ನಾವು ಮಾಡುವ ಯೋಗಾಸನಗಳಿಂದ ಶರೀರದ ಬಾಹ್ಯ ಅವಯವಗಳ ಗೊತ್ತಾದ ಚಲನವಲನಗಳಿಂದ ಶರೀರದ ವಿವಿಧ ಆಂತರಿಕ ಅವಯವಗಳ ಮೇಲೆ ನಿರ್ದಿಷ್ಟ ಒತ್ತಡ ಬೀಳುವುದರಿಂದ ಒಳಗಿನ ಅವಯವ ಚುರುಕುಗೊಂಡು ಪರಿಶುದ್ಧವಾಗಿ ತಮ್ಮ ಶಕ್ತಿಯನ್ನು ಹೆಚ್ಚಿಸಿಕೊಳ್ಳುತ್ತವೆ. ಇದರಿಂದ ದೈಹಿಕ ಹಾಗೂ ಮಾನಸಿಕ ಸ್ವಾಸ್ಥ್ಯ ಲಭಿಸುತ್ತದೆ.
ನಿರಂತರ ಯೋಗಾಭ್ಯಾಸದಿಂದ ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯವೂ ಉತ್ತಮಗೊಳ್ಳುತ್ತದೆ. ಪರರಲ್ಲಿ ದಯೆ, ಕರುಣೆ, ಕ್ಷಮೆ, ಪ್ರೀತಿ ಇತ್ಯಾದಿ ಗುಣಗಳು ಮೊದಲೇ ಇದ್ದದ್ದು ಇನ್ನಷ್ಟು ಜಾಗೃತಾವಸ್ಥೆಯಲ್ಲಿರಲು ಯೋಗಾಭ್ಯಾಸ ಸಹಾಯ ಮಾಡುತ್ತದೆ. ಶರೀರದಲ್ಲಿ ಹೊಕ್ಕ ದ್ವೇಷ, ಅಸೂಯೆ, ಸಣ್ಣತನ, ಇತ್ಯಾದಿ ದುರ್ಗುಣಗಳು ಇದ್ದರೆ ಅವನ್ನು ಮೇಲೆ ಬರಲು ಬಿಡುವುದಿಲ್ಲ. ಅಲ್ಲೇ ಹೊಸಕಿ ಹಾಕುತ್ತದೆ. ಇದರಿಂದ ಮನೆಯವರೆಲ್ಲರ ಆರೋಗ್ಯವೂ ಉತ್ತಮಗೊಳ್ಳುತ್ತದೆ.
ಪ್ರತಿಯೊಂದು ಶಾಲೆಯಲ್ಲಿ ಪ್ರತೀನಿತ್ಯ ಅರ್ಧ ಗಂಟೆ ಮಕ್ಕಳಿಗೆ ಯೋಗಾಭ್ಯಾಸ ತರಗತಿ ಕಡ್ಡಾಯವಾಗಿ ಇರಲೇಬೇಕು. ಈ ಕಾಲದ ಸ್ಪರ್ಧಾಯುಗದಲ್ಲಿ ಮಕ್ಕಳಿಗೆ ಕಲಿಕೆಯ ಒತ್ತಡ ತುಂಬ ಇರುತ್ತದೆ. ಅದನ್ನು ಮಾನಸಿಕವಾಗಿ ಎದುರಿಸಲು ಯೋಗ, ಪ್ರಾಣಾಯಾಮ ಅತ್ಯಗತ್ಯ. ಅವರ ಮನಸ್ಸೂ ಇದರಿಂದ ಸದೃಢಗೊಳ್ಳುತ್ತದೆ. ಶಾಲೆಯ ಪರೀಕ್ಷೆಯಲ್ಲಿ ಅಂಕ ಕಡಿಮೆಯಾಯಿತೆಂದೋ ಅಥವಾ ನಪಾಸಾದೆವೆಂದೋ ಮಕ್ಕಳ ಆತ್ಮಹತ್ಯೆ, ಮನೆಬಿಟ್ಟು ತೆರಳುವಿಕೆ ಮುಂತಾದ ಅನಿಷ್ಟ ಯೋಚನೆಗಳು ಸುಳಿಯಲು ಆಗ ಅವಕಾಶವಿರುವುದಿಲ್ಲ. ಯೋಗಾಭ್ಯಾಸದಿಂದ ಪ್ರತೀದಿನ ಅವರ ಮನಸ್ಸು ಪ್ರಫುಲ್ಲಗೊಂಡಿರುತ್ತದೆ. ಪಾಟದ ಕಡೆ ಗಮನವೀಯಲು ಸಹಕಾರಿಯಾಗುತ್ತದೆ. ಚಿಕ್ಕಂದಿನಲ್ಲೇ ಯೋಗಾಭ್ಯಾಸ ಮಾಡಿದರೆ ದೇಹದ ಆರೋಗ್ಯದ ಜೊತೆಗೆ ಮನಸ್ಸಿನ ಆರೋಗ್ಯವೂ ಉತ್ತಮಗೊಳ್ಳುವುದರಲ್ಲಿ ಸಂಶಯವಿಲ್ಲ. ಇದರಿಂದ ಬಾಲಕರು ಸಂಸ್ಕಾರ ಕಲಿತು ಮುಂದೆ ಈಗ ನಮ್ಮ ಸಮಾಜದಲ್ಲಿ ನಡೆಯುತ್ತಿರುವ ಇಂಥ ವಿಕೃತ ಅತ್ಯಾಚಾರ ಮನೋಭಾವ ಬೆಳೆಯದಂತೆ ಮನಸ್ಸು ನಿಗ್ರಹಗೊಂಡೀತು.
ಹೇಗೆ ತಾಯಿ ತನ್ನ ಮಗುವಿನ ಬೇಕುಬೇಡಗಳನ್ನು ತಾನೇ ಅರಿತು ಪೂರೈಸುತ್ತಾಳೆಯೋ ಹಾಗೆಯೇ ಸಕಲ ಜೀವರಾಶಿಗಳಿಗೂ ತಾಯಿಯಾಗಿರುವ ಪ್ರಕೃತಿಮಾತೆ ಎಲ್ಲವನ್ನೂ ನಮಗೆ ನೀಡುತ್ತಾಳೆ. ಎಲ್ಲ ಜೀವಿಗಳಿಗೂ ಮಿಗಿಲಾಗಿ ಮನುಜನಿಗೆ ಮಾತಾಡುವ, ಯೋಚನೆ ಮಾಡುವ ಶಕ್ತಿಯನ್ನು ನೀಡಿದ್ದಾಳೆ. ಜೀವನ ಒಂದು ಸುಂದರ ಸರಳ ಬದುಕು. ಸುಲಭ ಸರಳವಾದ ನಮ್ಮ ಜೀವನಗಾಥೆಗೆ ಆಲಸ್ಯ, ಗುರಿ ಇಲ್ಲದ ದುಡಿಮೆ, ಅಸೂಯೆ, ದ್ವೇಷ, ಅತಿ ಆಸೆ ಎಲ್ಲ ಸೇರಿಸಿ ಅದನ್ನು ನಾವು ಜಟಿಲಗೊಳಿಸಿದ್ದೇವೆ. ಹೀಗೆ ನಾವೇ ಹಾಕಿದ ಈ ಸಂಕೋಲೆಗಳಿಂದ ಬಿಡುಗಡೆ ಪಡೆಯಲು ಸಂತೃಪ್ತಿಯಿಂದ ಬಾಳಲು ಆಧ್ಯಾತ್ಮಿಕತೆ ದಾರಿ ತೋರಿಸುತ್ತದೆ.
ಇರುವ ಕೆಲಸವ ಮಾಡು ಕಿರಿದೆನದೆ ಮನವಿಟ್ಟು
ದೊರೆತುದ ಹಸಾದವೆಂದುಣ್ಣು ಗೊಣಗಿಡದೆ
ಧರಿಸು ಲೋಕದ ಭರವ ಪರಮಾರ್ಥವನು ಬಿಡದೆ
ಹೊರಡು ಕರೆ ಬರಲ್ ಅಳದೆ ಮಂಕುತಿಮ್ಮ
೮-೧೧-೧೫ ಪ್ರಜಾನುಡಿ ಪತ್ರಿಕೆಯಲ್ಲಿ ಪ್ರಕಟಿತಗೊಂಡಿದೆ.
ನಿಮ್ಮದೊಂದು ಉತ್ತರ