Feeds:
ಲೇಖನಗಳು
ಟಿಪ್ಪಣಿಗಳು

Archive for the ‘ಏಕಪಾತ್ರಾಭಿನಯ’ Category

ಧರ್ಮರಾಜ ದ್ಯೂತದಲ್ಲಿ ದುರ್ಯೋಧನನಿಗೆ ಸಂಪೂರ್ಣ ಸೋತು ದ್ರೌಪದಿಯನ್ನೂ ಪಣಕ್ಕೊಡ್ಡಿ ಅದರಲ್ಲೂ ಸೋತು ಹೋಗಿ ಸಭೆಗೆ ದ್ರೌಪದಿಯನ್ನು ಕರೆತರಲು ದುಃಶಾಸನನನ್ನು ಕಳುಹಿಸುತ್ತಾನೆ. ದುಃಶಾಸನ ದ್ರೌಪದಿಯನ್ನು ಸಭೆಗೆ ಎಳೆದು ತರುವ ಸಂದರ್ಭದಲ್ಲಿ ಅವರಿಬ್ಬರಲ್ಲಿ ನಡೆದ ಮಾತುಕತೆ.

ದುಃಶಾಸನ: ಪಾಂಚಾಲಿ ಬಾ. ನಿನ್ನ ಪತಿಗಳೈವರು ಜೂಜಿನಲ್ಲಿ ಪಣವಿಟ್ಟು ಎಲ್ಲವನ್ನು ಕಳೆದುಕೊಂಡು ಸೋತರು. ದ್ಯೂತದಲ್ಲಿ ಗೆದ್ದಿರುವ ನಮ್ಮ ಅಣ್ಣ ನಿನ್ನನ್ನು ಕರೆತರಲು ಹೇಳಿರುವನು. ಅವನೇ ಈಗ ಎಲ್ಲರಿಗೂ ಅಧಿಪತಿ. ಅವನ ಆಜ್ಞೆಯಾಗಿದೆ. ಹೊರಡು.

ದ್ರೌಪದಿ: ಇಲ್ಲ, ಇಲ್ಲ. ನಾನಲ್ಲಿಗೆ ಬರುವಂತಿಲ್ಲ. ನನ್ನನ್ನು ಬಿಡು. ಎಲಾ ಮೂರ್ಖ. ಚಂದ್ರವಂಶದಲ್ಲಿ ಹುಟ್ಟಿ ಹೀಗೆ ಕೈಹಿಡಿದು ಎಳೆದು ಅನಾರ್ಯನಂತೆ ವರ್ತಿಸುತ್ತಿಯಲ್ಲ. ಎಲೈ ಪಾಪಿ, ನಾನು ರಜಸ್ವಲೆ. ಈ ಸ್ಥಿತಿಯಲ್ಲಿ ನನ್ನನ್ನು ಎಳೆದುಕೊಂಡು ರಾಜಸಭೆಗೆ ಹೋಗುತ್ತಿರುವೆಯಾ? ನಿನಗೆ ನಾಚಿಕೆ ಇಲ್ಲವೆ? ಬಿಡು ಕೈ.

ದುಃಶಾಸನ: ನೀನು ಏನೇ ಆಗಿರು. ಒಂದೇ ಬಟ್ಟೆಯಲ್ಲಿರು. ಅದರಿಂದ ನಮಗೇನೂ ಇಲ್ಲ. ನೀನು ದ್ಯೂತದಲ್ಲಿ ಜಿತಳಾದ ನಮ್ಮ ದಾಸಿ. ಸಲ್ಲದ ಗೌರವ ಬಯಸಬೇಡ. ನಿನ್ನನ್ನು ಹೀಗೆಯೇ ಕರೆತರಲು ದುರ್ಯೋಧನ ಮಹಾರಾಜನ ಆಜ್ಞೆಯಾಗಿದೆ.

ದ್ರೌಪದಿ: ಅಯ್ಯೊ! ಈ ಸಭೆಯಲ್ಲಿ ವೃದ್ಧರೂ ಶ್ರೋತ್ರೀಯರು, ಶಾಸ್ತ್ರವೇತ್ತರು, ಕರ್ಮನಿಷ್ಠರು ಧರ್ಮಪರಾಯಣರು ಎಲ್ಲರೂ ಸೇರಿರುವಿರಿ. ಗುರುಜನರೂ, ಬ್ರಾಹ್ಮಣರೂ, ಹಿರಿಯರೂ ಆಗಿರುವ ನಿಮ್ಮಗಳ ಮುಂದೆ ನಾನು ಈ ಸ್ಥಿತಿಯಲ್ಲಿ ಹೇಗೆ ನಿಲ್ಲಲಿ? ನನ್ನ ಮಾನ ಹರಾಜಾಗುತ್ತಿದೆ. ಯಾವ ಸ್ತ್ರೀಗೂ ಇಂಥ ಪರಿಸ್ಥಿತಿ ಬಾರದಿರಲಿ. ಪವಿತ್ರವಾದ ಚಂದ್ರವಂಶಕ್ಕೆ ಸೊಸೆಯಾಗಿ ಬಂದು ನನ್ನನ್ನು ಹಸ್ತಿನಾವತಿಯಲ್ಲಿ ಎಲ್ಲರ ಸಮಕ್ಷಮದಲ್ಲಿ ಮಾನಕಳೆಯುವುದು ನ್ಯಾಯವೆ? ಧರ್ಮವೇ? ಇಲ್ಲಿ ಧರ್ಮ, ನ್ಯಾಯ ಅರಿತಿರುವ ಒಬ್ಬರೂ ಇಲ್ಲವೆ? ಮನುಜರಾಗಿ ಹೃದಯವಂತಿಕೆ ಇರುವವರು ಯಾರೂ ಇಲ್ಲವೇ?

Draupadi

ದುಃಶಾಸನ: ಎಲೆ ದಾಸಿ. ಸುಮ್ಮನೆ ಬಣಬಣಿಸಬೇಡ. ನಿನ್ನ ಗಂಡಂದಿರು ವಸ್ತ್ರಾಭರಣಗಳನ್ನು ತೆಗೆದಿರಿಸಿದರು. ನೀನೇಕೆ ಸುಮ್ಮನೆ ನಿಂತೆ? ದಾಸಿಗೂ ಇಷ್ಟು ಛಲವೆ? ನಾನೇ ನಿನ್ನ ಸೀರೆ ಹಿಡಿದೆಳೆಯುವೆ.

ದ್ರೌಪದಿ: ಅಯ್ಯೊ, ನನ್ನ ಮಾನ ರಕ್ಷಿಸಿ. ಯಾರೂ ಇಲ್ಲವೆ ಇಲ್ಲಿ? ನನ್ನನ್ನು ರಕ್ಷಿಸಿ. ಅಕ್ಕ, ಅಮ್ಮ, ನಿಮಗೆಲ್ಲ ಕರುಣೆಯೇ ಇಲ್ಲವೆ? ಓ ಕೃಷ್ಣ ಕಾಪಾಡು. ನೀನೇ ನನಗೆ ದಿಕ್ಕು. ದುಃಶಾಸನ ನನ್ನ ಸೀರೆ ಎಳೆಯುತ್ತಿರುವನು. ನಂಬಿದವರನ್ನು ಬೆಂಬಿಡದೆ ರಕ್ಷಿಸುವವನು ನೀನೊಬ್ಬನೆ. ಶರಣಾದೆ ಸ್ವಾಮಿ ನಿನಗೆ.

ದುಃಶಾಸನ: ಹಹಃ ಹಹ್ಹಹ್ಹ ದ್ರೌಪದಿ ಯಾರೂ ನಿನ್ನನ್ನು ರಕ್ಷಿಸಲಾರರು ಹ್ಹಹ್ಹ. ಇದೇನು ಸೀರೆ ಸೆಳೆದಷ್ಟು ಹೆಚ್ಚುತ್ತಿದೆಯಲ್ಲ. ಸೀರೆ ರಾಶಿ ನನ್ನಷ್ಟೆ ಎತ್ತರವಾಯುತು. ಇದೇನು ತಲೆ ತಿರುಗುತ್ತಿದೆಯಲ್ಲ. ಕೈ ಸೋತು ಹೋಗುತ್ತಿದೆ. ಅಬ್ಬ ಇನ್ನು ಸಾಧ್ಯವಿಲ್ಲ…..

ದ್ರೌಪದಿ: ಶ್ರೀಕೃಷ್ಣ ನನ್ನನ್ನು ರಕ್ಷಿಸಿದೆ. ನಿನಗಿದೋ ನಮನ. ಈ ದುಷ್ಟ ದುಃಶಾಸನ ಎಸಗಿದ ಕಾರ್ಯ ಬಲು ಹೀನವಾದುದು. ಇವನ ಬಿಸಿರಕ್ತದಿಂದ ನನ್ನ ತಲೆ ಕೂದಲನ್ನು ತೋಯಿಸಿಕೊಂಡು ಅವನ ನೀಳವಾದ ಕರುಳ ಪೂದಂಡೆಯನ್ನು ಮುಡಿದೇ ನಾನು ತೃಪ್ತಳಾಗುವುದು. ಈ ನನ್ನ ಪ್ರತಿಜ್ಞೆ ನೆರವೇರುವವರೆಗೆ ಈ ದುರಾತ್ಮನ ಕರಸ್ಪರ್ಶದಿಂದ ಬಿಚ್ಚಿಹೋಗಿರುವ ನನ್ನ ಮುಡಿಯನ್ನು ನಾನು ಕಟ್ಟುವುದಿಲ್ಲ. ಇದಕ್ಕೆ ಭಗವತ್‌ಸ್ವರೂಪಿಗಳಾದ ಸಜ್ಜನರೆಲ್ಲರೂ ಸಾಕ್ಷಿಯಾಗಲಿ.

http://surahonne.com/?p=4411  

ಸುರಹೊನ್ನೆಯಲ್ಲಿ ಪ್ರಕಟಿತ

Read Full Post »

ಸೀತೆಯನ್ನು ರಾವಣ ಅಪಹರಿಸಿ ಅಶೋಕವನದಲ್ಲಿರಿಸಿದನು. ಅಲ್ಲಿ ರಾವಣ ಸೀತೆಯನ್ನು ಚಿನ್ನದ ಒಡವೆ ತೋರಿಸಿ ವಶಪಡಿಸಿಕೊಳ್ಳಲು ಹೋದಾಗ ಅವರಿಬ್ಬರಲ್ಲಿ ನಡೆದ ಮಾತುಕತೆ.

ರಾವಣ: ಜಾನಕಿ, ಇದೋ ಸಮಗ್ರ ದಾನವರಾಜ್ಯದ ನಿರ್ಮಾತೃವೆನಿಸಿದ ಈ ದಶಗ್ರೂವನು ನಿನ್ನಲ್ಲಿ ಪ್ರಾರ್ಥಿಸಿಕೊಳ್ಳುತ್ತೇನೆ. ಮುಖವೆತ್ತಿ ನನ್ನಲ್ಲಿ ಮಾತಾಡು. ನಿನ್ನನ್ನೇ ಹಗಲಿರುಳು ನೆನೆದು ಹಂಬಲಿಸುವ ನನ್ನ ಮೇಲೆ ಅನುಗ್ರಹ ತೋರು. ನಿನ್ನ ಕುರಿತು ಕೇಳಿದಾಗಲೇ ನನಗೆ ಅತ್ಯಂತ ಆಸೆ ಉಂಟಾಗಿತ್ತು. ನನ್ನ ಮನಸ್ಸು ಪೂರ್ಣವಾಗಿ ನಿನ್ನಲ್ಲೇ ಸೇರಿ ಹೋಗಿದೆ. ನನ್ನ ವೈಭವವನ್ನು ನೀನೇ ನೋಡಿರುವೆ. ದೇವ, ದಾನವ, ಮಾನವರೆಲ್ಲರೂ ನನಗೆ ಸರಿಮಿಗಿಲೆನಿಸಿದವರಿಲ್ಲ. ಪುಷ್ಪಕವಿದೆ. ಎಲ್ಲಿಗೆ ಬೇಕೋ ಅಲ್ಲಿಗೆ ನಿರಾಯಾಸವಾಗಿ ಹೋಗಿ ಬರಬಹುದು. ಲೋಕಲೋಕಗಳ ಸುಂದರಿಯರಲ್ಲಿ ಯಾರು ಯಾರು ಅತ್ಯಂತ ಲಾವಣ್ಯವತಿಯರೆಂದು ಪ್ರಸಿದ್ಧರೋ ಅವರೆಲ್ಲರೂ ನಿನ್ನ ಮುಂದೆ ಸೂರ್ಯನ ಮುಂದಿನ ದೀಪಗಳಂತೆ. ಬೇಕಿದ್ದರೆ ಹೇಳು. ಈ ಹತ್ತೂ ತಲೆಗಳಲ್ಲಿ ನಿನ್ನನ್ನು ಹೊತ್ತು ಓಲೈಸುತ್ತೇನೆ. ನನ್ನ ಲಂಕೆಯ ಸಕಲ ಸೌಭಾಗ್ಯವೂ ನಿನ್ನದು. ಹೆಚ್ಚೇಕೆ? ಈ ಲಂಕೇಶ್ವರನೇ ನಿನ್ನವನು. ಯಾವುದು ಬೇಕು ಹೇಳು. ಸಂತೋಷದಿಂದ ತರಿಸಿಕೊಡುತ್ತೇನೆ. ನನಗೆ ಬೇಕಾದ ಐಶ್ವರ್ಯವಿದೆ. ಅಧಿಕಾರವಿದೆ, ನಿತ್ಯ ಯೌವನವಿದೆ. ಈ ಎಲ್ಲ ಸೌಭಾಗ್ಯಕ್ಕೆ ನಿನ್ನ ದಯೆಯೊಂದೇ ಇನ್ನೂ ಪ್ರಾಪ್ತಿಯಾಗದಿರುವುದು. ಸೀತಾ! ಏಕೆ ಚಿಂತೆ? ಅರಣ್ಯವಾಸದ ಆ ದೀನತೆಗೂ ಇಲ್ಲಿಯ ವೈಭವಕ್ಕೂ ಎಷ್ಟೊಂದು ಅಂತರವಿದೆ! ಯಾವ ಲೋಕದ ವಸ್ತ್ರಾಲಂಕಾರಗಳು ಬೇಕು? ಇದೋ ಇಲ್ಲಿದೆ ಆರಿಸಿಕೊ. ಇಷ್ಟೂ ಸೀರೆಗಳಲ್ಲಿ ಯಾವುದು ನಿನ್ನ ಮನಸ್ಸಿಗೆ ಒಪ್ಪಿಗೆಯಾಗಿದೆ ಅದನ್ನು ತೆಗೆದುಕೊ. ಯಾರು ನಿನ್ನ ಸೇವೆ ಮಾಡಬೇಕು ಹೇಳು! ನಿರಾಭರಣೆಯಾಗಿ ನೆಲ ನೋಡುತ್ತ ಚಿಂತಿಸುತ್ತಿರುವ ದೀನತೆ ಏಕೆ? ಜಾನಕಿ! ಸಂಕೋಚ ಪಡಬೇಡ. ಮಾತಾಡು ಸೀತಾ! ಇಷ್ಟು ಬೇಡುತ್ತಿರುವ ಈ ದಾನವ ಸಾಮ್ರಾಟನಲ್ಲಿ ಒಂದು ಮಾತನ್ನಾದರೂ ಆಡು. ನನ್ನಲ್ಲಿ ಕೋಪವೇ? ಸ್ತ್ರೀಯರ ಚಿತ್ತ ಎಂದಿಗೂ ಕಠಿಣವಲ್ಲ.

Ravan seeta

 

ಸೀತೆ: ಎಲೈ ದಾನವನೇ! ನಿನ್ನ ವೃಥಾಲಾಪ ಕೇಳಿ ಸಾಕಾಯಿತು. ಮನಸ್ಸಿಗೆ ಬಂದುದೆಲ್ಲವನ್ನೂ ಹರಟಿರುವೆ. ನಿನಗೆ ನಾಚಿಕೆ ಇಲ್ಲವೆ? ನಾನು ಶ್ರೀರಾಮನ ಪತ್ನಿ. ನನ್ನ ನೆರಳನ್ನು ಕೂಡ ಬಲವಂತವಿಲ್ಲದೆ ಸ್ಪರ್ಶಿಸಲಾರೆ. ನಿನಗೆ ಎಷ್ಟು ಐಶ್ವರ್ಯವಿದ್ದರೇನು? ಉತ್ತಮ ಸ್ತ್ರೀಯರಾರೂ ಅದಕ್ಕೆ ಮನಸೋಲರಾರರು. ನಮ್ಮ ಅಯೋಧ್ಯೆಯಲ್ಲಿ ಯಾವುದಕ್ಕೂ ಕಡಿಮೆ ಇರಲಿಲ್ಲ. ಆದರೆ ಪತಿಯ ಜತೆಯಲ್ಲಿರುವುದೇ ಹೆಣ್ಣಿನ ಕರ್ತವ್ಯ ಎಂದು ಬಗೆದು ನಾನು ವನವಾಸಕ್ಕೆ ಬಂದವಳು. ಇಹಲೋಕದ ಯಾವ ಭೋಗಭಾಗ್ಯಗಳಿರಲಿ ಅದು ಕೇವಲ ನಶ್ವರವಾದುದು. ಎಲ್ಲಕ್ಕೂ ಅಧಿದೇವತೆ ಹೆಣ್ಣೆಂದು ಅರಿತ ನೀನು ಆಕೆಯು ಹೆರವರ ಭೋಗ ಸಾಧನವಲ್ಲ ಎಂಬುದನ್ನು ತಿಳಿದು ಕೊಳ್ಳಲಿಲ್ಲ. ಯಾವ ದೇವರಿಂದ ಯಾವುದೇ ವರ ಪಡೆದಿದ್ದರೂ ಮೃತ್ಯುವನ್ನು ಮೀರಲು ಸಾಧ್ಯವಾಗದು. ಲೋಕಲೋಕಗಳನ್ನು ಗೆದ್ದು ಕೈಲಾಸವನ್ನೆತ್ತಿ ಮೆರೆದಿರುವ ನೀನು ನನ್ನನ್ನು ಕದ್ದೇ ತಂದಿರುವೆ. ಶ್ರೀರಾಮನ ಸಮ್ಮುಖದಲ್ಲಿ ನಿನ್ನ ಶೌರ್ಯ ತೋರಿಸಲು ನಿನಗೆಲ್ಲಿದೆ ಶಕ್ತಿ? ನೈತಿಕ ಧೈರ್ಯವೆಲ್ಲಿದೆ? ಏಕಪತ್ನೀವ್ರತಸ್ಥನಾದ ಆ ನನ್ನ ಸ್ವಾಮಿಯನ್ನು ನಿನ್ನಂಥ ಕಾಮಿ ನೀಚ ಏನು ತಾನೆ ಮಾಡಬಲ್ಲನು? ನೀತಿಬಾಹಿರನಾದ ನೀನು ಕ್ಷುಲ್ಲಕರಿಗಿಂತಲೂ ಕಡೆ. ಹೇಡಿಗಳಲ್ಲಿ ಮೊದಲನೆಯವ. ನನ್ನನ್ನು ಕದ್ದು ತಂದು ದ್ರೋಹಿಯಾಗಿರುವೆ. ನಿನ್ನಲ್ಲಿ ಎಷ್ಟು ಸಂಪತ್ತಿದ್ದರೇನು? ಅದು ನನಗೆ ನಿರುಪಯುಕ್ತ. ಬಹುದೊಡ್ಡ ಸಾಮ್ರಾಟ ನೀನಾಗಿರಬಹುದು. ಅದಕ್ಕೆ ತಕ್ಕಂತೆ ನಡೆಯಲಾರದ ನೀನು ನಾಶವಾಗುವ ಕಾಲ ದೂರವಿಲ್ಲ. ಪರಸ್ತ್ರೀಯರನ್ನು ಕೆಡಿಸುವುದರಲ್ಲಿಯೇ ನಿನ್ನ ಪರಾಕ್ರಮವನ್ನು ತೋರಿಸುತ್ತಿರುವ ನೀನು ಹಾಳಾಗಿ ಹೋಗು. ನನ್ನ ಸಮ್ಮುಖದಲ್ಲಿ ನಿನ್ನ ಬೆಡಗನ್ನು ತೋರಿಸಲು ಬಂದೆಯಲ್ಲ! ನಿನ್ನ ಮುಖಕ್ಕೆ ಬೆಂಕಿ ಬೀಳಲಿ. ಈ ವೈಭವ ಮಣ್ಣುಪಾಲಾಗಲಿ. ಮರ್ಯಾದೆ ಮೀರಿ ಸತ್ತು ಬದುಕಿರುವ ನೀನೂ ಒಬ್ಬ ಪುರುಷನೇ? ಇಷ್ಟು ದಿವಸಗಳು ಕಳೆದುವು. ಇನ್ನೂ ನನ್ನನ್ನು ಅರ್ಥ ಮಾಡಿಕೊಳ್ಳದ ನೀನು ಅವಿವೇಕಿ, ನೀಚ, ಅಧಮ, ಕಟುಕ, ಹೇಡಿ! ನನ್ನ ಕಣ್ಣೆದುರಿನಿಂದ ಅತ್ತ ತೊಲಗು!

 

(ವಿ.ಸೂ: ಮಕ್ಕಳಿಗೆ ಏಕಪಾತ್ರಾಭಿನಯ ಮಾಡಲು ಅನುಕೂಲವಾಗುವಂತೆ ಎರಡು ಪಾತ್ರಗಳ ನಡುವಿನ ಸಂಭಾಷಣೆಯ ರೂಪದಲ್ಲಿ ಇದನ್ನು ಬರೆಯಲಾಗಿದೆ.)

 

ಸುರಹೊನ್ನೆ ಅಂತರ್ಜಾಲ ಪತ್ರಿಕೆಯಲ್ಲಿ ಪ್ರಕಟ

http://surahonne.com/?p=3991

Read Full Post »

ದಶರಥನ ಮರಣಾನಂತರ ಭರತ ಅಯೋಧ್ಯೆಗೆ ಬಂದು ತನ್ನ ತಾಯಿ ಕೈಕೇಯಿಯನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಅವರಿಬ್ಬರ ನಡುವೆ ನಡೆದ ಸಂಭಾಷಣೆ.

ಕೈಕೇಯಿ: ವತ್ಸಾ! ಭರತ. ಬಾ ಕಂದಾ. ಇದೋ ನಿಷ್ಕಂಟಕವಾದ ರಾಜ್ಯವನ್ನು ನಿನಗಾಗಿ ಕಾದಿಟ್ಟಿರುವೆನು. ಇನ್ನು ಮುಂದೆ ನೀನೇ ಇಲ್ಲಿಯ ಯುವರಾಜ. ಯಾವ ತೊಡಕೂ ಇಲ್ಲ. ಇದ್ದ ತೊಡಕೆಲ್ಲ ಪರಿಹಾರವಾಯಿತು.

Manthare- kaikeyiಭರತ: ಯಾರಿಗೆ ಬೇಕು ರಾಜ್ಯ. ರಾಜ್ಯವನ್ನು ನೀನೇ ಅನುಭವಿಸು. ಎಲ್ಲರನ್ನು ಕೊಂದು ತಿಂದು ರಾಜ್ಯವನ್ನು ಅನುಭವಿಸಿ ಸಂತೋಷ ಪಡು. ನಿನ್ನ ಹೊಟ್ಟೆಯಲ್ಲಿ ಹುಟ್ಟಿರುವ ಅಪರಾಧಕ್ಕಾಗಿ ನನ್ನ ಮುಖವನ್ನು ನೋಡಲು ಈ ಸಾಕೇತದ ಜನರು ಜುಗುಪ್ಸೆಗೊಳ್ಳುವರು. ಯಾರಿಗೂ ಕಾಣಿಸಿಕೊಳ್ಳದೆ ಎದ್ದು ನಡೆದು, ಜೀವವಿದ್ದಷ್ಟು ದಿನ ಬದುಕಿರುವೆ. ಇಷ್ಟಲ್ಲದೆ ನಾನು ಇನ್ನೇನು ತಾನೇ ಮಾಡಲಿದೆ? ಹೆಂಗಸಾಗಿದ್ದು ನನ್ನ ತಾಯಿಯೆಂದು ಮಾತ್ರ ನಿನಗೆ ಆಯುಷ್ಯವುಳಿದಿದೆ. ನಾನೇ ನಿನ್ನನ್ನು ಶಿಕ್ಷಿಸಬೇಕಾಗಿದ್ದಿತು. ಅರಸು ಮನೆತನದಲ್ಲಿ ಹುಟ್ಟಿ ನಿನ್ನ ಮಗನಾಗಿ ನನಗೆ ಆ ಅಧಿಕಾರ ಇಲ್ಲ. ಆದರೂ ನೊಂದು ಕೆರಳಿರುವ ಪ್ರಜೆಗಳು ನಿನ್ನನ್ನು ಸರ್ವಥಾ ಕ್ಷಮಿಸಲಾರರು. ಆಯುಧಬಲ, ತಂತ್ರಬುದ್ಧಿ, ವಂಚನೆ ಇಂತವುಗಳಿಂದಲೇ ರಾಜ್ಯವನ್ನಾಳಬಹುದೆಂದು ಬಗೆದೆಯಲ್ಲ! ಅದು ಎಷ್ಟು ದಿನ ನಡೆದೀತು? ಸ್ವಾರ್ಥಮೂಲವಾದ ಯಾವುದೂ ಬಹುಕಾಲ ಉಳಿಯಲಾರದು. ಅಣ್ಣನಾದ ಶ್ರೀರಾಮನನ್ನು ಪ್ರಜೆಗಳು ಎಷ್ಟೊಂದು ಪ್ರೀತಿಯಿಂದ ಕಾಣುತ್ತಿದ್ದರು, ಅಯೋಧ್ಯೆಯೇ ಅಣ್ಣನೊಂದಿಗೆ ಕಾಡಿಗೆ ಹೊರಟಿದ್ದಿತಂತೆ. ನನಗೆ ಆ ಭಾಗ್ಯವೂ ಇರಲಿಲ್ಲ. ಶ್ರೀರಾಮನೇ ಕೈಮುಗಿದು ಬೇಡವೆಂದು ಹೇಳಿದರೂ ಕೆಲವು ಜನರು ಗಂಗಾತೀರದ ವರೆಗೆ ನಡೆದುಬಂದರಂತೆ. `ನನ್ನ ತಮ್ಮನನ್ನು ನನ್ನಂತೆಯೇ ಪ್ರೀತಿಯಿಂದ ಕಾಣಬೇಕೆಂದುದು ನನ್ನ ಅಣ್ಣನೇ ಪ್ರಜೆಗಳನ್ನು ಕೇಳಿಕೊಂಡಿದ್ದನಂತೆ. ಈಗ ನೋಡು ಶ್ರೀರಾಮನ ತಮ್ಮನಾದರೆ ಮಾತ್ರ ನಿನ್ನ ಮಗ ಮರ್ಯಾದೆಯಿಂದ ಬದುಕಬಲ್ಲನು. ಸಕಲ ಸದ್ಗುಣನಾದ ಶ್ರೀರಾಮ ಯಾವ ಅನ್ಯಾಯ ಮಾಡಿದನೆಂದು ವನಕ್ಕೆ ಕಳುಹಿಸಲು ಕೇಳಿಕೊಂಡೆ? ಯಾವ ಅರ್ಹತೆಯೂ ಇಲ್ಲದ ಕಿರಿಯನಾದ ನನಗೇಕೆ ಯುವರಾಜ ಪದವಿ ಕೇಳಿದೆ? ನಿನ್ನನ್ನು ಅವನು ಹೆತ್ತ ತಾಯಿಯಂತೆಯೇ ಪ್ರೀತಿ ಗೌರವಗಳಿಂದ ಕಾಣುತ್ತಿರಲಿಲ್ಲವೆ? ಶ್ರೀರಾಮ ಯುವರಾಜನಾಗುತ್ತಿದ್ದರೆ ನಿನಗೆ ಏನು ಭಾದಕವಾಗುತ್ತಿತ್ತು? ತಾಯಿಯಾಗಿಯೂ ನೀನು ನಿಷ್ಕರುಣೆ ಹೊಂದಿದೆಯಲ್ಲ. ಹೇಳು ನಿಜ ಹೇಳು. ನೀಚಳಾದ ಮಂಥರೆಯ ಮಾತು ಕೇಳಿ ತಾನೆ ನೀನು ಈ ಕಾರ್ಯಕ್ಕೆ ಮುಂದಾದುದಲ್ಲವೆ? ಪರಿಶುದ್ಧವಾದ ನಿನ್ನ ಮನಸ್ಸು ಆ ದುಷ್ಟೆ ಕಿವಿಯೂದಿದಾಗ ಕಲುಷಿತವಾಯಿತೆ? ಅಲ್ಪರ ಸಹವಾಸ ಅಭಿಮಾನ ಭಂಗ ಎಂಬುದು ಸತ್ಯ. ನನಗೆ ರಾಜ್ಯವೂ ಬೇಡ. ಏನೂ ಬೇಡ.

ಕೈಕೇಯಿ: ಮಗನೇ ನಿಜವಾಗಿಯೂ ನಾನು ಅಪರಾಧಿ. ನನ್ನನ್ನು ಕ್ಷಮಿಸು ಕಂದಾ. ಅಯ್ಯೋ! ಎಂಥ ಅಕೃತ್ಯ ಮಾಡಿಬಿಟ್ಟೆ. ನನಗೆ ಬೇಕಾದ ಶಿಕ್ಷೆ ಕೊಡು. ನನ್ನ ಪಾಪಕ್ಕೆ ಅದು ಪರಿಹಾರವಾಗಲಿ.

 

ಸುರಹೊನ್ನೆ ಅಂತರ್ಜಾಲಲೇಖದಲ್ಲಿ ಪ್ರಕಟವಾದುದು.

Read Full Post »

ಏಕಪಾತ್ರಾಭಿನಯ ಅಂದರೆ ಕನಿಷ್ಟಪಕ್ಷ ೨ ಪಾತ್ರಗಳಾದರೂ ಇರಬೇಕು. ಮಕ್ಕಳಿಗಾಗಿ ಇದನ್ನು ಬರೆದದ್ದು. ಹಿಂದೆ ನಮ್ಮ ಮಗಳು ಅಕ್ಷರಿ ಶಾಲೆಯಲ್ಲಿ ಏಕಪಾತ್ರಾಭಿನಯದಲ್ಲಿ ಭಾಗವಹಿಸುತ್ತಿದ್ದಳು. ಆಗ ಅಂಗಡಿಯಲ್ಲಿ ಹುಡುಕಿದಾಗ ಒಂದು ಏಕಪಾತ್ರಾಭಿನಯದ ಪುಸ್ತಕ ಸಿಕ್ಕಿತ್ತು. ಆಗ ಬಂದ ಯೋಚನೆಯಲ್ಲಿ ಇಂಥ ಕೆಲವು ಪಾತ್ರಗಳ ಬಗ್ಗೆ ಬರೆದಿಟ್ಟಿದ್ದೆ. ಅದನ್ನು ಇಲ್ಲಿ ಒಂದೊಂದಾಗಿ ಹಾಕುತ್ತೇನೆ.

ಪಾತ್ರ ವರ್ಗ: ಭರತ, ಕೌಸಲ್ಯೆ

ಸೀತಾಲಕ್ಷ್ಮಣ ಸಹಿತ ಶ್ರೀರಾಮ ವನವಾಸಕ್ಕೆ ಪ್ರಯಾಣಿಸಿದ್ದನು. ಇದರಿಂದ ದಶರಥ ಬಹಳ ಖಿನ್ನನಾಗಿ ಶ್ರೀರಾಮನನ್ನೇ ಸ್ಮರಿಸಿಕೊಂಡು ರೋದಿಸುತ್ತ ಮರಣವನ್ನಪ್ಪಿದನು. ಆ ಸಮಯದಲ್ಲಿ ಭರತ ಅಜ್ಜನ ಮನೆಯಲ್ಲಿದ್ದನು. ದಶರಥನ ಮರಣ ವಾರ್ತೆ ಕೇಳಿ ಭರತ ಅಯೋಧ್ಯೆಗೆ ಆಗಮಿಸಿದ ಸಂದರ್ಭದಲ್ಲಿ ಕೌಸಲ್ಯೆ ಭರತರ ನಡುವೆ ನಡೆದ ಸಂಭಾಷಣೆ.

ಭರತ: ಅಮ್ಮ ಅಮ್ಮ ನನ್ನನ್ನು ಕ್ಷಮಿಸು. ಪರಿಸ್ಥಿತಿ ಈ ರೀತಿಯಲ್ಲಿ ಸಂಭವಿಸುತ್ತದೆಂದು ಯಾರೂ ಭಾವಿಸಿರಲಿಲ್ಲ. ನನ್ನ ಅಣ್ಣ ಶ್ರೀರಾಮನನ್ನು ಬಿಟ್ಟು ನನ್ನ ಜೀವ ಅರೆಕ್ಷಣ ನಿಲ್ಲದು. ನಾನಿಲ್ಲಿದ್ದಿದ್ದರೆ ಖಂಡಿತ ಈ ಕೆಲಸ ಮಾಡಲು ತಾಯಿಗೆ ಬಿಡುತ್ತಿರಲ್ಲ. ಛೆ! ಎಂಥ ಪ್ರಮಾದ ನಡೆದು ಹೋಯಿತು. ಸ್ವಪ್ನದಲ್ಲೂ ನಾನೆಣಿಸದಿದ್ದ ಕಾರ್ಯ ಕಪಟಿಯೂ ಪಾಪಿಯೂ ಆದ ನನ್ನ ತಾಯಿಯಿಂದ ನಡೆದು ಹೋಯಿತಲ್ಲ. ಅವಳನ್ನು ಅಮ್ಮ ಎಂದು ಕರೆಯಲು ಹೇಸುವ ಹಾಗಾಯಿತಲ್ಲ. ಆ ದುಷ್ಟೆ ನನಗಾಗಿ ರಾಜ್ಯ ಬಯಸಿದಾಗ ನನ್ನ ಮೇಲಿನ ವಾತ್ಸಲ್ಯದಿಂದ ಸಕಲ ರಾಜ್ಯದ ಸಂಪತ್ತನ್ನು ನನಗೆಂದೇ ಬಿಟ್ಟು ಹೋಗಿರುವ ನನ್ನ ಅಣ್ಣ ಶ್ರೀರಾಮನನ್ನು ಮರೆಯಬಲ್ಲೆನೆ? ಕ್ಷಮಿಸು ತಾಯಿ ಕ್ಷಮಿಸು. ನನ್ನ ಹೆತ್ತಮ್ಮ ಅಣ್ಣನಿಗೆ ಮಾಡಿದ ಅಕ್ಷಮ್ಯ ಅಪರಾಧಕ್ಕಾಗಿ ಅವನ ತಾಯಿಯಾದ ನೀನು ನನ್ನನ್ನು ಕ್ಷಮಿಸೆಂದು ಬೇಡಿದರೆ ಕ್ಷಮಿಸಲು ಸರ್ವಥಾ ನಿನ್ನ ಮನ ಒಪ್ಪಲಾರದು. ಕ್ಷಮೆಗೆ ನಾನು ಅರ್ಹನೇ ಅಲ್ಲ. ಆದರೆ ಅಮ್ಮ, ನೀನು ಶ್ರೀರಾಮನ ಜನನಿಯಲ್ಲವೆ? ನೀನು ಇರು ಎಂದರೆ ಇರಬಲ್ಲೆನು. ಇಲ್ಲವಾದರೆ ನನಗೇಕೆ ಈ ಲೋಕ? ಇದು ನಿನ್ನ ಪಾದಸಾಕ್ಷಿಯಾಗಿಯೇ ಆಡುವ ಮಾತು. ಇದರಲ್ಲಿ ಕಪಟವಿಲ್ಲ. ಸಾಕೇತದ ರಾಜಪಟ್ಟವನ್ನು ನಾನು ಬಯಸಿದವನಲ್ಲ ತಾಯಿ. ಇದು ಶ್ರೀರಾಮನ ರಾಜ್ಯ. ನಾನವನ ಪಾದಸೇವಕ ಮಾತ್ರ. ನಾನೇ ಹೋಗಿ ಶ್ರೀರಾಮನನ್ನು ಕರೆದು ತರುತ್ತೇನೆ. ನನ್ನ ಪಾಲಿಗೆ ಈಗ ತಾಯಿ ಇದ್ದೂ ಇಲ್ಲದಂತಾಗಿದೆ. ಇನ್ನು ಮೇಲೆ ನೀನೇ ನನ್ನ ನಿಜವಾದ ತಾಯಿ. ಕ್ಷಮಿಸಿದೆನೆಂದು  ಹೇಳುವವರೆಗೆ ಈ ಪಾದಗಳನ್ನು ಬಿಡಲಾರೆನು.

ಕೌಸಲ್ಯೆ: ಕುಮಾರ, ಎದ್ದೇಳು. ನೀನು ನನ್ನ ರಾಮನಿಗೆ ಸರಿ ದೊರೆಯು ಕಂದಾ. ದುಃಖದಲ್ಲಿ ಏನೇನೊ ಎಣಿಸಿಕೊಂಡಿದ್ದೆ. ನಿನ್ನ ಕುರಿತು ಅನ್ಯಥಾ ಭಾವಿಸಿದ್ದೆ. ಮಗನೇ, ಗುಣದಲ್ಲಾಗಲಿ, ನಡತೆಯಲ್ಲಾಗಲಿ, ಮಾತಿನಲ್ಲಾಗಲಿ ಅಥವಾ ವಿದ್ಯಾಬುದ್ಧಿಗಳಲ್ಲಾಗಲಿ ನನ್ನ ಮಗನಿಗಿಂತ ನೀನೇನು ಕಡಿಮೆ? ನಿನ್ನ ಮೇಲೆ ಬಿಡು ನಿನ್ನ ತಾಯಿಯ ಮೇಲೆ ಕೂಡ ನನಗಿದ್ದ ಅಸಮಧಾನ ನಿನ್ನ ಮುಖಕಮಲ ಕಂಡಮೇಲೆ ಕರಗಿ ಹೋಯಿತು. ಅಯ್ಯೊ! ನಿನ್ನ ಈ ಬಾಡಿದ ಮುಖವೇ ನಿನ್ನ ಹೃದಯಭಾವವನ್ನು ಬಿಂಬಿಸುತ್ತದೆ. ನೀನೆಷ್ಟು ಮುಗ್ಧ. ನಿನ್ನ ಹೆತ್ತ ತಾಯಿಯನ್ನು ಹಳಿಯದಿರು ಕಂದಾ! ಅದು ನಿನಗೆ ಶ್ರೇಯಸ್ಸಲ್ಲ. ನಿನ್ನಂಥವನ ಬಾಯಿಯಲ್ಲಿ ಕೆಟ್ಟ ಮಾತು ಬರಬಾರದು ಮಗನೆ. ನಿಮ್ಮ ತೀರ್ಥರೂಪರು ಮಕ್ಕಳಿಲ್ಲದ ದುಃಖದಿಂದ ಬಹುಕಾಲ ನವೆದು, ಪುತ್ರಕಾಮೇಷ್ಟಿಯೇ ನಿಮಿತ್ತವಾಗಿ ನಿಮ್ಮೆಲ್ಲರ ಜನನಕ್ಕೆ ಕಾರಣವಾಯಿತು. ಅಂತೆಯೇ ಎಲ್ಲರೂ ಒಂದೇ ಗುಣ, ಬುದ್ಧಿಯನ್ನು ಹೊಂದಿರುವಿರಿ. ಇದು ಸಾಕೇತದ ಭಾಗ್ಯವಲ್ಲದೆ ಮತ್ತೇನು. ನಿನ್ನ ಕ್ಷಮಿಸಿದ್ದೇನೆ ಕಂದ! ಅಂತಃಪುರಕ್ಕೆ ಹೋಗಿ ನಿನ್ನ ಹೆತ್ತ ತಾಯಿಯನ್ನು ಸಂತೈಸು. ಅದು ನಿನ್ನ ಧರ್ಮ. ಧರ್ಮವನ್ನು ಎಂದೂ ಮರೆಯದಿರು.

Read Full Post »