ಬ್ಲಾಗ್ ತೆರೆದ ಉದ್ದೇಶ
ಜನವರಿ 8, 2013 rukminimala ಮೂಲಕ
ಜನವರಿ ೭ ೨೦೧೩ ಇಂದಿಗೆ ಮಾಲಾಲಹರಿ ಬ್ಲಾಗ್ ತೆರೆದು ೪ ವರ್ಷಗಳು. ಅಲ್ಲೊಂದು ಇಲ್ಲೊಂದು ಎಂದು ಲೇಖನ ಬರೆಯುವ ಚಟ ಸುಮಾರು ೨೫ ವರ್ಷಗಳಿಂದ ಪ್ರಾರಂಭವಾಗಿರುವುದು. ಬರೆದರೆ ಆಯಿತೆ? ಅದರ ಪ್ರದರ್ಶನವಾಗಬೇಡವೇ? ಪತ್ರಿಕೆಗೆ ಕಳಿಸಿದರೆ ಮುಗಿಯಿತೆ? ಅದು ಪ್ರಕಟವಾಗುತ್ತದೋ ಇಲ್ಲವೋ ಎಂಬ ಕಾಯುವಿಕೆ. ಪ್ರಕಟಣೆಗೆ ಅರ್ಹವೇ ಇಲ್ಲವೆ ಅದರ ಕಥೆ ಏನಾಯಿತು ಎಂದು ಹೆಚ್ಚಿನ ಸಂದರ್ಭಗಳಲ್ಲೂ ನಮಗೆ ತಿಳಿಯುವುದೇ ಇಲ್ಲ. ಪ್ರಾರಂಭದಲ್ಲಿ ಕೆಲವು ಪತ್ರಿಕೆಗಳವರು ಲೇಖನ ಕಳಿಸಿದರೆ ಪ್ರಕಟಣೆಗೆ ಸ್ವೀಕಾರವೋ ಇಲ್ಲವೋ ಎಂದು ತಿಳಿಸುವ ಕೃಪೆ ಮಾಡುತ್ತಿದ್ದರು. ಇನ್ನು ಕೆಲವು ಪತ್ರಿಕೆಗಳವರು ಆ ಸೌಜನ್ಯವನ್ನು ನಮಗೆ ದಯಪಾಲಿಸುತ್ತಿರಲಿಲ್ಲ. ಅಕಸ್ಮಾತ್ ಲೇಖನ ಪತ್ರಿಕೆಯಲ್ಲಿ ಪ್ರಕಟಗೊಂಡರೆ ಅದರ ಒಂದು ಪ್ರತಿ ತಪ್ಪದೆ ನಮಗೆ ಬರುತ್ತಿತ್ತು ಆಗ. ನಿಜಕ್ಕೂ ಆಯಾಯ ಪತ್ರಿಕೆಯವರು ಅದರಲ್ಲಿ ಬರೆದ ಲೇಖಕರಿಗೆ ಒಂದು ಪ್ರತಿ ಪತ್ರಿಕೆ ಕಳುಹಿಸಿ ಕೊಡಬೇಕಾದದ್ದು ಆ ಪತ್ರಿಕಾ ಧರ್ಮ. ಇಂಥ ಪತ್ರಿಕಾ ಧರ್ಮ ಇತ್ತೀಚೆಗೆ ಮಾಯವಾಗಿವೆ. ಪ್ರಸಿದ್ಧಿಪಟ್ಟ ಲೇಖಕರಿಗೆ ಕಳಿಸುತ್ತಾರೋ ನಾನರಿಯೆ. ಆದರೆ ನಮ್ಮಂಥವರು ಕಳುಹಿಸಿದ ಅಲ್ಲೊಂದು ಇಲ್ಲೊಂದು ಬರಹ ಪ್ರಕಟವಾಗುವವರಿಗೆ ಈ ಸೌಲಭ್ಯ ಮರೀಚಿಕೆಯೇ ಸರಿ.
ಹಿಂದೆಲ್ಲ ಒಂದು ಪತ್ರಿಕೆಗೆ ಲೇಖನ ಕಳಿಸಿದರೆ ಅದು ಅಚ್ಚಾಗುತ್ತದೋ ಇಲ್ಲವೋ ಎಂದು ತಿಳಿಯಲು ವರ್ಷಾನುಗಟ್ಟಲೆ ಚಾತಕಪಕ್ಷಿಯಂತೆ ಕಾಯಬೇಕಾಗುತ್ತಿತ್ತು. ಈಗಲೂ ಕೆಲವೊಮ್ಮೆ ಇಂಥ ಪರಿಸ್ಥಿತಿ ಬರುವುದೂ ಉಂಟು. ನಿಜಕ್ಕೂ ಈಗ ಗಣಕ ಮತ್ತು ಅದಕ್ಕೆ ಅಂತರ್ಜಾಲ ವ್ಯವಸ್ಥೆ ಬಂದ ಬಳಿಕ ಲೇಖನ ಕಳಿಸುವುದು ಬಹಳ ಸುಲಭ. ಪತ್ರಿಕೆಯವರಿಗೂ ಕೆಲಸ ಕಡಿಮೆ. ಈಗ ಮಿಂಚಂಚೆ ಕಾಲದಲ್ಲೂ ನಮ್ಮ ಲೇಖನ ತಲಪಿದ್ದಕ್ಕೂ ಕೆಲವು ಪತ್ರಿಕೆಗಳವರಿಂದ ಪ್ರತ್ಯುತ್ತರ ಬರುವುದಿಲ್ಲ. ನಾವು ಪದೇ ಪದೇ ಮಿಂಚಂಚೆ ಕಳಿಸಿ ಕೇಳಿದರೂ ಕೂಡ ಉತ್ತರ ನಾಸ್ತಿ. ಆಗ ನಿಜಕ್ಕೂ ರೋಸಿ ಹೋಗಿ ಪತ್ರಿಕೆಗೆ ಲೇಖನ ಕಳುಹಿಸುವುದೇ ಬೇಡ ಎಂಬ ವೈರಾಗ್ಯಭಾವ ಮಿಂಚಿ ಮರೆಯಾಗುತ್ತದೆ. ಅಂಥ ಒಂದು ಸಂದರ್ಭದಲ್ಲಿ ಯಾವುದೋ ಪತ್ರಿಕೆಯಲ್ಲಿ ಬ್ಲಾಗ್ ಲೋಕದ ಬಗ್ಗೆ ವಿವರ ಬಂದದ್ದು ನೋಡಿ ನಾನೂ ಏಕೆ ಬ್ಲಾಗ್ ತೆರೆಯಬಾರದು ಎಂದು ತೋಚಿತು. ಅನಿಸಿಕೆ ಬಂದದ್ದೇ ಗಣಕದೆದುರು ಕೂತು ಪತ್ರಿಕೆಯಲ್ಲಿ ಬ್ಲಾಗ್ ತೆರೆಯುವ ವಿಧಾನದ ವಿವರ ತಿಳಿಸಿದಂತೆಯೇ ಕಾರ್ಯಪ್ರವೃತ್ತಳಾದೆ. ವರ್ಡ್ಪ್ರೆಸ್.ಕಾಮ್ ನಲ್ಲಿ ಮಾಲಾಲಹರಿ ಎಂಬ ಹೆಸರು ನಮೂದಿಸಿ ಬ್ಲಾಗ್ ತೆರೆದೇಬಿಟ್ಟೆ. ಒಂದು ಪತ್ರಿಕೆ ಸುರುಮಾಡಿದಷ್ಟೇ ಸಂತಸಪಟ್ಟೆ! ಆಹಾ ಇಲ್ಲಿ ಈ ಬ್ಲಾಗಿಗೆ ನಾನೇ ಒಡತಿ, ನಾನೇ ಬರಹಗಾರ, ನಾನೇ ಓದುಗ! ಮುಂದಕ್ಕೆ ಅದಕ್ಕೆ ಲೇಖನ ಹೇಗೆ ತುಂಬಿಸಬೇಕು, ಚಿತ್ರ ಹಾಕುವ ವಿಧಾನ, ಯೂನಿಕೋಡ್ಗೆ ಲಿಪಿಯನ್ನು ಬದಲಾಯಿಸುವ ವಿಧಾನ ಇತ್ಯಾದಿ ಯಾವ ವ್ಯವಹಾರವೂ ನನಗೆ ಗೊತ್ತಾಗದೆ ಸುಮ್ಮನಾದೆ. ನರಿಯೊಂದು ದ್ರಾಕ್ಷಿ ತೋಟಕ್ಕೆ ನುಗ್ಗಿ ದ್ರಾಕ್ಷಿ ಎಟುಕಲಾರದಿದ್ದಾಗ ದ್ರಾಕ್ಷಿ ಹುಳಿ ಎಂದು ಸಮಾಧಾನ ಹೊಂದಿದಂತೆ ನಾನೂ ಕೂಡ ನನಗೆ ಗಣಕ ಜ್ಞಾನ ಅಷ್ಟಕ್ಕಷ್ಟೆ ನನಗೆ ಎಟುಕುವ ವಿಚಾರವಲ್ಲ ಇದು ಎಂದು ಕೈಬಿಟ್ಟೆ! ಮತ್ತು ಆ ವಿಚಾರ ಮರೆತು ಸುಮ್ಮನಾದೆ.
ಹೀಗಿರಲು ಒಮ್ಮೆ ಅಕ್ಷರಿಯ ಅಣ್ಣ ಅಭಯಸಿಂಹ ಇಲ್ಲಿಗೆ ಬಂದಾಗ `ಅಭಯಣ್ಣ ಅಭಯಣ್ಣ ಅಮ್ಮ ಕೂಡ ಒಂದು ಬ್ಲಾಗ್ ತೆರೆದಿದ್ದಾಳೆ’ ಎಂಬ ವರದಿ ಒಪ್ಪಿಸಿದಳು. ಚಿಕ್ಕಮ್ಮ, ನೀವು ಲೇಖನ ನನಗೆ ಕಳಿಸಿ ನಾನು ಅದನ್ನು ಬ್ಲಾಗಿಗೆ ಹಾಕುತ್ತೇನೆ ಬ್ಲಾಗಿನ ಗುಪ್ತನಾಮ ಕೊಡಿ ಎಂದಾಗ ಅದರ ವಿವರಗಳನ್ನು ಕೊಟ್ಟೆ. ಮುಂದಕ್ಕೆ ಅವನು ಒಂದು ವರ್ಷ ಮಾಲಾಲಹರಿ ಬ್ಲಾಗಿನ ನಿರ್ಮಾಪಕನಾಗಿದ್ದ. ಬಲು ಅಪರೂಪಕ್ಕೆ ನಾನು ಲೇಖನ ಬರೆದಾಗಲೆಲ್ಲ ಅದನ್ನು ಅವನಿಗೆ ಮಿಂಚಂಚೆಯಲ್ಲಿ ಕಳುಹಿಸುತ್ತಿದ್ದೆ. ಅವನೇ ಅದನ್ನು ಅಚ್ಚುಕಟ್ಟಾಗಿ ಬ್ಲಾಗಿಗೇರಿಸುತ್ತಿದ್ದ. ಅವನಿಗೆಧನ್ಯವಾದಗಳು.
ಹೀಗಿರಲಾಗಿ ಮಗನಿಗೆ ಪದೇಪದೇ ತೊಂದರೆ ಕೊಡಲು ಈ ಚಿಕ್ಕಮ್ಮನ ಮನ ಹಿಂದೇಟು ಹಾಕಿತು. ಇದಕ್ಕೆ ಪರಿಹಾರ ಕಂಡುಹಿಡಿಯಲೇಬೇಕೆಂದು ಪಟ್ಟುಬಿಡದೆ ನಾನೇ ಅಂತರ್ಜಾಲ ತೆರೆದು ಅದರೆದುರು ಗಂಟೆಗಟ್ಟಲೆ ಕುಳಿತು ಗುರುಟಿ ಮತ್ತೂ ಗೊತ್ತಾಗದೇ ಇದ್ದದ್ದನ್ನು ಅಭಯಸಿಂಹನಿಂದ ಪಾಟಮಾಡಿಸಿಕೊಂಡಾಗ ಲೇಖನ ಬ್ಲಾಗಿಗೆ ಏರಿಸುವ ಸಿಸೇಮೆ ಬಾಗಿಲು ತೆರೆ ಮಂತ್ರ ಕರಗತವಾಯಿತು. ಮುಂದೆ ಮಂತ್ರ ಹೇಳುವುದು ಬಾಗಿಲು ತೆರೆದಾಗ ಲೇಖನ ಒಳಗೆ ಕಳುಹಿಸುವುದು ಸರಾಗವಾಯಿತು. ಮುಖ್ಯವಾಗಿ ಈ ಬ್ಲಾಗ್ ತೆರೆದ ಉದ್ದೇಶ ಇಷ್ಟೆ: ಏನೇ ಬರೆದರೂ ಪತ್ರಿಕೆಯವರ ಮರ್ಜಿ ಕಾಯಬೇಕಿಲ್ಲ, ಲೇಖನ ಕಳಿಸಿದರೆ ಅದರ ತಲೆಬಾಲ ಕತ್ತರಿಸಿ ಅವರಿಗೆ ಬೇಕಾದಂತೆ ತಿರುಚಿ ವಿರೂಪವಾಗುವ ಭಯವಿಲ್ಲ. ನಮ್ಮ ಬರಹ ಹಾಗೆ ವಿರೂಪವಾಗುವುದನ್ನು ನೋಡುವಾಗ ಸಹಿಸಲಾರದ ಸಂಕಟ. ಏನೂ ಮಾತಾಡುವಂತಿಲ್ಲ. ಈಗ ಆ ಯಾವ ಭಯವಿಲ್ಲದೆ ಏನೇ ಬರೆದರೂ ಬ್ಲಾಗಿಗೆ ಏರಿಸಿ ತೃಪ್ತಿ ಹೊಂದಲು ಸಾಧ್ಯವಾಗಿದೆ. ಹೆತ್ತವರಿಗೆ ಹೆಗ್ಗಣ ಮುದ್ದು ತಾನೆ. ನಾವು ಏನೇ ಬರೆದರೂ ಬ್ಲಾಗಿಗೆ ಏರಿಸಿದರಾಯಿತು. ಯಾರು ಓದುತ್ತಾರೋ ಬಿಡುತ್ತಾರೋ ಒಟ್ಟಿನಲ್ಲಿ ಬರೆದದ್ದು ಎಲ್ಲಾದರೂ ಒಂದುಕಡೆ ಪ್ರಕಟವಾಗಬೇಕು ಎಂಬ ಮಾನವ ಸಹಜ ಆಸೆ ಈಡೇರಿದೆ! ಪತ್ರಿಕೆಗಳಲ್ಲಿ ಪ್ರಕಟವಾದ ಬರಹಗಳನ್ನು ಕೂಡ ಇಲ್ಲಿ ಹಾಕುವ ಸ್ವಾತಂತ್ರ್ಯವಿದೆ. ಹಾಗೆಯೇ ಮನೆ ಸದಸ್ಯರ ಸಂಬಂಧಿಕರ ಲೇಖನಗಳನ್ನು ಕೂಡ ಇಲ್ಲಿ ಹಾಕಬಹುದು.
ಓದುಗರ ಕೃಪಾಕಟಾಕ್ಷ ಮಾಲಾಲಹರಿ ಬ್ಲಾಗಿಗೆ ಧಾರಾಳವಾಗಿ ದೊರೆತಿದೆ. ಅಷ್ಟು ತೃಪ್ತಿ ಸಾಕು. ಈ ನಾಲ್ಕು ವರ್ಷಗಳಲ್ಲಿ ಸಾಧಾರಣ ೧೨೯ ಬರಹಗಳನ್ನು ಹಾಕಲು ಸಾಧ್ಯವಾಗಿದೆ. ಇಲ್ಲೀವರೆಗೆ ಸುಮಾರು ೨೫ ಸಾವಿರಕ್ಕೂ ಹೆಚ್ಚುಮಂದಿ ಇದರ ಕೊಂಡಿ ಕ್ಲಿಕ್ಕಿಸಿದ್ದಾರೆ. ಅವರೆಲ್ಲರಿಗೂ ಅನಂತಾನಂತ ಕೃತಜ್ಞತೆಗಳು. ಮುಂದಕ್ಕೂ ನಿಮ್ಮ ಬೆಂಬಲ ಸಹಕಾರವಿರಲಿ.
0.000000
0.000000
Like this:
Like ಲೋಡ್ ಆಗುತ್ತಿದೆ...
Related
Posted in ಲಹರಿ | 8 ಟಿಪ್ಪಣಿಗಳು
ಮಾಲಾ, ನಿಮ್ಮ ಬ್ಲಾಗಿನ ಕುರಿತ ಬರಹ ಚೆನ್ನಾಗಿದೆ. ಪಟ್ಟು ಬಿಡದ ತ್ರಿವಿಕ್ರಮನಂತೆ ಟೆಕ್ನಾಲಜಿ ಯನ್ನು ಅರ್ಥ ಮಾಡಿಕೊಂಡು ಸ್ವತಂತ್ರ ರಾಗಿ ಬ್ಲಾಗಿಸುತ್ತಿದ್ದೀರಿ. ನಥಿಂಗ್ ಈಸ್ ಇಂಪಾಸಿಬಲ್, ಆಲ್ವಾ? perseverance ಮುಖ್ಯ ಅಷ್ಟೇ.
ಹೌದು. ಅಸಾಧ್ಯವಾದುದು ಯಾವುದೂ ಇಲ್ಲ ಎಂಬ ಮಂತ್ರ ಆಗಾಗ ಜಪಿಸುತ್ತ ಇರಬೇಕು!
Mala Abhinandanegalu. Heege bareyuttiri .
Shuba haraikegalondige
Veda
ಶುಭಾಶಯಗಳು
maalakkaa.. nimma blaagina avasthe, vyavasthe chennaagi moodi bandide..
shubhaashayagalu..
೪ ವರ್ಷಗಳ ಭರ್ಜರಿ ಬ್ಯಾಟಿಂಗ್.. !
ಶುಭಾಶಯಗಳು.. ಬರೆಯುತ್ತಿರಿ…
ಪ್ರತಿಕ್ರಿಯಿಸಿದ ಬೆಂಬಲಕೊಟ್ಟ ಎಲ್ಲರಿಗೂ ಧನ್ಯವಾದಗಳು.
ದ್ರಾಕ್ಷಿ ತೋಟದ ನರಿ ಹಾಗು ನಿಮ್ಮ ಗಣಕ ಜ್ಞಾನ ಅದ್ಬುತ