ಮೈಸೂರಿನ ಕುವೆಂಪುನಗರದಲ್ಲಿರುವ ಒಂದು ಖಾನಾವಳಿಗೆ ಪಾನೀಪೂರಿ, ದೋಸೆ ತಿನ್ನುವ ಸಲುವಾಗಿ ಒಂದು ಸಂಜೆ ಮಗಳು ಅಳಿಯ ಒಂದು ಸ್ಕೂಟರಿನಲ್ಲಿ ನಾನೊಂದು ಸ್ಕೂಟರಿನಲ್ಲಿ ಹೋದೆವು. ನಾನು ಖಾನಾವಳಿಯ ಪಕ್ಕದಲ್ಲಿ ಕಾಲುದಾರಿಯಲ್ಲಿ ಸ್ಕೂಟರ್ ನಿಲ್ಲಿಸಿದೆ. ಸಾಲಾಗಿ ಆರೇಳು ಬೈಕುಗಳು ಅಲ್ಲಿ ಅದಾಗಲೆ ನಿಂತಿದ್ದುವು. ಮಗಳು ಸ್ಕೂಟರನ್ನು ಸುರಕ್ಷಿತ ಸ್ಥಳದಲ್ಲಿ ನಿಲ್ಲಿಸಿ ಬಂದು, ನೀನೆಲ್ಲಿ ನಿಲ್ಲಿಸಿದೆ ಎಂದು ನನ್ನನ್ನು ಕೇಳಿದಳು. ಸ್ಕೂಟರ್ ನಿಲ್ಲಿಸಿದ ಸ್ಥಳ ತೋರಿಸಿದೆ. ಏ, ಬೇಡ ಅಲ್ಲಿ ನಿಲ್ಲಿಸಬೇಡಾ. ಅಲ್ಲಿ ನಿಲ್ಲಿಸಬಾರದೋ ಏನೋ. ತೆಗೆದು ಬೇರೆಡೆ ನಿಲ್ಲಿಸಿ ಬಾ. ಎಂದಳು. ಏನಾಗಲ್ಲ ಅಲ್ಲಿ ಸುಮಾರು ಗಾಡಿಗಳನ್ನು ನಿಲ್ಲಿಸಿದ್ದಾರೆ. ಅವರೆಲ್ಲ ಮೂರ್ಖರಾ ಎಂದು ವಾದ ಮಾಡಿದೆ. ಅಳಿಯನೂ ಅದಕ್ಕೆ ಅನುಮೋದನೆ ಕೊಟ್ಟ. ನನ್ನ ವಾದಸರಣಿಗೆ ಮಗಳು ಸೋತು ಸುಮ್ಮನಾದಳು. ಪಾನಿಪೂರಿ, ದೋಸೆ ತಿಂದು ಹೊರಗೆ ಬಂದೆವು. ನೋಡಿದಾಗ ಅಲ್ಲಿ ನನ್ನ ಸ್ಕೂಟರ್ ನಾಪತ್ತೆ. ಒಂದು ವಾಹನವೂ ಇಲ್ಲ ಅಲ್ಲಿ! ಮಗಳು ಸ್ಕೂಟರ್ ತಂದು ನಮ್ಮ ಪಕ್ಕ ನಿಲ್ಲಿಸಿದವಳೇ ನಮ್ಮ ಪೆಚ್ಚುಮೋರೆ ನೋಡಿ ಏನಾಯಿತು ಎಂದು ಕೇಳಿದಳು. ಸ್ಕೂಟರ್ ಎತ್ತಾಕಿಕೊಂಡು ಹೋಗಿದ್ದಾರೆ ಎಂದೆ ಸಣ್ಣ ಸ್ವರದಲ್ಲಿ. ನಾನು ಹೇಳಿದ್ದೆ ಅಲ್ಲಿ ನಿಲ್ಲಿಸುವುದು ಬೇಡ ಎಂದು. ಇಬ್ಬರೂ ಸೇರಿ ಇವಳೊಬ್ಬಳು ಎಲ್ಲದಕ್ಕೂ ಹೆದರುತ್ತಾಳೆಂದು ನನ್ನನ್ನೇ ತಮಾಷೆ ಮಾಡಿದಿರಿ. ಹೀಗಾಗುವ ಬದಲು ಮುಂಜಾಗ್ರತೆ ಮಾಡುವುದು ಎಷ್ಟೋ ಒಳ್ಳೆಯದು. ಯಾವುದಕ್ಕೂ ಮುಂಜಾಗ್ರತೆ ಬೇಕು ಎಂದು ಅಜ್ಜಿ ಹೇಳಿದ್ದಾರೆ. ಅಜ್ಜಿ ಹೇಳಿದ್ದು ಸರಿ. ಎಂದು ಸರೀ ಬೈದಳು. ಬೈದದ್ದನ್ನೆಲ್ಲ ತುಟಿಪಿಟಿಕ್ಕೆನ್ನದೆ ಕೇಳಿದೆ. ಅಳಿಯನೂ ಬಾಯಿಬಿಡಲಿಲ್ಲ. ಆಗ ಪ್ರತಿಯಾಗಿ ಮಾತಾಡುವ ಸ್ಥಿತಿಯಲ್ಲಿರಲಿಲ್ಲ ನಾವು!
ಸ್ಕೂಟರ್ ಅನಂತನ ಹೆಸರಿನಲ್ಲಿತ್ತು. ಹಾಗಾಗಿ ಅನಂತನಿಗೆ ಫೋನಾಯಿಸಿದೆ. ‘ನೀನು ಕೀಲಿ ತಕ್ಕೊಂಡು ಆರಕ್ಷಕ ಠಾಣೆಗೆ ಬಾ. ಅದೇನು ಮೂರು ನಿಮಿಷದ ಕೆಲಸ. ದುಡ್ಡುಕಟ್ಟಿ ತೆಕ್ಕೊಂಡು ಬರುವುದೇ. ಹಿಂದೆ ಎರಡು ಸಲ ನನಗೂ ಈ ಅನುಭವ ಆಗಿತ್ತು’ ಎಂದಾಗ ನನ್ನ ಪುಕು ಪುಕು ತಹಬಂದಿಗೆ ಬಂತು! ಮಗಳು ನನ್ನನ್ನು ಪೋಲೀಸ್ ಠಾಣೆಗೆ ಬಿಟ್ಟಳು. ಅದಾಗಲೇ ಅನಂತ ಕಚೇರಿಯಿಂದ ಅಲ್ಲಿಗೆ ಬಂದಿದ್ದ. ಗಾಡಿ ಸಂಖ್ಯೆ ಹೇಳಿದಾಗ ರೂ. ೩೦೦ ಕಟ್ಟಿದ ಬಳಿಕ ಗಾಡಿ ತಗೊಂಡೋಗಿ ಎಂದರು. ನಾನು ಏನೇನೋ ಕಲ್ಪನೆ ಮಾಡಿದ್ದೆ. ಗಾಡಿ ಯಾರ ಹೆಸರಲ್ಲಿದೆಯೋ ಅವರು ಗುರುತು ಚೀಟಿ ಕೊಂಡೋಗಿ ಪೋಲೀಸರ ಎದುರು ತೋರಿಸಬೇಕು. ಆಗ ಮಾತ್ರ ಗಾಡಿ ಕೊಡುತ್ತಾರೆ ಎಂದೆಲ್ಲ ಕಲ್ಪಿಸಿಕೊಂಡೇ ಅನಂತನಿಗೆ ಹೇಳಿದ್ದು. ಇಲ್ಲಿ ನೋಡಿದಾಗ ಅನಂತ ಬರಬೇಕೆಂದೇ ಇರಲಿಲ್ಲ. ಆದರೆ ಠಾಣೆಯಲ್ಲಿ ಅವರು ಯಾವ ದಾಖಲೆಯನ್ನೂ ಕೇಳಲಿಲ್ಲ. ಗಾಡಿ ಯಾರ ಹೆಸರಲ್ಲಿದೆ ಎಂದೂ ಕೇಳಲಿಲ್ಲ. ಅವರಿಗೆ ರೂ. ೩೦೦ ಮುಖ್ಯವೇ ಹೊರತು ಗಾಡಿಯ ಗೊಡವೆ ಅವರಿಗೆ ಬೇಡ. ಎಂಬುದು ನನಗೆ ವೇದ್ಯವಾಯಿತು. ನಾನು ಯಾವ ಗಾಡಿ ಕೊಂಡೋದೆ ಎಂದು ಅವರು ಅತ್ತ ಕಣ್ಣು ಹಾಯಿಸಲೂ ಇಲ್ಲ. ಹೀಗೂ ಉಂಟೆ? ಎಂದು ನಾನು ಬಾಯಿಬಿಟ್ಟು ಯೋಚಿಸಿದೆ! ದುಡ್ಡು ಅಷ್ಟೇ ಮುಖ್ಯ ಎಂದರಿವಾಯಿತು.
ಪಾನಿಪೂರಿ, ದೋಸೆಯ ಬೆಲೆ ಬಲು ದುಬಾರಿಯೆನಿಸಿ ಹೊಟ್ಟೆಯಲ್ಲಿ ಅವು ಭಗಭಗ ಉರಿಯಲು ತೊಡಗಿತು! ಈ ಘಟನೆಯಿಂದ ತಿಳಿದುಕೊಳ್ಳುವ ನೀತಿಪಾಟವೇನು? ಮಕ್ಕಳು ಹೇಳಿದ್ದು ಕೆಲವೊಮ್ಮೆ ಸುಳ್ಳಾಗುವುದಿಲ್ಲ. ಮಕ್ಕಳ ಮಾತನ್ನು ಒಮ್ಮೊಮ್ಮೆಯಾದರೂ ತಾಳ್ಮೆಯಿಂದ ಕೇಳಬೇಕು. ಅವರು ಹೇಳಿದಂತೆ ನಡೆದುಕೊಳ್ಳಬೇಕು. ಮಕ್ಕಳು ಜಾಣರಿರುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಅಮ್ಮಂದಿರು ಕೆಲವೊಮ್ಮೆ ತಾವು ಅತೀಬುದ್ಧಿವಂತರೆಂದು ತಿಳಿದುಕೊಳ್ಳುವುದನ್ನು ಬಿಡಬೇಕು!
ಪ್ರಕಟ: ಅಪರಂಜಿ ಅಕ್ಟೋಬರ ೨೦೧೬
ನಿಮ್ಮದೊಂದು ಉತ್ತರ