ಹೊಳೆನರಸೀಪುರ ತಾಲೂಕಿನ ಮಾವಿನಕೆರೆ ರಂಗನಾಥಸ್ವಾಮಿ ಬೆಟ್ಟ ಏರುವುದರ ಕಡೆಗೆ ನಮ್ಮ ಲಕ್ಷ್ಯವಿದ್ದುದು. ಮೈಸೂರಿನಿಂದ ನಾವು ೩೧ ಮಂದಿ ೨೯-೫-೨೦೧೬ರಂದು ಬೆಳಗ್ಗೆ ೭ ಗಂಟೆಗೆ ಮಿನಿ ಬಸ್ಸಿನಲ್ಲಿ ಹೊರಟೆವು. ೮ ಗಂಟೆಗೆ ಯಡತೊರೆ ಅರ್ಕೇಶ್ವರ ದೇವಾಲಯದ ಬಳಿ ಇಡ್ಲಿ ವಡೆ ಹೊಟ್ಟೆಗೆ ಇಳಿಸಿದೆವು. ಪರಸ್ಪರ ಪರಿಚಯ ಮಾಡಿಕೊಂಡೆವು. ಸುಮಾರು ಮಂದಿ ಹೊಸಬರು ಪ್ರಥಮವಾಗಿ ಚಾರಣಕ್ಕೆ ಬಂದವರಿದ್ದರು. ಅವರಿಗೆ ವಿಶೇಷ ಸ್ವಾಗತ ಕೋರಲಾಯಿತು. ಅಲ್ಲಿಂದ ಹೊರಟು ದಾರಿಯಲ್ಲಿ ಕಾಫಿ ಚಹಾ ಸೇವನೆಗೆ ಅರ್ಧ ಗಂಟೆ ವಿನಿಯೋಗವಾಯಿತು.
ಮೈಸೂರು- ಕೃಷ್ಣರಾಜನಗರ- ಭೇರ್ಯ ದಾಟಿ ಹೊಳೆನರಸೀಪುರದತ್ತ ಸಾಗಿದೆವು. ಅಲ್ಲಿಂದ ಸುಮಾರು ೧೨ಕಿಮೀ ದೂರ ಹಾಸನ ರಸ್ತೆಯಲ್ಲಿ ಸಾಗುವಾಗ ಬಲಬದಿಗೆ ಬೆಟ್ಟದಪುರ ರಂಗನಾಥಸ್ವಾಮಿ ದೇವಾಲಯದ ಮಹಾದ್ವಾರ ಕಾಣುತ್ತದೆ. ಅಲ್ಲಿಂದ ಮುಂದೆ ಸ್ವಲ್ಪದೂರದಲ್ಲೇ ದೇವಾಲಯಕ್ಕೆ ಹೋಗಲು ಮೆಟ್ಟಲುಗಳಿವೆ. ಮೆಟ್ಟಲು ಏರುವ ಮೊದಲು ಗಣಪ ನಮ್ಮನ್ನು ಸ್ವಾಗತಿಸುತ್ತಾನೆ. ನಿರಾಯಾಸವಾಗಿ ನಿರ್ವಿಘ್ನವಾಗಿ ಹತ್ತಿಬನ್ನಿ ಎಂಬ ಆಭಯನೀಡುತ್ತಾನೆ. ಮೆಟ್ಟಲುಗಳಿಗೆ ಉದ್ದಕ್ಕೂ ಕೈತಾಂಗು ಹಾಕಿದ್ದಾರೆ. ಸುಮಾರು ೬೦೦ ಪುಟ್ಟದಾದ ಮೆಟ್ಟಲುಗಳು ಹತ್ತಲು ಸುಲಭವಾಗಿವೆ. ಮೆಟ್ಟಲು ನಿರ್ಮಿಸಲು ಬಹುಶಃ ಹೆಚ್ಚು ಕಷ್ಟವಾಗಿರಲಿಕ್ಕಿಲ್ಲ. ಆದರೆ ಆ ಮೆಟ್ಟಲುಗಳ ಬದಿಯಲ್ಲಿ ದಾನಿಗಳ ಹೆಸರು ಕೆತ್ತಲು ಅಪಾರ ಶ್ರಮವಾಗಿರಬಹುದು ಎಂದು ನನ್ನ ಊಹೆ! ಪ್ರತೀಮೆಟ್ಟಲಿನಲ್ಲೂ ದಾನಿಗಳ ಹೆಸರು ಕೆತ್ತಲ್ಪಟ್ಟು ರಾರಾಜಿಸುತ್ತಿದೆ. ಇದನ್ನು ನೋಡಿದಾಗ ದಾನ ಕೊಡುವುದಿದ್ದರೆ ಎಡಗೈಗೂ ಗೊತ್ತಾಗದಂತೆ ಮಾಡು ಎಂಬ ನಾಣ್ನುಡಿ ನೆನಪಾಯಿತು!
ಅರ್ಧಭಾಗ ಮೇಲೆಹತ್ತಿದಾಗ ಬಂಡೆಮೇಲೆ ಕಲ್ಲುಮಂಟಪ ಎದುರಾಗುತ್ತದೆ. ಅಲ್ಲಿ ಅದೊರಳಗೆ ನಿಂತರೆ ತಂಪು ತಂಪು ಕೂಲ್ ಕೂಲ್ ಎಂದು ಹಾಡು ಗುನುಗುವ ಮನಸ್ಸಾಗುತ್ತದೆ. ಅಷ್ಟು ತಂಪುಗಾಳಿ ಬೀಸುತ್ತದೆ. ಅಲ್ಲಿ ಒಂದಷ್ಟು ಹೊತ್ತು ಕುಳಿತು ಹರ್ಷಹೊಂದಿದೆವು. ಸುತ್ತಲೂ ಎಲ್ಲಿ ನೋಡಿದರೂ ದೊಡ್ಡ ಪುಟ್ಟ ಬಂಡೆಗಲ್ಲುಗಳು, ಪಾದೆಗಳು. (ಸದ್ಯ ಗಣಿಗಾರಿಕೆಯವರ ಕಣ್ಣಿಗೆ ಇದು ಕಾಣದಿದ್ದರೆ ಸಾಕು.) ಅಲ್ಲೊಂದು ಇಲ್ಲೊಂದು ಗಿಡಮರಗಳು, ಪಕ್ಷಿಗಳ ಕೂಗುಗಳು ನಮ್ಮನ್ನು ಸೆಳೆಯುತ್ತವೆ. ಬಲು ಸುಂದರ ತಾಣವಿದು. ಮೆಟ್ಟಲುಹತ್ತಿ ಮೇಲೆ ಬಂದಾಗ ಎದುರುಭಾಗ ವಿಶಾಲಮಂಟಪವಿದೆ. ಮಂಟಪದಾಟಿ ಮುಂದೆ ಸಾಗಿದಾಗ ರಂಗನಾಥ ದೇವಾಲಯ ಕಾಣುತ್ತದೆ. ದೊಡ್ಡ ಬಂಡೆಯೊಳಗೆ ನಿಂತಿರುವ ಭಂಗಿಯ ರಂಗನಾಥನ ವಿಗ್ರಹವಿದೆ. ಇನ್ನೊಂದು ಪಾರ್ಶ್ವಕ್ಕೆ ಆಂಜನೇಯನಿದ್ದಾನೆ. ಬಂಡೆಸುತ್ತಲೂ ಕಟ್ಟಡಕಟ್ಟಿ ಮುಚ್ಚಿಗೆ ಮಾಡಿದ್ದಾರೆ. ಸಾಕಷ್ಟು ಭಕ್ತಾದಿಗಳು ಅಲ್ಲಿನೆರೆದಿದ್ದರು. ದೇವಾಲಯದ ಬಳಿಗೆ ಬರಲು ಅಚ್ಚುಕಟ್ಟಾದ ರಸ್ತೆಯೂ ಇದೆ.
ನಾವು ಅಲ್ಲಿ ತಲಪಿದಾಗ ಒಂದು ಮದುವೆ ನಡೆಯುತ್ತಿತ್ತು. ವಧೂವರರರು ಸ್ವಲ್ಪ ವಯಸ್ಸು ಮೀರಿದಂತಿದ್ದರು. ತಾಪತ್ರಯದಿಂದ ಇಷ್ಟು ದಿನ ಮದುವೆಯಾಗಲು ಆಗದೆ ಈಗ ಸರಳ ವಿವಾಹ ಆಗುತ್ತಿದ್ದಾರೆ ಎಂದು ಭಾವಿಸಿದೆವು. ಆದರೆ ನಾವೊಂದು ವಿಷಿಷ್ಟವಾದ ಮದುವೆಗೆ ಸಾಕ್ಷಿಯಾಗುತ್ತಿದ್ದೇವೆಂದು ಆಮೇಲೆ ತಿಳಿಯಿತು. ನಿಮ್ಮ ಜೋಡಿ ಚೆನ್ನಾಗಿದೆ. ಎಂದು ವಧೂವರರಿಗೆ ರವಿ ಬಾಹುಸಾರ್ ಶುಭ ಹಾರೈಸಿದರು. ಆಗ ಅವರ ಜೊತೆಯಿದ್ದವರೊಬ್ಬರು ಈ ಮದುವೆಯ ಹಿಂದಿನ ಕಥೆಯನ್ನು ಹೇಳಿದರು. ಅವರ ಮಾತಿನಲ್ಲೇ ವಿವರಿಸುವೆ: ವರನಿಗೆ ಇದು ಮೂರನೇ ಮದುವೆ. ವಧುವಿಗೆ ಎರಡನೇ ಮದುವೆ. ವರನ ಎರಡನೇ ಹೆಂಡತಿ (ಮೊದಲಿನದರ ಬಗ್ಗೆ ಹೇಳಿಲ್ಲ ಅವರು) ಬೈಕ್ ಅಪಘಾತದಲ್ಲಿ ಮರಣಹೊಂದಿರುವರು. ಈಗಿನ ಯುವಕರು ದುಬಾರಿ ಬೆಲೆಯ ಬೈಕಿನಲ್ಲೇ ಓಡಾಡುವುದು. ಆ ಬೈಕಿನ ಹಿಂದಿನ ಸೀಟಲ್ಲಿ ಕೂತವರು ಮಸಣದ ಹಾದಿ ಹಿಡಿಯುವುದು ಶತಸಿದ್ಧ. ಹಾಗಿರುತ್ತದೆ ಅದು. ಅವರ ಮಗ ಹಟಹಿಡಿದು ಅಂಥ ಬೈಕನ್ನು ತೆಗೆಸಿಕೊಂಡು ಅಮ್ಮನನ್ನು ಕೂರಿಸಿಕೊಂಡು ಹೋಗುತ್ತಿದ್ದಾಗ ಸ್ಕಿಡ್ ಆಗಿ ತಾಯಿ ಬಿದ್ದು ತಲೆ ಒಡೆದು ಅಲ್ಲೇ ಮರಣಹೊಂದಿದಳು. ವರನ ಕಡೆಯವರು ತುಂಬ ಸ್ಥಿತಿವಂತರು. ಅವರ ಎರಡನೇ ಹೆಂಡತಿಯೂ ಶಿಕ್ಷಕಿಯಾಗಿದ್ದಳು. ಬಡ್ಡಿ ವ್ಯವಹಾರದಲ್ಲಿ ತುಂಬ ದುಡ್ಡು ಚಿನ್ನ ಮಾಡಿದ್ದರು. ಆ ಹೆಂಡತಿಯ ಕಡೆಯವರೆಲ್ಲ ಮಗನ ಸಮೇತ ಇದ್ದ ಆಸ್ತಿ ಚಿನ್ನವನ್ನು ತೆಗೆದುಕೊಂಡು ಇವರನ್ನು ಬಿಟ್ಟು ಹೋದರು.
ಈಗಿನ ಮದುವೆಯ ವಧು ಮೂಲತ ಬಳ್ಳಾರಿಯವರು. ಅವರಿಗೂ ಗಂಡ ತೀರಿಹೋಗಿದ್ದಾರೆ. ಒಂದು ಮಗುವಿದೆ. ವಧೂ ವರರಿಬ್ಬರೂ ಹಾಸನದ ಶಾಲೆಯಲ್ಲಿ ಶಿಕ್ಷಕ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ. ನಾವು ಸ್ನೇಹಿತರೆಲ್ಲ ಸೇರಿ ಅವರ ಮದುವೆ ಮಾಡಿಸುತ್ತಿದ್ದೇವೆ ಎಂದು ಹೇಳಿದರು.
ವರನ ಹೆಸರು ಪಾಷಾ, ವಧೂವಿನ ಹೆಸರು ಉಷಾ (ಇದು ಕಾಲ್ಪನಿಕ ಹೆಸರು). ದೇವಾಲಯದ ಅರ್ಚಕರು ಹಾಲುತುಪ್ಪ ಧಾರೆಯೆರೆಸುತ್ತಿದ್ದರು. ಧಾರೆಯಾಗಿ ಹಗಲಲ್ಲೇ ಆರುಂಧತಿ ನಕ್ಷತ್ರವನ್ನೂ ತೋರಿಸಿದರು. ಹಿಂದೂ ಮುಸ್ಲಿಮ್ ಬಾಂಧವ್ಯದ ಈ ಮದುವೆ ನೋಡಿ ಖುಷಿಪಟ್ಟೆವು. ವರ ಶುಭ್ರ ಬಿಳಿ ಕಚ್ಚೆಪಂಚೆ ಹಾಕಿ ವಧೂ ಜರತಾರಿ ಸೀರೆಉಟ್ಟು ಲಕ್ಷಣವಾಗಿ ಕಾಣುತ್ತಿದ್ದರು.
ಅಲ್ಲಿಯ ಅರ್ಚಕರಾದ ಕೇಶವಮೂರ್ತಿಯವರು ನಮ್ಮ ಅಪೇಕ್ಷೆಮೇರೆಗೆ ಅರ್ಧಗಂಟೆ ಹಿಂದೂಧರ್ಮದ ಬಗ್ಗೆ ಹಾಗೂ ದೇವಾಲಯದ ಸ್ಥಳಪುರಾಣವನ್ನು ಸೊಗಸಾಗಿ ವಿವರಿಸಿದರು. ೮೦ ಕೋಟಿ ಜೀವರಾಶಿಯಲ್ಲಿ ಭಗವಂತ ಯಾರ್ಯಾರನ್ನು ಯಾವ ಜೀವಿಯಾಗಿ ಸೃಷ್ಟಿಸಿದನೆಂಬುದಕ್ಕೆ ಸೋದಾಹರಣವಾಗಿ ಒಂದೆರಡನ್ನು ವಿವರಿಸಿದರು. ಈಗ ನಾನು ಇಲ್ಲಿ ಪ್ರವಚನ ಕೊಡುತ್ತಿದ್ದೇನೆ. ಅದನ್ನು ಕೇಳಲು ಕೆಲವರು ಅಯ್ಯೋ ಮಂಡಿನೋವು ಕೂರಕ್ಕಾಗಲ್ಲ ಎಂದು ತಿರುಗಾಡಿಕೊಂಡು ಕೇಳುವವರನ್ನು ಶ್ವಾನವಾಗಿಯೂ, ಆಯಾಸ ಪರಿಹಾರಕ್ಕೋಸ್ಕರ ಮಲಗಿಕೊಂಡು ಕೇಳುತ್ತೇನೆ ಎನ್ನುವವರನ್ನು ಸರ್ಪವಾಗಿಯೂ, ಕೂರಲಾಗುವುದಿಲ್ಲ ನಿಂತೇ ಕೇಳುತ್ತೇನೆ ಎಂಬವರನ್ನು ಕುದುರೆಯಾಗಿಯೂ, ಭಟ್ರು ಏನೋ ವಟಗುಡುತ್ತಿದ್ದಾರೆ ಎಂದು ಕೇಳದೆಯೇ ಪರಸ್ಪರ ಮಾತಾಡುವವರನ್ನು ಮಂಡೂಕವಾಗಿಯೂ, ಗಲಾಟೆ ಮಾಡುವವರನ್ನು ಗಾರ್ದಭವಾಗಿಯೂ ಸೃಷ್ಟಿಸುತ್ತಾನೆ. ಹೀಗೆ ಹೇಳಿದಾಗ ಅದನ್ನು ಕೇಳುತ್ತಿದ್ದ ಅಜ್ಜಿಯೊಬ್ಬರು ನಿಂತಿದ್ದವರು ಕೂಡಲೇ ಕೂತರು!
೧೬೦೦ ವರ್ಷಗಳ ಹಿಂದೆ ಅಂದರೆ ನಾಲ್ಕನೆಯ ಶತಮಾನದ ಅಂತ್ಯದಲ್ಲಿ ಶ್ರಿರಂಗನಾಥ ದೇವಾಲಯ ಸ್ಥಾಪನೆಯಾಗಿದೆ. ಮೂಲ ಹೆಸರು ತಿರುವೆಂಕಟನಾಥ. ಒರಳುಕಲ್ಲಿನ ರೂಪದಲ್ಲಿ ಉದ್ಭವವಾದದ್ದೆಂದು ಪ್ರತೀತಿಯಲ್ಲಿದೆ. ಒಂದು ಮೂಲದ ಪ್ರಕಾರ ಜೀಯರು ಗುರುಗಳು ಬಂದು ಈ ಗುಹೆಯಲ್ಲಿ ತಿರುವೆಂಕಟನಾಥ ವಿಗ್ರಹ ಸ್ಥಾಪನೆ ಮಾಡಿ ಲೋಕಕಲ್ಯಾಣಾರ್ಥವಾಗಿ ಪೂಜೆ ಮಾಡುತ್ತಿದ್ದರು ಎಂಬುದು ಉಲ್ಲೇಖದಲ್ಲಿದೆ.
ಮೈಸೂರು ಅರಸರು ಸಂಸ್ಥಾನ ಸ್ಥಾಪನೆ ಮಾಡಿದಾಗ ಹೊಳೆನರಸೀಪುರದ ಸಾಮಂತರಾಜ ನರಸಿಂಹನಾಯಕ ಹೊಳೆನರಸೀಪುರದಲ್ಲಿ ಒಂದು ದೇವಾಲಯ ಕಟ್ಟಿಸಿದ. ಆಗ ಅವನಿಗೆ ಇಲ್ಲಿ ದೇವಾಲಯ ಉದ್ಭವವಾದದ್ದು ಗೊತ್ತಿರಲಿಲ್ಲ. ಅವನ ಗೋಶಾಲೆಯಿಂದ ಪ್ರತೀದಿನ ಒಂದು ಹಸು ಗೋಶಾಲೆ ಬಾಗಿಲು ತೆರೆದ ಕೂಡಲೇ ಬೆಟ್ಟದಮೇಲಿರುವ ಈ ಉದ್ಭವ ಮೂರ್ತಿಗೆ ಹಾಲು ಸುರಿಸಿ ವಾಪಾಸು ಗೋಶಾಲೆ ಸೇರಿಕೊಳ್ಳುತ್ತಿತ್ತು. ಇತ್ತ ಗೋಶಾಲೆಯಲ್ಲಿ ಅದನ್ನು ಕರೆಯುವಾಗ ಹಾಲಿನ ಬದಲು ರಕ್ತ ಬರುತ್ತಿತ್ತು. ಇದೇನು ಹೀಗೆ? ಈ ವಿಷಯವನ್ನು ನರಸಿಂಹನಾಯಕನಿಗೆ ತಿಳಿಸುತ್ತಾರೆ. ನರಸಿಂಹನಾಯಕ ಬೆಳಗ್ಗೆ ಖುದ್ದಾಗಿ ಪರೀಕ್ಷಿಸುತ್ತಾನೆ. ಬಾಗಿಲು ತೆರೆದ ಕೂಡಲೇ ಹಸು ನೇರವಾಗಿ ಉದ್ಭವ ಮೂರ್ತಿ ಬಳಿ ಹೋಗಿ ಹಾಲು ಸುರಿಸುವುದನ್ನು ಹಸುವಿನ ಹಿಂದೆಯೇ ಹೋದ ನರಸಿಂಹನಾಯಕ ಕಾಣುತ್ತಾನೆ. ಅರ್ಚಕರನ್ನು ನೇಮಿಸಿ ಶೈವಾಗಮನ ರೀತಿಯಲ್ಲಿ ಪೂಜೆಗೆ ವ್ಯವಸ್ಥೆ ಮಾಡುತ್ತಾನೆ. ಒಂದುದಿನ ನರಸಿಂಹನಾಯಕನ ಸ್ವಪ್ನದಲ್ಲಿ ಮಹಾನ್ ವಿಷ್ಣು ಬಂದು ನಾನು ವಿಷ್ಣುರೂಪದಲ್ಲಿರುವುದು. ಶೈವಾಗಮನ ಪ್ರಕಾರ ಪೂಜೆ ಮಾಡಿಸಬೇಡ ಎಂದು ಹೇಳಿದಂತಾಯಿತು. ಈ ಸ್ವಪ್ನವನ್ನು ನರಸಿಂಹನಾಯಕ ಕಡೆಗಣಿಸುತ್ತಾನೆ.
ಯಾತ್ರಿಕರಾಗಿ ವೈಷ್ಣವರು ಅಲ್ಲಿಗೆ ಯಾತ್ರಾರ್ಥ ಬಂದಾಗ ಅಲ್ಲೇ ನೆಲೆನಿಂತು ಪೂಜೆ ಮಾಡಬೇಕೆಂಬುದಾಗಿ ಅವರಿಗೆ ಸ್ವಪ್ನವಾಗಿ ಅವರು ಕಾಲಕ್ರಮೇಣ ಅಲ್ಲೇ ಇದ್ದು ಪೂಜೆ ಮಾಡುತ್ತಾರೆ. ಇತ್ತ ನರಸಿಂಹನಾಯಕ ನೇಮಿಸಿದ ಅರ್ಚಕರು ನರಸಿಂಹನಾಯಕನಿಗೆ ದೂರು ಸಲ್ಲಿಸುತ್ತಾರೆ. ನರಸಿಂಹನಾಯಕ ವೈಷ್ಣವರನ್ನು ಅರಮನೆಗೆ ಕರೆಸಿ ವಿಚಾರಿಸಿದಾಗ ಅವರು ನಾವು ದೈವಪ್ರೇರಣೆಯಿಂದಲೇ ಹೀಗೆ ಪೂಜೆ ಮಾಡುತ್ತಿರುವುದು. ದುರುದ್ದೇಶದಿಂದಲ್ಲ ಎಂದು ಹೇಳುತ್ತಾರೆ. ಆಗ ನರಸಿಂಹನಾಯಕ ಸಭೆ ಕರೆದು ನಿಮಗೆ ಯಾವ ರೀತಿಯಲ್ಲಿ ಪೂಜೆ ಆಗಬೇಕು ತಿಳಿಸಿ ಎಂದು ಊರವರ ಅಭಿಪ್ರಾಯ ಕೇಳುತ್ತಾನೆ. ನಿಮ್ಮ ಆಜ್ಞೆ ಹೇಗಿದೆಯೊ ಹಾಗೆ ನಾವು ನಡೆದುಕೊಳ್ಳುತ್ತೇವೆ ಎನ್ನುತ್ತಾರೆ. ಅದಕ್ಕೆ ನರಸಿಂಹನಾಯಕ ಸ್ವಲ್ಪದಿನ ಯಾರೂ ಪೂಜೆ ಮಾಡುವುದು ಬೇಡ. ಗುಹೆಯ ಬಾಗಿಲಿಗೆ ಸುಣ್ಣ ಗಾರೆ ಹಾಕಿ ಮುಚ್ಚಿಬಿಡಿ ಎಂದು ಆಜ್ಞಾಪಿಸುತ್ತಾನೆ. ನಾನು ದುರುದ್ದೇಶದಿಂದ ದೇವಾಲಯ ಮುಚ್ಚಿಸುತ್ತಿಲ್ಲ. ಅವನ ಮೇಲೆ ಪಂಥ ಹಾಕಿದ್ದೇನೆ. ಯಾತ್ರಾರ್ಥಿಗಳ ಪ್ರಕಾರ ವಿಷ್ಣು ರೂಪದಲ್ಲಿಯೇ ಪೂಜೆ ಮುಂದುವರಿಯಬೇಕೆಂದಾದರೆ ಇನ್ನು ೪೮ ದಿನದಲ್ಲಿ ದಶಾವತಾರದಲ್ಲಿ ರಾಮಾವತಾರದ ಪ್ರಕಾರ ಉತ್ತರದಲ್ಲಿ ಆಂಜನೇಯ ಉದ್ಭವವಾಗಲಿ, ನಾನು ಪೂಜಿಸುವ ಈಶ್ವರನೇ ಆದಲ್ಲಿ ಅವನ ಮುಂದೆ ನಂದಿ ಉದ್ಭವವಾಗಬೇಕು. ಇದಕ್ಕೆ ಎಲ್ಲ ಪ್ರಜೆಗಳು ಒಪ್ಪಿದರು. ೪೮ ದಿನ ಕಳೆಯಿತು. ಆ ೪೮ನೆಯ ದಿನ ಅರಮನೆಯಲ್ಲಿರುವವರಿಗೆ ದೊಡ್ಡ ಸಿಡಿಲು ಹೊಡೆದಂತಾಯಿತು. ಯಾರಿಗೂ ನಿದ್ರೆಯಿಲ್ಲ. ಬೆಳಗ್ಗೆ ಎದ್ದು ಬೆಟ್ಟದತ್ತ ಓಡಿದರು. ಅಲ್ಲಿ ಗುಹೆಯ ಬಾಗಿಲು ಛಿದ್ರಗೊಂಡಿದೆ. ಆ ಶಬ್ದವೇ ಸಿಡಿಲು ಹೊಡೆದಂತೆ ಕೇಳಿಸಿದ್ದು. ಉತ್ತರದಲ್ಲಿ ಆಂಜನೇಯ ಉದ್ಭವವಾಗಿದ್ದಾನೆ. ಅದನ್ನು ಕಂಡದ್ದೇ ನರಸಿಂಹನಾಯಕ, ನನ್ನಿಂದ ಸರ್ವಾಪರಾಧವಾಯಿತು. ಇನ್ನುಮುಂದೆ ಇಲ್ಲಿ ವಿಷ್ಣುರೂಪದಲ್ಲೇ ಪೂಜೆ ನಡೆಯುತ್ತದೆ ಎಂದು ಸಾರಿದ. ಹಾಗೂ ದೇವಾಲಯವನ್ನು ಸರಿಯಾಗಿ ಕಟ್ಟಿಸಿದ. ದೇವಾಲಯದ ಪೂಜಾವೇಳೆ ಬೆಳಗ್ಗೆ ಬೆಳಗ್ಗೆ ೯ರಿಂದ ೧, ಮಧ್ಯಾಹ್ನ ೨ರಿಂದ ೫ಗಂಟೆವರೆಗೆ.
ಮಹಾಮಂಗಳಾರತಿಯಾಗಿ ನಾವು ಅಲ್ಲಿಂದ ಹೊರಟೆವು. ಮೆಟ್ಟಲು ಇಳಿದು ಕಲ್ಲುಮಂಟಪದ ಬಳಿ ತಂಡದ ಚಿತ್ರ ತೆಗೆಸಿಕೊಂಡು ಕೆಳಗೆ ಬಂದೆವು. ಅಲ್ಲಿ ಮರದಡಿ ಕುಳಿತು (ಬಿಸಿಬೇಳೆಭಾತ್, ಮೊಸರನ್ನ, ಮದ್ದೂರುವಡೆ) ಭೋಜನ ಕಾರ್ಯ ನೆರವೇರಿಸಿದೆವು.
ವೈದ್ಯನಾಥನ್, ರವಿಬಾಹುಸಾರ್, ನಾಗೇಂದ್ರಪ್ರಸಾದ್, ಉಮಾಶಂಕರ್ (ಹಾಡು, ಹಾಸ್ಯ, ಏಕಪಾತ್ರಾಭಿನಯ) ಇತ್ಯಾದಿ ಮನರಂಜನಾ ಕಾರ್ಯಕ್ರಮ ಕೊಟ್ಟರು. ನಾವು ಆಲಿಸಿ, ನಕ್ಕು ಹಗುರಾದೆವು.
ಎಣ್ಣೆಹೊಳೆ ರಂಗನಾಥಸ್ವಾಮಿಬೆಟ್ಟ
ಅಲ್ಲಿಂದ ಮೂರುಗಂಟೆಗೆ ಹೊರಟೆವು. ಹೊಳೆನರಸೀಪುರದಿಂದ ಚನ್ನರಾಯಪಟ್ಟಣ ರಸ್ತೆಯಲ್ಲಿ ಸುಮಾರು ೧೨ ಕಿಮೀ ಸಾಗಿ ಮುಂದೆ ನಾಲೆಬದಿ ಬಲಕ್ಕೆ ಹೊರಳಿ ನಾಲೆ ಏರಿ ರಸ್ತೆಯಲ್ಲೇ ಸಾಗಿ ಮುಂದೆ ಅಶ್ವತ್ಥಮರದ ಬಳಿ ಎಡಕ್ಕೆ ಸಾಗಿ ಹೋದರೆ ಎಣ್ಣೆಹೊಳೆ ರಂಗನಾಥ ದೇವಾಲಯ ತಿರುಮಲಪುರಕ್ಕೆ ಹೋಗುವ ದಾರಿ ಸಿಗುತ್ತದೆ. ದೇವಾಲಯದ ಮೇಲಕ್ಕೆ ಹೋಗಲು ಅರ್ಧ ದಾರಿಯವರೆಗೆ ಕಲ್ಲುಮಣ್ಣು ರಸ್ತೆ ಇದೆ. ವಾಹನ ಸಾಗುವುದು ಕಷ್ಟ. ನಡೆದು ಹೋಗಲು ಅರ್ಧದಾರಿ ಮೆಟ್ಟಲುಗಳಿವೆ. ಮತ್ತೆ ಕಲ್ಲುಗಳಿಂದ ಕೂಡಿದ ಬೆಟ್ಟದಲ್ಲಿ ಹತ್ತಬೇಕು. ಕಡಿದಾಗಿದೆ ಮೆಟ್ಟಲುಗಳು. ಆಗಷ್ಟೆ ಹೊಟ್ಟೆಬಿರಿಯ ಊಟ ಮಾಡಿದ ಪ್ರಭಾವ ಬೆಟ್ಟ ಏರುವಾಗ ತುಸು ಕಷ್ಟಕೊಟ್ಟಿತು. ಉಸ್ಸು ಬುಸ್ಸು ಎಂದು ಏದುಸಿರು ಬಿಡುತ್ತ ಬೆಟ್ಟ ಏರಿದೆವು. ಇದನ್ನು ಚಾರಣ ಎಂದು ಕರೆಯಲಡ್ಡಿಯಿಲ್ಲ ಅಂದರೊಬ್ಬರು. ಎಲ್ಲರೂ ಬೆಟ್ಟ ಏರಿದೆವು.
ಬೆಟ್ಟದಿಂದ ಕೆಳಗೆ ಊರು ನೋಡುವುದೇ ಚಂದ. ಹೊಲಗದ್ದೆಗಳು ಮೈಸೂರುಪಾಕಿನ ತುಂಡಿನಂತೆ ತೋರುತ್ತಿದ್ದುವು. ಆಗಸದಲ್ಲಿ ಮೋಡಗಳು ಕ್ಷಣಕೊಮ್ಮೆ ಬದಲಾವಣೆಗೊಂಡು ಚಿತ್ತಾರ ಬಿಡಿಸಿದ ದೃಶ್ಯ ಅದ್ಭುತವಾಗಿ ಕಾಣುತ್ತಿತ್ತು.
ಇಲ್ಲಿ ಪೂಜೆ ನಡೆಯುವಂತೆ ಕಾಣುವುದಿಲ್ಲ. ದೇವಾಲಯದ ಬಾಗಿಲು ತೆರೆದೇ ಇರುತ್ತದೆ. ನಾವು ಅಲ್ಲಿ ಸುಮಾರು ಹೊತ್ತು ವಿಶ್ರಮಿಸಿದೆವು. ಪ್ರತಿಭೆ ಇರುವವರ ಭಾವಗೀತೆ, ಭಕ್ತಿಗೀತೆ, ಹಾಸ್ಯ, ಮಂಕುತಿಮ್ಮನ ಕಗ್ಗ ಇತ್ಯಾದಿ ಭಾವಲಹರಿಗಳನ್ನು ಕೇಳುತ್ತ ಮೈಮರೆತೆವು. ತಂಡದ ಚಿತ್ರ ತೆಗೆಸಿಕೊಂಡೆವು. ೪.೩೦ಗೆ ಅಲ್ಲಿಂದ ಕೆಳಗೆ ಬಂದು ವಾಹನವೇರಿದೆವು. ದಾರಿಮಧ್ಯೆ ಚಹಾ ಕಾಪಿ ಸೇವನೆಯಾಗಿ ರಾತ್ರಿ ೭.೩೦ಗೆ ಮೈಸೂರು ತಲಪಿದೆವು.
ವೈದ್ಯನಾಥನ್, ನಾಗೇಂದ್ರಪ್ರಸಾದ್ ಜೋಡಿ ಭಲೇಜೋಡಿ ಎಂದು ಪ್ರಸಿದ್ಧಿಯಾಗಿದೆ. ರೂ. ೫೫೦ಕ್ಕೆ ಯೂಥ್ ಹಾಸ್ಟೆಲ್ ಗಂಗೋತ್ರಿಘಟಕದ ವತಿಯಿಂದ ಈ ಚಾರಣ ಕಾರ್ಯವನ್ನು ಅಚ್ಚುಕಟ್ಟಾಗಿ ನಡೆಸಿದ್ದರು. ಅವರಿಗೆ ಧನ್ಯವಾದಗಳು.
ನಿಮ್ಮದೊಂದು ಉತ್ತರ