Archive for the ‘ನಾಟಕ ನೋಟ’ Category
ಮುಂದೆ ಲೇಖನಗಳನ್ನು ಓದಲು ಈ ಕೊಂಡಿ ಬಳಸಿ . ಮಾಲಾ ಲಹರಿಯಲ್ಲಿ ಹಳೆಯ ಲೇಖನ ಲಭ್ಯವಿದೆ rukminimalanisarga.blogspot.com – ನಿಸರ್ಗದ ಸೊಬಗು
Posted in ನಾಟಕ ನೋಟ on ಸೆಪ್ಟೆಂಬರ್ 23, 2018| Leave a Comment »
೧) ಹೆಬ್ಬೆಟ್ಟದ ಬಸವೇಶ್ವರ ದೇವಾಲಯ
Posted in ನಾಟಕ ನೋಟ on ಸೆಪ್ಟೆಂಬರ್ 8, 2016| Leave a Comment »
ಮೈಸೂರಿನಿಂದ ತಾರೀಕು ೨೮-೮-೨೦೧೬ ರಂದು ಎರಡು ಮಿನಿ ಬಸ್ಸಿನಲ್ಲಿ ನಾವು ೩೮ ಮಂದಿ ಬೆಳಗ್ಗೆ ೬.೩೦ ಗಂಟೆಗೆ ಹೊರಟು ಮಳವಳ್ಳಿಯಲ್ಲಿ ಹರಿಕೃಷ್ಣ ಖಾನಾವಳಿಯಲ್ಲಿ ಇಡ್ಲಿ ವಡೆ ಕಾಫಿಯಾಗಿ ಮುಂದುವರಿದು ಬನ್ನೂರು, ಹಲಗೂರು ದಾರಿಯಲ್ಲಿ ಸಾಗಿ ಮುಂದೆ ಬಲಕ್ಕೆ ಹೊರಳಿ ಕೆಲವು ಕಿಮೀ ಕ್ರಮಿಸುವಾಗ ಗುಂಡಾಪುರ ಹಳ್ಳಿ ಸಿಗುತ್ತದೆ. ಅಲ್ಲಿ ನಾವು ಬಸ್ಸು ಇಳಿದೆವು. ಪರಸ್ಪರ ಪರಿಚಯ ಕಾರ್ಯಕ್ರಮ ಮುಗಿಸಿದೆವು. ಸ್ಥಳೀಯ ಪಡಿತರ ಅಂಗಡಿ ಮಾಲೀಕರಾದ ಬಸವೇಗೌಡರು ಬಂದು ನಮಗೆ ಬಸವಬೆಟ್ಟ (ಹಲಗೂರು, ಮಳವಳ್ಳಿ ತಾಲೂಕು) ಹತ್ತಲು ಮಾರ್ಗದರ್ಶಕರಾಗಿ ಅವರ ತಮ್ಮನ ಮಗ ದರ್ಶನನನ್ನು ನೇಮಿಸಿದರು. ದರ್ಶನ ಐಟಿಐ ವಿದ್ಯಾಭ್ಯಾಸ ಮುಗಿಸಿ ಕೆಲಸದ ಹುಡುಕಾಟದಲ್ಲಿ ತೊಡಗಿದ್ದ.
ಹೆಬ್ಬೆಟ್ಟದ ಬಸವೇಶ್ವರ ದೇವಾಲಯಕ್ಕೆ ತೆರಳಲು ಟಾರು ರಸ್ತೆಯಿದೆ. ಆದರೆ ನಾವು ಬೆಟ್ಟಗುಡ್ಡ ಹತ್ತಿ ಆ ದೇವಾಲಯಕ್ಕೆ ಹೋಗಲು ತೀರ್ಮಾನಿಸಿದ್ದೆವು. ದರ್ಶನನ ನೇತೃತ್ವದಲ್ಲಿ ನಾವು ಬೆಳಗ್ಗೆ ೯.೩೦ ಗಂಟೆಗೆ ಬೆಟ್ಟ ಹತ್ತಲು ಪ್ರಾರಂಭಿಸಿದೆವು. ಬಿಸಿಲು ಇಲ್ಲದೆ ನಮಗೆ ಹವೆ ಹಿತಕರವಾಗಿತ್ತು. ಕಡಿದಾದ ಬೆಟ್ಟವಲ್ಲ. ಹಾಗೆಂದು ಸಲೀಸಾಗಿಯೂ ಇರಲಿಲ್ಲ. ಬೆಟ್ಟ ಏರುವ ದೂರ ಸುಮಾರು ನಾಲ್ಕು ಕಿಮೀ. ನಾವು ನಿಧಾನವಾಗಿ ಸಾಗಿದೆವು. ಆನೆ, ಚಿರತೆ, ಹುಲಿ, ಜಿಂಕೆ, ನವಿಲು, ಮುಳ್ಳುಹಂದಿ ಇತ್ಯಾದಿ ಪ್ರಾಣಿಗಳ ಓಡಾಟ ಇರುವಂಥ ಅರಣ್ಯವಂತೆ. ಸಾಕ್ಷಿಯಾಗಿ ಆನೆ ಲದ್ದಿ, ಮುಳ್ಳುಹಂದಿಯ ಮುಳ್ಳುಕಡ್ಡಿ ಕಾಣಿಸಿತು. ಪ್ರಾಣಿಗಳು ನಾಡಿಗೆ ಬರದಿರಲು ಅರಣ್ಯ ಇಲಾಖೆಯವರು ಸುತ್ತ ಅಗಳು ಕೊರೆದು ವಿದ್ಯುತ್ ಬೇಲಿ ಹಾಕಿಸಿದ್ದಾರೆ.
ಬೆಟ್ಟ ಏರಿದಂತೆ ದೊಡ್ಡ ದೊಡ್ಡ ಪಾದೆಗಳು, ಬಂಡೆಗಲ್ಲುಗಳು, ಸಣ್ಣಪುಟ್ಟ ಹಾಸುಗಲ್ಲುಗಳು ಕಾಣಿಸಿದವು. ಪುಟ್ಟ ಪುಟ್ಟ ಕಲ್ಲುಗಳು ವಿವಿಧ ಆಕಾರದಲ್ಲಿದ್ದು ಸುಂದರವಾಗಿದ್ದುವು. ಪುಟಾಣಿ ಪ್ರಣತಿ ಕಲ್ಲುಗಳನ್ನು ನೋಡಿ, “ಎಷ್ಟೊಂದು ಕಲ್ಲುಗಳು ಇವೆ. ಬಟ್ಟೆ ಒಗೆಯಲು ಚೆನ್ನಾಗಿವೆ’’ ಎಂದು ಉದ್ಘರಿಸಿ ಕಲ್ಲು ಲೆಕ್ಕ ಹಾಕಲು ತೊಡಗಿದಳು. ಅಲ್ಲಲ್ಲಿ ಕೂರುತ್ತ, ನಿಲ್ಲುತ್ತ, ಸೌತೆಕಾಯಿ, ಕಿತ್ತಳೆ, ಸೇಬು, ಪೇರಳೆ ಮೆಲ್ಲುತ್ತ ಸಾಗಿದೆವು. ಸುಮಾರು ನಾಲ್ಕು ಕಿಮೀ ಬೆಟ್ಟ ಏರಿದಾಗ ದೇವಾಲಯಕ್ಕೆ ಹೋಗುವ ರಸ್ತೆ ಎದುರಾಯಿತು. ರಸ್ತೆಯಲ್ಲಿ ಮುಂದೆ ಸಾಗಿದೆವು. ಆಗ ದೇಸೀ ತಳಿಯ ದನಗಳ ಹಿಂಡು ಮತ್ತು ಕುರಿಗಳ ಮಂದೆ ಎದುರಾಯಿತು. ಅವು ಶಿಸ್ತಿನ ಸಿಪಾಯಿಯಂತೆ ಸಾಲಾಗಿ ಹೋಗುವ ಸೊಬಗನ್ನು ನೋಡುತ್ತ ನಿಂತೆವು. ಅವುಗಳನ್ನು ನಿತ್ಯ ಮಧ್ಯಾಹ್ನ ೧೧ ಗಂಟೆಗೆ ಅರಣ್ಯದತ್ತ ಮೇಯಲು ಕರೆದುಕೊಂಡು ಹೋಗಿ ಸಂಜೆ ನಾಲ್ಕು ಗಂಟೆಯಾಗುವಾಗ ವಾಪಾಸು ಕರೆತರುತ್ತಾರಂತೆ. ರಸ್ತೆಯಲ್ಲಿ ಸಾಗಿದಂತೆ ಮುಂದೆ ಹಳ್ಳಿ ಎದುರಾಗುತ್ತದೆ. ಅವರೆಲ್ಲ ನಮ್ಮನ್ನು ಮಾತಾಡಿಸಿ, ಯಾವೂರಿಂದ ಬಂದಿರಿ? ನಡೆದೇ ಬಂದಿರ? ಅದ್ಯಾಕೆ ನಡೆದು ಬಂದಿರಿ? ಬಸ್ಸು ಹೋಗಲು ರಸ್ತೆ ಇದೆಯಲ್ಲ ಎಂದು ಪ್ರಶ್ನಿಸಿದರು. ಈ ಪೇಟೆಮಂದಿಗೆ ಮಾಡಲು ಬೇರೆ ಕೆಲಸವಿಲ್ಲ ಎಂದು ಮನದಲ್ಲೇ ಅಂದುಕೊಂಡಿರಬಹುದು!
ಸುಮಾರು ಮೂರು ಕಿ.ಮೀ. ದೂರ ರಸ್ತೆಯಲ್ಲೇ ನಡೆದು ಸಾಗಿದಾಗ ಹೆಬ್ಬೆಟ್ಟ ಬಸವೇಶ್ವರ ದೇವಾಲಯದ ಹೆಬ್ಬಾಗಿಲು ಎದುರಾಯಿತು. ನಾವು ಸುಮಾರು ಏಳುಕಿಮೀ ದೂರ ನಡೆದು ಹನ್ನೆರಡೂಕಾಲಕ್ಕೆ ತಲಪಿದ್ದೆವು. ದೊಡ್ಡದಾದ ಬಸವನ ಮೂರ್ತಿಯನ್ನು ಬಣ್ಣಹಚ್ಚಿ ಹೆಬ್ಬಾಗಿಲಲ್ಲಿ ಪ್ರತಿಷ್ಠಾಪಿಸಿದ್ದಾರೆ. ದೇವಾಲಯ ಚೋಳರಕಾಲದ್ದಂತೆ. ನಾಗಲಿಂಗ ಸ್ವಾಮಿಗಳು ಅಲ್ಲಿಯ ಗುಹೆಯಲ್ಲಿ ವಾಸವಾಗಿದ್ದು ಈ ದೇವಾಲಯದ ಅಭಿವೃದ್ಧಿಯಲ್ಲಿ ಪ್ರಮುಖಪಾತ್ರ ವಹಿಸಿದ್ದರಂತೆ. ಅದಕ್ಕಾಗಿ ದೇವಾಲಯದ ಒಂದು ಪಾರ್ಶ್ವದಲ್ಲಿ ತಾರಸಿಮೇಲೆ ಅವರ ಮೂರ್ತಿಯನ್ನು ಸ್ಥಾಪಿಸಿದ್ದಾರೆ. ಭಕ್ತಾದಿಗಳು ಆ ಮೂರ್ತಿಗೂ ಪೂಜೆ ಸಲ್ಲಿಸುವುದನ್ನು ಕಂಡೆವು.
ಈಗಿನ ಅರ್ಚಕರ ಹೆಸರೂ ನಾಗಲಿಂಗಸ್ವಾಮಿ. ತಲೆತಲಾಂತರದಿಂದ ಅವರ ಕುಟುಂಬದವರೇ ಪೂಜೆ ಸಲ್ಲಿಸುತ್ತ ಬರುತ್ತಿದ್ದಾರಂತೆ. ಅರ್ಚಕರೂ ಬಸವೇಗೌಡರೂ ಸೇರಿ ನಮಗೆಲ್ಲ ಮಜ್ಜಿಗೆನೀರು, ಚಹಾ ಸರಬರಾಜು ಮಾಡಿದರು.
ಅಲ್ಲಿಂದ ಅರ್ಧ ಕಿಮೀ ದೂರ ಅರಣ್ಯ ಇಲಾಖೆಗೆ ಸೇರಿದ ಸ್ಥಳವಿದೆ. ಅಲ್ಲಿ ದೊಡ್ಡದಾದ ಪಾದೆಕಲ್ಲುಗಳು ಇದ್ದು, ಅಲ್ಲಿಂದ ಮುತ್ತತ್ತಿ ಅರಣ್ಯ ಬಲು ಸುಂದರವಾಗಿ ಕಾಣುತ್ತದೆ. ಕಾವೇರಿ ವೈಲ್ಡ್ ಲೈಫ್ ಎಂಬ ಬರಹವಿದ್ದ ಸಮವಸ್ತ್ರ ಧರಿಸಿದ ಅರಣ್ಯ ಇಲಾಖೆಯ ಸಿಬ್ಬಂದಿ ನಮ್ಮನ್ನು ಆ ಸ್ಥಳಕ್ಕೆ ಕರೆದೊಯ್ದರು. ಅಲ್ಲಿ ಮುತ್ತತ್ತಿ ಅರಣ್ಯವನ್ನು ಕಣ್ಣುತುಂಬಿಸಿಕೊಂಡು, ಸಮೂಹಭಾವಚಿತ್ರ ತೆಗೆಸಿಕೊಂಡು ವಾಪಾಸಾದೆವು. ಒಂದೂವರೆ ಗಂಟೆಗೆ ಹೊರಟು ಪುನಃ ಏಳುಕಿಮೀ ದೂರ ನಡೆದು ಬಸ್ಸು ಇದ್ದ ಜಾಗ ತಲಪುವಾಗ ಗಂಟೆ ಸಂಜೆ ನಾಲ್ಕು ಆಗಿತ್ತು. ಬಿಸಿಬೇಳೆಭಾತ್, ಮೊಸರನ್ನ, ವಡೆ, ಮಸಾಲೆವಡೆ ಹೊಟ್ಟೆಗೆ ಇಳಿಸಿ ವಿಶ್ರಾಂತಿಗೈದೆವು. ತಂಡದ ಸದಸ್ಯರು ಕೆಲವರು ಹಾಸ್ಯ, ಏಕಪಾತ್ರಾಭಿನಯ, ಹಾಡು ಇತ್ಯಾದಿ ಮನರಂಜನಾ ಕಾರ್ಯಕ್ರಮ ನಡೆಸಿಕೊಟ್ಟರು. ಮಾರ್ಗದರ್ಶಕ ದರ್ಶನನಿಗೆ ಒಳ್ಳೆಯ ಕೆಲಸ ಸಿಗಲಿ ಎಂದು ಹಾರೈಸಿ ಅವನನ್ನು ಬೀಳ್ಕೊಟ್ಟೆವು.
ಸಂಜೆ ಐದೂವರೆಗೆ ಅಲ್ಲಿಂದ ಹೊರಟು ಮಳವಳ್ಳಿಯ ಹರಿಕೃಷ್ಣದಲ್ಲಿ ಕಾಫಿ ಕುಡಿದು ಮೈಸೂರು ತಲಪುವಾಗ ರಾತ್ರಿ ೯ ಗಂಟೆಯಾಗಿತ್ತು. ಯೂಥ್ ಹಾಸ್ಟೆಲ್ ಗಂಗೋತ್ರಿ ಘಟಕದ ವತಿಯಿಂದ ನಾಗೇಂದ್ರಪ್ರಸಾದ್, ವೈದ್ಯನಾಥನ್ ಈ ಕಾರ್ಯಕ್ರಮವನ್ನು ರೂ. ೫೦೦ಕ್ಕೆ ಯಶಸ್ವಿಯಾಗಿ ನಡೆಸಿದ್ದರು.
ಚಾರಣದ ಕೆಲವು ಚಿತ್ರಗಳು
2014 in review
Posted in ನಾಟಕ ನೋಟ on ಡಿಸೆಂಬರ್ 30, 2014| Leave a Comment »
The WordPress.com stats helper monkeys prepared a 2014 annual report for this blog.
Here’s an excerpt:
The concert hall at the Sydney Opera House holds 2,700 people. This blog was viewed about 9,900 times in 2014. If it were a concert at Sydney Opera House, it would take about 4 sold-out performances for that many people to see it.
ಮಾನವೀಯ ಮೌಲ್ಯ ಎತ್ತಿ ಹಿಡಿದ ನಾಟಕ ರಾವಿನದಿಯ ದಂಡೆಯಲ್ಲಿ
Posted in ನಾಟಕ ನೋಟ on ಆಗಷ್ಟ್ 26, 2014| 1 Comment »
ರಾವಿನದಿಯ ದಂಡೆಯಲ್ಲಿ ಎಂಬ ನಾಟಕವನ್ನು ೨೪.೮.೨೦೧೪ರಂದು ಬೆಳಗ್ಗೆ ೧೧.೪೫ಕ್ಕೆ ರಂಗಾಯಣದ ಭೂಮಿಗೀತ ಸಭಾಂಗಣದಲ್ಲಿ ಮೈಸೂರಿನ ಪರಿವರ್ತನ ತಂಡದವರು ವಿಜಯಕರ್ನಾಟಕ ಪತ್ರಿಕೆ, ಹಾಗೂ ರಂಗಾಯಣದ ಸಹಯೋಗದಲ್ಲಿ ಪ್ರಸ್ತುತಪಡಿಸಿದರು. ನಿರ್ದೇಶನ ಎಸ್. ಆರ್. ರಮೇಶ, ಪ್ರಾಂಶುಪಾಲರು ಬಸುದೇವ ಸೋಮಾನಿ ಕಾಲೇಜು, ಹಿಂದಿ ಮೂಲ: ಅಸ್ಗರ್ ವಜಾಹಿತ್ ಬರೆದ ಜಿಸ್ನೇ ಲಾಹೋರ್ ನಹಿ ದೇಖಾ ಓ ಜನ್ಮ್ಯಾಹಿ ನಹಿ, ಕನ್ನಡಕ್ಕೆ ರೂಪಾಂತರ: ಡಾ. ತಿಪ್ಪೆಸ್ವಾಮಿ, ಕವಿತೆ ಇಟಗಿ ಈರಣ್ಣ.
ದೇಶ ವಿಭಜನೆಯಲ್ಲಿ ತನ್ನ ಆಸ್ತಿಯನ್ನೆಲ್ಲ ಕಳೆದುಕೊಂಡು ಮಿರ್ಜಾ ಸಿಖಂದರ್ ಕುಟುಂಬಸಮೇತ ಲಖನೌ ತೊರೆದು ಪಾಕಿಸ್ಥಾನಕ್ಕೆ ಸೇರಿದ ಲಾಹೋರ್ ನಗರಕ್ಕೆ ಬಂದಾಗ ರತನ್ ತಾಯಿ ಎಂಬ ಹಿಂದೂ ಸಮುದಾಯದವರ ಬಂಗಲೆ ಅವರಿಗೆ ಅಲಾಟ್ ಆಗಿ ಸಿಗುತ್ತದೆ. ಆ ಮನೆಯಲ್ಲಿ ರತನ್ ತಾಯಿ ತನ್ನ ಕುಟುಂಬದವರೆಲ್ಲರನ್ನೂ ದಂಗೆಯಲ್ಲಿ ಕಳೆದುಕೊಂಡು ಒಬ್ಬಳೆ ಆ ಮನೆಯ ಮಹಡಿಯಲ್ಲಿ ವಾಸವಾಗಿರುತ್ತಾಳೆ. ಲಾಹೋರಿನಿಂದ ಎಲ್ಲ ಹಿಂದೂಗಳು ಊರು ಬಿಟ್ಟು ಹೋದರೂ ರತನ್ ತಾಯಿ ಹುಟ್ಟಿದೂರು ತೊರೆದು ಹೋಗಲು ಸಿದ್ಧವಿರುವುದಿಲ್ಲ. ಒಂದೇ ಒಂದು ಹಿಂದೂ ಕುಟುಂಬ ಅಲ್ಲಿರುವುದಿಲ್ಲ. ರತನ್ ತಾಯಿ, ಸಿಖಂದರ್ ಕುಟುಂಬದ ನಡುವೆ ಮೊದಲು ವಿರಸ ಏರ್ಪಟ್ಟರೂ, ರತನ್ ತಾಯಿಯವರ ಮಾನವೀಯತೆ, ಸೇವಾಮನೋಭಾವದಿಂದ ಎರಡೂ ಕುಟುಂಬದಲ್ಲಿ ಮಧುರ ಬಾಂಧವ್ಯದ ಸಸಿ ಚಿಗುರೊಡೆದು ಕ್ರಮೇಣ ಅದು ಬೇರು ಬಿಟ್ಟು ಗಟ್ಟಿಯಾಗುವ ಹಂತ ತಲಪುತ್ತದೆ. ಅನ್ಯಧರ್ಮದವರು ಪಾಕಿಸ್ಥಾನದಲ್ಲಿ ಇರಬಾರದು ಎಂದು ಮುಸ್ಲೀಂ ಲೀಗ್ ನಾಯಕ ಪೈಲ್ವಾನ್ ಅವನ ಕಡೆಯವರು ಸಿಕಂದರ್ ಕುಟುಂಬಕ್ಕೆ ತೊಂದರೆ ಕೊಡಲು ಮುಂದಾಗುತ್ತಾರೆ. ಮಿರ್ಜಾ ಅವನಿಗೆ ಸೊಪ್ಪು ಹಾಕುವುದಿಲ್ಲ. ಇದರಿಂದ ಅವನು ಕೆರಳುತ್ತಾನೆ. ಈ ವಿಷಯ ರತನ್ ತಾಯಿಗೆ ತಿಳಿದು ಊರು ಬಿಟ್ಟು ಹೋಗಲು ಮುಂದಾಗುತ್ತಾಳೆ. ಆಗ ಕವಿ ನಾಸಿರ್ ತಡೆದು ವಾಪಾಸ್ ಮನೆಗೆ ಕರೆತರುತ್ತಾರೆ. ಸಿಕಂದರ್ ಕುಟುಂಬ ಅವರನ್ನು ಹೋಗಲು ಬಿಡದೆ ಪ್ರೀತಿಯ ಬಂಧನದಲ್ಲಿ ಕಟ್ಟಿ ಹಾಕುತ್ತಾರೆ. ಒಂದೇ ಮನೆಯಲ್ಲಿ ಎಲ್ಲರೂ ಖುಷಿಯಿಂದ ಬಾಳುತ್ತಾರೆ. ದೀಪಾವಳಿ ಹಬ್ಬವನ್ನು ಎಲ್ಲರೂ ಒಡಗೂಡಿ ಆಚರಿಸುತ್ತಾರೆ, ಅದನ್ನು ಪೈಲ್ವಾನ್ ಬಂದು ಕೆಡಿಸುತ್ತಾನೆ.
ರತನ್ ತಾಯಿ ವಯೋಧರ್ಮದಿಂದ ಮಡಿಯುತ್ತಾಳೆ. ಮುಸ್ಲಿಂ ಪಂಗಡದ ಎಲ್ಲರೂ ಅವಳ ಅಂತ್ಯಸಂಸ್ಕಾರವನ್ನು ನೆರವೇರಿಸಲು ಕೈಜೋಡಿಸುತ್ತಾರೆ. ಹಿಂದೂಪದ್ಧತಿಯಂತೆ ರಾವಿನದಿಯ ದಂಡೆಯಲ್ಲಿ ದೊಡ್ಡಮಗನ ಸ್ಥಾನದಲ್ಲಿದ್ದು ಮಿರ್ಜಾರೇ ನೆರವೇರಿಸುತ್ತಾರೆ. ಇದಕ್ಕೆ ಮೌಲ್ವಿಗಳ ಒಪ್ಪಿಗೆಯೂ ಇರುತ್ತದೆ. ಇದನ್ನು ಸಹಿಸದ ಪೈಲ್ವಾನ್ ಮೌಲ್ವಿಗಳನ್ನು ಇರಿದು ಕೊಲ್ಲುತ್ತಾನೆ. ಅಲ್ಲಿಗೆ ನಾಟಕ ಕೊನೆಗೊಳ್ಳುತ್ತದೆ.
ಸುಮಾರು ೨ ಗಂಟೆಗಳ ಕಾಲ ಪ್ರೇಕ್ಷಕರು ನಾಟಕದೊಳಗೆ ತಲ್ಲೀನರಾಗುತ್ತಾರೆ. ಕೊನೆಗೆ ವಿಷಾದದೊಂದಿಗೆ ಕಣ್ಣು ಒದ್ದೆಯಾಗುತ್ತದೆ. ಮತೀಯ ಗಲಭೆಗಳು, ಬೇರೆ ಧರ್ಮೀಯರನ್ನು ಕಂಡರಾಗದವರು, ಧರ್ಮದ ಹೆಸರಿನಲ್ಲಿ ತಮ್ಮ ಬದುಕಿನ ಬಂಡಿ ಎಳೆಯುತ್ತಿರುವವರನ್ನು ಎಲ್ಲ ಕಾಲದಲ್ಲೂ ಕಾಣುತ್ತೇವೆ. ಯಾರೇ ಆದರೂ ಪರಿಸ್ಥಿತಿಯ ಕೈವಶಕ್ಕೆ ಸಿಕ್ಕು ದೂರದೇಶದಲ್ಲಿ ಜೀವನ ನಡೆಸುವ, ಅಥವಾ ಹುಟ್ಟಿದ ಊರಲ್ಲೆ ಬೆಳೆದು ಅಲ್ಲಿ ಬದುಕಲು ಸಾಧ್ಯವಾಗದೆ ಇರುವ ಸಂದರ್ಭಗಳಲ್ಲಿ ಮಾನವ ಸಹಜ ಪ್ರೀತಿ, ಕರುಣೆ, ಸಹಾಯ ಮಾಡುವ ಮನೋಭಾವ ತೋರಿದರೆ ಅದೇ ದೊಡ್ಡ ಮಾನವೀಯತೆ. ನಮ್ಮ ಸಮಾಜದ ಆರೋಗ್ಯ ಕಾಪಾಡುವ ತಂತುಗಳಾದರೆ ಸಾಕು. ಈ ಸರಳ ತತ್ತ್ವವನ್ನು ಎಲ್ಲರೂ ಮನದೊಳಗೆ ಬೆಳೆಸಿಕೊಳ್ಳಬೇಕು. ಇದು ನಾಟಕದ ತಿರುಳು.
ಮೌಲ್ವಿಗಳನ್ನು ಕೊಲ್ಲುವ ಸನ್ನಿವೇಷ ಇಲ್ಲದಿರುತ್ತಿದ್ದರೆ ನಾಟಕದ ತೂಕ ಇನ್ನೂ ಹೆಚ್ಚುತ್ತಿತ್ತು ಎಂದು ನನ್ನನಿಸಿಕೆ. ನಾಟಕದಲ್ಲಿ ಬರುವ ಕೆಲವು ಮಾತುಗಳು, ‘ತೊಂದರೆಗಳನ್ನು ತೊಂದರೆಗಳೆಂದು ತಿಳಿದರೆ ತಾನೆ ಕಷ್ಟ’, ‘ಅನ್ಯ ಧರ್ಮದ ಬಗ್ಗೆ ನಂಬಿಕೆ ಎಂಬ ಗಂಧ ಇಲ್ಲದವನ ಬಗ್ಗೆ ನನಗೆ ನಂಬಿಕೆ ಇಲ್ಲ’ ಇತ್ಯಾದಿ, ಕೆಲವಾರು ಷಾಯಿರಿಗಳು ಮನದೊಳಗೆ ನಿಲ್ಲುತ್ತವೆ, ಆಗಾಗ ಮೆಲುಕು ಹಾಕುವಂತಿವೆ.
ಪಾತ್ರವರ್ಗದಲ್ಲಿ ಉಷಾ ಭಂಡಾರಿ ( ರತನ್ ತಾಯಿ ಪಾತ್ರದೊಳಗೇ ವಿಲೀನಗೊಂಡಿದ್ದರು), ಶಿವಾಜಿ ರಾವ್ ಜಾಧವ್ ( ನಾಸಿರ್ ಕವಿಯಾಗಿ ಸಂದರ್ಭಕ್ಕೆ ತಕ್ಕಂತೆ ಶಾಯಿರಿಗಳನ್ನು ಹಾಡಿದ್ದರು), ಭುವನಾ, ಹರ್ಷ, ಪೂಜಾ, ಮಂಜು ಉಪಾಧ್ಯಾಯ, ರವಿಕುಮಾರ್, ಸುಮಂತ್, ಪವನ್, ಶಾ-ನಂದೀಶ್, ಅಧ್ಯಾಪಕ್, ಬೆನಕ ನಾಗರಾಜ್, ಪ್ರವೀಣ್, ನಿಂಗಪ್ಪ, ಮಾಧವ ಖರೆ, ದ್ವಾರಕಾನಾಥ್ ಇವರೆಲ್ಲ ಅವರಿಗೆ ಸಿಕ್ಕ ಪಾತ್ರದಲ್ಲಿ ಚೆನ್ನಾಗಿ ಅಭಿನಯಿಸಿದ್ದರು. ನಾಟಕ ನೋಡದವರು ಇನ್ನೆಂದಾದರೂ ಈ ನಾಟಕ ಪ್ರದರ್ಶನ ಏರ್ಪಟ್ಟರೆ ತಪ್ಪದೆ ನೋದಲು ಮರೆಯದಿರಿ.
ಸಾಕಾರದಿಂದ ನಿರಾಕಾರಕ್ಕೆ
Posted in ನಾಟಕ ನೋಟ on ಅಕ್ಟೋಬರ್ 17, 2012| 1 Comment »
ಬೈರಪ್ಪನವರ ಕಾದಂಬರಿ ನಿರಾಕರಣದ ರಂಗರೂಪ ಏಕವ್ಯಕ್ತಿ ಪ್ರದರ್ಶನ ಮೈಸೂರಿನ ಸುರುಚಿ ರಂಗಮನೆಯಲ್ಲಿ ತಾರೀಕು ೯ ಮತ್ತು ೧೦-೧೦-೨೦೧೨ರಂದು ಏರ್ಪಾಡಾಗಿತ್ತು.
ಸಂಕ್ಷಿಪ್ತ ಕಥೆ ಸಾರ ಇಂತಿದೆ: ನರಸಿಂಹ ೫ ಮಕ್ಕಳ ತಂದೆ. ಮೊದಲ ಪತ್ನಿ ೩ ಮಕ್ಕಳನ್ನು ಹಡೆದು ಕಣ್ಣುಮುಚ್ಚಿದಳು. ಮೊದಲ ಪತ್ನಿಯ ತಂಗಿಯನ್ನೇ ಎರಡನೇ ಮದುವೆಯಾಗಿ ಅವಳು ಅವಳಿ ಮಕ್ಕಳನ್ನು ಹೆತ್ತು ಇಹಲೋಕ ತ್ಯಜಿಸಿದಳು. ಈ ೫ ಮಕ್ಕಳನ್ನು ಸಾಕಲಾರದೆ ದತ್ತು ಕೊಡುತ್ತಾನೆ. ದತ್ತುಕೊಟ್ಟಮೇಲೆ ಮುಂಬಯಿಯಲ್ಲಿರಲು ಮನಸ್ಸಾಗದೆ ಕಾಶಿ ಹರಿದ್ವಾರ ಅಂತ ತಿರುಗುತ್ತ ಸಂನ್ಯಾಸ ಸ್ವೀಕರಿಸಿ ನಿಸ್ಸಂಗಾನಂದನಾಗಿ ಹೆಸರು ಪಡೆಯುತ್ತಾನೆ. ಅಲ್ಲೂ ಕೂಡ ನೆಮ್ಮದಿ ಸಿಗದೆ ಸಂನ್ಯಾಸ ತ್ಯಜಿಸಿ ಮರಳಿ ಊರಿಗೇ ಬರುತ್ತಾನೆ. ಅಲ್ಲಿ ಅನ್ನಪೂರ್ಣ ಆಶ್ರಮದಲ್ಲಿಯ ೫೦ ಮಕ್ಕಳ ಯೋಗಕ್ಷೇಮಪಾಲಕನಾಗಿ ಸೇರುತ್ತಾನೆ. ಅಲ್ಲಿಯ ಕೆಲಸಗಾರ ಬೇಳೆ ನರಸಿಂಹನ ದತ್ತುಮಕ್ಕಳ ಈಗಿನ ಸ್ಥಿತಿ ಹೇಗಿದೆಯೆಂದು ತಿಳಿಸುತ್ತಾನೆ. ೫ ಮಕ್ಕಳಲ್ಲಿ ಒಬ್ಬ ಸತ್ತು ಇನ್ನಿಬ್ಬರು ನೆಮ್ಮದಿಯಿಂದ ಇದ್ದು, ಮತ್ತಿಬ್ಬರು ನೆಲೆ ಇಲ್ಲದೆ ಇದ್ದಾರೆ ಎಂಬ ಮಾಹಿತಿ ತಿಳಿದು ಚಿತ್ತ ಚಂಚಲವಾಗುತ್ತದೆ. ಮಕ್ಕಳಿಬ್ಬರೂ ಅವನಿರುವ ಆಶ್ರಮಕ್ಕೆ ಬರುತ್ತಾರೆ. ಹಾಗೂ ಮಗಳು ಭವಾನಿ ಪ್ರಶ್ನೆ ಮಾಡುತ್ತಾಳೆ. ತಮ್ಮನಾದ ರಾಮನನ್ನು ತಮ್ಮ ಮಗನೆಂದು ಒಪ್ಪಿಕೊಳ್ಳಿ ಎಂದು ವಿನಂತಿಸಿಕೊಳ್ಳುತ್ತಾಳೆ. ಒಪ್ಪಿಕೊಳ್ಳಲು ನರಸಿಂಹನ ಮನಸ್ಸು ಸಹಕರಿಸುವುದಿಲ್ಲ. ಮನದಲ್ಲಿ ನಿರಂತರ ವಿಪ್ಲವ ನಡೆದು ಕೊನೆಗೂ ರಾಮನನ್ನು ಮಗನೆಂದು ಒಪ್ಪಿಕೊಳ್ಳಲು ನಿಶ್ಚಯಿಸುತ್ತಾನೆ. ನೀರು ಹರಿಯದೇ ಇದ್ದಾಗಲೂ ಅದನ್ನು ನದಿ ಅನ್ನಬಹುದೆ? ಹರಿದರೆ ಮಾತ್ರ ಕಾಲ. ಹೆಪ್ಪುಗಟ್ಟಿದರೆ ಅಲ್ಲ. ಉಷ್ಣ ಚಂಚಲ, ಶೀತ ಅಚಲ ಎಂಬ ಮಾತುಗಳಿಂದ ಆರಂಭವಾದ ನಾಟಕ ನರಹರಿ ಬಯಲಿನಿಂದ ಬೆಟ್ಟ ಏರಿ, ಅಲ್ಲೂ ಇರಲಾರದೆ ತಳ್ಳಲ್ಪಡುವ ನರಹರಿಯ ಜೀವನ ಚಿತ್ರಣವೇ ನಿರಾಕರಣದ ಮೂಲ.
ಯಾವ ಚಟಕ್ಕೂ ಬೀಳಬಾರದು ಎಂದು ಎರಡೆರಡು ಸಲ ಬರುತ್ತದೆ. ಆದರೆ ನರಸಿಂಹ ೨ ಬಾರಿ ಗುಟ್ಕಾ ತುಟಿಯೆಡೆಗೆ ಹಾಕುವುದನ್ನು (ಅಭಿನಯಿಸಿದ್ದು ಮಾತ್ರ) ತೋರಿಸಿದ್ದು ಮಾತ್ರ ವಿಪರ್ಯಾಸ ಎನ್ನಬಹುದು.
ಸಂಗೀತ ನಿರ್ದೇಶನ ರವೀಶ, ವಸ್ತ್ರಾಲಂಕಾರ- ರಾಜೇಶ್ವರೀ ವಸ್ತ್ರಾಲಯ, ಬೆಳಕು ಗೀತಾಂಜಲಿ