ಪಾಂಡವರು ೧೨ ವರ್ಷ ವನವಾಸದ ಸಮಯದಲ್ಲಿ ಹೋಗದ ಸ್ಥಳವಿಲ್ಲವೇನೋ? ಅದೆಷ್ಟು ಊರು ನೋಡಿರಬಹುದು ಅವರು. ಇರಲಿ. ಮಂಡ್ಯಜಿಲ್ಲೆಯ ಮಳವಳ್ಳಿ ತಾಲೂಕಿನ ಕಂಚನಹಳ್ಳಿಯಲ್ಲೂ ಪಾಂಡವರು ಇದ್ದರಂತೆ. ಅದುವೇ ಭೀಮನಕಿಂಡಿ. ಅದೊಂದು ಬೆಟ್ಟ. ಆ ಬೆಟ್ಟವನ್ನು ನಾವು ನೋಡದೆ ಇದ್ದರೆ ಹೇಗೆ? ಅದಕ್ಕಾಗಿ ನಾವು ಮೈಸೂರಿನಿಂದ ೫೦ ಮಂದಿ ಒಂದು ಖಾಸಗೀ ಬಸ್ಸಲ್ಲಿ ೧೩-೯-೨೦೧೫ರಂದು ಬೆಳಗ್ಗೆ ೬.೩೦ ಗಂಟೆಗೆ ಮೈಸೂರಿನಿಂದ ಹೊರಟೆವು. ದಾರಿಮಧ್ಯೆ ಬಸ್ ನಿಲ್ಲಿಸಿ ಉಪ್ಪಿಟ್ಟು, ಕೇಸರೀಭಾತ್, ಚಹಾ ಸೇವನೆಯಾಯಿತು.
ಮೈಸೂರು-ಬನ್ನೂರು- ಮಳವಳ್ಳಿ- ಹಲಗೂರು ಮಾರ್ಗವಾಗಿ ಸಾಗಿ ಕಂಚನಹಳ್ಳಿ ಎಂಬ ಫಲಕವಿರುವಲ್ಲಿ ಬಲಕ್ಕೆ ತಿರುಗಿದಾಗ ಊರಿನ ಗೌಡರ ಮನೆ ಸಿಗುತ್ತದೆ. ಅಲ್ಲಿ ವೃತ್ತಾಕಾರವಾಗಿ ನಿಂತು ನಮ್ಮ ನಮ್ಮ ಪರಿಚಯ ಹೊರಹಾಕಿದೆವು.
ಬೆಳಗ್ಗೆ ೧೦.೩೦ಗೆ ಬೆಟ್ಟದ ಕಡೆಗೆ ನಡೆಯಲನುವಾದೆವು. ಊರೊಳಗೆ ತೆಂಗಿನತೋಟ, ಹಿಪ್ಪುನೇರಳೆ, ರಾಗಿ, ಇತ್ಯಾದಿ ಧವಸ ಧಾನ್ಯ ಬೆಳೆಯುವ ಗದ್ದೆಯ ನಡುವೆ ಸುಮಾರು ೨ಕಿಮೀ ದೂರ ಸಾಗಿದಾಗ ಬೆಟ್ಟದ ಬುಡಕ್ಕೆ ತಲಪುತ್ತೇವೆ.
ಅಲ್ಲಿಂದ ಚಪ್ಪಲಿ ಬಿಚ್ಚಿ ಬರಿಗಾಲಿನಲ್ಲಿ ಬೆಟ್ಟ ಹತ್ತಬೇಕು ಎಂಬುದು ಸ್ಥಳೀಯರ ನಂಬಿಕೆ. ನಮ್ಮ ಮಾರ್ಗದರ್ಶಕ ಸ್ಥಳೀಯ ನಿವಾಸಿ ಗಣೇಶ ಎಲ್ಲರಿಗೂ ಚಪ್ಪಲಿ ಶೂ ಅಲ್ಲಿ ಬಿಡಲು ಮನವಿ ಮಾಡಿದ. ಚಪ್ಪಲಿ ಹಾಕಿ ನಡೆದರೆ ಜೇನ್ನೊಣ ದಾಳಿ ಮಾಡುತ್ತದೆ ಎಂದ. ಆದರೆ ಪೇಟೆಯಲ್ಲಿ ಬೆಳೆದ ನಮ್ಮಂಥವರಿಗೆ (ಕೆಲವರಿಗೆ ಮನೆಯೊಳಗೂ ಬರಿಗಾಲಲ್ಲಿ ನಡೆದು ಅಭ್ಯಾಸವಿಲ್ಲ!) ಕಲ್ಲುಮುಳ್ಳು ದಾರಿಯಲ್ಲಿ ಬರಿಗಾಲಲ್ಲಿ ನಡೆಯುವುದು ಅಸಾಧ್ಯ. ಕೆಲವರು ಶೂ, ಚಪ್ಪಲಿ ಬಿಟ್ಟು ನಡೆದರು. ನಾವು ಹೆಚ್ಚಿನವರು ಅವನ ಮಾತಿಗೆ ಬೆಲೆಕೊಡದೆ ಮುಂದುವರಿದೆವು. ಮೊನ್ನೆ ಟಿ.ವಿ. ೯ನವರು ಶೂ ಹಾಕಿ ಹತ್ತಿದ್ದರು. ಅವರಿಗೆ ಜೇನ್ನೊಣ ದಾಳಿ ಮಾಡಿ ಅವರೆಲ್ಲ ಬೆಟ್ಟ ಹತ್ತದೆಯೇ ಹಿಂದಕ್ಕೆ ಬಂದಿದ್ದರು ಎಂಬ ಕಥೆ ಹೇಳಿದ. ಆಗ ನಮ್ಮವರೊಬ್ಬರು, ‘ಅದು ಹಬ್ಬದ ದಿನ, ಮಂಗಳವಾರ ಶುಕ್ರವಾರ ಮಾತ್ರ ಬರಿಗಾಲಲ್ಲಿ ಹೋಗಬೇಕು’ ಎಂದರು. ಅಕಸ್ಮಾತ್ ಜೇನ್ನೊಣ ದಾಳಿ ಮಾಡಿದರೆ ಇಪ್ಪತ್ತು ನಿಮಿಷ ಬೆನ್ನುಮೇಲೆಮಾಡಿ ಅಲ್ಲಾಡದೆ ಮಲಗಿಬಿಡಿ. ಆಗ ಜೇನ್ನೊಣ ಅಲ್ಲಿಂದ ಹೋಗುತ್ತದೆ ಎಂದು ನಮ್ಮ ಗೋಪಕ್ಕ ತಮ್ಮ ಅನುಭವದ ಆಧಾರದಲ್ಲಿ ಹೇಗೆ ಮುಂಜಾಗರೂಕತೆ ವಹಿಸಬೇಕೆಂದು ನುಡಿದರು.
ಮೈಸೂರಿನ ಚಾಮುಂಡಿಬೆಟ್ಟದ ಎರಡರಷ್ಟು ಎತ್ತರವಿರಬಹುದು ಭೀಮನಕಿಂಡಿ ಬೆಟ್ಟ. ಸಮುದ್ರಮಟ್ಟದಿಂದ ೫೬೮೦ ಅಡಿ ಎತ್ತರವಿರುವ ಈ ಬೆಟ್ಟ ಕುರುಚಲು ಗಿಡ, ಮಜ್ಜಿಗೆ ಹುಲ್ಲಿನಿಂದ ಆವೃತವಾಗಿ ಹಸಿರು ಹೊದ್ದಂತೆ ದೂರದಿಂದ ಕಣ್ಣಿಗೆ ಹಿತವಾಗಿ ಕಾಣುತ್ತದೆ. ಇದನ್ನು ಹತ್ತುವುದಕ್ಕೆ ಸ್ವಲ್ಪ ಕಷ್ಟಪಡಬೇಕು. ಮೆಟ್ಟಲುಗಳಿಲ್ಲ. ಸಣ್ಣಪುಟ್ಟ ದೊಡ್ಡಕಲ್ಲುಗಳಿಂದ ಕೂಡಿದ ದಾರಿಯಲ್ಲಿ ಹತ್ತುತ್ತ ಸಾಗಿದೆವು.
ಮುಂದೆ ಗಣೇಶ ಸಾಗಿದ ನಮಗೆ ದಾರಿ ತೋರಲು. ಬೆಟ್ಟದ ಮೇಲಕ್ಕೆ ವಿದ್ಯುತ್ ತಂತಿ ಹಾಕಿದ್ದಾರೆ. ಅದೇ ದಿಕ್ಕಿನಲ್ಲಿ ಸಾಗಿದರೆ ದಾರಿ ತಪ್ಪಲು ಅವಕಾಶವಿಲ್ಲ. ಹತ್ತುತ್ತ ಅಲ್ಲಲ್ಲಿ ನಿಂತು ಸುಧಾರಿಸಿಕೊಂಡು ಮುಂದೆ ಸಾಗಿದೆವು. ಅಯ್ಯೊ ನನ್ನಿಂದ ಸಾಧ್ಯವಿಲ್ಲ, ಇನ್ನು ಎಷ್ಟು ಹತ್ತಬೇಕು ಎಂದು ಕೆಲವರು ಗಣೇಶನನ್ನು ಕೇಳುತ್ತಿದ್ದರು. ಅವನು ನಗುತ್ತ ಈಗ ಕಾಲುಭಾಗವೂ ಹತ್ತಿಲ್ಲ ಎನ್ನುತ್ತಿದ್ದ. ಆಗ ಅವರೆಲ್ಲ ಅಷ್ಟೆ ಹತ್ತಿದ್ದ ನಾವು. ಅಬ್ಬ ಇನ್ನೂ ಎಷ್ಟು ಹತ್ತಬೇಕಪ್ಪ ಎಂದು ಕುಳಿತೇಬಿಡುತ್ತಿದ್ದರು! ಅದಕ್ಕೆ ಗಣೇಶನಿಗೆ ಹೇಳಿದೆ. ನೀನು ಹಾಗೆ ಹೇಳಬೇಡ, ಇನ್ನು ಸ್ವಲ್ಪ ಹತ್ತಿದರೆ ಆಯಿತು ಎನ್ನು. ಇಲ್ಲಾಂದರೆ ಅವರಿಗೆ ಬೆಟ್ಟ ಹತ್ತುವುದು ಕಷ್ಟ. ಇನ್ನೂ ತುಂಬ ಹತ್ತಬೇಕು ಎಂಬ ಭಾವನೆ ಬಂದು ಉತ್ಸಾಹ ಇಳಿದು ಕುಳಿತುಕೊಳ್ಳುತ್ತಾರೆ ಎಂದೆ. ಅದಕ್ಕವನು ನಾವು ಹಳ್ಳಿ ಜನ. ಹಾಗೆಲ್ಲ ಮಾತಾಡಲು (ಸುಳ್ಳು ಹೇಳಲು) ಬರುವುದಿಲ್ಲ ಎಂದ! ಈ ಪೇಟೆಯವರೇ ಸುಳ್ಳು ಹೇಳಲು ಕಲಿಸುವುದು ಎಂದು ಅವನು ಭಾವಿಸಿರಬಹುದು.
ಮೇಲೆ ಹತ್ತುತ್ತ ಸಾಗುತ್ತಿದ್ದಂತೆ ಅಲ್ಲಲ್ಲಿ ದೊಡ್ಡಬಂಡೆಗಲ್ಲುಗಳು ಎದುರಾಗುತ್ತವೆ. ಅದರ ಬುಡದಲ್ಲಿ ಕುಳಿತು ತಂಪಾಗಿ ವಿಶ್ರಾಂತಿ ಬಯಸುವ ಮನಸ್ಸಾಗುತ್ತದೆ. ಬಿಸಿಲು ಬೇರೆ ಜೋರಾಗಿಯೇ ಇತ್ತು. ಸುಮಾರು ಅರ್ಧಭಾಗ ಹತ್ತಿಯಾಗುವಾಗ ಒಂದು ಪುಟ್ಟ ಕೊಳ ಸಿಗುತ್ತದೆ. ಕುಂತಿಕೊಳ? ಎಂದು ಗಣೇಶ ಹೇಳಿದ. ಇದರಲ್ಲಿ ಎಂಥ ಮಳೆಗಾಲದಲ್ಲಾದರೂ ಸರಿಯೇ ಅಥವಾ ಸುಡು ಬೇಸಿಗೆಯಲ್ಲೇ ಆದರೂ ಇಷ್ಟೇ ನೀರು ಇರುತ್ತದೆ. ಈ ನೀರು ಬಲು ಪವಿತ್ರ. ಇದನ್ನು ತಲೆಗೆ ಪ್ರೋಕ್ಷಣೆ ಮಾಡಿಕೊಂಡೇ ಮುಂದೆ ಬೆಟ್ಟ ಹತ್ತಬೇಕು ಎಂದು ಮನವಿ ಮಾಡಿದ. ಹಾಗೆ ಎಲ್ಲರ ತಲೆಗೆ ಬೊಗಸೆಯಿಂದ ನೀರು ಎರಚುತ್ತಿದ್ದ. ಒಲ್ಲೆನೆಂದವರನ್ನೂ ಬಿಡದೆ ನೀರು ಪ್ರೋಕ್ಷಿಸುತ್ತಿದ್ದ. ಯಾರೋ ಒಬ್ಬರು, ‘ನಾನು ಹಾಕಿಸಿಕೊಳ್ಳುವುದಿಲ್ಲ. ಅಸಹ್ಯ ನೀರು. ನೋಡಿ ಅದರ ಬಣ್ಣ’ ಎಂದರು. ಆಗ ಇನ್ನೊಬ್ಬರು, ‘ನಮ್ಮ ಕುಕ್ಕರಹಳ್ಳಿ ಕೆರೆ ನೀರಿಗಿಂಥ ಇದು ಪರಿಶುದ್ಧವಾಗಿದೆ. ಆ ನೀರಾದರೆ ಅಸಹ್ಯ ಕಲುಷಿತ ಎನ್ನಬಹುದು. ಈ ನೀರು ಶುಚಿಯಾಗಿದೆ. ಬಿಸಿಲಿಗೆ ಪಾಚಿಕಟ್ಟಿ ಹಾಗೆ ಕಾಣುತ್ತದೆ ಅಷ್ಟೆ. ಧಾರಾಳವಾಗಿ ತಲೆಗೆ ಹಾಕಿಕೊಳ್ಳಿ’ ಎಂದರು. ಅವರು ಮತ್ತೆ ಮನಸ್ಸು ಬದಲಾಯಿಸಿ ತಲೆಗೆ ನೀರು ಹಾಕಿಸಿಕೊಂಡರು! ಬಿಸಿಲಲ್ಲಿ ನಡೆದು ತಲೆ ಬಿಸಿಯಾಗಿತ್ತು. ತಲೆಗೆ ಮುಖಕ್ಕೆ ತಂಪಾದ ನೀರು ಬೀಳುವಾಗ ಆಹಾ ಎಂಥ ಸುಖ ಎಂದೆನಿಸಿತು. ನೀರು ಎಷ್ಟು ತಂಪಾಗಿತ್ತೆಂದರೆ ಇನ್ನೂ ಮತ್ತಷ್ಟು ತಲೆಗೆ ಮುಖಕ್ಕೆ ಎರಚಿಕೊಳ್ಳೋಣ ಎಂದೆನಿಸುತ್ತಿತ್ತು. ಹೆಚ್ಚಿನವರೂ ಗಣೇಶನ ಮುಂದೆ ನಾಲ್ಕಾರು ಸಲ ತಲೆಬಾಗಿ ನೀರು ಹಾಕಿಸಿಕೊಂಡು ತೃಪ್ತಿಪಟ್ಟರು. ಈ ಕೊಳ ಎಷ್ಟು ಆಳ ಇದೆ ಎಂದೇ ಗೊತ್ತಿಲ್ಲ. ಇಲ್ಲಿ ಒನಕೆ ಹಾಕಿದರೆ ಕೆಲವಾರು ಮೈಲಿ ದೂರದಲ್ಲಿರುವ ಕೊಳದಲ್ಲಿ (ಊರ ಹೆಸರು ಹೇಳಿದ್ದ, ನನಗೆ ಮರೆತುಹೋಗಿದೆ.) ಒನಕೆ ಪ್ರತ್ಯಕ್ಷವಾಗುತ್ತೆ ಎಂದು ಆ ಕೊಳದ ಕಥೆಯನ್ನು ಬಣ್ಣಿಸಿದ. ಅದನ್ನು ಪರೀಕ್ಷಿಸುವ ಗೋಜಿಗೆ ನಾವು ಹೋಗಲಿಲ್ಲ!
ಸುಮಾರು ೧೨.೧೫ ಗಂಟೆಯಾಗುವಾಗ ನಾವು ಕೆಲವರು ಅದೋ ಕಂಡೆನಾ ಭೀಮನಕಿಂಡಿಯಾ ಎಂದು ಹರ್ಷಗೊಂಡೆವು! ಭೀಮನಕಿಂಡಿ ದ್ವಾರದಲ್ಲಿ ನಾವು ಶೂ ಬಿಚ್ಚಿ ಒಳಗೆ ನಡೆದೆವು. ಪುಣ್ಯಕ್ಕೆ ನಮಗೆ ಜೇನ್ನೊಣ ತೊಂದರೆ ಕೊಡಲಿಲ್ಲ. ಭೀಮನಕಿಂಡಿ ದಾಟಿದ್ದೇ ಆಹಾ ಎಂಥ ತಂಪು ಇಲ್ಲಿ. ಆಹಾ ಎಂಥ ಸುಖ. ಹೀಗೇ ಇಲ್ಲೇ ಮಲಗಿದರೆ ಸೊಗಸಾದ ನಿದ್ದೆ ಬಂದೀತು ಎಂದು ಎಲ್ಲ ಉದ್ಗರಿಸಿದರು. ಹೊರಗಿನ ವಾತಾವರಣ ಹೇಗೆಯೇ ಇರಲಿ. ಆದರೆ ಅಲ್ಲಿ ಬಂಡೆಗಲ್ಲಿನ ಕೆಳಗೆ ಹಿತವಾದ ತಂಪಾದ ವಾತಾವರಣ ಸದಾ ಇರುತ್ತದಂತೆ. ಕೆಲವರು ಆಹಾ ಚಳಿ ಎಂದು ಮುದುಡಿ ಕುಳಿತರು. ನಾವು ಸುಮಾರು ೩೦ ಮಂದಿ ತಲಪಿದ್ದೆವು. ಉಳಿದವರು ಇನ್ನೂ ಬಂದಿರಲಿಲ್ಲ. ಈ ಮೊದಲೇ ಕೊಟ್ಟಿದ್ದ ಸೌತೆಕಾಯಿ, ಮುಸುಂಬಿ ಹೆಚ್ಚಿ ತಿಂದೆವು. ಕೆಲವರೆಲ್ಲ ಮಲಗಿ ನಿದ್ದೆ ಹೊಡೆದರು. ಅಲ್ಲಿ ಒಂದು ಪಾರ್ಶ್ವದಿಂದ ಕೆಳಗೆ ನೋಡಿದರೆ ಹಳ್ಳಿಗಳ ಸುಂದರ ದೃಶ್ಯ ನೋಡಿ ತಣಿಯಬಹುದು.
ಭೀಮನಕಿಂಡಿಯ ಮೇಲ್ಭಾಗ ನಿಸರ್ಗನಿರ್ಮಿತ ಬೃಹದಾಕಾರದ ಬಂಡೆಗಲ್ಲಿನ ಕಮಾನು ನೋಡಿ ಬೆರಗಾದೆವು. ಭೀಮನಕಿಂಡಿ ೨೦೦ ಅಡಿ ಅಗಲ, ೨೫೦ ಅಡಿ ಎತ್ತರವಿದೆ. ನೂರಿನ್ನೂರು ಜನ ಕೂರುವಷ್ಟು ಸ್ಥಳವಿದೆ ಅಲ್ಲಿ. ಭೀಮೇಶ್ವರನ ಪುಟ್ಟ ದೇವಾಲಯವಿದೆ. ಬಸವ ಮೂರ್ತಿ ಸುಮಾರು ಎರಡೂವರೆ ಅಡಿ ಎತ್ತರವಿದೆ. ವೈಜ್ಞಾನಿಕವಾಗಿ ಅಧ್ಯಯನ ಕೈಗೊಳ್ಳಲು ಭೀಮನಕಿಂಡಿಯಲ್ಲಿ ವಿಫುಲ ಅವಕಾಶವಿದೆ. ಅಲ್ಲಿಯ ಮಣ್ಣು, ಶಿಲಾಪದರಗಳು ಗ್ರಾನೈಟ್ ಕಲ್ಲಿನಿಂದ ಆವೃತವಾಗಿವೆಯಂತೆ. ಭೀಮನಕಿಂಡಿ ಬಗ್ಗೆ ವೈಜ್ಞಾನಿಕ ವಿಶ್ಲೇಷಣೆ ಸಿಡಿಲಿಗೆ ಬಂಡೆ ಬಿರುಕು ಹೊಂದಿ ಕಿಂಡಿ ಆಗಿರಬಹುದು ಎಂದು.
ಉತ್ಸಾಹ ಕುಂದದ ನಾವು ಕೆಲವರು ಅಲ್ಲಿಂದ ಬಂಡೆಕಲ್ಲು ದಾಟಿ ಬರಿಕಾಲಲ್ಲಿ ಇನ್ನೂ ಮೇಲಕ್ಕೆ ಏರಿದೆವು. ನಡೆದು ಸಾಗುತ್ತ ಹೋದರೆ ದಾರಿ ಮುಗಿಯುವುದೇ ಇಲ್ಲ. ಸ್ವಲ್ಪ ದೂರ ಸಾಗಿದಾಗ ಪುಟ್ಟ ತೊರೆ ಕೊಳ ಎದುರಾಯಿತು. ಅಲ್ಲಿ ಆನೆ ಲದ್ದಿ ಸಾಕಷ್ಟು ಬಿದ್ದಿತ್ತು. ಮುಂದೆ ಸಮೃದ್ಧ ಬಿದಿರಿನ ತೋಪು ಗೋಚರಿಸಿತು. ಅದಕ್ಕೇ ಆನೆಗಳು ಇಲ್ಲಿ ಬರುವುದು. ಅವುಗಳಿಗೆ ಹಬ್ಬ ಈ ಬಿದಿರು ಎಂದರು ಒಬ್ಬರು. ಸ್ಥಳೀಯ ಯುವಕನೊಬ್ಬ ಕೈಯಲ್ಲಿ ಕಣಿಲೆ ಕಟ್ಟು ಹಿಡಿದು ಅಲ್ಲಿ ಪ್ರತ್ಯಕ್ಷನಾದ. ಆ ಕೊಳದ ನೀರು ತೃಪ್ತಿಯಾಗುವವರೆಗೆ ಕುಡಿದ. ನಾವು ಆಶ್ಚರ್ಯವಾಗಿ ನೋಡುತ್ತಲೇ ಇದ್ದೆವು. ನಮ್ಮ ಆಶ್ಚರ್ಯಾತ್ಮಕ ನೋಟ ಅವನಿಗೆ ಅರ್ಥವಾಗಿರಬೇಕು! ಇದು ಶುದ್ಧ ನೀರು ಕುಡಿಯಬಹುದು ಎಂದ. ಪೇಟೆಯಮಂದಿಗೆ ಪ್ಲಾಸ್ಟಿಕ್ ಬಾಟಲಿಯ ಎಷ್ಟು ಹಳೆಯ ನೀರಾದರೂ ಸೈ ಅದೇ ನೀರು ಕುಡಿದು ಗೊತ್ತಷ್ಟೆ! ಆ ನೀರು ಕುಡಿಯುವ ಧೈರ್ಯ ಮಾಡಲಿಲ್ಲ ನಾವು! ಅಲ್ಲಿಗೆ ಕರಡಿ, ಆನೆಗಳು ಸಾಕಷ್ಟು ಬರುತ್ತವಂತೆ ಎಂದು ನುಡಿದ. ಕಣಿಲೆ ಕೀಳುವುದು ತಪ್ಪಲ್ವ ಎಂದದ್ದಕ್ಕೆ ಸ್ವಲ್ಪವೇ ಸಿಕ್ಕಿದ್ದು, ಎಲ್ಲ ಕರಡಿ ತಿಂದೈತೆ ಎಂದು ಅಲ್ಲಿಂದ ನಿರ್ಗಮಿಸಿದ. ನಾವು ಮುಂದೆ ಹೋಗುವುದು ಬೇಡವೆಂದು ತೀರ್ಮಾನಿಸಿ ವಾಪಾಸಾದೆವು. ನಾವು ಕೆಳಗೆ ಬಂದು ಅಲ್ಲಿರುವವರಿಗೆ ನಾವು ನೋಡಿದೆವು ಆನೆ.. ಆನೆ.. .. ಲದ್ದಿಯನ್ನು ಎಂದೆವು!
ಬಂಡೆ ಅಡಿಯಲ್ಲಿ ಕೂತು ವಿಶ್ರಮಿಸಿದೆವು. ಕೆಲವರಿಗೆ ದಾರಿ ತಪ್ಪಿ ತಡವಾಗಿ ಬಂದು ತಲಪಿದರು. ಅಲ್ಲಿ ಕಾರ್ತಿಕ್ ಕೊಳಲು ನುಡಿಸಿದರು. ವೈದ್ಯನಾಥನ್ ಹಾಡಿದರು. ತಮಾಷೆಯಾಗಿ ಹರಟುತ್ತ ಕೂತೆವು. ಇನ್ನು ಹೊರಡೋಣ ಎಂದು ಹೇಳಿದರೂ ಯಾರಿಗೂ ಅಲ್ಲಿಂದ ಏಳುವ ಮನಸ್ಸೇ ಇಲ್ಲ. ಹಾಗಿತ್ತು ವಾತಾವರಣ. ತಂಡದ ಚಿತ್ರ ಕ್ಲಿಕ್ಕಿಸಿಕೊಂಡು ಬೆಟ್ಟ ಇಳಿಯಲು ಅನುವಾದೆವು.
ಒಂದೂಕಾಲು ಗಂಟೆಗೆ ನಾವು ಒಲ್ಲದಮನದಿಂದಲೇ ಹೊರಟೆವು. ಬೆಟ್ಟ ಇಳಿಯುವುದು ಹತ್ತುವುದಕ್ಕಿಂತ ಕಷ್ಟವಪ್ಪ ಎಂದು ಕೆಲವರು ಉದ್ಗಾರ ತೆಗೆದರು. ಇಳಿಯುವಾಗ ಕೆಲವರಿಗೆ ಕಾಲು ನಡುಗುವುದು ಕಾಣುತ್ತಿತ್ತು. ನಿಧಾನವಾಗಿ ಬೆಟ್ಟ ಇಳಿದೆವು. ನನಗೆ ಬೆಟ್ಟ ಹತ್ತುವುದಕ್ಕಿಂತ ಇಳಿಯುವುದೇ ಸಲೀಸು. ಹಾಗಾಗಿ ನಾನು ಕೆಲವರನ್ನೆಲ್ಲ ಹಿಂದಿಕ್ಕಿ ಮುಂದೆ ಹೊರಟೆ. ಕೆಲವು ಕಡೆ ಕೂತು ನಿಧಾನವಾಗಿ ಇಳಿಯಬೇಕಿತ್ತು. ನಿನ್ನೆಯಷ್ಟೆ ಮಳೆಬಿದ್ದ ಕುರುಹಿತ್ತು.
ಭೀಮನಕಿಂಡಿ ನಿರ್ಮಾಣವಾದ ಬಗ್ಗೆ ಅದರ ಹಿಂದೆ ಒಂದು ಸ್ವಾರಸ್ಯವಾದ ಕಥೆ ಪ್ರಚಲಿತದಲ್ಲಿದೆ. ಆ ಕಥೆಯನ್ನು ಅಲ್ಲಿಯ ಸ್ಥಳೀಯರು ಹೇಳುವುದನ್ನು ಕೇಳುವುದೇ ಸೊಗಸಾಗಿರುತ್ತದೆ. ಅವರು ಹೇಳುವಾಗ ಕಣ್ಣಾರೆ ನೋಡಿದ್ದರೇನೋ ಎಂಬಂತೆ ಭಾಸವಾಗುತ್ತದೆ: ಪಾಂಡವರು ೧೨ ವರ್ಷ ವನವಾಸದ ಸಂದರ್ಭದಲ್ಲಿ ಇಲ್ಲಿ ನೆಲೆಸಿದ್ದರಂತೆ. ಅಲ್ಲಿ ಭೀಮಪ್ಪ ಹೊಲ ಉಳುಮೆ ಮಾಡುತ್ತಿದ್ದನಂತೆ. ಒಂದುದಿನ ಕುಂತವ್ವ ಮಗನಿಗೆ ಊಟ ಕೊಂಡೋದಾಗ ದಾರಿಯಲ್ಲಿ ಬೃಹದಾಕಾರದ ಬಂಡೆ ಎದುರಾಯಿತಂತೆ. ಬಂಡೆಯ ಆಚೆಬದಿ ಭೀಮಪ್ಪ ಇದ್ದನಂತೆ. ಮಗ, ಭೀಮಪ್ಪ, ಊಟ ತಂದಿದ್ದೀನೆ, ಅಲ್ಲಿಗೆ ಬರಲು ದಾರಿ ಕಾಣುತ್ತಿಲ್ಲ ಎಂದು ಕೂಗಿ ಹೇಳಿದಳಂತೆ. (ಭೀಮಪ್ಪ ಆಚೆಬದಿ ಹೇಗೆ ಹೋದ? ಎಂದು ಮನದಲ್ಲಿ ಪ್ರಶ್ನೆ ಎದ್ದಿತು. ಎಲೆ ಮಂಕೆ, ಭೀಮಪ್ಪ ಬಲಭೀಮ. ಬಂಡೆಹತ್ತಿ ಹೋಗಿರಬಹುದಲ್ಲ ಎಂದು ಮನಸ್ಸು ಬೈದು ಕೂರಿಸಿತು! ಹೌದಲ್ಲ ಎಂದು ಸುಮ್ಮನಾದೆ!) ಆಗ ಭೀಮ ಗದೆಯಿಂದ ಆ ಬಂಡೆಗೆ ಬಲವಾದ ಏಟು ಹಾಕಿದನಂತೆ. ಬಂಡೆ ಇಬ್ಭಾಗವಾಯಿತಂತೆ. ಕುಂತವ್ವ ಸರಾಗವಾಗಿ ಹೋಗಿ ಭೀಮಪ್ಪನಿಗೆ ಊಟ ಕೊಟ್ಟಳಂತೆ. ಭೀಮಪ್ಪ ತೃಪ್ತಿಯಿಂದ ಊಟ ಮಾಡಿದನಂತೆ. ಊಟವಾಗಿ ಭೀಮಪ್ಪ ಮಲಗಿದ್ದಾಗ ಕುಂತವ್ವ ಮಗನ ಬೆನ್ನು ಸವರುತ್ತಿದ್ದಳಂತೆ. ಆಗ ಅವನ ಬೆನ್ನಿನಿಂದ ನಿಂಬೆಗಾತ್ರದಷ್ಟು ಕೊಳೆ ಕೆಳಗೆ ಬಿದ್ದಿತಂತೆ. ಅದರಿಂದ ಕುಂತವ್ವ ಬಸವನನ್ನು ನಿರ್ಮಿಸಿ ಅಲ್ಲಿ ಪ್ರತಿಷ್ಠಾಪಿಸಿದಳಂತೆ. ಅದಕ್ಕೆ ಭೀಮೇಶ್ವರ ಎಂದು ಹೆಸರಿಟ್ಟಳಂತೆ. ಆ ಮೂರ್ತಿ ಎಷ್ಟು ಮೆದುವಾಗಿದೆಯೆಂದರೆ ಒಂದು ಕಡ್ದಿ ಚುಚ್ಚಿದರೆ ಒಳಕ್ಕೆ ಹೋಗುತ್ತಂತೆ.
ಬೆಟ್ಟ ಇಳಿದು ಬರುತ್ತಿರಬೇಕಾದರೆ ಗದ್ದೆಯಲ್ಲಿ ಹಸುಮೇಯಿಸುತ್ತಿದ್ದ ಒಬ್ಬಾಕೆ ನನ್ನನ್ನು ತಡೆದು ನಿಲ್ಲಿಸಿ ದೇವಸ್ಥಾನ ನೋಡಿದ್ರಾ? ನೀವು ಹೋಗುತ್ತ ಅರ್ಚಕರನ್ನು ಕರೆದುಕೊಂಡು ಹೋಗಬೇಕಿತ್ತು. ಪೂಜೆ ಮಾಡಿಸಬೇಕಿತ್ತು. ಎಲ್ಲಿಂದ ಬಂದದ್ದು, ಇತ್ಯಾದಿ ಮಾತಾಡಿಸಿ ಈ ಕಥೆಯನ್ನು ನನಗೆ ಹೇಳಿದರು. ಮತ್ತೆ ಮುಂದುವರಿದು ಅವರು ಮಾತಾಡುತ್ತ, ನಮ್ಮ ಊರಲ್ಲಿ ಜಗಳ, ಮನಸ್ತಾಪ ಯಾವುದೂ ಆಗುವ ಹಾಗಿಲ್ಲ. ಹಾಗೇನಾದರೂ ಆದರೆ ಈ ಭೀಮೇಶ್ವರ ಅಲ್ಲಿಂದ ರಾಮನಗರದಲ್ಲಿರುವ ದೇವಾಲಯಕ್ಕೆ ಹೋಗಿ ಕುಂತುಬಿಡುತ್ತಾನಂತೆ. ಮತ್ತೆ ಜನ ರಾಜಿಯಾಗಿ ರಾಮನಗರಕ್ಕೆ ಹೋಗಿ ತಪ್ಪುಕಾಣಿಕೆ ಒಪ್ಪಿಸಿ ಅವನನ್ನು ಕರೆತರಬೇಕಂತೆ. ಅಷ್ಟು ಕಟ್ಟುನಿಟ್ಟು ಭೀಮೇಶ್ವರ. ಜಾತ್ರೆಯಲ್ಲಿ ಮಡಿಯಲ್ಲಿರಬೇಕು, ಕುಡಿತ ಎಲ್ಲ ಮಾಡಬಾರದು. ಕಳೆದವರ್ಷ ಊರಲ್ಲಿ ಮನಸ್ತಾಪವಾಗಿ ಹಾಗೇ ಆಗಿತ್ತಂತೆ. ಜಾತ್ರೆ ಹಬ್ಬ ಯಾವುದೂ ನಡೆಯಲಿಲ್ಲವಂತೆ. ಹೀಗೆಲ್ಲ ಇದೆ ನಮ್ಮೂರ ಕಥೆ. ನಿಮಗೆ ಅರ್ಥವಾಗಲಿಕ್ಕಿಲ್ಲ. ಮುಂದೆಯೂ ಆಗಾಗ ಹೀಗೆಯೇ ಬರುತ್ತಿದ್ದರೆ ಮುಂದಕ್ಕೆ ಎಲ್ಲ ಅರ್ಥ ಆದೀತು ಎಂದಳು! ಹೋಗಿಬನ್ನಿ ಎಂದು ನನ್ನ ಬೀಳ್ಕೊಟ್ಟಳು.
ನಾವು ಕೆಲವಾರು ಮಂದಿ ೨.೧೫ಕ್ಕೆ ಗೌಡರ ಮನೆ ತಲಪಿದೆವು. ಕೈಕಾಲು ಮುಖ ತೊಳೆದು ಕೂತೆವು. ಅವರೆಲ್ಲ ಬರಲು ತುಂಬ ಸಮಯ ಹಿಡಿದೀತೆಂದು ನಾವು ಊಟ ಮಾಡಿದೆವು. ಊಟಕ್ಕೆ ಬದನೆಕಾಯಿ ಹಾಕಿ ಕಲಸಿದ ಅನ್ನ, ಮೊಸರನ್ನ, ಹಯಗ್ರೀವ, ಪಕೋಡ, ಬಾಳೆಹಣ್ಣು ಇತ್ತು. ಜಿ.ಡಿ. ಸುರೇಶ್ ಮತ್ತು ಶೀಲಾ ದಂಪತಿಗಳು ಬೆಳಗಿನ ಝಾವ ಎರಡೂವರೆಗೆ ಎದ್ದು ಒಬ್ಬ ಸಹಾಯಕನ ನೆರವಿನಿಂದ ಅವರೇ ಖುದ್ದಾಗಿ ನಿಂತು ತಿಂಡಿ ಊಟದ ಖಾದ್ಯಗಳನ್ನು ತಯಾರಿಸಿದ್ದರು. ತಿಂಡಿ ಊಟ ಬಿಸಿಯಾಗಿ ಬಹಳ ರುಚಿಕರವಾಗಿತ್ತು. ಎಲ್ಲರೂ ಬಂದು ತಲಪಿ ಊಟ ಮುಗಿಯುವಾಗ ಗಂಟೆ ೩ ಕಳೆದಿತ್ತು.
೩.೩೦ಕ್ಕೆ ನಾವೆಲ್ಲ ಬಸ್ಸೇರಿದೆವು. ಅಲ್ಲಿಂದ ಕೊಕ್ಕರೆ ಬೆಳ್ಳೂರಿಗೆ ಹೋಗುವುದೆಂದು ತೀರ್ಮಾನವಾಯಿತು. ೪.೩೦ಕ್ಕೆ ಕೊಕ್ಕರೆ ಬೆಳ್ಳೂರು ತಲಪಿದೆವು. ಅಲ್ಲಿ ಆ ಹೆಸರು ಹೊತ್ತ ಊರಿನ ನೆನಪಿಗಾದರೂ ಒಂದು ಕೊಕ್ಕರೆಯೂ ನಮಗೆ ಕಾಣಲಿಲ್ಲ. ಕೊಕ್ಕರೆ ಬರುವ ಸಮಯವಲ್ಲವಂತೆ. ನಾವು ಬಸ್ಸಿಂದ ಇಳಿಯಲಿಲ್ಲ. ಅಲ್ಲಿಂದ ಹೊರಟು ಮದ್ದೂರು ಮಂಡ್ಯ ದಾಟಿ ದಾರಿಯಲ್ಲಿ ಚಹಾ ಕಾಫಿಗೆ ನಿಲ್ಲಿಸುವ ಮೊದಲು ೨ ಚಕ್ಕುಲಿ ಒಂದು ಲಾಡು ಕೊಟ್ಟರು. ಮತ್ತೆ ಸೀದಾ ಮೈಸೂರು. ಬಸ್ಸೊಳಗೆ ಅಂತ್ಯಾಕ್ಷರೀ ನಡೆಯಲಿಲ್ಲ. ಯಾರೋ ಒಬ್ಬರು ಸಿನೆಮಾ ಕ್ಯಾಸೆಟ್ ಹಾಕಿ ಎಂದಾಗ ಪುನೀತ ರಾಜಕುಮಾರ್ ಅಭಿನಯನದ ಯಾವುದೊ ಒಂದು ಸಿನೆಮಾ ಹಾಕಿದರು. ಸಿನೆಮಾದಲ್ಲಿ ಹೊಡೆದಾಟ ಬಡಿದಾಟ ಪ್ರೇಮಾಟ ನಡೆಯುತ್ತಿತ್ತು. ಸಿನೆಮಾ ಮುಗಿಯುವ ಮೊದಲೇ ೭ ಗಂಟೆಗೆ ಮೈಸೂರು ತಲಪಿದ್ದೆವು.
ಭೀಮನಕಿಂಡಿ ನೋಡಲು ತೆರಳುವವರು ಗುಂಪಾಗಿ ಹೋಗುವುದು ಒಳ್ಳೆಯದು. ಕಾಡುಪ್ರಾಣಿಗಳು ಸಂಚರಿಸುವ ಸ್ಥಳ. ಇಲ್ಲವೆ ಸ್ಥಳೀಯರ ಸಹಕಾರ ಪಡೆದು ತೆರಳಿದರೆ ಬಹಳ ಒಳ್ಳೆಯದು. ಕುಡಿಯಲು ನೀರು ಕೊಂಡೋಗಬೇಕು. ಕುಂತಿಕೊಳದ ನೀರು ಕುಡಿಯಲು ತಯಾರಿದ್ದರೆ ನೀರು ಒಯ್ಯುವ ಅಗತ್ಯವಿಲ್ಲ! ಒಮ್ಮೆಯಾದರೂ ನೋಡಬೇಕಾದ ಸುಂದರ ಸ್ಥಳವಿದು. ಬೆಂಗಳೂರಿನಿಂದ ಸುಮಾರು ೯೪ಕಿಮೀ ಹಾಗೂ ಮೈಸೂರಿನಿಂದ ಸುಮಾರು ೮೦ಕಿಮೀ ದೂರ.
ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ ಕೀರ್ತಿ ಯೂಥ್ ಹಾಸ್ಟೆಲ್ ಗಂಗೋತ್ರಿ ಘಟಕದ ಸದಸ್ಯರಾದ ಜಿ.ಡಿ. ಸುರೇಶ್ ಹಾಗೂ ಗೋಪಿ ಅವರಿಗೆ ಸಲ್ಲಬೇಕು. ಭಾಗವಹಿಸಿದ ಎಲ್ಲರ ಪರವಾಗಿ ಅವರಿಗೆ ಧನ್ಯವಾದಗಳು.