ಒಂದು ಬೆಳಗ್ಗಿನ ೧೦ಗಂಟೆ ಸಮಯಕ್ಕೆ ಭೂಮಿ ನಡುಗಿಸುವ ಸದ್ದು. ಭೂಕಂಪನವಾಯಿತೆ? ಎಂಬ ದಿಗಿಲಿನಿಂದ ಮನೆಯಿಂದ ಹೊರಗೆ ಬಂದು ನೋಡಿದಾಗ ಕಂಡ ದೃಶ್ಯದಿಂದ ಆ ಕೂಡಲೇ ಅನಿಸಿದ್ದು, ಭೂಕಂಪನವಾದರೂ ಆದೀತು ಆದರೆ ಈ ಕೊಳವೆಬಾವಿ ಕೊರೆಯುವುದು ಬೇಡವೇ ಬೇಡ ಎಂದು.
ನಮ್ಮ ಮನೆ ಎದುರು ಭಾಗದಲ್ಲಿ ಇರುವ ಖಾಲಿ ಸೈಟಿನಲ್ಲಿ ಕೊಳವೆಬಾವಿ ಕೊರೆಯಲು ಪ್ರಾರಂಭಿಸಿದ್ದರು. ಅದೇ ಭೀಕರ ಸದ್ದು ಕೇಳಿಸಿದ್ದು. ಛಾಯಾಚಿತ್ರ ತೆಗೆದೆ. ಕೊರೆಯುವ ಜಾಗ ಕಾಣದಷ್ಟು ಧೂಳು ಎದ್ದ ದೃಶ್ಯ ಕಾಣಿಸಿತಷ್ಟೆ. ಕಲ್ಲು ಕೊರೆತದ ಧೂಳಿನಿಂದ ಸುತ್ತಮುತ್ತ ಯಾರನ್ನೂ ಕಾಣುತ್ತಿರಲಿಲ್ಲ. ಆ ಪ್ರದೇಶವೆಲ್ಲ ಧೂಳುಮಯ. ಬೆಳಗ್ಗೆ ೧೦ರಿಂದ ಮಧ್ಯಾಹ್ನ ೩ರತನಕ ನಿರಂತರ ಕೊರೆತ. ಅಷ್ಟು ಸಮಯ ಶಬ್ದ, ಧೂಳು ಮಾಲಿನ್ಯ ಸಹಿಸಲೇ ಬೇಕಾಯಿತು. ಆ ಸೈಟಿನ ಅಕ್ಕಪಕ್ಕ ಇರುವ ಜಾಗದಲ್ಲಿ ಈಗಾಗಲೇ ಕೊಳವೆಬಾವಿ ಕೊರೆದಿದ್ದಾರೆ! ಗಮನಿಸಿ ಅಂಗೈ ಅಗಲದ ಸ್ಥಳದಲ್ಲಿ ಎಷ್ಟೊಂದು ಕೊಳವೆಬಾವಿಗಳು?
ಹೀಗೆ ಎಲ್ಲೆಂದರಲ್ಲಿ ಕೊಳವೆಬಾವಿ ಕೊರೆಯಲು ಪರವಾನಿಗೆ ಇತ್ತರೆ ಮುಂದೆ ಭೂಮಿತಾಯಿ ಸಂಕಟಪಡುವ ದಿನ ದೂರವಿಲ್ಲ. ಧರಿತ್ರಿಯೊಡನೆ ನಿಕಟ ಸಂಬಂಧವಿರುವ ಮನುಜ ಕೂಡ ಇದರಿಂದ ಪರಿತಪಿಸಬೇಕಾಗುತ್ತದೆ. ಕೊಳವೆಬಾವಿಗಳಿಗೆ ಬೇಕೇಬೇಕು ಕಡಿವಾಣ. ಈಗಾಗಲೇ ಅಂತರ್ಜಲ ಬತ್ತಿ ಪಾತಾಳಕ್ಕೆ ಹೋಗಿದೆ. ಪಾತಾಳ ಮುಟ್ಟಿದರೂ ನೀರು ಮರೀಚಿಕೆಯಾಗಿದೆ. ಕೆರೆತೊರೆಗಳು ಬತ್ತಿ ಕಾಡುಪ್ರಾಣಿಗಳಿಗೆ ನೀರಿಲ್ಲದೆ ಇರುವ ಬಗ್ಗೆ ಹಾಹಾಕಾರ ಸ್ಥಿತಿ ಏರ್ಪಟ್ಟಿದೆ. ಪೇಟೆಯಲ್ಲಿ ಮನೆಕಟ್ಟುವ ಮಂದಿ ಕಡ್ಡಾಯವಾಗಿ ಮಳೆನೀರು ತೊಟ್ಟಿ ನಿರ್ಮಿಸಲಿ. ಕೊಳವೆಬಾವಿ ಕೊರೆಯುವ ಬದಲು ನಿಸರ್ಗದತ್ತವಾಗಿ ಸುರಿಯುವ ಮಳೆ ನೀರನ್ನು ಶೇಖರಿಸಿ ಉಪಯೋಗಿಸಲಿ. ಈಗ ಮಳೆನೀರ ತೊಟ್ಟಿ ಕಡ್ಡಾಯ ಎಂದು ಹೇಳುತ್ತಾರಷ್ಟೆ. ಅದು ಕಡತದಲ್ಲಿ ಮಾತ್ರವಷ್ಟೇ ಉಳಿದಿರಬೇಕು. ಆದರೆ ಇತ್ತೀಚೆಗೆ ಕಟ್ಟಿಸಿರುವ ಮನೆಗಳನ್ನು ಸರ್ವೆ ಮಾಡಿದರೆ ಆಗ ಗೊತ್ತಾಗುತ್ತದೆ ಎಷ್ಟು ಮನೆಗಳವರು ಮಳೆನೀರಿನ ತೊಟ್ಟಿ ಕಟ್ಟಿಸಿದ್ದಾರೆ ಎಂಬುದಾಗಿ. ನಗರ ಪ್ರದೇಶದಲ್ಲಿ ವಾಸಿಸುವ ಮಂದಿಗೆ ಕೊಳವೆಬಾವಿ ಕೊರೆಯಲು ಆಸ್ಪದ ಕೊಡಬಾರದು. ಈ ವಿಷಯವಾಗಿ ಸಂಬಂಧಪಟ್ಟವರು ತುರ್ತು ಕ್ರಮ ಕೈಗೊಳ್ಳಬೇಕು.
ಈ ವರ್ಷ ಬಿಸಿಲಿನ ಕಾವು ದಿನೇ ದಿನೇ ಏರುತ್ತಿದೆ. ದೊಡ್ದದೊಡ್ದ ಮರಗಳು ಕೂಡ ಬಿಸಿಲಿಗೆ ಬಸವಳಿಯುವುದನ್ನು ಕಾಣುತ್ತೇವೆ. ದಾಸವಾಳ, ಚಿಕ್ಕು, ಪೇರಳೆ ಮರಗಳಿಗೆ ನಿಜಕ್ಕೂ ನೀರಿನ ಅವಶ್ಯ ಬೀಳುವುದಿಲ್ಲ. ಈ ಸಲ ಅವುಗಳು ಕೂಡ ನೀರು ಕೇಳುತ್ತಿವೆ. ಅಂತರ್ಜಲ ಯಾವ ಮಟ್ಟಕ್ಕೆ ಮುಟ್ಟಿದೆ ಎಂಬುದಾಗಿ ಅದರಿಂದಲೇ ಮನಗಾಣಬಹುದು. ಮಾನವ ಇನ್ನಾದರೂ ಎಚ್ಚರಗೊಳ್ಳದಿದ್ದರೆ ಮುಂದೆ ನೀರಿಗಾಗಿ ಪರಿತಪಿಸುವ ದಿನ ದೂರವಿಲ್ಲ.
ಕೊಳವೆ ಬಾವಿಗಳಿಗೆ ಬೇಕು ಕಡಿವಾಣ
ಸೆಪ್ಟೆಂಬರ್ 17, 2013 rukminimala ಮೂಲಕ
ಪಿ. ಸಾಯಿನಾಥರ ಪುಸ್ತಕ Everybody loves a good draught ಈಗ ಜಿ.ಎನ್ ಮೋಹನ್ ಕನ್ನಡಿಸಿದ್ದು ಈ ವಿಚಾರವನ್ನು (ಅತ್ಯಂತ ಆಳದ ಕೊಳವೆ ಬಾವಿಯ ಕೊನೆ ಮುಟ್ಟುವಷ್ಟೂ) ತಳಸ್ಪರ್ಷಿಯಾಗಿ ಚರ್ಚಿಸಿದೆ. ಮೊನ್ನೆ ಆದಿದ್ಯವಾರದ ಉದಯವಾಣಿ ಪುರವಣಿಯಲ್ಲಿ ಅದರ ಒಂದು ತುಣುಕನ್ನುಪ್ರಕಟಿಸಿರುವುದನ್ನೂ ಗಮನಿಸಬಹುದು. ಮತ್ತೆ ಮುನ್ನೂರು ನಾನೂರಡಿ ಮೀರಿದ ಆಳದ ಬಾವಿಗಳ ನೀರಿನ ಜೀವಕ್ಕೆ ಹಾನಿಕಾರಕ ಗುಣಗಳ ಬಗ್ಗೆ ಪ್ರೊ| ರವೀಂದ್ರನಾಥ ಶಾನುಭಾಗರು ಆದಿಯಾಗಿ ಹಲವು ಪರಿಣತರು ಹೇಳಿದ್ದನ್ನೂ ಎಲ್ಲಾ ತೂತುಬಾವಿ ಬಳಕೆದಾರರು ಗಮನಿಸಲೇಬೇಕು.
namma maatu keluvavaru yariddaare? nirigenu madam eshtu bekadaru ide , navanthu 1000ft korediddeve,bereyavaranthalla ennuttane obba builder!!!!!!!!!!!!!!!!!!!!!
ಹೌದು , ನಮ್ಮ ಸುತ್ತಮುತ್ತಲ ಎಷ್ಟೋ ಕೊಳವೆಬಾವಿ ಗಳು ಇನ್ನು ನೀರಿಲ್ಲದೇ
ಒಣಗಿ ಅದರ ಪಕ್ಕವೇ ಮತ್ತೊಂದು ಎದ್ದಿರುವುದು ಸಾಮಾನ್ಯವಾಗಿದೆ
ಆಳುವವರಿಗೆ ಅಳಲು ಕೇಳದು , ಸಾಮಾನ್ಯರಿಗೆ ಸಮಸ್ಯೆ ಅರ್ಥವಾಗದು
ನಿಮ್ಮ ಮನೆಗೆ ಕೊಳವೆ ಬಾವಿ ಕೊರೆಸಿಲ್ಲವೇ? 🙂
ಇದು ತಮಾಷೆ ಮಾಡುವಂಥ ವಿಚಾರವಲ್ಲ ವಿಕಾಸ್. ನಾವು ಕೊಳವೆಬಾವಿ ಕೊರೆಸಿಲ್ಲ. ಮಳೆನೀರಿನ ಟಾಂಕಿ ಮಾಡಿಕೊಂಡಿದ್ದೇವೆ.