Feeds:
ಲೇಖನಗಳು
ಟಿಪ್ಪಣಿಗಳು

Archive for the ‘ಗಾದೆಯ ಗದ್ದುಗೆ’ Category

೪) ಕಾದಿದ್ದವನ ಹೆಂಡತಿಯನ್ನು
ಕಳ್ಳ ಹೊತ್ತುಕೊಂಡೋದಂಗಾಯಿತು
ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕಾನಕಲ್ಲಟೆ ಎಂಬ ತರಕಾರಿ ಬಳ್ಳಿಯನ್ನು ಹಲಸಿನಮರಕ್ಕೆ ಅಥವಾ ಬೇರೆ ಯಾವುದೇ ಮರಕ್ಕೆ ಹಬ್ಬಿಸಿ ಬೆಳೆಸುವುದನ್ನು ಕಾಣಬಹುದು. ಅದರಿಂದ ನೆಲ್ಲಿಗಾತ್ರದ ಕಾಯಿ ಸಿಗುತ್ತದೆ. ಅದನ್ನು ಅರ್ಧ ಮಾಡಿ ಬೇಯಿಸಿ ಒಳಗಿನ ಬೀಜ ತೆಗೆದು ಅಡುಗೆಗೆ ಉಪಯೋಗಿಸುತ್ತಾರೆ. ಅಂಥ ತರಕಾರಿಯ ಗಿಡವನ್ನು ಮುಳಿಯ ವೆಂಕಟಶರ್ಮರು ನನಗೆ ಕೊಟ್ಟಿದ್ದರು. ಅದನ್ನು ನಾನು ಬೇವಿನ ಮರಕ್ಕೆ ಹಬ್ಬುವಂತೆ ಅದರ ಬುಡದಲ್ಲಿ ನೆಟ್ಟಿದ್ದೆ. ಹಾಗೂ ನಮ್ಮ ಬಲಗೈ ಬಂಟಿ ಸಿದ್ದಮ್ಮಳಿಗೆ ಅದರ ಬಗ್ಗೆ ಹೇಳಿದ್ದೆ. ಬಲು ಅಪರೂಪದ ಗಿಡ ಇದು. ರುಚಿಯಾದ ತರಕಾರಿ ಸಿಗುತ್ತೆ ಇದರಿಂದ ಎಂದೆಲ್ಲ ವರ್ಣಿಸಿ, ದಿನಾ ಇದಕ್ಕೆ ನೀರು ಹಾಕಬೇಕು. ತರಕಾರಿ ಆದರೆ ನಿನಗೇ ಕೊಡುತ್ತೇನೆ ಎಂದಿದ್ದೆ.
ಹೀಗೊಂದು ತರಕಾರಿ ಇದೆಯೆಂದು ಕೇಳಿಯೇ ಗೊತ್ತಿಲ್ಲ. ನೋಡ್ಬೇಕು ಹೇಂಗಿರುತ್ತೆ ಎಂದು ಅವಳು ಕುತೂಹಲಿಯಾಗಿದ್ದಳು. ಹಾಗೂ ಜೋಪಾನವಾಗಿ ಅದರ ಆರೈಕೆ ಮಾಡುತ್ತಿದ್ದಳು. ಗಿಡ ಬಳ್ಳಿಯಾಗಿ ಬೆಳೆದು ಹೂಬಿಟ್ಟಿತು. ಅದನ್ನು ಕಂಡದ್ದೇ ಸಿದ್ದಮ್ಮಳಿಗೆ ಬಲು ಖುಷಿ. ಹೀಗಿರಲು ಒಂದು ಬೆಳಗ್ಗೆ ಗಿಡ ನೋಡುತ್ತಾಳೆ. ಬಳ್ಳಿ ಬಾಡಿದೆ. ಅದೇಕೆ ಹೀಗಾಯಿತು? ನೀವೇನಾದರೂ ಗಿಡಕ್ಕೆ ನೋವು ಮಾಡಿದ್ದೀರ? ಎಂದು ನನ್ನನ್ನೇ ಜೋರು ಮಾಡಿದಳು. ನಾನು ನಿನ್ನ ಗಿಡ ಮುಟ್ಟಿಲ್ಲ ಎಂದೆ. ಅದರ ಬುಡ ನೋಡಿದಳು. ನೋಡಿದರೆ ಗಿಡದ ಬಳಿ ಬೇರು ಸಮೇತ ಹೆಗ್ಗಣ ಕೊರೆದಿದೆ. ಅದಕ್ಕೆ ಬಳ್ಳಿ ತುಂಡಾಗಿ ಬಿದ್ದಿದೆ. ಆಗ ಸಿದ್ದಮ್ಮಳಿಗೆ ಬಂತು ಬಲು ಕೋಪ. ಇದರ ಬಾಯಿಗೆ ಮಣ್ಣು ಹಾಕ. ಹೂ ಬಿಟ್ಟಾಗಲೇ ಕೆರೆಯಬೇಕಿತ್ತ? ಜೋಪಾನವಾಗಿ ಕಷ್ಟಬಿದ್ದು ಗಿಡಬೆಳೆಸಿ ಕಾದುಗೊಂಡಿದ್ದದ್ದು ನಾವು. ಇದು ‘ಕಾದಿದ್ದವನ ಹೆಂಡತಿಯನ್ನು ಕಳ್ಳ ಹೊತ್ತುಕೊಂಡು ಹೋದಂಗಾಯಿತು’ ನಮ್ಮ ಕಥೆ ಎಂದು ಗಾದೆ ಹೇಳಿ ನಿಟ್ಟುಸಿರು ಬಿಟ್ಟಳು. ಕಡೆಗೂ ಆ ಕಾಯಿ ಹೆಂಗಿರುತ್ತೆ ಎಂದು ನೋಡಲೂ ಆಗಲಿಲ್ಲ ಎಂದು ಬೇಜಾರುಪಟ್ಟುಕೊಂಡಳು.

೫) ಇದ್ದುದನ್ನು ಕೆಡಿಸಿಕೊಂಡ ಈರಭದ್ರ
ಪತ್ರಿಕೆ ಓದುತ್ತಿರಬೇಕಾದರೆ ಅಲ್ಲಿ ಸಿದ್ದಮ್ಮ ಇದ್ದರೆ ಕೆಲವು ವಿಷಯಗಳನ್ನು ಅವಳಿಗೆ ಓದಿ ಹೇಳುವುದಿದೆ. ಹಾಗೆ ಆ ದಿನ ಪತ್ರಿಕೆಯಲ್ಲಿ ಬಂದ ಸುದ್ದಿಯನ್ನು ಅವಳಿಗೆ ಹೇಳಿದೆ. ಈಗ ಗ್ಯಾಸ್ ಸಿಲೆಂಡರನ್ನು ಬೇರೆ ಕಂಪೆನಿಗೆ ಬದಲಾಯಿಸಿಕೊಳ್ಳಬಹುದಂತೆ ಎಂದೆ.
ಅಂದರೆ ಹೇಗವ್ವ? ಎಂದಳು
ಗ್ಯಾಸ್ ಸರಬರಾಜು ಮಾಡುವ ಬೇರೆ ಬೇರೆ ಕಂಪೆನಿಗಳಿವೆ. ಉದಾಹರಣೆಗೆ ಈಗ ನಿನ್ನದು ಹಿಂದೂಸ್ಥಾನ್ ಕಂಪೆನಿಯದಾದರೆ ನನ್ನದು ಇಂಡೇನ್ ಕಂಪೆನಿಯದ್ದು ಎಂದಿಟ್ಟುಕೊಳ್ಳೋಣ. ನಿನಗೆ ಹಿಂದೂಸ್ಥಾನ್ ಕಂಪೆನಿಯವರ ಗ್ಯಾಸ್ ಸರಬರಾಜು ಸರಿಯಾಗಿ ಮಾಡುತ್ತಿಲ್ಲ ಎಂದೆನಿಸಿದರೆ ಬೇರೆ ಇಂಡೇನ್ ಕಂಪೆನಿಯದ್ದೋ ಇಲ್ಲ ಭಾರತ್ ಕಂಪೆನಿಯದ್ದಕ್ಕೋ ಬದಲಾಯಿಸಿಕೊಳ್ಳಬಹುದು ಎಂದು ವಿವರಿಸಿದೆ. ಬದಲಾಯಿಸುತ್ತೀಯ? ಈಗ ಇರುವ ಕಂಪೆನಿಯವರದು ಸರಿಯಾಗಿ ಗ್ಯಾಸ್ ಸಿಲೆಂಡರ್ ಕೊಡಲ್ಲ, ತುಂಬದಿನ ಮಾಡುತ್ತಾರೆ ಎಂದಿದ್ದೀಯಲ್ಲ. ಬೇಕಾದರೆ ಬದಲಾಯಿಸಿಕೊ. ಒಳ್ಳೆ ಅವಕಾಶವಿದೆ ಎಂದು ಕೇಳಿದೆ.
ಅಯ್ಯೋ, ಬೇಡಪ್ಪ ಅಂತ ಉಸಾಬರಿ. ಈಗ ಇರುವುದನ್ನು ಕಳೆದುಕೊಂಡು ಮತ್ತೆ ‘ಇದ್ದುದನ್ನೂ ಕೆಡಿಸಿಕೊಂಡ ಈರಭದ್ರ’ನಂತಾಗುವುದು ಬೇಡ ಎಂಬ ಗಾದೆಯೊಂದಿಗೆ ಮಾತು ಮುಗಿಸಿ ಸರಸರನೆ ನೆಲ ಸಾರಿಸಿದಳು.

೬) ಅತ್ತೆ ಮಾವನಿಗೆ ಲೆಕ್ಕ ಕೊಡಬೇಕಾ?

ಸಿದ್ದಮ್ಮ ಎರಡು ದಿನ ಸೊಂಟನೋವು ಎಂದು ಕೆಲಸಕ್ಕೆ ಬರಲಿಲ್ಲ. ಮಾರನೇ ದಿನ ನೋವು ಕಡಿಮೆಯಾಗದಿದ್ದರೂ ಕೆಲಸಕ್ಕೆ ಬಂದಳು. ಅವಳು ಬಗ್ಗಿ ಕೂತು ಮೊಣಕಾಲೂರಿ ನೆಲ ಒರೆಸುವುದು. ಸೊಂಟನೋವು ಹೆಚ್ಚಾದೀತು ಬಗ್ಗಿ ನೆಲ ಒರೆಸಬೇಡ ಎಂದು ಹೇಳಿದೆವು. ಇವತ್ತು ಕೋಲಿನಿಂದ ನೆಲ ಒರೆಸು ಎಂದು ಅವಳ ಕೈಗೆ ಕೋಲು ಹಿಡಿಸಿದೆವು. ಇದರಿಂದ ಎಷ್ಟು ಸುಲಭ ಗೊತ್ತ ಒರೆಸುವುದು. ಇನ್ನುಮುಂದೆ ಕೋಲಿನಿಂದಲೇ ನೆಲ ಒರೆಸು ಎಂದು ಸಲಹೆ ಕೊಟ್ಟೆವು. ನಮ್ಮ ಒತ್ತಾಯಕ್ಕೆ ಮಣಿದು ಕೈಗೆ ಕೋಲು ಹಿಡಿದಳು. ಸ್ವಲ್ಪ ಹೊತ್ತು ಬಿಟ್ಟು ನೋಡುತ್ತೇನೆ. ಕೋಲು ಮೂಲೆಯಲ್ಲಿ ಒರಗಿ ನಿಂತಿದೆ. ಸಿದ್ದಮ್ಮ ಎಂದಿನ ಹಾಗೆ ಮೊಣಕಾಲೂರಿ ನೆಲ ಒರೆಸುತ್ತ ಇದ್ದಾಳೆ. ಎರಡು ಕೋಣೆಯನ್ನು ಕಷ್ಟಪಟ್ಟು ಕೋಲಿನಿಂದ ಒರೆಸಿದಳಂತೆ. ಕೋಲಿನಿಂದ ಒರೆಸಲು ಸರಿ ಆಗುವುದೇ ಇಲ್ಲ. ಅದೇನು ಚಂದ ಹಾಗೆ ಒರೆಸುವುದು ಚೊಕ್ಕಟವಾಗುವುದಿಲ್ಲ ಎಂದಳು. ನಿಧಾನಕ್ಕೆ ಒರೆಸುತ್ತೇನೆ. ಇದೇ ಸರಿ ಎಂದು ಸಮಜಾಯಿಸಿ ನೀಡಿದಳು. ಈ ಮಾತುಕತೆ ನಮ್ಮಲ್ಲಿ ನಡೆಯುತ್ತಿರಬೇಕಾದರೆ ನಮ್ಮತ್ತೆ ಅಲ್ಲಿಗೆ ಬಂದರು. ಮಾತು ಸಾಕು. ಹೊತ್ತಾಗುತ್ತಲ್ಲ ನಿನಗೆ ಮನೆಗೆ ಹೋಗಲು ಎಂದರು. ಆಗಲಿ. ಅದಕ್ಕೇನಂತೆ. ನಾನೇನು ಅತ್ತೆಮಾವನಿಗೆ ಲೆಕ್ಕ ಕೊಡಬೇಕಾ? ಎಷ್ಟೆ ಹೊತ್ತಾಗಲಿ. ಕೆಲಸ ಮುಗಿದಾಗುವಾಗ ನನ್ನ ಪಾಡಿಗೆ ಮನೆಗೆ ಹೋಗುತ್ತೇನೆ ಎಂದಳು.
ಅವಳು ಹೇಳಿದ ‘ನಾನೇನು ಅತ್ತೆ ಮಾವನಿಗೆ ಲೆಕ್ಕ ಕೊಡಬೇಕಾ’ ಎಂಬ ಗಾದೆ ಮಾತು ನನ್ನ ಕುತೂಹಲ ಕೆರಳಿಸಿತು. ಗಾದೆಯ ವಿವರ ಹೇಳು ಎಂದು ಭಿನ್ನವಿಸಿಕೊಂಡೆ. ಮನೆಯಲ್ಲಿ ಅತ್ತೆಮಾವ ಇದ್ದು, ನಾನೇನಾದರೂ ತಡವಾಗಿ ಮನೆಗೆ ಹೋದರೆ, ‘ಎಲ್ಲೋಗಿದ್ದೆ? ಇಷ್ಟು ಹೊತ್ತಾಯಿತಲ್ಲ? ಏನು ಮಾಡಿದೆ? ನಿನಗೆ ಹೇಳುವವರು ಕೇಳುವವರು ಯಾರೂ ಇಲ್ಲಾಂತ ಮಾಡಿದ್ದೀಯ? ಅಂತೆಲ್ಲ ಪಂಚಾಯತಿಕೆ ಕೇಳುತ್ತಾರಲ್ಲ. ನನಗೇನು ಅತ್ತೆ ಮಾವ ಇಲ್ಲವಲ್ಲ. ಅದಕ್ಕೆ ಹಾಗಂದೆ’ ಎಂದು ವಿವರಿಸಿದಳು. ನಮ್ಮತ್ತೆ ಇದ್ದಾಗ ಎಷ್ಟು ಕಾಟ ಕೊಟ್ಟರೂ ಅಂದರೆ ಅದನ್ನು ನಿಮಗೆ ಹೇಳಿದರೆ ಒಂದು ಕಾದಂಬರಿಯೇ ಬರೆದೀರಿ ನೀವು ಎಂದು ಹೇಳುತ್ತ ನೆಲ ಒರೆಸುವ ಕೆಲಸ ಮುಗಿಸಿದಳು.

ವಿಶ್ವವಾಣಿಯಲ್ಲಿ ಪ್ರಕಟಿತ

Read Full Post »

ಸಿದ್ದಮ್ಮ ಬೆಳಗ್ಗೆ ಎಂದಿನಂತೆ ನಮ್ಮ ಮನೆಗೆ ಬಂದಳು. ಒಳಗೆ ಅಡಿಯಿಡುತ್ತ, ‘ಹಣ್ಣುತಿಂದವ ನುಣುಚಿಕೊಂಡು ಸಿಪ್ಪೆತಿಂದವ ಸಿಕ್ಕಾಕಿಕೊಂಡಂತಾಯಿತು. ಏನನ್ಯಾಯ ಹೀಗೂ ಮಾಡಬಹುದೆ?’ ಎಂದು ಸ್ವಗತದಲ್ಲಿ ಹೇಳಿಕೊಳ್ಳುತ್ತ ಪರಪರನೆ ಅಂಗಳ ಗುಡಿಸಿದಳು.
‘ಏಕೆ ಏನಾಯಿತು? ಗಾದೆ ಮಾತು ಹೇಳುತ್ತಿದ್ದ ಹಾಗಿತ್ತು.’ ಎಂದು ಕೇಳಿದೆ ಕುತೂಹಲ ತಡೆಯಲಾರದೆ.
“ಹೌದವ್ವ, ದಾರಿಯಲ್ಲಿ ಬರುತ್ತಿರಬೇಕಾದರೆ ಒಬ್ಬ ಹೆಂಗಸು ರಸ್ತೆ ದಾಟುತ್ತಿದ್ದಳು. ಆಗ ಕಾರು ಜೋರಾಗಿ ಬರುತ್ತಿತ್ತು. ಕಾರು ಅವಳಿಗೆ ತಾಗಿತು. ಅವಳು ಪಕ್ಕಕ್ಕೆ ಬಿದ್ದಳು. ಅದೇ ಸಮಯಕ್ಕೆ ಒಬ್ಬ ಹುಡುಗ ಸ್ಕೂಟರಿನಲ್ಲಿ ಬರುತ್ತಿದ್ದ. ಕಾರಿನವ ನನ್ನದೇನೂ ತಪ್ಪಿಲ್ಲ, ಈ ಸ್ಕೂಟರ್ ತಾಗಿಯೇ ಅವಳು ಬಿದ್ದದ್ದು ಎಂದು ಕಾರು ಸ್ಟಾರ್ಟ್ ಮಾಡಿ ಹೋಗಿಯೇಬಿಟ್ಟ. ಪಾಪ ಸ್ಕೂಟರಿನವನದೇ ತಪ್ಪು ಎನ್ನುವಂತಾಯಿತಲ್ಲ. ಅದನ್ನು ಕಣ್ಣಾರೆ ನೋಡಿ ಸಿಪ್ಪೆ ತಿಂದವ ಸಿಕ್ಕಾಕಿಕೊಂಡ ಎಂದು ಸ್ಕೂಟರಿನವನಿಗೆ ಹೇಳಿದ್ದು ನಾನು. ಹಣ್ಣುತಿಂದ ಕಾರಿನವ ನುಣುಚಿಕೊಂಡ. ನಾನು ನೋಡ್ತಾನೆ ಇದ್ದೆ. ಕಾರಿನವನದ್ದೆ ತಪ್ಪು. ಅವಳು ಬೀಳುವುದಕ್ಕೂ ಆಗ ಅಲ್ಲಿ ಸ್ಕೂಟರ್ ಬರುವುದಕ್ಕೂ ಸರಿಹೋಯಿತು. ಅವಳಿಗೆ ಏಟಾಗಿ ಆಸ್ಪತ್ರೆಗೆ ಕರೆದುಕೊಂಡು ಹೋದರು. ಪಾಪ ಸ್ಕೂಟರಿನವನನ್ನು ಏನು ಮಾಡಿದರೋ ಗೊತ್ತಿಲ್ಲ. ನಾನು ಅಲ್ಲಿಂದ ಹೊರಟೆ’’ ಎಂದು ಗಾದೆಯ ಅಂತರಂಗ ಬಿಚ್ಚಿಟ್ಟಳು.

೧-೩-೨೦೧೬ ವಿಶ್ವವಾಣಿ ಪತ್ರಿಕೆಯಲ್ಲಿ ಪ್ರಕಟ

 

Read Full Post »

ಮನೆಯ ಒಳಾಂಗಣದ ವಿನ್ಯಾಸವನ್ನು ಅಂದರೆ ಸೋಫಾ, ಕುರ್ಚಿ, ದಿವಾನ್ ಎಂಬ ಸಲಕರಣೆಗಳನ್ನು ಅಲ್ಲಿಂದ ಇಲ್ಲಿ, ಇಲ್ಲಿಂದ ಅಲ್ಲಿ ಎಂದು ಇರುವ ಸ್ಥಳದಲ್ಲೇ ಆಚೀಚೆ ಬದಲಾಯಿಸುವ ಕೆಲಸ ನನಗೆ ಬಹಳ ಅಚ್ಚುಮೆಚ್ಚು. ಹೀಗೆ ಒಂದುಸಲ ದಿವಾನನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ಇಡಬೇಕೆಂದು ಅದನ್ನು ಹಿಡಿಯಲು ಬಲಗೈ ಬಂಟಿ ಸಿದ್ದಮ್ಮಳ ಸಹಾಯ ಪಡೆದೆ. ಆಗ ಅವಳು ಬಾಯಿತಪ್ಪಿ, ‘ಶೆಟ್ಟಿಗೇನು ಕೆಲ್ಸ ಅಳೆಯುವುದು ಸುರಿಯುವುದು’ ಎಂಬ ಗಾದೆ ಗೊಣಗಿದಳು.
‘ಏನು ನೀನು ಹೇಳಿದ್ದು? ಸರಿಯಾಗಿ ಕೇಳಿಸಲಿಲ್ಲ ಇನ್ನೊಮ್ಮೆ ಹೇಳು’ ಎಂದೆ.
‘ಏನಿಲ್ಲವ್ವ, ಸುಮ್ಮನೆ ಒಂದು ಗಾದೆ ನೆನಪಿಗೆ ಬಂತಷ್ಟೆ’ ಎಂದು ಮಾತು ಹಾರಿಸಿದಳು. ನಾನೇನೂ ಅನ್ನುವುದಿಲ್ಲ, ಚೆನ್ನಾಗಿ ಸ್ವಾರಸ್ಯವಾಗಿರುವಂತಿದೆ ಹೇಳು ಎಂದು ಒತ್ತಾಯಿಸಿದೆ. ಈ ಗಾದೆಯ ಅಂತರಂಗವನ್ನು ಬಹಿರಂಗಗೊಳಿಸಲು ಮನವಿ ಮಾಡಿದೆ.
‘ನೋಡವ್ವ, ಶೆಟ್ಟಿ ಅಂಗಡಿಯಲ್ಲಿ ಸುಮ್ಮನೆ ಕೂತಿರುತ್ತಾನಲ್ಲ, ಗಿರಾಕಿಗಳಿಗೆ ಸಾಮಾನು ಕಟ್ಟಿಕೊಡುವ ಕೆಲಸಕ್ಕೆ ಅಂಗಡಿಯಲ್ಲಿ ಜನ ಇರುತ್ತಾರಲ್ಲ. ಆಗ ಶೆಟ್ಟಿಗೆ ಸುಮ್ಮನೆ ಕೂತುಕೊಂಡು ಏನು ಕೆಲಸ ಮಾಡಲು ತೋರದೆ ಅಂಗಡಿಯಲ್ಲಿರುವ ಸಾಮಾನನ್ನು ಸಕ್ಕರೆ, ಅಕ್ಕಿ ಇತ್ಯಾದಿ ಸುಮ್ಮನೆ ಅಳೆದು ಅಳೆದು ಸುರಿಯುತ್ತಾನೆ. ಅದಕ್ಕೆ ಈ ಗಾದೆ ಹುಟ್ಟಿಕೊಂಡದ್ದು’ ಎಂದು ವಿವರಿಸಿದಳು.
ಈ ವಿವರ ಕೇಳಿದಾಗ ನನಗೆ ಅರ್ಥವಾದದ್ದು, ನಾನು ಕೂಡ ಶೆಟ್ಟಿಯಂತೆಯೇ ಮಾಡಲು ಕೆಲಸವಿಲ್ಲದೆ ಇರುವ ಸಲಕರಣೆಯನ್ನು ಅತ್ತಿಂದಿತ್ತ ಬದಲಾಯಿಸುವುದು ಎಂದಂತಾಯಿತು!

ಸಿದ್ದಮ್ಮಳಿಗೆ ಅಕ್ಷರ ಜ್ಞಾನವಿಲ್ಲ. ಆದರೆ ಗಾದೆ ಮಾತು ಸಾಕಷ್ಟು ಗೊತ್ತು. ಮಾತು ಮಾತಿಗೂ ಒಂದೊಂದು ಗಾದೆಯನ್ನು ಉದಾಹರಣೆ ಕೊಟ್ಟು ವಿವರಿಸುತ್ತಾಳೆ. ಚಿಕ್ಕಂದಿನಲ್ಲಿ ಅವಳಪ್ಪ ಗಾದೆಮಾತು ಹೇಳುತ್ತಿದ್ದನಂತೆ.

ವಿಶ್ವವಾಣಿ ಪತ್ರಿಕೆಯಲ್ಲಿ ಪ್ರಕಟಿತ ೨೯-೨-೨೦೧೬

Read Full Post »

ಸಿದ್ದಮ್ಮ ಒಂದು ದೊಣ್ಣೆಗೆ ಮಚ್ಚು ಸಿಕ್ಕಿಸಿ ನಮ್ಮ ಮನೆ ಅಂಗಳದ ಹಿಂದೆ ಮುಂದೆ ದಂಡಿಯಾಗಿ ಬೆಳೆದಿದ್ದ ಹುಲ್ಲು ಸವರುತ್ತಿದ್ದಳು. ಅದನ್ನು ನೋಡಿ ನನಗೆ ಆಶ್ಚರ್ಯ ತಡೆಯಲಾಗಲಿಲ್ಲ. ಯಾವುದೇ ಕೆಲಸವನ್ನಾದರೂ ಅಷ್ಟೆ ಹೇಳದಿದ್ದರೆ ಒಂದು ಹುಲ್ಲುಕಡ್ಡಿಯನ್ನೂ ಅತ್ತ ಸರಿಸದ ಸಿದ್ದಮ್ಮ ಇವತ್ತೇಕೆ ಇದ್ದಕ್ಕಿದ್ದಂತೆ ಈ ಕಾರ್ಯಕ್ಕೆ ಕೈ ಹಾಕಿದಳು? ಅದೂ ಯಾವತ್ತೂ ಇಂಥ ಕೆಲಸವನ್ನೆಲ್ಲ ಮಾಡದವಳು ಇವತ್ತು ಮಾಡುತ್ತಿದ್ದಾಳೆಂದರೆ ಸೂರ್ಯ ಏನಾದರೂ ಬೇರೆ ದಿಕ್ಕಿನಿಂದ ಉದಯಿಸಿದನಾ ಎಂಬ ಸೋಜಿಗದಿಂದ ‘‘ಏನು ಸಿದ್ದಮ್ಮ, ಇವತ್ತು ಯಾವ ಮಗ್ಗುಲಿಂದ ಎದ್ದು ಬಂದೆ? ಇದೇನು ಎಂದೂ ಮಾಡದ ಕೆಲಸ ಇಂದು ಮಾಡುತ್ತಿದ್ದೀಯಲ್ಲ’’ ಎಂಬ ಪ್ರಶ್ನೆ ಹಾಕಿದೆ.
“ಹೇಂಗೆ ಸತ್ತೆ ಬೆಳೆದಿದೆ ನೋಡಿ. ಹಾವುಗೀವು ಸೇರಿಕೊಂಡಿದ್ದೀತು. ನೀವು ಬೇರೆ ಎಲ್ಲೆಂದರಲ್ಲಿ ಬರೀಗಾಲಲ್ಲಿ ನುಗ್ಗುತ್ತೀರಿ ನನ್ನಂಗೇ. ಎಲ್ಲಾದರೂ ಹಾವು ಸೇರಿಕೊಂಡರೆ ಗೊತ್ತೇ ಆಗಾಕಿಲ್ಲ. ಅದೆಲ್ಲಾದರೂ ಕಚ್ಚಿದರೆ ‘ಆಯ್ಕೊಂಡಿರುವ ಕೋಳಿ ಕಾಲು ಮುರುದಾಂಗೆ’ ನನ್ನ ಸ್ಥಿತಿ ಆದೀತು. ನನಗೆ ಇರುವವನೊಬ್ಬ ಗಂಡು. ಮುಂಡೇದು ಪಾಪದ್ದು ಬೇರೆ. ಮೂಗನಾಂಗೆ ಇರ್ತದೆ. ಮನೆ ಸಾಲ ಸಿಕ್ಕಾಪಟ್ಟೆ ಇದೆಯಲ್ಲ. ಸಾಲ ತೀರಿಸಿ, ಮಗನ ಬಾಳು ನೇರ್ಪುಹೊಂದಿದಮೇಲೆ ಬೇಕಾದರೆ ನಾನು ಸತ್ರೆ ಪರವಾಗಿಲ್ಲ. ಇಲ್ಲೇ ಹಿಂದೆಮುಂದೆ ಮುಂಗುಸಿ ಓಡಾಡುತ್ತೆ ಹುಶಾರಾಗಿರು ಎಂದು ಹಿಂದಿನ ಮನೆಯವರು ಹೇಳಿದ್ದಾರೆ. ನೀವು ಬೇರೆ ಮೊನ್ನೆ ಮುಂಗುಸಿ ಓಡಾಡುವುದನ್ನು ಕಂಡಿದ್ದೀರಿ ಎಂದಿರುವಿರಿ. ಮುಂಗುಸಿ ಬರುವುದೇ ಹಾವು ಇದ್ದರೆ ಅಂತಲ್ವೆ? ಯಾರಿಗೆ ಗೊತ್ತು ಹಾವು ಸೇರಿಕೊಂಡಿದ್ದರೆ ಅಂತ ಸತ್ತೇನೆಲ್ಲ ಸವರುತ್ತಿದ್ದೇನೆ. ಅದಕ್ಕೆ ಉದ್ದ ದೊಣ್ಣೆ ತಕ್ಕೊಂಡಿರುವುದು’’ ಎಂದು ತನ್ನ ಕೆಲಸದ ಕಾರಣ ವಿವರಿಸಿದಳು.
ಇಷ್ಟು ವರ್ಷ ಹೀಗೆ ಸತ್ತೆ ಬೆಳೆದಿದ್ದಾಗ ನಿನಗೆ ಹಾವು ಚೇಳಿನ ಹೆದರಿಕೆ ಇರಲಿಲ್ಲ. ಈಗ ಇದ್ದಕ್ಕಿದ್ದ ಹಾಗೆ ಹಾವಿನ ಭಯ ಹೇಗೆ ಬಂತು? ಎಂದು ಕೇಳಿದೆ.
“ಅದಾ, ಅದಕ್ಕೆ ಕಾರಣವಿದೆ. ನಿನ್ನೆ ಒಬ್ಬರ ಮನೆಯಲ್ಲಿ ಸಂಪಿನ ಮುಚ್ಚಳ ತೆರೆಯುತ್ತೇನೆ. ನಾಗರಹಾವಿನ ಮರಿ ಆಟವಾಡುತ್ತಿತ್ತು. ಹೆದರಿ ಕೂಡಲೇ ಸಂಪಿನ ಮುಚ್ಚಳ ಹಾಕಿದೆ. ಮನೆಯವರಿಗೆ ವಿಷಯ ತಿಳಿಸಿದರೂ ನಂಬಲೊಲ್ಲರು ಅಂತೀನಿ. ಅವರೂ ಸಂಪು ತೆರೆದು ನೋಡಿ ಖಚಿತಪಡಿಸಿಕೊಳ್ಳುವವರೆಗೆ ನಾನು ಬಿಡಲಿಲ್ಲ. ಮತ್ತೆ ಹಾವು ಹಿಡಿಯುವವನಿಗೆ ಫೋನ್ ಮಾಡಿ ಕರೆಸಿ ಹಿಡಿಸಿದರು. ಸಂಪಿನ ನೀರು ಖಾಲಿ ಮಾಡಿ ತಾರಸಿ ಮೇಲಿದ್ದ ಟ್ಯಾಂಕ್ ತೊಳೆಸಿದರು. ಮಹಡಿಮನೆಯಲ್ಲೂ ಒಂದು ಸಂಸಾರ ಇದೆ. ಇವತ್ತು ಅಡುಗೆ ಮಾಡಿದ್ದನ್ನು ಊಟ ಮಾಡಬೇಡಿ ಎಂದು ಅವರಿಗೂ ಹೋಗಿ ಹೇಳಿದೆ. ನೀರೊಳಗೆ ಹಾವು ಇತ್ತು ಎಂದಮೇಲೆ ಆ ನೀರನ್ನು ಉಪಯೋಗಿಸುವುದು ಅಪಾಯ. ಆಲೂಗಡ್ಡೆಗೆ ಬದನೆಕಾಯಿ ಹಾಕಿ ಗಟ್ಟಿ ಹುಳಿ ಮಾಡಿದ್ದರು. ಅವನ್ನೆಲ್ಲ ಚೆಲ್ಲಿಸಿಬಿಟ್ಟೆ. ಎಷ್ಟು ಚೆನ್ನಾಗಿ ಮಂದವಾಗಿತ್ತೂ ಅಂತೀರಿ ನಂಗೇ ಹೊಟ್ಟೆ ಉರುದು ಹೋಯಿತು. ಆದರೂ ಬೇರೆ ಯೋಚ್ನೇನೆ ಮಾಡದೆ ಚೆಲ್ಲಿಸಿದೆ. ಮತ್ತೆ ಅವರು ದೋಸೆ ಮಾಡಿ ತಿಂದರು’’ ಎಂದು ನಡೆದ ಘಟನೆಯನ್ನು ವಿವರಿಸಿದಳು.
ಅದೇ ನೀರು ಹಾಕಿ ಹಿಟ್ಟು ಮಾಡಿ ಆ ದೋಸೆ ಮಾಡಿದ್ದಲ್ವ? ಅದನ್ನು ತಿನ್ನಬಹುದೆ? ಎಂದು ಕಿಲಾಡಿ ಪ್ರಶ್ನೆ ಎಸೆದೆ.
“ಅದೇನೂ ಪರವಾಗಿಲ್ಲ. ಹಿಟ್ಟು ನಿನ್ನೆ ಮಾಡಿದ್ದು. ಇವತ್ತು ತಾನೆ ಹಾವು ಇದ್ದದ್ದು?’’ ಎಂದು ಸಮಜಾಯಿಸಿ ಕೊಟ್ಟಳು!
“ನಮ್ಮ ಸಂಪನ್ನೂ ಮುಚ್ಚಳ ತೆರೆದು ನೋಡಬೇಕವ್ವ. ಎಲ್ಲಾದರೂ ಹಾವು ಸೇರಿಕೊಂಡರೆ ಅಪಾಯ. ಅದು ಪೈಪಿನಲ್ಲಿ ನೀರಿನೊಡನೆ ಬರುವುದಂತೆ. ನಿಮ್ಮ ಅಣ್ಣನ ಮನೆ ಸಂಪನ್ನೂ ತೆರೆದು ನೋಡಲು ಹೇಳಿ. ಅವರ ಸಂಪಿನ ಸುತ್ತ ಮಸ್ತಾಗಿ ಸತ್ತೆ ಬೆಳೆದಿದೆ. ಅಲ್ಲಿ ಎಲ್ಲ ಕ್ಲೀನ್ ಮಾಡಿಸಿ ಸಿಮೆಂಟು ಹಾಕಿಸಲು ಹೇಳಿ. ಬೇಕಾದರೆ ನಾನು ಹೇಳಿದ್ದೆಂದೇ ಹೇಳಿ. ಬೈದರೆ ಬೈಸಿಕೊಳ್ತೇನೆ’’ ಎಂದಳು.
ಆ ದಿನ ಸುಮ್ಮನೆ ಇದ್ದೆ. ಸಿದ್ದಮ್ಮ ಹೇಳಿದ್ದಕ್ಕೆ ತಲೆಕೆಡಿಸಿಕೊಳ್ಳಲಿಲ್ಲ. ಆದರೆ ರಾತ್ರೆ ಎಲ್ಲ ಅದೇ ಯೋಚನೆ. ನಮ್ಮ ಸಂಪಿನೊಳಗೆ ಹಾವು ಇದ್ದಾಂಗೆ ಕನಸು! ಈ ಗೊಂದಲ ನಿವಾರಣೆಗೆ ಸಂಪು ಮುಚ್ಚಳ ತೆರೆದು ನೋಡುವುದೇ ಮದ್ದು ಎಂದು ಬೆಳಗ್ಗೆ ಎದ್ದು ಧೈರ್ಯ ಮಾಡಿ ಸಂಪಿನ ಮುಚ್ಚಳ ತೆರೆದು ನೋಡಿದೆ. ಹಾವು ಎಲ್ಲಿಯೂ ಕಾಣಲಿಲ್ಲ. ಸಿದ್ದಮ್ಮ ಬಂದಾಗ ಹೇಳಿದೆ ಹಾವು ಇರಲಿಲ್ಲ ಎಂದು. ಅವಳೋ ನನ್ನ ಮಾತಿನಲ್ಲಿ ನಂಬಿಕೆ ಇಲ್ಲದೆ ಟಾರ್ಚ್ ಪಡೆದು ಮುಚ್ಚಳ ತೆರೆದು ಕೂಲಂಕಷವಾಗಿ ನೋಡಿಯೇ ಹಾವು ಇಲ್ಲದಿರುವುದನ್ನು ಖಾತ್ರಿ ಮಾಡಿಕೊಂಡಳು.
———–

ವಿಶ್ವವಾಣಿ ೨೫-೨-೨೦೧೬ ಪತ್ರಿಕೆಯಲ್ಲಿ ಪ್ರಕಟ

Read Full Post »