ನೂರು ಬೈ ಎಂಬತ್ತು ಅಡಿ ಜಾಗದಲ್ಲಿ ಒಂದು ದೊಡ್ಡ ಬಂಗಲೆ. ಅದರಲ್ಲಿ ೪-೫ ಕೋಣೆಗಳು. ವಾಸವಿರುವವರು ಕೇವಲ ೩-೪ ಜನರು. ಅಕ್ಕಪಕ್ಕದಲ್ಲೂ ಅಂಥದೇ ಮನೆಗಳು ಹಾಗೂ ಜನರು. ಮನೆ ಸುತ್ತ ದೊಡ್ಡ ದೊಡ್ಡ ಆವರಣ ಗೋಡೆ. ಅಕ್ಕಪಕ್ಕದವರನ್ನು ಒಬ್ಬರಿಗೊಬ್ಬರು ನೋಡಲಾಗುವುದಿಲ್ಲ. ತಿಂಗಳುಗಟ್ಟಲೆ ಒಬ್ಬರಿಗೊಬ್ಬರು ನೋಡದೆ ಇರುವ ಸಾಧ್ಯತೆ ಬರಬಹುದು. ಅಕಸ್ಮಾತ್ ಮುಖ ಕಂಡರೆ ಒಂದು ಮುಗುಳುನಗೆ ಬೀರಬಹುದೋ ಏನೋ! ಒಬ್ಬರ ಮನೆಯಲ್ಲಿ ಏನಾದರೂ ಆದರೆ ಇನ್ನೊಬ್ಬರು ವಿಚಾರಿಸುವಂತಿಲ್ಲ. ರಾತ್ರೆ ಯಾರಿಗಾದರೂ ಅಸೌಖ್ಯವಾಗಿ ಆಸ್ಪತ್ರೆ ಸೇರಿದರೂ ಪಕ್ಕದಮನೆಗೆ ಗೊತ್ತಾಗುವುದಿಲ್ಲ. ಒಂದುವೇಳೆ ಗೊತ್ತಾದರೂ ಏನೆಂದು ಕೇಳಿಕೊಳ್ಳುವ ಕ್ರಮ ಇಲ್ಲ. ನೀವು ಮನೆಯಲ್ಲಿ ಒಬ್ಬರೇ ಇದ್ದರೂ ಯಾರೂ ವಿಚಾರಿಸುವವರಿಲ್ಲ. ಯಂತ್ರದ ಹಾಗೆ ಅಲ್ಲಿಯವರ ಜೀವನ.
ಇಪ್ಪತ್ತು ಬೈ ನಲವತ್ತು ಅಡಿ ಸುತ್ತಳತೆಯಲ್ಲಿ ಅಕ್ಕಪಕ್ಕ ಪುಟ್ಟ ಪುಟ್ಟ ಮನೆಗಳು. ಅವುಗಳಲ್ಲಿ ಒಂದೊ ಎರಡೊ ಕೋಣೆಗಳು. ತಗ್ಗಿನ ಆವರಣ ಗೋಡೆ. ಒಬ್ಬರಿಗೊಬ್ಬರು ಮನೆ ಆವರಣ ಗೋಡೆಯ ಬಳಿ ನಿಂತು ಮುಖ ನೋಡುತ್ತ ಮಾತಾಡಬಹುದು. ಕಷ್ಟ ಸುಖ ವಿಚಾರಿಸಬಹುದು. ಒಂದು ಮನೆಯಲ್ಲಿ ಸೌಟು ಬಿದ್ದರೂ `ಏನಾಯಿತು ಸುಮ’ ಎಂದು ಕೇಳುತ್ತ ಓಡಿ ಬರುವ ಮಂದಿ. ರಸ್ತೆಯಲ್ಲಿ ತಳ್ಳುಗಾಡಿಯಲ್ಲಿ ತರಕಾರಿ ಮಾರುತ್ತ ಬಂದಾಗ ಎದುರು ಮನೆ ಪಂಕಜ ಚೌಕಾಸಿ ವ್ಯಾಪಾರ ಮಾಡಿ, ಪಕ್ಕದಮನೆಚಿi ಸುಮಳನ್ನು ಕರೆದು, `ಸುಮ ತರಕಾರಿ ಬೇಕಾ? ನಾನು ತಗೊಂಡೆ. ಅವರೆಕಾಳು ಕಿಲೋವಿಗೆ ೬ ರೂ. ಚೆನ್ನಾಗಿದೆ. ನೀವು ಒಂದು ಕಿಲೊ ತಗೊಳ್ಳಿ’ ಎಂದು ಕರೆಯುವರು. ಮತ್ತೆ ಅಕ್ಕಪಕ್ಕದವರೆಲ್ಲ ಸೇರಿ ಸಂಸಾರದ ಸುಖ ದುಃಖ ಮಾತಾಡುತ್ತ ಹರಟೆ ಹೊಡೆಯುತ್ತ ಅವರೆಕಾಳನ್ನು ನಿಮಿಷದೊಳಗೆ ಸುಲಿದು, ಅದರಿಂದ ಅಡುಗೆ ಮಾಡುವ ವಿಧಾನ ಚರ್ಚಿಸಿಯಾದಮೇಲೆ ಅವರೆಕಾಳಿನ ಸಮೇತ ಅವರವರ ಮನೆಗೆ ತೆರಳುವರು. ಸುಮಳ ಪತಿ ಊರಿಗೆ ಹೋಗಿದ್ದರೆ, `ಸುಮ, ಒಬ್ಬಳಿಗೆ ಅಡುಗೆ ಮಾಡಿಕೊಳ್ಳಬೇಡಿ. ನೋಡಿ ಅವರೆಕಾಳು ಸಾರು ತಂದಿದ್ದೀನಿ’ ಎಂದು ಆತ್ಮೀಯತೆಯಿಂದ ಕೊಟ್ಟು ಹೋಗುವರು. ಅಲ್ಲದೆ ನಿಮ್ಮ ಪತ್ನಿ ಅಥವಾ ತಾಯಿ ಊರಿಗೆ ಹೋಗಿದ್ದರೆ ನಿಮಗೆ ಬೆಳಗ್ಗೆ ಎದುರು ಮನೆಯಿಂದ ತಿಂಡಿ, ಮಧ್ಯಾಹ್ನ ಪಕ್ಕದ ಮನೆಯಿಂದ ಊಟ ಕೊಟ್ಟು ನಿಮ್ಮ ಯೋಗಕ್ಷೇಮ ವಿಚಾರಿಸಿ ರಾಜೋಪಚಾರ ಮಾಡುವರು. ನಿತ್ಯ ಕೂಡ ನಿಮಗೆ ಅಂಥ ಊಟ ಉಪಚಾರ ಸಿಗದು. ನೀವೆಲ್ಲ ಮನೆ ಬಿಟ್ಟು ಪ್ರವಾಸ ಹೋದರೆ ನಿಮ್ಮ ಮನೆಯ ಮೇಲೆ ಸದಾ ಕಣ್ಣಿಟ್ಟು, ಹೋಗುವವರು ಬರುವವರಮೇಲೆ ಸದಾ ನಿಗಾ ಇಡೋರು. ಸಸಿಗಳಿಗೆಲ್ಲ ನೀರುಣಿಸಿ ಜತನದಿಂದ ಕಾಪಾಡುವರು. ನೀವು ಬಂದಮೇಲೆ ಎಲ್ಲ ವರದಿ ಒಪ್ಪಿಸಿದರೆ ಅವರಿಗೆ ಸಮಾಧಾನ. ಆದರೆ ಇಪ್ಪತ್ತು ಬೈ ನಲವತ್ತರಲ್ಲಿರುವವರಿಗೆ `ಅಯ್ಯೊ, ಈ ಅಕ್ಕಪಕ್ಕದವರ ಕಾಟ ವಿಪರೀತ. ನಮ್ಮ ಮನೆಯಲ್ಲಿ ನಮಗೆ ಸ್ವಲ್ಪವೂ ಸ್ವತಂತ್ರವೇ ಇಲ್ಲ. ಏನು ಮಾಡಿದರೂ ಗೊತ್ತಾಗುತ್ತದೆ. ಎಲ್ಲದಕ್ಕೂ ಬಾಯಿ ಹಾಕಿಕೊಂಡು ಬರುತ್ತಾರೆ’ ಎಂದು ಅನಿಸುತ್ತದೆ. ಅದೇ ನೂರು ಬೈ ಎಂಬತ್ತರಲ್ಲಿ ಇರುವವರಿಗೆ, `ಅಕ್ಕಪಕ್ಕ ಯಾರೂ ಮಾತಾಡಿಸುವುದೇ ಇಲ್ಲ. ಇಲ್ಲಿ ಒಳ್ಳೆ ಜೈಲಲ್ಲಿ ಇದ್ದಾಗೆ ಆಗುತ್ತದೆ. ಸುಮನಿಗ ಎಷ್ಟು ಒಳ್ಳೆಯದು’ ಎಂದು ಅನಿಸುವುದು ಸಹಜ. ಅದಕ್ಕೆ ಅಲ್ಲವೆ ಕವಿಗಳು `ಇರುವುದೆಲ್ಲವ ಬಿಟ್ಟು ಇರದುದರ ಕಡೆಗೆ ಸರಿಯುವುದೇ ಜೀವನ’ ಎಂದದ್ದು.
********
ಸ್ವಲ್ಪವೂ ಮಾತಾಡದವಳು ಎಂದು ನನಗೊಂದು ಅಪವಾದ ಚಿಕ್ಕಂದಿನಲ್ಲಿ ಇತ್ತು. ಆ ಅಪವಾದ ಈಗಲೂ ಇದೆ. `ಸ್ವಲ್ಪ’ ಮಾತ್ರ ಹೋಗಿದೆ ಎಂದು ಕಾಣುತ್ತದೆ! ಆದರೆ ನಾನು ಎಷ್ಟುಬೇಕೊ ಅಷ್ಟು ಮಾತಾಡುತ್ತೇನೆ ಎಂದೇ ನನ್ನ ಭಾವನೆ. ಉದಾಹರಣೆಗೆ ಊರಿಗೆ ಹೋಗುವಾಗ ಬಸ್ಸಲ್ಲಿ ನನ್ನ ಪಕ್ಕ ಕೂತ ಹೆಂಗಸೊಬ್ಬರು ಮಾತಾಡುವ ಚಾಳಿಯವರಾದರೆ, `ನೀವು ಮಂಗಳೂರಿಗಾ’ ಎಂದು ಪ್ರಶ್ನಿಸುತ್ತಾಳೆಂದುಕೊಳ್ಳೋಣ. ಆಗ ನಾನು, `ಅಲ್ಲ’ ಎಂದು ಉತ್ತರಿಸುತ್ತೇನೆ. ಅವರು ಕೇಳಿದ್ದಕ್ಕಷ್ಟೇ ಉತ್ತರ ಕೊಡಬೇಕು ತಾನೆ! `ಮತ್ತೆಲ್ಲಿಗೆ’ ಎಂಬ ಮರು ಪ್ರಶ್ನೆ ಬರುತ್ತದೆ. `ಪುತ್ತೂರಿಗೆ’ ಎಂಬ ಚುಟುಕು ಉತ್ತರ ನನ್ನದು. ಅಲ್ಲಿಗೆ ನಾನು ಕಿಟಕಿ ಹೊರಗೆ ನೋಡಲು ಉಪಕ್ರಮಿಸುತ್ತೇನೆ. ಆಗ ಪಕ್ಕದವರು ಇವಳಿಗೆ ಮಾತು ಇಷ್ಟವಿಲ್ಲವೇನೊ ಎಂದು ಸುಮ್ಮನಾಗುತ್ತಾರೆ. ಪಕ್ಕದಲ್ಲಿ ನನ್ನದೇ ಸ್ವಭಾವದವಳು ಕೂತಿದ್ದರೆ ಪ್ರಯಾಣದ ೬ ಗಂಟೆಯೂ ಅದಕ್ಕಿಂತ ಹೆಚ್ಚಾದರೂ ಪರಸ್ಪರ ಮಾತಿಲ್ಲದೆ ನಗುವಿಲ್ಲದೆ ಕಳೆಯುವ ತಾಕತ್ತು ನಮಗಿಬ್ಬರಿಗೂ ಇದೆ. ಅದೇ ನಮ್ಮ ಮಗಳು ನನ್ನ ಸ್ಥಾನದಲ್ಲಿದ್ದರೆ ಹೀಗೆ ಉತ್ತರಿಸಬಹುದು. `ಮಂಗಳೂರಿಗಲ್ಲ, ಪುತ್ತೂರಿಗೆ. ಅಲ್ಲಿಂದ ಇನ್ನೊಂದು ಬಸ್ ಹಿಡಿದು ನನ್ನ ಅಜ್ಜನ ಮನೆಗೆ ಹೋಗಬೇಕು. ಅಲ್ಲಿ ನನ್ನ ಅಜ್ಜಿ ಅಜ್ಜ ಮಾವ ಅತ್ತೆ ಮಕ್ಕಳು ಇದ್ದಾರೆ. ಮಂಗಳೂರಿನಲ್ಲಿ ನನ್ನ ದೊಡ್ಡಪ್ಪನ ಮನೆ ಇದೆ. ಅಲ್ಲಿಗೂ ಹೋಗಲಿದೆ. ಎರಡು ದಿನದನಂತರ’ ಎಂದು ಉತ್ತರಿಸಿ, `ನೀವು ಮೈಸೂರಿನವರಾ’ ಎಂದು ಪ್ರಶ್ನೆಗೆ ತೊಡಗಿ ಅವರಿಂದ ಉತ್ತರ, ಇವಳಿಂದ ಪುನಃ ಪ್ರಶ್ನೆಯಾಗಿ ಅದು ನಿಲ್ಲುವುದು ಬಹುಶಃ ಯಾರು ಮೊದಲು ಗಮ್ಯ ಸ್ಥಾನ ತಲಪುತ್ತಾರೊ ಆಗ ಮಾತಿಗೆ ಅನಿವಾರ್ಯವಾಗಿ ವಿರಾಮ ಬೀಳಬಹುದು.
ಕೆಲವರು ಕಲ್ಲನ್ನಾದರೂ ಮಾತಾಡಿಸಿಯಾರು ಎಂಬ ಗಾದೆ ಮಾತಿದೆಯಲ್ಲ. ಅಂಥ ಮಾತಿಗೆ ನಾನು ಅಪವಾದ ಎಂದಷ್ಟೇ ಹೇಳಬಲ್ಲೆ. ಮಾತು ಒಂದು ಕಲೆ ಹೌದು ಎಂದು ಒಪ್ಪಿಕೊಳ್ಳುತ್ತೇನೆ. ಅಂಥ ಕಲೆ ಎಲ್ಲರಿಗೂ ಒಲಿಯುವುದಿಲ್ಲ. ಆದರೆ ಅನಗತ್ಯ ಮಾತಿನಿಂದ ಮಾತಾಡುವ ಕಲೆ ಕೆಲವೊಮ್ಮೆ ಪಚೀತಿಗೆ ಈಡಾಗುವುದೂ ಉಂಟು. ಆಗ ಅಲ್ಲಿ `ಕಲೆ’ ಮಾಸದೆ ಉಳಿದುಬಿಡುವ ಅಪಾಯವೂ ಇದೆ. ಹದ್ದುಬಸ್ತು ಮೀರದೆ ಮಾತಾಡಿ `ಕಲೆ’ ಶಾಶ್ವತವಾಗಿ ಉಳಿಯದಂತೆ ಜಾಗ್ರತೆಯಾಗಿ ನಾವು ಮಾತನ್ನು ಬಳಸಿಕೊಳ್ಳಬೇಕು. ಅದಕ್ಕೇ ಅಲ್ಲವೇ `ಮಾತು ಬೆಳ್ಳಿ ಮೌನ ಬಂಗಾರ’ ಎಂಬ ಗಾದೆ ಬಂದಿರುವುದು.
ನಿಮ್ಮ ಬೆಳ್ಳಿಗೆ ೫ ನೇ ಸೆಮೆಸ್ಟರ್ ನಲ್ಲಿ ಕ್ಲಾಸ್ ನಲ್ಲಿ ಬ೦ಗಾರ ಬ೦ದದ್ದಕ್ಕೆ
ಅಭಿನ೦ದನೆಗಳು,