ಮೈಸೂರಿನಿಂದ ೧೪-೬-೨೦೧೪ರಂದು ೩ ವಾಹನಗಳಲ್ಲಿ ೫೪ ಮಂದಿ ಬೆಳಗ್ಗೆ ೬.೩೦ ಗಂಟೆಗೆ ಹೊರಟೆವು. ನಮ್ಮ ಗುರಿ ಕೊಡಗಿನ ಕಬ್ಬೆ ಬೆಟ್ಟದತ್ತ. ಮೈಸೂರಿನಿಂದ ೧೨೭ಕಿಮೀ. ಪಿರಿಯಾಪಟ್ಟಣ ತಾಲೂಕಿನ ಪಂಚವಳ್ಳಿ ಗ್ರಾಮದಲ್ಲಿ ತಿಂಡಿ (ಉಪ್ಪಿಟ್ಟು, ಕೇಸರಿಭಾತ್) ತಿಂದು ಮುಂದುವರಿದೆವು. ಮೈಸೂರು-ಹುಣಸೂರು-ಗೋಣಿಕೊಪ್ಪ-ವಿರಾಜಪೇಟೆ-ಕಡಂಗ-ಕರಡ-ಚೆಯ್ಯಂಡಾಣೆ ಮಾರ್ಗದಲ್ಲಿ ಎಡಕ್ಕೆ ಚೇಲಾವರ ಜಲಪಾತ ಎಂಬ ಫಲಕ ಎದುರಾಗುತ್ತದೆ. ಅಲ್ಲಿಂದ ಏಳೂವರೆ ಕಿಲೀಮೀಟರ್ ದೂರ ಪ್ರಯಾಣಿಸಿದರೆ ಕಬ್ಬೆಬೆಟ್ಟದ ಬುಡ ತಲಪಬಹುದು. ಮಾರ್ಗ ಮಧ್ಯೆ ಚೇಲಾವರ ಜಲಪಾತಕ್ಕೆ ಹೋಗುವ ದಾರಿ ಸಿಗುತ್ತದೆ. ನಾವು ಸೀದಾ ಕಬ್ಬೆಬೆಟ್ಟದತ್ತ ಸಾಗಿದೆವು. ಅಲ್ಲಿ ತಲಪುವಾಗಲೇ ಗಂಟೆ ೧೧ ದಾಟಿತ್ತು. ವಾಹನದಿಂದ ಇಳಿದು ನಮ್ಮ ಚಾರಣ ತಂಡದ ಆಯೋಜಕರಾದ ಪೀಪಲ್ ಟ್ರೀ ಸಂಸ್ಥೆ, ಮತ್ತು ಲೆಟ್ಸ್ ಡು ಇಟ್ ಸಂಸ್ಥೆಯ ಶಿವಶಂಕರ ಮತ್ತು ನಾವು (ಮಂಗಳೂರು, ಬೆಂಗಳೂರು, ಮೈಸೂರು ಊರುಗಳಿಂದ ಬಂದವರು) ಪರಸ್ಪರ ಪರಿಚಯ ಮಾಡಿಕೊಂಡೆವು. ಬೆಟ್ಟ ಹತ್ತುವುದು ಹೇಗೆ, ಅಲ್ಲಿ ಕಸ ಹಾಕಬಾರದು, ಹಾಗೂ ಅಲ್ಲಿದ್ದ ಕಸ ಹೆಕ್ಕಿ ಕೈಚೀಲಕ್ಕೆ ಹಾಕಲು ಮನಸ್ಸಿದ್ದರೆ ನಾವು ಚೀಲ ಕೊಡುತ್ತೇವೆ ಎಂಬ ಸಲಹೆ ಸೂಚನೆಗಳನ್ನು ಕೊಟ್ಟರು.
ಅಲ್ಲಿಂದ ಕಚ್ಛಾರಸ್ತೆಯಲ್ಲಿ ಸುಮಾರು ಅರ್ಧಕಿಮೀ ಸಾಗಿದಾಗ ಒಂದು ಕೆರೆ ಕಾಣುತ್ತದೆ. ಎದುರಿಗೆ ಎರಡು ಬೆಟ್ಟಗಳ ಅನಾವರಣ. ಬಲಭಾಗಕ್ಕೆ ತಿರುಗಿದರೆ ಕಬ್ಬೆಬೆಟ್ಟ. ಎಡಕ್ಕೆ ತಿರುಗಿದರೆ ಚೋಮಕುಂಡ ಬೆಟ್ಟ. ನಾವು ಕಬ್ಬೆಬೆಟ್ಟದತ್ತ ಸಾಗಿದೆವು. ಹೆಚ್ಚಿನವರು ಚೋಮಕುಂಡ ಬೆಟ್ಟಕ್ಕೆ ಮಾತ್ರ ಬರುತ್ತಾರಂತೆ. ಚಾರಣಪ್ರಿಯರು ಕಬ್ಬೆಬೆಟ್ಟ ಇಷ್ಟಾಪಡುತ್ತಾರಂತೆ. ಪೀಪಲ್ ಟ್ರೀ ಸಂಸ್ಥೆ, ಮತ್ತು ಲೆಟ್ಸ್ ಡು ಇಟ್ ಸಂಸ್ಥೆ ಜಂಟಿಯಾಗಿ ಪ್ರಾಯೋಜಿಸಿದ ಒಂದು ಫ್ಲೆಕ್ಸ್ ಅನ್ನು ಬೆಟ್ಟ ಹತ್ತುವ ದಾರಿಯಲ್ಲಿ ಗಿಡದ ಬುಡದಲ್ಲಿ ಕಟ್ಟಿದರು. ಹೀಗೆಯೇ ಒಂದಲ್ಲ ಒಂದು ಸಂಸ್ಥೆಯವರು ಇಲ್ಲಿ ಹೀಗೆಯೇ ಫ್ಲೆಕ್ಸ್ ಹಾಕಿದರೆ ಅದುವೇ ಪರಿಸರಕ್ಕೆ ಹಾನಿಯಲ್ಲವೆ? ಜನ ಫ್ಲೆಕ್ಸ್ ನೋಡಿ ಕಸ ಹಾಕದೆ ಇರಲಾರರು. ಪರಿಸರ ಚೊಕ್ಕವಾಗಿಡುವ ಬುದ್ಧಿ ಅವರ ಮನಸ್ಸಿನೊಳಗಿಂದ ಬರಬೇಕು. ಫ್ಲೆಕ್ಸ್ ಹಾಕುವುದು ಸರಿಯಲ್ಲ ಎಂದು ನನ್ನ ಅಭಿಪ್ರಾಯ ಎಂದು ನಾನು ಆಕ್ಷೇಪಣೆ ಎತ್ತಿದೆ. ಅವರೂ ಒಪ್ಪಿಕೊಂಡರು. ಮುಂದಿನ ವಾರ ಪುನಃ ಇಲ್ಲಿಗೆ ಬರಲಿದೆ. ಆಗ ತೆಗೆಯುತ್ತೇನೆ ಎಂದರು.
ಬೆಟ್ಟ ಹತ್ತಲು ಪ್ರಾರಂಭಿಸಿದೆವು. ಒಬ್ಬೊಬ್ಬರಾಗಿ ಹತ್ತಬೇಕು. ಮೇಘರಾಜ ಹತ್ತಿರ ಬಂದು ದೂರ ಸರಿಯುತ್ತಿದ್ದ. ಮೇಘವೇ ಮೇಘವೇ ದೂರ ಏಕೆ ಓಡುವೆ ಎಂದು ಹಾಡುತ್ತ ನಾವು ಮುಂದುವರಿದೆವು. ಮುಂದೆ ಮುಂದೆ ಹತ್ತುತ್ತಿದ್ದಂತೆ ಮಂಜು ನಮ್ಮೊಂದಿಗೆ ನಡೆದು ಬರುವಂತೆ ಭಾಸವಾಯಿತು. ಮುಂದಿರುವವರು ಕಾಣರು, ಹಿಂದಿರುವವರು ಅದೃಶ್ಯರಾದಂತೆ ಭಾಸ. ಅಷ್ಟೂ ಮಂಜು. ಒಂದೇ ಕ್ಷಣದಲ್ಲಿ ಎಲ್ಲವೂ ನಿಚ್ಚಳ ಶುಭ್ರ. ಆಹಾ ನಿಸರ್ಗದ ಚೋದ್ಯವೇ ಎಂದು ಅದನ್ನು ಅನುಭವಿಸುತ್ತ ಸಾಗಿದೆವು. ಅರ್ಧ ಬೆಟ್ಟ ಹತ್ತಿದ್ದೆವು. ಒಂದು ನಾಯಿಯೂ ನಮ್ಮೊಡನೆ ಬೆಟ್ಟ ಹತ್ತಲು ಜೊತೆಗೇ ಬರುತ್ತಿತ್ತು. ಎಲ್ಲ ಹತ್ತಿ ಬರುವಲ್ಲಿವರೆಗೂ ಬಂದೆಯಲ್ಲಿ ನಿಲ್ಲುತ್ತಿತ್ತು. ಆಹಾ ನಿಸರ್ಗದ ಚೋದ್ಯವೇ ಎಂದು ಅದನ್ನು ಅನುಭವಿಸುತ್ತ ಸಾಗಿದೆವು. ಮಡಿಕೇರಿ ಮೇಲ್ಮಂಜು ಎಂಬುದನ್ನು ಕೋಟೆಬೆಟ್ಟದ್ಮೇಲೆ ಮಂಜು ಎಂದುಸುರಿದೆವು. ನಮ್ಮೊಂದಿಗೆ ನಾಲ್ಕಾರು ಮಕ್ಕಳೂ ಇದ್ದರು. ಮಕ್ಕಳು ಉಸ್ಸಪ್ಪ ಎಂದು ಅಲ್ಲಲ್ಲಿ ಕೂರುವುದು ಕಾಣುವಾಗ ಮಕಳನ್ನು ಬೆಳೆಸುವ ಕ್ರಮವೇ ಸರಿಯಿಲ್ಲವೆನಿಸಿತು. ಮಕ್ಕಳಿಗೆ ಒಂದಷ್ಟು ದೂರ ಕೂಡ ನಡೆದೇ ಅಭ್ಯಾಸವಿಲ್ಲದಂತೆ ಅವರನ್ನು ನಾವು ಬೆಳೆಸುತ್ತೇವೆ. ಮನೆ ಹೊರಗೆ ಕಾಲಿಟ್ಟರೆ ಸಾಕು ವಾಹನ ಹತ್ತುವಂಥ ಸೌಕರ್ಯ. ಶಾಲೆಗೂ ನಡೆದೇ ಕಳುಹಿಸುವುದಿಲ್ಲ ಅವರನ್ನು. ಮತ್ತೆ ಹೇಗೆ ಅವರಿಗೆ ನಡೆಯುವ ಅಭ್ಯಾಸವಾದೀತು ಎಂದೆನಿಸಿತು. ಮೊದಲ ಸಲ ಈ ಚಾರಣ ಅನುಭವಿಸಲು ಬಂದಿದ್ದರು. ಅಟ್ಟ ಹತ್ತಿಯೇ ಅಭ್ಯಾಸವಿಲ್ಲದವರಿಗೆ ಇನ್ನು ಒಮ್ಮೆಗೇ ಬೆಟ್ಟ ಹತ್ತಲು ಹೇಳಿದರೆ ಹೇಗಾದೀತು ಅವರ ಪರಿಸ್ಥಿತಿ? ಅರ್ಧಬೆಟ್ಟ ಹತ್ತಿ ಸುಸ್ತಾದ ಹೆಚ್ಚಿನವರು ಅಲ್ಲೇ ಕೂತರು. ಮುಂದೆ ಹತ್ತುವ ಧೈರ್ಯ ಮಾಡಲಿಲ್ಲ.. ಒಬ್ಬಳು ಬೆಟ್ಟ ಹತ್ತುವಾಗ ಉರುಳಿ ಬಿದ್ದಳು. ಅದೃಷ್ಟವಶಾತ್ ಪೆಟ್ಟೇನೂ ಆಗಲಿಲ್ಲ. ಅವಳನ್ನು ನೋಡಿ ಹೆದರಿದ ಒಂದಿಬ್ಬರು ಮುಂದೆ ಹತ್ತುವ ಸಾಹಸ ಮಾಡಲಿಲ್ಲ.
ನಾವು ಒಂದಷ್ಟು ಮಂದಿ ಮುಂದುವರಿದೆವು. ಮುಂದೆ ಹತ್ತಿದಂತೆ ಬೆಟ್ಟ ಕಡಿದಾಗುತ್ತಲಿರುವುದು ಗಮನಕ್ಕೆ ಬಂತು. ಇನ್ನೂ ಎಷ್ಟು ದೂರ ತುದಿ ತಲಪಲು ಎಂದು ಕೇಳುವವರೆ ಎಲ್ಲ. ದಾರಿಯಲ್ಲಿ ಸಣ್ಣಪುಟ್ಟ ಪೊದೆ, ಹುಲ್ಲು ಆವರಿಸಿದೆ. ಮಳೆಗಾಲವಾದ್ದರಿಂದ ಕಾಲಿಟ್ಟ ಕಡೆ ಜಾರುವ ಅಪಾಯವೂ ಇತ್ತು. ಎಚ್ಚರದಿಂದ ಹತ್ತಬೇಕಿತ್ತು. ನಾವು ಸೃಷ್ಟಿಯ ಸೌಂದರ್ಯವನ್ನು ಫೋಟೋ ಕ್ಲಿಕ್ಕಿಸುತ್ತ ಒಬ್ಬರಿಗೊಬ್ಬರು ಆಸರೆಯಾಗುತ್ತ ಮೇಲೆ ಹತ್ತಿದೆವು. ಮಂಜು ನಮ್ಮೊಡನೆ ಕಣ್ಣಾಮುಚ್ಚಾಲೆ ಆಟ ಆಡುತ್ತಲೇ ಇತ್ತು. ತಂಪಾದ ಹವೆಯಲ್ಲಿ ಬೆಟ್ಟ ಹತ್ತುವುದೇ ಸೊಗಸಾದ ಅನುಭವ. ಅಂತೂ ಗಮ್ಯ ತಲಪಿದೆವು. ಮಂಜು ನಮ್ಮನ್ನು ಆವರಿಸುತ್ತ, ನಮ್ಮ ಕಣ್ಣಮುಂದೆ ನರ್ತಿಸುತ್ತ ನನ್ನ ಹಿಡಿಯಿರಿ ನೋಡೋಣ ಎಂದು ಸವಾಲು ಹಾಕುತ್ತ ನಮ್ಮನ್ನು ಹುರಿದುಂಬಿಸುತ್ತಿತ್ತು. ಬೆಟ್ಟ ಹತ್ತಿ ಕಲ್ಲುಬಂಡೆಯಲ್ಲಿ ಕುಳಿತು ಸುತ್ತಲೂ ದಿಟ್ಟಿ ಹಾಯಿಸಿದಾಗ ಆಹಾ ಕರ್ನಾಟಕದ ಕಾಶ್ಮೀರವೇ, ಸ್ವಿಜರ್ಲ್ಯಾಂಡೇ ನಮ್ಮ ಮುಂದೆ ಇದೆ ಎಂಬ ಭಾವ ಆವರಿಸಿದಾಗ ಬೆಟ್ಟ ಏರಿದ ಆಯಾಸವೆಲ್ಲ ಮಾಯ. ಒಂದೆಡೆ ಮೋಡಗಳ ಸಾಲು, ಇನ್ನೊಂದೆಡೇ ಹಸುರು ಉಡುಗೆ ಹೊದ್ದ ಬೆಟ್ಟ ವನರಾಶಿ, ಮಗದೊಂದೆಡೆ ಮಂಜು ಮುಸುಕಿದ ವಾತಾವರಣ, ನೀಲ ಆಗಸದಲ್ಲಿ ಅಷ್ಟೊಂದು ಹತ್ತಿ ಉಂಡೆ ಯಾರು ತುಂಬಿದವರಪ್ಪ ಎಂದು ಸೋಜಿಗಪಡುತ್ತ ಸೃಷ್ಟಿಯ ಈ ಸೌಂದರ್ಯವನ್ನು ನೋಡುತ್ತ ಮೈಮರೆತೆವು. ಈ ಅನುಭವವನ್ನು ಬಣ್ಣಿಸಲು ಪದಗಳ ಕೊರತೆ. ನೋಡಿಯೇ ಆನಂದಿಸಬೇಕು, ತಣಿಯಬೇಕು. ಆ ಸೊಬಗನ್ನು ಕಣ್ಣಲ್ಲಿ ತುಂಬಿಕೊಳ್ಳುತ್ತ, ಎಲ್ಲಿ ಕಣ್ಮರೆಯಾದೀತೋ ಎಂದು ಕ್ಯಾಮರಾಕಣ್ಣಲ್ಲಿಯೂ ಸೆರೆಹಿಡಿಯುತ್ತ ಆ ನೆನಪನ್ನು ಶಾಶ್ವತವಾಗಿಸಿಕೊಳ್ಳುವ ಕಾರ್ಯದಲ್ಲಿ ನಿರತರಾದೆವು. ಕಬ್ಬೆಬೆಟ್ಟದ ತುದಿಯಲ್ಲಿ ನಿಂತು ಚೋಮಕುಂಡ ಬೆಟ್ಟ ನೋಡುವಾಗ ಒಮ್ಮೆ ಹಸುರಿನಿಂದ ಹೊದ್ದ ವನರಾಶಿ, ಮಗದೊಮ್ಮೆ ಎಲ್ಲವೂ ಮಂಜಿನಿಂದ ಮಸುಕು ಮಸುಕು. ಒಡನೆಯೇ ಇದೋ ಬೇಸರಿಸದಿರಿ ನೋಡಿ ಕಣ್ಣು ತಂಪು ಮಾಡಿಕೊಳ್ಳಿ ಎಂಬಂತೆ ಮಂಜು ಕಣ್ಮರೆ. ಭುವಿಯ ಮೇಲಣ ಸ್ವರ್ಗವೆಂದರೆ ಇದೇ ಎಂಬ ಭಾವ.
ಬೆಟ್ಟ ಹತ್ತಲು ೧೧.೪೫ಕ್ಕೆ ಪ್ರಾರಂಭಿಸಿ ೧ ಗಂಟೆಗೆ ಅಲ್ಲಿ ತಲಪಿದೆವು. ನಮ್ಮ ತಂಡದ ಚಿತ್ರ ತೆಗೆಸಿಕೊಂಡೆವು. ಉತ್ಸಾಹಿಗಳು ಅಲ್ಲಿ ಬಿದ್ದಿದ್ದ ಪ್ಲಾಸ್ಟಿಕ್, ಪಾನೀಯದ ಡಬ್ಬ ಎಲ್ಲ ಹೆಕ್ಕಿ ಚೀಲಕ್ಕೆ ತುಂಬಿದರು. ಅವರ ಈ ಕಾರ್ಯ ನಿಜಕ್ಕೂ ಮೆಚ್ಚುವಂತದ್ದು. ೧.೪೫ಕ್ಕೆ ಇಳಿಯಲು ತೊಡಗಿದೆವು. ಕಡಿದಾದ ಬೆಟ್ಟ ಏರುವುದು ಸುಲಭ. ಆದರೆ ಇಳಿಯುವುದು ಕಠಿಣ. ಇಳಿಯುವಾಗ ಹೆಚ್ಚುಕಡಿಮೆ ಜಾರುಬಂಡೆ ಆಟದಂತೆ ಜಾರಿ ಇಳಿಯಬೇಕಿತ್ತು. ಕಾಲಿಟ್ಟರೇ ಜಾರುತ್ತಿತ್ತು. ಒಂದಿಬ್ಬರ ಶೂ ಸೋಲ್ ಕಿತ್ತು ಬಂದಿತ್ತು. ಅಂಬರೀಶ್ ನಡೆದಂತೆ ಅಡ್ಡಡ್ಡ ಕಾಲಿಟ್ಟು ಇಳಿದರೆ ಸುರಕ್ಷಿತ ಎಂದು ಸಲಹೆ ಕೊಟ್ಟೆ ಹಾಗೂ ನಾನು ಹಾಗೆಯೇ ಇಳಿದೆ. ಆಗ ಒಂದು ಹುಡುಗಿ ಅಯ್ಯೋ ಇಲ್ಲಿಗೆ ನನ್ನ ತಂಗಿ ಬರಬೇಕಿತ್ತು. ಅವಳಿಗೆ ಇಳಿಯಲು ಬಹಳ ಸುಲಭವಾಗುತ್ತಿತ್ತು ಎಂದಳು. ಅದು ಹೇಗೆ ಎಂದು ಕೇಳಿದ್ದಕ್ಕೆ ಅವಳ ಕಾಲು ಸೊಟ್ಟವಾಗಿದೆ ಅಂದಳು! ಜಾರುಬಂಡೆಯಂತೆ ಬೆಟ್ಟ ಇಳಿದು ಹೆಚ್ಚಿನವರ ಪ್ಯಾಂಟ್ ಹಿಂಭಾಗ ಕೆಸರುಮಯ! ೩ ಗಂಟೆಗೆ ನಾವು ಕೆಳಗೆ ತಲಪಿದೆವು. ಕಬ್ಬೆಬೆಟ್ಟ ಏರಿ ಇಳಿದಾಗ ಚಾರಣದ ಪೂರ್ಣ ತೃಪ್ತಿ ಲಭಿಸುತ್ತದೆ. ಚಾರಣದ ಸುಖ ಅನುಭವಿಸಲು ಇಚ್ಛಿಸುವವರು ಕಬ್ಬೆಬೆಟ್ಟ ಏರಿ ಇಳಿಯಬಹುದು. ನನಗಂತೂ ಆ ತೃಪ್ತಿ ಸಿಕ್ಕಿದೆ. ಊಟ ಮುಗಿಸಿದೆವು.(ಬಿಸಿಬೇಳೆಭತ್, ಮೊಸರನ್ನ). ನಾಯಿ ಕೋಳಿಗಳೂ ಊಟಕ್ಕೆ ಕಾಯುತ್ತಿದ್ದುವು.
ಚೋಮಕುಂಡ ಬೆಟ್ಟ
ಸಮುದ್ರಮಟ್ಟದಿಂದ ೧೬೧೦ಮೀಟರ್ ಎತ್ತರದ ಚೋಮಕುಂಡ ಬೆಟ್ಟದತ್ತ ಮುನ್ನಡೆದೆವು. ಚೋಮಕುಂಡ ಎಲ್ಲರೂ ಬರಲಿಲ್ಲ. ಒಂದು ಬೆಟ್ಟಕ್ಕೇ ತೃಪ್ತಿ ಹೊಂದಿ ವಾಹನದಲ್ಲೇ ಕೂತರು. ಅಲ್ಪ ತೃಪ್ತರು ಅವರು! ಈ ಬೆಟ್ಟ ಅಷ್ಟು ಕಡಿದಾಗಿಲ್ಲ. ಯಾರು ಬೇಕಾದರೂ ಏರಬಹುದು. ಚೋಮಕುಂಡ ಏರುವಾಗ ಕಬ್ಬೆಬೆಟ್ಟದತ್ತ ನೋಡಿದಾಗ ಅಲ್ಲಿ ಮಂಜುಮುಸುಕಿ ಏನೇನೂ ಕಾಣುತ್ತಿರಲಿಲ್ಲ. ನಾವು ಬೆಟ್ಟ ಏರುವಾಗ ಇಳಿಯುವಾಗ ಕಾವಳದ ಕಣ್ಣಾಮುಚ್ಚಾಲೆ ಆಟದ ಮಜ ನಿರಂತರ ಅನುಭವಿಸಿದೆವು. ಚೋಮಕುಂಡ ಬೆಟ್ಟ ಪೂರ್ತಿ ಏರಲಿಲ್ಲ ನಾವು. ಅರ್ಧ ಬೆಟ್ಟ ಮಾತ್ರ ಏರಿದೆವು. ಸಮತಟ್ಟಾದ ನೆಲದಲ್ಲಿ ಕೂತು ಸುತ್ತಲೂ ನೋಡಿದೆವು. ಕೆಲವರು ನೆಗೆಯುವ ಪೋಟೋ ಕ್ಲಿಕ್ಕಿಸಿಕೊಂಡರು. ಈ ಬೆಟ್ಟದ ವೈಶಿಷ್ಟ್ಯವೆಂದರೆ ಅರ್ಧ ಬೆಟ್ಟ ಏರಿ ಮತ್ತೆ ಇಳಿಯಲಿದೆಯಂತೆ. ಅಲ್ಲಿಂದ ಚೇಲಾವರ ಜಲಪಾತದ ಸೊಬಗನ್ನು ನೋಡಬಹುದಂತೆ. ನಾವು ಸಮಯದ ಅಭಾವದಿಂದ ಇಳಿಯುವ ಭಾಗವನ್ನು ಬಿಟ್ಟೆವು. ಆಗಲೇ ಸಂಜೆ ಗಂಟೆ ನಾಲ್ಕು ಆಗಿತ್ತು. ಕಾವಳದ ಕತ್ತಲು ಆವರಿಸಿತ್ತು. ಬೆಟ್ಟ ಇಳಿದು ವಾಹನದೆಡೆಗೆ ಬಂದಾಗುವಾಗ ಮಳೆರಾಯ ಹನಿಯಲು ತೊಡಗಿದ್ದ. ಅಷ್ಟು ಸಮಯ ನಮಗೆ ತೊಂದರೆ ಕೊಡದೆ ನಮ್ಮ ಚಾರಣವನ್ನು ಯಶಸ್ವಿಗೊಳಿಸಲು ಸಹಕರಿಸಿದ್ದ.
ಚೇಲಾವರ ಜಲಪಾತ
ಅಲ್ಲಿಂದ ಚೇಲಾವರ ಜಲಪಾತಕ್ಕೆ ನಾಲ್ಕು ಕಿಮೀ. ಆಗ ೪.೩೦ ಗಂಟೆ ಆಗಿತ್ತು. ಜಲಪಾತಕ್ಕೆ ಭೇಟಿ ಕೊಡುವ ಸಮಯ ಬೆಳಗ್ಗೆ ೮ರಿಂದ ಸಂಜೆ ೫. ಬಸ್ಸಿಳಿದದ್ದೇ ಜಲಪಾತದತ್ತ ದೌಡಾಯಿಸಿದೆವು. ಕಾಫಿ ತೋಟದ ಮಧ್ಯೆ ಕಾಲುದಾರಿಯಲ್ಲಿ ಒಬ್ಬೊಬ್ಬರಾಗಿ ಸಾಗಬೇಕು. ಉಂಬಳದ ಕಾಟವೂ ಉಂಟು. ನಮಗೆ ಯಾರಿಗೂ ಅದು ತೊಂದರೆ ಕೊಟ್ಟಿರಲಿಲ್ಲ. ದೂರದಿಂದಲೇ ಜಲಪಾತ ಹಾಲ್ನೊರೆಯಂತೆ ಕಾಣಿಸುತ್ತದೆ. ಜಲಪಾತದ ಸೌಂದರ್ಯ ನೋಡಲು ಕೆಳಗೆ ಇಳಿಯಲೇಬೇಕು. ಕಾಫಿತೋಟದ ಮಧ್ಯೆ ೪೦ ಅಡಿ ಎತ್ತರದಿಂದ ಬಂಡೆಮೇಲೆ ಹಾಲಿನ ಹೊಳೆಯಂತೆ ಹರಿಯುವ ಈ ಚೇಲಾವರ ಜಲಪಾತ ಕೊಡಗಿನ ಸುಂದರ ಜಲಪಾತಗಳಲ್ಲಿ ಒಂದು ಎಂದು ಪ್ರಸಿದ್ಧಿಹೊಂದಿದೆ. ಬಂಡೆಯು ಆಮೆಯ ಬೆನ್ನಿನಂತೆ ಕಾಣುವ ಕಾರಣದಿಂದ ಏಮೆಪಾರೆ ಜಲಪಾತ ಎಂಬ ಹೆಸರೂ ಪ್ರಚಲಿತದಲ್ಲಿದೆ. ಇಲ್ಲಿಗೆ ಬರಲು ಪ್ರಶಸ್ತ ಕಾಲ ಅಕ್ಟೋಬರ-ಮಾರ್ಚ್. ನಾವು ನೋಡಿದಾಗ ನೀರಿನ ಹರಿವು ಸಾಮಾನ್ಯವಾಗಿತ್ತು. ರುದ್ರರಮಣೀಯವಾಗಿರಲಿಲ್ಲ. ಕೆಲವರು ನೀರಿಗೆ ಇಳಿದು ಮನಸೋ ಇಚ್ಛೆ ಈಜಿ ಆಟವಾಡಿದರು. ಇನ್ನು ಕೆಲವರು ನೀರಿಗಿಳಿಯದೆ ನೀರ ಸೊಬಗನ್ನು ನೋಡುತ್ತ ನಿಂತರು. ಮತ್ತೂ ಕೆಲವರು ಕಾಫಿ ತೋಟದ ಮಧ್ಯೆ ಮೇಲೆಯೇ ನಿಂತು ನೋಡಿ ಇಷ್ಟು ಸಾಕು ಎಂದು ಹಿಂದಿರುಗಿದರು. ನೀರಧಾರೆ ನೋಡಲೇನಿದೆ ಎಲ್ಲ ಒಂದೇ ಎಂಬ ವೇದಾಂತದಿಂದ ( ಆಯಾಸದಿಂದ) ಬಸ್ಸಲ್ಲೇ ಕುಳಿತಿದ್ದರು.
ಸಂಜೆ ೫.೩೦ ಗಂಟೆಗೆ ಹೊರಟು ಚೆಯ್ಯಂಡಾಣೆಯಲ್ಲಿ ಕಾಫಿ, ಚಹಾ ಕುಡಿದು ಮೈಸೂರಿಗೆ ರಾತ್ರೆ ೯.೩೦ ಗಂಟೆಗೆ ತಲಪಿದೆವು. ದಾರಿಯ ಏಕತಾನತೆ ಹೋಗಲಾಡಿಸಲು ಒಂದಷ್ಟು ಮಂದಿಯಿಂದ ಅಂತ್ಯಾಕ್ಷರಿ ಹಾಡು ನಿರಂತರ ಸಾಗುತ್ತಿತ್ತು. ಎಷ್ಟು ಹಾಡುಗಳು ಗೊತ್ತಿವೆ ಇವರಿಗೆ ಎಂದು ಖುಷಿಯೂ ಆಯಿತು ಮತ್ತು ನಮಗೆ ಈಗಿನ ಸಿನೆಮಾದ ಅರ್ಥ ಇಲ್ಲದ, ಆಂಗ್ಲ,ಕನ್ನಡ ಬೆರೆತ ಹಾಡುಗಳು ಪರಿಚಯವಾದಂತಾಯಿತು! ಪೀಪಲ್ ಟ್ರೀ ಸಂಸ್ಥೆಯ ಶಿವಶಂಕರರು ಈ ಚಾರಣ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಿದ್ದರು. ಈಗ ಮಳೆ ಎಡೆಬಿಡದೆ ಸುರಿಯುತ್ತಿರುವುದರಿಂದ ಜಲಪಾತದ ಸೌಂದರ್ಯ ಹೆಚ್ಚಿರಬಹುದು. ಚಾರಣದ ಮಾರನೆ ದಿನ ಬೆಳಗ್ಗೆ ಏಳುವಾಗ ಕಾಲು, ತೊಡೆಗಳು ಸಂಗೀತವಾ ಹಾಡಿದಂಥ ಭಾವ. ಬಿಡದೆ ಎರಡು ದಿನ ರಾಗಾಲಾಪನೆ ಇತ್ತು!
ಸೂಚನೆ: ಈ ಬೆಟ್ಟಗಳಿಗೆ ಚಾರಣ ಹೋಗುವವರು ಗುಂಪಾಗಿ ಹೋದರೆ ಒಳ್ಳೆಯದು. ತಿಂಡಿ ತಿನಿಸು ಜೊತೆಯಲ್ಲೇ ಒಯ್ಯಬೇಕು. ಸ್ವಂತ ವಾಹನ ಇಲ್ಲವೆ ಬಾಡಿಗೆ ವಾಹನಗಳಲ್ಲಿ ತೆರಳಬೇಕಾಗುತ್ತದೆ. ಗಟ್ಟಿಮುಟ್ಟಾದ ಚಪ್ಪಲಿ, ಇಲ್ಲವೆ ಒಳ್ಳೆಯ ಶೂ ಧರಿಸಿ ಪ್ರಯಾಣಿಸಿ. ಮಳೆಗಾಲದಲ್ಲಿ ಮಳೆಅಂಗಿ ಅವಶ್ಯ. ಮತ್ತು ಉಂಬುಳಕ್ಕೆ ರಕ್ತದಾನ ಮಾಡಲು ಹೆದರಬಾರದು!
ಫ್ಲೆಕ್ಸ್ ವಿರೋಧಿಸಿದ್ದು ಒಳ್ಳೇದಾಗಿದೆ. ನಾನಲ್ಲಿ ಕಾಶ್ಮೀರ ಕುತೂಹಲ ಕೆರಳಿಸಲಿಲ್ಲ ಎನ್ನುವಾಗ ಇಲ್ಲಿ ಹೊಗಳಿಕೆಯ ಭಾವದಲ್ಲಿ ಕರ್ನಾಟಕದ ಕಾಶ್ಮೀರ ಎಂದದ್ದು ಒಮ್ಮೆ ತಮಾಷೆಯಾಗಿ ಕೇಳುತ್ತದೆ. ಆದರೆ ಹೇಗೆ ರಾಮಾಯಣ ರಾಜಕೀಯ ಕಾರಣದ `ಅಯೋಧ್ಯೆ’ಗೆ ಸೀಮಿತವಲ್ಲವೋ ಊರೂರಿನಲ್ಲಿ ಅಷ್ಟೇ ದಟ್ಟವಾಗಿ ನಡೆದಿದೆಯೋ ಹಾಗೇ ನಾವು ಸೌಂದರ್ಯಕ್ಕೆ ಪರ್ಯಾಯ ಪದವಾಗಿ ಕಾಶ್ಮೀರ ಎನ್ನುವುದು ನ್ಯಾಯವಾಗಿದೆ. ಹಾಡಿದ್ದೇ ಹಾಡುವುದು, ನೋಡಿದ್ದೇ ನೋಡುವುದಲ್ಲ – ಅಂಥವನ್ನು ಇನ್ನಷ್ಟು ಕಾಣಬೇಕು ಎನ್ನುವವರಿಗೆ ಪ್ರಕೃತಿಯಲ್ಲಿ ಎಷ್ಟೂ ಅವಕಾಶಗಳಿವೆ ಎನ್ನುವುದಕ್ಕೆ ಇದೂ ಒಂದು ಸಾಕ್ಷಿ.ಭಲೇ.
ಕಾಶ್ಮೀರವನ್ನು ನೋಡದಿದ್ದವರು ಹಾಗೆ ವರ್ಣಿಸುವುದು ಇರಬಹುದು. ಪ್ರತಿಕ್ರಿಯೆಗೆ ಧನ್ಯವಾದ.
ನವಿರಾದ ಹಾಸ್ಯದೊಂದಿಗೆ ಕಣ್ಮುಂದೆ ಅನಾವರಣಗೊಂಡ ಕೋಟೆಬೆಟ್ಟ ಡಾ ಚರಣ…ವಾ..ಸೊಗಸಾಗಿದೆ….ಕಣ್ಮುಂದೆ ತೇಲಿ ಬಂದಂತಿದೆ …. ಓದಿದರೆ.. ಪುಳಕಿತವಾಗುವ ಮನಸಿಗೆ ಇದು ಕಷ್ಠ ಸಾಧ್ಯ ಎಣಿಸಿದ್ದು ಉಂಟು….ಅತ್ಯುತ್ತಮದ ಮಾಹಿತಿಪೂರ್ಣವಾದ ಪ್ರವಾಸ ಕಥನಕ್ಕೆ ನನ್ನ ಪ್ರೀತಿಯ ಹಾರೈಕೆಗಳು ರುಕ್ಮಿಣಿ
ಧನ್ಯವಾದ ವೀಣಾ
nice photos
ಧನ್ಯವಾದ
Madam, I apploud your writing skill. Kindly excuse me for not replying in Kannada. I enjoyed your explanation. As promised I have removed the flexes in the next expedition. A detailed explanation to the events that unfolded that day is very much appreciated. It is a good practice to document any good experience. You have done exactly that. Kudos to you and your spirit. I am indebted to you for the wonderful explanations you have given. Please keep blessing us in he days to come.
ಹೊಣೆಹೊತ್ತು ಜನರ ತಂಡ ಕಟ್ಟಿಕೊಂಡು ಚಾರಣ ಕರೆದುಕೊಂಡು ಹೋಗುವುದು ಸುಲಭದ ಕೆಲಸವಲ್ಲ. ಬಹಳ ಜವಾಬ್ದಾರಿಯುತವಾದ ಕೆಲಸ. ನಾವು ಖುಷಿಯಾಗಿ ಆ ದಿನ ಹೊರಟು ಬರುತ್ತೇವೆ. ನೀವು ಎಷ್ಟೋ ದಿವಸಗಳಿಂದ ಅದಕ್ಕಾಗಿ ತಯಾರಿ ನಡೆಸಿರುತ್ತೀರಿ. ಕಷ್ಟದ ಕೆಲಸವದು. ಅದನ್ನು ನೀವು ಚೆನ್ನಾಗಿ ನಿಭಾಯಿಸಿದ್ದೀರಿ.ಧನ್ಯವಾದ ಶಿವಶಂಕರ್.
ಒಂದು ವಿಷ್ಯ ಗೊತ್ತಾಗ್ಲಿಲ್ಲ. ಕಬ್ಬೆಬೆಟ್ಟವೇ ಕೋಟೆಬೆಟ್ಟವಾ?
ಕೋಟೆಬೆಟ್ಟ ಬೇರೆ ಆಗಿರಬಹುದು. ನಾನೇ ತಪ್ಪಿರುವೆನೆಂದು ಕಾಣುತ್ತದೆ. ಸರಿಪಡಿಸಿರುವೆ. ಧನ್ಯವಾದ. ಕಬ್ಬೆಬೆಟ್ಟಕ್ಕೆ ಕೋಟೆಬೆಟ್ಟ ಎಂಬ ಹೆಸರು ಅಲ್ಲದೆ ಅದು ಬೇರೆಯೇ ಬೆಟ್ಟ ಆದರೆ ಅದನ್ನು ಹತ್ತಲು ಬಾಕಿ ಇದೆಯೆಂದು ಸಂತೋಷಪಡುವೆ!
ಚಾರಣದ ಅನುಭವಗಳು ಚೆನ್ನಾಗಿವೆ…. ಜಿಗಣೆಗಳ ಕಾಟ ಇರಲಿಲ್ಲವೆ…?
ಇರಲಿಲ್ಲ. ಒಂದೊಂದು ಇತ್ತಷ್ಟೆ. ನಮ್ಮ ತಂಟೆಗೆ ಬಂದಿರಲಿಲ್ಲ. ಈಗ ಜಾಸ್ತಿಯಾಗಿರಬಹುದು.
Kabbe betta and kote betta are different places. Kote betta is in madikeri taluq and kabbe betta in Virajpet taluq.
ನಿಮ್ಮ ಚಾರಣ ನಿರೂಪಣೆ ಅನುಭವ ಎಲ್ಲವೂ ಸುಂದರ
ನಾನು ಸ್ವತಃ ಚಾರಣಕ್ಕೆ ಬಂದಿದ್ದನೇನೋ ಅನ್ನಿಸಿತು
ಧನ್ಯವಾದಗಳು
ಓಹ್ ಅತಿ ಸುಂದರವಾದ ನಿರೂಪಣೆ. ನಾನೇ ಚಾರಣಕ್ಕೆ ನಿಮ್ಮೊಡನೆ ಬಂದಿದ್ದೆನೇನೋ ಅನ್ನಿಸುವಷ್ಟು.
ಮನಸ್ಸು ಪುಳಕಗೊಂಡಿತು. ಧನ್ಯವಾದಗಳು
ಧನ್ಯೋಸ್ಮಿ.