ಕಾನೂನಿನಲ್ಲಿ ನಮ್ಮ ರಕ್ಷಣೆಗಾಗಿ ಹತ್ಯೆ ಮಾಡಲು ಅವಕಾಶವಿದೆ. ಅದರ ಸದುಪಯೋಗಪಡಿಸಿಕೊಂಡ ನಾನು ಹತ್ಯೆ ಮಾಡಲೇಬೇಕಾದ ಪ್ರಸಂಗವನ್ನಿಲ್ಲಿ ಹೇಳುತ್ತೇನೆ. ಎಷ್ಟು ಕಾಟ ಕೊಟ್ಟ ಅಂದರೆ ಹತ್ಯೆ ಮಾಡದೆ ಬೇರೆ ದಾರಿಯೇ ಇರಲಿಲ್ಲ.
ಏನು ಹೇಳುತ್ತೀರಿ ನನ್ನ ಪಡಿಪಾಟಲಿಗೆ. ಮನೆಯಿಂದ ಹೊರಗೆ ಹೋದಾಗಲಷ್ಟೆ ನಾನು ನೆಮ್ಮದಿಯಿಂದ ಇರುತ್ತಿದ್ದುದು. ಮನೆಗೆ ಬರಲೇ ಬಹಳ ಬೇಜಾರು ಅನಿಸುತ್ತಿತ್ತು. ಹಗಲೆಂದಿಲ್ಲ ರಾತ್ರಿಯೆಂದಿಲ್ಲ. ಹೊತ್ತುಗೊತ್ತಿನ ಪರಿವೆಯೇ ಇಲ್ಲ. ಎಷ್ಟು ತೊಂದರೆ ಅನುಭವಿಸಿದೆ ಅಂದರೆ ಅದಕ್ಕೆ ಲೆಕ್ಕವೇ ಇಲ್ಲ. ಒಂದು ದಿನ ಕೂಡ ನಾನು ಮನೆಯಲ್ಲಿ ನೆಮ್ಮದಿಯಿಂದ ಕೂತದ್ದಿಲ್ಲ, ನಿದ್ರೆ ಮಾಡಿದ್ದಿಲ್ಲ. ಕುಳಿತು ಪತ್ರಿಕೆ ಓದಲು ಬಿಡಲಿಲ್ಲವೆಂದರೆ ನಂಬಬೇಕು. ಎಷ್ಟು ಕಾಡಿ ಬೇಡಿದರೂ ಕೇಳಲಿಲ್ಲ. ನನ್ನ ಬಳಿ ಬರಬೇಡ, ತೊಂದರೆ ಕೊಡಬೇಡ. ಬಳಿ ಬಂದರೆ ಒಂದಲ್ಲ ಒಂದು ದಿನ ನಿನಗೇ ಅದರಿಂದ ತೊಂದರೆ ತಪ್ಪಿದ್ದಲ್ಲ ಎಂದು ಪ್ರತೀದಿನ ಹೇಳುತ್ತ ಎಚ್ಚರಿಕೆ ಕೊಡುತ್ತಲೇ ಇದ್ದೆ. ನನ್ನ ಮಾತಿಗೆ ಕ್ಯಾರೇ ಅನ್ನಲಿಲ್ಲ. ಆದರೂ ನಾನು ಸುಮ್ಮನಿದ್ದೆ. ಬದುಕಿಕೊಳ್ಳಲಿ ಎಂದು.
ಹೀಗೆ ಒಂದು ದಿನ ಬೆಳಗ್ಗೆ ನಾನು ಪತ್ರಿಕೆ ಹಿಡಿದು ಕೂತಿದ್ದೆ ಅಷ್ಟೆ. ಇನ್ನೂ ಓದಲು ತೊಡಗಿರಲಿಲ್ಲ. ನನ್ನ ಬಳಿ ಬಂದು ರಾಗವಾಗಿ ಹಾಡಲು ತೊಡಗಿ, ಹಣೆ ಎಲ್ಲೆಂದರಲ್ಲಿ ಸವರಲು ತೊಡಗಿದ್ದೇ ತಡ ಎಲ್ಲಿಲ್ಲದ ಸಿಟ್ಟು ಆವರಿಸಿತು. ಪತ್ರಿಕೆ ಓದುವಾಗ ತೊಂದರೆ ಮಾಡಿದರೆ ನನಗೆ ಬಲು ಕೋಪ ಬರುತ್ತದೆ. ಆದರೂ ಸಿಟ್ಟು ಹತೋಟಿಯಲ್ಲಿಟ್ಟುಕೊಂಡೇ ಬೇಡ, ದೂರ ಹೋಗು ಎಂದು ಒಳ್ಳೆಯ ಮಾತಿನಲ್ಲಿ ಹೇಳಿ ನೋಡಿದೆ. ಕೇಳಲಿಲ್ಲ. ತೊಂದರೆ ಮುಂದುವರಿದೇ ಇತ್ತು. ಅದೂ ಬೆಳಗಿನ ಹೊತ್ತು. ಹೊತ್ತು ಗೊತ್ತು ಇಲ್ಲದೆ ಕಾಟ ಕೊಡುವಾಗ ತಡೆದುಕೊಂಡಿರಲು ಹೇಗೆ ಸಾಧ್ಯ? ಇಷ್ಟು ದಿನ ನನ್ನ ಸತಾಯಿಸಿದ್ದು ಮರೆಯುವಂತಿಲ್ಲವಲ್ಲ. ಎಷ್ಟೂ ಅಂತ ಸಹಿಸಲು ಸಾಧ್ಯ? ದೂರ್ವಾಸಮುನಿಯ ಅಪರಾವತಾರ ಎತ್ತಿದೆ. ಒಂದೇ ಏಟು ಅಷ್ಟೆ ನಾನು ಕೊಟ್ಟದ್ದು. ಅಲ್ಲಿಗೇ ಕಥೆ ಮುಗಿದೇ ಹೋಯಿತು. ಹತ್ಯೆ ನಡೆದೇ ಹೋಗಿತ್ತು. ಸಿಟ್ಟಿನ ಕೈಗೆ ಬುದ್ಧಿಕೊಟ್ಟರೆ ಇನ್ನೇನು ಆಗುತ್ತೆ ಮತ್ತೆ.
ಈಗಲೂ ಅಷ್ಟೆ. ನನ್ನ ಬಳಿ ಬಂದಾಗ ಮೊದಲು ಎಚ್ಚರ ಹೇಳುತ್ತೇನೆ. `ಸೊಳ್ಳೆ ಸಂತಾನಗಳೇ ನನ್ನ ಬಳಿ ಬಂದಿರೋ, ನನ್ನ ಮೈ ಮುಟ್ಟಿದಿರೋ ಅಲ್ಲಿಗೆ ನಿಮ್ಮ ಆಯುಷ್ಯ ಮುಗಿದಂತೆಯೇ’ ಎಂದು. ಆದರೂ ನನ್ನ ಮಾತು ಕೇಳದೆ ಹೋದರೆ ಮತ್ತೆ ಅಲ್ಲಿ ನಡೆಯುವುದು ಕಗ್ಗೊಲೆಯೇ.
ಆಗಸ್ಟ್ ೧೫ರ ಸಖಿ ಪಾಕ್ಷಿಕದಲ್ಲಿ ಪ್ರಕಟಿತ ಪುಟ್ಟಕಥೆ
Ha ha ha Mala, neevu hathye bagge baryodandrenu antha gadabadisi odi nantara nakku hagurade. Chennagide
ಧನ್ಯವಾದಗಳು ವೇದಾ