (ನೂರಕ್ಕೆ ನೂರಲ್ಲ, ಪ್ರತಿಶತಃ ೭೫ ಇರಬಹುದು.) ಸಂಸಾರದಲ್ಲಿ ಎಂಥ ಕಷ್ಟದ ಪರಿಸ್ಥಿತಿ ಬಂದರೂ ಅದನ್ನು ಮಹಿಳೆ ಬಹಳ ಬೇಗ ಅರ್ಥವಿಸಿಕೊಂಡು ಪರಿಹರಿಸಬಲ್ಲಳು. ಅಂಥ ತಾಕತ್ತು ಅವಳಿಗಿರುತ್ತದೆ. ಗಂಡಸು ಮನೆ ಹೊರಗೆ ದುಡಿಯಬಲ್ಲನೇ ಹೊರತು ಅಷ್ಟೇ ಸುಲಭವಾಗಿ ಮನೆ ಒಳಗೆ ಸಮರ್ಥವಾಗಿ ದುಡಿಯಲು ಅವನಿಂದ ಸಾಧ್ಯವಾಗುವುದಿಲ್ಲ. ಅದೇ ಮಹಿಳೆಯಾದರೆ ಮನೆ ಹೊರಗಿನ ಕಾರ್ಯವನ್ನೂ ಒಳಗಿನ ಸಂಸಾರವನ್ನೂ ಅಚ್ಚುಕಟ್ಟಾಗಿ ನಿರ್ವಹಿಸಬಲ್ಲಳು. ಗಂಡಸಿಗೆ ಒಂಟಿತನ ಬಹಳ ಬೇಗ ಕಾಡುತ್ತದೆ. ಆದ್ದರಿಂದ ಮದುವೆ ಹೆಂಗಸಿಗಿಂತ ಹೆಚ್ಚಾಗಿ ಗಂಡಸಿಗೆ ಜಾಸ್ತಿ ಭದ್ರತೆ ಕೊಡುತ್ತದೆ ಎಂದು ನನ್ನ ಅಭಿಪ್ರಾಯ.
ಇಲ್ಲಿ ಮುಖ್ಯವಾಗಿ ಗಮನಿಸಬೆಕಾದ ವಿಷಯಗಳಿವು: ಗಂಡ ಹೆಂಡತಿಯರಲ್ಲಿ ಹೊಂದಾಣಿಕೆ ಇದ್ದರೆ ಮಾತ್ರ ಉಭಯರಿಗೂ ಮದುವೆಯಿಂದ ಭದ್ರತೆ ಒದಗೀತು. ಅದೇ ಇಬ್ಬರಲ್ಲಿ ಒಬ್ಬರು ಸರಿ ಇಲ್ಲದಿದ್ದರೂ ಮದುವೆ ಉಭಯರಿಗೂ ಅಭದ್ರತೆ ಕೊಡುತ್ತದೆ. ಉದಾಹರಣೆಗೆ, ಕುಡುಕ ಕಾಮುಕ ವರದಕ್ಷಿಣೆ ಪೀಡಕ ಗಂಡನಾಗಿದ್ದರೆ ಹೆಂಡತಿಗೆ ಈ ಮದುವೆಯಿಂದ ಭದ್ರತೆ ಹೋಗಲಿ ಮೊದಲಿದ್ದ ನೆಮ್ಮದಿಯೂ ಇಲ್ಲದೆ ಪ್ರಾಣಭಯ ಪ್ರಾರಂಭವಾಗಬಹುದು. ಎಷ್ಟು ದುಡಿದು ತಂದರೂ ತೃಪ್ತಿ ಇಲ್ಲದಿರುವಿಕೆ, ಕೆಟ್ಟ ಸ್ವಭಾವ, ಜಗಳಗಂಟಿ, ಸಂಶಯಪಡುವ ಹೆಂಡತಿಯಾದರೆ ಗಂಡನಿಗೆ ಈ ಮದುವೆ ನರಕವೆನಿಸೀತು. ಹಾಗಾಗಿ ಪರಸ್ಪರ  ಹೊಂದಾಣಿಕೆಯೇ ಮದುವೆಯ ಭದ್ರತೆಯನ್ನು ಸೂಚಿಸುತ್ತದೆ ಎಂದು ನಾವು ಸ್ಪಷ್ಟವಾಗಿ ಅರಿಯಬೇಕು.

ಇದು ಹಿಂದೆ ಪತ್ರಿಕೆಯಲ್ಲಿ ಬಂದ ಲೇಖನ.

Read Full Post »


ಬೆಳಗೆರೆ ಕೃಷ್ಣ ಶಾಸ್ತ್ರಿ ನನಗೆ ಅಪರಿಚಿತ ಹೆಸರಾಗಿತ್ತು. ಅವರು ಬರೆದ `ಯೇಗ್ದಾಗೆಲ್ಲ ಐತೆ’ (muಕುಂದೂರು ಸ್ವಾಮಿಗಳ ಬಗ್ಗೆ)  ಪುಸ್ತಕ ವರ್ಷದ ಹಿಂದೆ ಓದಿದ್ದೆ. ಓದಿ ಬಹಳ ಖುಷಿ ಪಟ್ಟಿದ್ದೆ.  ಅವರ `ಮರೆಯಲಾದೀತೆ’ ಎಂಬ ಪುಸ್ತಕ ಕೊಂಡು ಓದಿದೆ.  ೪೨೪ ಪುಟದ ಬೃಹತ್ ಪುಸ್ತಕ. ಓದಿ ಅಬ್ಬ ಈ ವ್ಯಕ್ತಿ ಅದ್ಭುತ ಎಂದೆನಿಸಿತು. ಈ ಪುಸ್ತಕ ಓದಿದರೆ ಅವರ ಇಡೀ ಜೀವನ ಚರಿತ್ರೆ ನಮ್ಮ ಕಣ್ಣಿನ ಮುಂದೆ ತೆರೆದ ಪುಸ್ತಕದಂತೆ ಕಾಣುತ್ತದೆ. ಓದುಗನ ಮನದೊಳಗೆ ನೇರವಾಗಿ ಇಳಿಯುತ್ತದೆ. ಹಾಗಾಗಿ ಹೆಚ್ಚು ಇಷ್ಟವಾಗುತ್ತದೆ. ಮನ ತಡೆಯಲಾರದೆ ಅವರಿಗೆ ಪತ್ರ ಬರೆದೆ. `ನಿಮ್ಮ ಪುಸ್ತಕ ಓದಿ ಸಂತೋಷವಾಗಿ ಆ ಸಂತೋಷವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಈ ಪತ್ರ . ನಿಮ್ಮ ಬರವಣಿಗೆ ಸರಳ ನೇರವಾಗಿ ಮನಕ್ಕೆ ತಟ್ಟಿತು.ನೀವು ಬರೆದ ಇನ್ನೂ ೨ ಪುಸ್ತಕ ಬೇಕಾಗಿತ್ತು ಅದು ಎಲ್ಲಿ ಸಿಗುತ್ತದೆ ಎಂದು ತಿಳಿಸಲು ಸಾಧ್ಯವೆ?’ ಎಂದು  ಇತ್ಯಾದಿ ಬರೆದಿದ್ದೆ. ನಂಬಿದರೆ ನಂಬಿ, ಬಿಟ್ರೆ ಬಿಡಿ ಮಾರಾಯರೆ. ಒಂದು ವಾರದಲ್ಲಿ ಕೊರಿಯರ್‌ನಲ್ಲಿ ಅವರಿಂದ ೩ ಪುಸ್ತಕ ಬಂತು. ತಂಗಿಗೆ ಹೃತ್ಪೂರ್ವಕವಾಗಿ ಎಂದು ಅವರ ಸಹಿಯೊಂದಿಗೆ. ರೋಮಾಂಚನಗೊಂಡೆ. ಒಂದಿಗೆ ಸಣ್ಣ ಚೀಟಿಯಲ್ಲಿ `ಈ ಪುಸ್ತಕಗಳಿಗೆ ದುಡ್ಡು ಕಳುಹಿಸಬಾರದು. ಪುಸ್ತಕ ಓದಿ ಅನಿಸಿಕೆ ಬರೆಯಿರಿ. ನಿಮ್ಮ ಊರಲ್ಲಿ ನನ್ನ ಅಳಿಯ ಇದ್ದಾನೆ. ಅವನ ಮನೆಗೆ ಬಂದಾಗ ನಿಮ್ಮಲ್ಲಿಗೆ ಬರುತ್ತೇನೆ’ ಎಂದು ಬರೆದಿದ್ದರು.
ಇದಾಗಿ ೨ ತಿಂಗಳನಂತರ ಅವರ ಅಳಿಯನ ಮನೆಗೆ ಬಂದವರು ನಮ್ಮ ಮನೆ ಹುಡುಕಿಕೊಂಡು ಬಂದು ಆತ್ಮೀಯವಾಗಿ ಮಾತಾಡಿ `ನಿಮಗೇಕೆ ಆ ಪುಸ್ತಕ ಇಷ್ಟವಾಯಿತು?’ ಎಂಬ ಪ್ರಶ್ನೆ ಕೇಳಿದರು. `ಅದರಲ್ಲಿರುವ ಸರಳತೆ ಹಾಗೂ ಉತ್ಪ್ರೇಕ್ಷೆ ಇಲ್ಲದಿದ್ದರಿಂದ ಅದು ಮನಸ್ಸಿಗೆ ನಾಟುತ್ತಿತ್ತು’ ಎಂದುತ್ತರಿಸಿದೆ. ಅವರು ಒಂದು ಗಂಟೆ ಹೊತ್ತು ಕೂತು muಕುಂದೂರು ಸ್ವಾಮಿಗಳೊಂದಿಗೆ ಆದ ಅವರ ಅನುಭವವನ್ನು ಹೇಳುತ್ತ ಹೋದರು. ನಾವು ಕೇಳುತ್ತ ಹೋದೆವು. ಸಮಯ ಸರಿದದ್ದೇ ಗೊತ್ತಾಗಲಿಲ್ಲ.

       ಅವರೆಷ್ಟು ಸರಳ ಸಜ್ಜನ ವ್ಯಕ್ತಿ ಆಗಿರಬಹುದು ಎಂದು ಅವರ ಬರಹದಿಂದ ಮಾತ್ರ ಹಿಂದೆ ಊಹೆ ಮಾಡಿದ್ದೆ.  ಯಾರೆಂದೇ ಗೊತ್ತಿಲ್ಲದ ನನ್ನನ್ನು ನೋಡಿ ಮಾತಾಡಲು ಮನೆಗೆ ಹುಡುಕಿಕೊಂಡು ಬಂದು ಆತ್ಮೀಯವಾಗಿ ಹೂ ಹಣ್ಣು ಕೊಟ್ಟು ಮಾತಾಡಿ ಹೋದದ್ದು ನಿಜವಾಗಿಯೂ ಅವರೆಷ್ಟು ಸರಳರು ಎಂಬುದರ ಬಗ್ಗೆ ಪ್ರತ್ಯಕ್ಷ ಅನುಭವವೇ ಆಯಿತು. ಕೃಷ್ಣಶಾಸ್ತ್ರಿಗಳ ಉಡುಗೆಯೂ ಸರಳ. ಬಿಳಿಪಂಚೆ, ಜುಬ್ಬ, ತಲೆಗೆ ಒಂದು ಬಿಳಿಬಟ್ಟೆ.
ಬೆಳಗೆರೆ ಕೃಷ್ಣಶಾಸ್ತ್ರಿಗಳಿಗೆ ಈಗ ಸುಮಾರು ೯೦ರ ವಯಸ್ಸು. ಈಗಲೂ ೨ ಕಿಮಿ ದೂರ ನಡೆಯುತ್ತಾರೆ. `ಅವರಿಗೆ ಸತತವಾಗಿ ೨ ಹೃದಯಾಘಾತ, ಒಂದು ಸ್ಟ್ರೋಕು, ತೆರೆದ ಹೃದಯದ ಶಸ್ತ್ರಚಿಕಿತ್ಸೆ ಎಲ್ಲವನ್ನೂ ಗೆದ್ದು ಆರೋಗ್ಯವಂತರಾಗಿ ಮನೆಗೆ ಹಿಂತಿರುಗಿದ್ದಾರೆ’ ಎಂದು ಅವರ ಅಳಿಯ ರವಿ ಬೆಳಗೆರೆ ೨೦೦೧ರಲ್ಲಿ ಹಾಯ್ ಬೆಂಗಳೂರು ಪತ್ರಿಕೆಯಲ್ಲಿ ಖಾಸಾಬಾತ್ ಅಂಕಣದಲ್ಲಿ ಬರೆದಿದ್ದರು.
ಬೆಳಗೆರೆಯಲ್ಲಿ ನಾರಾಯಣಪುರ ಗ್ರಾಮ, ಚಳ್ಳೆಕೆರೆ ತಾಲ್ಲೂಕು, ಚಿತ್ರದುರ್ಗ ಜಿಲ್ಲೆಯಲ್ಲಿ ಶಾಸ್ತ್ರಿಗಳು ಒಂದು ಖಾಸಗಿ ಶಾಲೆ ತೆರೆದಿದ್ದಾರೆ. ಅವರ ತಂದೆ (ಬೆಳಗೆರೆ ಚಂದ್ರಶೇಖರ ಶಾಸ್ತ್ರಿ, ಆಶುಕವಿ) ಸಾಯುವ ಮೊದಲು `ಕಿಟ್ಟಪ್ಪ, ಇಷ್ಟೆಲ್ಲ ಮಾಡಿದೆ ಅಂತೀಯ. ಈ ಸೀಮೆಯ ಮಕ್ಕಳಿಗೆ ವಿದ್ಯಾಭ್ಯಾಸವಿಲ್ಲ. ಇವರಿಗೋಸ್ಕರ ಒಂದು ಶಾಲೆ ಕಟ್ಟು. ಸುತ್ತಲ ಹಳ್ಳಿಯ ಮಕ್ಕಳು ಬಂದು ಓದಿಕೊಳ್ಳುವಂಥ ಶಾಲೆ ಕಟ್ಟು’ ಎಂದು ಹೇಳಿದ್ದರಂತೆ. ಹಾಗೆ ತಂದೆಯ ಮಾತು ನಡೆಸಿಕೊಡಲು ಅಣ್ಣನ ಹೆಸರಲ್ಲಿ ಕಟ್ಟಿರುವ ಶಾಲೆಯೇ `ಬೆಳಗೆರೆ ಸೀತಾರಾಮಶಾಸ್ತ್ರಿ ಪ್ರೌಢಶಾಲೆ.’ ಇದು ೧೯೬೭ರಲ್ಲಿ ಪ್ರಾರಂಭಗೊಂಡು ಈಗ ೧೩ ಎಕರೆ ಜಾಗದಲ್ಲಿ ಜೂನಿಯರ್ ಕಾಲೇಜಾಗಿ ಬೆಳೆದಿದೆ.  ಹಳ್ಳಿಯ ಮಕ್ಕಳು ಸುಮಾರು ೫೦೦ ಮಂದಿ ಅಲ್ಲಿ ಓದುತ್ತಿದ್ದಾರೆ. ದೊಡ್ಡ ಕಟ್ಟಡ, ವಿಶಾಲ ತರಗತಿ, ಉಚಿತ ಹಾಸ್ಟೆಲ್ ಇವೆ. ಉಚಿತ ಹಾಸ್ಟೆಲಿನಲ್ಲಿ ಸುಮಾರು ೧೨೦ ಮಂದಿ ಬಡ ಮಕ್ಕಳು ಜಾತಿಮತ ಭೇದವಿಲ್ಲದೆ ಇದ್ದಾರೆ. ಅವರ ಖರ್ಚೆಲ್ಲ ಶಾಸ್ತ್ರಿಗಳೇ ನೋಡಿಕೊಳ್ಳುತ್ತಾರೆ. ಶಾಲೆಯ ಪಕ್ಕದಲ್ಲೇ ಶಾಸ್ತ್ರಿಯವರ ತೋಟ. ಅದರಿಂದ ಬರುವ ಉತ್ಪತ್ತಿ, ಅವರು ಬರೆದ ಪುಸ್ತಕಗಳಿಂದ ಬರುವ ಆದಾಯ, ಶಾಸ್ತ್ರಿಗಳ ಪರಿಚಿತರು, ಅಭಿಮಾನಿಗಳು ಕೊಡುವ ದಾನ ಇಷ್ಟರಲ್ಲೇ ಅವರು ಸಮರ್ಪಕವಾಗಿ ಹಾಸ್ಟೆಲನ್ನು ಇಷ್ಟು ವರ್ಷಗಳಿಂದ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಸರ್ಕಾರದಿಂದ ಚಿಕ್ಕಾಸನ್ನೂ ಪಡೆದಿಲ್ಲವಂತೆ. ಯಾರೇ ದಾನಿಗಳು ಅವರ ಶಾಲೆಗೆ ದುಡ್ಡು ಕಳುಹಿಸಿದರೆ ಕೂಡಲೇ ಅವರ ಸಹಿಯೊಂದಿಗೆ ರಶೀದಿ ನಿಮ್ಮನ್ನು ತಲುಪುತ್ತದೆ. ಗತಿಸಿದ ಹಿರಿಯರ ಶ್ರಾದ್ಧದಂದು ಒಂದಷ್ಟು ಜನರನ್ನು ಕರೆದು ಬಗೆಬಗೆಯ ಭಕ್ಷ್ಯ ಬೋಜ್ಯ ತಯಾರಿಸಿ ಊಟ ಹಾಕಿದರೆ ಮನೆಯವರಷ್ಟೆ ಸಂತೋಷ ಪಡಬಹುದು. ಅಥವಾ ಮಕ್ಕಳ ಹುಟ್ಟಿದದಿನವೇ ಇರಬಹುದು. ಅದಕ್ಕೆ ಖರ್ಚಾಗುವ ಹಣವನ್ನು ಬೆಳಗೆರೆ ಕೃಷ್ಣಶಾಸ್ತ್ರಿ, ಬೆಳಗೆರೆ, ನಾರಾಯಣಪುರ ಗ್ರಾಮ ಹಾಗೂ ಅಂಚೆ, ಚಿತ್ರದುರ್ಗ ಜಿಲ್ಲೆ, ಚಳ್ಳಕೆರೆ ತಾಲ್ಲೂಕು ಎಂಬ ವಿಳಾಸಕ್ಕೆ ಕಳುಹಿಸಿದರೆ `ಹಾಸ್ಟೆಲಿನ ಮಕ್ಕಳಿಗೆ ನಿಮ್ಮ ಹಿರಿಯರ ಹೆಸರಿನಲ್ಲಿ ಅಥವಾ ನಿಮ್ಮ ಮಗುವಿನ ಹೆಸರಿನಲ್ಲಿ ಆ ದಿನ ಹಾಸ್ಟೆಲಿನ ೧೨೦ ಮಕ್ಕಳಿಗೆ ಊಟ ಹಾಕಿದ್ದೇವೆ.  ಧನ್ಯವಾದಗಳು’ ಎಂಬ ಅವರ ಸಹಿ ಇದ್ದ ಕಾಗದದೊಂದಿಗೆ ರಶೀದಿಯೂ ನಿಮ್ಮನ್ನು ತಲಪುತ್ತದೆ. ಇದರ ಅನುಭವವೂ ನನಗಾಗಿದೆ. ಕಿಂಚಿತ್ ಮೊತ್ತ ನಾನಲ್ಲಿಗೆ ಕಳುಹಿಸಿದ್ದೆ.
ಬೆಳಗೆರೆ ಕೃಷ್ಣಶಾಸ್ತ್ರಿಗಳು ಹಳ್ಳಿಯ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಿದ್ದರು. ಒಂದು ಶಾಲೆಯಲ್ಲಿ ೩-೪ ವರ್ಷ ಇರುತ್ತಿದ್ದರು. ಮತ್ತೆ ಅವರನ್ನು ಬೇರೆ ಹಳ್ಳಿಗೆ ವರ್ಗಾಯಿಸಲಾಗುತ್ತಿತ್ತು. ವರ್ಗಾವಣೆಯಾದಲ್ಲಿಗೆಲ್ಲ ಸಂತೋಷದಿಂದ ಹೋಗಿ ಆ ಎಲ್ಲ ಶಾಲೆಗಳ ಅಭಿವೃದ್ಧಿಯನ್ನೂ ಮೌನಸಾಧಕರಾಗಿ ಮಾಡಿದ್ದರು. ಅವರು ಹೆಂಡತಿ ಮಗುವನ್ನು ಒಂದೇ ದಿನ ಕಳೆದುಕೊಂಡಿದ್ದರು. ಅದರನಂತರ ಅವರಿಗೆ ಮದುವೆಮಾಡಲು ಕುಟುಂಬದವರು ಒತ್ತಾಯಿಸಿದಾಗ ಇವರು (ಯೌವನದಲ್ಲೇ) ಹಲ್ಲನ್ನೆಲ್ಲ ಕೀಳಿಸಿ ಬಂದು `ಈ ಹಲ್ಲಿಲ್ಲದವನಿಗೆ ಯಾರು ಹೆಣ್ಣು ಕೊಡುತ್ತಾರೆ ನೋಡುವ?’ ಎಂದಿದ್ದರಂತೆ! ಈಗಲೂ ಬಾಯಿಯಲ್ಲಿ ಹಲ್ಲಿಲ್ಲದೆಯೇ ಇದ್ದಾರೆ. ನೆಂಟರು ಕೃತಕ ದಂತ ತಂದು ಕೊಟ್ಟಾಗ ಅದನ್ನು ನಿರಾಕರಿಸಿದರು. ಅವರೇ ಬೇಯಿಸಿಕೊಂಡು ಉಂಡು ಜೀವನಕ್ಕೆ ಎಷ್ಟು ಬೇಕೊ ಅಷ್ಟೆ ದುಡ್ಡು ಉಳಿಸಿ, ಉಳಿದೆಲ್ಲ ಸಂಪಾದನೆಯನ್ನೂ ಶಾಲೆ, ಹಾಸ್ಟೆಲಿಗೇ ಹಾಕುವ ಮೌನ ಕಾಯಕಜೀವಿಗಳು.
————————–

Read Full Post »

Older Posts »