ಗಂಗೋತ್ರಿಯೆಡೆಗೆ ಪಯಣ
ಬೆಳಗ್ಗೆ (೧೫-೯-೨೦೧೬) ೫.೩೦ಕ್ಕೆ ಎದ್ದು, ತಯಾರಾಗಿ ೬.೩೦ಕ್ಕೆ ಕೌಸಲ್ಯಳಿಗೆ ವಿದಾಯ ಹೇಳಿ ಬಾರ್ಕೋಟ್ ಬಿಟ್ಟೆವು. . ಕೌಸಲ್ಯಳ ಕಣ್ಣು ನಮ್ಮ ಹಿಂದೆಯೇ ಸುತ್ತುತ್ತಿತ್ತು. ಅಡುಗೆಮನೆಯಲ್ಲಿ ಅಡುಗೆಮಾಡುವಾಗ ಯಾವ ಪಾತ್ರೆ ಉಪಯೋಗಿಸಿದ್ದೇವೆ, ಏನು ಮಾಡುತ್ತಿದ್ದೇವೆ ಎಂದು ಹದ್ದಿನ ಕಣ್ಣಿಂದ ನೋಡುತ್ತಿದ್ದರು. ನಾವು ಮಾಡಿದ ಅಡುಗೆಯಲ್ಲಿ ಪಾಲು ಕೇಳುತ್ತಿದ್ದರು. ಶಶಿಕಲಾ ಅವರು ಉಟ್ಟ ಸೀರೆ ಕೌಸಲ್ಯಳಿಗೆ ಬಹಳ ಮೆಚ್ಚುಗೆಯಾಗಿ ಈಗಲೆ ಬಿಚ್ಚಿ ಕೊಡು ಎಂದು ಕೇಳಿದ್ದರಂತೆ!
ಮೆಹರ್ಗಾಂವ್ ಗುಹೆ- ಪ್ರಕಟೇಶ್ವರ ಮಹದೇವ
ಗಂಗೋತ್ರಿಗೆ ಹೋಗುವ ದಾರಿಯಲ್ಲಿ ಮೆಹರ್ಗಾಂವ್ ಗುಹೆ ಸಿಗುತ್ತದೆ. ಅಲ್ಲಿಗೆ ತೆರಳಲು ರಸ್ತೆಯಿಂದ ೬೦-೭೦ ಎತ್ತರದ ಮೆಟ್ಟಲು ಹತ್ತಬೇಕು. ಕೈಹಿಡಿದು ಹತ್ತಿಸುವೆವು ಎಂದು ಹತ್ಟಾರು ಮಂದಿ ಸುತ್ತುವರಿಯುತ್ತಾರೆ. ಅವರಲ್ಲಿ ೪-೫ ವರ್ಷದ ಮಕ್ಕಳೂ ನಮ್ಮ ಕೈಹಿಡಿದು ಹತ್ತಿಸಲು ಮುಂದೆ ಬರುತ್ತಾರೆ! ಮೇಲೆ ಹತ್ತಿ ಗುಹೆಯ ಬಳಿ ಬಂದೆವು. ಪ್ರಕಟೇಶ್ವರ ಮಹಾದೇವ ಗುಹೆ ಒಳಗೆ ಒಮ್ಮೆಲೆ ಐದು ಜನರಿಗಿಂತ ಹೆಚ್ಚು ಮಂದಿ ಹೋಗಲು ಸಾಧ್ಯವಿಲ್ಲ. ಒಳಗೆ ಪಂಚಲಿಂಗ ಅಡ್ಭುತವಾಗಿದೆ. ಗಣೇಶ, ಇಲಿ, ದುರ್ಗೆ, ಗಂಗೆ, ಕೈಲಾಸನಾಥ, ನಾಗನಂತೆ ಕಾಣುವ ಕಲ್ಲಿನಲ್ಲೇ ಉದ್ಭವವಾದ ಮೂರ್ತಿಗಳು. ಬಹಳ ಚೆನ್ನಾಗಿವೆ. ನೋಡಿ ಕೆಳಗೆ ಬಂದೆವು. ಬೆಳಗ್ಗೆ ಉಪ್ಪಿಟ್ಟು, ಮೊಸರನ್ನ ಬೆಂಡೆಗೊಜ್ಜು ಮಾಡಿ ತಂದಿದ್ದೆವು. ಬಸ್ಸಿನಲ್ಲಿ ಕೂತು ತಿಂದು, ೯.೩೦ಗೆ ಅಲ್ಲಿಂದ ಹೊರಟೆವು.
ಪೈಲೆಟ್ ಬಾಬಾ ಆಶ್ರಮ
ಗಂಗೋತ್ರಿಯೆಡೆಗಿನ ದಾರಿಯಲ್ಲಿ ಮುಂದೆ ಹೋಗುತ್ತ, ಪೈಲೆಟ್ ಬಾಬಾ ಆಶ್ರಮ ನೋಡಿದೆವು. ಸಿಮೆಂಟಿನಲ್ಲಿ ತಯಾರಿಸಿದ ಹತ್ತಾರು ಪ್ರತಿಮೆಗಳನ್ನು ಅಲ್ಲಲ್ಲಿ ಪ್ರತಿಷ್ಠಾಪಿಸಿದ್ದಾರೆ. ಶಿವನ ಬೃಹತ್ ಪ್ರತಿಮೆಯಿದೆ. ನದಿ ತೀರದಲ್ಲಿ ಆಶ್ರಮ ಬಲು ವಿಸ್ತಾರವಾಗಿದೆ. ಸಾಕಷ್ಟು ಖರ್ಚು ಮಾಡಿದ್ದಾರೆ. ನೋಡುವಾಗ ಯಾಕಾಗಿ ಇಂಥ ದುಂದುವೆಚ್ಚ ಮಾಡುತ್ತಾರಪ್ಪ ಎನಿಸುತ್ತದೆ. ನಾವು ಅಡ್ಡಾಡುವಾಗ ಅಲ್ಲಿ ನರಮನುಷ್ಯರಿರಲಿಲ್ಲ.
ಜಲಪಾತ
ದಾರಿಯಲ್ಲಿ ಮುಂದೆ ಸಾಗುತ್ತಿರುವಾಗ ರಸ್ತೆಬದಿ ಬಲು ಸುಂದರ ಜಲಪಾತ ಎದುರಾಯಿತು. ಎಲ್ಲರೂ ಇಲ್ಲಿ ನಿಲ್ಲಿಸಿ ಎಂದು ಬೊಬ್ಬೆ ಹೊಡೆದರು. ಮಂಗಾರಾಮರೂ ಬಸ್ ನಿಲ್ಲಿಸಿದರು. ಬಸ್ ನಿಂತದ್ದೇ ಎಲ್ಲ ನೀರಿನೆಡೆ ಧಾವಿಸಿದರು. ಕೆಲವರು ನೀರಿನಾಡಿಗೆ ತಲೆಕೊಟ್ಟು ಆನಂದ ಅನುಭವಿಸಿದರು. ಮತ್ತೆ ದಿರಿಸು ಒದ್ದೆಯಾಗಿ ಕಷ್ಟ ಅನುಭವಿಸಿದರು. ಗಂಡಸರು ಹೋಗಿ ನೀರಿನಲ್ಲಿ ಸ್ನಾನ ಮಾಡಿದರು. ಮಂಗಾರಾಮ, ಸೋನು ಕೂಡ ಚೆನ್ನಾಗಿ ಸ್ನಾನ ಮಾಡಿದರು. ನಾವು ಕೆಲವರು ರಸ್ತೆಯಲ್ಲಿ ಹರಿಯುವ ನೀರಿಗೆ ಕಾಲಾಡಿಸಿ ಫೋಟೋ ತೆಗೆಯುತ್ತ ಖುಷಿ ಅನುಭವಿಸಿದೆವು. ಸರಸ್ವತಿ, ಸೋಮಶೇಖರ್ ದಂಪತಿಗಳು ನಿನಗೆ ನಾನು ನನಗೆ ನೀನು, ಬಿಡಲಾರೆ ಂದೂ ನಿನ್ನ ಕೈ ಎಂದು ಹಾಡುತ್ತ ನೀರಲ್ಲಿ ಕೈ ಕೈ ಹಿಡಿದು ನಡೆದರು!
ಪರಾಶರ ದೇವಾಲಯ
ನೈನ್ಗಂಗಾ ಎಂಬಲ್ಲಿ ಪರಾಶರ ದೇವಾಲಯ ನೋಡಿದೆವು. ಸುಮಾರು ಮೆಟ್ಟಲು ಹತ್ತಬೇಕು. ಅಲ್ಲಿ ಬಿಸಿನೀರಿನಕುಂಡ ಇದೆ. ನೀರು ಅತ್ಯಂತ ಬಿಸಿಯಾಗಿತ್ತು. ಸ್ನಾನ ಮಾಡಲು ಸಾಧ್ಯವಿಲ್ಲ.
ಅದಾಗಲೇ ಗಂಟೆ ೩.೪೫ ಆಗಿತ್ತು. ಮಧ್ಯಾಹ್ನದ ಊಟಕ್ಕೆ ನಿಲ್ಲಿಸಲಿಲ್ಲವೆಂದು ಕೆಲವರಿಗೆ ಅಸಮಾಧಾನವಗಿತ್ತು. ಆದರೆ ವಿಠಲರಾಜು ಅವರ ಗುರಿ ಇದ್ದುದು ರಾತ್ರೆಯೊಳಗೆ ಗಂಗೋತ್ರಿ ತಲಪಬೇಕೆಂಬುದಾಗಿ. ಊಟಕ್ಕೆ ನಿಲ್ಲಿಸಿದರೆ ಹೊತ್ತು ಸರಿಯುವುದು ಗೊತ್ತಾಗುವುದಿಲ್ಲ. ಕಡಿಮೆ ಎಂದರೂ ಅರ್ಧ ಗಂಟೆ ವ್ಯರ್ಥವಾಗುತ್ತದೆ. ಅಸಮಧಾನಗೊಂಡವರೆಲ್ಲ ಅವರ ಉದ್ದೇಶವನ್ನು ತಡವಾಗಿ ಅರ್ಥಮಾಡಿಕೊಂಡರು. ಉದರದ ಉರಿಗೆ ಗೊಜ್ಜವಲಕ್ಕಿ, ರಾಗಿಹುರಿಹಿಟ್ಟು, ಬೆಳಗ್ಗೆಯ ಉಪ್ಪಿಟ್ಟು ಹಂಚಿ ಶಮನಗೊಳಿಸಿದರು!
ಭೈರವ ಮಂದಿರ
ಗಂಗೋತ್ರಿ ಪ್ರವೇಶಕ್ಕೆ ಮೊದಲು ಭೈರವ ಮಂದಿರ ಸಿಗುತ್ತದೆ. ಗಂಗೋತ್ರಿಗೆ ಕಾಲಿಡುವ ಮೊದಲು ಭೈರವನ ದರ್ಶನ ಮಾಡಿಯೇ ಮುಂದುವರಿಯಬೇಕೆಂಬುದು ಪ್ರತೀತಿಯಂತೆ. ಸಂಜೆ ಆರು ಗಂಟೆಗೆ ದೇವಾಲಯ ನೋಡಿ ಪ್ರದಕ್ಷಿಣೆ ಹಾಕಿದೆವು.
ಗಂಗೋತ್ರಿ ದೇವಾಲಯಕ್ಕೆ ಭೇಟಿ
ಗಂಗೋತ್ರಿ ತಲಪಿ ವಸತಿಗೃಹದಲ್ಲಿ ಲಗೇಜು ಇಟ್ಟು ಸ್ವೆಟರ್ ತೊಟ್ಟೆವು. ಶೀತಲಗಾಳಿ ಕೊರೆಯುತ್ತಿತ್ತು. ಸಮುದ್ರಮಟ್ಟದಿಂದ ಗಂಗೋತ್ರಿ ೧೦೩೫೫ ಅಡಿ ಎತ್ತರದಲ್ಲಿದೆ. ಯಮುನೋತ್ರಿಯಿಂದ ಗಂಗೋತ್ರಿಗೆ ೨೨೮ಕಿಮೀ ಇದೆ. ಅತ್ಯಂತ ಪ್ರಸಿದ್ಧ ಧಾರ್ಮಿಕ ತಾಣಗಳಲ್ಲಿ ಗಂಗೋತ್ರಿಯು ಸೇರಿದೆ. ಉತ್ತರಖಂಡ ರಾಜ್ಯದ ಉತ್ತರಕಾಶಿ ಜಿಲ್ಲೆಯಲ್ಲಿ ಇರುವ ಈ ದೇವಾಲಯ ಹಿಮಾಲಯ ಪರ್ವತ ಶ್ರೇಣಿಗಳ ನಡುವೆ ಇದೆ. ಗಂಗೋತ್ರಿ ಕ್ಷೇತ್ರವು ಹಿಂದೂ ಧರ್ಮದವರ ಪಾಲಿಗೆ ಅತಿ ಮಹತ್ವ ಪಡೆದಿರುವ ಸ್ಥಳವಾಗಿದೆ. ಗಂಗಾನದಿಯ ಉಗಮ ಸ್ಥಳವೂ ಹೌದು. ೧೮ನೆಯ ಶತಮಾನದಲ್ಲಿ ಗಂಗೆಯ ಈ ದೇವಾಲಯವನ್ನು ಗೋರ್ಖಾ ಜನರಲ್ ಆಗಿದ್ದ ಅಮರ ಸಿಂಗ್ ಥಾಪಾ ಎಂಬವರು ಕಟ್ಟಿಸಿದ್ದಾರೆ.
ರಾತ್ರಿಯಲ್ಲಿ ದೇವಾಲಯದ ಸೊಬಗನ್ನು ನೋಡುವುದೇ ಆನಂದ. ದೇವಾಲಯದೊಳಗೆ ಹೋದೆವು. ಗಂಗಾ. ಜಮುನಾ, ಸರಸ್ವತಿ, ಲಕ್ಷ್ಮೀ, ಪಾರ್ವತಿ ದೇವಿಯರ ಪ್ರತಿಮೆಗಳಿವೆ. ಗಂಗಾರತಿ ನೋಡಬೇಕೆಂಬ ನಮ್ಮ ಆಸೆ ಈಡೇರಲಿಲ್ಲ. ಅದಾಗಲೇ ಆಗಿತ್ತು.
ಭಗೀರಥ ತಪವನ್ನಾಚರಿಸಿದ ಸ್ಥಳ
ನದಿಯ ಪಕ್ಕ ಭಗೀರಥ ತಪಸ್ಸು ಮಾಡಿದ ಸ್ಥಳ ಎಂದು ಅಲ್ಲಿ ಭಗೀರಥನ ಪ್ರತಿಮೆ ಇದೆ. ಅದನ್ನು ನೋಡಿ ನದಿ ದಡಕ್ಕೆ ಹೋಗಿ ಮೇಲೆ ಬಂದೆವು. ರಾತ್ರಿ ನೀರು ಹರಿಯುವುದನ್ನು ನೋಡುವುದೇ ಸೊಗಸು.
ಪುರಾಣದ ಪ್ರಕಾರ, ರಾಜ ಭಗಿರಥನ ಪೂರ್ವಜರ ಪಾಪಕರ್ಮಗಳನ್ನು ತೊಳೆಯಲು ಗಂಗಾ ಮಾತೆಯು ಇಲ್ಲಿ ಭಾಗಿರಥಿಯಾಗಿ ಹರಿದಿದೆ. ಶಿವನು ಗಂಗೆಯನ್ನು ತನ್ನ ಮುಡಿಯಲ್ಲಿ ಧರಿಸುವ ಮೂಲಕ ಭೂಮಿಯು ಜಲಪ್ರಳಯವಾಗುವುದರಿಂದ ಕಾಪಾಡಿದ ಎಂದು ನಂಬಲಾಗುತ್ತದೆ.
ಬಿಸಿಬಿಸಿ ಸೂಪು
ವಾಪಾಸು ವಸತಿಗೃಹಕ್ಕೆ ಬರುತ್ತ ದಾರಿಯಲ್ಲಿ ಖಾನಾವಳಿಯಲ್ಲಿ ನಾವು ಕೆಲವರು ಚಳಿ ಹೊಡೆದೋಡಿಸಲು ಬಿಸಿಸೂಪು (ರೂ.೭೦) ಕುಡಿದೆವು, ಹಾಗೂ ಚೌಮಿನ್ (ನೂಡಲ್ಸ್) ಒಂದು ಪ್ಲೇಟ್ ತೆಗೆದುಕೊಂಡು ಹಂಚಿಕೊಂಡು ತಿಂದೆವು. ಅಲ್ಲಿ ರಾತ್ರೆ ಅಡುಗೆ ಮಾಡುವುದಾ ಅಲ್ಲ ಹೊಟೇಲಿಗೆ ಹೋಗುವುದಾ ಊಟ ಹೇಗೆ ಎಂದು ಚರ್ಚೆಯಾಗಿತ್ತು. ಮಾಡುವುದು ಶಶಿಕಲಾ, ಸರಸ್ವತಿ. ಆದರೆ ಅವ್ರು ಪ್ರಯಾಣದ ಆಯಾಸದಿಂದ ಬಳಲಿರುತ್ತಾರೆ. ಇವತ್ತು ಹೊತೇಲಿನಲ್ಲೆ ಮಾಡೋಣ ಎಂದು ನಮ್ಮಂಥ ಆಲಸಿ ಬಿಸಿರಕ್ತದವರ ಅಭಿಪ್ರಾಯ! ಅವರು ಮಾಡುವುದು ನಾವು ತಿನ್ನುವುದು ಎಂಬ ಸಂಕೋಚ ಬಾಧಿಸುತ್ತಲೇ ಇತ್ತು. ಆದರೆ ಅವರು ನಮ್ಮ ಮಾತಿಗೆ ಸೊಪ್ಪು ಹಾಕದೆ ಅಡುಗೆ ತಯಾರಿಸುವುದೆಂದೇ ತೀರ್ಮಾನಿಸಿ ಚಿತ್ರಾನ್ನ ಮಾಡಿದರು. ನಾವು ನಾಲ್ಕೈದು ಮಂದಿ ಬಿಸಿರಕ್ತದವರು ಸಣ್ಣಪುಟ್ಟ ಸಹಾಯ ಮಾಡಿದೆವು. ಚಿತ್ರಾನ್ನ ತಿಂದು ಕೋಣೆಗೆ ಬಂದರೆ ಚಳಿರಾಯ ಮೊದಲೇ ಬಂದು ನಮ್ಮ ಹಾಸಿಗೆ, ರಜಾಯಿ ಎಲ್ಲವನ್ನೂ ತಣ್ಣಗೆ ಮಾಡಿಟ್ಟಿದ್ದ.
ಮಗದೊಮ್ಮೆ ಗಂಗೋತ್ರಿದೇವಿ ದರ್ಶನ
ಬೆಳಗ್ಗೆ (೧೬-೯-೨೦೧೬) ಅದೂವರೆಗೆ ಎದ್ದೆವು. ಥೇಪನ್ ಖಾಂಡ್ಯಾಲ್ ಬಿಸಿನೀರು ಕಾಯಿಸಿ ಕೋಣೆಗೇ ಬಾಲ್ದಿಯಲ್ಲಿ ತಂದು ಕೊಟ್ಟರು. ರೂ. ೫೦ ಕೊಟ್ಟರೂ ಒಳ್ಳೆಯ ಸ್ನಾನವಾಯಿತು. ಸವಿತ, ನಾನು, ಹೇಮಮಾಲ ಒಂದು ಕೋಣೆಯಲ್ಲಿದ್ದುದು. ಸ್ನಾನ ಮುಗಿಸಿ ದೇವಾಲಯಕ್ಕೆ ಹೋದೆವು. ದೇವಸ್ಥಾನಕ್ಕೆ ಸುತ್ತು ಬರುವಾಗ ಒಳಗೆ ಗೋಡೆಯಲ್ಲಿ ಭಕ್ತರ ಕೈತುರಿಕೆ ಜಾಸ್ತಿಯಾಗಿ ಗೋಡೆ ತುಂಬ ಗೀಚಿದ್ದು ಕಂಡು ಮನ ರೋಸಿ ಹೋಯಿತು. ಮನುಷ್ಯರು ಕೆಟ್ಟಚಾಳಿ ಎಲ್ಲಿ ಹೋದರೂ ಬಿಡುವುದಿಲ್ಲವಲ್ಲ ಎನಿಸಿತು.
ಗಂಗಾ ನದಿಯ ಮೂಲ ಅಥವಾ ಗೋಮುಖವು ಗಂಗೋತ್ರಿಯಿಂದ ೨೧ ಕಿ.ಮೀ. ದೂರದಲ್ಲಿದೆ. ಈ ಸಂಧಿ ತಾಣದಿಂದ ಮುಂದೆ ಗಂಗಾ ನದಿಯ ಉಗಮಸ್ಥಾನವೇ ಗೋಮುಖ. ಗಂಗೋತ್ರಿಯಿಂದ ಗೋಮುಖಕ್ಕೆ ಹೋಗಲು ದಾರಿ ಅತ್ಯಂತ ಕ್ಲಿಷ್ಟಕರವಾಗಿದೆ. ೨೧ಕಿಮೀ. ದೂರ ನಡೆಯಬೇಕು. ಬೆಟ್ಟ ಹತ್ತಬೇಕು. ನಾವು ಹೋಗಲಿಲ್ಲ.
ಭಾಗಿರಥಿ ನದಿಯ ಮೇಲ್ಭಾಗದಲ್ಲಿ ದಟ್ಟಾರಣ್ಯ ಆವರಿಸಿದೆ. ಈ ಪ್ರದೇಶದ ಭೂಮಿಯನ್ನು ಗಮನಿಸಿದಾಗ ಹಿಮಾಚ್ಛಾದಿತ ಬೆಟ್ಟಗಳು, ಉದ್ದನೆ ಶಿಖರಗಳು, ಆಳವಾದ ಕಣಿವೆ, ನೇರವಾಗಿ ಕಣ್ಣು ಹಾಯಿಸಿದಷ್ಟೂ ಕಾಣುವ ಕಣಿವೆ ಪ್ರದೇಶ ಗಮನ ಸೆಳೆಯುತ್ತವೆ.
ಗಂಗೋತ್ರಿಗೆ ವಿದಾಯ
ದೇವಾಲಯದಿಂದ ಹೊರಟು ಅಲ್ಲೇ ಹತ್ತಿರವಿದ್ದ ಕಾರ್ಯಾಲಯದಲ್ಲಿ ಬಯೋಮೆಟ್ರಿಕ್ ಕಾರ್ಡನ್ನು ತೋರಿಸಿ ಎಂಟ್ರಿ ಹಾಕಿಸಿ, ಹತ್ತಿರವಿದ್ದ ಖಾನಾವಳಿಯಲ್ಲಿ ಪರೋಟ ತಿಂದು ವಸತಿಗೃಹಕ್ಕೆ ಬಂದು ಗಂಟುಮೂಟೆ ಕಟ್ಟಿ ಬೆಳಗ್ಗೆ ೯.೫೦ಕ್ಕೆ ಬಸ್ ಹತ್ತಿದೆವು. ದಾರಿಯಲ್ಲಿ ಅಲ್ಲಲ್ಲಿ ಸ್ಪೀಡ್ ಬ್ರೇಕರುಗಳು ಸಿಕ್ಕಿದುವು. ಆ ದೃಶ್ಯ ಮಾತ್ರ ನಯನ ಮನೋಹರವಾಗಿತ್ತು. ಅದೆಷ್ಟೊಂದು ಕುರಿಗಳು, ಆಡುಗಳು ಶಿಸ್ತಿನಿಂದ ಸಾಲಾಗಿ ಹೋಗುತ್ತಿರುವುದನ್ನು ನೋಡಿದೆವು.
ಪ್ರಾಚೀನ ಕಲ್ಪ ಕೇದಾರ
ಗಂಗೋತ್ರಿಯಿಂದ ಕೇದಾರದೆಡೆಗೆ ಸಾಗುವಾಗ ದಾರಿಯಲ್ಲಿ ಪ್ರಾಚೀನ ಕಲ್ಪಕೇದಾರ ದೇವಾಲಯ ನೋಡಿದೆವು. ಸ್ಥಳೀಯರು ಅಲ್ಲಿ ದೇವರಿಗೆ ನೈವೇದ್ಯವೆಂದು ಸೇಬು ಇಟ್ಟಿದ್ದರು. ಪ್ರಸಾದವೆಂದು ನಾವು ಸೇಬು ತೆಗೆದು ತಿಂದೆವು!
ಸೇಬಿನ ತೋಟ
ದೇವಾಲಯದ ಪಕ್ಕದಲ್ಲೂ ಸೇಬಿನ ತೋಟ ಇತ್ತು. ಹತ್ತಿರದಿಂದ ಸೇಬು ನೋಡಿ ತೃಪ್ತಿಪಟ್ಟೆವು. ದಾರಿಯುದ್ದಕ್ಕೂ ಸೇಬಿನ ತೋಟಗಳು ನಮ್ಮ ಗಮನ ಸೆಳೆದುವು. ಅಬ್ಬ ಒಂದೊಂದು ಮರದಲ್ಲೂ ಸೇಬಿನ ರಾಶಿಗಳು. ಕೆಲವು ಮರಗಳಲ್ಲಿ ಎಲೆಯೇ ಇಲ್ಲ. ಕೆಂಪು ಸೇಬುಗಳೇ ತುಂಬಿ ಮರವೇ ಕಾಣುತ್ತಿರಲಿಲ್ಲ. ಆಹಾ ಇಂಥ ಒಂದು ಮರ ನಮ್ಮ ಹಿತ್ತಲಲ್ಲಿದ್ದರೆ ಸಾಕು ಎಂಬ ಭಾವ ಆ ಕ್ಷಣ ಅನಿಸಿತ್ತು! ರೂ. ೫೦ಕ್ಕೆ ಸೇಬು ಕೊಂಡು ಮನದಣಿಯೆ ತಿಂದೆವು.
ಉತ್ತರಕಾಶಿ
ಉತ್ತರಕಾಶಿಯಲ್ಲಿ ವಿಶ್ವನಾಥ ದೇವಾಲಯ ನೋಡಿದೆವು. ದೊಡ್ಡ ತ್ರಿಶೂಲವೂ ಇತ್ತು. ಉತ್ತರಾಖಂಡದಲ್ಲಿರುವ ಹೆಚ್ಚಿನ ದೇವಾಲಯವೂ ಗಡ್ವಾಲ್ ಶೈಲಿಯವು. ಭಾಗೀರಥೀ ನದಿಯ ಎಡದಂಡೆಯಮೇಲೆ ದೊಡ್ಡದಾದ ವಿದ್ಯುತ್ ಉತ್ಪಾದನಾ ಕೇಂದ್ರವಿದೆ. ಅಲ್ಲಿ ನೀರು ಜಲಪಾತದಂತೆ ಹರಿಯುವುದನ್ನು ನೋಡಿದೆವು.
ಅಲ್ಲಿ ಹೊಟೇಲಲ್ಲಿ ಚಪಾತಿ ತಿಂದು ೨.೪೫ಕ್ಕೆ ಹೊರಟೆವು.
ಚೌರಂಗಿನಾಥ ಮಂದಿರ
ಮುಂದೆ ಸಾಗುತ್ತ ಚೈರಂಗಿಕಾಲ್ ಊರಿಗೆ ಸಂಜೆ ನಾಲ್ಕು ಗಂಟೆಗೆ ತಲಪಿದೆವು. ಅಲ್ಲಿ ಚೌರಂಗಿನಾಥ ಮಂದಿರವಿದೆ. ಒಂದೇ ಬಾಣದಲ್ಲಿ ಮೂರು ರಕ್ಕಸರನ್ನು ಕೊಂದದ್ದಂತೆ ಚೌರಂಗಿನಾಥ. ಅಲ್ಲಿ ದೇವಾಲಯ ನೋಡಿ ಮುಂದೆ ಹೋಗುವಾಗ ದಾರಿಯಲ್ಲಿ ರಸ್ತೆಯಲ್ಲಿ ಜೆ.ಸಿಬಿ ಲಾರಿ ಕೆಲಸ ಮಾಡುತ್ತಿತ್ತು. ರಸ್ತೆಗೆ ಬಿದ್ದಿದ್ದ ಕಲ್ಲುಬಂಡೆಗಳನ್ನು ತೆರವುಗೊಳಿಸುತ್ತಿತ್ತು. ಹಾಗೆ ಅರ್ಧ ಗಂಟೆ ದಾರಿಬದಿ ಕಾಯಬೇಕಾಯಿತು.
ಚಮಿಯಾಲ
ರಾತ್ರೆ ೭.೩೦ಗೆ ಚಮಿಯಾಲದಲ್ಲಿ ಹಿಮ ಆನಂದ ಎಂಬ ವಸತಿಗೃಹದಲ್ಲಿ ನಮ್ಮ ವಾಸ್ತವ್ಯ. ಅಲ್ಲೆ ಹೋಟೇಲಲ್ಲಿ ಚಪಾತಿ, ಅನ್ನ ಸಾರು ಊಟ. ರೂ. ೩೦ ಕೊಟ್ಟು ಬಿಸಿನೀರು ಸ್ನಾನ ಮಾಡಿದೆ. ತಣ್ಣೀರು ಸ್ನಾನ ಮಾಡಿ ಸಾಕಾಗಿತ್ತು!
ವ್ಯಾಸ ಮಂದಿರ
ಚಮಿಯಾಲದಿಂದ ೧೭-೯-೨೦೧೬ರಂದು ಬೆಳಗ್ಗೆ ೫.೩೦ಗೆ ಹೊರಟೆವು. ಹಿಂದಿನ ದಿನವೇ ಇಂತಿಷ್ಟು ಗಂಟೆಗೆ ಹೊರಡಬೇಕೆಂದು ವಿಠಲರಾಜು ಹೇಳುತ್ತಿದ್ದರು. ಅವರು ಹೇಳಿದ ಸಮಯಕ್ಕೆ ಸರಿಯಾಗಿ ಎಲ್ಲರೂ ಹೊರಟು ಬಸ್ ಹತ್ತುತ್ತಿದ್ದೆವು. ನಮ್ಮ ತಂಡದ ಎಲ್ಲರೂ ಅಷ್ಟು ಶಿಸ್ತು ಪಾಲಿಸುತ್ತಿದ್ದೆವು. ವ್ಯಾಸಮಂದಿರ ನೋಡಿದೆವು. ವ್ಯಾಸಮಂದಿರದಲ್ಲಿ ಶಿವನ ದೇವಾಲಯ ಪುಟ್ಟದಾಗಿ ಚೆನ್ನಾಗಿದೆ. ಎದುರುಭಾಗದಲ್ಲಿ ಎತ್ತರಕ್ಕೆ ಕಲ್ಲಿನಚಪ್ಪಡಿ ಒಂದರಮೇಲೊಂದು ಪೇರಿಸಿ ನಿಲ್ಲಿಸಿದ್ದಾರೆ. ಅದು ಏಕೆಂದು ತಿಳಿಯಲಿಲ್ಲ.
ಅಗಸ್ತ್ಯಮುನಿಮಂದಿರ
೯.೩೦ಗೆ ಅಗಸ್ತ್ಯಮುನಿ ಮಂದಿರಕ್ಕೆ ಹೋದೆವು. ಅಗಸ್ತ್ಯರು ತಪಸ್ಸು ಮಾಡಿದ ಈ ಸ್ಥಳದಲ್ಲಿ ಪ್ರಾಚೀನವಾದ ಅಗಸ್ತ್ಯೇಶ್ವರ ಮಹಾದೇವ ದೇವಸ್ಥಾನವಿದೆ.
ಬೀಡಿನಾಥ ಯಾನೆ ಮಂಗಾರಾಮ
ನಮ್ಮ ಸಾರಥಿ ಬಲುಚೆನ್ನಾಗಿ ಬಸ್ ಚಾಲನೆ ಮಾಡುತ್ತಿದ್ದರು. ಎಲ್ಲೂ ವೇಗವಾಗಿ ಚಲಿಸದೆ ಅಷ್ಟೂ ಎಚ್ಚರದಿಂದಲೇ ಬಸ್ ಚಲಾಯಿಸಿದ್ದರು. ಆದರೆ ಒಂದೇ ಒಂದು ಕೆಟ್ಟಚಟದ ತೊಂದರೆ ಅಂದರೆ ಬೀಡಿ ಸೇದುವುದು. ಬಸ್ ಚಲಾಯಿಸಿಕೊಂಡೇ ಬೀಡಿ ಸೇದುತ್ತಿದ್ದರು. ಒಂದಾದಮೇಲೊಂದು ಬೀಡಿ. ಚೈನ್ ಸ್ಮೋಕರ್ ಅನ್ನುತ್ತಾರಲ್ಲ ಹಾಗೆ. ಧೂಮವೆಲ್ಲ ಹೊರಗೆ ಬಿಡುತ್ತಿದ್ದರು. ಆ ಧೂಮವನ್ನೆಲ್ಲ ನಾವು ಪಾನ ಮಾಡಬೇಕಾಗಿ ಬರುತ್ತಿದ್ದುದು ವಿಪರ್ಯಾಸವೇ ಸರಿ. ಅಬ್ಬ ಅಸಾಧ್ಯ ವಾಸನೆ. ಮೂಗು ಮುಚ್ಚಿಕೊಳ್ಳುತ್ತ ಅಯ್ಯೋ ಬೀಡಿನಾಥ ಎಂದು ಬೊಬ್ಬೆ ಹೊಡೆಯುತ್ತಿದ್ದೆವು. ಅದನ್ನು ಕಂಡು ಸೋನು (ಬಸ್ ಸಹಾಯಕ)ಗೆ ನಗುವೋ ನಗು. ಕೆಲವೆಡೆ ಸೋನು ಬೀಡಿಗೆ ಬೆಂಕಿ ಹಚ್ಚಿ ಕೊಡುತ್ತಿದ್ದುದು ಕಾಣುತ್ತಿತ್ತು. ಮಂಗಾರಾಮ ಎಂಬ ಹೆಸರನ್ನು ಕಿತ್ತಾಕಿ ಬೀಡಿನಾಥ ಎಂದು ಹೆಸರಿಟ್ಟಿದ್ದೆವು. ಬೀಡಿ ಸೇದಬೇಡಿ ಎನ್ನಲೂ ಭಯ. ಬೀಡಿ ಸೇದದೆ ಮನಸ್ಸು ಚಂಚಲಗೊಂಡು ಬೇರೆಡೆ ಹೋಗಿ ಬಸ್ ಪ್ರಪಾತಕ್ಕೆ ಇಳಿಸಿದರೆ ಎಂದು ವಾಸನೆ ತಡೆದು ಬಾಯಿಮುಚ್ಚಿ, ಮೂಗು ಮುಚ್ಚಿ ಕೂತಿದ್ದೆ! ನಾವು ಒಂದು ಬೀಡಿ ಕಾರ್ಖಾನೆ ತೆರೆದು ಮಂಗಾರಾಮನಿಗೆ ವಿತರಿಸಿದರೆ ಹೇಗೆ? ಅಷ್ಟು ಬೀಡಿ ಅವರೊಬ್ಬರಿಗೇ ಬೇಕು ಎಂದು ನಾನೂ ಪೂರ್ಣಿಮಳೂ ವಿಚಾರವಿನಿಮಯ ನಡೆಸಿದೆವು! ವಿರಾಮದಲ್ಲಿ ತಡೆಯಲಾರದೆ ಮಂಗಾರಾಮನಿಗೆ ಕೇಳಿದೆ. ‘ಹೀಗೊಂದು ಬೀಡಿ ಸೇದುತ್ತೀರಲ್ಲ. ಆರೋಗ್ಯ ಹಾಳಾಗುವುದಿಲ್ಲವೆ?’ ಅದಕ್ಕೆ ಮಂಗಾರಾಮ. ‘‘ಬೇರೆ ಯಾವ ಕೆಟ್ಟ ಚಾಳಿಯೂ ಇಲ್ಲ. ಸಣ್ಣ ವಯಸ್ಸಿನಿಂದಲೇ ಸೇದಲು ಪ್ರಾರಂಭಿಸಿದೆ. ಈಗ ನನಗೆ ೫೦ ವರ್ಷ. ಏನಾಗಿಲ್ಲ. ಸೇದದೆ ಇದ್ದರೆ ಬಸ್ ಚಾಲನೆ ಸಾಧ್ಯವಾಗುವುದಿಲ್ಲ. ಮೊದಲು ಸಣ್ಣ ಬೀಡಿ ಜಾಸ್ತಿ ಸೇದುತ್ತಿದ್ದೆ. ಈಗ ಸ್ವಲ್ಪ ದೊಡ್ಡ ಬೀಡಿ. ದಿನಕ್ಕೆ ಬರೀ ೨೫ ಮಾತ್ರ ಸೇದುವುದು” ಎಂದರು! ಪುಣ್ಯಕ್ಕೆ ಹದಿನಾರು ವರ್ಷದ ಸೋನು ಬೀಡಿ ಸೇದಲು ಕಲಿತಿಲ್ಲ. ಬಹುಶಃ ಅದರ ಹೊಗೆ ಪಾನವೇ ಅವನಿಗೆ ಸಾಕಾಗುತ್ತಿರಬಹುದೇನೋ.
ಬಸ್ ಚಾಲಕ ಮಂಗಾರಾಮನಿಗೆ ಇನಾಮಾಗಿ ತಂಡದ ವತಿಯಿಂದ ರೂ.೨೦೦೦, ಹಾಗೂ ಸಹಾಯಕ ಸೋನುಗೆ ರೂ. ೫೦೦ ಕೊಡುವುದು ಎಂದು ತೀರ್ಮಾನವಾಗಿತ್ತು. ರೂ. ಬದಲು ಬೀಡಿ ಸಿಗರೇಟನ್ನೇ ಕೊಟ್ಟರೆ ಹೇಗೆ ಎಂದೂ ನಾವು ತಮಾಷೆಯಾಗಿ ಮಾತಾಡಿಕೊಂಡೆವು. ಈ ಚಟಗಳೆಲ್ಲ ಒಮ್ಮೆ ಅಭ್ಯಾಸವಾದರೆ ಬಿಡುವುದು ಕಷ್ಟ. ಉದಾಹರಣೆಗೆ ನಮಗೆಲ್ಲ ಚಾರಣ ಚಟವಾಗಿ ಅಂಟಿದೆ. ಅದನ್ನು ಬಿಡಲಾಗುತ್ತಿಲ್ಲವಲ್ಲ ಹಾಗೆ ಎಂದು ಭಾವಿಸಿದೆ! ನಮ್ಮ ಚಟ ಒಳ್ಳೆಯ ಚಟ ಎಂಬುದು ಸಮಾಧಾನ ತರುವ ವಿಷಯ!
ದಾರಿಯುದ್ದಕ್ಕೂ ಒಮ್ಮೆ ಗುಡ್ಡ ಏರಿದರೆ ಮತ್ತೊಮ್ಮೆ ಇಳಿಯುತ್ತೇವೆ. ಒಂದು ಪರ್ವತ ಏರಿ ಇನ್ನೊಂದು ಪರ್ವತ ಇಳಿದು, ಸೇತುವೆ ದಾಟಿ ಇನ್ನೊಂದು ಭಾಗಕ್ಕೆ ಹೋಗುತ್ತಿರುತ್ತೇವೆ. ರಸ್ತೆ ಬಲು ಕಿರಿದಾಗಿಯೇ ಸಾಗುತ್ತದೆ. ಅಲ್ಲಲ್ಲಿ ರಸ್ತೆ ಕಾಮಗಾರಿಗಳು ನಡೆಯುತ್ತಲೇ ಇರುವುದನ್ನು ಕಾಣುತ್ತೇವೆ. ಕೆಲವೆಡೆ ಗುಡ್ಡ ಜರಿದು ಕಲ್ಲುಬಂಡೆಗಳು ರಸ್ತೆಗೆ ಬೀಳುತ್ತಿರುತ್ತವೆ. ರಸ್ತೆ ಅಂಚಿನಲ್ಲಿ ಕೆಳಗೆ ನದಿ ಹರಿಯುತ್ತದೆ. ಅಂತ ಸ್ಥಳಗಳಲ್ಲಿ ಅಲ್ಲಲ್ಲಿ ರಸ್ತೆ ಜರಿದು ಕಿರಿದಾಗಿರುವುದು ಕಾಣುತ್ತದೆ. ಅಲ್ಲೆಲ್ಲ ರಿಪೇರಿ ಕೆಲಸ ನಡೆಯುತ್ತಿರುತ್ತದೆ. ಅಂಥ ಸ್ಥಳಗಳಲ್ಲಿ ಬಸ್ ಚಲಿಸುತ್ತಿರುವಾಗ ಹೊರಗೆ ಇಣುಕಿದರೆ ಜೀವ ಬಾಯಿಗೆ ಬರುವಂಥ ಅನುಭವವಾಗಿ ಒಂದುಕ್ಷಣ ಕಣ್ಣುಮುಚ್ಚುವಂತೆ ಪ್ರೇರೇಪಿಸುತ್ತದೆ. ಅಂಥ ಕಡೆ ಚಾಲಕರು ಎಷ್ಟು ಎಚ್ಚರದಿಂದ ಇದ್ದರೂ ಸಾಲದು. ಒಂದು ಸಲವಂತೂ ಪ್ರಪಾತದ ಅಂಚಿನಲ್ಲಿ ಬಸ್ ಕೂದಲೆಳೆಯ ಅಂತರದಲ್ಲಿ ಸಾಗಿದಾಗ ಅಬ್ಬಾ ಎಂಬ ಉದ್ಘಾರ ತೆಗೆದಿದ್ದೆ. ಇಂಥ ರಸ್ತೆಗಳಲ್ಲಿ ವಾಹನ ಚಲಾಯಿಸುವ ಚಾಲಕರನ್ನು ಎಷ್ಟು ಹೊಗಳಿದರೂ ಸಾಲದು.
ಹೆಲಿಕಾಫ್ಟರ್ ಏರಿದ ಮೊದಲ ಅನುಭವ
ಕೇದಾರಕ್ಕೆ ಹೋಗುವ ಮಾರ್ಗದಲ್ಲಿ ನಾಲ್ಕಾರು ಕಡೆ ಬೇರೆ ಬೇರೆ ಕಂಪನಿಯ ಹೆಲಿಪ್ಯಾಡ್ಗಳಿವೆ. ನಾರಾಯಣಕಟ್ಟ ಎಂಬ ಊರಿನಲ್ಲಿ ಆರ್ಯನ್ ಎಂಬ ಕಂಪನಿಯ ಹೆಲಿಪ್ಯಾಡ್ ಇರುವ ಸ್ಥಳದಲ್ಲಿ ನಮ್ಮ ಬಸ್ ನಿಲ್ಲಿಸಿದರು ಮಂಗಾರಾಮ. ಅಲ್ಲಿ ಎರಡು ಹೆಲಿಪ್ಯಾಡ್ ಇದೆ. ಅವರಿಗೆ ಅಲ್ಲಿ ಕಮಿಶನ್ ಇರಬೇಕು. ೧೧.೩೫ಕ್ಕೆ ಅಲ್ಲಿ ತಲಪಿದೆವು. ಅಲ್ಲಿ ನಮ್ಮ ತೂಕ ನೋಡಿ ಬರೆದುಕೊಂಡು, ರೂ. ೩೫೦೦ ಕೊಟ್ಟು ಟಿಕೆಟ್ ಪಡೆದೆವು. ನಮ್ಮ ಲಗೇಜಿನ ತೂಕ ೨ ಕಿಲೋಗಿಂತ ಜಾಸ್ತಿ ಇರಬಾರದಂತೆ. ಕೇದಾರಕ್ಕೆ ಕೊಂಡೋಗಲು ಹಾಕಿಟ್ಟಿದ್ದ ಒಂದೊಂದೇ ವಸ್ತುಗಳು ಚೀಲದಿಂದ ವಾಪಾಸು ಬಸ್ ಸೇರಿತು. ನಮ್ಮ ಚೀಲ ೨ ಕಿಲೋಗಿಂತ ಜಾಸ್ತಿ ತೂಕವಿತ್ತು. ತೀರ ಅವಶ್ಯವಾದ ಸ್ವೆಟರ್, ಟೋಪಿ, ಒಣಹಣ್ಣು ಬಿಟ್ಟು ಬೇರೇನೂ ಒಯ್ಯಲಿಲ್ಲ. ಒಂದೊಂದು ಕಂಪನಿಯಲ್ಲೂ ಒಂದು ಟಿಕೆಟಿಗೆ ಬೇರೆ ಬೇರೆ ದರಗಳಿವೆಯಂತೆ. ಅಲ್ಲಿ ಅದಾಗಲೆ ಸುಮಾರು ಮಂದಿ ಕಾಯುತ್ತಿದ್ದರು. ಹವಾಮಾನ ಚೆನ್ನಾಗಿದ್ದರೆ ಮಾತ್ರ ಹೆಲಿಕಾಫ್ಟರ್ ಹಾರುತ್ತಿತ್ತು. ೧೨ ಗಂಟೆಯಿಂದ ಸಂಜೆ ನಾಲ್ಕರ ತನಕ ಕಾದೆವು. ಸಮಯ ಹೋಗದೆ ಕೆಲವರು ಕೂತಲ್ಲೇ ತೂಕಡಿಸಿದರು. ನಾವು ಕೆಲವರು ಹೊಟ್ಟೆಗೆ ಏನಾದರೂ ಹಾಕೋಣ ಎಂದು ಕೆಳಗೆ ಇರುವ ಏಕೈಕ ಹೊಟೇಲ್ ಜೋಪಡಿಯಲ್ಲಿ ಮ್ಯಾಗಿ ತಿಂದೆವು. ಅದಾದರೆ ಬೇಗ ಮಾಡಿ ಆಗುತ್ತದೆ. ಎಲ್ಲಾದರೂ ಹೆಲಿಕಾಫ್ಟರ್ ಹತ್ತಲು ಕರೆ ಬಂದರೆ ಎಂದು ಮ್ಯಾಗಿನೂಡಲ್ಸ್ ತೆಗೆದುಕೊಂಡದ್ದು. ಮಕ್ಕಳಿಗೆ ಅದನ್ನು ತಿನ್ನಬೇಡಿ ಎಂದು ಹೇಳಿ ನಾವೀಗ ಇದನ್ನು ತಿನ್ನುತ್ತಿದ್ದೇವೆ ಎಂದು ಹೇಮಮಾಲಾ ಹೇಳಿಕೊಂಡರು.
ಅಂತೂ ನಾಲ್ಕಕ್ಕೆ ನಮಗೆ ಕರೆ ಬಂತು. ನಾವು ಆರು ಮಂದಿ ಮೊದಲು ಹೋದೆವು. ನಮಗೆ ಬಾಕಿದ್ದವರು ಎಲ್ಲ ಶುಭ ಹಾರೈಸಿದರು. ಹೆಲಿಪ್ಯಾಡ್ ಸ್ಥಳಕ್ಕೆ ಹೋಗಿ ಕೂತಾಗ, ಇಲ್ಲ, ಹವಾಮಾನ ಸರಿಯಾಗಿಲ್ಲ. ಕೆಳಗೆ ಹೋಗಿ ಕಾಯಿರಿ ಎಂದರು! ಅಂತೂ ಹವಾಮಾನ ತಿಳಿಯಾಗಿ ನಾವೆಲ್ಲರೂ ಹೆಲಿಕಾಫ್ಟರ್ ಏರಿದೆವು. ನಾನು ಹೆಕಾಫ್ಟರ್ ಏರಿದ್ದು ಇದೇ ಪ್ರಥಮ ಬಾರಿ. ಕೆಳಗೆ ಬೆಟ್ಟ ಗುಡ್ಡ, ಕಾಲು ದಾರಿ ಎಲ್ಲ ಚೆನ್ನಾಗಿ ಕಂಡಿತು. ವೀಡಿಯೋ ಮಾಡಿದೆ. ಸವಿತ ಪೈಲೆಟ್ ಪಕ್ಕ ಮಿಸುಕಾಡದೆ ಕೂತಳು. ಫೋಟೋ ತೆಗೆಯಬಾರದೆಂದು ಹತ್ತುವ ಮೊದಲು ಅವಳಿಗೆ ಹೇಳಿದ್ದರಂತೆ. ಕೇವಲ ಏಳುನಿಮಿಷದಲ್ಲಿ ಕೇದಾರ ತಲಪಿದೆವು. ಒಂದು ಸೆಕೆಂಡಿನಲ್ಲಿ ಹತ್ತಬೇಕು, ಅಷ್ಟೇ ಸಮಯದಲ್ಲಿ ಇಳಿಯಬೇಕು. ಇಳಿದು ಕೂಡಲೇ ಆಚೆ ಬರಬೇಕು. ಅದರ ಪಂಕದ ಗಾಳಿಗೆ ಸಣಕಲಾಗಿದ್ದರೆ ಹಾರಿಹೋದೇವು. ಅಷ್ಟು ಗಾಳಿ. ಪುಣ್ಯಕ್ಕೆ ಹವಾಮಾನ ಸರಿಯಾಗಿದ್ದು ನಮ್ಮ ತಂಡದವರೆಲ್ಲರೂ ಕೇದಾರ ತಲಪಿದೆವು.ಹೆಲಿಕಾಫ್ಟರ್ ಸುಖ ಅುಭವಿಸುವ ಮೊದಲೆ ಕೆಳಗೆ ಇಳಿದಿದ್ದೆವು! ಇಳಿದು ಬಂದಾಗ ಚಳಿ ಆವರಿಸಿತು. ಬೆಚ್ಚಗೆ ತಲೆಗೆ ಟೊಪ್ಪಿ ಏರಿಸಿದೆವು. ಸ್ವೆಟರ್ ಹಾಕಿಕೊಂಡೆವು.
ಕೇದಾರನಾಥನ ದರ್ಶನ
ಹೆಲಿಪ್ಯಾಡಿನಿಂದ ದೇವಾಲಯಕ್ಕೆ ಹೋಗಲು ೫೦೦ಮೀಟರು ನಡೆಯಬೇಕು. ೨೦೦೧೩ರಲ್ಲಿ ಮೇಘಸ್ಫೋಟ ಪ್ರವಾಹದಿಂದಾಗಿ ಕೇದಾರ ಕೊಚ್ಚಿ ಹೋಗಿತ್ತು. ಅದರ ಅವಶೇಷಗಳಾಗಿ ಅರ್ಧ ಮುರಿದ ಮನೆಗಳು, ಅಲ್ಲಲ್ಲಿ ಬಂಡೆಗಲ್ಲುಗಳು ಕಾಣುತ್ತವೆ. ದೇವಾಲಯದ ಎದುರು ಭಾಗದಲ್ಲಿ ಸುಮಾರು ಕಟ್ಟಡಗಳು ಇದ್ದುವಂತೆ. ಈಗ ಅಲ್ಲಿ ಕಟ್ಟಡ ಕಟ್ಟಲು ಅನುಮತಿ ಕೊಡುವುದಿಲ್ಲವಂತೆ. ದೇವಾಲಯದ ಸುತ್ತ ಪರ್ವತ ಸಾಲುಗಳ ಬಳಿ ಪ್ರವಾಹ ಹರಿದು ಬರದಂತೆ? ತಡೆಗೋಡೆ ಕಟ್ಟುವ ಕೆಲಸ ನಡೆಯುತ್ತಲಿತ್ತು. ನಾವು ದೇವಾಲಯದ ಬಳಿ ನಿಂತು ಭಾವಚಿತ್ರ ತೆಗೆಸಿಕೊಂಡೆವು. ಸಂಜೆ ಐದು ಗಂಟೆಗೆ ಒಳಗೆ ಹೋಗಿ ದೇವರ ದರ್ಶನ ಮಾಡಿದೆವು. ಹತ್ತಿರವೇ ಇರುವ ವಸತಿಗೃಹದಲ್ಲಿ ತಂಗಿದೆವು. ಕೋಣೆಯಲ್ಲಿ ಸಂಜೆ ಏಳರವರೆಗೆ ಭಜನೆ, ಸ್ತೋತ್ರಪಠಣ, ಭಕ್ತಿಗೀತೆ ಎಲ್ಲ ಹಾಡಿದರು. ತಂಗಿ ಸವಿತ ಉತ್ಸಾಹದಿಂದಲೇ ಹಾಡಿದಳು. ರಾತ್ರಿ ಆರತಿ ನೋಡಿದೆವು. ಒಂದು ಗಂಟೆ ದೇವರಿಗೆ ಆರತಿ ನಡೆಯುತ್ತದೆ. ಅರ್ಚಕರು ವಿಶಿಷ್ಟವಾಗಿ ಮಣಿ ಆಡಿಸುತ್ತ, ಆರತಿ ಎತ್ತುತ್ತಾರೆ. ದೇವಾಲಯದ ಹೊರಗೆ ನಂದಿಗೆ, ದೂರದಲ್ಲಿ ಕಾಣುವ ಭೈರವಬೆಟ್ಟದಲ್ಲಿರುವ ಭೈರವನಿಗೆ ಇಲ್ಲಿಂದಲೇ ಆ ದಿಕ್ಕಿನತ್ತ ಕೈ ಎತ್ತಿ ಆರತಿ ಮಾಡುತ್ತಾರೆ. ಅಲ್ಲಿಯ ಪ್ರಧಾನ ಅರ್ಚಕರ ಹೆಸರು ಶಂಕರಲಿಂಗ ಪುರೋಹಿತ. ಕರ್ನಾಟಕದವರು. ಜಗಮಗ ಬಟ್ಟೆ ಧರಿಸಿ ನೋಡಲು ಸ್ವಲ್ಪ ರುದ್ರಾವತಾರವಾಗಿಯೇ ಕಾಣುತ್ತಾರೆ. ವಿಠಲರಾಜು ಅವರಿಗೆ ಅರ್ಚಕರ ಪರಿಚಯ ಇದೆ. ಪೂಜೆ ಬಳಿಕ ಅವರ ಮನೆಗೆ ರಾತ್ರಿ ಹೋದೆವು. ಅಲ್ಲಿ ಅವರಿಗೆ ನಮಸ್ಕರಿಸಿದಾಗ ನಮಗೆಲ್ಲ ಒಂದು ರುದ್ರಾಕ್ಷಿ ಇರುವ ಮಾಲೆ ಕೊಟ್ಟರು. ಅವರಿಗೆ ಎಲ್ಲರೂ ಯತಾನುಶಕ್ತಿ ಕಾಣಿಕೆ ಹಾಕಿದರು.
ಕಂಡೆನಾ ಬೃಹತ್ ಬಂಡೆಯಾ
ದೇವಾಲಯದ ಹಿಂಭಾಗಕ್ಕೆ ಬರುವಾಗ ಅನತಿ ದೂರದಲ್ಲೇ ಬೃಹತ್ ಗಾತ್ರದ ಬಂಡೆಗಲ್ಲೊಂದು ಅಡ್ಡವಾಗಿ ಬಿದ್ದಿರುವುದು ಕಾಣುತ್ತದೆ. ಪರ್ವತದಿಂದ ಉರುಳುರುಳಿ ಬಿದ್ದ ಬಂಡೆಯದು. ಅಂಥ ಬೃಹತ್ ಗಾತ್ರದ ಬಂಡೆ ಉರುಳಿ ಬರಬೇಕಾದರೆ ಎಂಥ ಪ್ರವಾಹ ಬಂದಿರಬಹುದು ಎಂದು ಆ ಬಂಡೆ ಕಣ್ಣಾರೆ ನೋಡಿದರೂ ಊಹಿಸಲೂ ಸಾಧ್ಯವಾಗುವುದಿಲ್ಲ. ಆ ಕಲ್ಲು ದೇವಾಲಯವನ್ನು ಉಳಿಸಿದ್ದು ನಿಜಕ್ಕೂ ಅದ್ಭುತ ಪವಾಡವೇ ಸರಿ. ಈ ಪರಮಸತ್ಯವನ್ನು ಇಸವಿ ೨೦೧೩ರಲ್ಲಿ ಪತ್ರಿಕೆಗಳಲ್ಲಿ ಓದಿದ್ದನ್ನು ಇಲ್ಲಿ ಕಣ್ಣಾರೆ ಕಂಡೆವು. ಕಂಡು ಮೂಕವಿಸ್ಮಿತರಾದೆವು.
ಕೇದಾರನಾಥದ ಬಗ್ಗೆ ಪುರಾಣಕಥೆ
ಮಹಾಭಾರತದ ಕುರುಕ್ಷೇತ್ರದಲ್ಲಿ ಕೌರವರನ್ನು (ಬ್ರಾಹ್ಮಣರನ್ನು) ಹತ್ಯೆ ಮಾಡಿದ ಪಾಪಕ್ಕೆ ಪಾಂಡವರು ಗುರಿಯಾದರು. ಆ ಪಾಪಕ್ಕೆ ಪ್ರಾಯಶ್ಚಿತ್ತ ಮಾಡಿಕೊಳ್ಳಲು ಮುಂದಾದರು. ಅದಕ್ಕೆ ಶಿವನನ್ನು ಸಂಪ್ರೀತಗೊಳಿಸಿ, ಆತನ ಆಶಿರ್ವಾದ ಪಡೆಯಲು ನಿಶ್ಚಯಿಸಿದರು. ಆದರೆ ಪಾಂಡವರ ಘನಘೋರ ಪಾತಕ ಕೃತ್ಯದ ವಿರುದ್ಧ ಶಿವ ಕೋಪಗೊಂಡಿದ್ದ. ಕೋಪೋದ್ರಿಕ್ತ ಶಿವ ಪಾಂಡವರತ್ತ ಕೃಪಾಕಟಾಕ್ಷ ಬೀರಲಿಲ್ಲ.
ಶಿವನನ್ನು ಒಲಿಸಿಕೊಳ್ಳಳು ಪಾಂಡವರು ಶಿವನ ಸಾಮ್ರಾಜ್ಯವಾದ ಹಿಮಾಲಯಕ್ಕೇ ತೆರಳುತ್ತಾರೆ. ಆದರೆ ಪಾಂಡವರಿಂದ ವಿಮುಖಗೊಂಡಿದ್ದ ಶಿವ ಕೇದಾರದಲ್ಲಿ ಕಣ್ಮರೆಯಾಗುತ್ತಾನೆ. ಆದರೆ ಶಿವನ ಆಶೀರ್ವಾದ ಪಡೆಯಲೇಬೇಕು ಎಂದು ದೃಢನಿಶ್ಚಯ ಮಾಡಿದ್ದ ಪಾಂಡವರು ಶಿವನ ಸುಳಿವರಿತು ಕೇದಾರಕ್ಕೆ ಬರುತ್ತಾರೆ.
ಕೇದಾರ ಜಾನುವಾರುಗಳ ನೆಲೆವೀಡಾಗಿರುತ್ತದೆ. ಶಿವ ಇಲ್ಲೊಂದು ಉಪಾಯ ಮಾಡುತ್ತಾನೆ. ಪಾಂಡವರ ಕಣ್ಣಿಗೆ ಬೀಳಬಾರದೆಂದು ನಂದಿ ರೂಪಧಾರಿಯಾಗಿ ಜಾನುವಾರುಗಳ ಮಂದೆಯಲ್ಲಿ ಸೇರಿಕೊಳ್ಳುತ್ತಾನೆ. ಪಾಂಡವರಿಗೆ ಈ ಸುಳಿವು ಸಿಗುತ್ತದೆ. ದೈತ್ಯದೇಹಿ ಭೀಮ ಮತ್ತಷ್ಟು ಬೃಹದಾಕಾರ ತಾಳಿ ಎರಡು ಬೃಹತ್ ಬೆಟ್ಟಗಳಾಗಿ ಮಾರ್ಪಡುತ್ತಾನೆ. ಆಗ ಸಾಮಾನ್ಯ ಜಾನುವಾರುಗಳು ಬೆಟ್ಟಗಳ ನಡುವೆ ಅಂದರೆ ಭೀಮನ ಕಾಲುಗಳ ನಡುವೆ ತಮ್ಮ ಅರಿವಿಗೆ ಬಾರದೆ ನುಸುಳುತ್ತವೆ. ಆದರೆ ಪರಮಾತ್ಮನಾದ ಶಿವನಿಗೆ ಹಾಗೆ ಹೋಗಲು ಸಾಧ್ಯವಾಗುವುದಿಲ್ಲ. ಶಿವನ ರೂಪದಲ್ಲಿದ್ದ ನಂದಿ ಭೀಮನಿಂದ ತಪ್ಪಿಸಿಕೊಳ್ಳಲು ಓಡಿಹೋಗುತ್ತದೆ. ಆಗ ಭೀಮ ನಂದಿಯ ಮೇಲೆ ಬಿದ್ದು ಹಿಡಿಯಲು ಹೋಗುತ್ತಾನೆ. ಆ ಸಂದರ್ಭದಲ್ಲಿ ಭೀಮ ನಂದಿಯ ಹಿಂಭಾಗದ ತ್ರಿಭುಜಾಕೃತಿಯನ್ನು ಕೈಯಲ್ಲಿ ಹಿಡಿದುಬಿಡುತ್ತಾನೆ. ತ್ರಿಭುಜಾಕೃತಿಯ ಬೆನ್ನುಹೊತ್ತ ನಂದಿ ರೂಪದಲ್ಲಿದ್ದ ಶಿವ, ತಮ್ಮ ಗುರಿಯನ್ನು ಸಾಧಿಸಿದ ಪಾಂಡವರ ವಿರುದ್ಧ ಕೋಪ ಬಿಟ್ಟು, ಅವರ ಪಾಪಗಳಿಗೆ ಮುಕ್ತಿ ಕರುಣಿಸಲು ನಿಜ ರೂಪದಲ್ಲಿ ಪ್ರತ್ಯಕ್ಷನಾಗುತ್ತಾನೆ. ಅದುವೇ ಕೇದಾರನಾಥ. ಮುಂದೆ ಲೋಕಕಲ್ಯಾಣಾರ್ಥ ಭೀಮನ ಕೈಗೆ ನಂದಿ ಸಿಕ್ಕಿದ ಜಾಗದಲ್ಲಿ ತ್ರಿಭುಜಾಕೃತಿಯ ಬೆನ್ನುಹೊತ್ತ ನಂದಿ ರೂಪದ ಶಿವನನ್ನು ಪ್ರತಿಷ್ಠಾಪಿಸುತ್ತಾರೆ. ಅಲ್ಲಿಂದ ಮುಂದಕ್ಕೆ ಪಾಂಡವರು ಹಿಮಾಲಯದ ಮೂಲಕ ಸ್ವರ್ಗದ ಹಾದಿ ಹಿಡಿಯುತ್ತಾರೆ ಎಂಬುದು ಕಥೆ. ಪಂಚಕೇದಾರಗಳು ಪಶುಪತಿನಾಥ, ಕೇದಾರನಾಥ, ತುಂಗನಾಥ, ರುದ್ರನಾಥ, ಕಲ್ಪನಾಥ. ಈ ಪಂಚಕೇದಾರಗಳಲ್ಲಿ ಒಂದೊಂದುಕಡೆ ಶಿವನ ಒಂದೊಂದು ಭಾಗ ಪೂಜಿಸಲ್ಪಡುತ್ತದೆ. ಪಶುಪತಿನಾಥನಲ್ಲಿ ಶಿರಭಾಗ, ಕೇದಾರದಲ್ಲಿ ಬೆನ್ನು, ತುಂಗಾನಾಥದಲ್ಲಿ ಕೈ, ಭುಜ, ರುದ್ರನಾಥದಲ್ಲಿ ಮುಖದಭಾಗ, ಕಲ್ಪನಾಥದಲ್ಲಿ ಜಟೆಭಾಗ.
ದೇವಾಲಯದ ಒಳಗೆ ಪಾಂಡವರ ಮೂರ್ತಿಗಳನ್ನೂ ಕಾಣಬಹುದು.
ಕೇದಾರನಾಥ ಕಣಿವೆಯಲ್ಲಿ ಹರಿಯುವ ಗಂಗಾ ಉಪನದಿಯಾದ ಮಂದಾಕಿನಿ ಇಲ್ಲಿನ ಜೀವನದಿ. ಕೆಳಗೆ ಹರಿಯುತ್ತಾ ಅದು ರುದ್ರಪಯಾಗದಲ್ಲಿ ಅಲಕನಂದ ನದಿಯನ್ನು ಸೇರಿಕೊಳ್ಳುತ್ತದೆ.
ನಾವು ತಂಗಿದ ವಸತಿಗೃಹದಲ್ಲಿ ರಾತ್ರಿ ೮.೩೦ ಗಂಟೆಗೆ ಅನ್ನ ಸಾರು, ಚಪಾತಿ ಊಟ ಮಾಡಿ, ರಜಾಯಿ ಹೊದ್ದು ಬೆಚ್ಚಗೆ ಮಲಗಿದೆವು.
ಬೆಳಗಿನ ಅಭಿಷೇಕ
ಬೆಳಗ್ಗೆ ೧೮-೯-೨೦೧೬ರಂದು ಸುಖನಿದ್ದೆಯಲ್ಲಿದ್ದಾಗ ೨.೧೫ಕ್ಕೆ ಅಲರಾಂ ಬಡಿದೆಚ್ಚರಿಸಿತು. ಸರೋಜ ಸುಖವಾದ ಕನಸಿನ ಲೋಕದಲ್ಲಿ ಅವರ ಯಜಮಾನರೊಡನೆ ವಿಹರಿಸುತ್ತ, (ಯಜಮಾನರು ಇಲ್ಲಿಗೆ ಏಕೆ ಬಂದರು ಎಂದು ಆಶ್ಚರ್ಯಚಕಿತರಾಗಿ ಚಿಂತಿಸುತ್ತಲೇ) ನಮ್ಮನ್ನೆಲ್ಲ ಅವರಿಗೆ ಪರಿಚಯಿಸುತ್ತ ಇದ್ದರಂತೆ! ಆಗ ಈ ಅಲರಾಂ ಬಡಿದೆಚ್ಚರಿಸಿ ಸ್ವಪ್ನಲೋಕದಿಂದ ಹೊರಬಂದರಂತೆ! ೨.೩೦ಗೆ ದೇವಾಲಯದ ಬಳಿ ಬಂದೆವು. ಅರ್ಚಕರೂ ಅವರ ಸಹಾಯಕರೂ ದೇವಾಲಯದ ಬಾಗಿಲು ತೆರೆದರು. ಬೆಳಗಿನ ಝಾವದ ಅಭಿಷೇಕವನ್ನು ವಿಶೇಷವಾಗಿ ನಮ್ಮ ೧೭ ಜನರ ಕೈಯಲ್ಲಿ ಮಾಡಿಸಿದರು. ಗಂಧ, ತುಪ್ಪ, ಹಾಲು, ನೀರು ಹಾಕಿ ಅಭಿಷೇಕ ಮಾಡಿದೆವು. ಒಂದಷ್ಟು ಹಿರಿಮೊತ್ತ ಅರ್ಚಕರಿಗೆ ಕೊಟ್ಟರೆ ಇಂಥ ಭಾಗ್ಯ ದೊರೆಯುತ್ತದಂತೆ. ೩ರಿಂದ ೩.೩೦ರ ತನಕ ಮಾತ್ರ ಅಭಿಷೇಕ ಮಾಡಿಸಿದರು. ಆಹಾ ಇದು ಭಾಗ್ಯ ಇದು ಭಾಗ್ಯವಯ್ಯ ಯಾರಿಗುಂಟು ಇಂಥ ಭಾಗ್ಯ ಎಂದು ಎಲ್ಲರೂ ಅಭಿಷೇಕದ ಗುಂಗಿನಲ್ಲೇ ಅಲ್ಲಿಂದ ವಸತಿಗೃಹಕ್ಕೆ ಬಂದು ಮಲಗಿದೆವು.
ಮುಂದುವರಿಯುವುದು
ಗಂಗೋತ್ರಿಯಿಂದ ಗೋಮುಖವೆನ್ನುವ ಹಿಮನದಿಯ ತಾಣಕ್ಕೆ ಅಂತರ ಋತುಮಾನವನ್ನನುಸರಿಸಿಕೊಂಡು ಎರಡು ಮೂರು ಕಿಮೀ ಹೆಚ್ಚು ಕಮ್ಮಿಯಾಗುತ್ತಿರುತ್ತದೆ. ಇದು ಪಕ್ಕಾ ನಡಿಗೆಯದೇ ದಾರಿಯಾದರೂ ಹೆಚ್ಚು ಏರಿಳಿತಗಳಿಲ್ಲ. ನಾವು ಮೋಟಾರ್ ಸೈಕಲ್ಲಿನಲ್ಲಿ ಗಂಗೋತ್ರಿಗೆ ಹೋದ ಕಾಲಕ್ಕೆ (೨೫ ವರ್ಷಗಳ ಹಿಂದೆ) ಸುಮಾರು ಹದಿನೇಳು ಕಿಮೀ ಅಂತರದಲ್ಲೇ ಹಿಮಗಡ್ಡೆಗಳು ಕರಗಿ ನದಿಯಾಗುವ ಅರ್ಥಾತ್ ಗೋಮುಖವನ್ನು ನೋಡಿದ್ದೆವು. ಒಂದೇ ದಿನದಲ್ಲಿ ಅದನ್ನು ನೋಡಿ ಮರಳಿದ್ದೆವು.
ಇರಬಹುದು. ಈಗ ದಾರಿ ಬಲು ದುರ್ಗಮವಾಗಿ ಇದೆ ಎಂದು ಹೋದವರು ಹೇಳಿದರು.
ಚಾರಣ ಮತ್ತು ಪ್ರವಾಸ ಬೀಡಿಯ ಚಟಕ್ಕಿಂತ ಒಳ್ಳೆಯದು ಎನ್ನುವ ಗಂಗೋತ್ರಿಯ ಪ್ರವಾಸದ ಧಾರಾವಾಹಿಯನ್ನು ಓದುವ ಚಟ ಹತ್ತಿದೆ – ಟಿವಿ ಧಾರಾವಾಹಿಗಿಂತ ಇದು ನಿಜಕ್ಕೂ ಉತ್ತಮ. ಸೊಗಸಾದ ನಿರೂಪಣೆ. ನವಿರಾದ ಹಾಸ್ಯ – ಎಂದಿನ ಮಾಲಾ ಲಹರಿ. ನಾವೇ ಹಿಮಾಲಯದ ತಪ್ಪಲಿಗೆ ಹೋದಂತನ್ನಿಸುತ್ತದೆ. ಮುಂದಿನ ಕಂತಿಗೆ ಕಾಯುತ್ತಿದ್ದೇನೆ.
ಧನ್ಯವಾದ. ಸದ್ಯದಲ್ಲೇ ಮುಂದಿನ ಕಂತು ಹಾಕುವೆ.