೨೬-೫-೨೦೧೪ ಸಂಜೆ ೬ ಗಂಟೆಗೆ ಎಲ್ಲರ ಮನದಲ್ಲೂ ಹರ್ಷ. ೧೨೫ ಕೋಟಿ ಜನರ ಭರಪೂರ ಆಶೋತ್ತರ ಹೆಗಲಲ್ಲಿಟ್ಟುಕೊಂಡು ನಮ್ಮ ದೇಶದ ಪ್ರಧಾನಮಂತ್ರಿಯಾಗಿ ನರೇಂದ್ರ ದಾಮೋದರದಾಸ್ ಮೋದಿಯವರು ಪಟ್ಟಾಭಿಷೇಕಗೊಳ್ಳುವ ಕ್ಷಣವದು. ಸಂಜೆ ೫.೩೦ಕ್ಕೆ ವ್ಯಾಯಾಮಕ್ಕೆ ಚಕ್ಕರ್ ಹೊಡೆದು ನಾನು ದೂರದರ್ಶನದ ಮುಂದೆ ಹಾಜರ್! ರಾಷ್ಟ್ರಪತಿ ಭವನದ ಮುಂಭಾಗ ವಿಶಾಲ ಅಂಗಳದಲ್ಲಿ ಮುಸ್ಸಂಜೆ ಹೊತ್ತಲ್ಲಿ ನಡೆಯುವ ಸಂಭ್ರಮವನ್ನು ನೋಡಲು ಸಾಕಷ್ಟು ಆಹ್ವಾನಿತರು ಅದಾಗಲೇ ಆಸೀನರಾಗಿದ್ದರು. ಪ್ರಮುಖರು ಒಬ್ಬೊಬ್ಬರೇ ಬಂದು ತಮಗೆ ನಿಗದಿಗೊಳಿಸಿದ ಸ್ಥಳದಲ್ಲಿ ಕೂತರು. ಬೆಂಗಳೂರು ದೂರದರ್ಶನದ ಮಹೇಶ ಜೋಶಿ, ರವಿಶಂಕರ್ ಗುರೂಜಿ, ಶ್ರೀ ಶ್ರೀ ಪೇಜಾವರ ವಿಶ್ವೇಶ್ವರ ತೀರ್ಥ ಸಾಮೀಜಿ ಆಸೀನರಾಗಿದ್ದದ್ದು ಕಂಡೆ. ತುಂಬಿದ ಸಭಾಂಗಣವನ್ನು ನೋಡುವುದೇ ಚಂದ. ಮೋದಿಯವರು ಸಂಜೆ ಆರು ಗಂಟೆಗೆ ಸಭಾಂಗಣಕ್ಕೆ ಬಂದರು.
ಭಾರತದ ಪ್ರಧಾನಮಂತ್ರಿಯ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಇದೇ ಮೊದಲ ಸಲ ಸಾರ್ಕ್ ರಾಷ್ಟ್ರಗಳ ನಾಯಕರನ್ನು ಆಹ್ವಾನಿಸಿದ್ದು, ಅವರೆಲ್ಲ ಬಂದು ಈ ಅವಿಸ್ಮರಣೀಯ ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ನೇಪಾಳ ಪ್ರಧಾನಿ ಸುಶಿಲ್ ಕೊಯಿರಾಲ, ಶ್ರೀಲಂಕಾ ಅಧ್ಯಕ್ಷ ಮಹಿಂದಾ ರಾಜಪಕ್ಸ, ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್, ಭೂತಾನ್ ಪ್ರಧಾನಿ ಷೆರಿಂಗ್ ತೊಬ್ಗೇ, ಆಫ್ಘಾನಿಸ್ತಾನದ ಅಧ್ಯಕ್ಷ ಹಮೀದ್ ಕರ್ಜಾಯಿ, ಮಾಲ್ಡೀವ್ಸ್ ಅಧ್ಯಕ್ಷ ಅಬ್ದುಲ್ಲಾ ಯಮೀನ್ ಅಬ್ದುಲ್ ಗಯೂಮ್, ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರ ಪ್ರತಿನಿಧಿಯಾಗಿ ಸ್ಪೀಕರ್ ಶಿರಿನ್ ಚೌಧರಿ, ಸೇರಿದಂತೆ ಉಳಿದ ರಾಷ್ಟ್ರಗಳ ನಾಯಕರು ಆಗಮಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಮಾರಿಷಸ್ ಪ್ರಧಾನಿ ನವೀನ್ ತಾಮ್ ಗುಲಾಮ್ ಕೂಡ ಆಗಮಿಸಿದ್ದರು.
ರಾಜಪಕ್ಸ ವಿರುದ್ಧ ತಮಿಳುನಾಡಿನಲ್ಲಿ ವಿವಿಧ ರಾಕ್ಜಕೀಯ ಪಕ್ಷಗಳು ಪ್ರತಿಭಟನೆ ನಡೆಸಿವೆ. ರಾಜಪಕ್ಸ ಅವರನ್ನು ಕರೆಸಿದ್ದಕ್ಕೆ ತಮಿಳುನಾಡು ಮುಖ್ಯಮಂತ್ರಿ ಜಯಲಲಿತ ದೆಹಲಿಗೆ ಹೋಗಲಿಲ್ಲ. ಆ ಗೈರುಹಾಜರಿ ಅವರ ಮನಸ್ಸಿನ ಹುಳುಕನ್ನು ಹೊರಹಾಕಿತು. ಕರ್ನಾಟಕ ಮುಖ್ಯಮಂತ್ರಿ ಸಿದ್ಧರಾಮಯ್ಯ ಕೂಡ ಈ ಸಮಾರಂಭಕ್ಕೆ ಹೋಗಲಿಲ್ಲ. ಅವರು ಹೋಗದೆ ಇದ್ದದ್ದರಿಂದ ದೇಶಕ್ಕೆ ಯಾವ ನಷ್ಟವೂ ಆಗಲಿಲ್ಲ. ಅವರಿಗೇ ವೈಯಕ್ತಿಕ ನಷ್ಟ ಅಷ್ಟೆ. ಸಿದ್ದರಾಮಯ್ಯ ಈ ಸಮಾರಂಭಕ್ಕೆ ಪಾಲ್ಗೊಳ್ಳದೆ ಇದ್ದದ್ದಕ್ಕೆ ೨೭ ಮೇ ೨೦೧೪ರ ಪ್ರಜಾವಾಣಯಲ್ಲಿ ಸಂಪಾದಕೀಯ ಪುಟದಲ್ಲಿ `ಮಹಾ ಪ್ರಮಾದ’ ಎಂಬ ತಲೆಬರಹ ಕೊಟ್ಟು ಅವರಿಗೆ ಝಾಡಿಸಿ ಲೇಖನ ಪ್ರಕಟಿಸಿತ್ತು. ಅದನ್ನು ಓದಿ ಓದುಗರು ಪಶ್ಚಾತ್ತಾಪ ಪಟ್ಟಿರಬಹುದೇ ಹೊರತು ನಮ್ಮ ಮುಖ್ಯಮಂತ್ರಿಗಳು ನೊಂದುಕೊಂಡಿರಲಿಕ್ಕಿಲ್ಲ ಎಂದು ಬರೆದವರಿಗೂ ಗೊತ್ತು, ಓದಿದವರಿಗೂ ಗೊತ್ತು!
ಎಲ್ಲ ಗಣ್ಯರು ಬಂದು ಆಸೀನರಾದಮೇಲೆ ರಾಷ್ಟ್ರಪತಿ ಪ್ರಣವ ಮುಖರ್ಜಿಯವರು ಬಂದರು. ಮೊದಲಿಗೆ ರಾಷ್ಟ್ರಗೀತೆ. ಎಲ್ಲರೂ ಎದ್ದು ನಿಂತು ಗೌರವ.
ತದನಂತರ ೧೬ನೇ ಲೋಕಸಭೆ ಪ್ರವೇಶಕ್ಕೆ ಸಚಿವರಿಂದ ಪಮಾಣವಚನ ಸ್ವೀಕಾರ ಸಮಾರಂಭ. ಪ್ರಥಮವಾಗಿ ನರೇಂದ್ರಮೋದಿಯವರಿಗೆ ರಾಷ್ಟ್ರಪತಿಯವರಿಂದ ಆಹ್ವಾನ. ಮೋದಿಯವರು ವೇದಿಕೆಗೆ ಬಂದು `ಮೈ ನರೇಂದ್ರ ದಾಮೋದರದಾಸ್ ಮೋದಿ ಈಶ್ವರ್ ಕಿ ಶಪಥ್ ಲೇತಾ ಹೂಂ ಕಿ’ ಎಂದು ಗಂಭಿರಭಾವದಿಂದ ಹೇಳಿದಾಗ ಎಲ್ಲರ ಮೊಗದಲ್ಲೂ ಹರ್ಷ.
(ಪ್ರಮಾಣವಚನವನ್ನು ಹೇಳಿದ್ದನ್ನೇ ಎರಡೆರಡು ಸಲ ಹೇಳುವುದು ಏಕೆ ಎಂದು ತಿಳಿಯಲಿಲ್ಲ. ನಿಜಕ್ಕೂ ರಾಷ್ಟ್ರಪತಿಯವರು ಹೇಳಿಕೊಟ್ಟಂತೆ ಹೇಳಬೇಕು. ಅವರು `ಮೈ’ ಎಂದು ಪ್ರಾರಂಭ ಮಾತ್ರ ಮಾಡಿದ್ದರು) ತದನಂತರ ಒಬ್ಬೊಬ್ಬರಾಗಿ ೪೫ ಸದಸ್ಯರಿಗೆ ರಾಷ್ಟ್ರಪತಿಯವರು ಪ್ರಮಾಣವಚನ ಬೋಧಿಸಿದರು. ಕರ್ನಾಟಕದಿಂದ ಮೂವರಿಗೆ ಸಂಪುಟ ಸಚಿವರಾಗುವ ಭಾಗ್ಯ ದೊರೆತಿತು. ಮೊದಲಿಗೆ ಸದಾನಂದ ಗೌಡರು ಓಡೋಡಿ ಬಂದು ಆಂಗ್ಲದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಸದಾನಂದ ಗೌಡರು ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿಯಾರೆಂದು ನನಗೆ ಸಣ್ಣ ನಿರೀಕ್ಷೆ ಇತ್ತು. ಅದು ಹುಸಿಯಾಯಿತು. ಅನಂತಕುಮಾರ್ ಹಿಂದಿಯಲ್ಲಿ, ಸಿದ್ದೇಶ್ವರರು ಆಂಗ್ಲದಲ್ಲಿ ಪ್ರಮಾಣವಚನ ಕೈಗೊಂಡರು. ಯಾರಿಗೂ ಕನ್ನಡ ನೆನಪಿಗೇ ಬರದಿದ್ದುದಕ್ಕೆ ಅಶ್ಚರ್ಯವಿಲ್ಲ. ಹಾಗಿದೆ ಈಗ ಕನ್ನಡದ ಪರಿಸ್ಥಿತಿ.
ಏಳು ಸ್ವರವು ಸೇರಿ ಸಂಗೀತವಾಯಿತು. ಸಂಪುಟಕ್ಕೆ ಏಳು ಮಹಿಳೆ (ಸುಷ್ಮಾ ಸ್ವರಾಜ್, ಉಮಾಭಾರತಿ, ನಜ್ಮಾ ಹೆಪ್ತುಲ್ಲಾ, ಸ್ಮೃತಿ ಇರಾನಿ, ಹರ್ ಸಿಮ್ರತ್ ಕೌರ್, ನಿರ್ಮಲಾ ಸೀತಾರಾಮ್, ಮನೇಕಾಗಾಂದಿ)ಯರ ಸೇರ್ಪಡೆಯಾಗಿದೆ. ಹಾಗೇ ಈ ಏಳು ಮಹಿಳೆಯರು ಸೇರಿ ಏನು ಮಾಡುತ್ತಾರೆ ಎಂದು ಕಾದು ನೋಡೋಣ. ಸುಷ್ಮಾ ಸ್ವರಾಜ್ ಪ್ರಮಾಣ ವಚನ ಓದುವಾಗ ಮೈಕ್ ಅಡ್ಡವಾಗಿ ಅವರ ಮುಖವೇ ಕಾಣುತ್ತಿರಲ್ಲಿಲ್ಲ!
ಎಲ್ಲರ ಪ್ರಮಾಣವಚನ ಸ್ವೀಕಾರ ಮುಗಿದು ರಾಷ್ಟ್ರಗೀತೆಯೊಂದಿಗೆ ಸಮಾರಂಭ ಮುಕ್ತಾಯವಾಯಿತು. ನಾನೊಬ್ಬಳೇ ಟಿವಿ ನೋಡುವುದೇಕೆಂದು ನಮ್ಮ ಅತ್ತೆಯವರು ಎನೋ ಪುಸ್ತಕ ಓದುತ್ತಿದ್ದವರನ್ನು ಕರೆದು ಟಿವಿ ಎದುರು ಕೂರಿಸುವಲ್ಲಿ ಸಫಲಳಾದೆ!
ಪ್ರಧಾನಿಯವರ ಸಂಪುಟದಲ್ಲಿ ೭೫ ವರ್ಷ ಮೀರಿದವರಿಗೆ ಪ್ರವೇಶವಿಲ್ಲ. ಸಂಪುಟ ಸೇರ್ಪಡೆಗೊಂಡವರಲ್ಲಿ ನಜ್ಮಾ ಹೆಪ್ತುಲ್ಲಾ (೭೪) ಅವರೇ ಹಿರಿಯರು. ಇದು ನಿಜಕ್ಕೂ ಮೆಚ್ಚತಕ್ಕ ಅಂಶ.
ಮೋದಿ ಪ್ರಮಾಣವಚನ ಸ್ವೀಕರಿಸಿದ ತರುವಾಯ ಪ್ರಧಾನಿ ಸಚಿವಾಲಯ ವೆಬ್ಸೈಟ್ ಗೆ ಹೊಸ ರೂಪ ನೀಡಿದೆ http://pmindia.nic.in `ಭಾರತದ ಅಭಿವೃದ್ಧಿ ಯಾತ್ರೆಯನ್ನು ಹೊಸ ಎತ್ತರಕ್ಕೆ ಕೊಡೊಯ್ಯಲು ಕಟಿಬದ್ಧರಾಗಿರುವ ನಮಗೆ ನಿಮ್ಮ ಆಶೀರ್ವಾದ, ಬೆಂಬಲ, ಸಕ್ರಿಯವಾಗಿ ಪಾಲ್ಗೊಳ್ಳುವಿಕೆಯನ್ನು ಬೇಡುತ್ತಿದ್ದೇವೆ. ನಾವೆಲ್ಲ ಒಟ್ಟಾಗಿ ಭಾರತದ ಭವ್ಯ ಭವಿಷ್ಯವನ್ನು ಬರೆಯೋಣ’ ಇತ್ಯಾದಿ ಇರುವ ಸಂದೇಶವನ್ನು ಜಗತ್ತಿನ ಮಹಾಜನತೆಗೆ ರವಾನಿಸಿದ್ದಾರೆ.
****
ದೂರದರ್ಶನದಲ್ಲಿ ಪ್ರಸಾರವಾದ ಕೆಲವು ಚಿತ್ರಗಳ ಝಲಕ್. ಮಾಜೀ ಪ್ರಧಾನಿ ದೇವೇಗೌಡರು ಶುಭ್ರ ಬಿಳಿ ಪಂಚೆ ಕಣ್ಣು ಸೆಳೆಯಿತು.
೨೦೧೪ ಮೇ ೨೭ ಕನ್ನಡಪ್ರಭದ ಮುಖ ಪುಟ ವಿನ್ಯಾಸ ಬಲು ಸುಂದರವಾಗಿ ಮೂಡಿತ್ತು. ಮೋದಿ ವೃಕ್ಷದ ರೆಂಬೆ ಕೊಂಬೆಗಳು ೪೫ ಸಚಿವರು. ಮೋದಿಯವರು ಮೊಟ್ಟಮೊದಲ ಬಾರಿ ಸಂಸತ್ ಭವನಕ್ಕೆ ಕಾಲಿಟ್ಟಾಗ ಭಾವಪರವಶರಾದ ಸುದ್ದಿ ಚಿತ್ರ ಪತ್ರಿಕೆಗಳಲ್ಲಿ ಓದಿದೆ. ನಿಜಕ್ಕೂ ಇದು ಹೃದಯಸ್ಪರ್ಶಿಯೆನಿಸಿತು. ಈ ನೋಟ ಎಂಥ ಕಠಿಣ ಹೃದಯಿಗಳನ್ನು ಭಾವಪರವಶಗೊಳಿಸಬಹುದು. ಎಲ್ಲ ಭಾರತೀಯರ ಹೃದಯಕ್ಕೇ ಲಗ್ಗೆ ಇಟ್ಟ ದೃಶ್ಯವಿದು.
ವಿದೇಶೀ ಬ್ಯಾಂಕ್ ಗಳಲ್ಲಿ ಕಪ್ಪುಹಣ ಹೊಂದಿಲ್ಲದಿರುವ ಎಲ್ಲ ಭಾರತೀಯರು ಈ ಕಪ್ಪುಹಣ ವಾಪಾಸ್ ಬರುತ್ತದೆ ಎಂಬ ಆಶಾಭಾವ ತಳೆದಿದ್ದಾರೆ.
ಪ್ರಧಾನಿಗಳ ಮೇಲೆ ಮತ್ತು ಅವರ ಸಚಿವ ಸಂಪುಟವರ್ಗದವರ ಮೇಲೆ ಜನ ಬಹಳ ನಿರೀಕ್ಷೆ ಹೊರಿಸಿದ್ದಾರೆ. ಅವರೆಲ್ಲರೂ ಜನರ ಆಶೋತ್ತರದ ಮಟ್ಟಕ್ಕೇರಿ ಬಹಳ ಸಮರ್ಥ ರೀತಿಯಲ್ಲಿ ಕೆಲಸ ಮಾಡಿ ಈ ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ದು ಭವ್ಯ ಭಾರತದೇಶದ ಹಿರಿಮೆಯನ್ನು ಎತ್ತಿ ಹಿಡಿಯಲಿ. ಅವರಿಗೆ ನಮ್ಮೆಲ್ಲರ ಸಹಕಾರವನ್ನೂ ಕೊಡೋಣ. ಭ್ರಷ್ಟಾಚಾರಮುಕ್ತ ದೇಶವಾಗಲು ಶ್ರಮಿಸೋಣ. ಭಾರತ ಮಾತೆಗೆ ಜಯವಾಗಲಿ.