Feeds:
ಲೇಖನಗಳು
ಟಿಪ್ಪಣಿಗಳು

Archive for the ‘ಅಕ್ಷಯಕೃಷ್ಣ ಬರಹ’ Category

ಅಕ್ಷಯಕೃಷ್ಣ ಬರಹ

ಚುಂಚನೆಂಬ ದಾನವ ತನ್ನ ಅಣ್ಣನನ್ನು ಕೊಂದದ್ದು ವಿಷ್ಣು ಎಂದು ತಿಳಿದು ಅವನ ಮೇಲೆ ಸೇಡು ತೀರಿಸಿಕೊಳ್ಳಲು ಶಕ್ತಿಗಾಗಿ ಶಿವನ ಕುರಿತು ತಪಸ್ಸು ಆಚರಿಸುವನು. ಶಿವನಿಂದ ತ್ರಿಶೂಲವನ್ನು ಪಡೆಯುವನು. ಆದರೆ ಶಿವನು ಅದನ್ನು ತ್ರಿಮೂರ್ತಿಗಳ ಮೇಲೆ ಪ್ರಯೋಗಿಸ ಬಾರದೆಂದು ಎಚ್ಚರಿಸುವನು.

ಒಮ್ಮೆ ರಾಮ,ಸೀತೆ ಮತ್ತು ಲಕ್ಷ್ಮಣ ದಂಡಕಾರಣ್ಯದಲ್ಲಿ ಸಂಚಾರ ಮಾಡುತ್ತಿದ್ದಾಗ ಅವರಿಗೆ ಚುಂಚ ಎದುರಾಗುವನು. ನಂತರ ರಾಮ ಹಾಗೂ ಚುಂಚನ ಯುದ್ಧ. ಯುದ್ದದಲ್ಲಿ ಚುಂಚನ ಸೋಲು. ತ್ರಿಶೂಲ ರಾಮನ ವಶವಾಗುವುದು. ರಾಮನಿಂದ ಚುಂಚನಿಗೆ ನೀತಿ ಬೋಧನೆ.
ರಾಮ ಮುಂದೆ ಚುಂಚನಕಟ್ಟೆಯಲ್ಲಿ ನೆಲೆಸುವನು.

ಇತ್ತ, ಬ್ರಹ್ಮನು ಮುಖ್ಯವಾದ ವಿಷಯವನ್ನು ಶಿವನೊಡನೆ ಚರ್ಚಿಸಲೆಂದು ಕೈಲಾಸದ ಕಡೆಗೆ ತೆರಳುವನು. ಅಲ್ಲಿ ಶಿವನ ದ್ವಾರಪಾಲಕರು ಬ್ರಹ್ಮನನ್ನು ತಡೆದು ಶಿವನು ಯೋಗನಿದ್ರೆಯಲ್ಲಿರುವನೆಂದೂ ಯಾರನ್ನೂ ಒಳಗೆ ಬಿಡುವುದಿಲ್ಲವೆಂದು ಹೇಳುವರು. ಬ್ರಹ್ಮನು ಎಷ್ಟು ಕೇಳಿದರೂ ಅವನನ್ನು ಒಳಬಿಡದ ಕಾರಣ ದ್ವಾರಪಾಲಕರನ್ನು ಕೊಂದು ಒಳಹೋಗುವನು. ಅಲ್ಲಿ ಶಿವನು ಯೋಗನಿದ್ರೆಯಲ್ಲಿರುವನು.ಬ್ರಹ್ಮನು ಬಂದ ವಿಷಯ ಶಿವನಿಗೆ ತಿಳಿಯುವುದಿಲ್ಲ. ಬ್ರಹ್ಮನು ಸಿಟ್ಟುಗೊಳ್ಳುವನು. ಶಿವನ ಕೊರಳಿಗೆ ಕೈ ಹಾಕಿ ಅವನನ್ನು ಎಬ್ಬಿಸುವನು. ನಂತರ ಬ್ರಹ್ಮ ಈಶ್ವರರು ಅನೇಕ ರೀತಿಯಲ್ಲಿ ವಾದವಿವಾದ ಮಾಡುವರು. ಹಾಗೆಯೆ ಮುಂದೆ ಬ್ರಹ್ಮನು ತಾನು ತನಗೆ ಐದನೆಯ ಮುಖವನ್ನು ಸೃಷ್ಟಿಸುವೆನೆಂದೂ ಅದನ್ನು ಶಿವನು  ಕೀಳುವೆನೆಂದು ಹೇಳುವನು. ಅದೇ ರೀತಿ ಬ್ರಹ್ಮನು ಐದನೆಯ ಮುಖವನ್ನು ಸೃಷ್ಟಿಸುವನು. ಶಿವನು ಅದನ್ನು ಕೀಳಲೆಂದು ಪ್ರಯತ್ನಿಸಿದಾಗ ಬ್ರಹ್ಮನ ಕಪಾಲವು ಶಿವನ ಕೈಯನ್ನು ಕಚ್ಚಿ ಹಿಡಿದುಕೊಳ್ಳುವುದು. ಬ್ರಹ್ಮ ಕಪಾಲ ಹೊತ್ತ ಶಿವನು ಭೈರವನೆಂಬ ಹೆಸರಿನಿಂದ ಭೂಮಿಗೆ ಬರುವನು. ಆ ಬ್ರಹ್ಮ ಕಪಾಲವು ಭೈರವನ ರಕ್ತವನ್ನು ಕುಡಿಯುತ್ತಾ ಭೈರವನಿಗೆ ಬಹಳಷ್ಟು ತೊಂದರೆಗಳನ್ನು ಕೊಡುತ್ತದೆ. ನೋವನ್ನು ತಡೆದುಕೊಳ್ಳಲು ಭೈರವನು ಧೂಮ(ಹೊಗೆ) ಬಿಡುತ್ತಿದ್ದನು. ಆ ಪ್ರದೇಶದ ರಾಜನಾದ ಬೊಮ್ಮರಸನಿಗೆ ಏಳು ಜನ ಹೆಣ್ಣು ಮಕ್ಕಳು. ಹಿರಿಯವಳು ಗಂಗೆಮಾಳಿ ಕಿರಿಯವಳು ಲಕ್ಷ್ಮೀ. ಆ ಭೈರವನ ಧೂಮದಿಂದಾಗಿ ಲಕ್ಷ್ಮಿ ಯು ಗರ್ಭವತಿಯಾಗುವಳು. ಲಕ್ಷ್ಮಿಯು ಭೈರವನನ್ನು ಸೇರಲೆಂದು ಹೋದಾಗ ಭೈರವನು ಸೇರಿಸುವುದಿಲ್ಲ. ಲಕ್ಷ್ಮಿಯು ವಿಚಾರವನ್ನು ಆ ಪ್ರದೇಶದಲ್ಲಿ ಎಲ್ಲರನ್ನೂ ಕಾಪಾಡುತ್ತಿದ್ದ ತನ್ನ ಅಣ್ಣನಂತಿದ್ದ ಚುಂಚನಲ್ಲಿ ಎಲ್ಲಾ ವಿಚಾರವನ್ನು ಹೇಳುವಳು. ಮುಂದೆ ಚುಂಚನು ನಾಯಿಯ ಅವತಾರದಿಂದ ಬಂದು ಹರಿದ ರಕ್ತವನ್ನು ನೆಕ್ಕಿದಾಗ ಮೈಲಿಗೆಯಾಯಿತೆಂದು   ಕಪಾಲ ಶಿವನ ಕೈಯಿಂದ ಮೋಕ್ಷ. ಮುಂದೆ ಲಕ್ಷ್ಮಿ ಭೈರವನನ್ನು ಸೇರುವಳು.

ಭೈರವನು ನೋವಿನಲ್ಲಿದ್ದಾಗ ಅವನ ಕಣ್ಣುಗಳಿಂದ ೯ ಹನಿಗಳು ಭೂಮಿಗೆ ಬಿದ್ದು ಅದು ೯ ಮತ್ಸ್ಯ ಗಳಾಗುತ್ತವೆ. ಭೈರವನಿಗೆ ಕಪಾಲ ಮೋಕ್ಷವಾದ ನಂತರ ಆ ೯ ಮತ್ಸ್ಯ ಗಳು ಋಷಿಗಳಾಗುವರು. ಅವರಿಗೆ ಭೈರವನಿಂದ ನವನಾಥರೆಂದು ಹೆಸರು ಬರುವುದು. ನಿತ್ಯ ದಾಸೋಹ ಕಾರ್ಯದಲ್ಲಿ ನಿರತರಾಗಿರಿ ಎಂದು ಅವರೆಲ್ಲರಿಗೂ ಅಪ್ಪಣೆ ಕೊಡಿಸುವನು.

 ಮುಂದೆ ಭೈರವನೊಡನೆ ಗಂಗೆಮಾಳಿಯೂ ಸೇರುವಳು. ಬಂಗಾರಿಗಿರಿಯಲ್ಲಿ ವಾಸ. ತಿರುಪತಿ ತಿಮ್ಮಪ್ಪ ಸಂಚಾರ ಬರುವಾಗ ಬಂಗಾರುಗಿರಿಯ ಸೌಂದರ್ಯ ಕಂಡು ಅಲ್ಲಿ ನೆಲೆ ನಿಲ್ಲಲು ಅಪೆಕ್ಷಿಸುವನು. ಜೋರುಮಳೆಯಲ್ಲಿ ನೆನೆದ ತಿಮ್ಮಪ್ಪ ನನ್ನು ಬೈರವ ಮನೆ ಒಳಗೆ ಕರೆಯುವನು. ಭೈರವನಲ್ಲಿದ್ದ ಅಕ್ಷಯಪಾತ್ರೆ ಕಬಳಿಸಲು ಸಂಚು ಮಾಡಿ ಪಗಡೆಯಾಟ. ಮೊದಲು ಆಟದಲ್ಲಿ ಭೈರವನ ಗೆಲುವು, ಕೊನೆಆಟದಲ್ಲಿ ತಿಮ್ಮಪ್ಪನ ಗೆಲುವು.

ಮಹಾಭಾರತದ ಅರ್ಜುನನು ಧನುಷ್ಕೋಟಿಗೆ ಹೋಗುವಾಗ ಜೋಗಿಯಾಗಿ ಕಾಣಿಸಿಕೊಳ್ಳುತ್ತಾನೆ. ಒಂದು ಮಗುವಿಗೆ ಜೀವ ಬರಿಸುತ್ತಾನೆ. ಅದಕ್ಕೆ ಒಂದೇ ಕಾಲು ಇರುತ್ತದೆ. ಅದು ಒಕ್ಕಲಿಗ ಸಂತತಿಗೆ ಕಾರಣವಾಗುತ್ತದೆ. ಮುಂದೆ ಭೈರವ ಒಕ್ಕಲಿಗರ ಆರಾಧ್ಯಧೈವವಾಗಿ ಆದಿಚುಂಚನಗಿರಿಯಲ್ಲಿ ನೆಲೆಸುವನು. ಭೈರವನು ನೆಲೆಸಿದ ಕ್ಷೇತ್ರವೇ ಆದಿ ಚುಂಚನಗಿರಿ ಕ್ಷೇತ್ರವಾಗುವುದು.

ಚುಂಚಾಸುರನಾಗಿ ಕೇಸರಿತಟ್ಟೆ ವೇಷದಲ್ಲಿ ಶಿವಪ್ರಸಾದ ಭಟ್,   ಶಂಭಯ್ಯ ಕಂಜರ್ಪಣೆ ಬ್ರಹ್ಮನಾಗಿ, ಶಿವನಾಗಿ ಕುಂಬಳೆ ಶ್ರೀಧರರಾಯರು, ಶ್ರೀರಾಮನಾಗಿ ವಸಂತಗೌಡರು, ಲಕ್ಷ್ಮಣನಾಗಿ ಕುಸುಮೋದರ, ಚುಂಚಾಸುರನ ಸಹಚರರಾಗಿ ಕನ್ನಡಿಕಟ್ಟೆ ಪದ್ಮನಾಭ ಶೆಟ್ಟಿ ಹಾಗೂ ಮುಂಡಾಜೆ ನವೀನ ಶೆಟ್ಟಿ,  ಭೈರಾಗಿಯಾಗಿ ಅಮ್ಮುಂಜೆ ಮೋಹನ,  ಗಂಗೆಮಾಳಿಯಾಗಿ ಶರತ್ ಶೆಟ್ಟಿ, ಲಕ್ಷ್ಮಿಯಾಗಿ ಬೆಳಾಲು ರಮೇಶ ಗೌಡ. ಮೂಡಲಪಾಯ ಕಲಾವಿದರಾದ ತಲಕಾಡು ರವೀಂದ್ರ, ಚಿಕ್ಕಚೌಡನಾಯಕ, ಶಿವಮೂರ್ತಿ ಯವರು ಮತ್ಸ್ಯ ಋಷಿಗಳಾಗಿ ವೇದಿಕೆಗೆ ಬಂದು ಹೋದರು. ಪುತ್ತೂರು ಗಂಗಾಧರ ಆಗುನಾಥನಾಗಿ,ಬಾಲಕೃಷ್ಣ ಮಣಿಯಾಣಿ ಜೋಗುನಾಥನಾಗಿ, ಬಾಲಕಲಾವಿದರಾದ ಕಾರ್ತಿಕ ಹಾಗೂ ಗೌತಮರು ಮತ್ಸ್ಯ ಋಷಿಗಳಾಗಿ ರಂಗದಮೇಲೆ ಬಂದು  ಆಟಕ್ಕೆ ಮೆರುಗು ತುಂಬಿದರು.  ಹಿಮ್ಮೇಳದಲ್ಲಿ ಭಾಗವತರಾಗಿ ಗಣೇಶ ಭಟ್, ಚೆಂಡೆವಾದಕರಾಗಿ ದೇಲಂತಮಜಲು ಸುಬ್ರಹ್ಮಣ್ಯ ಭಟ್ , ಮದ್ದಳೆಗಾರರಾಗಿ ಪದ್ಯಾಣ ಜಯರಾಮಭಟ್ ಸಹಕರಿಸಿದರು.   ಜಾನಪದ ತಜ್ಞ ಪಿ.ಕೆ ರಾಜಶೇಖರ ಅವರ ಸಿರಿ ಚುಂಚನಗಿರಿ ಪುಸ್ತಕದ ಮೂಲಕಥೆ ಆಧಾರದಿಂದ ಯಕ್ಷಗಾನಕ್ಕೆ ಅನುಗುಣವಾಗಿ ಪದ್ಯ ಕಥೆ ರಚಿಸಿದವರು ಸಿದ್ಧಕಟ್ಟೆ ವಿಶ್ವನಾಥ ಶೆಟ್ಟಿ ಯವರು . 

DSCN1661

DSCN1672

DSCN1708

DSCN1729

DSCN1743

20141008_214550

20141008_212114

Read Full Post »

ಈ ಕಥನವನ್ನು ನನ್ನ ಅಣ್ಣನ ಮಗ ಅಕ್ಷಯಕೃಷ್ಣ ಬರೆದದ್ದು. ಅವನೀಗ ಪಿಯುಸಿ ಶಿಕ್ಷಣ ಮುಗಿಸಿ ಸಿಎ ಪರೀಕ್ಷೆಗೆ ತಯಾರಾಗುತ್ತಿರುವನು.  ಅವನು ಹೋದಕಡೆ  ಮೊಬೈಲಿನಲ್ಲಿ ಸಾಧ್ಯವಾದಷ್ಟು  ಚಿತ್ರ ಸೆರೆ ಹಿಡಿದು ಈ ಬರಹ ಬರೆದು ನನಗೊಪ್ಪಿಸಿರುವನು. ಅದನ್ನು ಈಗ ನಿಮ್ಮ ಮುಂದೆ ಇಟ್ಟಿರುವೆನು. ಓದಿ ಅವನ ಈ ಪ್ರಯತ್ನಕ್ಕೆ ಪ್ರತಿಕ್ರಿಯಿಸಿ.

೨೨.೮.೨೦೧೪ರಂದು ರಾತ್ರೆ ೮.೩೦ಕ್ಕೆ ನಾವು ೧೨ ಮಂದಿ ಮೈಸೂರಿನಿಂದ ಮಿನಿ ವ್ಯಾನಿನಲ್ಲಿ ಹೊರಟು ೨೩ರಂದು ಬೆಳಗ್ಗೆ ೮.೩೦ಗೆ ಮುರುಡೇಶ್ವರ ತಲಪಿದೆವು. ಅಲ್ಲಿ ನಾವು ಧೇನು ಆತಿಥ್ಯ ಎಂಬ ಹೋಟೇಲಿನಲ್ಲಿ ಸ್ನಾನ ಮಾಡಿ ತಯಾರಾದೆವು. ಈ ಹೋಟೇಲಿನ ವಿಶೇಷತೆ ಏನೆಂದರೆ ಅಲ್ಲಿ ದಿನಾ ಬೆಳಗ್ಗೆ ಗೋಪೂಜೆ ಮಾಡುತ್ತಾರೆ. ಹೋಟೇಲಿನ ಮಾಲೀಕರು ಶ್ರೀ ರಾಮಚಂದ್ರಾಪುರ ಶ್ರೀಗಳ ಪರಮ ಭಕ್ತರು. ನಮಗೆ ಉಚಿತವಾಗಿಯೇ ಸ್ನಾನಾದಿಗಳಿಗೆ ಅವಕಾಶವಿತ್ತಿದ್ದರು.
ತಿಂಡಿ ತಿಂದು ನಾವು ಮುರುಡೇಶ್ವರ ದೇವಾಲಯಕ್ಕೆ ಹೋದೆವು. ರಾವಣನು ಗೋಕರ್ಣದಲ್ಲಿ ಶಿವನ ಆತ್ಮಲಿಂಗವನ್ನು ಅಲ್ಲಿಂದ ತೆಗೆಯಲು ಪ್ರಯತ್ನಿಸಿದಾಗ ಕೈಗೆ ಸಿಕ್ಕ ಲಿಂಗದ ತುಣುಕುಗಳನ್ನು ದೂರ ಎಸೆದನು. ಆ ತುಣುಕುಗಳಲ್ಲಿ ಒಂದು ಮುರುಡೇಶ್ವರದಲ್ಲಿ ಬಿದ್ದಿತು. ಅದೇ ಶಿವನ ದೇವಾಲಯವಾಯಿತು. ಮುಖ್ಯದ್ವಾರದಲ್ಲಿ ಬೃಹತ್ ಗೋಪುರ ಕಟ್ಟಿರುವರು. ದೇವಾಲಯದ ಆವರಣದಲ್ಲಿ ಶಿವನ ದೊಡ್ಡ ವಿಗ್ರಹವನ್ನು ಸ್ಥಾಪನೆ ಮಾಡಿರುವರು. ಎಲ್ಲ ನೋಡಿ ಆನಂದಿಸಿ ಅಲ್ಲಿಂದ ಹೊರಟೆವು.

murudeshvara

m shivam

m beech

ಇಡಗುಂಜಿ ದೇವಾಲಯಕ್ಕೆ ಹೋದೆವು. ಗಣಪನಿಗೆ ನಮಸ್ಕರಿಸಿ ದೇವಾಲಯದ ವತಿಯಿಂದ ನಡೆಯುವ ಅನ್ನ ದಾಸೋಹದಲ್ಲಿ ಊಟ ಮಾಡಿದೆವು. ಊಟವಾಗಿ ಹೊರಟು ಅಪ್ಸರಕೊಂಡಕ್ಕೆ ಹೋದೆವು. ಅಲ್ಲಿ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಗಳ ಮಠ ಹಾಗೂ ನರಸಿಂಹ ದೇವಸ್ಥಾನವನ್ನು ನೋಡಿದೆವು. ಅಪ್ಸರಕೊಂಡ ಜಲಪಾತವನ್ನೂ ನೋಡಿದೆವು. ಬಹಳ ಸುಂದರವಾಗಿದ್ದುವು. ಅಪ್ಸರಕೊಂಡ ಉದ್ಯಾನವನವನ್ನೂ ನೋಡಿದೆವು. ಬಹಳ ಅಚ್ಚುಕಟ್ಟಾಗಿ ಸುಂದರವಾಗಿ ಈ ವನವನ್ನು ನಿರ್ಮಿಸಿದ್ದಾರೆ. ಅಲ್ಲಿಂದ ಮುಂದಕ್ಕೆ ಸಮೀಪವಿದ್ದ ಕಾಸರಕೋಡ್ ಸಮುದ್ರದಂಡೆಯನ್ನು ದೂರದಿಂದ ವೀಕ್ಷಿಸಿದೆವು.

apsarakonda

apsarakonda vana

k beech1k. beech

ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಗಳು ಗೋಕರ್ಣದಲ್ಲಿ ಶಿಷ್ಯರು, ಭಕ್ತಾದಿಗಳ ನೆರವಿನಿಂದ ಕಟ್ಟಿಸುತ್ತಿರುವ ಅಶೋಕೆ ಮಠಕ್ಕೂ ಭೇಟಿ ಕೊಟ್ಟೆವು. ಕಟ್ಟಡದ ಕೆಲಸ ಪ್ರಗತಿಯಲ್ಲಿತ್ತು. ಮುಂದೆ ನಾವು ಹತ್ತಿರದಲ್ಲಿದ್ದ ಓಮ್ ಬೀಚ್‌ಗೆ ಹೋದೆವು. ಸಮುದ್ರವನ್ನು ನೋಡುತ್ತ ಕೂರುವುದೇ ಆನಂದ.

om beech
ಗೋಕರ್ಣ ದೇವಾಲಯದಲ್ಲಿ ಶಿವನಿಗೆ ನಮಸ್ಕರಿಸಿ ಅಲ್ಲೇ ಸಮೀಪವಿದ್ದ ಗಣಪತಿ ದೇವಾಲಯಕ್ಕೂ ಭೇಟಿ ಕೊಟ್ಟೆವು. ಒಮ್ಮೆ ರಾವಣನು ಶಿವನ ಕುರಿತು ತಪಸ್ಸು ಮಾಡಿ ಆತ್ಮಲಿಂಗ ಪಡೆದನು. ಅದನ್ನು ತೆಗೆದುಕೊಂಡು ಹೋಗುತ್ತಿರುವಾಗ ಸಂಧ್ಯಾವಂದನೆಯ ಸಮಯವಾಗಿತ್ತು. ಆಗ ಅಲ್ಲಿ ಗಣಪತಿಯು ಬ್ರಾಹ್ಮಣ ವೇಷದಲ್ಲಿ ರಾವಣನೆದುರು ಪ್ರತ್ಯಕ್ಷನಾದ. ರಾವಣ ಅವನ ಕೈಗೆ ಆತ್ಮಲಿಂಗ ಕೊಟ್ಟು ಸಂಧ್ಯಾವಂದನೆ ಮಾಡಿ ಬರುವ ತನಕ ಹಿಡಿದುಕೊಂಡಿರು ಎಂದನು. ಅದಕ್ಕೆ ಗಣಪತಿ ಒಪ್ಪಿಗೆ ಇತ್ತು, ಮೂರು ಬಾರಿ ನಿನ್ನನ್ನು ಕರೆದಾಗ ಬರದಿದ್ದರೆ ಅದನ್ನು ಇಲ್ಲೆ ಇಟ್ಟುಬಿಡುವೆ ಎಂದು ಎಚ್ಚರಿಸಿದನು. ರಾವಣ ಸಂಧ್ಯಾವಂದನೆ ಮಾಡಿ ಬರುವ ಮೊದಲೇ ಮೂರು ಬಾರಿ ಅವನನ್ನು ಕರೆದು ಅವನು ಬಾರದಿದ್ದಾಗ ಅಲ್ಲೇ ಲಿಂಗವನ್ನು ಇಟ್ಟು ಮಾಯವಾದನು. ಮುಂದೆ ಅದುವೇ ಗೋಕರ್ಣ ಕ್ಷೇತ್ರವೆಂದು ಪ್ರಸಿದ್ಧಿಗೊಂಡಿತು.

ಪರಶಿವನ ಅಭಿವ್ಯಕ್ತ ಸ್ವರೂಪಿಗಳಾದ ಶ್ರೀಶಂಕರಭಗವತ್ಪಾದರು ಸಮ್ಸ್ಥಾಪಿಸಿದ ಶ್ರೀಪೀಠ ಸ್ಗ್ರೀಸಂಸ್ಥಾನಗೋಕರ್ಣ ಶ್ರೀರಾಮಚಂದ್ರಾಪುರಮಠ. ನಮ್ಮ ಪರಂಪರೆ ಜಗದ್ಗುರು ಶಂಕರಾಚಾರ್ಯರ ಪ್ರಮುಖ ಶಿಷ್ಯರಾದ ಶ್ರೀಸುರೇಶ್ವರಾಚಾರ್ಯರ ಜ್ಯೇಷ್ಠ ಶಿಷ್ಯ ಶ್ರೀವಿದ್ಯಾನಂದಚಾರ್ಯರಿಂದ ಪ್ರಾರಂಭವಾಯಿತು. ಈ ಪರಂಪರೆಯ ಹನ್ನೊಂದನೆಯ ಯತಿಗಳಾದ ಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳಿಗೆ ಶ್ರೀಶ್ರೀರಾಮಚಂದ್ರಭಾರತೀ ಹಾಗೂ ಶ್ರೀಶ್ರೀರಘೂತ್ತಮಭಾರತೀ ಎಂಬ ಇಬ್ಬರು ಶಿಷ್ಯರು. ೧೫ನೇ ಶತಮಾನದಲ್ಲಿ ಶ್ರೀಶ್ರೀ ರಘುತ್ತಮಭಾರತೀಮಹಾಸ್ವಾಮಿಗಳು ಕೆಕ್ಕಾರಿಗೆ ಬಂದು ಮಠ ಸ್ಥಾಪಿಸಿದರು. ಅದೇ ಮುಮ್ದೆ ಕೆಕ್ಕಾರು ಶ್ರೀರಘುತ್ತಮಮಠ ಎಂದು ಪ್ರಸಿದ್ಧಿ ಹೊಂದಿತು. ಪ್ರಕೃತಿಯ ಮಡಿಲಲ್ಲಿರುವ ಕೆಕ್ಕಾರುಮಠ ಕಾರವಾರದಿಂದ ಭಟ್ಕಳದವರೆಗೆ ಸಹಸ್ರಾರು ಕುಟುಂಬಗಳನ್ನು ಶಿಷ್ಯಗಣವನ್ನಾಗಿ ಹೊಂದಿವೆ. ಈ ಪೀಠದ ಮೂವತ್ತೈದೆನೆಯ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಂದ್ರಭಾರತೀ ಮಹಾಸ್ವಾಮಿಗಳು ಶ್ರೀಮಠದ ಗರ್ಭಗುಡಿ ಹಾಗೂ ಶ್ರೀಕರಾರ್ಚಿತ ದೇವತಾ ಪುಣ್ಯಸ್ಥಳಗಳನ್ನು ಜೀರ್ಣೋದ್ಧಾರಗೊಳಿಸಿರುವರು.

k. matha dwarak mathak. matagudisaluk mat
ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು (ಮೂವತ್ತಾರನೆಯ ಪೀಠಾಧಿಪತಿಗಳು) ತಮ್ಮ ಇಪ್ಪತ್ತೊಂದನೆಯ ಜಯಚಾತುರ್ಮಾಸ್ಯವನ್ನು ಹೊನ್ನಾವರ ತಾಲೂಕು, ಶ್ರೀರಘುತ್ತಮಮಠ ಕೆಕ್ಕಾರು ಇಲ್ಲಿ ತಾರೀಕು ೧೨.೭.೨೦೧೪ಶನಿವಾರದಿಂದ ೯-೯.೨೦೧೪ ಮಂಗಳವಾರದ ವರೆಗೆ ಆಚರಿಸುವರು.
ನಾವು ರಾತ್ರೆ ಕೆಕ್ಕಾರುಮಠಕ್ಕೆ ಹೋದೆವು. ರಾತ್ರೆ ೯ಗಂಟೆಯಿಂದ ೧೧.೧೫ರ ತನಕ ಸ್ವಾಮೀಜಿಗಳು ನಡೆಸಿಕೊಡುವ ರಾಮಕಥೆಯ ಸೀತಾಕಲ್ಯಾಣದ ಒಂದು ಭಾಗವನ್ನು ಕೇಳಿದೆವು. ನಮಗೆ ಉಳಿದುಕೊಳ್ಳಲು ಅತಿಥಿ ಗೃಹದಲ್ಲಿ ಅವಕಾಶ ಕೊಟ್ಟಿದ್ದರು.
೨೪.೮.೨೦೧೪ರಂದು ಬೆಳಗ್ಗೆ ಎದ್ದು ಸ್ನಾನಾದಿಗಳನ್ನು ಮುಗಿಸಿ ತಿಂಡಿ ತಿಂದು ಗುರುಗಳು ಮಾಡುತ್ತಿದ್ದ ಪೂಜೆ ನೋಡಿದೆವು. ಗುರುಗಳಿಂದ ಮಂತಾಕ್ಷತೆ ಪಡೆದು ಧನ್ಯರಾದೆವು. ಕೆಕ್ಕಾರುಮಠ ಚೊಕ್ಕವಾಗಿ ಚೆನ್ನಾಗಿದೆ. ದಿನಕ್ಕೆ ಸಾವಿರಾರು ಮಂದಿ ಅಲ್ಲಿಗೆ ಬಂದು ಗುರುಗಳನ್ನು ಭೇಟಿಯಾಗುತ್ತಾರೆ. ಅವರಿಗೆಲ್ಲ ವಸತಿ ಸೌಕರ್ಯ, ತಿಂಡಿ ಊಟೋಪಚಾರ ಎಲ್ಲವನ್ನೂ ಅಚ್ಚುಕಟ್ಟಾಗಿ ಏರ್ಪಾಡು ಮಾಡಿದ್ದರು. ಮಧ್ಯಾಹ್ನ ಊಟ ಮುಗಿಸಿ ೨.೩೦ಕ್ಕೆ ಹೊರಟೆವು. ಜೋಗ ಜಲಪಾತವನ್ನೂ ವೀಕ್ಷಿಸಿದೆವು. ಆದರೆ ನೀರು ಹೆಚ್ಚು ಇರಲಿಲ್ಲ. ಮೈಸೂರು ತಲಪುವಾಗ ೨೫ನೇ ತಾರೀಕು ಬೆಳಗ್ಗೆ ೨ ಗಂಟೆಯಾಗಿತ್ತು. ಈ ಎಲ್ಲ ಕ್ಷೇತ್ರದರ್ಶನದ ವ್ಯವಸ್ಥೆಯನ್ನು ಮೈಸೂರಿನ ಹವ್ಯಕ ಪರಿಷತ್ತು ಏರ್ಪಡಿಸಿತ್ತು.

Read Full Post »