ತಾರೀಕು ೨೫.೧೦.೨೦೧೫ರಂದು ಮೈಸೂರಿನಿಂದ ೨೯ ಮಂದಿ ಬೆಳಗ್ಗೆ ಘಂಟೆ ೭.೨೦ರ ರೈಲಿನಲ್ಲಿ ನಂಜನಗೂಡು ತಾಲೂಕಿನ ಕೋಣನೂರಿಗೆ ಪ್ರಯಾಣಿಸಿದೆವು. (ವ್ಯವಸ್ಥಾಪಕರು ರೈಲಲ್ಲಿ ನಮಗೆ ಬೆಳಗಿನ ತಿಂಡಿ ಇಡ್ಲಿ ವಡೆ ಪೊಟ್ಟಣ ಕೊಟ್ಟಿದ್ದರು. ಮತ್ತು ಬೆಟ್ಟದಮೇಲೆ ತಿನ್ನಲು ಸೌತೆಕಾಯಿ, ಚಕ್ಕುಲಿ, ಸಿಹಿ ತುಂಬಿದ ಪೊಟ್ಟಣವನ್ನು ಕೊಟ್ಟಿದ್ದರು.) ೯ ಗಂಟೆಗೆ ನಾವು ಕೋಣನೂರು ರೈಲುನಿಲ್ದಾಣದಲ್ಲಿ ಇಳಿದು ನಮ್ಮೊಡನೆ ಬಂದಿದ್ದ ನಾಗಣ್ಣನವರ ಮನೆ ತಲಪಿದೆವು. ಅಲ್ಲಿ ನಮಗೆ ಬಾಳೆಹಣ್ಣು, ಬೆಲ್ಲ ಹಾಕಿ ಮಾಡಿದ ಚಹಾ ವಿತರಣೆಯಾಯಿತು. ಬೆಲ್ಲದ ಚಹಾ ಬಹಳ ಚೆನ್ನಾಗಿದೆಯೆಂದು ಕೆಲವರು ಎರೆಡೆರಡು ಲೋಟ ಚಹಾ ಕುಡಿದರು. ವೃತ್ತಾಕಾರದಲ್ಲಿ ನಿಂತು ನಮ್ಮ ನಮ್ಮ ಪರಿಚಯ ಹೇಳಿಕೊಂಡೆವು.
ತದನಂತರ ನಾವು ಕೋಣನೂರು ಬೆಟ್ಟದತ್ತ ಸಾಗಿದೆವು. ನಮ್ಮ ಮಾರ್ಗದರ್ಶಿಯಾಗಿ ಮುಂದೆ ನಾಗಣ್ಣನವರು ಇದ್ದರು. ಸುಮಾರು ನಾಲ್ಕು ಕಿಮೀ ದೂರ ರಸ್ತೆ, ಹೊಲದ ಮೂಲಕ ಸಾಗಬೇಕು. ರಸ್ತೆಬದಿ ಕಾಲಿಡುವಂತಿಲ್ಲ. ಕೈ ಮೂಗಿನ ಬಳಿ ಹೋಯಿತು. ಅದಕ್ಕೆ ಸಾಕ್ಷಿಯಾಗಿ ಬಯಲುಶೌಚ ಧಾರಾಳವಾಗಿ ನಡೆದ ಕುರುಹಿತ್ತು. ಅಲ್ಲಿ ಇನ್ನೂ ಬಯಲುಮುಕ್ತ ಶೌಚಾಲಯ ಜಾರಿಗೆ ಬಂದಂತೆ ಕಾಣಲಿಲ್ಲ.
ಕೋಣನೂರಿನ ಮಹದೇಶ್ವರ ಬೆಟ್ಟ ಏರಲು ತೊಡಗಿದೆವು. ತುಂಬ ದೊಡ್ಡ ಬೆಟ್ಟವಲ್ಲ. ಏರಲು ಮೆಟ್ಟಲುಗಳಿಲ್ಲ. ನಾವು ನಡೆದದ್ದೇ ಹಾದಿ. ಬೆಟ್ಟ ಹತ್ತುವುದೇ ಸುಖ ಎಂದುಕೊಂಡವರಿಗೆಲ್ಲ ಈ ಬೆಟ್ಟ ಹತ್ತುವುದು ಕಷ್ಟವೇ ಅಲ್ಲ. ಹೊಸಬರಿಗೆ ಸ್ವಲ್ಪ ಕಷ್ಟವೆನಿಸಿತು. ನಮ್ಮೊಡನೆ ಏಳೆಂಟು ಮಂದಿ ಇದೇ ಪ್ರಥಮಬಾರಿಗೆ ಚಾರಣ ಕೈಗೊಂಡವರಿದ್ದರು. ಅವರು ತುಂಬ ಸಂತಸಪಟ್ಟರು. ಇನ್ನುಮುಂದೆಯೂ ಇಂಥ ಚಾರಣಕ್ಕೆ ಬರಬೇಕೆಂಬ ಮನಸ್ಸಾಗಿದೆಯೆಂದು ಹೇಳಿದರು. ಸುಮಾರು ಹತ್ತೂವರೆ ಗಂಟೆಯೊಳಗೆ ನಾವು ಬೆಟ್ಟ ತಲಪಿದೆವು. ಅಲ್ಲಿ ಮಹದೇಶ್ವರನ ಪುಟ್ಟದಾದ ಎರಡು ಗುಡಿಗಳಿವೆ. ಗುಡಿಯ ಬಾಗಿಲುಗಳಿಗೆ (ಬಾಗಿಲು ಅಂದರೆ ಮರದ ಹಲಗೆಯನ್ನು ಒರಗಿಸಿದ್ದರು) ಗೆದ್ದಲು ಹತ್ತಿತ್ತು. ಹಳ್ಳಿಯ ಜನ ಹಿಂದೆಲ್ಲ ಬೆಟ್ಟಕ್ಕೆ ಆಗಾಗ ಹೋಗುತ್ತಿದ್ದರಂತೆ. ಈಗ ಬಲು ಅಪರೂಪವಾಗಿ ಬರುತ್ತಾರಂತೆ. ಎಂದು ನಾಗಣ್ಣನವರು ಅವರ ಹಳೆಯ ನೆನಪನ್ನು ಬಿಚ್ಚಿಟ್ಟರು. ನಮ್ಮೊಡನೆ ಸ್ಥಳೀಯ ಹಳ್ಳಿಯ ಯುವಕರೂ ಉಮೇದುಗೊಂಡು ಬಂದಿದ್ದರು. ಅವರು ದೇವಾಲಯದೊಳಗೆ ಊದುಕಡ್ಡಿ ಹಚ್ಚಿ ಹಣ್ಣುಕಾಯಿ ಇಟ್ಟು ಪೂಜೆ ಮಾಡಿದರು.
ಈ ಬೆಟ್ಟದ ಎದುರು ಮತ್ತೊಂದು ಸ್ವಲ್ಪ ಎತ್ತರದ ಬೆಟ್ಟ ಇದೆ. ಅದನ್ನೂ ನಾವೆಲ್ಲ ಏರಿದೆವು. ಅಲ್ಲಿಂದ ಕೋಣನೂರು ಕೆರೆ, ಬೆಂಡರವಾಡಿ ಕೆರೆ ಬಹಳ ಚೆನ್ನಾಗಿ ಕಾಣುತ್ತದೆ. ರೈಲ್ವೇ ಹಳಿಮೇಲೆ ರೈಲು ಬರುವುದನ್ನು ಬೆಟ್ಟದಮೇಲಿಂದ ನೋಡುವುದೇ ಚಂದ. ಹಾವಿನಂತೆ ಸರಸರ ಬರುತ್ತ, ತಿರುವಿನಲ್ಲಿ ಬಳುಕುತ್ತ ಬರುವ ರೈಲನ್ನು ನೋಡುತ್ತ ಮೈಮರೆತೆವು. ಅಲ್ಲಿ ಸ್ವಲ್ಪ ಹೊತ್ತು ಕೂತು ಬೆಟ್ಟದ ಕೆಳಗಿನ ದೃಶ್ಯ ನೋಡಿದೆವು. ಅಲ್ಲಿಂದ ಇಳಿದು ಕೆಳಗಿನ ಪುಟ್ಟಬೆಟ್ಟದಲ್ಲಿ ಕೂತು ವಿರಮಿಸಿದೆವು. ತಂಡದ ಚಿತ್ರ ತೆಗೆಸಿಕೊಂಡೆವು. ಬಳಿಕ ಬೆಟ್ಟ ಇಳಿಯಲು ತೊಡಗಿದೆವು. ಹೆಚ್ಚಿನವರಿಗೆ ಬೆಟ್ಟ ಇಳಿಯುವುದು ಕಷ್ಟವಾಗುತ್ತದೆ. ನಾವೊಂದಷ್ಟು ಮಂದಿ ೧೨ ಗಂಟೆಗೆ ಬೆಟ್ಟ ಇಳಿದು ಎಲ್ಲರೂ ಬರುವಲ್ಲಿವರೆಗೆ ಅಲ್ಲೇ ಕೂತೆವು. ಎಲ್ಲರೂ ಬಂದಬಳಿಕ ಕೋಣನೂರು ಕೆರೆಯತ್ತ ಸಾಗಿದೆವು.
ಕೋಣನೂರು ಕೆರೆ
ಆಲಂಬೂರು ಬಳಿಯ ಕಬಿನಿ ನದಿಯಿಂದ ದೊಡ್ದದಾದ ೩ ವಿದ್ಯುತ್ ಪಂಪುಗಳಿಂದ ಕೊಳವೆಮೂಲಕ ಸುಮಾರು ೧೪ಕಿಮೀ ದೂರವಿರುವ ಕೋಣನೂರು ಕೆರೆಗೆ ನೀರನ್ನು ಹರಿಸಲಾಗುತ್ತದೆ. ಈ ಕೆರೆ ತುಂಬಿದ ನೀರು ಕೋಡಿ ಹರಿದು ಇಳಿಜಾರಿನಲ್ಲಿ ಸಾಗಿ ಹಳೇಪುರಕೆರೆ ತುಂಬುತ್ತದೆ. ಅಲ್ಲಿಂದ ಬೆಂಡರವಾಡಿಕೆರೆಗೆ ಸಾಗಿ ಅಲ್ಲಿ ಕೋಡಿ ಹರಿದು ಮುಂದೆ ಕೆರೆಹಳ್ಳಿ ಕೆರೆಗೆ ಹರಿಯುತ್ತದೆ. ಈ ಹಂತದಲ್ಲಿ ಒಟ್ಟು ನಾಲ್ಕು ಕೆರೆಗಳು ತುಂಬಿ ಹರಿಯುತ್ತಿವೆ. ಈ ನಾಲ್ಕೂಕೆರೆಗಳು ತುಂಬಿರುವುದರಿಂದ ಆ ಪ್ರದೇಶಗಳಲ್ಲಿ ಅಂತರ್ಜಲದ ಮಟ್ಟ ಹೆಚ್ಚಿ ಬತ್ತಿದ ಕೊಳವೆಬಾವಿಗಳಲ್ಲಿ ನೀರು ಉಕ್ಕಿ ಹರಿಯುತ್ತಿವೆ. ಪ್ರಾಣಿಪಕ್ಷಿಗಳಿಗೆ ಕುಡಿಯಲು ನೀರು ಸಿಕ್ಕಿ ಅವುಗಳ ಜೀವಸಂಕುಲ ವರ್ಧಿಸುತ್ತಿವೆ. ರೈತಾಪಿಜನರ ಜೀವನ ಕೃಷಿ ಚಟುವಟಿಕೆಯಿಂದ ಸುಖ ಸಮೃದ್ಧಿ ಕಂಡಿವೆ. ಊರಮಂದಿ ಕಬ್ಬು, ಭತ್ತ ತೆಂಗು ಬಾಳೆ ಬೆಳೆಯುತ್ತ ಕೃಷಿ ಚಟುವಟಿಕೆಯಲ್ಲಿ ಮಗ್ನರಾಗಿದ್ದಾರೆ. ಊರಿನ ಹೆಚ್ಚಿನಮಂದಿ ಒಂದುಹಂತದಲ್ಲಿ ನೀರಿಲ್ಲದೆ ಗುಳೆಹೋಗಲು ಹೊರಟಿದ್ದರಂತೆ.
ಸುತ್ತೂರುಮಠದ ಶ್ರೀ ದೇಶಿಕೇಂದ್ರ ಸ್ವಾಮೀಜಿ, ಹಾಗೂ ದೇವನೂರು ದಾಸೋಹಮಠದ ಶ್ರೀ ಮಹಾಂತ ಸ್ವಾಮೀಜಿ ಆಗ ಮುಖ್ಯಮಂತ್ರಿಗಳಾಗಿದ್ದ ಬಿ.ಎಸ್. ಯಡಿಯೂರಪ್ಪನವರಿಗೆ ಬತ್ತಿದ ಕೆರೆಗಳಿಗೆ ನೀರು ಹರಿಸಲು ಮನವಿ ಮಾಡಿದ್ದರು. ಅದಕ್ಕೆ ಅಸ್ತು ಎಂದು ಶ್ರೀಕಾರ ಹಾಕಿದವರು ಮಾನ್ಯ ಯಡಿಯೂರಪ್ಪನವರು. ಅಂದಾಜು ರೂ. ೨೧೨ ಕೋಟಿ ವೆಚ್ಚದಲ್ಲಿ ಯೋಜನೆ ಕೈಗೆತ್ತಿಕೊಳ್ಳಲಾಗಿತ್ತು. ೨೦೧೪ನೇ ಇಸವಿಯಲ್ಲಿ ಕೆಲಸ ಪೂರ್ಣಗೊಂಡು ಆಗಸ್ಟ್ ತಿಂಗಳಲ್ಲಿ ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಉಸ್ತುವಾರಿಯಲ್ಲಿ ಕೆರೆಗೆ ನೀರು ಹರಿಯಿತು. ಈಗ್ಗೆ ಒಂದು ವರ್ಷದಿಂದಲೂ ಸತತವಾಗಿ ಕೆರೆಗೆ ನೀರು ಹರಿಯುತ್ತಲೇ ಇದೆ.
ಕೆರೆ ಭರ್ತಿಯಾಗಿ ಕೋಡಿ ಹರಿಯುವುದು ಕಾಣುವಾಗ ಮನ ಉಲ್ಲಸಿತವಾಗುತ್ತದೆ. ಅಲ್ಲಿಯ ಯುವಕರು ಮಕ್ಕಳು ಕೆರೆಯಲ್ಲಿ ಮನದಣಿಯೆ ಈಜು ಹೊಡೆದು ಖುಷಿ ಅನುಭವಿಸುತ್ತಿದ್ದಾರೆ. ಅಲ್ಲಿ ನೀರಲ್ಲಿ ಆಟವಾಡುವುದು ಕಾಣುವಾಗ ದುಬಾರಿಯಾದ ಯಾವ ಫಾಂಟೆಸಿ ಪಾರ್ಕ್ ಇದರ ಮುಂದೆ ಪೇಲವ ಎನಿಸಿತು. ಆದರೆ ಕೆರೆಯಲ್ಲಿ ಬಟ್ಟೆ ಒಗೆಯುವುದು ಕಂಡು ವಿಷಾದವೆನಿಸಿತು. ರಾಸಾಯನಿಯುಕ್ತ ಸಾಬೂನು ಹಾಕಿ ಬಟ್ಟೆ ಒಗೆದರೆ ನೀರು ಮಲೀನಗೊಳ್ಳುತ್ತದೆ. ಕೆರೆಯಲ್ಲಿ ಬಟ್ಟೆ ಒಗೆಯಲು ಅನುಮತಿ ನೀಡಬಾರದು. ೨ ಕೊಡ ನೀರು ತೆಗೆದು ಹೊರಗೆ ಬಟ್ಟೆ ಒಗೆಯಲಿ. ಆಗ ಜನ ಜಾನುವಾರು ಕುಡಿಯುವ ಈ ಕೆರೆನೀರು ಮಲಿನವಾಗುವುದು ತಪ್ಪುತ್ತದೆ.
ಊರಿನವರು ಯಡಿಯೂರಪ್ಪನವರ ಈ ಕೆಲಸವನ್ನು ಮುಕ್ತಕಂಠದಿಂದ ಶ್ಲಾಘಿಸುತ್ತಿದ್ದಾರೆ. ಅವರ ಕಾಲದಲ್ಲಿ ನಮ್ಮ ಹಳ್ಳಿ ಅಭಿವೃದ್ಧಿ ಹೊಂದಿದೆ. ರಸ್ತೆಗಳೆಲ್ಲ ಚೆನ್ನಾಗಾಗಿವೆ ಎಂದು ಹೇಳಿಕೊಂಡರು.
ಹಳ್ಳಿಯ ಯುವಕರು ಮಕ್ಕಳು ಈಜು ಹೊಡೆಯುವುದನ್ನು, ಕೆರೆಯ ವೈಭವವನ್ನು ನಾವು ಸ್ವಲ್ಪ ಹೊತ್ತು ನೋಡುತ್ತ ನಿಂತೆವು. ಕೆರೆಯ ಪಕ್ಕದ ರಸ್ತೆಯಲ್ಲೆ ಮುಂದೆ ಸಾಗಿದೆವು. ರೈಲು ನಿಲ್ದಾಣಕ್ಕೆ ಬರುವ ದಾರಿಯಲ್ಲಿ ಸಾಲಾಗಿ ಒಂದತ್ತು ಮನೆಗಳು ಇದ್ದುವು. ಅವರೆಲ್ಲ ಕುತೂಹಲದಿಂದ ‘ಎಲ್ಲಿಗೆ ಬಂದಿದ್ದೀರಿ? ಯಾವೂರವರು?’ ಎಂದು ವಿಚಾರಿಸುತ್ತಿದ್ದರು. ನಾನೂ ಸಮಾಧಾನದಿಂದ ನಿಂತು ನಮ್ಮ ಪ್ರವರ ಒಪ್ಪಿಸಿ ಮುಂದೆ ಅಡಿ ಇಡುತ್ತಿದ್ದೆ.
ನಾವು ನಾಗಣ್ಣನವರ ಮನೆಗೆ ಬಂದೆವು. ಅಲ್ಲಿ ನಿಂಬೆ ಶರಬತ್ತು ತಯಾರಿಸಿಟ್ಟಿದ್ದರು. ಬಿಸಿಲಲ್ಲಿ ಬೆಟ್ಟಹತ್ತಿ ಬರುತ್ತಾರೆ. ತಂಪಾಗಿ ಕುಡಿಯಲಿ ಎಂದು ನಮಗೆಲ್ಲ ಬಲು ಪ್ರೀತಿಯಿಂದ (ನಾಗಣ್ಣನವರ ಅಕ್ಕನ ಮಗ ಸೊಸೆ) ಎರೆಡೆರಡು ಲೋಟ ಶರಬತ್ತು ಕೊಟ್ಟರು. ಅವರ ಈ ಕಾಳಜಿ ಪ್ರೀತಿಗೆ ಏನನ್ನೋಣ? ಅಲ್ಲಿಂದ ರೈಲು ನಿಲ್ದಾಣಕ್ಕೆ ಬಂದೆವು. ಎರಡು ಗಂಟೆಗೆ ರೈಲು ಬಂದಿತು. ರೈಲು ಹತ್ತಿ ಚಾಮರಾಜನಗರಕ್ಕೆ ಬಂದೆವು.
ಮುಗ್ಧತೆ
ಬೆಟ್ಟ ಹತ್ತಿ ಇಳಿದು ಬರುವಾಗ ಹಳ್ಳಿಯ ಮನೆಗಳ ಎದುರು ಬರುತ್ತಿದ್ದೆವು. ನನ್ನ ಕೊರಳಲ್ಲಿ ಕ್ಯಾಮಾರಾ ಇತ್ತು. ರೈಲು ನಿಲ್ದಾಣದಲ್ಲಿ ರೈಲಿಗೆ ಕಾಯುತ್ತಿದ್ದೆವು. ಆಗ ಒಂದು ಹೆಂಗಸು ನನ್ನ ಬಳಿ ಬಂದು, ಹತ್ತಿರ ಕುಳಿತು ನೀವು ಯಾರು? ಇಲ್ಲಿಗೇಕೆ ಬಂದಿರಿ ಎಂದು ಕೇಳಿದಳು. ನಾನು ಹೇಳಿದ್ದು ಅವಳಿಗೆ ಕೇಳಿಸುವುದಿಲ್ಲ. ಅವಳಿಗೆ ಕಿವಿ ಮಂದವಂತೆ. ನಾನು ಮೂರು ಸಲ ಹೇಳಿದ್ದೇ ಹೇಳಿದಮೇಲೆ ಕಿವಿ ಕೇಳಿಸಲ್ಲ ಎಂದಳು! ಆದರೂ ಏನೂ ಬೇಸರವಿಲ್ಲದೆ ಅವಳಿಗೆ ನಾವೇಕೆ ಬಂದದ್ದು ಎಂದು ಹೇಳಿದೆ. ಅವಳಿಗೆ ಅರ್ಥವಾಯಿತೊ ಇಲ್ಲವೋ ಗೊತ್ತಿಲ್ಲ. ನನ್ನ ಬಳಿ ಕುಳಿತು ‘ನನಗೆ ಒಬ್ಬ ಮಗ. ಅವನಿಗೆ ತಲೆ ಸರಿ ಇಲ್ಲ. ಎರಡು ಹೆಣ್ಣುಮಕ್ಕಳು. ಅವರಿಗೆ ಮದುವೆ ಮಾಡಿದ್ದೇನೆ. ನನ್ನ ಹೊಲ ಮಾರಬೇಕಾಗಿದೆ. ಮಗನನ್ನು ನೋಡಿಕೊಳ್ಳಲು, ಹಾಗೂ ಹೆಣ್ಣುಮಕ್ಕಳಿಗೆ ಒಂದಷ್ಟು ದುಡ್ಡು ಕೊದಬೇಕು. ಜಮೀನು ನೀವು ತಗೊಳ್ಳಿ. ನಿಮಗಾದರೆ ಎಕರೆಗೆ ೨೪ ಲಕ್ಷ ಎಂದಳು. ಮತ್ತೆ ಮುಂದುವರಿಸಿ, ನೀವೂ ಹೇಗೂ ಬಂದಿದ್ದೀರಿ. ನನ್ನ ಜಮೀನಿನ ಫೋಟೋ ಹೊಡೆಯಿರಿ. ಅದನ್ನು ಎಲ್ಲರಿಗೂ ತೋರಿಸಿ ಜಮೀನು ಮಾರಾಟ ಮಾಡಿಸಿಕೊಡಿ. ಎಂದಳು. ಆಗ ನನಗೆ ನನ್ನ ಕೊರಳಲ್ಲಿ ಕ್ಯಾಮರಾ ಇರುವುದರಿಂದ ಅವಳಿಗೆ ನಾನು ಜಮೀನು ನೋಡಲು ಕೊಳ್ಳಲು ಬಂದಿದ್ದೇನೆ. ಜಮೀನಿನ ಫೋಟೊ ಹೊಡೆಯುತ್ತೇನೆ. ನಾವು ಸರ್ಕಾರೀ ಕೆಲಸದಲ್ಲಿರುವುದು ಎಂದು ಅವಳು ತಿಳಿದಿದ್ದಾಳೆಂದು ನನಗೆ ಜ್ಞಾನೋದಯವಾಯಿತು.
ಅವಳ ಸಮಾಧಾನಸ್ಕೋಸ್ಕರ ಆಯಿತು ಫೋಟೋ ತೆಗೆಯುತ್ತೇನೆ ಎಂದು ಸನ್ನೆ ಮೂಲಕ ತಿಳಿಸಿದೆ. ಮೊದಲೇ ಮೆತ್ತಗೆ ಮಾತು ನನ್ನದು. ನಾನು ಹೇಳಿದ್ದು ಅವಳಿಗೆ ಕೇಳಿಸುವುದೇ ಇಲ್ಲ. ಅವಳಿಗೆ ಸಮಾಧಾನವಾಯಿತೆಂದು ಕಾಣುತ್ತದೆ. ಮರೀಬೇಡಿ ಪೋಟೋ ತೆಗೆಯಲು ಎಂದು ಎರೆಡೆರಡು ಬಾರಿ ಹೇಳಿ ನನ್ನ ಪಕ್ಕದಿಂದ ಎದ್ದು ಹೋದಳು. ಆ ಹೆಂಗಸಿನ ಮುಗ್ಧ ಮುಖ, ನನ್ನ ಮೇಲೆ ಭರವಸೆ ಇಟ್ಟ ಆ ಭಾವ ಇನ್ನೂ ನನ್ನ ಕಣ್ಣಮುಂದಿದೆ. ನನ್ನಿಂದ ಅವಳಿಗೆ ಏನೂ ಸಹಾಯವಾಗಲಿಲ್ಲವಲ್ಲ ಎಂಬ ಭಾವನೆ ನನ್ನ ಕಾಡುತ್ತಿದೆ.
ಕರಿವರದರಾಜ ಬೆಟ್ಟ
ರೈಲಿಳಿದು ಎರಡು ಟೆಂಪೋದಲ್ಲಿ ಭಾಗ್ಯ ಹೋಟೇಲಿಗೆ ಬಂದೆವು. ಇದು ಭಾಗ್ಯ ಇದು ಭಾಗ್ಯವಯ್ಯ ಎನ್ನುತ್ತ ಕುಳಿತಿರಬೇಕಾದರೆ ಊಟ ಬಂತು. ಊಟವಾಗಿ ಅದೇ ಟೆಂಪೋದಲ್ಲೇ ಕರಿವರದರಾಜ ಬೆಟ್ಟದ ಬುಡ ತಲಪಿದೆವು. ಬೆಟ್ಟದ ಬುಡಕ್ಕೆ ಬರುವ ರಸ್ತೆ ಎಷ್ಟು ಹಾಳಾಗಿದೆಯೆಂದರೆ ಅದು ರಸ್ತೆ ಎಂದೇ ಗೊತ್ತಾಗದಷ್ಟು. ಹಳ್ಳಕೊಳ್ಳಗಳಲ್ಲಿ ರಸ್ತೆಯನ್ನು ಹುಡುಕಬೇಕು.
ಬೆಟ್ಟದಮೇಲಕ್ಕೆ ಹೋಗುವ ಪ್ರವೇಶದಲ್ಲಿ ಅರಣ್ಯ ಇಲಾಖೆ ಬಲವಾದ ಬೇಲಿ, ಗೇಟು ಹಾಕಿದೆ. ಅಲ್ಲಿ ಕಾವಲಿನವರು ಇರುತ್ತಾರೆ. ಸುಮಾರು ೫೦೦ ಮೆಟ್ಟಲು ಹತ್ತಬೇಕು. ರಸ್ತೆಯೂ ಇದೆ. ಮೆಟ್ಟಲು ಹತ್ತಿ ಬೆಟ್ಟದ ಮೇಲಿನ ಕರಿವರದರಾಜ ದೇವಾಲಯ ತಲಪಿದೆವು. ಊಟವಾಗಿ ಬೆಟ್ಟ ಹತ್ತುವುದು ಕೆಲವರಿಗೆ ತುಸು ಕಷ್ಟವಾಯಿತು.
ಬೆಟ್ಟದಮೇಲೆ ಎರಡು ಕಡೆ ವೀಕ್ಷಣಾಮಂದಿರ ಕಟ್ಟಿದ್ದಾರೆ. ಕೈತುರಿಕೆ ಮಂದಿ ಮಂಟಪದ ಗೋಡೆಮೇಲೆ, ಚಾವಣಿಮೇಲೆ ತಮ್ಮ ಕೈತುರಿಕೆಯನ್ನು ಜಾಹೀರುಗೊಳಿಸಿದ್ದು ಕಾಣುವಾಗ ಅಂಥ ಕೈಗಳಿಗೆ ಕಠಿಣ ಶಿಕ್ಷೆ ಕೊಡಬೇಕು ಎನಿಸಿತು. ಕೂರಲು ಅಲ್ಲಲ್ಲಿ ಸಿಮೆಂಟು ಬೆಂಚುಗಳನ್ನು ಹಾಕಿದ್ದಾರೆ. ದೇವಾಲಯ ಸುಣ್ಣಬಣ್ಣವಾಗಿ ಚೊಕ್ಕವಾಗಿದೆ. ದೇವಾಲಯದ ಅರ್ಚಕರು ಬೆಳಗ್ಗೆ ಬೇಗ ಪೂಜೆ ಮಾಡಿ ತಮ್ಮ ನೌಕರಿಗೆ ತೆರಳುತ್ತಾರಂತೆ. ಅವರ ವೃತ್ತಿ ಅಂಚೆಪೇದೆ. ರಜಾದಿನಗಳಲ್ಲಿ ದೇವಾಲಯದಲ್ಲಿರುತ್ತಾರೆ. ಅಲ್ಲಿ ಸ್ವಲ್ಪ ಹೊತ್ತು ವಿರಮಿಸಿ, ರಸ್ತೆ ಮೂಲಕ ಕೆಳಗೆ ಅಬ್ಂದೆವು. ರಸ್ತೆಯಲ್ಲಿ ಬರುವಾಗ ಒಂದೆಡೆ ಯೋಗಮಂಟಪ ಕಟ್ಟಿರುವುದು ಕಂಡಿತು. ಅಲ್ಲಿ ಬಂದು ಯಾರು ಯೋಗ ಮಾಡುತ್ತಾರೆ ಎಂದೆನಿಸಿತು. ಮೈಸೂರಿನಲ್ಲಿ ನಿತ್ಯ ಚಾಮುಂಡಿಬೆಟ್ಟಕ್ಕೆ ಮೆಟ್ಟಲು ಹತ್ತಿ ತೆರಳುವಂತೆ ಅಲ್ಲಿಯೂ ಬೆಳಗ್ಗೆ ಕೆಲವರು ಮೆಟ್ಟಲು ಹತ್ತಿ ಬರುತ್ತಾರಂತೆ. ಹಾಗೆಯೇ ಯೋಗಾಭ್ಯಾಸವನ್ನೂ ಮಾಡುತ್ತಾರಿರಬಹುದು.
ಅಲ್ಲಿಂದ ಸಂಜೆ ೫.೩೦ಕ್ಕೆ ಟೆಂಪೋದಲ್ಲಿ ರೈಲು ನಿಲ್ದಾಣಕ್ಕೆ ಬಂದೆವು. ಅಲ್ಲಿ ಚಹಾ, ಕಾಫಿ ಕುಡಿದು ರೈಲೇರಿದೆವು. ರೈಲಲ್ಲಿ ಪ್ರಯಾಣ ನೀರಸವಾಗದಂತೆ ವೈದ್ಯನಾಥನ್ ನಗೆಹನಿ, ಅಣಕುಹಾಡು, ಭಾವಗೀತೆ ಹಾಡಿ ನಮ್ಮನ್ನೆಲ್ಲ ನಗೆಗಡಲಲ್ಲಿ ತೇಲಿಸಿದರು. ರಾತ್ರಿ ಎಂಟು ಗಂಟೆಗೆ ಮೈಸೂರು ತಲಪಿದೆವು. ಈ ಕಾರ್ಯಕರಮವನ್ನು ಅಚ್ಚುಅಕಟ್ಟಾಗಿ ಆಯೋಜಿಸಿದವರು ಯೂಥ್ ಹಾಸ್ಟೆಲ್ ಗಂಗೋತ್ರಿ ಘಟಕ ಮೈಸೂರು ಇದರ ಸದಸ್ಯರೂ ಭಲೇ ಜೋಡಿ ಎಂದೇ ಪ್ರಸಿದ್ಧರಾದ ನಾಗೇಂದ್ರಪ್ರಸಾದ್ ಹಾಗೂ ವೈದ್ಯನಾಥನ್ ಅವರು. ಅವರಿಗೆ ಸ್ಥಳೀಯರಾದ ನಾಗಣ್ಣನವರು ಸಮಸ್ತ ನೆರವು ನೀಡಿದ್ದರು. ಅವರಿಗೆಲ್ಲ ಧನ್ಯವಾದಗಳು.
ಸರಾಗ ಹೋಗುತ್ತೀಯಾ. ಅಶೋಕ ಓದಿ ಹೇಳಿದ್ದರಿಂದ ನನಗೆ ತಿಳಿದು ಸಂತೋಷವಾಯ್ತು.
ಓದಿ ಹೇಳಿದವರಿಗೂ ಅದನ್ನು ಕೇಳಿದವರಿಗೂ ಧನ್ಯವಾದಗಳು. ಕೈಕಾಲು ಗಟ್ಟಿಇರುವಾಗ ಆದಷ್ಟು ಹೋಗುವುದು ಅಷ್ಟೆ:)
ಮಾಲಾ, ನಿನ್ನ ಲೇಖನ ಕೋಣಂದೂರು ಬೆಟ್ಟದ್ದು ಇಂಗ್ಲೀಷಿನಲ್ಲಿ ಇದ್ದ ಕಾರಣ ಓದಲು ಕಷ್ಟ
ಪಟ್ಟೆ. ನನ್ನ ಅಜ್ಞಾನ. ಕನ್ನಡದಲ್ಲಿ ಸಿಕಿದ್ದರೆ ಸ್ವಾರಸ್ಯಕರ ಆಗುತ್ತಿತ್ತು. ಇರಲಿ, ನಾನೇ
ಬೆಟ್ಟ ಏರಿದಂತೆ ಖುಷಿಪಟ್ಟೆ. ಅಭಿನಂದನೆಗಳು ನಿನ್ನ ವಿವರಣೆಗೆ.
ಮಾಲತಿ
ಧನ್ಯವಾದ. ಅದೇಕೆ ನಿಮಗೆ ಆಂಗ್ಲ ಅಕ್ಷರದಲ್ಲಿ ಕಂಡಿತು?