ಚನ್ನಪಟ್ಟಣ ತಾಲ್ಲೂಕಿನ ಮುದುಗೆರೆ ಕಂಬದ ಶ್ರೀ ನರಸಿಂಹ ಸ್ವಾಮಿ ಬೆಟ್ಟಕ್ಕೆ ೨೮-೮-೨೦೧೧ರಂದು ನಾವು ೨೯ ಮಂದಿ ಬೆಳಗ್ಗೆ ೬.೪೫ಕ್ಕೆ ಮಿನಿ ವ್ಯಾನ್ ಹಾಗೂ ತವೇರದಲ್ಲಿ ಮೈಸೂರಿನಿಂದ ಹೊರಟು ೮ ಗಂಟೆಗೆ ಮದ್ದೂರು ತಲಪಿ, ಮದ್ದೂರಮ್ಮ ದೇವಾಲಯದ ಆವರಣದಲ್ಲಿ ತಿಂಡಿ ಶ್ಯಾವಿಗೆ ಉಪ್ಪಿಟ್ಟು, ಕೇಸರಿಬಾತ್ ಸೇವಿಸಿದೆವು. ಅಲ್ಲಿಂದ ಬೆಂಗಳೂರು ಹೆದ್ದಾರಿಯಲ್ಲಿ ಸಾಗಿ ರಾಮನಗರಕ್ಕೆ ೧೦ ಕಿಮೀ ಮೊದಲೇ ಬಲಕ್ಕೆ ತೆರಳಿದಾಗ ಕೇವಲ ಎರಡು ಕಿಮೀ ದೂರದಲ್ಲಿ ಬೆಟ್ಟವಿದೆ. ಬಹಳ ಸಣ್ಣ ಬೆಟ್ಟ. ಹತ್ತಲು ತ್ರಾಸವೇನೂ ಇಲ್ಲ. ದೇವಸ್ಥಾನಕ್ಕೆ ರಸ್ತೆ ಸೌಕರ್ಯವೂ ಇದೆ. ನಾವು ನಡೆದುಕೊಂಡೇ ಬೆಟ್ಟ ಏರಿದೆವು. ಬೆಟ್ಟದ ಮೇಲಿರುವ ೧೨೦೦ ವರ್ಷ ಹಳೆಯ ಕಂಬದ ನರಸಿಂಹಸ್ವಾಮಿ ದೇವಾಲಯ ಈಗ ಆಧುನೀಕರಣಗೊಂಡಿದೆ. ಪ್ರತೀ ಶ್ರಾವಣ ಶನಿವಾರ ವಿಷೇಷ ಜಾತ್ರಾ ಪೂಜೆ ನೆರವೇರುತ್ತದಂತೆ. ಬೆಳಗ್ಗೆ ಎಂಟೂವರೆಯಿಂದ ಸಂಜೆ ಆರೂವರೆ ವರೆಗೆ ದೇವಾಲಯ ತೆರೆದಿರುತ್ತದೆ. ಇಲ್ಲಿ ಕಣ್ವ ಮಹರ್ಷಿಗಳು ಘೋರ ತಪಸ್ಸು ಮಾಡುತ್ತಿದ್ದ ಸಂದರ್ಭದಲ್ಲಿ ಶ್ರೀ ಯೋಗನರಸಿಂಹಸ್ವಾಮಿಯು ಅಲ್ಲಿದ್ದ ಕಲ್ಲಿನ ಕಂಬದಿಂದ ಪ್ರತ್ಯಕ್ಷನಾಗಿ ಕಣ್ವರಿಗೆ ದರ್ಶನವಿತ್ತರೆಂಬ ಕಥೆಯನ್ನು ದೇವಾಲಯದ ಅರ್ಚಕರು ಹೇಳಿದರು. ಭಕ್ತರು ಎಲ್ಲ ಕಾಲದಲ್ಲೂ ಇಲ್ಲಿಗೆ ಭೇಟಿ ಕೊಡುತ್ತಾರೆ. ಸ್ವಲ್ಪ ಹೊತ್ತು ದೇವಾಲಯದಲ್ಲಿ ಕುಳಿತಿದ್ದು ಅಲ್ಲಿಂದ ಹೊರಟೆವು.
ಮೈಸೂರು ಬೆಂಗಳೂರು ಹೆದ್ದಾರಿಯಲ್ಲಿ ಸಾಗಿ ಕದಂಬ ಹೊಟೇಲ್ ಪಕ್ಕ ಬಲಗಡೆಗೆ ತಿರುಗಿ ಸುಮಾರು ೬-೭ ಕಿ. ಮೀ ದೂರ ಸಾಗಿ ಗಂಗೇದೊಡ್ಡಿ ಎಂಬ ಹಳ್ಳಿಗೆ ತಲಪಿದೆವು. ಅಲ್ಲಿ ದ್ರಾಕ್ಷಾರಸ (ಹೆರಿಟೇಜ್ ವೈನ್) ತಯಾರಿಸುವ ಘಟಕಕ್ಕೆ ಭೇಟಿ ಕೊಟ್ಟೆವು. ಅಲ್ಲಿಯ ಜಗಲಿಯ ಗೋಡೆಯಲ್ಲಿ ಪ್ರಸಿದ್ಧನಾಮರ ಸೊಗಸಾದ ರೇಖಾ ಚಿತ್ರ ನಮ್ಮ ಗಮನ ಸೆಳೆಯುತ್ತದೆ. ಯಾರು ಬಿಡಿಸಿದ್ದು ಎಂಬುದು ನನಗೀಗ ಮರೆತು ಹೋಗಿದೆ. ಹೆರಿಟೇಜ್ ವೈನ್ನ ಕಾರ್ಯನಿರ್ವಾಹಕಿ ಲಿನೆಟ್ ಸಿಕ್ವೇರ ಮತ್ತು ಸಿಬ್ಬಂದಿಗಳು ನಮ್ಮನ್ನು ಆತ್ಮೀಯವಾಗಿ ಬರಮಾಡಿಕೊಂಡರು. ದ್ರಾಕ್ಷಾರಸ ತಯಾರಿಯ ಒಂದು ಕಿರುಚಿತ್ರವನ್ನು ತೋರಿಸಿದರು. ಅನಂತರ ಕಾರ್ಖಾನೆಯಲ್ಲಿ ಹೇಗೆ ತಯಾರಿ ನಡೆಯುತ್ತದೆ ಎಂಬುದನ್ನು ಪ್ರತ್ಯಕ್ಷ ತೋರಿಸಿದರು. ಹಸುರು, ಕಪ್ಪು ದ್ರಾಕ್ಷೆಯಿಂದ ವೈನ್ ತಯಾರಿಸುತ್ತಾರೆ. ನಾವಿರುವಾಗಲೇ ಒಂದು ಲಾರಿ ಲೋಡ್ ಕಪ್ಪು ದ್ರಾಕ್ಷೆ ಬಂತು. ಅವನ್ನೆಲ್ಲ ಹಾಗೆಯೇ ಒಂದು ಯಂತ್ರದೊಳಗೆ ಸುರಿಯುತ್ತಾರೆ. ಕಸ ಬೇರೆಯಾಗಿ ಬೀಳುತ್ತದೆ. ಅಲ್ಲಿಂದ ಜಜ್ಜಿದಂತೆ ಮುಂದೆ ಒಂದು ಪೈಪಿನೊಳಗೆ ಸಾಗಿ ಒಂದು ದೊಡ್ಡ ಸ್ಟೀಲ್ ಡ್ರಮ್ನೊಳಗೆ ಹೋಗುತ್ತದೆ. ಅಲ್ಲಿ ಎಷ್ಟೋ ಸೆಂಟಿಗ್ರೇಡಿನಲ್ಲಿ ೩ ದಿನ ಇಡುತ್ತಾರಂತೆ. ಅಲ್ಲಿಂದ ಚರಟ (ಸಿಪ್ಪೆ) ಬೇರೆಯಾಗಿ ಬಿದ್ದು, ರಸ ಇನ್ನೊಂದು ಡ್ರಮ್ಮಿಗೆ ಹೋಗುತ್ತದೆ. ಅದಕ್ಕೆ ಸಕ್ಕರೆ ಬೆರೆಸಿ ಯೀಸ್ಟ್ ಹಾಕುತ್ತಾರಂತೆ. ದ್ರಾಕ್ಷಾರಸದಲ್ಲಿರುವ ಸಕ್ಕರೆಯನ್ನು ಯೀಸ್ಟ್ ಕಬಳಿಸಿದಾಗ ಮಧ್ಯಸಾರ (ಆಲ್ಕೋಹಾಲ್) ಬಿಡುಗಡೆಯಾಗುತ್ತದೆಯಂತೆ. ಹೀಗೆ ತಯಾರಾಗುವ ದ್ರಾಕ್ಷಾರಸವನ್ನು ಪರೀಕ್ಷಾನಂತರ ಬಾಟಲಿಗಳಲ್ಲಿ ತುಂಬುತ್ತಾರೆ. ಕಾರ್ಖಾನೆ ಚೊಕ್ಕಟವಾಗಿತ್ತು. ಆದರೂ ಆ ಪರಿಸರದ ಕಮಟು ವಾಸನೆ ನನಗೆ ಇಷ್ಟವಾಗಲಿಲ್ಲ.

ವೈನ್ ಸೇವನೆಯಿಂದ ವೃದ್ಧಾಪ್ಯ ದೂರ ಮಾಡಬಹುದು, ಆರೋಗ್ಯಕ್ಕೆ ಬಲು ಒಳ್ಳೆಯದು ಇತ್ಯಾದಿ ಇದ್ದ ಒಂದು ಕಿರುಪತ್ರ ನಮಗೆ ಕೊಟ್ಟರು. (ವೈನ್ ಸೇವನೆಯ ಮಿತಿಯನ್ನು ನಮೂದಿಸಬೇಕಿತ್ತು ಎಂದು ನನಗನಿಸಿತು. ವೈನ್ ಸೇವನೆ ಮಿತಿಮೀರಿದರೆ ಆರೋಗ್ಯ ಕೆಟ್ಟು ವೃದ್ಧಾಪ್ಯ ಅಮರುತ್ತದೆ ಎಂಬ ಮಾಹಿತಿ ಕೊಟ್ಟರೂ ಪ್ರಯೋಜನ ಇಲ್ಲ. ಸಿಗರೇಟ್ ಸೇವನೆ ಆರೋಗ್ಯಕ್ಕೆ ಹಾನಿಕರ ಎಂದು ಅದರಲ್ಲಿ ಹಾಕಿದ್ದರೂ ಜನ ಸೇದುತ್ತಿಲ್ಲವೆ?!) ಎಲ್ಲರಿಗೂ ೪ ಟೀ ಚಮಚ ವೈನ್ ರುಚಿ ನೋಡಲು ಕೊಟ್ಟರು. ನಾನು ರುಚಿ ನೋಡಲೂ ಮನಸ್ಸು ಮಾಡಲಿಲ್ಲ. ಯಾವುದೇ ಔಷಧೀಯ ಸಿರಪ್ ಕುಡಿಯಲೂ ಹಿಂದೇಟು ಹಾಕುವ ನಾನು ಈ ವೈನ್ ಬಾಯಿಗೆ ಸೋಕಿಸಲೂ ಸಿದ್ಧವಿರಲಿಲ್ಲ. ವೃದ್ಧಾಪ್ಯ ಬರಲಿ ಪರವಾಗಿಲ್ಲ. (`ಈಚಲು ಮರದಡಿಯಲ್ಲಿ ಕುಳಿತು ಮಜ್ಜಿಗೆ ಕುಡಿದರೂ॒॒.॒. .. .. ..’ ಎಂದು ಗಾದೆಯಿದೆಯಲ್ಲ. ಹಾಗಾಗಿ ನಾನು ನೀರು ಕುಡಿಯಲೂ ಮನ ಮಾಡಲಿಲ್ಲ!) ಒಂದಿಬ್ಬರನ್ನು ಹೊರತು ಪಡಿಸಿ ಬಾಕಿ ಎಲ್ಲರೂ ವೈನ್ ರುಚಿ ನೋಡಿ `ಇದು ದ್ರಾಕ್ಷಾರಿಷ್ಟದಂತಿದೆ’ ಎಂದು ಬಾಯಿ ಚಪ್ಪರಿಸಿದರು. ಇನ್ನು ಕೆಲವರಿಗೆ ಮನೆಯಲ್ಲೇ ವೈನ್ ತಯಾರಿಸಿ ಕುಡಿದು ಅಭ್ಯಾಸವಿದೆಯಂತೆ. ಅಲ್ಲಿ ಕೆಲವು ಬಾಟಲಿ ರಿಯಾಯತಿ ದರದಲ್ಲಿ ಕೊಟ್ಟರು. ವೈನ್ ಪ್ರಿಯರು ಅವನ್ನು ತೆಗೆದುಕೊಂಡು ಧನ್ಯತೆ ಅನುಭವಿಸಿದರು. ಎಲ್ಲ ನೋಡಿ ಹೊರಗೆ ಬಂದಾಗ ನಮ್ಮ ವಾಹನ ಚಾಲಕರು ಒದ್ದಾಡಿದರು. ನಮಗೂ ಹೇಳಿದ್ದರೆ ನಾವೂ ಒಳಗೆ ಬರುತ್ತಿದ್ದೆವಲ್ಲ. ಉಚಿತ ವೈನ್ ಹಾಗೂ ಕಡಿಮೆದರದಲ್ಲಿ ಸಿಗುವ ಬಾಟಲಿಯೂ ತಪ್ಪಿತಲ್ಲ ಎಂದು ಪರಿತಪಿಸಿದರು. ಸುತ್ತ ಮುತ್ತಲಿನ ಮಂದಿ ತಮ್ಮ ಗದ್ದೆಗಳಿಗೆ ದ್ರಾಕ್ಷಾ ಸಿಪ್ಪೆಯನ್ನು ಹಾಕಿ ಗೊಬ್ಬರ ಮಾಡುತ್ತಾರೆ. ಬಹುಶಃ ಅದು ಉಚಿತವಾಗಿ ಸಿಕ್ಕೀತವರಿಗೆ. ಅಲ್ಲೇ ಹೊರಗೆ ಗದ್ದೆ ಬದಿಯಲ್ಲಿ ನಾವು ಊಟ ಮಾಡಿದೆವು. ಪಲಾವ್, ಮೊಸರನ್ನ, ಮೈಸೂರುಪಾಕು.

ಮುಂದೆ ನಮ್ಮ ಪಯಣ ಜನಪದಲೋಕಕ್ಕೆ. ಅಲ್ಲಿ ಪೂಜಾ ಕುಣಿತ ನಡೆಯುತ್ತಿತ್ತು. ವಸ್ತು ಸಂಗ್ರಹಾಲಯ ನೋಡಿದೆವು. ಅಲ್ಲಿ ಸಂಗ್ರಹಿಸಿರುವ ಹಳೆಯ ಕಾಲದ ಜಾನಪದ ವಸ್ತುಗಳು ಹಲವಾರಿವೆ. ದಸರಾ ಗೊಂಬೆಗಳು, ಒನಕೆ, ಗುರಾಣಿ, ಯಕ್ಷಗಾನದ ವೇಷ ಭೂಷಣಗಳು, ಇತ್ಯಾದಿ. ಅಲ್ಲಿ ಒಬ್ಬ ಗೈಡ್ ಎಲ್ಲವನ್ನೂ ತೋರಿಸುತ್ತ ಕಂಚಿನಕಂಠದಿಂದ ಅದ್ಭುತವಾಗಿ ವಿವರಿಸುತ್ತಿದ್ದ. ಅವನಿಗೆ ಅದು ಬಾಯಿಪಾಟವಾಗಿತ್ತು. ಅಲ್ಲಲ್ಲಿ ಬೇರೆ ಬೇರೆಯಾಗಿ ಹೇಳು ಎಂದರೆ ಅವನಿಗೆ ಹೇಳಲು ಸಾಧ್ಯವಾಗಲಿಕ್ಕಿಲ್ಲ ಎಂದು ನಾವು ತಮಾಶೆಯಿಂದ ಮಾತಾಡಿಕೊಂಡೆವು.
ಕುಂಬಾರನು ಕೌಶಲದಿಂದ ತಯಾರಿಸುವ ಮಡಿಕೆ, ಕುಡಿಕೆ ಪ್ರತ್ಯಕ್ಷ ನೋಡಿ ಮಂತ್ರಮುಗ್ಧರಾದೆವು. ಚನ್ನಪಟ್ಟಣದ ಕರಕುಶಲ ಕಲಾವಿದರು ನಮ್ಮ ಕಣ್ಣೆದುರೇ ಯಾವ ಯಂತ್ರ ಬಳಸದೆ ನೈಸರ್ಗಿಕ ಬಣ್ಣಗಳ ಬಳಕೆಯೊಂದಿಗೆ ಮರದ ಆಟದ ಪರಿಕರಗಳನ್ನು ಮಾಡುವುದನ್ನು ನೋಡಿ ಬೆರಗಾದೆವು.
ಅಲ್ಲಿಂದ ೪.೧೫ಕ್ಕೆ ವಾಹನ ಹತ್ತಿ ಮೈಸೂರು ಕಡೆಗೆ ನಮ್ಮ ಪಯಣ ಸಾಗಿತು. ರಾತ್ರಿ ಏಳೂವರೆ ಗಂಟೆಗೆ ಮೈಸೂರು ತಲಪಿದೆವು. ಈ ಪಯಣವನ್ನು ಯೂಥ್ ಹಾಸ್ಟೆಲ್ ಅಸೋಸಿಯೇಶನ್ ಗಂಗೋತ್ರಿ ಘಟಕ, ಮೈಸೂರು ಕೈಗೊಂಡಿತ್ತು. ಹೆರಿಟೇಜ್ ವೈನ್ ವೀಕ್ಷಣೆ ಕೇವಲ ನಿಮ್ಮ ತಿಳಿವಳಿಕೆಗಾಗಿ ಮಾತ್ರ ಎಂದು ಮೊದಲೇ ಎಚ್ಚರಿಕೆ ಕೊಟ್ಟು ಕರೆದುಕೊಂಡು ಹೋಗಿದ್ದರು!







