
ಸೀತಾಲಕ್ಷ್ಮಿ (೧೯೪೦-೨೦೧೧) ನನಗೆ ಸಂಬಂಧದಲ್ಲಿ ದೊಡ್ಡಮ್ಮ ಆಗಬೇಕು. ಆದರೆ ನಾವು ಭೇಟಿ ಆದಾಗಲೆಲ್ಲ ಒಬ್ಬರಿಗೊಬ್ಬರು ಚುಡಾಯಿಸಿಕೊಳ್ಳುತ್ತ ಒಳ್ಳೆಯ ಸ್ನೇಹಿತರಂತೆ ಇದ್ದೆವು. ಅವರೂ ನನ್ನನ್ನು ಯಾರಿಗಾದರೂ ಪರಿಚಯಿಸುವಾಗ `ನನಗೆ ಧರ್ಮಕ್ಕೆ ಇಂಥ ದೊಡ್ಡ ಮಗಳು ಸಿಕ್ಕಿದ್ದಾಳೆ’ ಎನ್ನುತ್ತಿದ್ದರು. ಆದರೆ ನಾನು ಅವರನ್ನು ದೊಡ್ಡಮ್ಮ ಎಂದು ಕರೆದದ್ದೇ ಇಲ್ಲ. ಎಲ್ಲರೂ ಅವರನ್ನು ಸೀತೆ ಎಂದೇ ಕರೆಯುತ್ತಿದ್ದುದು. ನಾನು ಹಾಗೆಯೇ ಹೇಳುತ್ತಿದ್ದುದು. ಅವರಿಗೆ ಮೂಗು ಕಟ್ಟಿಕೊಂಡಾಗ ತಮಾಷೆಗೆ ನಾನು `ಏನು ದೊಡ್ಡಮ್ಮನವರಿಗೆ ಸೀತ ಆಗಿದೆ’ ಎನ್ನುತ್ತಿದ್ದೆ. ಅದಕ್ಕವರು ಸೀತಳಿಗೆ ಯಾವಾಗಲೂ ಸೀತ ಎನ್ನುತ್ತಿದ್ದರು.
ಸುಮಾರು ಇಸವಿ ೨೦೦೦ದಿಂದ ಅವರು ಮೈಸೂರಲ್ಲಿ ವಾಸವಾಗಿದ್ದರು. ಅದಕ್ಕೂ ಮೊದಲು ಜೆಮ್ಷೆಡ್ಪುರ, ಪೂನಾ, ಬೆಂಗಳೂರು, ಪರದೇಶ ಎಂದು ಸುತ್ತಾಟದಲ್ಲಿದ್ದರು. ಮಗಳು ಗೌರಿ ಪರದೇಶದಲ್ಲಿ ನೆಲೆಸಿ, ಮಗ ಅಶೋಕ ಮೈಸೂರಲ್ಲಿ ವಾಸವಾಗಿದ್ದಾರೆ.
ಸೀತೆ ಸಂಗೀತ ಕಲಿಯಲು ಸೇರಿದ್ದರು. ಸಂಗೀತ ತರಗತಿ ನಮ್ಮ ಮನೆ ಹತ್ತಿರವೇ ಇತ್ತು. ಅಲ್ಲಿಗೆ ಬಂದವರು ಹೆಚ್ಚಾಗಿ ತರಗತಿ ಮುಗಿದಮೆಲೆ ನಮ್ಮಲ್ಲಿಗೆ ಬರುತ್ತಿದ್ದರು. ಒಂದು ಡೋಸ್ ಸಕ್ಕರೆ ಹಾಕದ ಕಾಫಿ ಕುಡಿಯುತ್ತ ನಮ್ಮ ಮಾತು ಸಾಗುತ್ತಿತ್ತು. ಕಾಫಿ ಕುಡಿಯಲು ಅರ್ಧ ಗಂಟೆ ಬೇಕಾಗುತ್ತಿತ್ತು ಅವರಿಗೆ. ಮಧ್ಯೆ ನಾನು ಕಾಫಿ ತಣ್ಣಗಾಯಿತು. ನಾನು ಬಿಸಿ ಮಾಡಿ ಕೊಟ್ಟದ್ದು ದಂಡ ಎಂದರೆ ಬಿಸಿ ಕುಡಿಯಲಾಗಲ್ಲ ತಣ್ಣಗೇ ಇಷ್ಟ ಎಂದು ನುಡಿದು, ನೋಡು ಸಕ್ಕರೆ ಹಾಕದ ಕಾಫಿ ಕುಡಿಯಲು ಸೊಸೆ ಹೇಳಿಕೊಟ್ಟದ್ದು ಎನ್ನುತ್ತಿದ್ದರು. ಮಾತಿನ ನಡುವೆ ಸಂದರ್ಭಕ್ಕೆ ತಕ್ಕಂತೆ ವಿನೋದದಿಂದ ಮಾತಾಡುವ (ಸೆನ್ಸ್ ಆಫ್ ಹ್ಯೂಮರ್) ಶೈಲಿ ಅವರಿಗೆ ಹುಟ್ಟಿನಿಂದಲೆ ಬಂದ ಬಳುವಳಿ. ಅಂತ ಮಾತನ್ನು ಕೇಳಿ ಆನಂದಿಸುವ, ಮಾತಿನ ನಡುವೆ ಹಾಗೆಯೇ ಹಾಸ್ಯ ಸೇರಿಸುವ ಚಟ ನನಗೂ ಇದೆ. ಹಾಗಾಗಿ ನಾವಿಬ್ಬರೂ ಸೇರಿದರೆ ಆ ದಿನವೇ ನಮಗೆ ದೊಡ್ಡ ಹಬ್ಬ. ಭಾರತ ಸಂಸ್ಕೃತಿ ಪ್ರತಿಷ್ಠಾನ ನಡೆಸುವ ರಾಮಾಯಣ ಮಹಾಭಾರತ ಪರೀಕ್ಷೆಯ ಉತ್ತರ ಪತ್ರಿಕೆಯ ಮೌಲ್ಯಮಾಪನ ಮಾಡಲು ಜೊತೆಯಾಗಿ ಹೋಗುತ್ತಿದ್ದೆವು. ಕೆಲವು ಮಕ್ಕಳು ಅವರ ಕಲ್ಪನಾ ಲಹರಿಯಿಂದ ಯದ್ವಾತದ್ವ ಉತ್ತರ ಬರೆಯುತ್ತಿದ್ದರು. ನಾವಿಬ್ಬರೂ ಅಂತದ್ದೇನಾದರೂ ಕಂಡು ಬಂದರೆ ಪರಸ್ಪರ ಅದನ್ನು ಹಂಚಿಕೊಂಡು ನಗುತ್ತ ಖುಷಿಯಿಂದ ಕೆಲಸ ಮುಂದುವರಿಸುತ್ತಿದ್ದೆವು.
ಸೀತೆ ಇದ್ದಲ್ಲಿ ನಗು, ಮಾತು ಇರುತ್ತಿತ್ತು. ಅವರ ಸಂಗೀತ ತರಗತಿಯಲ್ಲಿ ಕೂಡ ನಗೆ ಬಾಂಬ್ ಸಾಕಷ್ಟು ಸಿಡಿಯುತ್ತಿತ್ತಂತೆ. ಒಂದು ಉದಾಹರಣೆ: ಗುರುಗಳು ಒಮ್ಮೆ ಚಾರುಕೇಶಿ ರಾಗ ಪಾಟ ಮಾಡುತ್ತ ಇದನ್ನು ನಾಳೆ ಎಲ್ಲರೂ ಬಾಯಿಪಾಟ ಮಾಡಿ ಒಪ್ಪಿಸಬೇಕು. ಇಲ್ಲಾಂದರೆ ಪಾಟ ಮುಂದುವರಿಸಲ್ಲ ಎಂದರಂತೆ. ಆಗ ಮೌನವೇ ರಾಜ್ಯಭಾರ ಮಾಡುತ್ತಿತ್ತಂತೆ. ಕೂಡಲೇ ಸೀತೆ `ನಾಳೆ ಬರುವಾಗ ಇರುವ ಚಾರ್ ಕೇಶ ಕೂಡ ಇರೋಲ್ಲ’ ಎಂದರಂತೆ. ಒಂದುಕ್ಷಣ ಯಾರಿಗೂ ಅರ್ಥವಾಗಲಿಲ್ಲವಂತೆ. ನಿಧಾನಕ್ಕೆ ನಗೆ ಬಾಂಬ್ ಹೊಟ್ಟಿತಂತೆ. ಹಾಗೆ ಸಂದರ್ಭಕ್ಕೆ ತಕ್ಕಂತೆ ಯಾರ ಮನ ನೋಯಿಸದೆ ಹಾಸ್ಯದಿಂದ ಮಾತಾಡುವ ಕಲೆ ಅವರಿಗೆ ಜನ್ಮದತ್ತವಾಗಿ ಬಂದಿತ್ತು.
ಸೀತೆಯನ್ನು ಅವರ ನಾಲ್ಕು ಮೊಮ್ಮಕ್ಕಳು ಅಜ್ಜಿ ಎನ್ನುತ್ತಿರಲಿಲ್ಲ. ಅಣ್ಣಮ್ಮ ಎಂದು ಕರೆಯುತ್ತಿದ್ದುದು. ಅಜ್ಜಿ ಎನ್ನಬಾರದು ಎಂದಿತ್ತವರಿಗೆ. ನಮ್ಮ ಮಗಳು ಅಕ್ಷರಿ ಮಾತ್ರ ಬಾಯಿ ತುಂಬ ಮಾತಿಗೆ ಮೊದಲು ಎರಡು ಸಲ ಆಮೇಲೆ ನಾಲ್ಕು ಸಲ ಸೀತಜ್ಜಿ ಎಂದು ಸಂಬೋಧಿಸಿಯೇ ಮಾತಾಡುತ್ತಿದ್ದಳು. ಆಗ ನಾನವರಿಗೆ `ಸಾಕಾ ಅಜ್ಜಿ ಎಂದದ್ದು’ ಎನ್ನುತ್ತಿದ್ದೆ. ಅವರ ಮೊಮ್ಮಗಳು ಶರಣ್ಯಳಿಗೆ ಅಣ್ಣಮ್ಮ ಎನ್ನಬೇಡ ಅಜ್ಜಿ ಎಂದು ಕರಿ ಎಂದು ಹೇಳಿಕೊಡುತ್ತಿದ್ದೆ. ಅವಳೂ ಆಗ ದೊಡ್ಡದಾಗಿ ಅಜ್ಜಿ ಎನ್ನುತ್ತಿದ್ದಳು. ನಾನಾಗ ಅವರನ್ನು ತುಂಟನಗೆಯಿಂದ ಹೇಗೆ ಎನ್ನುತ್ತಿದ್ದೆ. ಆಗವರು ಮೊಮ್ಮಗಳಿಗೆ ಮನೆಗೆ ಬಾ ನೋಡ್ತೀನಿ ಎಂದು ತಮಾಷೆಯಿಂದಲೇ ಹೇಳುತ್ತಿದ್ದರು.
ಇಸವಿ ೨೦೧೧ರಲ್ಲಿ ಸೀತೆ ಆರೇಳು ತಿಂಗಳುಗಳ ಕಾಲ ಮಗಳ ಮನೆಯಲ್ಲಿದ್ದರು. ನವೆಂಬರದಲ್ಲಿ ಮೈಸೂರಿಗೆ ಹೊರಡಲು ನಾಲ್ಕು ದಿನ ಮೊದಲು ಏನೋ ಅನಾರೋಗ್ಯವಾಗಿ ಪರಿಕ್ಷೆಗೊಳಪಟ್ಟಾಗ ಅರ್ಬುದ ರೋಗ ವ್ಯಾಪಿಸಿದ್ದು ತಿಳಿದು ಬಂತು. ಪರದೇಶದಲ್ಲೇ ಅದಕ್ಕೆ ತುರ್ತು ಶಸ್ತ್ರಚಿಕಿತ್ಸೆಯಾಗಿ ಚೇತರಿಸಿ ಒಂದು ತಿಂಗಳ ನಂತರ ಮೈಸೂರಿಗೆ ವಾಪಾಸಾದರು. ಬೆಂಗಳೂರಲ್ಲಿ ೨ ಸಲ ಕೀಮೋಥೆರಪಿ ಚಿಕಿತ್ಸೆ ಯಶಸ್ವಿಯಾಗಿತ್ತು. ನಾನು ಅವರನ್ನು ಮಾತಾಡಿಸಲು ೩ ಸಲ ಹೋಗಿದ್ದೆ. ಏನಾದರೂ ಸಹಾಯ ಬೇಕಾದರೆ ದಾಕ್ಷಿಣ್ಯ ಮಾಡದೆ ಹೇಳಿ. ಧರ್ಮಕ್ಕೆ ಸಿಕ್ಕಿದ ಈ ಮಗಳಿದ್ದಾಳೆ ನಿಮಗೆ ಎಂದು ಹೇಳಬೇಕೆಂದು ಹೋದದ್ದು. ಆದರೆ ಪ್ರತೀಸಲ ಹೋದಾಗಲೆಲ್ಲ ಬೇರೆ ಜನ ಅವರನ್ನು ಮಾತಾಡಿಸಲು ಬಂದಿದ್ದರಿಂದ ಆ ಮಾತು ನನ್ನ ಗಂಟಲಲ್ಲೇ ಉಳಿದಿತ್ತು. ಆಗಲೂ ತಮಾಷೆಯಿಂದಲೇ ನಮ್ಮ ಮಾತುಕತೆ ನಡೆದಿತ್ತು. ನನ್ನ ಕೇಶ ಈಗಾಗಲೆ ಉದುರಲು ಪ್ರಾರಂಭಿಸಿದೆ. ಇನ್ನು ಪೂರ್ತಿ ಉದುರಿದನಂತರ ವಿಗ್ ಹಾಕಿಕೊಳ್ಳಬೇಕಷ್ಟೆ. ಅದೇ ಬಿಳಿಬಣ್ಣದ ವಿಗ್ ಆದೀತ ಎಂದಿದ್ದರು. ಈಗ ನಾನು ಹುಷಾರಾಗೆ ಇದ್ದೇನೆ. ಕೆಲವು ಸಮಯ ಹೋದಮೇಲೆ ಹೇಗೆ ಎಂದು ಹೇಳಲು ಸಾಧ್ಯವಿಲ್ಲ. ಆಮೇಲೆ ನನ್ನ ನೆರವಿಗೆ ಯಾರಾದರೂ ಬೇಕಾಗಬಹುದು. ಅದಕ್ಕಾಗಿ ಈಗಲೆ ಒಬ್ಬಳನ್ನು ನೇಮಿಸಿಕೊಳ್ಳುವುದು ಒಳ್ಳೆಯದೆಂದು ತಿರ್ಮಾನಿಸಿದ್ದೇನೆ. ಮತ್ತೆ ಬೇಕಾಗುವಾಗ ಯಾರು ಸಿಗುತ್ತಾರೆ ಎಂದಿದ್ದರು. ಆದರೆ ಅವರು ಯಾರಿಗೂ ಚಾಕರಿ ಮಾಡಲು ಆಸ್ಪದ ಕೊಡಬಾರದೆಂದಿದ್ದರೇನೋ? ೧೮-೧೨-೨೦೧೧ರಂದು ಕಬಿನಿ ಜಲಾಶಯಕ್ಕೆ ವಿಹಾರಕ್ಕೆಂದು ಕುಟುಂಬದವರೊಡನೆ ಹೋಗಿ ಬಂದು ರಾತ್ರಿ ಪರದೇಶದಲ್ಲಿರುವ ಮಗಳು ಮೊಮ್ಮಕ್ಕಳೊಡನೆ ದೂರವಾಣಿಯಲ್ಲಿ ಮಾತಾಡಿ, ಮೊಮ್ಮಗ ಸಂದೀಪನಿಗೆ ಗಣಿತ ಪಾಟ ಮಾಡಿ ರಾತ್ರಿ ಮಲಗಿದವರು ೧೯-೧೨-೨೦೧೧ ಬೆಳಗ್ಗೆ ಏಳಲೇ ಇಲ್ಲ. ನಿದ್ದೆಯಲ್ಲಿರುವಾಗಲೇ ಬೆಳಗಿನ ಝಾವ ಹೃದಯ ಸ್ಥಗಿತಗೊಂಡಿತ್ತು. ನಾವು ಕಾಣದ ಪರಲೋಕಕ್ಕೆ ಆತುರದಿಂದ ಧಾವಿಸಿದ್ದರು. ಅವರಿಗಂತೂ ಸುಖಮರಣವೇ ಲಭಿಸಿತ್ತು. ಸೀತೆ ತಮ್ಮ ದೇಹವನ್ನು ಜೆ.ಎಸ್.ಎಸ್ ಆಸ್ಪತ್ರೆಗೆ ಅರ್ಪಿಸಬೇಕೆಂದು ಮೊದಲೆ ದಾಖಲಿಸಿದಂತೆಯೇ ಅವರ ಮಕ್ಕಳು ತೀರ್ಮಾನಿಸಿ ಶರೀರವನ್ನು ಒಪ್ಪಿಸಿದ್ದರು.
೧೩-೧-೨೦೧೨ರಂದು ಸೀತೆ ಸ್ಮರಣಾರ್ಥ ಮೈಸೂರಿನ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಸಂಜೆ ೬.೩೦ಕ್ಕೆ ಒಂದು ಕಾರ್ಯಕ್ರಮ ಏರ್ಪಾಡಾಗಿತ್ತು. ಮೊದಲಿಗೆ ಅಶೋಕ ಅವರಮ್ಮನ ಬಗ್ಗೆ ಆಂಗ್ಲದಲ್ಲಿ ಕೆಲವು ನುಡಿಗಳನ್ನು ಹೇಳಿದರು. ದೇಹದಾನ ಮಾಡುವ ಬಗ್ಗೆ ಮತ್ತು ತದನಂತರ ಅಪರಕರ್ಮಗಳನ್ನು ಮಾಡದೆ ಇರುವುದು ಸರಿಯಾದ ನಿಲುವು ಹಾಗೂ ಎಷ್ಟೋ ಮಂದಿ ಶ್ರದ್ಧೆ ಇಲ್ಲದೆ ಕಾಟಾಚಾರಕ್ಕೆ ಅಪರಕ್ರಿಯೆಗಳನ್ನು ಮಾಡುತ್ತಾರೆ ಅದರಿಂದ ಯಾವ ಪ್ರಯೋಜನ ಕೂಡ ಇಲ್ಲ ಎಂಬ ವಿಷಯವಾಗಿ ಗಂಗಾಧರ ಭಟ್ಟರು, (ಸಂಸ್ಕೃತ ಉಪನ್ಯಾಸಕರು) ಮನೋಜ್ಞವಾಗಿ ಜನರಿಗೆ ಅರ್ಥವಾಗುವಂತೆ ವಿವರಿಸಿದರು. ತದನಂತರ ಒಂದು ಗಂಟೆ ಸೀತೆಯ ಗುರು ವಿದುಷಿ ಸುಕನ್ಯ ಪ್ರಾಭಾಕರ್ ಅವರಿಂದ ಗಾಯನ ನಡೆಯಿತು. ಸೀತೆಗೆ ಪ್ರಿಯವಾದ ರಾಗ ಹಾಡುಗಳನ್ನೇ ತನ್ಮಯತೆಯಿಂದ ಹಾಡಿ ತಮ್ಮ ಶಿಷ್ಯೆಗೆ ಅರ್ಪಿಸಿದರು. ಗೌರಿ ವಂದನಾರ್ಪಣೆ ಮಾಡಿದರು. (ನಾನು ಸಂಗೀತ ಆಲಿಸುತ್ತ ತಲೆ ಅಲ್ಲಾಡಿಸುತ್ತ ಕೂತಾಗ ಸೀತೆ ನನ್ನನ್ನೇ ನೋಡುವುದನ್ನು ಕಂಡು ತಲೆ ಅಲ್ಲಾಡಿಸುವುದನ್ನು ಬಿಟ್ಟೆ! ನನಗೂ ಸಂಗೀತಕ್ಕೂ ಸ್ವಲ್ಪ ದೂರ. ಯಾವುದಾದರೂ ಸಂದರ್ಭದಲ್ಲಿ ಅನಿವಾರ್ಯುವಾಗಿ ನಾನು ಸಂಗೀತ ಕಚೇರಿಗೆ ಹೋದಾಗ ಅವರು ಇವತ್ತು ಮಳೆ ಬರುತ್ತೆ ಎನ್ನುತ್ತಿದ್ದರು. ಹೌದು ಎನ್ನುತ್ತಿದ್ದೆ. ಹಾಡು ಕೇಳಲು ಖುಷಿಯೇ. ಆದರೆ ಈ ಆಲಾಪನೆ ಯಾಕಾದರೂ ಮಾಡುತ್ತಾರೋ ಎಂದು ನಾನಂದರೆ ಹೌದಪ್ಪ ನಿದ್ದೆ ಬರುತ್ತೆ ಕೇಳುತ್ತ ಕೂತರೆ ಎನ್ನುತ್ತಿದ್ದರು.)
ಪರಲೋಕದಲ್ಲಿ ತಮ್ಮ ಪ್ರೀತಿಯ ಅಣ್ಣ ನಾರ್ಣಯ್ಯ (ಜಿ.ಟಿ. ನಾರಾಯಣ ರಾವ್) ನೊಂದಿಗೆ ಹರಟೆ ಹೊಡೆಯುತ್ತ, ಸಂಗೀತ ಆಲಿಸುತ್ತ ಸೀತೆ ಸಂತಸದಿಂದ ಇರಬಹುದು. ಅಲ್ಲಿ ಕಚೇರಿ ಕೊಡಲು ಪುರಂದರದಾಸರು, ಕನಕದಾಸರು, ತ್ಯಾಗರಾಜರು, ಇತ್ಯಾದಿ ಇತ್ಯಾದಿ ಸಂಗೀತ ದಿಗ್ಗಜರು ಹಾಗೂ ಕೇಳಲು ಉತ್ತಮ ಶೋತೃವೃಂದವೇ ಇರಬಹುದು. ಡಿವಿಜಿ ಯವರು ಮಂಕುತಿಮ್ಮನ ಕಗ್ಗವನ್ನು ವಾಚಿಸಬಹುದು. ಸೀತೆ ಸದಾ ನನ್ನ ಮನದಲ್ಲಿ ಅವರ ನಗೆಯ ಮಾತುಗಳಿಂದಲೇ ಚಿರಸ್ಥಾಯಿಯಾಗಿರುತ್ತಾರೆ. ಅವರಿಗಿದೋ ನಮ್ಮೆಲ್ಲರ ನುಡಿನಮನ.
ಸೀತೆಗೆ ನುಡಿನಮನ
January 16, 2012 by rukminimala
ನಿಮ್ಮ ಸೀತೆಗೆ ನಮ್ಮದೂ ನಮನ.
ಅವರ ರೀತಿಯನ್ನು ಚೆನ್ನಾಗಿ ಬರೆದಿದ್ದೀರಿ.
ವಂದನೆಗಳು
ನನ್ನ ಬಾಲ್ಯದಲ್ಲಿ ‘ಆಚೆಮನೆ’ಗೆ [ಸೀತೆಯ ತವರ್ಮನೆ - ‘ಜ್ಯೋತಿ’ ಮನೆಗೆ ಪಕ್ಕದಲ್ಲೇ ಇದ್ದ ನನ್ನಜ್ಜನ (ಆಕೆಗೆ ದೊಡ್ಡಪ್ಪ) ಮನೆಯವರು ಬಳಸುತ್ತಿದ್ದ ರೂಢನಾಮ] ಹೋಗುವುದು ಎಂದರೆ ಎರಡು ಸಂಭ್ರಮ. ಒಂದು ಚಿಕ್ಕಜ್ಜ (ಹೋಮಿಯೋಪಥಿ ವೈದ್ಯ) ಧಾರಾಳ ಕೊಡುತ್ತಿದ್ದ ಸಿಹಿ ಗುಳಿಗೆಗಳು. ಇನ್ನೊಂದು ಇದೇ ಸೀತೆ ನನ್ನ ಉಗುರುಗಳಿಗೆ ಬಳಿಯುತ್ತಿದ್ದ ರಂಗಿನ ಕ್ಯೂಟೆಕ್ಸ್!
ಸೀತೆ ನನ್ನಪ್ಪನಿಗೆ ಆತ್ಮೀಯತೆಯಲ್ಲಿ ತಂಗಿಯಾಗಿಯೂ ಕಾಲೇಜಿನಲ್ಲಿ ಶಿಷ್ಯೆಯಾಗಿಯೂ ಸಾಕಷ್ಟು ‘ಉಪದ್ರ’ ಕೊಟ್ಟ ಕಥೆಗಳನ್ನು ಕೇಳಿದ್ದೇನೆ. ಎಸ್.ಎಸ್.ಎಲ್.ಸಿ ಕೊಡಗು ಸ್ಟೇಟ್ ಪಸ್ಟ್ ನಾರ್ಣಯ್ಯ ಬಂದಾಗ ಈ ಒಂದನೇ ಕ್ಲಾಸ್ ತಂಗಿ ಹೆಮ್ಮೆಯಿಂದ ಹೇಳಿದ್ದಳಂತೆ “ನಾನೂ ನಿನ್ನ ಹಾಗೇ ಇಲ್ಲಿವರೆಗೆ ಫೇಲ್ ಆಗಲೇ ಇಲ್ಲ.” ಕಾಲೇಜಿನಲ್ಲಿ ಇತರರಿಗೆ ಬೆಂಕಿ ತುಂಡಾಗಿ ಕಾಣುತ್ತಿದ್ದ ನಾರ್ಣಯ್ಯನ ತರಗತಿಯಲ್ಲಿ ಬೇಕುಬೇಕೆಂದೇ ಪೆನ್ಸಿಲ್ ಬೀಳಿಸಿ, ಹಾಗೆ ಹೀಗೆ ಈ ಸೀತೆ ಕೊಟ್ಟ ತಂಟೆ ಹಲವಂತೆ.
ಸೀತೆ ಕಾಲೇಜಿನಲ್ಲಿದ್ದಾಗ ನಾನಿನ್ನೂ ಒಂದೋ ಎರಡನೇ ತರಗತಿಯ ಪೋರ. ಅವಳ ಯಾವುದೋ ಕಾಲೇಜು ನಾಟಕಕ್ಕೊಂದು ಬಾಲ ಪಾತ್ರ ಬೇಕಾದಾಗ ನನ್ನನ್ನು ಹೊರಡಿಸಿ, ಬಣ್ಣ ಬಳಿಯುವವರೆಗೆ ಆಕೆ ಯಶಸ್ವಿಯಾಗಿದ್ದಳು. ಆದರೆ ಪಾತ್ರ ನಿರ್ವಹಣೆಗೆ ಕರೆ ಬಂದಾಗ ನಾನು ನಾಚಿಕೊಂಡು ಸೈಡ್ ವಿಂಗ್ ಬಿಡದೇ ಸೋಲಿಸಿಬಿಟ್ಟೆನೆಂದು ಮುಂದೆ ಯಾವತ್ತೂ ಛೇಡಿಸುತ್ತಿದ್ದಳು.
ನನ್ನ ಪುಸ್ತಕೋದ್ಯಮದ ಪ್ರಥಮ ‘ವಿದೇಶ ಗಮನ’ದಲ್ಲಿ ನಾನು ಸುಮಾರು ಆರೇಳು ದಿನ ಸೀತೆಯ ಪುಣೆ ಮನೆಯಲ್ಲಿದ್ದದ್ದು ಸದಾ ಸ್ಮರಣೀಯ.
ನನ್ನ ತಾತಾರ್ ಶಿಖರಾರೋಹಣ ಪುಸ್ತಕ ಪ್ರಕಟವಾದಾಗ ಸೀತೆ ಕೆಣಕಿದ್ದಳು – ಏ ಇಷ್ಟು ಚೆನ್ನಾಗಿ ನಾರ್ಣಯ್ಯನೇ ಬರೆದುಕೊಟ್ಟಿರಬೇಕು!
ಇಂಥಾ ನೂರೆಂಟು ನೆನಪುಗಳ ಸೀತೆ ಇನ್ನು ನೆನಪು ಮಾತ್ರ.
ಅಶೋಕವರ್ಧನ