ಈ ಕಥನವನ್ನು ನನ್ನ ಅಣ್ಣನ ಮಗ ಅಕ್ಷಯಕೃಷ್ಣ ಬರೆದದ್ದು. ಅವನೀಗ ಪಿಯುಸಿ ಶಿಕ್ಷಣ ಮುಗಿಸಿ ಸಿಎ ಪರೀಕ್ಷೆಗೆ ತಯಾರಾಗುತ್ತಿರುವನು. ಅವನು ಹೋದಕಡೆ ಮೊಬೈಲಿನಲ್ಲಿ ಸಾಧ್ಯವಾದಷ್ಟು ಚಿತ್ರ ಸೆರೆ ಹಿಡಿದು ಈ ಬರಹ ಬರೆದು ನನಗೊಪ್ಪಿಸಿರುವನು. ಅದನ್ನು ಈಗ ನಿಮ್ಮ ಮುಂದೆ ಇಟ್ಟಿರುವೆನು. ಓದಿ ಅವನ ಈ ಪ್ರಯತ್ನಕ್ಕೆ ಪ್ರತಿಕ್ರಿಯಿಸಿ.
೨೨.೮.೨೦೧೪ರಂದು ರಾತ್ರೆ ೮.೩೦ಕ್ಕೆ ನಾವು ೧೨ ಮಂದಿ ಮೈಸೂರಿನಿಂದ ಮಿನಿ ವ್ಯಾನಿನಲ್ಲಿ ಹೊರಟು ೨೩ರಂದು ಬೆಳಗ್ಗೆ ೮.೩೦ಗೆ ಮುರುಡೇಶ್ವರ ತಲಪಿದೆವು. ಅಲ್ಲಿ ನಾವು ಧೇನು ಆತಿಥ್ಯ ಎಂಬ ಹೋಟೇಲಿನಲ್ಲಿ ಸ್ನಾನ ಮಾಡಿ ತಯಾರಾದೆವು. ಈ ಹೋಟೇಲಿನ ವಿಶೇಷತೆ ಏನೆಂದರೆ ಅಲ್ಲಿ ದಿನಾ ಬೆಳಗ್ಗೆ ಗೋಪೂಜೆ ಮಾಡುತ್ತಾರೆ. ಹೋಟೇಲಿನ ಮಾಲೀಕರು ಶ್ರೀ ರಾಮಚಂದ್ರಾಪುರ ಶ್ರೀಗಳ ಪರಮ ಭಕ್ತರು. ನಮಗೆ ಉಚಿತವಾಗಿಯೇ ಸ್ನಾನಾದಿಗಳಿಗೆ ಅವಕಾಶವಿತ್ತಿದ್ದರು.
ತಿಂಡಿ ತಿಂದು ನಾವು ಮುರುಡೇಶ್ವರ ದೇವಾಲಯಕ್ಕೆ ಹೋದೆವು. ರಾವಣನು ಗೋಕರ್ಣದಲ್ಲಿ ಶಿವನ ಆತ್ಮಲಿಂಗವನ್ನು ಅಲ್ಲಿಂದ ತೆಗೆಯಲು ಪ್ರಯತ್ನಿಸಿದಾಗ ಕೈಗೆ ಸಿಕ್ಕ ಲಿಂಗದ ತುಣುಕುಗಳನ್ನು ದೂರ ಎಸೆದನು. ಆ ತುಣುಕುಗಳಲ್ಲಿ ಒಂದು ಮುರುಡೇಶ್ವರದಲ್ಲಿ ಬಿದ್ದಿತು. ಅದೇ ಶಿವನ ದೇವಾಲಯವಾಯಿತು. ಮುಖ್ಯದ್ವಾರದಲ್ಲಿ ಬೃಹತ್ ಗೋಪುರ ಕಟ್ಟಿರುವರು. ದೇವಾಲಯದ ಆವರಣದಲ್ಲಿ ಶಿವನ ದೊಡ್ಡ ವಿಗ್ರಹವನ್ನು ಸ್ಥಾಪನೆ ಮಾಡಿರುವರು. ಎಲ್ಲ ನೋಡಿ ಆನಂದಿಸಿ ಅಲ್ಲಿಂದ ಹೊರಟೆವು.
ಇಡಗುಂಜಿ ದೇವಾಲಯಕ್ಕೆ ಹೋದೆವು. ಗಣಪನಿಗೆ ನಮಸ್ಕರಿಸಿ ದೇವಾಲಯದ ವತಿಯಿಂದ ನಡೆಯುವ ಅನ್ನ ದಾಸೋಹದಲ್ಲಿ ಊಟ ಮಾಡಿದೆವು. ಊಟವಾಗಿ ಹೊರಟು ಅಪ್ಸರಕೊಂಡಕ್ಕೆ ಹೋದೆವು. ಅಲ್ಲಿ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಗಳ ಮಠ ಹಾಗೂ ನರಸಿಂಹ ದೇವಸ್ಥಾನವನ್ನು ನೋಡಿದೆವು. ಅಪ್ಸರಕೊಂಡ ಜಲಪಾತವನ್ನೂ ನೋಡಿದೆವು. ಬಹಳ ಸುಂದರವಾಗಿದ್ದುವು. ಅಪ್ಸರಕೊಂಡ ಉದ್ಯಾನವನವನ್ನೂ ನೋಡಿದೆವು. ಬಹಳ ಅಚ್ಚುಕಟ್ಟಾಗಿ ಸುಂದರವಾಗಿ ಈ ವನವನ್ನು ನಿರ್ಮಿಸಿದ್ದಾರೆ. ಅಲ್ಲಿಂದ ಮುಂದಕ್ಕೆ ಸಮೀಪವಿದ್ದ ಕಾಸರಕೋಡ್ ಸಮುದ್ರದಂಡೆಯನ್ನು ದೂರದಿಂದ ವೀಕ್ಷಿಸಿದೆವು.
ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಗಳು ಗೋಕರ್ಣದಲ್ಲಿ ಶಿಷ್ಯರು, ಭಕ್ತಾದಿಗಳ ನೆರವಿನಿಂದ ಕಟ್ಟಿಸುತ್ತಿರುವ ಅಶೋಕೆ ಮಠಕ್ಕೂ ಭೇಟಿ ಕೊಟ್ಟೆವು. ಕಟ್ಟಡದ ಕೆಲಸ ಪ್ರಗತಿಯಲ್ಲಿತ್ತು. ಮುಂದೆ ನಾವು ಹತ್ತಿರದಲ್ಲಿದ್ದ ಓಮ್ ಬೀಚ್ಗೆ ಹೋದೆವು. ಸಮುದ್ರವನ್ನು ನೋಡುತ್ತ ಕೂರುವುದೇ ಆನಂದ.
ಗೋಕರ್ಣ ದೇವಾಲಯದಲ್ಲಿ ಶಿವನಿಗೆ ನಮಸ್ಕರಿಸಿ ಅಲ್ಲೇ ಸಮೀಪವಿದ್ದ ಗಣಪತಿ ದೇವಾಲಯಕ್ಕೂ ಭೇಟಿ ಕೊಟ್ಟೆವು. ಒಮ್ಮೆ ರಾವಣನು ಶಿವನ ಕುರಿತು ತಪಸ್ಸು ಮಾಡಿ ಆತ್ಮಲಿಂಗ ಪಡೆದನು. ಅದನ್ನು ತೆಗೆದುಕೊಂಡು ಹೋಗುತ್ತಿರುವಾಗ ಸಂಧ್ಯಾವಂದನೆಯ ಸಮಯವಾಗಿತ್ತು. ಆಗ ಅಲ್ಲಿ ಗಣಪತಿಯು ಬ್ರಾಹ್ಮಣ ವೇಷದಲ್ಲಿ ರಾವಣನೆದುರು ಪ್ರತ್ಯಕ್ಷನಾದ. ರಾವಣ ಅವನ ಕೈಗೆ ಆತ್ಮಲಿಂಗ ಕೊಟ್ಟು ಸಂಧ್ಯಾವಂದನೆ ಮಾಡಿ ಬರುವ ತನಕ ಹಿಡಿದುಕೊಂಡಿರು ಎಂದನು. ಅದಕ್ಕೆ ಗಣಪತಿ ಒಪ್ಪಿಗೆ ಇತ್ತು, ಮೂರು ಬಾರಿ ನಿನ್ನನ್ನು ಕರೆದಾಗ ಬರದಿದ್ದರೆ ಅದನ್ನು ಇಲ್ಲೆ ಇಟ್ಟುಬಿಡುವೆ ಎಂದು ಎಚ್ಚರಿಸಿದನು. ರಾವಣ ಸಂಧ್ಯಾವಂದನೆ ಮಾಡಿ ಬರುವ ಮೊದಲೇ ಮೂರು ಬಾರಿ ಅವನನ್ನು ಕರೆದು ಅವನು ಬಾರದಿದ್ದಾಗ ಅಲ್ಲೇ ಲಿಂಗವನ್ನು ಇಟ್ಟು ಮಾಯವಾದನು. ಮುಂದೆ ಅದುವೇ ಗೋಕರ್ಣ ಕ್ಷೇತ್ರವೆಂದು ಪ್ರಸಿದ್ಧಿಗೊಂಡಿತು.
ಪರಶಿವನ ಅಭಿವ್ಯಕ್ತ ಸ್ವರೂಪಿಗಳಾದ ಶ್ರೀಶಂಕರಭಗವತ್ಪಾದರು ಸಮ್ಸ್ಥಾಪಿಸಿದ ಶ್ರೀಪೀಠ ಸ್ಗ್ರೀಸಂಸ್ಥಾನಗೋಕರ್ಣ ಶ್ರೀರಾಮಚಂದ್ರಾಪುರಮಠ. ನಮ್ಮ ಪರಂಪರೆ ಜಗದ್ಗುರು ಶಂಕರಾಚಾರ್ಯರ ಪ್ರಮುಖ ಶಿಷ್ಯರಾದ ಶ್ರೀಸುರೇಶ್ವರಾಚಾರ್ಯರ ಜ್ಯೇಷ್ಠ ಶಿಷ್ಯ ಶ್ರೀವಿದ್ಯಾನಂದಚಾರ್ಯರಿಂದ ಪ್ರಾರಂಭವಾಯಿತು. ಈ ಪರಂಪರೆಯ ಹನ್ನೊಂದನೆಯ ಯತಿಗಳಾದ ಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳಿಗೆ ಶ್ರೀಶ್ರೀರಾಮಚಂದ್ರಭಾರತೀ ಹಾಗೂ ಶ್ರೀಶ್ರೀರಘೂತ್ತಮಭಾರತೀ ಎಂಬ ಇಬ್ಬರು ಶಿಷ್ಯರು. ೧೫ನೇ ಶತಮಾನದಲ್ಲಿ ಶ್ರೀಶ್ರೀ ರಘುತ್ತಮಭಾರತೀಮಹಾಸ್ವಾಮಿಗಳು ಕೆಕ್ಕಾರಿಗೆ ಬಂದು ಮಠ ಸ್ಥಾಪಿಸಿದರು. ಅದೇ ಮುಮ್ದೆ ಕೆಕ್ಕಾರು ಶ್ರೀರಘುತ್ತಮಮಠ ಎಂದು ಪ್ರಸಿದ್ಧಿ ಹೊಂದಿತು. ಪ್ರಕೃತಿಯ ಮಡಿಲಲ್ಲಿರುವ ಕೆಕ್ಕಾರುಮಠ ಕಾರವಾರದಿಂದ ಭಟ್ಕಳದವರೆಗೆ ಸಹಸ್ರಾರು ಕುಟುಂಬಗಳನ್ನು ಶಿಷ್ಯಗಣವನ್ನಾಗಿ ಹೊಂದಿವೆ. ಈ ಪೀಠದ ಮೂವತ್ತೈದೆನೆಯ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಂದ್ರಭಾರತೀ ಮಹಾಸ್ವಾಮಿಗಳು ಶ್ರೀಮಠದ ಗರ್ಭಗುಡಿ ಹಾಗೂ ಶ್ರೀಕರಾರ್ಚಿತ ದೇವತಾ ಪುಣ್ಯಸ್ಥಳಗಳನ್ನು ಜೀರ್ಣೋದ್ಧಾರಗೊಳಿಸಿರುವರು.
ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು (ಮೂವತ್ತಾರನೆಯ ಪೀಠಾಧಿಪತಿಗಳು) ತಮ್ಮ ಇಪ್ಪತ್ತೊಂದನೆಯ ಜಯಚಾತುರ್ಮಾಸ್ಯವನ್ನು ಹೊನ್ನಾವರ ತಾಲೂಕು, ಶ್ರೀರಘುತ್ತಮಮಠ ಕೆಕ್ಕಾರು ಇಲ್ಲಿ ತಾರೀಕು ೧೨.೭.೨೦೧೪ಶನಿವಾರದಿಂದ ೯-೯.೨೦೧೪ ಮಂಗಳವಾರದ ವರೆಗೆ ಆಚರಿಸುವರು.
ನಾವು ರಾತ್ರೆ ಕೆಕ್ಕಾರುಮಠಕ್ಕೆ ಹೋದೆವು. ರಾತ್ರೆ ೯ಗಂಟೆಯಿಂದ ೧೧.೧೫ರ ತನಕ ಸ್ವಾಮೀಜಿಗಳು ನಡೆಸಿಕೊಡುವ ರಾಮಕಥೆಯ ಸೀತಾಕಲ್ಯಾಣದ ಒಂದು ಭಾಗವನ್ನು ಕೇಳಿದೆವು. ನಮಗೆ ಉಳಿದುಕೊಳ್ಳಲು ಅತಿಥಿ ಗೃಹದಲ್ಲಿ ಅವಕಾಶ ಕೊಟ್ಟಿದ್ದರು.
೨೪.೮.೨೦೧೪ರಂದು ಬೆಳಗ್ಗೆ ಎದ್ದು ಸ್ನಾನಾದಿಗಳನ್ನು ಮುಗಿಸಿ ತಿಂಡಿ ತಿಂದು ಗುರುಗಳು ಮಾಡುತ್ತಿದ್ದ ಪೂಜೆ ನೋಡಿದೆವು. ಗುರುಗಳಿಂದ ಮಂತಾಕ್ಷತೆ ಪಡೆದು ಧನ್ಯರಾದೆವು. ಕೆಕ್ಕಾರುಮಠ ಚೊಕ್ಕವಾಗಿ ಚೆನ್ನಾಗಿದೆ. ದಿನಕ್ಕೆ ಸಾವಿರಾರು ಮಂದಿ ಅಲ್ಲಿಗೆ ಬಂದು ಗುರುಗಳನ್ನು ಭೇಟಿಯಾಗುತ್ತಾರೆ. ಅವರಿಗೆಲ್ಲ ವಸತಿ ಸೌಕರ್ಯ, ತಿಂಡಿ ಊಟೋಪಚಾರ ಎಲ್ಲವನ್ನೂ ಅಚ್ಚುಕಟ್ಟಾಗಿ ಏರ್ಪಾಡು ಮಾಡಿದ್ದರು. ಮಧ್ಯಾಹ್ನ ಊಟ ಮುಗಿಸಿ ೨.೩೦ಕ್ಕೆ ಹೊರಟೆವು. ಜೋಗ ಜಲಪಾತವನ್ನೂ ವೀಕ್ಷಿಸಿದೆವು. ಆದರೆ ನೀರು ಹೆಚ್ಚು ಇರಲಿಲ್ಲ. ಮೈಸೂರು ತಲಪುವಾಗ ೨೫ನೇ ತಾರೀಕು ಬೆಳಗ್ಗೆ ೨ ಗಂಟೆಯಾಗಿತ್ತು. ಈ ಎಲ್ಲ ಕ್ಷೇತ್ರದರ್ಶನದ ವ್ಯವಸ್ಥೆಯನ್ನು ಮೈಸೂರಿನ ಹವ್ಯಕ ಪರಿಷತ್ತು ಏರ್ಪಡಿಸಿತ್ತು.
ಮಾಲತ್ತೆ “ಬೇಗ ಕೊಡಾ” ಅಂತ ಅವಸರಪಡಿಸಿರಬೇಕು.ಇಷ್ಟು ದೊಡ್ಡ ಪ್ರವಾಸಕ್ಕೆ ಇಷ್ತು ಸಣ್ಣ ಲೇಖನ ಸಾಲದು. ಒಂದೇ ಪ್ರಶ್ನೆ – ಮುರುಡೇಶ್ವರದ ದೊಡ್ಡ ಶಿವನ ತಳದ ಪ್ರದರ್ಶನಾಂಗಣ ಸುತ್ತಲಿಲ್ಲವಾ? ಮುಂದಿನ ಲೇಖನ ಇನ್ನು ವಿವಾಆಆಅರವಾಅಗಿ ಬರೆ, ಶುಭವಾಗಲಿ
Nimma annana maga Akshaya Krishna baravanigeyalli aaskthi hondiruvudu metchuvanta vishaya. Chikka chokka baraha.Heege avanige bareyalu prothsahisi.
Preetiyinda
Veda