ಒಂದು ನೆನಪು
ವಿಜ್ಞಾನ ತಂತ್ರಜ್ಞಾನ ಪದಸಂಪದ ಕೃತಿ ಕೈ ಸೇರಿ ಎಲ್ಲ ಪುಟಗಳನ್ನು ತಿರುವಿ ಹಾಕಿದಾಗ ಈ ಅಗಾದ ಕೆಲಸ ಕಂಡು ಸಂತೋಷವಾಯಿತು. ನವಕರ್ನಾಟಕ ಈ ಕೃತಿಯನ್ನು ಸಮರ್ಥವಾಗಿ ಚೊಕ್ಕವಾಗಿ
ಹೊರತಂದಿದೆ.
ಈ ಗ್ರಂಥವನ್ನು ಮಾವ (ಜಿ.ಟಿ. ನಾರಾಯಣ ರಾವ್)ನಿಗೆ ಅರ್ಪಣೆ ಮಾಡಿ,
ಆತ್ಮೀಯವಾಗಿ ನೆನಪಿಸಿಕೊಂಡು ಅವರು ಈ ಗ್ರಂಥದ ವಿಷಯದಲ್ಲಿ ಬರೆದ ಕೊನೇ ಪತ್ರವನ್ನು ಪ್ರಕಟಿಸಿದ್ದಾರೆ. ಅದಕ್ಕಾಗಿ ನಮ್ಮ ಕುಟುಂಬದವರೆಲ್ಲರ ಅಭಿವಂದನೆಗಳು. ಈ ಗ್ರಂಥದ ಅನಾವರಣದ ದಿನ ಮೊದಲ ಪ್ರತಿಯನ್ನು ನಮ್ಮ ಅತ್ತೆ (ಜಿ.ಟಿ ನಾರಾಯಣ ರಾಯರ ಪತ್ನಿ ಲಕ್ಷ್ಮೀದೇವಿ) ಸ್ವೀಕರಿಸಬೇಕೆಂದು ಆತ್ಮೀಯ ಕರೆ ಬಂದಿತ್ತು. ಆ ದಿನ ನಾವು ಊರಿನಲ್ಲಿ ಒಂದು ಮದುವೆ ಸಮಾರಂಭದಲ್ಲಿ ಭಾಗಿಯಾಗಲೇ ಬೇಕಿದ್ದುದರಿಂದ ಈ ಕರೆಯನ್ನು ಪುರಸ್ಕರಿಸಲು ಸಾಧ್ಯವಾಗಲಿಲ್ಲ ಹಾಗೂ ಪುಸ್ತಕ ಪಡೆಯುವ ಆ ಸಂತಸದ ಸನ್ನಿವೇಶದಲ್ಲಿ ಭಾಗಿಯಾಗದೇ ಇದ್ದದ್ದು ದೊಡ್ಡ ನಷ್ಟ ಎಂದು ಭಾವಿಸುತ್ತೇನೆ.
ಈ ಕೃತಿಯ ಗೌರವ ಸಂಪಾದಕರಾಗಿ ಮಾವ ನೇಮನಗೊಂಡಾಗ, (ಮಾವನಿಗೆ ಆರೋಗ್ಯ ಅಷ್ಟು ಸುಸ್ಥಿತಿಯಲ್ಲಿರಲಿಲ್ಲ.) `ಆಗಾಗ ಬೆಂಗಳೂರಿಗೆ ಹೋಗಲು ಸಾಧ್ಯವೇ?” ಎಂದು ಅತ್ತೆ ಆತಂಕದಲ್ಲಿ ಕೇಳಿದಾಗ ಮಾವ, “ಇದು ಸಮಾಜದ ಕೆಲಸ. ದೇಹಕ್ಕೆ ಮನಸ್ಸಿಗೆ ಖುಷಿ ಕೊಡುವ ಕೆಲಸ. ದೇಹಕ್ಕೆ ಟಾನಿಕ್ ಇದ್ದಂತೆ. ಇಂಥ ಕೆಲಸ ಮಾಡುವಾಗ ಆರೋಗ್ಯ ಚೆನ್ನಾಗಿರುತ್ತದೆ. ಮನಸ್ಸು ಉತ್ಸಾಹದಿಂದ ಇರುತ್ತದೆ’’ ಎಂದು ಸುಮಾರು ಮೂರೂವರೆ ವರ್ಷಗಳ ಹಿಂದೆ ಈ ಗ್ರಂಥದ ಕೆಲಸ ಪ್ರಾರಂಭವಾದಾಗ ನಮ್ಮ ಮಾವ ಹೇಳಿದ ಮಾತು ಈ ಪುಸ್ತಕವನ್ನು ನೋಡಿದಾಗ ನೆನಪಿಗೆ ಬಂತು. ಉಲ್ಲಾಸದಿಂದಲೇ ಹೊತ್ತಗೆಯ ಕೆಲಸ ಮಾಡಲು ಎದುರು ನೋಡುತ್ತಿದ್ದರು. ಆದರೆ ಅದಕ್ಕೂ ಮೊದಲೇ (೨೭-೬-೨೦೦೮) ಕಾಣದೆಡೆಗೆ ತೆರಳಿದ್ದರು. ಅವರಿದ್ದಿದ್ದರೆ ಪುಸ್ತಕ ನೋಡಿ ಪ್ರತೀ ಪುಟವನ್ನೂ ಆಮೂಲಾಗ್ರ ಒಂದಕ್ಷರ ಬಿಡದೆ ಓದಿ ಆನಂದಿಸಿ ತಪ್ಪುಒಪ್ಪುಗಳನ್ನು ಅಲ್ಲೇ ಗೆರೆ ಹಾಕಿ, ಚೆನ್ನಾಗಿದ್ದದ್ದನ್ನು ಪ್ರಶಂಸಿಸುತ್ತ ಶಹಭಾಸ್ಗಿರಿ ಕೊಟ್ಟು ಸಂಬಂಧಪಟ್ಟವರಿಗೆ ಆ ಕೂಡಲೇ ಪತ್ರ ಬರೆದಿರುತ್ತಿದ್ದರು.
ಈ ಕೃತಿಯ ೮೮೪ ಪುಟಗಳಲ್ಲಿ ಕನ್ನಡ- ಇಂಗ್ಲಿಷ್ ಪದಕೋಶ, ಕನ್ನಡ-ಕನ್ನಡ ಪದವಿವರಣೆ, ಇಂಗ್ಲಿಷ್-ಕನ್ನಡ ಪದಸೂಚಿ ಒಳಗೊಂಡಿವೆ. ವಿದ್ಯಾರ್ಥಿಗಳಿಗೆ, ವಿಜ್ಞಾನಿಗಳಿಗೆ, ಲೇಖಕರಿಗೆ, ಪತ್ರಕರ್ತರಿಗೆ ಇತ್ಯಾದಿ ಎಲ್ಲರಿಗೂ ಅವಶ್ಯ ಬೇಕಾಗುವ ಅತ್ಯಮೂಲ್ಯ ಆಕರ ಗ್ರಂಥವಿದು. ಕೊನೆಯಲ್ಲಿ ಪದಸೂಚಿ ಕೊಟ್ಟಿರುವುದು ಪದಗಳ ಹುಡುಕುವಿಕೆಗೆ ಬಹಳ ಅನುಕೂಲವಾಗಿದೆ. ಬೆಲೆ ರೂ.೬೫೦ ಮಾತ್ರ. ಈ ಬೃಹತ್ ಗ್ರಂಥದ ಹಿಂದೆ ತಪಸ್ಸಿನೋಪಾದಿಯಲ್ಲಿ ಕೆಲಸ ಮಾಡಿದ ಎಲ್ಲರಿಗೂ ಹಾರ್ದಿಕ ಅಭಿನಂದನೆಗಳು.




ಒಳ್ಳೆಯ ಕೃತಿ ಬಗ್ಗೆ ಮಾಹಿತಿ ನೀಡಿದ್ದಕ್ಕೆ ವಂದನೆಗಳು