Feeds:
ಲೇಖನಗಳು
ಟಿಪ್ಪಣಿಗಳು

Archive for the ‘ಚಾರಣ’ Category

ಹೊಳೆನರಸೀಪುರ ತಾಲೂಕಿನ ಮಾವಿನಕೆರೆ ರಂಗನಾಥಸ್ವಾಮಿ ಬೆಟ್ಟ ಏರುವುದರ ಕಡೆಗೆ ನಮ್ಮ ಲಕ್ಷ್ಯವಿದ್ದುದು. ಮೈಸೂರಿನಿಂದ ನಾವು ೩೧ ಮಂದಿ ೨೯-೫-೨೦೧೬ರಂದು ಬೆಳಗ್ಗೆ ೭ ಗಂಟೆಗೆ ಮಿನಿ ಬಸ್ಸಿನಲ್ಲಿ ಹೊರಟೆವು. ೮ ಗಂಟೆಗೆ ಯಡತೊರೆ ಅರ್ಕೇಶ್ವರ ದೇವಾಲಯದ ಬಳಿ ಇಡ್ಲಿ ವಡೆ ಹೊಟ್ಟೆಗೆ ಇಳಿಸಿದೆವು. ಪರಸ್ಪರ ಪರಿಚಯ ಮಾಡಿಕೊಂಡೆವು. ಸುಮಾರು ಮಂದಿ ಹೊಸಬರು ಪ್ರಥಮವಾಗಿ ಚಾರಣಕ್ಕೆ ಬಂದವರಿದ್ದರು. ಅವರಿಗೆ ವಿಶೇಷ ಸ್ವಾಗತ ಕೋರಲಾಯಿತು. ಅಲ್ಲಿಂದ ಹೊರಟು ದಾರಿಯಲ್ಲಿ ಕಾಫಿ ಚಹಾ ಸೇವನೆಗೆ ಅರ್ಧ ಗಂಟೆ ವಿನಿಯೋಗವಾಯಿತು.
ಮೈಸೂರು- ಕೃಷ್ಣರಾಜನಗರ- ಭೇರ್ಯ ದಾಟಿ ಹೊಳೆನರಸೀಪುರದತ್ತ ಸಾಗಿದೆವು. ಅಲ್ಲಿಂದ ಸುಮಾರು ೧೨ಕಿಮೀ ದೂರ ಹಾಸನ ರಸ್ತೆಯಲ್ಲಿ ಸಾಗುವಾಗ ಬಲಬದಿಗೆ ಬೆಟ್ಟದಪುರ ರಂಗನಾಥಸ್ವಾಮಿ ದೇವಾಲಯದ ಮಹಾದ್ವಾರ ಕಾಣುತ್ತದೆ. ಅಲ್ಲಿಂದ ಮುಂದೆ ಸ್ವಲ್ಪದೂರದಲ್ಲೇ ದೇವಾಲಯಕ್ಕೆ ಹೋಗಲು ಮೆಟ್ಟಲುಗಳಿವೆ. ಮೆಟ್ಟಲು ಏರುವ ಮೊದಲು ಗಣಪ ನಮ್ಮನ್ನು ಸ್ವಾಗತಿಸುತ್ತಾನೆ. ನಿರಾಯಾಸವಾಗಿ ನಿರ್ವಿಘ್ನವಾಗಿ ಹತ್ತಿಬನ್ನಿ ಎಂಬ ಆಭಯನೀಡುತ್ತಾನೆ. ಮೆಟ್ಟಲುಗಳಿಗೆ ಉದ್ದಕ್ಕೂ ಕೈತಾಂಗು ಹಾಕಿದ್ದಾರೆ. ಸುಮಾರು ೬೦೦ ಪುಟ್ಟದಾದ ಮೆಟ್ಟಲುಗಳು ಹತ್ತಲು ಸುಲಭವಾಗಿವೆ. ಮೆಟ್ಟಲು ನಿರ್ಮಿಸಲು ಬಹುಶಃ ಹೆಚ್ಚು ಕಷ್ಟವಾಗಿರಲಿಕ್ಕಿಲ್ಲ. ಆದರೆ ಆ ಮೆಟ್ಟಲುಗಳ ಬದಿಯಲ್ಲಿ ದಾನಿಗಳ ಹೆಸರು ಕೆತ್ತಲು ಅಪಾರ ಶ್ರಮವಾಗಿರಬಹುದು ಎಂದು ನನ್ನ ಊಹೆ! ಪ್ರತೀಮೆಟ್ಟಲಿನಲ್ಲೂ ದಾನಿಗಳ ಹೆಸರು ಕೆತ್ತಲ್ಪಟ್ಟು ರಾರಾಜಿಸುತ್ತಿದೆ. ಇದನ್ನು ನೋಡಿದಾಗ ದಾನ ಕೊಡುವುದಿದ್ದರೆ ಎಡಗೈಗೂ ಗೊತ್ತಾಗದಂತೆ ಮಾಡು ಎಂಬ ನಾಣ್ನುಡಿ ನೆನಪಾಯಿತು!

DSCN8122

DSCN8123ಅರ್ಧಭಾಗ ಮೇಲೆಹತ್ತಿದಾಗ ಬಂಡೆಮೇಲೆ ಕಲ್ಲುಮಂಟಪ ಎದುರಾಗುತ್ತದೆ. ಅಲ್ಲಿ ಅದೊರಳಗೆ ನಿಂತರೆ ತಂಪು ತಂಪು ಕೂಲ್ ಕೂಲ್ ಎಂದು ಹಾಡು ಗುನುಗುವ ಮನಸ್ಸಾಗುತ್ತದೆ. ಅಷ್ಟು ತಂಪುಗಾಳಿ ಬೀಸುತ್ತದೆ. ಅಲ್ಲಿ ಒಂದಷ್ಟು ಹೊತ್ತು ಕುಳಿತು ಹರ್ಷಹೊಂದಿದೆವು. ಸುತ್ತಲೂ ಎಲ್ಲಿ ನೋಡಿದರೂ ದೊಡ್ಡ ಪುಟ್ಟ ಬಂಡೆಗಲ್ಲುಗಳು, ಪಾದೆಗಳು. (ಸದ್ಯ ಗಣಿಗಾರಿಕೆಯವರ ಕಣ್ಣಿಗೆ ಇದು ಕಾಣದಿದ್ದರೆ ಸಾಕು.) ಅಲ್ಲೊಂದು ಇಲ್ಲೊಂದು ಗಿಡಮರಗಳು, ಪಕ್ಷಿಗಳ ಕೂಗುಗಳು ನಮ್ಮನ್ನು ಸೆಳೆಯುತ್ತವೆ. ಬಲು ಸುಂದರ ತಾಣವಿದು. ಮೆಟ್ಟಲುಹತ್ತಿ ಮೇಲೆ ಬಂದಾಗ ಎದುರುಭಾಗ ವಿಶಾಲಮಂಟಪವಿದೆ. ಮಂಟಪದಾಟಿ ಮುಂದೆ ಸಾಗಿದಾಗ ರಂಗನಾಥ ದೇವಾಲಯ ಕಾಣುತ್ತದೆ. ದೊಡ್ಡ ಬಂಡೆಯೊಳಗೆ ನಿಂತಿರುವ ಭಂಗಿಯ ರಂಗನಾಥನ ವಿಗ್ರಹವಿದೆ. ಇನ್ನೊಂದು ಪಾರ್ಶ್ವಕ್ಕೆ ಆಂಜನೇಯನಿದ್ದಾನೆ. ಬಂಡೆಸುತ್ತಲೂ ಕಟ್ಟಡಕಟ್ಟಿ ಮುಚ್ಚಿಗೆ ಮಾಡಿದ್ದಾರೆ. ಸಾಕಷ್ಟು ಭಕ್ತಾದಿಗಳು ಅಲ್ಲಿನೆರೆದಿದ್ದರು. ದೇವಾಲಯದ ಬಳಿಗೆ ಬರಲು ಅಚ್ಚುಕಟ್ಟಾದ ರಸ್ತೆಯೂ ಇದೆ.

DSCN8235

DSCN8183

ನಾವು ಅಲ್ಲಿ ತಲಪಿದಾಗ ಒಂದು ಮದುವೆ ನಡೆಯುತ್ತಿತ್ತು. ವಧೂವರರರು ಸ್ವಲ್ಪ ವಯಸ್ಸು ಮೀರಿದಂತಿದ್ದರು. ತಾಪತ್ರಯದಿಂದ ಇಷ್ಟು ದಿನ ಮದುವೆಯಾಗಲು ಆಗದೆ ಈಗ ಸರಳ ವಿವಾಹ ಆಗುತ್ತಿದ್ದಾರೆ ಎಂದು ಭಾವಿಸಿದೆವು. ಆದರೆ ನಾವೊಂದು ವಿಷಿಷ್ಟವಾದ ಮದುವೆಗೆ ಸಾಕ್ಷಿಯಾಗುತ್ತಿದ್ದೇವೆಂದು ಆಮೇಲೆ ತಿಳಿಯಿತು. ನಿಮ್ಮ ಜೋಡಿ ಚೆನ್ನಾಗಿದೆ. ಎಂದು ವಧೂವರರಿಗೆ ರವಿ ಬಾಹುಸಾರ್ ಶುಭ ಹಾರೈಸಿದರು. ಆಗ ಅವರ ಜೊತೆಯಿದ್ದವರೊಬ್ಬರು ಈ ಮದುವೆಯ ಹಿಂದಿನ ಕಥೆಯನ್ನು ಹೇಳಿದರು. ಅವರ ಮಾತಿನಲ್ಲೇ ವಿವರಿಸುವೆ: ವರನಿಗೆ ಇದು ಮೂರನೇ ಮದುವೆ. ವಧುವಿಗೆ ಎರಡನೇ ಮದುವೆ. ವರನ ಎರಡನೇ ಹೆಂಡತಿ (ಮೊದಲಿನದರ ಬಗ್ಗೆ ಹೇಳಿಲ್ಲ ಅವರು) ಬೈಕ್ ಅಪಘಾತದಲ್ಲಿ ಮರಣಹೊಂದಿರುವರು. ಈಗಿನ ಯುವಕರು ದುಬಾರಿ ಬೆಲೆಯ ಬೈಕಿನಲ್ಲೇ ಓಡಾಡುವುದು. ಆ ಬೈಕಿನ ಹಿಂದಿನ ಸೀಟಲ್ಲಿ ಕೂತವರು ಮಸಣದ ಹಾದಿ ಹಿಡಿಯುವುದು ಶತಸಿದ್ಧ. ಹಾಗಿರುತ್ತದೆ ಅದು. ಅವರ ಮಗ ಹಟಹಿಡಿದು ಅಂಥ ಬೈಕನ್ನು ತೆಗೆಸಿಕೊಂಡು ಅಮ್ಮನನ್ನು ಕೂರಿಸಿಕೊಂಡು ಹೋಗುತ್ತಿದ್ದಾಗ ಸ್ಕಿಡ್ ಆಗಿ ತಾಯಿ ಬಿದ್ದು ತಲೆ ಒಡೆದು ಅಲ್ಲೇ ಮರಣಹೊಂದಿದಳು. ವರನ ಕಡೆಯವರು ತುಂಬ ಸ್ಥಿತಿವಂತರು. ಅವರ ಎರಡನೇ ಹೆಂಡತಿಯೂ ಶಿಕ್ಷಕಿಯಾಗಿದ್ದಳು. ಬಡ್ಡಿ ವ್ಯವಹಾರದಲ್ಲಿ ತುಂಬ ದುಡ್ಡು ಚಿನ್ನ ಮಾಡಿದ್ದರು. ಆ ಹೆಂಡತಿಯ ಕಡೆಯವರೆಲ್ಲ ಮಗನ ಸಮೇತ ಇದ್ದ ಆಸ್ತಿ ಚಿನ್ನವನ್ನು ತೆಗೆದುಕೊಂಡು ಇವರನ್ನು ಬಿಟ್ಟು ಹೋದರು.
ಈಗಿನ ಮದುವೆಯ ವಧು ಮೂಲತ ಬಳ್ಳಾರಿಯವರು. ಅವರಿಗೂ ಗಂಡ ತೀರಿಹೋಗಿದ್ದಾರೆ. ಒಂದು ಮಗುವಿದೆ. ವಧೂ ವರರಿಬ್ಬರೂ ಹಾಸನದ ಶಾಲೆಯಲ್ಲಿ ಶಿಕ್ಷಕ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ. ನಾವು ಸ್ನೇಹಿತರೆಲ್ಲ ಸೇರಿ ಅವರ ಮದುವೆ ಮಾಡಿಸುತ್ತಿದ್ದೇವೆ ಎಂದು ಹೇಳಿದರು.
ವರನ ಹೆಸರು ಪಾಷಾ, ವಧೂವಿನ ಹೆಸರು ಉಷಾ (ಇದು ಕಾಲ್ಪನಿಕ ಹೆಸರು). ದೇವಾಲಯದ ಅರ್ಚಕರು ಹಾಲುತುಪ್ಪ ಧಾರೆಯೆರೆಸುತ್ತಿದ್ದರು. ಧಾರೆಯಾಗಿ ಹಗಲಲ್ಲೇ ಆರುಂಧತಿ ನಕ್ಷತ್ರವನ್ನೂ ತೋರಿಸಿದರು. ಹಿಂದೂ ಮುಸ್ಲಿಮ್ ಬಾಂಧವ್ಯದ ಈ ಮದುವೆ ನೋಡಿ ಖುಷಿಪಟ್ಟೆವು. ವರ ಶುಭ್ರ ಬಿಳಿ ಕಚ್ಚೆಪಂಚೆ ಹಾಕಿ ವಧೂ ಜರತಾರಿ ಸೀರೆ‌ಉಟ್ಟು ಲಕ್ಷಣವಾಗಿ ಕಾಣುತ್ತಿದ್ದರು.

DSCN8207
ಅಲ್ಲಿಯ ಅರ್ಚಕರಾದ ಕೇಶವಮೂರ್ತಿಯವರು ನಮ್ಮ ಅಪೇಕ್ಷೆಮೇರೆಗೆ ಅರ್ಧಗಂಟೆ ಹಿಂದೂಧರ್ಮದ ಬಗ್ಗೆ ಹಾಗೂ ದೇವಾಲಯದ ಸ್ಥಳಪುರಾಣವನ್ನು ಸೊಗಸಾಗಿ ವಿವರಿಸಿದರು. ೮೦ ಕೋಟಿ ಜೀವರಾಶಿಯಲ್ಲಿ ಭಗವಂತ ಯಾರ್ಯಾರನ್ನು ಯಾವ ಜೀವಿಯಾಗಿ ಸೃಷ್ಟಿಸಿದನೆಂಬುದಕ್ಕೆ ಸೋದಾಹರಣವಾಗಿ ಒಂದೆರಡನ್ನು ವಿವರಿಸಿದರು. ಈಗ ನಾನು ಇಲ್ಲಿ ಪ್ರವಚನ ಕೊಡುತ್ತಿದ್ದೇನೆ. ಅದನ್ನು ಕೇಳಲು ಕೆಲವರು ಅಯ್ಯೋ ಮಂಡಿನೋವು ಕೂರಕ್ಕಾಗಲ್ಲ ಎಂದು ತಿರುಗಾಡಿಕೊಂಡು ಕೇಳುವವರನ್ನು ಶ್ವಾನವಾಗಿಯೂ, ಆಯಾಸ ಪರಿಹಾರಕ್ಕೋಸ್ಕರ ಮಲಗಿಕೊಂಡು ಕೇಳುತ್ತೇನೆ ಎನ್ನುವವರನ್ನು ಸರ್ಪವಾಗಿಯೂ, ಕೂರಲಾಗುವುದಿಲ್ಲ ನಿಂತೇ ಕೇಳುತ್ತೇನೆ ಎಂಬವರನ್ನು ಕುದುರೆಯಾಗಿಯೂ, ಭಟ್ರು ಏನೋ ವಟಗುಡುತ್ತಿದ್ದಾರೆ ಎಂದು ಕೇಳದೆಯೇ ಪರಸ್ಪರ ಮಾತಾಡುವವರನ್ನು ಮಂಡೂಕವಾಗಿಯೂ, ಗಲಾಟೆ ಮಾಡುವವರನ್ನು ಗಾರ್ದಭವಾಗಿಯೂ ಸೃಷ್ಟಿಸುತ್ತಾನೆ. ಹೀಗೆ ಹೇಳಿದಾಗ ಅದನ್ನು ಕೇಳುತ್ತಿದ್ದ ಅಜ್ಜಿಯೊಬ್ಬರು ನಿಂತಿದ್ದವರು ಕೂಡಲೇ ಕೂತರು!
೧೬೦೦ ವರ್ಷಗಳ ಹಿಂದೆ ಅಂದರೆ ನಾಲ್ಕನೆಯ ಶತಮಾನದ ಅಂತ್ಯದಲ್ಲಿ ಶ್ರಿರಂಗನಾಥ ದೇವಾಲಯ ಸ್ಥಾಪನೆಯಾಗಿದೆ. ಮೂಲ ಹೆಸರು ತಿರುವೆಂಕಟನಾಥ. ಒರಳುಕಲ್ಲಿನ ರೂಪದಲ್ಲಿ ಉದ್ಭವವಾದದ್ದೆಂದು ಪ್ರತೀತಿಯಲ್ಲಿದೆ. ಒಂದು ಮೂಲದ ಪ್ರಕಾರ ಜೀಯರು ಗುರುಗಳು ಬಂದು ಈ ಗುಹೆಯಲ್ಲಿ ತಿರುವೆಂಕಟನಾಥ ವಿಗ್ರಹ ಸ್ಥಾಪನೆ ಮಾಡಿ ಲೋಕಕಲ್ಯಾಣಾರ್ಥವಾಗಿ ಪೂಜೆ ಮಾಡುತ್ತಿದ್ದರು ಎಂಬುದು ಉಲ್ಲೇಖದಲ್ಲಿದೆ.
ಮೈಸೂರು ಅರಸರು ಸಂಸ್ಥಾನ ಸ್ಥಾಪನೆ ಮಾಡಿದಾಗ ಹೊಳೆನರಸೀಪುರದ ಸಾಮಂತರಾಜ ನರಸಿಂಹನಾಯಕ ಹೊಳೆನರಸೀಪುರದಲ್ಲಿ ಒಂದು ದೇವಾಲಯ ಕಟ್ಟಿಸಿದ. ಆಗ ಅವನಿಗೆ ಇಲ್ಲಿ ದೇವಾಲಯ ಉದ್ಭವವಾದದ್ದು ಗೊತ್ತಿರಲಿಲ್ಲ. ಅವನ ಗೋಶಾಲೆಯಿಂದ ಪ್ರತೀದಿನ ಒಂದು ಹಸು ಗೋಶಾಲೆ ಬಾಗಿಲು ತೆರೆದ ಕೂಡಲೇ ಬೆಟ್ಟದಮೇಲಿರುವ ಈ ಉದ್ಭವ ಮೂರ್ತಿಗೆ ಹಾಲು ಸುರಿಸಿ ವಾಪಾಸು ಗೋಶಾಲೆ ಸೇರಿಕೊಳ್ಳುತ್ತಿತ್ತು. ಇತ್ತ ಗೋಶಾಲೆಯಲ್ಲಿ ಅದನ್ನು ಕರೆಯುವಾಗ ಹಾಲಿನ ಬದಲು ರಕ್ತ ಬರುತ್ತಿತ್ತು. ಇದೇನು ಹೀಗೆ? ಈ ವಿಷಯವನ್ನು ನರಸಿಂಹನಾಯಕನಿಗೆ ತಿಳಿಸುತ್ತಾರೆ. ನರಸಿಂಹನಾಯಕ ಬೆಳಗ್ಗೆ ಖುದ್ದಾಗಿ ಪರೀಕ್ಷಿಸುತ್ತಾನೆ. ಬಾಗಿಲು ತೆರೆದ ಕೂಡಲೇ ಹಸು ನೇರವಾಗಿ ಉದ್ಭವ ಮೂರ್ತಿ ಬಳಿ ಹೋಗಿ ಹಾಲು ಸುರಿಸುವುದನ್ನು ಹಸುವಿನ ಹಿಂದೆಯೇ ಹೋದ ನರಸಿಂಹನಾಯಕ ಕಾಣುತ್ತಾನೆ. ಅರ್ಚಕರನ್ನು ನೇಮಿಸಿ ಶೈವಾಗಮನ ರೀತಿಯಲ್ಲಿ ಪೂಜೆಗೆ ವ್ಯವಸ್ಥೆ ಮಾಡುತ್ತಾನೆ. ಒಂದುದಿನ ನರಸಿಂಹನಾಯಕನ ಸ್ವಪ್ನದಲ್ಲಿ ಮಹಾನ್ ವಿಷ್ಣು ಬಂದು ನಾನು ವಿಷ್ಣುರೂಪದಲ್ಲಿರುವುದು. ಶೈವಾಗಮನ ಪ್ರಕಾರ ಪೂಜೆ ಮಾಡಿಸಬೇಡ ಎಂದು ಹೇಳಿದಂತಾಯಿತು. ಈ ಸ್ವಪ್ನವನ್ನು ನರಸಿಂಹನಾಯಕ ಕಡೆಗಣಿಸುತ್ತಾನೆ.
ಯಾತ್ರಿಕರಾಗಿ ವೈಷ್ಣವರು ಅಲ್ಲಿಗೆ ಯಾತ್ರಾರ್ಥ ಬಂದಾಗ ಅಲ್ಲೇ ನೆಲೆನಿಂತು ಪೂಜೆ ಮಾಡಬೇಕೆಂಬುದಾಗಿ ಅವರಿಗೆ ಸ್ವಪ್ನವಾಗಿ ಅವರು ಕಾಲಕ್ರಮೇಣ ಅಲ್ಲೇ ಇದ್ದು ಪೂಜೆ ಮಾಡುತ್ತಾರೆ. ಇತ್ತ ನರಸಿಂಹನಾಯಕ ನೇಮಿಸಿದ ಅರ್ಚಕರು ನರಸಿಂಹನಾಯಕನಿಗೆ ದೂರು ಸಲ್ಲಿಸುತ್ತಾರೆ. ನರಸಿಂಹನಾಯಕ ವೈಷ್ಣವರನ್ನು ಅರಮನೆಗೆ ಕರೆಸಿ ವಿಚಾರಿಸಿದಾಗ ಅವರು ನಾವು ದೈವಪ್ರೇರಣೆಯಿಂದಲೇ ಹೀಗೆ ಪೂಜೆ ಮಾಡುತ್ತಿರುವುದು. ದುರುದ್ದೇಶದಿಂದಲ್ಲ ಎಂದು ಹೇಳುತ್ತಾರೆ. ಆಗ ನರಸಿಂಹನಾಯಕ ಸಭೆ ಕರೆದು ನಿಮಗೆ ಯಾವ ರೀತಿಯಲ್ಲಿ ಪೂಜೆ ಆಗಬೇಕು ತಿಳಿಸಿ ಎಂದು ಊರವರ ಅಭಿಪ್ರಾಯ ಕೇಳುತ್ತಾನೆ. ನಿಮ್ಮ ಆಜ್ಞೆ ಹೇಗಿದೆಯೊ ಹಾಗೆ ನಾವು ನಡೆದುಕೊಳ್ಳುತ್ತೇವೆ ಎನ್ನುತ್ತಾರೆ. ಅದಕ್ಕೆ ನರಸಿಂಹನಾಯಕ ಸ್ವಲ್ಪದಿನ ಯಾರೂ ಪೂಜೆ ಮಾಡುವುದು ಬೇಡ. ಗುಹೆಯ ಬಾಗಿಲಿಗೆ ಸುಣ್ಣ ಗಾರೆ ಹಾಕಿ ಮುಚ್ಚಿಬಿಡಿ ಎಂದು ಆಜ್ಞಾಪಿಸುತ್ತಾನೆ. ನಾನು ದುರುದ್ದೇಶದಿಂದ ದೇವಾಲಯ ಮುಚ್ಚಿಸುತ್ತಿಲ್ಲ. ಅವನ ಮೇಲೆ ಪಂಥ ಹಾಕಿದ್ದೇನೆ. ಯಾತ್ರಾರ್ಥಿಗಳ ಪ್ರಕಾರ ವಿಷ್ಣು ರೂಪದಲ್ಲಿಯೇ ಪೂಜೆ ಮುಂದುವರಿಯಬೇಕೆಂದಾದರೆ ಇನ್ನು ೪೮ ದಿನದಲ್ಲಿ ದಶಾವತಾರದಲ್ಲಿ ರಾಮಾವತಾರದ ಪ್ರಕಾರ ಉತ್ತರದಲ್ಲಿ ಆಂಜನೇಯ ಉದ್ಭವವಾಗಲಿ, ನಾನು ಪೂಜಿಸುವ ಈಶ್ವರನೇ ಆದಲ್ಲಿ ಅವನ ಮುಂದೆ ನಂದಿ ಉದ್ಭವವಾಗಬೇಕು. ಇದಕ್ಕೆ ಎಲ್ಲ ಪ್ರಜೆಗಳು ಒಪ್ಪಿದರು. ೪೮ ದಿನ ಕಳೆಯಿತು. ಆ ೪೮ನೆಯ ದಿನ ಅರಮನೆಯಲ್ಲಿರುವವರಿಗೆ ದೊಡ್ಡ ಸಿಡಿಲು ಹೊಡೆದಂತಾಯಿತು. ಯಾರಿಗೂ ನಿದ್ರೆಯಿಲ್ಲ. ಬೆಳಗ್ಗೆ ಎದ್ದು ಬೆಟ್ಟದತ್ತ ಓಡಿದರು. ಅಲ್ಲಿ ಗುಹೆಯ ಬಾಗಿಲು ಛಿದ್ರಗೊಂಡಿದೆ. ಆ ಶಬ್ದವೇ ಸಿಡಿಲು ಹೊಡೆದಂತೆ ಕೇಳಿಸಿದ್ದು. ಉತ್ತರದಲ್ಲಿ ಆಂಜನೇಯ ಉದ್ಭವವಾಗಿದ್ದಾನೆ. ಅದನ್ನು ಕಂಡದ್ದೇ ನರಸಿಂಹನಾಯಕ, ನನ್ನಿಂದ ಸರ್ವಾಪರಾಧವಾಯಿತು. ಇನ್ನುಮುಂದೆ ಇಲ್ಲಿ ವಿಷ್ಣುರೂಪದಲ್ಲೇ ಪೂಜೆ ನಡೆಯುತ್ತದೆ ಎಂದು ಸಾರಿದ. ಹಾಗೂ ದೇವಾಲಯವನ್ನು ಸರಿಯಾಗಿ ಕಟ್ಟಿಸಿದ. ದೇವಾಲಯದ ಪೂಜಾವೇಳೆ ಬೆಳಗ್ಗೆ ಬೆಳಗ್ಗೆ ೯ರಿಂದ ೧, ಮಧ್ಯಾಹ್ನ ೨ರಿಂದ ೫ಗಂಟೆವರೆಗೆ.

DSCN8228 DSCN8227

ಮಹಾಮಂಗಳಾರತಿಯಾಗಿ ನಾವು ಅಲ್ಲಿಂದ ಹೊರಟೆವು. ಮೆಟ್ಟಲು ಇಳಿದು ಕಲ್ಲುಮಂಟಪದ ಬಳಿ ತಂಡದ ಚಿತ್ರ ತೆಗೆಸಿಕೊಂಡು ಕೆಳಗೆ ಬಂದೆವು. ಅಲ್ಲಿ ಮರದಡಿ ಕುಳಿತು (ಬಿಸಿಬೇಳೆಭಾತ್, ಮೊಸರನ್ನ, ಮದ್ದೂರುವಡೆ) ಭೋಜನ ಕಾರ್ಯ ನೆರವೇರಿಸಿದೆವು.

DSCN8259

ವೈದ್ಯನಾಥನ್, ರವಿಬಾಹುಸಾರ್, ನಾಗೇಂದ್ರಪ್ರಸಾದ್, ಉಮಾಶಂಕರ್ (ಹಾಡು, ಹಾಸ್ಯ, ಏಕಪಾತ್ರಾಭಿನಯ) ಇತ್ಯಾದಿ ಮನರಂಜನಾ ಕಾರ್ಯಕ್ರಮ ಕೊಟ್ಟರು. ನಾವು ಆಲಿಸಿ, ನಕ್ಕು ಹಗುರಾದೆವು.

ಎಣ್ಣೆಹೊಳೆ ರಂಗನಾಥಸ್ವಾಮಿಬೆಟ್ಟ

ಅಲ್ಲಿಂದ ಮೂರುಗಂಟೆಗೆ ಹೊರಟೆವು. ಹೊಳೆನರಸೀಪುರದಿಂದ ಚನ್ನರಾಯಪಟ್ಟಣ ರಸ್ತೆಯಲ್ಲಿ ಸುಮಾರು ೧೨ ಕಿಮೀ ಸಾಗಿ ಮುಂದೆ ನಾಲೆಬದಿ ಬಲಕ್ಕೆ ಹೊರಳಿ ನಾಲೆ ಏರಿ ರಸ್ತೆಯಲ್ಲೇ ಸಾಗಿ ಮುಂದೆ ಅಶ್ವತ್ಥಮರದ ಬಳಿ ಎಡಕ್ಕೆ ಸಾಗಿ ಹೋದರೆ ಎಣ್ಣೆಹೊಳೆ ರಂಗನಾಥ ದೇವಾಲಯ ತಿರುಮಲಪುರಕ್ಕೆ ಹೋಗುವ ದಾರಿ ಸಿಗುತ್ತದೆ. ದೇವಾಲಯದ ಮೇಲಕ್ಕೆ ಹೋಗಲು ಅರ್ಧ ದಾರಿಯವರೆಗೆ ಕಲ್ಲುಮಣ್ಣು ರಸ್ತೆ ಇದೆ. ವಾಹನ ಸಾಗುವುದು ಕಷ್ಟ. ನಡೆದು ಹೋಗಲು ಅರ್ಧದಾರಿ ಮೆಟ್ಟಲುಗಳಿವೆ. ಮತ್ತೆ ಕಲ್ಲುಗಳಿಂದ ಕೂಡಿದ ಬೆಟ್ಟದಲ್ಲಿ ಹತ್ತಬೇಕು. ಕಡಿದಾಗಿದೆ ಮೆಟ್ಟಲುಗಳು. ಆಗಷ್ಟೆ ಹೊಟ್ಟೆಬಿರಿಯ ಊಟ ಮಾಡಿದ ಪ್ರಭಾವ ಬೆಟ್ಟ ಏರುವಾಗ ತುಸು ಕಷ್ಟಕೊಟ್ಟಿತು. ಉಸ್ಸು ಬುಸ್ಸು ಎಂದು ಏದುಸಿರು ಬಿಡುತ್ತ ಬೆಟ್ಟ ಏರಿದೆವು. ಇದನ್ನು ಚಾರಣ ಎಂದು ಕರೆಯಲಡ್ಡಿಯಿಲ್ಲ ಅಂದರೊಬ್ಬರು. ಎಲ್ಲರೂ ಬೆಟ್ಟ ಏರಿದೆವು.
ಬೆಟ್ಟದಿಂದ ಕೆಳಗೆ ಊರು ನೋಡುವುದೇ ಚಂದ. ಹೊಲಗದ್ದೆಗಳು ಮೈಸೂರುಪಾಕಿನ ತುಂಡಿನಂತೆ ತೋರುತ್ತಿದ್ದುವು. ಆಗಸದಲ್ಲಿ ಮೋಡಗಳು ಕ್ಷಣಕೊಮ್ಮೆ ಬದಲಾವಣೆಗೊಂಡು ಚಿತ್ತಾರ ಬಿಡಿಸಿದ ದೃಶ್ಯ ಅದ್ಭುತವಾಗಿ ಕಾಣುತ್ತಿತ್ತು.
ಇಲ್ಲಿ ಪೂಜೆ ನಡೆಯುವಂತೆ ಕಾಣುವುದಿಲ್ಲ. ದೇವಾಲಯದ ಬಾಗಿಲು ತೆರೆದೇ ಇರುತ್ತದೆ. ನಾವು ಅಲ್ಲಿ ಸುಮಾರು ಹೊತ್ತು ವಿಶ್ರಮಿಸಿದೆವು. ಪ್ರತಿಭೆ ಇರುವವರ ಭಾವಗೀತೆ, ಭಕ್ತಿಗೀತೆ, ಹಾಸ್ಯ, ಮಂಕುತಿಮ್ಮನ ಕಗ್ಗ ಇತ್ಯಾದಿ ಭಾವಲಹರಿಗಳನ್ನು ಕೇಳುತ್ತ ಮೈಮರೆತೆವು. ತಂಡದ ಚಿತ್ರ ತೆಗೆಸಿಕೊಂಡೆವು. ೪.೩೦ಗೆ ಅಲ್ಲಿಂದ ಕೆಳಗೆ ಬಂದು ವಾಹನವೇರಿದೆವು. ದಾರಿಮಧ್ಯೆ ಚಹಾ ಕಾಪಿ ಸೇವನೆಯಾಗಿ ರಾತ್ರಿ ೭.೩೦ಗೆ ಮೈಸೂರು ತಲಪಿದೆವು.

DSCN8324 DSCN8270

DSCN8291 DSCN8290

DSCN8309

ವೈದ್ಯನಾಥನ್, ನಾಗೇಂದ್ರಪ್ರಸಾದ್ ಜೋಡಿ ಭಲೇಜೋಡಿ ಎಂದು ಪ್ರಸಿದ್ಧಿಯಾಗಿದೆ. ರೂ. ೫೫೦ಕ್ಕೆ ಯೂಥ್ ಹಾಸ್ಟೆಲ್ ಗಂಗೋತ್ರಿಘಟಕದ ವತಿಯಿಂದ ಈ ಚಾರಣ ಕಾರ್ಯವನ್ನು ಅಚ್ಚುಕಟ್ಟಾಗಿ ನಡೆಸಿದ್ದರು. ಅವರಿಗೆ ಧನ್ಯವಾದಗಳು.

Read Full Post »

ಮೈಸೂರಿನ ವಾರ್ತಾಭವನದ ಬಳಿಯಿಂದ ನಾವು ೨೨ ಮಂದಿ ಸಣ್ಣ ಬಸ್ಸಿನಲ್ಲಿ ೨೮-೨-೨೦೧೬ರಂದು ಬೆಳಗ್ಗೆ ೬.೩೦ ಗಂಟೆಗೆ ವಾಡೆ ಮಲ್ಲೇಶ್ವರದ ಕಡೆಗೆ ಹೊರಟೆವು. ಮೈಸೂರು ಬೆಂಗಳೂರು ದಾರಿಯಲ್ಲಿ ಸಾಗಿ ಚನ್ನಪಟ್ಟಣದ ಬಳಿ ಬಲಕ್ಕೆ ಹೊರಳಿ ಹಲಗೂರು ಮಾರ್ಗವಾಗಿ ಮುಂದುವರಿದು ಕೋಡಂಬಳ್ಳಿ ಕೆರೆ ಏರಿ ಮೇಲೆ ಸಾಗಿದೆವು. ಕೋಡಂಬಳ್ಳಿ ಕೆರೆ ನೀರು ತುಂಬಿ ಭರ್ತಿಯಾಗಿದೆ. ಈ ವರ್ಷ ಶಿಂಷಾ ನದಿಯಿಂದ ಈ ಕೆರೆಗೆ ನೀರು ಹರಿಸಿದ್ದಾರೆ. ಕೆರೆ ಏರಿಯ ರಸ್ತೆಗೆ ತಡೆಗೋಡೆ ಇಲ್ಲ. ರಸ್ತೆಯೂ ಕಿರಿದಾಗಿ ಅಪಾಕಾರಿಯಾಗಿದೆ. ತುಸು ಎಚ್ಚರ ತಪ್ಪಿದರೂ ವಾಹನ ಕೆರೆಗೆ ಆಹುತಿಯಾಗುವ ಪರಿಸ್ಥಿತಿ. ಕೋಡಂಬಳ್ಳಿ ದಾಟಿ ಮುಂದೆ ಬ್ಯಾಡರಹಳ್ಳಿ ತಲಪಿ ವಾಡೆ ಮಲ್ಲೇಶ್ವರ ಬೆಟ್ಟದ ಬುಡಕ್ಕೆ ತಲಪಿದೆವು. ಅಲ್ಲಿರುವ ಕೆರೆಯಲ್ಲಿರುವ ತಾವರೆ ಹೂ ನಮ್ಮನ್ನು ಸ್ವಾಗತಿಸಿತು.

DSCN7578

DSCN7580

DSCN7711
ಅಲ್ಲಿ ಇಡ್ಲಿ, ಬರ್ಫಿ ಸೇವನೆಯಾಗಿ ನಮ್ಮ ನಮ್ಮ ಪರಿಚಯ ಮಾಡಿಕೊಂಡೆವು. ಸ್ಥಳೀಯರಾದ ರಾಜ ನಮಗೆ ದಾರಿ ತೋರಲು ಸಜ್ಜಾಗಿ ಬಂದಿದ್ದರು. ಬೆಳಗ್ಗೆ ೯.೩೦ಗೆ ನಾವು ಅವರ ಹಿಂದೆ ವಾಡೆ ಮಲ್ಲೇಶ್ವರ ಬೆಟ್ಟ ಏರಲು ನಡೆದೆವು. ಅಂಥ ದೊಡ್ಡ ಬೆಟ್ಟವಲ್ಲ. ಬೇಗ ಹೋಗಿ ಬಂದು ಪಕ್ಕದ ಸಿದ್ದೇಶ್ವರ ಬೆಟ್ಟ ಏರಬಹುದು ಎಂದು ಸಂಘಟಕರು ಹೇಳಿದ್ದರು. ಕುರುಚಲು ಸಸ್ಯಗಳಿರುವ ಕಾಡು ದಾರಿ. ರಾಜ ಮುಂದೆ ಹೋಗಿ ಹುಲ್ಲು ಸವರಿ ನಮಗೆ ದಾರಿ ಸುಗಮಗೊಳಿಸಿದರು. ಪ್ರಾಣಿಗಳು ಓಡಾಡುವ ದಾರಿ ಆನೆ ಅಲ್ಲೆಲ್ಲ ಸಾಕಷ್ಟು ಇವೆಯಂತೆ. ಅದರ ಕುರುಹಾಗಿ ನಮಗೆ ಅಲ್ಲಲ್ಲಿ ಅದರ ಲದ್ದಿ ದರ್ಶನವಾಯಿತು! ಹಾಗೂ ಆನೆ ನಾಡಿಗೆ ಬರದಂತೆ ಬೆಟ್ಟದ ಸುತ್ತ ಅಗಳು  ತೋಡಿದ್ದರು. ಅದೇನೂ ಅಂತ ಆಳವಿರಲಿಲ್ಲ. ಆ ಕಣಿವೆ ದಾಟುವುದು ಆನೆಗೇನೂ ಕಷ್ಟವಲ್ಲ.
ದಾರಿಯಲ್ಲಿ ದೊಡ್ಡಬಂಡೆಗಳು, ಕಲ್ಲುಬಂಡೆಗಳು ಎದುರಾಗುತ್ತದೆ. ಅಲ್ಲೊಂದು ಇಲ್ಲೊಂದು ಮರ ಬಿಟ್ಟರೆ, ಒಣಗಿದ ಹುಲ್ಲು ಇರುವ ಬೋಳು ಸ್ಥಳವೆಂದೇ ಹೇಳಬಹುದು. ಬಿಸಿಲಿಗೆ ಬೆವರು ಧಾರಾಕಾರವಾಗಿ ಇಳಿಯಿತು. ಕೊಂಡೋದ ನೀರು ಬಲುಬೇಗ ಖಾಲಿಯಾಯಿತು. ಕಿತ್ತಳೆ, ಸೌತೆಕಾಯಿ ಕ್ಷಣದಲ್ಲಿ ಉದರ ಸೇರಿತು. ಆಗ ಹುಟ್ಟಿತು ನವ್ಯ ಕಾವ್ಯ! ಅಲ್ಲಲ್ಲ ನವ್ಯ ಗದ್ಯ!

ಬಿರು ಬಿಸಿಲಲ್ಲಿ ಚಾರಣ ಹೋಗ್ಬಾರ್ದು ರಿ ಹೋಗ್ಬಾರ್ದು
ಮೈಮುಖವೆಲ್ಲ ಸುಟ್ಟೋಗ್ತದೆ ರಿ ಸುಟ್ಟೋಗ್ತದೆ
ಕೊಂಡೋದ ನೀರೆಲ್ಲ ಬಲುಬೇಗ ಖಾಲಿಯಾಗ್ತದೆ ರಿ ಖಾಲಿಯಾಗ್ತದೆ
ಬೆವರು ದಾರಾಕಾರ ಇಳಿದೋಗ್ತದೆ ರಿ ಇಳಿದೋಗ್ತದೆ
ನಡೆವಾಗ ಬಲುಬೇಗ ಸುಸ್ತಾಗ್ತದೆ ರಿ ಸುಸ್ತಾಗ್ತದೆ
ಚಾರಣದ ಹುಚ್ಚಿರುವವರಿಗೆಲ್ಲ ಈ ಬಿಸಿಲು ಮಳೆ ಚಳಿ ಲೆಕ್ಕವಲ್ಲ
ಬಿಸಿಲಿಗೆ ತುಂಬುತೋಳಿನ ಅಂಗಿ ಧರಿಸಬೇಕು
ತಲೆಗೆ ಟೋಪಿ ಹಾಕಬೇಕು
ಸಾಕಷ್ಟು ನೀರು ಒಯ್ಯಬೇಕು
ಇಷ್ಟು ಮುಂಜಾಗ್ರತೆ ವಹಿಸಬೇಕು
ಆಗ ಬಿರುಬಿಸಿಲಲ್ಲೂ ಚಾರಣ ಹೋಗುವುದೇನೂ ಕಷ್ಟವಲ್ಲ

20160229_112416

ಅಲ್ಲಲ್ಲಿ ಕೂತು ವಿಶ್ರಮಿಸಿ ನೀರು ಕುಡಿದು ಮುಂದೆ ಸಾಗಿದೆವು. ‘ನಿಧಾನಕ್ಕೆ ಬನ್ನಿ. ಒಟ್ಟಿನಲ್ಲಿ ನಿಮಗೆ ಟೈಮ್ ಪಾಸ್ ಆದರೆ ಆಯಿತಲ್ಲ. ಎಲ್ಲ ಕಡೆ ಕರೆದುಕೊಂಡು ಹೋಗುತ್ತೇನೆ’ ಎಂದು ಆಗಾಗ ರಾಜ ಹೇಳುತ್ತಿದ್ದರು! ನಡೆಯಲು ಕಷ್ಟಪಡುವ ಕೆಲವರಿಗೆ ರಾಜ ಬಿದಿರು ದೊಣ್ಣೆ ಕಡಿದು ಕೊಟ್ಟರು. ಅಲ್ಲಲ್ಲಿ ಕುರುಚಲು ಹುಲ್ಲಿಗೆ ಬೆಂಕಿ ಹಾಕಿದ್ದರು. ಅದೇ ದಾರಿಯಲ್ಲಿ ನಡೆದೆವು. ಚಪ್ಪಲಿ ಧರಿಸಿ ಬಂದವರ ಕಾಲಂತೂ ಕರ್ರಗೆ ಮಿಂಚುತ್ತಿತ್ತು! ಬಿಳಿಬಣ್ಣದ ಪ್ಯಾಂಟ್ ಧರಿಸಿ ಬಂದವರು ಆ ಪ್ಯಾಂಟ್ ತೊಳೆಯುವ ಬಗೆ ಹೇಗೆ ಎಂದು ಚಿಂತಿಸಿದರು. ಸಾಬೂನಿನ ಕಂಪೆನಿಯವರಿಗೆ ಈ ಪ್ಯಾಂಟ್ ಕೊಟ್ಟು ಕರೆ ಹೋಗಿಸಿ ಕೊಡಿ ಎಂದು ಚಾಲೆಂಜ್ ಮಾಡಬಹುದು ಎಂಬ ಸಲಹೆ ಬಂತು!

DSCN7591

DSCN7596

ಅಂತೂ ೧೧.೩೦ಗೆ ವಾಡೆ ಮಲ್ಲೇಶ್ವರ ಬೆಟ್ಟ ಹತ್ತಿದೆವು. ಅಲ್ಲಿಂದ ನೋಡಿದರೆ ಸುತ್ತಲೂ ಬೆಟ್ಟಗಳ ಸಾಲು ಸಾಲು ಕಣ್ಮನ ಸೆಳೆಯುತ್ತವೆ. ಎತ್ತರದ ಕಬ್ಬಾಲೆ ದುರ್ಗಾ, ಭೀಮನಕಿಂಡಿ, ಇತ್ಯಾದಿ ಬೆಟ್ಟಗಳು ಮುಂದಿನ ಸಲ ಇಲ್ಲಿಗೂ ಬನ್ನಿ ಎಂದು ನಮ್ಮನ್ನು ಕೈಬೀಸಿ ಕರೆದಂತೆ ಭಾವಿಸಿದೆವು! ಆಗಲೇ ಆ ಬೆಟ್ಟಗಳನ್ನೆಲ್ಲ ಹತ್ತಬೇಕು ಎಂದು ಮನಸ್ಸು ಲೆಕ್ಕ ಹಾಕಲು ಸಿದ್ಧತೆ ಮಾಡಲು ತೊಡಗುತ್ತದೆ! ಯಾವಗಲಾದರೂ ಆ ಬೆಟ್ಟಗಳಿಗೆ ಕರೆದುಕೊಂಡು ಹೋಗಿ ಎಂದು ನಾಗೇಂದ್ರಪ್ರಸಾದರಿಗೆ ಅರಿಕೆ ಮಾಡಿಕೊಂಡೆವು.

DSCN7598

DSCN7660
ವಾಡೆಮಲ್ಲೇಶ್ವರ ಬೆಟ್ಟದಲ್ಲಿ ದೊಡ್ಡನೆತ್ತಿ ಚಿಕ್ಕನೆತ್ತಿ ಎಂಬ ಎರಡು ಬೆಟ್ಟಗಳಿವೆ. ದೊಡ್ಡನೆತ್ತಿ ಏರಿದ ಮೇಲೆ ಚಿಕ್ಕನೆತ್ತಿಗೆ ಇಳಿದೆವು. ಅಲ್ಲಿ ಸ್ವಲ್ಪ ಹೊತ್ತು ವಿರಮಿಸಿದೆವು. ಅಲ್ಲಿ ಆರ್ಕಿಡ್ ಹೂವೊಂದು ಅರಳಿತ್ತು. ಅದು ಗೋಪಕ್ಕನ ಕಣ್ಣಿಗೆ ಕಂಡಿತು. ನಾವು ಅದನ್ನು ಕ್ಯಾಮರಾಕಣ್ಣಲ್ಲಿ ಸೆರೆಹಿಡಿದು ಭದ್ರಪಡಿಸಿಕೊಂಡೆವು. ಎಂಥ ಚಂದದ ಹೂ ಅದು. ಕಿವಿಯೋಲೆಯಂಥ ನಮೂನೆಯಲ್ಲಿತ್ತು. ಒಂದು ಗಿಡದಲ್ಲಿ ಅರಸಿನ ಬಣ್ಣದ ಒಂದೇ ಒಂದು ಹೂ ಅರಳಿ ನಮ್ಮನ್ನು ಸ್ವಾಗತಿಸಿತ್ತು. ಆ ಹೂ ನೋಡಿದಾಗ ಎಂಥ ಚಂದದ ಹೂ ಅರಳಿದೆ. ನೋಡುವವರೇ ಇಲ್ಲ ಈ ಕಾಡಿನಲ್ಲಿ ಅನಿಸಿತು. ಬಿಳಿಗೆರೆ ಕೃಷ್ಣಶಾಸ್ತ್ರಿಗಳು ಬರೆದ ಯೇಗ್ದಾಗೆಲ್ಲ ಐತೆ ಪುಸ್ತಕದಲ್ಲಿ ಮೂಕೂಂದೂರು ಸ್ವಾಮಿಗಳು ಕಾಡು ಹೂಗಳನ್ನು ಕಂಡು ಹೇಳಿದ ಮಾತುಗಳು ಆ ಸಂದರ್ಭದಲ್ಲಿ ನೆನಪಾದವು. (ಆಧ್ಯಾತ್ಮದ ಅನುಭವ ದಕ್ಕಿಸಿಕೊಳ್ಳಲು ಯೇಗ್ದಾಗೆಲ್ಲ ಐತೆ ಪುಸ್ತಕ ಅವಶ್ಯ ಓದಬೇಕು) “ಈಗ್ಗಳಪ್ಪ! ಈಕೆ ನೋಡಪ್ಪ! ಏನ್ ಪಸಂದ್ ಐದಾಳೆ ಈಯಮ್ಮ ಓಡಿ ಹೋಗಲ್ಲ. ಒಳ್ಳೆ ನಿಧಾನವಂತೆ. ನೋಡು ಹತ್ರಾನೆ ಬಾ ಅಂತ ತಲೆ ತೂಗಿ ಕರೀತಾ ಅವ್ಳೆ. ಎಂದು ನುಡಿದು ಹೂ ಹತ್ತಿರ ಹೋದರಂತೆ ಸ್ವಾಮಿಗಳು. ಮತ್ತೆ ಮಾತಾಡುತ್ತ, ಎಂಥ ಸೋಜಿಗ! ಅಲ್ಲಾ ಏನ್ ಚೆಂದೊಳ್ಳಿ ಚೆಲುವೆ ನೀನು! ಇಲ್ಲಿ ಬಂದು ಒಬ್ಳೇ ಕೂತಿದ್ದೀಯಲ್ಲ! ಈ ಕಾಡ್ನಾಗಿದ್ರೆ ಯಾರ್ ನೋಡ್ತಾರೆ! ನಿನ್ನ ಅಂದಚಂದ ಎಲ್ಲನಿರಾವರ್ತ, ಯಾವುದಾದರೂ ಊರ ಮುಂದೆ ಇದ್ರೆ ನಾಲ್ಕು ಜನ ನೋಡ್ಯಾರು,ಮುದ್ದಾಡ್ಯಾರು, ಕೊಂಡಾಡ್ಯಾರು, ಇನ್ನು ನಾಲ್ಕು ಜನಕ್ಕೆ ಹೇಳ್ಯಾರು. ‘ನಮ್ಮೂರಾಗೆ ಚೆಲುವಕ್ಕ ಐದಾಳೆ, ಬಂದು ನೋಡಿ’ ಅಂತ. ಏನ್ ಚಂದ ಇದ್ರೇನು? ಬುದ್ಧಿ ಇಲ್ಲ ನಿನಗೆ. ಅಡವಿ ಸೇರಿದ್ದೀಯ! ಹಾಗೆಂದು ಹೂಗಿಡದ ಬಳಿ ಹೋಗಿ ಏನೋ ಕೇಳಿಸಿಕೊಂಡವರಂತೆ, ಆ! ಏನಂದೆಮ್ಮ? ಓಹೋಹೋ! ಹೌದು, ನಿನ್ನ ಮಾತು ಸರಿ ಕಣಕ್ಕ, ಒಪ್ಪಲೇಬೇಕು. ಕೇಳಿದೇನಪ್ಪಾ ನಮ್ಮವ್ವ ಹೇಳಿದ್ದು! ‘ನಾನು ಊರಾಗಿದ್ರೆ ಜನ ನನ್ನನ್ನ ಹಿಂಗೇ ಉಳೀಗೊಡುತಿದ್ರಾ? ಕಿತ್ತು ಹೊಸಗಿ ಸಾಯಿಸಿ ಬುಡ್ತಾರೆ’ ಅಂತಾಳೆ. ನಿಜ ಅವಳಮಾತೇ ಸರಿ. ಕಣ್ಣಿಗೆ ಕಂಡದ್ದನ್ನೆಲ್ಲ ಮನುಷ್ಯ ತನ್ನ ಸುಖಕ್ಕೆಂತ ಹಾಳು ಮಾಡ್ತಾನೆ. ಹಾಳು ಮಾಡೋದನ್ನ ಕಲಿತು ತಾನೂ ಹಾಳಾಗ್ತಾನೆ!. ಎಷ್ಟು ಸತ್ಯ ಈ ಮಾತು ಎಂದೆನಿಸಿತು.

DSCN7645

DSCN7663

DSCN7669
ನಿಮ್ಮನ್ನು ಇನ್ನೊಂದು ದಾರಿಯಲ್ಲಿ ಬೆಟ್ಟ ಇಳಿಸುತ್ತೇನೆ. ಬಂದದಾರಿಯಲ್ಲೇ ಬೇಡ. ಒಟ್ಟಿನಲ್ಲಿ ನಿಮಗೆ ತಿರುಗಾಟ ಆದರೆ ಆಯಿತಲ್ಲ. ಒಂದೂವರೆ ಘಂಟೆಯೊಳಗೆ ನಿಮ್ಮನ್ನು ಬಸ್ಸಿನ ಬಳಿ ತಲಪಿಸಿದರೆ ಸಾಕಲ್ಲ. ನಿಮಗೆ ಟೈಮ್ ಪಾಸ್ ಆಗುತ್ತದೆ. ಎಂದು ಹೇಳಿದ ರಾಜ ಅಲ್ಲಿಂದ ಮುಂದೆ ಮುಂದೆ ಕರೆದೊಯ್ದರು. ಮುಂದೆ ದಾರಿಯೇ ಸರಿ ಇಲ್ಲ. ಒಣಹುಲ್ಲು ಸಾಕಷ್ಟು ಬೆಳೆದಿತ್ತು. ಸರಸರ ಮುಂದೆ ನಡೆದ ರಾಜ ನಮಗೆ ಕಾಣದಾದಾಗ, ರಾಜ, ಓ ರಾಜ ಎಂದು ಕೂಗು ಹಾಕುತ್ತಿದ್ದೆವು. ಇಲ್ಲೇ ಇದ್ದೀನೇಳಿ, ನಿಧಾನವಾಗಿ ಬನ್ನಿ. ಎಲ್ಲೂ ಹೋಗಿಲ್ಲ ಎಂದು ಪ್ರತಿಕ್ರಿಯಿಸಿ ನಗುತ್ತ ನಿಲ್ಲುತ್ತಿದ್ದರು ರಾಜ.
ಸಣ್ಣಬೆಟ್ಟವೆಂದು ಕರೆ ತಂದ ರಾಜ ನಮ್ಮನ್ನು ಸಾಕಷ್ಟು ನಡೆಸಿದ್ದರು. ಎಷ್ಟು ನಡೆದರೂ ಬಸ್ಸಿನ ಸ್ಥಳ ಸಿಗುವುದು ಕಾಣುವುದಿಲ್ಲ. ಅಂತೂ ನಡೆಸಿ ನಡೆಸಿ ದೊಡ್ಡ ಬಂಡೆ ಇರುವ ಕಡೆ ಕರೆತಂದರು. ಆ ಬಂಡೆ ನೋಡಿದ್ದೇ ಎಲ್ಲರ ಕೈ ಕಾಲು ನಡುಗಲು ತೊಡಗಿತು. ಈ ಬಂಡೆ ಇಳಿಯಲು ಎಲ್ಲರಿಗೂ ಸಾಧ್ಯವಿಲ್ಲ ರಾಜ ಎಂದದ್ದಕ್ಕೆ, “ಏಕೆ ಸಾಧ್ಯವಿಲ್ಲ? ಕುರಿಮೇಕೆಗಳೇ ಸಲೀಸಾಗಿ ಸರಸರ ಇಳಿಯುತ್ತವೆ. ನಮಗೆ ಸಾಧ್ಯವಿಲ್ಲವೆ?’’ ಎಂದ ರಾಜ ಕ್ಷಣಾರ್ಧದಲ್ಲಿ ಸರಸರ ಬಂಡೆ ಇಳಿದು ಕೆಳಗೆ ತಣ್ಣಗೆ ಕುಳಿತೇ ಬಿಟ್ಟರು! ರಾಜ ಇಳಿದದ್ದು ನೋಡಿ ನಾವು ಕೆಲವರು ಸ್ಫೂರ್ತಿಗೊಂಡು ಕುರಿಮೇಕೆಗಳಿಂದ ನಾವೇನು ಕಮ್ಮಿ ಇಲ್ಲ ಎಂದು ಧೈರ್ಯಮಾಡಿ ಬಂಡೆ ಇಳಿದೆವು! ಮತ್ತೆ ಕೆಲವರು ನಿಧಾನವಾಗಿ ಬಂಡೆ ಇಳಿದರು. ರಾಜ ಓ ರಾಜ ಇಳಿಯಲಾಗುತ್ತಿಲ್ಲ ಕೈ ಹಿಡಿದು ನಡೆಸೆನ್ನನು ಎಂಬ ಆರ್ತ ಮೊರೆ ಮೇಲಿಂದ ಕೇಳಿ ಬಂದಾಗ ರಾಜ ನಗುತ್ತ ಸರಸರ ಬಂಡೆ ಏರಿ ಅವರ ಬ್ಯಾಗ್ ಹೆಗಲಿಗೇರಿಸಿ ಕೈ ಹಿಡಿದು ಇಳಿಸಿದರು. ಮತ್ತೆ ಕೆಲವರು ಬಾಲ್ಯದಲ್ಲಿ ನಾವು ಜಾರುಬಂಡೆಯಾಡಿಲ್ಲ ಎಂಬ ದುಃಖ ಮರೆಯಲು ಈ ಬಂಡೆಯಲ್ಲಿ ಆ ಆಸೆ ನೆರವೇರಿಸಿಕೊಂಡರು ಹಾಗೂ ಹಾಕಿದ್ದ ಪ್ಯಾಂಟಿನ ಆಸೆಯನ್ನು ಕೈಬಿಟ್ಟರು!

20160228_134408

20160228_134320
ಅದಾಗಲೇ ಎಲ್ಲರೂ ಬಂಡೆ ಇಳಿಯಲು ಅರ್ಧ ಗಂಟೆಗೂ ಹೆಚ್ಚುಕಾಲ ಬೇಕಾಯಿತು. ಎಲ್ಲರೂ ಬಂಡೆ ಇಳಿಯಲು ಯಶ ಸಾಧಿಸಿದ ಮೇಲೆ ಅಲ್ಲಿಂದ ಹೊರಟು ಮಾವಿನ ತೋಪಿನ ಹಾದಿಯಾಗಿ ಸಾಗಿ, ಎಳೆ ಮಾವಿನಮಿಡಿ ಬಿದ್ದಿದ್ದನ್ನು ಬಾಯಿಗೆ ಹಾಕಿಕೊಂಡು ಹೊಲಗಳನ್ನು ದಾಟಿ ಅರ್ಧಕಿಮೀ ಸಾಗಿದಾಗ ಬಸ್ಸಿನ ಬಳಿ ೨.೩೦ಗೆ ಬಂದೆವು. ಆ ಸುಸ್ತಿನಲ್ಲೂ ಅಬ್ಬ ಗುರಿ ಮುಟ್ಟಿದೆವು ಎಂಬ ಸಂತೋಷ ಆವರಿಸಿತು. ಕೈ ಕಾಲು ಮುಖ ತೊಳೆದು ಊಟ (ಬಿಸಿಬೇಳೆ ಭಾತ್, ಮೊಸರನ್ನ, ಸಿಹಿ ಬರ್ಫಿ) ಮಾಡಿ ವಿರಮಿಸಿದೆವು. ಆಗ ಅಲ್ಲಿ ಕುರಿಗಳ ಸಾಲು ಹಾದು ಹೋಯಿತು. ಅವುಗಳು ಸಾಲಾಗಿ ಸಾಗಿದ್ದು  ಕಾಣುವಾಗ  ಶಿಸ್ತಿನ ಸೈನಿಕರು ನಾವೆಲ್ಲ ಎನ್ನುವಂತೆ ಭಾಸವಾಯಿತು.

20160228_151732
ಆರು ಕಿಮೀ ದೂರ ನಡೆಸಿ ಈ ಪೇಟೆ ಮಂದಿಗೆ ಸರಿಯಾಗಿ ಬುದ್ಧಿ ಕಲಿಸಿದ್ದರು ರಾಜ. ಒಂದು ಕಡೆಯಿಂದ ಬೆಟ್ಟ ಹತ್ತಿಸಿ, ಯಾರೂ ಓಡಾಡದ ಇನ್ನೊಂದು ಬದಿಯಿಂದ ಇಳಿಸಿದ್ದರು. ನಾವೋ ಕಾಲಿಗೆ ಬೆಲೆಬಾಳುವ ಚಪ್ಪಲಿ, ಶೂ ಧರಿಸಿ ತಲೆಗೆ ಟೊಪ್ಪಿಗೆ ಹಾಕಿ, ಚೀಲದಲ್ಲಿ ಹಣ್ಣು, ಸೌತೆಕಾಯಿ, ನೀರು ಒಯ್ದು ನಡೆದಿದ್ದೆವು. ರಾಜನ ಕಾಲಿನಲ್ಲಿ ಸವೆದ ಹವಾಯಿ ಚಪ್ಪಲಿ, ತಲೆಗೆ ಟೋಪಿ ಹೆಗಲಿಗೆ ಶಾಲು, ಕೈಯಲ್ಲಿ ಮಚ್ಚು ಇಟ್ಟುಕೊಂಡು, ಈ ನಡಿಗೆ ಯಾವ ಲೆಕ್ಕ ಎಂದು ನಡೆದಿದ್ದರು. ನಾವೋ ಕೂತು ನಿಂತು ಬಸವಳಿದು ಗಮ್ಯ ತಲಪಿದ್ದೆವು. ರಾಜನಿಗೆ ಧನ್ಯವಾದ ಅರ್ಪಿಸಿ ಬೀಳ್ಕೊಂಡೆವು. ವಾಡೆ ಮಲ್ಲೇಶ್ವರ ಬೆಟ್ಟಕ್ಕೆ ಹೋಗಲಿಚ್ಛಿಸುವವರು ರಾಜನನ್ನು ೯೯೪೫೬೫೩೭೫೩ ಈ ಸಂಖ್ಯೆಯಲ್ಲಿ ಸಂಪರ್ಕಿಸಿ.

ನಾಗೇಂದ್ರಪ್ರಸಾದರ ಟೊಪ್ಪಿಗೆ ಎಲ್ಲರ ಕಣ್ಣಿಗೆ ತಾಕಿದ್ದರಲ್ಲಿ ಅಂಥ ಟೊಪ್ಪಿ ತಮಗೂ ಬೇಕಿತ್ತು ಎಂದು ಅನಿಸಿದ್ದು ಸುಳ್ಳಲ್ಲ! ಅದರಲ್ಲಿ ಸೋಲಾರಿನಿಂದ ತಿರುಗುವ ಪುಟ್ಟ ಗಿರಗಟ್ಲೆ (ಪಂಕಕ್ಕೆ ಸಿದ್ದಮ್ಮ ಹೇಳುವ ಶಬ್ಧ ಗಿರಗಟ್ಲೆ) ಇದೆ. ಅದರಿಂದ ಗಾಳಿ ಬರುತ್ತದಂತೆ. ಗಾಳಿ ಬರುತ್ತದಾ ಎಂದು ಕೆಲವರು ತಲೆಗೆ ಹಾಕಿ ಖಾತ್ರಿ ಮಾಡಿಕೊಂಡರು! ಅವರು ಇ ಮಾರುಕಟ್ಟೆಯಿಂದ ಖರೀದಿಸಿದ್ದಂತೆ.

DSCN7675

ಇಲ್ಲಿಯವರೆಗೆ ಬಂದು ಮುಖ್ಯಪಟ್ಟ ವಾಡೆ ಮಲ್ಲೇಶ್ವರ ದೇವಾಲಯ ನೋಡದೆ ಹಿಂದಿರುಗುವುದು ಶೋಭೆಯಲ್ಲ ಎಂದು ಉತ್ಸಾಹವಂದಿಗರು ಸುಮಾರು ೧೩ ಮಂದಿ ೩.೩೦ಗೆ ಮಟಮಟ ಬಿಸಿಲಿಗೆ ಹೊರಟೆವು. ಉಳಿದವರು ನಿದ್ರೆ ಹರಟೆಯಲ್ಲಿ ನಿರತರಾದರು. ಸುಮಾರು ೯೮೦ ಮೆಟ್ಟಲುಗಳನ್ನೇರಿದರೆ ದೇಗುಲ ಕಾಣುತ್ತದೆ. ಮೆಟ್ಟಲುಗಳ ಅಂತರ ಬಲುಕಮ್ಮಿ. ಕಾಲು ನೆಟ್ಟಗೆ ನಿಲ್ಲದಷ್ಟು ಸಪೂರ. ಇತ್ತೀಚೆಗೆ ಕೆಲವಾರು ದಾನಿಗಳ ನೆರವಿನಿಂದ ಈ ಸೋಪಾನಗಳ ದುರಸ್ತಿ ಕಾರ್ಯ ನಡೆದಿದೆ. ದಾನಿಗಳ ಹೆಸರಿನ ಫಲಕ ಹಾಕಿದ್ದಾರೆ. ದಾರಿಯಲ್ಲಿ ಕೆಲವು ಪಕ್ಷಿಗಳು ದರ್ಶನ ಭಾಗ್ಯ ಕರುಣಿಸಿದುವು. ೨ ಕಳ್ಳಿಪೀರ ಕ್ಯಾಮರಾಕ್ಕೆ ಫೋಸ್ ಕೊಟ್ಟುವು.

DSCN7722

DSCN7730

ಮೆಟ್ಟಲೇರಿದಂತೆ ಮಧ್ಯ ಭಾಗದಲ್ಲಿ ನಂದಿ ಹೋಲುವ ಬಂಡೆಗಲ್ಲಿದೆ. ಸುಮಾರು ಇಪ್ಪತ್ತು ನಿಮಿಷದಲ್ಲಿ ದೇವಾಲಯದ ಬಳಿ ತಲಪಿದೆವು. ಅಲ್ಲಿ ನಮ್ಮನ್ನು ಸ್ವಾಗತಿಸಲು ಪೂರ್ವಜರು ಸಾಲಾಗಿ ನಿಂತಿದ್ದರು! ನಮಗೇನು ತಂದಿರಿ? ಎಂದು ಚಾತಕವಾಗಿ ನಿರೀಕ್ಷೆ ಮಾಡಿದರು. ರಶೀದ್ ಅವರಿಗೆ ಸೌತೆಕಾಯಿ ಕೊಟ್ಟು ಉಪಚರಿಸಿದರು.

DSCN7745DSCN7739

DSCN7788DSCN7772

ನಮ್ಮ ಬಸ್ ಹಾಗೂ ವಿಶ್ರಮಿಸುತ್ತಿರುವ ನಮ್ಮ ತಂಡದವರು ದೇವಾಲಯದ ಬಳಿಯಿಂದ ಕ್ಯಾಮಾರಾಕಣ್ಣಿಗೆ ಕಂಡ ನೋಟ

DSCN7749
ದೇವಾಲಯದ ಬಾಗಿಲು ತೆರೆದೇ ಇರುತ್ತದೆ. ಬಂಡೆಯಡಿಯಲ್ಲಿ ಶಿವಲಿಂಗವಿದೆ. ಪ್ರತೀ ಸೋಮಾವಾರ ಮತ್ತು ಶುಕ್ರವಾರ ಪೂಜೆ ನಡೆಯುತ್ತದೆ. ಅಲ್ಲಿ ಸ್ವಲ್ಪ ಹೊತ್ತು ವಿರಮಿಸಿದೆವು. ಸಹನ ಭಕ್ತಿಗೀತೆ ಹಾಡಿದಳು. ನಮ್ಮ ತಂಡದ ಚಿತ್ರ ಕ್ಲಿಕ್ಕಿಸಿಕೊಂಡು ಮೆಟ್ಟಲಿಳಿದು ಕೆಳಗೆ ಬಂದು ೫.೩೦ಗೆ ಬಸ್ಸೇರಿದೆವು.
ಬರುತ್ತ ದಾರಿಯಲ್ಲಿ ಚಹಾ, ಕಾಫಿಗೆ ನಿಲ್ಲಿಸಿದ್ದು ಬಿಟ್ಟರೆ ಮತ್ತೆ ಎಲ್ಲೂ ನಿಲ್ಲದೆ ೯ ಗಂಟೆಗೆ ಮೈಸೂರು ತಲಪಿದೆವು. ನಾಗೇಂದ್ರಪ್ರಸಾದ್ ಹಾಗೂ ಗೋಪಿ ಅವರು ಈ ಕಾರ್ಯಕ್ರಮವನ್ನು ಯೂಥ್ ಹಾಸ್ಟೆಲ್ ಗಂಗೋತ್ರಿ ಘಟಕದ ವತಿಯಿಂದ ಆಯೋಜಿಸಿದ್ದರು. ಅವರಿಗೆ ಧನ್ಯವಾದಗಳು.

Read Full Post »

ಬ್ರಹ್ಮಗಿರಿ ಶಿಖರದಲಿ ನಿಂತಾಗ ಭಾನುಭುವಿ
ಸರಿಗಮವ ಕಂಡಾಗ ನಾನೆಂಥ ತೃಣವೆಂಬ
ಭಾವ ಸ್ಫುರಿಸಿದಾಗ ಹನುಮಂತ ಸಾಮರ್ಥ್ಯ
ಮಿಂಚುತ ಕೃತಾರ್ಥತೆಯ ಮೂಡಿಸಿತು ಅತ್ರಿಸೂನು

ಮಾವ ಜಿ.ಟಿ. ನಾರಾಯಣರಾಯರ ಈ ಮೇಲಿನ ಚುಟುಕು ಓದಿ ಆ ಬೆಟ್ಟದ ತುದಿಗೇರಬೇಕು ಎಂಬ ತುಡಿತ ಆಗಿತ್ತು. ಮೈಸೂರಿನ ಯೂಥ್ ಹಾಸ್ಟೆಲ್ ಗಂಗೋತ್ರಿ ಘಟಕದಿಂದ ಈ ಬೆಟ್ಟಕ್ಕೆ ಚಾರಣ ಏರ್ಪಡಿಸಿದ್ದಾರೆ ಎಂಬುದು ಗೊತ್ತಾದಾಗ ನನ್ನ ಕಾಲು ಹೋಗು ಹೋಗು ಎಂದು ತವಕಿಸಿತು. ಈ ಬೆಟ್ಟಕ್ಕೆ ಎಲ್ಲಿಂದ ಹೇಗೆ ಹೋಗುವುದು ಎಂಬ ಕಿಂಚಿತ್ ಮಾಹಿತಿಯೂ ನನಗಿರಲಿಲ್ಲ. ೧೪-೨-೨೦೧೬ರಂದು ಬೆಳಗ್ಗೆ ೫.೩೦ಕ್ಕೆ ಮೈಸೂರಿನ ವಾರ್ತಾಭವನದ ಬಳಿ ಸೇರಬೇಕೆಂದು ಹೇಳಿದ್ದರು. ಎಲ್ಲರೂ ಬಂದು ಸೇರಿದರೂ ಇನ್ನು ಮೂವರು ಬರಬೇಕಾಗಿತ್ತು. ಸಂಘಟಕರು ಅವರಿಗೆ ಕರೆ ಮಾಡಿ ಸರಿಯಾಗಿ ತಮ್ಮ ಕೋಪವನ್ನು ಹೊರಹಾಕಿದರು. ಅದರಿಂದೇನೂ ಪ್ರಯೋಜನವಾಗಲಿಲ್ಲ. ಅವರು ಬಂದು ಹೊರಡುವಾಗ ಗಂಟೆ ೬.೧೦. ೫.೩೦ ಗಂಟೆಗೇ ಬಂದವರು ೪೦ ನಿಮಿಷ ೩ ಮಂದಿಗಾಗಿ ಕಾಯಬೇಕಾಗಿ ಬಂದದ್ದು ನಮ್ಮ ಜನರ ಸಮಯಪಾಲನೆಗೆ ನಿದರ್ಶನವಾದದ್ದು ವಿಪರ್ಯಾಸ.
ಮುಂಜಾನೆಯ ಮಂಜಿನಲಿ ನಾವು ಸಣ್ಣ ಬಸ್ಸಿನಲ್ಲಿ ೨೦ ಮಂದಿ ಹೊರಟು ಹುಣಸೂರು ನಾಗರಹೊಳೆ ಮಾರ್ಗವಾಗಿ ಸಾಗಿದೆವು. ಮಧ್ಯೆ ಚಹಾ, ಕಾಫಿಗೆಂದು ಅರ್ಧ ಗಂಟೆ ವ್ಯಯವಾಯಿತು. ನಾಗರಹೊಳೆ ದಾರಿಯ ಇಕ್ಕೆಲೆಗಳಲ್ಲೂ ಹುಲ್ಲಿಗೆ ಬೆಂಕಿ ಹಾಕಿದ್ದರಿಂದ ಕಪ್ಪಾಗಿ ವಿಕಾರವಾಗಿ ಕಾಣುತ್ತಿತ್ತು. ಮರಗಳೆಲ್ಲ ಎಲೆ‌ಉದುರಿ ಬೋಳಾಗಿ ಸುಂದರ ಕಲಾಕೃತಿಯಂತೆ ಗೋಚರಿಸುತ್ತಿದ್ದುವು. ಕೆಲವು ಮರಗಳು ನಿರ್ಜೀವವಾಗಿ ಉದ್ದಕ್ಕೆ ನಿಂತಿದ್ದುವು. ಯಾವುದಾದರೂ ಪ್ರಾಣಿಗಳು ಕಾಣುತ್ತವೋ ಎಂದು ಆಚೆ ಈಚೆ ಕೊರಳು ಉದ್ದ ಮಾಡಿ ಕಣ್ಣಾಯಿಸಿ ನೋಡುತ್ತಲಿದ್ದೆವು. ಆನೆ, ಜಿಂಕೆ, ಕೆಂದಳಿಲು, ಹಂದಿ ನಮಗೆ ದರ್ಶನ ಭಾಗ್ಯ ಕರುಣಿಸಿದುವು.

20160214_080809

DSCN7446
ಶ್ರೀನಾಗಮಂಗಲ ಅರಣ್ಯ ಇಲಾಖೆಯಲ್ಲಿ ಅನುಮತಿ ಪತ್ರ ಪಡೆದು ನಾವು ಇರ್ಫು ತಲಪಿದೆವು. ಗಂಟೆ ಹತ್ತು ಕಳೆದಿತ್ತು. ಹಸಿದಹೊಟ್ಟೆಯಲ್ಲಿ ಹುಳುಗಳು ಮಕಾಡೆ ಮಲಗಿದ್ದುವು! ಅಲ್ಲಿ ತಿಂಡಿ ಖಾರ ಪೊಂಗಲ್, ಸಿಹಿ ಪೊಂಗಲ್ ತಿಂದು, ಡಬ್ಬಿಗೆ ಬಿಸಿಬೇಳೆಭಾತ್, ಮೊಸರನ್ನ ಹಾಕಿಸಿಕೊಂಡು, ಎರಡು ಸೇಬು ಚೀಲಕ್ಕೆ ತುಂಬಿ, ಪರಸ್ಪರ ಪರಿಚಯಿಸಿಕೊಂಡು ಬ್ರಹ್ಮಗಿರಿಗೆ ತೆರಳಲು ಸಜ್ಜಾದೆವು. ನಮಗೆ ಮಾರ್ಗದರ್ಶಕರಾಗಿ ಅರಣ್ಯ ಇಲಾಖೆಯಿಂದ ಪ್ರವೀಣ ಸಿದ್ಧರಾಗಿ ಬಂದಿದ್ದರು. ಅಂತೂ ನಮ್ಮ ಸೈನ್ಯ ಪ್ರವೀಣರ ಹಿಂದೆ ೧೧ ಗಂಟೆಗೆ ಇರ್ಫು ಜಲಪಾತದ ಕಡೆಗೆ ಹೊರಟಿತು. ಜಲಪಾತದ ಮೊದಲೇ ಬಲಕ್ಕೆ ಅರಣ್ಯಪ್ರದೇಶದ ಕಡೆಗೆ ತಿರುಗಿ ಮುಂದೆ ಸಾಗಿದೆವು. ಬಿಸಿಲಿನ ಝಳ ಜೋರಾಗಿತ್ತು. ಮುಂದೆ ಸಾಗಿದಂತೆ ಚಡಾವು ಏರುವುದೇ ಕೆಲಸ. ಸಮತಟ್ಟು ಕಡಿಮೆ. ಉಸ್ಸಪ್ಪ ಎಂಬ ಏದುಸಿರು ಬರುವಾಗ ಅಲ್ಲಲ್ಲಿ ನಿಂತು ಸಾಗಿದೆವು. ದಟ್ಟ ಮರಗಳು ಇರುವ ಕಡೆ ಸಾಗುವಾಗ ತಂಪಿನ ಅನುಭವ. ಅಪರೂಪದ ಮರಗಳು ಇದ್ದುವು. ಅವಕ್ಕೆಲ್ಲ ಹೆಸರಿನ ಫಲಕ ಹಾಕಿದ್ದರು. ದುರ್ನಾತ ಎಂಬ ಮರ ಇದೆ. ಅದರ ಬಳಿ ಹೋಗಿ ಪರೀಕ್ಷಿಸಿದಾಗ ದುರ್ನಾತ ಬೀರಲಿಲ್ಲ! ಅಲ್ಲಲ್ಲಿ ನೀರಿನ ಹರಿವು ಸಿಗುತ್ತಿತ್ತು. ಕೆಲವೆಡೆ ವಿಶ್ರಮಿಸಿ ತಂಪಾದ ನೀರನ್ನು ಮುಖಕ್ಕೆ ಎರಚಿದಾಗ ಅದುವರೆಗೆ ಆದ ಆಯಾಸವೆಲ್ಲ ಕ್ಷಣದಲ್ಲಿ ಮಾಯ. ಮುಂದೆ ನಡೆಯಲು ಗುರಿ ಮುಟ್ಟಲು ಹುಮ್ಮಸ್ಸು ದೊರೆಯುತ್ತಿತ್ತು.

20160214_123345
ಹೀಗೆ ಹೋಗುತ್ತಿರಬೇಕಾದರೆ ಈ ಬೆಟ್ಟವನ್ನೇ ಏರಲು ಇಷ್ಟು ಸುಸ್ತಾದರೆ ಹಿಮಾಲಯದ ಕಡೆ ಹೇಗೆ ಹೋಗುವುದು ಎಂಬ ಚಿಂತನೆ ಒಂದು ಕ್ಷಣ ಮನದಲ್ಲಿ ಬಂತು. ಬಿಸಿಲಿನಿಂದ ಇಷ್ಟು ಸುಸ್ತಾಗುವುದು ಎಂದು ಸಂತೈಸಿಕೊಂಡೆ ಮನವನ್ನು! ಬೆವರು ಧಾರಾಕಾರವಾಗಿ ಬಸಿದು ಹೋಗುತ್ತಿತ್ತು. ಪಕ್ಷಿಗಳ ಕಲರವ ಅಲ್ಲೊಂದು ಇಲ್ಲೊಂದು ಕೇಳುತ್ತಿತ್ತೇ ಹೊರತು ಕಣ್ಣಿಗೆ ಕಾಣಿಸಲಿಲ್ಲ. ಅದೃಷ್ಟ ಇದ್ದರೆ ಪ್ರಾಣಿ ಪಕ್ಷಿಗಳು ಕಾಣಿಸಬಹುದು ಎಂದು ಪ್ರವೀಣ ಹೊರಡುವ ಮೊದಲೇ ಹೇಳಿದ್ದರು. ನಮಗೆ ಆ ಅದೃಷ್ಟ ಕೊನೇತನಕ ಮರೀಚಿಕೆಯೇ ಆಯಿತು. ಆದರೆ ಓಯಸಿಸ್ ನಂತೆ ದೂರದಲ್ಲಿ ಒಂದು ಸಾರಂಗ ಮಿಂಚಿ ಮರೆಯಾಯಿತು. ಸೀತೆ ಎದುರು ಮಾಯಾಜಿಂಕೆ ಹಾದು ಹೋದಂತೆ! ಆದರೆ ನಾವು ಆ ಸಾರಂಗ ನಮಗೆ ಬೇಕು ಹಿಡಿದು ತನ್ನಿ ಎಂದು ಯಾರನ್ನೂ ಕಳುಹಿಸಲಿಲ್ಲ ಅಷ್ಟೆ!

DSCN7537

DSCN7545
ಅಲ್ಲಲ್ಲಿ ನಿಂತು ಕುಳಿತು ಸಾಗಿ ಅಂತೂ ನಾವು ೧.೪೫ಕ್ಕೆ ಅರಣ್ಯ ಇಲಾಖೆಯ ನಾರಿಮಲೆ ಅತಿಥಿ ಗೃಹ ತಲಪಿದೆವು. ಅಲ್ಲಿಂದ ಸ್ವಲ್ಪ ದೂರ ಸಾಗಿದರೆ ಬ್ರಹ್ಮಗಿರಿ ತುದಿ ತಲಪುತ್ತೇವೆ ಎಂದು ನಾನು ತಿಳಿದಿದ್ದೆ. ಆದರೆ ನನ್ನ ಊಹೆ ತಪ್ಪಾಯಿತು. ಬ್ರಹ್ಮಗಿರಿ ತುದಿ ತಲಪಲು ಇನ್ನೂ ಆರು ಕಿಲೋಮೀಟರು ದೂರ ಸಾಗಬೇಕು. ಏರು ದಾರಿ ಅದು ಎಂಬ ವಿಷಯ ಗೊತ್ತಾಯಿತು. ಅದಕ್ಕಾಗಿ ನಾವು ರಾತ್ರಿಯೇ ಅಲ್ಲಿ ಬಂದು ತಂಗಿದ್ದು, ಬೆಳಗ್ಗೆ ಬೇಗ ಹೋಗಬೇಕು. ಒಂದೇ ದಿನದಲ್ಲಿ ಹೋಗುವುದು ಅಸಾಧ್ಯ ಎಂದರು ಪ್ರವೀಣ. ನಾರಿಮಲೆ ಅತಿಥಿಗೃಹ ತಲಪಲು ಇರ್ಫುವಿನಿಂದ ೫ ಕಿಮೀ. ದೂರ ಏರುದಾರಿಯಲ್ಲಿ ನಡೆಯಬೇಕು. ನಮಗೆ ೫ ಕಿ.ಮೀ ನಡೆಯಲು ಎರಡೂಮುಕ್ಕಾಲು ಗಂಟೆ ಬೇಕಾಯಿತು. ಇನ್ನು ತುದಿ ತಲಪಲು ಆರುಕಿಮೀ ನಡೆಯಲು ಕನಿಷ್ಟ ಎಂದರೂ ಮೂರು ಗಂಟೆಯಾದರೂ ಬೇಕಾದೀತು. ಎಲ್ಲರೂ ಒಂದೇ ವೇಗದಲ್ಲಿ ನಡೆಯುವುದಿಲ್ಲವಲ್ಲ. ಹಾಗಾಗಿ ಈಗ ಅಲ್ಲಿಗೆ ಹೋಗಿ ಬರಲು ಸಾಧ್ಯವಿಲ್ಲ ಎಂಬುದನ್ನು ಮನವರಿಕೆ ಮಾಡಿದರು ಪ್ರವೀಣ.

20160214_134103

20160214_145853
ಬ್ರಹ್ಮಗಿರಿಗೆ ಚಾರಣ ಹೋಗಲು ಇಚ್ಛಿಸುವವರಿಗೆ ಪುಟ್ಟ ಮಾಹಿತಿ: ಬ್ರಹ್ಮಗಿರಿಗೆ ಹೋಗಲು ಶ್ರೀಮಂಗಲ ವ್ಯಾಪ್ತಿಯ ಅರಣ್ಯ ಇಲಾಖೆಯಲ್ಲಿ ಅನುಮತಿಯನ್ನು ಒಂದು ವಾರ ಮೊದಲೇ ಕಾದಿರಿಸಬೇಕು. ಅತಿಥಿ ಗೃಹದಲ್ಲಿ ತಂಗಲು ಒಂದು ದಿನಕ್ಕೆ ಒಂದು ಸಾವಿರ ರೂ. ಪಾವತಿಸಬೇಕು. ಅಡುಗೆ ಮಾಡಿಕೊಳ್ಳಲು ಪಾತ್ರೆ ಕೊಡುತ್ತಾರೆ. ಸಾಮಾನು ನಾವೇ ತರಬೇಕು. ಹಾಗೂ ಅಡುಗೆ ನಾವೇ ತಯಾರಿಸಬೇಕು. ಪ್ರವೆಶ ಶುಲ್ಕ ತಲಾ ಒಬ್ಬರಿಗೆ ರೂ. ೨೦೦ ಹಾಗೂ ಮಾರ್ಗದರ್ಶಕರಿಗೆ ರೂ. ೫೦೦ ಪಾವತಿಸಬೇಕು. ಹೋಗಲಿಚ್ಛಿಸುವವರು ಅರಣ್ಯ ಇಲಾಖೆಯ ಪ್ರಮೋದ ಅವರನ್ನು ಸಂಪರ್ಕಿಸಿ: ೯೪೮೮೧೩೮೩೫, ೦೮೨೭೪೨೪೬೩೩೧. ಅಲ್ಲಿ ಒಂದು ದಿನ ತಂಗಿದರೆ ನಾರಿಮಲೆ ಬೆಟ್ಟಕ್ಕೂ ಹೋಗಬಹುದು.
ಅತಿಥಿ ಗೃಹದಿಂದ ಅರ್ಧ ಮೈಲಿ ಮುಂದೆ ಸಾಗಿದರೆ ಬ್ರಹ್ಮಗಿರಿ ಬೆಟ್ಟದ ತುದಿ ಕಾಣುತ್ತದೆ. ಅದುವೇ ವ್ಯೂ ಪಾಯಿಂಟ್.

DSCN7539

DSCN7533 ಅಲ್ಲೀವರೆಗಾದರೂ ಹೋಗಿ ತೃಪ್ತಿ ಹೊಂದೋಣವೆಂದು ಅಲ್ಲಿಗೆ ಸಾಗಿದೆವು. ದೂರದಿಂದ ಕಾಣುವ ಬ್ರಹ್ಮಗಿರಿ ಬೆಟ್ಟ ನೋಡಿ ಸಮಾಧಾನಪಟ್ಟೆವು. ಅದಕ್ಕೇ ಅಲ್ಲವೇ ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎಂಬ ನಾಣ್ನುಡಿ ಬಂದದ್ದು. ದೂರದಬೆಟ್ಟ ಕಣ್ಣಿಗೆ ನುಣ್ಣಗೆ ಎಂಬುದು ನಮಗೆ ಸರಿಯಾಗಿ ಖಾತ್ರಿ ಆಯಿತು! ಬೆಟ್ಟ ಏರಲು ಇಷ್ಟು ಕಷ್ಟ ಉಂಟು ಎಂದು ಗೊತ್ತಾಗುವುದು ಅದನ್ನು ಏರಲು ಹೊರಟಾಗಲೇ ಅಲ್ಲವೆ? ಬೆಟ್ಟದ ಮುಂದೆ ನಮ್ಮ ಅಹಂಕಾರ ಎಲ್ಲ ಹೇಳ ಹೆಸರಿಲ್ಲದಂತೆ ಅಡಿಯಲ್ಲಿರುತ್ತದೆ.

20160214_140324

20160214_141718DSCN7509

ಬುಡದಲಿ ನಿಂತಾಗ ಕೊಡಿ ಕಾಣದಾ ಬೆಟ್ಟ
ನಡೆದಂತೆ ಪಥ ಹಾಸಿ ಗುರಿಗೊಯ್ದು ತಲೆಮೇಲೆ
ಹಿಡಿದಿಟ್ಟು ಸುಖಿಸುವುದು: ಸತತಪ್ರಯತ್ನವೇ
ಗಡಿಮೀರಿ ಜಗನೋಡಲಿಹ ಮಾರ್ಗ ಅತ್ರಿಸೂನು

ಅಲ್ಲಿ ತಣ್ಣಗೆ ಗಾಳಿ ಅನುಭವಿಸುತ್ತ ಕುಳಿತು ತಂಡದ ಪೋಟೊ ತೆಗೆಸಿಕೊಂಡು ಅತಿಥಿ ಗೃಹಕ್ಕೆ ಬಂದು ಊಟ ಮಾಡಿದೆವು. ಅತಿಥಿಗೃಹದ ಜಗಲಿಯ ಕಿಟಕಿಗಳು ಆನೆ ದಾಳಿಯಿಂದ ಧರಾಶಾಯಿಯಾಗಿದೆ. ಎಲ್ಲ ಕಡೆ ವಿದ್ಯುತ್ ಬೇಲಿ ಇದೆ. ಬೇಲಿ ಇದ್ದರೂ ಕೆಲವೊಮ್ಮೆ ಶಾರ್ಟ್ ಆಗಿ ಆನೆ ಬೇಲಿ ದಾಟಿ ಬರುತ್ತದಂತೆ. ದಾಳಿಯಾಗುವಾಗ ಪುಣ್ಯವಶಾತ್ ಅಲ್ಲಿ ಯಾರೂ ಚಾರಣಿಗರು ತಂಗಿರಲಿಲ್ಲವಂತೆ.

20160214_145645
ಅಲ್ಲಿಂದ ೩ ಗಂಟೆಗೆ ಹೊರಟೆವು. ಏರುವಾಗ ಎಷ್ಟು ಏದುಸಿರು ಬಿಟ್ಟಿದ್ದೆವೋ ಅಬ್ಬ ಇನ್ನು ಎಷ್ಟು ದೂರ ಏರಬೇಕಪ್ಪ ಎಂಬ ಭಾವ ಆಗಾಗ ಏಳುತ್ತಿತ್ತು. ಆದರೆ ಇಳಿಯುವಾಗ ಸುಖ ಅನುಭವಿಸಿದೆವು! ೪.೪೫ಕ್ಕೆ ಇರ್ಫು ರಾಮೇಶ್ವರ ದೇವಾಲಯದ ಬಳಿ ತಲಪಿದೆವು. ಅಲ್ಲಿ ಎಳನೀರು ಕುಡಿದು ಪ್ರವೀಣರಿಗೆ ಧನ್ಯವಾದ ಹೇಳಿ ಬಸ್ಸನ್ನೇರಿದೆವು. ಆರು ಗಂಟೆಯೊಳಗೆ ನಾಗರಹೊಳೆ ಅರಣ್ಯದ ಗೇಟ್ ದಾಟಬೇಕಿತ್ತು. ನಾವು ಗೇಟ್ ಬಳಿ ತಲಪಿದಾಗ ೫.೫೦. ಸದ್ಯ ಸಮಯಕ್ಕೆ ಸರಿಯಾಗಿ ತಲಪಿದ್ದೆವು. ನಾಗರಹೊಳೆ ಗಿರಿಜನ ಹಾಡಿಯಲ್ಲಿ ಉಳಿದ ಬಿಸಿಬೇಳೆ ಭಾತ್ ಹಂಚಿದೆವು. ಮುಂದೆ ಚಹಾ, ಕಾಫಿಗೆ ಇಪ್ಪತ್ತು ನಿಮಿಷ ನಿಲ್ಲಿಸಿದ್ದು ಬಿಟ್ಟು ಮುಂದೆ ಎಲ್ಲೂ ನಿಲ್ಲದೆ ಒಂಬತ್ತು ಗಂಟೆಗೆ ಮೈಸೂರು ತಲಪಿದೆವು. ಈ ಕಾರ್ಯಕ್ರಮವನ್ನು ಗಂಗೋತ್ರಿ ಘಟಕದ ವತಿಯಿಂದ ಸತೀಶ್ ಬಾಬು ಅವರು ವಹಿಸಿಕೊಂಡು ಯಶಸ್ವಿಯಾಗಿ ಬ್ರಹಗಿರಿ ತಪ್ಪಲಲ್ಲಿ ಓಡಾಡಿಸಿ ಕ್ಷೇಮವಾಗಿ ಕರೆತಂದಿದ್ದರು. ಅವರಿಗೆ ನಮ್ಮ ಧನ್ಯವಾದ.

Read Full Post »

ಜಿ.ಟಿ.ನಾರಾಯಣ ರಾಯರು ಬರೆದ ಎನ್.ಸಿ.ಸಿ. ದಿನಗಳು ಪುಸ್ತಕದಲ್ಲಿ ಕೊಡಗಿನ ನಿಶಾನೆಮೊಟ್ಟೆ ಬಗ್ಗೆ ಉಲ್ಲೇಖವಿದೆ. ಅದನ್ನು ಓದಿದಾಗಲೇ ಆ ಬೆಟ್ಟ ಏರಬೇಕೆಂದುಕೊಂಡಿದ್ದೆ. ಅದಕ್ಕೆ ೩-೧-೨೦೧೬ರಂದು ಅವಕಾಶ ಒದಗಿ ಬಂತು.
ನಮ್ಮ ೫೦ ಜನರನ್ನು ಹೊತ್ತ ಬಸ್ ಬೆಳಗ್ಗೆ ೬.೩೦ ಘಂಟೆಗೆ ಮೈಸೂರು ಬಿಟ್ಟು ಮಡಿಕೇರಿಯೆಡೆಗೆ ಹೊರಟಿತು. ಕಂಪಲಾಪುರದಲ್ಲಿ ತಿಂಡಿ ಉಪ್ಪಿಟ್ಟು ಕೇಸರಿಭಾತ್ ತಿಂದು, ಪಲಾವ್, ಮೊಸರನ್ನ ಡಬ್ಬಿಗೆ ತುಂಬಿಸಿಕೊಂಡು, ಕಿತ್ತಳೆಹಣ್ಣು ಪಡೆದು ಹೊರಟು ಸುಮಾರು ಹತ್ತೂವರೆಗೆ ಮಡಿಕೇರಿ ತಲಪಿದೆವು. ಮಡಿಕೇರಿ ಯೂಥ್ ಹಾಸ್ಟೆಲಿನ ವತಿಯಿಂದ ನಮಗೆ ಮೋಹನದಾಸ್ ಎಂಬ ಮಾರ್ಗದರ್ಶಕರ ನೇಮಕ ಆಗಿತ್ತು. ಅವರಿಗಾಗಿ ೧೫ ನಿಮಿಷ ಕಾಯಬೇಕಾಯಿತು. ಅವರನ್ನು ಹತ್ತಿಸಿಕೊಂಡು ಗಾಳಿಬೀಡು ಮಾರ್ಗದಲ್ಲಿ ಸಾಗಿ ವಣಚ್ಚಿಲ್ ಎಂಬಲ್ಲಿ ಬಸ್ ನಿಂತಿತು. ಅಲ್ಲಿಂದ ನಮ್ಮ ಚಾರಣ ಪ್ರಾರಂಭ. (ಕೊಡಗು ಜಿಲ್ಲೆಯಲ್ಲಿ ಭಾಗಮಂಡಲ ತಲಕಾವೇರಿ ವ್ಯಾಪ್ತಿಯಲ್ಲಿ ಇನ್ನೊಂದು ನಿಶಾನೆಮೊಟ್ಟೆ ಇದೆ.)

IMG_3704

DSCN6963
ಅಲ್ಲಿ ನಾವೆಲ್ಲ ಪರಸ್ಪರ ಪರಿಚಯಿಸಿಕೊಂಡು ಗಂಟೆ ಅಂದಾಜು ಹನ್ನೊಂದು ಕಾಲಕ್ಕೆ ನಡಿಗೆ ಪ್ರಾರಂಭಿಸಿದೆವು. ಬಿಸಿಲು ಜೋರಾಗಿ ಚುರುಗುಟ್ಟುತ್ತಿತ್ತು. ಮುಂದೆ ಮೋಹನದಾಸರು. ಅವರ ಹಿಂದೆ ನಾವು. ಯಾವುದೇ ಕಾರಣಕ್ಕೂ ಮೋಹನದಾಸರನ್ನು ದಾಟಿ ಮುಂದೆ ಹೋಗುವಂತಿಲ್ಲ ಎಂಬ ಆಜ್ಞೆ ಸಂಘಟಕರಿಂದ ಆಗಿತ್ತು. ಕಾಫಿತೋಟದ ಮಧ್ಯೆ ಸಾಗುವಾಗ ಅಲ್ಲಿ ಕಾರ್ಮಿಕ ಮಹಿಳೆಯರು ನಮ್ಮನ್ನು ನೋಡಿ, ‘ಎಲ್ಲಿಂದ ಬಂದಿರಿ? ಬೆಟ್ಟಕ್ಕೆ ಹೋಗಲು ತುಂಬ ನಡೆಯಬೇಕು. ಹೋಗಿಬನ್ನಿ’ ಎಂದು ಖುಷಿಯಿಂದ ಮಾತಾಡಿ ಬೀಳ್ಕೊಟ್ಟರು. ಕಾಡು ದಾರಿಯಾಗಿ ಸಾಗಿ ರಸ್ತೆಗೆ ಬಂದೆವು. ರಸ್ತೆಯಲ್ಲೇ ಸ್ವಲ್ಪ ದೂರ ಕ್ರಮಿಸಿ ಅಲ್ಲಿಂದ ಎಡಕ್ಕೆ ಮತ್ತೆ ಕಾಡು ದಾರಿ. ಮುಂದೆ ಒಬ್ಬರು ಮಾತ್ರ ಚಲಿಸಬಹುದು. ಅಂಥ ದಾರಿ. ಬಲಗಡೆಗೆ ಹುಲ್ಲುಮಿಶ್ರಿತ ಗುಂಡಿ. ಎಡಗಡೆ ಬೆಟ್ಟ. ಎಚ್ಚರದಿಂದ ಕಾಲಿಡಬೇಕು. ತಪ್ಪಿ ಬಲಗಡೆಗೆ ಕಾಲು ಹಾಕಿದರೆ ಜಾರಿ ಕೆಳಗೆ ಬೀಳುವ ಅಪಾಯ. ಆನೆಯನ್ನು ಖೆಡ್ಡಕ್ಕೆ ಬೀಳಿಸಲು ಗುಂಡಿ ಮೇಲಕ್ಕೆ ಹುಲ್ಲು ಸೊಪ್ಪು ಹರಗಿ ಇಡುತ್ತಾರಲ್ಲ ಅದೇ ನೆನಪು ಆ ದಾರಿ ನೋಡುವಾಗ ಬಂತು! ಗೊತ್ತೇ ಆಗುವುದಿಲ್ಲ ಗುಂಡಿ ಇರಬಹುದೆಂದು.

DSCN7004
ಸುಮಾರು ಒಂದು ಮೈಲಿ ನಡೆದು ವಿಶ್ರಾಂತಿ. ಏಕೆಂದರೆ ಹಿಂದಿನವರು ಬರುವಲ್ಲಿವರೆಗೆ ಮುಂದೆ ಹೋಗುವಂತಿಲ್ಲ. ಸುಮಾರು ಕಡೆ ಎಡ ಬಲ ತಿರುವುಗಳಿವೆ. ದಾರಿ ತಪ್ಪಿದರೆ ಕಷ್ಟ. ಹಿಂದೆ ನಿಮ್ಮವರೇ ಚಾರಣಕ್ಕೆ ಬಂದಾಗ ದಾರಿ ತಪ್ಪಿ ಸುಮಾರು ಕಷ್ಟವಾಗಿತ್ತು. ಈ ಸಲ ಹಾಗಾಗುವುದು ಬೇಡ ಎಂದು ಮೋಹನದಾಸರ ಎಚ್ಚರಿಕೆ ನುಡಿ. ಹಾಗಾಗಿ ಪದೇ ಪದೇ ನಿಲ್ಲುವ ಕಷ್ಟ. ಏಕೆಂದರೆ ಗುಂಪಿನಲ್ಲಿ ಎಲ್ಲರೂ ಒಂದೇ ನಮೂನೆಯ ತಾಕತ್ತುಳ್ಳವರು ಇರುವುದಿಲ್ಲ. ಕೆಲವರು ಆಮೆಯಂತೆ ನಿಧಾನ, ಇನ್ನು ಕೆಲವರು ಮೊಲದಂತೆ ಚುರುಕು. ಹಾಗಾಗಿ ಚುರುಕಿನವರು ನಿದ್ದೆ ಮಾಡಬೇಕಾದ ಪರಿಸ್ಥಿತಿ! ಸುಮಾರು ೩೫ ಮಂದಿ ಹೀಗೇ ನಿಂತು ನಿಂತು ಸಾಗಿ ಮಧ್ಯಾಹ್ನ ೧೨.೩೦ಗೆ ಸುಮಾರು ನಾಲ್ಕೈದು ಕಿಮೀ ಕ್ರಮಿಸಿದಾಗ ಎಷ್ಟು ಹೊತ್ತಾದರೂ ಆಮೆಗಳು ಬರುವುದು ಕಾಣದೇ ಅಲ್ಲೇ ಕೂತೆವು. ಕೆಳಗಿನಿಂದ ಅವರು ಬರುವುದು ನಮಗೆ ಕಾಣುವಷ್ಟು ನಾವು ಸಾಕಷ್ಟು ಎತ್ತರದಲ್ಲಿದ್ದೆವು. ಆಮೆಗಳು ದಾರಿ ತಪ್ಪಿದ್ದಾರೆ. ಮರಳಿ ಹೋಗುವುದೊಂದೇ ದಾರಿ ಎಂದು ಮೋಹನದಾಸರಿಗೆ ಅರಿವಾಯಿತು. ದಾಸರು ಹಾಗೂ ಇನ್ನಿಬ್ಬರು ಆಮೆಗಳನ್ನು ಹುಡುಕಲು ಹಿಂದಕ್ಕೆ ತೆರಳಿದರು. ನಾವು ಬರುವಲ್ಲಿವರೆಗೆ ಯಾರೂ ಮುಂದೆ ಹೋಗಬಾರದು ಎಂದು ಕಟ್ಟಪ್ಪಣೆ ಮಾಡಿದ್ದರು. ಹಾಗೆ ವಿಧಿಯಿಲ್ಲದೆ ಮೊಲಗಳು ನಿದ್ದೆಗೆ ಜಾರಿದುವು! ಈ ಸಲ ದಾರಿ ತಪ್ಪಬಾರದು ಎಂದು ಅಷ್ಟು ಎಚ್ಚರದಿಂದ ದಾಸರು ಹೇಳಿದರೂ, ನಾವು ನಿಂತು ನಿಂತು ಸಾಗಿದರೂ ಯಾವ ಮಾಯದಲ್ಲೋ ಎಡವಟ್ಟು ಆಗಿತ್ತು. ಅದಕ್ಕೆ ಒಂದೇ ಪರಿಹಾರ ಎಂದರೆ ಸುಮಾರು ಮಂದಿ ಚಾರಣ ತೆರಳುವಾಗ ಇಬ್ಬರು ಮಾರ್ಗದರ್ಶಕರನ್ನು ಏರ್ಪಾಡು ಮಾಡಬೇಕು. ಒಬ್ಬರು ಮುಂದೆ, ಇನ್ನೊಬ್ಬರು ಹಿಂದೆ. ಹೀಗೆ ವ್ಯವಸ್ಥೆ ಮಾಡಿದರೆ ಇಂಥ ಯಾವ ಅನಾಹುತಗಳೂ ಆಗುವ ಸಂಭವವಿಲ್ಲ.

DSCN7003

DSCN7000
ನಾವಿದ್ದ ಸ್ಥಳ ಕೆಳಗೆ ಪ್ರಪಾತ ಹಿಂದಕ್ಕೆ ಗುಡ್ಡ, ಮಧ್ಯೆ ಒಬ್ಬರು ಹೋಗುವಂಥ ಕಾಲುದಾರಿ ಮಾತ್ರ. ಅಲ್ಲೆ ಸಾಲಾಗಿ ಕುಕ್ಕರುಬಡಿದೆವು. ಆಗಾಗ ಗಂಟೆ ನೋಡಿದರೂ ಏನೂ ಪ್ರಯೋಜನ ಆಗಲಿಲ್ಲ. ನಾವು ವಿಶ್ರಮಿಸಿ ಒಂದೂಕಾಲು ಗಂಟೆ. ಕೆಲವರು ಊಟದ ಡಬ್ಬಿ ಹೊರತೆಗೆದು ಹೊಟ್ಟೆ ತುಂಬಿಸಿಕೊಂಡೆವು. ಇನ್ನು ಕೆಲವರು ಅಲ್ಲೇ ಮಲಗಿದರು. ಇನ್ನು ಕೆಲವರು ಸೆಲ್ಫಿ ತೆಗೆದುಕೊಳ್ಳುವುದರಲ್ಲಿ ಮಗ್ನರಾದರು. ಅಂತೂ ಮೋಹನದಾಸರು ಆಮೆಗಳನ್ನು ಹುಡುಕುವಲ್ಲಿ ಯಶಸ್ವಿಯಾಗಿ ಬೇರೊಂದು ದಾರಿಯಿಂದ ಅವರನ್ನು ಕರೆತಂದು ನಮಗೆ ಅಲ್ಲಿಂದ ಮುಂದಕ್ಕೆ ತೆರಳಲು ಅಪ್ಪಣೆ ಕೊಟ್ಟರು. ನಿಜಕ್ಕೂ ಆಮೆ ಮೊಲದ ಕತೆಯಂತೆಯೇ ನಮ್ಮದೂ ಆಗಿತ್ತು. ದಾರಿತಪ್ಪಿದವರನ್ನು ಇನ್ನೊಂದು ದಾರಿಯಲ್ಲಿ ಕರೆತಂದು ಅವರು ನಮಗಿಂತ ಮುಂದೆ ನಿಂತಿದ್ದರು! ಅಷ್ಟರಲ್ಲಿ ನಮ್ಮ ಒಂದೂಕಾಲು ಘಂಟೆ ಅಪವ್ಯಯವಾಗಿತ್ತು. ಸದ್ಯ ಸಿಕ್ಕರಲ್ಲ ಎಂಬ ಸಮಾಧಾನದಿಂದ ಮುಂದುವರಿದೆವು. ಅಲ್ಲಿಂದ ಮುಂದೆ ತೆರಳಿ ಸಮತಟ್ಟಾದ ಸ್ಥಳದಲ್ಲಿ ಬಾಕಿದ್ದವರ ಊಟಕ್ಕಾಗಿ ಕೂತೆವು. ಸುಮಾರು ೨೦ ನಿಮಿಷ ಅಲ್ಲಿ ವಿನಿಯೋಗವಾಯಿತು.

DSCN7042
ಊಟವಾಗಿ ಮುಂದೆ ಸಾಗಿದಾಗ ದೂರದಲ್ಲಿ ನಿಶಾನೆಮೊಟ್ಟೆ ಗೋಚರವಾಯಿತು. ಇದನ್ನು ನಾವು ಏರಬೇಕು ಎಂಬ ಹುಮ್ಮಸ್ಸಿನಲ್ಲಿ ಬೆಟ್ಟ ಏರಲು ಹೊಸ ಉತ್ಸಾಹ ಬಂತು.

DSCN7060

nishAne

ಅಂತೂ ಮಧ್ಯಾಹ್ನ ೩.೩೦ಕ್ಕೆ ನಾವು ನಿಶಾನೆಮೊಟ್ಟೆ ಮೇಲೆ ನಿಂತಿದ್ದೆವು! ಸುಮಾರು ೪,೦೩೮ ಅಡಿ ಎತ್ತರದಲ್ಲಿದ್ದೆವು. ಮಡಿಕೇರಿಯ ಎತ್ತರ ೩,೯೦೦ ಅಡಿ. ನಾವು ಸುಮಾರು ಆರೇಳು ಮೈಲಿ ನಡೆದಿದ್ದೆವು. ಬಿಸಿಲು ಜೋರಾಗಿತ್ತು. ನೆರಳಿಗಾಗಿ ಹುಡುಕಿದರೂ ಅಲ್ಲಿ ಮರಗಳಿಲ್ಲ. ಕುರುಚಲು ಗಿಡಗಳ ಸಂದಿನಲ್ಲೇ ಕೂತು ವಿಶ್ರಮಿಸಿದೆವು. ಬಿಸಿಲು ಇದ್ದಾಗ ಗೊತ್ತಾಗುತ್ತದೆ ಮರಗಳ ಮಹತ್ತ್ವ. ಸುತ್ತಲೂ ಹಸಿರುಹೊದ್ದ ಬೆಟ್ಟಗಳನ್ನು ನೋಡುತ್ತ ಅರ್ಧ ಗಂಟೆ ಕಾಲ ಕಳೆದೆವು. ತಂಡದ ಫೋಟೋ ತೆಗೆಸಿಕೊಂಡು ಗುಡ್ಡದ ಇನ್ನೊಂದು ಕಡೆಯಿಂದ ಕೆಳಗೆ ಇಳಿಯಲು ತೊಡಗಿದೆವು.

IMG_3713

DSCN7030

DSCN7072
ನಾವು ಹತ್ತಿದ್ದು ವಣಚ್ಚಿಲ್ ಕಡೆಯಿಂದ, ಇಳಿದದ್ದು ಮೋಣಂಗೇರಿಯೆಡೆಗೆ. ನಿಶಾನೆಮೊಟ್ಟೆಗೆ ಹೋಗಲು ಸುಮಾರು ದಾರಿಗಳಿವೆಯೆಂದು ಮೋಹನದಾಸರು ಹೇಳಿದರು. ಹತ್ತಿರದ ದಾರಿ, ದೂರದ ದಾರಿ ಎಂದೆಲ್ಲ ಇವೆ. ಚಾರಣಪ್ರಿಯರಿಗೆ ದೂರದ ದಾರಿಯೇ ಹೆಚ್ಚು ಇಷ್ಟ. ಚಾರಣಿಗರು ರಸ್ತೆಯಲ್ಲಿ ನಡೆಯುವುದನ್ನು ಇಷ್ಟಪಡುವುದಿಲ್ಲ, ಕಾಡುದಾರಿಯನ್ನೇ ಅಪೇಕ್ಷಿಸುತ್ತಾರೆ ಎಂದರು ದಾಸರು. ಬೆಟ್ಟ ಇಳಿಯುವಾಗ ಬಲು ಎಚ್ಚರದಿಂದ ಇಳಿಯಬೇಕು. ಇಳಿಯುವಾಗ ಜಾರುವ ಅಪಾಯ ಜಾಸ್ತಿ. ನಿಧಾನವಾಗಿ ಬೆಟ್ಟ ಇಳಿದು ಅಲ್ಲಲ್ಲಿ ನಿಂತು ಹಿಂದಿನವರು ಬರುವುದು ಖಾತ್ರಿ ಆದಮೇಲೆಯೇ ಮುಂದಕ್ಕೆ ಚಲಿಸಲು ನಮಗೆ ಅನುಮತಿ ಮೋಹನದಾಸರಿಂದ. ಹಿಂದೆ ಆದ ಅಪಾಯ ಈಗ ಪುನಃ ಆಗುವುದು ಬೇಡವೆಂದು ಅವರು ತೀರ್ಮಾನಿಸಿದ್ದರು! ಯಾರಿಗೂ ಯಾವ ಅಪಾಯವೂ ಆಗದೆ ನಾವು ಬೆಟ್ಟ ಇಳಿದು ತಾಜ್ ರೆಸಾರ್ಟ್ ಕಡೆಗೆ ಬಂದೆವು.

DSCN7092

ಗುಡ್ಡದ ಮೇಲೆ ಭವ್ಯವಾಗಿ ಕಂಗೊಳಿಸುತ್ತದೆ ನಾಲ್ಕೈದು ಮಹಡಿಗಳಿರುವ ಈ ರೆಸಾರ್ಟ್. ಬಾಲ್ಕನಿಯಲ್ಲಿ ನಿಂತು ದೂರದ ಹಸುರು ಹೊದ್ದ ಬೆಟ್ಟದ ದೃಶ್ಯ ನಯನಮನೋಹರ. ಕೆಳಗೆ ಈಜುಕೊಳ, ಪ್ರತ್ಯೇಕ ಮನೆಗಳು, ಇತ್ಯಾದಿಗಳನ್ನು ಕಾಣಬಹುದು. ಹಾಗೆಂದು ಸಾವಿರಾರು ರೂಪಾಯಿ ಸುರಿದು ಅಲ್ಲಿ ಉಳಿದುಕೊಳ್ಳಲು ಮಾತ್ರ ಮನಸ್ಸು ಬಾರದು. ಅದನ್ನು ನೋಡಿ ಅಲ್ಲಿಂದ ಸಂಜೆ ೪.೩೦ಗೆ ಮುಂದೆ ಸಾಗಿದೆವು.

taj hotel

ರೆಸಾರ್ಟ್‌ನವರದೇ ಖಾಸಗೀ ರಸ್ತೆಯಲ್ಲಿ ಸಾಗಿ ಒಂದೆಡೆ ಬಲಗಡೆಗೆ ಕಾಡು ದಾರಿಯಲ್ಲಿ ಬೆಟ್ಟ ಇಳಿಯಲು ತೊಡಗಿದೆವು. ಅಂತೂ ೫.೧೫ಕ್ಕೆ ಬೆಟ್ಟ ಇಳಿದು ಮೋಣಂಗೇರಿ ರಸ್ತೆ ತಲಪಿದೆವು.

DSCN7097
ತಂದ ನೀರು ಖಾಲಿಯಾದವರು ಜೀಪ್ ಹರೀಶರ ಮನೆಯಿಂದ ತುಂಬಿಸಿಕೊಂಡರು. ಅದಾಗಲೇ ಸುಸ್ತಾದವರು ಮುಖ್ಯರಸ್ತೆ ತಲಪಲು ಹರೀಶರ ಜೀಪ್ ಮೊರೆ ಹೋದರು. ನಾವು ಮುಂದೆ ಸಾಗಿದೆವು. ಮಣ್ಣುರಸ್ತೆ, ಅಲ್ಲಲ್ಲಿ ಒಂದೊಂದು ಮನೆಗಳು ಬಿಟ್ಟರೆ ಜನ ಸಂಚಾರವಿಲ್ಲ. ದಾಸರಿಂದ ಮುಂದೆ ಯಾರೂ ಹೋಗಬಾರದು ಎಂಬ ಎಚ್ಚರಿಕೆ ನುಡಿ ಬರುತ್ತಲೇ ಇತ್ತು. ಆದರೆ ನಾವು ೨೦ ಮಂದಿ ಪ್ರಾರಂಭದಲ್ಲಿ ಅವರ ಈ ನುಡಿಗೆ ತಲೆಬಾಗಿ ಅಲ್ಲಲ್ಲಿ ನಿಂತರೂ ಯಾವಾಗ ಗಂಟೆ ಸಂಜೆ ೬ ದಾಟಿತೋ ಮುಂದೆ ಎಲ್ಲೂ ನಿಲ್ಲುವ ಮನಸ್ಸು ಮಾಡಲಿಲ್ಲ. ಅದಾಗಲೇ ಸೂರ್ಯ ಎಂದಿನ ಪಾಳಿ ಮುಗಿಸಿ ಮನೆಗೆ ತೆರಳಲು ಹೊರಟಿದ್ದ. ಯಾರ ಬಳಿಯೂ ಟಾರ್ಚ್ ಇಲ್ಲ. ಮೊಬೈಲ್ ಟಾರ್ಚ್ ಹೆಚ್ಚು ಸಮಯ ಬಾರದು. ಬ್ಯಾಟರಿ ಉಸಿರು ನಿಲ್ಲಿಸುವ ಕೊನೆ ಹಂತದಲ್ಲಿತ್ತು. ಕತ್ತಲೆಯಾಗುವುದೊರಳಗೆ ಮುಖ್ಯರಸ್ತೆ ತಲಪಬೇಕು ಎಂಬ ಗುರಿಯೊಂದೇ ನಮ್ಮೆದುರಿದ್ದುದು. ದಾರಿ ಎಲ್ಲೂ ಕವಲೊಡೆಯುವುದಿಲ್ಲ. ನೇರ ರಸ್ತೆಯಲ್ಲೇ ಸಾಗಬೇಕು ಎಂಬ ಮಾಹಿತಿ ಸಿಕ್ಕಿತ್ತು. ಹಾಗಾಗಿ ನಿಲ್ಲಿ ನಿಲ್ಲಿ ಎಂಬ ದಾಸರ ನುಡಿಗೆ ಕಿವಿಗೊಡದೆ ಧೈರ್ಯವಾಗಿ ಮುಂದೆ ಬಿರುಸು ನಡಿಗೆಗೆ ಮೊದಲಿಟ್ಟೆವು. ದಾರಿಯಲ್ಲಿ ಯಾರೇ ಸಿಕ್ಕರೂ ಇನ್ನೆಷ್ಟು ದೂರ ಮುಖ್ಯರಸ್ತೆಗೆ ಎಂದು ಕೇಳುತ್ತಿದ್ದೆವು. ಒಬ್ಬರು ಇನ್ನು ಮೂರು ಮೈಲಿ ಎಂದಾಗ ಹರುಷಗೊಂಡು, ಮುಂದೆ ಸಿಕ್ಕವರು ಐದು ಮೈಲಿ ಎಂದು ಹೇಳುವಾಗ ನಮ್ಮ ಉತ್ಸಾಹ ಸ್ವಲ್ಪ ಕುಂದಿದ್ದೂ ಹೌದು! ಜೀಪ್ ಹರೀಶ್ ಎರಡು ಸಲ ಜನರನ್ನು ಬಸ್ಸಿಗೆ ತಲಪಿಸಿದರು. ಇನ್ನೇನೂ ಮುಖ್ಯರಸ್ತೆಗೆ ಕೇವಲ ಒಂದೆರಡು ಕಿಮೀ ಅಷ್ಟೆ ಎನ್ನುವಾಗ ಮೂರನೇ ಟ್ರಿಪ್‌ನಲ್ಲಿ ಜೀಪ್ ಬರುತ್ತಿದ್ದಾಗ ನನ್ನ ಬಳಿ ನಿಂತಿತು. ಮುಂದಿನ ಸೀಟಲ್ಲಿದ್ದ ಅಜಯ್ ಇಳಿದು ನನ್ನನ್ನು ಜೀಪಿಗೆ ಹತ್ತಲು ಹೇಳಿದರು. ಅರೆಮನಸ್ಸಾದರೂ, ಆಗಲೇ ಕತ್ತಲಾವರಿಸುತ್ತಿದ್ದುದರಿಂದ ಹೆಚ್ಚು ಹೇಳಿಸಿಕೊಳ್ಳದೆ ಜೀಪ್ ಏರಿದೆ.
ಆಗ ಜೀಪ್ ಚಾಲಕ ಹರೀಶರ ಪೂರ್ಣ ಪರಿಚಯವಾಯಿತು. ಹರೀಶ್ ಅವರು ಜೀಪ್ ಹರೀಶ್ ಎಂದೇ ಪ್ರಸಿದ್ಧರು. ಮಡಿಕೇರಿ ಆಕಾಶವಾಣಿಯಲ್ಲಿ ವರದಿಗಾರರು, ಸಮಾಜಸೇವಕರು, ಜೀಪ್ ಸರ್ವಿಸ್ ಇವಿಷ್ಟು ಅವರ ವೃತ್ತಿ ಬದುಕು. ಅವರ ಜೀಪ್ ದೃಶ್ಯ ಸಿನೆಮದಾಲ್ಲಿ ಪೊಲೀಸ್ ಜೀಪಾಗಿ ನಟಿಸಿದೆಯಂತೆ! ಹಿಂದಿ ತೆಲುಗು ಸಿನೆಮಾಗಳಲ್ಲೂ ಅವರ ಜೀಪಿನ ಬಳಕೆಯಾಗಿದೆಯಂತೆ. ಇನ್ನೊಮ್ಮೆ ದೃಶ್ಯ ಸಿನೆಮಾ ನೋಡುವಾಗ ಜೀಪ್ ನೋಡಲು ಮರೆಯದಿರಿ!
ಅದಾಗಲೇ ನಮ್ಮ ಬಸ್ ಮಡಿಕೇರಿ ಕಡೆಯಿಂದ ಭಾಗಮಂಡಲಕ್ಕೆ ಹೋಗುವ ತಿರುವಿನಿಂದ ಸ್ವಲ್ಪ ಮುಂದೆ ಗ್ರೀನ್ ಹೋಮ್ ಸ್ಟೇ ಬಳಿ ನಿಂತಿತ್ತು. ಸುಮಾರು ಹದಿನೈದು ಮಂದಿ ಪೂರ್ತಿ ನಡೆದೇ ತಲಪಿದ್ದರು. ಎಲ್ಲರೂ ತಲಪಿ ಬಸ್ ಹೊರಡುವಾಗ ಗಂಟೆ ರಾತ್ರಿ ೭.೩೦. ಬಸ್ಸಲ್ಲಿ ರವೆ‌ಉಂಡೆ, ನಿಪ್ಪಟ್ಟು ಸರಬರಾಜಾಯಿತು. ನಾನು ಯಾವುದನ್ನೂ ಮುಟ್ಟಲಿಲ್ಲ. ನನಗೆ ತಲೆ ಇರುವುದು ಖಾತ್ರಿ ಎಂದು ಸೂಚಿಸಲು ತಲೆ ಸಣ್ಣಗೆ ನೋಯುತ್ತಿತ್ತು. ಸುಮ್ಮನೆ ಕಣ್ಣುಮುಚ್ಚಿ ಮಲಗಿದೆ. ಕುಶಾಲನಗರದಲ್ಲಿ ಊಟಕ್ಕೆ ನಿಲ್ಲಿಸಿದರು. ಊಟವನ್ನೂ ಮಾಡಲಿಲ್ಲ. ಒಂದು ಘಂಟೆ ನಿದ್ರೆ ಮಾಡಿದಾಗ ತಲೆ ನೋವು ಮಾಯವಾಗಿತ್ತು. ಬೆಳಗ್ಗೆಯಿಂದ ಸುಮಾರು ಹದಿನಾಲ್ಕು ಮೈಲಿ ನಡೆದು ಬಂದು ರಾತ್ರಿ ಬಸ್ ಹತ್ತಿದ್ದು. ಎಲ್ಲ ಸುಸ್ತಾಗಿ ನಿದ್ರೆ ಮಾಡಿರಬಹುದು ಎಂದು ನೀವಂದುಕೊಂಡರೆ ಅದು ನಿಮ್ಮ ತಪ್ಪು ಕಲ್ಪನೆ! ಉದ್ದಕ್ಕೂ ಹಾಡು, ಅಂತ್ಯಾಕ್ಷರೀ, ಗಲಾಟೆ ಬೊಬ್ಬೆ ಕೇಳುತ್ತಲೇ ಇತ್ತು! ನಿಜಕ್ಕೂ ಅವರ ಈ ಉತ್ಸಾಹಕ್ಕೆ ಹ್ಯಾಟ್ಸಪ್. ಮೈಸೂರು ಮನೆ ತಲಪುವಾಗ ರಾತ್ರಿ ಹನ್ನೊಂದು ಘಂಟೆ.
ಮೈಸೂರಿನ ಪೀಪಲ್ ಟ್ರೀ ಸಂಸ್ಥೆಯ ಶಿವಶಂಕರ್ ಈ ಚಾರಣ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಯಾರೊಬ್ಬರಿಗೂ ಯಾವುದೇ ಅವಘಡವಾಗದೆ ಚಾರಣ ಯಶಸ್ವಿಯಾಗಿತ್ತು. ಅವರಿಗೆ ಧನ್ಯವಾದಗಳು.
ಹೊಸದಿಗಂತ ೨೦-೧-೨೦೧೬ರಲ್ಲಿ ಪ್ರಕಟಿತ (ಇಲ್ಲಿಯದು ವಿಸ್ತಾರ ರೂಪ)

Read Full Post »

ಕೋಣನೂರು ಬೆಟ್ಟ

ತಾರೀಕು ೨೫.೧೦.೨೦೧೫ರಂದು ಮೈಸೂರಿನಿಂದ ೨೯ ಮಂದಿ ಬೆಳಗ್ಗೆ ಘಂಟೆ ೭.೨೦ರ ರೈಲಿನಲ್ಲಿ ನಂಜನಗೂಡು ತಾಲೂಕಿನ ಕೋಣನೂರಿಗೆ ಪ್ರಯಾಣಿಸಿದೆವು. (ವ್ಯವಸ್ಥಾಪಕರು ರೈಲಲ್ಲಿ ನಮಗೆ ಬೆಳಗಿನ ತಿಂಡಿ ಇಡ್ಲಿ ವಡೆ ಪೊಟ್ಟಣ ಕೊಟ್ಟಿದ್ದರು. ಮತ್ತು ಬೆಟ್ಟದಮೇಲೆ ತಿನ್ನಲು ಸೌತೆಕಾಯಿ, ಚಕ್ಕುಲಿ, ಸಿಹಿ ತುಂಬಿದ ಪೊಟ್ಟಣವನ್ನು ಕೊಟ್ಟಿದ್ದರು.) ೯ ಗಂಟೆಗೆ ನಾವು ಕೋಣನೂರು ರೈಲುನಿಲ್ದಾಣದಲ್ಲಿ ಇಳಿದು ನಮ್ಮೊಡನೆ ಬಂದಿದ್ದ ನಾಗಣ್ಣನವರ ಮನೆ ತಲಪಿದೆವು. ಅಲ್ಲಿ ನಮಗೆ ಬಾಳೆಹಣ್ಣು, ಬೆಲ್ಲ ಹಾಕಿ ಮಾಡಿದ ಚಹಾ ವಿತರಣೆಯಾಯಿತು. ಬೆಲ್ಲದ ಚಹಾ ಬಹಳ ಚೆನ್ನಾಗಿದೆಯೆಂದು ಕೆಲವರು ಎರೆಡೆರಡು ಲೋಟ ಚಹಾ ಕುಡಿದರು. ವೃತ್ತಾಕಾರದಲ್ಲಿ ನಿಂತು ನಮ್ಮ ನಮ್ಮ ಪರಿಚಯ ಹೇಳಿಕೊಂಡೆವು.
ತದನಂತರ ನಾವು ಕೋಣನೂರು ಬೆಟ್ಟದತ್ತ ಸಾಗಿದೆವು. ನಮ್ಮ ಮಾರ್ಗದರ್ಶಿಯಾಗಿ ಮುಂದೆ ನಾಗಣ್ಣನವರು ಇದ್ದರು. ಸುಮಾರು ನಾಲ್ಕು ಕಿಮೀ ದೂರ ರಸ್ತೆ, ಹೊಲದ ಮೂಲಕ ಸಾಗಬೇಕು. ರಸ್ತೆಬದಿ ಕಾಲಿಡುವಂತಿಲ್ಲ. ಕೈ ಮೂಗಿನ ಬಳಿ ಹೋಯಿತು. ಅದಕ್ಕೆ ಸಾಕ್ಷಿಯಾಗಿ ಬಯಲುಶೌಚ ಧಾರಾಳವಾಗಿ ನಡೆದ ಕುರುಹಿತ್ತು. ಅಲ್ಲಿ ಇನ್ನೂ ಬಯಲುಮುಕ್ತ ಶೌಚಾಲಯ ಜಾರಿಗೆ ಬಂದಂತೆ ಕಾಣಲಿಲ್ಲ.

DSCN6189

ಬಕಧ್ಯಾನ

DSCN6196

ಕೋಣನೂರಿನ ಮಹದೇಶ್ವರ ಬೆಟ್ಟ ಏರಲು ತೊಡಗಿದೆವು. ತುಂಬ ದೊಡ್ಡ ಬೆಟ್ಟವಲ್ಲ. ಏರಲು ಮೆಟ್ಟಲುಗಳಿಲ್ಲ. ನಾವು ನಡೆದದ್ದೇ ಹಾದಿ. ಬೆಟ್ಟ ಹತ್ತುವುದೇ ಸುಖ ಎಂದುಕೊಂಡವರಿಗೆಲ್ಲ ಈ ಬೆಟ್ಟ ಹತ್ತುವುದು ಕಷ್ಟವೇ ಅಲ್ಲ. ಹೊಸಬರಿಗೆ ಸ್ವಲ್ಪ ಕಷ್ಟವೆನಿಸಿತು. ನಮ್ಮೊಡನೆ ಏಳೆಂಟು ಮಂದಿ ಇದೇ ಪ್ರಥಮಬಾರಿಗೆ ಚಾರಣ ಕೈಗೊಂಡವರಿದ್ದರು. ಅವರು ತುಂಬ ಸಂತಸಪಟ್ಟರು. ಇನ್ನುಮುಂದೆಯೂ ಇಂಥ ಚಾರಣಕ್ಕೆ ಬರಬೇಕೆಂಬ ಮನಸ್ಸಾಗಿದೆಯೆಂದು ಹೇಳಿದರು. ಸುಮಾರು ಹತ್ತೂವರೆ ಗಂಟೆಯೊಳಗೆ ನಾವು ಬೆಟ್ಟ ತಲಪಿದೆವು. ಅಲ್ಲಿ ಮಹದೇಶ್ವರನ ಪುಟ್ಟದಾದ ಎರಡು ಗುಡಿಗಳಿವೆ. ಗುಡಿಯ ಬಾಗಿಲುಗಳಿಗೆ (ಬಾಗಿಲು ಅಂದರೆ ಮರದ ಹಲಗೆಯನ್ನು ಒರಗಿಸಿದ್ದರು) ಗೆದ್ದಲು ಹತ್ತಿತ್ತು. ಹಳ್ಳಿಯ ಜನ ಹಿಂದೆಲ್ಲ ಬೆಟ್ಟಕ್ಕೆ ಆಗಾಗ ಹೋಗುತ್ತಿದ್ದರಂತೆ. ಈಗ ಬಲು ಅಪರೂಪವಾಗಿ ಬರುತ್ತಾರಂತೆ. ಎಂದು ನಾಗಣ್ಣನವರು ಅವರ ಹಳೆಯ ನೆನಪನ್ನು ಬಿಚ್ಚಿಟ್ಟರು. ನಮ್ಮೊಡನೆ ಸ್ಥಳೀಯ ಹಳ್ಳಿಯ ಯುವಕರೂ ಉಮೇದುಗೊಂಡು ಬಂದಿದ್ದರು. ಅವರು ದೇವಾಲಯದೊಳಗೆ ಊದುಕಡ್ಡಿ ಹಚ್ಚಿ ಹಣ್ಣುಕಾಯಿ ಇಟ್ಟು ಪೂಜೆ ಮಾಡಿದರು.

DSCN6227 DSCN6220
ಈ ಬೆಟ್ಟದ ಎದುರು ಮತ್ತೊಂದು ಸ್ವಲ್ಪ ಎತ್ತರದ ಬೆಟ್ಟ ಇದೆ. ಅದನ್ನೂ ನಾವೆಲ್ಲ ಏರಿದೆವು. ಅಲ್ಲಿಂದ ಕೋಣನೂರು ಕೆರೆ, ಬೆಂಡರವಾಡಿ ಕೆರೆ ಬಹಳ ಚೆನ್ನಾಗಿ ಕಾಣುತ್ತದೆ. ರೈಲ್ವೇ ಹಳಿಮೇಲೆ ರೈಲು ಬರುವುದನ್ನು ಬೆಟ್ಟದಮೇಲಿಂದ ನೋಡುವುದೇ ಚಂದ. ಹಾವಿನಂತೆ ಸರಸರ ಬರುತ್ತ, ತಿರುವಿನಲ್ಲಿ ಬಳುಕುತ್ತ ಬರುವ ರೈಲನ್ನು ನೋಡುತ್ತ ಮೈಮರೆತೆವು. ಅಲ್ಲಿ ಸ್ವಲ್ಪ ಹೊತ್ತು ಕೂತು ಬೆಟ್ಟದ ಕೆಳಗಿನ ದೃಶ್ಯ ನೋಡಿದೆವು. ಅಲ್ಲಿಂದ ಇಳಿದು ಕೆಳಗಿನ ಪುಟ್ಟಬೆಟ್ಟದಲ್ಲಿ ಕೂತು ವಿರಮಿಸಿದೆವು. ತಂಡದ ಚಿತ್ರ ತೆಗೆಸಿಕೊಂಡೆವು. ಬಳಿಕ ಬೆಟ್ಟ ಇಳಿಯಲು ತೊಡಗಿದೆವು. ಹೆಚ್ಚಿನವರಿಗೆ ಬೆಟ್ಟ ಇಳಿಯುವುದು ಕಷ್ಟವಾಗುತ್ತದೆ. ನಾವೊಂದಷ್ಟು ಮಂದಿ ೧೨ ಗಂಟೆಗೆ ಬೆಟ್ಟ ಇಳಿದು ಎಲ್ಲರೂ ಬರುವಲ್ಲಿವರೆಗೆ ಅಲ್ಲೇ ಕೂತೆವು. ಎಲ್ಲರೂ ಬಂದಬಳಿಕ ಕೋಣನೂರು ಕೆರೆಯತ್ತ ಸಾಗಿದೆವು.

DSCN6239

DSCN6245

mala2

DSCN6258
ಕೋಣನೂರು ಕೆರೆ
ಆಲಂಬೂರು ಬಳಿಯ ಕಬಿನಿ ನದಿಯಿಂದ ದೊಡ್ದದಾದ ೩ ವಿದ್ಯುತ್ ಪಂಪುಗಳಿಂದ ಕೊಳವೆಮೂಲಕ ಸುಮಾರು ೧೪ಕಿಮೀ ದೂರವಿರುವ ಕೋಣನೂರು ಕೆರೆಗೆ ನೀರನ್ನು ಹರಿಸಲಾಗುತ್ತದೆ. ಈ ಕೆರೆ ತುಂಬಿದ ನೀರು ಕೋಡಿ ಹರಿದು ಇಳಿಜಾರಿನಲ್ಲಿ ಸಾಗಿ ಹಳೇಪುರಕೆರೆ ತುಂಬುತ್ತದೆ. ಅಲ್ಲಿಂದ ಬೆಂಡರವಾಡಿಕೆರೆಗೆ ಸಾಗಿ ಅಲ್ಲಿ ಕೋಡಿ ಹರಿದು ಮುಂದೆ ಕೆರೆಹಳ್ಳಿ ಕೆರೆಗೆ ಹರಿಯುತ್ತದೆ. ಈ ಹಂತದಲ್ಲಿ ಒಟ್ಟು ನಾಲ್ಕು ಕೆರೆಗಳು ತುಂಬಿ ಹರಿಯುತ್ತಿವೆ. ಈ ನಾಲ್ಕೂಕೆರೆಗಳು ತುಂಬಿರುವುದರಿಂದ ಆ ಪ್ರದೇಶಗಳಲ್ಲಿ ಅಂತರ್ಜಲದ ಮಟ್ಟ ಹೆಚ್ಚಿ ಬತ್ತಿದ ಕೊಳವೆಬಾವಿಗಳಲ್ಲಿ ನೀರು ಉಕ್ಕಿ ಹರಿಯುತ್ತಿವೆ. ಪ್ರಾಣಿಪಕ್ಷಿಗಳಿಗೆ ಕುಡಿಯಲು ನೀರು ಸಿಕ್ಕಿ ಅವುಗಳ ಜೀವಸಂಕುಲ ವರ್ಧಿಸುತ್ತಿವೆ. ರೈತಾಪಿಜನರ ಜೀವನ ಕೃಷಿ ಚಟುವಟಿಕೆಯಿಂದ ಸುಖ ಸಮೃದ್ಧಿ ಕಂಡಿವೆ. ಊರಮಂದಿ ಕಬ್ಬು, ಭತ್ತ ತೆಂಗು ಬಾಳೆ ಬೆಳೆಯುತ್ತ ಕೃಷಿ ಚಟುವಟಿಕೆಯಲ್ಲಿ ಮಗ್ನರಾಗಿದ್ದಾರೆ. ಊರಿನ ಹೆಚ್ಚಿನಮಂದಿ ಒಂದುಹಂತದಲ್ಲಿ ನೀರಿಲ್ಲದೆ ಗುಳೆಹೋಗಲು ಹೊರಟಿದ್ದರಂತೆ.

DSCN6267

DSCN6318

DSCN6298

ಸುತ್ತೂರುಮಠದ ಶ್ರೀ ದೇಶಿಕೇಂದ್ರ ಸ್ವಾಮೀಜಿ, ಹಾಗೂ ದೇವನೂರು ದಾಸೋಹಮಠದ ಶ್ರೀ ಮಹಾಂತ ಸ್ವಾಮೀಜಿ ಆಗ ಮುಖ್ಯಮಂತ್ರಿಗಳಾಗಿದ್ದ ಬಿ.ಎಸ್. ಯಡಿಯೂರಪ್ಪನವರಿಗೆ ಬತ್ತಿದ ಕೆರೆಗಳಿಗೆ ನೀರು ಹರಿಸಲು ಮನವಿ ಮಾಡಿದ್ದರು. ಅದಕ್ಕೆ ಅಸ್ತು ಎಂದು ಶ್ರೀಕಾರ ಹಾಕಿದವರು ಮಾನ್ಯ ಯಡಿಯೂರಪ್ಪನವರು. ಅಂದಾಜು ರೂ. ೨೧೨ ಕೋಟಿ ವೆಚ್ಚದಲ್ಲಿ ಯೋಜನೆ ಕೈಗೆತ್ತಿಕೊಳ್ಳಲಾಗಿತ್ತು. ೨೦೧೪ನೇ ಇಸವಿಯಲ್ಲಿ ಕೆಲಸ ಪೂರ್ಣಗೊಂಡು ಆಗಸ್ಟ್ ತಿಂಗಳಲ್ಲಿ ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಉಸ್ತುವಾರಿಯಲ್ಲಿ ಕೆರೆಗೆ ನೀರು ಹರಿಯಿತು. ಈಗ್ಗೆ ಒಂದು ವರ್ಷದಿಂದಲೂ ಸತತವಾಗಿ ಕೆರೆಗೆ ನೀರು ಹರಿಯುತ್ತಲೇ ಇದೆ.
ಕೆರೆ ಭರ್ತಿಯಾಗಿ ಕೋಡಿ ಹರಿಯುವುದು ಕಾಣುವಾಗ ಮನ ಉಲ್ಲಸಿತವಾಗುತ್ತದೆ. ಅಲ್ಲಿಯ ಯುವಕರು ಮಕ್ಕಳು ಕೆರೆಯಲ್ಲಿ ಮನದಣಿಯೆ ಈಜು ಹೊಡೆದು ಖುಷಿ ಅನುಭವಿಸುತ್ತಿದ್ದಾರೆ. ಅಲ್ಲಿ ನೀರಲ್ಲಿ ಆಟವಾಡುವುದು ಕಾಣುವಾಗ ದುಬಾರಿಯಾದ ಯಾವ ಫಾಂಟೆಸಿ ಪಾರ್ಕ್ ಇದರ ಮುಂದೆ ಪೇಲವ ಎನಿಸಿತು. ಆದರೆ ಕೆರೆಯಲ್ಲಿ ಬಟ್ಟೆ ಒಗೆಯುವುದು ಕಂಡು ವಿಷಾದವೆನಿಸಿತು. ರಾಸಾಯನಿಯುಕ್ತ ಸಾಬೂನು ಹಾಕಿ ಬಟ್ಟೆ ಒಗೆದರೆ ನೀರು ಮಲೀನಗೊಳ್ಳುತ್ತದೆ. ಕೆರೆಯಲ್ಲಿ ಬಟ್ಟೆ ಒಗೆಯಲು ಅನುಮತಿ ನೀಡಬಾರದು. ೨ ಕೊಡ ನೀರು ತೆಗೆದು ಹೊರಗೆ ಬಟ್ಟೆ ಒಗೆಯಲಿ. ಆಗ ಜನ ಜಾನುವಾರು ಕುಡಿಯುವ ಈ ಕೆರೆನೀರು ಮಲಿನವಾಗುವುದು ತಪ್ಪುತ್ತದೆ.

DSCN6288
ಊರಿನವರು ಯಡಿಯೂರಪ್ಪನವರ ಈ ಕೆಲಸವನ್ನು ಮುಕ್ತಕಂಠದಿಂದ ಶ್ಲಾಘಿಸುತ್ತಿದ್ದಾರೆ. ಅವರ ಕಾಲದಲ್ಲಿ ನಮ್ಮ ಹಳ್ಳಿ ಅಭಿವೃದ್ಧಿ ಹೊಂದಿದೆ. ರಸ್ತೆಗಳೆಲ್ಲ ಚೆನ್ನಾಗಾಗಿವೆ ಎಂದು ಹೇಳಿಕೊಂಡರು.
ಹಳ್ಳಿಯ ಯುವಕರು ಮಕ್ಕಳು ಈಜು ಹೊಡೆಯುವುದನ್ನು, ಕೆರೆಯ ವೈಭವವನ್ನು ನಾವು ಸ್ವಲ್ಪ ಹೊತ್ತು ನೋಡುತ್ತ ನಿಂತೆವು. ಕೆರೆಯ ಪಕ್ಕದ ರಸ್ತೆಯಲ್ಲೆ ಮುಂದೆ ಸಾಗಿದೆವು. ರೈಲು ನಿಲ್ದಾಣಕ್ಕೆ ಬರುವ ದಾರಿಯಲ್ಲಿ ಸಾಲಾಗಿ ಒಂದತ್ತು ಮನೆಗಳು ಇದ್ದುವು. ಅವರೆಲ್ಲ ಕುತೂಹಲದಿಂದ ‘ಎಲ್ಲಿಗೆ ಬಂದಿದ್ದೀರಿ? ಯಾವೂರವರು?’ ಎಂದು ವಿಚಾರಿಸುತ್ತಿದ್ದರು. ನಾನೂ ಸಮಾಧಾನದಿಂದ ನಿಂತು ನಮ್ಮ ಪ್ರವರ ಒಪ್ಪಿಸಿ ಮುಂದೆ ಅಡಿ ಇಡುತ್ತಿದ್ದೆ.

DSCN6341ನಾವು ನಾಗಣ್ಣನವರ ಮನೆಗೆ ಬಂದೆವು. ಅಲ್ಲಿ ನಿಂಬೆ ಶರಬತ್ತು ತಯಾರಿಸಿಟ್ಟಿದ್ದರು. ಬಿಸಿಲಲ್ಲಿ ಬೆಟ್ಟಹತ್ತಿ ಬರುತ್ತಾರೆ. ತಂಪಾಗಿ ಕುಡಿಯಲಿ ಎಂದು ನಮಗೆಲ್ಲ ಬಲು ಪ್ರೀತಿಯಿಂದ (ನಾಗಣ್ಣನವರ ಅಕ್ಕನ ಮಗ ಸೊಸೆ) ಎರೆಡೆರಡು ಲೋಟ ಶರಬತ್ತು ಕೊಟ್ಟರು. ಅವರ ಈ ಕಾಳಜಿ ಪ್ರೀತಿಗೆ ಏನನ್ನೋಣ? ಅಲ್ಲಿಂದ ರೈಲು ನಿಲ್ದಾಣಕ್ಕೆ ಬಂದೆವು. ಎರಡು ಗಂಟೆಗೆ ರೈಲು ಬಂದಿತು. ರೈಲು ಹತ್ತಿ ಚಾಮರಾಜನಗರಕ್ಕೆ ಬಂದೆವು.

ಮುಗ್ಧತೆ
ಬೆಟ್ಟ ಹತ್ತಿ ಇಳಿದು ಬರುವಾಗ ಹಳ್ಳಿಯ ಮನೆಗಳ ಎದುರು ಬರುತ್ತಿದ್ದೆವು. ನನ್ನ ಕೊರಳಲ್ಲಿ ಕ್ಯಾಮಾರಾ ಇತ್ತು. ರೈಲು ನಿಲ್ದಾಣದಲ್ಲಿ ರೈಲಿಗೆ ಕಾಯುತ್ತಿದ್ದೆವು. ಆಗ ಒಂದು ಹೆಂಗಸು ನನ್ನ ಬಳಿ ಬಂದು, ಹತ್ತಿರ ಕುಳಿತು ನೀವು ಯಾರು? ಇಲ್ಲಿಗೇಕೆ ಬಂದಿರಿ ಎಂದು ಕೇಳಿದಳು. ನಾನು ಹೇಳಿದ್ದು ಅವಳಿಗೆ ಕೇಳಿಸುವುದಿಲ್ಲ. ಅವಳಿಗೆ ಕಿವಿ ಮಂದವಂತೆ. ನಾನು ಮೂರು ಸಲ ಹೇಳಿದ್ದೇ ಹೇಳಿದಮೇಲೆ ಕಿವಿ ಕೇಳಿಸಲ್ಲ ಎಂದಳು! ಆದರೂ ಏನೂ ಬೇಸರವಿಲ್ಲದೆ ಅವಳಿಗೆ ನಾವೇಕೆ ಬಂದದ್ದು ಎಂದು ಹೇಳಿದೆ. ಅವಳಿಗೆ ಅರ್ಥವಾಯಿತೊ ಇಲ್ಲವೋ ಗೊತ್ತಿಲ್ಲ. ನನ್ನ ಬಳಿ ಕುಳಿತು ‘ನನಗೆ ಒಬ್ಬ ಮಗ. ಅವನಿಗೆ ತಲೆ ಸರಿ ಇಲ್ಲ. ಎರಡು ಹೆಣ್ಣುಮಕ್ಕಳು. ಅವರಿಗೆ ಮದುವೆ ಮಾಡಿದ್ದೇನೆ. ನನ್ನ ಹೊಲ ಮಾರಬೇಕಾಗಿದೆ. ಮಗನನ್ನು ನೋಡಿಕೊಳ್ಳಲು, ಹಾಗೂ ಹೆಣ್ಣುಮಕ್ಕಳಿಗೆ ಒಂದಷ್ಟು ದುಡ್ಡು ಕೊದಬೇಕು. ಜಮೀನು ನೀವು ತಗೊಳ್ಳಿ. ನಿಮಗಾದರೆ ಎಕರೆಗೆ ೨೪ ಲಕ್ಷ ಎಂದಳು. ಮತ್ತೆ ಮುಂದುವರಿಸಿ, ನೀವೂ ಹೇಗೂ ಬಂದಿದ್ದೀರಿ. ನನ್ನ ಜಮೀನಿನ ಫೋಟೋ ಹೊಡೆಯಿರಿ. ಅದನ್ನು ಎಲ್ಲರಿಗೂ ತೋರಿಸಿ ಜಮೀನು ಮಾರಾಟ ಮಾಡಿಸಿಕೊಡಿ. ಎಂದಳು. ಆಗ ನನಗೆ ನನ್ನ ಕೊರಳಲ್ಲಿ ಕ್ಯಾಮರಾ ಇರುವುದರಿಂದ ಅವಳಿಗೆ ನಾನು ಜಮೀನು ನೋಡಲು ಕೊಳ್ಳಲು ಬಂದಿದ್ದೇನೆ. ಜಮೀನಿನ ಫೋಟೊ ಹೊಡೆಯುತ್ತೇನೆ. ನಾವು ಸರ್ಕಾರೀ ಕೆಲಸದಲ್ಲಿರುವುದು ಎಂದು ಅವಳು ತಿಳಿದಿದ್ದಾಳೆಂದು ನನಗೆ ಜ್ಞಾನೋದಯವಾಯಿತು.
ಅವಳ ಸಮಾಧಾನಸ್ಕೋಸ್ಕರ ಆಯಿತು ಫೋಟೋ ತೆಗೆಯುತ್ತೇನೆ ಎಂದು ಸನ್ನೆ ಮೂಲಕ ತಿಳಿಸಿದೆ. ಮೊದಲೇ ಮೆತ್ತಗೆ ಮಾತು ನನ್ನದು. ನಾನು ಹೇಳಿದ್ದು ಅವಳಿಗೆ ಕೇಳಿಸುವುದೇ ಇಲ್ಲ. ಅವಳಿಗೆ ಸಮಾಧಾನವಾಯಿತೆಂದು ಕಾಣುತ್ತದೆ. ಮರೀಬೇಡಿ ಪೋಟೋ ತೆಗೆಯಲು ಎಂದು ಎರೆಡೆರಡು ಬಾರಿ ಹೇಳಿ ನನ್ನ ಪಕ್ಕದಿಂದ ಎದ್ದು ಹೋದಳು. ಆ ಹೆಂಗಸಿನ ಮುಗ್ಧ ಮುಖ, ನನ್ನ ಮೇಲೆ ಭರವಸೆ ಇಟ್ಟ ಆ ಭಾವ ಇನ್ನೂ ನನ್ನ ಕಣ್ಣಮುಂದಿದೆ. ನನ್ನಿಂದ ಅವಳಿಗೆ ಏನೂ ಸಹಾಯವಾಗಲಿಲ್ಲವಲ್ಲ ಎಂಬ ಭಾವನೆ ನನ್ನ ಕಾಡುತ್ತಿದೆ.

ಕರಿವರದರಾಜ ಬೆಟ್ಟ
ರೈಲಿಳಿದು ಎರಡು ಟೆಂಪೋದಲ್ಲಿ ಭಾಗ್ಯ ಹೋಟೇಲಿಗೆ ಬಂದೆವು. ಇದು ಭಾಗ್ಯ ಇದು ಭಾಗ್ಯವಯ್ಯ ಎನ್ನುತ್ತ ಕುಳಿತಿರಬೇಕಾದರೆ ಊಟ ಬಂತು. ಊಟವಾಗಿ ಅದೇ ಟೆಂಪೋದಲ್ಲೇ ಕರಿವರದರಾಜ ಬೆಟ್ಟದ ಬುಡ ತಲಪಿದೆವು. ಬೆಟ್ಟದ ಬುಡಕ್ಕೆ ಬರುವ ರಸ್ತೆ ಎಷ್ಟು ಹಾಳಾಗಿದೆಯೆಂದರೆ ಅದು ರಸ್ತೆ ಎಂದೇ ಗೊತ್ತಾಗದಷ್ಟು. ಹಳ್ಳಕೊಳ್ಳಗಳಲ್ಲಿ ರಸ್ತೆಯನ್ನು ಹುಡುಕಬೇಕು.
ಬೆಟ್ಟದಮೇಲಕ್ಕೆ ಹೋಗುವ ಪ್ರವೇಶದಲ್ಲಿ ಅರಣ್ಯ ಇಲಾಖೆ ಬಲವಾದ ಬೇಲಿ, ಗೇಟು ಹಾಕಿದೆ. ಅಲ್ಲಿ ಕಾವಲಿನವರು ಇರುತ್ತಾರೆ. ಸುಮಾರು ೫೦೦ ಮೆಟ್ಟಲು ಹತ್ತಬೇಕು. ರಸ್ತೆಯೂ ಇದೆ. ಮೆಟ್ಟಲು ಹತ್ತಿ ಬೆಟ್ಟದ ಮೇಲಿನ ಕರಿವರದರಾಜ ದೇವಾಲಯ ತಲಪಿದೆವು. ಊಟವಾಗಿ ಬೆಟ್ಟ ಹತ್ತುವುದು ಕೆಲವರಿಗೆ ತುಸು ಕಷ್ಟವಾಯಿತು.

DSCN6349DSCN6353DSCN6373
ಬೆಟ್ಟದಮೇಲೆ ಎರಡು ಕಡೆ ವೀಕ್ಷಣಾಮಂದಿರ ಕಟ್ಟಿದ್ದಾರೆ. ಕೈತುರಿಕೆ ಮಂದಿ ಮಂಟಪದ ಗೋಡೆಮೇಲೆ, ಚಾವಣಿಮೇಲೆ ತಮ್ಮ ಕೈತುರಿಕೆಯನ್ನು ಜಾಹೀರುಗೊಳಿಸಿದ್ದು ಕಾಣುವಾಗ ಅಂಥ ಕೈಗಳಿಗೆ ಕಠಿಣ ಶಿಕ್ಷೆ ಕೊಡಬೇಕು ಎನಿಸಿತು. ಕೂರಲು ಅಲ್ಲಲ್ಲಿ ಸಿಮೆಂಟು ಬೆಂಚುಗಳನ್ನು ಹಾಕಿದ್ದಾರೆ. ದೇವಾಲಯ ಸುಣ್ಣಬಣ್ಣವಾಗಿ ಚೊಕ್ಕವಾಗಿದೆ. ದೇವಾಲಯದ ಅರ್ಚಕರು ಬೆಳಗ್ಗೆ ಬೇಗ ಪೂಜೆ ಮಾಡಿ ತಮ್ಮ ನೌಕರಿಗೆ ತೆರಳುತ್ತಾರಂತೆ. ಅವರ ವೃತ್ತಿ ಅಂಚೆಪೇದೆ. ರಜಾದಿನಗಳಲ್ಲಿ ದೇವಾಲಯದಲ್ಲಿರುತ್ತಾರೆ. ಅಲ್ಲಿ ಸ್ವಲ್ಪ ಹೊತ್ತು ವಿರಮಿಸಿ, ರಸ್ತೆ ಮೂಲಕ ಕೆಳಗೆ ಅಬ್ಂದೆವು. ರಸ್ತೆಯಲ್ಲಿ ಬರುವಾಗ ಒಂದೆಡೆ ಯೋಗಮಂಟಪ ಕಟ್ಟಿರುವುದು ಕಂಡಿತು. ಅಲ್ಲಿ ಬಂದು ಯಾರು ಯೋಗ ಮಾಡುತ್ತಾರೆ ಎಂದೆನಿಸಿತು. ಮೈಸೂರಿನಲ್ಲಿ ನಿತ್ಯ ಚಾಮುಂಡಿಬೆಟ್ಟಕ್ಕೆ ಮೆಟ್ಟಲು ಹತ್ತಿ ತೆರಳುವಂತೆ ಅಲ್ಲಿಯೂ ಬೆಳಗ್ಗೆ ಕೆಲವರು ಮೆಟ್ಟಲು ಹತ್ತಿ ಬರುತ್ತಾರಂತೆ. ಹಾಗೆಯೇ ಯೋಗಾಭ್ಯಾಸವನ್ನೂ ಮಾಡುತ್ತಾರಿರಬಹುದು.
ಅಲ್ಲಿಂದ ಸಂಜೆ ೫.೩೦ಕ್ಕೆ ಟೆಂಪೋದಲ್ಲಿ ರೈಲು ನಿಲ್ದಾಣಕ್ಕೆ ಬಂದೆವು. ಅಲ್ಲಿ ಚಹಾ, ಕಾಫಿ ಕುಡಿದು ರೈಲೇರಿದೆವು. ರೈಲಲ್ಲಿ ಪ್ರಯಾಣ ನೀರಸವಾಗದಂತೆ ವೈದ್ಯನಾಥನ್ ನಗೆಹನಿ, ಅಣಕುಹಾಡು, ಭಾವಗೀತೆ ಹಾಡಿ ನಮ್ಮನ್ನೆಲ್ಲ ನಗೆಗಡಲಲ್ಲಿ ತೇಲಿಸಿದರು. ರಾತ್ರಿ ಎಂಟು ಗಂಟೆಗೆ ಮೈಸೂರು ತಲಪಿದೆವು. ಈ ಕಾರ್ಯಕರಮವನ್ನು ಅಚ್ಚು‌ಅಕಟ್ಟಾಗಿ ಆಯೋಜಿಸಿದವರು ಯೂಥ್ ಹಾಸ್ಟೆಲ್ ಗಂಗೋತ್ರಿ ಘಟಕ ಮೈಸೂರು ಇದರ ಸದಸ್ಯರೂ ಭಲೇ ಜೋಡಿ ಎಂದೇ ಪ್ರಸಿದ್ಧರಾದ ನಾಗೇಂದ್ರಪ್ರಸಾದ್ ಹಾಗೂ ವೈದ್ಯನಾಥನ್ ಅವರು. ಅವರಿಗೆ ಸ್ಥಳೀಯರಾದ ನಾಗಣ್ಣನವರು ಸಮಸ್ತ ನೆರವು ನೀಡಿದ್ದರು. ಅವರಿಗೆಲ್ಲ ಧನ್ಯವಾದಗಳು.

Read Full Post »

Older Posts »