ಕೀರ್ತಿವಂತ ಬಹುಭಾಷಾ ಬಲ್ಲಿದ. ಅವನಿಗೆ ಇತ್ತೀಚೆಗೆ ರಾಮಕೃಷ್ಣ ಸ್ನೇಹಿತನಾದ. ನನ್ನ ಮಾತೃಭಾಷೆ ಯಾವುದೆಂದು ಹೇಳು ಎಂದು ಸ್ನೇಹಿತನಿಗೆ ಸವಾಲೆಸೆದ. ಹೇಳಿದರೆ ನಿನಗೊಂದು ಮೊಬೈಲು ಉಡುಗೊರೆ ಕೊಡುವೆ ಎಂದ. ಅವನ ಷರತ್ತಿಗೆ ರಾಮಕೃಷ್ಣ ಒಪ್ಪಿದ.
ರಾಮಕೃಷ್ಣ ಒಂದು ದಿನ ಕೀರ್ತಿವಂತನನ್ನು ಮನೆಗೆ ಕರೆಸಿ ಅವನಿಗೆ ರಾಜೋಪಚಾರ ಮಾಡಿ ಮಲಗಲು ಕೋಣೆಯಲ್ಲಿ ಸುಪ್ಪತ್ತಿಗೆ ನೀಡಿದ. ಕೀರ್ತಿವಂತ ಊಟವಾಗಿ ಮಲಗಲು ಬಂದ. ಮಂಚದಲ್ಲಿ ಹಾಸಿಗೆ ಕಂಡದ್ದೇ ಬಿದ್ದುಕೊಂಡ. ಒಮ್ಮೆಲೆ ಚಂಗನೆ ಕೆಳಗೆ ನೆಗೆದು `ಓ ಗಾಡ್’ ಎಂದು ಉದ್ಗರಿಸಿದ. ಇದನ್ನೆಲ್ಲ ರಾಮಕೃಷ್ಣ ಮರೆಯಲ್ಲಿ ನಿಂತು ನೋಡುತ್ತಿದ್ದ. ಅವನ ಉದ್ಗಾರ ಕೇಳಿದ್ದೇ ಏನಾಯಿತು ಎಂದು ಅವನ ಬಳಿ ಧಾವಿಸಿದ.
`ಹಾಸಿಗೆಯಲ್ಲಿ ಏನೋ ಚುಚ್ಚಿತು’ ಎಂದ ಕೀರ್ತಿವಂತ. ರಾಮಕೃಷ್ಣ ಹಾಸಿಗೆಯ ಬಟ್ಟೆ ಸರಿಸಿ ನೋಡಿದಾಗ ಅಲ್ಲಿ ಕೆಲವು ಗುಂಡುಸೂಜಿ ಕಂಡುಬಂತು. `ಓ ಅದೇಗೆ ಇಲ್ಲಿ ಬಂತು? ಕ್ಷಮಿಸಬೇಕು’ ಎಂದು ನುಡಿದು ಅವನ್ನೆಲ್ಲ ತೆಗೆದು ಮಲಗಲು ಅನುವು ಮಾಡಿಕೊಟ್ಟ.
ಮಾರನೇ ದಿನ ರಾಮಕೃಷ್ಣ ಕೀರ್ತಿವಂತನಿಗೆ `ನಿನ್ನ ಮಾತೃಭಾಷೆ ಯಾವುದೆಂದು ಗೊತ್ತಾಯಿತು.’ ಎಂದ.
`ಯಾವುದು ಹೇಳು’ ಎಂದ ಕೀರ್ತಿವಂತ ಕಾತರದಿಂದ.
`ಕನ್ನಡ ಅಲ್ಲವೆ?’ ಎಂದ ರಾಮಕೃಷ್ಣ. ಕೀರ್ತಿವಂತ ಸತ್ಯ ಒಪ್ಪಲೇಬೇಕಾಯಿತು.
`ಹೇಗೆ ಇದನ್ನು ಕಂಡುಹಿಡಿದೆ’ ಎಂದು ಕುತೂಹಲದಿಂದ ಕೇಳಿದ ಕೀರ್ತಿವಂತ.
ರಾಮಕೃಷ್ಣ ತೆನಾಲಿ ರಾಮನ ಕತೆ ಹೇಳಿದ. ಒಮ್ಮೆ ಕೃಷ್ಣದೇವರಾಯನ ಆಸ್ಥಾನದಲ್ಲಿ ಒಬ್ಬ ವಿದ್ವಾಂಸ ಬಂದು ಹೀಗೆ ಸವಾಲೆಸೆದಿದ್ದ. ಆಗ ತೆನಾಲಿ ರಾಮ ಈ ಉಪಾಯವನ್ನು ಮಾಡಿದ್ದು. ಆಗವನು ಅವನ ಮಾತೃಭಾಷೆಯಲ್ಲಿ ಕಿರುಚಿದ್ದು ಕತೆ ಹೇಳಿದ. ಆದರೆ ಕೀರ್ತಿವಂತನ ಕತೆಯಲ್ಲಿ ಸ್ವಲ್ಪ ಮಾರ್ಪಾಡು. ಅವನು ಕಿರಿಚಿದ್ದು ಆಂಗ್ಲದಲ್ಲಿ. ನಮ್ಮ ಕನ್ನಡದವರು ಮಾತ್ರ ನೋವಾದಾಗಲೂ ಪರಭಾಷೆಯಲ್ಲಿ ಕಿರುಚಲು ಸಾಧ್ಯ. ಎಂದು ಬುದ್ಧಿವಂತ ರಾಮಕೃಷ್ಣನಿಗೆ ಗೊತ್ತಿತ್ತು!
www.surahonne.com ನಲ್ಲಿ ಪ್ರಕಟಗೊಂಡ ಪುಟ್ಟಕಥೆ
ನಿಮ್ಮದೊಂದು ಉತ್ತರ