ಮೈಸೂರು ದಸರ ಸಮಯದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಪ್ರತೀವರ್ಷ ಹತ್ತು ದಿನಗಳ ಕಾಲ ಮೈಸೂರು ಸುತ್ತಮುತ್ತ ಪ್ರೇಕ್ಷಣೀಯ ಸ್ಥಳಗಳಿಗೆ ಪ್ರವಾಸ ಏರ್ಪಡಿಸುತ್ತದೆ. ನಾವು ೫ ಮಂದಿ (ಮಂಜ, ಗೀತ, ಕಮಲಾಕ್ಷಿ, ಅಕ್ಷರಿ ಮತ್ತು ನಾನು) ಈ ಸಲ ೧೦-೧೦-೨೦೧೧ರಂದು ಜಲದರ್ಶಿನಿ ಪ್ರವಾಸ ಕೈಗೊಂಡೆವು. ನಾಗರಹೊಳೆ, ಇರ್ಫು, ರಾಜಾಸೀಟ್, ಅಬ್ಬಿ ಜಲಪಾತ, ಗೋಲ್ಡನ್ ಟೆಂಪಲ್ ಇಷ್ಟು ಸ್ಥಳಗಳ ವೀಕ್ಷಣೆ ಇತ್ತು.

ಬೆಳಗ್ಗೆ ೬.೩೦ ಗಂಟೆಗೆ ಎಂದು ನಿಗದಿಯಾಗಿದ್ದ ಬಸ್ ಹೊರಡುವಾಗಲೇ ೭ ಗಂಟೆ ದಾಟಿತ್ತು. ಹುಣಸೂರಿನಲ್ಲಿ ತಿಂಡಿಗೆ ನಿಲ್ಲಿಸಿದಾಗ ನಮಗೆಲ್ಲ ಮಂಜ ತಿಂಡಿ ಕೊಡಿಸಿದರು. ಅಲ್ಲಿಂದ ಹೊರಟು ನಾಗರಹೊಳೆ. ನಾಗರಹೊಳೆ ನೋಡಬೇಕೆಂಬ ಆಸೆ ಇವತ್ತು ಕೈಗೂಡುತ್ತದಲ್ಲ ಎಂಬ ಸಂತಸ ಹೆಚ್ಚು ಹೊತ್ತು ಇರಲಿಲ್ಲ. ನಾಗರಹೊಳೆ ದಾರಿಯಾಗಿ ಸಾಗಿದ್ದು ಮಾತ್ರ! ನೋಡಿ ಜಿಂಕೆಗಳು ಎಂದು ಬಸ್ಸಿನಿಂದಲೇ ತೋರಿಸಿದರು. ಜಿಂಕೆಗಳ ಹಿಂಡು ರಸ್ತೆ ಬದಿ ನಿಂತು ಮಿಕಮಿಕ ನೋಡುತ್ತಿದ್ದುವು. ಅಲ್ಲಿಗೆ ಮುಗಿಯಿತು ನಮ್ಮ ನಾಗರಹೊಳೆ ವೀಕ್ಷಣೆ!

ಇರ್ಫು ಜಲಪಾತ ತಲಪುವಾಗ ಗಂಟೆ ೧೧. ಒಂದು ಸುಂದರ ಪುಟ್ಟ ದೇವಸ್ಥಾನವಿದೆ. ದೇವಸ್ಥಾನದವರೆಗೆ ಬಸ್ ಹೋಗುತ್ತದೆ. ಅಲ್ಲಿಂದ ತಲಾ ರೂ. ೨೦ ಕೊಟ್ಟು ಚೀಟಿ ಪಡೆದು ಸುಮಾರು ಒಂದೂವರೆ ಕಿಮೀ. ದೂರ ನಡೆದು ಸಾಗಿದೆವು ಇರ್ಫು ಜಲಪಾತದೆಡೆಗೆ. ಅಲ್ಲಿ ಪ್ರವಾಸಿಗರು ತುಂಬಿದ್ದರು. ಮೈಚಳಿಬಿಟ್ಟು ನೀರಲ್ಲಿ ಆಟವಾಡುತ್ತಿದ್ದರು. ನಾವು ಸ್ವಲ್ಪ ಹೊತ್ತು ನಿಂತು ಜಲಪಾತದ ಸೌಂದರ್ಯ ನೋಡಿ ಮರಳಿದೆವು. ನಮ್ಮ ಬಸ್ಸಿನಲ್ಲಿ ವಯಸ್ಸಾದ ಹೆಚ್ಚು ನಡೆಯಲಾರದ ಹೆಂಗಸರು, ಗಂಡಸರು ಇದ್ದರು. ಜಲಪಾತಕ್ಕೆ ಎಷ್ಟು ದೂರ ಹೋಗಬೇಕು ಎಂಬ ಅರಿವಿಲ್ಲದೆ ಬಂದು ನಡೆದು ಸುಸ್ತಾಗಿದ್ದರು.
ಲಕ್ಷ್ಮಣತೀರ್ಥ ನದಿಯು ಬೆಟ್ಟಗುಡ್ಡಗಳ ನಡುವೆ ಹರಿದು ಸುಮಾರು ೫೧.೮ ಮೀಟರ್ ಎತ್ತರದಿಂದ ಧುಮುಕುತ್ತದೆ. ಇದೇ ಇರ್ಫು ಜಲಪಾತ. ಇಲ್ಲಿಂದ ವಾಯವ್ಯ ದಿಕ್ಕಿಗೆ ಹರಿಯುವ ಈ ನದಿ ಮುಂದೆ ರಾಮತೀರ್ಥ ನದಿಯೊಂದಿಗೆ ಲೀನವಾಗಿ ತನ್ನ ಹರಿವನ್ನು ಈಶಾನ್ಯ ದಿಕ್ಕಿಗೆ ಬದಲಿಸಿ ಮೈಸೂರು ಜಿಲ್ಲೆಯಲ್ಲಿ ಕಾವೇರಿನದಿಯನ್ನು ಸೇರುತ್ತದೆ.
ಅಲ್ಲಿಂದ ಹೊರಟು ಗೋಣಿಕೊಪ್ಪ ವಿರಾಜಪೇಟೆ ಮಾರ್ಗವಾಗಿ ದಾರಿಯಲ್ಲಿ ಧಾರಾಕಾರ ಮಳೆಯೊಂದಿಗೆ ನಾವು ಮಡಿಕೇರಿ ತಲಪಿದೆವು. ಆಗಲೇ ಗಂಟೆ ೨.೩೦. ಮಳೆ ಹನಿ ಹಾಕುತ್ತಲಿತ್ತು. ರಾಜಾಸೀಟ್ ವೀಕ್ಷಣೆಗೆ ೧೫ ನಿಮಿಷ ಸಮಯ ಕೊಟ್ಟರು. ರೂ.೫ ಪ್ರವೇಶ ದರ ಕೊಟ್ಟು ಒಳಗೆ ಹೋಗಿ ಪ್ರಕೃತಿ ಸೌಂದರ್ಯವನ್ನು ಕಣ್ಣು ತುಂಬ ನೋಡಿ ಕ್ಯಾಮರ ತುಂಬ ತುಂಬಿ, ಹೊಟ್ಟೆ ತುಂಬಿಸಲು ಮಡಿಕೇರಿ ಬಸ್ ನಿಲ್ದಾಣದ ಖಾನಾವಳಿಗೆ ಬಂದೆವು.
ಊಟಿಸಿ ಅಲ್ಲಿಂದ ಅಬ್ಬಿ ಜಲಪಾತಕ್ಕೆ ಪ್ರಯಾಣಿಸಿದೆವು. ಕಿರಿದಾದ ದಾರಿಯಲ್ಲಿ ದೊಡ್ಡ ಬಸ್ ಸಾಗುವಾಗ ಮನಕ್ಕೆ ಹಿತವೆನಿಸುವುದಿಲ್ಲ. ಅಬ್ಬಿ ಜಲಪಾತದ ಸನಿಹಕ್ಕೆ ಬಸ್ ಹೋಗುವುದಿಲ್ಲ. ಸುಮಾರು ೨ ಕಿಮೀ ದೂರವಿರುವಾಗಲೇ ಬಸ್ ನಿಲ್ಲಿಸಿದ. ಗೀತರಿಗೆ ನಡೆಯಲು ಕಷ್ಟವೆಂದು ನಾವು ಜೀಪಿನಲ್ಲಿ ತಲಾ ರೂ.೩೦ ಕೊಟ್ಟು ಸಾಗಿದೆವು. ಅಬ್ಬಿ ಜಲಧಾರೆ ದುಮ್ಮಿಕ್ಕಿ ಹರಿಯುತ್ತಿತ್ತು. ತೂಗು ಸೇತುವೆ ತುಂಬ ಜನ ಕಿಕ್ಕಿರಿದು ತುಂಬಿದ್ದರು. ನಮ್ಮ ಪ್ರಯಾಣಿಕರಿಗೆ ಜಲಪಾತ ಎಷ್ಟು ದೂರ ಇದೆ ಎಂಬ ಅರಿವಿಲ್ಲದೆ ಸಾಗಿದರು. ವಾಪಾಸ್ ಬಂದು ಬಸ್ ಚಾಲಕನನ್ನು ತರಾಟೆಗೆ ತೆಗೆದುಕೊಳ್ಳಲು ಮರೆಯಲಿಲ್ಲ! ಅಲ್ಲಿ ನಾವು ಕಾಫಿಪುಡಿ ಕೊಂಡೆವು. ಚಿಕೋರಿ ಹಾಕಿಲ್ಲವಲ್ಲ ಎಂದು ಎರಡೆರಡು ಸಲ ಕೇಳಿದ್ದೆ. ಇಲ್ಲ, ಪ್ಯೂರ್ ಪುಡಿ ಎಂದಿದ್ದ ಅಂಗಡಿಯವ. ಮನೆಗೆ ಬಂದು ಕಾಫಿ ಮಾಡಿ ಕುಡಿದಾಗಲೇ ನಾವು ಮೋಸ ಹೋಗಿದ್ದೆವೆಂದು ಗೊತ್ತಾಗಿದ್ದು. ಅದು ಸರಿಯಾಗಿ ಚಿಕೋರಿಮಿಶ್ರಿತ ಪುಡಿ ಆಗಿತ್ತು.
ಮಡಿಕೇರಿ ತೊರೆ ಅಥವಾ ಮುತ್ತಾರ್ ಮುಟ್ಟುತೊರೆ ಬೃಹದಾಕಾರದ ಬಂಡೆಗಳ ನಡುವೆ ಹರಿದು ೨೧.೩ ಮೀಟರ್ ಎತ್ತರದಿಂದ ಆಳವಾದ ಕಮರಿಗೆ ಧುಮುಕುವ ಈ ಜಲಪಾತವೇ ಅಬ್ಬಿಜಲಪಾತವೆಂದು ಪ್ರಸಿದ್ಧಿ ಹೊಂದಿತು. ಕೊಡವ ಭಾಷೆಯಲ್ಲಿ ಅಬ್ಬಿ ಎಂದರೆ ಜಲಪಾತ. ಬ್ರಿಟೀಷರು ಈ ಜಲಪಾತವನ್ನು ಪ್ರಥಮ ಪಾದ್ರಿಯ ಮಗಳ ನೆನಪಿಗಾಗಿ ಜಸ್ಸಿ ಜಲಪಾತವೆಂದು ಹೆಸರಿಸಿದ್ದರು.
ಸಂಜೆ ೫ ಗಂಟೆಗೆ ಅಲ್ಲಿಂದ ಹೊರಟು ಓಂಕಾರೇಶ್ವರ ದೇವಾಲಯಕ್ಕೆ ಬಂದೆವು. `ಹತ್ತು ನಿಮಿಷ ಸಮಯವಿದೆ. ಮಡಿಕೇರಿಗೆ ಬಂದು ಈ ದೇವಾಲಯ ವೀಕ್ಷಿಸದೆ ಇದ್ದರೆ ಪ್ರವಾಸ ಪರಿಪೂರ್ಣವೆನಿಸುವುದಿಲ್ಲ. ಇದು ಬೋನಸ್ ನಿಮಗೆ’ ಎಂದ ಚಾಲಕ.
ಬೈಲಕುಪ್ಪೆಯ ಗೋಲ್ಡನ್ ಟೆಂಪಲ್ ತಲಪುವಾಗಲೇ ಗಂಟೆ ೭ ದಾಟಿತ್ತು. ಕತ್ತಲೆಯಲ್ಲೆ ದೇವಾಲಯ ನೋಡಿ ಅಲ್ಲಿಂದ ಹೊರಟು ಮೈಸೂರು ತಲಪುವಾಗ ಗಂಟೆ ರಾತ್ರಿ ಹತ್ತು ದಾಟಿತ್ತು. ತುಂತುರುಮಳೆ ಹನಿಯುತ್ತಲೇ ಇತ್ತು.







ಎಲ್ಲ ಪ್ಯಾಕೇಜ್ ಪ್ರವಾಸಗಳ ಕಥೆ ಇಷ್ಟೇ. ‘ಹೋಗಿದ್ದೇವೆ’ ಎಂದು ಹೇಳಲು ಮಾತ್ರ ಲಾಯಕ್ಕು. ಫೋಟೋಗಳು ಚೆನ್ನಾಗಿವೆ.
ksrtc avaru nimage nirinalli adalu samaya koduthara?????????
pravasa ke yestu charge madidru???? oota thindi ge yelli stop kotru ???
bus li yestu jana idru ????
idu just of interest ge ….
ಇದೆಂತ? ರಪ-ರಪ ಎಂದು ಹಲವು ಜಾಗಗಳನ್ನು ಶಾಸ್ತ್ರಕ್ಕೆ ಸುತ್ತಿಸಿದಂತೆ? ಅದರ ಬದಲು ಬೈಲುಕುಪ್ಪೆಯನ್ನು ಬಿಟ್ಟು ಉಳಿದ ಕಡೆ ಹೆಚ್ಚು ಸಮಯ ಕೊಡಬಹುದಿತ್ತು.
Swalpa varshagala hinde navu punege hodaga intahude pravasakke hogiddevu(onde dinadalli sumaru jagagalanna torisuttaremba attraction+ samayabhava)Entaha gadibidi aytendare.Eega kootu navu alli enella nodidvi antha nenapiskollo pryatna madidre sariyagi yavudondu chitra manassinalli moodolla.
ಒಳ್ಳೆಯ ವಿವರಣೆ. ಮೊದಲ ಪ್ಯಾರಾದಲ್ಲಿ ದಾರಿಯಲ್ಲಿ ಜಿಂಕೆಗಳನ್ನು ನೋಡಿ ಮಿಕಗಳಾದೆವು ಎಂಬಂತಹ ವಿವರಣೆಯನ್ನು ನೋಡಿ ನಾವೂ ಬಕ್ರಗಳಾಗಿದ್ದ ಹಳೆಯ ಪ್ರಸಂಗವೊಂದು ನೆನಪಾಯಿತು. ಚೆನ್ನಾಗಿದೆ ಕಥನ. ಆದರೆ ಚಿತ್ರಗಳನ್ನ ಸ್ವಲ್ಪ ದೊಡ್ಡದಾಗಿ ಹಾಕಿದ್ದರೆ ನೋಡಲು ಸ್ವಲ್ಪ ಸಹಾಯವಾಗುತ್ತಿತ್ತೇನೋ ಎಂದು ಅನಿಸಿತು. ಸ್ವಲ್ಪ ಸಮಯದ ಹಿಂದೆ ಆಗ್ರಾಕ್ಕೆ ಹೋದಾಗ ಅಲ್ಲಿಯ ಆಗ್ರಾದರ್ಶನ್ ಬಸ್ಸಿನವನೂ ಹೀಗೇ ಮಾಡಿದ್ದ. ಬೇಕಾದ ಕಡೆಗಳಿಗೆಲ್ಲ ಕಮ್ಮಿ ಸಮಯ ಕೊಟ್ಟು ಯಾವುದೋ ಶಾಪಿಂಗ್ ಮಾಲಲ್ಲಿ ೨:೩೦ ಘಂಟೆ ನಿಲ್ಲಿಸಿದ್ದ. ಹೊಟ್ಟೊಟ್ಟೆ ಉರಿದೋಗಿತ್ತು. ಪ್ರಾಯಶ: ಎಲ್ಲಾ ದರ್ಶನ್ ದವರದ್ದೂ ಇದೇ ಗೋಳು ಅನಿಸಿತ್ತದೆ ನಿಮ್ಮ ಲೇಖನ ನೋಡಿ ಮತ್ತು ಮೇಲಿನ ಅಭಿಪ್ರಾಯಗಳನ್ನು ನೋಡಿ.