Feeds:
ಲೇಖನಗಳು
ಟಿಪ್ಪಣಿಗಳು

Archive for the ‘ಪತ್ರಿಕಾ ಪ್ರಕಟಣಾ ಕಥೆಗಳು’ Category

ಸುಬ್ಬಮ್ಮ ಹಾಗೂ ಅವಳ ಅಣ್ಣ ಬಸಪ್ಪ ೪೦*೨೦ ಅಡಿ ಜಾಗವನ್ನು ಕೊಂಡು ಸಮಭಾಗ ಮಾಡಿ ಶೀಟ್ ಹೊದೆಸಿದ ಮನೆ ಕಟ್ಟಿಸಿಕೊಂಡಿದ್ದರು. ಎರಡೂ ಮನೆಯವರು ಅನ್ಯೋನ್ಯವಾಗಿಯೇ ಇದ್ದರು. ಇತ್ತೀಚೆಗೆ ವೈಮನಸ್ಯ ಹುಟ್ಟಿಕೊಂಡಿತು. ಕಾರಣ ಬಸಪ್ಪ ಅವನ ಮನೆ ಕೆಡವಿ ತಾರಸಿ ಮನೆ ಕಟ್ಟಲು ತೊಡಗಿದ್ದು. ಅದಕ್ಕೆ ಸುಬ್ಬಮ್ಮಳ ತಕರಾರು ಇರಲಿಲ್ಲ. ಇವಳ ಜಾಗವನ್ನು ಒತ್ತುವರಿ ಮಾಡಿ ಪಾಯ ತೆಗೆಯಲು ಮುಂದಾಗಿದ್ದು ನೋಡಿ ಸುಬ್ಬಮ್ಮನ ರಕ್ತದೊತ್ತಡ ಏರಿತು. ಎರಡೂ ಮನೆಗಳು ಒತ್ತುಗೋಡೆಯೊಂದಿಗೆ ಇತ್ತು. ಬಸಪ್ಪ ಮನೆ ಕೆಡವಿದ್ದೇ ಸುಬ್ಬಮ್ಮಳ ಮನೆ ಕುಸಿಯುವ ಅಪಾಯವಿತ್ತು. ಈ ತಲೆಬಿಸಿಯೂ ಸೇರಿ ಅವಳ ನೆಮ್ಮದಿ ಹಾಳಾಯಿತು.
ಒಂದು ಮಧ್ಯಾಹ್ನ ಸುಬ್ಬಮ್ಮ ಹಾಗೂ ಅವಳ ಮಗ ಸೂರ್ಯ ಆದಿಶೇಷನ ಮನೆ ಬಾಗಿಲಿಗೆ ಬಂದರು. ಆದಿಶೇಷ ಆಗತಾನೆ ಕಚೇರಿಯಿಂದ ಮನೆಗೆ ಊಟಕ್ಕೆ ಬಂದಿದ್ದ. ಆದಿಶೇಷ ಮನೆಯೊಳಗೆ ಬರಲು ಪುರುಸೊತ್ತಿಲ್ಲದೆ ಸುಬ್ಬಮ್ಮ ಹಾಗೂ ಸೂರ್ಯ, ‘ಬುದ್ಧಿಯವರೇ, ನಮ್ಮ ಮನೆ ಬೀಳುವ ಹಂತದಲ್ಲಿದೆ. ನಾವು ಎಲ್ಲಿಗೆ ಹೋಗಾಣ? ತಾರಸಿ ಮನೆ ಕಟ್ಟಲು ಒಸಿ ಸಹಾಯ ಮಾಡಿ. ಹೇಂಗಾರು ಸಾಲ ತೀರ್ಸಿತ್ತೀವಿ. ನಿಮ್ಮನ್ನೇ ನಂಬಿದ್ದೇವೆ’’ ಎಂದು ಕಣ್ಣೀರು ಸುರಿಸಿದರು. ಆದಿಶೇಷನದು ಮೊದಲೇ ಹೆಂಗುರುಳು. ಅವರ ಕಣ್ಣೀರು ನೋಡಿದರೆ ಮನಸ್ಸು ಕರಗದೆ ಇದ್ದೀತೆ? ಮರುಕಗೊಂಡು, ಆಯಿತು, ಮನೆ ಕೆಡವಿ ಕಟ್ಟಿಸಿ. ಕೆಲಸ ಸುರು ಮಾಡಿ ಎಂಬ ಖಚಿತ ಭರವಸೆಯನ್ನಿತ್ತ. ತಾಯಿಮಗ ಕಣ್ಣೀರು ಒರೆಸಿಕೊಳ್ಳುತ್ತ ಹೊಸ ಹುರುಪಿನಿಂದ ತೆರಳಿದರು.
ಸುಬ್ಬಮ್ಮನ ಮನೆ ಕೆಡವಿದ್ದಾಯಿತು. ಇವರ ಜಾಗವನ್ನು ಒತ್ತುವರಿ ಮಾಡಲು ಏನೇನೆಲ್ಲ ಕಸರತ್ತು ನಡೆಸಿದರು ಬಸಪ್ಪನ ಮಕ್ಕಳು. ಸುಬ್ಬಮ್ಮ ಅದಕ್ಕೆ ಬಿಲ್‌ಕುಲ್ ಅವಕಾಶ ಕೊಡಲಿಲ್ಲ. ನೀವು ನಿಮ್ಮ ಜಾಗ ಎಷ್ಟಿದೆಯೋ ಅಷ್ಟರಲ್ಲಿ ಮಾತ್ರ ಮನೆ ಕಟ್ಟಿ. ನಾವು ನಮ್ಮ ಜಾಗದಲ್ಲಿ ಮಾತ್ರ ಮನೆ ಕಟ್ಟುತ್ತೇವೆ ಎಂದು ಒಳ್ಳೆಯ ಮಾತಿನಲ್ಲಿ ಸುಬ್ಬಮ್ಮ ಹೇಳಿದಳು. ಅದಕ್ಕೆ ಬಸಪ್ಪನ ಮಕ್ಕಳ ತಕರಾರು. ಅದಕ್ಕಾಗಿ ಪ್ರತೀದಿನ ಮಾತು, ಜಗಳ ಹೊಡೆದಾಟ ನಡೆದಿತ್ತು. ಪರಸ್ಪರ ನಿಂದಿಸುವ ಬರದಲ್ಲಿ ಅಣ್ಣನ ಹೆಂಡತಿ ನಾಗಮ್ಮ ಕೋಪದಿಂದ ಸುಬ್ಬಮ್ಮನಿಗೆ ‘ನಿನ್ನ ಮಗನ್ನ ತಿನ್ನ’ ಎಂಬ ಪದಪುಂಜವನ್ನುದುರಿಸಿದಳು. ಅದು ಕೇಳಿದ್ದೇ ಸುಬ್ಬಮ್ಮ ಕೆಂಡಾಮಂಡಲ ಕೋಪಗೊಂಡು ‘ನಿನ್ನ ಬಾಯಿಗೆ ಮಣ್ಣು ಹಾಕ, ಚೆಂದಾಕಿರುವ ಇದ್ದೊಬ್ಬ ಮಗನಿಗೇ ಶಾಪ ಹಾಕುತ್ತೀಯಲ್ಲ, ನಿನಗೆ ಮನಸ್ಸಾದರೂ ಹೇಗೆ ಬಂತು? ನನಗೆ ಏನು ಬೇಕಾದರೂ ಅನ್ನು. ಅವನು ಇನ್ನೂ ಬಾಳಿ ಬದುಕಬೇಕಾದವನು. ಅವನಿಗೇ ಕೇಡು ಬಯಸುತ್ತೀಯಲ್ಲ’ ಎಂದು ದುಃಖಗೊಂಡು ನುಡಿದಳು. ಮತ್ತು ಅವಳಾಡಿದ ಮಾತಿಗೆ ಬಹುವಾಗಿ ನೊಂದಳು ಬೆಂದಳು. ನನಗೆ ಏನು ಬೇಕಾದರೂ ಹೇಳಲಿ. ನನ್ನ ಮಗನಿಗೆ ಏಕೆ ಹೀಗೆ ಹೇಳಬೇಕಿತ್ತು? ಅವನು ಮೂಗನಂಥ ಮಗ. ಯಾರಿಗೂ ತೊಂದರೆ ಕೊಡುವವನಲ್ಲ ಎಂಬುದು ಅವಳ ಹತಾಶ ನುಡಿ. ಆ ಪರಿಣಾಮ ಈಗ ಎರಡೂ ಮನೆಯವರಿಗೆ ಪರಸ್ಪರ ಮಾತಿಲ್ಲದ ಪರಿಸ್ಥಿತಿಗೆ ಬಂತು. ಅನ್ಯೋನ್ಯವಾಗಿದ್ದ ಎರಡು ಕುಟುಂಬದಲ್ಲಿ ಬಿರುಕು ಮೂಡಲು ಒಂದೇ ಒಂದು ಮಾತು ಕಾರಣವಾಯಿತು. ಅದಕ್ಕೆ ಮಾತು ಮನೆ ಕೆಡಿಸಿತು, ತೂತು ಒಲೆ ಕೆಡಿಸಿತು ಎಂಬ ಗಾದೆ ಹುಟ್ಟಿದ್ದು.
ಅಣ್ಣ, ತಂಗಿ ಇಬ್ಬರ ಮನೆಯ ಕೆಲಸ ಭರದಿಂದ ಸಾಗಿತು. ಆದಿಶೇಷ ಮಾತು ಕೊಟ್ಟಂತೆ ಮನೆ ಕಟ್ಟುವ ಹಂತ ಹಂತದಲ್ಲಿ ಬೇಕಾದ ಹಣ ಸಹಾಯ ಮಾಡಿದ. ಅದು ರೂ. ೫ ಲಕ್ಷದಷ್ಟು ವಿಸ್ತರಿಸಿತು. ಮನೆ ಒಂದನೇ ಅಂತಸ್ತು ಮುಗಿಯಿತು. ಅದರಲ್ಲಿ ಒಂದು ಕೋಣೆ, ಹಜಾರ, ಅಡುಗೆಮನೆ, ಕಕ್ಕಸು, ಸ್ನಾನದ ಮನೆ ಎಲ್ಲ ಅನುಕೂಲಗಳೂ ಸೇರಿದ್ದುವು. ಇಷ್ಟಕ್ಕೆ ಸುಬ್ಬಮ್ಮ ಸುಮ್ಮನಿದ್ದರೆ ಒಳ್ಳೆಯದಿತ್ತು. ಅಚ್ಚುಕಟ್ಟಾಗಿ ಸಂಸಾರ ನಿಭಾಯಿಸಿಕೊಂಡು ಹೋಗಬಹುದಿತ್ತು. ಮನೆ ಇಲ್ಲದಾಗ ಮನೆ ಬೇಕೆಂಬಾಸೆ, ಶೀಟ್ ಮನೆ ಕೆಡವಿ ತಾರಸಿ ಮನೆ ಕಟ್ಟಬೇಕೆಂಬಾಸೆ, ಆ ಮನೆ ಕಟ್ಟಿದಾಗ ಅದಕ್ಕೆ ಮಹಡಿ ಕಟ್ಟಿಸಬೇಕೆಂಬಾಸೆ ಹೀಗೆ ಮನುಜನ ಆಸೆಯೆಂಬ ಸರಪಣಿ ಮುಂದುವರಿಯುತ್ತಲೇ ಇರುತ್ತದೆ. ಆಸೆಗೆ ಎಲ್ಲೆ ಇಲ್ಲ. ಇದಕ್ಕೆ ಸುಬ್ಬಮ್ಮಳೂ ಹೊರತಲ್ಲ. ಮಹಡಿ ಕಟ್ಟಲು ಮುಂದಾದಳು! ಅದಕ್ಕೆ ಸೊಸೆಯ ಚಿನ್ನಾಭರಣ ಮಾರಿದಳು. ಬೇರೆಯವರ ಹತ್ತಿರ ಸಾಲ ಮಾಡಿದಳು. ಸೊಸೆಯೇ ಮುಂದೆ ಬಂದು ತನ್ನಲ್ಲಿದ್ದ ಚಿನ್ನವನ್ನು ಸ್ವ ಇಚ್ಛೆಯಿಂದ ಕೊಟ್ಟು ಇಷ್ಟಾದರೂ ಸಹಾಯವಾಗಲಿ ಎಂದು ಉದಾರತೆ ಮೆರೆದಳು. ಅಂತೂ ಸುಮಾರು ೭ ಲಕ್ಷಕ್ಕೆ ಮನೆ ಕಟ್ಟಿ ಮುಗಿಸಿ ಪ್ರವೇಶ ಸಮಾರಂಭವನ್ನೂ ಮಾಡಿದಳು. ಬಸಪ್ಪನ ಮನೆಯೂ ಅವಳದಕ್ಕಿಂತ ಮೊದಲೇ ಆಗಿತ್ತು. ಅವರು ಇವಳನ್ನು ಮನೆಗೆ ಕರೆಯಲಿಲ್ಲ, ಇವಳು ಅವರನ್ನು ತನ್ನ ಮನೆಗೆ ಕರೆಯಲಿಲ್ಲ. ಅಲ್ಲಿಗೆ ದ್ವೇಷ ಮುಂದುವರಿಯಿತು.
ಇನ್ನಾದರೂ ನೆಮ್ಮದಿಯಿಂದ ಹೊಸಮನೆಯಲ್ಲಿ ಜೀವನ ಸಾಗಿಸಬಹುದು ಎಂಬ ಕನಸು ಕಂಡಳು ಸುಬ್ಬಮ್ಮ. ಆದರೆ ಈ ಕನಸು ನನಸಾಗಲಿಲ್ಲ. ಶಿಥಿಲಗೊಂಡ ಮನೆ ಕೆಡವಿ ತಾರಸಿ ಮನೆಕಟ್ಟಲು ಸರಕಾರ ಸ್ವಲ್ಪ ಧನಸಹಾಯ ಮಾಡುತ್ತದೆ. ಆ ಮೊತ್ತ ಸುಬ್ಬಮ್ಮಳಿಗೆ ಸಿಕ್ಕಿತು. ಅದನ್ನು ಸಾಲದವರಿಗೆ ಕೊಟ್ಟು ಹಾಯಾಗಿರಬಹುದು ಎಂದು ಅವಳು ಭಾವಿಸಿದ್ದರೆ ಆ ನೆಮ್ಮದಿ ಅವಳಿಗೆ ನೀಡಲು ಸೊಸೆ ಸಿದ್ಧವಿರಲಿಲ್ಲ. ತನ್ನ ಚಿನ್ನ ವಾಪಾಸು ತೆಗೆಸಿಕೊಡು ಎಂಬ ಬೇಡಿಕೆ ಇಟ್ಟಳು. ಒಪ್ಪದೆ ಇದ್ದದ್ದಕ್ಕೆ ಮನೆಯಲ್ಲಿ ಏನೂ ಕೆಲಸ ಮಾಡದೆ ಮುಸುಕು ಹೊದ್ದು ಮಲಗಿ ಪ್ರತಿರೋಧ ತೋರಿದಳು. ಅದಕ್ಕೂ ಗಂಡ ಅತ್ತೆ ಬಗ್ಗದಿದ್ದಾಗ ಕೊನೇ ಅಸ್ತ್ರವಾಗಿ ಉಪವಾಸ ಸತ್ಯಾಗ್ರಹಕ್ಕೆ ಮುಂದಾದಳು. ಇದಕ್ಕೆ ಹೆದರಿದ ಸುಬ್ಬಮ್ಮ, ಕಂಡವರ ಮನೆ ಹೆಣ್ಣುಮಗಳು ಹೆಚ್ಚುಕಮ್ಮಿ ಆದರೆ ಮತ್ತೆ ಮಾತು ಕೇಳಬೇಕು ಎಂದು ಚಿನ್ನ ತೆಗೆಸಿಕೊಡಲು ಒಪ್ಪಿದಳು. ಅವಳಿತ್ತ ಚಿನ್ನವನ್ನು ಮಾರಿದ ಅಂಗಡಿಯವನಿಂದಲೇ ಕೊಂಡು ಸೊಸೆ ಕೈಗೆ ಒಪ್ಪಿಸಿದಳು. ಅಂಗಡಿಯವನೂ ಆ ಚಿನ್ನದ ಆಭರಣಗಳನ್ನು ಕರಗಿಸದೆ ಹಾಗೆಯೇ ಇಟ್ಟಿದ್ದ. ಅವಳದೇ ಆಭರಣ ಆದಕಾರಣ ಹೆಚ್ಚುಕಮ್ಮಿ ಆಗಿದೆ ಎಂದು ಸೊಸೆ ದೂರುವಂತಿಲ್ಲ. ಹಾಗಾಗಿ ಸುಬ್ಬಮ್ಮಳಿಗೆ ಉಪಕಾರವಾಯಿತು. ಸಾಲ ತೀರಿಸಲು ಈಗ ಮಹಡಿ ಮನೆಯನ್ನು ಬಾಡಿಗೆಗೆ ಕೊಟ್ಟಿದ್ದಾಳೆ. ಸುಬ್ಬಮ್ಮ ಹಾಗೂ ಸೂರ್ಯ ಹೊಟ್ಟೆಬಟ್ಟೆ ಕಟ್ಟಿ ಸಾಲ ತೀರಿಸಲು ಅಣಿಯಾಗಿದ್ದಾರೆ.

ಹೀಗಿರಲಾಗಿ ಬಸಪ್ಪನ ಹೆಂಡತಿ ನಾಗಮ್ಮಳ ಆರೋಗ್ಯ ಹದಗೆಟ್ಟಿತು. ಶಸ್ತ್ರಚಿಕಿತ್ಸೆಯಾಗಲೇಬೇಕಾದ ಅನಿವಾರ್ಯತೆಗೆ ಸಿಲುಕಿಕೊಂಡಳು. ಸುಬ್ಬಮ್ಮಳ ಮಗ ಸೂರ್ಯ ಒಂದು ಆಸ್ಪತ್ರೆಯಲ್ಲಿ ಕೆಲಸದಲ್ಲಿರುವುದು. ಅದೇ ಆಸ್ಪತ್ರೆಗೆ ನಾಗಮ್ಮಳನ್ನು ದಾಖಲು ಮಾಡಿದರು. ಅಲ್ಲಿ ಬಸಪ್ಪನ ಮಕ್ಕಳು ಸೂರ್ಯನ ಬಳಿ ಹೋಗಿ ಸಹಾಯ ಯಾಚಿಸಿದರು. ಅವರು ಹಿಂದೆ ಮಾಡಿದ ತಪ್ಪಿಗೆ ಸೂರ್ಯ ದ್ವೇಷ ಸಾಧಿಸದೆ ಅವರಿಗೆ ಸಹಾಯಹಸ್ತ ಚಾಚಿದ. ಆ ಖಾಯಿಲೆಗೆ ಚಿಕಿತ್ಸೆ ಕೊಡುವ ಸಂಬಂಧಪಟ್ಟ ವೈದ್ಯರನ್ನು ಭೇಟಿಯಾಗಲು ಹೇಳಿದ. ಆಸ್ಪತ್ರೆಯಲ್ಲಿ ನಾಗಮ್ಮಳಿಗೆ ಬೇಕಾದ ಸಹಾಯ ಒದಗಿಸಿದ. ನಾಗಮ್ಮ ಆಸ್ಪತ್ರೆಯಲ್ಲಿದ್ದ ಒಂದು ವಾರವೂ ತಪ್ಪದೆ ಪ್ರತೀದಿನ ಬಂದು ಕ್ಷೇಮ ವಿಚಾರಿಸಿ ಬೇಕಾದ ಸಹಾಯ ಮಾಡಿದ್ದ.
ನಾಗಮ್ಮ ಶಸ್ತ್ರಚಿಕಿತ್ಸೆಗೆ ಒಳಗಾಗುವ ಮೊದಲು ಸೂರ್ಯನಲ್ಲಿ, ‘ನಿನ್ನ ಅಮ್ಮನನ್ನು ಇಲ್ಲಿಗೆ ಕರೆದುಕೊಂಡು ಬಾ. ಅವಳ ಜೊತೆ ಮಾತಾಡಬೇಕು, ಅವಳನ್ನು ಒಮ್ಮೆ ಕಣ್ಣುತುಂಬ ನೋಡಬೇಕು. ಅವಳ ಜೊತೆ ಮಾತಾಡಿದಮೇಲೆ ನಾನು ಸತ್ತರೂ ಪರವಾಗಿಲ್ಲ’ ಎಂದು ವಿನಂತಿಸಿದಳು. ಸೂರ್ಯ ಅಮ್ಮನನ್ನು ಕರೆದುಕೊಂಡು ಬರುತ್ತೇನೆ ಎಂದು ಭರವಸೆ ಇತ್ತಮೇಲೆಯೇ ಅವಳು ಸಮಾಧಾನ ಹೊಂದಿ ಆ ದಿನ ನಿದ್ರಿಸಿದ್ದು.
ನಾಗಮ್ಮ ಆಸ್ಪತ್ರೆಗೆ ದಾಖಲಾದದ್ದು, ಅವಳು ಸುಬ್ಬಮ್ಮಳೊಡನೆ ಮಾತಾಡಲು ಇಚ್ಛೆಪಟ್ಟದ್ದು, ಅವಳಿಗೆ ನಾಡಿದ್ದು ಶಸ್ತ್ರಚಿಕಿತ್ಸೆ ಇತ್ಯಾದಿ ನಡೆದ ಸಂಗತಿಯನ್ನು ಸೂರ್ಯ ಮನೆಯಲ್ಲಿ ಸುಬ್ಬಮ್ಮಳಿಗೆ ಹೇಳಿದ. ನಾನು ಅವಳ ಮುಖ ನೋಡಲ್ಲ. ‘ನಿನ್ನ ಮಗನ್ನ ತಿನ್ನ’ ಎಂದು ಶಾಪ ಹಾಕಿದವಳನ್ನು ನಾನು ನೋಡಬೇಕೆ? ಅದು ಈ ಜನ್ಮದಲ್ಲಿ ಸಾಧ್ಯವೇ ಇಲ್ಲ. ನೀನು ಮೂಖ ಬಸವನಂಗೆ ಒಪ್ಪಿದ್ದು ಏಕೆ? ಅವರು ಅಷ್ಟೊಂದು ಜಗಳಾಡಿದ್ದು ಎಲ್ಲ ಮರೆತು ಹೋಯಿತೆ? ನೀನು ಹೋಗಿ ಹೋಗಿ ಅವರಿಗೆ ಸಹಾಯ ಮಾಡಿದ್ದೀಯಲ್ಲ. ನಿನ್ನ ಬುದ್ಧಿಗೆ ಏನನ್ನಬೇಕು? ಹೋಗು ಹೋಗು ನಾನಂತೂ ಬರಲ್ಲ. ನನ್ನ ಕರೆಯಲೇಬೇಡ. ಅವರನ್ನು ಕಂಡರೆ ನನ್ನ ಹೊಟ್ಟೆ ಉರಿಯುತ್ತದೆ.
ಹಾಗಲ್ಲವ್ವ. ಅವಳು ಕೋಪದ ಬರದಲ್ಲಿ ಬಾಯಿತಪ್ಪಿ ಏನೋ ಹೇಳಿದ್ದಕ್ಕೆ ನೀನು ಮುನಿಸಿಕೊಂಡರೆ ಹೇಗೆ? ಅವಳೀಗ ಖಾಯಿಲೆ ಬಿದ್ದಿದ್ದಾಳೆ. ನಿನ್ನ ನೋಡಬೇಕೆಂದು ಆಸೆ ಪಟ್ಟಿದ್ದಾಳೆ. ಒಮ್ಮೆ ಬಂದು ಮುಖ ತೋರಿಸು ಸಾಕು. ಮಾತಾಡದಿದ್ದರೂ ಪರವಾಗಿಲ್ಲ. ನೀನು ತಿಳಿದವಳು ಹೀಗೆ ಹಠ ಮಾಡುತ್ತೀಯಲ್ಲ? ಅವಳೀಗ ಹಿಂದೆ ಆಡಿದ ಮಾತಿಗೆ ಪಶ್ಚಾತ್ತಾಪ ಪಟ್ಟಿದ್ದಾಳೆ. ಮಾಡಿದ ತಪ್ಪಿಗೆ ಪಶ್ಚಾತ್ತಾಪ ಪಟ್ಟರೆ ಅದು ತೊಳೆದು ಹೋಗುತ್ತೆ ಎಂದು ದೊಡ್ಡವರು ಹೇಳಿಲ್ವೆ? ಬಾ ಅವ್ವ. ಎಂದು ಗೋಗರೆದ.
ನೀನು ಏನು ಹೇಳಿದರೂ ನಾನು ಮಾತ್ರ ಅವಳನ್ನು ನೋಡಲ್ಲ. ಚೆಂದಾಕಿರುವ ನಿನಗೆ ಸಾವು ಬರಲಿ ಎಂದು ಶಾಪ ಹಾಕಿ ನಮಗೆ ಕೇಡು ಬಗೆದವಳನ್ನು ನಾನು ಎಂದಿಗೂ ಕ್ಷಮಿಸಲ್ಲ. ನೀನು ಏನು ಬೇಕಾದರೂ ಮಾಡು. ಅವರ ಮನೆ ಬಾಗಿಲಿಗೆ ಹೋಗು. ನಾನು ಮಾತ್ರ ಬರುವುದಿಲ್ಲ ಎಂದು ನಿಷ್ಠುರದಿಂದ ಖಡಾಖಂಡಿತವಾಗಿ ನುಡಿದಳು. ಅಮ್ಮನನ್ನು ಇನ್ನು ಒಪ್ಪಿಸಲು ಸಾಧ್ಯವಿಲ್ಲ. ಅಮ್ಮ ಬರಲ್ಲ ಎಂದು ನಾಗಮ್ಮಳಿಗೆ ಹೇಗೆ ಹೇಳಲಿ? ಎಂದು ಸೂರ್ಯ ಅಸಹಾಯಕತೆಯಿಂದ ಖಿನ್ನಮನಸ್ಕನಾದ.
**
ನನ್ನ ಮಗನಿಗೆ ಶಾಪ ಹಾಕಿದವಳು ಈಗ ಆಸ್ಪತ್ರೆಯಲ್ಲಿ ಮಲಗಿದ್ದಾಳೆ. ಈಗ ಅವಳು ನನ್ನನ್ನು ನೋಡಬೇಕೆಂದು ಸೂರ್ಯನ ಬಳಿ ಹೇಳಿ ಕಳುಹಿಸಿದ್ದಾಳೆ. ನಮಗೆ ಕೆಟ್ಟದ್ದು ಬಯಸಿದವಳನ್ನು ನಾನೇಕೆ ನೋಡಲು ಹೋಗಲಿ? ನಾನು ಬರಲ್ಲ ಅಂತ ಅವಳಿಗೆ ಹೇಳು ಎಂದು ಮಗನಿಗೆ ಹೇಳಿದೆ. ನೀವೇ ಹೇಳಿ ನಾನು ಮಾಡಿದ್ದೇ ಸರಿ ಅಲ್ವ ಅವ್ವ? ಈ ಸುದ್ದಿಯನ್ನು ಆದಿಶೇಷನ ಪತ್ನಿ ವೈದೇಹಿಗೆ ಕೇಳಿದಳು ಸುಬ್ಬಮ್ಮ.
ನೋಡು ಸುಬ್ಬಮ್ಮ, ಒಂದು ಗಾದೆ ಮಾತಿದೆ. ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು ಎಂದು. ಅದಕ್ಕೆ ನಾವು ಮಾತು ಆಡುವಾಗ ಬಲು ಎಚ್ಚರದಿಂದ ಆಡಬೇಕು. ಏನೋ ಸಿಟ್ಟಿನ ಬರದಲ್ಲಿ ಅವಳು ಮಾತಾಡಿದ್ದಾಳೆ. ಮುತ್ತು ಒಡೆದಿದೆ. ಆದರೆ ಅದಕ್ಕೆ ಅವಳೀಗ ಪಶ್ಚಾತ್ತಾಪ ಪಟ್ಟಿದ್ದಾಳಲ್ಲ. ಎಲ್ಲ ಪಾಪ ಕಾರ್ಯಕ್ಕೂ ಪಶ್ಚಾತ್ತಾಪವೇ ಮದ್ದು ಎಂದು ನಿನಗೂ ಗೊತ್ತಿದೆಯಲ್ಲ. ಈಗ ನಿನ್ನ ನೋಡಬೇಕೆಂದು ಹೇಳಿ ಕಳುಹಿಸಿದ್ದಾಳಲ್ಲ. ಹಾಗಾಗಿ ಅವಳು ಪಶ್ಚಾತ್ತಾಪ ಪಟ್ಟಿದ್ದಾಳೆಂದೇ ಅರ್ಥ. ಅವಳನ್ನು ನೀನು ನೋಡಲೇಬೇಕು. ಅವಳು ಹೇಳಿದ್ದು ಅಕ್ಷಮ್ಯ ತಪ್ಪೇ ಆದರೂ ಈಗ ಅವಳನ್ನು ದೊಡ್ಡಮನಸ್ಸು ಮಾಡಿ ಕ್ಷಮಿಸಿಬಿಡು. ಅವಳು ಮಾಡಿದ ತಪ್ಪು ಅವಳಿಗೆ ಅರಿವಾಗಿದೆ. ಈಗ ಅದಕ್ಕಾಗಿ ನೋವು ತಿನ್ನುತ್ತಿದ್ದಾಳೆ. ಉದಾರ ಮನಸ್ಸು ಮಾಡಿ ಅವಳನ್ನು ಒಮ್ಮೆ ನೋಡಿಬಿಡು. ‘ನಾಯಿ ಬೊಗಳಿದರೆ ದೇವಲೋಕ ಹಾಳಾದೀತೆ?’ ಎಂದು ಆಗಾಗ ನೀನೇ ಗಾದೆ ಮಾತು ಹೇಳುತ್ತಿರುತ್ತೀಯಲ್ಲ. ಅಷ್ಟೆಲ್ಲ ತಿಳಿದ ನೀನೇ ಈಗ ಹೀಗೆ ಕೋಪಿಸಿಕೊಂಡರೆ ಸರಿಯಾಗಲ್ಲ ಅಲ್ವೆ? ಹಾಗಾಗಿ ಹಳೆಯದೆಲ್ಲವನ್ನೂ ಮರೆತು ಹೋಗಿ ಅವಳ ಎದುರು ನಿಲ್ಲು. ಅವಳ ಮನಸ್ಸು ನಿರಾಳವಾಗುತ್ತದೆ. ಜೊತೆಗೆ ನಿನ್ನ ಮನಸ್ಸು ಕೂಡ ನೆಮ್ಮದಿ ಹೊಂದುತ್ತದೆ. ನೀನು ಈಗ ಹೋಗದಿದ್ದರೆ ಜೀವನಪೂರ್ತಿ ಅವಳು ಹೇಳಿದ ಮಾತು ‘ನಿನ್ನ ಮಗನ್ನ ತಿನ್ನ’ ಎಂಬುದು ನಿನ್ನ ಮನದಲ್ಲೇ ಉಳಿದು ನಿನಗೆ ಆಗಾಗ ಹಿಂಸೆಯನ್ನು ಕೊಡುತ್ತಿರುತ್ತದೆ. ಅದರಿಂದ ನೀನು ಕೊರಗುತ್ತಿರುತ್ತಿ. ಅಲ್ಲಿ ಹೋಗಿ ಅವಳಲ್ಲಿ ಮಾತಾಡಿದರೆ ಹಿಂದಿನ ಕಹಿ ಮರೆತು ಇಬ್ಬರ ಮನಸ್ಸು ಶುದ್ಧವಾಗಿ ನೆಮ್ಮದಿ ಲಭಿಸುತ್ತದೆ. ನಿನ್ನ ಮಗನದು ನೋಡು ಎಷ್ಟು ದೊಡ್ಡ ಮನಸ್ಸು. ಅವನ ತಾಯಿಯಾಗಿ ನೀನು ಹೀಗಿದ್ದರೆ ಅವನಿಗೆ ಎಷ್ಟು ನೋವು ಅಲ್ವೆ? ಯೋಚನೆ ಮಾಡು. ನನ್ನ ಅಭಿಪ್ರಾಯ ಇದು. ಮತ್ತೆ ನಿನ್ನ ಇಷ್ಟದಂತೆ ಮಾಡು. ವೈದೇಹಿ ನಯವಾಗಿ ಅವಳಿಗೆ ನೋವಾಗದಂತೆ ಹೇಳಿದಳು.
ಹೌದವ್ವ, ಸೂರ್ಯನೂ ಹೀಂಗೇ ಹೇಳಿದ್ದ. ನಾವು ಕೈಲಾದರೆ ಒಬ್ಬರಿಗೆ ಉಪಕಾರ ಮಾಡಬೇಕೇ ಹೊರತು ನೋವು ಕೊಡಬಾರದು. ದ್ವೇಷ ಸಾಧಿಸಿ ಏನು ಫಲ? ಎಂದಿದ್ದ ಅವ್ವ. ಅವನಿಗೆ ಇರುವ ಬುದ್ಧಿ ನನಗಿಲ್ಲದೆ ಹೋಯಿತಲ್ಲ. ನನ್ನ ಬುದ್ಧಿಗಿಷ್ಟು ಮಣ್ಣುಹಾಕ. ಇವತ್ತೇ ಸಂಜೆ ಆಸ್ಪತ್ರೆಗೆ ಹೋಗಿ ನಾಗಮ್ಮಳನ್ನು ನೋಡಿ ಮಾತಾಡಿ ಬರುತ್ತೇನೆ. ಆಪರೇಶನ್ ಚೆನ್ನಾಗಿ ಆಗಿ ಮನೆಗೆ ಬಾ ಅನ್ನುತ್ತೇನೆ. ಅವಳು ಹೇಳಿದ ಮಾತನ್ನು ಮರೆಯುತ್ತೇನೆ ಎಂದು ನುಡಿದು ಗೆಲುವಿನಿಂದ ಮನೆಗೆ ಧಾವಿಸಿದಳು.

ವಿಕ್ರಮ ವಿಶೇಷಾಂಕ ೨೦೧೫

Read Full Post »

ಸಾವಿತ್ರಿ ಬೆಳಗ್ಗೆ ಎದ್ದು ಅನ್ಯಮನಸ್ಕತೆಯಿಂದ ಕೆಲಸಕ್ಕೆ ಹೊರಡಲು ತಯಾರಿ ನಡೆಸಿದಳು. ಎಂದಿನ ಖುಷಿ ಇಂದಿರಲಿಲ್ಲ. ಇವತ್ತೇ ಕೆಲಸದ ಕೊನೇ ದಿನ.. ಸರಕಾರೀ ಸೇವೆಯಲ್ಲಿದ್ದಮೇಲೆ ವಯಸ್ಸು ೬೦ ಆದಾಗ ಕಡ್ಡಾಯವಾಗಿ ಕೆಲಸದಿಂದ ನಿವೃತ್ತಿಯಾಗಲೇಬೇಕು. ಇನ್ನು ಮುಂದೆ ಪ್ರತೀದಿನ ಬೆಳಗ್ಗೆ ೫ ಗಂಟೆಗೇ ಎದ್ದು ಮನೆಕೆಲಸ ಮುಗಿಸಿ ಬಸ್ಸಿಡಿದು ಕೆಲಸಕ್ಕೆ ಹೊರಡುವ ಧಾವಂತವಿಲ್ಲ. ಹೌದು, ನಾಳೆಯಿಂದ ಸಮಯ ಕಳೆಯುವುದಾದರೂ ಹೇಗೆ? ಎಂಬ ಚಿಂತೆ ಸಾವಿತ್ರಮ್ಮನನ್ನು ಕಾಡಿತು. ಛೆ! ನಮ್ಮ ಸಂಸಾರ ಚೆನ್ನಾಗಿದ್ದಿದ್ದರೆ ನಾಳೆಯಿಂದ ಮಗನ ಮನೆಯಲ್ಲಿ ಮೊಮ್ಮಗನ ಜೊತೆ ಖುಷಿಯಿಂದ ಇರಬಹುದಿತ್ತು. ಇರುವ ಒಬ್ಬ ಮಗನನ್ನು ಬೆಳೆಸಲು ಎಷ್ಟು ಕಷ್ಟಪಟ್ಟಿದ್ದೆ. ಮುಪ್ಪಿನಲ್ಲಿ ಮಗನ ಜೊತೆ ವಾಸಿಸುವ ಯೋಗವಿಲ್ಲದೆ ಹೋಯಿತಲ್ಲ ಎಂದು ಸಾವಿತ್ರಿ ನಿಟ್ಟುಸಿರು ಬಿಟ್ಟಳು.
**
ಸಾವಿತ್ರಿ ಕೇಶವ ದಂಪತಿಗಳಿಗೆ ಮದುವೆಯಾಗಿ ಕೆಲವಾರು ವರ್ಷಗಳ ತರುವಾಯ ಮಾಧವ ಜನಿಸಿದ್ದ. ಮಾಧವನ ಬಾಲಲೀಲೆಗಳನ್ನು ನೋಡುವ ಭಾಗ್ಯ ಕೇಶವನಿಗೆ ಲಭಿಸಲಿಲ್ಲ. ರಸ್ತೆ ಅಪಘಾತದಲ್ಲಿ ಕೇಶವ ದುರಂತ ಮರಣವನ್ನಪ್ಪಿದ್ದ. ಆಗ ಮಾಧವನಿಗೆ ಕೇವಲ ನಾಲ್ಕು ವರ್ಷ. ಅನುಕಂಪದ ಆಧಾರದಲ್ಲಿ ಕೇಶವನ ಕೆಲಸ ಸಾವಿತ್ರಿಗೆ ಲಭಿಸಿತ್ತು. ಅದರಿಂದ ಜೀವನ ಸರಾಗವಾಗಿ ಸಾಗಲು ಅನುಕೂಲವಾಯಿತು. ಮಾಧವನಿಗೆ ತಂದೆ ಇಲ್ಲದ ದುಃಖ ಆವರಿಸದಂತೆ ಆದಷ್ಟು ಅವನ ಬಳಿಯೇ ಇದ್ದು ಅವನ ಪಾಲನೆ ಮಾಡಿದ್ದಳು ಸಾವಿತ್ರಿ. ಅವನ ಓದಿಗೆ ಸಕಲ ಸೌಕರ್ಯ ಒದಗಿಸಿದ್ದಳು. ಅವಳಿಗೆ ಅವನೇ ಸರ್ವಸ್ವ. ಮಾಧವ ಕಲಿಯುವುದರಲ್ಲಿ ಜಾಣನಿದ್ದ. ಸುಲಭದಲ್ಲಿ ಇಂಜಿನಿಯರ್ ಓದಿ ಮುಗಿಸಿ ಪ್ರಸಿದ್ಧ ಕಂಪನಿಯಲ್ಲಿ ಕೆಲಸವನ್ನೂ ಸಂಪಾದಿಸಿದ್ದ.
ತಾಯಿ ಮಗ ಅನ್ಯೋನ್ಯತೆಯಿಂದ ಚೆನ್ನಾಗಿದ್ದರು. ಮಾಧವ ಶಾಲೆಗೆ ಹೋಗುವ ಸಮಯದಲ್ಲಿ ಪ್ರತೀದಿನ ಮನೆಗೆ ಬಂದು ತಪ್ಪದೆ ಶಾಲೆಯ ಸುದ್ದಿಯನ್ನು ಚಾಚೂತಪ್ಪದೆ ಅಮ್ಮನ ಬಳಿ ಹೇಳುತ್ತಿದ್ದ. ಈಗ ಕೆಲಸಕ್ಕೆ ಸೇರಿದಮೇಲೆ ಕೂಡ ಈ ಕಾರ್ಯಕ್ಕೆ ಚ್ಯುತಿ ಬಂದಿಲ್ಲ. ತಾಯಿಯೂ ತನ್ನ ಕಚೇರಿಯಲ್ಲಿ ನಡೆದ ಸ್ವಾರಸ್ಯ ಸಂಗತಿ ಏನಾದರೂ ಇದ್ದರೆ ಮಗನ ಜೊತೆ ಹಂಚಿಕೊಳ್ಳುತ್ತಿದ್ದಳು. ಅವರ ಜೀವನ ಖುಷಿ ನೆಮ್ಮದಿಯಿಂದ ಕೂಡಿತ್ತು.
ಹೀಗಿರುವಾಗ ಸಾವಿತ್ರಿಗೆ ಬೇರೆ ಕಡೆಗೆ ವರ್ಗವಾಯಿತು. ಕೆಲಸಕ್ಕೆ ರಾಜೀನಾಮೆ ಕೊಡು, ಇಲ್ಲ ಸ್ವ‌ಇಚ್ಛೆಯ ನಿವೃತ್ತಿ ತಗೊ ಎಂದು ಮಾಧವ ಹೇಳಿದ. ಆದರೆ ಕೆಲಸ ಬಿಡುವುದು ಸಾವಿತ್ರಿಗೆ ಒಪ್ಪಿಗೆಯಾಗಲಿಲ್ಲ. ಇನ್ನು ಎರಡು ವರ್ಷದಲ್ಲಿ ಹೇಗೂ ನಿವೃತ್ತಿಯಾಗುತ್ತೇನಲ್ಲ. ಆಗ ಹೇಗಿದ್ದರೂ ನಿನ್ನ ಬಳಿ ಓಡೋಡಿ ಬಂದೇ ಬರುವೆ. ಈಗಲೇ ಏಕೆ ಕೆಲಸ ಬಿಡುವುದು. ಎರಡು ವರ್ಷ ಹೇಗೋ ಸುಧಾರಿಸಿದರಾಯಿತು ಎಂದು ಮಗನನ್ನು ಒಪ್ಪಿಸಿ ಕರ್ತವ್ಯಕ್ಕೆ ಹಾಜರಾಗಲು ತೆರಳಿದಳು.
ಮಗ ಒಂಟಿಯಾಗಿ ಮನೆಯಲ್ಲಿರುವುದನ್ನು ಹೆತ್ತ ಕರುಳು ಇಷ್ಟಪಡಲಿಲ್ಲ. ಈಗಲೇ ಅವನಿಗೆ ಮದುವೆಮಾಡಲು ಯುಕ್ತಕಾಲ. ಒಳ್ಳೆಯ ಕೆಲಸವೂ ಇದೆ. ಮದುವೆಯಾಗಲು ತೊಂದರೆ ಏನಿಲ್ಲ ಎಂದು ಸಾವಿತ್ರಿ ಯೋಚಿಸಿದಳು. ಅವನಿಗೆ ಸಂಗಾತಿಯಾಗಿ ದೂರದ ಸಂಬಂಧಿಯೂ ಆಗಿರುವ ಯೋಗ್ಯ ಕನ್ಯೆ ಮಾಧುರಿಯನ್ನು ಮನೆ ತುಂಬಿಸಿಕೊಂಡರು. ತಮ್ಮ ಶಕ್ತಿಮೀರಿ ಮಗನ ಮದುವೆ ಅದ್ಧೂರಿಯಿಂದ ಮಾಡಿ ಸಂತಸಪಟ್ಟಳು ಸಾವಿತ್ರಿ. ಸೊಸೆ ಮಾಧುರಿಯೂ ಇಂಜಿನಿಯರ್ ಪದವೀಧರೆಯಾಗಿ ಒಳ್ಳೆಯ ಕೆಲಸದಲ್ಲಿದ್ದಳು. ಮಗ ಸೊಸೆ ಅನ್ಯೋನ್ಯತೆಯಲ್ಲಿರುವುದು ಕಂಡು ತಾಯಿ ಜೀವ ಸಂತೃಪ್ತಿ ಹೊಂದಿತು.
ಸಾವಿತ್ರಿ ನಾಲ್ಕು ದಿನ ರಜ ಪಡೆದು ಮಗನ ಮನೆಗೆ ಬಂದರೆ ಮಾಧುರಿ ಮುಖ ಊದುತ್ತಿತ್ತು. ಏನೋ ಹೊಸದಾಗಿ ಮದುವೆಯಾದವರು. ಸಣ್ಣಪ್ರಾಯ ಇಬ್ಬರಿಗೂ. ಹೊಸದರಲ್ಲಿ ಇಬ್ಬರೇ ಇರಬೆಕೆಂದು ಅನಿಸುವುದು ಸಹಜ. ನನ್ನಿಂದ ಅವರ ಏಕಾಂತಕ್ಕೆ ತೊಂದರೆಯಾಗುವುದು ಬೇಡ ಎಂದು ಅರಿತ ಸಾವಿತ್ರಿ ನಾಲ್ಕು ದಿನಕ್ಕೆಂದು ಬಂದವಳು ಎರಡೇ ದಿನದಲ್ಲಿ ವಾಪಾಸಾಗುತ್ತಿದ್ದೂದೂ ಇತ್ತು. ಹೀಗೆಯೇ ನಾಲ್ಕಾರು ಸಲ ಬಂದಾಗಲೂ ಸೊಸೆಯ ಧುಮುಗುಡುವಿಕೆ ಜಾಸ್ತಿಯಾಯಿತೇ ವಿನಾ ಕಮ್ಮಿಯಾಗಲಿಲ್ಲ. ಸಾವಿತ್ರಿ ಬಳಿ ಒಂದು ಮಾತೂ ಇಲ್ಲ. ಸೊಸೆ ಹೊರಗಿನವಳು ಎಂದಾಯಿತು. ಆದರೆ ಮಗನೂ ಒಂದೇ ಒಂದು ಮಾತೂ ಆಡದೆ ಇದ್ದರೆ ಆ ಜೀವಕ್ಕೆ ಹೇಗಾಗಬೇಡ? ಸಾವಿತ್ರಿಯೇ ತಾನಾಗಿ ಮಗನನ್ನು ವಿಚಾರಿಸಿಕೊಂಡರೂ, ‘ಹೋಗಮ್ಮ ನೀನು, ಕೆಲಸ ಮಾಡಿ ಸಾಕಾಗಿದೆ. ನೀನೂ ಏನೇನೋ ಮಾತಾಡಿ ತೊಂದರೆ ಕೊಡಬೇಡ’ ಎಂದು ಒರಟಾಗಿ ನುಡಿದು ಅಲ್ಲಿಂದ ಎದ್ದು ಕೋಣೆಗೆ ಹೋಗಿ ಬಾಗಿಲು ಹಾಕಿಕೊಂಡಾಗ ಮಾತ್ರ ಸಾವಿತ್ರಿಯ ಮನ ಮೌನವಾಗಿ ರೋಧಿಸಿತು.
ಸಾವಿತ್ರಿ ಮಗನ ಮನೆಗೆ ಬಂದಾಗಲೆಲ್ಲ ಮಗ ಆಫೀಸಿನಿಂದ ಬಂದವನೆ ಕೋಣೆ ಸೇರಿ ಬಾಗಿಲು ಹಾಕಿದರೆ ಹೊರಗೇ ಬರುತ್ತಿರಲಿಲ್ಲ. ಮಗ ಸೊಸೆ ಇಬ್ಬರೂ ಊಟವನ್ನೂ ಕೋಣೆಯೊಳಗೇ ತೆಗೆದುಕೊಂಡು ಹೋಗಿ ಬಾಗಿಲು ಹಾಕಿದರೆ ಮತ್ತೆ ಕದ ತೆರೆಯುತ್ತಿದ್ದುದು ಮರುದಿನ ಬೆಳಗ್ಗೆಯೇ. ಸಾವಿತ್ರಿ ಮನೆಯಲ್ಲಿದ್ದರೆ ಅವರಿಗೆ ಮನೆ ಎಂಬುದು ಹೋಟೆಲ್ ಕೋಣೆಯಂತೆ. ಬೆಳಗ್ಗೆ ಹೋದವರು ತಡ ರಾತ್ರಿ ಮನೆಗೆ ಕಾಲಿಡುತ್ತಿದ್ದುದು. ಈ ಬೆಳವಣಿಗೆ ನೋಡಿದಮೇಲೆ ಸಾವಿತ್ರಿ ಮಗನ ಮನೆಗೆ ಬರುವುದನ್ನೇ ನಿಲ್ಲಿಸಿದಳು. ಕಷ್ಟಪಟ್ಟು ಬಂದರೂ ಇಲ್ಲಿ ಯಾವ ಸುಖ ಇದೆ?
ಹೀಗಿರಲಾಗಿ ಸಾವಿತ್ರಿಗೆ ಮೊಮ್ಮಗ ಹುಟ್ಟಿದ. ಮಗ ಸೊಸೆ ಮಾತಾಡದೆ ಇದ್ದರೂ ಸಹಿಸಿಕೊಂಡ ಅವರು ಮೊಮ್ಮಗನನ್ನು ನೋಡಲು ಆಗಾಗ ರಜ ಹಾಕಿ ಮಗನ ಮನೆಗೆ ಹೋಗುತ್ತಿದ್ದರು. ಆದರೆ ಸೊಸೆ ಮಗುವನ್ನು ಇವರ ಕೈಗೇ ಸಿಗದಂತೆ ಬಲು ಎಚ್ಚರವಹಿಸುತ್ತಿದ್ದಳು. ಆಸೆಯಿಂದ ಮಗುವನ್ನು ಎತ್ತಿಕೊಂಡ ಕೂಡಲೇ ಸೊಸೆ ಪ್ರತ್ಯಕ್ಷವಾಗಿ ‘ಈಗ ಮಗುವಿಗೆ ಹಾಲು ಕೊಡಬೇಕೆಂದೋ, ನಿದ್ರೆ ಮಾಡಿಸುವ ಸಮಯವಾಯಿತೆಂದೋ’ ನೆಪ ಹೇಳಿ ಅವರ ಕೈಯಿಂದ ಮಗುವನ್ನು ಎಳೆದುಕೊಂಡು ಕೋಣೆ ಸೇರಿ ಬಾಗಿಲು ಹಾಕುತ್ತಿದ್ದಳು. ಮಾಧವ ನಿನ್ನ ಮಗನನ್ನು ಒಂದು ಸಲ ಎತ್ತಿಕೊಳ್ಳುತ್ತೇನಪ್ಪ ಒಮ್ಮೆ ತಂದು ಕೊಡು ಎಂದು ಆಸೆ ತಡೆಯಲಾರದೆ ಮಗನ ಬಳಿ ಹೇಳಿದರೆ, ‘ಎಳೆ ಮಗು, ಎತ್ತಿಕೊಳ್ಳಲು ನಿನಗೆ ಕಷ್ಟ ಎಂದೋ, ಅದೀಗ ನಿದ್ದೆ ಮಾಡುತ್ತಿದೆ ಎಂದೋ’ ಹೀಗೇ ಏನೇನೋ ನೆಪ ಹೇಳುತ್ತಿದ್ದನೇ ಹೊರತು ಅಪ್ಪಿತಪ್ಪಿಯೂ ತಾಯಿ ಕೈಗೆ ಮಗುವನ್ನು ಕೊಡುವ ಕೆಲಸ ಮಾಡಲಿಲ್ಲ. ಏನೋ ಮಾಧವ ನೀನು ಹೇಳುತ್ತಿರುವುದು? ಎಳೆ ಮಗುವನ್ನು ನನಗೆ ಎತ್ತಿಕೊಳ್ಳಲು ಆಗದೆ? ನಿನ್ನನ್ನು ಎತ್ತಿ ಆಡಿಸಿದ ಕೈಗಳಪ್ಪ ಇವು ಎಂದು ಸೋತು ವಿಷಾದದಿಂದ ಹೇಳಿದರೆ ‘ಈಗ ನಿನಗೆ ವಯಸ್ಸಾಯಿತು, ಸಣ್ಣ ಮಗುವನ್ನು ಎತ್ತಿಕೊಳ್ಳುವಾಗ ಜಾರಿದರೆ ಕಷ್ಟ, ಇದೆಲ್ಲ ರಾಮಾಯಣ ಬೇಕಾ’ ಎಂದು ಮಗ ನಿರ್ದಾಕ್ಷಿಣ್ಯದಿಂದ ನುಡಿಯುತ್ತಿದ್ದ. ಮಗನ ಅಂಥ ಕಟೋರ ಮಾತು ಕೇಳಿ ಸಾವಿತ್ರಿಯ ಹೃದಯ ವಿಲವಿಲ ಒದ್ದಾಡಿತು.
ಮಗುವಿಗೆ ನಾಲ್ಕು ತಿಂಗಳು ತುಂಬಿದಾಗ ಮಗುವಿಗೆ ಹಾಲುಬಿಡಿಸಿ ಸೊಸೆ ಕೆಲಸಕ್ಕೆ ಹೋಗಲು ತಯಾರಾದಳು. ಮಾಧುರಿ ಮಗುವನ್ನು ತನ್ನ ತಾಯಿ ಮನೆಯಲ್ಲಿ ಬಿಟ್ಟಳು. ನಾನೇ ಕೆಲಸ ಬಿಟ್ಟು ಮಗು ನೋಡಿಕೊಳ್ಳುತ್ತೇನೆ. ಎಳೆ ಮಗು ತಾಯಿಯ ಬಳಿಯೇ ಇರಬೇಕು. ಅಷ್ಟು ದೂರ ಮಗುವನ್ನು ಕಳಿಸಿದರೆ ಹೇಗೆ? ತಾಯಿ ಮಗುವನ್ನು ನೋಡುವುದು ಹೇಗೆ? ಮಗು ಇಲ್ಲೇ ಇದ್ದರೆ ಕನಿಷ್ಟಪಕ್ಷ ರಾತ್ರಿಯಾದರೂ ಮಗುವಿಗೆ ತಾಯಿಯ ಒಡನಾಟ ಸಿಗುತ್ತದೆ ಎಂದು ಸಾವಿತ್ರಿ ಮಗ ಸೊಸೆಗೆ ಪರಿಪರಿಯಾಗಿ ಹೇಳಿದರೂ ಇವರ ಮಾತನ್ನು ಕಿವಿಗೇ ಹಾಕಿಕೊಳ್ಳಲಿಲ್ಲ. ಮಗು ಅಜ್ಜಿಮನೆಯಲ್ಲೇ ಬೆಳೆಯಿತು. ಸೊಸೆಯ ತಾಯಿಯೂ ಮಗಳಿಗೆ ಬುದ್ಧಿ ಹೇಳುವ ಶ್ರಮ ವಹಿಸಲಿಲ್ಲ.
**
ಈ ಮಧ್ಯೆ ಮಾಧವ ಸ್ವಂತ ಮನೆಯನ್ನೂ ಕಟ್ಟಿಸಿದ. ಗೃಹಪ್ರವೇಶದಂದು ತಾಯಿಗೇ ಆಮಂತ್ರಣವಿಲ್ಲ. ಈ ಮನೆಗೆ ನಿನ್ನ ತಾಯಿಯನ್ನು ಕರೆಸಿದರೆ ನಾನು ಬರಲ್ಲ ಎಂಬ ಮಾಧುರಿ ಹಾಕಿದ ಕಠಿಣ ಷರತ್ತನ್ನು ಮಾಧವ ಎದುರಿಸಬೇಕಾಯಿತು. ತುತ್ತು ಕೊಟ್ಟವಳು ಬೇಕೋ? ಅಲ್ಲ ಮುತ್ತು ನೀಡಿದವಳು ಬೇಕೋ? ಈರ್ವರಲ್ಲಿ ಒಬ್ಬರನ್ನು ಆರಿಸಿದರೆ ಒಬ್ಬರನ್ನು ಕಳೆದುಕೊಳ್ಳಬೇಕು. ಅವನು ಕೊನೆಗೆ ಮುತ್ತನ್ನೇ ಆರಿಸಿಕೊಂಡ.
ಗೃಹಪ್ರವೇಶದ ದಿನ ಸಾವಿತ್ರಿ ಎಲ್ಲಿ ಎಂದು ನೆಂಟರಿಷ್ಟರು ಕೇಳಿದಾಗ ಅಮ್ಮ ಕೆಲಸದಮೇಲೆ ಬೇರೆ ಊರಿಗೆ ಹೋಗಿದ್ದಾರೆ, ಅದು ದಿಡೀರೆಂದು ನಿಶ್ಚಯವಾದದ್ದು ರಜ ಸಿಗಲಿಲ್ಲ, ಅಮ್ಮ ಡ್ಯೂಟಿ ಮುಖ್ಯ ಎಂದು ಬಾಳಿದವಳು. ಕೆಲಸಕ್ಕೆ ಚ್ಯುತಿ ಬರುವುದು ಬೇಡವೆಂದು ನಾವೂ ಸಮ್ಮತಿಸಿದೆವು. ಎಂದು ಸತ್ಯದ ತಲೆಮೇಲೆ ಹೊಡೆದಂಥ ಸುಳ್ಳು ಪೋಣಿಸಿ ಬಚಾವಾದ. **
ಮಾಧುರಿಯ ತಮ್ಮ ರಾಹುಲ್ ಇಂಜಿನಿಯರ್ ಸ್ನಾತಕೋತ್ತರ ಪದವೀಧರನಾಗಿ ಕೆಲಸ ದೊರೆತು ಅಕ್ಕನ ಮನೆಗೆ ಬಂದ. ಬೇರೆ ಮನೆ ಮಾಡುವುದು ಬೇಡವೆಂದು ಮಾಧುರಿ ತಾಕೀತು ಮಾಡಿದ್ದಳು. ಅವನೂ ಅಕ್ಕನ ಮಾತಿಗೆ ಒಪ್ಪಿಗೆ ಇತ್ತು ಅಲ್ಲೇ ಇದ್ದ. ಅಕ್ಕನಿಗೆ ತಮ್ಮನಮೇಲೆ ಅಪರಿಮಿತ ಪ್ರೀತಿ.
ಭಾವನ ಅಮ್ಮ ಕೆಲಸದಿಂದ ನಿವೃತ್ತರಾಗಿದ್ದಾರೆಂದು ಅವನಿಗೆ ತಿಳಿದಿತ್ತು. ಆದರೆ ಅತ್ತೆ ಮನೆಯಲ್ಲಿ ಇಲ್ಲದಿರುವುದು ಕಂಡು ಏನೋ ನಡೆದಿದೆ. ಎಲ್ಲವೂ ಸರಿಯಾಗಿಲ್ಲ ಎಂಬ ಸಂಶಯ ಬಂದಿತ್ತು. ಈ ವಿಚಾರವಾಗಿ ಭಾವನನ್ನು ವಿಚಾರಿಸಿದಾಗ ‘ಅದು ಅಮ್ಮನಿಗೆ ಸ್ವತಂತ್ರವಾಗಿ ಇರಬೇಕಂತೆ. ಅದೇ ಊರು ಹಿಡಿಸಿದೆಯಂತೆ’ ಎಂದು ಏನೇನೋ ಸಬೂಬು ಹೇಳಿದ್ದ. ಅದನ್ನು ನಂಬಲು ರಾಹುಲ್ ತಯಾರಿರಲಿಲ್ಲ. ಈ ವಿಷಯವಾಗಿ ನೇರ ಅಕ್ಕನನ್ನೇ ವಿಚಾರಿಸಿದಾಗ, ‘ಅತ್ತೆ ಇಲ್ಲಿರುವುದು ನನಗಿಷ್ಟವಿಲ್ಲ, ನಾವು ಮಾತ್ರ ಇರಬೇಕು. ವಯಸ್ಸಾದವರನ್ನು ನೋಡಿಕೊಳ್ಳುವುದು ಕಷ್ಟ’ ಎಂದು ಅಕ್ಕ ನಿಜವನ್ನೇ ಏನೂ ಅಳಿಕಿಲ್ಲದೆ ನುಡಿದಿದ್ದಳು. ಅಕ್ಕನ ಮಾತು ಕೇಳಿದ ಮೇಲೆ ಹೇಗಾದರೂ ಸರಿ ಅತ್ತೆಯನ್ನು ಈ ಮನೆಗೆ ಕರೆಸಬೇಕು ಎಂದು ರಾಹುಲ್ ಮನಸ್ಸು ಚಿಂತಿಸಲಾರಂಭಿಸಿತು.
****
ಮಾಧುರಿಯ ಆಫೀಸಿನಲ್ಲಿ ಕೆಲಸ ಮಾಡುತ್ತಿರುವ ಯುವತಿ ರೇಣುಕಳನ್ನು ಕಂಡಾಗಲೆಲ್ಲ ಇವಳು ತನ್ನ ತಮ್ಮ ರಾಹುಲ್‌ಗೆ ಒಳ್ಳೆ ಜೋಡಿ ಎಂದು ಮಾಧುರಿ ಲೆಕ್ಕ ಹಾಕುತ್ತಿದ್ದಳು. ರಾಹುಲನಿಗೂ ಒಮ್ಮೆ ತೋರಿಸಿ ಇವಳನ್ನು ಮದುವೆಯಾಗು ಎಂದು ಒತ್ತಾಯ ಹೇರಿದ್ದಳು. ಹೋಗಕ್ಕ, ನಾನೀಗಲೇ ಮದುವೆಯಾಗಲ್ಲ ಎಂದು ಆ ಸನ್ನಿವೇಶದಲ್ಲಿ ಹೇಳಿ ಪಾರಾಗಿದ್ದ. ಆಗ ಮಾಧುರಿಯೂ ಸುಮ್ಮನಾಗಿದ್ದಳು.
ಹೀಗೆ ಆರು ತಿಂಗಳು ಕಳೆಯಿತು. ಮಾಧುರಿ ರಾಹುಲನಿಗೆ, ‘ಇನ್ನು ನೀನು ಮದುವೆಯಾಗಬಹುದು. ಅಪ್ಪ ಅಮ್ಮನೂ ಹೇಳುತ್ತಿದ್ದಾರೆ. ನಿನಗೆ ಬೇಗ ಮದುವೆ ಮಾಡಿ ಅವರ ಹೆಗಲಮೇಲಿದ್ದ ಜವಾಬ್ದಾರಿಯನ್ನು ಇಳಿಸಿಕೊಳ್ಳಬೇಕಂತೆ. ನೀನು ಸಮ್ಮತಿ ಕೊಡುವುದೇ ತಡ. ರೇಣುಕಳೊಂಡಿಗೆ ಮಾತಾಡುತ್ತೇನೆ’ ಎಂದು ಒತ್ತಾಯಿಸಿದಾಗ ಅವನು ಗಂಭೀರವಾಗಿ ‘ನಾನು ಮದುವೆಯೇ ಆಗುವುದಿಲ್ಲ’ ಎಂಬ ಮಾತನ್ನು ಖಡಾಖಂಡಿತವಾಗಿ ನುಡಿದಿದ್ದ.
ಮದುವೆಯಾಗುವುದಿಲ್ಲ ಅಂದರೆ ಏನರ್ಥ? ಒಳ್ಳೆಯ ಕೆಲಸದಲ್ಲಿದ್ದೀಯ. ಸುರಸುಂದರಾಂಗನಾಗಿರುವೆ. ರೇಣುಕ ಇಷ್ಟವಿಲ್ಲವೆ? ಹೇಳು ಬೇರೆ ನೋಡೋಣ. ನೀನೇ ನೋಡಿಕೊಂಡಿದ್ದರೆ ಅವಳಾರು ಹೇಳು. ಅವಳನ್ನೇ ಮದುವೆ ಮಾಡಿಸುವ. ಅಪ್ಪ ಅಮ್ಮನಿಗೆ ನಾನು ಹೇಳುತ್ತೇನೆ. ಮದುವೆಯಾಗಲು ಏನು ತೊಂದರೆ ನಿನಗೆ? ನೀನು ಮದುವೆಯಾಗದಿದ್ದರೆ ಅಪ್ಪ ಅಮ್ಮನ ಗತಿ ಏನು? ಎಷ್ಟು ನೊಂದುಕೊಳ್ಳುವುದಿಲ್ಲ ಅವರು. ಅವರಿಗೆ ನೋವು ಕೊಡಬೇಕೆಂದು ನಿನಗೆ ಆಸೆಯೇ? ಎಂದು ಪ್ರಶ್ನೆ ಮಾಡಿದಾಗ
ಅದು ಹಾಗಲ್ಲ ಅಕ್ಕ, ನಾನು ಮದುವೆಯಾದರೆ ಅಪ್ಪ ಅಮ್ಮನಿಗೇ ಕಷ್ಟ. ಅವರ ಮುಂದಿನ ಸ್ಥಿತಿ ನೆನೆಸಿಕೊಂಡರೇ ಹೆದರಿಕೆಯಾಗುತ್ತದೆ.
ನೀನು ಹೇಳುತ್ತಿರುವುದು ಏನೆಚಿದೇ ನನಗೆ ಅರ್ಥವಾಗುವುದಿಲ್ಲ. ನೀನು ಮದುವೆಯಾದರೆ ಅಪ್ಪ ಅಮ್ಮನಿಗೇನು ಕಷ್ಟ? ಸಂತೋಷ ಪಡುತ್ತಾರಷ್ಟೆ.. ಮಗ ಸೊಸೆಯೊಂದಿಗೆ ಇದ್ದು ವೃದ್ಧಾಪ್ಯದಲ್ಲಿ ಮೊಮ್ಮಗುವನ್ನು ಎತ್ತಿ ಆಡಿಸುತ್ತ ನೆಮ್ಮದಿಯಿಂದಿರುತ್ತಾರೆ. ಇದರಿಂದ ಅವರಿಗೆ ತೊಂದರೆ ಹೇಗೆ ಆಗುತ್ತದೆ? ಏನು ಮಾತು ಇದು? ಒಗಟಾಗಿದೆಯಲ್ಲ?
ಇದರಲ್ಲಿ ಒಗಟೇನೂ ಇಲ್ಲ ಅಕ್ಕ. ನಾನು ರೇಣುಕಳನ್ನು ಮದುವೆಯಾಗುತ್ತೇನೆಂದು ಭಾವಿಸೋಣ. ಅವಳು ಬಂದು ‘ಈ ಮನೆಯಲ್ಲಿ ನಿನ್ನ ಅಪ್ಪ ಅಮ್ಮ ಇರಕೂಡದು. ನಾವು ಮಾತ್ರ ಇರಬೇಕು. ಅವರು ಇಲ್ಲಿ ಬಂದರೆ ನಾನಿರುವುದಿಲ್ಲ’ ಎಂದು ಹೇಳಿದರೆ ಆಗ ನಾನು ಏನು ಮಾಡಬೇಕು? ಈಗ ಇಲ್ಲಿ ಭಾವನನ್ನೇ ನೋಡು. ಅವನಮ್ಮನನ್ನು ಈ ಮನೆಗೆ ಕರೆತರುವಂತಿಲ್ಲ. ಭಾವ ಈ ವಿಷಯವಾಗಿ ಒಂದು ಮಾತೂ ಆಡದೆ ಸುಮ್ಮನಿದ್ದಾರೆ. ೯ ತಿಂಗಳು ಹೊತ್ತು ಹೆತ್ತು ತಂದೆ ಇಲ್ಲದ ಕೊರತೆಯಾಗದಂತೆ ಮಮತೆಯಿಂದ ಸಾಕಿದ ಆ ತಾಯಿಗೆ ಮಗ ಎಂಥ ಶಿಕ್ಷೆ ಕೊಡುತ್ತಿದ್ದಾನೆ. ಪಾಪ ಅತ್ತೆ ಒಬ್ಬರೇ ಈ ವಯಸ್ಸಿನಲ್ಲಿ ಒಂಟಿಯಾಗಿ ಬಾಳುತ್ತಿದ್ದಾರೆ. ಮಗ ಇದ್ದೂ ಅವರಿಗೆ ಇಂಥ ಸ್ಥಿತಿ ಬಂದಿದೆ. ನಾನು ಮದುವೆಯಾಗಿ ನನ್ನ ಅಪ್ಪ ಅಮ್ಮನಿಗೆ ಈ ಸ್ಥಿತಿ ತರಬಾರದು. ಮದುವೆಯಾದರೆ ತಾನೆ ಈ ಪರಿಸ್ಥಿತಿ. ಅದಕ್ಕೇ ಮದುವೆಯೇ ಆಗಬಾರದೆಂದು ನಿಶ್ಚಯ ಮಾಡಿದ್ದೇನೆ. ಮದುವೆಯಾಗಿ ಭಾವನಂತೆ ಇಕ್ಕಟ್ಟಿಗೆ ಸಿಕ್ಕಿಕೊಳ್ಳಲು ನನಗಿಷ್ಟವಿಲ್ಲ. ಯಾರ ಪರ ಮಾತಾಡಿದರೂ ಅದರಿಂದ ಒಬ್ಬರಿಗೆ ಅಸಮಾಧಾನವಂತೂ ಆಗಿಯೇ ಆಗುತ್ತದೆ. ನನಗೂ ಮುಂದೆ ಅಂಥ ಪರಿಸ್ಥಿತಿ ಬರಲಿಕ್ಕಿಲ್ಲ ಎಂದು ಯಾರಿಗೆ ಗೊತ್ತು? ಹಾಗಾಗಿ ಮದುವೆ ವಿಷಯ ಇನ್ನುಮುಂದೆ ನನ್ನ ಬಳಿ ಮಾತಾಡಬೇಡ ಎಂದು ನುಡಿದು ಅಲ್ಲಿಂದ ಎದ್ದು ಹೋದ.
ಅವನ ಮಾತು ಕೇಳಿದ ಮಾಧುರಿ ಬೆಪ್ಪಾಗಿ ಒಂದೂ ಮಾತೂ ಬರದೆ ಕುಕ್ಕರಿಸಿದಳು.
***
ಸಾವಿತ್ರಿ ಈಗ ಮಗ ಸೊಸೆ ಮೊಮ್ಮಗನೊಡನೆ ಬಾಳುತ್ತ ಬಲು ಸುಖಿಯಾಗಿದ್ದಾಳೆ. ಮಾಧುರಿಯೂ ಅತ್ತೆ ಬಗ್ಗೆ ಮೃದು ಧೋರಣೆ ಹೊಂದಿದ್ದಾಳೆ. ತನ್ನ ಹೊಲಸಾದ ಹೃದಯವನ್ನು ಪಶ್ಚಾತ್ತಾಪಪಟ್ಟು ತಿಕ್ಕಿ ತೀಡಿ ಹೊಳಪುಗೊಳಿಸಿ ಸಂಸ್ಕಾರವಂತಳಾಗಿದ್ದಾಳೆ. ನಮ್ಮ ಮನೆ ಎಷ್ಟು ಚಿಕ್ಕದಿದ್ದರೂ ನಡೆಯುತ್ತದೆ. ಆದರೆ ಮನಸ್ಸು ವಿಶಾಲವಾಗಿರಬೇಕು. ಮನಸ್ಸು ಸಣ್ಣದಾದರೆ ನೆಮ್ಮದಿಯ ಬದುಕು ನಾಸ್ತಿ. ಮನೆ ಎಷ್ಟೇ ದೊಡ್ಡದಾದರೂ ನಮ್ಮ ಮನ ಶುದ್ಧಿಯಾಗಿಲ್ಲದೆ ಇದ್ದರೆ ನಾವು ಎಷ್ಟು ಕಲಿತರೇನು? ಸಂಪಾದಿಸಿದರೇನು? ಅದು ಪ್ರಯೋಜನಕಿಲ್ಲದ ಬದುಕು. ನಮ್ಮ ಜೀವನವನ್ನು ಕೇವಲ ಸ್ವಾರ್ಥ, ಧನಕನಕಗಳಿಂದ ಸುಂದರಗೊಳಿಸಲು ಸಾಧ್ಯವಿಲ್ಲ, ಹೃದಯ ಶ್ರೀಮಂತಿಕೆಯಿಂದ ಮಾತ್ರ ಬಾಳು ಸುಗಮವಾಗಿ ಸಾಗುತ್ತದೆ ಎಂಬ ಅರಿವು ಮಾಧವ ಮಾಧುರಿಗೆ ಸ್ವಲ್ಪ ತಡವಾಗಿಯಾದರೂ ಆಗಿದೆ. ತನ್ನ ಅಮ್ಮನನ್ನು ಮನೆ ಸೇರಿಸಿದ ತನ್ನ ಭಾವಮೈದನಿಗೆ ಮಾಧವ ಬಲು ಋಣಿ. ಮಾಧವ ಈಗ ತುತ್ತು ಮುತ್ತು ಇವರೆಡೂ ಲಭಿಸಿದ ಸಂತಸದಲ್ಲಿದ್ದಾನೆ.

ಏಪ್ರಿಲ್ ೨೦೧೫ ಮಂಜುವಾಣಿಯಲ್ಲಿ ಪ್ರಕಟಿತ

Read Full Post »

      ನಮ್ಮ ದೇಶ ಎಷ್ಟು ಸುಂದರ. ನಾವೆಷ್ಟು ಭಾಗ್ಯವಂತರು ಎಂದು ಅರಿವಾಗಬೇಕಾದರೆ ಪರದೇಶಕ್ಕೆ ಹೋಗಬೇಕು. ಇಲ್ಲವೇ ಪರದೇಶಕ್ಕೆ ಹೋದವರ ಅನುಭವ ಕೇಳಬೇಕು ಇಲ್ಲವೆ ಅಂಥ ಪುಸ್ತಕ ಓದಬೇಕು. ಆಗ ನಮಗೆ ನಮ್ಮ ದೇಶ ಎಷ್ಟು ಸೊಗಸು, ನಾವೆಷ್ಟು ಸುಖಿಗಳು ಎಂಬುದು ಗೊತ್ತಾಗುತ್ತದೆ.
ಹೇಮನ ಮಗಳು ಪರದೇಶದಲ್ಲಿದ್ದಾಳೆ. ಅವಳನ್ನು ನೋಡುವ ಸಲುವಾಗಿ ಹೇಮ ಪ್ರಥಮ ಬಾರಿ ವಿದೇಶಕ್ಕೆ ಹಾರಿದಳು. ಅಲ್ಲಿ ಹೋಗಿ ಎರಡು ದಿನ ಸುಧಾರಿಸಿಕೊಂಡು ಮಗಳಿಗೆ ಅಮ್ಮನ ಕೈ ಅಡುಗೆಯ ರುಚಿ ತೋರಿಸಲು ಅಡುಗೆ ಮನೆಯ ಪಾರುಪತ್ಯ ವಹಿಸಿಕೊಂಡಳು. ಮಗಳು ಅಳಿಯ ಬೆಳಗ್ಗೆ ೮ ಗಂಟೆಗೆ ಕೆಲಸಕ್ಕೆ ಹೊರಡುತ್ತಾರೆ. ಅವರಿಬ್ಬರೂ ಹೊರಗೆ ಹೋದಮೇಲೆ ಇಲ್ಲಿ ಹೇಮನಿಗೆ ಹೊತ್ತೇ ಹೋಗಲೊಲ್ಲದು. ಮಧ್ಯಾಹ್ನ ೩ಗಂಟೆಗೆ ಮಗಳು ಅಳಿಯನಿಗೆ ರುಚಿಯಾಗಿ ಅಡುಗೆ ಮಾಡೋಣವೆಂದು ಟೊಂಕಕ್ಕೆ ಸೆರಗು ಕಟ್ಟಿ ಅಣಿಯಾದಳು ಹೇಮ. ಪಾಯಸ, ಮಜ್ಜಿಗೆ ಹುಳಿ ಮಾಡುವ ಆಲೋಚನೆ ಅವಳದು. ತೆಂಗಿನಕಾಯಿ ಹೆರೆಯಲು ಕುಳಿತಳು. ಇನ್ನೇನು ಒಂದು ಕಡಿ ಹೆರೆದು ಆಗಬೇಕೊ ಇಲ್ಲವೊ ಮನೆ ಕರೆಗಂಟೆ ಬಾರಿಸಿತು.  ಹೋಗಿ ಬಾಗಿಲು ತೆರೆದರೆ ಅಪರಿಚಿತ ಅಮೆರಿಕನ್ನಳೊಬ್ಬಳು ನಿಂತಿದ್ದಾಳೆ.
“ಅದು ಏನು ಸದ್ದು ಕೇಳುವುದು ನಿಮ್ಮಲ್ಲಿಂದ? ಸದ್ದು ಮಾಡಬೇಡಿ ನಮಗೆ ತೊಂದರೆ ಆಗುತ್ತದೆ, ಇತ್ಯಾದಿ”  ಆಂಗ್ಲಭಾಷೆಯಲ್ಲಿ ಪಟ ಪಟನೆ ನುಡಿದು ಹೋದಳು.
ನಾನೇನು ಸದ್ದು ಮಾಡಿದೆ ಇಲ್ಲಿ? ನಮ್ಮ ಮನೆಯಲ್ಲಿ ನಾನಿದ್ದೇನೆ. ಇವಳಿಗೇನಾಗಿದೆ? ಅವಳು ಬೇರೆ ಏನು ಹೇಳಿದ್ದು ಎಂಬುದೇ ತಲೆ ಬುಡ ಅರ್ಥವಾಗಲಿಲ್ಲ ಹೇಮಳಿಗೆ. ಪುನಃ ಅರ್ಧ ಉಳಿದ ಕಾಯಿ ಹೆರೆಯಲು ತೊಡಗಿದಳು. ಇನ್ನೇನು ಕಾಯಿ ಹೆರೆದು ಮುಗಿಯಬೇಕೆನ್ನುವಾಗ ಪುನಃ ಕರೆಗಂಟೆ ಸದ್ದು. ನೋಡಿದರೆ ಅದೇ ಹೆಂಗಸು ನಿಂತಿದ್ದಳು. ಅವಳು ಮುಖ ಸಿಂಡರಿಸಿಕೊಂಡು,  “ನಿಮಗೆ ಸದ್ದು ಮಾಡಬೇಡಿ ಎಂದು ನಾನಾಗ ಹೇಳಿದ್ದಲ್ಲವೆ? ನಮಗೆ ಬಹಳ ತೊಂದರೆ ಆಗುತ್ತದೆ. ಅಷ್ಟು ಸದ್ದು ಕೇಳುವಂತೆ ನೀವು ಏನು ಮಾಡುತ್ತಿರುವುದು? ಇನ್ನು ಕೇಳದಿದ್ದರೆ ಪೊಲಿಸರಿಗೆ ದೂರು ಕೊಡಬೇಕಾಗುತ್ತದೆ” ಎಂದು ನುಡಿದು ಹೋದಳು.
ನಾನು ಕಾಯಿ ಹೆರೆಯುತ್ತಿದ್ದೆ ಎಂದು ಅವಳಿಗೆ ಹೇಳುವುದು ಹೇಗೆ? ಹೇಳಿದರೆ ಅರ್ಥವಾಗಬೇಕಲ್ಲ. ಹಾಗಾಗಿ ಮಾತಾಡದೆ ಸುಮ್ಮನೆ ನಿಂತಿದ್ದೆ. ಅಲ್ಲ ನಾನೇನು ಮಾಡಿದೆ ಎಂದು ಹೀಗೆ ದಬಾಯಿಸುತ್ತಿದ್ದಾಳೆ ಇವಳು? ಕಾಯಿ ಹೆರೆದದ್ದು ಅಷ್ಟೆ. ಅದೂ ನನ್ನ ಮನೆಯಲ್ಲಿ ನಾನು ಏನಾದರೂ ಮಾಡುತ್ತೇನೆ. ಇವಳು ಯಾರು ಕೇಳಲು? ಅಲ್ಲ ಪೊಲಿಸರಿಗೆ ದೂರು ಕೊಡುತ್ತೇನೆ ಎಂದು ಹೆದರಿಸುತ್ತಾಳೆ. ಕೊಡಲಿ. ನೋಡುವ ನಾನೂ ಹೇಳುತ್ತೇನೆ ಅವರಿಗೆ. ನಾನೇನು ಮಾಡಲಿಲ್ಲ. ಕಾಯಿ ಹೆರೆದದ್ದು ನನ್ನ ಮನೆಯಲ್ಲೇ ಹೊರತು ಅವರ ಮನೆಯಲ್ಲಿ ಅಲ್ಲ ಎಂದು. ಅವಳಿಗೆ ಹೇಗೆ ತೊಂದರೆ ಆಯಿತು ಇದರಿಂದ? ಎಂದು ಹೇಮ ಮನದಲ್ಲೇ ಎಷ್ಟು ಯೋಚಿಸಿದರೂ ಅಮೇರಿಕನ್ನಳು ಹಾಗೇಕೆ ಅಂದಳು ಎಂದು ಅರ್ಥವಾಗಲೇ ಇಲ್ಲ. ಮಗಳು ಸಂಜೆ ಮನೆಗೆ ಬಂದಾಗ ನಡೆದ ವಿಷಯ ತಿಳಿಸಿದಳು.
“ಅಯ್ಯೊ ಅಮ್ಮ! ನಿನಗೆ ಹೇಳಲು ಮರೆತಿದ್ದೆ. ಎಷ್ಟೆಷ್ಟೊ ಹೊತ್ತಿಗೆ ಕಾಯಿ ಹೆರೆಯಬೇಡ. ಕೆಳಗಿನ ಮನೆಯವರಿಗೆ ಶಬ್ದವಾಗುತ್ತದೆ. ಅವರು ಬಂದು ಒಮ್ಮೆ ಹೇಳಿದಾಗ ನಾವು ಕೇಳದಿದ್ದರೆ ಪೊಲೀಸರಿಗೆ ದೂರು ಕೊಡುತ್ತಾರೆ. ಮತ್ತೆ ಅದು ವಿಕೋಪಕ್ಕೆ ಹೋಗುತ್ತದೆ. ನಾವು ಎಷ್ಟೊ ದಂಡ ಕಟ್ಟಬೇಕಾಗುತ್ತದೆ. ನೀನೇನು ಮಾಡಿದರೂ ಬೆಳಗ್ಗೆ ಇಷ್ಟು ಗಂಟೆಯೊಳಗೆ ಶಬ್ದವಾಗುವಂಥ ಕೆಲಸ ಮಾಡಿ ಮುಗಿಸಬೇಕು. ಅದರನಂತರ ನೀನೇನು ಮಾಡಲು ಹೋಗಬೇಡ. ದೂರದರ್ಶನ ವೀಕ್ಷಿಸುತ್ತ ಕುಳಿತುಕೊ” ಎಂದು ಮಗಳು ಹೇಳಿದಳು.
“ಅಲ್ಲ ಇದು ಯಾವ ಸೀಮೆಯ ಜೀವನ? ನಮ್ಮ ಮನೆಯಲ್ಲಿ ನಾವು ಕಾಯಿ ಹೆರೆದರೆ ಇವರಿಗೇನು ಬರುತ್ತದೆ ರೋಗ? ನಮಗೆ ಬೇಕಾದಂತೆ ಇರಲು ಸಾಧ್ಯವಾಗದೆ ಇದ್ದರೆ ಅದೆಂಥ ಬದುಕು? ಇಲ್ಲಿ ಹೇಗೆ ಇದ್ದೀಯೊ ನೀನು? ನಾನಿಲ್ಲಿ ಹೆಚ್ಚು ದಿನ ಹೀಗೆ ಇರಲು ಸಾಧ್ಯವಿಲ್ಲ. ಒಂದು ದಿನದ ಅನುಭವವೇ ಸಾಕಪ್ಪ ಸಾಕು. ಇದೇ ನಮ್ಮ ದೇಶದಲ್ಲಾದರೆ ಮನೆಯಲ್ಲಿ ಕಾಯಿ ಹೆರೆಯಬಹುದು, ಬೊಬ್ಬೆ ಹೊಡೆಯಬಹುದು, ಜೋರಾಗಿ ನಗಬಹುದು, ಕುಣಿದು ಕುಪ್ಪಳಿಸಬಹುದು, ಏನು ಬೇಕಾದರೂ ಮಾಡಬಹುದು. ಕೇಳುವವರಾರು. ಬಾಂಬ್ ಬೇಕಾದರೂ ಹಾಕಬಹುದು! ಅಕ್ಕಪಕ್ಕದ ಮನೆಯಲ್ಲೂ ಅಷ್ಟೆ ಏನೇ ಶಬ್ದ ಮಾಡಿದರೂ ನಾವು ಅದನ್ನು ಸಹಿಸಿಕೊಳ್ಳುತ್ತೇವೆ ಹೊರತು ನೀವು ಶಬ್ದ ಮಾಡಬೇಡಿ ಎನ್ನಲು ಹೋಗುವುದಿಲ್ಲ. ನಾವು ಎಲ್ಲಿ ಏನು ಮಾಡಲೂ ಸರ್ವ ಸ್ವತಂತ್ರರು. ನಾವೆಷ್ಟು ಭಾಗ್ಯಶಾಲಿಗಳಲ್ಲವೆ?
“ಹೌದಮ್ಮ, ಅದನ್ನು ಒಪ್ಪುತ್ತೇನೆ. ಆದರೆ ಏನು ಮಾಡುವುದು? ಇಲ್ಲಿ ನಮಗೆ ಹೇಗೆ ಬೇಕೊ ಹಾಗೆ ಇರುವಂತಿಲ್ಲ. ನಾವು ಕೆಲವು ಚೌಕಟ್ಟನ್ನು ಮೀರಿ ನಡೆಯುವಂತಿಲ್ಲ. ಇಲ್ಲಿ ಮಕ್ಕಳಿಗೆ ಹೊಡೆಯುವಂತಿಲ್ಲ. ಅದು ಅಪರಾಧ. ಹಾಗೆಲ್ಲ ಕೆಲವು ನಿಯಮಗಳಿವೆ. ಇಲ್ಲಿ ಇದ್ದ ಮೇಲೆ ಆ ನಿಯಮಗಳನ್ನೆಲ್ಲ ಮೀರದಂತೆ ನಡೆದುಕೊಳ್ಳುವುದೇ ಜಾಣತನ.”
“ಏನೊ. ನೀನು ಏನೇ ಹೇಳು ಮಗಳೆ. ಇಲ್ಲಿಗಿಂತ ನಮ್ಮ ಭಾರತವೇ ಎಷ್ಟೋ ಪಾಲು ಮೇಲು. ಈ ದೇಶ ಶ್ರೀಮಂತ ದೇಶ ಇರಬಹುದು. ಆದರೆ ಹೃದಯ ಶ್ರೀಮಂತಿಕೆ ಮಾತ್ರ ಭಾರತೀಯರಿಗೆ ಹೆಚ್ಚು. ಒಂದು ಉದಾಹರಣೆಯೇ ತಕೊ. ಕತ್ರಿನಾ ಚಂಡಮಾರುತ ಅಪ್ಪಳಿಸಿ ಎರಡು ದಿನವಾದ ಮೇಲೆ ಅಧ್ಯಕ್ಷ ಬುಶ್‌ಗೆ ಇದರ ಭೀಕರತೆಯ ಅರಿವಾಯಿತಂತೆ. ಆಗ ಕೊಲೆ ಸುಲಿಗೆ ಅತ್ಯಾಚಾರ ಮೇರೆ ಮೀರಿತು. ಯಾಹೂ ನ್ಯೂಸ್‌ನಲ್ಲಿ ಮಿ.ಸ್ಕಾಟ್ ಬರೆಯುತ್ತಾರೆ: `ಪ್ರವಾಸಕ್ಕೋಸ್ಕರ ನಾನು ಹೆಂಡತಿ ಮಗಳೊಂದಿಗೆ ನ್ಯೂ ಅರ್ಲಿಯನ್ಸ್‌ಗೆ ಹೋಗಿದ್ದೆ. ನಾನಿಳಿದುಕೊಂಡ ವಸತಿಗೃಹ ನೀರಿನಿಂದ ಸುತ್ತುವರಿಯತೊಡಗಿದಾಗ ನಾವೆಲ್ಲ ಅದರ ಮೇಲಿನಮಹಡಿಗೆ ಹೋದೆವು. ಅಲ್ಲಿ ಹೆಂಗಸರು ಬಂದು ಸೇರಿದ್ದರು. ಸಹಾಯಕ್ಕಾಗಿ ಬಂದ ಪೊಲಿಸರಲ್ಲಿ ಅವರು ನೆರವು ಕೋರಿದರು. ಆಗ ಪೊಲಿಸರು `ನಿಮ್ಮ ಟಿ ಶರ್ಟ್ ಬಿಚ್ಚಿ ನಿಂತರೆ ನಾವು ಸಹಾಯ ಮಾಡುತ್ತೇವೆ’ ಎಂದರು ವಿಕೃತ ಪೊಲಿಸರು. ಮಹಿಳೆಯರು ನಿರಾಕರಿಸಿದಾಗ `ಹಾಗಿದ್ದರೆ ನಿಮ್ಮ ಹಣೆಯಲ್ಲಿ ಬರೆದಂತಾಗಲಿ’ ಎಂದು ಅಲ್ಲಿಂದ ಅವರು ನೌಕೆಯನ್ನೇರಿ ಸಹಾಯ ಮಾಡದೆ ನಿರ್ಗಮಿಸಿದರು.’
“ನ್ಯೂ ಅರ್ಲಿಯನ್ಸ್‌ನ ಜನಸಂಖ್ಯೆ ೪,೮೪,೫೭೪. ಅಮೆರಿಕೆಯ ಸೈನ್ಯ ನ್ಯೂ ಅರ್ಲಿಯನ್ಸ್ ತಲಪಲು ತೆಗೆದುಕೊಂಡ ಅವಧಿ ೪೮ ಘಂಟೆಗಳು. ಅಲ್ಲಿ ಕೊಲೆ ಸುಲಿಗೆ ಅತ್ಯಾಚಾರ ಲೆಕ್ಕವಿಲ್ಲದಷ್ಟು ನಡೆದಿವೆ. ಅಮೇರಿಕಾ ಜಗತ್ತಿನ ಅತಿ ಮುಂದುವರಿದ ದೇಶ. ಅದೇ ಭಾರತದಲ್ಲಿ (ಮುಂಬೈನಲ್ಲಿ) ಚಂಡಮಾರುತ ಸಂಭವಿಸಿದಾಗ ಭಾರತೀಯ ಭೂಸೇನೆ ಹಾಗೂ ಜಲಸೇನೆ ಮುಂಬಯಿಯನ್ನು ತಲಪಲು ತೆಗೆದುಕೊಂಡ ಕಾಲ ೧೨ ಗಂಟೆ. ಮುಂಬೈಯಲ್ಲಿ ಕೊಲೆ ಸುಲಿಗೆ ಅತ್ಯಾಚಾರದಂಥ ಘಟನೆ ನಡೆಯಲಿಲ್ಲ. ಮುಂಬಯಿಯ ಜನಸಂಖ್ಯೆ ೧,೬೨,೨೨೫೦೦. ೪೮ ಗಂಟೆಗಳಲ್ಲಿ ಮುಂಬಯಿಯ ಜನಜೀವನ ತನ್ನ ಕಾಲಮೇಲೆ ತಾನು ನಿಂತು ಅಂಗಡಿ ಮುಂಗಟ್ಟು ಎಂದಿನಂತೆ ತೆರೆದಿದ್ದುವು. ಭಾರತ ಮೂರನೇ ದರ್ಜೆಯ ದೇಶವೆಂದು ಪರಿಗಣಿಸಿದೆ. ಆದರೆ ಆ ದೇಶಕ್ಕೂ ನಮ್ಮ ದೇಶಕ್ಕೂ ಎಷ್ಟು ವ್ಯತ್ಯಾಸ ಗಮನಿಸು. ಈ ಸುದ್ದಿ ಒಂದು ಪತ್ರಿಕೆಯಲ್ಲಿ ಬಂದಿತ್ತು.” ಹೇಮನ ವಾದ ವೈಖರಿಗೆ ಬೆರಗಾಗಿ ಮಗಳು ಸುಮ್ಮನೆ ಗೋಣಾಡಿಸಿದಳು.
“ನನಗಂತೂ ಇಲ್ಲಿ ಕೈಕಟ್ಟಿ ಸುಮ್ಮನೆ ಕುಳಿತಿರಲು ಸಾಧ್ಯವಿಲ್ಲ. ನಿಮಗೇ ಸರಿ ಇಂಥ ಜೀವನ. ಇರಲಿ ನಾನೇನು ಇಲ್ಲೇ ಇರಲು ಬಂದವಳಲ್ಲವಲ್ಲ. ಸ್ವಲ್ಪ ದಿನವಿದ್ದು ನಮ್ಮದೇಶಕ್ಕೆ ಹೋಗುವವಳು ತಾನೆ. ಭಾರತೀಯರು ಸಹನಾಶೀಲರು. ಹಾಗಾಗಿ ಸಹಿಸಿಕೊಳ್ಳುವುದು. `ಸಹನೆಯೆ ವಜ್ರಕವಚ ಮಂಕುತಿಮ್ಮ’ ಅಲ್ಲವೆ?” ಎಂದು ಹೇಮ ಸ್ವದೇಶಕ್ಕೆ ಹೊರಡುವ ತಯಾರಿಯಲ್ಲಿ ತೊಡಗಿದಳು.
******
ಮಗ ಸೊಸೆ ಮೊಮ್ಮಕ್ಕಳ ಬಲವಂತಕ್ಕೆ ಶಿವ ಪಾರ್ವತಿ ಅಮೇರಿಕೆಗೆ ಹೋದರು. ಹೋಗಿ ಒಂದು ವಾರ ಏನೂ ಗೊತ್ತಾಗಲಿಲ್ಲ. ಮಜವಾಗಿಯೇ ಇದ್ದರು.  ಮಗ ಸೊಸೆ ಮೊಮ್ಮಕ್ಕಳೊಡನೆ ಅಲ್ಲಿ ಇಲ್ಲಿ ಓಡಾಟ ಎಂದು ದಿನ ಸರಿಯಿತು. ಅನಂತರ ಬಂತು ಶಿವನಿಗೆ ಸಂಕಟ. ಪಾರ್ವತಿ ಬಹುಬೇಗ ಅಲ್ಲಿಗೆ ಹೊಂದಿಕೊಂಡಳು.  ಶಿವನಿಗೆ ಮನೆಯಲ್ಲಿ ಹೊತ್ತೇ ಹೋಗಲಿಲ್ಲ. ಮನೆಯಲ್ಲಿ ಸುಮ್ಮನೆ ಕುಳಿತು ಗೊತ್ತೇ ಇಲ್ಲ. ಹೊರಗೆ ಹೋಗುವಂತಿಲ್ಲ. ಆದರೂ ಶಿವ ಕೇಳಲೇ ಇಲ್ಲ. ಪ್ರತೀದಿನ ಹೊರಗೆ ಹೋಗುತ್ತಿದ್ದ. ಶಿವ ಹೊರಗೆ ಹೊರಟಕೂಡಲೆ ಇಲ್ಲಿ ಸೊಸೆಗೆ ಮನೆಯಲ್ಲಿ ಕುಳಿತಲ್ಲಿ ಕೂರಲಾಗುತ್ತಿರಲಿಲ್ಲ. ಮಾವ ಎಲ್ಲಿ ಕಾಣೆಯಾಗಿಬಿಡುತ್ತಾರೊ? ಎಲ್ಲೆಲ್ಲಿ ರಸ್ತೆ ದಾಟುತ್ತಾರೊ? ನಡೆಯಬಾರದ ಸ್ಥಳದಲ್ಲಿ ನಡೆದು ಏನು ಪಚೀತಿಗೆ ಈಡಾಗುತ್ತಾರೊ? ಅವರು ತಪ್ಪಿ ನಡೆದು ಎಲ್ಲಿ ದಂಡ ತೆರಬೇಕಾಗುತ್ತದೊ ಎಂಬ ಆತಂಕ ಸೊಸೆಗೆ. ಅಂತೂ ಏನು ಆಗದೆ ಮಾವ ಮನೆಗೆ ಬಂದರೆಂದರೆ ಅಷ್ಟು ಹೊತ್ತು ಉಸಿರು ಕಟ್ಟಿ ಕೂತಿದ್ದವಳು ನೆಮ್ಮದಿಯಿಂದ ಉಸ್ಸಪ್ಪ ಎಂದು ನಿರಾಳಳಾಗುತ್ತಿದ್ದಳು. ಇಲ್ಲಿ ಎಲ್ಲೂ ನಡೆದು ಹೋಗಬಾರದು ಎಂದು ಸೊಸೆ ಕಟ್ಟಪ್ಪಣೆ ಮಾಡಿದಳು ಮಾವನಿಗೆ. ಎಲ್ಲಿಗೆ ಹೋಗಬೇಕು ಹೇಳಿ ನಾನು ಕಾರಲ್ಲಿ ಕರೆದುಕೊಂಡು ಹೋಗುತ್ತೇನೆ ಎಂಬುದು ಅವಳ ಮನವಿ. ಈ ಏರ್ಪಾಡು  ಶಿವನಿಗೆ ಸರಿ ಬರಲಿಲ್ಲ. ಸೊಸೆ ಹೇಳಿದಾಗೆ ಕೇಳಬೇಕೆಂದರೆ ಹೇಗಾಗುತ್ತದೆ. ಹೆಂಡತಿ ಹೇಳಿದ್ದನ್ನೇ ಇಷ್ಟು ವರ್ಷ ಕೇಳದ ನಾನು ಇನ್ನು ನಿನ್ನೆ ಮೊನ್ನೆ ಬಂದ ಸೊಸೆ ಹೇಳಿದ್ದನ್ನು ಕೇಳುವುದು ಹೇಗೆ? ನನ್ನ ಮರ್ಜಿ ನನಗೆ. ನನಗೆ ಬೇಕಾದಂತೆ ಇರಲು ಆಗದಿದ್ದರೆ ಇಲ್ಲಿದ್ದು ಏನು ಮಾಡಬೇಕು ಎಂಬುದು ಅವನ ವಾದ. ಹೇಗೂ ಇಷ್ಟು ದೂರ  ಬಂದಾಗಿದೆ. ಮಗ ಸೊಸೆ ಖರ್ಚು ಮಾಡಿ ಕರೆಸಿಕೊಂಡಿದ್ದಾರೆ. ಇನ್ನು ಕೆಲವು ದಿನ ಹೀಗೆ ಇರುವುದು ಎಂಬ ರಾಜಿ ಮನಸ್ಸು ಶಿವನಿಗೆ ಇಲ್ಲ. ಹೆಂಡತಿಗೂ ಒಂದು ಮನಸ್ಸು ಇದೆ. ಅವಳ ಅಭಿಪ್ರಾಯ ಕೇಳಬೇಕು ಎಂಬುದು ಗೊತ್ತೇ ಇಲ್ಲ ಶಿವನಿಗೆ.            ಮದುವೆಯಾದ ಲಾಗಾಯ್ತಿನಿಂದ ತಾನು ಹೇಳಿದ್ದೇ ನಡೆಯಬೇಕು. ಹೆಂಡತಿಯ ಅಭಿಪ್ರಾಯಕ್ಕೆ ಬೆಲೆ ಕಡಿಮೆ. ತನ್ನ ಕಷ್ಟ ಮಾತ್ರ ಪರಿಹಾರವಾಗಬೇಕು ಬೇರೆಯವರದು ಹೇಗೊ ಗೊತ್ತಿಲ್ಲ. ಅಷ್ಟೆಲ್ಲ ತೊಂದರೆ ತೆಗೆದುಕೊಂಡು ಯೋಚಿಸುವಷ್ಟು ವಿಶಾಲ ಮನಸ್ಸು ಇಲ್ಲವೊ ಹಾಗೆ ಯೋಚಿಸಲು ಆಗುತ್ತದೆ ಎಂದು ಗೊತ್ತೇ ಇಲ್ಲವೋ, ಅಲ್ಲ ಅದಕ್ಕೆಲ್ಲ ತಲೆ ಖರ್ಚು ಮಾಡಲು ವೇಳೆ ಇಲ್ಲವೇ? ಗೊತ್ತಿಲ್ಲ. ಅಂಥ ಕ್ಷುಲ್ಲಕ (ಶಿವನ ಅರಿವಿನಲ್ಲಿ) ವಿಚಾರಗಳಿಗೆಲ್ಲ ತಲೆಕೆಡಿಸುವ ಜಾಯಮಾನದವನಲ್ಲ ಶಿವ. ಅದು ಅರಿವಾಗುವಂಥ ಮನುಷ್ಯನೂ ಅಲ್ಲ. ಹೆಂಡತಿಗೆ ಅಲ್ಲಿ ಇನ್ನೂ ಸ್ವಲ್ಪದಿನ ಇರಬೇಕೆಂದು ಮನಸ್ಸು ಇತ್ತೊ ಇಲ್ಲವೊ ಎಂದು ಕೇಳಲು ಹೋಗಲಿಲ್ಲ. ಪಾರ್ವತಿಯಂತೂ ಗಂಡನನ್ನು ಬಿಟ್ಟಿರಲು ಒಪ್ಪದ ಅಪ್ಪಟ ಸಾಧ್ವಿ ಮಹಿಳೆ. ತಾನಿಲ್ಲಿದ್ದು ಗಂಡ ಭಾರತಕ್ಕೆ ಹೋದರೆ ಅಲ್ಲಿ ಗಂಡನಿಗೆ ತೊಂದರೆಯಾದರೆ ಎಂದು ಆಗಲೇ ಚಿಂತಿಸಿ ಕೊರಗುವ ಸಾಧುಸ್ವಭಾವ. ಅವರ ಸೇವೆ ಮಾಡುವವರಾರು? ಗಂಡ ಎಷ್ಟೇ ತನ್ನ ಮಾತು ಕೇಳದಿದ್ದರೂ ಮನಸ್ಸಿಗೆ ಎಷ್ಟೇ ನೋವಾದರೂ ಅದನ್ನು ತೋರ್ಪಡಿಸದೆ ಅದರ ಹತ್ತರಷ್ಟು ಪ್ರೀತಿಯಿಂದ ಗಂಡನ ಕಾಳಜಿ ವಹಿಸುವ ಹೆಂಗಸು ಪಾರ್ವತಿ.
ಭಾರತಕ್ಕೆ ತೆರಳಲು ಆದಷ್ಟು ಬೇಗ ಟಿಕೆಟ್ ಮಾಡು ಎಂದು ದಿನಾ ಮಗನಿಗೆ ಹೇಳಿದ್ದೇ ಹೇಳಿ ಆ ರಾಗ ಕೇಳಿದ್ದೇ ಕೇಳಿ ತಡೆಯಲಾರದೆ ಮಗ, `ತಾಳಲಾರೆನೊ ಈ ಪರಿಯ ಕಿರಿಕಿರಿಯನು ಹರಿಯೆ, ಬೇಗ ಎರಡು ಟಿಕೆಟ್ ದಯಪಾಲಿಸೊ ಹರನೇ ಕಾಪಾಡೆಯಾ’ ಎಂದು ಪರಿಪರಿಯಲಿ ಬಿನ್ನವಿಸಿ ಕಷ್ಟಪಟ್ಟು ವಿಮಾನದ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾದ. ಅಲ್ಲಿ ಹೋಗಿ ತಿಂಗಳಾಗುವಾಗ ಅಂತೂ ಇಂತು ಶಿವ ಪಾರ್ವತಿಯರಿಗೆ ಭಾರತಕ್ಕೆ ಮರಳಲು ಟಿಕೆಟ್ ಸಿಕ್ಕಿತು.
ಟಿಕೆಟ್ ಸಿಕ್ಕಿದ್ದೇ ಭಾರತಕ್ಕೆ ಹಾರಿ ಬಂದರು ಇಬ್ಬರೂ. ತಾಯಿ ನಾಡಿನಲ್ಲಿ ವಿಮಾನ ಇಳಿದ ಶಿವ, “ನಮ್ಮ ರಸ್ತೆಯಲ್ಲಿ ದನ ಸಗಣಿ ಹಾಕಬಹುದು, ರಸ್ತೆ ಮಧ್ಯದಲ್ಲೇ ಅದು ಮಲಗಬಹುದು.  ನಾಯಿ ಯಾರ ಮನೆ ಮುಂದೆ ಬೇಕಾದರೂ ಮಲಮೂತ್ರ ಮಾಡಬಹುದು! ಜನರಿಗೆ ಅದೂ ಗಂಡಸರಿಗೆ ಎಲ್ಲೇ ಮೂತ್ರ ಬಂದರೂ ಅಲ್ಲೇ ಅದನ್ನು ಹೊರಹಾಕುವಷ್ಟು ಸ್ವತಂತ್ರರವರು! ಎಲ್ಲಿ ಬೇಕೋ ಅಲ್ಲಿ ನಡೆಯಬಹುದು, ರಸ್ತೆ ದಾಟಬಹುದು, ರಸ್ತೆ ಮಧ್ಯೆ ಬೇಕಾದರೂ ನಡೆಯಬಹುದು, ಕಸ ಎಲ್ಲಿ ಬೇಕಾದರೂ ಹಾಕಬಹುದು. ಕಸದ ತೊಟ್ಟಿ ಇದ್ದರೂ ಅದಕ್ಕೇ ಕಸ ಹಾಕಬೇಕೆಂಬ ನಿಯಮವಿಲ್ಲ! ಎಲ್ಲಿ ಬೇಕಂದರಲ್ಲಿ ಉಗುಳುವುದಕ್ಕೂ ನಾವು ಸ್ವತಂತ್ರರು!  ಅಲ್ಲಿ ಇವೆಲ್ಲ ಇಲ್ಲದೆ ರಸ್ತೆ ಪರಿಸರ ಚೊಕ್ಕಟವಾಗಿದೆ ನಿಜ. ಇಲ್ಲಿ ಎಷ್ಟೇ ಕಸವಿರಲಿ, ರಸ್ತೆಯ ಮಧ್ಯದಲ್ಲಿ ದನ ಓಡಾಡುತ್ತಿರಲಿ, ಅದರ ಸಗಣಿಯಿರಲಿ ಆದರೂ ನಮ್ಮ ದೇಶವೇ ಅಂದ. ಇಲ್ಲಿರುವ ಸ್ವಾತಂತ್ರ್ಯ ಅಲ್ಲಿ ಇಲ್ಲವೇ ಇಲ್ಲ. ಅಲ್ಲಿ ಹೋದರೇ ಅರಿವಾಗುವುದು ನಮ್ಮ ದೇಶ ಎಷ್ಟು ಸುಂದರ. ನಾವೆಷ್ಟು ಭಾಗ್ಯವಂತರು” ಎಂದು ಉದ್ಗರಿಸಿದ.

ಮೈಸೂರುಮಿತ್ರ ವಾರ್ಷಿಕ ವಿಶೇಷಾಂಕ ಮೆಚ್ಚುಗೆ ಪಡೆದ ಕತೆ ೪-೫-೨೦೦೮

Read Full Post »

      ಮಧ್ಯಾಹ್ನ ೧೨.೧೫ಕ್ಕೆ ಶಾಲಾ ಗಂಟೆ ಬಾರಿಸಿತು. ಅರ್ಧ ಗಂಟೆ ಊಟಕ್ಕೆ ಬಿಡುವು. ರಜನಿ, ರೇವತಿ, ರೇಖ, ವಿನುತ, ವನಿತ ಅವರವರ ಬುತ್ತಿ ತೆಗೆದುಕೊಂಡು ಕೆಳಗೆ ಶಾಲಾ ಬಯಲಿನ ಮರದ ಬಳಿಗೆ ಬಂದು ಊಟಕ್ಕೆ ಕುಳಿತರು. ಊಟ ಮಾಡುತ್ತ ಅವರ ಮಾತು ಪ್ರಾರಂಭವಾಗುತ್ತಿತ್ತು.
“ಏನೇ ರಜನಿ, ಇವತ್ತೂ ಸಾರು ಪಲ್ಯವನ್ನೇ ತಂದಿದ್ದೀಯಲ್ಲ’’ ದಿನಕ್ಕೊಂದು ತರಹದ ತಿಂಡಿ ತರುವ ರೇವತಿ ಕೇಳಿದಳು.
“ಥೂ. ಈ ಸಾರನ್ನ ತಿಂದು ತಿಂದು ಸಾಕಾಗಿದೆ. ನಮ್ಮಮ್ಮ ಬೇರೆ ಬಗೆಬಗೆಯ ತಿಂಡಿ ಮಾಡಿಕೊಡುವುದೇ ಇಲ್ಲ. ಮಧ್ಯಾಹ್ನ ಅನ್ನವೇ ತಿನ್ನಬೇಕು, ಆರೋಗ್ಯಕ್ಕೆ ಒಳ್ಳೆಯದು. ತಿಂಡಿ ಏನಿದ್ದರೂ ಸಂಜೆಗೇ ಸರಿ ಎನ್ನುತ್ತಾಳೆ’’ ರಜನಿಯ ತಾತ್ಸಾರದ ನುಡಿ.
“ಸೇರದಿದ್ದರೆ ಬಿಟ್ಟುಬಿಡು. ಇಲ್ಲವೇ ಈ ಮರದ ಬುಡಕ್ಕೆ ಸುರಿ. ನಾಯಿ ತಿಂದೀತು’’ ರೇವತಿಯ ಅಮೂಲ್ಯ ಸಲಹೆ.
“ಎಷ್ಟೇ ಸೇರದಿದ್ದರೂ ನಾನು ಅನ್ನ ಚೆಲ್ಲಲ್ಲ. ತಿಂದು ಮುಗಿಸುತ್ತೇನೆ. ಒಮ್ಮೆ ನಾನು ಚಿಕ್ಕವಳಿರುವಾಗ ಬುತ್ತಿಯಲ್ಲಿ ಅನ್ನ ಹಾಗೇ ವಾಪಾಸು ತಂದದ್ದಕ್ಕೆ ನಮ್ಮಮ್ಮ, `ಅನ್ನ ಚೆಲ್ಲಬಾರದು, ಬಡವರು ಹಸಿದವರು ಅನ್ನಕ್ಕಾಗಿ ಎಷ್ಟು ಕಷ್ಟಪಡುತ್ತಾರೆ ಎಂದು ಗೊತ್ತ ನಿನಗೆ? ನೀನು ಉಢಾಪೆಯಿಂದ ಅದನ್ನು ಚೆಲ್ಲುತ್ತಿದ್ದೀಯಲ್ಲ. ಅನ್ನದಲ್ಲೇ ದೇವರನ್ನು ಕಾಣು’  ಎಂದು ಉಪದೇಶಿಸಿದ್ದಾರೆ. ಆ ಮಾತು ನನ್ನ ತಲೆ ಒಳಗಡೆ ಹಾಗೆಯೇ ಇಳಿದಿದೆ. ಹಾಗಾಗಿ ಅನ್ನ ಮಾತ್ರ ಬುತ್ತಿಯಲ್ಲಿ ಬಿಡುವುದಿಲ್ಲ’’ ರಜನಿಯ ವಿಶ್ಲೇಷಣೆ.
“ಏನಪ್ಪ, ಅದೆಲ್ಲ ನನಗೆ ಗೊತ್ತಿಲ್ಲ. ನನ್ನ ಅಮ್ಮ ಬುತ್ತಿಗೆ ಚಿತ್ರಾನ್ನ, ಪಲಾವ್, ಪೂರಿ ಇಂಥ ತಿಂಡಿಗಳನ್ನೇ ಹಾಕಿ ಕೊಟ್ಟು ಕಳುಹಿಸುತ್ತಾರೆ. ನನಗೆ ಸಾರು ಪಲ್ಯವೇ ಇಷ್ಟ. ದಿನಾ ಇಂಥ ತಿಂಡಿ ತಿಂದು ತಿಂದು ಬೇಜಾರಾಗಿದೆ. ನನಗೆ ಸೇರದಿದ್ದರೆ ನಾನು ತಿನ್ನುವುದೇ ಇಲ್ಲ’’ ಯಾವಾಗಲೂ ಬುತ್ತಿ ಬರಿದು ಮಾಡದ ವಿನುತನ ಹೇಳಿಕೆ.
“ನಾನೂ ಬುತ್ತಿಯಲ್ಲಿ ತಂದದ್ದನ್ನು ಚೆಲ್ಲುವುದಿಲ್ಲ. ಅಮ್ಮ ಬೇಗನೆದ್ದು ಕಷ್ಟಪಟ್ಟು ತಿಂಡಿ ಮಾಡಿ ನಾವು ಹಸಿದಿರಬಾರದೆಂದು ಕೊಟ್ಟರೆ ಅದನ್ನು ಚೆಲ್ಲುವುದು ತಪ್ಪು. ನಮಗೆ ಅದು ಶ್ರೇಯಸ್ಕರವಲ್ಲ’’ ರೇಖಾಳ ಶಾಂತವಾದ ಪ್ರತಿಕ್ರಿಯೆ.
ಮಾತು ಸಾಗುತ್ತ ಊಟ ಮುಗಿಸಿದರು. ಆಗ ಊಟದ ಅವಧಿ ಮುಗಿಯಿತೆಂದು ಶಾಲೆ ಗಂಟೆ ಹೊಡೆಯಿತು. ಎಂದಿನ ಸಂಪ್ರದಾಯದಂತೆ ವಿನುತ, ರೇವತಿ ಬುತ್ತಿಯಲ್ಲಿ ಅರ್ಧಾಂಶ ಹಾಗೆಯೇ ಬಿಟ್ಟು ಎದ್ದರು.
* * *
ಒಂದು ಸಂಜೆ ಶಾಲೆ ಬಿಟ್ಟೊಡನೆ ಐದೂ ಜನ ಸ್ನೇಹಿತರೂ ಒಟ್ಟು ಸೇರಿದರು. ತರಗತಿಯಲ್ಲಿ ಇವರು ಬೇರೆ ಬೇರೆ ಸ್ಥಳದಲ್ಲಿ ಕೂರುವುದು. ಅಲ್ಲಿ ಹರಟೆ ಹೊಡೆಯಲು ಆಸ್ಪದವಿಲ್ಲ. ಶಾಲೆಯಿಂದ ಮನೆಗೆ ಹೊರಡುವ ಮೊದಲು ೧೫ ನಿಮಿಷ ಮಾತಾಡುತ್ತ, ಅನಂತರ ಒಬ್ಬೊಬ್ಬರೆ ಮನೆಗೆ ತೆರಳುತ್ತಿದ್ದರು. ಅವರ ಮಾತು ಸಾಗಿತು.
“ಛೆ! ಇನ್ನು ಮನೆಗೆ ಹೋಗಬೇಕಲ್ಲ. ಮನೆಗೆ ಹೋಗಲೇ ಬೇಜಾರು. ನಾನು ಮನೆ ಒಳಗೆ ನುಗ್ಗಿದ ಕೂಡಲೇ, “ಕೈ ಕಾಲು ತೊಳೆದು ಬಟ್ಟೆ ಬದಲಿಸಿ ಬಾ. ಬೇಗನೆ ತಿಂಡಿ ತಿನ್ನು. ಬುತ್ತಿಪಾತ್ರೆ ತೊಳೆದೇ ಬಾ. ಟಿ.ವಿ ನೋಡುತ್ತ ಕಾಲ ಕಳೆಯಬೇಡ. ಕಳೆದ ಕಾಲವು ಬಾರದು ಮತ್ತೆ, ಚೆನ್ನಾಗಿ ಓದು’’ ಇತ್ಯಾದಿ ಇತ್ಯಾದಿಯಾಗಿ ಅಮ್ಮನ ಪ್ರವಚನ ಪ್ರಾರಂಭವಾಗುತ್ತದೆ. ಅದನ್ನು ಕೇಳಿ ಕೇಳಿ ನನ್ನ ತಲೆ ಚಿಟ್ಟು ಹಿಡಿಯುತ್ತದೆ. ಒಂದಿಗೇ ಸಿಟ್ಟೂ ಬರುತ್ತದೆ. ರಜದ ದಿನವೂ ಬೆಳಗ್ಗೆ ಬೇಗನೆ (ಏಳುಗಂಟೆಗೇ) ಎಬ್ಬಿಸುತ್ತಾಳೆ. ಮಜವಾಗಿ ಬೆಚ್ಚಗೆ ಮಲಗುವಂತಿಲ್ಲ’’   ರಜನಿ ತನ್ನ ಸಮಸ್ಯೆಯನ್ನು ಹೇಳಿಕೊಂಡಳು.
“ನಮ್ಮಮ್ಮನೂ ಹಾಗೇನೇ. ನಂಗೂ ಬೇಜಾರಾಗಿದೆ’’ ಎಂದಳು ವನಿತಳೂ ನಿರಾಶೆಯಿಂದ.
“ಹೌದೇನೆ, ನಿಮ್ಮಮ್ಮ ಹಾಗೆಲ್ಲ ಹೇಳುತ್ತಾರ? ನಮ್ಮಮ್ಮ ಅಂತೂ ಏನೂ ಹೇಳಲ್ಲ. ನಾನು ಶಾಲೆಯಿಂದ ಮನೆಗೆ ಹೋದೊಡನೆ ಟಿವಿ ಮುಂದೆ ಕೂರುತ್ತೇನೆ. ಅಲ್ಲಿಗೇ ಅಮ್ಮ ತಿಂಡಿ ತಂದು ಕೊಡುತ್ತಾಳೆ. ನಿಧಾನದಲ್ಲಿ ತಿಂಡಿ ತಿನ್ನುತ್ತೇನೆ. ನನ್ನ ಬುತ್ತಿಪಾತ್ರೆ ಅಮ್ಮನೇ ತೊಳೆದಿಡುತ್ತಾಳೆ. ನಾನು ಟಿವಿ ನೋಡುತ್ತಲೇ ಶಾಲೆಕೆಲಸ (ಹೋಂವರ್ಕ್) ಮಾಡುತ್ತೇನೆ. ನನಗೆ ಬೇಕಾದ ಕೆಲಸವನ್ನೆಲ್ಲ ಅಮ್ಮನಲ್ಲಿ ಹೇಳಿ ಮಾಡಿಸಿಕೊಳ್ಳುತ್ತೇನೆ. ನಾವು ದಿನಾ ಹೊರಗೆ ಹೋಗಿ ಐಸ್‌ಕ್ರೀಮ್, ಮಸಾಲೆಪೂರಿ ಅದು ಇದು ಎಂದು ಬೇಕಾದ್ದು ತಿಂದು ಬರುತ್ತೇವೆ. ರಜದ ದಿವಸ ಬೆಳಗ್ಗೆ ಅಮ್ಮ ನನ್ನನ್ನು ಎಬ್ಬಿಸುವುದೇ ಇಲ್ಲ. `ಪಾಪ ಮಲಗಿರಲಿ ರಜ ತಾನೆ’ ಎನ್ನುತ್ತಾಳೆ. ನಾನೇ ೯ ಗಂಟೆಗೆ ಎದ್ದೇಳುತ್ತೇನೆ. ಎಂಥ ಮಜ ಗೊತ್ತ’’ ವರ್ಣಿಸಿದಳು ವಿನುತ.
“ನಾನೂ ಮನೆಯಲ್ಲಿ ನನಗೆ ಬೇಕಾದಂತೆ ಇರುತ್ತೇನೆ. ನಮ್ಮಮ್ಮನೂ ಏನೂ ಹೇಳುವುದಿಲ್ಲ’’ ವಿನುತಳ ಹೇಳಿಕೆಗೆ ದನಿಗೂಡಿಸಿದಳು ರೇವತಿ. ರೇಖಾ ಮಾತ್ರ ಏನೂ ಮಾತಾಡಲಿಲ್ಲ. ಇವರ ಮಾತುಗಳನ್ನು ಕೇಳುತ್ತ ಸುಮ್ಮನೆ ನಿಂತಿದ್ದಳು.
ನನ್ನ ಸ್ನೇಹಿತೆಯರ ಅಮ್ಮಂದಿರು ಎಷ್ಟು ಒಳ್ಳೆಯವರು. ನನ್ನಮ್ಮನೋ ದಿನಾ ಉಪದೇಶ ಕೊಟ್ಟೂ ಕೊಟ್ಟೂ ಬೇಸರ ತರಿಸುತ್ತಾಳೆ. ಮಜವಾಗಿ ಇರಲೇ ಸಾಧ್ಯವಿಲ್ಲ. ನನ್ನ ಕೆಲಸವನ್ನು ಅಮ್ಮನೇ ಮಾಡಿ, ನನಗೆ ಅಷ್ಟು ಉಪಕಾರ ಮಾಡುವುದಿಲ್ಲ. ಎಲ್ಲವನ್ನೂ ನನ್ನ ಕೈಯಲ್ಲೇ ಮಾಡಿಸುತ್ತಾಳೆ. ನಾನು ಉಂಡ ತಟ್ಟೆ ನಾನೇ ತೊಳೆಯಬೇಕು. `ನಿನ್ನ ಕೆಲಸ ನೀನೇ ಮಾಡಬೇಕು. ಈಗಲೇ ನೀನು ನಿನ್ನ ಕೆಲಸ ಮಾಡಲು ಕಲಿತರೆ ಮುಂದೆ ನಿನಗೇ ಒಳ್ಳೆಯದು. ಅವರವರ ಕಾರ್ಯ ಅವರವರೇ ಮಾಡಬೇಕು’ ಎಂಬ ಉಪದೇಶಾಮೃತವನ್ನು ಎಷ್ಟು ಬೇಕಾದರೂ ಕೊಡುತ್ತಾಳೆ. ಎಂದು ಯೋಚಿಸುತ್ತ ಬಂದ ರಜನಿ ಮನೆಯೊಳಗೆ ಕಾಲಿಡುತ್ತಿದ್ದಂತೆಯೇ, “ಅಮ್ಮ ಇವತ್ತೇನು ತಿಂಡಿ?’’  ಎಂಬ ಪ್ರಶ್ನೆ ಎಸೆದಳು.
“ದೋಸೆ ಹಾಗೂ ಪಲ್ಯ’’ ಎಂದಳು ಸುಹಾಸಿನಿ.
“ಥೂ. ದಿನಾ ಅದೇ ತಿಂಡಿ. ನೂಡಲ್ಸ್, ಶ್ಯಾವಿಗೆ, ಪೂರಿ ಎಂದು ದಿನಕ್ಕೊಂದು ತಿಂಡಿ ಮಾಡಿದರೇನು ನಿನಗೆ. ದೋಸೆ, ಇಡ್ಲಿ, ಉಪ್ಪಿಟ್ಟು, ಅವಲಕ್ಕಿ ಇಷ್ಟೇ ನಿನಗೆ ಮಾಡಲು ಬರುವುದು. ನನ್ನ ಸ್ನೇಹಿತರೆಲ್ಲ ಎಂತೆಂಥ ತಿಂಡಿ ತರುತ್ತಾರೆ ಗೊತ್ತ?’’ ದುಮುಗುಟ್ಟುತ್ತ ಕೈಕಾಲು ತೊಳೆಯಲು ನಡೆದಳು ರಜನಿ. ಕೈಕಾಲು ತೊಳೆದು ಬಂದು ಥೂ ಎಂದದ್ದನ್ನೇ ಅಚ್ಚುಕಟ್ಟಾಗಿ ಆರು ದೋಸೆಯನ್ನು ಪಲ್ಯದೊಂದಿಗೆ ಪಟ್ಟಾಗಿ ಹೊಡೆದಳು.
“ಬೇಗ ತಿಂಡಿ ತಿಂದು ನಿನ್ನ ಬುತ್ತಿ ತೊಳೆದು, ಆಮೇಲೆ ಸ್ವಲ್ಪ ಆಟವಾಡಿ ಓದಲು ಬರೆಯಲು ಕುಳಿತುಕೊ. ಸುಮ್ಮನೆ ಕಾಲಹರಣ ಮಾಡಬೇಡ . . . . .’’  ಎಂದು ಸುಹಾಸಿನಿ ಹೇಳುತ್ತಿದ್ದಂತೆ ರಜನಿ ಕೋಪದಿಂದ ಬುಸುಗುಟ್ಟುತ್ತ, “ಸಾಕು ನಿಲ್ಸು ನಿನ್ನ ಉಪದೇಶವನ್ನು. ನಿನಗೆ ಗೊತ್ತಿರುವುದು ಇದೇ ಮಾತು ಮಾತ್ರ. ಕೇಳಿ ಕೇಳಿ ಸಾಕಾಗಿದೆ. ಈ ಮಾತುಗಳನ್ನು ಒಂದು ಟೇಪ್ ಮಾಡಿ ಇಟ್ಟುಕೊ. ಅದನ್ನು ನಾನು ಬಂದ ಕೂಡಲೆ ಹಾಕು.’’
ರಜನಿಯ ಅಹಂಕಾರದ ಮಾತು ಕೇಳಿದ ಸುಹಾಸಿನಿಗೂ ಸಿಟ್ಟು ಬಂತು. ಉಪದೇಶ ಇನ್ನೂ ಜಾಸ್ತಿ ಮಾಡಿದಳು. ಇದರಿಂದ ಕುಪಿತಗೊಂಡು ರಜನಿ ಎರಡೂ ಕಿವಿ ಮುಚ್ಚಿಕೊಳ್ಳುತ್ತ ಅಲ್ಲಿಂದ ಎದ್ದು ತನ್ನ ಕೋಣೆಗೆ ಹೋಗಿ ದಡಾರನೆ ಬಾಗಿಲು ಹಾಕಿಕೊಂಡಳು. ಬಾಗಿಲು ಮುರಿಯದೆ ಇದ್ದದ್ದು ಪುಣ್ಯ.
ಈಗ ಅವಳನ್ನು ಮಾತಾಡಿಸುವಂತಿಲ್ಲ. ಕೋಪದಲ್ಲಿ ಇರುವಾಗ ಎಷ್ಟೇ ನಯವಾಗಿ ಬುದ್ಧಿ ಮಾತು ಹೇಳಿದರೂ ಅದು ಉರಿಯುವ ಬೆಂಕಿಗೆ ತುಪ್ಪ ಸುರಿದಂತಾದೀತೇ ವಿನಾ ತಲೆಯೊಳಗೆ ಅಚ್ಚೊತ್ತಲು ಸಾಧ್ಯವಿಲ್ಲ. `ಹಸಿದಾಗ ಉಪದೇಶ ಸಲ್ಲದು’ ಎಂಬಂತೆ ಸಿಟ್ಟುಗೊಂಡಾಗ ಬುದ್ಧಿವಾದ ಹಿಡಿಸದು! ಆಗ ಮಾತಾಡದೆ ಇರುವುದೆ ಕ್ಷೇಮ. ಈಗಿನ ಮಕ್ಕಳ ಮನಸ್ಸೇ ಅರ್ಥವಾಗುವುದಿಲ್ಲ. ಇವರಿಗೆ ಏನೂ ಹೇಳಲೂ ಸಾಧ್ಯವಿಲ್ಲ. ಬುದ್ಧಿಮಾತು ಹೇಳಿದರೆ ಸಿಟ್ಟುಗೊಳ್ಳುತ್ತಾರೆ. ಹೇಳುವುದು ಅವರ ಒಳ್ಳೆಯದಕ್ಕೆ ಎಂದು ಗೊತ್ತಾಗುವುದಿಲ್ಲ. ಮಾತಾಡದೆ ಇರೋಣ ಎಂದರೆ ಅದೂ ಸಾಧ್ಯವಿಲ್ಲ. ನಾನು ಸಿಟ್ಟುಗೊಳ್ಳಬಾರದು, ಏನೂ ಬುದ್ಧಿ ಹೇಳಬಾರದು ಎಂದು ಆಲೋಚಿಸುತ್ತೇನೆ. ಆದರೆ ಅವರು ಸಿಟ್ಟುಗೊಳ್ಳುತ್ತಾರೆಂದು ಏನೂ ಹೇಳದೆ ಸುಮ್ಮನಿರಲು ಸಾಧ್ಯವಿಲ್ಲ. ಮಕ್ಕಳು ತಪ್ಪು ಮಾಡಿದಾಗ ಅವರನ್ನು ತಿದ್ದುವುದು ತಾಯಿಯಾದವಳ ಕರ್ತವ್ಯ. ಮಕ್ಕಳ ೧೧-೧೬ರ ನಡುವಿನ ವಯಸ್ಸು ಅಂತಾದ್ದೆ. ಏನು ಹೇಳಿದರೂ  ಸಿಟ್ಟು, ಉದ್ವೇಗಗೊಳ್ಳುವ ಸ್ವಭಾವ, ಸೂಕ್ಷ್ಮ ಮನಸ್ಸು. ಅವರು ಸಿಟ್ಟುಗೊಂಡರೂ ತೊಂದರೆ ಇಲ್ಲ, ಅವರನ್ನು ಸರಿಯಾದ ದಾರಿಯಲ್ಲಿ ನಡೆಸಲು ನಿರಂತರ ಮಾರ್ಗದರ್ಶನ ಮಾಡುತ್ತಲೇ ಇರಬೇಕು. ಅವರು ನಡೆದದ್ದೇ ದಾರಿ ಎಂದು ಏನೂ ಹೇಳದೆ ಸುಮ್ಮನಿರಬಾರದು. ಈಗ ಉಪದೇಶ ಕೊಟ್ಟದ್ದಕ್ಕೆ ಮಕ್ಕಳು ಸಿಟ್ಟುಗೊಂಡರೂ ಮುಂದೆ ಒಳ್ಳೆಯ ಫಲ ಸಿಗುವುದು ಖಂಡಿತ. ಮಕ್ಕಳು ಅಸಡ್ಡೆಯಿಂದ ಎದುರುತ್ತರ ಕೊಡುವಾಗ ಎಷ್ಟು ಸಿಟ್ಟುಗೊಳ್ಳಬಾರದೆಂದುಕೊಂಡರೂ ಕೋಪ ತನ್ನಿಂದ ತಾನೇ ಏರಿರುತ್ತದೆ ಎಂದು ಸುಹಾಸಿನಿ ಸುಮ್ಮನಾದಳು.
****
ಐದೂ ಜನ ಸ್ನೇಹಿತೆಯರೂ ಏಳನೇ ಇಯತ್ತೆ ದಾಟಿ ಎಂಟನೆಗೆ ಕಾಲಿಟ್ಟರು. ಪ್ರೌಢಶಾಲೆ. ವಾತಾವರಣ ಅದೇ ಇದ್ದರೂ ಶಿಕ್ಷಕ ಶಿಕ್ಷಕಿಯರು ಬೇರೆ ಬೇರೆ. ಹಾಗೆ ಹೊಸ ಮಕ್ಕಳೂ ಸೇರಿದ್ದರು. ಹೊಸ ಸ್ನೇಹಿತೆಯರ ಸಂಗ, ಗುರುಗಳ ಪಾಠ ಪ್ರವಚನಕ್ಕೆ ಒಗ್ಗಿಕೊಳ್ಳಲು ತಿಂಗಳೇ ಹಿಡಿಯಿತು. ಹೊಸದಾಗಿ ಸೇರಿದ್ದ ಕರುಣ ಇವರ ಬಳಗಕ್ಕೆ ಸೇರ್ಪಡೆಗೊಂಡಳು.
ಎಂದಿನಂತೆ ಮಧ್ಯಾಹ್ನ ಊಟಕ್ಕೆ ಬುತ್ತಿ ಬಿಚ್ಚಿದಾಗ ನಮ್ಮಮ್ಮ ಹಾಗೆ, ಹೀಗೆ ಎಂದು ಅವರವರ ಅಮ್ಮಂದಿರ ಬಗ್ಗೆ ಟೀಕೆ ಟಿಪ್ಪಣಿ ಸಾಗಿತು.
“ಕರುಣ ನಿಮ್ಮಮ್ಮನ ಬಗ್ಗೆ ಹೇಳು. ಬಹಳ ಸ್ಟ್ರಿಕ್ಟಾ ಹೇಗೆ?’’  ಕುತೂಹಲಗೊಂಡು ಕೇಳಿದರು ಗೆಳತಿಯರು.
“ಹಾಗೇನು ಇಲ್ಲ’’  ಚುಟುಕಾಗಿ ಉತ್ತರ ಕೊಟ್ಟಳು ಕರುಣ.
ರೇಖಾ ತನ್ನ ಸ್ನೇಹಿತೆಯರನ್ನು ವ್ಯಥೆಯಿಂದ ನೋಡಿದಳು. ಸ್ನೇಹಿತೆಯರು ಅವರವರ ಅಮ್ಮನ ಬಗ್ಗೆ ದೂರು ಹೇಳುವುದು ಅವಳಿಗೆ ಸ್ವಲ್ಪವೂ ಹಿಡಿಸುವುದಿಲ್ಲ. ಅವಳು ಅಮ್ಮನನ್ನು ಗೆಳತಿಯಂತೆ, ಗುರುವಂತೆ, ತಾಯಿಯಂತೆ ನೋಡುತ್ತಿದ್ದಳು. ಅಮ್ಮ ಹೇಳುವುದೆಲ್ಲ ತನ್ನ ಒಳಿತಿಗೇ ಎಂದು ತಿಳಿದುಕೊಂಡಿದ್ದಳು. ಆದರೂ ಗೆಳತಿಯರಿಗೆ ಏನೂ ಹೇಳದೆ ಸುಮ್ಮನಿದ್ದಳು. ಅವಳದು ಮಾತು ಬಹಳ ಕಡಿಮೆ.
* * *
ರಜನಿ ಯಾವುದೋ ಸ್ಪರ್ಧೆಗೆ ಭಾಗವಹಿಸುವ ಸಲುವಾಗಿ ಆ ದಿನ ಶಾಲೆಗೆ ರಜೆ ಹಾಕಿದ್ದಳು. ಆ ದಿವಸ ಏನೇನು ಪಾಠ ಮಾಡಿದ್ದರು, ಏನು ನೋಟ್ಸ್ ಕೊಟ್ಟಿದ್ದರು ಎಂದು ತಿಳಿಯಲು ವಿನುತಳ ಮನೆಗೆ ಹೋಗಿ ಕರೆಗಂಟೆ ಒತ್ತಿದಳು.
“ಅಮ್ಮ ಯಾರು ಬಂದಿದ್ದಾರೆ ನೋಡು’’ ದೂರದರ್ಶನದ ಮುಂದೆ ಪ್ರತಿಷ್ಠಿತಳಾಗಿ ಕುಳಿತ ವಿನುತ ಅಮ್ಮನಿಗೆ ಆಜ್ಞೆ ಇತ್ತಳು. “ಓ! ರಜನಿ, ಬಾ ಒಳಗೆ’’ ಆದರದಿಂದ ಆಹ್ವಾನಿಸಿದಳು ವಿನುತಳ ಅಮ್ಮ ಹೇಮ.
“ಏನೇ ರಜನಿ ಇಂದು ಶಾಲೆಗೆ ಚಕ್ಕರ್ ಹೊಡೆದೆ?’’ ಕುಳಿತಲ್ಲಿಂದಲೇ ವಿಚಾರಿಸಿದಳು ವಿನುತ.
ರಜನಿ ಒಳ ಬಂದು ಕೂರುತ್ತ, “ಚಿತ್ರಕಲಾಸ್ಪರ್ಧೆ ಇತ್ತು. ಅದಕ್ಕೆ ರಜ ಮಾಡಬೇಕಾಯಿತು. ಅದಿರಲಿ, ಇಂದು ಏನು ಪಾಠ ಮಾಡಿದ್ದಾರೆ? ಹೋಮ್‌ವರ್ಕ್ ಕೊಟ್ಟಿದ್ದಾರ?’’
“ಹು, ಕಣೆ. ತುಂಬ ಬರೆಯಲು ಕೊಟ್ಟಿದ್ದಾರೆ. ಏನೇನೊ ಪಾಠ ಮಾಡಿದರು. ನನಗೆ ತಲೆನೋವಿತ್ತು. ನಾನು ಮಲಗಿದ್ದೆ’’ ನಿರುತ್ಸಾಹದಿಂದ ಉತ್ತರಿಸಿದಳು ವಿನುತ.
ಹೇಮ ಕೊಟ್ಟ ಚಹಾ ಕುಡಿದು ರಜನಿ ಮನೆಗೆ ಬಂದವಳೆ, “ಅಮ್ಮ, ಆ ವಿನುತಳನ್ನು ನೋಡಿ ಸಾಕಾಯಿತು ನನಗೆ. ಅವಳಿಗೆ ಯಾವ ಪಾಠ ಮಾಡಿದ್ದಾರೆ ಎಂದು ಗೊತ್ತಿಲ್ಲ. ನಾನು ಅವಳ ಮನೆಗೆ ಹೋದಾಗ ಟಿ.ವಿ. ಎದುರು ಕಾಲು ಮೇಲೆ ಕಾಲು ಹಾಕಿ ಕುಳಿತಿದ್ದಳು. ಅಲ್ಲೇ ನೋಟ್ಸ್ ಬರೆಯುತ್ತಿದ್ದಳು. ಕರೆಗಂಟೆ ಸದ್ದಿಗೂ ಎದ್ದು ಬರಲಿಲ್ಲ. ಹೇಮ ಆಂಟಿ ಎಲ್ಲ ಕೆಲಸಬಿಟ್ಟು ಬಂದು ಬಾಗಿಲು ತೆರೆದರು. ನನಗೆ ನೋಟ್ಸ್ ಕೊಡಲೂ ಆಂಟಿಗೇ ಹೇಳಿದಳು. ಆಂಟಿ ಏನೂ ಹೇಳದೆ ಅವಳು ಹೇಳಿದ್ದನ್ನೆಲ್ಲ ತಂದು ಕೊಟ್ಟರು. ಅವಳು ಕುಳಿತಲ್ಲಿಂದ ಅಲ್ಲಾಡಲಿಲ್ಲ. ಛೆ! ಹಾಗೊಂದು ಅಮ್ಮನಲ್ಲಿ ಕೆಲಸ ಮಾಡಿಸುತ್ತಾಳಲ್ಲ. ಅವಳನ್ನು ನೋಡಿ ಹೀನಾಯವೆನಿಸಿತು. ಕೆಲವು ಮಕ್ಕಳನ್ನು, ಟೀಚರ್ಸನ್ನು ಆಡಿಕೊಂಡು ನಗುತ್ತಿದ್ದಳು. ಅವಳಮ್ಮ ಏನೂ ಹೇಳದೆ ಹೂಗುಟ್ಟುತ್ತಿದ್ದರು. ಇನ್ನು ಏನಿದ್ದರೂ ನಾನು ಅವಳ ಮನೆಗೆ ಹೋಗುವುದಿಲ್ಲ. ಏನೇನು ಬರೆಯಲು ಕೊಟ್ಟಿದ್ದಾರೆ ಎಂದು ನನ್ನ ಸ್ನೇಹಿತೆ ಕರುಣಳಿಗೆ ದೂರವಾಣಿಸಿ ತಿಳಿದುಕೊಳ್ಳುತ್ತೇನೆ’’ ಎಂದು ಅಲ್ಲಿ ನಡೆದ ಘಟನೆಗಳನ್ನು ಚಾಚೂ ತಪ್ಪದೆ ವಿವರಿಸಿದಳು.
“ನೋಡಿದೆಯಾ, ನಾನು ನಿನಗೆ ಏಕೆ ಬುದ್ಧಿ ಹೇಳುತ್ತೇನೆಂದು ಈಗಲಾದರೂ ಅರ್ಥವಾಯಿತೆ? ವಿನುತ ಮಾಡಿದ್ದು ನಿನಗೆ ಸರಿ ಎಂದೆನಿಸಲಿಲ್ಲ. ಅಸಹ್ಯವಾಯಿತು ತಾನೆ. ಅದಕ್ಕೆ ನಿನ್ನ ಕೆಲಸ ನೀನು ಮಾಡಿದರೆ ಚಂದ ಎಂದು ನಾನು ಹೇಳುವುದು’’ ಎಂದು ಸುಹಾಸಿನಿ ಹೇಳಿದ್ದಕ್ಕೆ “ತೂ ಹೋಗಮ್ಮ ನೀನು’’ ಸೋಲೊಪ್ಪಿಕೊಳ್ಳಲು ಮನವಿಲ್ಲದೆ ಅರ್ಧಮನದಿಂದ ನುಡಿದು ಓಡಿದಳು ರಜನಿ.
ಮಾರನೆ ದಿನ ಶಾಲೆಯಲ್ಲಿ ಕರುಣ ರೇಖಾರಿಗೆ ವಿನುತಳ ಮನೆಯಲ್ಲಿ ನಡೆದ ಸಂಗತಿ ಅರುಹಿದಳು ರಜನಿ.
“ನೋಡು ರಜನಿ, ನಾನು ಹೀಗೆ ಹೇಳುತ್ತೇನೆಂದು ತಪ್ಪು ತಿಳಿದುಕೊಳ್ಳಬೇಡ. ನೀವೆಲ್ಲ ಮೊನ್ನೆ ನಿಮ್ಮ ನಿಮ್ಮ ಅಮ್ಮನ ಬಗ್ಗೆ ಆಡಿದ ಮಾತು ಕೇಳಿ ನನಗೆ ತುಂಬ ನೋವಾಯಿತು. ನಾವು ತಪ್ಪು ಮಾಡಿದಾಗ ಮಾತ್ರ ಅಮ್ಮ ಬುದ್ಧಿ ಹೇಳುತ್ತಾಳೆ ಇಲ್ಲವೆ ಹೊಡೆಯುತ್ತಾಳೆ. ಹೌದು ತಾನೆ? ನೀನು ಏನಾದರೂ ಒಳ್ಳೆಯ ಕೆಲಸ ಮಾಡಿದಾಗ ಅಮ್ಮ ನಿನ್ನನ್ನು ದಂಡಿಸುವುದಾಗಲಿ, ಇಲ್ಲವೆ ಬೈಯುವುದಾಗಲಿ ಮಾಡಿದ್ದಾಳೆಯೆ? ನೀನು ಸರಿದಾರಿಯಲ್ಲಿ ನಡೆಯಬೇಕು ಎಂದು ಉಪದೇಶಿಸುತ್ತಾಳೆ. ಅದು ತಪ್ಪೆ?  ತಾಯಿ ಏನೂ ಹೇಳಲಿಲ್ಲ ಎಂದು ನೀನು ವಿನುತಳ ಅಮ್ಮನ ಬಗ್ಗೆ ಹೇಳಿದೆ. ಅವಳು ಏನು ಮಾಡಿದರೂ ಚಂದ ಎಂದು ಅವಳಮ್ಮ ಸುಮ್ಮನಿದ್ದದ್ದು ನಿನಗೆ ಸರಿ ಕಾಣಲಿಲ್ಲ. ಹಾಗೆ ನಾವು ತಪ್ಪು ಮಾಡಿದಾಗ ಅಮ್ಮ ಬೈಯಬೇಕು. ಆಗ ನಾವು ಒಳ್ಳೆಯ ಮಾರ್ಗದಲ್ಲಿ ನಡೆಯುತ್ತೇವೆ. ಮೊದಲು ನಾನೂ ಕೂಡ ನಿಮ್ಮಂತೆಯೇ ಅಮ್ಮನ ಬಗ್ಗೆ ಹೇಳುತ್ತಿದ್ದೆ. ದಿನಾ ಅಮ್ಮನೊಡನೆ ಜಗಳಾಡುತ್ತಿದ್ದೆ. ಅವಳು ಹೇಳುವುದೆಲ್ಲ ನನಗೆ ಕಿರಿಪಿರಿ ಎನಿಸುತ್ತಿತ್ತು. ಉಡಾಫೆಯಿಂದಿರುತ್ತಿದ್ದೆ. ಅಮ್ಮ ಹೇಳಿದ್ದನ್ನೊಂದೂ ಕೇಳುತ್ತಲೇ ಇರಲಿಲ್ಲ. ಅಮ್ಮ ಹತ್ತಿರ ಇರುವಾಗ ನಮಗೆ ಅವಳ ಕಿಮ್ಮತ್ತು ಗೊತ್ತಾಗುವುದಿಲ್ಲ. ಅಮ್ಮ ಎಂಬ ಎರಡಕ್ಷರದ ಮೋಡಿಯಲಿ ನಾವು ಸುಖವಾಗಿರುತ್ತೇವೆ. ಅಮ್ಮ ಎಂದೊಡೆ ಸ್ವರ್ಗ ಎಂಬುದು ಖಂಡಿತ ಸುಳ್ಳಲ್ಲ” ಎಂದು ಕರುಣ ಹಿರಿಯಳಂತೆ ಗಂಭೀರಭಾವದಿಂದ ನಿಡುಸುಯ್ದಳು.
“ಅಮ್ಮ ಹತ್ತಿರ ಇದ್ದಾಗ ಅವಳ ಮಹತ್ವ ಏನೆಂದು ಗೊತ್ತಾಗುವುದಿಲ್ಲ ಎಂದೆಯಲ್ಲ. ಹಾಗಾದರೆ ನಿಮ್ಮಮ್ಮ ಈಗ ಇಲ್ಲಿ ಇಲ್ಲವೆ?’’ ಕುತೂಹಲಗೊಂಡು ಕೇಳಿದಳು ರಜನಿ.
“ಇಲ್ಲ ಕಣೆ. ಅದೊಂದು ದೊಡ್ಡ ಕತೆಯೇ ನಡೆದಿದೆ ನಮ್ಮಲ್ಲಿ. ಅಮ್ಮ ಎರಡು ಒಳ್ಳೆಯ ಮಾತು ಹೇಳಿದರೂ ನನಗೆ ಸಹನೆಯಾಗುತ್ತಿರಲಿಲ್ಲ. ನಾನು ಕೇಳುತ್ತಲೇ ಇರಲಿಲ್ಲ. ಆಗ ಅಮ್ಮನೂ ಸಿಟ್ಟುಗೊಂಡು ಧ್ವನಿ ಏರಿಸುತ್ತಿದ್ದಳು. ನಾನು ಬೇಸರಗೊಂಡು ಅಮ್ಮನೊಡನೆ ಸಿಟ್ಟುಗೊಂಡು ಅಳುತ್ತಿದ್ದೆ. ಅಮ್ಮ ನನ್ನನ್ನು ಸುಮ್ಮನೆ ಬೈಯುವುದು ಎಂದನಿಸತೊಡಗಿತು. ನನ್ನ ಕೆಲಸ ನಾನು ಮಾಡುತ್ತಲೇ ಇರಲಿಲ್ಲ.  ಬಟ್ಟೆ ಪುಸ್ತಕ ಎಲ್ಲೆಂದರಲ್ಲಿ ಹಾಕಿ ಹರಗಿ ಹಾಗೇ ಇಟ್ಟು ಶಾಲೆಗೆ ಹೋಗುತ್ತಿದ್ದೆ. `ನಿನ್ನ ಸಾಮಾನು ಸರಿ ಇಟ್ಟುಕೊ, ಕೆಲಸದಲ್ಲಿ ಒತ್ತರೆ, ಶಿಸ್ತು ಕಲಿ’ ಎಂದು ಅಮ್ಮ ನನಗೆ ಹೇಳುತ್ತಲೇ ಇರುತ್ತಿದ್ದಳು. ಅದನ್ನು ನಾನು ಕಿವಿಮೇಲೆ ಹಾಕಿಕೊಳ್ಳುತ್ತಿರಲಿಲ್ಲ. ಆಮೇಲೆ ಅಮ್ಮ ಬೈದುಕೊಂಡು ಒಂದಿಗೇ ಉಪದೇಶಾಮೃತ ಉದುರಿಸಿ ನನ್ನ ಕೋಣೆ ಅಚ್ಚುಕಟ್ಟುಗೊಳಿಸುತ್ತಿದ್ದಳು! ಅಮ್ಮ ಹೊರಹೋದಕೂಡಲೇ ದಡ್ಡೆಂದು ಬಾಗಿಲು ಹಾಕಿಕೊಳ್ಳುತ್ತಿದ್ದೆ. ಈ ಅಮ್ಮಂದಿರು ಇರುವುದೇ ಬುದ್ಧಿ ಹೇಳಲು ಎಂದು ಗೆಳತಿಯರಲ್ಲಿ ಹೇಳುತ್ತಿದ್ದೆ.
ಅಮ್ಮ ಅಪ್ಪ ಇಬ್ಬರಿಗೂ ಬ್ಯಾಂಕಿನಲ್ಲಿ ಕೆಲಸ. ಈ ವರ್ಷ ಅಮ್ಮ ಅಪ್ಪನಿಗೆ ಉತ್ತರಭಾರತಕ್ಕೆ ವರ್ಗವಾಯಿತು. ನಾನು ಅಲ್ಲಿಗೆ ಬರುವುದಿಲ್ಲವೆಂದು ಹಠ ಹಿಡಿದೆ. ಅಮ್ಮ ಅತ್ತಳು, ಕೊರಗಿದಳು, ಅನುನಯಿಸಿ ಹೇಳಿದಳು. ಆದರೂ ನಾನು ಹಠ ಬಿಡಲಿಲ್ಲ. ಅಮ್ಮ ಅಪ್ಪ ಬೇರೆ ದಾರಿ ತೋರದೆ ನನ್ನನ್ನು ಇಲ್ಲಿ ಅಜ್ಜಿ ಮನೆಯಲ್ಲಿ ಬಿಟ್ಟು ಈ ಶಾಲೆಗೆ ಸೇರಿಸಿ ಉತ್ತರಭಾರತಕ್ಕೆ ಪ್ರಯಾಣ ಬೆಳೆಸಿದರು. ಒಂದು ತಿಂಗಳು ನಾನು ಅಮ್ಮನ ಅಂಕೆಯಿಲ್ಲದೆ ನನಗೆ ಬೇಕಾದಂತೆ ಬಹಳ ಸುಖವಾಗಿಯೇ ಇದ್ದೆ. ಬರಬರುತ್ತ ಅಮ್ಮ ಅಪ್ಪ ಇಲ್ಲದೆ ಪಿಚ್ಚೆನಿಸತೊಡಗಿತು. ಅಮ್ಮ ಪದೇ ಪದೇ ಹೇಳುತ್ತಿದ್ದ ಉಪದೇಶಗಳೆಲ್ಲ ನೆನಪಾಗಿ ಅವು ನುಡಿಮುತ್ತುಗಳಂತೆ ಭಾಸವಾಯಿತು. ಅಮ್ಮ ಜೊತೆಯಲ್ಲಿಲ್ಲದಿದ್ದರೆ ಬಾಳು ಕಷ್ಟ ಎನಿಸಿತು. ಅಜ್ಜಿ ಅಜ್ಜಿಯೇ ತಾಯಿ ಆಗಲು ಸಾಧ್ಯವಿಲ್ಲವಲ್ಲ. ಈಗಾಗಲೆ ಅಮ್ಮನನ್ನು ಬಿಟ್ಟು ಇರುವುದು ೨ ತಿಂಗಳ ಮೇಲಾಯಿತು. ಇನ್ನು ಎಷ್ಟು ದಿನ ಎಂದು ಲೆಕ್ಕ ಹಾಕುತ್ತಿದ್ದೇನೆ. ಆದಷ್ಟು ಬೇಗ ಅಮ್ಮನ ಬಳಿ ಹೋಗಬೇಕು ಎಂದು ಕಾತುರಳಾಗಿದ್ದೇನೆ. ಕ್ಷಮೆ ಕೇಳಿ ಅಮ್ಮನಿಗೆ ಕಾಗದ ಬರೆದೆ. ಅದಕ್ಕೆ ಅಮ್ಮ ನೊಂದುಕೊಂಡು ಈ ರೀತಿ ಉತ್ತರಿಸಿದ್ದಳು: “ಮಕ್ಕಳು ತಿಳಿಯದೆ ತಪ್ಪು ಮಾಡುತ್ತಾರೆ. ನೀನು ಪಶ್ಚಾತ್ತಾಪ ಪಟ್ಟಿದ್ದೀಯಲ್ಲ. ಅದೇ ಕ್ಷಮೆ ನಿನಗೆ. ಬರುವ ವರ್ಷ ನಾವೇ ಅಲ್ಲಿಗೆ ವರ್ಗ ಮಾಡಿಸಿಕೊಂಡು ಬರುತ್ತೇವೆ. ಒಂದು ವರ್ಷ ಸುಧಾರಿಸಿಕೊ. ಶಾಲೆಗೆ ರಜ ಬಂದಾಗ ಇಲ್ಲಿಗೆ ಬರುವಿಯಂತೆ’’ ಇತ್ಯಾದಿ ಸಾಂತ್ವಾನಿಸಿ ಬರೆದಿದ್ದಳು. ಅಮ್ಮ ಹೇಳುವುದು ನಮ್ಮ ಒಳ್ಳೆಯದಕ್ಕೆ ಎಂದು ಬಹಳ ತಡವಾಗಿ ನನಗೆ ಅರಿವಾಗಿದೆ. ತಿಳಿವು ಬಂದಾಗ ಅಮ್ಮನ ಬಳಿ ನಾನಿಲ್ಲ. ಹಾಗಾಗಿ ಅಮ್ಮನ ಬಗ್ಗೆ ಕೆಟ್ಟ ಮಾತು ಆಡಬೇಡ. ಅಮ್ಮ ನಮ್ಮನ್ನು ೯ ತಿಂಗಳು ಹೊತ್ತು ಸಾಕಿ ಸಲಹಿದವಳು. ನಾವು ಅಮ್ಮನಿಗೆ ಗೌರವ ಕೊಡಬೇಕು’’ ಕಣ್ಣೀರು ತುಂಬಿಕೊಳ್ಳುತ್ತ ಹೇಳಿದಳು ಕರುಣ.
“ಹೌದು ರಜನಿ. ಕರುಣ ಹೇಳಿದ್ದು ನಿಜ. ನನಗೂ ನೀವು ಮಾತಾಡುತ್ತಿದ್ದದ್ದು ಸರಿ ತೋರುತ್ತಿರಲಿಲ್ಲ. ಆದರೂ ನಾನು ಸುಮ್ಮನಿದ್ದೆ. ಅಮ್ಮ ಎಂದರೆ ಗೆಳತಿ ತಾಯಿ ಎಲ್ಲವೂ ಅವಳೇ. ಅಮ್ಮ ಏನು ಮಾಡಿದರೂ ಅದು ನಮ್ಮ ಒಳ್ಳೆಯದಕ್ಕೆ ಎಂದು ತಿಳಿಯಬೇಕು. ಅಮ್ಮನ ಬಗ್ಗೆ ಅಂಥ ಮಾತು ಆಡುವುದು ಮಹಾಪಾಪ’’ ಮೌನಪ್ರಿಯಳಾದ ರೇಖಾ ಪ್ರತಿಕ್ರಿಯಿಸಿದಳು.
“ನಾನು ಎಷ್ಟು ಹೀನಭಾವದಿಂದ ಅಮ್ಮನನ್ನು ಬೈದೆ ಅಲ್ಲವೆ? ಹೌದು. ನಾನು ಒಳ್ಳೆಯ ಕಾರ್ಯ ಮಾಡಿದಾಗಲೆಲ್ಲ ಅಮ್ಮ ಬೆನ್ನು ತಟ್ಟಿ ಪ್ರೋತ್ಸಾಹಿಸುತ್ತಿದ್ದಳು. ಅವಳು ಸಮಾಧಾನದಿಂದ ಹೇಳುವ ಮಾತನ್ನು ನಾನು ಕೇಳುತ್ತಲೇ ಇರಲಿಲ್ಲ. ಅದಕ್ಕೆ ಅಮ್ಮ ತಾಳ್ಮೆ ತಪ್ಪಿ ಸಿಟ್ಟುಗೊಳ್ಳುತ್ತಿದ್ದದ್ದು. ಈಗ ೨ ದಿನದಿಂದ ಅಮ್ಮ ನನ್ನಲ್ಲಿ ಮಾತೇ ಆಡುತ್ತಿಲ್ಲ. ಬುದ್ಧಿ ಹೇಳುತ್ತಲೂ ಇಲ್ಲ, ಬೈಯುತ್ತಲೂ ಇಲ್ಲ. `ನಿನಗೆ ನಾನು ಏನೂ ಹೇಳುವುದಿಲ್ಲ. ಹೇಳಿದರೆ ಕೇಳುವುದೂ ಇಲ್ಲ. ಬೇಕಾದಂತೆ ಇರು’ ಎಂದಿದ್ದಳು. ನೀನು ಹೇಳಿದ್ದು ಒಳ್ಳೆಯದಾಯಿತು ಕರುಣ. ನನ್ನ ತಪ್ಪನ್ನು ತಿದ್ದಿಕೊಂಡು ಅಮ್ಮನಲ್ಲಿ ಕ್ಷಮೆ ಕೇಳುತ್ತೇನೆ. ಇಂದಿನಿಂದ ನನ್ನ ಕೆಲಸ ನಾನೇ ಮಾಡಿಕೊಳ್ಳುತ್ತೇನೆ. ನಾನು ಮಾಡಿದ್ದ ತಪ್ಪನ್ನು ಎತ್ತಿ ತೋರಿಸಿದ್ದಕ್ಕೆ ಕೃತಜ್ಞತೆಗಳು’’ ರಜನಿ ಪಶ್ಚಾತ್ತಾಪದಿಂದ ನುಡಿದಳು.

ಮಂಜುವಾಣಿ ೨೦೦೯ ಮಾರ್ಚ್ (ಎಪ್ರಿಲ್)

Read Full Post »

ಕನಸುಕಂಗಳ ಚುರುಕುನಡಿಗೆಯ ೧೦-೧೧ರ ಬಾಲೆ ನನ್ನತ್ತ ಕೈಬೀಸಿ ನಕ್ಕು, `ಅಕ್ಕ, ೪ ಒಣಗಿದ ಎಲೆ ಬೇಕಾಗಿತ್ತು ಕೊಂಡೋಗಲೇ’ ಎಂದು ಕೇಳಿದಳು. ನಾನು ಸಮ್ಮತಿ ಇತ್ತದ್ದೇ ಅಂಗಳದಿಂದ ೪-೫ ಎಲೆ ಆರಿಸಿ, `ಇದು ಪಾವನಿಗೆ ಪ್ರಾಜೆಕ್ಟ್ ವರ್ಕ್‌ಗೆ ಬೇಕಂತೆ. ಇವತ್ತೇ ಇದನ್ನು ಅಂಟಿಸಿ ಶಾಲೆಯಲ್ಲಿ ತೋರಿಸಬೇಕಂತೆ. ಅವಳು ಇಂದು ಬೆಳಗ್ಗೆ ಹೇಳಿದ್ದು. ಹೊತ್ತಾಯಿತು’ ಎಂದು ಓಡಿದಳು.
ಅವಳೇ ಕಮಲ. ಒಂದು ದೊಡ್ಡ ಮನೆಯಲ್ಲಿ ಕೆಲಸಕ್ಕಿದ್ದಾಳೆ. ಮಕ್ಕಳಿಂದ ಹಿಡಿದು ದೊಡ್ಡವರ ವರೆಗೆ ಆ ಮನೆಯಲ್ಲಿ ಎಲ್ಲರಿಗೂ ಅವಳ ಸೇವೆ ಬೇಕು. ದಿನದಲ್ಲಿ ಕಡಿಮೆ ಅಂದರೂ ೨೦ ಸಲ ಅವಳ ಹೆಸರು ಕರೆದು ಅವಳಿಗೆ ಕೆಲಸ ಹಚ್ಚುತ್ತಾರೆ. ಅವಳೊ ಅತ್ತ ಇತ್ತ ನಲಿಯುತ್ತ ಉತ್ಸಾಹದಿಂದ ಪುಟಿದು ಏನೂ ಬೇಸರವಿಲ್ಲದೆ ಕೆಲಸ ಮಾಡುತ್ತಾಳೆ. ಮಕ್ಕಳೊಂದಿಗೆ ನಲಿಯುತ್ತಾಳೆ, ಆಡುತ್ತಾಳೆ. ಆಗ ಕೆಲಸ ಹೇಳಿದರೆ ಕೂಡಲೇ ಆಟ ಬಿಟ್ಟು ಕರ್ತವ್ಯಕ್ಕೆ ಹಾಜರಾಗುತ್ತಾಳೆ.
*****
ಮಾನ್ಯರಿಗೆ ವಂದನೆಗಳು
ನೋಡಿ ಸಾರ್ ನಿಮ್ಮ ಗುರುತಿನವರು ದೊಡ್ಡಮನುಷ್ಯರೆನ್ನಿಸಿಕೊಂಡ ಇಂಥವರು ಅವರ ಮನೆಯಲ್ಲಿ ಸಣ್ಣ ಹುಡುಗಿಯನ್ನು ಕೆಲಸಕ್ಕೆ ಇಟ್ಟುಕೊಂಡಿದ್ದಾರೆ. ಇದು ನ್ಯಾಯವೆ? ಒಂದುಪಕ್ಷದಲ್ಲಿ ಕೆಲ್ಸಕ್ಕೆ ಇಟ್ಟುಕೊಂಡರೂ ಅವರು ಅವಳನ್ನು ಶಾಲಗೆ ಕಳುಹಿಸಬೇಕಿತ್ತು. ಶಾಲೆಗೆ ಹೋಗಿಕೊಂಡು ಅವಳು ಮನೆ ಕೆಲಸ ಅಷ್ಟೊ ಇಷ್ಟು ಮಾಡುತ್ತಿದ್ದಳು. ೧೪ ವರ್ಷದ ಕೆಳಗಿನ ಮಕ್ಕಳನ್ನು ಕೆಲಸಕ್ಕೆ ಇಟ್ಟುಕೊಳ್ಳುವುದು ಅಪರಾಧವಲ್ಲವೆ? ಕೆಲಸಕ್ಕೆ ಇಟ್ಟುಕೊಂಡವರು ಶಿಕ್ಷೆಗೆ ಅರ್ಹರಲ್ಲವೆ? ನೀವಾದರೂ ಅವರಿಗೆ ತಿಳಿ ಹೇಳಿ. ಅವರ ಮನೆ ಹತ್ತಿರವೇ ಸರ್ಕಾರಿ ಶಾಲೆ ಇದೆ. ಅಲ್ಲಿಗೆ ಕಳುಹಿಸಲಿ. ಆ ಮಗು ಸಂತೋಷದಿಂದ ಶಾಲೆಗೆ ಹೋಗಿ ಬರಲಿ. ನೀವು ಈ ಪತ್ರ ಓದಿದ ಕೂಡಲೇ ನಿಮ್ಮ ಆ ಸ್ನೇಹಿತರಿಗೆ ಹೇಳಿ  ಮಗುವನ್ನು ಶಾಲೆಗೆ ಸೇರಿಸುವ ವ್ಯವಸ್ಥೆ ಮಾಡುವಿರಿ ಎಂದು ನಂಬಿದ್ದೇನೆ.
ಇತಿ ತಮ್ಮ ವಿಶ್ವಾಸಿ.
ಆ ಮಗುವಿನ ಹಿತಾಕಾಂಕ್ಷಿ
*********
“ನೋಡಿ ಅವ್ವಾ, ಆ ಕಮಲಳನ್ನು ನೋಡಿದರೆ ಹೊಟ್ಟೆ ಚುರುಕ್ ಎನ್ನುತ್ತದೆ. ಅಂಥ ಮಗಿನ್ನ ಕೆಲಸಕ್ಕೆ ಇಟ್ಟುಕೊಂಡಿದ್ದಾರಲ್ಲ. ಎಂಥ ಮನುಷ್ಯರವರು. ಏ ಅವರು ಮನುಷ್ಯರಾ? ಛೆ! ನಾನಾದರೆ ಎಷ್ಟೇ ಕಷ್ಟ ಬಿದ್ದರೂ ಅಂಥ ಮಗಿನ್ನ ಶಾಲೆಗೆ ಹಾಕುತ್ತಿದ್ದೆ. ತಂದೆ ತಾಯಿಗಳು ಎಂಥವರು? ಅವರಿಗೆ ಮನಸ್ಸಾದರೂ ಹೇಗೆ ಬಂತು? ಮಗಿನ್ನ ಹೀಗೆ ಜೀತಕ್ಕೆ ಇಟ್ಟಂಗೆ ಇಟ್ಟರಲ್ಲ. ಅದೋ ಕುಣ್ಕೊಂಡು ಆಟ ಆಡುತ್ತ ಕೆಲಸ ಮಾಡುತ್ತೆ. ಎಷ್ಟೇ ಕಷ್ಟ ಬಂದರೂ ಅರೀದ ಮಗಿನ್ನ ಮಾತ್ರ ಬೇರೆ ಮನೆಯಲ್ಲಿ ಕೆಲಸಕ್ಕೆ ಹಚ್ಚಬಾರದು”  ಎಂದು ನಮ್ಮ ಬಲಗೈ ಬಂಟಿ ಜಯಮ್ಮ ಹೇಳಿ ಆ ಮನೆಯವರಿಗೆ ಶಾಪ ಹಾಕುತ್ತಾಳೆ.
ಹೌದು ಕಣೆ ನನಗೂ ನೋಡಿ ಅಯ್ಯೊ ಪಾಪ ಅಂಥ ಅನಿಸಿತು. ಯಾರಿಗಾದರೂ ಹೇಳಿಬಿಡಲೆ ಎಂದು ಅಂದುಕೊಂಡೆ. ಹಾಗೆ ರಾತ್ರಿ ಇಡೀ ನಿದ್ದೆ ಬರದೆ ಒಬ್ಬರಿಗೆ ಕಾಗದ ಬರೆದೆ. ನೋಡಿದರೆ ನಿಜವಾಗಿ ನಾನು ಕಾಗದ ಬರೆಯಲಿಲ್ಲ. ಕನಸಲ್ಲಿ ಬರೆದದ್ದು. ನಿಜವಾಗಿಯೂ ಬರೆಯಬೇಕು ಅನಿಸುತ್ತೆ. ಸಣ್ಣ ಮಕ್ಕಳನ್ನು ಹಾಗೆ ಕೆಲಸಕ್ಕೆ ಯಾರೂ ಇಟ್ಟುಕೊಳ್ಳಬಾರದು. ಗೊತ್ತಾದರೆ ಅಂಥವರಿಗೆ ಶಿಕ್ಷೆಯಾಗುತ್ತದೆ.
“ಬೇಡ ಅವ್ವ. ನೀವು ಯಾರಿಗೂ ಕಾಜಗ ಪೋನು ಮಾಡಬೇಡಿ ಮತ್ತೆ. ಆ ಸಣ್ಣ ಮಗಿನ್ನ ಕೆಲಸಕ್ಕೆ ಇಟ್ಟುಕೊಳ್ಳಬೇಕಾದರೆ ಅವರೆಂಥ ಕಟುಕ ಮನುಷ್ಯರಾಗಿರಬಹುದು. ದುಡ್ಡಿರೋರು. ಏನು ಮಾಡಲೂ ಹೇಸದ ಜನ. ನೀವು ಸುಮ್ಮನಿದ್ದುಬಿಡಿ. ಅಂಥವರನ್ನು ನಂಬುವುದು ಕಷ್ಟ. ಅವರಿಗೆಲ್ಲ ದೊಡ್ಡ ಮನುಷ್ಯರ ಕೈಗಳ ಪರಿಚಯ ಇರುತ್ತೆ. ಮತ್ತೆ ನಿಮ್ಮ ಮೇಲಿನ ಸಿಟ್ಟಿನಿಂದ ನಿಮಗೇನಾದರೂ ಮಾಡಿಯಾರು. ಅಂಥದ್ದಕ್ಕೂ ಹೇಸದ ಜನ ಅವರು. ನಿಮ್ಮ ಪಾಡಿಗೆ ನೀವು ಸುಮ್ಮನಿರಿ” ಎಂದು ಉಪದೇಶಿಸಿದಳು ಜಯಮ್ಮ.
********
“ಮಕ್ಕಳ ಸಹಾಯವಾಣಿಯ ಇದು?”
“ಹೌದು ಏನಾಗಬೇಕು?”
“ಸಾರ್, ಇಲ್ಲೊಬ್ಬಳು ಸಣ್ಣ ಹುಡುಗಿಯನ್ನು ಕೆಲಸಕ್ಕಿಟ್ಟುಕೊಂಡಿದ್ದಾರೆ. ಶಾಲೆಗೂ ಕಳುಹಿಸುತ್ತಿಲ್ಲ. ಇದು ಕಾನೂನು ರೀತಿಯ ಅಪರಾಧ. ದಯವಿಟ್ಟು ನೀವು ಬಂದು ಅವಳನ್ನು ಅಲ್ಲಿಂದ ಬಿಡುಗಡೆ ಗೊಳಿಸಿ ಅವಳ ತಂದೆತಾಯಿಗಳ ಬಳಿ ಬಿಟ್ಟು ಅವಳನ್ನು ಶಾಲೆಗೆ ಕಳುಹಿಸುವ ವ್ಯವಸ್ಥೆ ಮಾಡಬೇಕು. ಅವರ ವಿಳಾಸ ಹೇಳುತ್ತೇನೆ ಕೇಳಿಸಿಕೊಳ್ಳಿ. ಅಷ್ಟು ಉಪಕಾರ ಮಾಡಿ ಸಾರ್.”
ಕಮಲ ಕುಣಿಯುತ್ತ ನಲಿಯುತ್ತ ಅವಳ ಅಪ್ಪ ಅಮ್ಮನೊಡನೆ ಅವಳ ಮನೆಗೆ ಹೋದಳು. ಅಲ್ಲಿ ಶಾಲೆಗೆ ಸೇರಿಸುವ ವ್ಯವಸ್ಥೆ ಮಾಡುತ್ತಾರೆ. ಎಂದು ನೆಮ್ಮದಿ ತಾಳಿ ನಿದ್ರಿಸಿದೆ.
**************
ಬೆಳಗ್ಗೆಯೇ ಕಮಲಳ ದರ್ಶನವಾಯಿತು. `ನಮಸ್ತೆ ಅಕ್ಕ’ ಎಂದಳು ಹಸನ್ಮುಖದಿಂದ. ಆಶ್ಚರ್ಯದಿಂದ ಬಾಯಿಬಿಟ್ಟು ಅವಳನ್ನೇ ನೋಡಿದೆ. (ಹಾಗಾದರೆ ಕಮಲಳ ಬಿಡುಗಡೆ? ಇದು ರಾತ್ರಿ ನಾನು ಕಂಡ ಕನಸಿನಲ್ಲಿ ಮಾತ್ರ ಎಂಬ ಮನವರಿಕೆಯಾಯಿತು.)  ಎಚ್ಚರಗೊಂಡು ಅವಳನ್ನು ಕೇಳಿದೆ.
“ಎಲ್ಲಿಗೆ ಹೋಗುತ್ತಿದ್ದೀಯಾ?”
“ಮಾಂಸ ತರಲು. ತಿಂಡಿ ಆಯಿತಾ?” ಎಂದು ಪ್ರಶ್ನಿಸಿ, ನನ್ನ ಉತ್ತರಕ್ಕಾಗಿ ಕಾಯದೆ ಓಡಿದಳು ಅಂಗಡಿಗೆ.
ಪುನಃ ನನ್ನ ತಲೆಯಲ್ಲಿ ಕಮಲಳ ಬಗ್ಗೆ ಕೊರೆತ ಸುರುವಾಯಿತು. ಇವಳನ್ನು ಶಾಲೆಗೆ ಕಳುಹಿಸುವುದು ಹೇಗೆ? ಯಾವ ತರದ ಉಪಾಯ ಮಾಡಲಿ? ಅವಳು ಕೆಲಸದಲ್ಲಿರುವ ಮನೆಗೇ ತೆರಳಿ ಆ ಮನೆಯ ಯಜಮಾನ ಎನಿಸಿಕೊಂಡವನ ಬಳಿ ಹೋಗಿ ಕಮಲಳನ್ನು ಶಾಲೆಗೆ ಕಳುಹಿಸಿ ಎನ್ನಲೆ? ಮನ ಒಲಿಸಿ ಅವರಿಗೆ ಮನವರಿಕೆ ಮಾಡಲೆ?  ಎಂದು ಯೋಚಿಸಲು ತೊಡಗಿದೆ.
ಆಗ ನನ್ನ ಒಳಮನಸ್ಸು ನನ್ನನ್ನು ತೆಪ್ಪಗೆ ಕೂರಲು ಪ್ರಚೋದಿಸುತ್ತಲೇ ಇತ್ತು. `ನೀನೇಕೆ ಸುಮ್ಮನೆ ಇಲ್ಲದ್ದು ಯೋಚಿಸುತ್ತಿ? ಆ ಮನೆಯವರು ಅವಳನ್ನು ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದಾರೆ. ಹೊಟ್ಟೆತುಂಬ ಊಟ, ಬೇಕಾದ ಬಟ್ಟೆಬರೆ ಎಲ್ಲ ಕೊಡುತ್ತಿದ್ದಾರೆ. ಮಕ್ಕಳ ಜೊತೆ ಆಟಕ್ಕೂ ಬಿಡುತ್ತಾರೆ. ಅವಳೂ ಖುಷಿಯಲ್ಲೇ ಇರಬಹುದು. ಅವಳು ಸಂತೋಷದಲ್ಲಿ ಇರುವಂತೆಯೇ ಕಾಣುತ್ತಾಳಲ್ಲ. ಅವಳೇನು ದುಃಖದಿಂದ ಇರುವಂತೆ ನಿನಗೆ ಕಂಡು ಬರುತ್ತಾಳೆಯೇ? ಶಾಲೆಗೆ ಹೋಗಿ ಓದಿ ಬರೆಯುವ ಕಷ್ಟ ಇಲ್ಲ. ಅಲ್ಪ ಸ್ವಲ್ಪ ಮನೆ ಕೆಲಸಮಾಡಿಕೊಂಡು ಆಟ ಆಡುತ್ತ ಟಿ.ವಿ ನೋಡುತ್ತ ಆರಾಮಾವಾಗಿ ಇರಬಹುದೆಂದು ಅವಳು ಯೋಚಿಸುತ್ತಿದ್ದರೆ ನೀನೇನು ಅವಳ ಕಷ್ಟ ತಲೆಯಲ್ಲಿ ಹೊತ್ತುಕೊಂಡಂತೆ ಮಾಡುತ್ತಿ? ನೀನೇಕೆ ಅವಳನ್ನು ಶಾಲೆಗೆ ಹಾಕಲು ಪ್ರಯತ್ನ ಪಡುತ್ತಿ? ಈಗವಳಿಗೆ ಹೊಟ್ಟೆಗಾದರೂ ಸಾಕಷ್ಟು ಆಹಾರ ಸಿಗುತ್ತದೆ. ಮನಸ್ಸಿಗೂ ನೆಮ್ಮದಿ ಇರಬಹುದು. ಇಲ್ಲಿಂದ ಬಿಡಿಸಿದರೆ ಅದೂ ತಪ್ಪಿದರೆ ಬೇರೆ ಎಲ್ಲಾದರೂ ಅವಳನ್ನು ಹೀಗೆ ಕೆಲಸಕ್ಕೆ ಹಚ್ಚುವುದಿಲ್ಲ ಎಂದು ಏನು ಗ್ಯಾರಂಟಿ? ನೀನೇನು ಅವಳ ಹಿಂದೆಯೇ ಹೋಗಿ ಪತ್ತೇದಾರಿ ಕೆಲಸ ಮಾಡುತ್ತೀಯಾ? ಎಷ್ಟೋಕಡೆ ಇಂಥ ಹುಡುಗಿಯರನ್ನು ಇಟ್ಟುಕೊಂಡು ಕೆಲಸ ಬಂಡಿಯಷ್ಟು ಮಾಡಿಸಿ ಹೊಡೆದು ಬಡಿದು ಹೊಟ್ಟೆಗೂ ಅರೆಹೊಟ್ಟೆ ಹಾಕಿ ಹಿಂಸೆ ನೀಡುವವರೂ ಇದ್ದಾರೆ. ಹಾಗೆ ಮಾಡಿದರೆ ನಿನಗೆ ಸಂತೋಷವೇ? ಅವಳ ಈಗಿರುವ ಸಂತೋಷವನ್ನು ಕದಿಯುವ ಹಕ್ಕು ನಿನಗಿಲ್ಲ. ಅವಳಪ್ಪ ಅಮ್ಮ ಇನ್ನು ಎಂಥವರೋ? ಒಂದು ದಿವಸವಾದರೂ ಅವಳನ್ನು ವಿಚಾರಿಸಲು ಇಲ್ಲಿ ಬಂದಿದ್ದಾರ? ಈಗ ಅವಳು ಇರುವ ಮನೆಯಲ್ಲಿ ಕೆಲಸ ಮಾಡುತ್ತ ಆಟ ಆಡುತ್ತ ನೆಮ್ಮದಿಯಿಂದಲಾದರೂ ಇದ್ದಾಳೆ. ಅದನ್ನು ತಪ್ಪಿಸಲು ನೀನು ಯಾರು? ಅವಳೇನು ನಿನ್ನ ಬಳಿ ಬಂದು `ಅಕ್ಕ, ನನಗೆ ಕಷ್ಟವಾಗುತ್ತದೆ ಇಲ್ಲಿ. ನನ್ನನ್ನು ಶಾಲೆಗೆ ಕಳಿಸುತ್ತಿಲ್ಲ. ನನ್ನನ್ನು ಹೇಗಾದರೂ ಮಾಡಿ ಇಲ್ಲಿಂದ ಬಿಡುಗಡೆಗೊಳಿಸಿ. ನನ್ನನ್ನು ಅಮ್ಮನ ಮನೆಗೆ ಕಳುಹಿಸಿ ಎಂದು ನಿನ್ನನ್ನು ಅಂಗಲಾಚಿ ಕೇಳಿದ್ದಾಳ? ಹಾಗೆ ಎಲ್ಲಾದರೂ ಕೇಳಿದ್ದರೆ ಅವಳಿಗೆ ಉಪಕಾರ ಮಾಡಬಹುದಿತ್ತು. ಸಂಬಂಧಪಟ್ಟವರನ್ನು ಕಂಡು ಮಾತಾಡಿ ಅವಳನ್ನು ಬಿಡುಗಡೆಗೊಳಿಸಬಹುದಿತ್ತು. ಆಗ ನೀನು ನ್ಯಾಯವಾದ ದಾರಿಯಲ್ಲಿ ಹೋಗುತ್ತಿದ್ದಿ ಎಂದು ಭಾವಿಸಬಹುದು. ಅದು ಬಿಟ್ಟು ಈಗ ನೀನು ಯೋಚಿಸುವ ದಾರಿಯೇ ಸರಿ ಇಲ್ಲ’ ಎಂದು ವಾದಿಸಿತು.
ಹೌದಲ್ಲವೆ? ಹಾಗಾದರೆ ನಾನು ಯೋಚನೆ ಮಾಡುತ್ತಿರುವ ದಿಕ್ಕೇ ತಪ್ಪೇ? ಈ ಉಸಾಬರಿಯೇ ಬೇಡ ಎಂದು ಚಿಂತನೆ ಮಾಡುತ್ತ ಕಮಲಳ ಬಗ್ಗೆ ಯೋಚಿಸುವುದನ್ನು ತಾತ್ಕಾಲಿಕವಾಗಿ ಬಿಟ್ಟೆ.
ಅದೇ ದಿನ ಸಂಜೆ ೪ಕ್ಕೆ ಕಮಲ ಕಮಲ ಎಂಬ ಅರಚಾಟ ಕೇಳಿಸಿತು.  ನೋಡಿದರೆ ೬ ವರ್ಷದ ಬಾಲೆ ಪಾವನಿ ಶಾಲಾ ವ್ಯಾನಿನಿಂದ ಇಳಿಯುವ ಮೊದಲು ತನ್ನ ದಾಸಿಯೇನೋ ಎಂಬಂತೆ ಕಮಲಳನ್ನು ಕರೆಯುತ್ತಿದ್ದಾಳೆ– ಶಾಲಾಚೀಲ ಮನೆಯೊಳಗೆ ತರಲು. ಕಮಲಳಿಗೆ ಕೇಳಿಸಿತೊ ಇಲ್ಲವೊ ಅವಳು ಬರಲಿಲ್ಲ. ಪಾವನಿ ಪುನಃ ಕಿರುಚುತ್ತ `ಕಮಲ ಕಮಲ ಎಲ್ಲೇ ಹಾಳಾಗಿ ಹೋಗಿದ್ದೆ? ಕಿವಿ ಕೇಳ್ಸಲ್ಲವೇನೆ? ಕರೆಯುವಾಗ ಬರಲು ಏನು ದಾಡಿ ನಿನಗೆ?’ ಎಂದು ಜರೆದಿದ್ದಳು. ಆಗ ಓಡಿ ಬಂದ ಕಮಲ, `ನಾನು ಒಳಗೆ ತಟ್ಟೆ ತೊಳೆಯುತ್ತಿದ್ದೆ. ಕೇಳಿಸಲಿಲ್ಲ’ ಎಂದು ಸೌಮ್ಯವಾಗಿ ನುಡಿದು ಅವಳ ಚೀಲ ಹೊತ್ತು ಒಳಗೆ ಹೋದಳು. ಆಗ ಬುಗ್ಗನೆ ಕೋಪ ನನ್ನನ್ನಾವರಿಸಿತು.  ಪಾವನಿಗೆ ನಾಲ್ಕು ಬಿಗಿಯಲೇ ಎನಿಸಿತು. ಕಮಲಳಿಂದ ಪಾವನಿ ಎರಡೋ ಮೂರೋ ವರ್ಷ ಸಣ್ಣವಳಿರಬಹುದು. ಎಂಥ ಧಿಮಾಕಿನಿಂದ ಕರೆಯುತ್ತಿದ್ದಾಳೆ. ಪಾವನಿ ಹಾಗೆ ವರ್ತಿಸುವಾಗ ಮನೆಯಲ್ಲಿ ದೊಡ್ಡವರೆನಿಸಿಕೊಂಡವರು ಯಾರಾದರೂ ಅವಳಿಗೆ ತಿಳಿ ಹೇಳಬೇಡವೇ? ಹಾಗೆ ಅರಚಬೇಡ. ನೀನೆ ಚೀಲ ಹೊತ್ತು ಒಳಗೆ ಬಾ ಎಂದು ಹೇಳಬೇಡವೆ? ಮೊಮ್ಮಗಳು ಹಾಗೆ ಕರೆದದ್ದು ಕೇಳಿಸಿದಕೂಡಲೇ ಅಜ್ಜಿಯಾದವಳು `ಹೋಗೇ ಹೋಗೇ ಪಾವನಿ ಬಂದಳು ಓಡು ಓಡು’ ಎಂದು ಕಮಲಳಿಗೆ ಹೇಳುತ್ತಾರೆ. ಕಮಲ ಆಗ ಎಲ್ಲಿದ್ದರೂ ಯಾವ ಕೆಲಸ ಮಾಡುತ್ತಿದ್ದರೂ ಆ ಕೆಲಸ ಅಲ್ಲೇ ಬಿಟ್ಟು ಪಾವನಿಯ ಚೀಲ ಹೊತ್ತು ತರಬೇಕು. ಎಂಥ ದಾಸ್ಯವಿದು? ಗೇಟಿನಿಂದ ಎರಡು ಹೆಜ್ಜೆ ಮನೆಯೊಳಗೆ ಚೀಲ ಹೊರಲು ಅವಳಿಂದಾಗುತ್ತಿಲ್ಲವೆಂದಾದರೆ ಎಂಥ ಅಹಂಕಾರವಿರಬೇಕು. ಮಕ್ಕಳನ್ನು ಹಾಗೆ ಬೆಳೆಸುವುದೇ ಬಹಳ ತಪ್ಪು. ಇನ್ನು ಅವಳು ದೊಡ್ಡವಳಾದಮೇಲೆ ಹೇಗೆ ವರ್ತಿಸಿಯಾಳೊ? ಗಿಡವಾಗಿ ಬಗ್ಗಿಸದೆ ಇದ್ದರೆ ಮರವಾದಮೇಲೆ ಬಗ್ಗಿಸಲು ಸಾಧ್ಯ ಆಗುತ್ತದೆಯೇ? ಕಮಲಳು ಶಾಲೆಗೆ ಹೋಗುತ್ತಿದ್ದರೆ ಅಗ ಅವಳೂ ಇದೇ ಹೊತ್ತಿಗೆ ಶಾಲೆಯಿಂದ ಮರಳಿರುತ್ತಿದ್ದಳು ಎಂದು ನನ್ನ ಮನಸ್ಸು ಪುನಃ ಮರುಗಲು ತೊಡಗುತ್ತದೆ ಅವಳ ಬಗ್ಗೆ.
ನಾನೇಕೆ ಇಂಥ ಅನ್ಯಾಯ ಕಂಡೂ ಕಂಡೂ ಸುಮ್ಮನಿದ್ದೇನೆ? ಯಾರಿಗೂ ತಿಳಿಸುತ್ತಿಲ್ಲವೇಕೆ? ಬರೇ ಕನಸಲ್ಲಿ ಮನಸಲ್ಲಿ ಮಾತ್ರವೇಕೆ ಕಮಲಳ ಬಗ್ಗೆ ಯಾರು ಯಾರಿಗೊ ಕಾಗದ, ದೂರವಾಣಿ ಮಾಡಿ ನನ್ನ ಮನಸ್ಸಿನ ನಿರುಮ್ಮಳವನ್ನು ಹೊರಹಾಕುತ್ತೇನೆ? ನಿಜವಾಗಿಯೂ ಸಂಬಂಧಪಟ್ಟವರನ್ನು ಕಂಡು ಅವಳನ್ನು ಈ ದಾಸ್ಯದಿಂದ ಏಕೆ ಬಿಡುಗಡೆಗೊಳಿಸಲು ಪ್ರಯತ್ನಿಸುತ್ತಿಲ್ಲ? ಮಹಾಭಾರತದ ಕಾಲದಲ್ಲಿ ಉತ್ತರಕುಮಾರನು ಅಂತಃಪುರದಲ್ಲಿ ಸ್ತ್ರೀಯರ ಮುಂದೆ ತನ್ನ ಪರಾಕ್ರಮದ ಬಗ್ಗೆ ಪೌರುಷ ಕೊಚ್ಚಿಕೊಳ್ಳುತ್ತಿದ್ದನಂತೆ. ನಾನು ಕನಸಲ್ಲಿ ಮನಸಲ್ಲಿ ನನ್ನ ಪರಾಕ್ರಮ ರೋಷ ಹೊರಹಾಕುತ್ತೇನೆ ಏಕೆ? ಎಂದು ಇಂದಿಗೂ ಗೊತ್ತಿಲ್ಲ. ರಣರಂಗದಲ್ಲಿ ಧುಮುಕುವಂತೆ ಪ್ರೇರೇಪಿಸಲು ಉತ್ತರಕುಮಾರನಿಗೆ ಬೃಹನ್ನಳೆಯ ವೇಷ ಧರಿಸಿದ ಅರ್ಜುನನಿದ್ದ. ನನಗೆ ಹಾಗೆ ಉತ್ತೇಜಿಸಲು ಯಾರೂ ಮುಂದೆ ಬಂದಿಲ್ಲವಾದ್ದರಿಂದ ನಾನು ಸುಮ್ಮನೆ ಇದ್ದೇನೆ ಎಂದು ನನ್ನ ಮನಸ್ಸನ್ನು ಸಾಂತ್ವಾನಗೊಳಿಸಲು ನೋಡುತ್ತೇನೆ. ಮನಸ್ಸಿಗೆ ಮೇಲೇಳಲು ಅವಕಾಶಕೊಡದೆ ಅಲ್ಲಿಯೇ ತೆಪ್ಪಗೆ ಇರುವಂತೆ ಮಾಡುವಲ್ಲಿ ಯಶಸ್ವಿಯಾಗುತ್ತೇನೆ.
ಈ ವಿಷಯವೆಂದಲ್ಲ. ನಾವು ಎಷ್ಟೋ ಇಂಥ ಪ್ರಕರಣಗಳ ಬಗ್ಗೆ ತಲೆಕೆಡಿಸಿಕೊಳ್ಳದೆಯೇ ಸುಖವಾಗಿ ಇರುತ್ತೇವೆ. ಅಕ್ಕಪಕ್ಕದ ಮನೆಯಲ್ಲಿ ನೀರು ಹರಿದು ಪೋಲು ಮಾಡುತ್ತಲೇ ಇದ್ದರೂ ಆಗ ಮಾತಾಡದೆ ತೆಪ್ಪಗೆ ಇರುತ್ತೇವೆ. ರಸ್ತೆಯ ಬದಿ ತೊಟ್ಟಿ ಇದ್ದರೂ ಆ ತೊಟ್ಟಿಗೆ ಕಸ ಹಾಕದೆ ನಮ್ಮ ಕಣ್ಣಮುಂದೆಯೇ ಅದರ ಹೊರಗೆ ಕಸ ಬೀಸಾಕಿದರೂ ನಾವು ಏನೂ ಮಾತಾಡುವುದಿಲ್ಲ. ನೋಡಿಕೊಂಡು ತೆಪ್ಪಗಾಗುತ್ತೇವೆ. ಹಗಲುಬೀದಿ ದೀಪ ಉರಿಯುತ್ತಲೇ ಇದ್ದರೂ ಅದರ ಬಗ್ಗೆ ನಾವು ತಲೆ ಕೆಡಿಸಲು ಹೋಗುವುದಿಲ್ಲ. ಸಣ್ಣ ಹುಡುಗರು ಸಿಗರೇಟ್ ಸೇದುತ್ತ  ರಸ್ತೆಯಲ್ಲಿ, ಪಾರ್ಕಿನಲ್ಲಿ ನಿಂತಿದ್ದರೆ ಯಾಕಪ್ಪ ಸಿಗರೇಟ್ ಸೇದಿ ಅಯುಷ್ಯ ಕಡಿಮೆಗೊಳಿಸಿಕೊಳ್ಳುತ್ತೀಯ ಎಂದು ನಾವು ಕೇಳುವುದಿಲ್ಲ. ಸುಮ್ಮನೆ ಇರುತ್ತೇವೆ. ಇನ್ನೂ ಇಂಥ ಹಲವಾರು ಸಮಸ್ಯೆಗಳು ನಮ್ಮ ಕಣ್ಣಮುಂದೆ ನಡೆದರೂ ನಮಗೆ ಸಂಬಂಧವಿಲ್ಲವೆಂದೇ ನಾವು ನೋಡಿಯೂ ನೋಡದಂತೆ ಇರುತ್ತೇವೆ.
ಕಮಲಳನ್ನು ಹಾಗೂ ಅವಳಂಥವರನ್ನು ನೋಡುವಾಗಲೆಲ್ಲ ನನ್ನ ಮನಸ್ಸು ಚಿಂತಿಸುತ್ತಲೇ ನೀನೇಕೆ ಸುಮ್ಮನಿದ್ದಿಯಾ ಎಂದು ಎಚ್ಚರಿಸಿ ಚುಚ್ಚುತ್ತಲೇ ಇರುತ್ತದೆ. ಇದಕ್ಕೆ ಪರಿಹಾರ?????

 

೧೨-೫-೨೦೧೩ರ ಹೊಸದಿಗಂತದಲ್ಲಿ ಪ್ರಕಟಗೊಂಡ ಕಥೆ

Read Full Post »

Older Posts »