ಮೈಸೂರಿನಿಂದ ತಾರೀಕು ೨೮-೮-೨೦೧೬ ರಂದು ಎರಡು ಮಿನಿ ಬಸ್ಸಿನಲ್ಲಿ ನಾವು ೩೮ ಮಂದಿ ಬೆಳಗ್ಗೆ ೬.೩೦ ಗಂಟೆಗೆ ಹೊರಟು ಮಳವಳ್ಳಿಯಲ್ಲಿ ಹರಿಕೃಷ್ಣ ಖಾನಾವಳಿಯಲ್ಲಿ ಇಡ್ಲಿ ವಡೆ ಕಾಫಿಯಾಗಿ ಮುಂದುವರಿದು ಬನ್ನೂರು, ಹಲಗೂರು ದಾರಿಯಲ್ಲಿ ಸಾಗಿ ಮುಂದೆ ಬಲಕ್ಕೆ ಹೊರಳಿ ಕೆಲವು ಕಿಮೀ ಕ್ರಮಿಸುವಾಗ ಗುಂಡಾಪುರ ಹಳ್ಳಿ ಸಿಗುತ್ತದೆ. ಅಲ್ಲಿ ನಾವು ಬಸ್ಸು ಇಳಿದೆವು. ಪರಸ್ಪರ ಪರಿಚಯ ಕಾರ್ಯಕ್ರಮ ಮುಗಿಸಿದೆವು. ಸ್ಥಳೀಯ ಪಡಿತರ ಅಂಗಡಿ ಮಾಲೀಕರಾದ ಬಸವೇಗೌಡರು ಬಂದು ನಮಗೆ ಬಸವಬೆಟ್ಟ (ಹಲಗೂರು, ಮಳವಳ್ಳಿ ತಾಲೂಕು) ಹತ್ತಲು ಮಾರ್ಗದರ್ಶಕರಾಗಿ ಅವರ ತಮ್ಮನ ಮಗ ದರ್ಶನನನ್ನು ನೇಮಿಸಿದರು. ದರ್ಶನ ಐಟಿಐ ವಿದ್ಯಾಭ್ಯಾಸ ಮುಗಿಸಿ ಕೆಲಸದ ಹುಡುಕಾಟದಲ್ಲಿ ತೊಡಗಿದ್ದ.
ಹೆಬ್ಬೆಟ್ಟದ ಬಸವೇಶ್ವರ ದೇವಾಲಯಕ್ಕೆ ತೆರಳಲು ಟಾರು ರಸ್ತೆಯಿದೆ. ಆದರೆ ನಾವು ಬೆಟ್ಟಗುಡ್ಡ ಹತ್ತಿ ಆ ದೇವಾಲಯಕ್ಕೆ ಹೋಗಲು ತೀರ್ಮಾನಿಸಿದ್ದೆವು. ದರ್ಶನನ ನೇತೃತ್ವದಲ್ಲಿ ನಾವು ಬೆಳಗ್ಗೆ ೯.೩೦ ಗಂಟೆಗೆ ಬೆಟ್ಟ ಹತ್ತಲು ಪ್ರಾರಂಭಿಸಿದೆವು. ಬಿಸಿಲು ಇಲ್ಲದೆ ನಮಗೆ ಹವೆ ಹಿತಕರವಾಗಿತ್ತು. ಕಡಿದಾದ ಬೆಟ್ಟವಲ್ಲ. ಹಾಗೆಂದು ಸಲೀಸಾಗಿಯೂ ಇರಲಿಲ್ಲ. ಬೆಟ್ಟ ಏರುವ ದೂರ ಸುಮಾರು ನಾಲ್ಕು ಕಿಮೀ. ನಾವು ನಿಧಾನವಾಗಿ ಸಾಗಿದೆವು. ಆನೆ, ಚಿರತೆ, ಹುಲಿ, ಜಿಂಕೆ, ನವಿಲು, ಮುಳ್ಳುಹಂದಿ ಇತ್ಯಾದಿ ಪ್ರಾಣಿಗಳ ಓಡಾಟ ಇರುವಂಥ ಅರಣ್ಯವಂತೆ. ಸಾಕ್ಷಿಯಾಗಿ ಆನೆ ಲದ್ದಿ, ಮುಳ್ಳುಹಂದಿಯ ಮುಳ್ಳುಕಡ್ಡಿ ಕಾಣಿಸಿತು. ಪ್ರಾಣಿಗಳು ನಾಡಿಗೆ ಬರದಿರಲು ಅರಣ್ಯ ಇಲಾಖೆಯವರು ಸುತ್ತ ಅಗಳು ಕೊರೆದು ವಿದ್ಯುತ್ ಬೇಲಿ ಹಾಕಿಸಿದ್ದಾರೆ.
ಬೆಟ್ಟ ಏರಿದಂತೆ ದೊಡ್ಡ ದೊಡ್ಡ ಪಾದೆಗಳು, ಬಂಡೆಗಲ್ಲುಗಳು, ಸಣ್ಣಪುಟ್ಟ ಹಾಸುಗಲ್ಲುಗಳು ಕಾಣಿಸಿದವು. ಪುಟ್ಟ ಪುಟ್ಟ ಕಲ್ಲುಗಳು ವಿವಿಧ ಆಕಾರದಲ್ಲಿದ್ದು ಸುಂದರವಾಗಿದ್ದುವು. ಪುಟಾಣಿ ಪ್ರಣತಿ ಕಲ್ಲುಗಳನ್ನು ನೋಡಿ, “ಎಷ್ಟೊಂದು ಕಲ್ಲುಗಳು ಇವೆ. ಬಟ್ಟೆ ಒಗೆಯಲು ಚೆನ್ನಾಗಿವೆ’’ ಎಂದು ಉದ್ಘರಿಸಿ ಕಲ್ಲು ಲೆಕ್ಕ ಹಾಕಲು ತೊಡಗಿದಳು. ಅಲ್ಲಲ್ಲಿ ಕೂರುತ್ತ, ನಿಲ್ಲುತ್ತ, ಸೌತೆಕಾಯಿ, ಕಿತ್ತಳೆ, ಸೇಬು, ಪೇರಳೆ ಮೆಲ್ಲುತ್ತ ಸಾಗಿದೆವು. ಸುಮಾರು ನಾಲ್ಕು ಕಿಮೀ ಬೆಟ್ಟ ಏರಿದಾಗ ದೇವಾಲಯಕ್ಕೆ ಹೋಗುವ ರಸ್ತೆ ಎದುರಾಯಿತು. ರಸ್ತೆಯಲ್ಲಿ ಮುಂದೆ ಸಾಗಿದೆವು. ಆಗ ದೇಸೀ ತಳಿಯ ದನಗಳ ಹಿಂಡು ಮತ್ತು ಕುರಿಗಳ ಮಂದೆ ಎದುರಾಯಿತು. ಅವು ಶಿಸ್ತಿನ ಸಿಪಾಯಿಯಂತೆ ಸಾಲಾಗಿ ಹೋಗುವ ಸೊಬಗನ್ನು ನೋಡುತ್ತ ನಿಂತೆವು. ಅವುಗಳನ್ನು ನಿತ್ಯ ಮಧ್ಯಾಹ್ನ ೧೧ ಗಂಟೆಗೆ ಅರಣ್ಯದತ್ತ ಮೇಯಲು ಕರೆದುಕೊಂಡು ಹೋಗಿ ಸಂಜೆ ನಾಲ್ಕು ಗಂಟೆಯಾಗುವಾಗ ವಾಪಾಸು ಕರೆತರುತ್ತಾರಂತೆ. ರಸ್ತೆಯಲ್ಲಿ ಸಾಗಿದಂತೆ ಮುಂದೆ ಹಳ್ಳಿ ಎದುರಾಗುತ್ತದೆ. ಅವರೆಲ್ಲ ನಮ್ಮನ್ನು ಮಾತಾಡಿಸಿ, ಯಾವೂರಿಂದ ಬಂದಿರಿ? ನಡೆದೇ ಬಂದಿರ? ಅದ್ಯಾಕೆ ನಡೆದು ಬಂದಿರಿ? ಬಸ್ಸು ಹೋಗಲು ರಸ್ತೆ ಇದೆಯಲ್ಲ ಎಂದು ಪ್ರಶ್ನಿಸಿದರು. ಈ ಪೇಟೆಮಂದಿಗೆ ಮಾಡಲು ಬೇರೆ ಕೆಲಸವಿಲ್ಲ ಎಂದು ಮನದಲ್ಲೇ ಅಂದುಕೊಂಡಿರಬಹುದು!
ಸುಮಾರು ಮೂರು ಕಿ.ಮೀ. ದೂರ ರಸ್ತೆಯಲ್ಲೇ ನಡೆದು ಸಾಗಿದಾಗ ಹೆಬ್ಬೆಟ್ಟ ಬಸವೇಶ್ವರ ದೇವಾಲಯದ ಹೆಬ್ಬಾಗಿಲು ಎದುರಾಯಿತು. ನಾವು ಸುಮಾರು ಏಳುಕಿಮೀ ದೂರ ನಡೆದು ಹನ್ನೆರಡೂಕಾಲಕ್ಕೆ ತಲಪಿದ್ದೆವು. ದೊಡ್ಡದಾದ ಬಸವನ ಮೂರ್ತಿಯನ್ನು ಬಣ್ಣಹಚ್ಚಿ ಹೆಬ್ಬಾಗಿಲಲ್ಲಿ ಪ್ರತಿಷ್ಠಾಪಿಸಿದ್ದಾರೆ. ದೇವಾಲಯ ಚೋಳರಕಾಲದ್ದಂತೆ. ನಾಗಲಿಂಗ ಸ್ವಾಮಿಗಳು ಅಲ್ಲಿಯ ಗುಹೆಯಲ್ಲಿ ವಾಸವಾಗಿದ್ದು ಈ ದೇವಾಲಯದ ಅಭಿವೃದ್ಧಿಯಲ್ಲಿ ಪ್ರಮುಖಪಾತ್ರ ವಹಿಸಿದ್ದರಂತೆ. ಅದಕ್ಕಾಗಿ ದೇವಾಲಯದ ಒಂದು ಪಾರ್ಶ್ವದಲ್ಲಿ ತಾರಸಿಮೇಲೆ ಅವರ ಮೂರ್ತಿಯನ್ನು ಸ್ಥಾಪಿಸಿದ್ದಾರೆ. ಭಕ್ತಾದಿಗಳು ಆ ಮೂರ್ತಿಗೂ ಪೂಜೆ ಸಲ್ಲಿಸುವುದನ್ನು ಕಂಡೆವು.
ಈಗಿನ ಅರ್ಚಕರ ಹೆಸರೂ ನಾಗಲಿಂಗಸ್ವಾಮಿ. ತಲೆತಲಾಂತರದಿಂದ ಅವರ ಕುಟುಂಬದವರೇ ಪೂಜೆ ಸಲ್ಲಿಸುತ್ತ ಬರುತ್ತಿದ್ದಾರಂತೆ. ಅರ್ಚಕರೂ ಬಸವೇಗೌಡರೂ ಸೇರಿ ನಮಗೆಲ್ಲ ಮಜ್ಜಿಗೆನೀರು, ಚಹಾ ಸರಬರಾಜು ಮಾಡಿದರು.
ಅಲ್ಲಿಂದ ಅರ್ಧ ಕಿಮೀ ದೂರ ಅರಣ್ಯ ಇಲಾಖೆಗೆ ಸೇರಿದ ಸ್ಥಳವಿದೆ. ಅಲ್ಲಿ ದೊಡ್ಡದಾದ ಪಾದೆಕಲ್ಲುಗಳು ಇದ್ದು, ಅಲ್ಲಿಂದ ಮುತ್ತತ್ತಿ ಅರಣ್ಯ ಬಲು ಸುಂದರವಾಗಿ ಕಾಣುತ್ತದೆ. ಕಾವೇರಿ ವೈಲ್ಡ್ ಲೈಫ್ ಎಂಬ ಬರಹವಿದ್ದ ಸಮವಸ್ತ್ರ ಧರಿಸಿದ ಅರಣ್ಯ ಇಲಾಖೆಯ ಸಿಬ್ಬಂದಿ ನಮ್ಮನ್ನು ಆ ಸ್ಥಳಕ್ಕೆ ಕರೆದೊಯ್ದರು. ಅಲ್ಲಿ ಮುತ್ತತ್ತಿ ಅರಣ್ಯವನ್ನು ಕಣ್ಣುತುಂಬಿಸಿಕೊಂಡು, ಸಮೂಹಭಾವಚಿತ್ರ ತೆಗೆಸಿಕೊಂಡು ವಾಪಾಸಾದೆವು. ಒಂದೂವರೆ ಗಂಟೆಗೆ ಹೊರಟು ಪುನಃ ಏಳುಕಿಮೀ ದೂರ ನಡೆದು ಬಸ್ಸು ಇದ್ದ ಜಾಗ ತಲಪುವಾಗ ಗಂಟೆ ಸಂಜೆ ನಾಲ್ಕು ಆಗಿತ್ತು. ಬಿಸಿಬೇಳೆಭಾತ್, ಮೊಸರನ್ನ, ವಡೆ, ಮಸಾಲೆವಡೆ ಹೊಟ್ಟೆಗೆ ಇಳಿಸಿ ವಿಶ್ರಾಂತಿಗೈದೆವು. ತಂಡದ ಸದಸ್ಯರು ಕೆಲವರು ಹಾಸ್ಯ, ಏಕಪಾತ್ರಾಭಿನಯ, ಹಾಡು ಇತ್ಯಾದಿ ಮನರಂಜನಾ ಕಾರ್ಯಕ್ರಮ ನಡೆಸಿಕೊಟ್ಟರು. ಮಾರ್ಗದರ್ಶಕ ದರ್ಶನನಿಗೆ ಒಳ್ಳೆಯ ಕೆಲಸ ಸಿಗಲಿ ಎಂದು ಹಾರೈಸಿ ಅವನನ್ನು ಬೀಳ್ಕೊಟ್ಟೆವು.
ಸಂಜೆ ಐದೂವರೆಗೆ ಅಲ್ಲಿಂದ ಹೊರಟು ಮಳವಳ್ಳಿಯ ಹರಿಕೃಷ್ಣದಲ್ಲಿ ಕಾಫಿ ಕುಡಿದು ಮೈಸೂರು ತಲಪುವಾಗ ರಾತ್ರಿ ೯ ಗಂಟೆಯಾಗಿತ್ತು. ಯೂಥ್ ಹಾಸ್ಟೆಲ್ ಗಂಗೋತ್ರಿ ಘಟಕದ ವತಿಯಿಂದ ನಾಗೇಂದ್ರಪ್ರಸಾದ್, ವೈದ್ಯನಾಥನ್ ಈ ಕಾರ್ಯಕ್ರಮವನ್ನು ರೂ. ೫೦೦ಕ್ಕೆ ಯಶಸ್ವಿಯಾಗಿ ನಡೆಸಿದ್ದರು.
ಚಾರಣದ ಕೆಲವು ಚಿತ್ರಗಳು
ನಿಮ್ಮದೊಂದು ಉತ್ತರ