Feeds:
ಲೇಖನಗಳು
ಟಿಪ್ಪಣಿಗಳು

Archive for the ‘ಇತ್ಯಾದಿ’ Category

ಮಾವ, ನಿಮಗೆ ೨೦೦೮ರಲ್ಲಿ ಒಂದು ಪತ್ರ ಬರೆದಿದ್ದೆ. ಆಮೇಲೆ ಈಗ ಸುದೀರ್ಘ ೭ ವರ್ಷಗಳನಂತರ ಈ ಪತ್ರ. ನಿಮ್ಮ ಕನಸು ನನಸಾದ ಈ ಘಳಿಗೆಯನ್ನು ಪತ್ರ ಬರೆದು ತಿಳಿಸಲೇಬೇಕೆಂಬ ಹಂಬಲವಾಯಿತು. ಅದಕ್ಕೆ ನನ್ನ ಸೋಮಾರಿತನವನ್ನು ಸದ್ಯಕ್ಕೆ ದೂರ ತಳ್ಳಿ ಒಡನೆಯೆ ಪತ್ರ ಬರೆಯಲು ಹೊರಟೆ! ನಿನ್ನೆ ಅಂದರೆ ೧೨-೬-೨೦೧೫ರಂದು ನಿಮ್ಮ ಕನಸು ನನಸಾದ ದಿನ ಎಂದೇ ಹೇಳಬಹುದು. ನಿಮ್ಮ ಆತ್ಮೀಯ ಸ್ನೇಹಿತರಾದ ಎಸ್. ರಾಘವೇಂದ್ರ ಭಟ್ಟ, ಕಮಲಾಕ್ಷಿಯವರು ಪ್ರತೀ ವರ್ಷ ಜೂನ್ ತಿಂಗಳಲ್ಲಿ ನಿಮ್ಮ ನೆನಪಿನಲ್ಲಿ (ಜಿ.ಟಿ. ನಾರಾಯಣರಾವ್ ನೆನಪಿನ ಸಂಗೀತ ಕಾರ್ಯಕ್ರಮ) ಸಂಗೀತ ಕಚೇರಿ ನಡೆಸುವ ಸಲುವಾಗಿ ಗಾನಭಾರತಿ ಸಂಸ್ಥೆಯಲ್ಲಿ ಪುದುವಟ್ಟು ಇಟ್ಟಿರುತ್ತಾರೆ. ನಿನ್ನೆ ಕುಮಾರಿ ಸಮನ್ವಿ ಮತ್ತು ಕುಮಾರಿ ಅರ್ಚನಾ ಎಂಬ ಇಬ್ಬರು ಮಕ್ಕಳಿಂದ ಯುಗಳ ಗಾಯನ ಏರ್ಪಾಡಾಗಿತ್ತು. ಈ ಮಕ್ಕಳ ಸಂಕ್ಷಿಪ್ತ ಪರಿಚಯ: ಸಮನ್ವಿಯ ಅಪ್ಪ ಮಣಿಪಾಲ ಮೀಡಿಯಾ ನೆಟ್ವರ್ಕಿನಲ್ಲಿ ಹಿರಿಯ ಉಪಸಂಪಾದಕ ಪಿ. ಶಂಕರನಾರಾಯಣ. ತಾಯಿ ಬಿ. ರಾಧಿಕಾ. ಸಮನ್ವಿ ಎಂಟನೆಯ ತರಗತಿಯಲ್ಲಿ ಓದುತ್ತಿದ್ದಾಳೆ. ಅವಳ ಸಂಗೀತ ಗುರುಗಳು ಉಡುಪಿಯ ವಸಂತಲಕ್ಷ್ಮೀ ಹೆಬ್ಬಾರ್ ಹಾಗೂ ಅರವಿಂದ ಹೆಬ್ಬಾರ್, ದಿ. ವಿದುಷಿ ರಂಜನಿ ಹೆಬ್ಬಾರ್, ಮತ್ತು ಚಿತ್ರವೀಣಾ ವಿದ್ವಾನ್ ಎನ್. ರವಿಕಿರಣ, ಚೆನ್ನೈ. ಈಕೆ ಉಡುಪಿ, ಬೆಂಗಳೂರು, ಚೆನ್ನೈ ಮುಂತಾದ ಕಡೆಗಳಲ್ಲಿ ಏರ್ಪಡಿಸಿದ ಸಂಗೀತ ಕಾರ್ಯಾಗಾರಗಳಲ್ಲಿ ಭಾಗವಹಿಸಿರುತ್ತಾಳೆ. ೨೦೦೧೫ರಲ್ಲಿ ಬೆಂಗಳೂರಿನ ವರ್ಲ್ಡ್ ಮ್ಯೂಸಿಕ್ ಕನ್ಸರ್ವೇಟರಿ ಸಂಸ್ಥೆ ಹಾಗೂ ಶ್ರೀ ಶಂಕರ ಟಿ.ವಿ ವಾಹಿನಿ ಜಂಟಿಯಾಗಿ ಆಯೋಜಿಸಿದ ‘ಸಂಗೀತ ಯಾತ್ರೆ’ ಕಾರ್ಯಕ್ರಮದಲ್ಲಿ ಪ್ರಥಮ ಸ್ಥಾನ ಗಳಿಸಿ ರೂ. ೫೦,೦೦೦ ನಗದು ಬಹುಮಾನ ಗಳಿಸಿರುತ್ತಾಳೆ. ಕುಮಾರಿ ಅರ್ಚಾನಾ ಹತ್ತನೆ ತರಗತಿಯಲ್ಲಿ ಓದುತ್ತಿರುವಳು. ಅವಳ ಅಪ್ಪ ಮಣಿಪಾಲ ಮೀಡಿಯಾ ನೆಟ್ವರ್ಕಿನಲ್ಲಿ ಹಿರಿಯ ಉಪಸಂಪಾದಕ ಕೆ. ಗೋವಿಂದ ಉಪಾಧ್ಯಾಯ. ಅಮ್ಮ ಶಾರದಾ ಬಿ. ಉಪಾಧ್ಯಾಯ. ಅವಳ ಸಂಗೀತ ಗುರುಗಳು ಉಡುಪಿಯ ವಸಂತಲಕ್ಷ್ಮೀ ಹೆಬ್ಬಾರ್ ಹಾಗೂ ಅರವಿಂದ ಹೆಬ್ಬಾರ್, ದಿ. ವಿದುಷಿ ರಂಜನಿ ಹೆಬ್ಬಾರ್, ವಿದುಷಿ ರಾಧಿಕಾ ಶಂಕರ್, ಮತ್ತು ಚಿತ್ರವೀಣಾ ವಿದ್ವಾನ್ ಎನ್. ರವಿಕಿರಣ, ಚೆನ್ನೈ. ಈಕೆ ಉಡುಪಿ, ಬೆಂಗಳೂರು, ಚೆನ್ನೈ ಮುಂತಾದ ಕಡೆಗಳಲ್ಲಿ ಏರ್ಪಡಿಸಿದ ಸಂಗೀತ ಕಾರ್ಯಾಗಾರಗಳಲ್ಲಿ ಭಾಗವಹಿಸಿರುತ್ತಾಳೆ. ೨೦೦೧೫ರಲ್ಲಿ ಬೆಂಗಳೂರಿನ ವರ್ಲ್ಡ್ ಮ್ಯೂಸಿಕ್ ಕನ್ಸರ್ವೇಟರಿ ಸಂಸ್ಥೆ ಹಾಗೂ ಶ್ರೀ ಶಂಕರ ಟಿ.ವಿ ವಾಹಿನಿ ಜಂಟಿಯಾಗಿ ಆಯೋಜಿಸಿದ ‘ಸಂಗೀತ ಯಾತ್ರೆ’ ಕಾರ್ಯಕ್ರಮದಲ್ಲಿ ದ್ವಿತೀಯ ಸ್ಥಾನ ಗಳಿಸಿ ರೂ. ೩೦,೦೦೦ ನಗದು ಬಹುಮಾನ ಗಳಿಸಿರುತ್ತಾಳೆ. ಇವರಿಬ್ಬರೂ ಜೊತೆಯಾಗಿ ಹಾಡಿರುವ ಸಂಗೀತ ಧ್ವನಿಸುರುಳಿಯೂ ೨೦೧೪ರಲ್ಲಿ ಪ್ರಕಟವಾಗಿದೆ. ಇನ್ನು ಸಮಾರಂಭದ ವಿವರಣೆ: ೬ಗಂಟೆ ಹತ್ತುನಿಮಿಷಕ್ಕೆ ಸರಿಯಾಗಿ ಪಕ್ಕಾವಾದ್ಯಗಾರರೊಂದಿಗೆ ಇವರೀರ್ವರೂ ವೇದಿಕೆ ಏರಿದರು. ಕೃಪಾ ಫಡಕೆ ಮಕ್ಕಳ ಪರಿಚಯ ಮಾಡಿಕೊಟ್ಟರು. ರಾಮನಾಥ ಭಟ್ಟರು (ಗೊತ್ತಾಯಿತಲ್ಲ ಯಾರೂ ಅಂತ. ನಿಮ್ಮ ಹಾಗೆಯೇ ಬಿಳಿ ಪ್ಯಾಂಟ್, ಬಿಳಿ ಅಂಗಿ ಧರಿಸುವವರು!) ನಿಮ್ಮ ವ್ಯಕ್ತಿತ್ತ್ವದ ಪರಿಚಯ (ಮುಖ್ಯವಾಗಿ ಆ ಮಕ್ಕಳಿಗೆ) ಮಾಡಿಕೊಟ್ಟರು. ಅವರು ವೇದಿಕೆ ಏರಿ ಮಾತಾಡುತ್ತ, ಜಿ.ಟಿ‌ಎನ್ ಅವರೊಡನೆ ಹೆಚ್ಚು ಒಡನಾಡಿದವರು ಇಲ್ಲಿ ಸಾಕಷ್ಟು ಜನ ಇದ್ದಾರೆ. ಅದು ಬಿಟ್ಟು ನನ್ನನ್ನೇ ಏಕೆ ಕರೆದರು ಅಂತ ಯೋಚಿಸಿದಾಗ, ಬಹುಶಃ ನಾನು ಮೈಕ್ ಮುಂದೆ ಹೆಚ್ಚು ಹೊತ್ತು ಕಳೆಯಲಿಕ್ಕಿಲ್ಲ ಎಂಬ ಭರವಸೆಯಿಂದ ಇರಬಹುದು ಎಂದರು! ಬೇರೆಯವರು ಮೈಕ್ ಮುಂದಿನಿಂದ ಸರಿಯಲಿಕ್ಕಿಲ್ಲ ಎಂದು ಪರೋಕ್ಷವಾಗಿ ಹೇಳಿದಂತಾಯಿತು! ೧೫ನಿಮಿಷ ಅವರು ನಿಮ್ಮ ವಿಶಿಷ್ಟ ಗುಣವನ್ನು, ನೆನಪನ್ನು ಹಂಚಿಕೊಂಡರು. ಜಿ. ಟಿ.ಎನ್ ಅನೇಕರಿಗೆ ಗುರುಗಳಾಗಿದ್ದವರು. ಎಷ್ಟೋ ಮಂದಿಯ ಕೈಗೆ ಲೇಖನಿ ಹಿಡಿಸಿದವರು, ಉದಾಹರಣೆಗೆ ನಾಗಲೋಟಿಮಠ, ಡಾ. ಲಕ್ಷೀನಾರಾಯಣ. ಇವರುಗಳ ಕೈಯಲ್ಲಿ ಲೇಖನಿ ಹಿಡಿಸಿದ ಸಂದರ್ಭಗಳನ್ನು ವಿವರಿಸಿದರು. (ಒಬ್ಬನೇ ಒಬ್ಬ ವ್ಯಕ್ತಿ ಮಾತ್ರ ನಿಮ್ಮ ಪಾಶದಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಆಗ ನನಗೆ ನೆನಪಾಯಿತು! ಅವರೇ ನಿಮ್ಮ ನೆಚ್ಚಿನ ಗೆಳೆಯ ರಾಘವೇಂದ್ರ ಭಟ್ಟರು! ನೀವು ಅವರಿಂದ ಲೇಖನ ಬರೆಸಲು ಎಷ್ಟೇ ಹಂಗಿಸಿದರೂ, ಬೆಂಬಿಡದೆ ಕಾಡಿದರೂ ತಟಸ್ಥವಾಗಿಯೇ ಇದ್ದು ನಿಮ್ಮ ಗೆಳೆತನವನ್ನೂ ಬಿಡದೆ ನಿಮ್ಮೊಡನೆ ಆತ್ಮೀಯವಾಗಿ ಒಂದೇ ಮನೆಯವರಂತೆಯೇ ಇದ್ದವರು ಅವರು. ಈಗಲೂ ನಮ್ಮೊಂದಿಗೆ ಅಷ್ಟೇ ಆಪ್ತವಾಗಿದ್ದಾರೆ. ಆದರೆ ಅವರು ಲೇಖನಿ ಹಿಡಿಯದೆ ಸಾರಸ್ವತಲೋಕಕ್ಕೆ ನಷ್ಟ ಮಾಡಿದರೆಂದೇ ಹೇಳಲು ಇಚ್ಛಿಸುವೆ.) ಆರುವರೆ ಗಂಟೆಗೆ ಸರಿಯಾಗಿ ಸಮನ್ವಿ, ಅರ್ಚನಾ ಯುಗಳ ಗಾಯನ ಕಚೇರಿ ಪ್ರಾರಂಭಗೊಂಡಿತು. ‘ವನಜಾಕ್ಷಿ ನಿನ್ನು ಕೋರಿ’, ‘ಪ್ರಣವಾಕಾರಂ ಸಿದ್ಧಿವಿನಾಯಕಂ’- ರಾಗ ಆರಭಿ, ತ್ಯಾಗರಾಜಯೋಗವೈಭವಂ- ರಾಗ ಆನಂದಭೈರವಿ, ತಾಳ ರೂಪಕ, ರಚನೆ ಮುತ್ತುಸ್ವಾಮಿ ದೀಕ್ಷಿತರು, ‘ಸದಾ ಸಾರಂಗನಯನಂ’- ರಾಗ ರಂಜನಿ, ತಾಳ- ಆದಿ, ‘ತಿಳಿಯಲೇರು ರಾಮ’- ರಾಗ ಧೇನುಕ, ರಚನೆ ತ್ಯಾಗರಾಜರು, ‘ಹೀಗಿರಬೇಕು ಸಂಸಾರದಲಿ’- ಆದಿತಾಳ, ರಚನೆ ಪುರಂದರದಾಸ, ‘ನುಡಿದರೆ ಮುತ್ತಿನ ಹಾರದಂತಿರಬೇಕು’- ಹಿಂದೂಸ್ತಾನಿ ರಾಗ, ‘ತಿಲ್ಲಾನ’- ರಾಗ ರೀತಿಗೌಳ, ಪವಮಾನ ಹಾಡಿನೊಂದಿಗೆ ಸಮರ್ಥ ಪಕ್ಕಾವಾದ್ಯಗಳೊಂದಿಗೆ (ಮೃದಂಗ- ಪಿ.ಎಸ್. ಶ್ರೀಧರ, ಪಿಟೀಲು- ಎಚ್.ಎಸ್. ತಾಂಡವಮೂರ್ತಿ, ಮೋರ್ಚಿಂಗ್- ಶಾಮ್) ಕಚೇರಿ ಮುಕ್ತಾಯವಾಯಿತು. (ಈ ವಿವರಗಳನ್ನು ಬರೆದುಕೊಟ್ಟವಳು ನನ್ನಣ್ಣ ಸತೀಶನ ಮಗಳು ಅನೂಷಾ ಭಾರತಿ. ಅವಳನ್ನು ಕಚೇರಿಗೆ ಕರೆದುಕೊಂಡು ಹೋಗಿ, ಸಂಗೀತ ಕಲಿಯುವವರು ಸಂಗೀತ ಕೇಳಬೇಕು ಎಂದು ನಿಮ್ಮ ಪರವಾಗಿ ಅವಳಿಗೆ ಪುಟ್ಟ ಭಾಷಣ ಕೊಟ್ಟಿದ್ದೆ!) ಈ ಮಕ್ಕಳು ವೇದಿಕೆ ಏರಿ ಕುಳಿತು ಹಾಡಲು ತೊಡಗಿದಾಗ ಅವರ ಕಿವಿಯೋಲೆ ಜುಮುಕಿ ಅಲುಗಾಟ ಕಂಡು ನೀವು ಮೊಮ್ಮಗಳು ಅಕ್ಷರಿಗೆ ಹೇಳಿದ್ದ ಮಾತು ನೆನಪಿಗೆ ಬಂತು. ನೀನು ಗಾನಭಾರತಿ ವೇದಿಕೆಯಲ್ಲಿ ಹಾಡಬೇಕು. ಹಾಡು ಕೇಳುತ್ತ, ಆಗ ನಿನ್ನ ಜುಮುಕಿ ಅಲುಗಾಟವನ್ನು ನಾನು ನೋಡಬೇಕು ಎಂದಿದ್ದಿರಿ. ನಿಮಗೆ ನೆನಪಾಯಿತ? ಆ ನಿಮ್ಮ ಕನಸು ಈ ಮಕ್ಕಳ ಮೂಲಕ (ಅದೂ ಗಾನಭಾರತಿ ವೇದಿಕೆಯಲ್ಲೇ ನಡೆದು) ನೆರವೇರಿತೆಂದುಕೊಂಡಿದ್ದೇನೆ..  ಮಕ್ಕಳಿಗೆ ಸಮರ್ಥವಾಗಿ ಸಂಗೀತ ಶಿಕ್ಷಣವಾಗಿದೆ. ಈ ಸಮಯದಲ್ಲಿ ಅವರ ಗುರುಗಳನ್ನು ಮೆಚ್ಚಲೇಬೇಕು. ವೇದಿಕೆಯಲ್ಲಿ ಪುಸ್ತಕ ನೋಡುತ್ತ ಹಾಡಬಾರದು ಎಂದು ನೀವು ಹೇಳುತ್ತಿದ್ದಿರಲ್ಲ. ಇಲ್ಲಿ ಈ ಮಕ್ಕಳು ಆ ತಪ್ಪು ಮಾಡಲಿಲ್ಲ.

DSCN4345 DSCN4332 DSCN4338

DSCN4340 ಸುಮಾರು ೧೦೦ ಮಂದಿ ಸಭಿಕರು ಇದ್ದರು. (ಈಗ ಸಂಗೀತ ಕಛೇರಿಗಳಿಗೆ ಕೇಳುಗ ಪ್ರೇಕ್ಷಕರ ಕೊರತೆಯಂತೆ. ಹೆಚ್ಚಿನಮಂದಿಯೂ ನನ್ನಂತೆ ಸಂಗೀತವಿದೂರರು ಇರಬಹುದೆ ಎಂದು ಭಾವಿಸಿದೆ!) ನಾನೂ ಕೂತು ಸಂಗೀತ ಕೇಳಿದ ಸಂಗತಿಯನ್ನು ಪ್ರಪಂಚದ ಒಂಭತ್ತನೆ ಅದ್ಭುತ ಎಂದು ಪರಿಗಣಿಸಬಹುದು! ಕೆಲವು ಸಭಿಕರು ದೊಡ್ಡದಾಗಿ ಮಾತಾಡುವುದು ಕಂಡಾಗ, ನೀವಿದ್ದಿದ್ದರೆ ಮಾತಾಡಬೇಡಿ ಎಂದು ಅವರಿಗೆ ಗದರಿಸುತ್ತಿದ್ದಿರಿ. ನಾನು ಅವರತ್ತ ಕಣ್ಣಲ್ಲೇ ಗುರಾಯಿಸಿ ತೃಪ್ತಿಪಟ್ಟೆ! ನಾನು ಸಂಗೀತ ಆಲಿಸುತ್ತಲೇ ಶೋತೃಗಳು ಯಾರ್ಯಾರು ಹೇಗೆ ತಾಳ ಹಾಕುತ್ತಾರೆ, ತಲೆ ಎಷ್ಟು ಅಲುಗಾಡಿಸುತ್ತಾರೆ, ಯಾರು ತೂಕಡಿಸುತ್ತಾರೆ ಎಂದು ನೋಡುತ್ತ ಆನಂದಪಟ್ಟೆ! ಬೆಳೆಯುವ ಪ್ರತಿಭೆಗಳಿಗೆ ಗಾನಭಾರತಿ ವೇದಿಕೆ ಕಲ್ಪಿಸಿಕೊಟ್ಟದ್ದು ನಿಮಗೆ ಬಲು ಖುಷಿಯ ವಿಚಾರ. ನಮಗೆಲ್ಲರಿಗೂ ಕೂಡ ಆನಂದವಾಗಿದೆ. ನಿಮ್ಮ ನೆನಪಿನಲ್ಲಿ ನಡೆದ ಈ ಗಾಯನ ಕಚೇರಿ ಪೂರ್ಣ ಯಶಸ್ವಿಗೊಂಡಿತು.

Read Full Post »

ಅಂದ ಹಾಗೆ ತೆಂಗಿನ ಮರ ಕಲ್ಪವೃಕ್ಷ ಅನ್ನುವುದು ತಪ್ಪು ಕಲ್ಪನೆ. ಭಾರತಕ್ಕೆ ಆಫ್ರಿಕಾದಿಂದ ಆಮದಾದ Adansonia digitata ಎಂಬ ಇನ್ನೊಂದು ಮರ ಇದೆ. ಇದು ಕಲ್ಪವೃಕ್ಷ. ಅಂತರ್ಜಾಲದಲ್ಲಿ ಗೂಗಲ್ ಸರ್ಚ್ ಮಾಡಿದರೆ ವಿಪುಲ ಮಾಹಿತಿ, ಫೋಟೋ ದೊರೆಯತ್ತದೆ.
ಕಲ್ಪವೃಕ್ಷ ಕಡಿದ ಪ್ರಸಂಗ (ನೋಡಿ  http://wp.me/poV7D-ak ) ಎಂಬ ಲೇಖನಕ್ಕೆ ಪ್ರತಿಕ್ರಿಯೆಯಾಗಿ ಮೇಲಿನ ಈ ವಾಕ್ಯ ಕಳಿಸಿದವರು ಎ.ವಿ. ಗೋವಿಂದರಾಯರು.

Adansonia digitata ಮಾಹಿತಿ ಚೆನ್ನಾಗಿದೆ. ಆಫ್ರಿಕಾದಿಂದ ಬಂದ ಮರ, ಸಧ್ಯಕ್ಕೆ ನಮಗೆ ಕಾಣಲೂ ಸಿಗದೆ ಇರುವ ಕಾರಣ, ಈಗ ತೆಂಗಿಗೇ ಕಲ್ಪವೃಕ್ಷದ ದರ್ಜೆ ನೀಡುವುದು ಉಚಿತವಲ್ಲವೇ? ಹೀಗೆ ಪ್ರತಿಕ್ರಿಯಿಸಿದವಳು ಸಿಂಧೂ. ಅವಳ ಮಾತಿಗೇ ನನ್ನ ಸಹಮತ.

       ಅದೇನೇ ಇರಲಿ. ಕಲ್ಪವೃಕ್ಷ ಎಂದೊಡನೆ ನಮಗೆ ತಟ್ಟನೆ ನೆನಪಿಗೆ ಬರುವುದು ತೆಂಗಿನಮರ ಎಂದೇ. ಗೂಗಲಿನಲ್ಲೇ ಏನೇ ಮಾಹಿತಿ ಇರಲಿ. ಆದರೆ ಕಲ್ಪವೃಕ್ಷ ಅಂದರೆ ತೆಂಗಿನಮರವೇ ಸರಿ. ತೆಂಗಿನಮರದಿಂದ ಏನೆಲ ಉಪಯೋಗ ಎಂದು ನೋಡೋಣ:
ತೆಂಗಿನ ಮಡಲಿನಿಂದ ಕಸ ಗುಡಿಸಲು ಪೊರಕೆ, ಉರುವಲಾಗಿ, ಚಪ್ಪರ ಹಾಕಲು, ಸೂಟೆಯಾಗಿ, ಯಾವುದಿಲ್ಲದೆ ಇದ್ದರೂ ಗೊಬ್ಬರವಾಗಿ ಬಳಸುತ್ತೇವೆ. ತೆಂಗು ಎಳೆಯದಾಗಿದ್ದಾಗ ಏಳನೀರು, ಬಲಿತರೆ ತೆಂಗಿನಕಾಯಿ, ಒಣಗಿದರೆ ಕೊಬ್ಬರಿಯಾಗಿ ಉಪಯೋಗ. ತೆಂಗು ಇಲ್ಲದೆ ಅಡುಗೆಗೆ ರುಚಿ ಇಲ್ಲ. ಚಟ್ನಿ, ಸಾಂಬಾರ್, ಮಜ್ಜಿಗೆಹುಳಿ, ಪಾಯಸ ಇತ್ಯಾದಿ ಮಾಡಲು ತೆಂಗು ಅವಶ್ಯಕ. ಕೊಬ್ಬರಿಯಿಂದ  ಎಣ್ಣೆ ಸಿಗುತ್ತದೆ. ಮಳೆಗಾಲದಲ್ಲಿ ಹಲಸಿನ ಹಪ್ಪಳ ಸುಟ್ಟು ಅದಕ್ಕೆ ತೆಂಗಿನ ಎಣ್ಣೆ ಸವರಿ ಅದನ್ನು ತಿನ್ನುತ್ತ ಮಳೆ ನೋಡುತ್ತಿದ್ದರೆ ಸಿಗುವ ಆನಂದವನ್ನು ಇಲ್ಲಿ ವರ್ಣಿಸಲು ಅಸಾಧ್ಯ! ತೆಂಗಿನೆಣ್ಣೆಯಲ್ಲಿ ಹಪ್ಪಳ ಹುರಿದರೂ ರುಚಿ ಆಗುತ್ತದೆ. ಇಂಗು ತೆಂಗು ಇದ್ದರೆ ಮಂಗು ಕೂಡ ಅಡುಗೆ ಮಾಡುತ್ತದೆ ಎಂಬ ನಾಣ್ನುಡಿ ಇದೆ.
ತೆಂಗಿನ ಕೊತ್ತಳಿಗೆ ನೀರು ಕಾಯಿಸಲು ಉರುವಲಾಗಿ ಬಳಕೆಯಾಗುತ್ತದೆ. ನಾವು ಚಿಕ್ಕವರಾಗಿದ್ದಾಗ ಕೊತ್ತಳಿಗೆಯೇ ನಮಗೆ ಕ್ರಿಕೆಟ್ ಆಡಲು ಬ್ಯಾಟ್ ಆಗಿ ಉಪಯೋಗಿಯಾಗಿತ್ತು.  ತೆಂಗಿನ ಸಿಪ್ಪೆ ಉರುವಲಿಗಾಗಿ, ಚಾಪೆ, ಕಾಲೊರಸು ಇತ್ಯಾದಿ ಉಪಯೋಗ. ಕರಟದಿಂದ ಎಣ್ಣೆ (ಇದು ಚರ್ಮರೋಗಕ್ಕೆ ರಾಮಬಾಣ), ಇದ್ದಿಲು, (ಸಾರು ಅಡಿ ಹಿಡಿಯದೆ ಇರಲು ಸಾರಿನೊಳಗೆ ಕರಟ ಹಾಕುವುದನ್ನು ನೋಡಿದ್ದೇನೆ.), ನೀರೊಲೆಗೆ ಉರುವಲಾಗಿ ಉಪಯೋಗವಾಗುವುದನ್ನು ಕಾಣಬಹುದು. ಇನ್ನು ಒಂದು ತೆಂಗಿನಮರ ಸತ್ತರೆ ಅದರಿಂದ ಪಕಾಸು, ಸೌದೆಯಾಗಿ ಉಪಯೋಗವಿದೆ. ಸಸಿ ನೆಡಲು ಕೂಡ ಬಳಸುವುದನ್ನು ಕಾಣಬಹುದು. ತೆಂಗಿನ ಎಲ್ಲ ತ್ಯಾಜ್ಯಗಳೂ ಉರುವಲಾಗಿ ಬಳಕೆಯಾಗುತ್ತದೆ.
ಹಾಗಾಗಿ ಸದ್ಯಕ್ಕೆ ತೆಂಗಿನಮರವೇ ನಮಗೆ ಕಲ್ಪವೃಕ್ಷವಾಗಿರಲಿ. ಬೇರೆ ಮರ ಏನಿದ್ದರೂ ಅದು ಆಫ್ರಿಕನ್ನರಿಗೆ ಮೀಸಲಾಗಿರಲಿ. ಕಲ್ಪವೃಕ್ಷದಿಂದ ಏನೆಲ್ಲ ಉಪಯೋಗಗಳನ್ನು (ಇನ್ನೂ ಹಲವು ಉಪಯೋಗಗಳು ಇರಬಹುದು. ನನ್ನ ಗಮನಕ್ಕೆ ಬಂದ, ನೆನಪಿಗೆ ಬಂದದ್ದನ್ನು ಇಲ್ಲಿ ದಾಖಲಿಸಿದ್ದೇನಷ್ಟೆ.) ನಾವು ಪಡೆಯುತ್ತೇವೆ ಎಂದು ನೆನಪು ಮಾಡಲು ಅವಕಾಶ ಒದಗಿಸಿದ  ಗೋವಿಂದರಾಯರಿಗೆ ವಂದನೆಗಳು.

tengina marada upayogadalli idu seride.     thengu   gariyalli hakki

Read Full Post »

ಇವತ್ತು  ನಮ್ಮ ಮಾವ (ಜಿ.ಟಿ. ನಾರಾಯಣ ರಾವ್ ೧೯೨೬-೨೦೦೮)ಅವರ ಜನ್ಮ ದಿನ. ಅವರು ಇರುತ್ತಿದ್ದರೆ ಅವರಿಗೆ ೮೬ ಪ್ರಾಯವಾಗುತ್ತಿತ್ತು.   ೨೦೦೬ನೇ ಇಸವಿಯಲ್ಲಿ ಸುಕನ್ಯಾ ಪ್ರಭಾಕರ್ ಅವರು ಕೇಳಿದ   ಪ್ರ ಶ್ನೆಗಳಿಗೆ ಅವರಿತ್ತ ಉತ್ತರವನ್ನಿಲ್ಲಿ ಹಾಕಿದ್ದೇನೆ.

 ಡಾ.ಸುಕನ್ಯಾಪ್ರಭಾಕರ್ ಅವರು ಎತ್ತಿರುವ ಪ್ರಶ್ನೆಗಳಿಗೆ ವಿವರಣೆ

೧. ಸಂಗೀತ ವಿಮರ್ಶಾಕ್ಷೇತ್ರವನ್ನು ಆಯ್ದುಕೊಂಡ ಉದ್ದೇಶ?
ನಾನೊಬ್ಬ ಸಂಗೀತ ರಸಿಕ, ಎಂದೂ ವಿಮರ್ಶಕನಲ್ಲ. ಅಧ್ಯಯನಲಭ್ಯ ಶಾಸ್ತ್ರಜ್ಞಾನ ಇರುವಾತ ಮಾತ್ರ ವಿಮರ್ಶಕನಾಗಬಲ್ಲ, ನನಗೆ ಅದು ಇಲ್ಲ. ಆದರೆ ಹುಟ್ಟಿನಿಂದಲೇ (೧೯೨೬) ಸಂಗೀತಶ್ರವಣಾನುಭವ ಸಮೃದ್ಧವಾಗಿದೆ. ನಡೆದುಬಂದಿರುವ ಹಾದಿಯನ್ನು ವರ್ತಮಾನದ (೨೦೦೬) ಅನುಕೂಲ ಮಂಚಿಕೆಯಿಂದ ಸಿಂಹಾವಲೋಕಿಸಿದಾಗ “ಸಂಗೀತವೆನ್ನುಸಿರು, ಸಾಹಿತ್ಯವೆನ್ನೊಡಲು, ವಿಜ್ಞಾನವೆನ್ನಶನ” ಎಂಬ ಸರಳ ಸೂತ್ರ ನನ್ನ ಬದುಕನ್ನು ನಿಯಂತ್ರಿಸುತ್ತಿದೆಯೆಂದು ಅನ್ನಿಸುತ್ತದೆ. ಗಣಿತವಿದ್ಯಾರ್ಥಿಯಾಗಿರುವ ನಾನು ತೀರ ಸಹಜವಾಗಿ ನನ್ನದೇ ವಿಮರ್ಶಾಮಾನಕಗಳನ್ನು ಕೇಳ್ಮೆಯ ಅನುಭವದಿಂದ ರೂಪಿಸಿಕೊಂಡಿದ್ದೇನೆ.
೧೯೬೫ರ ಸುಮಾರಿಗೆ ಬೆಂಗಳೂರಿನಲ್ಲಿ ನಡೆದ ಒಂದು ಕಛೇರಿ: ಆರ್.ಕೆ.ಶ್ರೀಕಂಠನ್, ಲಾಲ್ಗುಡಿ ಜಿ.ಜಯರಾಮನ್ ಮತ್ತು ಉಮಯಾಳ್ಪುರಮ್ ಕೆ.ಶಿವರಾಮನ್. ಶ್ರೀಕಂಠನ್-ಕಛೇರಿಯನ್ನು ಅದೇ ಮೊದಲ ಬಾರಿಗೆ ಆಲಿಸಿದ ನಾನು ಅದು ಹಿಂದೆ ಮದ್ರಾಸಿನಲ್ಲಿ ಕೇಳಿದ್ದ ಜಿ‌ಎನ್‌ಬಿ-ಚೌಡಯ್ಯ-ಮಣಿ ಬೈಠಕ್ಕಿನ ಮಟ್ಟದಲ್ಲೇ ಇತ್ತೆಂದು ತುಂಬ ಖುಷಿಪಟ್ಟೆ, ಅಭಿಮಾನ ತಳೆದೆ ಕೂಡ. ಆದರೆ ಮುಂಚೂಣಿ ದೈನಿಕವೊಂದರಲ್ಲಿ ಮರುವಾರ ಪ್ರಕಟವಾದ ಅಧಿಕೃತ ವಿಮರ್ಶೆ ತೀರ ಅವಹೇಳನಕಾರಿಯಾಗಿತ್ತು ಮಾತ್ರವಲ್ಲ, ಶ್ರೀಕಂಠನ್ ಹಾಡದಿದ್ದ ರಾಗ ಕೃತಿಗಳನ್ನು ಕೂಡ ಅದರಲ್ಲಿ ಪ್ರಸ್ತಾವಿಸಲಾಗಿತ್ತು! ಈ ವಿಮರ್ಶಕ ಪೂರ್ವಗ್ರಹಪೀಡಿತ ಮತ್ತು ಕಛೇರಿಗೆ ಹಾಜರಾಗದೆ ವಿಮರ್ಶೆ ಹೊಸೆದಿದ್ದಾನೆಂಬುದು ಸ್ಪಷ್ಟವಾಯಿತು. ಅದನ್ನು ನಯವಾಗಿ ನಿರಾಕರಿಸಿ ನನ್ನ ಭಾವನೆಯನ್ನು ಸ್ಪಷ್ಟವಾಗಿ ಬರೆದು ಅದೇ ಪತ್ರಿಕೆಗೆ ಕಳಿಸಿದೆ. ಅದು ಪ್ರಕಟವಾದಾಗ ನನಗೆ ಅನಿರೀಕ್ಷಿತವಾಗಿ ಮತ್ತು ಅಯಾಚಿತವಾಗಿ `ವಿಮರ್ಶಕ’ ಪಟ್ಟ ದೊರೆಯಿತು!
ಮುಂದೆ ೧೯೬೯ರಲ್ಲಿ ವೃತ್ತಿನಿಮಿತ್ತ (ವಿಜ್ಞಾನ ಸಂಪಾದಕ, ಕನ್ನಡ ವಿಶ್ವಕೋಶ, ಮೈಸೂರು ವಿಶ್ವವಿದ್ಯಾನಿಲಯ) ಮೈಸೂರಿಗೆ ಬಂದು ಇಲ್ಲಿಯ ಒಬ್ಬ ಶಾಶ್ವತ ನಿವಾಸಿಯಾದೆ, ಮತ್ತು ಇಲ್ಲಿಯ ಸಂಗೀತ ಸಭೆಗಳಿಗೆ ಸ್ವಂತಾಸಕ್ತಿಯಿಂದ ಸೇವೆ ಸಲ್ಲಿಸಲು ಕೂಡ ಮುಂದಾದೆ. ೧೯೭೮ರಲ್ಲಿ Star of Mysore ಹೆಸರಿನ ಇಂಗ್ಲಿಷ್ ದೈನಿಕ ಪ್ರಾರಂಭವಾಯಿತು. ಇದರ ಸಂಪಾದಕವರ್ಗದವರು ನನ್ನೂರಾದ ಕೊಡಗಿನವರು. ಅವರ ಪ್ರೀತಿಯ ಒತ್ತಾಯದ ಮೇರೆಗೆ, ಅದೇ ಹಿಂದಿನ ವಾರ ಮೈಸೂರಿನಲ್ಲಿ ನಡೆದ, ಸಂಗೀತ ಕಾರ್ಯಕ್ರಮಗಳ ಬಗ್ಗೆ ಟಿಪ್ಪಣಿಗಳನ್ನು ಬರೆಯಲಾರಂಭಿಸಿದೆ (೧೯೮೦ರ ದಶಕ). ಇತ್ತ ೧೯೭೮ರಲ್ಲಿ ಗಾನಭಾರತೀ (ರಿ) ಸಂಸ್ಥೆಯೂ ರಂಗಪ್ರವೇಶಿಸಿತು. ೧೯೮೦ರಲ್ಲಿ ನನ್ನನ್ನು ಇದರ ಕಾರ್ಯನಿರ್ವಾಹಕ ಸಮಿತಿಯ ಒಬ್ಬ ಸದಸ್ಯನಾಗಿ ಆಯ್ಕೆ ಮಾಡಿದರು. ಆ ಬಳಿಕ ನನ್ನ ಸಂಗೀತಟಿಪ್ಪಣಿಗಳು ಇನ್ನಷ್ಟು ಕ್ರಮಬದ್ಧವಾಗಿ ನಾಡಿನ ಇತರ ಕೆಲವು ಪತ್ರಿಕೆಗಳಲ್ಲಿ ಕೂಡ ಪ್ರಕಟವಾಗಲು ತೊಡಗಿದುವು.
೧೯೯೨ರಿಂದ ಮುಂದಿನ ಆರೇಳು ವರ್ಷ The Hindu ದೈನಿಕಕ್ಕೂ (ಅದರ ಸಂಪಾದಕರ ಕೋರಿಕೆ ಮೇರೆಗೆ) ಬರೆಯುತ್ತಿದ್ದೆ. ಕಲಾನಿಷ್ಠೆ, ಶ್ರವಣಾನುಭವ ಮತ್ತು ಕಲಾವಿದರ ಬಗ್ಗೆ ಗೌರವ ಇವಿಷ್ಟು ಮಾತ್ರ ನನ್ನ ಬರೆಹಗಳ ತಳಪಾಯ. ಆದ್ದರಿಂದ ಈ ಪ್ರಶ್ನೆಗೆ ಉತ್ತರ, “ವಿಮರ್ಶಾಕ್ಷೇತ್ರ ನನ್ನ ಇಚ್ಛಾಪೂರ್ವಕ ಆಯ್ಕೆ ಅಲ್ಲ, ನನ್ನ ಅಸಂಖ್ಯ ಆಸಕ್ತಿಗಳ ಅನುಶೀಲನೆಯಲ್ಲಿ ಅದು ತಂತಾನೇ ಮೈದಳೆದಿದೆ, ಅಷ್ಟೆ. ಕಲಾಭಿವೃದ್ಧಿಗೆ ಅದರಿಂದ ತುಸುವಾದರೂ ಪ್ರಯೋಜನವಾಗಲಿ ಎಂಬುದೊಂದೇ ಉದ್ದೇಶ.”
೨. ಸೃಜನಾತ್ಮಕ ಕಲೆಯ ಅಭಿವೃದ್ಧಿಗೆ ವಿಮರ್ಶೆಯ ಅಗತ್ಯ ಎಷ್ಟರ ಮಟ್ಟಿಗಿದೆ?
ನಾವಿಂದು ಪ್ರಚಾರಯುಗದಲ್ಲಿದ್ದೇವೆ. ಅಸಂಖ್ಯ ಮಾಧ್ಯಮಗಳ ಮೂಲಕ ಕಲೆಗೆ ಪ್ರಚಾರ ಮತ್ತು ಪ್ರೋತ್ಸಾಹ ದೊರೆಯುತ್ತಿವೆ. ಜೊತೆಯಲ್ಲೇ ಕಲಾಪ್ರಪಂಚ ಅನೇಕ ಯುವ ಪ್ರತಿಭೆಗಳನ್ನು ತನ್ನತ್ತ ಆಕರ್ಷಿಸುತ್ತಲೂ ಇದೆ. ಇಂಥಲ್ಲಿ ಖಂಡಿತವಾಗಿಯೂ ಸಹೃದಯ ವಿಮರ್ಶೆ (ಅಥವಾ ವರದಿ) ಅವರ, ಮುಖ್ಯವಾಗಿ ಯುವ ಕಲಾವಿದರ,  ಪುರೋಭಿವೃದ್ಧಿಗೆ ಸಹಾಯಕವಾಗುತ್ತದೆ. ಇಲ್ಲಿ ವೃಥಾ ಪ್ರಶಂಸೆ ಸಲ್ಲ, ಪೂರ್ವಗ್ರಹಪೀಡಿತ ತಿರಸ್ಕಾರ ಖಾತ್ರಿ ಮಾರಕ. ಎಂದೇ ಸಹೃದಯ ವಿಮರ್ಶೆ ಎಂಬ ಪದ ಬಳಸಿದ್ದೇನೆ.

೩. ವಿಜ್ಞಾನ ಮತ್ತು ಸಂಗೀತ ಪರಸ್ಪರ ಸಂಬಂಧವಿದೆಯೇ?

ಭೌತವಿಶ್ವದ ಜೊತೆ ಮಾನವನ ಕುತೂಹಲಭರಿತ ಮತಿ ಕಾರ್ಯ-ಕಾರಣ ಪಾತಳಿಯಲ್ಲಿ ವೀಕ್ಷಣೆ, ಪ್ರಯೋಗ, ತರ್ಕ ಮುಂತಾದ ಪರಿಕರಗಳ ಸಹಿತ ವ್ಯವಹರಿಸಿದಾಗ ಮಿನುಗುವ ಅರಿವೇ ವಿಜ್ಞಾನ.  ಇದು ಮಾನವನಿಗೆ ಭೌತವಿಶ್ವದ ವರ್ತನೆ ಕುರಿತ ನಿಯಮಗಳನ್ನು ತುಸು ತುಸುವೇ ತಿಳಿಯಲು ನೆರವಾಗುತ್ತದೆ. ಪರಿಣಾಮವಾಗಿ ತಂತ್ರವಿದ್ಯೆ (technology) ರೂಪುಗೊಂಡು ನಮ್ಮ ಬದುಕಿಗೆ ಊಹಾತೀತ ಸೌಕರ್ಯಗಳನ್ನು ಒದಗಿಸುತ್ತಿದೆ. ವಿಜ್ಞಾನ ಮತ್ತು ತಂತ್ರವಿದ್ಯೆ ಮೂರ್ತ ಜಗತ್ತಿನೊಂದಿಗಿನ ವ್ಯವಹಾರ, ಬಹುತೇಕ ಇದು ಬುದ್ಧಿಗೆ (ಮಿದುಳು) ಮೀಸಲಾದ ಕ್ಷೇತ್ರ. ಆದರೆ ಮಾನವನಿಗೆ ಭಾವವೂ (ಹೃದಯ) ಇದೆ. ಋಜು ಸಂತೃಪ್ತ ಜೀವನವೊಂದು ಭಾವಬುದ್ಧಿಗಳ ಮಧುರ ಸಂಗಮ. ಎಂದೇ ಭಾವರಹಿತ ಬುದ್ಧಿ ಶುಷ್ಕ, ಬುದ್ಧಿರಹಿತ ಭಾವ ಬಂಜೆ. “ಭಾವವಿಲ್ಲದ ಭಕುತಿ ಕುಹಕ ಯುಕುತಿ” ಎಂಬ ದಾಸವಾಣಿಯನ್ನು ಗಮನಿಸಬೇಕು. ಆದ್ದರಿಂದ ವಿಜ್ಞಾನ-ಕಲೆ ಜೀವನನಾಣ್ಯದ ಎರಡು ಮುಖಗಳು.

೪ ಕಲ್ಪನಾಪ್ರಪಂಚದಲ್ಲಿ ವಾಸ್ತವತೆಯ ಅನ್ವೇಷಣೆ ಸಾಧ್ಯವೇ?
ಒಂದಿಲ್ಲದೆ ಇನ್ನೊದಿಲ್ಲ. ಕಲ್ಪನೆ ಮಾನವನಿಗೊಂದು ನಿಸರ್ಗದತ್ತ ವರ. ಆದರೆ ಇದಕ್ಕೆ ಭೌತ ಅಸ್ತುತ್ವವಿಲ್ಲ. ಚಂದ್ರನನ್ನು ನೋಡಿದ ಶಿಶುರಾಮ ತನಗೆ ಅದನ್ನು ತಂದುಕೊಡೆಂದು ತಾಯಿ ಕೌಸಲ್ಯೆಯನ್ನು ಆಗ್ರಹಿಸಿದಾಗ ಅಥವಾ ಸಿಂಹದ ಮರಿ ಎಂದೂ ಕುರಿ ಆಗದೆಂದು ವೀರನೊಬ್ಬ ಗರ್ಜಿಸಿದಾಗ ಆಯಾ ವ್ಯಕ್ತಿಗಳಲ್ಲಿ ಮಿಡಿಯುತ್ತಿದ್ದುದು ಕಲ್ಪನೆ. ಈ ಕಲ್ಪನೆಗಳನ್ನು ವಾಸ್ತವವಾಗಿಸುವಲ್ಲಿ ಮಾನವ ವ್ಯವಸ್ಥಿತವಾಗಿ ಮಾಡಿದ ಪ್ರಯತ್ನಗಳ ಫಲವೇ ೨೦ನೆಯ ಶತಮಾನದಲ್ಲಿ ಮಾನವ ಸಾಧಿಸಿದ ಆಕಾಶಯಾನ(space travel) ಮತ್ತು ತಳಿಸಂಕೇತದ ಆವಿಷ್ಕಾರ(space travel) ). ಹೀಗೆ, ಗುರಿ ಕಾಣಿಸುವುದು ಕಲ್ಪನೆ, ಅಡರೆಡೆಗಿನ ಹಾದಿ ರೂಪಿಸುವುದು ವಾಸ್ತವತೆ. ಗುರಿ ಇರದ ದಾರಿ ವ್ಯರ್ಥ ಅಲೆತ, ದಾರಿ ಇರದ ಗುರಿ ಅಸ್ತಿತ್ವರಹಿತ! ಆದ್ದರಿಂದ ಈ ಪ್ರಶ್ನೆಗೆ ಉತ್ತರ: ಸಾಧ್ಯ, ಅಷ್ಟೇ ಅಲ್ಲ, ಅನಿವಾರ್ಯ ಕೂಡ.

೫. ಇಂದಿನ ಯುವಪೀಳಿಗೆಗೆ ಕಿವಿಮಾತು ಏನು?
ದಾಸರ ಜೊತೆ ದನಿಗೂಡಿಸುತ್ತೇನೆ, “ಮಾನವ ಜನುಮ ದೊಡ್ಡದು, ಇದರ ಹಾನಿ ಮಾಡಿಕೊಳ್ಳಲು ಬ್ಯಾಡಿ ಹುಚ್ಚಪ್ಪಗಳಿರಾ.” ಇಂದು ಯುವಕ ಯುವತಿಯರೆದುರು ಎಣಿಕೆಗೆ ನಿಲುಕದಷ್ಟು ಅವಕಾಶಗಳು ಅಂತೆಯೇ ಆಮಿಷಗಳು ಕೂಡ ತೆರೆದುಕೊಂಡಿವೆ. ಸ್ವಂತ ಆಸಕ್ತಿಯನ್ನು ಅವರು ಕಂಡುಕೊಂಡು ಅದರ ಅನುಶೀಲನೆಯಲ್ಲಿ ಪೂರ್ಣಮಗ್ನರಾಗಬೇಕು. ಅದು ಸಾಹಿತ್ಯ, ಮಾನವಿಕ, ವಿಜ್ಞಾನ, ಕಲೆ ಮುಂತಾದ ಯಾವುದೇ ವಲಯವಾಗಬಹುದು. ಮುಖ್ಯವಾಗಿ ಇದು ಜೀವನನಿರ್ವಹಣೆಯ ಪ್ರಶ್ನೆ. ಇದರೊಂದಿಗೆ ಹವ್ಯಾಸವಾಗಿ ಕಲೆಯಲ್ಲಿಯೂ (ಕಲಾವಿದನಾದರೆ ಸಾಹಿತ್ಯ, ಜನಪ್ರಿಯವಿಜ್ಞಾನ ಇತ್ಯಾದಿಗಳಲ್ಲಿ) ಆತ ಪ್ರೀತಿ ಬೆಳೆಸಿಕೊಳ್ಳಬೇಕು. ಹಲವಾರು ಚಾಣಗಳ ಹೊಡೆತದ ಹೊರತು ಪ್ರತಿಮೆ ಸುಂದರವಾಗದು!

೬. ಸಂಗೀತ ಕಛೇರಿಯಲ್ಲಿ ಕೃತಿ ಆಲಿಸಿದಾಗ ಮೂಡುವ ಭಾವವೇನು?
ಉತ್ಕೃಷ್ಟ ಕಛೇರಿಯ ಪ್ರಮುಖ ಧಾತುಗಳು ಐದು: ಮಾಧುರ್ಯ, ಮನೋಧರ್ಮ, ಶಾಸ್ತ್ರೀಯತೆ, ಅದ್ರುತಗತಿ, ಮತ್ತು ಉಲ್ಲಾಸ. ಸಂಗೀತದತ್ತ ರಸಿಕನ ಲಕ್ಷ್ಯವನ್ನು ಸೆಳೆಯುವ ಗುಣವೇ ಮಾಧುರ್ಯ. ಇದಕ್ಕೆ ಸದಾ ಹೊಸತನ್ನು ಮನೋಧರ್ಮ ಪೂಸುತ್ತದೆ. ಶಾಸ್ತ್ರೀಯತೆ ಕಛೇರಿಗೆ ಭದ್ರ ಅಡಿಪಾಯವನ್ನು ಒದಗಿಸುತ್ತದೆ. ಅದ್ರುತಗತಿ ಎಂದರೆ ಅವಸರವಿರದ ನಡೆಯ ಕಾರಣವಾಗಿ ಕಛೇರಿಗೆ ಸ್ವಾಸ್ಥ್ಯ ಪ್ರಾಪ್ತವಾಗುವುದು. ಉಲ್ಲಾಸದ ಲಕ್ಷಣ, ಪುರಂದರದಾಸರ ನುಡಿಗಳಲ್ಲಿ, “ಕಳೆಮುಖವಿರಬೇಕು.” ಈ ಪಂಚಧಾತುಗಳ ಮಧುರಪಾಕದಲ್ಲಿ ತನ್ಮಯನಾಗಿರುವಾಗ ಒಬ್ಬ ರಸಿಕನಾಗಿ ನನ್ನ ಮನಸ್ಸು ನಾಲ್ಕು ಉನ್ನತೋನ್ನತ ಮಜಲುಗಳನ್ನು ಏರಿ ಮುಂದೆ ವಿಹರಿಸುತ್ತಿರುವುದು: ಮನೋರಂಜನೆ (ಮಾಧುರ್ಯದ ಕಾರಣವಾಗಿ), ಉತ್ತಾರಣೆ (ರಾಗವೈಭವ ಮತ್ತು ಸೃಜನಶೀಲತೆ), ಪ್ರತಿಮಾದರ್ಶನ (ಸಾಹಿತ್ಯವನ್ನು ಅರಿತು ಅದ್ರುತಗತಿಯಲ್ಲಿ ಪಾಡಿದಾಗ ಮೂಡುವ ಸ್ಥಿತಿ) ಮತ್ತು ಆಧ್ಯಾತ್ಮಿಕ ಸ್ತರದ ಅನಂತ ವಿಸ್ತಾರದಲ್ಲಿ ಸ್ವಚ್ಛಂದ ಯಾನ (ಕಲಾವಿದ ಸೂಸುವ ಉಲ್ಲಾಸದ ಕಾರಣವಾಗಿ ಈ ವಿಹಾರ ಸಾಧ್ಯವಾಗುತ್ತದೆ). ಉದಾಹರಣೆಗೆ ಜೀವಂತ ಕಛೇರಿಯಲ್ಲಿ ಎಂಎಸ್ “ಭಾವಯಾಮಿ ರಘುರಾಮಂ” ಹಾಡುತ್ತಿದ್ದಾಗ ಅಥವಾ ದ್ವಾರಂ “ಸಾಮಜ ವರಗಮನ” ನುಡಿಸುತ್ತಿದ್ದಾಗ ನಾನು ಇವೆಲ್ಲ ಮಜಲುಗಳನ್ನೂ ದಾಟಿದ ಅನುಭವ ನನಗಾಗಿದೆ. ಇಂದೂ ಅಂಥ ಭಾವೋತ್ಕರ್ಷೆ ಆಗುವುದುಂಟು.

೭.ಯಾರು ಹಿತವರು ನಿನಗೆ — ಸಂಗೀತ, ಸಾಹಿತ್ಯ ಅಥವಾ ವಿಜ್ಞಾನ?
ಒಂದನೆಯ ಪ್ರಶ್ನೆಗೆ ನೀಡಿರುವ ವಿವರಣೆಯಲ್ಲಿ ಉತ್ತರವಿದೆ: ಉಸಿರೋ, ಒಡಲೋ, ಉಣಿಸೋ? ಎಲ್ಲವೂ ಪರಸ್ಪರ ಪೂರಕವಾಗಿರಬೇಕು. ಇವು ಅನುಕ್ರಮವಾಗಿ ಅಮೂರ್ತ ಭಾವವನ್ನು ಪೋಷಿಸಿ ಅದಕ್ಕೆ ಮೂರ್ತ ದೇಹವಿತ್ತು ಚಿಂತನೆಯನ್ನು ಪ್ರೇರಿಸುತ್ತವೆ.

೮. `ಶ್ರೀಮನ್ನಾರಾಯಣ’ನ ಸಾಧನೆಯಲ್ಲಿ `ಲಕ್ಷ್ಮೀದೇವಿ’ಯ ಪಾತ್ರ?
ಆಕಾಶಯಾನದ(space travel) ಪರಿಭಾಷೆಯಲ್ಲಿ ನಾನು ಗಗನನೌಕೆ (space ship), ನನ್ನ ಮಡದಿ (ಹೆಸರು ಲಕ್ಷ್ಮಿ) ಅದರ ಉಡಾವಣ ತಡಿ ( launching pad).

೯. ಅತ್ರಿಗಳ ಜೊತೆ ಒಡನಾಟವೆಂತು?
ನಮ್ಮ ಮಗ (ಮಕ್ಕಳು) ಕನಿಷ್ಠ ಹಾಜರಾತಿಯಲ್ಲಾದರೂ ಮೊದಲನೆಯ ಸಾಲಿನಲ್ಲಿರಲೆಂಬ ಎಂಬ ಉದ್ದೇಶದಿಂದ (ನನಗೆ ವಿದ್ಯಾರ್ಥಿ ಜೀವನದಲ್ಲಿ ಕೇವಲ ಹೆಸರಿನ ಕಾರಣವಾಗಿ ಈ ಭಾಗ್ಯ ದೊರೆತಿರಲಿಲ್ಲ) ಅವರಿಗೆ ಅಶೋಕ, ಆನಂದ ಮತ್ತು ಅನಂತ ಎಂದು ಹೆಸರಿಟ್ಟೆವು. ಮಡಿಕೇರಿಯಲ್ಲಿ ಸ್ವಂತ ಮನೆ ಒಕ್ಕಲಾದಾಗ, ೧೯೫೬, ಅದನ್ನು `ಅಶೋಕನಿವಾಸ’ವೆಂದು ಹೆಸರಿಸಿದೆವು. ಆಗ ಅವನೊಬ್ಬನೇ ಮಗನಿದ್ದುದು. ಮುಂದೆ ಮೈಸೂರಿನಲ್ಲಿ ಹೊಸ ಮನೆ ಸೇರಿದಾಗ (೧೯೭೧) ಮೂರು ಮಕ್ಕಳ ಹೆಸರುಗಳನ್ನೂ ಧ್ವನಿಸುವ ಸಂಯುಕ್ತ ಪದ ಹುಡುಕಲು ಅಶೋಕನಿಗೆ ಹೇಳಿದೆ. ಅವನ ಸೂಚನೆ ಮಾರ್ಮಿಕವಾಗಿತ್ತು: ಆಂಗ್ಲದಲ್ಲಿ Athree,  ಕನ್ನಡದಲ್ಲಿ ಅತ್ರಿ. ಮಗಂದಿರೊಂದಿಗೆ ಒಡನಾಟ: ನೇರ ನುಡಿ, ನೇರ ನಡೆ, ಮತ್ತು ನೇರ ಬಗೆ; ಅವರ ಭವಿಷ್ಯ ನಿರ್ಮಾಪಕರು ಅವರೇ ವಿನಾ ತಂದೆ ತಾಯಿಯರಾದ ನಾವಲ್ಲ; ಅವರ ಆಶೋತ್ತರಗಳ ಪೂರೈಕೆಗೆ ನೆರವಾಗಬೇಕಾದದ್ದು ನಮ್ಮ ಪ್ರೀತಿಯ ಕರ್ತವ್ಯವೆಂದು ಅರಿತು ತದನುಸಾರ ವರ್ತನೆ; ಅವರಿಂದ ಯಾವುದೇ ಆರ್ಥಿಕ ನೆರವಿನ ನಿರೀಕ್ಷೆ ಇಲ್ಲ; ಪ್ರತಿಯೊಬ್ಬನೂ ಸ್ವಂತ ವೃತ್ತಿ ಅವಲಂಬಿಸಿ ಅದರಲ್ಲಿ ಪ್ರೀತಿ-ನೀತಿ ಸಹಿತ ಸಾಮಾಜಿಕ ಹಿತಸಾಧನೆಗೆ ಬದ್ಧನಾಗಿ ಕ್ರಿಯಾಶೀಲನಾಗಿರಬೇಕೆಂಬುದನ್ನು ನಮ್ಮ ನಡವಳಿಕೆಯಿಂದ ಅವರಲ್ಲಿ ಪ್ರೇರಿಸುವ ಪ್ರಯತ್ನ.

೧೦. ಎಲ್ಲ ಸಾಧನೆಗಳ ಸಾಧ್ಯತೆಯ ಗುಟ್ಟೇನು?   
ಮೊದಲು ಯಾವುದೇ ಸವಾಲು ಎದುರಾದಾಗ ಅದರ ಸಾಧನೆ ನನ್ನ ಮನೋದೈಹಿಕ ಮಿತಿಯೊಳಗಿದ್ದು ಅದು ಸಾಮಾಜಿಕವಾಗಿ ಪ್ರಸ್ತುತವೇ ಎಂದು ವಿವೇಚಿಸಿ ಹೌದೆಂದಾದರೆ ಅದಕ್ಕೆ ಜವಾಬು ಹುಡುಕಲು ಕಳಕ್ಕಿಳಿಯುವುದು. ಬಳಿಕ ನೈತಿಕತೆ, ಮಗ್ನತೆ, ಉತ್ಕೃಷ್ಟತೆ, ಪಾರದರ್ಶಕತೆ ಮತ್ತು ಉತ್ತರದಾಯಿತ್ವ ಎಂಬ ಪಂಚಶೀಲಾನುಸಾರ ಮುನ್ನಡೆಯುವುದು. ಇಲ್ಲಿ ಕಾರ್ಯಮಗ್ನತೆ ಒದಗಿಸುವ ಆನಂದವೇ ಋಜು ಪ್ರತಿಫಲ. ಯಶಸ್ಸು ಬಂದರೆ ಸಂತೋಷ, ಇಲ್ಲವಾದರೆ ಎಲ್ಲಿ ಹೇಗೆ ಏಕೆ ತಪ್ಪಾಯಿತೆಂದು ವಿಮರ್ಶಿಸಿ ಯುಕ್ತ ತಿದ್ದುಪಡಿ ಅಳವಡಿಸಿ ಮತ್ತೆ ಮುನ್ನಡೆಯುವುದು. ಸದಾ ಪರಿಕ್ರಮಣಶೀಲನಾಗಿರಬೇಕು, “ಏನಾದರೂ ಮಾಡುತ್ತಿರು ತಮ್ಮಾ!” ಕಾರಣ, ಜಂಗಮಕ್ಕಳಿವಿಲ್ಲ! ವ್ಯಕ್ತಿ ಒಂಟಿಯಾಗಿ ಏನನ್ನೂ ಸಾಧಿಸಲಾರ. ಸಾಮೂಹಿಕ ಪ್ರಯತ್ನದ ಫಲವಾಗಿ ಯಶಸ್ಸೆಂಬ ಅಮೃತ ಲಭಿಸಿದಾಗ ಅದನ್ನು ನಿರ್ಮೋಹದಿಂದ ಅನುಚರರಿಗೆ ಹಂಚುವ ಮೋಹಿನಿಯೂ ಅಪಯಶಸ್ಸೆಂಬ ಹಾಲಾಹಲ ಹೊಮ್ಮಿದಾಗ ಅದನ್ನು  ಪ್ರೀತಿಯಿಂದ ಕೊರಳಲ್ಲಿ ಧರಿಸುವ ನೀಲಕಂಠನೂ ವ್ಯಕ್ತಿಯಾಗುವುದೇ ಸಾಧನೆಯ ನಿಜ ಮರ್ಮ.
ಬಿತ್ತುವುದು ಪರಿಶುದ್ಧ ಬೀಜವನು ಫಲವಂತ
ಹಿತ್ತಲಲಿ ನಿನ್ನ ಹೊಣೆ, ಹಿಂತಿರುಗಿ ನೋಡದಿರು
ಚಿತ್ತದಲಿ ಮೂಡೀತಹಂಕಾರ — ಜಗಕೆ ಬಿಡು
ಉತ್ತಮ ಫಲ ನಿಮಿತ್ತ ಮಾತ್ರ ನೀ ಅತ್ರಿಸೂನು

ಜಿ.ಟಿ.ನಾರಾಯಣರಾವ್

೮ ಅತ್ರಿ, ಕಾಮಾಕ್ಷಿ ಆಸ್ಪತ್ರೆ ರಸ್ತೆ, ಸರಸ್ವತೀಪುರ, ಮೈಸೂರು ೫೭೦೦೦೯
ದೂರವಾಣಿ ೦೮೨೧ ೨೫೪೩೭೫೯
ದಿನಾಂಕ ೨೬-೨-೨೦೦೬

Read Full Post »

ಮೈಸೂರಿನ ನಮ್ಮ ಮನೆಯ ಎದುರು ಇರುವ ತೆಂಗಿನಮರದಿಂದ ತೆಂಗಿನಕಾಯಿ ಕೀಳಲು ಸುರೇಶ ಮರಹತ್ತಿ ಇಳಿದ ಕೂಡಲೇ ಹೇಳಿದ. `ಈ ಮರ ಹತ್ತಲು ಭಯ ಆಗುತ್ತದೆ. ಮಧ್ಯ ಎಲ್ಲ ಟೊಳ್ಳಾಗಿದೆ. ಯಾವಾಗ ಬೀಳುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಹೀಗೆ ಏಳನೇ ಮುಖ್ಯರಸ್ತೆಯಲ್ಲಿ ತೆಂಗಿನ ಮರ ಉರುಳಿ ಏಳೆಂಟು ಲೈಟ್ ಕಂಬ, ಮನೆಗೆ ಹಾನಿಯಾಯಿತು. ಸುಮಾರು ರೂ. ಐವತ್ತು ಸಾವಿರಕ್ಕೂ ಹೆಚ್ಚು ಖರ್ಚಾಯಿತು’.

ತೆಂಗಿನ ಮರ ಬಿದ್ದು ಅನಾಹುತವಾಗುವ ಮೊದಲು ಕಡಿಸುವುದೇ ಲೇಸು ಎಂದು ನಾವು ಸಮಾಲೋಚನೆ ನಡೆಸಿ ಒಮ್ಮತದ ತೀರ್ಮಾನಕ್ಕೆ ಬಂದು ಸುರೇಶನಿಗೇ ಆ ಕೆಲಸ ವಹಿಸಿದೆವು. ಅವನು ಅದೇ ದಿನ ಇಬ್ಬರನ್ನು ಕರೆತಂದು ತೆಂಗಿನ ಮರ ತೋರಿಸಿದ. ಅವರಿಬ್ಬರೂ ಈ ಮೊದಲು ನಮ್ಮಲ್ಲಿಗೆ ಕಾಯಿ ಕೀಳಲು ಬರುತ್ತಿದ್ದ ಪರಿಚಿತರೇ ಆಗಿದ್ದದ್ದು ಧೈರ್ಯವಾಯಿತು. ಮೂರು ಜನ ನೋಡಿ, `ಮರ ಕಡಿಸುವುದು ಒಳ್ಳೆಯ ನಿರ್ಧಾರ’ ಎಂದರು. ಮರುದಿನ ಬೆಳಗ್ಗೆ ೮ ಗಂಟೆಗೆ ಬರುತ್ತೇವೆಂದು ರೂ. ಸಾವಿರ ಮುಂಗಡ ಪಡೆದು ಹೋದರು. ಪರಿಚಿತ ಮುಖಗಳೇ ತಾನೆ ಎಂಬ ಧೈರ್ಯದಿಂದ ಹಣ ಕೊಟ್ಟು ಕಳಿಸಿದೆವು.
ಮಾರನೇ ದಿನ ಬೆಳಗ್ಗೆ (೧೪-೯-೨೦೧೧) ೮ ಗಂಟೆಗೇ ಸುರೇಶ, ಮಹೇಶ, ಮಹದೇವ ಹಗ್ಗ, ಕೊಡಲಿ, ಕತ್ತಿಯೊಂದಿಗೆ ಹಾಜರಾದರು. `ಅಕ್ಕಪಕ್ಕ ಮನೆ, ಎದುರು ವಿದ್ಯುತ್ ತಂತಿ, ಜನ ಓಡಾಡುವ ಸ್ಥಳ ಇದು ಜಾಗ್ರತೆಯಪ್ಪ’ ಎಂದು ಅನಂತ ಮೂರು ಮೂರು ಸಲ ಹೇಳಿದಾಗ, `ನೀವೇನು ಚಿಂತೆ ಮಾಡ್ಬೇಡಿ. ಯಾರಿಗೂ ಏನೂ ಆಗದಂತೆ ಕೆಲಸ ಮಾಡುವ ಜವಾಬ್ದಾರಿ ನಮ್ಮದು’ ಎಂದು ಮಹೇಶ ಅಭಯವನ್ನಿತ್ತ ಮೇಲೆಯೇ ಅನಂತ ಕಚೇರಿಗೆ ಹೋದದ್ದು.
ತೆಂಗಿನಮರಕ್ಕೆ ಪೂಜೆ ಮಾಡ್ಬೇಕು ಎಂದಾಗ, ಅವೆಲ್ಲ ಕೆಲ್ಸ ನಿಮ್ಮದೇ. ಸಾಮಾನು ಏನೇನು ಬೇಕೊ ಹೇಳು ಎಂದಾಗ ರೂ. ೧೦೧ ದಕ್ಷಿಣೆ, ಅರಸಿನ ಕುಂಕುಮ, ಊದುಕಡ್ದಿ, ಒಂದು ಲೋಟ ಹಾಲು ಕೊಡಿ ಅಂದ.  ಸುರೇಶ ಊದುಕಡ್ಡಿ ಹಚ್ಚಿ ಮರಕ್ಕೆ ಆರತಿ ಬೆಳಗಿ ಹಾಲನ್ನು ಬುಡಕ್ಕೆ ಚೆಲ್ಲಿ ಕುಂಕುಮ ಅರಸಿನ ಹಾಕಿ ಭಕ್ತಿಯಿಂದ ಕಣ್ಣು ಮುಚ್ಚಿ ನಮಿಸಿದ. ಮೂರು ಮಂದಿಯೂ ಕುಂಕುಮ ಹಣೆಗೆ ಹಚ್ಚಿಕೊಂಡು ಮರಕ್ಕೆ ನಮಿಸಿದರು. ರೂ. ೧೦೧ನ್ನು ಹಂಚಿಕೊಂಡರು!
ಮಹೇಶ ತಳೆ ಇಲ್ಲದೆಯೇ ಹಾಗೆಯೇ ಸರಸರನೆ ಮರ ಏರಿ ಕೇವಲ ೧೫ ನಿಮಿಷದಲ್ಲಿ ಎಳನೀರು, ಗರಿಗಳನ್ನೆಲ್ಲ ಕಡಿದು ಹಾಕಿದ. ಅಲ್ಲೇ ಕೂತು ಒಂದು ಎಳನೀರು ಕೊಚ್ಚಿ ಕುಡಿದ! ಮರದ ಬೊಡ್ಡೆಯನ್ನು ಕಡಿದು ಹಗ್ಗದಲ್ಲಿ ಇಳಿಸಿದರು. ಮತ್ತೆ ಹಂತ ಹಂತವಾಗಿ ಸುಮಾರು ೬ ಅಡಿ ಉದ್ದಕ್ಕೆ ಮರಗಳನ್ನು ಕತ್ತಿಯಲ್ಲಿ ಕಡಿದು ತುಂಡು ಮಾಡಿ ಹಗ್ಗ ಕಟ್ಟಿ ಇಳಿಸಿದರು.
ಮರ ಹತ್ತಿ ನಿಂತು ಒಂದು ಕೈಯಲ್ಲಿ ಆಧಾರಕ್ಕೆ ಮರ ಹಿಡಿದುಕೊಂಡು ಇನ್ನೊಂದು ಕೈಯಿಂದ ಕತ್ತಿಯಿಂದ ಮರ ಕಡಿಯುವ ಅವರ ಸಾಹಸ ನೋಡಬೇಕು. ನಿಜಕ್ಕೂ ಮೆಚ್ಚುವಂಥದು. ಮಹೇಶ ಮತ್ತು ಮಹದೇವ ಸರದಿ ಪ್ರಕಾರ ಮೇಲೆ ಹತ್ತಿ ಮರ ಕಡಿದರು. ಹಗ್ಗ ಎಳೆಯಲು, ಕಡಿದದ್ದನ್ನು ಕೊಡಲಿಯಲ್ಲಿ ಇನ್ನೊಂದು ತುಂಡು ಮಾಡಿ ಜೋಡಿಸುವ ಕೆಲಸ ಸುರೇಶನದು.
`ನಿಮಗೆಲ್ಲ ಮರಕಡಿಯಲು ತರಬೇತಿ ಎಲ್ಲಿಂದ?’ ಎಂದು ಅವರ ಕೆಲಸ ನೋಡಿ ನಾನು ಕುತೂಹಲದಿಂದ ಕೇಳಿದಾಗ, `ತರಬೇತಿ ಅಂತ ಏನಿಲ್ಲ. ನೋಡಿ ನೋಡಿ ಕೆಲಸ ಕಲಿಯುತ್ತೇವೆ’ ಎಂದ ಮಹೇಶ. ಸುರೇಶ ಏಕೆ ಮರ ಕಡಿಯುತ್ತಿಲ್ಲ ಎಂದದ್ದಕ್ಕೆ ಅವನಿಗೆ ಮೇಲೆ ನಿಂತು ಕಡಿದು ಅಭ್ಯಾಸವಿಲ್ಲ ಎಂದು ಹೇಳಿದ.
ಬೆಳಗ್ಗೆ ೮ ಗಂಟೆಗೆ ಮರ ಕಡಿಯಲು ತೊಡಗಿ ಮಧ್ಯ ಒಂದು ಗಂಟೆ ವಿಶ್ರಾಂತಿಯಾಗಿ ಮಧ್ಯಾಹ್ನ ೨ ಗಂಟೆಯೊಳಗೆ ಮರ ಧರೆಗೆ ಉರುಳಿಸಿ, ಸಾಗಿಸಿ ಆಗಿತ್ತು. ಮಧ್ಯೆ ಮಧ್ಯೆ ೩ ಸಲ ಅವರ ಅಪೇಕ್ಷೆ ಮೇರೆಗೆ ಚಹಾ ಮಾಡಿ ಕೊಟ್ಟಿದ್ದೆ. ಸದ್ಯ ಹೆಂಡ ಕುಡಿಯುವವರಲ್ಲವಲ್ಲ ಚಹ ಕುಡಿಯುತ್ತಾರಲ್ಲ ಬಚಾವ್.  ಎಂದು ಸಮಾಧಾನವಾಗಿ ಅವರು ಕೇಳಿದಾಗಲೆಲ್ಲ ಚಹಾ ಮಾಡಿ ಕೊಟ್ಟು ಅವರಿಗೆ ಮರ ಕಡಿಯಲು ಸ್ಫೂರ್ತಿ ತುಂಬಿದೆವು.
ಮೂರು ಜನರ ಮುಖದಲ್ಲೂ ಸುಸ್ತು ಎದ್ದು ಕಾಣುತ್ತಿತ್ತು. ಅವರ ಕೆಲಸ ಅಪಾರ ಶ್ರಮದ್ದು. ಮರ ಕಡಿದಾದ ಬಳಿಕ ಸುರೇಶ ಮರದ ಬೊಡ್ಡೆಯ ಮೆಳೆ ಒಂದು ಕಲ್ಲನಿಟ್ಟ. `ಅದೇಕೆ ಹಾಗೆ ಕಲ್ಲಿಡುವುದು’ ಎಂದು ಕುತೂಹಲದಿಂದ ಕೇಳಿದೆ. `ಏಕೆಂದು ಗೊತ್ತಿಲ್ಲ. ಎಲ್ಲರೂ ಇಡುತ್ತಾರೆ ಅಷ್ಟೆ’ ಅಂದ. ಅವನ ಉತ್ತರದಿಂದ ಅದರ ಮೂಲ ಗೊತ್ತಾಗಲಿಲ್ಲವಲ ಎಂದು ನನಗೆ ನಿರಾಶೆಯೇ ಆಯಿತು. ಒಂದು ಮರ ಕಡಿಯಲು ರೂ. ೩೦೦೦. ಅವರು ಬಳಸುವ ಹಗ್ಗ ಕೊಳ್ಳಲು ಸುಮಾರು ರೂ. ೨೦೦೦ ಆಗುತ್ತದಂತೆ. ಅವರ ಕೆಲಸ ನಮಗೆ ಸಾಮಾಧಾನವಿತ್ತಿತು.  ರೂ. ನೂರು ಹಾಗೂ ತೆಂಗಿನಕಾಯಿ ಇನಾಮು ಕೊಟ್ಟೆವು.   ಅವರೂ ತೃಪ್ತಿಯಿಂದಲೇ ತೆರಳಿದರು. ಮೂರು ಮಂದಿಯೂ ಒಳ್ಳೆಯ ನಡತೆಯಿಂದ ಕೂಡಿದ ವಿನಯವಂತರು. ಮಹೇಶನ ಸಂಚಾರಿ ಸಂಖ್ಯೆ ೯೯೦೨೫೪೩೪೧೧

Read Full Post »

ಅದೃಷ್ಟದ ಸಂಚಾರಿ!

೩೦-೧೦-೨೦೧೦ರಂದು ಮೈಸೂರು ನಿಲ್ದಾಣದಿಂದ ರಾತ್ರಿ ೯ ಗಂಟೆಗೆ  ಮಧುರೆಗೆ ಹೋಗಲು ನಾವು ೧೨ ಮಂದಿ ಸರ್ಕಾರಿ ರಾಜಹಂಸ ಬಸ್ಸೇರಿದಾಗ ಬಾಗಿಲಲ್ಲಿ ಇಬ್ಬರು ನನ್ನನ್ನು ನೂಕುತ್ತ ಇಳಿದರು. ಬಸ್ಸು ಹತ್ತುವ ಜಾಗ ಇಕ್ಕಟ್ಟು. ಒಬ್ಬರಿಗೆ ಮಾತ್ರ ಹೋಗಲು ಜಾಗ ಅಲ್ಲಿ. ನಾನು ಒಳಗೆ ಹತ್ತಿ ಕುಳಿತು ಜಂಭದ ಚೀಲ ನೋಡುತ್ತೇನೆ ಜಿಪ್ ಅರ್ಧ ತೆರೆದಿದೆ. ಅರೆ ಇದು ಯಾರು ಜಿಪ್ ತೆರೆದದ್ದು ಎಂದು ಆಶ್ಚರ್ಯದಿಂದ ಒಳಗೆ ಕೈ ಹಾಕಿದರೆ ನನ್ನ ಸಂಚಾರಿ (ಮೊಬೈಲ್) ಮಾಯ. ಪಕ್ಕದಲ್ಲಿ ಕುಳಿತ ಅಮ್ಮನಿಗೆ ಹೇಳಿ, ಅಮ್ಮನ ಸಂಚಾರಿಯಿಂದ ಕೂಡಲೇ ಮನೆಯಲ್ಲಿದ್ದ ಮಗಳು ಅಕ್ಷರಿಗೆ ನಡೆದ ಸಂಗತಿ ತಿಳಿಸಿ, ಸಿಮ್ ಬ್ಲಾಕ್ ಮಾಡಲು ಹೇಳಿದೆ. ಅದರಲ್ಲಿದ್ದ ಸಿಮ್ ಅವಳದ್ದು (ಚೆನ್ನೈ ಸಿಮ್). ತಮಿಳುನಾಡಿಗೆ ಹೋಗುವುದೆಂದು ರೋಮಿಂಗ್ ದರ ತಪ್ಪಿಸುವ ಸಲುವಾಗಿ ನನಗೆ ಅವಳ ಸಿಮ್ ಕೊಟ್ಟಿದ್ದಳು. ನನ್ನಲ್ಲಿದ್ದ ಮೊಬೈಲಿನಲ್ಲಿ tracker ಇತ್ತು. ಅದಕ್ಕೆ ಬೇರೆ ಯಾವುದೇ ಸಿಮ್ ಹಾಕಿದರೂ ಕೂಡಲೇ ಅನಂತನ ಸಂಚಾರಿಗೆ ಕ್ಷಿಪ್ರ ಸಂದೇಶ ಬರುತ್ತದೆ ಸಿಮ್ ಕಳುವಾಗಿದೆ ಎಚ್ಚರ ಎಂದು ಹಾಗೂ ಯಾವ ಸಿಮ್ ಹಾಕಿದ್ದಾರೋ ಆ ಸಂಖ್ಯೆ ಬರುತ್ತದೆ. ಮೊಬೈಲ್ ನ imie ಸಂಖ್ಯೆಯನ್ನು ತಡೆಗಟ್ಟಲು ಆಗುತ್ತ ನೋಡು ಎಂದು ಹೇಳಿದೆ. ಮುಂದೆ ೩ ದಿನ ನಮ್ಮ ಪ್ರಯಾಣದುದ್ದಕ್ಕೂ ನಾನು ಅಕ್ಷರಿಗೆ ದೂರವಾಣಿಸಲಿಲ್ಲ. ಆ ವಿಷಯದ ಬಗ್ಗೆ ತಲೆಕೆಡಿಸಿಕೊಳ್ಳಲು ಹೋಗಲಿಲ್ಲ. ಅದೃಷ್ಟ ಇದ್ದರೆ ಸಿಕ್ಕೀತು ಎಂದು ಸುಮ್ಮನಾದೆ.
೨ನೇ ತಾರೀಕು ಬೆಳಗ್ಗೆ  ೪.೩೦ ಗಂಟೆಗೆ  ರಾಮೇಶ್ವರ ದೇವಾಲಯದಲ್ಲಿ ಸ್ಫಟಿಕಲಿಂಗದ ಅಭಿಷೇಕದ ದರ್ಶನಕ್ಕೆ ಸರತಿ ಸಾಲಿನಲ್ಲಿ ಕಾದಿದ್ದಾಗ, `ನೀನೇನಾದರೂ ಮೊಬೈಲ್ ಸಿಕ್ಕಲು ದೇವರಲ್ಲಿ ಪ್ರಾರ್ಥನೆ ಮಾಡಿದ್ದೀಯ?  ನಿನ್ನ ಮೊಬೈಲ್ ಸಿಕ್ಕಿದೆ’ ಎಂದ. `ಅಕ್ಷರಿಯಿಂದ ಕ್ಷಿಪ್ರ ಸಂದೇಶ ಬಂದಿದೆ’ ಎಂದ ಅಣ್ಣ. ನಿಜ ಹೇಳುತ್ತೀದ್ದೀಯ ಎಂದೆ ಬೆರಗಿನಿಂದ. `ಹೌದು. ನಿನ್ನೆ ರಾತ್ರಿಯೇ ೨ ಸಂದೇಶ ಕಳುಹಿಸಿದ್ದಾಳೆ. ನಾನು ನೋಡಿದ್ದು ಇವತ್ತು’  ಎಂದು ಹೇಳಿದ.
೩ನೇ ತಾರೀಕು ಬೆಳಗ್ಗೆ ೭.೪೫ಕ್ಕೆ ಮೈಸೂರು ತಲಪಿ ಮನೆಗೆ ಬಂದಾಗ ಅಕ್ಷರಿ ಸವಿವರವಾಗಿ ಮೊಬೈಲ್ ಸಿಕ್ಕಿದ ಕತೆಯನ್ನು ವಿವರಿಸಿದಳು. ವಿವರ ಹೀಗಿದೆ: ಅಕ್ಷರಿ ೧ನೇ ತಾರೀಕು ಬೆಳಗ್ಗೆ  ಮೊಬೈಲ್ ಕೊಂಡ ಅಂಗಡಿ (ಮೈಸೂರಿನ ಧನ್ವಂತರಿ ರಸ್ತೆಯ ಆವಿಷ್ಕಾರ್)ಗೆ ದೂರವಾಣಿಸಿದಾಗ ಅವರಿಂದ `ಇಲ್ಲಿಗೆ ಬನ್ನಿ, ನೋಡುವ’ ಎಂಬ ಭರವಸೆ ಸಿಕ್ಕಿತು. ಅಕ್ಷರಿ ಮಧ್ಯಾಹ್ನ ಅಂಗಡಿಗೆ ಹೋದಳು. ( ಅಜ್ಜಿಗೆ ಪಾಟಕ್ಕೆ ಹೋಗುತ್ತೇನೆ ಎಂದು ಸುಳ್ಳು ಹೇಳಿ. ಇಲ್ಲಾಂದರೆ ಅಜ್ಜಿ ಹೋಗಲು ಬಿಡುವುದಿಲ್ಲ!) ಮೊಬೈಲ್ ಕದ್ದವನು ಅದಾಗಲೇ ಎರಡು ಸಿಮ್ ಬದಲಾಯಿಸಿದ್ದ. ಆ ಸಂಖ್ಯೆಗೆ ದೂರವಾಣಿಸಿದಾಗ (ಆ ಸಂಖ್ಯೆ ಅನಂತನ ಸಂಚಾರಿಗೆ ಬರುತ್ತದೆ ಎಂಬುದು ನೆನಪಿರಲಿ)ಅವರು ಏನೇನೋ ಹೇಳಲು, ಅಂಗಡಿಗೆ ತಂದು ಕೊಟ್ಟರೆ ಸರಿ, ಇಲ್ಲಾಂದರೆ ಆರಕ್ಷಕರಿಗೆ ದೂರು ಕೊಡುತ್ತೇವೆ ಎಂದು ಹೆದರಿಸಿದಾಗ ದಾರಿಗೆ ಬಂದರು. ನೀವೇ ಇಂತಲ್ಲಿಗೆ ಬನ್ನಿ ಎಂದು ಎರಡು ಸಲ ಸ್ಥಳ ಬದಲಾಯಿಸಿ ಸತಾಯಿಸಿದಾಗ, ಪುನಃ ಹೆದರಿಸಿದಾಗ ಕೊನೆಗೆ ತಿಲಕನಗರಕ್ಕೆ ಬನ್ನಿ ಎಂದು ಹೇಳಿದರು. ಅಂಗಡಿಯ ಮಾಲೀಕರು ಅವರ ಇಬ್ಬರು ಕೆಲಸಗಾರರನ್ನು ಕಳುಹಿಸಿಕೊಟ್ಟರು. ಅಲ್ಲಿ ಕಳ್ಳ ೨೫ ಜನರನ್ನು ಸೇರಿಸಿದ್ದ. ಎಲ್ಲ ಮುಸ್ಲಿಮರು. ನಿಮ್ಮದೇ ಮೊಬೈಲ್ ಎಂಬುದಕ್ಕೆ ಗ್ಯಾರಂಟಿಯೇನು ಹಾಗೇ ಹೀಗೆ ಎಂದು ಸತಾಯಿಸಲು ಹೊರಟಾಗ, ಇವರಿಗೆ ದಿಕ್ಕು ತೋಚದೆ ಮಾಲೀಕರಿಗೆ ದೂರವಾಣಿಸಿದರು. ಅವರು ಜೋರಾಗಿ ಹೆದರಿಸಿದರು. ಅದಕ್ಕೂ ಬಗ್ಗದಿದ್ದರೆ ಪೋಲೀಸರಿಗೆ ಸುದ್ದಿ ಮುಟ್ಟಿಸಿ ಎಂದಾಗ ಮೊಬೈಲ್ ಕೊಟ್ಟರಂತೆ. ಅಂಗಡಿ ಮಾಲೀಕರಿಗೆ ಹಾಗೂ ಕೆಲಸಗಾರರಿಗೆ ಅಕ್ಷರಿ ೩ ನಾಲ್ಕು ಸಲ ಕೃತಜ್ಞತೆ  ಹೇಳಿ ದಿಗ್ವಿಜಯದಿಂದ  ಮೊಬೈಲ್ ಮನೆಗೆ ತಂದಳು.
ಆವಿಷ್ಕಾರದ ಮಾಲೀಕರು, ಕೆಲಸಗಾರರ ಸಂಪೂರ್ಣ ಸಹಕಾರದಿಂದ ಹಾಗೂ ಅಕ್ಷರಿಯ ಸಾಹಸದಿಂದ ಕಳವಾದ ಸಂಚಾರಿ ಏನೂ ಖರ್ಚಿಲ್ಲದೆ ಕವಚ ಸಮೇತ ವಾಪಾಸ್ ನನ್ನ ಕೈಸೇರಿತು. ಸಿಮ್ ಮಾತ್ರ ಕಾಣೆಯಾಗಿತ್ತು. ಒಮ್ಮೊಮ್ಮೆ ಅದೃಷ್ಟ ನಮಗೊಲಿಯುತ್ತದೆ.

ಕಲಿಯಬೇಕಾದ ಪಾಟ: ಹೊಸ ಮೊಬೈಲ್ ತೆಗೆಯುವಾಗ mobile tracker ಇರುವಂಥ ಮೊಬೈಲನ್ನೇ ತೆಗೆಯಬೇಕು.
ಜಂಬದಚೀಲದ ಹೊರಭಾಗದ ಜಿಪ್ಪಿನಲ್ಲಿ ಯಾವತ್ತೂ ಸಂಚಾರಿಯನ್ನು ಇಡದಿರಿ. ಬಸ್ ಹತ್ತುವಾಗ ಎಚ್ಚರದಿಂದ ಮೈಯೆಲ್ಲ ಕಣ್ಣಾಗಿರಲಿ!

Read Full Post »

Older Posts »