Feeds:
Posts
Comments

ಸಂಗೀತದಲ್ಲಿ ಸಾಧನೆ ಮಾಡಿದ ಯುವ ಜನರೊಬ್ಬರಿಗೆ   ಜಿ.ಟಿ. ನಾರಾಯಣ ರಾವ್ ಹೆಸರಿನಲ್ಲಿ ಪ್ರತೀವರ್ಷ ಮಾಧುರೀ ತಾತಾಚಾರಿಯವರು ಪ್ರಶಸ್ತಿ ನೀಡುತ್ತ ಬರುತ್ತಿದ್ದಾರೆ.     ಮೃದಂಗ ವಿದ್ವಾನ್ ಎ. ರಾಧೇಶ್  ಅವರು ಈ ವರ್ಷದ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಆ ಕಾರ್ಯಕ್ರಮ ೨೦೧೨ ಎಪ್ರಿಲ್ ೧೫ರಂದು ಮೈಸೂರಿನ ಗೋಕುಲದಲ್ಲಿರುವ ಆಳ್ವಾರ್ ಕಲಾಭವನದಲ್ಲಿ ನಡೆದಿತ್ತು. ಆ ದಿನ  ಅಕ್ಷರಿ ಅವಳಜ್ಜನ ನೆನಪುಗಳ ಬಗ್ಗೆ ೫ ನಿಮಷ ಮಾತಾಡಿದ ಪೂರ್ಣ ಪಾಟ ಇಲ್ಲಿದೆ.

ಅಜ್ಜನೊಡನೆ ನಾನು ಕಳೆದ ೨೦ ವರ್ಷಗಳು ಇನ್ನೂ ನಿನ್ನೆ ಮೊನ್ನೆ ಕಳೆದಂತೆ ಅನಿಸುತ್ತದೆ. ಈಗಲೂ ಅಜ್ಜ ನಮ್ಮೊಡನೆ ಇಲ್ಲ ಎಂಬ ಭಾವನೆ ಬರದೆ ನಮ್ಮೊಡನೆ ಸದಾ ಇದ್ದಾರೆ ಎಂದೇ ಅನಿಸುತ್ತಿದೆ. ಅಜ್ಜನೊಡನೆ ನಾನು ಕಳೆದ ಕ್ಷಣಗಳು ಅಮೂಲ್ಯ ಹಾಗೂ ಮಧುರವಾದುದು ಮತ್ತು ಎಂದೂ ಮರೆಯಲಾರದಂತದ್ದು. ಅಜ್ಜನನ್ನು ನಾನು ಏಕವಚನದಿಂದಲೇ ಕರೆಯುತ್ತಿದ್ದೆ. ಅದನ್ನು ಕೇಳಿದ ನಮ್ಮ ನೆಂಟರೊಬ್ಬರು ತರಾಟೆಗೆ ತೆಗುಕೊಂಡಿದ್ದಾಗ, `ನೀನು ನನ್ನನ್ನು‌ಏಕವಚನದಲ್ಲೆ ಕರೆ. ನನಗೆ ಬಲು ಸಂತೋಷವಾಗುತ್ತದೆ ಮತ್ತು ಅದರಿಂದ ನಮ್ಮ ಭಾಂದವ್ಯ ವೃದ್ಧಿಸುತ್ತದೆ’ ಎಂದು ಹೇಳಿದ್ದರು. ಚಿಕ್ಕವಳಾಗಿದ್ದಾಗ ನಾನು ಬೆಳಗ್ಗೆ ಬೇಗ ಏಳದಿದ್ದರೆ ಅಜ್ಜ ಮಹಡಿ ಹತ್ತಿ ಬಂದು, ಮಗೂ ಹುಷಾರಿಲ್ಲವೆ? ಎಂದು ಕಾಳಜಿ ವ್ಯಕ್ತ ಪಡಿಸಿ ಕೇಳುತ್ತಿದ್ದರು. ಬೆಳಗಿನ ಸಕ್ಕರೆ ನಿದ್ದೆ ಹಾಳಾಯಿತೆಂದು ನಾನಾಗ ರೇಗುತ್ತಿದ್ದೆ. ಮುನಿಸಿಕೊಂಡು ಕೂತಾಗ `ಅಕೊ ಬಂತು ನಗೆ ಅಕೊ ಬಂತು ನಗೆ’ ಎಂದು ಅಜ್ಜ ರಾಗವಾಗಿ ಹಾಡಿ ನನ್ನನ್ನು ನಗಿಸಿದ್ದರು.  ಶಾಲಾ ದಿನಗಳಲ್ಲಿ ಭಾಷಣ, ಚರ್ಚಾಕೂಟ, ಪ್ರಬಂಧ ಇತ್ಯಾದಿ ಯಾವುದೇ ಸ್ಪರ್ಧೆಗಳಿಗೆ ಅಜ್ಜನೇ ನನಗೆ ಮಾರ್ಗದರ್ಶಿಯಾಗಿದ್ದರು. ಅಜ್ಜ ಬರೆದುಕೊಡು ಎಂದು ನಾನಂದರೆ `ನೀನೇ ಬರೆಯಬೇಕು. ಸ್ಪೂನ್ ಫೀಡಿಂಗ್ ಒಳ್ಳೆಯದಲ್ಲ. ನಾನು ಬರೆದುಕೊಡಬಹುದು. ಆದರೆ ಅದರಿಂದ ನೀನು ಬೆಳೆಯುವುದಿಲ್ಲ. ನಿನಗೆ ಅನಿಸಿದ್ದನ್ನು ಬರೆ. ತಿದ್ದಿಕೊಡುವೆ’ ಎನ್ನುತ್ತ ನನ್ನ ಎಲ್ಲಾ ಚಟುವಟಿಕೆಗಳಿಗೆ ಅಜ್ಜ ಸದಾ ಪ್ರೋತ್ಸಾಹ ನೀಡಿದ್ದರು. ಅಜ್ಜನ ಹುಟ್ಟುಹಬ್ಬದ ದಿನ ಅಜ್ಜನಿಗೆ ಶುಭಾಶಯ ಹೇಳಿದಾಗ ಉಡುಗೊರೆ ಕೊಡು ಎನ್ನುತ್ತಿದ್ದರು. ಆಗ ನಾನು ಪೆನ್ನು ಅಥವಾ ಗೋಂದು ಕೊಟ್ಟರೆ ಅಜ್ಜ ಅದೆಷ್ಟು ಸಂಭ್ರಮಿಸುತ್ತಿದ್ದರು ಎಂಬುದು ಈಗಲೂ ಕಣ್ಣೆದುರು ಬರುತ್ತದೆ. ನನ್ನ ಹುಟ್ಟುಹಬ್ಬಕ್ಕೆ ತಪ್ಪದೇ ಶಾಲೆಯ ವಿಳಾಸಕ್ಕೆ ಒಂದು ಕಾರ್ಡು ಬರುತ್ತಿತ್ತು. ಅದರಲ್ಲಿ ಚುಟುಕವಿರುತ್ತಿತ್ತು. ಉದಾಹರಣೆಗೆ

ಹದಿಮೂರು ವರುಷಗಳ ಹಿಂದಿನೀ ದಿನದಂದು
ಮಧುರ ಕನಸೊಂದು ನನಸಾಯ್ತು: ಅಕ್ಷರಿ ಜನನ
ಮೊದಲ ನೋಟದಿ ಕಂಡ ಮುಗ್ಧ ನಗುವಿಂದರಳಿ
ಮುದ ಬೀರುತಿದೆ ಜಗಕೆ ಸೊಗಮಕ್ಕೆ ಅತ್ರಿಸೂನು

ಕಾಲೇಜು ದಿನಗಳಲ್ಲಿ ಒಮ್ಮೆ ಅಮ್ಮ ಊರಲ್ಲಿಲ್ಲದ ದಿನ ನಾನು ಉಮೇದಿನಿಂದ ಅಜ್ಜಿಯ ಸಹಾಯ ತೆಗೆದುಕೊಳ್ಳದೆ ಅಡುಗೆ ಮಾಡಲು ಹೊರಟಿದ್ದೆ. ಸಾಂಬಾರ್ ಸೀದು ಹೋಗಿತ್ತು. ಅಜ್ಜ ಅದರ ಬಗ್ಗೆ ಏನೊಂದೂ ಹೇಳದೆ ಸಾಂಬಾರ್ ಬಹಳ ಅದ್ಭುತವಾಗಿದೆ ಎಂದು ಹೊಗಳುತ್ತ ಊಟ ಮಾಡಿದ್ದರು. ನಾವು ಯಾವುದೇ ಸಮಾರಂಭಕ್ಕೆ ಹೋಗಲಿ, ಅಲ್ಲಿ ಊಟವಾದನಂತರ ಅಜ್ಜ ಯಾರು ಇವತ್ತು ಅಡುಗೆ ಮಾಡಿದ್ದು ಎಂದು ವಿಚಾರಿಸಿ ತಿಳಿದು ಅವರನ್ನು ಕಂಡು ಅಡುಗೆ ಬಹಳ ರುಚಿಯಾಗಿತ್ತು ಎಂದು ಹೇಳಲು ಮರೆಯುತ್ತಿರಲಿಲ್ಲ.

ಅಜ್ಜನೊಡನೆ ಸಂಗಿತ ಕಾರ್ಯಕ್ರಮಗಳಿಗೆ ನಾನು ಕೆಲವೊಮ್ಮೆ ಹೋಗುತ್ತಿದ್ದೆ. ನಡೆದು ಹೋಗುವುದಾದರೆ ದಾರಿಯುದ್ದಕ್ಕೂ ಕಥೆ ಹೇಳುತ್ತ ಹೋಗಬೇಕು ಎಂದು ನಾನು ಅಜ್ಜನಿಗೆ ಮೊದಲೇ ಷರತ್ತು ವಿಧಿಸುತ್ತಿದ್ದೆ. ಹಾಗೆ ಅಜ್ಜ ನನ್ನಾಜ್ಞೆಯನ್ನು ಒಪ್ಪಿ ಅನೇಕ ಕಥೆ ಹೇಳುತ್ತಿದ್ದರು. ಸಂಗೀತ ಕಲಿಯಲು ನಾನು ಪ್ರಾರಂಭಿಸಿದಮೇಲೆ ಕಛೇರಿಗಳಲ್ಲಿ ಸಂಗೀತ ಆಲಿಸುತ್ತ ಕುಳಿತಿರುವಾಗ `ಇದು ಯಾವ ರಾಗ ಹೇಳು ಎಂದು ಪ್ರಶ್ನಿಸುತ್ತ, ಸರಿ ಹೇಳಿದರೆ ಭೇಷ್ ಎಂದು ಪ್ರೋತ್ಸಾಹಿಸುತ್ತ, ತಪ್ಪು ಹೇಳಿದಾಗ ಇಂಥ ರಾಗ ಇದು ಎಂದು ಹೇಳುತ್ತ ನನ್ನ ಸಂಗೀತ ಜ್ಞಾನವನ್ನು ವೃದ್ಧಿಸಿದ್ದರು. ಸಂಗೀತ ಕೇಳಿ ಮನೆಗೆ ಬಂದು ಊಟ ಮಾಡಿದ ಕೂಡಲೇ ಗಣಕದ ಎದುರು ಕುಳಿತು ಅಂದಿನ ಸಂಗೀತದ ವಿಮರ್ಶೆಯನ್ನು ತಡ ರಾತ್ರಿಯಾದರೂ ಸರಿ ಬರೆದು ಮುಗಿಸಿ ಮಾರನೇ ದಿನ ಬೆಳಗ್ಗೆಯೇ ಅದನ್ನು ಮಿಂಚಂಚೆ ಕಳುಹಿಸಲು ನಮಗೆ ಹೇಳುತ್ತಿದ್ದರು. ನಾವು ಕಳುಹಿಸುವಲ್ಲಿವರೆಗೂ ಕೇಳುತ್ತಲೇ ಇರುತ್ತಿದ್ದರು. ಅದನ್ನು ಕಳುಹಿಸಿದಮೇಲೇಯೇ ಅವರು ಸಮಾಧಾನವಾಗುತ್ತಿದ್ದುದು. ಒಡನೆಯೇ ಪತ್ರಿಕಾ ಕಚೇರಿಗೆ ದೂರವಾಣಿ ಮಾಡಿ ಕಳುಹಿಸಿದೆ ಎಂದು ಹೇಳುತ್ತಿದ್ದರು. ಏನೇ ಕೆಲಸ ಮಾಡಿದರೂ ಅದು ಆಗಿದೆಯಾ ಇಲ್ಲವೇ ಎಂದು ಜವಾಬು ಉತ್ತರ ಸಂಬಂಧಿಸಿದವರಿಗೆ ಕೂಡಲೆ ಕೊಡಬೇಕು ಎಂದು ನಮಗೆ ಕಲಿಸಿದ್ದರು. ನೆಂಟರು ಯಾರೇ ಮನೆಗೆ ಬಂದಿದ್ದರೂ ಆ ದಿನ ಸಂಗೀತ ಕಚೇರಿ ಎಲ್ಲಾದರೂ ಇದ್ದರೆ ಅಜ್ಜ ಹೋಗುವುದನ್ನು ತಪ್ಪಿಸುತ್ತಿರಲಿಲ್ಲ. ನೆಂಟರಿಗೆ ನೀವು ಬರುವುದಾದರೆ ಬನ್ನಿ ಸಂಗೀತಕ್ಕೆ. ಎನ್ನುತ್ತಿದ್ದರು. ಅವರೂ ಒಪ್ಪಿದರೆ `ಸಂಜೆ ೫ ಗಂಟೆಗೆ ಸರಿಯಾಗಿ ಹೊರಡಬೇಕು ಎಂಬ ಆಜ್ಞೆ ವಿಧಿಸುತ್ತಿದ್ದರು!  ಚಳಿ ಇರಲಿ, ಮಳೆ ಇರಲಿ, ಹವಾಮಾನ ಏರುಪೇರಾಗಲಿ, ಸಂಗೀತ ಕಛೇರಿ ನಡೆಯುವ ಜಾಗ ಎಷ್ಟೇ ದೂರದಲ್ಲಿರಲಿ ಹಾಗೆಂದು ಅಜ್ಜ ಸಂಗೀತ ಕೇಳಲು ಹೋಗುವುದನ್ನು ತಪ್ಪಿಸುತ್ತಿರಲಿಲ್ಲ. ಸಮಯಕ್ಕೆ ಸರಿಯಾಗಿ ಅಲ್ಲಿ ಹಾಜರಿರುತ್ತಿದ್ದರು.
ಹಾಗೆಂದೇ ಅಜ್ಜ ಬರೆದದ್ದು

ಸಂಗೀತವೆನ್ನುಸಿರು ಸಾಹಿತ್ಯವೆನ್ನೊಡಲು
ವಿಜ್ಞಾನವೆನ್ನಶನ ಅಧ್ಯಾತ್ಮದೆಡೆಗಮನ
ನಿರಪೇಕ್ಷ ನಿಸ್ವಾರ್ಥ ನಿರ್ಮೋಹ ಸೇವೆ ಗುರಿ
ಅಜ್ಞಾನತಮ ನಿವಾರಣೆ ಧ್ಯೇಯ ಅತ್ರಿಸೂನು

ಪರಿಶುದ್ಧ ಗಾಯನಕೆ ಶರಣಾಗು ನೀಬೆಳೆವೆ
ಪರಿಪರಿಯ ಆಮಿಷಕೆ ಮರುಳಾಗು ನೀನಳಿವೆ
ಗುರಿಯಿರಲಿ ನಕ್ಷತ್ರ, ನಡೆಯಿರಲಿ ತಿರೆ ಮೇಲೆ
ತೆರೆಯುವರು ಕದ ವಾಣಿ- ಲಕ್ಷ್ಮಿಯರು ಅತ್ರಿಸೂನು.

ಚಾಮುಂಡಿಬೆಟ್ಟದ ಸುತ್ತಳತೆ ಸುಮಾರು ೧೬ ಕಿ.ಮೀ. ಬೆಟ್ಟದ ಸುತ್ತ ತಂತಿ ಬೇಲಿ ಹಾಕಿದ್ದಾರೆ. ಚಾಮುಂಡಿಬೆಟ್ಟದ ಪಾದದಿಂದ ಅಂದರೆ ಮೆಟ್ಟಲು ಪ್ರಾರಂಭವಾಗುವಲ್ಲಿಂದ ಆ ಬೇಲಿ ಪಕ್ಕವೇ ನಾವು ೩೦ ಮಂದಿ ಬೆಳಗ್ಗೆ ೭.೩೦ಕ್ಕೆ ನಡಿಗೆ ಪ್ರಾರಂಭಿಸಿದೆವು. ಮೊದಲಿಗೆ ಔಷಧೀವನ ಸಿಗುತ್ತದೆ. ನೂರಾರು ಜಾತಿಯ ಔಷಧೀಯ ಗಿಡಗಳನ್ನು ಈತ್ತೀಚೆಗೆ ನೆಟ್ಟು ಪೋಷಿಸಲಾಗುತ್ತಿದೆ. ಬಿಸಿಲಿನ ತೀವ್ರತೆಯನ್ನು ಮೆಟ್ಟಿನಿಂತು ಈ ಗಿಡಗಳು ಬೆಳೆಯಬೇಕು. ಬೆಳೆದು ಒಳ್ಳೆಯ ವನವಾಗಬೇಕಾದರೆ ಪ್ರತೀದಿನ ನೀರುಣಿಸುವುದು ಅತ್ಯವಶ್ಯಕ. ತಾವರೆಕಟ್ಟೆಗೆ ೮.೧೫ಕ್ಕೆ ತಲಪಿದೆವು. ಮುಕ್ಕಾಲು ಗಂಟೆ ಅಲ್ಲೇ ಹರಟೆ ಹೊಡೆಯುತ್ತ ಕಾಲ ಕಳೆಯಬೇಕಾಯಿತು. ತಿಂಡಿ ತೆಗೆದುಕೊಂಡು ಬರುವವರು ಏನೋ ತೊಂದರೆಗೆ ಸಿಲುಕಿ ಬರುವುದು ತಡವಾಯಿತು. ತಟ್ಟೆ ಇಡ್ಲಿ ವಡೆ ತಿಂದು ನಡಿಗೆ ಮುಂದುವರಿಯಿತು. ಸುಮಾರು ೨ ಕಿ.ಮೀ ಕ್ರಮಿಸಿದಾಗ ಬಾಳೆಹಣ್ಣು ವಿತರಣೆಯಾಯಿತು. ಮುಂದೆ ಸಾಗಿದಂತೆ ಗಿಡಮರಗಳೇನೂ ದಟ್ಟವಾಗಿ ಇರಲಿಲ್ಲ. ಅದು ನಿರಾಸೆಯನ್ನೆ ತಂದಿತು. ಅಲ್ಲಲ್ಲಿ ನೀಲಗಿರಿ ತೋಪು ಬಿಟ್ಟರೆ ಬೇರೆ ಮರಗಳೇ ವಿರಳ ಎನ್ನಬಹುದು. `ಹಲವು ಬಗೆಯ ಸಸ್ಯಪ್ರಭೇದಗಳು, ಪಕ್ಷಿಗಳು, ಸಸ್ತನಿ, ಇತ್ಯಾದಿ ನೋಟ ನಮಗೆ ಕಾಣಸಿಗುತ್ತದೆ’ ಎಂದು ನಾವು ನಡಿಗೆ ಪ್ರಾರಂಭಿಸುವ ಮೊದಲು ನಮಗೆ ವಿವರಿಸಿದ್ದರು. ಆದರೆ ನಮಗೆ ಅವುಗಳು ಯಾವುವೂ ಗೋಚರಿಸದೆ ಇದ್ದುದು ನಮ್ಮ ದೌರ್ಭಾಗ್ಯವೆನ್ನಬಹುದು. ಬೆಟ್ಟದ ವಿಹಂಗಮ ನೋಟ ಮಾತ್ರ ನಮ್ಮನ್ನು ಸೆಳೆಯುತ್ತದೆ.

           ಮುಂದೆ ಸಾಗಿದಂತೆ ಬಿಸಿಲ ಝಳ ಹೆಚ್ಚುತ್ತಲಿತ್ತು. ಕೆಲವು ಮಂದಿ ಸೇಂಕುತ್ತ, ಬಿಸಿಲಿಗೆ ಕೆಂಪಾದರೂ  ಉತ್ಸಾಹದಿಂದಲೇ ನಡೆಯುತ್ತಿದ್ದರು. ಆಗ ಕಿತ್ತಳೆ ಹಣ್ಣು ಸೇವನೆ ಉತ್ತೇಜನಕೊಟ್ಟಿತು. ಕೆಲವು ಮರಗಳಿಗೆ ಗೆದ್ದಲು ಹತ್ತಿತ್ತು. ಅದನ್ನು ಒಂದು ಕಡ್ಡಿಯಿಂದ ಬಿಡಿಸುತ್ತ ನಿಂತಿದ್ದೆ. ಆಗ ಒಬ್ಬರು `ನೀವು ಗೆದ್ದಲಿಗೆ ಅನ್ಯಾಯ ಮಾಡುತ್ತಿದ್ದೀರಿ’ ಎಂದರು. ಹೌದೆ?  ಗೆದ್ದಲಿನಿಂದ ಮರ ರಕ್ಷಣೆ ಮಾಡಿದರೆ ಗೆದ್ದಲಿಗೆ ತೊಂದರೆ, ಗೆದ್ದಲನ್ನು ಮರದಿಂದ ತೆಗೆಯದಿದ್ದರೆ ಮರಕ್ಕೆ ಅನ್ಯಾಯ ಮಾಡಿದಂತಾಗುತ್ತದಲ್ಲ ಎಂಬ ದ್ವಂದ್ವಭಾವದಿಂದ ಕಂಗಾಲಾಗಿ ಆ ಕೆಲಸ ಅಲ್ಲಿಗೇ ಬಿಟ್ಟು ಸಾಗಿದೆ. ಮುಂದೆ ಒಂದು ಕಡೆ ಕಲ್ಲಂಗಡಿಹಣ್ಣಿನ ಸಮಾರಾಧನೆಯಾಗಿ ಸ್ವಲ್ಪ ಹೊತ್ತು ವಿಶ್ರಮಿಸಿ ಮುಂದುವರಿದೆವು. ಯಾರ ಉತ್ಸಾಹವೂ ಆಗ ಕುಂದಿರಲಿಲ್ಲ. ನಮ್ಮೊಂದಿಗೆ ನಾರಾಯಣ ರಾವ್ ಎಂಬವರು ಕಾರಿನಲ್ಲಿ ಹಣ್ಣುಗಳನ್ನು ತುಂಬಿ ಬಂದಿದ್ದರು. ಅವರು ರಸ್ತೆಯಲ್ಲಿ ಸಾಗುತ್ತ ನಮ್ಮನ್ನು ಅಲ್ಲಲಿ ಭೇಟಿಯಾಗಿ ಹಣ್ಣು ಹಂಚುತ್ತಿದ್ದರು. ತಾವರೆಕಟ್ಟೆಯಿಂದ ಹೊರಡುವಾಗ `ಯಾರಿಗಾದರೂ ನಡೆಯಲು ಆಗದಿದ್ದರೆ ಕಾರಿನಲ್ಲಿ ಬನ್ನಿ’ ಎಂಬ ಆಹ್ವಾನ ಕೊಟ್ಟಿದ್ದರವರು. ಆದರೆ ಯಾರೂ ಕಾರು ಹತ್ತಲು ತಯಾರಿರಲಿಲ್ಲ. `ಮಧ್ಯಾಹ್ನ ಕಳೆಯಲಿ. ಆಗ ನೋಡಿ ನಿಮ್ಮ ಕಾರಿಗೆ ನಾ ಮುಂದು ತಾ ಮುಂದು ಎಂದು ಕಾರು ಹತ್ತಲು ಮುಗಿಬೀಳುತ್ತಾರೆ’ ಎಂದಿದ್ದೆ. ಅವರೂ ನಕ್ಕು `ಅದು ಹೌದು’ ಎಂದಿದ್ದರು.

       ಮಾತಾಡುತ್ತ ಒಬ್ಬರಿಗೊಬ್ಬರು ತಮಾಷೆ ಮಾಡಿಕೊಳ್ಳುತ್ತ, ನಡೆಯುತ್ತ ಮುಂದೆ ಸಾಗಿ ಉತ್ತನಹಳ್ಳಿ ದಾಟಿದೆವು. `ಈ ಬಿಸಿಲಿನಲ್ಲಿ ಹೀಗೆ ನಡೆಯುತ್ತ ಸಾಗಿದ್ದಾರಲ್ಲ ಇದೇನು ಹುಚ್ಚು, ಇವರಿಗೆ ಮಾಡಲು ಏನೂ ಕೆಲಸವಿಲ್ಲವೇ? ಎಂದು ನಮ್ಮನ್ನು ನೋಡಿದ ಕೆಲವರಿಗೆ ಅನಿಸಬಹುದು. ಆದರೆ ನಾವು ಎಷ್ಟು ಖುಷಿಯಿಂದ ಇಷ್ಟು ಜನ ಒಂದೇ ಭಾವನೆಯಿಂದ ಈ ಬಿಸಿಲಿನಲ್ಲಿ ನಡೆಯುತ್ತಿದ್ದೇವಲ್ಲ ಅದೇ ಸೋಜಿಗ’ ಎಂದು ನಮ್ಮ ತಂಡದ ಒಬ್ಬರೆಂದರು. ಹೌದಲ್ಲ ಎನಿಸಿತು ನನಗೆ. ಅಲ್ಲೇ ರಸ್ತೆ ಬದಿಯಲ್ಲಿ ಊಟಕ್ಕಾಗಿ ಕಾದೆವು.  ಐದಾರು ಮಂದಿ ಬರಲು ಸ್ವಲ್ಪ ತಡವಾಯಿತು. ಬಿಸಿಲ ಬೇಗೆಗೆ ಅವರು ಬಲು ಸುಸ್ತಾಗಿದ್ದರು.  ಅನ್ನ, ಸಾರು, ಹಪ್ಪಳ, ಸಾಂಬಾರ್, ಮೊಸರನ್ನ, ಹೆಸರುಬೇಳೆ ಪಾಯಸದ ಪುಷ್ಕಳ ಭೋಜನವಾಯಿತು.

ಭೋಜನವಾದದ್ದೇ ನಾರಾಯಣ ರಾಯರ ಕಾರು ಹತ್ತಲು ಜನ ಸಾಕಷ್ಟು ಇದ್ದರು. ಆರು ಮಂದಿ ಆಯಾಸದಿಂದ ಬಸವಳಿದವರು ಕಾರಿಗೆ ಹೇಗೋ ಅಂತೂ ತೂರಿಕೊಂಡು ಮರಳಿ ಮನೆಗೆ ಹೋದರು. ಸೂರ್ಯನ ಕಾವು ಏರುತ್ತಲೇ ಇತ್ತು. ಉಳಿದ ೨೪ ಮಂದಿ ಸಮ್ಟೋಷದಿಂದಲೇ ನಡಿಗೆ ಮುಂದುವರಿಸಿದೆವು. ಮುಂದೆ ಸಾಗುತ್ತಿದ್ದಂತೆ ನಮ್ಮೆದುರು ಪ್ಲಾಸ್ಟಿಕ್ ತ್ಯಾಜ್ಯದ ಗುಪ್ಪೆಯೇ ತೆರೆದುಕೊಂಡಿತು. ನಗರದ ಪ್ಲಾಸ್ಟಿಕ್ ಎಲ್ಲವನ್ನೂ ಅಲ್ಲಿ ಸುರಿದಿರುವುದು ಕಂಡು ಮನಸ್ಸು ಮುದುಡಿತು. ಬೆಟ್ಟದ ಸುತ್ತ ಬೇಲಿ ಹಾಕಿರುವುದು ಸರಿಯಷ್ಟೆ. ಆದರೆ ಒಂದೊಂದು ಹಳ್ಳಿ ಕಡೆಯೂ ಒಬ್ಬರು ನುಗ್ಗುವಷ್ಟು ಬೇಲಿಯನ್ನು ಬಿಚ್ಚಿಟ್ಟಿದ್ದಾರೆ ಜನರು. ಬೆಟ್ಟದತ್ತ ತೆರಳಲು ಸುಲಭ ದಾರಿ ಮಾಡಿಕೊಂಡಿದ್ದಾರೆ. ಕೆಲವು ಕಡೆ ಗಣಿಗಾರಿಕೆ ಮಾಡಿರುವುದು ಕಂಡಿತು. ಒಂದು ಕಡೆ ಬೆಟ್ಟಕ್ಕೆ ತೆರಳುವ ಮಾರ್ಗದಿಂದ ಕೆಲವೇ ಮೀಟರು ಅಂತರದಲ್ಲಿ ಕಲ್ಲುಬಂಡೆ ಒಡೆದು ದೊಡ್ಡ ಹಳ್ಳವಾಗಿದೆ. ಅದನ್ನು ನೋಡುವಾಗ ರಸ್ತೆ ಕುಸಿಯಲು ಹೆಚ್ಚು ವರ್ಷ ಬೇಕಿಲ್ಲವೆನಿಸುತ್ತದೆ. ಇನ್ನೊಂಡು ಕಡೆ ದೊಡ್ಡ ಹಳ್ಳವಾಗಿ ನೀರು ನಿಂತಿದೆ. ಆ ಕೆರೆ ನೀರನ್ನು ಕೆಲವು ಹೆಂಗಸರು ಬಳಸುವುದು ಕಂಡಿತು. ಅದು ಎಷ್ಟು ಕಶ್ಮಲಗೊಂಡಿದೆಯೋ ಎಂಬ ಸಂಶಯವೂ ಕಾಡಿತು.

ನಡೆಯುತ್ತ ಬೆಟ್ಟದ ಪಾರ್ಶ್ವ ಭಾಗಕ್ಕೆ ಬಂದಾಗ ಅರಣ್ಯಪಾಲಕ ಚಿಕ್ಕಯ್ಯ ನಮ್ಮನ್ನು ತಡೆದು ನಿಲ್ಲಿಸಿದರು. `ಯಾರು ನಿಮಗೆ ಅಲ್ಲಿ ತೆರಳಲು ಪರ್ಮಿಷನ್ ಕೊಟ್ಟವರು? ಹಾಗೆಲ್ಲ ಹೋಗುವಂತಿಲ್ಲ. ಹಿಂದೆ ಬನ್ನಿ. ಬೇಲಿಯಿಂದ ಹೊರಗೆ ಬನ್ನಿ. ರಸ್ತೆಯಲ್ಲಿ ಹೋಗಿ’ ಎಂದರು. ನಮ್ಮ ಉಸ್ತುವಾರಿ ಹೊತ್ತವರೂ `ನಾವು ಒಪ್ಪಿಗೆ ಪಡೆದೇ ಇಲ್ಲಿ ಬಂದಿರುವುದು. ನಮ್ಮೊಂದಿಗೆ ಇಬ್ಬರು ಅರಣ್ಯಪಾಲಕರು ಇದುವರೆಗೂ ಇದ್ದರು. ಅವರು ನಮ್ಮ ಜೊತೆಯೇ ಊಟ ಮಾಡಿ ಹೋದರು’ ಎಂದುತ್ತರ ಕೊಟ್ಟರು. ಆದರೂ ಚಿಕ್ಕಯ್ಯ ಮೇಲೆ ಹತ್ತಿ ನಮ್ಮೆಡೆಗೆ ಬಂದು ಬೇಲಿ ಹೊರಭಾಗ ನಿಂತು `ಹೊರಗೆ ಬನ್ನಿ. ಕಾಡಿಗೆ ಬೆಂಕಿ ಬಿದ್ದರೆ ಹೊಣೆ ಯಾರು? ಬೇಡ ಮುಂದೆ ಹೋಗುವುದು’ ಎಂದು ಜೋರಾದ ದನಿಯಲ್ಲಿ ಹೇಳಿದರು. ಆಗ ಪರಸ್ಪರ ವಾದ ವಾಗ್ವಾದಗಳ ಬಿಸಿ ಏರಿತು. `ನೋಡಿ, ನಾವು ಪರ್ಮಿಷನ್ ಕೇಳಿಯೇ ಬಂದಿರುವುದು. ನಾವು ಇಂಥ ಹುದ್ದೆಯಲ್ಲಿದ್ದವರು, ನಮ್ಮ ಜೊತೆ ಹೆಂಗಸರು, ಮಕ್ಕಳು, ವಯಸ್ಸಾದವರೂ ಇದ್ದಾರೆ. ನಮ್ಮಲ್ಲಿ ಬೆಂಕಿಪೊಟ್ಟಣ ಇಲ್ಲ. ಅಂತವರು ನಾವಲ್ಲ. ಬೆಳಗಿನಿಂದಲೇ ನಡೆಯುತ್ತಿದ್ದೇವೆ’ ಇತ್ಯಾದಿ ನಾವು ಹೇಳಿದಾಗ ಮೆತ್ತಗಾದ ಚಿಕ್ಕಯ್ಯ. `ನೀವು ನಮ್ಮನ್ನು ತಡೆದು ನಿಲ್ಲಿಸಿ ಕೇಳಿದ್ದು ಒಳ್ಳೆಯದಾಯಿತು.  ನಿಮ್ಮ ಕರ್ತವ್ಯವನ್ನು ಚೆನ್ನಾಗಿಯೇ ನಿಭಾಯಿಸಿದಿರಿ. ಅಷ್ಟು ಎಚ್ಚರದಿಂದ ಕಾಡು ಕಾಯುತ್ತೀದ್ದೀರಲ್ಲ ಬಹಳ ಖುಷಿಯಾಯಿತು’ ಎಂದು ಪ್ರಶಂಸನಾ ಮಾತು ಹೇಳಿದೆ. ಅದರಿಂದ ಅವರಿಗೆ ಬಲು ಸಮಾಧಾನವಾಯಿತು. ನಿಜಕ್ಕೂ ಅವರು ಕರ್ತವ್ಯವನ್ನು ಸರಿಯಾಗಿಯೇ ಪಾಲಿಸಿದ್ದರು. ಚಿಕ್ಕಯ್ಯ ಅವರೇ ಬೇಲಿ ದಾಟಿ ಒಳಗೆ ಬಂದು ನಮಗೆ ಮುಂದೆ ಬೇಲಿಯಿಂದ ಹೊರ ಹೋಗಲು ದಾರಿ ತೋರಿಸಿಕೊಟ್ಟರು. ಬೆಟ್ಟದ ಸುತ್ತ ಚಿರತೆಗಳೂ ಇರುವುದು ನಿಜ ಎಂಬ ವಿಷಯ ಬಹಿರಂಗಪಡಿಸಿದರು.  ಅವರಿಗೆ ಬೇಸಿಗೆಯಲ್ಲಿ ಒಂದು ದಿನವೂ ರಜಾ ಇಲ್ಲವಂತೆ. ಎಲ್ಲ ದಿನವೂ ಕರ್ತವ್ಯಕ್ಕೆ ಹಾಜರಾಗಲೇಬೇಕಂತೆ. ಮಳೆಗಾಲದಲ್ಲಿ ಎಷ್ಟು ರಜ ಬೇಕಾದರು ಹಾಕಬಹುದಂತೆ! ಮಳೆಗಾಲದಲ್ಲಿ ಬೆಟ್ಟದ ಸುತ್ತಮುತ್ತ ಗಿಡ ನೆಡುತ್ತಾರಂತೆ. ಕೆಲಸವೇನೂ ಖಾಯಂ ಅಲ್ಲವಂತೆ. ಸಂಬಳ ಬಲು ಕಡಿಮೆ ಎಂದು ಸರ್ಕಾರದ ಕ್ರಮವನ್ನು ತರಾಟೆಗೆ ತೆಗೆದುಕೊಂಡರು. ಚಿಕ್ಕಯ್ಯ ಅವರಿಗೆ ಕೃತಜ್ಞತೆ ಅರ್ಪಿಸಿ ಮುಂದೆ ಸಾಗಿದೆವು.

     ಗೌರೀಶಂಕರನಗರ ದಾಟಿ ನಾವು ಬೆಟ್ಟದ ಪಾದದ ಕಡೆಗೆ ಬಂದೆವು. ಗೌರೀಶಂಕರನಗರದಲ್ಲಿ ಒಂದು ಕಡೆ ದೊಡ್ಡ ಮಟ್ಟದಲ್ಲಿ ವಿಭೂತಿ ತಯಾರಿಸುವುದನ್ನು ನೋಡಿದೆವು. ಅದೇನೋ ಸಾಧಿಸಿದೆವು ಎಂಬ ಸಂಭ್ರಮದಿಂದ ನಾವು ೧೬ ಕಿ.ಮೀ. ದೂರ ಕ್ರಮಿಸಿದ್ದು ಗೊತ್ತೇ ಆಗಲಿಲ್ಲ. `ಮನೆಯಲ್ಲೇ ಕೂರಬಾರದು. ಕೂತರೆ ಕೂತೇ ಹೋಗುತ್ತೇವೆ. ಹೀಗೆ ಚಾರಣ ಕಾರ್ಯ ಮಾಡುತ್ತಿರಬೇಕು. ಆಗ ಆರೋಗ್ಯಕ್ಕೂ ಒಳ್ಳೆಯದು’ ಎಂದು  ೭೦ ವರ್ಷದ ಆಸುಪಾಸಿನಲ್ಲಿರುವ ಸ್ವಾಮಿ ಹೇಳಿದರು. ಅವರು ಪ್ರತೀವರ್ಷ ಹಿರಿಯರ ಕ್ರೀಡಾಕೂಟದಲ್ಲಿ (ಈಜು, ಓಟ) ಭಾಗವಹಿಸುತ್ತಾರಂತೆ. ಬೆಳಗ್ಗೆ ೭.೩೦ಕ್ಕೆ ನಡಿಗೆ ಪ್ರಾರಂಭಿಸಿ ಅಲ್ಲಲ್ಲಿ ವಿಶ್ರಮಿಸುತ್ತ ಸಂಜೆ ಗಂಟೆ ೫ರ ಸುಮಾರಿಗೆ ಬೆಟ್ಟದ ಸುತ್ತ ಪರಿಭ್ರಮಣ ಮುಗಿಸಿದೆವು. ಶಕ್ತಿವರ್ಧಕ ಕಬ್ಬಿನಹಾಲು ಸೇವನೆಯಾಗಿ ೬ ಗಂಟೆಗೆ ಮನೆ ಸೇರಿದೆವು. ತಾರೀಕು ೧೮-೩-೨೦೧೨ರಂದು ಸ್ವಾಮಿ ಹಾಗೂ ಸೋಮಶೇಖರ್ ಯೂಥ್ ಹಾಸ್ಟೆಲ್ ಗಂಗೋತ್ರಿ ಘಟಕದ ವತಿಯಿಂದ ಈ ನಡಿಗೆಯ ನೇತೃತ್ವ ವಹಿಸಿದ್ದರು.

   

ಆಯುಧಗಳನ್ನು ಬಳಸದೆ ಸ್ವಸಾಮರ್ಥ್ಯದಿಂದ ಶಕ್ತಿ ಯುಕ್ತಿ ಬಳಸಿ ಇನ್ನೊಬ್ಬನೊಡನೆ ಗೆಲ್ಲುವ ಕ್ರೀಡೆಯೇ ಕುಸ್ತಿ. ಭಾರತದಲ್ಲಿ ರಾಮಾಯಣ ಮಹಾಭಾರತ ಕಾಲದಿಂದಲೂ ಕುಸ್ತಿ ಪ್ರಸಿದ್ಧಿ ಹೊಂದಿದೆ. ವಾಲಿ-ಸುಗ್ರೀವ, ಭೀಮ- ಹಿಡಿಂಬ, ಬಕ, ಕೀಚಕ, ಜರಾಸಂಧ, ಆಂಜನೇಯ, ದುರ್ಯೋಧನ, ಕಿರಾತಾರ್ಜುನ, ಕೃಷ್ಣ, ಜಾಂಬವ ಇತ್ಯಾದಿ ಪುರಾಣಾಂತರ್ಗತವಾಗಿವೆ. ಸಳನೆಂಬ ಸಾಮಾನ್ಯ ಬಾಲಕ ತನ್ನ ಗುರುವಿನ ಅಣತಿಯಂತೆ ಸಮಯಸ್ಫೂರ್ತಿಯಿಂದ ಹುಲಿಯೊಂದನ್ನು ಸಂಹರಿಸಿದ್ದು ಹೊಯ್ಸಳ ರಾಜ್ಯಕ್ಕೆ ಬುನಾದಿ ಆದದ್ದು ಚರಿತ್ರೆ. ಸಳನೂ ಉತ್ತಮ ಕುಸ್ತಿಪಟು ಆಗಿದ್ದಿರಲೇಬೇಕು. ಕಂಠೀರವ ನರಸರಾಜ ಒಡೆಯರ್ ಅವರು ಮೈಸೂರು ರಾಜ್ಯದ ಅಭಿವೃದ್ಧಿಗೆಂದು ಕೈಗೊಂಡ ಪಂಚ ಕಲ್ಯಾಣ ಯೋಜನೆಯಲ್ಲಿ ದೇಹದ ಸ್ವಾಸ್ಥ್ಯಕ್ಕೆ ಗರಡಿ, ಆಧ್ಯಾತ್ಮಕ್ಕೆ ರಾಮಮಂದಿರ, ನ್ಯಾಯಕ್ಕೆ ಅರಳಿಕಟ್ಟೆ, ಕೃಷಿಗೆ ಗೋಶಾಲೆ ಮತ್ತು ಗ್ರಾಮಕ್ಕೆ ಕೆರೆ ಸ್ಥಾಪಿಸಿದ್ದು ಇಂದಿಗೂ ಪ್ರತೀ ಗ್ರಾಮಗಳಲ್ಲಿಯ ಗ್ರಾಮದೇವತೆ ಹಬ್ಬಗಳಲ್ಲಿ ಮಹಿಳೆಯರಿಗೆ ಪೂಜೆ ಪುನಸ್ಕಾರ, ಅತಿಥಿ ಸತ್ಕಾರ, ಹಿರಿಯರಿಗೆ ನಾಟಕ, ಕಿರಿಯರಿಗೆ ಕುಸ್ತಿಯೇ ಪೂಜೆ. ರಕ್ಷಣಾ ಇಲಾಖೆಯಲ್ಲಿ ಆದ್ಯತೆ ಮೇರೆಗೆ ಕುಸ್ತಿಪಟುಗಳು ನೇಮಕಗೊಳ್ಳುವುದು ರಾಜರ ಕಾಲದಿಂದಲೂ ನಡೆಯುತ್ತಿದ್ದುದು, ಇಂದಿಗೂ ಅದು ರೂಢಿಯಲ್ಲಿದೆ. ನಲವತ್ತು ಅಡಿಯ ಸುತ್ತಳತೆಯ ಕೆಂಪು ಮಣ್ಣಿನಲ್ಲಿ ಕುಂಕುಮ ಕೇಸರಿ ಔಷಧೀಯ ಸಸ್ಯಗಳ ಮಿಶ್ರಣದ ಅಲಂಕೃತ ಅಖಾಡದಲ್ಲಿ, ಸುತ್ತಲೂ ಪ್ರೇಕ್ಷಕರ ಜಯಘೋಷದಲ್ಲಿ ತೀರ್ಪುಗಾರರು, ಗುರುಗಳು, ಉಸ್ತಾದರು, ಯಜಮಾನರು, ಮುಖಂಡರು, ಗಣ್ಯರನ್ನೊಳಗೊಂಡ ಕುಸ್ತಿ ಸಚಿವಾಲಯದ ಸಮ್ಮುಖದಲ್ಲಿ ನಿಯಮದಂತೆ ಕುಸ್ತಿ ಪಂದ್ಯಾವಳಿ ನಡೆಯುವುದು.


ಪ್ರತಿಯೊಬ್ಬ ಕುಸ್ತಿ ಪಟುವಿನಲ್ಲಿರಬೇಕಾದದ್ದು ಶಕ್ತಿ, ದಮ್ಮುಕಸ್ತು, ಪಟ್ಟುಗಳು (ಡಾವುಗಳು) ಹಾಗೂ ಚತುರತೆ. ಶಕ್ತಿಗೆ ಕಠಿಣ ಆಹಾರಕ್ರಮವಾದರೆ, ದಮ್ಮುಕಸ್ತಿಗೆ ಪ್ರಾಣಾಯಾಮ ಅತ್ಯವಶ್ಯ. ಡಾವುಗಳಲ್ಲಿ ಶಕ್ತಿ ಪ್ರಧಾನವಾದುದು ಭೀಮಸೇನೀ, ಯುಕ್ತಿ ಪ್ರಧಾನವಾದುದು ಹನುಮಂತೀ. ಕೈಕಾಲು ಮುರಿಯುವಂತದ್ದು ಜಾಂಬವತೀ, ಎಲ್ಲವೂ ಮಿಶ್ರಿತವಾದುದು ಜರಾಸಂಧೀ. ಸುಮಾರು ೧೪೬ ಡಾವುಗಳನ್ನು ಗುರುತಿಸಲಾಗಿದ್ದು, ಈಗ ಕೇವಲ ೧೦-೧೫ ರೂಢಿಯಲ್ಲಿವೆ. ನಿಗದಿತ ಸಮಯದೊಳಗೆ ಚಿತ್ ಮಾಡಿದಾಗ (ಬೆನ್ನು ಮಣ್ಣಿಗೆ ಮುಟ್ಟಿಸುವುದು) ಸೋಲು ಗೆಲುವು ನಿರ್ಧಾರವಾಗುತ್ತದೆ.
ಹೊಯ್ಸಳ ರಾಜ ಬಲ್ಲಾಳ ೨ ಮೈಸೂರು ತಾಲೂಕಿನ, ಕೆ.ಹೆಮ್ಮನಹಳ್ಳಿಯಲ್ಲಿ (ಬೋಗಾದಿ ರಸ್ತೆ ೯ನೇ ಕಿ.ಮೀ) ಕ್ರಿ.ಶ. ೧೧೮೮ರಲ್ಲಿ ಸ್ಥಾಪಿಸಿದ ಶ್ರೀ ಮಹಾಲಿಂಗೇಶ್ವರ ದೇವಾಲಯವು ಸಳನ ಕ್ಷಾತ್ರತ್ವವನ್ನು ನೆನೆಸಿ ಉಳಿಸಿ ಮುಂದುವರೆಸಿಕೊಂಡು ಹೋಗುವ ದೃಷ್ಟಿಯಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಧರ್ಮೋತ್ಥಾನ ನ್ಯಾಸದ ವತಿಯಿಂದ ೧೯೯೪ರಲ್ಲಿ ಮಹಾಲಿಂಗೇಶ್ವರ ದೇವಾಲಯ ಜೀರ್ಣೋದ್ಧಾರಗೊಳಿಸಿದಂದಿನಿಂದಲೂ ಪ್ರತೀಯುಗಾದಿಗೆ ರಾಜ್ಯಮಟ್ಟದ ನಾಡಕುಸ್ತಿ ಪಂದ್ಯಾವಳಿಯನ್ನು ಏರ್ಪಡಿಸುತ್ತ ಬಂದಿರುತ್ತದೆ. ಈ ಸಲದ ಪಂದ್ಯಾವಳಿ ೨೫-೩-೨೦೧೨ ಭಾನುವಾರ ಅಪರಾಹ್ಣ ೨.೩೦ರಿಂದ ೩೦ ಜೋಡಿಗಳಿಂದ ನಡೆಯಲಿದೆ.  ಶ್ರೀ ಜಯಚಾಮರಾಜ ಒಡೆಯರ್ ಗರಡಿ ಸಂಘದ ಪ್ರಧಾನ ಕಾರ್ಯದರ್ಶಿ ಯ/ಪೈ/ಎನ್. ಮಹಾದೇವ್ ಅವರ ಅಧ್ಯಕ್ಷತೆಯಲ್ಲಿ ಮೈಸೂರು ಜಿಲ್ಲೆಯ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ನಡೆಯಲಿರುವುದು. ಪ್ರೇಕ್ಷಕರಿಗೆ ಕುಳಿತುಕೊಳ್ಳಲು ಆಸನ ವ್ಯವಸ್ಥೆ ಇರುತ್ತದೆ. ಉಚಿತ ಪ್ರವೇಶ.

೧   ಬೋಗಾದಿ ಚೇತನ್             *      ರಮ್ಮನಹಳ್ಳಿ ಪ್ರತಾಪ
೨  ಶ್ರೀರಂಗಪಟ್ಟಣ ಮಂಜುನಾಥ      *      ಮೇಳಾಪುರ ವಿನಯಕುಮಾರ್
೩   ನಗುವಿನಹಳ್ಳಿ ಮೋಹನಕುಮಾರ್   *     ಕ್ಯಾತಮಾರನಹಳ್ಳಿ ಸುರೇಶ
೪    ಉದ್ಬೂರು ವೆಂಕಟೇಶ            *     ಮೈಸೂರು ಪ್ರಶಾಂತನಾಯಕ
೫   ಕ್ಯಾತಮಾರನಹಳ್ಳಿ ಮಂಜುನಾಥ      *     ಲಕ್ಷ್ಮೀಪುರ ಹೇಮಂತಕುಮಾರ್
೬   ಕ್ಯಾತಮಾರನಹಳ್ಳಿ ದೇವರಾಜು      *       ಮೈಸೂರು ಕೃಷ್ಣ ಮೇಟಗಳ್ಳಿ
೭   ಮೈಸೂರು ವಿಜಯ್             *      ಬೋಗಾದಿ ತ್ಯಾಗರಾಜು
೮    ಕ್ಯಾತಮಾರನಹಳ್ಳಿ ಮಹೇಂದ್ರ     *       ಹುಲ್ಲಿನಬೀದಿ ರವೀಂದ್ರ
೯   ನಗುವಿನಹಳ್ಳಿ ಮಂಜುನಾಥ        *      ರಮ್ಮನಹಳ್ಳಿ ವಿಜಿ
೧೦   ಮೇಳಾಪುರದ ದೀಪಕ್          *     ಹೊಸುಂಡಿ ಚಂದ್ರ
೧೧   ನಗುವಿನಹಳ್ಳಿ ನವೀನ           *     ಉದ್ಬೂರು ಮಹದೇವ
೧೨   ಜಿ.ಬಿ. ಸರಗೂರು ಮಹೇಶ       *     ರಮ್ಮನಹಳ್ಳಿ ಗೋಪಾಲ
೧೩  ಮಹದೇವಪುರ ದೇವರಾಜು       *    ಉದ್ಬೂರು ಸುಂದರ
೧೪  ಕ್ಯಾತಮಾರನಹಳ್ಳಿ ಬಸವರಾಜು     *    ಬೋಗಾದಿ ಪ್ರಸನ್ನ
೧೫  ಜಿ.ಬಿ. ಸರಗೂರು ಅಶೋಕ      *    ಮೇಳಾಪುರ ಪವನಕುಮಾರ
೧೬    ಬೋಗಾದಿ ಮಂಜು             *    ಜಟ್ಟಿಹುಂಡಿ ಭೈರವ
೧೭   ಕ್ಯಾತಮಾರನಹಳ್ಳಿ ಜಗದೀಶ       *    ನಂಜನಗೂಡು ಶ್ರೀಕಂಠ
೧೮   ಕ್ಯಾತಮಾರನಹಳ್ಳಿ ರಮೇಶ        *    ಬೋರೆ ಆನಂದೂರು ಪಾಪಣ್ಣ
೧೯   ಬೋಗಾದಿ ಮಂಜೇಶ            *    ಶ್ರೀರಂಗಪಟ್ಟಣ ಶ್ರೀನಿವಾಸ
೨೦   ಬೋಗಾದಿ ರವಿಕಿರಣ            *     ನಂಜನಗೂಡು ಗುರುಪ್ರಸಾದ
೨೧   ಅಶೋಕಪುರ ಕಿರಣ ಆರ್        *    ಉದ್ಬೂರು ಗಿರೀಶ
೨೨   ಚಂದಗಾಲದ ಸೀನ              *     ಕೆ.ಹೆಮ್ಮನಹಳ್ಳಿ ಸೋಮು
೨೩   ಸುಣ್ಣದಕೇರಿ ವಾಸಿಂಪಾಷ         *     ಗಾಂಧಿನಗರ ಕೆ.ಕಿರಣ
೨೪   ಮೈಸೂರು ಅಮೃತಕುಮಾರ      *     ಬೋಗಾದಿ ರಘು
೨೫    ಚಂದಗಾಲದ ರಾಜ             *   ನಂಜನಗೂಡು ಗುರು
೨೬   ಬೋಗಾದಿ ಸಿ. ಕುಮಾರ            *    ಕ್ಯಾತಮಾರನಹಳ್ಳಿ ಗುರು
೨೭   ನಗುವನಹಳ್ಳಿ ಶೇಖರ್            *     ನಂಜನಗೂಡು ಶಿವಕುಮಾರ
೨೮  ಹೆಬ್ಬಾಡಿಹುಂಡಿ ಸಿದ್ದಿಕ್ ಪಾಷಾ      *     ಲಕ್ಷ್ಮೀಪುರ ರಾಘವೇಂದ್ರ
೨೯ ಉದ್ಬೂರು  ವಾಸು                *     ನಗುವನಹಳ್ಳಿ ವಿನಯಕುಮಾರ
೩೦ ಬೋಗಾದಿ ಶಂಕರ್                *      ಭೂತನಪುರ ಎಂ ದೀಕ್ಷಿತ್

ಜಿ.ಎನ್. ಅನಂತವರ್ಧನ
ಮನೆ ಸಂಖ್ಯೆ ೮ ಅತ್ರಿ ಕಾಮಾಕ್ಷಿ ಆಸ್ಪತ್ರೆ ರಸ್ತೆ,

ಸರಸ್ವತೀಪುರ,

ಮೈಸೂರು ೫೭೦೦೦೯, ೯೪೪೯೨೬೪೯೨೦

     Wrestling is a sport where one person wins over the other with his own strength & intelligence, without using any weapons. Its existence is traced to Ramayana & Mahabharatha period. Famous bouts are of Vaali-Sugreeva, Bhima- Hidimba, Baka, Keechaka, Jharasandha, Anjaneya, Duryodhana; Keeraatharjuna, Krishna-Jambava etc. The birth of Hoysala dynasty starts from Sala, a common lad who killed a tiger instantaneously at the orders of his guru, is now history. Sala probably must be a wrestler. You can find even today the Five-point program introduced by Kanteerava Narasaraja Wadeyar for the welfare of villagers in every villages of  Mysuru: Garadi for body health; Rama Mandira for mental peace; Aralikatte for settling disputes, rendering justice; Goshalas for agriculture and pond for the village. In every annual village  fairs, women would be engaged in religious activities, elderly people in mythological dramas whereas for the young, this wrestling competitions would be puje. Wrestlers were being preferred for the defence of the kingdom which are even now followed.

Traditional wrestling, called as Naada Kusti, will be held on a 40feet diameter round soft mud heap, called as Akhada, as per strict traditional rules. It will be mixed with kukum, kesari and other medicinal preparations and decorated like a god. It will be surrounded by enthusiastic audience, judges, gurus, ustads, chieftans, leaders, dignatories etc called as the ‘Kusti Sachivaalaya’.

A wrestler should possess strength(energy, stamina), resistance power, techniques and intelligence. Strict food habits are compulsory for conserving energy and breathing exercises(pranayaama) for resistance power. Techniques (also called as pattu or daavu) are classified as Bhimaseni, where energy is prominent, anjaneya where intelligence is important, Jambhavanthi where arms & legs break and Jharasandhi, where the above three are mixed. Around 146 such daavus are identified whereas about 10-15 are in present day use. Forcing the opponent to touch the back decides who have won.

In order to preserve and carry to the posterity the valour of Sala, Sri Mahalingeshwara temple in K. Hemmanahalli(bhogadi rd 9th km) established by Hoysala King Ballala II  in 1188 AD, since Sri Dharmasthala Manjunatheshwara Dharmothana Trust renovated it in 1994 is conducting these wrestling competitions during yugaadi festival. This year it will be held jointly with Youth Services & Sports Dept, Mysore Dt on 25-3-2012 Sunday 2.30 pm onwards where five major pairs and 25 other pairs will compete under the leadership of Y|P| S. Mahadev, secretary of Sri Jayachamaraja Wadeyar Garadi Sangha. Seating arrangements are made for the public. Entry free.

The five pairs are Bhogadi Chethan x Ramannalli Prathap;

Srirangapatna Manjunath x Melapura Vinaykumar;

Naguvinahalli Mohankumar x Kyatamaranahalli Suresh;

Udbur Venkatesh x Mysuru Prashanthanayak and

Kyathamarnahalli Manjunath x Lakshmipura Hemanthkumar.

Remaining 25 pairs are Kyathamarnalli Devarju x Mysuru Krishna Metagalli; Mysuru Vijay x Bhogadi Thyagaraju;

Kyathamaranalli Mahendra x Hullinabeedhi Ravindra;

Naguvihanahalli Manjunath x Ramannalli Viji;

Melapura Deepak x Hosundi Chandru;

Naguvinahalli Naveena x Udburu Mahadeva;

GB Sargur Mahesh x Ramannalli Gopala;

Mahadevapura Devaraju x Udburu Sundara;

Kyathamarnahalli Basavaraju x Bhogadi Prasanna;

GB Sarguru Ashok x Melapura Pavanakumar;

Kyathmaranalli Jagadisha x Nanjangudu Srikanta;

Kyathmaranahalli Ramesh x Bore Anandaru Papanna;

Bhogadi Manjesha x Srirangapatna Srinivasa;

Bhogadi Ravikirana x Nanjangudu Guruprasada;

Ashokapura Kiran. R x Udbur Girish;

Chandagala Seena x KHemmanahalli Soma;

Chandagala Raja x Nanjangudu Guru;

Sunnadakeri Wasimpasha x Gandhinagar K. Kiran;

Mysuru Amruthkumar x Bhogadi Raghu;

Bhogadi C. Kumar x Kyathamarnalli Guru;

Naguvinahalli Shekar x Nanjangudu Shivakumar;

Hebbadihundi Siddiqa pasha x Lakshmipura Raghavendra;

Udburu Vaasu x Naguvinahalli Vinayakumar,

Bhogadi Shankar x Mysuru M. Dixith and

Bhogadi Manju x Jettihundi Bhairava.

                                                                               GN Anantavardhana,

                                                                                   Secretary,

                                                                                   Mob: 9449264920

                                                                              Sri Mahalingeshwara Temple,

                                                                              K. Hemmanahalli, Mysore tq

       ನಾರಾಯಣದುರ್ಗಕ್ಕೆ ಹೋಗುವ ಸಲುವಾಗಿ ನಾವು ೨೦ ಮಂದಿ ತಾರೀಕು ೨೬-೨-೨೦೧೨ರಂದು ಬೆಳಗ್ಗೆ ಸಮಯಕ್ಕೆ ಸರಿಯಾಗಿ (೬.೪೦) ರೈಲುನಿಲ್ದಾಣದ ಹತ್ತಿರ ಕಾದು ಕುಳಿತರೂ ಈ ಸಲ ವಾಹನ ಬರುವುದು ತಡವಾಯಿತು. ಗಂಟೆ ೭.೧೫ಕ್ಕೆ ವಾಹನ ಬಂತು. ನಮ್ಮ ಪಯಣ ಮಂಡ್ಯಜಿಲ್ಲೆಯ ಕೃಷ್ಣರಾಜ ಪೇಟೆ ಕಡೆಗೆ ಸಾಗಿತು. ಮಾರ್ಗ ಮಧ್ಯೆ ಪಾಂಡವಪುರದಲ್ಲಿ ನಾಲೆ ಬಳಿ ನಾವು ಉಪ್ಪಿಟ್ಟು ಕೇಸರಿಬಾತು, ಪಕೋಡ ತಿಂದು ಮುಂದೆ ಪಯಣ ಬೆಳೆಸಿದೆವು. ಮಂಡ್ಯಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲುಕಿನ ನಾರಾಯಣದುರ್ಗ ಮೈಸೂರಿನಿಂದ ೬೮ ಕಿ.ಮೀ. ದೂರ. ಕೆ. ಆರ್.ಪೇಟೆಯಿಂದ ಸುಮಾರು ೧೫ ಕಿ.ಮೀ. ಕೆ.ಆರ್. ಪೇಟೆ ಕಡೆಯಿಂದ ಮಂಡ್ಯದೆಡೆಗೆ ಸಾಗುವ ದಾರಿಯಲ್ಲಿ ೫ ಕಿ.ಮೀ ದೂರ ಪ್ರಯಾಣಿಸಿದಾಗ ಉಯ್ಯೋನಹಳ್ಳಿ ಗೇಟ್ ಬಳಿ ಬಲಕ್ಕೆ ತಿರುಗಿ ಮೇಲುಕೋಟೆ ರಸ್ತೆಯಲ್ಲಿ ಸಾಗಬೇಕು. ಮರುವನಹಳ್ಳಿ, ಹರಳಹಳ್ಳಿ ದಾಟಿ ಮುಂದೆ ಸಾಗಿದಾಗ ನೀತಿಮಂಗಲ ಜಂಕ್ಷನ್ ಕಾಣುತ್ತದೆ. ಅಲ್ಲಿ ಎಡಕ್ಕೆ ತಿರುಗಿ ಕೇವಲ ೫ ಕಿ.ಮೀ ಸಾಗಿದಾಗ ರಾಯನಸಮುದ್ರ ತಲಪಿದೆವು.

       ರಾಯನಸಮುದ್ರದಿಂದ ನಾರಾಯಣದುರ್ಗದ ವಿಸ್ತಾರ, ಗೋಳಾಕಾರದ ಗ್ರಾನೈಟ್ ಶಿಲೆಯಿಂದ ಕೂಡಿದ ಬೆಟ್ಟ ನಮ್ಮನ್ನು ಸೆಳೆಯುತ್ತದೆ. ಬೆಳಗ್ಗೆ ೧೦.೧೫ಕ್ಕೆ ನಾವು ಅಲ್ಲಿಂದ ಕಾಲ್ನಡಿಗೆಯಲ್ಲಿ ಬೆಟ್ಟದ ಕಡೆಗೆ ಸಾಗಿದೆವು. ಬೆಟ್ಟದ ತುದಿ ತಲಪಲು ಸುಮಾರು ಮೂರೂವರೆ ಕಿ.ಮೀ.ದೂರ. ಸಾಗಬೇಕು. ಆಹಾ ದುರ್ಗವೆಂದರೆ ದುರ್ಗ ನಾರಾಯಣದುರ್ಗ. ಮನುಜ, ನನ್ನನ್ನೇರುವೆಯಾ? ಎಂದು ಸವಾಲು ಹಾಕುತ್ತಿರುವಂತೆ ನಮ್ಮೆದುರು ವಿಶಾಲವಾಗಿ ಮೈಚಾಚಿ ನಿಂತಿರುವಂತೆ ಕಾಣಿಸಿತು. ಬೆಟ್ಟ ಏರಲು ಸೋಪಾನಗಳಿಲ್ಲ. ಬಂಡೆ ಹಿಡಿದು ಏರಬೇಕು. ಕೋತಿ ಹತ್ತಿದಂತೆ ಹತ್ತಬೇಕು. ನಮ್ಮೊಂದಿಗೆ ರೇಖ ಅವರ ಅತ್ತೆ ೭೦ ಹರಯದವರು ಇದ್ದರು. ಅವರು ಸೀರೆ ಉಟ್ಟುಗೊಂಡು ಯಶಸ್ವಿಯಾಗಿ ಬೆಟ್ಟ ಹತ್ತಿ ಇಳಿದರು. ಎಲ್ಲರಿಗೂ ಅವರ ಸೀರೆ ಮೇಲೇಯೇ ಕಣ್ಣು. ನೀವು ಚೂಡಿದಾರ ಹಾಕಬೇಕು ಹೀಗೆ ಬಂದಾಗ ಎಂದೆಲ್ಲ ಸಲಹೆ ಕೊಟ್ಟರು. ಅವರು ನಗುತ್ತ ಏನೊಂದು ಪ್ರತಿಕ್ರಿಯೆ ಕೊಡಲಿಲ್ಲ.  `ನನಗೇ ಸೀರೆ ಕಷ್ಟವೆನಿಸಲಿಲ್ಲ. ಆರಾಮವಾಗಿ ಹತ್ತಿ ಇಳಿದೆ . ಇವರಿಗೆಲ್ಲ ಎಷ್ಟು ಕಷ್ಟ ಕೊಟ್ಟಿತಪ್ಪ ಈ ಬಡಪಾಯಿ ಸೀರೆ’ ಎಂದು ಅವರಿಗನಿಸಿರಬಹುದು!

ಮೆಟ್ಟಲುಗಳಿದ್ದು ಬೆಟ್ಟ ಏರುವಾಗ ಸಿಗದ ಸಂತೋಷ ಈ ಬೆಟ್ಟವನ್ನು ಕೂತು ನಿಂತು ಏರುವಾಗ ಸಿಗುತ್ತದೆ. ನಿಜವಾದ ಚಾರಣದ ಅನುಭವವಾಗಬೇಕಾದರೆ ಈ ದುರ್ಗವನ್ನು ಏರಬೇಕು. ಬೆಟ್ಟ ಏರುವಾಗ ಸುಮಾರು ೫-೬ ದ್ವಾರಗಳನ್ನು ದಾಟಬೇಕು. ದ್ವಾರದ ಬಳಿ ತಂಪಾದ ಹವೆ. ದ್ವಾರಗಳನ್ನು ಚುರುಕಿ ಗಾರೆ ಇಟ್ಟಿಗೆಗಳಿಂದ ಕಟ್ಟಿದ್ದಾರೆ. ಪಾಳುಬೀಳುವ ಹಂತಕ್ಕೆ ಬಂದಿವೆ. ದ್ವಾರದ ಮೇಲೆ ಗಿಡಗಳು ಬೆಳೆದಿವೆ.

೧೨ ಗಂಟೆಗೆ ಬೆಟ್ಟದ ತುದಿ ತಲಪಿದೆವು. ತಂಪಾದ ಗಾಳಿ ಜೋರಾಗಿ ಬೀಸುತ್ತಿತ್ತು. ಸುತ್ತಲೂ ಕಾಣುವ ಪ್ರಕೃತಿಯನ್ನು ನೋಡುವಾಗ ಸಂತಸವಾಗುತ್ತದೆ. ಬೆಟ್ಟದಿಂದ ಕೆಳಗೆ ಕಾಣುವ ತೆಂಗಿನ ತೋಪುಗಳು, ಗದ್ದೆಸಾಲುಗಳು, ಗದ್ದೆಸಾಲುಗಳ ಮಧ್ಯೆ ಒಂದು ಪುಟ್ಟ ಮನೆ. ಆಹಾ ವರ್ಣಿಸಲಸದಳ. ಆ ಮನೆ ನೋಡಿ ನಮ್ಮೊಡನೆ ಬಂದಿದ್ದ ವಿದ್ಯಾ `ಆಹಾ ಇಂಥ ಮನೆಯಲ್ಲಿ ವಾಸಮಾಡಬೇಕು. ಸುತ್ತಲೂ ಗದ್ದೆ. ನನಗೆ ಅದೇ ಇಷ್ಟ. ನಮ್ಮಪ್ಪ ಸಿಟಿಯಲ್ಲಿರುವವನಿಗೆ ಮದುವೆ ಮಾಡಿಕೊಟ್ಟ’ ಎಂದು ಹಪಹಪಿಸಿದಳು. ಕಾಲ ಮಿಂಚಿಲ್ಲ. ಇನ್ನು ಮುಂದಾದರೂ ಇಂಥ ಜಾಗ ಕೊಂಡು ಗಂಡನೊಂದಿಗೆ ಇರಬಹುದು ಎಂದು ಸಮಾರೋಪಿಸಿದೆ.

ಸುತ್ತಮುತ್ತ ಕಾಡು ಇಲ್ಲವೇ ಇಲ್ಲ. ಬೋಳು ಗುಡ್ಡಗಳು. ಸುತ್ತ ಬಂಡೆಗಲ್ಲು ಆದ್ದರಿಂದ ಗಿಡಮರಗಳು ಬೆಳೆಯಲು ಸಾಧ್ಯವಿಲ್ಲವೇನೋ? ದೂರಕ್ಕೆ ದಿಟ್ಟಿ ಹರಿಸಿದಾಗ ಮೇಲುಕೋಟೆ ಕಾಣುತ್ತದೆ. ಬೆಟ್ಟದ ತುದಿಯಲ್ಲಿ ಕೈವಲ್ಯೇಶ್ವರ ದೇವಾಲಯವಿದೆ. ದೇವಾಲಯ ಸಾಕಷ್ಟು ದೊಡ್ದದಿದೆ. ಆದರೆ ಪಾಳು ಬಿದ್ದಿದೆ. ದೇವಸ್ಥಾನ ತೆರೆದೇ ಇರುತ್ತದೆ. ನಾವೇ ಒಳಗೆ ಹೋಗಿ ನೋಡಬಹುದು. ಗಾಡಾಂಧಕಾರ. ಹೊರಗೆ ಒಂದು ಕನ್ನಡಿ ಇಟ್ಟಿದ್ದಾರೆ. ಅದನ್ನು ಬಿಸಿಲಿಗೆ ಹಿಡಿದು ಅದರ ಪ್ರತಿಫಲನದ ಬೆಳಕಿನಲ್ಲಿ ಸ್ಪಷ್ಟವಾಗಿ ನಮಗೆ ಶಿವಲಿಂಗ ಕಾಣುತ್ತದೆ. ಸಾಮಾನ್ಯವಾಗಿ ಲಿಂಗದ ಎದುರು ಭಾಗದಲ್ಲಿ ನಂದಿ ಇರುತ್ತದೆ. ಆದರೆ ಇಲ್ಲಿ ಸ್ವಲ್ಪ ಪಾರ್ಶ್ವಕ್ಕೆ ನಂದಿ ಇದೆ. ದೇವಾಲಯದ ಒಳ ಬಾಗಿಲಿನ ಎದುರು ದ್ವಾರಪಾಲಕರಂತೆ ಎರಡು ದೊಡ್ಡ ವಿಗ್ರಹಗಳಿವೆ.

ಬೆಟ್ಟದ ತುದಿಯಲ್ಲಿ ಸ್ವಲ್ಪ ಹೊತ್ತು ಕುಳಿತಿದ್ದು ತಣ್ಣನೆ ಗಾಳಿ ಸೇವಿಸಿದೆವು. ಅಲ್ಲೇ ಕೂತಿರೋಣವೆನಿಸಿತು. ಅಷ್ಟೊಂದು ಬಿಸಿಲು ಇದ್ದರೂ ಬೆಟ್ಟದ ಮೇಲೆ ಜೋರಾದ ಗಾಳಿ ಬೀಸುತ್ತಿದ್ದುದರಿಂದ ನಮಗೇನೂ ಬಿಸಿಲ ಝಳ ನಾಟಲಿಲ್ಲ. ಏರಿದ್ದಕ್ಕಿಂತ ಹೆಚ್ಚು ಕಷ್ಟ ದುರ್ಗವನ್ನು ಇಳಿಯುವುದು. ಕೆಲವು ಕಡೆ ಜಾರುಬಂಡೆಯಲ್ಲಿ ಜಾರಿದಂತೆ ಇಳಿದೆವು.ಇಳಿಯುವಾಗಲೂ ನಾನು ತುಂಬ ಸಂತಸ ಅನುಭವಿಸಿದೆ. ಅದೊಂದು ಸವಾಲು ಎಂದು ಅನಿಸಲೇ ಇಲ್ಲ.

ಮನುಜನಲ್ಲಿ ಛಲವೊಂದಿದ್ದರೆ ಬೆಟ್ಟ ಏನು ಆಕಾಶಕ್ಕೇ ಏಣಿ ಹಾಕಿಯಾನು! ಇಳಿಯುತ್ತ ಒಂದೂವರೆ ಗಂಟೆಗೆ ಕೆಳಗೆ ಬಂದೆವು. ಅಲ್ಲೇ ಪಕ್ಕದಲ್ಲಿದ್ದ ನೀಲಗಿರಿ ತೋಪಿನಲ್ಲಿ ಕುಳಿತು ಪಲಾವ್, ಮೊಸರನ್ನ, ಸೆವೆನ್ಕಪ್ ಎಂಬ ಸಿಹಿ, ಖಾರಾಸೇವು, ಹೊಟ್ಟೆ ಸೇರಿತು. ನಾವು ೨೦+೧ (ಚಾಲಕ) ಮಂದಿ ಊಟ ಮಾಡಿದರೂ ಇನ್ನೂ ಮಿಕ್ಕಿತ್ತು. ಬೆಟ್ಟದ ಕೆಳಗೆ ಚೌಡೇಶ್ವರಿ ದೇವಾಲಯವಿದೆ. ಅಲ್ಲಿಗೆ ಸ್ಥಳೀಯರು ಕೈಯಲ್ಲಿ ಕೋಳಿ ಹಿಡಿದು ಬರುತ್ತಲೇ ಇದ್ದರು. ಅಲ್ಲಿ ಕೋಳಿ ಬಲಿ ಕೊಡುತ್ತಾರಂತೆ ವರ್ಷಕ್ಕೆ ಒಂದು ಸಲ. ಕೆಲವು ಮಂದಿಯನ್ನು ಕರೆದು (ಸುಮಾರು ೧೪ ಜನರು) ಬಡಿಸಿದೆವು. ಅವರೂ ತೃಪ್ತಿಯಿಂದಲೇ ಉಂಡರು. ವ್ಯರ್ಥವಾಗದೆ ಸದುಪಯೋಗವಾಯಿತಲ್ಲ ಎಂಬ ಸಮಾಧಾನ ನಮಗಾಯಿತು. ದೇವಾಲಯಕ್ಕೆ ಹೋಗುವಾಗ ಕೈಯಲ್ಲಿಕೋಳಿ ಇದ್ದರೆ ಬರುವಾಗ ಕೋಳಿ ಇರಲಿಲ್ಲ. ಬಲಿ ಕೊಟ್ಟ ಮೇಲೆ ಕೋಳಿಯನ್ನು ಏನು ಮಾಡಿರಬಹುದು ಎಂದು ನನಗೋ ಕುತೂಹಲವಾಯಿತು. ಅಲ್ಲೇ ಅಡುಗೆ ಮಾಡಿರಬಹುದು ಎಂದು ಕೆಲವರೆಂದರು. ಇಷ್ಟು ಬೇಗ ಅಡುಗೆ ಮಾಡಲು ಸಾಧ್ಯವಿಲ್ಲ. ಆಸಕ್ತಿ ತಣಿಯಲಿಲ್ಲ. ಊಟ ಮಾಡುತ್ತಿದ್ದ ಕೆಲವು ಹೆಂಗಸರನ್ನು ಕೇಳಿದೆ. `ಕೋಳಿ ದೇವರೆದುರು ಬಲಿ ಕೊಟ್ಟೆವು. ಇಲ್ಲೇ ಚೀಲದಲ್ಲಿದೆ. ರಾತ್ರಿ ಅಡುಗೆ ಮಾಡಿ ಉಣ್ಣುತ್ತೇವೆ’ ಎಂದುತ್ತರಿಸಿದರು. ನಮ್ಮ ತಂಡದ ವೈದ್ಯನಾಥನ್ `ಕೋಳಿ ಕುತೂಹಲಿ’ ಎಂದು ನನಗೆ ಹೆಸರಿಟ್ಟರು. ಕುತೂಹಲವನ್ನು ಹತ್ತಿಕ್ಕಬಾರದು. ಆ ಕೂಡಲೇ ಕೇಳಿ ಪರಿಹರಿಸಿಕೊಳ್ಳಬೇಕು ಎಂದೆ ನಗುತ್ತ. ಕಲ್ಲಂಗಡಿ ತಿಂದು, ನಮ್ಮ ತಂಡದ ಚಿತ್ರ ತೆಗೆಸಿಕೊಂಡು ಸುಮಾರು ೩ ಕಾಲು ಗಂಟೆಗೆ ನಾರಾಯಣ ದುರ್ಗಕ್ಕೆ ಸೆಲ್ಯೂಟ್ ಹೊಡೆದು ಹೊರಟೆವು.

ಕೆ.ಆರ್. ಪೇಟೆಯಿಂದ ಕೇವಲ ೨-೩ ಕಿ.ಮೀ ದೂರದಲ್ಲಿರುವ ಹೊಸಹೊಳಲು ಎಂಬ ದೇವಾಲಯ ತಲಪಿದೆವು. ದೇವಾಲಯ ಬಾಗಿಲು ಹಾಕಿತ್ತು. ಬೇಲೂರು ಹಳೇಬಿಡಿನಂತೆಯೇ ಕೆತ್ತನೆ ಹೊಂದಿರುವ ಹೊಯ್ಸಳ ಶೈಲಿಯ ಪುರಾತನ ದೇವಸ್ಥಾನ. ಸಂಜೆ ೪ ಗಂಟೆಗೆ ತಲಪಿದ ನಾವು ಐದೂವರೆ ವರೆಗೂ ಅಲ್ಲೇ ಇದ್ದೆವು. ಅರ್ಚಕರು ಈಗ ಬರುತ್ತಾರೆ, ಇನ್ನೇನೂ ಹದಿನೈದು ನಿಮಿಷದಲ್ಲಿ ಬರುತ್ತಾರೆ ಎಂಬ ಮಾಹಿತಿ ಬರುತ್ತಲೇ ಇತ್ತು! ಅಂತೂ ಸಂಜೆ ಐದೂವರೆ ಸುಮಾರಿಗೆ ಅರ್ಚಕರ ಆಗಮನವಾಗಿ ಬಾಗಿಲು ತೆರೆದರು. ದೇವಾಲಯದ ಎದುರು ಭಾಗ ಸೌಂದರ್ಯ ರಹಿತ ಕಟ್ಟಡ. ಪಾರ್ಶ್ವಕ್ಕೆ ನೋಡಿದಾಗ ಅದರ ಸೌಂದರ್ಯ ನಮ್ಮನ್ನು ಸೆಳೆಯುತ್ತದೆ. ದೇವಾಲಯದೊಳಗೆ ಎದುರು ಭಾಗದಲ್ಲಿ ಲಕ್ಷ್ಮೀನಾರಾಯಣ ವಿಗ್ರಹ, ಎಡಭಾಗದಲ್ಲಿ ವೇಣುಗೋಪಾಲ, ಬಲಭಾಗದಲ್ಲಿ ಲಕ್ಷ್ಮೀನರಸಿಂಹ. ಇಕ್ಕೆಲಗಳಲ್ಲಿ ಗಣಪತಿ, ದೇವಿ ವಿಗ್ರಹಗಳಿವೆ. ಒಳಗಿನ ಕಂಬಗಳ ಕೆತ್ತನೆಗಳು ಮನಸೆಳೆಯುತ್ತವೆ.

ಕಂಬಗಳನ್ನು ಕುಟ್ಟಿದರೆ ತಾಮ್ರಕ್ಕೆ ಕುಟ್ಟಿದಂತೆ ಶಬ್ಧ ಬರುತ್ತದೆ. ದೇವಾಲಯದ ಹೊರಗೆ ವಿಶಾಲ ಸ್ಥಳವಿದೆ. ಹುಲ್ಲು (ಲಾನ್) ಬೆಳೆಸಿದ್ದಾರೆ. ಅಲ್ಲಿ ೫ ಮಕ್ಕಳು (ಗಗನ, ದರ್ಶನ, ರಾಘು, ಆಕಾಶ, ಶಶಾಂಕ) ಆಟವಾಡುತ್ತಿದ್ದರು. ಅವರನ್ನು ಸಾಲಾಗಿ ಕುಳ್ಳಿರಿಸಿ ಅವರ ಚಿತ್ರ ಕ್ಯಾಮರಾದಲ್ಲಿ ಸೆರೆ ಹಿಡಿದೆ. ಸುಮ್ಮನೆ ಚಿತ್ರ ತೆಗೆದರೆ ಸಾಕೆ? ಅವರಿಗೆ ಅದನ್ನು ಕೊಟ್ಟರೆ ಮಾತ್ರಸೆರೆ ಹಿಡಿದದ್ದು ಸಾರ್ಥಕ ಎನಿಸಿತು. ನಿಮಗೆ ಫೋಟೋ ಕಳುಹಿಸುವೆ ವಿಳಾಸ ಹೇಳಿ ಎಂದೆ. ಒಬ್ಬ ಸರಿಯಾಗಿ ವಿಳಾಸ ಹೇಳಿದ. ಬರೆದುಕೊಂಡೆ. ನಿಮಗೆ ಕಳುಹಿಸಿದಮೇಲೆ ಅದು ತಲಪಿತೆ ಎಂದು ನನಗೆ ಗೊತ್ತಾಗಬೇಕಲ್ಲ. ನೀವು ಕಾಗದ ಬರೆದು ತಿಳಿಸಬೇಕು ಎಂದೆ. ಕೂಡಲೇ ದರ್ಶನ ಎಂಬ ಹುಡುಗ `ಆಂಟಿ, ನಿಮ್ಮ ಫೋನ್ ನಂ. ಕೊಡಿ. ತಲಪಿದ ಕೂಡಲೇ ಫೋನ್ ಮಾಡ್ತೇವೆ. ಬೂತ್ ಇದೆ ಇಲ್ಲಿ’ ಎಂದ. ಎಂಥ ಚುರುಕು ಈಗಿನ ಹುಡುಗರು. ಈ ವಿಷಯ ನನ್ನ ತಲೆಗೆ ಹೋಗಿರಲಿಲ್ಲ. ಸರಿ ಎಂದು ನನ್ನ ಸಂಚಾರಿ ಸಂಖ್ಯೆಯನ್ನು ಬರೆದು ಕೊಟ್ಟೆ. ಅವರಲ್ಲಿ ಮೂರು ಮಂದಿ ಕನ್ನಡ ಮಾಧ್ಯಮ ಹಾಗೂ ಇಬ್ಬರು ಆಂಗ್ಲ ಮಾಧ್ಯಮದಲ್ಲಿ ಓದುತ್ತಿದ್ದಾರೆ. ದೇವಾಲಯ ಬಿಡುವ ಮೊದಲು ಮರೆಯಬೇಡಿ ಪೋಟೋ ಕಳುಹಿಸಲು ಎಂದು ಆಕಾಶ ಪುನಃ ನೆನಪಿಸಿದ. ಮಕ್ಕಳ ಆಟ ನೋಡುತ್ತ ಅಲ್ಲಿ ಒಂದೂವರೆ ಗಂಟೆ ಕಳೆದದ್ದೇ ಗೊತ್ತಾಗಲಿಲ್ಲ. ಸಂಜೆ ಐದೂವರೆ ಗಂಟೆ ದಾಟಿದಮೇಲೆ ಮೈಸೂರೆಡೆಗೆ ಪ್ರಯಾಣ. ದಾರಿಯಲ್ಲಿ ಕಾಫಿ ಸೇವನೆ. ಮುಂದೆ ಕಲ್ಲಂಗಡಿ ಭಕ್ಷಣೆ. ಕಲ್ಲಂಗಡಿ ಹಣ್ಣು ತಿನ್ನಲು ನಮ್ಮ ವಾಹನ ನಿಲ್ಲಿಸಿದ ಸ್ಥಳದಲ್ಲಿ ಸ್ವಲ್ಪ ದೂರದ ಹೊಲದಲ್ಲಿ ಸೌತೆಕಾಯಿ ಬೆಳೆದಿದ್ದರು. ಒಬ್ಬ ರೈತ ೨ ಸೌತೆಕಾಯಿ ಹಿಡಿದು ಮನೆಗೆ ಹೋಗುತ್ತಿದ್ದ. ನಮ್ಮನ್ನು ಕಂಡು ಅದನ್ನು ನಮಗೆ ಕೊಟ್ಟ. ಬೇಡ ನಿನ್ನ ಮಕ್ಕಳಿಗೆ ಕೊಡು ಅಂದರೂ ಕೇಳಲೇ ಇಲ್ಲ. ತಗೊಳ್ಳಿ, ಮನೆಗೆ ನಾಳೆ ಕೊದರಾಯಿತು ಎಂದ. ನಿಜಕ್ಕೂ ಹಳ್ಳಿಗರ ಪ್ರೀತಿ ಬಲು ದೊಡ್ಡದು. ರಾತ್ರಿ ೮ ಗಂಟೆಗೆ ಮೈಸೂರು ತಲಪಿದೆವು. ಯೂಥ್ ಹಾಸ್ಟೆಲ್ ಮೈಸೂರು ಗಂಗೋತ್ರಿ ಘಟಕದ ವತಿಯಿಂದ ಪರಶಿವಮೂರ್ತಿ ಹಾಗೂ ವೈದ್ಯನಾಥ್ ಅವರ ನೇತೃತ್ವದಲ್ಲಿ ಈ ಚಾರಣ ಕಾರ್ಯ ಯಶಸ್ವಿಯಾಗಿ ನೆರವೇರಿತು. ಒಂದು ಬಲು ಖುಷಿಯ ವಿಚಾರವಿದೆ. ಗಗನ, ದರ್ಶನ, ರಾಘು, ಆಕಾಶ, ಶಶಾಂಕ ಎಂಬ ಹುಡುಗರ ಸಮೂಹ ಚಿತ್ರವನ್ನು ೫ ಪ್ರತಿ ಮಾಡಿಸಿ ೨-೩-೨೦೧೨ರಂದು ಅವರಿತ್ತ ವಿಳಾಸಕ್ಕೆ ಅಂಚಿಸಿದೆ. ಏನಾಶ್ಚರ್ಯ! (ನಮ್ಮ ಅಂಚೆ ವ್ಯವಸ್ಥೆ ಬಲು ಸಮರ್ಪಕವಾಗಿದೆ ಎಂಬುದೂ ಇದರಿಂದ ರುಜುವಾತಾಯಿತು.) ೩-೩-೨೦೧೨ರಂದು ಮಧ್ಯಾಹ್ನ ಒಂದೂಕಾಲು ಗಂಟೆಗೆ ನನ್ನ ಸಂಚಾರಿ ಕೂಗಿಕೊಂಡಿತು. ಆಂಟಿ, `ನಾನು ಆಕಾಶ, ಫೋಟೋ ತಲಪಿತು. ಇಂದು ನಾವು ಶಾಲೆಯಿಂದ ಮನೆಗೆ ಬರ್ಬೇಕಾದರೆ ಬಂದೈತೆ’ ಎಂಬ ಕರೆ. ಖುಷಿ ಆಯಿತ ನಿಮಗೆಲ್ಲರಿಗೂ? ಎಲ್ಲರಿಗೂ ಫೋಟೋ ಕೊಡು ಎಂದೆ ನಾನೂ ಸಂಭ್ರಮದಿಂದ. `ಖುಷಿಯಾಯಿತು. ಆಗಲೇ ಎಲ್ಲರಿಗೂ ಕೊಟ್ಟಾಯಿತು. ಫೋನ್ ಇಡ್ತೀನಿ’ ಅಂದ. ಹುಡುಗರು ಬಲು ಚೂಟಿಯಾಗಿದ್ದಾರೆ. ಕಾಗದ, ಪೋಟೋ ತಲಪಿದ ಕೂಡಲೇ ಕಾಯಿನ್ ಬೂತಿನಿಂದ ಫೋನ್ ಮಾಡಿದರಲ್ಲ ಎಂದು ನನಗಂತೂ ತುಂಬ ಸಂತಸವಾಯಿತು. ಫೊಟೋ ತೆಗೆದು ಕಳುಹಿಸಿದ್ದಕ್ಕೂ ಸಾರ್ಥಕವೆನಿಸಿತು.

         ರಾಮನಗರದ ರೇವಣಸಿದ್ದೇಶ್ವರ ಬೆಟ್ಟ ಹಾಗೂ ರಾಮದೇವರಬೆಟ್ಟಕ್ಕೆ ಹೋಗುವ ಸಲುವಾಗಿ ತಾರೀಕು ೨೨-೧-೨೦೧೨ರಂದು ಬೆಳಗ್ಗೆ ೬ ಗಂಟೆಗೆ ಸರಿಯಾಗಿ ರೈಲು ನಿಲ್ದಾಣದ ಬಳಿ ನಾನು ತಲಪಿದಾಗ ಅಲ್ಲಿ ಯಾರೊಬ್ಬರೂ (ನಾವು ೨೧ ಮಂದಿ ಇರಬೇಕಾದವರು) ಇರಲಿಲ್ಲ. ಇಂದು ಹೋಗುವುದು ಅಲ್ಲವೆ ನಾನೇ ತಪ್ಪಿ ಬಂದೆನಾ ಎಂಬ ಸಂಶಯ ಕಾಡಿತು. ಮನಸ್ಸು ತಡೆಯದೆ ಗಂಟೆ ೬.೧೫ಕ್ಕೆ ಸಂಬಂಧಪಟ್ಟ ಒಬ್ಬರಿಗೆ ದೂರವಾಣಿಸಿದಾಗ ಬರುತ್ತಿದ್ದೇವೆ ಎಂಬ ನುಡಿಮುತ್ತು ಕೇಳಿ ಸಮಾಧಾನವಾಯಿತು. ಸಮಯ ೬.೩೫ರನಂತರ ಒಬ್ಬೊಬ್ಬರೇ ಬರಲು ತೊಡಗಿ ೬.೪೫ ದಾಟುವಾಗ ನಮ್ಮ ವ್ಯಾನ್ ೨೧ ಜನರನ್ನು ಹೊತ್ತು ಸಾಗಿತು. ಸಮಯಕ್ಕೆ ಸರಿಯಾಗಿ ಬರಬಾರದೆಂಬ ಪಾಟ ಕಲಿತಂತಾಯಿತು. ಅವರನ್ನು ಸಮಯಪಾಲಿಸಲು ತಿದ್ದಲಾಗದೆ ಇದ್ದದ್ದಕ್ಕೆ ವಿಷಾಧವಿದೆ.

        ಮಂಡ್ಯದ ಒಂದು ಖಾನಾವಳಿಯಲ್ಲಿ ತಿಂಡಿಯಾಗಿ ರಾಮನಗರದಿಂದ ಒಳ ರಸ್ತೆಯಲ್ಲಿ ೧೩ ಕಿಮೀ ದೂರದ ಒಂದು ಹಳ್ಳಿ ರೇವಣಸಿದ್ದೇಶ್ವರ ಬೆಟ್ಟದ ಬುಡ ಹತ್ತು ಗಂಟೆಗೆ ತಲಪಿದೆವು. ಎತ್ತರದ ಬೆಟ್ಟ. ವಿಶಾಲವಾದ ಬೆಟ್ಟವನ್ನು ನೋಡಿ ಬೆರಗಾದೆವು. ನಮ್ಮ ತಂಡದಲ್ಲಿ ಸುಮಾರು ೧೦ ರಿಂದ ೭೦ರ ವಯಸ್ಸಿನವರು ಇದ್ದರು. ಬೃಹದಾಕಾರದ ಈ ಬೆಟ್ಟವನ್ನು ಏರಲು ಹುರುಪುಗೊಂಡು ಸಾಗಿದೆವು. ದಾರಿಯಲ್ಲಿ ಸಾಗುವಾಗ ಅಲ್ಲಲ್ಲಿ ಕಿರಿದಾದ ಗಿಡಗಳಲ್ಲಿ ತೊಟ್ಟೆಗಳು ನೇಲುತ್ತಿದ್ದುವು. ತೊಟ್ಟೆಯಲ್ಲಿ ಪುಟ್ಟಪುಟ್ಟ ಕಲ್ಲು ತುಂಬಿ ಕಟ್ಟಿದ್ದರು. (ಕೈಯಲ್ಲಿ ಮುಟ್ಟಿನೋಡಿ ಕಲ್ಲು ಎಂದು ಖಾತ್ರಿ ಮಾಡಿಕೊಂಡೆ) ಇದು ಏನು ಹರಕೆ ಇರಬಹುದು ಎಂದು ಕೇಳಲು ಅಲ್ಲಿ ಯಾರೂ ಇರಲಿಲ್ಲ.

ಬೆಟ್ಟ ಏರಲು ಬಂಡೆಯಲ್ಲೇ ಕೊರೆದ ಮೆಟ್ಟಲುಗಳಿದ್ದುವು. ಹಿಡಿದುಕೊಳ್ಳಲು ಕಬ್ಬಿಣದ ಕೈತಾಂಗು ಇದ್ದದ್ದರಿಂದ ಯಾವುದೇ ಆತಂಕವಿಲ್ಲದೆ ಎಲ್ಲರೂ ಬೆಟ್ಟ ಹತ್ತಿದಾಗ ಮಹತ್ತರ ಸಾಧನೆ ಮಾಡಿದಂತಾಗಿತ್ತು. ಅಲ್ಲಿಂದ ಕಾಣುವ ದೃಶ್ಯಗಳು ನಯನ ಮನೋಹರ. ಎತ್ತ ನೋಡಿದರೂ ಬಂಡೆಗಳು ರಾಶಿ ಬಿದ್ದಂತೆ ಕಾಣುತ್ತಿದ್ದುವು. ದೂರ ದೃಷ್ಟಿ ಹರಿಸಿದಾಗ ಕಾಣುವ ಕೃಷಿ ಭೂಮಿ, ಮಾವಿನ ತೋಪುಗಳು ಮನಸ್ಸಿಗೆ ಮುದ ನೀಡಿದುವು. ಅಲ್ಲಿಂದ ಕೆಳಗೆ ಕೆಲವು ಮೆಟ್ಟಿಲು ಇಳಿದಾಗ ಬಂಡೆಯ ಅಡಿಯಲ್ಲಿ ರೇವಣಸಿದ್ಧೇಶ್ವರ ದೇವಾಲಯ. ಪೂಜಾಸಮಯ ಪ್ರತೀದಿನ ಬೆಳಗ್ಗೆ ೯ರಿಂದ ೨ ರವರೆಗೆ ಹಾಗೂ ೨.೩೦ರಿಂದ ಸಂಜೆ ಗಂಟೆ ೫ರವರೆಗೆ. ರುದ್ರಾಭಿಷೇಕ ಬೆಳಗ್ಗೆ ೧೦ರಿಂದ ೧೧ರವರೆಗೆ. ಪ್ರತೀದಿನ ಮದ್ಯಾಹ್ನ ೧೨ ಗಂಟೆಗೆ ಮಹಾಮಂಗಳಾರತಿ. ಶಿವದರ್ಶನ ಕೈಗೊಂಡು ಬೆಟ್ಟ ಇಳಿದು ಬರುವಾಗಲೂ ಗಿಡಗಳಿಗೆ ತೊಟ್ಟೆಕಟ್ಟಿದ ವಿಚಾರವೇ ನನ್ನ ತಲೆಯಲ್ಲಿ. ಆಗ ಒಬ್ಬ ದಾರಿಹೋಕ ಎದುರಾದಾಗ ಅವನಲ್ಲಿ `ಇದು ತೊಟ್ಟೆಯಲ್ಲಿ ಕಲ್ಲುಕಟ್ಟಿದ್ದಾರಲ್ಲ ಏಕೆ’ ಎಂದು ವಿಚಾರಿಸಿದೆ. ಅವನ ಉತ್ತರಕ್ಕಿಂತ ನನ್ನ ಜೊತೆಯಲ್ಲಿದ್ದವರ ನಗು ಆಸ್ಫೋಟಗೊಂಡದ್ದು ಕೇಳಿತು. ಘಟ್ಟ ಏರಿದರೂ ಬೆಟ್ಟ ಏರಿದರೂ ಹುಟ್ಟು ಗುಣ ಅಂದರೆ ಮಾತಾಡುವ ಶೈಲಿ ಮಾತ್ರ ಬದಲಾಗುವುದಿಲ್ಲ ಎಂಬುದಕ್ಕೆ ನಾನೇ ಉದಾಹರಣೆ! ಅವರ ನಗುವಿಗೂ ಕಾರಣವಿತ್ತು. ಅವನಲ್ಲಿ ನಾನು ದಕ್ಷಿಣಕನ್ನಡದ ಶುದ್ಧ ಭಾಷೆಯಲ್ಲಿ `ತೊಟ್ಟೆಯಲ್ಲಿ ಏನು ಎಂದಿದ್ದೆ!’ ಅದಕ್ಕವರು ತೊಟ್ಟೆ ಎಂದರೆ ಅವನಿಗೆಲ್ಲಿ ಅರ್ಥವಾಗಬೇಕು ಎಂದು ಹೇಳಿ ಹೇಳಿ ನಗುತ್ತ ನನ್ನ ತಮಾಷೆ ಮಾಡುತ್ತ ಸಾಗಿದಾಗ ನಾನೂ ಅವರ ನಗುವಿನಲ್ಲಿ ಖುಷಿಯಿಂದಲೇ ಭಾಗಿಯಾಗಿ ಕೆಳಗೆ ಇಳಿದದ್ದೇ ಗೊತ್ತಾಗಲಿಲ್ಲ. ಈ ಅವಾಂತರದಲ್ಲಿ ಆ ಪ್ರಶ್ನೆಗೆ ಉತ್ತರ ಮಾತ್ರ ದೊರಕಲಿಲ್ಲ!


ದಾಸೋಹಭವನದಲ್ಲಿ ಊಟಕ್ಕೆ ಕುಳಿತಾಗ ಹನ್ನೆರಡೂವರೆ ಗಂಟೆ. ದಾಸೋಹಭವನದಲ್ಲಿ ಪ್ರತೀನಿತ್ಯ ಹನ್ನೆರಡು ಗಂಟೆಗೆ ಊಟ ಪ್ರಾರಂಭವಾಗುತ್ತದೆ. ಬಿಸಿ ಒಬ್ಬಟ್ಟು, ಪಾಯಸ, ಕೋಸಂಬರಿ, ಪಲ್ಯ, ಅನ್ನ ಸಾಂಬಾರ್ ಮಜ್ಜಿಗೆ ಇವಿಷ್ಟಿದ್ದ ಪುಷ್ಕಳ ಭೋಜನ ಮೆದ್ದು ಹೊರಟೆವು.

         ರಾಮನಗರದಿಂದ ಕೇವಲ ೩ ಕಿ.ಮೀ ದೂರದಲ್ಲಿ  ಶ್ರೀರಾಮದೇವರ ಬೆಟ್ಟವಿದೆ. ಬೆಟ್ಟ ಏರಲು ಸರಿಯಾದ ೩೮೦ ಮೆಟ್ಟಿಲುಗಳಿವೆ. ೧೯೮೮ರಲ್ಲಿ ಈ ದೇವಾಲಯ ಜೀರ್ಣೋದ್ಧಾರಗೊಂಡು ಮೆಟ್ಟಿಲುಗಳನ್ನು ಕಟ್ಟಿಸಿದರು. ಏಕಶಿಲೆಯಲ್ಲಿ ರಾಮ ಸೀತೆ ಲಕ್ಷ್ಮಣ ಕೆಳಗೆ ಹನುಮಂತ ಕುಳಿತಿರುವ ಮೂರ್ತಿಗಳು ಬಹಳ ಸುಂದರವಾಗಿವೆ.  ಪುರಾತನವಾದ ಶ್ರೀ ಪಟ್ಟಭಿರಾಮ ದೇವಾಲಯವನ್ನು ಸುಗ್ರೀವ ಸ್ಥಾಪಿಸಿದ್ದೆಂದು ಪ್ರತೀತಿ. ಅಲ್ಲಿ ರಾಮತೀರ್ಥವೆಂಬ ಕೆರೆ ಇದೆ. ಅದರ ಆಳ ಎಷ್ಟಿದೆ ಎಂಬುದು ಯಾರಿಗೂ ತಿಳಿದಿಲ್ಲವಂತೆ. ಯಾರೂ ಕೆಳಗೆ ಇಳಿಯದಂತೆ ಸುತ್ತಲೂ ಬೇಲಿ ಹಾಕಿದ್ದಾರೆ.  ಬೇಲಿ ಎದುರು ಒಂದು ಫಲಕದಲ್ಲಿ `ಪ್ರಾಣಕ್ಕೆ ಅಪಾಯ. ವಿಶೇಷ ಸೂಚನೆ: ಈ ಕೊಳದ ನೀರು ಒಳಗೆ ಬಂಡೆ ಪಾಚಿಯಿಂದ ಆವೃತವಾಗಿರುವುದರಿಂದ ಜಾರುತ್ತೆ. ನೀರಿನಲ್ಲಿ ಈಜುವುದೇ ಆಗಲಿ ಇಳಿಯುವುದೇ ಆಗಲಿ ನಿಷೇಧಿಸಿದೆ ಮೀರಿದ್ದಲ್ಲಿ “ಸಾವೇ ಶಿಕ್ಷೆ ಎಚ್ಚರಿಕೆ’’ ಎಂದು ಬರೆಸಿ ಹಾಕಿದ್ದರು.  ಯಾರಿಗೂ ಆ ಶಿಕ್ಷೆ ಅನುಭವಿಸಬೇಕು ಎಂದು ತೋರಿರಲಿಕ್ಕಿಲ್ಲ ಎಂದು ಭಾವಿಸುತ್ತೇನೆ.


ದೇವಾಲಯದ ಎದುರು ಭಾಗದ ಪಾರ್ಶ್ವದಲ್ಲಿ ಏಳು ಬಂಡೆಗಳು ಸಾಲಾಗಿ ನಿಂತಿವೆ. ಅವುಗಳು ಸಪ್ತರ್ಷಿಗಳು ತಪಸ್ಸು ಮಾಡಿ ಅಲ್ಲೇ ಶಿಲೆಯಾಗಿ ನಿಂತರೆಂಬ ಪ್ರತೀತಿ. ಅವುಗಳಲ್ಲಿ ಒಂದು ಬಂಡೆ ಎತ್ತರವಾಗಿವೆ. ಅದನ್ನು ನೋಡುವಾಗ ಒಂದು ಪ್ರಶ್ನೆ ಎದ್ದಿತು.  ಅದು ಯಾರದ್ದಾಗಿರಬಹುದು ಎಂದು ನನ್ನ ಸ್ನೇಹಿತೆಯರಲ್ಲಿ ಕೇಳಿದೆ. ಉತ್ತರ ಯಾರಿಗೂ ಗೊತ್ತಿರದಿದ್ದರಿಂದ ಸುಮ್ಮನಾದೆ.

    

   ಎರಡು ಹುಡುಗರು ನಮ್ಮ ಸುತ್ತಮುತ್ತ ಸುತ್ತುತ್ತ ಕಾಸು ಕೊಡಿ ಎಂದು ಅಂಗಲಾಚುತ್ತಿದ್ದರು. ಅವರ ಉದ್ಯೋಗ ಕುರಿ ಮೇಯಿಸುವುದಂತೆ. ಶಾಲೆ ಓದು ಬಿಟ್ಟು ಈ ವೃತ್ತಿ ಹಿಡಿದವರು. ಶಾಲೆಗೆ ಹೋಗಲು ಅವರಿಗೇ ಮನಸ್ಸಿಲ್ಲದೆ ಹೀಗೆ ಸುತ್ತುತ್ತಿದ್ದಾರೆ ಎಂದು ಅವರ ಮಾತಿನಿಂದ ತಿಳಿಯಿತು. ಪ್ರವಾಸಿಗರ ಹಿಂದೆಮುಂದೆ ಸುತ್ತುತ್ತ ಕೈಯೊಡ್ಡಿ ಹಣ ಕೇಳುವುದರಲ್ಲಿ ಇರುವ ಹಿತ ಶಾಲೆಗೆ ಹೋಗುವುದರಲ್ಲಿ ಸಿಗಲು ಸಾಧ್ಯವೆ? ಕ್ಯಾಮರಾಕ್ಕೆ ಚೆನ್ನಾಗಿ ಫೋಸು ಕೊಟ್ಟು ನಿಂತರು.


ದೇವಾಲಯದ ಮೇಲು ಭಾಗದಲ್ಲಿ ಒಂದು ಬೆಟ್ಟವಿದೆ. ಅದನ್ನು ಏರಲು ಕಬ್ಬಿಣದ ಕೈತಾಂಗು ಹಾಕಿದ್ದಾರೆ. ಅದು ಸ್ವಲ್ಪ ಏರುಮುಖವಾಗಿದೆ. ಮೇಲೇರಿದಾಗ ವಿಶಾಲ ಬಂಡೆಯ ಬಯಲು. ಏರಿದ ಕಷ್ಟ ಗೊತ್ತಾಗದಷ್ಟು ಮೇಲೇರಿ ಬಂದದ್ದು ಸಾರ್ಥಕ ಎಂದೆನಿಸುವಷ್ಟು ಸುಂದರವಾಗಿದೆ ಸ್ಥಳ. ವೈದ್ಯ ವೃತ್ತಿಯ ಪೂವಮ್ಮ ೬೩ ವರ್ಷದ ಯುವತಿ ಏರಿ ಮೇಲೆ ಬಂದಿದ್ದರು. ಅವರು ಬೆಟ್ಟ ಏರುತ್ತೇನೆಂದು ಹೊರಟಾಗ ಸುಮಾರು ಮಂದಿ ತಡೆದಿದ್ದರು. ಅವರು ಕಿವಿಗೊಡದೆ ಆತ್ಮವಿಶ್ವಾಸದಿಂದ ಬೆಟ್ಟ ಏರಿ ಸಂಭ್ರಮಿಸಿದರು. ಎಲ್ಲ ಕಾರ್ಯಕ್ಕೂ ಮನಸ್ಸೇ ಮುಖ್ಯ ಎಂಬುದು ಸಾರ್ವಕಾಲಿಕವಾದ ಸತ್ಯ. ಅಲ್ಲಿ ಪ್ರಕೃತಿಯ ವಿಸ್ಮಯವನ್ನು ಕಣ್ಣುತುಂಬ ತುಂಬಿ ಸ್ವಲ್ಪ ಹೊತ್ತು ಕುಳಿತಿದ್ದು ಕ್ಯಾಮರಾದಲ್ಲಿ ಚಿತ್ರ ಸೆರೆ ಹಿಡಿದು ಇಳಿದು ಕೆಳಗೆ ಬಂದೆವು.


ಅಲ್ಲಿಂದ ನಾಲ್ಕು ಗಂಟೆಗೆ ಹೊರಟು ಸಾಕಷ್ಟು ಸಮಯವಿರುವ ಕಾರಣ ಕೊಕ್ಕರೆಬೆಳ್ಳೂರನ್ನೂ ನೋಡಿಕೊಂಡೆ ಹೋಗಬಹುದೆಂಬ ತೀರ್ಮಾನವಾಯಿತು. ಅಲ್ಲಿ ಸಾಕಷ್ಟು ಕೊಕ್ಕರೆಗಳ ಸಹಜ ಹಾರಾಟ ಕಂಡು ಧನ್ಯರಾದೆವು. ಅವುಗಳು ಕಡ್ಡಿಗಳನ್ನು ಕೊಕ್ಕಿನಲ್ಲಿ ತೆಗೆದುಕೊಂಡು ಹಾರುತ್ತ ಗೂಡುಕಟ್ಟುವ ಸಂಭ್ರಮದಲ್ಲಿದ್ದುವು.  ಅಲ್ಲಿ ಒಂದು ಮರದಲ್ಲಿ ಎರಡು ಕಾಗೆಗಳು ಪ್ರೇಮ ಸಂಭಾಷಣೆ ನಡೆಸುತ್ತ ಕೂತದ್ದು ಗಮನಸೆಳೆಯಿತು.

ಕೊಕ್ಕರೆಗಳ ನಲಿವು ಕಂಡು ಅದನ್ನು ಕ್ಯಾಮರಾದಲ್ಲಿ ಸೆರೆ ಹಿಡಿಯಲು ಪ್ರಯತ್ನಿಸಿ ಸ್ವಲ್ಪ ಯಶಸ್ವಿಯಾಗಿ ಅವುಗಳಿಗೆ ವಿದಾಯ ಹೇಳಿ ಮೈಸೂರಿನತ್ತ ಪ್ರಯಾಣ ಬೆಳೆಸಿದೆವು. ರಾತ್ರಿ ೮ ಗಂಟೆಗೆ ನಮ್ಮ ನಮ್ಮ ಗೂಡು ಸೇರಿದೆವು.  ಬೆಟ್ಟಗಳ ಹಾಗೂ ಕೊಕ್ಕರೆ ದರ್ಶನಗಳನ್ನು ಯೂಥ್ ಹಾಸ್ಟೆಲ್ ಅಸೋಸಿಯೇಶನ್ ಗಂಗೋತ್ರಿ ಘಟಕ, ಮೈಸೂರು ಕೈಗೊಂಡಿತ್ತು.

ದಕ್ಷಿಣಕನ್ನಡ ಜಿಲ್ಲೆ ಒಡಿಯ್ಯೂರು (odiyuru) ಎಂಬ ಪುಟ್ಟ ಹಳ್ಳಿಯಿಂದ ೧೯೮೭ರ ಫೆಬ್ರವರಿ ತಿಂಗಳಲ್ಲಿ ಮದುವೆಯಾಗಿ ಮೈಸೂರಿಗೆ ಬಂದು ನೆಲೆ ಊರಿದೆ. ಅಂದಿನಿಂದ ಇಂದಿನವರೆಗೂ (ಫೆಬ್ರವರಿ ೨೦೧೨) ಪ್ರಜಾವಾಣಿ ಓದುವುದನ್ನು ಒಂದು ದಿನವೂ ತಪ್ಪಿಸಿಲ್ಲ.
ನಮ್ಮ ಮಾವ (ಜಿ.ಟಿ. ನಾರಾಯಣ ರಾವ್ ೧೯೨೬-೨೦೦೮) ಪ್ರಜಾವಾಣಿಯ ಖಾಯಂ ಓದುಗರಾಗಿದ್ದರು. ಅವರು ಬೆಳಗ್ಗೆ ಎದ್ದೊಡನೆ ಮನೆ ಎದುರು ಗೇಟು ಬಳಿ ಪತ್ರಿಕೆ ಬರುವುದನ್ನೇ ಕಾಯುತ್ತಿದ್ದರು. ಬಂದೊಡನೆ ಪ್ರಜಾವಾಣಿಯನ್ನು ಕೈಗೆತ್ತಿಕೊಂಡು ಆಮೂಲಾಗ್ರ ಓದುತ್ತಿದ್ದರು. ಒಂದೊಂದು ದಿನ ಪತ್ರಿಕೆ ಹಾಕುವ ಹುಡುಗ ಪತ್ರಿಕೆ ಹಾಕದೆ ತಪ್ಪಿಸುತ್ತಿದ್ದ. ಆ ದಿನ ಮಾವನ ಪಡಿಪಾಟಲು ನೋಡುವುದೇ ನಮಗಾನಂದ. ಪತ್ರಿಕೆ ಹಾಕಿಲ್ಲ ಎಂದು ನಮಗೆಲ್ಲ ನಾಲ್ಕೈದು ಸಲ ಹೇಳುತ್ತ ಶತಪಥ ಓಡಾಡುತ್ತಿದ್ದರು. ಇಲ್ಲಿಯ ಪ್ರಜಾವಾಣಿಯ ಕಚೇರಿಗೆ ದೂರವಾಣಿಸಿ `ನಮಗೆ ಪತ್ರಿಕೆ ಹಾಕಿಲ್ಲ, ಇವತ್ತು ಪತ್ರಿಕೆ ಬಂದಿದೆ ತಾನೆ’ ಎಂದು ಖಚಿತಗೊಳಿಸಿಕೊಳ್ಳುತ್ತಿದ್ದರು. ಮತ್ತೆ ತಿಂಡಿ ತಿಂದದ್ದೇ ಚಿಲ್ಲರೆ ತೆಗೆದುಕೊಂಡು ಅಂಗಡಿಗೆ ಹೋಗಿ ಪತ್ರಿಕೆ ತಂದು ಓದಿದ ಮೇಲೇ ಅವರು ಸಮಾಧಾನಿಯಾಗುತ್ತಿದ್ದುದು! ಅಲ್ಲ ಒಂದು ದಿನ ಪತ್ರಿಕೆ ಓದದೆ ಇದ್ದರೆ ಏನಾಗುತ್ತದೆ? ಪತ್ರಿಕೆಗೆ ಇಷ್ಟು ದಾಸನಾಗಬಾರದು. ಇದು ಅತಿಯಾಯಿತು ಎಂದು ಆಗ ನಾನು ಮನಸ್ಸಿನಲ್ಲಿಯೇ ಹೇಳಿಕೊಳ್ಳುತ್ತಿದ್ದೆ. ಬಹಿರಂಗವಾಗಿ ಹೇಳುತ್ತಿರಲಿಲ್ಲ. ಆದರೆ ಈಗ ಅವರದೇ ಪರಿಸ್ಥಿತಿ ನನಗೆ ಅಂಟಿದೆ!  ಪತ್ರಿಕಾ ಕಚೇರಿಗೆ ಮಾತ್ರ ದೂರವಾಣಿಸುತ್ತಿಲ್ಲ ಅಷ್ಟೆ!
ಮೊದ ಮೊದಲು ನಾನು ಪತ್ರಿಕೆಯನ್ನು ಓದಿದ ಶಾಸ್ತ್ರ ಮಾತ್ರ ಮಾಡುತ್ತಿದ್ದೆ. ಆ ಶಾಸ್ತ್ರವನ್ನು ಮಾವ ಕಿತ್ತೆಸೆದರು. ಮಾವ ಪ್ರತೀದಿನ ನನಗೆ, `ನೋಡು ಪ್ರಜಾವಾಣಿಯಲ್ಲಿ ಇಂಥ ಲೇಖನ ಬಂದಿದೆ. ಓದಿದೆಯ?’ ಎಂದು ಕೇಳುತ್ತಿದ್ದರು. ಇಲ್ಲ ಎಂದುತ್ತರಿಸಿದರೆ ಓದು ಎನ್ನುತ್ತಿದ್ದರು. ಆಗ ಓದಲೆ ಬೇಕಾಗುತ್ತಿತ್ತು. ಏಕೆಂದರೆ ಸ್ವಲ್ಪ ಹೊತ್ತು ಬಿಟ್ಟು ಲೇಖನ ಓದಿದೆಯ? ಏನನಿಸಿತು? ಎಂದು ಮರೆಯದೆ ಕೇಳುತ್ತಿದ್ದರು.  ಅನಿವಾರ್ಯವಾಗಿ ಸರಿಯಾಗಿ ಪತ್ರಿಕೆ ಓದಲೇಬೇಕಿತ್ತು. ಹಾಗೂ ಆ ಲೇಖನದ ಬಗ್ಗೆ ಚೆನ್ನಾಗಿತ್ತ ಇಲ್ಲವೆ ಎಂದು ವಿವರಿಸಬೇಕು. ಅಲ್ಲಿಂದ ಮುಂದೆ ಪ್ರಜಾವಾಣಿಯ ಓದಿನ ಗೀಳು ನನಗೆ ಹತ್ತಿತು. ಪ್ರಜಾವಾಣಿಯಲ್ಲಿ ಯಾವುದಾದರೂ ಲೇಖನದ  ಕೆಲವು ವಾಕ್ಯಗಳನ್ನು ತೆಗೆದುಕೊಂಡು `ನೋಡು ಈ ವಾಕ್ಯವನ್ನು ಹೇಗೆಲ್ಲ ಬರೆಯಬಹುದು? ಹೇಗೆ ಬರೆದರೆ ಶೈಲಿ ಚೆನ್ನಾಗಿರುತ್ತದೆ’ ಎಂದೆಲ್ಲ ಮಾವ ನನಗೆ ಪಾಟ ಮಾಡುತ್ತಿದ್ದರು. ನಾನು ಆಸಕ್ತಿಯಿಂದ ಕೇಳಿಸಿಕೊಂಡು ಹೌದಲ್ಲ ಹೀಗೆ ಬರೆದರೆ ಚೆನ್ನಾಗಿರುತ್ತದೆ ಎಂದು ಹೇಳುತ್ತಿದ್ದೆ. `ನೋಡು ಇವತ್ತಿನ ಪತ್ರಿಕೆಯಲ್ಲಿ ಇಂಥ ಲೇಖನದಲ್ಲಿ ಒಂದು ತಪ್ಪು ನುಸುಳಿದೆ. ಪತ್ತೆ ಹಚ್ಚು ನೋಡುವ’ ಎಂದು ನನಗೆ ಸವಾಲೆಸೆಯುತ್ತಿದ್ದರು. ಪ್ರಾರಂಭದಲ್ಲಿ ನನಗೆ ಗೊತ್ತಾಗುತ್ತಿರಲಿಲ್ಲ, ಅವರೇ ತೋರಿಸಿ ಇದು ಹೀಗಾಗಬೇಕು ಎನ್ನುತ್ತಿದ್ದರು. ಒಂದು ವಾಕ್ಯವನ್ನು ಹೇಗೆ ಬರೆಯಬಹುದು? ಹೇಗೆ ಬರೆದರೆ ಚೆನ್ನ ಎಂದು ಆಗ ನನ್ನರಿವಿಗೆ ಬಂತು. ಉದಾಹರಣೆಗೆ: `ನಾನು ಇವತ್ತು ಬೆಳಗ್ಗೆ ಬೇಗ ಎದ್ದೆನು.’ ಎಂಬುದನ್ನು `ಇವತ್ತು ಬೆಳಗ್ಗೆ ನಾನು ಬೇಗ ಎದ್ದೆನು.’ ಎಂದು ಬರೆದರೆ ಆ ಶೈಲಿಯೇ ಉತ್ತಮ ಎಂದು ನನಗೆ ಮಾವ ತಿಳಿ ಹೇಳಿದ್ದರು. `ನಾನು’ ಎಂಬುದು ವಾಕ್ಯದ ಮೊದಲು ಬಂದರೆ ಶೋಭಿಸುವುದಿಲ್ಲ ಎನ್ನುತ್ತಿದ್ದರು. ಆದಷ್ಟು `ನಾನು’ ಎಂಬ ಶಬ್ಧ ಬರದಂತೆಯೇ ವಾಕ್ಯ ರಚಿಸಬೇಕು. ಅನಿವಾರ್ಯವಾದರೆ ಮಾತ್ರ `ನಾನು’ ಸೇರಿಸಬೇಕು ಎಂದಿದ್ದರು. ಕ್ರಮೇಣ ನನ್ನ ಜ್ಞಾನದ ಅರಿವು ಪ್ರಜಾವಾಣಿ ಓದಿನಿಂದ ಮಾವನ ಪಾಟದಿಂದ ಬೆಳವಣಿಗೆ ಹೊಂದಿತು.  ಹೀಗೆ ದಿನಾ ನಮ್ಮ ಪ್ರಜಾವಾಣಿಯ ಓದಿನ ಸಂವಾದ ಚರ್ಚೆ ನಡೆಯುತ್ತಿತ್ತು.
ಪ್ರಜಾವಾಣಿ ಬಂದೊಡನೆ ಮೊದಲು ಓದಲು ನನಗೂ ಮಾವನಿಗೂ ಸ್ಪರ್ಧೆ ಏರ್ಪಡುತ್ತಿತ್ತು. ಮಾವ ಓದಿ ಕೆಳಗಿಡುವುದನ್ನೇ ಕಾಯುತ್ತಿದ್ದೆ. ಮಧ್ಯೆ ಅವರಿಗೆ ದೂರವಾಣಿ ಕರೆಬಂದರೆ ಕೂಡಲೇ ನಾನು ನಿಧಿ ಸಿಕ್ಕಂತೆ ಪತ್ರಿಕೆ ಕೈಗೆತ್ತಿಕೊಳ್ಳುತ್ತಿದ್ದೆ. ಅಕ್ಷರಿ (ಮಗಳು) ಪತ್ರಿಕೆ ಓದುವ ಹಂತಕ್ಕೆ ಬಂದಮೇಲೆ ನಮ್ಮ ಮೂವರಲ್ಲಿ ಪ್ರಜಾವಾಣಿ ಓದಲು ಪೈಪೋಟಿ ಸುರುವಾಯಿತು. ಅವಳಾದರೋ ಬಲು ಘಾಟಿ. ಅಜ್ಜನಿಂದ ಪತ್ರಿಕೆ ಕಿತ್ತುಕೊಂಡು `ಅಜ್ಜ ಬೇಗ ಓದಿ ಕೊಡುತ್ತೇನೆ. ನನಗೆ ಶಾಲೆಗೆ ಹೋಗಬೇಕಲ್ಲ.  ಮತ್ತೆ ನೀನೇ ಓದು’ ಎನ್ನುತ್ತಿದ್ದಳು. ಅಜ್ಜನೂ ಮೊಮ್ಮಗಳ ವಾದಕ್ಕೆ ತಲೆಬಾಗಿ ಬೇರೆ ಪತ್ರಿಕೆ ಕೈಗೆತ್ತಿಕೊಳ್ಳುತ್ತಿದ್ದರು.

     ಮಾವ ಮೈಸೂರಿನಿಂದ ಹೊರಗೆಲ್ಲಾದರೂ ಕೆಲವು ದಿನಗಳ ಮಟ್ಟಿಗೆ ತೆರಳುವಾಗ ತಪ್ಪದೆ ಆಡುತ್ತಿದ್ದ ಮಾತು  `ಪತ್ರಿಕೆಗಳನ್ನೆಲ್ಲ ತೆಗೆದಿಡು, ಬಂದು ಓದುತ್ತೇನೆ’ ಎಂಬುದಾಗಿತ್ತು. ಹಳೆ ಪತ್ರಿಕೆಯನ್ನು ಎಂತದು ಓದುವುದು ಎಂದು ಗೊಣಗುತ್ತಿದ್ದೆ. ಈಗ ನಾನು ಕೂಡ ಎಲ್ಲೇ ಎಷ್ಟು ದಿನಕ್ಕಾದರೂ ಹೊರಗೆ ಹೋದರೂ ಬಂದಮೇಲೆ ಎಲ್ಲ ದಿನದ ಪ್ರಜಾವಾಣಿಯನ್ನು ಬುಡದಿಂದ ಕೊನೆ ತನಕ ಓದಿದ ಮೇಲೆಯೇ ರದ್ದಿಗೆ ಹಾಕುವುದು. ಎಷ್ಟೇ ದಿನಗಳಾದರೂ ಸರಿ. ಪ್ರಜಾವಾಣಿ ಓದದೇ ಇದ್ದರೆ ಏನೋ ಕಳೆದುಕೊಂಡ ಭಾವ. ಪತ್ರಿಕೆ ಹರವಿ ಕುಳಿತಾಗ  ನಮ್ಮತ್ತೆ `ಪರೀಕ್ಷೆಗೆ ತಯಾರಿ ಜೋರು’ ಎಂದು ನನ್ನನ್ನು ತಮಾಷೆ ಮಾಡುತ್ತಾರೆ. ಹಿಂದೆ ನಾನು ಮಾವನನ್ನು ತಮಾಷೆ ಮಾಡಿದ್ದನ್ನೆಲ್ಲವನ್ನೂ ಪ್ರಾಂಜಲ ಮನಸ್ಸಿನಿಂದ ಹಿಂದಕ್ಕೆ ಪಡೆಯುವೆ.

     ಪ್ರಜಾವಾಣಿಯಲ್ಲಿ ಬರುವ ಲೇಖನಗಳು ಮೌಲಿಕವಾಗಿರುತ್ತವೆ. ಬೇರೆ ಯಾವ ಪತ್ರಿಕೆ ಓದಿದರೂ ಲಭಿಸದ ಸುಖ ಪ್ರಜಾವಾಣಿ ಓದಿನಿಂದ ನನಗೆ ಲಭಿಸುತ್ತದೆ. ಕ್ರಿಕೆಟ್ ಅಂದರೆ ನನಗೆ ತುಸು ಒಲವು ಜಾಸ್ತಿ. ಪ್ರಜಾವಾಣಿಯಲ್ಲಿ ಬರುವ ಯಾವುದೇ ಆಟದ ವಿವರಣೆ ಅದರಲ್ಲೂ ಕ್ರಿಕೆಟ್ ಆಟದ ವಿವರ ಓದುವುದು ಬಲು ಪ್ರಿಯ. ಪತ್ರಿಕೆ ಹಿಡಿದು ಮೊದಲು ಪತ್ರಿಕೆಯ ಕೊನೇ ಪುಟವನ್ನೇ ಓದುವುದು. ಆಮೇಲೆಯೇ ಮುಖಪುಟದತ್ತ ಗಮನಹರಿಸುವುದು.  ಪ್ರಜಾವಾಣಿಯ ನನ್ನ ನಂಟು ಬೆಳ್ಳಿಹಬ್ಬದತ್ತ ದಾಪುಗಾಲಿಡುತ್ತ ಸಾಗುತ್ತಿದೆ ಎಂದು ತಿಳಿಸಲು ನನಗೆ ಬಲು ಹೆಮ್ಮೆಯಾಗುತ್ತಿದೆ.

Follow

Get every new post delivered to your Inbox.

Join 181 other followers